ಬೆಳಗಾವಿ: ಕನ್ನಡ ಸೌಧದಲ್ಲಿ ನಡೆಯುತ್ತಿರುವ ವಿಧಾನಸಭಾ ಕಲಾಪದಲ್ಲಿ ಬಿಜೆಪಿ ಶಾಸಕ ಸಿಸಿ ಪಾಟೀಲ್ ಅವರು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರನ್ನು ಹೊಗಳಿದಿದ್ದಾರೆ.
ನವಲಗುಂದ, ನರಗುಂದ ಭಾಗದ ನೀರಾವರಿ ಯೋಜನೆಯ ಬಗ್ಗೆ ಶಾಸಕ ಶಂಕರಪಾಟೀಲ್ ಮುನೇನಕೊಪ್ಪ ಪ್ರಶ್ನೆ ಕೇಳುವ ಸಮಯದಲ್ಲಿ ಸಿಸಿ ಪಾಟೀಲ್ ಮಧ್ಯಪ್ರವೇಶ ಮಾಡಿ ಶಿವಕುಮಾರ್ ಡೈನಾಮಿಕ್ ಇದ್ದಾರೆ. ಕನಕಪುರದ ಬಂಡೆಯಂತಹ ಸಾಮಥ್ರ್ಯ ಹೊಂದಿರುವ ಶಿವಕುಮಾರ್ ಉತ್ತರ ಕರ್ನಾಟಕ ಭಾಗದ ನೀರಾವರಿ ಯೋಜನೆಗಳಿಗೂ ತಮ್ಮ ಸಾಮಥ್ರ್ಯ ಬಳಸಿ ಅಭಿವೃದ್ಧಿ ಪಡಿಸಬೇಕು ಎಂದು ಹೇಳಿದರು.
ಈ ಸಮಯದಲ್ಲಿ ಸ್ಪೀಕರ್ ರಮೇಶಕುಮಾರ್ ಮಧ್ಯಪ್ರವೇಶ ಮಾಡಿ, ಏನ್ರೀ ಶಿವಕುಮಾರ್ ಎಲ್ಲೆಲ್ಲೂ ನಿಮ್ಮದೇ ಮಾತು. ಏನ್ರಿ ಯಡಿಯೂರಪ್ಪನವರೇ ಎಂದು ಹೇಳಿ ಶಿವಕುಮಾರ್ ದೀರ್ಘ ಆಯುಶ್ಮಾನ್ ಭವ ಎಂದಾಗ ಸದನ ನಗೆಗಡಲಲ್ಲಿ ತೇಲಾಡಿತು.
ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಹಾನಗಲ್ ಶಾಸಕ ಉದಾಸಿ ಇಂದು ಕಾಣಿಸಿಕೊಂಡಿದ್ದರು. ಸದನದಲ್ಲಿ ಪ್ರಶ್ನೆ ಕೇಳಲು ಎದ್ದು ನಿಂತಾಗ, ಎಲ್ಲಿ ಹೋಗಿದ್ರಿ ಇಷ್ಟು ದಿನ? ಅಸೆಂಬ್ಲಿಯಲ್ಲಿ ಕಾಣಿಸುತ್ತಿರಲಿಲ್ಲ ಎಂದು ಸ್ಪೀಕರ್ ಪ್ರಶ್ನೆ ಮಾಡಿದರು. ಇದಕ್ಕೆ ಆರೋಗ್ಯ ಸರಿ ಇರಲಿಲ್ಲ, ಹಾಗಾಗಿ ಬಂದಿರಲಿಲ್ಲ ಎಂದು ಉದಾಸಿ ಉತ್ತರಿಸಿದರು.
ಚಿಕ್ಕೋಡಿ(ಬೆಳಗಾವಿ): ಯಪ್ಪಾ.. ಏನ್ ಕಷ್ಟನಪ್ಪಾ.. ಈ ಗಣಿತ. ಅಂತ ಬಹುಪಾಲು ಜನ ಹೇಳ್ತಿರ್ತಾರೆ. ಆದ್ರೆ, ಕಣ್ಣು ಕಾಣದಿದ್ದರೂ ಯಾವುದೇ ಲೆಕ್ಕವನ್ನ ಬಿಡಿಸಿ ಥಟ್ ಅಂತ ಉತ್ತರ ಹೇಳ್ತಾರೆ ಇವತ್ತಿನ ನಮ್ಮ ಪಬ್ಲಿಕ್‍ಹೀರೋ ಅಥಣಿಯ ಬಸವರಾಜ್.
ಜನ್ಮ ದಿನಾಂಕ ಹೇಳಿದ ತಕ್ಷಣ ಹುಟ್ಟಿದ ವಾರ ಹೇಳ್ತಿರೋ ಬಸವರಾಜ್, ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದವರು. ಹುಟ್ಟಿನಿಂದಲೇ ಅಂಧರಾಗಿರೋ ಬಸವರಾಜ ಅವರಿಗೆ ಸ್ಮರಣಶಕ್ತಿ ಜಾಸ್ತಿ. ಎಷ್ಟರ ಮಟ್ಟಿಗೆ ಅಂದರೆ ಕ್ಷಣಮಾತ್ರದಲ್ಲಿ ಗುಣಾಕಾರ, ಭಾಗಾಕಾರ, ಕೂಡಿಸೋದು, ಕಳೆಯೋದರ ಜೊತೆಗೆ ಗಣಿತದ ಅನೇಕ ಫಾರ್ಮುಲಾಗಳನ್ನ ಹೇಳ್ತಾರೆ.
ಅಂಧನಾಗಿದ್ದರೂ ದಿನದ ಯಾವುದೇ ಸಮಯದಲ್ಲಿ ಟೈಮ್ ಕೇಳಿದ್ರೆ ನಿಖರವಾಗಿ ಹೇಳ್ತಾರೆ. ನೋಟ್‍ಗಳನ್ನ ಮುಟ್ಟಿ ಇದು ಇಷ್ಟೇ ಮೌಲ್ಯದ್ದು ಅಂತಾರೆ. ಕುಟುಂಬದ ನಿರ್ವಹಣೆಗಾಗಿ ಬೇರೆ ಬೇರೆ ಶಾಲಾ ಕಾಲೇಜುಗಳಿಗೆ ತೆರಳಿ ಉಪನ್ಯಾಸ ನೀಡ್ತಿದ್ದಾರೆ.
ಬಸವರಾಜ್ ಅವರ ಈ ಅದಮ್ಯ ಶಕ್ತಿಗೆ ಪ್ರತಿಷ್ಠಿತ ಅಬ್ದುಲ್ ಕಲಾಂ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ ಸೇರಿದಂತೆ ಸಾಕಷ್ಟು ಪ್ರಶಸ್ತಿಗಳು ಸಂದಿವೆ. ಪ್ರಧಾನಿ ಮೋದಿ ಸಹ ಶಹಬ್ಬಾಷ್ ಹೇಳಿದ್ದಾರೆ. ಅಷ್ಟೇ ಅಲ್ಲ, ದುಬೈನ ಸಂಘ ಸಂಸ್ಥೆಗಳೂ ಬೆರಗಾಗಿ ಸನ್ಮಾನ ಮಾಡಿವೆ ಅಂತ ಸ್ಥಳೀಯ ನಿವಾಸಿ ಸಂತೋಷ್ ತಿಳಿಸಿದ್ದಾರೆ.
ಬಸವರಾಜ್ ಅವರು ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ಕ್ರಿಕೆಟ್ ಕಾಮೆಂಟರಿ ಹೇಳ್ತಾರೆ.
ಬೆಳಗಾವಿ: ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ. ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ನನ್ನ ನಡುವೆಯೂ ಯಾವುದೇ ಜಟಾಪಟಿ ಇಲ್ಲ ಎಂದು ಮಹಿಳಾ ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ಹೇಳಿದ್ದಾರೆ.
ಬೆಳಗಾವಿ ಸುವರ್ಣ ಗಾರ್ಡನ್ ಪ್ರತಿಭಟನಾಕಾರರ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಯಾವ ಜಟಾಪಟಿ ಇಲ್ಲ. ನನ್ನ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆಯೂ ಯಾವುದೇ ಅಸಮಾಧಾನವಿಲ್ಲ. ಎಲ್ಲದಕ್ಕೂ ಆ ಹೆಣ್ಣು ಮಗಳನ್ನು ಯಾಕೆ ಎಳೆದು ತರುತ್ತೀರಾ ಎಂದು ಹೇಳುವ ಮೂಲಕ ಹೆಬ್ಬಾಳ್ಕರ್ ಪರ ಬ್ಯಾಟ್ ಬೀಸಿದರು.
ಇದೇ ವೇಳೆ ಕರಾವಳಿ ಭಾಗಕ್ಕೆ ಸಭಾಪತಿ ಆಯ್ಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಸಭಾಪತಿ ಆಯ್ಕೆ ವಿಚಾರದಲ್ಲಿ ಯಾವುದೇ ರಾಜಕಾರಣ ಇಲ್ಲ. ಎಸ್.ಆರ್ ಪಾಟೀಲ ಅವರು ಪಕ್ಷದ ಹಿರಿಯರು ಹಾಗೂ ಏಳು ಬಾರಿ ಆಯ್ಕೆ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಒಳ್ಳೆಯ ಸ್ಥಾನ ಸಿಗಬಹುದು. ಉತ್ತರ ಕರ್ನಾಟಕ ರಾಜ್ಯದ ಹೃದಯ ಭಾಗ, ಉತ್ತರ ಯಾವತ್ತು ಮೇಲ್ಬಾಗದಲ್ಲಿರುತ್ತೆ. ಆ ಹೃದಯ ಭಾಗಕ್ಕೆ ತೊಂದರೆಯಾದರೆ ನಮ್ಮ ಬದುಕೇ ನಿಂತು ಹೋಗುತ್ತದೆ. ರಾಜ್ಯ ಸರ್ಕಾರ ರೈತರ ಬಹುದೊಡ್ಡ ಸಾಲಮನ್ನಾ ಮಾಡಿದ್ದು, ಇಲ್ಲಿ ಯಾವುದೇ ತಾರತಮ್ಯ ಇಲ್ಲ ಎಂದರು. ಇದನ್ನು ಓದಿ: ಜಗತ್ತಲ್ಲಿ ಎಲ್ಲದಕ್ಕೂ ಔಷಧವಿದೆ, ಆದರೆ ಹೊಟ್ಟೆಕಿಚ್ಚಿಗಿಲ್ಲ: ಹೆಬ್ಬಾಳ್ಕರ್ ಗೆ ಜಯಮಾಲಾ ಟಾಂಗ್
ಪ್ರತಿಭಟನಾಕಾರರ ಮನವಿ ಬಗ್ಗೆ ಪ್ರತಿಕ್ರಿಯೆ ನೀಡಿ, ಸರ್ಕಾರ ಗಮನಕ್ಕೆ ಹೋರಾಟಗಾರರ ಬೇಡಿಕೆಯನ್ನು ತಲುಪಿಸುತ್ತೇನೆ. ಇವರ ಬೇಡಿಕೆ ಈಡೇರಿಸಲು ಸರ್ಕಾರದ ಪರ ಬದ್ಧರಾಗಿದ್ದು, ಖಾಯಂ ಮಾಡಬೇಕು ಎಂಬ ಬೇಡಿಕೆಯೂ ಇದೆ. ಈ ಕುರಿತು ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸಿಎಂ ಗಮನಕ್ಕೂ ತರುತ್ತೇನೆ ಎಂದರು.
ನವದೆಹಲಿ: ರಾಜಸ್ಥಾನದಲ್ಲಿ ಬಿಜೆಪಿ ಸೋತಿದೆ. ಸೋತ್ರೂ ಕೂಡ ಅತ್ಯಂತ ಗೌರವಾನ್ವಿತ ಹಿನ್ನಡೆಯಾಗಿದೆ ಅಂತ ಸಂಸದ ಪ್ರಹ್ಲಾದ್ ಜೋಷಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಎಲ್ಲೆಲ್ಲಿ ಸೋತಿದೆಯೋ ಅಲ್ಲಿ ತೀರಾ ಕಳಪೆಯಾಗಿ ಸೋತಿದೆ. ರಾಜಸ್ಥಾನದಲ್ಲಿ ನಾವು ಸೋತಿದ್ರೂ ಬಹಳ ಗೌರವಯುತವಾದ ಹಿನ್ನಡೆಯಾಗಿದೆ. ಹಾಗಾಗಿ ಇಂದು ಈ ಪರಿಣಾಮವನ್ನು ಆತ್ಮಾವಲೋಕನ ಮಾಡಿ ಸರಿಪಡಿಸಿಕೊಳ್ಳಬೇಕು. ಬಿಜೆಪಿಯ ಪರ್ಫಾಮೆನ್ಸ್ ಮತ್ತು ಬಿಜೆಪಿಯ ಮುಂದಿನ ಲೋಕಸಭಾ ಚುನಾವಣೆಗೆ ಈ ಫಲಿತಾಂಶ ಪರಿಣಾಮ ಬೀರುತ್ತದೆ ಅನ್ನೋ ಚರ್ಚೆಯನ್ನು ನಾನು ಖಂಡಿತ ಒಪ್ಪಲ್ಲ. ಸ್ಥಳೀಯ ಸಣ್ಣ ಪುಟ್ಟ ಅಸಮಾಧಾನಗಳು ಸೋಲಿಗೆ ಕಾರಣವಾಗಿರುತ್ತದೆ ಅಂದ್ರು.
ಛತ್ತಿಸ್‍ಗಢ ನಮಗೆ ನಿಜಕ್ಕೂ ಶಾಕ್ ನೀಡಿದೆ. ಯಾಕಂದ್ರೆ ಅಲ್ಲಿ ನಮಗೆ ತೀವ್ರ ಹಿನ್ನಡೆ ಆಗಿದೆ. ಒಟ್ಟಾರೆ ಹೇಳೋದಾದ್ರೆ ಛತ್ತೀಸ್‍ಗಢ ಮತ್ತು ಮಧ್ಯಪ್ರದೇಶದಲ್ಲಿ ಕಳೆದ 15 ವರ್ಷಗಳಿಂದ ಬಿಜೆಪಿ ಆಡಳಿತ ನಡೆಸುತ್ತಿದೆ. ಹೀಗಾಗಿ ಹಿಂದುಳಿದ ಹಾಗೂ ನಕ್ಸಲ್ ಪೀಡಿತ ಪ್ರದೇಶ ಹಾಗೂ ಅತ್ಯಂತ ಬಡತನ ಇರೋ ರಾಜ್ಯದಲ್ಲಿ ಬಿಜೆಪಿ 15 ವರ್ಷ ಆಡಳಿತ ನಡೆಸಿದೆ. ಸ್ಥಳೀಯ ಆಡಳಿತಕ್ಕೆ ವಿರೋಧಿ ಅಲೆ ಇರುವುದು ಸಹಜವಾಗಿದೆ. ಇದರ ಪರಿಣಾಮವಾಗಿ ನಮಗೆ ಸೀಟುಗಳ ಸಂಖ್ಯೆ ಕಡಿಮೆ ಇತ್ತು ಅಂದ್ರು.
ಮಧ್ಯಪ್ರದೇಶದಲ್ಲಿ ನಾವು ತೀರಾ ಕೆಟ್ಟದಾಗಿ ಫರ್ಮಾಮೆನ್ಸ್ ಮಾಡಿಲ್ಲ. 5 ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ದೊಡ್ಡ ರಾಜ್ಯ ಮಧ್ಯಪ್ರದೇಶವಾಗಿದೆ. ಎರಡನೇಯದಾಗಿ ರಾಜಸ್ಥಾನದಲ್ಲಿ ಎಲ್ಲಾ ರೀತಿಯ ನಮ್ಮ ಎಕ್ಸಿಟ್ ಪೋಲ್ ಹಾಗೂ ಸರ್ವೇಗಳು ಈ ಎಲ್ಲಾ ಸಂಗತಿಯನ್ನು ಗಮನಿಸಿದಾಗ ಅಲ್ಲಿ ಕೂಡ ನೆಕ್ ಟು ನೆಕ್ ಫೈಟೇ ಇತ್ತು ಎಂದರು.
ಒಟ್ಟಿನಲ್ಲಿ ದೇಶದ ಪ್ರಧಾಮಂತ್ರಿ ಯಾರಾಗಬೇಕು ಅಂತ ಕೇಳಿದ್ರೆ ಜನ ನಿಶ್ಚಿತವಾಗಿ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಾರ್ಟಿಯ ಪರವಾಗಿಯೇ ತೀರ್ಪು ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.
ಬೆಳಗಾವಿ: ತುಳುನಾಡು ಹಾಗೂ ಕರ್ನಾಟಕ ಜನತೆಗೆ ಪ್ರೀತಿ ಇರಲಿ. ನಮ್ಮ ರಾಜ್ಯದ ಸಂಸ್ಕೃತಿ ನಮ್ಮ ಹೆಮ್ಮೆ. ನಾನು ಹೆಮ್ಮೆಯ ಕನ್ನಡಿಗ ಎಂದು ಬಾಲಿವುಡ್ ನಟ, ಆ್ಯಕ್ಷನ್ ಹೀರೋ ಸುನೀಲ್ ಶೆಟ್ಟಿ ಹೇಳಿದ್ದಾರೆ.
ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೆಳಗಾವಿಗೆ ಬಂದಾಗ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ನಾನು 25 ವರ್ಷದಿಂದ ಬಾಲಿವುಡ್‍ನಲ್ಲಿದ್ದೇನೆ. ಇಂದು ನನಗೆ ತುಂಬಾ ಖುಷಿಯಾಗುತ್ತಿದೆ. ಏಕೆಂದರೆ ನಾನು ಚಿಕ್ಕ ವಯಸ್ಸಿನಲ್ಲಿದ್ದಾಗ ಮಂಗಳೂರಿಗೆ ಬಂದಾಗ ನಾನು ಬೆಳಗಾವಿಗೆ ಹೋಗುತ್ತಿದ್ದೆ. ಇಲ್ಲಿ ನನ್ನ ಬಾಲ್ಯದ ನೆನಪು ಸಾಕಷ್ಟಿದೆ. ನಾನು ಸಂಜೆ ಹೊತ್ತು ಬೆಳಗಾವಿಗೆ ಬರುತ್ತಿದ್ದೆ. ಬೆಳಗಾವಿ ಏರ್ ಕಂಡಿಶನ್ ಸಿಟಿ ಎಂದು ಕರೆಯುತ್ತಿದ್ದೇವು. ರಾಮ್‍ದೇವ್ ಹೋಟೆಲ್‍ನಲ್ಲಿ ಯಾವಾಗಲೂ ವಾಸಿಸುತ್ತಿದ್ದೇವು. ಇಲ್ಲಿ ನನ್ನ ಬಾಲ್ಯದ ನೆನಪು ಸಾಕಷ್ಟಿದೆ ಎಂದರು.
‘ಬಲವಾನ್’ ಸಿನಿಮಾದಿಂದ ‘ಪೈಲ್ವಾನ್’ ಸಿನಿಮಾವರೆಗಿನ ನನ್ನ ಪಯಾಣ ಚೆನ್ನಾಗಿದೆ. 26-27 ವರ್ಷದಿಂದ ಜನರು ನನಗೆ ಸಾಕಷ್ಟು ಗೌರವ ಹಾಗೂ ಪ್ರೀತಿ ನೀಡಿದ್ದಾರೆ. ಜನರ ಈ ಪ್ರೀತಿ ಹಾಗೂ ಗೌರವ ಪಡೆಯುತ್ತಿರುವುದ್ದಕ್ಕೆ ನನ್ನನ್ನು ನಾನು ಅದೃಷ್ಟವಂತ ಎಂದು ಭಾವಿಸುತ್ತೇನೆ. ಪೈಲ್ವಾನ್ ಚಿತ್ರ ಬಗ್ಗೆ ಈಗ ಮಾತನಾಡುವುದು ಬೇಡ. ಪೈಲ್ವಾನ್ ಚಿತ್ರ ಬಿಡುಗಡೆಯಾದಾಗ ಮಾತನಾಡಿದ್ದರೆ ಚೆನ್ನಾಗಿರುತ್ತದೆ. ಕೃಷ್ಣ ಹಾಗೂ ಸುದೀಪ್ ಶೂಟಿಂಗ್‍ನಲ್ಲಿದ್ದಾರೆ. ಶೂಟಿಂಗ್ ಮುಗಿದ್ದಾಗ ಈ ಚಿತ್ರದ ಬಗ್ಗೆ ಮಾತನಾಡೋಣ ಎಂದು ತಿಳಿಸಿದರು.
ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಾವು ಕ್ರಿಕೆಟ್‍ಗಾಗಿ ಆಡುವುದಿಲ್ಲ. ನಾವು ಒಂದು ಒಳ್ಳೆಯ ಉದ್ದೇಶಕ್ಕಾಗಿ ಆಡುತ್ತೇವೆ. 100 ಮಕ್ಕಳಿಗೆ 100 ಸರ್ಜರಿಗಾಗಿ ಯಂಗ್ ಹಾರ್ಟ್‍ಗಾಗಿ ನಾವು ಕ್ರಿಕೆಟ್ ಆಡುತ್ತೇವೆ. ಚಾರಿಟಿಗಾಗಿ ಹಾಗೂ ಸ್ನೇಹವನ್ನು ಬೆಳೆಸಲು ನಾವು ಕ್ರಿಕೆಟ್ ಆಡುತ್ತೇವೆ. 8 ರಾಜ್ಯದ ಕಲಾವಿದರು ಒಟ್ಟಿಗೆ ಬಂದು ಒಂದು ಒಳ್ಳೆಯ ಉದ್ದೇಶಕ್ಕಾಗಿ ಕ್ರಿಕೆಟ್ ಆಡುತ್ತಾರೆ ಎಂದು ಹೇಳಿದರು.
ನಾನು ಒಬ್ಬ ಸ್ಪೋಟ್ಸ್ ಪರ್ಸನ್ ಆಗಿದ್ದು, ನಾನು ನನ್ನ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡುತ್ತೇನೆ. ನನ್ನ ಆರೋಗ್ಯ, ಫಿಸಿಕ್ ನನಗೆ ಆ್ಯಕ್ಷನ್ ಹೀರೋ ಎಂಬ ಪಟ್ಟ ನೀಡಿದೆ. ಸಿಎಸ್‍ಆರ್ ನನ್ನ ಜೀವನದ ಒಂದು ಭಾಗ. ನಾವು ಜೀವನದಲ್ಲಿ ಏನಾದರೂ ಸಾಧಿಸಿದ್ದಾಗ ನಾವು ಅದನ್ನು ವಾಪಸ್ ನೀಡುವುದು ತುಂಬಾನೇ ಮುಖ್ಯ. ನಮ್ಮ ಮುಖ್ಯ ಗುರಿ ಮಕ್ಕಳಿಗೆ ಶಿಕ್ಷಣ ನೀಡುವುದು. ಈ ಗುರಿ ಎಂದಿಗೂ ಬದಲಾಗುವುದಿಲ್ಲ. ಹಾಗಾಗಿ ನಾನು ಒಂದೇ ಗುರಿಯಲ್ಲಿ ನಡೆಯುತ್ತೇನೆ. 10 ಜನ ಅದು ಮಾಡು ಇದು ಮಾಡು ಎಂದು ಹೇಳುತ್ತಾರೆ. ಆದರೆ ಎಲ್ಲಿ ಉತ್ತಮ ಫಲಿತಾಂಶ ಸಿಗುತ್ತೋ ಅಲ್ಲಿ ನಾನು ಗಮನ ನೀಡುತ್ತೇನೆ ಎಂದರು.
ನನಗೆ ಕನ್ನಡ ಸ್ವಲ್ಪ ಸ್ವಲ್ಪ ಬರುತ್ತೆ. ನಾನು ಹೆಚ್ಚು ತುಳು ಮಾತನಾಡುವುದು. ಹಾಗಾಗಿ ತುಳುನಾಡು ಹಾಗೂ ಕರ್ನಾಟಕ ಜನತೆಗೆ ಪ್ರೀತಿ ಇರಲಿ. ನಮ್ಮ ರಾಜ್ಯದ ಸಂಸ್ಕೃತಿ ನಮ್ಮ ಹೆಮ್ಮೆ. ನಾನು ಹೆಮ್ಮೆಯ ಕನ್ನಡಿಗ. ಈ ರಾಜ್ಯದಲ್ಲಿ ಮಹಿಳೆಯರಿಗೆ ಹೆಚ್ಚು ಗೌರವ ನೀಡುತ್ತಾರೆ. ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಹಾಗಾಗಿ ನನಗೆ ಈ ರಾಜ್ಯ ಇಷ್ಟವಾಗುತ್ತದೆ. ಬೆಳಗಾವಿಗೆ ಬರಲು ನನಗೆ ಇಷ್ಟವಾಗುತ್ತದೆ. ಬೆಳಗಾವಿ ಹೆಚ್ಚು ಅಭಿವೃದ್ಧಿ ಹೊಂದಿದೆ. ಕಳೆದ ವರ್ಷ ಕರ್ನಾಟಕ ಪ್ರೀಮಿಯರ್ ಲೀಗ್‍ಗೆ ಬಂದಿದ್ದೆ. ಬೆಳಗಾವಿಯಿಂದ ಹುಬ್ಬಳ್ಳಿಗೆ ಹೋಗಿದ್ದೆ ಎಂದು ಸುನೀಲ್ ಶೆಟ್ಟಿ ನೆನಪನ್ನು ಹಂಚಿಕೊಂಡರು.
ಬೆಳಗಾವಿ: ಕಾಂಗ್ರೆಸ್ ಹಿಂದೂಗಳನ್ನು ವಿಭಜಿಸಿ ಅಲ್ಪಸಂಖ್ಯಾತರನ್ನು ಒಟ್ಟು ಮಾಡುವ ತಂತ್ರದಲ್ಲಿ ಯಶಸ್ವಿಯಾಗಿದೆ. ವಿಭಜನೆಯ ತಂತ್ರಕ್ಕೆ ಹಿಂದೂ ಮುಖವಾಡವನ್ನು ಕಾಂಗ್ರೆಸ್ ಪಕ್ಷ ಧರಿಸಿತ್ತು. ತಾನು ಕೂಡ ಹಿಂದುತ್ವವವಾದಿ ಪ್ರತಿಪಾದಕ ಎಂದು ತೋರಿಸಿಕೊಳ್ಳುವ ಮೂಲಕ ತನ್ನನ್ನು ತಾನು ಗೋತ್ರದಲ್ಲಿ ಗುರುತಿಸಿಕೊಳ್ಳುವ ಕೆಲಸವನ್ನು ಕೂಡ ಕಾಂಗ್ರೆಸ್ ಮುಖಂಡರು ಮಾಡಿದ್ರು ಶಾಸಕ ಅಂತ ಸಿಟಿ ರವಿ ಅಂದ್ರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ರಾಜಸ್ಥಾನ ಮತ್ತು ಛತ್ತೀಸ್‍ಗಢದ ಆರಂಭಿಕ ಫಲಿತಾಂಶದ ಹಿನ್ನೆಲೆಗೆ ಕಾರಣ ಕೊಟ್ಟ ಅವರು, ಮುಂದಿನ ದಿನಗಳಲ್ಲಿ ಈ ಹಿಂದುತ್ವ ಅನ್ನೋದು ಕೇವಲ ಚುನಾವಣೆಯ ನಾಟಕವೋ ಅಥವಾ ಹಿಂದೂ ಭಾವನೆಗಳಿಗೆ ಬೆಲೆ ಕೊಡುವ ರೀತಿಯಲ್ಲಿ ನಡೆದುಕೊಳ್ಳುತ್ತಾ ಅನ್ನೋದನ್ನು ಕಾದು ನೋಡುವ ಅವಶ್ಯಕತೆ ಇದೆ ಅಂತ ಹೇಳಿದ್ರು.
ಒಟ್ಟಾರೆಯಾಗಿ ಜನ ಏನ್ ಕೊಟ್ಟಿದ್ದಾರೋ ಅದು ನಮಗೆ ಎಚ್ಚರಿಕೆಯ ಗಂಟೆಯಾಗಿದೆ. 2019ರ ಚುನಾವಣೆಯನ್ನು ಇನ್ನಷ್ಟು ಗಂಭೀರವಾಗಿ ತೆಗೆದುಕೊಳ್ಳಲು ಹಾಗೂ ಎಚ್ಚರದಿಂದ ನಡೆಯಲು ಜನ ತೀರ್ಪು ಕೊಟ್ಟಿದ್ದಾರೆ ಅಂತ ತಿಳಿಸಿದ್ರು.
ಚುನಾವಣಾ ಫಲಿತಾಂಶದ ಆರಂಭಿಕ ಮುನ್ನಡೆ ಬಿಜೆಪಿಗೆ ನಿರೀಕ್ಷೆಯಂತೆ ಆಗಿಲ್ಲ. ನಾನು ಇವಿಎಂ ಯಂತ್ರದ ಮೇಲೆ ದೋಷ ಹೊರಿಸುವುದಿಲ್ಲ. ಜನರು ಕೊಟ್ಟ ತೀರ್ಪನ್ನು ಒಪ್ಪಿಕೊಳ್ಳುತ್ತೇವೆ. ಹಾಗೆಯೇ ಗೌರವಿಸುತ್ತೇವೆ ಅಂದ್ರು.
ಬೆಳಗಾವಿ: ಭಾರತದ ಮತದಾರ ಭಾರತೀಯ ಜನತಾ ಪಕ್ಷಕ್ಕೆ ಒಂದು ದೊಡ್ಡ ವಿದಾಯವನ್ನು ಹೇಳುತ್ತಿದ್ದಾನೆ ಅಂತ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್ ಹೇಳಿದ್ರು.
5 ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬೀಳುತ್ತಿರುವ ಹಿನ್ನೆಲೆಯಲ್ಲಿ ಇಂದು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಮೋದಿಯವರ ಮೇಲೆ ಭ್ರಮನಿರಸನವಾಗಿದೆ. ಅವರ ಮೇಲೆ ಇದ್ದಂತಹ ಅಪಾರ ನಿರೀಕ್ಷೆಗಳು ಕೂಡ ಹುಸಿಯಾಗಿವೆ ಅಂತ ಭಾರತೀಯ ಮತದಾರ ಈ ಪಂಚ ರಾಜ್ಯಗಳ ಚುನಾವಣೆಯಲ್ಲಿ ತೋರಿಸಿಕೊಟ್ಟಿದ್ದಾನೆ. ಇದು ಬಿಜೆಪಿಗೂ ಕೂಡ ಒಂದು ದೊಡ್ಡ ಪಾಠವಾಗಿದೆ. ಅಲ್ಲದೇ ಭಾರತದ ಮತದಾರನಿಗೂ ಕೂಡ ಹಿಂದಿನ ಚುನಾವಣೆಗಳನ್ನು ಗಮನಿಸಿದ್ರೆ ಒಂದು ಹೊಸ ಅನುಭವ ಅಂತಂದ್ರೆ ತಪ್ಪಾಗಲಾರದು ಅಂದ್ರು.
ಕಳೆದ ಬಾರಿಗೂ ಈ ಬಾರಿ ಫಲಿತಾಂಶ ಹೊರಬೀಳುತ್ತಿರುವುದನ್ನು ಗಮನಿಸಿದ್ರೆ ಮಧ್ಯಪ್ರದೇಶ ಹಾಗೂ ರಾಜಸ್ಥಾನ ಹೆಚ್ಚು ಲೋಕಸಭಾ ಸ್ಥಾನಗಳು ಇರುವ ರಾಜ್ಯಗಳಾಗಿವೆ. ಆದ್ರೆ ಇಂದಿನ ಈ ಫಲಿತಾಂಶ ಅದಕ್ಕೆ ಬಹಳ ವಿರುದ್ಧವಾಗಿ ಹೋಗಿದ್ದು ಬಿಜೆಪಿ ಕುಸಿದಿದೆ. ಒಟ್ಟಾರೆ ಈ ಎರಡೂ ರಾಜ್ಯಗಳಲ್ಲಿ ಮತದಾರನ ತೀರ್ಪು ಬಹಳ ಮುಖ್ಯವಾಗಿದೆ. ಅಂತಹ ಒಂದು ದೊಡ್ಡ ತೀರ್ಪನ್ನು ದೊಡ್ಡ ದೇಶದ ಮತದಾರ ಬಹಳ ದೂರದೃಷ್ಟಿಯಿಂದ ಈ ಚುನಾವಣೆಯಲ್ಲಿ ಮತ ಚಲಾಯಿಸಿದ್ದಾನೆ ಅಂತ ಹೇಳಿದ್ರು.
ಇಂದು ಹೊರಬೀಳುವ ಚುನಾವಣಾ ಫಲಿತಾಂಶದಿಂದ ದೆಹಲಿಯ ಬಿಜೆಪಿ ಮುಖ್ಯ ಕಚೇರಿಗೆ ಇಂದು ಒಂದು ಅಲೆ ಅಪ್ಪಳಿಸಲಿದೆ. ಹೀಗಾಗಿ ಮೋದಿಯವರು ತರಗೆಲೆ ರೀತಿ ಆಗಿ ಹೋಗಿದ್ದಾರೆ. ಭಾರತದ ಮತದಾರ ಭಾರತೀಯ ಜನತಾ ಪಕ್ಷಕ್ಕೆ ಒಂದು ದೊಡ್ಡ ಸಂದೇಶವನ್ನು ರವಾನಿಸಿದ್ದಾನೆ. ಬರೀ ಮಾತಿನ ಮಂಟಪದಿಂದ ಭಾರತದ ಆಡಳಿತವನ್ನು ಮಾಡಲು ಸಾಧ್ಯವಿಲ್ಲ. ಮಾತಿನ ಮಲ್ಲನಾಗಿ ಭಾರತದ ಭವಿಷ್ಯವನ್ನು ರೂಪಿಸಲು ಆಗಲ್ಲ. ಭಾರತ ಬಹುವಿಧದ, ವಿವಿಧ ಜಾತಿ, ಜನಾಂಗ, ಧರ್ಮದ ಭಾಷಿಕರನ್ನು ಹೊಂದಿರುವಂತಹ ಮತ್ತು ಗಣರಾಜ್ಯ ಒಕ್ಕೂಟ ಇರುವಂತಹ ಭಾರತವನ್ನು ನಿಮ್ಮ ಮಾತುಗಳಿಂದಷ್ಟೇ ಬದಲಿಸಲು ಆಗಲ್ಲ ಅನ್ನುವಂತಹ ವಿಚಾರ ಈ 5 ರಾಜ್ಯಗಳ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿಗೆ ತೋರಿಸಿದ್ದಾನೆ ಅಂತ ಅವರು ತಿಳಿಸಿದ್ರು.
ಜೆಡಿಎಸ್ ಒಂದು ಪ್ರಾಂತೀಯ ಪಕ್ಷವಾಗಿದೆ. ಈ ಪ್ರಾಂತೀಯ ಪಕ್ಷಗಳು ಪಂಚರಾಜ್ಯ ಚುನಾವಣೆಯಲ್ಲಿ ಬಲ ಆಗುತ್ತಿವೆ. ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಮತದಾರ ಒಂದು ನಂಬಿಕೆಯನ್ನು ತೋರಿಸುತ್ತಿದ್ದಾನೆ. ಹೀಗಾಗಿ ಅಲ್ಲಲ್ಲಿ ಸಣ್ಣಪುಟ್ಟ ಪಾರ್ಟಿಗಳು ಒಂದು ಕಡೆ ಸೇರುತ್ತಿವೆ. ಇವುಗಳ ಏಕೀಕರಣದಿಂದ ದೊಡ್ಡದಾಗಿ ಮೆರೀತಿದ್ದ ಬಿಜೆಪಿಯನ್ನು ಮಣಿಸುವಲ್ಲಿ ಪ್ರಾಂತೀಯ ಪಕ್ಷಗಳ ಪಾತ್ರ ಬಹಳ ಹಿರಿದಾಗುತ್ತಿದ್ದು, ಇದಕ್ಕೆ ನಾನು ಹೆಮ್ಮೆ ಪಡುತ್ತೇನೆ ಅಂದ್ರು.
ಬೆಳಗಾವಿ: ನಾಯಕತ್ವ ಹಾಗೂ ಸಂಘಟನೆ ಎರಡೂ ಒಟ್ಟಿಗೆ ಮಾತ್ರ ನಾವು ಯಶಸ್ಸು ಕಾಣಲು ಸಾಧ್ಯ ಎಂದು ಬಿಜೆಪಿ ಮುಖಂಡ ಕೆ ಎಸ್ ಈಶ್ವರಪ್ಪ ತಿಳಿಸಿದ್ದಾರೆ.
ನಗರದಲ್ಲಿ 5 ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬೀಳುತ್ತಿರುವ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಯಕತ್ವ ಮತ್ತು ಸಂಘಟನೆ ಕುರಿತು ಎಲ್ಲಾ ರಾಜ್ಯಗಳಲ್ಲೂ ಕೂಡ ಒಟ್ಟಿಗೆ ಕೂತು ಅಭ್ಯರ್ಥಿ ಆಯ್ಕೆ ಹಾಗೂ ಪ್ರಚಾರದ ವೈಖರಿ ಕುರಿತು ಎಲ್ಲಾ ಜಾತಿ ವರ್ಗಗಳನ್ನು ಜೊತೆ ಜೋಡಿಸಿಕೊಂಡು ಚರ್ಚೆ ಮಾಡಬೇಕಾಗಿದೆ. ಇಂದಿನ ಫಲಿತಾಂಶ ನೋಡಿದ್ರೆ ಈ ಎಲ್ಲಾ ವಿಚಾರದಲ್ಲಿಯೂ ಸ್ವಲ್ಪ ಹಿಂದೆ ಬಿದ್ವಾ ಅನ್ನೋ ಅನುಮಾನ ಮೂಡುತ್ತಿದೆ ಅಂದ್ರು.
ಒಟ್ಟಾರೆ ನಾಯಕತ್ವ ಮತ್ತು ಸಂಘಟನೆ ಎರಡೂ ಒಟ್ಟಿಗೆ ಸರಿಯಾಗಿ ಹೋದಾಗ ಖಂಡಿತ ನಮಗೆ ಅನುಕೂಲ ಆಗುತ್ತದೆ. ಬರೀ ನಾಯಕತ್ವ ಅಥವಾ ಬರೀ ಸಂಘಟನೆ. ಎರಡೂ ಕೂಡ ಉಪಯೋಗವಾಗಲ್ಲ. ನಾಯಕತ್ವ ಮತ್ತು ಸಂಘಟನೆ ಎರಡೂ ಒಟ್ಟಾಗಿ ಹೋದ್ರೆ ಮಾತ್ರ ಚುನಾವಣೆಗಳು ಯಶಸ್ಸು ಆಗುತ್ತೆ ಅಂತ ಈ ಫಲಿತಾಂಶ ನೋಡಿ ಅರಿವಿಗೆ ಬಂದಿದೆ ಎಂದು ತಿಳಿಸಿದ್ರು.
ಇದು ಮೋದಿ ಹಾಗೂ ಅಮಿತ್ ಶಾ ಹಿನ್ನಡೆ ಅಲ್ಲ. ಎಲ್ಲಾ ವಿಚಾರಗಳಲ್ಲೂ ಕೂಡ ಒಟ್ಟಿಗೆ ಕೂತು ಚರ್ಚೆ ಮಾಡಿ, ಸಂಘಟನೆ ಬೆಳೆಸುತ್ತಾ ಬೆಳೆಸುತ್ತಾ ಅಭ್ಯರ್ಥಿಗಳ ಆಯ್ಕೆಯ ಜೊತೆ ಜೊತೆಗೆ ಎಲ್ಲಾ ವರ್ಗದ ಜನರನ್ನು ಜೊತೆಗೆ ತೆಗೆದುಕೊಂಡು ಹೋಗುವುದರಲ್ಲಿ ಎಲ್ಲೋ ಎಡವಿದ್ದೇವೆ ಅನಿಸುತ್ತಿದೆ. ಇದಕ್ಕೆ ಪರಿಹಾರವನ್ನು ಕಂಡು ಹಿಡಿಯುತ್ತೇವೆ ಅಂತ ಹೇಳಿದ್ರು.
ರಾಜಸ್ಥಾನ, ಮಧ್ಯಪ್ರದೇಶ, ಮಿಜೋರಾಂ, ತೆಲಂಗಾಣ ಹಾಗೂ ಛತ್ತೀಸ್‍ಗಢ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದು, ರಾಜಸ್ಥಾನ ಮತ್ತು ಛತ್ತೀಸ್‍ಗಢದಲ್ಲಿ ಕಾಂಗ್ರೆಸ್ ಮುನ್ನಡೆಯಲ್ಲಿದ್ದರೆ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೆಕ್ ಟು ನೆಕ್ ಫೈಟ್ ಇದೆ.
ಬೆಂಗಳೂರು: ಬೆಳಗಾವಿ ಚಳಿಗಾಲದ ಅಧಿವೇಶನದ ಎರಡನೇ ದಿನವಾದ ಇಂದು ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ಆಡಳಿತ ಸರ್ಕಾರ ಹಾಗೂ ವಿರೋಧಿ ಪಕ್ಷದ ನಡುವಿನ ಚರ್ಚೆ ಕಾವೇರುವ ಸಾಧ್ಯತೆ ಇದೆ. ಲೋಕಸಭಾ ಚುನಾವಣೆಯ ಸೆಮಿಫೈನಲ್ ಎಂದೇ ಬಿಂಬಿತವಾಗಿರುವ ಪಂಚರಾಜ್ಯಗಳ ಫಲಿತಾಂಶ ಪ್ರತಿಧ್ವನಿಸುವ ಸಾಧ್ಯತೆಯಿದ್ದು, ಮೈತ್ರಿ ಸರ್ಕಾರ ಹಾಗೂ ಬಿಜೆಪಿ ನಡುವೆ ಕಾಲೆಳೆಯುವ ಪ್ರಸಂಗಗಳು ಕಾಣುವ ಸಾಧ್ಯತೆ ಇದೆ.
ಬೆಳಗ್ಗೆ 11ಕ್ಕೆ ಕಲಾಪ ಆರಂಭವಾಗಲಿದ್ದು, ಆ ವೇಳೆಗೆ ಪಂಚರಾಜ್ಯಗಳ ಫಲಿತಾಂಶ ಸ್ಪಷ್ಟವಾಗಲಿದೆ. ಇದೇ ಸಂದರ್ಭದಲ್ಲಿ ಮೈತ್ರಿ ಸರ್ಕಾರದ ವಿರುದ್ಧದ ಹೋರಾಟಕ್ಕೆ ಬಿಜೆಪಿಗೆ ಬಲ ಬರುತ್ತಾ? ಅಥವಾ ಬ್ರೇಕ್ ಬೀಳುತ್ತಾ ಎಂಬುದು ಕೂಡ ಸ್ಪಷ್ಟವಾಗುತ್ತೆ. ಒಂದೊಮ್ಮೆ ಬಿಜೆಪಿ ವಿರುದ್ಧ ಫಲಿತಾಂಶ ಬಂದರೆ ಬಿಜೆಪಿಯ ಉಗ್ರಹೋರಾಟ ಇವತ್ತಿನ ಮಟ್ಟಿಗೆ ಸ್ವಲ್ಪ ವೇಗ ಕಳೆದುಕೊಳ್ಳಲಿದೆ.
ಚುನಾವಣಾ ಫಲಿತಾಂಶ ಬಿಜೆಪಿ ಪರ ಫಲಿತಾಂಶ ಬಂದರೆ ಮೈತ್ರಿ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧಕ್ಷ ಬಿಎಸ್ ಯಡಿಯೂರಪ್ಪ ಮತ್ತು ಮುಖಂಡರು ನಿರುಸಿನ ವಾಗ್ದಾಳಿ ಮಾಡುವುದಂತೂ ಸತ್ಯ. ಈ ನಡುವೆ ಸಿದ್ದರಾಮಯ್ಯ ವಿದೇಶ ಪ್ರವಾಸ, 36 ಸಾವಿರ ಕೋಟಿ ರೂ. ಲೆಕ್ಕಕ್ಕೆ ಸಿಗದ ಬಜೆಟ್ ಹಗರಣದ ಆರೋಪ, ರೈತರ ಸಾಲಮನ್ನಾ ಸೇರಿದಂತೆ ಹಲವು ವಿಚಾರಗಳಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ನಿರ್ಧರಿಸಿದೆ.
ಬೆಳಗಾವಿ ಸದನದ ನಡುವೆಯೇ ಕಾಂಗ್ರೆಸ್ ಅತೃಪ್ತರ ನಡೆಯೂ ಕೂಡ ಕುತೂಹಲ ಮೂಡಿಸಿದ್ದು, ಸದನದ ಮೊದಲ ದಿನ ಗೈರಾಗಿದ್ದ ಸಿದ್ದರಾಮಯ್ಯ ಅವರ ಆಪ್ತರು ಇಂದು ಸದನಕ್ಕೆ ಹಾಜರಾಗುತ್ತಾರಾ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಹೆಚ್ಚಾಗಿದೆ. ಇತ್ತ ಅತೃಪ್ತರ ನಿಲುವು ಯಾವ ತಿರುವು ಪಡೆದುಕೊಳ್ಳುತ್ತೆ ಎಂಬುದನ್ನು ಕಾದುನೋಡಬೇಕಿದೆ.
ಬೆಳಗಾವಿ: ಸಿಎಂ ಅವರೇ ಭತ್ತ ಕಟಾವು, ನಾಟಿ ಮಾಡಿದ್ದಾಯಿತು. ಈಗ ಕಬ್ಬು ಸುಲಿಯಲು ಬನ್ನಿ ಎನ್ನುವ ಮೂಲಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗೆ ರೈತ ಮಹಿಳೆ ಜಯಶ್ರೀ ಗುರಣ್ಣನವರ್ ಬಹಿರಂಗವಾಗಿ ಸವಾಲು ಹಾಕಿದ್ದಾರೆ.
ಇಂದು ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ಎದುರು ಕಬ್ಬು ಬೆಳೆಗಾರರು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಈ ವೇಳೆ ಮಾತನಾಡಿದ ಜಯಶ್ರೀ, ನಾವು ರೈತರೇ ಅಲ್ಲ ಅನ್ನುವ ನೀವು, ನನ್ನ ಹೇಳಿಕೆಯನ್ನು ಸವಾಲನ್ನಾಗಿ ಸ್ವೀಕರಿಸಿದರೂ ಪರವಾಗಿಲ್ಲ. ನಾವು ಭತ್ತ ನಾಟಿದ್ದೇವೆ. ಕಟಾವು ಸಹ ಮಾಡಿದ್ದೇವೆ. ಆದರೆ ಈಗ ನೀವು ಕಬ್ಬು ಸುಲಿಯೋಕೆ ಬನ್ನಿ ಎಂದು ಪಂಥಾಹ್ವಾನ ನೀಡಿದ್ದಾರೆ.
ಕಬ್ಬು ಸುಲಿಯುವುದಕ್ಕೆ ನೀವೇ ಸ್ಥಳವನ್ನು ನಿಗದಿ ಮಾಡಿ. ಇಲ್ಲವೇ ನಾವು ನಿಗದಿ ಮಾಡಿದ ಜಾಗಕ್ಕೆ ಬಂದು ಕಬ್ಬು ಸುಲಿಯಿರಿ ಎಂದು ಬಹಿರಂಗವಾಗಿಯೇ ಸವಾಲು ಹಾಕಿದ್ದಾರೆ.
ಪ್ರತಿಭಟನೆ ವಾಪಸ್:
ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಾಗೂ ರೈತ ಮುಖಂಡರಾಗಿರುವ ಕೋಡಿಹಳ್ಳಿ ಚಂದ್ರಶೇಖರ್, ಬೆಳಗಾವಿ ಜಿಲ್ಲೆಯ ಕೆಂಡಸಕೊಪ್ಪದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಂಡಿದ್ದಾರೆ. ಸರ್ಕಾರ ರೈತರ ಬೇಡಿಕೆಗಳನ್ನು ಪೂರೈಸಲು ಬದ್ಧವಾಗಿದೆ. ಫೆಬ್ರವರಿ ತಿಂಗಳೊಳಗಾಗಿ ಬೇಡಿಕೆ ಈಡೇರಿಸುವ ಬಗ್ಗೆ ಸಿಎಂ ಕುಮಾರಸ್ವಾಮಿ ಮಾತು ಕೊಟ್ಟಿದ್ದಾರೆ. ಕಬ್ಬು ಬಿಲ್ ಬಾಕಿ ಹಾಗೂ ಬೆಂಬಲ ಬೆಲೆ ಹಾಗೂ ಭತ್ತಕ್ಕೆ ಎಮ್‍ಎಸ್‍ಪಿ ನಿಯಮದಂತೆ ಯೋಗ್ಯ ದರ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ. ಒಂದು ವೇಳೆ ಫೆಬ್ರವರಿ ಒಳಗೆ ಸಿಎಂ ಹೇಳಿದ ಹಾಗೆ ನಡೆದುಕೊಳ್ಳದೇ ಇದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.