Tag: belagavi

  • ಅಧಿವೇಶನದ ಆರಂಭದಂದೇ ಸುವರ್ಣಸೌಧದ ಮುಂಭಾಗದಲ್ಲಿ ಹೆಬ್ಬಾವು ಪ್ರತ್ಯಕ್ಷ

    ಅಧಿವೇಶನದ ಆರಂಭದಂದೇ ಸುವರ್ಣಸೌಧದ ಮುಂಭಾಗದಲ್ಲಿ ಹೆಬ್ಬಾವು ಪ್ರತ್ಯಕ್ಷ

    ಬೆಳಗಾವಿ: ಸುವರ್ಣಸೌಧದ ಮುಖ್ಯದ್ವಾರದ ಹೊರ ಪೊಲೀಸ್ ಠಾಣೆ ಬಳಿ ಇಂದು ಹೆಬ್ಬಾವು ಪ್ರತ್ಯಕ್ಷವಾಗಿ ಪೊಲೀಸರನ್ನು ಗಾಬರಿಗೊಳಿಸಿದೆ.

    ಬೆಳಗಾವಿಯ ಸುವರ್ಣಸೌಧದ ಮುಂಭಾಗದಲ್ಲಿದ್ದ ಚರಂಡಿಯ ಒಳಗೆ ಹೆಬ್ಬಾವು ಪತ್ತೆಯಾಗಿದೆ. ಸುಮಾರು ನಾಲ್ಕೂವರೆ ಅಡಿ ಉದ್ದವಿರುವ ಹೆಬ್ಬಾವನ್ನು ಕಂಡು ಜನರು ಭಯಬಿದ್ದಿದ್ದಾರೆ. ಅಲ್ಲದೆ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಹಾವು ಕಾಣಿಸಿಕೊಂಡಿರುವ ಕಾರಣಕ್ಕೆ ಪೊಲೀಸರು ಆತಂಕಕ್ಕೆ ಒಳಗಾಗಿದ್ದಾರೆ.

    ಸ್ಥಳಕ್ಕೆ ಹಾವು ಹಿಡಿಯಲು ಉರಗ ತಜ್ಞರು ಆಗಮಿಸಿದ್ದು, ಹೆಬ್ಬಾವನ್ನು ಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಹಾವನ್ನು ನೋಡಲು ಮುಗಿಬಿದ್ದು ಬರುತ್ತಿದ್ದಾರೆ. ಇದರಿಂದ ಹೆಬ್ಬಾವನ್ನು ಹಿಡಿಯಲು ಕಷ್ಟವಾಗಬಹುದು ಎಂದು ಪೊಲೀಸರು ತುಸು ದೂರದಲ್ಲಿ ನಿಂತು ವೀಕ್ಷಿಸುವಂತೆ ಜನರನ್ನು ತಡೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೇವಲ ಶೋಕಿಗಾಗಿ ಭತ್ತ ಕಟಾವು: ಸಿಎಂ ಎಚ್‍ಡಿಕೆಗೆ ಬಿಎಸ್‍ವೈ ಟಾಂಗ್

    ಕೇವಲ ಶೋಕಿಗಾಗಿ ಭತ್ತ ಕಟಾವು: ಸಿಎಂ ಎಚ್‍ಡಿಕೆಗೆ ಬಿಎಸ್‍ವೈ ಟಾಂಗ್

    ಬೆಳಗಾವಿ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೇವಲ ಶೋಕಿಗಾಗಿ ಭತ್ತ ಕಟಾವು ಮಾಡಿದ್ದಾರೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಟಾಂಗ್ ಕೊಟ್ಟಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ ಕೇವಲ ಶೋಕಿಗಾಗಿ ಮಂಡ್ಯದಲ್ಲಿ ಭತ್ತ ಕಟಾವು ಮಾಡಿದ್ದಾರೆ. ಅಲ್ಲದೇ ಪ್ರತಿಪಕ್ಷ ಎಂಬ ಗೌರವವನ್ನು ನೀಡದೇ ಬಿಜೆಪಿ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಮಾಧ್ಯಮ ಪ್ರತಿನಿಧಿಗಳ ಬಗ್ಗೆಯೂ ಹಗುರವಾಗಿ ಮಾತನಾಡುತ್ತಿದ್ದಾರೆ. ಸಿಎಂ ಕುಮಾರಸ್ವಾಮಿ ಸರ್ಕಾರದ ಸಚಿವರುಗಳು ಯಾವುದೇ ಕ್ಷೇತ್ರಕ್ಕೆ ಭೇಟಿ ನೀಡದೇ, ನಿರ್ಲಕ್ಷ್ಯ ತೋರಿದ್ದಾರೆ. ಆದರೆ ಬಿಜೆಪಿ 5 ತಂಡಗಳಾಗಿ ರಾಜ್ಯದ ಬರಪೀಡಿತ ಪ್ರದೇಶಗಳನ್ನು ಭೇಟಿ ನೀಡಿ ಪರಿಶೀಲಿಸಿದೆ ಎಂದು ಹೇಳಿದರು.

    ದೋಸ್ತಿ ಸರ್ಕಾರದ ವಿರುದ್ಧ ರಣತಂತ್ರವನ್ನು ರೂಪಿಸಿದ್ದೇವೆ. ಅಧಿಕಾರವನ್ನು ಬಿಟ್ಟುತೊಲಗಿ ಎಂಬ ಉದ್ದೇಶದಿಂದ ಸೋಮವಾರ ಬೃಹತ್ ಸಮಾವೇಶವನ್ನು ಹಮ್ಮಿಕೊಂಡಿದ್ದೇವೆ ಎಂದು ಕಿಡಿಕಾರಿದರು. ಈ ವೇಳೆ ರಾಜ್ಯದ ರೈತರ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಿದ್ದೇವೆ. ಸಮಾವೇಶದ ಮೂಲಕ ಸರ್ಕಾರದ ಗಮನವನ್ನು ಸೆಳೆಯಲಿದ್ದೇವೆ. ಮಂಡ್ಯದಲ್ಲಿ 30 ಜನರ ದುರ್ಮರಣಕ್ಕೆ ಪರಿಹಾರ ನೀಡಿದ್ದಾರೆ. ಆದರೆ ಯರಗಟ್ಟಿಯಲ್ಲಿ 6 ಜನ ರೈತ ಮಹಿಳೆಯರು ಮೃತಪಟ್ಟರೂ ಪರಿಹಾರ ನೀಡಿಲ್ಲ. ಸಿಎಂ ಉತ್ತರ ಕರ್ನಾಟಕಕ್ಕೆ ಮಲತಾಯಿ ಧೋರಣೆ ತೋರಿಸುತ್ತಿದ್ದಾರೆ ಎನ್ನುವುದು ಇದರಲ್ಲೇ ಗೊತ್ತಾಗುತ್ತದೆ ಎಂದು ಆಕ್ರೋಶ ಹೊರಹಾಕಿದರು.

    ಕುಮಾರಸ್ವಾಮಿ ಎಲ್ಲವನ್ನು ಬಿಟ್ಟು ನಿಂತಿದ್ದಾರೆ. ಕೇವಲ ನಾಲ್ಕು ಜಿಲ್ಲೆಗಳಿಗೆ ಮಾತ್ರ ಸೀಮಿತರಾಗಿದ್ದಾರೆ. ಕೇವಲ ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆಯೇ ಹೊರತು, ಯಾವುದು ಕಾರ್ಯರೂಪಕ್ಕೆ ಬಂದಿಲ್ಲ. ಹೀಗಾಗಿ ಸೋಮವಾರ ನಡೆಯಲಿರುವ ಸಮಾವೇಶಕ್ಕೆ ದೊಡ್ಡ ಪ್ರಮಾಣದಲ್ಲಿ ರೈತರು ಬಂದು ಸೇರಬೇಕೆಂದು ಬಿಎಸ್‍ವೈ ಮನವಿ ಮಾಡಿಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚಳಿಗಾಲದ ಅಧಿವೇಶನದಲ್ಲೂ ಸಿಎಂ ಹೆಚ್‍ಡಿಕೆಗೆ ವಾಸ್ತು ದೋಷ

    ಚಳಿಗಾಲದ ಅಧಿವೇಶನದಲ್ಲೂ ಸಿಎಂ ಹೆಚ್‍ಡಿಕೆಗೆ ವಾಸ್ತು ದೋಷ

    ಬೆಳಗಾವಿ: ಜಿಲ್ಲೆಯಲ್ಲಿ ನಾಳೆಯಿಂದ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ 10 ದಿನ ಬೆಳಗಾವಿಯಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಾಸ್ತವ್ಯ ಹೂಡಲಿದ್ದಾರೆ. ಆದರೆ ಇಲ್ಲೂ ಸಿಎಂ ಕುಮಾರಸ್ವಾಮಿ ಅವರ ವಾಸ್ತವ್ಯಕ್ಕೆ ವಾಸ್ತು ದೋಷ ಅಡ್ಡಿ ಉಂಟಾಗಿದೆ.

    ಸಿಎಂ ಕುಮಾರಸ್ವಾಮಿ ಅವರು ನಗರದ ನ್ಯೂ ಸರ್ಕ್ಯೂಟ್ ಹೌಸ್ ಬದಲು ವಿಟಿಯು ಗೆಸ್ಟ್ ಹೌಸ್‍ಗೆ ವಾಸ್ತವ್ಯ ಹೂಡಲು ಶಿಫ್ಟ್ ಆಗಲಿದ್ದಾರೆ. ನ್ಯೂ ಸರ್ಕ್ಯೂಟ್ ಹೌಸ್ ವಾಸ್ತು ಸರಿ ಇಲ್ಲ ಎಂದು ಸಿಎಂ ವಾಸ್ತವ್ಯಕ್ಕೆ ಹಿಂದೇಟು ಹಾಕಿದ್ದಾರಾ ಎಂಬ ಮಾತು ಕೇಳಿಬರುತ್ತಿದೆ. ಸಚಿವ ಎಚ್.ಡಿ.ರೇವಣ್ಣ ಅವರ ಸೂಚನೆ ಹಿನ್ನೆಲೆಯಲ್ಲಿ ಸಿಎಂ ಕುಮಾರಸ್ವಾಮಿ ಅವರು ವಿಟಿಯುಗೆ ಶಿಫ್ಟ್ ಆಗಿಲಿದ್ದಾರೆ.

    ವಿಟಿಯು ಗೆಸ್ಟ್ ಹೌಸನ್ನು ಅಧಿಕಾರಿಗಳಾದ ಬೆಳಗಾವಿ ಪ್ರಾದೇಶಿಕ ಆಯುಕ್ತ ಮೇಘಣ್ಣವರ್, ಡಿಸಿ ಎಸ್.ಬಿ ಬೊಮ್ಮನಹಳ್ಳಿ ಪರಿಶೀಲನೆ ನಡೆಸಿದ್ದಾರೆ. ಸದ್ಯಕ್ಕೆ ಸರ್ಕ್ಯೂಟ್ ಹೌಸ್ ಸಿಎಂ ಕುಮಾರಸ್ವಾಮಿ ಅವರಿಗೆ ಕಾಯ್ದಿರಿಸಲು ಅಧಿಕಾರಿಗಳು ನಿರ್ಧಾರ ಮಾಡಿದ್ದಾರೆ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐದು ವರ್ಷಗಳ ಕಾಲ ಸರ್ಕ್ಯೂಟ್ ಹೌಸ್ ನಲ್ಲಿ ವಾಸ್ತವ್ಯ ಮಾಡಿದ್ದರು. ಸರ್ಕ್ಯೂಟ್ ಹೌಸ್ ವಾಸ್ತವ್ಯದಿಂದ ಸಾರ್ವಜನಿಕರಿಗೂ ಅನುಕೂಲವಾಗುತ್ತದೆ.

    ವಿಟಿಯು ಅತಿಥಿ ಗೃಹ ಬೆಳಗಾವಿಯಿಂದ 18 ಕಿ.ಮೀ ದೂರವಿದೆ. ಇದರಿಂದ ಸಿಎಂ ಭೇಟಿಗೆ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಲಿದೆ. ಅಷ್ಟೇ ಅಲ್ಲದೇ ಸುವರ್ಣ ಸೌಧದಿಂದ ವಿಟಿಯು ಅತಿಥಿ ಗೃಹಕ್ಕೆ ಸಿಎಂ ನಿತ್ಯ ಓಡಾಟ ಮಾಡಬೇಕಾಗುತ್ತದೆ. ಬೆಳಗಾವಿಯ ಪ್ರಮುಖ ರಸ್ತೆಯಲ್ಲಿ ಸಿಎಂ ಓಟಾಡದಿಂದ ಸಂಚಾರ ಅಸ್ತವ್ಯಸ್ತವಾಗುವ ಸಾಧ್ಯತೆ ಕೂಡ ಇದೆ. ಇತ್ತ ಸಿಎಂ ಕುಮಾರಸ್ವಾಮಿ ಅವರು ಸಾರ್ವಜನಿಕರಿಂದ ದೂರು ಉಳಿಯಲು ವಿಟಿಯು ಆಯ್ಕೆ ಮಾಡಿಕೊಂಡ್ರಾ ಎಂಬ ಅನುಮಾನ ಮೂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಧಿವೇಶನದ ಮೊದಲ ದಿನವೇ ಸರ್ಕಾರಕ್ಕೆ ಪ್ರತಿಭಟನೆಯ ಬಿಸಿ

    ಅಧಿವೇಶನದ ಮೊದಲ ದಿನವೇ ಸರ್ಕಾರಕ್ಕೆ ಪ್ರತಿಭಟನೆಯ ಬಿಸಿ

    -ಪ್ರತಿಪಕ್ಷದ ಅಸ್ತ್ರವಾಗಲಿದೆ ಉತ್ತರ ಕರ್ನಾಟಕದ ಕಡೆಗಣನೆ, ಬರ ನಿರ್ವಹಣೆ
    -ಶಾಸಕರಿಗೆ ಮಧ್ಯಾಹ್ನದ ಊಟ, ವಸತಿ ವ್ಯವಸ್ಥೆ ಅಷ್ಟೇ

    ಬೆಳಗಾವಿ: ಬೆಳಗಾವಿಯ ಸುವರ್ಣಸೌಧದಲ್ಲಿ ನಾಳೆಯಿಂದ ಅಧಿವೇಶನ ಆರಂಭವಾಗಲಿದ್ದು, ಅನೇಕ ವಿಷಯಗಳ ಚರ್ಚೆಗೆ ಸಾಕ್ಷಿಯಾಗಲಿದೆ. ಈಗಾಗಲೇ ಅಧಿವೇಶನದ ಸಿದ್ಧತೆಗಳು ಅಂತಿಮ ಹಂತದಲ್ಲಿವೆ.

    ರೈತರ ನೂರೆಂಟು ಸಮಸ್ಯೆಗಳ ನಡುವೆ ಅಧಿವೇಶನ ನಡೆಸುತ್ತಿದ್ದು, ಮೈತ್ರಿ ಸರ್ಕಾರ ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಹಲವು ಕ್ರಮಗಳನ್ನು ಕೈಗೊಂಡಿದೆ. ಈ ಅಧಿವೇಶನವು ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಭಾರೀ ಚರ್ಚೆಗೆ ವೇದಿಕೆಯಾಗಲಿದೆ. ರೈತರು ಮತ್ತು ಕಬ್ಬು ಬೆಳೆಗಾರರ ಸಮಸ್ಯೆ, ಸಾಲಮನ್ನಾ ವಿಳಂಬ, ಉತ್ತರ ಕರ್ನಾಟಕದ ಕಡೆಗಣನೆ, ಬರ ನಿರ್ವಹಣೆ ಸೇರಿದಂತೆ ಹಲವು ವಿಷಯಗಳನ್ನು ಇಟ್ಟುಕೊಂಡು ಪ್ರತಿಪಕ್ಷ ಬಿಜೆಪಿವು ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರವನ್ನು ತರಾಟೆ ತೆಗೆದುಕೊಳ್ಳಲು ಸಿದ್ಧತೆ ಮಾಡಿಕೊಂಡಿದೆ. ಪ್ರತಿಪಕ್ಷ ಬಿಜೆಪಿ ಅಸ್ತ್ರಗಳಿಗೆ ತಕ್ಕ ಪ್ರತಿ ಅಸ್ತ್ರ ಹೂಡಲು ಸರ್ಕಾರವೂ ಸಜ್ಜುಗೊಂಡಿದೆ.

    ಸುವರ್ಣಸೌಧದ ಎದುರು ರೈತರು, ಕಬ್ಬು ಬೆಳೆಗಾರರು ಹಾಗೂ ಉತ್ತರ ಕರ್ನಾಟಕದ ವಿವಿಧ ಮಠಾಧೀಶರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ. ಪ್ರತಿಪಕ್ಷ ಬಿಜೆಪಿ ನಾಯಕರೂ ಈ ಪ್ರತಿಭಟನೆ ಬೆಂಬಲಿಸಿದ್ದಾರೆ. ಹೀಗಾಗಿ ಪ್ರತಿಭಟನಾಕಾರರಿಗೆ ಸರ್ಕಾರವು ಸೂಕ್ತ ವ್ಯವಸ್ಥೆ ಕಲ್ಪಿಸಿದೆ. ಈ ಮೂಲಕ ಮೈತ್ರಿ ಸರ್ಕಾರವು ಮೊದಲ ದಿನವೇ ಭಾರೀ ಪ್ರತಿಭಟನೆಯ ಶಾಕ್ ಎದುರಿಸಬೇಕಾಗುತ್ತದೆ.

    ಅಧಿವೇಶನ ನಿರ್ವಹಣೆಗೆ ಸೂಕ್ತ ಭದ್ರತೆ ಒದಗಿಸಿದ್ದು, 4 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ಎದುರಾಗದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ತೀವ್ರ ನಿಗಾ ವಹಿಸಲಿದ್ದಾರೆ. ಸುವರ್ಣಸೌಧದ ಸುತ್ತ ಭಾರೀ ಭದ್ರತೆ ಒದಗಿಸಲಾಗಿದೆ.

    ವಿಶೇಷಾಧಿಕಾರಿ ನೇಮಕ:
    ಅಧಿವೇಶನ ಪಾರದರ್ಶಕವಾಗಿರಲು ಹಾಗೂ ಸರ್ಕಾರದ ಹಣ ದುರುಪಯೋಗವಾಗದಿರಲು ಇದೇ ಮೊದಲ ಬಾರಿಗೆ ಐಎಎಸ್ ಅಧಿಕಾರಿ ಉಜ್ವಲ್ ಕುಮಾರ್ ಘೋಷ್ ಅವರನ್ನು ವಿಶೇಷ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಕಲಾಪ ಹೊರಗಿನ ನಿರ್ವಹಣಾ ಸಮಿತಿಗಳು ಪ್ರತಿಯೊಂದು ಖರ್ಚಿಗೂ ಉಜ್ವಲ್ ಕುಮಾರ್ ಘೋಷ್ ಅವರ ಮೂಲಕವೇ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ.

    ದುಂದು ವೆಚ್ಚಕ್ಕೆ ಕತ್ತರಿ:
    ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅವರ ಆಶಯದಂತೆ ಈ ಬಾರಿ ಅಧಿವೇಶನದಲ್ಲಿ ಅನಗತ್ಯ ವೆಚ್ಚ ನಿಯಂತ್ರಣಕ್ಕೆ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರತಿಯೊಂದು ವೆಚ್ಚದಲ್ಲಿಯೂ ಪಾರದರ್ಶಕತೆ ಕಾಯ್ದುಕೊಳ್ಳಲು ಸರ್ಕಾರ ಮುಂದಾಗಿದೆ. ಅಧಿವೇಶನದಲ್ಲಿ ಶಾಸಕರ ಊಟದ ಮೆನು ಬದಲಾಯಿಸಲಾಗಿದೆ. ಹಿಂದಿನ ಅಧಿವೇಶನಗಳಂತೆ ಇಲ್ಲಿಯ ಊಟದಿಂದ ಆರೋಗ್ಯದಲ್ಲಿ ಏರುಪೇರು ಆಗದಿರಲು ಆಯಾ ಭಾಗದ ಊಟದ ವ್ಯವಸ್ಥೆ ಮಾಡಲಾಗಿದೆ.

    ಅಧಿವೇಶನದಲ್ಲಿ ಭಾಗವಹಿಸುವ ಶಾಸಕರಿಗೆ ಸರ್ಕಾರ ಈ ಬಾರಿ ಕೇವಲ ಮಧ್ಯಾಹ್ನದ ಊಟಕ್ಕೆ ಮಾತ್ರ ವ್ಯವಸ್ಥೆ ಮಾಡಲಾಗಿದೆ. ಉಳಿದಂತೆ ಬೆಳಗಿನ ತಿಂಡಿ ಮತ್ತು ರಾತ್ರಿ ಊಟವನ್ನು ಶಾಸಕರು ತಮಗೆ ಸಿಗುವ ಭತ್ಯೆಯಲ್ಲಿಯೇ ಸೇವಿಸಬೇಕು. ತಮ್ಮ ಪಿಎ, ಗನ್ ಮ್ಯಾನ್ ಗಳು, ಡ್ರೈವರ್ ಗಳ ಊಟಕ್ಕೂ ಶಾಸಕರೇ ಭರಿಸಬೇಕು. ಅಷ್ಟೇ ಅಲ್ಲದೆ ಶಾಸಕರಿಗೆ ಮಾತ್ರ ರೂಂ ವ್ಯವಸ್ಥೆ ಮಾಡಲಾಗಿದೆ.

    ಸಚಿವಾಲಯ ಶಿಫ್ಟ್:
    ಅಧಿವೇಶನದ ಹಿನ್ನೆಲೆಯಲ್ಲಿ ವಿಧಾನಸಭೆ ಮತ್ತು ಪರಿಷತ್‍ನ ಎರಡೂ ಸಚಿವಾಲಯ ಸುವರ್ಣಸೌಧಕ್ಕೆ ಶಿಫ್ಟ್ ಆಗಿವೆ. ಸುಮಾರು 300 ಸಿಬ್ಬಂದಿ ಶನಿವಾರದಿಂದ ಬೆಳಗಾವಿ ಸುವರ್ಣಸೌಧದಲ್ಲಿ ಕೆಲಸ ಆರಂಭಿಸಿದ್ದಾರೆ. ಅಧಿವೇಶನದಲ್ಲಿ ಸುಮಾರು ಐದು ಸಾವಿರ ಅಧಿಕಾರಿ ವರ್ಗ, ಶಾಸಕರು ಹಾಗೂ ಪತ್ರಕರ್ತರಿಗೆ ವಸತಿ, ಊಟ, ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಭದ್ರತೆಗೆ ನಿಯೋಜಿತರಾಗುವ ಕನಿಷ್ಠ ಪೊಲೀಸ್ ಸಿಬ್ಬಂದಿಗೂ ಈ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಇಡೀ ಅಧಿವೇಶನದ ವೆಚ್ಚವನ್ನು 17.57 ಕೋಟಿ ರೂ. ಗೆ ನಿಗದಿಪಡಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರೈತ ಮಹಿಳೆ ಜಯಶ್ರೀ ಮತ್ತೆ ಕಣ್ಣೀರು

    ರೈತ ಮಹಿಳೆ ಜಯಶ್ರೀ ಮತ್ತೆ ಕಣ್ಣೀರು

    ಬೆಳಗಾವಿ: ಅನಾಮಧೇಯ ವ್ಯಕ್ತಿಯಿಂದ ಪತ್ರ ಬಂದಿದ್ದು, ಇದರಿಂದ ರೈತ ಮಹಿಳೆ ಜಯಶ್ರೀ ಮತ್ತೆ ಕಣ್ಣೀರಿಟ್ಟಿದ್ದಾರೆ.

    ಇಂದು ಮತ್ತೆ ಬೆಳಗಾವಿ ಡಿಸಿ ಕಚೇರಿ ಎದುರು ಕಬ್ಬಿನ ಬೆಲೆ ನಿಗದಿ ಹಾಗೂ ಸಕ್ಕರೆ ಕಾರ್ಖಾನೆಗಳಿಂದ ಬಾಕಿ ಬಿಲ್ ಕೊಡಿಸುವಂತೆ ಆಗ್ರಹಿಸಿ ರೈತರು ಇಂದಿನಿಂದ ಆಹೋ ರಾತ್ರಿ ಧರಣಿ ಆರಂಭಿಸಿದ್ದಾರೆ. ಈ ವೇಳೆ ಜಯಶ್ರೀ ಹೆಸರಿಗೆ ಒಂದು ಅನಾಮಧೇಯ ವ್ಯಕ್ತಿಯಿಂದ ಪತ್ರ ಬಂದಿದೆ. ಪತ್ರ ನೋಡುತ್ತಿದ್ದಂತೆ ಜಯಶ್ರೀ ಕಣ್ಣೀರಿಟ್ಟಿದ್ದಾರೆ.

    ಪತ್ರ ನಾಲ್ಕು ಪುಟಗಳಲ್ಲಿದ್ದು, ರೈತ ಮಹಿಳೆ ಜಯಶ್ರೀಗೆ ಅವ್ಯಾಚ ಶಬ್ದಗಳಿಂದ ನಿಂದನೆ ಮಾಡಲಾಗಿದೆ. ಜೆಡಿಎಸ್ ಕಾರ್ಯಕರ್ತರೇ ಇದನ್ನ ಮಾಡಿರುವದಾಗಿ ಜಯಶ್ರೀ ಆರೋಪಿಸಿದ್ದು, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಬುದ್ಧಿವಾದ ಹೇಳುವಂತೆ ಜಯಶ್ರೀ ಮನವಿ ಮಾಡಿದ್ದಾರೆ.

    ಬೆಳಗಾವಿಯಲ್ಲಿ ತಣ್ಣಗಾಗಿದ್ದ ಕಬ್ಬು ಬೆಳೆಗಾರರ ಹೋರಾಟ ಮತ್ತೆ ಆರಂಭಾವಾಗಿದೆ. ಭಜನೆ ಮಾಡುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ಮಾಡಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದು ಮನೆಯಿಂದ ಊಟ ತಂದು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಗೆ ಕಳಸಾ ಬಂಡೂರಿ ಹೋರಾಟಗಾರರು ಸಾಥ್ ನೀಡಿದ್ದು, ತಕ್ಷಣವೇ ಕಳಸಾ ಬಂಡೂರಿ ನಾಲಾ ಜೋಡಣೆ ಕಾಮಗಾರಿ ಆರಂಭವಾಗಬೇಕು ಹಾಗೂ ರೈತರ ಸಮಸ್ಯೆ ಬಗೆ ಹರಿಸಬೇಕು ಇಲ್ಲವಾದಲ್ಲಿ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನ ರೈತರು ನೀಡಿದ್ದಾರೆ.

    ಈ ಹಿಂದೆ ರೈತರು ಪ್ರತಿಭಟನೆ ಮಾಡುತ್ತಿದ್ದಾಗ ಕುಮಾರಸ್ವಾಮಿ ಅವರು, ಇಷ್ಟು ದಿನ ಎಲ್ಲಿ ಮಲಗಿದ್ದೆ? ಎಂದು ರೈತ ಮಹಿಳೆ ಜಯಶ್ರೀಗೆ ಪ್ರಶ್ನಿಸಿದ್ದರು. ಇದರಿಂದ ಜಯಶ್ರೀ ತನ್ನ ವ್ಯಕ್ತಿತ್ವಕ್ಕೆ ಚ್ಯುತಿ ತಂದಿದೆ ಎಂದು ಕಣ್ಣೀರಿಟ್ಟಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನೀರಿಗಾಗಿ ಮೋಟಾರ್ ಸ್ಟಾರ್ಟ್ ಮಾಡಿದಾಗ ಬಂದ್ವು 20ಕ್ಕೂ ಅಧಿಕ ಸತ್ತ ಹಾವು

    ನೀರಿಗಾಗಿ ಮೋಟಾರ್ ಸ್ಟಾರ್ಟ್ ಮಾಡಿದಾಗ ಬಂದ್ವು 20ಕ್ಕೂ ಅಧಿಕ ಸತ್ತ ಹಾವು

    ಚಿಕ್ಕೋಡಿ/ಬೆಳಗಾವಿ: ಸಾಮಾನ್ಯವಾಗಿ ರೈತರು ಗದ್ದೆಗೆ ನೀರು ಹಾಯಿಸಬೇಕು ಅಂದರೆ ನೀರಿನ ಮೋಟಾರ್ ಸ್ಟಾರ್ಟ್ ಮಾಡಿದಾಗ ಪೈಪ್‍ನಲ್ಲಿ ನೀರು ಬರುತ್ತದೆ. ಆದರೆ ಇಲ್ಲೊಬ್ಬರು ರೈತ ಮೋಟಾರ್ ಆನ್ ಮಾಡಿದ ತಕ್ಷಣ ಪೈಪ್ ನಲ್ಲಿ 20 ಕ್ಕೂ ಹೆಚ್ಚು ಸತ್ತ ಹಾವುಗಳು ಬಂದು ಬಿಟ್ಟಿವೆ.

    ಈ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ಹೊರವಲಯದ ಮಹದೇವ ಜುಗುದಾರ ಎಂಬ ರೈತರ ಗದ್ದೆಯಲ್ಲಿ ನಡೆದಿದೆ. ಕೃಷ್ಣಾ ನದಿಯಿಂದ ಪಂಪ್ ಮೂಲಕ ನೀರು ಎತ್ತುತ್ತಿದ್ದ ರೈತ ಮಹದೇವ ಕಳೆದ ಒಂದು ತಿಂಗಳಿನಿಂದ ಕಬ್ಬು ಕಟಾವಿಗೆ ಬಂದಿದ್ದ ಕಾರಣ ಗದ್ದೆಗೆ ನೀರು ಹಾಯಿಸಿರಲಿಲ್ಲ.

    ಶುಕ್ರವಾರ ಗದ್ದೆಗೆ ನೀರು ಹಾಯಿಸಬೇಕು ಅಂತ ಹೋಗಿ ಮೋಟಾರ್ ಆನ್ ಮಾಡಿದ್ದಾರೆ. ಆಗ ರೈತ ಮಹದೇವ್ ಗೆ ಶಾಕ್ ಆಗಿದ್ದು, ಬೇರೆ ಬೇರೆ ಜಾತಿಯ 20ಕ್ಕೂ ಹೆಚ್ಚು ಸತ್ತ ಹಾವುಗಳು ನೀರಿನ ಪೈಪ್ ಮೂಲಕ ಹೊರಬಿದ್ದಿದೆ. ಇದನ್ನು ನೋಡಿ ರೈತ ಆತಂಕಕ್ಕೊಳಗಾಗಿದ್ದಾರೆ. ತಕ್ಷಣ ಈ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ರಾಯಬಾಗ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಅಂಕಲಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಾವುಗಳ ಅಂತ್ಯ ಸಂಸ್ಕಾರ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬರೋಬ್ಬರಿ 1 ಲಕ್ಷ ರೂ.ನಲ್ಲಿ ರೆಡಿ ಆಗ್ತಿದೆ ಯಶ್ ಮಗಳ ತೊಟ್ಟಿಲು- ತೊಟ್ಟಿಲಿನ ವಿಶೇಷತೆ ಏನು?

    ಬರೋಬ್ಬರಿ 1 ಲಕ್ಷ ರೂ.ನಲ್ಲಿ ರೆಡಿ ಆಗ್ತಿದೆ ಯಶ್ ಮಗಳ ತೊಟ್ಟಿಲು- ತೊಟ್ಟಿಲಿನ ವಿಶೇಷತೆ ಏನು?

    ಬೆಳಗಾವಿ: ರೆಬಲ್ ಸ್ಟಾರ್ ಅಂಬರೀಶ್ ಅವರ ಕೊನೆಯ ಆಸೆಯಂತೆ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಅವರ ಮಗಳಿಗೆ ಉಡುಗೊರೆ ನೀಡುವ ತೊಟ್ಟಿಲು ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ತಯಾರಾಗುತ್ತಿದೆ.

    ಅಂಬರೀಶ್ ಅವರು ಯಶ್, ರಾಧಿಕಾ ಮಗುವಿಗಾಗಿ ಸ್ವತಃ ಫೋನ್ ಮಾಡಿ ತೊಟ್ಟಿಲು ಆರ್ಡರ್ ಮಾಡಿದ್ದರು. ತೊಟ್ಟಿಲು ತಯಾರಿಸಿ ಕೊಡುವಂತೆ ಬೆಳಗಾವಿ ಮೂಲದ ನಾರಾಯಣ್ ಕಲಾಲ ಅವರ ಜೊತೆ ಅಂಬಿ ಮಾತನಾಡಿದ್ದರು. ನಾರಾಯಣ್ ಕಲಾಲ ಅವರು ಕಲಘಟಗಿಯ ಮೂಲದ ಶ್ರೀಧರ್ ಸಾವುಕಾರ್ ಅವರಲ್ಲಿ  ತೊಟ್ಟಿಲಿಗೆ ಆರ್ಡರ್ ಮಾಡಿದ್ದರು. ಆದರೆ ಶ್ರೀಧರ್ ಅವರಿಗೆ ಈ ವಿಷಯ ಗೊತ್ತಿರಲಿಲ್ಲ. ಅಂಬಿ ನಿಧನದ ಬಳಿಕ ಈ ವಿಷಯ ಗೊತ್ತಾಗಿದೆ.

    ಈ ಬಗ್ಗೆ ನಾರಾಯಣ್ ಕಲಾಲ ಅವರು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ, ಅಂಬರೀಶ್ ನಿಧನರಾಗುವ 8-9 ದಿನಗಳ ಹಿಂದೆ ಅವರು ನನ್ನ ಬಳಿ ಧಾರವಾಡ ಜಿಲ್ಲೆಯಲ್ಲಿ ಕಲಘಟಗಿಯಲ್ಲಿ ತೊಟ್ಟಿಲು ಮಾಡುತ್ತಾರಂತೆ ಅದು ಎಲ್ಲೋ ಎಂದು ಕೇಳಿದರು. ನನಗೂ ಇದರ ಬಗ್ಗೆ ವಿಶೇಷವಾಗಿ ಏನೂ ಗೊತ್ತಿರಲಿಲ್ಲ. ಹೌದು ಎಂದು ಹೇಳಿ ಬಳಿಕ ಬೇರೆಯವರ ಬಗ್ಗೆ ಕೇಳಿಕೊಳ್ಳೊಣ ಎಂದುಕೊಂಡೆ. ಆಗ ಅವರು ಯಶ್- ರಾಧಿಕಾಗೆ ಮಗು ಆಗುತ್ತೆ. ಹಾಗಾಗಿ ನಾನು ಒಂದು ತೊಟ್ಟಿಲು ಮಾಡಿಸಬೇಕು ಎಂದು ಹೇಳಿದರು. ನಾನು ಸರಿ ಅಣ್ಣ ಎಂದು ಹೇಳಿದೆ. ನಾನು ಕಲಘಟಗಿಯಲ್ಲಿ ತೊಟ್ಟಿಲಿನ ವಿಷಯದ ಬಗ್ಗೆ ಕೇಳಿಕೊಂಡು ಅವರಿಗೆ ಕರೆ ಮಾಡಿದ್ದಾಗ ಆರ್ಡರ್ ಮಾಡು ಎಂದು ಹೇಳಿದರು. ಇದನ್ನೂ ಓದಿ: ಯಶ್-ರಾಧಿಕಾ ಮಗುವಿಗೆ ಅಂಬಿ ರೆಡಿ ಮಾಡಿಸಿದ್ದರು ಭರ್ಜರಿ ಗಿಫ್ಟ್!

    ಹೆಣ್ಣು ಮಕ್ಕಳಿಗೆ ಮೊದಲ ಮಗುವಾದಾಗ ತವರು ಮನೆಯವರು ತೊಟ್ಟಿಲು ನೀಡುವ ಸಂಪ್ರದಾಯವಿದೆ. ಇದು ಅಂಬರೀಶ್ ಅವರಿಗೂ ಗೊತ್ತು. ಕೆಲವರ ಮನೆಯಲ್ಲಿ ಈ ಸಂಪ್ರದಾಯವಿರುತ್ತದೆ. ಕೆಲವರ ಮನೆಯಲ್ಲಿ ಇರುವುದಿಲ್ಲ. ಯಾರೋ ಕಲಘಟಗಿಯ ತೊಟ್ಟಿಲು ಬಗ್ಗೆ ಅಂಬರೀಶ್ ಅವರಲ್ಲಿ ಹೇಳಿದ್ದರಿಂದ ನಾನು ಅಲ್ಲಿ ಹೋಗಿ ವಿಚಾರಿಸಿದೆ. ಅಲ್ಲಿನ ತೊಟ್ಟಿಲಿಗೆ 600 ವರ್ಷಗಳ ಇತಿಹಾಸವಿದೆ ಎಂಬುದು ತಿಳಿಯಿತು. ಕಲಘಟಗಿಯಲ್ಲಿ ತೊಟ್ಟಿಲು ಮಾಡಬೇಕಾದರೆ ಅವರು ಧಾರ್ಮಿಕವಾಗಿ ಮಾಡುತ್ತಾರೆ. ತೊಟ್ಟಲಿನಲ್ಲಿ ಕಥೆಗಳಲ್ಲಿ ಬರುವ ಮುದ್ದು ಕೃಷ್ಣ ಆಟ, ಲೀಲೆಗಳನ್ನು ವಿವರಿಸುವ ಚಿತ್ರಗಳನ್ನು ಬಿಡಿಸಲಾಗುತ್ತದೆ. ಆ ಬಣ್ಣಕ್ಕೆ 100 ವರ್ಷ ಗ್ಯಾರೆಂಟಿ ಇರುತ್ತದೆ. ತೊಟ್ಟಿಲಿಗೆ ಬಣ್ಣ ಹಚ್ಚುವಾಗ ಅವರು ಸಾಧಾರಣ ಬಣ್ಣ ಹಚ್ಚುವುದಿಲ್ಲ. ಗಿಡಮೂಲಿಕೆ ಬಣ್ಣಗಳನ್ನು ತೊಟ್ಟಿಲಿಗೆ ಲೇಪನ ಮಾಡುತ್ತಾರೆ ಎಂದು ತಿಳಿಸಿದರು.

    ಈ ತೊಟ್ಟಿಲಿಗೆ ಸುಮಾರು 1 ಲಕ್ಷ ರೂ.ವಿರುತ್ತದೆ. ದರವನ್ನು ಕೇಳಿ ಯಶ್ ನೀವು ಹಣ ತೆಗೆದುಕೊಳ್ಳಬೇಕು ಎಂದು ಹೇಳಿದರು. ನಾನು ಹಣಕ್ಕಾಗಿ ಈ ಕೆಲಸ ಮಾಡುತ್ತಿಲ್ಲ. ಇದು ಅಂಬಿ ಅಣ್ಣನ ಆಸೆ. ಹಣದ ಬಗ್ಗೆ ನಾನು ಅಣ್ಣ ಮಾತನಾಡಿಲ್ಲ. ನೀವು ಹಣ ತೆಗೆದುಕೊಂಡಿಲ್ಲ ಅಂದರೆ ನನಗೆ ಮುಜುಗರ ಆಗುತ್ತೆ ಎಂದು ಯಶ್ ಹೇಳಿದರು. ಇದು ಅಣ್ಣ ಕೊಡುತ್ತಿರುವುದು. ಹಾಗಾಗಿ ದುಡ್ಡಿನ ವಿಚಾರವನ್ನು ಈ ವಿಷಯದಲ್ಲಿ ತರಬೇಡಿ ಎಂಂದು ತಿಳಿಸಿದೆ.

    ರಾಧಿಕಾ ಅವರ ಡೆಲಿವರಿ 9 ಅಥವಾ 10 ರಂದು ಆಗುತ್ತದೆ ಎಂದು ಯಶ್ ಪಿಎ ತಿಳಿಸಿದ್ದರು. ಈ ತೊಟ್ಟಿಲನ್ನು ಡಿಸೆಂಬರ್ 26 ರಂದು ಯಶ್ ಅವರಿಗೆ ನೀಡಬೇಕಿತ್ತು. ಆದರೆ ಡೆಲಿವರಿ ಡೇಟ್ ಮೊದಲೇ ರಾಧಿಕಾ ಅವರಿಗೆ ಮಗು ಆಗಿದ್ದ ಕಾರಣ 20ರ ಒಳಗಡೆ ತೊಟ್ಟಿಲು ನೀಡಬೇಕಿದೆ. ಹೀಗಾಗಿ ಈಗ ಹಗಲು ರಾತ್ರಿ ಎನ್ನದೇ ತೊಟ್ಟಿಲಿನ ಕೆಲಸ ನಡೆಯುತ್ತಿದೆ ಎಂದು ನಾರಾಯಣ್ ಕಲಾಲ ಪಬ್ಲಿಕ್ ಟಿವಿಗೆ ತಿಳಿಸಿದರು.

    https://www.youtube.com/watch?v=8O7gBadMmdI

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಿರಣ್ಯಕೇಶಿ ನದಿ, ಹೂಳೆಮ್ಮ ದೇವಾಲಯದಲ್ಲಿ ಪ್ಲಾಸ್ಟಿಕ್ ಮುಕ್ತ ಅಭಿಯಾನ!

    ಹಿರಣ್ಯಕೇಶಿ ನದಿ, ಹೂಳೆಮ್ಮ ದೇವಾಲಯದಲ್ಲಿ ಪ್ಲಾಸ್ಟಿಕ್ ಮುಕ್ತ ಅಭಿಯಾನ!

    ಬೆಳಗಾವಿ(ಚಿಕ್ಕೋಡಿ): ಹುಕ್ಕೇರಿ ಹಿರೇಮಠದಿಂದ ಆಯೋಜಿಸಿರುವ ಪ್ಲಾಸ್ಟಿಕ್ ಮುಕ್ತ ಭಾರತ ಅಭಿಯಾನದಡಿಯಲ್ಲಿ ಶುಕ್ರವಾರ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿರಣ್ಯಕೇಶಿ ನದಿ ಹಾಗೂ ಸುಕ್ಷೇತ್ರ ಹೊಳೆಮ್ಮ ದೇವಿ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು.

    ಬೆಳಗಾವಿ ಜಿಲ್ಲಾ ಪಂಚಾಯತಿ ಸಿಇಓ ರಾಮಚಂದ್ರ ರಾವ್ ಅಭಿಯಾನಕ್ಕೆ ಚಾಲನೆ ನೀಡಿದರು. ಸ್ವತಃ ಹುಕ್ಕೇರಿ ಹಿರೇಮಠದ ಚಂದ್ರಶೇಖರ್ ಶಿವಾಚಾರ್ಯ ಸ್ವಾಮೀಜಿ ಹಾಗೂ ಜಿಲ್ಲಾ ಪಂಚಾಯತ್ ಸಿಇಓ ರಾಮಚಂದ್ರನ ನದಿ ಸ್ವಚ್ಛತೆಯನ್ನು ಮಾಡಿದರು. ಸ್ವಚ್ಛತೆ ಸಂದರ್ಭದಲ್ಲಿ ಹುಕ್ಕೇರಿ ಸ್ವಾಮೀಜಿ ಅವರ ಬೆರಳಿಗೆ ಗಾಜು ಚುಚ್ಚಿ ರಕ್ತ ಬಂದ ಘಟನೆ ನಡೆಯಿತು.

    ನದಿ ತಟದಲ್ಲಿರುವ ಸುಕ್ಷೇತ್ರ ಹೊಳೆಮ್ಮ ದೇವಸ್ಥಾನವನ್ನು ಪ್ಲಾಸ್ಟಿಕ್ ಮುಕ್ತ ಮಾಡುವ ನಿಟ್ಟಿನಲ್ಲಿ 25 ಸಾವಿರ ಬಟ್ಟೆಯ ಬ್ಯಾಗ್ ಗಳನ್ನು ಹುಕ್ಕೇರಿ ಹಿರೇಮಠದ ವತಿಯಿಂದ ಅಂಗಡಿ ಮಾಲೀಕರಿಗೆ ನೀಡಲಾಯಿತು. ಪ್ಲಾಸ್ಟಿಕ್ ಎಲ್ಲರಿಗೂ ಮಾರಕವಾಗಿದ್ದು ಪ್ಲಾಸ್ಟಿಕ್ ಬಳಸುವುದನ್ನು ಜನ ನಿಲ್ಲಿಸಬೇಕು ಎಂದು ಸ್ವಾಮೀಜಿ ವಿನಂತಿಸಿಕೊಂಡರು.

    ಕೇವಲ ದಂಡ ಹಾಕಿದರೆ ಪ್ಲಾಸ್ಟಿಕ್ ನಿಷೇಧ ಆಗುವುದಿಲ್ಲ. ಪ್ರೀತಿಯಿಂದ ಜನ ಪ್ಲಾಸ್ಟಿಕ್ ನಿಷೇಧ ಮಾಡುವಂತೆ ಕ್ರಮ ಕೈಗೊಳ್ಳಲಾಗುವುದು ಹಾಗೂ ಜಿಲ್ಲೆಯ 9 ನದಿಗಳ ಸ್ವಚ್ಛತೆ ಕಡೆ ಗಮನ ಹರಿಸುವುದರ ಜೊತೆಗೆ ಜಾಗೃತಿ ಮೂಡಿಸಲಾಗುವುದು ಎಂದು ಸಿಇಒ ರಾಮಚಂದ್ರ ರಾವ್ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕುಂದಾ ನಾಡಿಗೆ ಸಕ್ಕರೆ ನಾಡಿನ ನಾಯಕ ಬಂದಿದ್ದೇ ಅಪರಾಧ: ಡಿಕೆಶಿ ವಿರುದ್ಧ ಕೋಟ ಪರೋಕ್ಷ ವಾಗ್ದಾಳಿ

    ಕುಂದಾ ನಾಡಿಗೆ ಸಕ್ಕರೆ ನಾಡಿನ ನಾಯಕ ಬಂದಿದ್ದೇ ಅಪರಾಧ: ಡಿಕೆಶಿ ವಿರುದ್ಧ ಕೋಟ ಪರೋಕ್ಷ ವಾಗ್ದಾಳಿ

    ಬೆಳಗಾವಿ: ಸರ್ಕಾರ ಅಭದ್ರವಾಗಿದೆ ಅನ್ನೋದಕ್ಕಿಂತ ಭದ್ರವಾಗಿದೆ ಅನ್ನೋದೆ ಹೆಚ್ಚಿಸಲಿ. ಸ್ವಾಭಾವಿಕವಾಗಿ ಬಿಜೆಪಿ ಸರ್ಕಾರವನ್ನು ಅಸ್ಥಿರಗೊಳಿಸುವಂತಹ ಯಾವುದೇ ಪ್ರಕ್ರಿಯೆಗಳಲ್ಲಿ ಪಾಲ್ಗೊಂಡಿಲ್ಲ. ಪಾಲ್ಗೊಳ್ಳುವುದೂ ಇಲ್ಲ. ಆದ್ರೆ ಅಸ್ಥಿರಗೊಂಡಂತಹ ಸರ್ಕಾರವೊಂದು ತಾನಾಗಿಯೇ ಉರುಳಿ ಬಿದ್ರೆ ಅದಕ್ಕೆ ಬಿಜೆಪಿ ಜವಾಬ್ದಾರಿ ಅಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಇಲ್ಲಿಯವರೆಗೆ ಭದ್ರವಾಗಿರಲಿಲ್ಲ. ಅಭದ್ರತೆಯಲ್ಲಿ ಇತ್ತು. ಅವರ ಆಂತರಿಕ ವಿವಾದಗಳು ಒಂದಷ್ಟು ಪರಾಕಷ್ಟೆಗೇರಿ, ಬಹುತೇಕವಾಗಿ ಸರ್ಕಾರ ತನ್ನ ಕುಸಿತವನ್ನು ಕಾಣಲು ಇಂದಿನ ಅಧಿವೇಶನದ ಸಂದರ್ಭದಲ್ಲಿ ದಟ್ಟವಾಗಿ ಕಂಡುಬಂತು ಅಂತ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ರಮೇಶ್ ಜಾರಕಿಹೊಳಿಯವರು ಮಾನಸಿಕವಾಗಿ ಸರ್ಕಾರದಿಂದ ದೂರ ಉಳಿದು ಬಹಳ ಸಮಯವಾಗಿದೆ. ಈ ವಿಚಾರ ಸಾಮಾನ್ಯವಾಗಿ ಇಡೀ ರಾಜ್ಯದ ಜನತೆಗೆ ಗೊತ್ತಾಗಿರೋ ವಿಚಾರವಾಗಿದೆ. ಆದ್ರೆ ಅಧಿಕೃತವಾಗಿ ಇನ್ನಷ್ಟೇ ಆಗಬೇಕಾಗಿದೆ. ಇದೇ ವೇಳೆ ಸಚಿವ ಡಿಕೆ ಶಿವಕುಮಾರ್ ಹಾಗೂ ರಮೇಶ್ ಜಾರಕಿಹೊಳಿ ನಡುವಿನ ಗಲಾಟೆ ಸರ್ಕಾರದ ಮೇಲೆ ಪರಿಣಾಮ ಬೀರುತ್ತದಾ ಎನ್ನುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಕುಂದಾ ನಾಡಿಗೆ ಸಕ್ಕರೆ ನಾಡಿನ ನಾಯಕ ಬಂದಿದ್ದೇ ಅಪರಾಧವಾಗಿದೆ. ಯಾಕಂದ್ರೆ ಇಲ್ಲಿ ಬಹಳ ವರ್ಷಗಳ ಕಾಲ ರಾಜಕಾರಣ ಮಾಡಿದವರ ಮೇಲೆ ಇದು ಪರಿಣಾಮ ಬೀರಿದೆ. ಈ ಕುರಿತು ರಮೇಶ್ ಜಾರಕಿಹೊಳಿ ಏನು ಹೇಳಿದ್ದಾರೆ ಅದಷ್ಟೇ ಮುಂದಿರುವಂತಹ ವಿಚಾರವಾಗಿದೆ. ಆದ್ರೆ ಈ ವಿಚಾರದಲ್ಲಿ ಬಿಜೆಪಿ ಸ್ಪಷ್ಟವಾದ ನಿಲುವನ್ನು ಹೊಂದಿದೆ ಅಂದ್ರು.

    ಇಂದಿನ ಸಂದಿಗ್ಧ ಸ್ಥಿತಿಯಲ್ಲಿ ಪಕ್ಷಕ್ಕೆ 10 ಮಂದಿ ಶಾಸಕರು ಬಂದ್ರೂ ಬೆಂಬಲ ಕೊಡುವುದಾಗಿ ಈಗಾಗಲೇ ರಾಜ್ಯಾಧ್ಯಕ್ಷರು ಹಾಗೂ ಬಿಜೆಪಿಯ ಎಲ್ಲಾ ನಾಯಕರು ಸ್ಪಷ್ಟವಾಗಿ ಹೇಳಿದ್ದೇವೆ. ಅಲ್ಲದೇ ಸರ್ಕಾರ ರಚನೆ ಮಾಡುತ್ತೇವೆ. ರಾಜ್ಯದ ಜನರ ಭಾವನೆ ಅವರು ಬಿಜೆಪಿಯೇ ಅಧಿಕಾರಕ್ಕೆ ಬರಬೇಕು ಅನ್ನೊದು ಇದೆ. ಇದೇ ಸಂದರ್ಭದಲ್ಲಿ ರಮೇಶ್ ಜಾರಕಿಹೊಳಿಯವರು ಬಿಜೆಪಿಯವರ ಸಂಪರ್ಕದಲ್ಲಿದ್ದಾರೆ ಅನ್ನೋ ಗುಮಾನಿಯ ಕುರಿತು ಮಾತನಾಡಿದ ಶ್ರೀನಿವಾಸ ಪೂಜಾರಿ, ಸ್ವಾಭಾವಿಕವಾಗಿ ಎಲ್ಲಿ ತೃಪ್ತಿಯಾಗುತ್ತದೋ ಆ ಕಡೆ ಅವರು ಗಮನವನ್ನು ಕೊಡುತ್ತಿದ್ದಾರೆ. ಹಾಗೆಯೇ ಅವರು ಪಕ್ಷಕ್ಕೆ ಬರಬೇಕು ಅನ್ನುವ ಆಸೆಯಿದೆ. ಅವರು ಬರುವ ನಿರೀಕ್ಷೆಯನ್ನು ಇಟ್ಟುಕೊಂಡಿದ್ದೇವೆ. ಒಟ್ಟಿನಲ್ಲಿ ರಮೇಶ್ ಜಾರಕಿಹೊಳಿಯವರು ಪಕ್ಷಕ್ಕೆ ಬಂದ್ರೆ ಸ್ವಾಗತಿಸುವುದಾಗಿ ಅವರು ತಿಳಿಸಿದ್ರು.

    ಉತ್ತರ ಕನ್ನಡ ಶಾಶ್ವತವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಇಲ್ಲಿಯ ಜನ ಜೀವನ, ಮೂಲಭೂತ ಸೌಕರ್ಯ, ನೀರಾವರಿ, ಆರೋಗ್ಯ ಹಾಗೂ ಶಿಕ್ಷಣದಲ್ಲಿ ಕನಿಷ್ಠ ಪ್ರಗತಿಯಲ್ಲಿದೆ ಅನ್ನುವ ಸದ್ಯದ ಅಂಕಿ-ಅಂಶ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಕಡೆ ವಿಶೇಷವಾದ ಗಮನಕೊಡಬೇಕು ಅನ್ನೋ ಒತ್ತಾಯವನ್ನು ನಾವು ಸದನದಲ್ಲಿ ಮಾಡಿದ್ದೇವೆ. ಬರೀ ಮಾತುಗಳಲ್ಲಿ ಹೇಳಿದ್ರೆ ಸಾಲದು. ಸರ್ಕಾರ ಈ ಬಗ್ಗೆ ದಟ್ಟವಾದ ನಿಲುವು ತೆಗೆದುಕೊಳ್ಳಬೇಕು. ಈ ಮೂಲಕ ಉತ್ತರ ಕರ್ನಾಟಕ ಅಭಿವೃದ್ಧಿಗೆ ಕೆಲಸ ಮಾಡಬೇಕು ಅಂದ್ರು.

    ಒಟ್ಟಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಈ ಹಿಂದೆಯೂ ಬಡವರ ಪರ ಕೆಲಸ ಮಾಡಿದೆ. ಮುಂದೆಯೂ ಬಡವರ ಪರ ಕೆಲಸ ಮಾಡಲಿದೆ ಅಂತ ಅವರು ತಿಳಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗೋಕಾಕ್ ಸಹಕಾರಿ ಬ್ಯಾಂಕ್ ಮುಂದೆ ಶವವಿಟ್ಟು ಗ್ರಾಹಕರಿಂದ ಪ್ರತಿಭಟನೆ

    ಗೋಕಾಕ್ ಸಹಕಾರಿ ಬ್ಯಾಂಕ್ ಮುಂದೆ ಶವವಿಟ್ಟು ಗ್ರಾಹಕರಿಂದ ಪ್ರತಿಭಟನೆ

    ಬೆಳಗಾವಿ: ಜಿಲ್ಲೆಯ ಗೋಕಾಕ್ ಪಟ್ಟಣದಲ್ಲಿ ರೇಣುಕಾಚಾರ್ಯ ಮಹಿಳಾ ಪತ್ತಿನ ಸಹಕಾರಿ ಬ್ಯಾಂಕ್ ಮುಂದೆ ಶವವನ್ನು ಇರಿಸಿ ಗ್ರಾಹಕರು ಪ್ರತಿಭಟನೆ ನಡೆಸಿದ್ದಾರೆ.

    ರೇಣುಕಾಚಾರ್ಯ ಮಹಿಳಾ ಪತ್ತಿನ ಸಹಕಾರಿ ಬ್ಯಾಂಕ್‍ನಿಂದ ಮೋಸವಾಗಿದೆ ಎಂದು ಆರೋಪಿಸಿ ಗ್ರಾಹಕರೊಬ್ಬರ ಶವವನ್ನು ಇಟ್ಟುಕೊಂಡು ಪ್ರತಿಭಟನೆ ಮಾಡಲಾಯಿತು. ಸುಮಾರು ನಾಲ್ಕು ಕೋಟಿಗೂ ಅಧಿಕ ಠೇವಣಿ ಹಣವನ್ನು ಬ್ಯಾಂಕ್ ದುರುಪಯೋಗ ಮಾಡಿಕೊಂಡಿದೆ ಎಂದು ಗ್ರಾಹಕರು ಆರೋಪಿಸಿದ್ದಾರೆ.

    ತಮ್ಮಯ್ಯ ಬನಶೆಟ್ಟಿ ಎಂಬುವವರು ರೇಣುಕಾಚಾರ್ಯ ಬ್ಯಾಂಕಿನಲ್ಲಿ ಹಣ ಕೂಡಿಸಿಟ್ಟಿದ್ದರು. ಆದರೆ ತಮ್ಮಯ್ಯ ಅವರು ಕಟ್ಟಿದ್ದ ಹಣವನ್ನು ಹಿಂಪಡೆಯಲು ಬ್ಯಾಂಕ್‍ಗೆ ಹೋಗಿದ್ದರು. ಈ ವೇಳೆ ಬ್ಯಾಂಕ್ ಸಿಬ್ಬಂದಿ ಅವರಿ ಹಣ ನೀಡಲು ನಿರಾಕರಿಸಿದ್ದಾರೆ. ತಾವು ಕೂಡಿಸಿಟ್ಟಿದ್ದ ಹಣ ಸಿಗದಿದ್ದಕ್ಕೆ ತಮ್ಮಯ್ಯ ಮನನೊಂದು ಅನಾರೋಗ್ಯಕ್ಕಿಡಾಗಿದ್ದರು.

    ಕೊನೆಗೆ ಚಿಕಿತ್ಸೆ ಪಡೆಯಲು ಕೂಡ ಹಣವಿಲ್ಲದೆ ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇದರಿಂದ ಕೋಪಗೊಂಡ ತಿಮ್ಮಯ್ಯ ಅವರ ಕುಟುಂಬಸ್ಥರು ಠೇವಣಿಯ ಹಣ ಕೊಡುವಂತೆ ಒತ್ತಾಯಿಸಿ ಸಹಕಾರಿ ಬ್ಯಾಂಕ್ ಮುಂದೆ ಶವವಿಟ್ಟು ಪ್ರತಿಭಟನೆ ಮಾಡಿದ್ದಾರೆ. ಗೋಕಾಕ್ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv