Tag: belagavi

  • ಜಿಲ್ಲಾ ಸಮಸ್ಯೆಯನ್ನ ನಾವೇ ಇತ್ಯರ್ಥಪಡಿಸುತ್ತೇವೆ, ಯಾರ ಮಧ್ಯಸ್ಥಿಕೆಯೂ ಬೇಡ: ಸತೀಶ್ ಜಾರಕಿಹೊಳಿ

    ಜಿಲ್ಲಾ ಸಮಸ್ಯೆಯನ್ನ ನಾವೇ ಇತ್ಯರ್ಥಪಡಿಸುತ್ತೇವೆ, ಯಾರ ಮಧ್ಯಸ್ಥಿಕೆಯೂ ಬೇಡ: ಸತೀಶ್ ಜಾರಕಿಹೊಳಿ

    ಬೆಳಗಾವಿ: ಜಿಲ್ಲಾ ಸಮಸ್ಯೆಯನ್ನು ನಾವೇ ಇತ್ಯರ್ಥ ಮಾಡಿಕೊಳ್ಳುತ್ತೇವೆ. ನಮಗೆ ಯಾರು ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ. ಎಲ್ಲ ಆಂತರಿಕ ಸಮಸ್ಯೆಗಳನ್ನು ಪಕ್ಷದಲ್ಲಿಯೇ ಚರ್ಚಿಸುತ್ತೇವೆ. ಪಕ್ಷ ಬಿಡುವ ಯೋಚನೆಯೇ ಇಲ್ಲ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ.

    ಜಿಲ್ಲೆಯಲ್ಲಿಯೇ ನಮ್ಮ ಮುಖಂಡರೂ ಇದ್ದಾರೆ. ನಮ್ಮ ಜಿಲ್ಲೆಯ ಹಿರಿಯ ನಾಯಕರು, ಮಾಜಿ ಸಚಿವರು ಎಲ್ಲರೂ ಇದ್ದಾರೆ. ಪಿಎಲ್‍ಡಿ ಬ್ಯಾಂಕ್ ಚುನಾವಣೆ ವಿಚಾರವನ್ನು ರಾಜ್ಯ, ರಾಷ್ಟ್ರ ಮಟ್ಟಕ್ಕೆ ಇದನ್ನು ತೆಗೆದುಕೊಂಡು ಹೋಗುವ ಅವಶ್ಯಕತೆ ಇಲ್ಲ. ಎಲ್ಲ ಜಿಲ್ಲೆಯಲ್ಲಿ ಎರಡರಿಂದ ಮೂರು ಗುಂಪುಗಳು ಸಹ ಇರುತ್ತವೆ. ಸಹಜವಾಗಿ ಕೆಲವು ನಾಯಕರು ಕೆಲವರಿಗೆ ಬೆಂಬಲ ಸೂಚಿಸುವುದು ಸಾಮಾನ್ಯ ಆಗಿರುತ್ತದೆ ಅಂತಾ ಅಂದ್ರು.

    ಶನಿವಾರ ಬೆಂಗಳೂರಲ್ಲಿ ಏನಾಗಿದೆ ಎಂಬುದು ನನಗೆ ಗೊತ್ತಿಲ್ಲ. ಬೆಳಗಾವಿ ಸಮಸ್ಯೆಗಳನ್ನು ನಮಗೆ ಬಿಡುವುದು ಸೂಕ್ತ. ಇದೆಲ್ಲ ಜಿಲ್ಲೆಗೆ ಸೀಮಿತವಾದ ವಿಚಾರ. ನಮ್ಮ ಜಿಲ್ಲೆಯ ಸಮಸ್ಯೆಗಳನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ. ನಮ್ಮಲ್ಲಿ ಏನೇ ಗೊಂದಲಗಳಿದ್ರೂ ಚುನಾವಣೆಯಲ್ಲಿ ನಾವೆಲ್ಲ ಒಂದಾಗಿ ಇರುತ್ತೇವೆ ಎಂಬುದು ಸತ್ಯ ಅಂತಾ ಹೇಳಿದ್ದಾರೆ.

    ಬಿಜೆಪಿ ಪ್ರಾಬಲ್ಯದ ನಡುವೆ ದೊಡ್ಡ ಜಿಲ್ಲೆಯಲ್ಲಿ ಕಷ್ಟಪಟ್ಟು ಪಕ್ಷ ಕಟ್ಟಿದ್ದು ನಾವು. ನಮಗೆ ಗೌರವ ಇಲ್ಲ ಅಂದ್ರೆ ಹೇಗೆ..? ಏನೇ ಇದ್ದರೂ ನಮ್ಮ ಬಳಿ ಚರ್ಚಿಸಬಹುದು. ಅದು ಬಿಟ್ಟು ನಮ್ಮ ಮೇಲೆ ಸವಾರಿ ಮಾಡಿದ್ರೆ ಹೇಗೆ..? ನಮ್ಮ ಮೇಲೆಯೇ ಸವಾರಿ ಮಾಡಿದ್ರೆ ಕೈ ಕಟ್ಟಿ ಕೂರೋಕೆ ಆಗಲ್ಲ. ನನ್ನ ಸಹೋದರ ಸತೀಶ್ ಜಾರಕಿಹೊಳಿ ವಿರುದ್ಧ ಪದೇ ಪದೇ ಜಿದ್ದಿಗೆ ಬಿದ್ದಿದ್ದಾರೆ. ಸತೀಶ್ ಜಾರಕಿಹೊಳಿಯನ್ನು ಮನವೊಲಿಸೋದು ಕಷ್ಟ ಅಂತ ಸಿದ್ದರಾಮಯ್ಯಗೆ ಲಕ್ಷ್ಮಿಹೆಬ್ಬಾಳ್ಕರ್ ವಿರುದ್ಧ ಸಚಿವ ರಮೇಶ್ ಜಾರಕಿಹೊಳಿ ದೂರು ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೈ ಹೈಕಮಾಂಡ್‍ಗೆ ತಲೆನೋವಾಯ್ತು ಬೆಳಗಾವಿ ಸಂಘರ್ಷ- ಸದ್ಯಕ್ಕೆ ಸುಮ್ಮನಿರಿ ಅಂದ್ರು ವೇಣುಗೋಪಾಲ್

    ಕೈ ಹೈಕಮಾಂಡ್‍ಗೆ ತಲೆನೋವಾಯ್ತು ಬೆಳಗಾವಿ ಸಂಘರ್ಷ- ಸದ್ಯಕ್ಕೆ ಸುಮ್ಮನಿರಿ ಅಂದ್ರು ವೇಣುಗೋಪಾಲ್

    ಬೆಳಗಾವಿ: ಕಾಂಗ್ರೆಸ್ ಹೈ ಕಮಾಂಡ್‍ಗೂ ಬೆಳಗಾವಿ ರಾಜಕೀಯ ಕಲಹ ತಲೆನೋವಾಗಿದೆ. ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ವಿಚಾರವಾಗಿ ಜಾರಕಿಹೊಳಿ ಬ್ರದರ್ಸ್ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ನಡುವಿನ ಸಂಘರ್ಷ ಭುಗಿಲೆದ್ದಿದೆ.

    ತಡರಾತ್ರಿವರೆಗೂ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಎರಡು ಬಣದವರ ಜೊತೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ರು. ತಮಗಾಗುತ್ತಿರುವ ಕಿರಿಕಿರಿ ಬಗ್ಗೆ ರಮೇಶ್ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಪರಸ್ಪರ ದೂರು ನೀಡಿದ್ರು. ಇದನ್ನೂ ಓದಿ: ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಜಾರಕಿಹೊಳಿ ಸಹೋದರರಿಂದ ರಾಜ್ಯ ನಾಯಕರಿಗೆ ದೂರು!

    ಬಿಜೆಪಿ ಪ್ರಾಬಲ್ಯದ ನಡುವೆ ದೊಡ್ಡ ಜಿಲ್ಲೆಯಲ್ಲಿ ಕಷ್ಟಪಟ್ಟು ಪಕ್ಷ ಕಟ್ಟಿದ್ದು ನಾವು. ನಮಗೆ ಗೌರವ ಇಲ್ಲಾ ಅಂದ್ರೆ ಹೇಗೆ ಎಂದು ರಮೇಶ್ ಜಾರಕಿಹೊಳಿ ಪ್ರಶ್ನಿಸಿದ್ರು. ಅಷ್ಟೇ ಅಲ್ಲ ಏನೆ ಇದ್ದರು ನಮ್ಮ ಬಳಿ ಚರ್ಚಿಸಬಹುದು. ಅದು ಬಿಟ್ಟು ನಮ್ಮ ಮೇಲೆ ಡಾಮಿನೇಟ್ ಮಾಡೋಕೆ ಬಂದ್ರೆ ಕೈಕಟ್ಟಿ ಕೂರೋಕೆ ಆಗಲ್ಲ. ಪದೇ ಪದೇ ಸಹೋದರ ಸತೀಶ್ ಜಾರಕಿಹೋಳಿ ವಿರುದ್ಧ ಜಿದ್ದಿಗೆ ಬಿದ್ದಿದ್ದಾರೆ. ಅವರನ್ನ ಮನವೊಲಿಸೋದು ಕಷ್ಟ ಅಂದ್ರು. ಇದನ್ನೂ ಓದಿ: ಸತೀಶ್ ಜಾರಕಿಹೊಳಿ ದೊಡ್ಡವರು ನನಗೆ ಆದರ್ಶ, ಮಹಾಗುರು: ಲಕ್ಷ್ಮಿ ಹೆಬ್ಬಾಳ್ಕರ್ ತಿರುಗೇಟು

    ಹೀಗೆ ರಾಜ್ಯ ನಾಯಕರಲ್ಲದೆ ಎಐಸಿಸಿ ಮಟ್ಟದಲ್ಲಿಯೂ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಜಾರಕಿಹೊಳಿ ಸಹೋದರರ ನಡುವಿನ ಸಮಸ್ಯೆಗೆ ಪರಿಹಾರ ಸಿಗಲಿಲ್ಲ. ಕೊನೆಗೆ ಎರಡು ಬಣಕ್ಕೂ ಸದ್ಯಕ್ಕೆ ಸುಮ್ಮನಿರಿ, ಯಾರು ಬಹಿರಂಗವಾಗಿ ಮಾತನಾಡಬೇಡಿ ಅಂತ ಸೂಚನೆ ನೀಡಿ ವೇಣುಗೋಪಾಲ್ ಸುಮ್ಮನಾಗಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ; ಪಿಎಲ್‍ಡಿ ಬ್ಯಾಂಕ್ ಚುನಾವಣೆ: ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಜಾರಕಿಹೊಳಿ ಸಹೋದರರು ಗರಂ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಿಕ್ಷಕಿಯಾಗಿ ಸ್ಲಂ ಮಕ್ಕಳಿಗೆ ವಿದ್ಯೆ ಕಲಿಸಬೇಕೆಂಬ ಕನಸು ಕಂಡಿರುವ ಯುವತಿಗೆ ಬೇಕಿದೆ ಸಹಾಯ

    ಶಿಕ್ಷಕಿಯಾಗಿ ಸ್ಲಂ ಮಕ್ಕಳಿಗೆ ವಿದ್ಯೆ ಕಲಿಸಬೇಕೆಂಬ ಕನಸು ಕಂಡಿರುವ ಯುವತಿಗೆ ಬೇಕಿದೆ ಸಹಾಯ

    ಬೆಳಗಾವಿ: ಕೊಳಚೆ ಪ್ರದೇಶದಲ್ಲಿ ವಾಸಮಾಡುತ್ತಿದ್ದರು, ಉನ್ನತ ವ್ಯಾಸಂಗ ಪಡೆದು ತನ್ನಂತೆ ಸ್ಲಂನಲ್ಲಿ ವಾಸಿಸುವ ಮಕ್ಕಳಿಗೆ ಶಿಕ್ಷಣ ನೀಡಬೇಕೆಂಬ ಬೆಳಗಾವಿಯ ವಿದ್ಯಾರ್ಥಿನಿ ಕನಸಿಗೆ ಬಡತನ ಅಡ್ಡಿಯಾಗಿದೆ.

    ಮನೆಯಲ್ಲಿ ಬಡತನವಿದ್ದರೂ ಅಂಜಲಿ ಕೊಂಡುರ್ ತನ್ನ ಕಷ್ಟಗಳನ್ನ ಬದಿಗಿರಿಸಿ ಎಸ್‍ಎಸ್‍ಎಲ್‍ಸಿಯಲ್ಲಿ ಶೇಕಡಾ 78.88% ಹಾಗೂ ಪಿಯುಸಿ ಕಲಾ ವಿಭಾಗದಲ್ಲಿ ಶೇಕಡಾ 82.66% ಅಂಕ ಪಡೆದು ಇಡೀ ಕಾಲೇಜಿಗೆ ಫಸ್ಟ್ ರ‍್ಯಾಂಕ್‌ ಪಡೆದು ಕೀರ್ತಿ ತಂದುಕೊಟ್ಟಿದ್ದಾಳೆ.

    ಬೆಳಗಾವಿಯ ಕಣಬರ್ಗಿಯ ಸ್ಲಂನ ಸಣ್ಣ ಗುಡಿಸಲು ಮನೆಯಲ್ಲಿ ಇಬ್ಬರು ಸಹೋದರರು ಮತ್ತು ತಾಯಿ ಜೊತೆ ಅಂಜಲಿ ವಾಸವಿದ್ದಾಳೆ. ಎಲ್ಲರಂತೆ ಶಾಲೆಗೆ ತೆರಳಿ ಉತ್ತಮ ಶಿಕ್ಷಣ ಪಡೆಯಬೇಕೆಂಬ ಮಗಳ ಕನಸಿಗೆ ತಾಯಿ ರೇಣುಕಾ ಬೆಂಬಲ ನೀಡಿದ ಪರಿಣಾಮ ಶಿಕ್ಷಣ ಈಗ ಕಷ್ಟದಲ್ಲಿ ಸಾಗಿಕೊಂಡು ಬಂದಿದೆ.

    10 ವರ್ಷಗಳ ಹಿಂದೆ ತಂದೆ ಮಹೇಶ್ ಕುಡಿತದ ಚಟಕ್ಕೆ ಬಿದ್ದು ತೀರಿಹೋಗಿದ್ದು, ಇಡೀ ಸಂಸಾರದ ಜವಾಬ್ದಾರಿಯನ್ನು ತಾಯಿ ರೇಣುಕಾ ನೋಡಿಕೊಳ್ಳುತ್ತಿದ್ದಾರೆ. ಊರೂರು ತೆರಳಿ ವಾಲೆ, ಬಳೆ, ಪುಸ್ತಕ ಮಾರಾಟ ಮಾಡಿ ಬಂದ ಹಣದಿಂದ ಮೂರು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ.

    ಸ್ಲಂನಲ್ಲಿ ಯಾರೂ ಓದದೇ ಇದ್ದರೂ ಛಲದಿಂದ ಓದಿ ಸಾಧಿಸಿ ತೋರಿಸಿರುವ ಪ್ರತಿಭೆಯಾಗಿರುವ ಅಂಜಲಿ ಮುಂದೆ ಓದಿ ಟೀಚರ್ ಆಗಿ ಸ್ಲಂನ ಮಕ್ಕಳಿಗೆ ವಿದ್ಯೆ ಕಲಿಸಬೇಕೆಂಬ ಕನಸು ಕಂಡಿದ್ದಾಳೆ. ಆದರೆ ಉನ್ನತ ವ್ಯಾಸಂಗ ಪಡೆಯಲು ಬಡತನ ಅಡ್ಡಿಯಾಗಿದೆ. ಮೂರು ಮಕ್ಕಳನ್ನು ಕಷ್ಟ ಪಟ್ಟು ಓದಿಸುತ್ತಿರುವ ತಾಯಿ, ಅಂಜಲಿಯ ಮುಂದಿನ ವಿದ್ಯಾಭ್ಯಾಸಕ್ಕೆ ಹಣ ಒದಗಿಸಲಾಗದೇ ಓದನ್ನು ನಿಲ್ಲಿಸಿದ್ದಾಳೆ.

    ಅಂಜಲಿಗೆ ಶಿಕ್ಷಕಿಯಾಗಬೇಕೆಂಬ ಕನಸು ಇದ್ದು, ಯಾರಾದರು ದಾನಿಗಳು ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿ ಎಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೂಲಕ ತಾಯಿ ರೇಣುಕಾ ಕೇಳಿಕೊಳ್ಳುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=N7Wztkxi_tU

  • ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಜಾರಕಿಹೊಳಿ ಸಹೋದರರಿಂದ ರಾಜ್ಯ ನಾಯಕರಿಗೆ ದೂರು!

    ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಜಾರಕಿಹೊಳಿ ಸಹೋದರರಿಂದ ರಾಜ್ಯ ನಾಯಕರಿಗೆ ದೂರು!

    ಬೆಳಗಾವಿ: ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಬಹಿರಂಗವಾಗಿ ಗುಡುಗಿದ್ದ ಜಾರಕಿಹೊಳಿ ಸಹೋದರರು ಈಗ ರಾಜ್ಯ ನಾಯಕರ ಬಳಿ ದೂರು ನೀಡಿದ್ದಾರೆ.

    ಜಿಲ್ಲೆ ರಾಜಕೀಯದಲ್ಲಿ ಹೆಬ್ಬಾಳ್ಕರ್ ಹಸ್ತಕ್ಷೇಪ ಜಾಸ್ತಿಯಾಗುತ್ತಿದೆ. ಅಷ್ಟೇ ಅಲ್ಲದೇ ಮುಂದೆ ತಮ್ಮನ್ನು ಹಿಂದಿಕ್ಕಬಹುದು ಎನ್ನುವ ಭೀತಿ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಶಾಸಕ ಸತೀಶ್ ಜಾರಕಿಹೊರಳಿ ಅವರಿಗೆ ಎದುರಾಗಿದೆ. ಹೀಗಾಗಿ ಬದ್ಧ ವೈರಿಗಳಾಗಿದ್ದ ಜಾರಕಿಹೊಳಿ ಸಹೋದರರು ಈಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಲ್ಲಿ ದೂರು ನೀಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

    ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಹೀಗೆ ಬಿಟ್ಟರೆ ಮುಂದೊಂದು ದಿನ ತಮ್ಮ ದಾರಿಗೆ ಮುಳ್ಳಾಗುತ್ತಾರೆ ಎನ್ನುವುದು ಜಾರಕಿಹೊಳಿ ಸಹೋದರ ಆತಂಕಕ್ಕೆ ಕಾರಣವಾಗಿದೆ ಎನ್ನಲಾಗಿದೆ.

    ಇತ್ತ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕೂಡಾ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಗೆ ದೂರು ನೀಡಿದ್ದಾರೆ. ಬೆಳಗಾವಿ ನಾಯಕರ ವಾಗ್ದಾಳಿ, ಭಿನ್ನಾಭಿಪ್ರಾಯದ ಕುರಿತು ಹೈಕಮಾಂಡ್‍ಗೂ ಮಾಹಿತಿ ತಲುಪಿದೆ. ಹೀಗಾಗಿ ಶನಿವಾರ ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸಿ.ವೇಣುಗೋಪಾಲ್ ನೇತೃತ್ವದ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

    ಬೆಳಗಾವಿ ಜಿಲ್ಲೆಯ ನಾಯಕರಲ್ಲಿ ಭಿನ್ನಾಭಿಪ್ರಾಯ ಬಂದಿರುವ ಕುರಿತು ಚರ್ಚೆ ಮಾಡಲಾಗಿದೆ. ಅದನ್ನು ಸರಿಪಡಿಸದಿದ್ದರೆ ಪಕ್ಷದ ಸಂಘಟನೆಯಲ್ಲಿ ಸಮಸ್ಯೆ ಎದುರಾಗುತ್ತದೆ. ಬೆಳಗಾವಿಯ ಮೂವರು ನಾಯಕರನ್ನು ಕರೆಸಿ ಸಮಕ್ಷಮವಾಗಿ ಸಮಸ್ಯೆ ಇತ್ಯರ್ಥ ಮಾಡಲಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://youtu.be/OsceLkVYQ2U

  • ಸತೀಶ್ ಜಾರಕಿಹೊಳಿ ದೊಡ್ಡವರು ನನಗೆ ಆದರ್ಶ, ಮಹಾಗುರು: ಲಕ್ಷ್ಮಿ ಹೆಬ್ಬಾಳ್ಕರ್ ತಿರುಗೇಟು

    ಸತೀಶ್ ಜಾರಕಿಹೊಳಿ ದೊಡ್ಡವರು ನನಗೆ ಆದರ್ಶ, ಮಹಾಗುರು: ಲಕ್ಷ್ಮಿ ಹೆಬ್ಬಾಳ್ಕರ್ ತಿರುಗೇಟು

    ಬೆಳಗಾವಿ: ಶಾಸಕ ಸತೀಶ್ ಜಾರಕಿಹೊಳಿ ದೊಡ್ಡವರು ಅವರಿಂದ ತುಂಬ ಕಲಿಯಬೇಕು, ಅವರೇ ನನಗೆ ಆದರ್ಶ, ಮಹಾ ಗುರು ಎಂದು ಪರೋಕ್ಷವಾಗಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಟಾಂಗ್ ಕೊಟ್ಟಿದ್ದಾರೆ.

    ಬೆಳಗಾವಿಯಲ್ಲಿ ಮಾತನಾಡಿದ ಅವರು, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷರು, ಉಪಾಧ್ಯಕ್ಷರ ಚುನಾವಣೆ ವಿಚಾರದಲ್ಲಿ ಕೆಲ ಶಕ್ತಿಗಳು ಪ್ರತಿಭಟನೆ ವೇಳೆ ಗಲಾಟೆಗೆ ಯತ್ನ ನಡೆಸಿದವು. ತಹಶೀಲ್ದಾರ್ ಏಕಾಏಕಿ ಚುನಾವಣೆ ಮುಂದೂಡಿದ್ದಾರೆ. ಈ ಮೂಲಕ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ. ಪಿಎಲ್‍ಡಿ ಬ್ಯಾಂಕ್‍ನ 9 ಜನ ನಿರ್ದೇಶಕರು ನನ್ನ ಜೊತೆಗಿದ್ದಾರೆ. ತಹಶೀಲ್ದಾರ್ ತಪ್ಪು ಮಾಡಿದ್ರೆ ಅವರನ್ನು ಅಮಾನತು ಮಾಡಬೇಕು, ಅಲ್ಲಿಯವರೆಗೂ ಹೋರಾಟದಿಂದ ಹಿಂದೆ ಸರಿಯಲ್ಲ. ನ್ಯಾಯ ಸಿಗದಿದ್ರೆ ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

    ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಹಿನ್ನೆಲೆ ಸೋಮವಾರ ಅಹೋರಾತ್ರಿ ಪ್ರತಿಭಟನೆ ನಡೆಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಶಾಸಕ ಸತೀಶ ಜಾರಕಿಹೊಳಿ ಗುಡುಗಿದ್ದಾರೆ. ಪಿಎಲ್‍ಡಿ ಬ್ಯಾಂಕ್‍ಗೆ 20 ವರ್ಷದಿಂದ ರಾಜಕೀಯ ಮುಕ್ತ ಚುನಾವಣೆ ನಡೆದಿದೆ. ಸಚಿವರು, ಶಾಸಕರು ಯಾರೊಬ್ಬರು ಪಾಲ್ಗೊಂಡಿಲ್ಲ. ಆದರೆ ಲಕ್ಷ್ಮೀ ಹೆಬ್ಬಾಳ್ಕರ್ ನಿರ್ದೇಶಕರಿಗೆ ಆಮಿಷ ಒಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ.

    ಶಾಸಕ ಸತೀಶ್ ಜಾರಕಿಹೊಳಿ ಕಾಲು ಕಸ ಆಗಲ್ಲ. ಮೊದಲ ಬಾರಿ ಗೆದ್ದಿದ್ದೀನಿ ಅಂತ ಮೆರಿ ಬೇಡಾ ಅಂತಾ ಬೆಳಗಾವಿಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಸಚಿವ ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ರು. ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಗೊಂದಲ ವಿಚಾರದಲ್ಲಿ ಪ್ರತಿಕ್ರಿಯಿಸಿ ಪಿಎಲ್‍ಡಿ ಬ್ಯಾಂಕ್ ಚುನಾವಣೆ ವಿಚಾರದಲ್ಲಿ ರಾಜಕೀಯ ಸರಿಯಲ್ಲ, ಅಧಿಕಾರಿಗಳ ಸಭೆ ನಡೆಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ಅಂತಾ ತಿಳಿಸಿದ್ದಾರೆ.

    ಈ ಹಿಂದಿನ ಪದ್ಧತಿಯಲ್ಲಿ ಚುನಾವಣೆ ನಡೆಸಲು ನಮ್ಮದು ಸಲಹೆ ಇದೆ. ಅವಿರೋಧವಾಗಿ ಆಯ್ಕೆ ಆಗಿರುವವರು ಶಾಸಕಿ ಹೆಬ್ಬಾಳ್ಕರ್ ಜೊತೆಗೆ ಹೋಗಿದ್ದಾರೆ. ಎಲ್ಲರೂ ಸೇರಿ ಕೆಲಸ ಮಾಡುವ ನಿರೀಕ್ಷೆ ಹೊಂದಿದ್ದೇವು. ಆದರೆ ಇದು ಹುಸಿಯಾಗಿದೆ. ಚುನಾವಣೆ ಮುಂದೂಡಿಕೆ ಚುನಾವಣಾ ಅಧಿಕಾರಿಗೆ ಅಧಿಕಾರವಿದೆ. ಪ್ರತಿಭಟನೆಯಿಂದ ಯಾವುದೇ ಪ್ರಯೋಜವಿಲ್ಲ ಎಂದ ಅವರು, ಒಂದೇ ಪಕ್ಷದಲ್ಲಿ ಇದ್ದರೂ ಗುಂಪುಗಾರಿಕೆ ಮಾಡುವುದು ಸಹಜವಾಗಿದೆ. ಈಗಲೂ ಕಾಲ ಮಿಂಚಿಲ್ಲ ಎಲ್ಲರನ್ನೂ ಒಮ್ಮತದಿಂದ ಕರೆದುಕೊಂಡು ಹೋದರೆ ಸ್ವಾಗತ ಎಂದು ಎಚ್ಚರಿಕೆ ನೀಡಿದರು

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೆಳಗಾವಿಯಲ್ಲಿ ಮಿಡ್‍ನೈಟ್ ಹೈಡ್ರಾಮಾ – ಪಿಎಲ್‍ಡಿ ಬ್ಯಾಂಕ್ ಎಲೆಕ್ಷನ್ ಮುಂದೂಡಿಕೆ ರಾಜಕೀಯ

    ಬೆಳಗಾವಿಯಲ್ಲಿ ಮಿಡ್‍ನೈಟ್ ಹೈಡ್ರಾಮಾ – ಪಿಎಲ್‍ಡಿ ಬ್ಯಾಂಕ್ ಎಲೆಕ್ಷನ್ ಮುಂದೂಡಿಕೆ ರಾಜಕೀಯ

    – ಕಾಂಗ್ರೆಸ್ ನಾಯಕರ ನಡುವೆಯೇ ಫೈಟ್

    ಬೆಳಗಾವಿ: ಅದು ಸ್ಥಳೀಯ ಮಟ್ಟದ ಚುನಾವಣೆ ಹಾಗಂತಾ ನಗರಸಭೆ ಅಥವಾ ಪುರಸಭೆ ಚುನಾವಣೆಯಲ್ಲಾ, ಬದಲಿಗೆ ಸಹಕಾರಿ ಬ್ಯಾಂಕ್ ಒಂದರ ಚುನಾವಣೆ. ರಾಜಕೀಯದಲ್ಲಿ ಇಬ್ಬರು ವಿರೋಧಿಗಳೆಂದು ಬಿಂಬಿಸಿಕೊಂಡ ಮಾಜಿ ಸಚಿವ ಸತೀಶ್ ಜಾರಕಿಹೋಳಿ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಈ ಚುನಾವಣೆಯನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು ಸದ್ಯ ನೇರಾ ನೇರ ಪೈಟ್ ನಡೆಸುತ್ತಿದ್ದಾರೆ.

    ಕಳೆದ ರಾತ್ರಿ ಬೆಳಗಾವಿ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ದೊಡ್ಡ ಮಟ್ಟದ ಹೈಡ್ರಾಮ ನಡೆದು ಹೋಗಿದೆ. ಇಂದು ನಡೆಯಬೇಕಿದ್ದ ಪಿಎಲ್ ಡಿ ಬ್ಯಾಂಕ್ ನ ಚುನಾವಣೆಯನ್ನ ಇದ್ದಕ್ಕಿದ್ದಂತೆ ಕಳೆದ ರಾತ್ರಿ ಮುಂದೂಡಲಾಯ್ತು. ಇದರಿಂದ ಆಕ್ರೋಶಗೊಂಡ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರ ಜೊತೆ ತಹಶೀಲ್ದಾರ್ ಕಚೇರಿ ಮುಂದೆ ಅಹೋರಾತ್ರಿ ಧರಣಿಗೆ ಮುಂದಾದರು. ಸತೀಶ್ ಜಾರಕಿಹೋಳಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ರು.

    ಸತೀಶ್ ಬೆಂಬಲಿಗರು ಲಕ್ಷ್ಮಿ ವಿರುದ್ಧವೂ ಪ್ರತಿಭಟನೆ ನಡೆಸಿದ್ರು. ಸತೀಶ್ ಜಾರಕಿಹೋಳಿ ಬೆಂಬಲಿಗರು ತಹಶೀಲ್ದಾರ್ ಕಚೇರಿ ಕಾಂಪೌಂಡ್ ಏರಿ ಒಳ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರ ಜೊತೆ ವಾಗ್ವಾದ ನಡೆಸಿದ್ರು. ಕೊನೆಗೆ ಎಸ್‍ಪಿ ರಾಜಪ್ಪ ಹರಸಾಹಸ ಮಾಡಿ ಪರಿಸ್ಥಿತಿ ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಅಪರ ಜಿಲ್ಲಾಧಿಕಾರಿ ಸ್ಥಳಕ್ಕಾಗಮಿಸಿ ಕಾನೂನಿನ ಬಗ್ಗೆ ತಿಳಿ ಹೇಳಿ ಇಬ್ಬರ ಮನವೊಲಿಸಿ ವಾಪಸ್ ಕಳಿಸಿದರು. ಜಾರಕಿಹೊಳಿ ಬೆಂಬಲಿಗರ ಗುಂಪಿನಲ್ಲಿ ಬಿಜೆಪಿಯ ಕೆಲವು ಮುಖಂಡರು ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹಸಿರು ಬಣ್ಣಕ್ಕೆ ಬದಲಾದ ಬೆಳಗಾವಿಯ ಸುವರ್ಣ ಸೌಧ

    ಹಸಿರು ಬಣ್ಣಕ್ಕೆ ಬದಲಾದ ಬೆಳಗಾವಿಯ ಸುವರ್ಣ ಸೌಧ

    ಬೆಳಗಾವಿ: ಇಷ್ಟು ದಿನ ಶ್ವೇತ ವರ್ಣದಿಂದ ಕಂಗೊಳಿಸುತ್ತಿದ್ದ ಜಿಲ್ಲೆಯ ಸುವರ್ಣ ಸೌಧದ ಬಣ್ಣ ಬದಲಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸುವರ್ಣ ಸೌಧ ಹಸಿರು ಸೌಧವಾಗಿ ಮಾರ್ಪಟ್ಟಿದೆ.

    ಇಡೀ ಕಟ್ಟಡ ಸಂಪೂರ್ಣವಾಗಿ ಹಸಿರು ಬಣಕ್ಕೆ ತಿರುಗಿದೆ. ಇಷ್ಟಾದರು ಯಾವುದೇ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿಲ್ಲ. ವರ್ಷಕ್ಕೆ 3 ಕೋಟಿ ರೂಪಾಯಿ ವೆಚ್ಚದಲ್ಲಿ ಸುವರ್ಣ ಸೌಧದ ನಿರ್ವಹಣೆ ನಡೆಯುತ್ತದೆ. ಆದರೆ ಶ್ವೇತ ಬಣ್ಣದ ಸೌಧದ ಹಸಿರು ಬಣ್ಣಕ್ಕೆ ತಿರುಗಿದರು ಯಾರೊಬ್ಬರೂ ಇತ್ತ ಸುಳಿದಿಲ್ಲ ಎಂದು ಕನ್ನಡ ಪರ ಹೋರಾಟಗಾರ ಅಶೋಕ ಚಂದರಗಿ ಹೇಳಿದ್ದಾರೆ.

    ಸುವರ್ಣ ಸೌಧದ ಸ್ಥಿತಿಯ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಕೇಳಿದರೆ, ಕಟ್ಟಡ ಎತ್ತರದ ಪ್ರದೇಶದಲ್ಲಿ ಇರುವುದರಿಂದ ಹೀಗಾಗಿದೆ. ಮಳೆ ನಿಂತ ಮೇಲೆ ಕ್ಲೀನ್ ಮಾಡಿಡುತ್ತೀವಿ ಅಂತಾರೆ ಎಂದು ಸುವರ್ಣ ಸೌಧ ಕಾರ್ಯನಿರ್ವಾಹಕ ಅಧಿಕಾರಿ ಬಿ.ಜಿ. ಧರಣಿ ತಿಳಿಸಿದ್ದಾರೆ.

    ಮೇಲ್ನೋಟಕ್ಕೆ ಸುವರ್ಣ ಸೌಧ ಹಸಿರು ಬಣ್ಣಕ್ಕೆ ತಿರುಗಿದ್ದು, ಒಳಗೆ ಎಲ್ಲೆಲ್ಲಿ ಎನಾಗಿದಿಯೋ ಅದನ್ನು ಅಧಿಕಾರಿಗಳೇ ನೋಡಿ ಹೇಳಬೇಕಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಒಂದೇ ದಿನದಲ್ಲಿ 3 ಕಡೆ ಪ್ರತ್ಯೇಕ ರೈಲು ಅಪಘಾತ- ಇಬ್ಬರು ಸಾವು, ಮಹಿಳೆ ಗಂಭೀರ

    ಒಂದೇ ದಿನದಲ್ಲಿ 3 ಕಡೆ ಪ್ರತ್ಯೇಕ ರೈಲು ಅಪಘಾತ- ಇಬ್ಬರು ಸಾವು, ಮಹಿಳೆ ಗಂಭೀರ

    ಬೆಳಗಾವಿ/ಹಾವೇರಿ/ಚಿಕ್ಕಬಳ್ಳಾಪುರ: ಒಂದೇ ದಿನದಲ್ಲಿ ಮೂರು ಕಡೆ ಪ್ರತ್ಯೇಕ ರೈಲು ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಘಟಪ್ರಭಾ ರೈಲ್ವೇ ನಿಲ್ದಾಣದ ಓವರ್ ಬ್ರಿಡ್ಜ್ ಬಳಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಲು ಹೋಗಿ ವಿಫಲವಾಗಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

    ಲಕ್ಷ್ಮಣ ವಡ್ಡರಗಾವಿ(40) ಚಿಕಿತ್ಸೆ ಫಲಿಸದೇ ಮೃತಪಟ್ಟ ವ್ಯಕ್ತಿ. ಶನಿವಾರ ಸಂಜೆ ಮಿರಜ್ ನಿಂದ ಬೆಳಗಾವಿ ಕಡೆಗೆ ಹೊರಟಿದ್ದ ರೈಲಿನಡಿ ಬಿದ್ದು ಲಕ್ಷ್ಮಣ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇದನ್ನು ಗಮನಿಸಿದ ರೈಲ್ವೇ ಚಾಲಕನ ಸಮಯ ಪ್ರಜ್ಞೆಯಿಂದ ಲಕ್ಷ್ಮಣನ ಸಾವು ತಪ್ಪಿತ್ತು. ಇದೇ ವೇಳೆ ರೈಲ್ವೇ ಇಂಜಿನ್ ಅಡಿಯಲ್ಲಿ ಸಿಲುಕಿ ನರಳಾಡುತ್ತಿದ್ದ ವ್ಯಕ್ತಿಯನ್ನು ಸ್ಥಳೀಯರು ರಕ್ಷಿಸಿದರು. ಆದರೆ ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ಗೋಕಾಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಇದೀಗ ಚಿಕಿತ್ಸೆ ಫಲಕಾರಿಯಾಗದೆ ಆತ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾನೆ. ಮೃತ ವ್ಯಕ್ತಿ ಗೋಕಾಕ ಸಮೀಪದ ಮಾಲದಿನ್ನಿ ಗ್ರಾಮದ ನಿವಾಸಿಯಾಗಿದ್ದು, ಘಟಪ್ರಭಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

    ಹಾವೇರಿ ತಾಲೂಕಿನ ಕಾಟೇನಹಳ್ಳಿ ಗ್ರಾಮದ ಬಳಿ ರೈಲ್ವೆ ಹಳಿಗೆ ಬಿದ್ದು ಯುವಕ ಸಾವನ್ನಪ್ಪಿದ್ದಾನೆ. ಮೃತ ಯುವಕನನ್ನು ವಿಠೋಬ ಮಾಂಗ್ಲೇನವರ(19) ಎಂದು ಗುರುತಿಸಲಾಗಿದೆ. ವಿಠೋಬ, ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ರಾಮ ತೀರ್ಥಹೊಸಕೊಪ್ಪ ಗ್ರಾಮದ ನಿವಾಸಿಯಾಗಿದ್ದು, ರೈಲ್ವೇ ಹಳಿಗೆ ಬಿದ್ದಿದ್ದರಿಂದ ಆತನ ರುಂಡ ಮತ್ತು ದೇಹ ಬೇರೆ ಬೇರೆಯಾಗಿ ಬಿದ್ದಿದೆ. ಯುವಕನ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ರೈಲ್ವೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಹುಬ್ಬಳ್ಳಿ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಇತ್ತ ಚಿಕ್ಕಬಳ್ಳಾಪುರದ ಚಿಂತಾಮಣಿಯ ಅಮಿಟಾಗಾನಹಳ್ಳಿ ಬಳಿ ರೈಲಿಗೆ ಸಿಲುಕಿ ಅಪರಿಚಿತ ಮಹಿಳೆಯ ಎಡಗೈ ತುಂಡಾಗಿ ಅದು ನಾಯಿಗಳ ಪಾಲಾಗಿರುವ ದಾರುಣ ಘಟನೆ ನಡೆದಿದೆ. ತೀವ್ರವಾಗಿ ಗಾಯಗೊಂಡಿರುವ ಮಹಿಳೆಯನ್ನು ಚಿಂತಾಮಣಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಈ ಬಗ್ಗೆ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತನಗೆ ಎರಡು ಹೆಣ್ಣು ಅಂತ, ತಂಗಿಯ ಗಂಡು ಮಗುವನ್ನೇ ಕೊಂದ ಅಕ್ಕ

    ತನಗೆ ಎರಡು ಹೆಣ್ಣು ಅಂತ, ತಂಗಿಯ ಗಂಡು ಮಗುವನ್ನೇ ಕೊಂದ ಅಕ್ಕ

    ಚಿಕ್ಕೋಡಿ: ತನಗೆ ಎರಡು ಹೆಣ್ಣು ಮಕ್ಕಳಿವೆ ಎಂಬ ಭಾವನೆಯಿಂದ ತನ್ನ ತಂಗಿಯ 2 ವರ್ಷದ ಗಂಡು ಮಗುವನ್ನು ಹತ್ಯೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಶೇಡಬಾಳ ಗ್ರಾಮದಲ್ಲಿ ನಡೆದಿದೆ.

    2 ವರ್ಷದ ಕಾರ್ತಿಕ್ ಅಲಾಸೆ ಕೊಲೆಯಾದ ಮಗು. ಶನಿವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಜಯಶ್ರೀ ಅಲಾಸೆಯು ತನ್ನ ತಂಗಿಯ ಮಗುವನ್ನು ನೀರು ತುಂಬಿದ್ದ ಬ್ಯಾರಲ್‍ನಲ್ಲಿ ಮುಳುಗಿಸಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾಳೆ. ತನಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಆದರೆ ನನ್ನ ತಂಗಿಗೆ ಗಂಡು ಮಗು ಹುಟ್ಟಿದೆ ಎನ್ನುವ ಸ್ವಾರ್ಥದಿಂದ ಏನೂ ಅರಿಯದ ಮಗುವನ್ನು ನಿರ್ದಾಕ್ಷೀಣ್ಯವಾಗಿ ಹತ್ಯೆ ಮಾಡಿದ್ದಾಳೆ.

    ಕೊಲೆಯ ಬಳಿಕ ಜಯಶ್ರೀಯು ಮನೆಯಲ್ಲಿದ್ದ ಹಣ ಹಾಗೂ ಒಡವೆ ಸಮೇತ ಪರಾರಿಯಾಗಿದ್ದಾಳೆ. ವಿಷಯ ತಿಳಿದ ಪೊಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆ ಸಂಬಂಧ ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದೇವೇಗೌಡ್ರಿಗೇ ಮೋಸ ಮಾಡ್ದೋರು ಕುಮಾರಸ್ವಾಮಿನ ಬಿಡ್ತರಾ: ಸುರೇಶ್ ಅಂಗಡಿ

    ದೇವೇಗೌಡ್ರಿಗೇ ಮೋಸ ಮಾಡ್ದೋರು ಕುಮಾರಸ್ವಾಮಿನ ಬಿಡ್ತರಾ: ಸುರೇಶ್ ಅಂಗಡಿ

    ಬೆಳಗಾವಿ: ಮಾಜಿ ಪ್ರಧಾನಿ ದೇವೇಗೌಡ ಅವರಿಗೇ ಮೋಸ ಮಾಡಿರುವ ಕಾಂಗ್ರೆಸ್ಸಿನವರು ಇನ್ನು ಕುಮಾರಸ್ವಾಮಿಯವರನ್ನು ಬಿಡುತ್ತಾರೆಯೇ ಎಂದು ಬಿಜೆಪಿ ಸಂಸದ ಸುರೇಶ್ ಅಂಗಡಿ ಪ್ರಶ್ನಿಸಿದ್ದಾರೆ.

    ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ಹಾಗೂ ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿಯವರ ಅಸ್ಥಿ ವಿಸರ್ಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಸುದ್ದಿಗಾರರು ಸಿಎಂ ಸಿದ್ದರಾಮಯ್ಯನರ ಹೇಳಿಕೆ ಕುರಿತು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಸುರೇಶ್, ಸಿದ್ದರಾಮಯ್ಯನವರು ಮತ್ತೆ ಸಿಎಂ ಆಗುತ್ತೇನೆ ಎನ್ನುವ ಮೂಲಕ ಸಮ್ಮಿಶ್ರ ಸರ್ಕಾರದಲ್ಲಿ ಹೊಸದಾದ ಅಲೆಯನ್ನು ಎಬ್ಬಿಸಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರಿಗೇ ಮೋಸ ಮಾಡಿರುವ ಕಾಂಗ್ರೆಸ್ಸಿನವರು ಇನ್ನು ಕುಮಾರಸ್ವಾಮಿಯವರನ್ನು ಬಿಡುತ್ತಾರಾ. ಇನ್ನು ಕೆಲವೇ ದಿನಗಳಲ್ಲಿ ಸಮ್ಮಿಶ್ರ ಸರ್ಕಾರ ಪತನವಾಗಲಿದೆ ಎಂದು ಹೇಳಿದ್ರು.

    ಈಗಾಗಲೇ ಸಮ್ಮಿಶ್ರ ಸರ್ಕಾರದಲ್ಲಿ ಹಗ್ಗ-ಜಗ್ಗಾಟ ಪ್ರಾರಂಭವಾಗಿದೆ. ಇವರಿಬ್ಬರ ಕಿತ್ತಾಟದಿಂದ ರಾಜ್ಯದಲ್ಲಿ ಯಾವುದೇ ಕೆಲಸ-ಕಾರ್ಯಗಳು ನಡೆಯುತ್ತಿಲ್ಲ. ಖುದ್ದು ಸಿದ್ದರಾಮಯ್ಯನವರೇ ಚಾಪೆ ಜಗ್ಗುವ ಕೆಲಸ ಮಾಡುತ್ತಿದ್ದಾರೆ. ಎರಡು ಪಕ್ಷಗಳ ಸಮ್ಮಿಶ್ರ ಮ್ಯಾರೇಜ್ ಯಾವಾಗ ಬೇಕಾದರೂ ಡೈವರ್ಸ್ ಆಗಬಹುದು. 15 ದಿನಗೊಳಗಾಗಿ ಈ ಸಮ್ಮಿಶ್ರ ಸರ್ಕಾರ ಪತನವಾಗಿ ನೂತನ ಸರ್ಕಾರಿ ಅಧಿಕಾರಕ್ಕೆ ಬರುತ್ತದೆ ಎಂದು ಭವಿಷ್ಯ ನುಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv