Tag: belagavi

  • ಮೇಕೆದಾಟು ಯೋಜನೆಗೆ ತಮಿಳುನಾಡು ವಿರೋಧ – ಡಿಕೆಶಿ ತಿರುಗೇಟು

    ಮೇಕೆದಾಟು ಯೋಜನೆಗೆ ತಮಿಳುನಾಡು ವಿರೋಧ – ಡಿಕೆಶಿ ತಿರುಗೇಟು

    ಬೆಳಗಾವಿ: ಮೇಕೆದಾಟು ಯೋಜನೆ ಬಗ್ಗೆ ನಾನು ಈಗಲೂ ಹೆಚ್ಚು ಆತ್ಮವಿಶ್ವಾಸದಿಂದ ಇದ್ದು, ಆದರೆ ತಮಿಳುನಾಡು ಸಿಎಂ ಮಾಧ್ಯಮಗಳಿಗೆ ನೀಡಿರುವ ಮಾಹಿತಿ ನನಗೆ ಅಚ್ಚರಿ ತಂದಿದೆ. ಈಗಲೂ ನಾನು ತಮಿಳುನಾಡು ಸಿಎಂ ಹಾಗು ಅಧಿಕಾರಿಗಳಿಗೆ ಯೋಜನೆ ಬಗ್ಗೆ ಭೇಟಿ ನೀಡಿಲು ಆಹ್ವಾನ ನೀಡುತ್ತೇನೆ ಎಂದು ಹೇಳುವ ಮೂಲಕ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.

    ಬೆಳಗಾವಿಯಲ್ಲಿ ತಮಿಳುನಾಡಿನ ತೀರ್ಮಾನದ ಕುರಿತು ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್ ಅವರು, ನಮ್ಮ ರಾಜ್ಯ ಹಿತಕ್ಕಾಗಿ ಮೇಕೆದಾಟು ಯೋಜನೆ ಮಾಡುತ್ತಿದ್ದೇವೆ. ಆದರೆ ಇದರಿಂದ ತಮಿಳುನಾಡಿಗೂ ಅನುಕೂಲವಾಗುತ್ತದೆ. ಹಾಗಾಗಿ ಈಗಲೂ ಕಾಲ ಮಿಂಚಿಲ್ಲ. ನೇರ ನಾನು ತಮಿಳುನಾಡು ಸಿಎಂ ಹಾಗು ಅಧಿಕಾರಿಗಳಿಗೆ ಆಹ್ವಾನ ನೀಡುತಿದ್ದು, ಸ್ಥಳಕ್ಕೆ ಬಂದು ನಮ್ಮ ಯೋಜನೆ ಬಗ್ಗೆ ಪರಿಶೀಲನೆ ನಡೆಸಲು ಮನವಿ ಮಾಡುತ್ತೇನೆ ಎಂದರು.

    ಕೂಡಲೇ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಿ ಎರಡು ರಾಜ್ಯಗಳಿಗೆ ಉಪಯೋಗವಾಗುವ ಯೋಜನೆಗೆ ತಮಿಳುನಾಡು ಮನವೊಲಿಸಬೇಕು. ಅಲ್ಲದೇ ತಮಿಳುನಾಡು ನ್ಯಾಯಾಲಯಕ್ಕೆ ತೆರಳಿದರೆ ಅನಿವಾರ್ಯವಾಗಿ ನಾವು ನ್ಯಾಯಾಲಯಲ್ಲೇ ಸೂಕ್ತ ಉತ್ತರ ನೀಡುತ್ತೇವೆ. ತಮಿಳುನಾಡಿನ ಈ ನಡೆ ನನಗೆ ಶಾಕ್ ನೀಡಿದೆ. ಕೇಂದ್ರ ಸರ್ಕಾರ ಈ ಎಲ್ಲಾ ವಿಚಾರದ ‘ಮೈನ್ ಕೀ’. ಅದ್ದರಿಂದ ಕೇಂದ್ರ ಮಧ್ಯ ಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಲು ಮುಂದಾಗಬೇಕು. ನ್ಯಾಯಾಲಯ ಈ ಕುರಿತು ನಮಗೆ ಏನು ಆದೇಶ ನೀಡಿದೆ ಅಷ್ಟು ನೀರನ್ನು ಮಾತ್ರ ಬಳಕೆ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಮೇಕೆದಾಟು ಯೋಜನೆ: ಮಾತುಕತೆಗೆ ಸಿದ್ಧವಿಲ್ಲವೆಂದ ತಮಿಳುನಾಡು

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಪಿಆರ್‌ಒ ವಾರ್ – ರಮೇಶ್ ಜಾರಕಿಹೊಳಿಗೆ ತಿರುಗೇಟು ಕೊಟ್ಟ ಲಕ್ಷ್ಮೀ ಹೆಬ್ಬಾಳ್ಕರ್

    ಪಿಆರ್‌ಒ ವಾರ್ – ರಮೇಶ್ ಜಾರಕಿಹೊಳಿಗೆ ತಿರುಗೇಟು ಕೊಟ್ಟ ಲಕ್ಷ್ಮೀ ಹೆಬ್ಬಾಳ್ಕರ್

    ಬೆಳಗಾವಿ: ನಾನು ನನ್ನ ಮತದಾರರಿಗೆ ಮಾತ್ರವೇ ಪಿಆರ್‌ಒ (ಪಬ್ಲಿಕ್ ರಿಲೇಷನ್ ಆಫೀಸರ್)ಎನ್ನುವ ಮೂಲಕ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪೌರಾಡಳಿತ ರಮೇಶ್ ಜಾರಕಿಹೊಳಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

    ಸಚಿವರ ರಮೇಶ್ ಜಾರಕಿಹೊಳಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ಐದು ವರ್ಷದಿಂದ ಯಾವ ಪಿಆರ್‌ಒ , ಯಾವುದಕ್ಕೇ ಪಿಆರ್‌ಒ ಆಗಿದ್ದೆ? ಐದು ವರ್ಷದಿಂದ ಪಿಆರ್‌ಒ ಆಗಿದ್ದೀನಿ ಎಂದು ಹೇಳಿದ್ದಾರೆ. ನಾನು ಸರ್ಕಾರಿ ಕೆಲಸದಲ್ಲಿದ್ದೀನಾ ಅವರ ಪಿಆರ್‌ಒ ಆಗಲು. ನಾನು ಒಬ್ಬ ಶಾಸಕಿಯಾಗಿದ್ದೇನೆ. ರಾಜಕೀಯ ಶಾಶ್ವತ ಅಲ್ಲ. ಶತ್ರುಗಳಾಗಿರುವಾಗ ನಡೆದ ಪ್ರಸಂಗಗಳನ್ನು ಬಿಟ್ಟು ಬಿಡಬೇಕು. ನಾನು ಹಳೆಯ ಕಹಿ ನೆನಪುಗಳನ್ನು ಮರೆಯುತ್ತಿದ್ದೇನೆ. ನಾವು ಈಗ ಅಭಿವೃದ್ಧಿ ಬಗ್ಗೆ ಮಾತ್ರವೇ ಮಾತನಾಡಬೇಕು. ನಾವು ಒಂದೇ ಪಕ್ಷದಲ್ಲಿದ್ದೇವೆ ಎಂದು ತಿಳಿಸಿದರು.

    ನಾನು ನನ್ನ ಕ್ಷೇತ್ರದ ಮತದಾರರ ಪಿಆರ್‌ಒ . ಮಾನ ಮರ್ಯಾದೆ ಇದ್ದವರು, ಹಾಗೆಲ್ಲ ಮಾತನಾಡಬಾರದು. ನನಗೂ ಸಹಿಸಿಕೊಂಡು, ಸಹಿಸಿಕೊಂಡು ಸಾಕಾಗಿದೆ. ಪಿಆರ್‌ಒ ಎಂದು ಹೇಳುವುದು ಸರಿಯಲ್ಲ. ಇದನ್ನು ಇಲ್ಲಿಗೆ ನಿಲ್ಲಿಸಿ. ಹೀಗೆ ಪದೇ ಪದೇ ಮಾತನಾಡಬಾರದು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

    ರಮೇಶ್ ಜಾರಕಿಹೊಳಿ ಹೇಳಿದ್ದೇನು?
    ಕಳೆದ ಐದು ವರ್ಷದಿಂದ ಲಕ್ಷ್ಮೀ ಹೆಬ್ಬಾಳ್ಕರ್ ಪಿಆರ್‌ಒ ಆಗಿದ್ದರು. ಈಗ ಅವರು ಯಾಕಿಲ್ಲ? ಉಸ್ತುವಾರಿ ಸಚಿವರಾಗಿ ಮುಖ್ಯಮಂತ್ರಿಗಳನ್ನು ಸ್ವಾಗತಿಸಲು ನಾನೇ ಹೋಗಬೇಕೆಂದೇನಿಲ್ಲ. ಕಳೆದ ವರ್ಷವೂ ಸಿದ್ದರಾಮಯ್ಯರನ್ನು ಸ್ವಾಗತ ಮಾಡಲು ಹೋಗಿರಲಿಲ್ಲ. ಉಸ್ತುವಾರಿ ಸಚಿವ ಶೋ ಮಾಡೋದು ಅಲ್ಲ. ಅದು ಕೆಲಸ ಮಾಡುವುದು. ನಾನು ಪ್ರಚಾರ ಪ್ರಿಯನಲ್ಲವೆಂದು ಹೇಳುವ ಮೂಲಕ ರಮೇಶ್ ಜಾರಕಿಹೊಳಿ ಟಾಂಗ್ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಶ್ರೀರಾಮುಲು ಇದ್ದಕ್ಕಿದ್ದಂತೆ ಸೈಲೆಂಟ್ ಆಗಿದ್ದು ಏಕೆ – ಪ್ರಶ್ನೆಗೆ ಉತ್ತರ ಕೊಟ್ಟ ಶೆಟ್ಟರ್

    ಶ್ರೀರಾಮುಲು ಇದ್ದಕ್ಕಿದ್ದಂತೆ ಸೈಲೆಂಟ್ ಆಗಿದ್ದು ಏಕೆ – ಪ್ರಶ್ನೆಗೆ ಉತ್ತರ ಕೊಟ್ಟ ಶೆಟ್ಟರ್

    ಬೆಳಗಾವಿ: ಬಿಜೆಪಿ ಶಾಸಕ ಶ್ರೀರಾಮುಲು ಅವರಿಗೆ ಆರೋಗ್ಯ ಸಮಸ್ಯೆಯಿದೆ. ಅನಾರೋಗ್ಯದಿಂದಾಗಿ ಅವರು ಈಗ ಮಾತನಾಡುತ್ತಿಲ್ಲ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.

    ಸುವರ್ಣಸೌಧದ ಹೊರಗಡೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪಕ್ಷ ಎಂದಿಗೂ ರೈತರ ಪರ ಇರುತ್ತೆ. ಬಿಎಸ್ ಯಡಿಯೂರಪ್ಪ ಉಪಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲ ಮನ್ನಾ ಮಾಡಲಾಗಿತ್ತು. ಆದರೆ ಇಂದು ಕುಮಾರಸ್ವಾಮಿ ಅವರು ಹಲವು ನಿಯಮಗಳನ್ನು ಹಾಕಿ ಸಾಲ ಮನ್ನಾ ಮಾಡಿದ್ದಾರೆ. 4 ಜನರಿಗೆ ಋಣ ಮುಕ್ತ ಪತ್ರ ಕೊಟ್ಟು ನಾಟಕ ಮಾಡಿದ್ದಾರೆ ಅಷ್ಟೇ ಎಂದರು.

    ಇದೇ ವೇಳೆ ಶ್ರೀರಾಮುಲು ಅವರ ಕುರಿತ ಪ್ರಶ್ನೆಗೆ, ರಾಮುಲು ಅವರು ಅನಾರೋಗ್ಯದಿಂದ ಇರುವ ಕಾರಣ ಹೆಚ್ಚು ಮಾತನಾಡಲು ಆಗುತ್ತಿಲ್ಲ ಎಂದು ಉತ್ತರಿಸಿದರು.

    ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಶೆಟ್ಟರ್ ಅವರು, ಸ್ವತಃ ಕಾಂಗ್ರೆಸ್ ಪಕ್ಷದ ನಾಯಕರೇ ತಮ್ಮ ತಪ್ಪುಗಳ್ನು ಒಪ್ಪಿಕೊಂಡಿದ್ದಾರೆ. ಲಿಂಗಾಯತ ಧರ್ಮ ಒಡೆಯುವ ವಿಚಾರದಲ್ಲಿ ಸಚಿವ ಡಿಕೆ ಶಿವಕುಮಾರ್ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಅವರು ಕೂಡ ಈ ಬಗ್ಗೆ ಪಶ್ಚಾತ್ತಾಪ ಪಟ್ಟಿದ್ರು. ಅದ್ರೆ ಈ ಬಗ್ಗೆ ಪ್ರಧಾನಿ ಮೋದಿ ಅವರ ಮೇಲೆ ಬಾರ ಹಾಕಲು ಪ್ರಯತ್ನ ಪಟ್ಟಿದ್ದಾರೆ. ಇದನ್ನು ತಿಳಿದು ರಾಜಕೀಯಕ್ಕಾಗಿ ಧರ್ಮ ಮಾಡಲು ಹೋಗಿದ್ದ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿ ಎಂದು ಕರೆ ನೀಡಿದರು.

    ಸಮ್ಮಿಶ್ರ ಸರ್ಕಾರ ಮಾಡುತ್ತಿರುವ ರೈತರ ಸಾಲಮನ್ನಾ ನಾಟಕ ಕೂಡ ಬಹಳ ದಿನ ನಡೆಯಲ್ಲ, ರೈತರ ಸಾಲಮನ್ನಾ ಆಗುವವರೆಗೂ ನಾವು ಹೋರಾಟ ಮಾಡುತ್ತೇವೆ. ಬರದಿಂದ ಜನ ಕಂಗಾಲಾಗಿದ್ದು, ಹಲವು ಗ್ರಾಮಗಳಲ್ಲಿ ಕುಡಿಯಲು ನೀರು, ಸಾಕು ಪ್ರಾಣಿಗಳಿಗೆ ಮೇವು ಇಲ್ಲದೇ ಗುಳೆ ಹೋಗುತ್ತಿದ್ದಾರೆ. ಸರ್ಕಾರದ ಯಾವ ಅಧಿಕಾರಿ, ಸಚಿವವರು ಭೇಟಿ ನೀಡಿಲ್ಲ. ಲಾಟರಿ ಹೊಡೆದಂತೆ ಸಿಎಂ ಆಗಿರುವ ಸರ್ಕಾರ ಪತನ ನಿಶ್ಚಿತ ಎಂದು ಎಚ್ಚರಿಕೆ ನೀಡಿದರು.

    ಬಿಎಸ್‍ವೈ ಎಲ್ಲಿ ಮಲಗಿದ್ರು ಎಂಬ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಹೇಳಿಕೆಗೆ ಕಿಡಿಕಾರಿದ ಶೆಟ್ಟರ್, ಇದು ಕುಮಾರಸ್ವಾಮಿ ಅಂಡ್ ಟೀಂನ ಸಂಸ್ಕೃತಿ ತೋರಿಸುತ್ತದೆ. ಹಿಂದೆ ರೈತ ಮಹಿಳೆಗೆ ಸಿಎಂ ಕೇಳಿದ್ರು, ಈಗ ಅದೇ ದಾರಿಯಲ್ಲಿ ಅವರ ಶಾಸಕರು ಮುಂದುವರಿಯುತ್ತಿದ್ದಾರೆ ಎಂದು ಟಾಂಗ್ ನೀಡಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮಹಾರಾಷ್ಟ್ರದಿಂದ ಉಡುಪಿ ಹೋಟೆಲ್ ಉದ್ಯಮಿಗಳನ್ನು ಹೊರಹಾಕಬೇಕು – ಬೆಳಗಾವಿಯಲ್ಲಿ ಎಂಇಎಸ್, ಶೀವಸೇನೆ ಮುಖಂಡರ ಉದ್ಧಟತನ

    ಮಹಾರಾಷ್ಟ್ರದಿಂದ ಉಡುಪಿ ಹೋಟೆಲ್ ಉದ್ಯಮಿಗಳನ್ನು ಹೊರಹಾಕಬೇಕು – ಬೆಳಗಾವಿಯಲ್ಲಿ ಎಂಇಎಸ್, ಶೀವಸೇನೆ ಮುಖಂಡರ ಉದ್ಧಟತನ

    ಬೆಳಗಾವಿ: ಎಂಇಎಸ್ ಪಕ್ಷ ಬೆಳಗಾವಿ ಅಧಿವೇಶನಕ್ಕೆ ವಿರೋಧ ವ್ಯಕ್ತಪಡಿಸಿ ಆಯೋಜಿಸಿದ್ದ ಮಹಾಮೇಳಾವ ಸಭೆಯಲ್ಲಿ ಮಹಾರಾಷ್ಟ್ರದಲ್ಲಿರುವ ಹೋಟೆಲ್ ಉದ್ಯಮಿಗಳನ್ನು ಹೊರಹಾಕಬೇಕು ಎಂದು ಕೊಲ್ಲಾಪುರ ಜಿಲ್ಲಾ ಶಿವಸೇನಾ ಅಧ್ಯಕ್ಷ ವಿಜಯ ದೇವನೆ ಉದ್ಧಟತನದ ಹೇಳಿಕೆ ನೀಡಿದ್ದಾರೆ.

    ನಗರದ ವ್ಯಾಕ್ಸಿನ್ ಡಿಪೋದಲ್ಲಿ ಸರ್ಕಾರದ ಅನುಮತಿ ಇಲ್ಲದೆ ಸಭೆ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಕೊಲ್ಲಾಪುರ ಜಿಲ್ಲಾ ಶಿವಸೇನಾ ಅಧ್ಯಕ್ಷ ವಿಜಯ ದೇವನೆ, ಮಹಾರಾಷ್ಟ್ರದಲ್ಲಿನ ಉಡುಪಿ ಹೋಟೆಲ್ ಉದ್ಯಮಿಗಳನ್ನ ಮಹಾರಾಷ್ಟ್ರದಿಂದ ಹೊರಗೆ ಕಳಿಸಬೇಕು. ಆಗ ಕರ್ನಾಟಕ ಸರ್ಕಾರಕ್ಕೆ ಬುದ್ಧಿ ಬರುತ್ತೆ. ಒಂದು ದಿನ ಇಂತಹ ಕ್ರಾಂತಿ ಆಗುತ್ತೆ, ಆಗ ಮರಾಠಿ ಯುವಕರು ಕನ್ನಡಿಗರನ್ನ ಮನೆಗೆ ಹೋಗಿ ಹೊಡೆಯುತ್ತಾರೆ ಎಂದು ಉದ್ಧಟತನದ ಹೇಳಿಕೆ ನೀಡಿದ್ದಾರೆ.

    ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕೈ ನಾಯಕ, ಮಹಾರಾಷ್ಟ್ರ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಧನಂಜಯ ಮುಂಡೆ, ನನ್ನ ಪ್ರಾಣ ಹೋದರೂ ಪರವಾಗಿಲ್ಲ ಬೆಳಗಾವಿಯನ್ನ ಮಹಾರಾಷ್ಟ್ರಕ್ಕೆ ಸೇರಿಸುತ್ತೇನೆ. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುವ ಅಧಿವೇಶನ ಕಾನೂನು ಬಾಹಿರವಾಗಿದ್ದು, ಅದನ್ನ ನಿಷೇಧಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಮಾಜಿ ಎಂಇಎಸ್ ಶಾಸಕ ಅರವಿಂದ ಪಾಟೀಲ, ಬೆಳಗಾವಿ ಪಾಲಿಕೆ ಉಪ ಮೇಯರ್ ಮಧುಶ್ರೀ ಪೂಜೇರಿ ಸೇರಿದಂತೆ ಹಲವು ಮಂದಿ ಭಾಗವಹಿಸಿದ್ದರು.

    ಕಾರ್ಯಕ್ರಮಕ್ಕೆ ಜನರೇ ಇಲ್ಲ: ಅಧಿವೇಶನ ವಿರೋಧಿಸಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಮಧ್ಯಾಹ್ನವಾದರೂ ಜನರು ಬಾರದೇ ಇದ್ದ ಪರಿಣಾಮ ನಿಗದಿತ ಸಮಯಕ್ಕಿಂತ 3 ಗಂಟೆಗಳ ಕಾಲ ತಡವಾಗಿ ಆರಂಭವಾಯಿತು. ಅಲ್ಲದೇ ಈ ವೇಳೆ ಮಾತನಾಡಿದ ಎಂಇಎಸ್ ಮುಖಂಡರು ಕನ್ನಡ ನಾಡಿ ವೀರ ಮಹಿಳೆ ರಾಣಿ ಚನ್ನಮ್ಮಳ ಜಪ ಮಾಡಿದರು. ರಾಣಿ ಚನ್ನಮ್ಮ ತಮ್ಮ ಆಡಳಿತದಲ್ಲಿ ಮರಾಠಿ ಭಾಷೆಯಲ್ಲೇ ಪತ್ರ ವ್ಯವಹಾರ ನಡೆಸುತ್ತಿದ್ದರು. ಬ್ರಿಟಿಷ್ ಆಡಳಿತದಲ್ಲಿ ರಾಣಿ ಚನ್ನಮ್ಮ ಬ್ರಿಟಿಷರಿಗೆ ಮರಾಠಿ ಭಾಷೆಯಲ್ಲಿ ಪತ್ರ ಬರೆದಿದ್ದರೂ ಎಂದು ಎಂಇಎಸ್ ಮುಖಂಡ ಮಾಲೋಜಿ ಅಷ್ಟೇಕರ ಚನ್ನಮ್ಮರ ಬಗ್ಗೆ ವಿತ್ತಂಡವಾದ ಮಂಡಿಸಿದರು. ಇತ್ತ ಕನ್ನಡಿಗರ ಬಗ್ಗೆ ಹಾಗೂ ಪೊಲೀಸ ಕುರಿತು ಕಾರ್ಯಕ್ರಮದಲ್ಲಿ ಭಾಷಣ ಮಾಡಿದರೂ ಪೊಲೀಸರು ಮಾತ್ರ ಕೈ ಕಟ್ಟಿ ನಿಂತ ದೃಶ್ಯ ಕಂಡು ಬಂತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಧರ್ಮಸ್ಥಳದ ಮುಂದೆ ನಿಂತು ಹೇಳಿದ್ರಲ್ಲ ಹಾಗಾದ್ರೆ, ಎಷ್ಟು ಜನಕ್ಕೆ ಋಣಮುಕ್ತ ಪತ್ರ ಕೊಟ್ಟಿದ್ರಿ- ಎಚ್‍ಡಿಕೆಗೆ ಕರಂದ್ಲಾಜೆ ಪ್ರಶ್ನೆ

    ಧರ್ಮಸ್ಥಳದ ಮುಂದೆ ನಿಂತು ಹೇಳಿದ್ರಲ್ಲ ಹಾಗಾದ್ರೆ, ಎಷ್ಟು ಜನಕ್ಕೆ ಋಣಮುಕ್ತ ಪತ್ರ ಕೊಟ್ಟಿದ್ರಿ- ಎಚ್‍ಡಿಕೆಗೆ ಕರಂದ್ಲಾಜೆ ಪ್ರಶ್ನೆ

    ಬೆಳಗಾವಿ: ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲೇ ರೈತರ ಸಂಪೂರ್ಣ ಸಾಲಮನ್ನಾ ಮಾಡುತ್ತೀರೆಂದು ಧರ್ಮಸ್ಥಳದ ಮುಂದೆ ನಿಂತು ಹೇಳಿದ್ದೀರಿ. ಹಾಗಾದರೆ ಇಲ್ಲಿಯವರೆಗೂ ಎಷ್ಟು ರೈತರಿಗೆ ಋಣಮುಕ್ತ ಪತ್ರ ಕೊಟ್ಟಿದ್ದೀರೆಂದು ಸಂಸದೆ ಶೋಭಾ ಕರಂದ್ಲಾಜೆ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಪ್ರಶ್ನಿಸಿದ್ದಾರೆ.

    ರೈತ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಅಧ್ಯಕ್ಷರಾಗಿರುವ ಬಿಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಸುವರ್ಣಸೌಧ ಕಟ್ಟಲಾಯಿತು. ಆದರೆ ಅದಾದ ನಂತರ ಬಂದ ಸರ್ಕಾರಗಳು ಸುವರ್ಣ ಸೌಧದಲ್ಲಿ ಯಾವುದೇ ಕೆಲಸಗಳನ್ನು ನಡೆಸುತ್ತಿಲ್ಲ. ಸಿಎಂ ಕುಮಾರಸ್ವಾಮಿ ಮಾತನಾಡುತ್ತಿರುವುದನ್ನು ನೋಡಿದರೆ, ನಮಗೆ ನ್ಯಾಯ ಸಿಗುತ್ತೆ ಎಂದು ಅನಿಸುತ್ತಿಲ್ಲ. ರೈತ ಹೋರಾಟಗಾರರ ಬಗ್ಗೆ ಸಿಎಂ ಕೀಳಾಗಿ ಮಾತನಾಡುತ್ತಾರೆ. ಅಲ್ಲದೇ ಏನು ಕಿಸಿಯೋಕೆ ರೈತ ಹೋರಾಟ ಮಾಡುತ್ತಾರೆಂದು ಕೇಳಿದ್ದಾರೆ. ಮಾತನಾಡುವ ಭಾಷೆ ಯಾವ ರೀತಿ ಇದೇ ಎನ್ನುವುದು ಅವರ ಮಾನಸಿಕ ಸ್ಥಿತಿಯನ್ನೇ ತೋರಿಸುತ್ತದೆಂದು ಕಿಡಿಕಾರಿದರು.

    ಅಧಿಕಾರಕ್ಕೆ 24 ಗಂಟೆಗಳಲ್ಲೆ ರೈತರ ಸಾಲಮನ್ನಾ ಮಾಡುತ್ತೇನೆಂದು ಧರ್ಮಸ್ಥಳ ಹಾಗೂ ಶೃಂಗೇರಿ ದೇವಾಲಯಗಳ ಮುಂದೆ ನಿಂತು ಹೇಳಿದ್ದಿರಿ. ಆದರೆ ಈಗ ಎಷ್ಟು ರೈತರಿಗೆ ಋಣಮುಕ್ತ ಪ್ರಮಾಣ ಪತ್ರ ನೀಡಿದ್ದೀರಿ ಎಂಬುದನ್ನು ತೋರಿಸಿ. ಅಲ್ಲದೇ ಉತ್ತರಕರ್ನಾಟಕ ಭಾಗದ ಜನರ ಎಷ್ಟು ಮಂದಿಯ ಸಾಲ ಮನ್ನಾ ಆಗಿದೆ? ಕುಮಾರಸ್ವಾಮಿ ಈ ಬಗ್ಗೆ ಎಚ್ಚರಿಕೆಯಿಂದ ಮಾತನಾಡಬೇಕು. ನಾಲ್ಕು ಜನರಿಗಾದರೂ ಋಣಮುಕ್ತ ಪತ್ರ ನೀಡಿದ್ದೀರಾ ಎಂದು ಸವಾಲು ಹಾಕಿದರು.

    ನಮಗೆ ಹೆಮ್ಮೆ ಇದೆ. ಬಿಜೆಪಿ ಸರ್ಕಾರ 70 ವರ್ಷದ ಕೆಲಸವನ್ನು ಮಾಡಿದೆ. ರೈತರ ಸಾಲಮನ್ನಾ, ಹಾಲಿಗೆ ಪ್ರೋತ್ಸಹ ಧನ, ಉಚಿತ ಪಂಪ್‍ಸೆಟ್ ವಿದ್ಯುತ್ ಕೊಟ್ಟಿದ್ದೆವು. ಅಲ್ಲದೇ ಜಲ ಸಂಪನ್ಮೂಲ ಸಚಿವರು ಮೈಸೂರಿನಲ್ಲಿ ಡಿಸ್ನಿ ಲ್ಯಾಂಡ್ ಮಾಡುತ್ತಾರಂತೆ. ಮೊದಲು ನದಿಯಲ್ಲಿ ತುಂಬಿರುವ ಹುಳುವನ್ನು ಸ್ವಚ್ಛಗೊಳಿಸಿ. ಕೃಷ್ಣೆ ಮೇಲಾಣೆ ಹಾಕಿ ಪಾದಯಾತ್ರೆ ಮಾಡಿ, ತೊಡೆ ತಟ್ಟಿದ್ದೀರಿ. ಆದರೆ ಯಾವುದೇ ಕೆಲಸ ಮಾತ್ರ ಆಗಿಲ್ಲ. ಇದು ನಿಮ್ಮ ಸರ್ಕಾರದ ಅಂಧಾ ದರ್ಬಾರ್ ಆಗಿದೆ. ಅಲ್ಲದೇ ಕೇಂದ್ರದ ಹಣವನ್ನು ರಾಜ್ಯ ಸರ್ಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ. ನೀವು ರಾಜ್ಯಕ್ಕೆ ಮುಖ್ಯಮಂತ್ರಿಯೇ ಹೊರತು, ಮೂರು ಜಿಲ್ಲೆಗಳಿಗೆ ಮಾತ್ರ ಸೀಮಿತವಲ್ಲ. ಇಂದಿನ ನಮ್ಮ ಹೋರಾಟ ಕೇವಲ ಆರಂಭ ಮಾತ್ರ. ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಡುತ್ತೇವೆ. ದೇವರು ಇವರಿಗೆ ಸರಿಯಾದ ಬುದ್ಧಿ ಕೊಡಲಿ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಚಳಿಗಾಲದ ಅಧಿವೇಶನಕ್ಕಾಗಿ ಭೂರಿ ಭೋಜನ ವ್ಯವಸ್ಥೆ!

    ಚಳಿಗಾಲದ ಅಧಿವೇಶನಕ್ಕಾಗಿ ಭೂರಿ ಭೋಜನ ವ್ಯವಸ್ಥೆ!

    ಬೆಳಗಾವಿ: ಚಳಿಗಾಲದ ಅಧಿವೇಶನ ಸುವರ್ಣ ಸೌಧದಲ್ಲಿ ಆರಂಭವಾಗಿದ್ದು, ಇತ್ತ ಸದನದಲ್ಲಿ ಭಾಗವಹಿಸುವ ಶಾಸಕರು ಹಾಗೂ ಸಚಿವರಿಗಾಗಿ ಸುವರ್ಣಸೌಧದಲ್ಲಿ ಮೃಷ್ಟಾನ ಭೋಜನ ತಯಾರಾಗಿದೆ.

    ಸದನ ವಿಶೇಷವಾಗಿ ಎರಡು ಬಗೆಯ ಪಲ್ಯ, ಕ್ಯಾಪ್ಸಿಕಂ ಮಸಾಲಾ, ಗ್ರೀನ್ ಬಟಾಣಾ ಮಸಾಲಾ, ಹೆಸರು ಬೇಳೆ ಪಾಯಸ ಸಿದ್ಧವಾಗಿದೆ. ಇದರೊಂದಿಗೆ ಸಾಂಬಾರ್, ಎರಡು ಬಗೆಯ ಅನ್ನ, ಮಸಾಲಾ ರೈಸ್ ಮತ್ತು ವೈಟ್ ರೈಸ್. ಉತ್ತರ ಕರ್ನಾಟಕ ಶೈಲಿಯ ಜೋಳದ ರೊಟ್ಟಿ, ಚಪಾತಿ, ಶೇಂಗಾ ಚಟ್ನಿಪುಡಿ, ಉಪ್ಪಿನ ಕಾಯಿ, ಹಪ್ಪಳವನ್ನ ಸಿದ್ಧಪಡಿಸಲಾಗುತ್ತಿದೆ.

    ಅಧಿವೇಶನದಲ್ಲಿ 50 ಮಂದಿ ಅಡುಗೆಭಟ್ಟರು ಭೋಜನ ಸಿದ್ಧಪಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಪ್ರಮುಖವಾಗಿ ಈ ಬಾರಿ ಅಧಿವೇಶನದ ಭೋಜನ ಪಟ್ಟಿಯಲ್ಲಿ ಮೈಸೂರು ಕರ್ನಾಟಕ, ಉತ್ತರ ಕರ್ನಾಟಕ ಮತ್ತು ಕರಾವಳಿ ಕರ್ನಾಟಕದ ಶೈಲಿಯ ಭೋಜನ ತಯಾರಿ ನಡೆದಿದೆ.

    ಕಳೆದ ಬಾರಿಯ ಅಧಿವೇಶನದಲ್ಲಿ ಆಹಾರದಲ್ಲಿ ವ್ಯತ್ಯಯವಾಗಿ ಶಾಸಕರಿಗೆ ತೊಂದರೆಯಾಗಿತ್ತು. ಇದರ ಪರಿಣಾಮವಾಗಿ ಈ ಬಾರಿ ಅಧಿವೇಶನಕ್ಕೂ ಮುನ್ನವೇ ಊಟದ ವಿಚಾರದಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದೆ. ಅಲ್ಲದೇ ಅಧಿವೇಶನದಲ್ಲಿ ಭಾಗವಹಿಸುವ ಸಚಿವರು ಹಾಗೂ ಬೆಂಬಲಿಗರು ಸರ್ಕಾರಿ ಹಣದಲ್ಲಿ ದುಂದು ವೆಚ್ಚ ಮಾಡುವುದಕ್ಕೆ ಬ್ರೇಕ್ ಹಾಕಲಾಗಿದೆ. ಎಲ್ಲ ಶಾಸಕ, ಸಚಿವರಿಗೆ ಈ ಬಾರಿ ಬೆಳಗಾವಿಯಲ್ಲಿಯೇ ವಸತಿ ವ್ಯವಸ್ಥೆ ಮಾಡಲಾಗಿದ್ದು, ಅಧಿವೇಶನಕ್ಕಾಗಿ ಭಾವಹಿಸುವ ಶಾಸಕರು ಉಳಿದುಕೊಳ್ಳುವ ಹೋಟೆಲ್ ಗಳ ಹೆಚ್ಚುವರಿ ಊಟೋಪಹಾರದ ಮೊತ್ತವನ್ನು ಅವರೇ ಭರಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಕರ್ನಾಟಕದಲ್ಲಿ ಸ್ಕೆಚ್, ಮುಂಬೈನಲ್ಲಿ ಫಿನಿಶ್- ರೆಡ್ಡಿಗಾರು ಮಹಾ ಸ್ಕೆಚ್!

    ಕರ್ನಾಟಕದಲ್ಲಿ ಸ್ಕೆಚ್, ಮುಂಬೈನಲ್ಲಿ ಫಿನಿಶ್- ರೆಡ್ಡಿಗಾರು ಮಹಾ ಸ್ಕೆಚ್!

    ಬೆಂಗಳೂರು: ಸಮ್ಮಿಶ್ರ ಸರ್ಕಾರ ರಚನೆಯಾಗಿ 7 ತಿಂಗಳು ಕಳೆಯಲಿದೆ. ಆದರೂ ಮೈತ್ರಿ ಪಕ್ಷಗಳಲ್ಲಿ ನಾಯಕರ ಭಿನ್ನಮತ ಸ್ಫೋಟವಾಗುತ್ತಲೇ ಇದೆ. ಈ ನಡುವೆ ಬಿಜೆಪಿ ಸಮ್ಮಿಶ್ರ ಸರ್ಕಾರವನ್ನು ಬೀಳಿಸಲು ಆಪರೇಷನ್ ಕಮಲಕ್ಕೆ ಮುಂದಾಗುತ್ತಿದೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಆರೋಪಿಸುತ್ತಿದ್ದಾರೆ. ಈ ಎಲ್ಲ ಗೊಂದಲಗಳ ನಡುವೆ ಇಂದು ಬೆಳಗಾವಿ ಚಳಿಗಾಲ ಅಧಿವೇಶನ ಆರಂಭವಾಗಿದೆ. ಅಧಿವೇಶನ ಮೊದಲ ದಿನವೇ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಗೈರಾಗಿದ್ದಾರೆ. ತಮ್ಮ ಅನುಪಸ್ಥಿತಿಗೆ ಕೆಲ ಕಾರಣಗಳನ್ನು ನೀಡಿದ್ದರೂ, ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲವು ಸರಿ ಇಲ್ಲ ಎಂಬ ಚರ್ಚೆಗಳು ರಾಜಕೀಯ ಅಂಗಳದಲ್ಲಿ ಆರಂಭಗೊಂಡಿವೆ.

    ಶಾಸಕ ಸತೀಶ್ ಜಾರಕಿಹೊಳಿ ಮತ್ತು ಸಚಿವ ರಮೇಶ್ ಜಾರಕಿಹೊಳಿ ಬಿಜೆಪಿ ಸೇರ್ತಾರ ಎಂಬ ಬಿಸಿ ಬಿಸಿ ಚರ್ಚೆಗಳ ಆರಂಭವಾಗಿವೆ. ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ಎಲ್ಲ ನಾಯಕರು ಬೆಳಗಾವಿಗೆ ಬಂದಿದ್ದಾರೆ. ಇದೇ ಡಿಸೆಂಬರ್ 12ಕ್ಕೆ ಅಂದ್ರೆ ಬುಧವಾರ ಮಾಜಿ ಸಚಿವ ಜನಾರ್ದನ ರೆಡ್ಡಿ ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಅಧಿವೇಶನದ ಗಲಾಟೆಯಲ್ಲಿ ಕಾಂಗ್ರೆಸ್ ಶಾಸಕರನ್ನು ಸೆಳೆಯುವ ಪ್ರಯತ್ನಕ್ಕೆ ಮುಂದಾಗ್ತಾರೆ ಎನ್ನಲಾಗುತ್ತಿದೆ.

    ಕುಂದಾ ನಗರಿಗೆ ಆಗಮಿಸುವ ಮುನ್ನ ಜನಾರ್ದನ ರೆಡ್ಡಿ ಮುಂಬೈ ಸಮೀಪದ ಸಹರಾ ಸಿಟಿಯಲ್ಲಿರುವ ಆ್ಯಂಬಿವ್ಯಾಲಿ ರೆಸಾರ್ಟ್ ಬುಕ್ ಮಾಡಿದ್ದಾರಂತೆ. ಮಂಗಳವಾರ ರಾಜಸ್ಥಾನ, ಮಧ್ಯ ಪ್ರದೇಶ, ಮೀಜೋರಾಂ, ಛತ್ತೀಸಗಢ ಮತ್ತು ತೆಲಂಗಾಣ ರಾಜ್ಯಗಳ ವಿಧಾನ ಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಪಂಚ ರಾಜ್ಯಗಳ ಫಲಿತಾಂಶದ ಬಳಿಕ ಕಾಂಗ್ರೆಸ್ 9 ಅತೃಪ್ತ ಶಾಸಕರು ಪಕ್ಷ ತೊರೆದು ಹೊರ ಬರುತ್ತಾರಾ ಎನ್ನುವುದು ಜನಾರ್ದನ ರೆಡ್ಡಿ ಅವರು ಸೂಕ್ಷ್ಮವಾಗಿ ಗಮನಿಸಲಿದ್ದಾರೆ ಎನ್ನುವ ಸುದ್ದಿ ಇಗ ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿದೆ.

    ಒಂದು ಅಧಿವೇಶನದಲ್ಲಿ ಅಸಮಾಧಾನ ಹೊಗೆಯ ಕಾಣಿಸಿಕೊಂಡರೆ ಅದರ ನೇರ ಲಾಭ ಪಡೆದುಕೊಳ್ಳಲು ಜನಾರ್ದನ ರೆಡ್ಡಿ ಪ್ಲಾನ್ ಮಾಡಿದ್ದಾರಂತೆ. ಪಂಚ ರಾಜ್ಯಗಳ ಫಲಿತಾಂಶದ ಬಳಿಕ ಬಿಜೆಪಿ ಬಳಿಯ ಪಟ್ಟಿಯಲ್ಲಿರುವ 9 ಕಾಂಗ್ರೆಸ್ ಶಾಸಕರನ್ನು ಆಪರೇಷನ್ ಕಮಲದಡಿ ಪಕ್ಷಕ್ಕೆ ಕರೆತರಲಿ ರೆಡ್ಡಿಗಾರು ಮಹಾ ಸ್ಕೆಚ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

    ಸಚಿವ ರಮೇಶ್ ಜಾರಕಿಹೊಳಿ, ಮಾಜಿ ಸಚಿವರಾದ ಸತೀಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಇಲ್ಲಿ ಟಾರ್ಗೇಟ್ ಆಗಿದ್ದಾರೆ. ಸಿದ್ದರಾಮಯ್ಯನವರು ವಿದೇಶ ಪ್ರವಾಸಕ್ಕೆ ಹೋಗುವ ಮುನ್ನ ಆ ಮೂವರು ಎಲ್ಲಿ ಹೋಗ್ತಾರೆ? ಎಲ್ಲಿ ಬರ್ತಾರೆ? ಯಾರ ಜೊತೆ ಮಾತಾಡ್ತಾರೆ? ಎಲ್ಲಿ ಸೇರ್ತಾರೆ? ಕಣ್ಣಿಡಿ ಎಂದು ಸಿಎಂ, ಡಿಸಿಎಂಗೆ ಸೂಚನೆ ನೀಡಿದ್ದಾರೆ ಎಂಬ ಮಾಹಿತಿಯೊಂದು ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

    ಸಿಎಂ ಸೂಚನೆಯಂತೆ ಗುಪ್ತಚರ ಇಲಾಖೆಯಿಂದ ಆಪರೇಷನ್ ‘310’ ಶುರುವಾಗಿದೆ. ನಿಗಾ ಇಡಲೆಂದೇ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಬೆಳಗಾವಿಯ ಸಂಕಮ್ ಹೋಟೆಲ್‍ನಲ್ಲಿ 310ನೇ ಕೊಠಡಿ ನೀಡಲಾಗಿದ್ದು, ಈ ಹೋಟೆಲ್ ಮೇಲೆ ಗುಪ್ತಚರ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಅಧಿಕಾರಿಗಳು ರೂಂ ಬಳಿ ಸುಳಿದಾಡುತ್ತಿರುವ, ತಪಾಸಣೆ ಮಾಡುತ್ತಿರುವ ಎಕ್ಸ್ ಕ್ಲೂಸಿವ್ ದೃಶ್ಯ ಈಗ ಪಬ್ಲಿಕ್ ಟಿವಿಗೆ ಲಭಿಸಿದೆ.

    ಆಪರೇಷನ್ `310′ ಸುಳಿವು ಸಿಗುತ್ತಲೇ ಬೆಳಗಾವಿ ಸಾಹುಕಾರ ಫುಲ್ ಅಲರ್ಟ್ ಆಗಿದ್ದಾರೆ. ಸಚಿವ ರಮೇಶ್ ಜಾರಕಿಹೊಳಿ ಅವರು ಸರ್ಕಾರಿ ಕಾರ್, ಎಸ್ಕಾರ್ಟ್, ಪೈಲೆಟ್ ಎಲ್ಲಾ ಬಿಟ್ಟು ಓಡಾಡುತ್ತಿದ್ದಾರೆ. ನಡೆದಿದ್ದೇ ಹಾದಿ ಎನ್ನುವ ಬ್ರದರ್ಸ್ ಗೆ ಈಗ ತಮ್ಮ ನೆಲದಲ್ಲೆ `ಕದ್ದುಮುಚ್ಚಿ’ ಓಡಾಡಬೇಕಾದ ಸ್ಥಿತಿ ಎದುರಾಗಿದೆ. ಆಪರೇಷನ್ ಕಮಲದ ಭೀತಿ, ರೆಸಾರ್ಟ್ ರಾಜಕಾರಣದ ಆತಂಕದಿಂದ ಆಪರೇಷನ್ ‘310’ ಆರಂಭಿಸಿದ್ದಾರೆ. ಒಟ್ಟಿನಲ್ಲಿ ಸಿದ್ದು-ಸ್ವಾಮಿ-ಪರಮ ರಹಸ್ಯದ ಸ್ಕೆಚ್‍ಗೆ ಜಾರಕಿಹೊಳಿ ಬ್ರದರ್ಸ್ ಇಕ್ಕಟ್ಟಿಗೆ ಸಿಲುಕಿದ್ದಾರೆ ಎಂದು ಗುಸು ಗುಸು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಹಸಿರು ಟವಲ್ ಹಾಕಿದವರೆಲ್ಲಾ ರೈತರೇ? ಬಿಜೆಪಿಗೆ ಡಿಕೆಶಿ ಟಾಂಗ್

    ಹಸಿರು ಟವಲ್ ಹಾಕಿದವರೆಲ್ಲಾ ರೈತರೇ? ಬಿಜೆಪಿಗೆ ಡಿಕೆಶಿ ಟಾಂಗ್

    ಬೆಳಗಾವಿ: ಹಸಿರು ಟವಲ್ ಹಾಕಿದವರೆಲ್ಲಾ ರೈತರೇ ಎಂದು ಜಲಸಂಪನ್ಮೂಲ ಮತ್ತು ವೈದ್ಯಕೀಯ ಸಚಿವ ಡಿಕೆ ಶಿವಕುಮಾರ್ ಪ್ರಶ್ನಿಸಿ ಬಿಜೆಪಿಯ ರೈತ ಪ್ರತಿಭಟನೆಗೆ ಟಾಂಗ್ ಕೊಟ್ಟಿದ್ದಾರೆ.

    ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಶಾಸಕರ ಗಮನ ಸೆಳೆಯುವುದಕ್ಕೆ ಅಧಿವೇಶನದಲ್ಲಿ ಉತ್ತಮ ಅವಕಾಶ ಸಿಕ್ಕಿದೆ. ರಾಜ್ಯದ ಜನತೆಯ ಹಿತಾಸಕ್ತಿಗಾಗಿ ರಾಜಕಾರಣ ಬಿಟ್ಟು ಎಲ್ಲರು ಅಧಿವೇಶನದಲ್ಲಿ ಚರ್ಚೆ ಮಾಡಬೇಕು. ಬಿಜೆಪಿ ರಾಜಕಾರಣ ಬಿಟ್ಟು ಜನಪರವಾಗಿ ಚರ್ಚಿಸಲಿ ಆಗ ಸರ್ಕಾರ ಸಮರ್ಪಕವಾಗಿ ಉತ್ತರ ಕೊಡುತ್ತದೆ ಎಂದು ಹೇಳಿದರು.

    ನಂತರ ಮೈತ್ರಿ ಸರ್ಕಾರ ಬಂದ ದಿನವೇ ರೈತರ ಸಾಲ ಮನ್ನಾ ಮಾಡಿ ಅಂತ ಯಡಿಯೂರಪ್ಪನವರು ಪಟ್ಟು ಹಿಡಿದಿದ್ದರು. ಹಸಿರು ಟವಲ್ ಹಾಕಿದವರೆಲ್ಲಾ ರೈತರೇ? ಬಿಜೆಪಿ ಅವರೇನು ಹೊಲ ಉಳುಮೆ ಮಾಡಿದ್ದಾರಾ? ಸಿಎಂ ಕುಮಾರಸ್ವಾಮಿಯವರು ಗದ್ದೆ ಕಟಾವು ಮಾಡಿರೋದು ರಾಜಕಾರಣಕ್ಕೆ ಎಂದು ಬಿಜೆಪಿ ನಾಯಕರು ಹೇಳಿದ್ದರು. ಆದರೆ ಕುಮಾರಸ್ವಾಮಿ ಅವರು ರೈತರ ಬಗ್ಗೆ ಕಾಳಜಿ ಹೊಂದಿರುವವರು. ಅವರು ರೈತರ ಕುಟುಂಬದಿಂದ ಬಂದವರು. ಬಿಜೆಪಿ ಮಾತು ಮಾತಿಗೆ ನಾವು ರೈತರ ಪರ ಇದ್ದೇವೆ ಎನ್ನುತ್ತಾರೆ. ಎಷ್ಟು ಬಿಜೆಪಿ ನಾಯಕರು ಹೊಲ ಉಳುಮೆ ಮಾಡಿದ್ದಾರೆ ಎಂದು ಪ್ರಶ್ನಿಸಿದರು.

    ಸರ್ಕಾರ ಕೆಡವೋಕೆ ಡಿಕೆಶಿ, ಸಿದ್ದರಾಮಯ್ಯ ಸಾಕು ಎಂಬ ಬಿಎಸ್‍ವೈ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಯಡಿಯೂರಪ್ಪನವರು ಈ ರೀತಿ ಹೇಳಿದ್ದಾರ ಎಂದು ಆಶ್ಚರ್ಯಪಟ್ಟರು. ಅಲ್ಲದೇ ಈ ಬಗ್ಗೆ ಅಧಿವೇಶನ ಮುಗಿಯೋ ಒಳಗೆ ಬಿಎಸ್‍ವೈಗೆ ತಕ್ಕ ಉತ್ತರ ಕೊಡ್ತೇನೆ. ಸಚಿವ ಸಂಪುಟ ವಿಸ್ತರಣೆಯ ದಿನ ಸರ್ಕಾರ ಪತನವಾಗಲಿದೆ ಎಂಬ ಅಶೋಕ್ ಹೇಳಿಕೆಗೆ, ಅಶೋಕ್ ರಾಜಕಾರಣ ಬಿಟ್ಟು ಭವಿಷ್ಯ ಹೇಳುತ್ತಿದ್ದಾರೆ ಎಂದು ಟಾಂಗ್ ಕೊಟ್ಟರು.

    ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಬಿಟ್ಟು ಎಲ್ಲರೂ ಕೂಡ ಅಧಿವೇಶನಕ್ಕೆ ಹಾಜರಾಗಲಿದ್ದಾರೆ. ಸಿದ್ದರಾಮಯ್ಯ ಪೂರ್ವ ನಿಯೋಜಿತ ಕಾರ್ಯಕ್ರಮ ನಿಮಿತ್ತ ಹೋಗಿದ್ದಾರೆ ಹಾಗೂ ದಿನೇಶ್ ಗುಂಡೂರಾವ್ ಪಕ್ಷ ಸಂಘಟನೆ ಹಿನ್ನೆಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಇನ್ನುಳಿದ ಎಲ್ಲಾ ಶಾಸಕರು ಕೂಡ ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಡೆದಾಡುವ ದೇವರಿಗೆ ಚಿಕಿತ್ಸೆ ಕೊಟ್ಟ ವೈದ್ಯರಿಗೆ `ಧರ್ಮ’ದ ಪಟ್ಟ ಕೊಟ್ಟ ಡಿಕೆಶಿ!

    ನಡೆದಾಡುವ ದೇವರಿಗೆ ಚಿಕಿತ್ಸೆ ಕೊಟ್ಟ ವೈದ್ಯರಿಗೆ `ಧರ್ಮ’ದ ಪಟ್ಟ ಕೊಟ್ಟ ಡಿಕೆಶಿ!

    ಬೆಳಗಾವಿ: ಒಂದ್ಕಡೆ ವೈದ್ಯೋ ನಾರಾಯಣೋ ಹರಿ. ವೈದ್ಯರು ದೇವರಿಗೆ ಸರಿ ಸಮಾನ ಅಂತ ಹೇಳುತ್ತಾರೆ. ಮಾತೃದೇವೋಭವ, ಪಿತೃದೇವೋಭವ, ಗುರುದೇವೋ ಭವ ಬಳಿಕ ವೈದ್ಯರಿಗೆ ದೇವರ ಸ್ಥಾನ ಕೊಟ್ಟಿದ್ರೆ ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರು ನಡೆದಾಡುವ ದೇವರಿಗೆ ಚಿಕಿತ್ಸೆ ನೀಡಿದ ವೈದ್ಯರಿಗೆ `ಧರ್ಮ’ದ ಹಣೆ ಪಟ್ಟವನ್ನು ಕಟ್ಟಿ ಭಾರೀ ಚರ್ಚೆಗೆ ಗ್ರಾಸವಾಗಿದ್ದಾರೆ.

    ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮುಸ್ಲಿಮ್ ಆಡಳಿತವಿದ್ದರೂ ಶ್ರೀಗಳಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಪಸಂಖ್ಯಾತ ಆಡಳಿತ ಮಂಡಳಿ ಇದ್ದರೂ ಶ್ರೀಗಳನ್ನ ಚೆನ್ನಾಗಿ ನೋಡ್ಕೊಂಡಿದ್ದಾರೆ. ಡಾಕ್ಟರ್ ಮೊಹಮ್ಮದ್ ರೆಲಾ ಮಾಲೀಕತ್ವದ ರೆಲಾ ಆಸ್ಪತ್ರೆಯಲ್ಲಿ ಶ್ರೀಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವಿವಾದತ್ಮಾಕ ಹೇಳಿಕೆ ನೀಡಿದ್ದಾರೆ.

    ನನಗೆ ಬಹಳ ಸಂತೋಷವಾಯ್ತು. ನಿಜವಾಗಲೂ ಕರ್ನಾಟಕ ರಾಜ್ಯದಲ್ಲಿ ಅಂತಹ ಆಸ್ಪತ್ರೆಯನ್ನು ನಾನು ನೋಡಿಲ್ಲ. ಜಾತಿ-ಧರ್ಮದ ಬಗ್ಗೆ ಮಾತನಾಡುತ್ತಿರುವ ನಾವು ಒಂದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಮೊಹಮ್ಮದ್ ರೇಲಾ ಎಂಬಂತಹ ಮುಸಲ್ಮಾನ ಅಲ್ಪಸಂಖ್ಯಾತರು. ಅವರ ಹೆಸರಿನಲ್ಲಿ ರೇಲಾ ಅನ್ನುವ ಆಸ್ಪತ್ರೆಯೊಂದನ್ನು ಮಾಡಿದ್ದಾರೆ. ಅವರು ಒಬ್ಬ ಜಗತ್ತಿನ ಫೇಮಸ್ ಸರ್ಜನ್ ಆಗಿದ್ದಾರೆ. ನಮ್ಮ ಶ್ರೀಗಳಿಗೆ ಅವರು ಶಸ್ತ್ರಚಿಕಿತ್ಸೆಯನ್ನು ಮಾಡಿದ್ದಾರೆ ಅಂತ ಹೇಳಿದ್ರು.

    ಒಂದು 5 ದಿನದ ಮಗು ಇನ್ನೊಂದು 111 ವರ್ಷದ ಒಬ್ಬರು ಹಿರಿಯ ಶ್ರೀಗಳು. ನಾವೆಲ್ಲ ನಡೆದಾಡುವ ದೇವರು ಅಂತ ಕರೆಯುತ್ತೇವೆ. ಆಸ್ಪತ್ರೆ, ಸಿಬ್ಬಂದಿ ಹಾಗೂ ಸೌಲಭ್ಯಗಳು ತುಂಬಾ ಚೆನ್ನಾಗಿದೆ. 450 ಬೆಡ್ ನಲ್ಲಿ 150 ಬೆಡ್ ಐಸಿಯುನಲ್ಲಿದೆ. ಇಂತಹ ಸೌಲಭ್ಯವಿರುವ ಆಸ್ಪತ್ರೆಯನ್ನು ಎಲ್ಲೂ ನೋಡಿಲ್ಲ ಎಂದು ಹೊಗಳಿದರು.

    ಸ್ವಾಮೀಜಿಗಳು ಬಹಳ ಲವಲವಿಕೆಯಿಂದ ಇದ್ದಾರೆ. ಚೆನ್ನಾಗಿಯೇ ಮಾತನಾಡುತ್ತಿದ್ದಾರೆ. ಯಾವಾಗ ಬಂದ್ರಿ, ಏನ್ ಬಂದ್ರಿ ಅಂತ ನನ್ನನ್ನು ಸ್ವಾಮೀಜಿಗಳು ಕೇಳಿದ್ರು. ಬೆಳಗ್ಗೆ ಆಪರೇಷನ್ ಆಗಿದ್ದಷ್ಟೇ, ನಾನು ಹೋದಾಗ ಎದ್ದು ಕುಳಿತುಕೊಳ್ಳಬೇಕು ಅಂತ ಸ್ವಾಮೀಜಿಗಳು ಹೇಳಿದ್ರು. ಆಗ ನಾನು, ಸ್ವಾಮಿಗಳೇ ಇವತ್ತು ಒಂದು ದಿನ ಇರಿ ಅಂತ ಹೇಳಿದೆ. ದೇವರು ಅವರಿಗೆ ಒಳ್ಳೆಯದು ಮಾಡಲಿ ಅಂತ ಹೇಳಿದ್ರು.

    ಮುಸ್ಲಿಮರ ಆಸ್ಪತ್ರೆ ಆದ್ರೂ ಸಿದ್ದಗಂಗಾ ಶ್ರೀಗಳಿಗೆ ಉತ್ತಮ ಚಿಕಿತ್ಸೆ..! ಡಿಕೆ ಶಿವಕುಮಾರ್ ಈ ರೀತಿಯ ವಿವಾದಾತ್ಮಕ ಹೇಳಿಕೆ ನೀಡಿದ್ದು ಸರಿಯೇ? ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ ತಿಳಿಸಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕುಂದಾನಗರಿಯಲ್ಲಿ ಚಳಿಗಾಲದ ಅಧಿವೇಶನ ಆರಂಭ- ಮೊದಲ ದಿನವೇ ಎಚ್‍ಡಿಕೆ ಏಕಾಂಗಿ

    ಕುಂದಾನಗರಿಯಲ್ಲಿ ಚಳಿಗಾಲದ ಅಧಿವೇಶನ ಆರಂಭ- ಮೊದಲ ದಿನವೇ ಎಚ್‍ಡಿಕೆ ಏಕಾಂಗಿ

    ಬೆಳಗಾವಿ: ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿದೇಶಕ್ಕೆ ತೆರಳಿ ಗೈರಾಗಿದ್ದಾರೆ. ಇತ್ತ ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಅವರು ಕೂಡ ಜ್ಚರದಿಂದಾಗಿ ಅಧಿವೇಶನದಲ್ಲಿ ಪಾಲ್ಗೊಳಲ್ಲ. ಹೀಗಾಗಿ ಇಂದು ಆರಂಭವಾದ ಅಧಿವೇಶನದಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಏಕಾಂಗಿಯಾಗಿದ್ದಾರೆ.

    ಡಿಸಿಎಂ ಪರಮೇಶ್ವರ್ ಅವರು ತೀವ್ರ ಜ್ವರದಿಂದ ಬಳಲುತ್ತಿದ್ದಾರೆ. ಇಂದು ಬೆಳಗ್ಗೆಯೆ ಬೆಳಗಾವಿಗೆ ಆಗಮಿಸಬೇಕಿದ್ದ ಉಪ ಮುಖ್ಯಮಂತ್ರಿ ತೀವ್ರ ಜ್ವರದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಇಂದು ಸಂಜೆ ಬೆಳಗಾವಿಗೆ ಬರಲು ತೀರ್ಮಾನಿಸಿದ್ದಾರೆ.

    ಪೂರ್ವ ನಿಗದಿತ ಕಾರ್ಯಕ್ರಮದ ಹಿನ್ನೆಲೆ ಸಿದ್ದರಾಮಯ್ಯ ಅವರು ಪುತ್ರ ಯತೀಂದ್ರ ಜೊತೆಗೆ ಇದೇ ಮಂಗಳವಾರ ವಿದೇಶಿ ಪ್ರವಾಸ ಕೈಗೊಳ್ಳಲಿದ್ದಾರೆ. ಇದರಿಂದಾಗಿ ಡಿಸೆಂಬರ್ 10ರಿಂದ ಆರಂಭವಾಗುವ ಚಳಿಗಾಲ ಅಧಿವೇಶನದ ಮೊದಲ ವಾರು ಗೈರು ಆಗಲಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅವರು ಎರಡನೇ ವಾರದ ಅಧಿವೇಶನಕ್ಕೆ ಹಾಜರಾಗಲಿದ್ದಾರೆ. ಡಿಸೆಂಬರ್ 12 ಅಥವಾ 13ರಂದು ನಡೆಯಬೇಕಿದ್ದ ಶಾಸಕಾಂಗ ಸಭೆಯನ್ನು ಮುಂದೂಡುವ ಸಾಧ್ಯತೆಗಳಿವೆ. ಮಾಜಿ ಸಿಎಂ ಆಗಮಿಸಿದ ಬಳಿಕ ಅಂದರೆ ಡಿಸೆಂಬರ್ 18ರಂದು ಸಭೆ ನಡೆಯುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿದ್ದವು.

    ಬಿಗಿ ಪೊಲೀಸ್ ಭದ್ರತೆ:
    ಬೆಳಗಾವಿ ಅಧಿವೇಶನಕ್ಕೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಸುವರ್ಣಸೌಧದ ಸುತ್ತ ಮುತ್ತ 250 ಕ್ಕೂ ಹೆಚ್ಚು ಪೊಲೀಸರು ನಿಯೋಜನೆ ಮಾಡಲಾಗಿದೆ. ಸುವರ್ಣಸೌಧದ ಪ್ರವೇಶ ದ್ವಾರದ 80 ಪೊಲೀಸರಿಂದ ಭದ್ರತೆ ಒದಗಿಸಲಾಗಿದೆ. ಪಾಸ್ ಇದ್ದವರಿಗೆ ಮಾತ್ರ ಸುವರ್ಣಸೌಧದ ಒಳ ಬಿಡಲಾಗುತ್ತಿದೆ. ಬಿಗಿ ಪರಿಶೀಲನೆ ಮಾಡಿದ ಬಳಿಕ ಪ್ರವೇಶಕ್ಕೆ ಅವಕಾಶ ಮಾಡಲಾಗುತ್ತಿದೆ.

    ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜು ಸೂಚನೆಯಂತೆ ಬಂದೋಬಸ್ತ್ ಕೈಗೊಳ್ಳಲಾಗಿದೆ. ಈ ಬಾರಿ ಹೆಚ್ಚು ಪ್ರತಿಭಟನೆಗಳಾಗುವ ಹಿನ್ನೆಲೆಯಲ್ಲಿ ನೀಲಮಣಿ ರಾಜು ಅವರು ಈಗಾಗಲೇ ಖುದ್ದು ಮುಖ್ಯಪ್ರದೇಶಗಳಲ್ಲಿ ಬಂದೋಬಸ್ತ್ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಸಿಎಂ ಕೂಡ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡುವಂತೆ ಸೂಚನೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv