Tag: belagavi

  • ಪಾರ್ಟಿ ಮಾಡಿ ಕೊಲೆಗೈದು ವ್ಯಕ್ತಿಯ ಬೆರಳುಗಳನ್ನೇ ಕತ್ತರಿಸಿ ಕೊಂಡೊಯ್ದರು..!

    ಪಾರ್ಟಿ ಮಾಡಿ ಕೊಲೆಗೈದು ವ್ಯಕ್ತಿಯ ಬೆರಳುಗಳನ್ನೇ ಕತ್ತರಿಸಿ ಕೊಂಡೊಯ್ದರು..!

    ಬೆಳಗಾವಿ: ಪಾರ್ಟಿ ಬಳಿಕ ಮಾರಕಾಸ್ತ್ರಗಳಿಂದ ಅಪರಿಚಿತ ವ್ಯಕ್ತಿಯೋರ್ವನನ್ನು ಕೊಚ್ಚಿ ಕೊಲೆಗೈದು ಆತನ ಬೆರಳುಗಳನ್ನು ಕತ್ತರಿಸಿ ಕೊಂಡೊಯ್ದಿರುವ ಭಯಾನಕ ಘಟನೆ ನಗರದ ಅಲಾರವಾಡ ಬ್ರಿಡ್ಜ್ ಬಳಿ ಭಾನುವಾರ ರಾತ್ರಿ ನಡೆದಿದೆ.

    ಹಂತಕರು ಮೊದಲು ಅಪರಿಚಿತ ವ್ಯಕ್ತಿಯ ತಲೆಗೆ ಮಾರಾಕಾಸ್ತ್ರಗಳಿಂದ ಹೊಡೆದು ಹತ್ಯೆ ಮಾಡಿದ್ದಾರೆ. ನಂತರ ಆತನ ಎಡಗೈನ ಮೂರು ಬೆರಳುಗಳನ್ನು ಕಟ್ ಮಾಡಿ ಕೊಂಡೊಯ್ದಿದ್ದಾರೆ. ಘಟನಾ ಸ್ಥಳದಲ್ಲಿ ಎಣ್ಣೆ ಪಾರ್ಟಿ ಮಾಡಿರುವ ಗ್ಲಾಸ್‍ಗಳು ಪತ್ತೆಯಾಗಿದ್ದು, ಹೊಸ ವರ್ಷ ಬರುವ ಸಂತಸದಲ್ಲಿ ಮೃತನ ಜೊತೆ ಪಾರ್ಟಿ ಮಾಡಿ ಬಳಿಕ ಹತ್ಯೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

    ಈ ಕುರಿತು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಡಿಸಿಪಿ ನಂದಗಾವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಹಂತಕರನ್ನು ಪತ್ತೆ ಹಚ್ಚಲು ತನಿಖೆ ಆರಂಭಿಸಲಾಗುವುದು. ಮೃತ ವ್ಯಕ್ತಿಯ ಗುರುತು ಇನ್ನೂ ದೊರಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಸಿದ್ದರಾಮಯ್ಯ ಸೂಪರ್ ಸಿಎಂ ಅಲ್ಲ: ಬಸವರಾಜ್ ಹೊರಟ್ಟಿ

    ಸಿದ್ದರಾಮಯ್ಯ ಸೂಪರ್ ಸಿಎಂ ಅಲ್ಲ: ಬಸವರಾಜ್ ಹೊರಟ್ಟಿ

    ಬೆಳಗಾವಿ (ಚಿಕ್ಕೋಡಿ): ಸಿದ್ದರಾಮಯ್ಯ ಸೂಪರ್ ಸಿಎಂ ಅಲ್ಲ, ಅವರನ್ನು ಸಿಎಂ ಎಂದು ಬಿಂಬಿಸುವುದು ಸರಿ ಅಲ್ಲ ಎಂದು ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಗಡಿ ಜಿಲ್ಲೆ ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಮಹಾರಾಷ್ಟ್ರ ಗಡಿಯಲ್ಲಿರುವ ಕಾರದಗಾ ಗ್ರಾಮದಲ್ಲಿ ಅದ್ದೂರಿಯಾಗಿ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತು. ಗಡಿ ಗ್ರಾಮದಲ್ಲಿ ಎಲ್ಲೆಲ್ಲೂ ಕನ್ನಡದ ಕಂಪು  ಪಸರಿಸಿತ್ತು. ವಿವಿದ ವಾದ್ಯ ತಂಡಗಳ ಮೆರವಣಿಗೆ ಹಾಗೂ ಭುವನೇಶ್ವರಿ ಭಾವ ಚಿತ್ರದ ಮೆರವಣಿಗೆ ನಡೆಸಲಾಯಿತು. ಗಡಿ ಗ್ರಾಮದಲ್ಲಿ ಸರ್ಕಾರದ ಯಾವುದೇ ಅನುದಾನವಿಲ್ಲದೆ ಸಮ್ಮೇಳನವನ್ನ ಆಯೋಜಿಸಲಾಗಿತ್ತು. ಗಡಿ ಸಮ್ಮೇಳನದ ಅಧ್ಯಕ್ಶತೆಯನ್ನ ಸಾಹಿತಿ ಚಂದ್ರಶೇಖರ ಪಾಟೀಲ(ಚಂಪಾ) ವಹಿಸಿದ್ದರು.

    ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಾರದಗಾ ಗ್ರಾಮದಲ್ಲಿ ನಡೆಯುತ್ತಿರುವ ಕನ್ನಡ ಸಮಾವೇಶದಲ್ಲಿ ಬಸವರಾಜ್ ಹೊರಟ್ಟಿ ಅವರು ಪಾಲ್ಗೊಂಡಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನ್ನ ರಾಜಕೀಯ ಅನುಭವದ ಆಧಾರದ ಮೇಲೆ 20 ಜನ ಶಾಸಕರು ರಾಜೀನಾಮೆ ಕೊಡುವ ಸಾಧ್ಯತೆ ಇಲ್ಲ. ರಾಜಕೀಯದಿಂದ ನಿವೃತ್ತಿಯಾಗುವುದಿದ್ದರೆ ಮಾತ್ರ ರಾಜೀನಾಮೆ ನೀಡಬೇಕು. ಸರ್ಕಾರವನ್ನು ಅಭದ್ರಗೊಳಿಸುವ ನಿಟ್ಟಿನಲ್ಲಿ ರಾಜೀನಾಮೆ ಆಟ ಆಡುವುದು ಸರಿಯಲ್ಲ. ಸಿದ್ದರಾಮಯ್ಯ ಮಾಸ್ಟರ್ ಮೈಂಡ್ ಅಂತ ಹೇಳುವುದಿಲ್ಲ. ಬಹಳಷ್ಟು ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಅಂತಾರೆ. ಹಾಗಾದ್ರೆ ಕುಮಾರಸ್ವಾಮಿ ಅವರ ಪರಿಸ್ಥಿತಿ ಏನು? ಸಿದ್ದರಾಮಯ್ಯ ಸೂಪರ್ ಸಿಎಂ ಅಲ್ಲ, ಅವರನ್ನು ಸಿಎಂ ಎಂದು ಬಿಂಬಿಸುವುದು ಸರಿ ಅಲ್ಲ ಎಂದು ಕಿಡಿಕಾರಿದ್ದಾರೆ.

    ರಮೇಶ್ ಜಾರಕಿಹೊಳಿ ಮಾಡುತ್ತಿರುವುದು ಸರಿ ಕಾಣುತ್ತಿಲ್ಲ. ಮಂತ್ರಿಯಾಗಿ ಅವರು ಕೆಡಿಪಿ ಸಭೆ ಕರೆದಿಲ್ಲ, ಕ್ಯಾಬಿನೆಟ್‍ಗೆ ಹಾಜರಾಗಿಲ್ಲ. ಹಾಗಾಗಿ ಸಚಿವ ಸ್ಥಾನ ಕೈ ತಪ್ಪಿದೆ. ಅಲ್ಲದೇ ಜೆಡಿಎಸ್ ಪಕ್ಷದ ಬಿಜೆಪಿ ಸತ್ಯ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರಿಗೆ ಗೊತ್ತು. ಯಾರ ಜೊತೆಗೆ ಯಾರು ಕೈ ಜೋಡಿಸುತ್ತಾರೆ ಅನ್ನೋದರ ಬಗ್ಗೆ ನನಗೆ ಗೊತ್ತಿಲ್ಲ. ಸರ್ಕಾರ ಬೀಳುವ ಉಮೇಶ ಕತ್ತಿ ಹೇಳಿಕೆ ಹುಡುಗಾಟದ ಹೇಳಿಕೆ. ಅಷ್ಟೇ ಅಲ್ಲದೆ ವೇದಿಕೆ ಮೇಲೆ ಭಾಷಣ ಮಾಡುತ್ತ, ಮಹಾರಾಷ್ಟ್ರಕ್ಕೆ ಜೈ ಎನ್ನುವವರು ಬೆಳಗಾವಿಯಲ್ಲಿ ಶಾಸಕರಾಗುತ್ತಾರೆ. ಜನರು ಕನ್ನಡದಲ್ಲೇ ಮಾತನಾಡಿದರೂ ಸಹ ಅವರು ಮಾತ್ರ ಮರಾಠಿಯಲ್ಲಿಯೇ ಉತ್ತರಿಸುತ್ತಾರೆ ಎಂದು ವೇದಿಕೆಯ ಮೇಲೆಯೇ ಶಾಸಕ ಗಣೇಶ ಹುಕ್ಕೇರಿಗೆ ಬಸವರಾಜ್ ಹೊರಟ್ಟಿ ಅವರು ಟಾಂಗ್ ಕೊಟ್ಟಿದ್ದಾರೆ.

    ಶಾಸಕ ಉಮೇಶ ಕತ್ತಿ, ವೀರಕುಮಾರ ಪಾಟೀಲ ಅಂತವರು ಮರಾಠಿಯಲ್ಲೇ ಮಾತನಾಡುತ್ತಾರೆ. ಹೀಗಾಗಿ ಗಡಿ ಭಾಗದಲ್ಲಿ ಕನ್ನಡ ಅಭಿವೃದ್ಧಿ ಆಗುತ್ತಿಲ್ಲ. ಕನ್ನಡ ಭಾಷೆಯನ್ನು ಶಾಲೆಯಲ್ಲಿ ಬಳಸುವಂತೆ ಕ್ರಮ ತೆಗೆದುಕೊಳ್ಳಿ. ಇಲ್ಲದೇ ಹೋದಲ್ಲಿ ಆಂಧ್ರದ ಗಡಿಗೆ ಎತ್ತಂಗಡಿ ಮಾಡಲಾಗುವುದು. ಕೂಡಲೇ ಕ್ರಮ ಕೈಗೊಳದೇ ಇದ್ರೆ ಕನ್ನಡಕ್ಕೆ ಒತ್ತು ಕೊಡದ ಶಾಲೆಗಳ ಅನುದಾನ ಕಡಿತ ಮಾಡಲಾಗುವುದು. ಅನುದಾನ ಕಡಿತಕ್ಕೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲಾಗುವುದು ಎಂದು ನಿಪ್ಪಾಣಿ ಬಿಇಒ ಕೆ. ರಾಮನಗೌಡಗೆ ಸಾರ್ವಜನಿಕರ ಎದುರಿನಲ್ಲಿಯೇ ಬಸವರಾಜ್ ಹೊರಟ್ಟಿ ಎಚ್ಚರಿಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚಿಕ್ಕೋಡಿಯಲ್ಲಿ ಸಲೀಸಾಗಿ ದೊರೆಯುತ್ತೆ ನಕಲಿ ಪ್ರಮಾಣ ಪತ್ರ..!

    ಚಿಕ್ಕೋಡಿಯಲ್ಲಿ ಸಲೀಸಾಗಿ ದೊರೆಯುತ್ತೆ ನಕಲಿ ಪ್ರಮಾಣ ಪತ್ರ..!

    ಬೆಳಗಾವಿ/ಚಿಕ್ಕೋಡಿ: ಅಸಲಿ ಜಾತಿ ಪ್ರಮಾಣ ಪತ್ರ ಪಡೆಯುವರು ಸಾಕಷ್ಟು ಬಾರಿ ತಹಶೀಲ್ದಾರ್ ಕಚೇರಿ ಅಲೆದಾಡಿದ ಮೇಲೆ ಕೊನೆಗೆ ಪ್ರಮಾಣ ಪತ್ರ ಪಡೆದುಕೊಳ್ಳುತ್ತಾರೆ. ಆದರೆ ಈ ತಾಲೂಕಿನಲ್ಲಿ ಅಸಲಿಗಿಂತ ನಕಲಿ ಪ್ರಮಾಣ ಪತ್ರ ಸಲೀಸಾಗಿ ದೊರೆಯುತ್ತಿದೆ. ಜನರಿಗೆ ಯಾವುದು ಬೇಕೋ ಆ ಜಾತಿಯ ಪ್ರಮಾಣ ಪತ್ರವನ್ನು ಯಾವುದೇ ದಾಖಲೆಗಳಿಲ್ಲದೆ ನೀಡಲಾಗುತ್ತಿದೆ.

    ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪುರಸಭೆಯ ಸದಸ್ಯರು ತಹಶೀಲ್ದಾರ್ ಕಚೇರಿಯಲ್ಲಿ ನ್ಯಾಯ ಬೇಕು ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ. ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಸದಲಗಾ ಪುರಸಭೆಯ 11ನೇ ವಾರ್ಡಿನಲ್ಲಿ ಅವಿರೋಧವಾಗಿ ಆಯ್ಕೆಯಾದ ರವಿ ಗೋಸಾವಿ ಹಾಗೂ ನಕಲಿ ಜಾತಿ ಪ್ರಮಾಣ ಪತ್ರ ನೀಡಿದ ತಹಶೀಲ್ದಾರ್ ಅವರ ವಿರುದ್ಧ ಪ್ರತಿಭಟನೆ ನಡೆಸ್ತಿದ್ದಾರೆ.

    ಚಿಕ್ಕೋಡಿ ತಾಲೂಕಿನ ತಹಶೀಲ್ದಾರ್ ಅವರು ಯಾವುದೇ ದಾಖಲೆ ಇಲ್ಲದೇ ಪ್ರವರ್ಗ 2ಎ ಅಲ್ಲಿ ಬರುತ್ತಿದ್ದ ಹಿಂದೂ ಗೋಸಾವಿ ಭಟಕಿ ಜಮಾತ ಜಾತಿಯಿಂದ ಎಸ್‍ಟಿ ಪರಿಶಿಷ್ಟ ಪಂಗಡಕ್ಕೆ ಯಾವುದೇ ದಾಖಲೆಗಳಿಲ್ಲದೇ ಬದಲಾಯಿಸಿಕೊಂಡಿದ್ದಾರೆ. ರವಿ ಗೋಸಾವಿಯಿಂದ ಯಾವುದೇ ಶಾಲಾ ಹಾಗೂ ಕಂದಾಯ ಇಲಾಖೆಯ ದಾಖಲಾತಿಗಳನ್ನು ಪಡೆಯದೇ ಚಿಕ್ಕೋಡಿ ತಹಶೀಲ್ದಾರ್ ಕಚೇರಿಯ ಸಿಬ್ಬಂದಿ ನಕಲಿ ಜಾತಿ ಪ್ರಮಾಣ ಪತ್ರ ನೀಡಿದ್ದಾರೆ ಎಂದು ಆರ್‍ಟಿಐ ಕಾರ್ಯಕರ್ತರೊಬ್ಬರು ಆರೋಪಿಸಿದ್ದಾರೆ. ಅಲ್ಲದೇ ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಒತ್ತಾಯಿಸಿದ್ದಾರೆ.

    ಸದಲಗಾ ಪುರಸಭೆ ವ್ಯಾಪ್ತಿಯಲ್ಲಿ ಪರಿಶಿಷ್ಟ ಪಂಗಡ ವರ್ಗದಲ್ಲಿ ಯಾವುದೇ ಮುಖಂಡರು ಇಲ್ಲದನ್ನು ಗಮನಿಸಿ ರವಿ ಗೋಸಾವಿ ಚಿಕ್ಕೋಡಿ ತಹಶೀಲ್ದಾರ್ ಕಚೇರಿಯ ಲಿಂಕ್ ಹಿಡಿದು ನಕಲಿ ಜಾತಿ ಪ್ರಮಾಣ ಪತ್ರ ಪಡೆದುಕೊಂಡಿದ್ದಾನೆ. ನಂತರ ವಾರ್ಡ್ ನಂ.11 ಎಸ್‍ಟಿ ಮೀಸಲು ವಾರ್ಡ್‍ನಿಂದ ನಾಮಪತ್ರ ಸಲ್ಲಿಸಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ಬಿಜೆಪಿಯ ಪುರಸಭೆ ಸದಸ್ಯರಿಗೆ ಈತನ ಅಸಲಿ ಬಂಡವಾಳ ಗೊತ್ತಾಗಿ ಈತನ ಜಾತಿ ಪ್ರಮಾಣ ಪತ್ರದ ಎಲ್ಲ ದಾಖಲೆಗಳನ್ನ ಸಂಗ್ರಹಿಸಿ ಈತನ ಸದಸ್ಯತ್ವ ರದ್ದು ಮಾಡುವಂತೆ ಎಚ್ಚರಿಸಿದ್ದಾರೆ. ಅಲ್ಲದೇ ಕಾಂಗ್ರೆಸ್ ಪಕ್ಷದ ರಾಜಕೀಯ ಮುಖಂಡರ ಮಾತು ಕೇಳಿ ತಹಶೀಲ್ದಾರ್ ಕಚೇರಿಯಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ನೀಡಲಾಗಿದ್ದು, ತಕ್ಷಣ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸದಲಗಾ ಬಿಜೆಪಿ ಪುರಸಭೆ ಸದಸ್ಯರು ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದೇವಿಯ ಮೇಲೆ ಮುನಿಸಿಕೊಂಡ್ರಾ ರಮೇಶ್ ಜಾರಕಿಹೊಳಿ?

    ದೇವಿಯ ಮೇಲೆ ಮುನಿಸಿಕೊಂಡ್ರಾ ರಮೇಶ್ ಜಾರಕಿಹೊಳಿ?

    ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಮ್ಮನ್ನು ಸಚಿವ ಸಂಪುಟದಿಂದ ಕೈ ಬಿಟ್ಟ ಹಿನ್ನೆಲೆ ಕಳೆದೆರಡು ದಿನಗಳಿಂದ ಅಜ್ಞಾತ ಸ್ಥಳದಲ್ಲಿದ್ದಾರೆ. ರಮೇಶ್ ಜಾರಕಿಹೊಳಿ ತಮ್ಮ ಪಕ್ಷದವರ ಮೇಲಷ್ಟೆ ಅಲ್ಲದೆ ತನ್ನ ಆರಾಧ್ಯ ಧೈವ ಕೊಲ್ಲಾಪುರ ಮಹಾಲಕ್ಷ್ಮಿ ಮೇಲೂ ಮುನಿಸಿಕೊಂಡಿದ್ದಾರೆ.

    ರಮೇಶ್ ಜಾರಕಿಹೊಳಿ ಅವರು ಪ್ರತಿ ಶುಕ್ರವಾರ ತಪ್ಪದೇ ಕೊಲ್ಲಾಪುರಕ್ಕೆ ತೆರಳಿ ಮಹಾಲಕ್ಷ್ಮಿ ದೇವಿಯ ದರ್ಶನ ಪಡೆಯುತ್ತಿದ್ದರು. ಇಂದು ದೇವಿಯ ದರ್ಶನ ಪಡೆಯಲು ಸಹ ಕೊಲ್ಲಾಪುರಕ್ಕೆ ತೆರಳದೇ ಅಜ್ಞಾತ ಸ್ಥಳದಲ್ಲಿಯೇ ಉಳಿದುಕೊಂಡಿದ್ದಾರೆ.

    ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಭಾಜಪ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರನ್ನು ಭೇಟಿಯಾಗಲು ದೆಹಲಿಗೆ ತೆರಳಿದ್ದಾರೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಹರಿದಾಡಿದ್ದವು. ಇಂದು ಬಾಗಲಕೋಟೆಯಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ರಮೇಶ್ ಜಾರಕಿಹೊಳಿ ಎಲ್ಲಿಯೂ ಹೋಗಿಲ್ಲ, ಬೆಳಗಾವಿಯಲ್ಲಿದ್ದಾರೆ. ಸಚಿವ ಸಂಪುಟದಿಂದ ಅವರನ್ನು ಕೈ ಬಿಟ್ಟಿದ್ದರಿಂದ ಅಸಮಾಧಾನಗೊಂಡಿದ್ದಾರೆ. ನಾನು ಫೋನ್ ನಲ್ಲಿ ಅವರ ಜೊತೆ ಮಾತನಾಡಿದ್ದೇನೆ. ರಮೇಶ್ ಓರ್ವ ಪ್ರಾಮಾಣಿಕ ವ್ಯಕ್ತಿಯಾಗಿದ್ದು, ಪಕ್ಷ ತೊರೆಯಲ್ಲ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಸ್ತೆ ಅಪಘಾತದಲ್ಲಿ ಮಾಜಿ ಶಾಸಕ ದುರ್ಮರಣ

    ರಸ್ತೆ ಅಪಘಾತದಲ್ಲಿ ಮಾಜಿ ಶಾಸಕ ದುರ್ಮರಣ

    ಚಿಕ್ಕೋಡಿ: ಲಾರಿ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಚಿಕ್ಕೋಡಿ-ಸದಲಗಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ದತ್ತು ಹಕ್ಯಾಗೋಳ (78) ಹಾಗೂ ಮತ್ತೋರ್ವರು ಮೃತಪಟ್ಟಿದ್ದಾರೆ.

    ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಟ್ನಿ ಕ್ರಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಬೈಕ್ ಸವಾರ ಸುರೇಶ್ ಈರಪ್ಪ ಗಡೇಕಾರ (50) ಗಂಭೀರವಾಗಿ ಗಾಯಗೊಂಡಿದ್ದು, ಸಂಕೇಶ್ವರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

    ಘಟನೆಯ ವಿವರ?:
    ಕೆಲಸ ನಿಮಿತ್ತ ಮಾಜಿ ಶಾಸಕರು ಸಹಚರರ ಜೊತೆಗೆ ನಿಪ್ಪಣಿಯಿಂದ ಬೆಳಗಾವಿಗೆ ಬೈಕ್‍ನಲ್ಲಿ ತೆರಳುತ್ತಿದ್ದರು. ಈ ವೇಳೆ ಫೋನ್ ಕರೆ ಬಂದಿದೆ. ಹೀಗಾಗಿ ಹುಕ್ಕೇರಿ ತಾಲೂಕಿನ ಹಿಟ್ನಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 4 ಬೈಕ್ ನಿಲ್ಲಿಸಿದ್ದರು. ಮಾತು ಮುಗಿಸಿ ಬೈಕ್ ಸ್ಟಾರ್ಟ್ ಮಾಡಿ ರಸ್ತೆಗೆ ಬರುತ್ತಿದ್ದಂತೆಯೇ ಹಿಂದುಗಡೆಯಿಂದ ವೇಗವಾಗಿ ಬಂದ ಲಾರಿ ಬೈಕ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಶಾಸಕರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಸವಾರ ಸುರೇಶ್ ಈರಪ್ಪ ಗಡೇಕಾರ ಅವರನ್ನು ಸಂಕೇಶ್ವರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬೈಕ್ ಸವಾರನೂ ಮೃತಪಟ್ಟಿದ್ದಾರೆ.

    ಚಿಕ್ಕೋಡಿ ತಾಲೂಕಿನ ಕೆರೂರು ನಿವಾಸಿ ದತ್ತು ಹಕ್ಯಾಗೋಳ ಅವರು 2004ರಲ್ಲಿ ಬಿಜೆಪಿಯಿಂದ ಚಿಕ್ಕೋಡಿ-ಸದಲಗಾ (ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ) ಶಾಸಕರಾಗಿ ಆಯ್ಕೆಯಾಗಿದ್ದರು.

    ಈ ಕುರಿತು ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನೀವು ಎಟಿಎಂ ಎದುರು ಸರತಿ ಸಾಲಿನಲ್ಲಿ ನಿಂತು ಹಣ ಪಡೆದುಕೊಳ್ಳುತ್ತೀರಾ? ಹಾಗಾದ್ರೆ ಈ ಸ್ಟೋರಿ ಓದಿ

    ನೀವು ಎಟಿಎಂ ಎದುರು ಸರತಿ ಸಾಲಿನಲ್ಲಿ ನಿಂತು ಹಣ ಪಡೆದುಕೊಳ್ಳುತ್ತೀರಾ? ಹಾಗಾದ್ರೆ ಈ ಸ್ಟೋರಿ ಓದಿ

    ಬೆಳಗಾವಿ/ಚಿಕ್ಕೋಡಿ: ಎಟಿಎಂ ಎದುರು ಸರತಿ ಸಾಲಿನಲ್ಲಿ ನಿಂತಾಗ ಕೈಯಲ್ಲಿ ನಿಮ್ಮ ಎಟಿಎಂ ಕಾರ್ಡ್ ಹಿಡಿದುಕೊಳ್ಳುವಾಗ ಎಚ್ಚರವಾಗಿರಿ. ಯಾಕಂದ್ರೆ ನಿಮ್ಮ ಎಟಿಎಂ ಮೇಲೆ ಇರುವ ನಂಬರ್ ನೋಡಿ ಹಾಗೂ ನಿಮ್ಮ ಜೊತೆಗೆ ಬಂದು ನಿಮ್ಮ ಪಿನ್ ಸಂಖ್ಯೆ ಕದ್ದು ನೋಡಿ ನಿಮ್ಮ ಹಣ ಕದಿಯುತ್ತಾರೆ.

    ಇಬ್ಬರು ಯೋಧರು ಸೇರಿ 8 ಜನರ ಬ್ಯಾಂಕ್ ಅಕೌಂಟಿಗೆ ಕನ್ನ ಹಾಕಿ 3 ಲಕ್ಷಕ್ಕೂ ಅಧಿಕ ಹಣವನ್ನು ವಿವಿಧ ಎಟಿಎಂಗಳಿಂದ ಹಣ ವಿಥ್ ಡ್ರಾ ಮಾಡಿದ್ದ ಖತರ್ನಾಕ್ ಖದೀಮನನ್ನು ಹುಕ್ಕೇರಿ ಪೊಲೀಸರು ಬಂಧಿಸಿದ್ದಾರೆ. ಬಿಹಾರ ರಾಜ್ಯದ ಗಯಾ ಜಿಲ್ಲೆಯ ಡುಮರಿ ಗ್ರಾಮದ ರೋಹಿತೇಶ್ ಕುಮಾರ್ ಬಂಧಿತ ಆರೋಪಿ.

    ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆ 8 ಗ್ರಾಹಕರ ಬ್ಯಾಂಕ್ ಅಕೌಂಟ್ ಹಣ ಹ್ಯಾಕ್ ಮಾಡಿ ಬೆಳಗಾವಿ, ಕೊಲ್ಲಾಪುರ, ಕೋಲ್ಕತ್ತಾ ಸೇರಿದಂತೆ ವಿವಿಧ ನಗರಗಳ ಎಟಿಎಂ ಕೇಂದ್ರಗಳಿಂದ ಈ ಖದೀಮ ಹಣ ಡ್ರಾ ಮಾಡಿಕೊಂಡಿದ್ದನು. ಈ ಖತರ್ನಾಕ್ ರೋಹಿತೇಶ್ ಎಟಿಎಂ ಕೇಂದ್ರಗಳ ಎದುರು ಸರತಿ ಸಾಲಿನಲ್ಲಿ ನಿಂತು ಎಟಿಎಂ ಸಂಖ್ಯೆಯನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತಿದ್ದ. ಬಳಿಕ ಎಟಿಎಂ ಡ್ರಾ ಮಾಡುವ ಸಂದರ್ಭದಲ್ಲಿ ಕದ್ದು ಪಾಸ್‍ವರ್ಡ್ ನೋಡಿ ನಮೂದಿಸಿಕೊಳ್ಳುತ್ತಿದ್ದನು. ಬಳಿಕ ಅಲ್ಲಿಂದ ತೆರಳಿ ಆನ್ಲೈನ್ ಅಪ್ಲಿಕೇಶನ್ ಮೂಲಕ ಗ್ರಾಹಕರ ಕೊನೆಯ 4 ಎಟಿಎಂ ಸಂಖ್ಯೆ ಹಾಗೂ ಪಾಸ್ವರ್ಡ್ ಬಳಿಸಿ ಹಣ ಎಗಿರಿಸುತ್ತಿದ್ದನು.

    ಹುಕ್ಕೇರಿ ತಾಲೂಕಿನ ಯೋಧರಾದ ಶಿವಾನಂದ ಮುರಗಿ ಅವರ 2 ತಿಂಗಳು ವೇತನ 80 ಸಾವಿರ ಹಾಗೂ ಮಾರುತಿ ನಾಶಿಪುಡಿ ಅವರ 34 ಸಾವಿರ ರೂ.ಗಳು ಸೇರಿದಂತೆ ಒಟ್ಟು 8 ಜನರ 3 ಲಕ್ಷಕ್ಕೂ ಅಧಿಕ ಹಣಕ್ಕೆ ಈ ಖದೀಮ ಕನ್ನ ಹಾಕಿದ್ದ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಹುಕ್ಕೇರಿ ಪೊಲೀಸರು ತನಿಖೆ ಆರಂಭಿಸಿದಾಗ ಇಂಥ ಪ್ರಕರಣದಲ್ಲೇ ಮಹಾರಾಷ್ಟ್ರ ಪೊಲೀಸರು ವ್ಯಕ್ತಿಯನ್ನು ಬಂಧಿಸಿರುವ ಮಾಹಿತಿ ಬರುತ್ತದೆ. ಆಗ ಹುಕ್ಕೇರಿ ಪೊಲೀಸರು ಮಹಾರಾಷ್ಟ್ರ ಪೊಲೀಸರನ್ನು ಸಂಪರ್ಕಿಸಿದಾಗ ಹಣ ಕಳ್ಳತನ ಮಾಡಿದ್ದಾಗಿ ಕಳ್ಳ ರೋಹಿತೇಶ್ ಒಪ್ಪಿಕೊಂಡಿದ್ದಾನೆ.

    ಅಲ್ಲದೆ ಎರಡು ಬಾರಿ ಈತ ಹುಕ್ಕೆರಿಗೆ ಬಂದು ಜನರ ಎಟಿಎಂ ಸಂಖ್ಯೆ ಹಾಗೂ ಪಿನ್ ನಮೂದಿಸಿಕೊಂಡು ಹೋಗಿರುವುದಾಗಿ ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾನೆ. ಸದ್ಯ ಈತ ಮಹರಾಷ್ಟ್ರ ಜೈಲಿನಲ್ಲಿ ಇದ್ದು ಹುಕ್ಕೇರಿ ಪೊಲೀಸರು ಈತನನ್ನು ಹುಕ್ಕೇರಿ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

    ಹುಕ್ಕೇರಿ ಪೊಲೀಸ್ ಠಾಣೆ ಹಾಗೂ ಮಹರಾಷ್ಟ್ರ ರಾಜ್ಯದ ಕೊಲ್ಲಾಪುರ ಪೊಲೀಸ್ ಠಾಣೆಯಲ್ಲಿ ಖದೀಮನ ವಿರುದ್ಧ ಪ್ರಕರಣ ದಾಖಲಾಗಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 24 ಗಂಟೆಯಲ್ಲಿ ದೋಸ್ತಿ ಸರ್ಕಾರ ಪತನ – ಉಮೇಶ್ ಕತ್ತಿ

    24 ಗಂಟೆಯಲ್ಲಿ ದೋಸ್ತಿ ಸರ್ಕಾರ ಪತನ – ಉಮೇಶ್ ಕತ್ತಿ

    ಬೆಳಗಾವಿ: ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ದೋಸ್ತಿ ಸರ್ಕಾರ 24 ಗಂಟೆಗಳಲ್ಲೇ ಪತನವಾಗಲಿದ್ದು, ನಂತರ ಒಂದು ವಾರದಲ್ಲಿ ಬಿಜೆಪಿ ಹೊಸ ಸರ್ಕಾರವನ್ನು ರಚಿಸುತ್ತದೆ ಎಂದು ಬಿಜೆಪಿ ಶಾಸಕ ಉಮೇಶ್ ಕತ್ತಿ ಭವಿಷ್ಯ ನುಡಿದಿದ್ದಾರೆ.

    ನಗರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಸಭೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಕಾಂಗ್ರೆಸ್ಸಿನ 15 ಮಂದಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಯಾವುದೇ ಶಾಸಕರ ಹೆಸರುಗಳನ್ನು ಬಹಿರಂಗಪಡಿಸುವುದಿಲ್ಲ. ಇನ್ನು 24 ಗಂಟೆಗಳಲ್ಲೆ ದೋಸ್ತಿ ಸರ್ಕಾರ ಪತನವಾಗಲಿದೆ. ಅಲ್ಲದೇ ಮುಂಬರುವ ಒಂದು ವಾರದಲ್ಲೇ ಬಿಜೆಪಿ ರಾಜ್ಯದಲ್ಲಿ ಹೊಸ ಸರ್ಕಾರ ರಚಿಸುತ್ತದೆಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಮ್ಮ ಆತ್ಮೀಯ ಮಿತ್ರರು. ಅವರು ನಮ್ಮ ಪಕ್ಷಕ್ಕೆ ಬಂದರೆ ಸ್ವಾಗತವನ್ನು ಬಯಸುತ್ತೇವೆ. ಅಲ್ಲದೇ ಬಿಎಸ್‍ವೈ ಹಾಗೂ ರಮೇಶ್ ಇದೂವರೆಗೂ ಯಾವುದೇ ಗುಪ್ತ ಸಭೆ ನಡೆದಿಲ್ಲ. ಇಂದು ನಡೆಯಲಿರುವ ಸಭೆಯಲ್ಲಿ ಕೇವಲ ಬೆಳಗಾವಿ ಜಿಲ್ಲೆಯ ಲೋಕಸಭಾ ಅಭ್ಯರ್ಥಿ ಆಯ್ಕೆ ವಿಚಾರವನ್ನು ಮಾತ್ರ ಚರ್ಚಿಸಲಾಗುತ್ತದೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕುಂದಾ ನಗರಿಯಲ್ಲಿ ನಡೆಯುತ್ತಾ ಮಹಾ ಸ್ಕೆಚ್-ರಹಸ್ಯವಾಗಿ ನಡೆದಿದೆ ಅತಿದೊಡ್ಡ ಗೇಮ್ ಪ್ಲಾನ್!

    ಕುಂದಾ ನಗರಿಯಲ್ಲಿ ನಡೆಯುತ್ತಾ ಮಹಾ ಸ್ಕೆಚ್-ರಹಸ್ಯವಾಗಿ ನಡೆದಿದೆ ಅತಿದೊಡ್ಡ ಗೇಮ್ ಪ್ಲಾನ್!

    ಬೆಂಗಳೂರು: ಸಮ್ಮಿಶ್ರ ಸರ್ಕಾರ ರಚನೆಯಾಗಿ 7 ತಿಂಗಳು ಕಳೆದಿದೆ. ಸರ್ಕಾರ ರಚನೆಯಾದ ದಿನದಂದಲೂ ಆಪರೇಷನ್ ಕಮಲದ ಮಾತುಗಳು ಕೇಳಿ ಬರುತ್ತಿವೆ. ವಿಧಾನಸಭೆ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾ ಬಿಜೆಪಿ ಹೊರಹೊಮ್ಮಿದರೂ ಸರ್ಕಾರ ರಚಿಸುವಲ್ಲಿ ವಿಫಲವಾಗಿತ್ತು. ಇತ್ತ ಕಾಂಗ್ರೆಸ್-ಜೆಡಿಎಸ್ ಜೊತೆಯಾಗಿ ಮೈತ್ರಿ ಸರ್ಕಾರ ರಚನೆ ಮಾಡಿದ್ದರೂ ಎರಡು ಪಕ್ಷಗಳ ಆಂತರಿಕ ಬೇಗುದಿ ಮಾತ್ರ ಕಡಿಮೆಯಾದಂತೆ ಕಾಣುತ್ತಿಲ್ಲ. ಸಂಪುಟ ಪುನಾರಚನೆಯ ಬಳಿಕ ಕಾಂಗ್ರೆಸ್ ನಲ್ಲಿ ಅಸಮಾಧಾನದ ಹೊಗೆ ಹರಿದಾಡುತ್ತಿದ್ದು, ಸಚಿವ ಸ್ಥಾನ ಕಳೆದುಕೊಂಡ ರಮೇಶ್ ಜಾರಕಿಹೊಳಿ ಅವರನ್ನು ಬಿಜೆಪಿಯತ್ತ ಸೆಳೆಯಲು ಕಮಲ ನಾಯಕರು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

    ಸಚಿವ ಸ್ಥಾನದಿಂದ ಕೈ ಬಿಟ್ಟ ಹಿನ್ನೆಲೆಯಲ್ಲಿ ಸಹಜವಾಗಿ ಬೆಳಗಾವಿ ಜಿಲ್ಲೆಯ ಪ್ರಭಾವಿ ಮುಖಂಡ ರಮೇಶ್ ಜಾರಕಿಹೊಳಿ ಅಸಮಾಧಾನಗೊಂಡಿದ್ದಾರೆ. ರಮೇಶ್ ಜಾರಕಿಹೊಳಿ ಅವರನ್ನು ಸೆಳೆಯಲು ಬಿಜೆಪಿ ರಾಜ್ಯಾಧ್ಯಾಕ್ಷ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪ್ರಯತ್ನಿಸುತ್ತಿದ್ದಾರಂತೆ. ಬೆಂಗಳೂರಿನಲ್ಲಿರುವ ರಮೇಶ್ ಜಾರಕಿಹೊಳಿ ಅವರು ಇಂದು ಸಂಜೆ ಬೆಳಗಾವಿಗೆ ಪಯಣ ಬೆಳಸಲಿದ್ದಾರೆ. ಇತ್ತ ಯಡಿಯೂರಪ್ಪನವರು ನಾಳೆ(ಗುರುವಾರ) ಬೆಳಗ್ಗೆ ಬೆಳಗಾವಿಗೆ ಹೊರಡಲಿದ್ದಾರೆ.

    ಈ ಇಬ್ಬರು ನಾಯಕರು ಬೆಳಗಾವಿಯಲ್ಲಿ ರಹಸ್ಯ ಮಾತುಕತೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ರಮೇಶ್ ಜಾರಕಿಹೊಳಿ ಅವರು ಕಮಲ ಹಿಡಿಯಲು ಒಪ್ಪಿದ್ದಲ್ಲಿ ಬಿಜೆಪಿ ನಾಯಕರು ಅಖಾಡಕ್ಕೆ ಇಳಿಯಲು ಸಿದ್ಧವಾಗಲಿದ್ದಾರಂತೆ. ಒಟ್ಟಿನಲ್ಲಿ ಯಡಿಯೂರಪ್ಪ ಅವರ ಬೆಳಗಾವಿ ಭೇಟಿ ರಾಜಕೀಯ ಅಂಗಳದಲ್ಲಿ ಕುತೂಹಲ ಕೆರಳಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಿಶ್ಚಿತಾರ್ಥ ಮುಗಿಸಿ ಹಿಂದಿರುಗುತ್ತಿದ್ದ 9 ಮಂದಿ ದುರ್ಮರಣ

    ನಿಶ್ಚಿತಾರ್ಥ ಮುಗಿಸಿ ಹಿಂದಿರುಗುತ್ತಿದ್ದ 9 ಮಂದಿ ದುರ್ಮರಣ

    ಚಿಕ್ಕೋಡಿ/ಬೆಳಗಾವಿ: ಲಾರಿ ಮತ್ತು ಕ್ರೂಸರ್ ವಾಹನ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ 9 ಜನ ಮೃತಪಟ್ಟಿದ್ದು, ಆರು ಮಂದಿ ಗಂಭೀರ ಸ್ಥಿತಿಯಲ್ಲಿರುವ ಘಟನೆ ಜಿಲ್ಲೆಯ ಯವತಮಾಳ – ನಾಗಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

    ಮಂಗಳವಾರ ಮಧ್ಯರಾತ್ರಿ ಈ ಅಪಘಾತ ನಡೆದಿದ್ದು, ಕ್ರೂಸರ್ ವಾಹನದಲ್ಲಿ ಸುಮಾರು 15 ಮಂದಿ ಯವತಮಾಳಕ್ಕೆ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಹೋಗಿದ್ದಾರೆ. ಬಳಿಕ ಎಲ್ಲರು ನಿಶ್ಚಿತಾರ್ಥವನ್ನು ಮುಗಿಸಿ ಸ್ವಗ್ರಾಮಕ್ಕೆ ಮರಳುತ್ತಿದ್ದರು. ಈ ವೇಳೆ ಯವತಮಾಳ – ನಾಗಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಬಂದ ಲಾರಿ ಮತ್ತು ಕ್ರೂಸರ್ ವಾಹನ ಮುಖಾಮುಖಿ ಡಿಕ್ಕಿ ಹೊಡೆದಿದೆ.

    ಪರಿಣಾಮ ಸ್ಥಳದಲ್ಲಿ 9 ಜನರು ಮೃತಪಟ್ಟಿದ್ದು, 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಳಿಕ ಈ ಬಗ್ಗೆ ಮಾಹಿತಿ ತಿಳಿದ ಯವತಮಾಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಅಪಘಾತದಲ್ಲಿ ಗಾಯಗೊಂಡವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಕುರಿತು ಯವತಮಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದರ ಮಧ್ಯೆ ಜಟಾಪಟಿ! – ವಿಡಿಯೋ ನೋಡಿ

    ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದರ ಮಧ್ಯೆ ಜಟಾಪಟಿ! – ವಿಡಿಯೋ ನೋಡಿ

    ಬೆಳಗಾವಿ: ರೈಲ್ವೇ ಮೇಲ್ಸೇತುವೆ ಉದ್ಘಾಟನೆ ಆಮಂತ್ರಣ ಪಟ್ಟಿಯಲ್ಲಿ ಹೆಸರು ಕೈಬಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ಹಾಗೂ ಬೆಳಗಾವಿ ಸಂಸದ ಸುರೇಶ ಅಂಗಡಿ ಮಧ್ಯೆ ಜಟಾಪಟಿ ನಡೆದಿದೆ.

    ಜಿಲ್ಲೆಯ ಬೋಗಾರೆಸ್ ಕ್ರಾಸ್ ಬಳಿ ಇರುವ ರೈಲ್ವೇ ಮೇಲ್ಸೇತುವೆ ಉದ್ಘಾಟನೆ ಕಾರ್ಯಕ್ರಮವನ್ನು ಇಂದು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಆಮಂತ್ರಣ ಪಟ್ಟಿಯಲ್ಲಿ ನನ್ನ ಹೆಸರು ಕೈಬಿಟ್ಟಿದ್ದಾರೆ ಎಂದು ಪ್ರಭಾಕರ್ ಕೋರೆ ಖ್ಯಾತೆ ತೆಗೆದು ಸುರೇಶ್ ಅಂಗಡಿ ಅವರನ್ನು ಪ್ರಶ್ನಿಸಿದ್ದಾರೆ. ಆಗ ಇಬ್ಬರು ನಾಯಕರು ಕೂಡ ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಆದ್ರೆ ಇಲ್ಲಿ ಇವರಿಬ್ಬರ ಜಗಳ ನೋಡಿ ನೂತನ ಸಚಿವ ಸತೀಶ್ ಜಾರಕಿಹೊಳಿ ಮೂಕ ಪ್ರೇಕ್ಷಕರಂತೆ ಕುಳಿತಿದ್ದರು.

    ವೇದಿಕೆ ಮೇಲೆ ಬನ್ನಿ ಎಂದು ಸುರೇಶ್ ಅವರು ಕೋರೆಯವರನ್ನು ಕರೆಯಲು ಬಂದಾಗ ಈ ಜಗಳ ನಡೆದಿದೆ. ರೈಲ್ವೇ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ನನ್ನ ಹೆಸರು ಕೈಬಿಟ್ಟಿದ್ದಾರೆ ಎಂದು ಕೋರೆಯವರು ವೇದಿಕೆ ಏರಲು ನಿರಾಕರಿಸಿದ್ದಾರೆ. ಈ ವೇಳೆ ನಿಮಗೆ ಸ್ವಲ್ಪ ಕಾಮನ್ ಸೆನ್ಸ್ ಇದೆಯಾ? ನೀವೇನ್ ದಾದಾಗಿರಿ ಮಾಡ್ತಿದೀರಾ ಎಂದು ಸುರೇಶ್ ಅಂಗಡಿ ಅವರು ಕೋರೆ ಅವರನ್ನು ಪ್ರಶ್ನಿಸಿದ್ದಾರೆ. ಅದಕ್ಕೆ ಕೋರೆಯವರು ಎಲ್ಲವನ್ನೂ ಮೈಮೇಲೆ ತೆಗೆದುಕೊಂಡು ನೀನು ಕೆಲಸ ಮಾಡ್ತಿದೀಯಾ ಹೋಗು, ಇದೇನು ನಿನ್ನ ಕಾರ್ಯಕ್ರಮ ಅಲ್ಲ. ನನ್ನ ಬಳಿ ಜಗಳ ಮಾಡಬೇಡ ಎಂದು ತಿರುಗೇಟು ನೀಡಿದ್ದಾರೆ.

    ಇಬ್ಬರು ನಾಯಕರ ನಡುವಿನ ಬೀದಿರಂಪಾಟದಲ್ಲಿ ಸತೀಶ್ ಜಾರಕಿಹೊಳಿ ಅವರು ಮಾತ್ರ ಮೂಖ ಪ್ರೇಕ್ಷಕರಂತೆ ಜಗಳ ನೋಡುತ್ತ ಕುಳಿತಿದ್ದರು. ಪಕ್ಕದಲ್ಲೇ ಜಗಳಮಾಡಿಕೊಂಡ ಮುಖಂಡರನ್ನು ನೋಡಿ ಮುಗುಳ್ನಗೆ ಬೀರಿ ಸುಮ್ಮನಾದರು. ವೇದಿಕೆ ಏರಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರೂ ಕೊನೆಗೂ ಕೋರೆಯವರನ್ನು ಮನವೊಲಿಸಿ ವೇದಿಕೆಗೆ ಸುರೇಶ್ ಅಂಗಡಿ ಕರೆದುಕೊಂಡು ಹೋಗುವಲ್ಲಿ ಯಶಸ್ವಿಯಾದರು.

    https://www.youtube.com/watch?v=zTU719DE7qU

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv