Tag: belagavi

  • ಬೆಳಗಾವಿ ಬಿಮ್ಸ್‌ನಲ್ಲಿ ಉನ್ನತಾಧಿಕಾರಿಗಳ ಕಿತ್ತಾಟ – ಆಸ್ಪತ್ರೆ ಸಿಬ್ಬಂದಿಗೆ ಸಂಬಳ ಸಂಕಟ

    ಬೆಳಗಾವಿ ಬಿಮ್ಸ್‌ನಲ್ಲಿ ಉನ್ನತಾಧಿಕಾರಿಗಳ ಕಿತ್ತಾಟ – ಆಸ್ಪತ್ರೆ ಸಿಬ್ಬಂದಿಗೆ ಸಂಬಳ ಸಂಕಟ

    ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯ ಪ್ರತಿಷ್ಠಿತ ಹಾಗೂ ಅತೀ ದೊಡ್ಡ ಸರ್ಕಾರಿ ಆಸ್ಪತ್ರೆಯಲ್ಲಿ ಮೆಡಿಕಲ್ ಕಾಲೇಜು ಸೇರಿದಂತೆ ಎಲ್ಲಾ ರೀತಿಯ ಆರೋಗ್ಯ ಸೇವೆ ಅಲ್ಲಿ ಸಿಗುತ್ತೆ. ಆದ್ರೆ ಈ ಮೆಡಿಕಲ್ ಕಾಲೇಜು ಹಿರಿಯ ಅಧಿಕಾರಿ ಹಾಗೂ ಸರ್ಕಾರಿ ಆಸ್ಪತ್ರೆಯ ಹಿರಿಯ ಅಧಿಕಾರಿಗಳ ಮುಸುಕಿನ ಗುದ್ದಾಟಕ್ಕೆ ಇಂದು ಅಲ್ಲಿನ ಸಿಬ್ಬಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಬೆಳಗಾವಿಯ ಬಿಮ್ಸ್ ಆಸ್ಪತ್ರೆಯ ನಿರ್ದೇಶಕ ಕಳಸದ ಹಾಗೂ ಜಿಲ್ಲಾಸ್ಪತ್ರೆ ಸರ್ಜನ್ ಹುಸೇನ್ ಖಾಜಿಯ ಮಧ್ಯೆಯ ಹೊಂದಾಣಿಕೆ ಕೊರತೆ ಹಾಗೂ ವೈಯಕ್ತಿಕ ಪ್ರತಿಷ್ಠೆಯಿಂದಾಗಿ ಸರ್ಕಾರಿ ಸಿಬ್ಬಂದಿಗೆ ಸಂಬಳ ಸಿಕ್ತಿಲ್ವಂತೆ. ಬಿಮ್ಸ್‍ನಲ್ಲಿ 170ಕ್ಕೂ ಅಧಿಕ ಸಿಬ್ಬಂದಿ ಕೆಲಸ ಮಾಡ್ತಿದ್ದು, ಕಳೆದ 9 ತಿಂಗಳಿನಿಂದ ಪರಿಷ್ಕೃತ ಸಂಬಳ ಸಿಗ್ತಿಲ್ಲ. ಇದೇ ಕಾರಣಕ್ಕೆ ಇಂದು ಆಸ್ಪತ್ರೆಯ ಸಿಬ್ಬಂದಿ ಇಬ್ಬರು ಅಧಿಕಾರಿಗಳನ್ನು ಸೇರಿಸಿ ಕೊಠಡಿಯಲ್ಲಿ ತರಾಟೆ ತೆಗೆದುಕೊಂಡ್ರು.

    ಸಂಬಳಕ್ಕಾಗಿ ಅರ್ಜಿ ಕೊಡಿ ಎಂದು ಆಸ್ಪತ್ರೆಯ ಸರ್ಜನ್ ಹುಸೇನ್ ಸಾಬ್ ಖಾಜಿ ಸಿಬ್ಬಂದಿಗೆ ಹೇಳಿದ್ರು. ಇದ್ರಿಂದ ರೊಚ್ಚಿಗೆದ್ದ ಸಿಬ್ಬಂದಿ ನಾವು ಕಳೆದ ಹದಿನೈದು ದಿನಗಳಿಂದ ಹೇಳುತ್ತಿದ್ದೇವೆ ಅರ್ಜಿ ಕೊಡಲು ನಾವು ಬಂದಿಲ್ಲ ಅಂದ್ರು. ಇದಕ್ಕೆ ಸರ್ಜನ್ ಖಾಜಿ ಆಸ್ಪತ್ರೆಗೆ ಬೀಗ ಹಾಕಿ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ರು. ಇದರಿಂದ ಸಿಟ್ಟಿಗೆದ್ದ ಸಿಬ್ಬಂದಿ ಆಸ್ಪತ್ರೆಗೆ ಬೀಗ ಹಾಕಿ ಎನ್ನುತ್ತಿದ್ದಿರಾ..? ನಿಮಗೆ ಕಾಳಜಿ ಇಲ್ವಾ ಎಂದು ಗರಂ ಆದ್ರು ಎಂದು ಸರ್ಕಾರಿ ನೌಕರ ಸಂಘದ ಸದಸ್ಯ ಜಗದೀಶ್ ಹೇಳಿದ್ದಾರೆ.

    ಈ ಬಗ್ಗೆ ಬಿಮ್ಸ್ ನಿರ್ದೇಶಕರನ್ನ ಕೇಳಿದ್ರೆ ಪರಿಷ್ಕೃತ ಸಂಬಳ ನೀಡಲು ನಮ್ಮ ಬಳಿ ಹಣವಿರಲಿಲ್ಲ. ಈಗ ನಾಲ್ಕು ಕೋಟಿ ಬಂದಿದೆ ಅಂತೆ. ಇನ್ನೂ ನಾಲ್ಕು ಕೋಟಿ ಬರಬೇಕಿದೆ ಅದು ಬಂದ ಕೂಡಲೇ ಹದಿನೈದು ದಿನಗಳ ಒಳಗಾಗಿ ಸಂಬಳ ನೀಡ್ತೇವೆ ಎನ್ನುತ್ತಿದ್ದಾರೆ.

    ಆಸ್ಪತ್ರೆಯ ಸಿಬ್ಬಂದಿಯ ಕಥೆ ಹೀಗಾದ್ರೆ ರೋಗಿಗಳ ಕಥೆಯೇನು. ಇಬ್ಬರು ಮೇಲಾಧಿಕಾರಿಗಳ ಸಣ್ಣತನದಿಂದ ಕಾರ್ಮಿಕರ ಈ ಸ್ಥಿತಿ ಬಂದಿದ್ದು, ಸರ್ಕಾರ ಎಚ್ಚೆತ್ತುಕೊಂಡು ಇದಕ್ಕೊಂದು ಪರಿಹಾರ ನೀಡಬೇಕಿದೆ ಎಂದು ಸಿಬ್ಬಂದಿ ಆಗ್ರಹಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಂಕ್ರಾಂತಿಯ `ಕ್ರಾಂತಿ’ ಆದ್ರೆ ನೋಡೋಣ: ಸತೀಶ್ ಜಾರಕಿಹೊಳಿ

    ಸಂಕ್ರಾಂತಿಯ `ಕ್ರಾಂತಿ’ ಆದ್ರೆ ನೋಡೋಣ: ಸತೀಶ್ ಜಾರಕಿಹೊಳಿ

    ಬೆಳಗಾವಿ: ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಸಂಕ್ರಾಂತಿಯ ನಂತರ ಕ್ರಾಂತಿ ನಡೆಯುತ್ತದೆ ಎಂದು ಹೇಳಲಾಗುತ್ತಿದ್ದು, ಕ್ರಾಂತಿ ಆದರೆ ನೋಡೋಣ ಎಂದು ಅರಣ್ಯ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

    ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಸಂಕ್ರಾಂತಿ ಕ್ರಾಂತಿ ಆದರೆ ನಾವು ಇಲ್ಲೇ ಇರುತ್ತೇವೆ. ದೇಶ, ರಾಜ್ಯ ಹಾಗೂ ನಮ್ಮ ಸರ್ಕಾರ ಇಲ್ಲೇ ಇರುತ್ತದೆ. ಅಲ್ಲಿಯವರೆಗೂ ಕಾದು ನೋಡೋಣ. ಆದರೆ ಆಪರೇಷನ್ ಕಮಲದ ಬಗ್ಗೆ ನನಗೆ ಮಾಹಿತಿ ಇಲ್ಲ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಇದೆಲ್ಲ ಸಾಮಾನ್ಯ ಎಂದರು.

    ರಮೇಶ್ ಜಾರಕಿಹೊಳಿ ಅವರು ದೆಹಲಿಗೆ ಭೇಟಿ ನೀಡಿದ ಬಗ್ಗೆ ಮಾತನಾಡಿದ ಸತೀಶ್ ಜಾರಕಿಹೊಳಿ ಅವರು, ನನ್ನ ಸಂಪರ್ಕಕ್ಕೆ ಇದೂವರೆಗೂ ರಮೇಶ್ ಜಾರಕಿಹೊಳಿ ಅವರು ಸಿಕ್ಕಿಲ್ಲ. ಆದರೆ ಅವರು ಪಕ್ಷದಲ್ಲೇ ಇರುತ್ತಾರೆ. ದೆಹಲಿಯಿಂದ ಅವರು ವಾಪಸ್ ಆದ ಬಳಿಕ ಕುಳಿತು ಚರ್ಚೆ ಮಾಡುತ್ತೇವೆ. ಸಿದ್ದರಾಮಯ್ಯ ಅವರು ಕೂಡ ಸಂಪರ್ಕ ಮಾಡಲು ಯತ್ನಿಸಿದ್ದಾರೆ ಎಂದು ಹೇಳಿದ್ದಾರೆ. ಸದ್ಯ ರಮೇಶ್ ಅವರು ಯಾವಾಗ ಬರುತ್ತಾರೆ ನೋಡಿ ಸಂಪರ್ಕ ಮಾಡುತ್ತೇನೆ ಎಂದರು.

    ವಿರೋಧಿ ಪಕ್ಷಗಳ ಹೇಳಿಕೆಗಳ ಬಗ್ಗೆ ಮಾತನಾಡಿದ ಅವರು, ಸಮ್ಮಿಶ್ರ ರಚನೆಯಾದ ಸಮಯದಿಂದಲೂ ಅವರು ಇದನ್ನೇ ಹೇಳುತ್ತಿದ್ದಾರೆ. ಆದರೆ ಏನು ನಡೆದಿಲ್ಲ. ಇದು ಊಹಾಪೋಹ ಅಷ್ಟೇ, ನಮ್ಮ ಸರ್ಕಾರ ಸುಭದ್ರವಾಗಿದೆ. ಸಮ್ಮಿಶ್ರ ಸರ್ಕಾರ ರಚನೆ ವೇಳೆ ರಾಜಕೀಯ ತಂತ್ರಗಾರಿಕೆ ನಡೆಯುತ್ತದೆ ಆದರೆ ಅದು ಯಶಸ್ವಿಯಾಗುವುದಿಲ್ಲ ಎಂದು ಟೀಕಿಸಿದರು.

    ಇದೇ ವೇಳೆ ಅರಣ್ಯ ಇಲಾಖೆ ಬಗ್ಗೆ ಮಾಹಿತಿ ನೀಡಿದ ಸಚಿವರು, ನಮ್ಮ ಸರ್ಕಾರದ ಅವಧಿಯಲ್ಲಿ ಪ್ರವಾಸೋದ್ಯಮ, ಅರಣ್ಯ ಬೆಳೆಸುವುದಕ್ಕೆ ಹೆಚ್ಚು ಪ್ರೋತ್ಸಾಹ ನೀಡಲಾವುದು. ಆದರೆ ಅದಕ್ಕೆ ಕಾಲಾವಕಾಶ ಬೇಕು. ಕಾನೂನು ಬದ್ಧವಾಗಿ ಹೆಚ್ಚು ಹಕ್ಕು ಪತ್ರಗಳನ್ನ ನೀಡಿದ್ದು, ಈಡೀ ರಾಜ್ಯಾದ್ಯಂತ ಹಕ್ಕು ಪತ್ರ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗಂಡನ ಮನೆಗೆ ಬರಲೊಪ್ಪದ ಪತ್ನಿಯ ತುಟಿ, ಮೂಗು ಕತ್ತರಿಸಿದ..!

    ಗಂಡನ ಮನೆಗೆ ಬರಲೊಪ್ಪದ ಪತ್ನಿಯ ತುಟಿ, ಮೂಗು ಕತ್ತರಿಸಿದ..!

    ಬೆಳಗಾವಿ: ತವರು ಮನೆಯಿಂದ ಗಂಡನ ಮನೆಗೆ ಬರಲು ಒಪ್ಪದ ಪತ್ನಿಯ ತುಟಿ ಹಾಗೂ ಮೂಗನ್ನು ಕತ್ತರಿಸಿ ಪಾಪಿ ಪತಿ ವಿಕೃತಿ ಮೆರೆದ ಘಟನೆಯೊಂದು ಬೆಳಗಾವಿಯಲ್ಲಿ ನಡೆದಿದೆ.

    ಈ ಘಟನೆ ಜಿಲ್ಲೆಯ ಕಾಗವಾಡ ಪಟ್ಟಣದಲ್ಲಿ ಭಾನುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸುನಿತಾ ಸುರೇಶ್ ನಾಯಿಕ್(27) ಅವರು ಪತಿ ಸುರೇಶ್ ಪರಶುರಾಮ್ ನಾಯಿಕ್ ನಿಂದ ತೀವ್ರವಾಗಿ ಹಲ್ಲೆಗೊಳಗಾಗಿದ್ದಾರೆ.

    ಮಹಾರಾಷ್ಟ್ರದ ಶಿರೋಳ ತಾಲೂಕಿನ ಶೆಡಶ್ಯಾಳ ಗ್ರಾಮದ ನಿವಾಸಿ ಸುರೇಶ್ ಜೊತೆ ಸುನಿತಾಗೆ 2 ವರ್ಷದ ಹಿಂದೆ ವಿವಾಹವಾಗಿತ್ತು. ಆದ್ರೆ ಮದುವೆಯಾದಾಗಿನಿಂದ ಇಬ್ಬರ ನಡುವೆ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಜಗಳಗಳು ನಡೆಯುತ್ತಿತ್ತು. ಹೀಗಾಗಿ ಸುನಿತಾ ತನ್ನ ತವರು ಮನೆಗೆ ಹೋಗಿದ್ದರು.

    ಪತ್ನಿ ತವರು ಮನೆಗೆ ಹೋಗಿ ವಾಪಸ್ಸಾಗದಿದ್ದರಿಂದ ಆಕೆಯನ್ನು ಕರೆದುಕೊಂಡು ಬರಲೆಂದು ಸುರೇಶ್, ಭಾನುವಾರ ಪತ್ನಿ ಮನೆಗೆ ತೆರಳಿದ್ದ. ಈ ವೇಳೆ ಇಬ್ಬರ ನಡುವೆ ಮತ್ತೆ ಜಗಳವಾಗಿದೆ. ಈ ಜಗಳ ತಾರಕಕ್ಕೇರಿ ಸುರೇಶ್, ಸುನಿತಾ ಅವರ ತುಟಿ ಹಾಗೂ ಮೂಗನ್ನು ಕತ್ತರಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ಗಾಯಾಳು ಸುನಿತಾರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.


    ಈ ಸಂಬಂಧ ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೇಸಿಗೆ ಮುನ್ನವೇ ನೀರಿಗೆ ಹಾಹಾಕಾರ

    ಬೇಸಿಗೆ ಮುನ್ನವೇ ನೀರಿಗೆ ಹಾಹಾಕಾರ

    -50ಕ್ಕೂ ಹೆಚ್ಚು ಕುಟುಂಬಗಳಿಗೆ ಕುಡಿಯುವ ನೀರಿನ ಸೌಲಭ್ಯವೇ ಇಲ್ಲ

    ಬೆಳಗಾವಿ/ಚಿಕ್ಕೋಡಿ: ಕುಡಿಯುವ ನೀರಿಗಾಗಿ ಇಲ್ಲಿನ ಜನ 20 ವರ್ಷಗಳಿಂದ ಪರದಾಡುತ್ತಿದ್ದರೂ ಕೇಳೋರೇ ಇಲ್ಲ. ಬೇಸಿಗೆ ಬಂದರೆ ಸಾಕು ಕುಡಿಯುವ ನೀರಿನ ಸಮಸ್ಯೆ ದೇವರಿಗೆ ತಲುಪುತ್ತದೆ. ಸುಮಾರು 50ಕ್ಕೂ ಹೆಚ್ಚು ಕುಟುಂಬಗಳಿಗೆ ಕುಡಿಯುವ ನೀರಿನ ಸೌಲಭ್ಯವೇ ಇಲ್ಲ. ಜನ ಜಾನುವಾರುಗಳು ತತ್ತರಿಸಿಹೋಗಿವೆ. ಬೇಸಿಗೆಗೂ ಮುನ್ನವೇ ನೀರಿಗೆ ಹಾಹಾಕಾರ ಆರಂಭವಾಗಿದೆ.

    ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ವಡ್ರಾಳ ಗ್ರಾಮದ ಗ್ರಾಮಸ್ಥರು ಹನಿ ನೀರಿಗೂ ಕಷ್ಟಪಡುವಂತಾಗಿದೆ. ಈ ಗ್ರಾಮದ ಸುಮಾರು 50ಕ್ಕೂ ಹೆಚ್ಚು ಕುಟುಂಬಗಳು ಹಾಗೂ ಜಾನುವಾರುಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಇದರ ಬಗ್ಗೆ ಅಧಿಕಾರಿಗಳಾಗಲಿ, ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಆಗಲಿ ಅಥವಾ ಬೇರೆ ಜನಪ್ರತಿನಿಧಿಗಳಾಗಲಿ ಇವರ ಸಮಸ್ಯೆ ಕೇಳದೇ ಇರುವಷ್ಟು ಸಮಯ ಅವರಲ್ಲಿ ಇಲ್ಲ. ಚುನಾವಣೆ ಸಂದರ್ಭದಲ್ಲಿ ಇದನ್ನೆ ನೆಪವಾಗಿಟ್ಟುಕೊಂಡು ಮತ ಪಡೆಯುತ್ತಿರುವ ಅಧಿಕಾರಿಗಳಿಗೆ ಈ ಸಲ ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ಗ್ರಾಮಸ್ಥರು ಮುಂದಾಗಿದ್ದಾರೆ.

    ಇಲ್ಲಿನ ಜನ ಕುಡಿಯುವ ನೀರು ತರಲು ಸುಮಾರು ಒಂದು ಕಿಲೋ ಮೀಟರನಷ್ಟು ತೆರಳಿ ನೀರು ತರಬೇಕಾಗುತ್ತದೆ. ಕಲ್ಲು ಮುಳ್ಳು ಎನ್ನದೇ ಕುಡಿಯುವ ನೀರಿಗಾಗಿ ಒಂದು ಕಿಲೋಮೀಟರ್ನಷ್ಟು ದೂರ ತೆರಳಿ ಆಳವಾದ ಬಾವಿಯೊಳಗೆ ಇಳಿದು ಕುಡಿಯುವ ನೀರು ತರುತ್ತಾರೆ. ಮದ್ಯಾಹ್ನದವರೆಗೆ ನೀರು ತರಲು ಸಮಯ ಕಳೆಯುತ್ತಾರೆ. ನಂತರ ಉಪಜೀವನಕ್ಕೆ ಕೂಲಿನಾಲಿ ಮಾಡಲು ಸಮಯ ಸಿಗುವುದಿಲ್ಲ. ಇದರಿಂದ ಹೊಟ್ಟೆ ಪಾಡಿಗೂ ಪರದಾಡುತ್ತಿದ್ದಾರೆ.

    50 ಕುಟುಂಬಗಳಿಂದಲೇ ಇಲ್ಲಿ ಕುಡಿಯುವ ನೀರಿನ ಪೈಪ್‍ಲೈನ್ ಅಳವಡಿಕೆಯಾಗಿದೆ. ಹೀಗಾಗಿ ನಮಗೂ ನೀರು ಕೊಡಿ ಎಂದು ಮನವಿ ಮಾಡಿದರೂ ಯಾರೂ ಕ್ರಮ ಕೈಗೊಂಡಿಲ್ಲವಂತೆ. ಗ್ರಾಮದ ಹತ್ತಿರವೇ ನದಿ ನೀರು ಸರಬರಾಜು ಮಾಡುವ ಪೈಪ್ ಹೋಗಿದ್ದರು ಬಳಕೆ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ನೀರು ಬಳಕೆ ಮಾಡಿದರೆ ಅವರ ವಿರುದ್ಧ ಕೇಸ್ ಹಾಕಲಾಗುವುದು ಎಂದು ಗ್ರಾಮ ಪಂಚಾಯಿತಿಯವರು ಧಮಕಿ ಹಾಕುತ್ತಿದ್ದಾರಂತೆ. ನಮಗೆ ಹೊಲಗದ್ದೆಗಳಿಗೆ ನೀರು ಅವಶ್ಯಕತೆ ಇಲ್ಲ. ಮೊದಲು ಕುಡಿಯುವ ನೀರು ಕೊಡಿ ಜಮ್ಮ ಜೀವ ಉಳಿಸಿ ಎಂದು ಜನರು ಮನವಿ ಮಾಡಿಕೊಂಡಿದ್ದಾರೆ.

    ನೀರು ಕೊಡಲು ಸಂಬಂಧಪಟ್ಟವರು ಗಮನಹರಿಸುತ್ತಿಲ್ಲವೆಂದು ಮುಂಬರುವ ಲೋಕಸಭೆ ಚುನಾವಣೆಗೆ ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ. ಯಾರು ನೀರು ಕೊಡುತ್ತಾರೋ ಅವರಿಗೆ ಮಾತ್ರ ಮತ ಇಲ್ಲವಾದಲ್ಲಿ ನಾವು ಮತ ಹಾಕುವುದಿಲ್ಲ ಎಂದು ಪಣ ತೊಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಿಮ್ಮನ್ನು ಜಾಡಿಸಿ ಒದಿಯಬೇಕು – ಮಾಧ್ಯಮಗಳಿಗೆ ಜಾರಕಿಹೊಳಿ ಅವಾಜ್

    ನಿಮ್ಮನ್ನು ಜಾಡಿಸಿ ಒದಿಯಬೇಕು – ಮಾಧ್ಯಮಗಳಿಗೆ ಜಾರಕಿಹೊಳಿ ಅವಾಜ್

    – ವರದಿ ಪ್ರಸಾರವಾಗುತ್ತಿದ್ದಂತೆ ಗೋಕಾಕ್‍ನಲ್ಲಿ ಕೇಬಲ್ ಕಟ್

    ಬೆಳಗಾವಿ: ಅಧಿಕಾರದಿಂದ ಹತಾಶರಾದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಒದಿಯಬೇಕು ನಿಮ್ಮನ್ನು ಜಾಡಿಸಿ ಒದಿಯಬೇಕು ಎಂದು ಸುದ್ದಿ ಮಾಡಲು ಹೋದ ಮಾಧ್ಯಮಗಳ ಮೇಲೆ ಕಿಡಿಕಾರಿದ್ದಾರೆ.

    ರಮೇಶ್ ಜಾರಕಿಹೊಳಿ ಬೆಳಗಾವಿ ಜಿಲ್ಲೆಯ ಗೋಕಾಕ್ ಪಟ್ಟಣದ ನಿವಾಸದಲ್ಲಿ ಇಂದು ಕಾಣಿಸಿಕೊಂಡಿದ್ದಾರೆ. ಗೋಕಾಕ್ ಮಿಲ್‍ನಲ್ಲಿರುವ ಬ್ಯಾಡ್ಮಿಂಟನ್ ಕೋರ್ಟ್ ನಲ್ಲಿ ಅರ್ಧಗಂಟೆ ಜಾರಕಿಹೊಳಿ ಆಟವಾಡಿದ್ದಾರೆ.

    ಜಾರಕಿಹೊಳಿ ಬಂದಿರುವ ವಿಚಾರ ತಿಳಿದ ಮಾಧ್ಯಮದ ವ್ಯಕ್ತಿಗಳು ಬ್ಯಾಡ್ಮಿಂಟನ್ ಕೋರ್ಟ್‍ಗೆ ಆಗಮಿಸಿದ್ದರು. ಭದ್ರತಾ ಸಿಬ್ಬಂದಿಗೆ ರಮೇಶ್ ಜಾರಕಿಹೊಳಿ ಮಾಧ್ಯಮಗಳ ವ್ಯಕ್ತಿಗಳನ್ನು ಒಳಗಡೆ ಬಿಡಬೇಡಿ ಎಂದು ಸೂಚಿಸಿದ ಹಿನ್ನೆಲೆಯಲ್ಲಿ ಭದ್ರತಾ ಸಿಬ್ಬಂದಿ ಗೇಟ್ ನಲ್ಲೇ ಮಾಧ್ಯಮಗಳನ್ನು ತಡೆದರು.

    ಬ್ಯಾಡ್ಮಿಂಟನ್ ಆಟವಾಡಿ ನಿವಾಸಕ್ಕೆ ಬಂದಾಗ ಅಲ್ಲೇ ಇದ್ದ ಮಾಧ್ಯಮಗಳು ಪ್ರತಿಕ್ರಿಯೆ ಪಡೆಯಲು ಮುಂದಾಗುತ್ತಿದ್ದಾಗ, ಒದಿಯಬೇಕು ನಿಮ್ಮನ್ನು ಜಾಡಿಸಿ ಒದಿಯಬೇಕು ಅತಿಯಾಯ್ತು ನಿಮ್ಮದು ಹುಚ್ಚರಿದೀರಿ ಎಂದು ರಮೇಶ್ ಅವಾಜ್ ಹಾಕಿದ್ದಾರೆ.

    ರಮೇಶ್ ಜಾರಕಿಹೊಳಿ ಪತ್ರಕರ್ತರಿಗೆ ಅವಾಜ್ ಹಾಕಿದ ವರದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಬೆಳಗ್ಗೆ ಗೋಕಾಕ್‍ನಲ್ಲಿ ಕೇಬಲ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ.

    ಕಳೆದ ಎಂಟು ದಿನಗಳಿಂದ ಅಜ್ಞಾತವಾಗಿದ್ದ ರಮೇಶ್ ಬುಧವಾರ ಪ್ರತ್ಯಕ್ಷರಾಗಿದ್ದಾರೆ. ಬುಧವಾರ ತಡರಾತ್ರಿ ರಮೇಶ್ ಜಾರಕಿಹೊಳಿ ಮನೆಗೆ ಬಂದಿದ್ದು, ಹತ್ತನೇ ದಿನಕ್ಕೆ ಅವರು ಎಲ್ಲರ ಮುಂದೆ ಕಾಣಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶ್ರೀಶೈಲ ಪೀಠದ ಸ್ವಾಮೀಜಿಗಳಿಂದ ಮೋದಿಗೆ ಅಭಿನಂದನೆ

    ಶ್ರೀಶೈಲ ಪೀಠದ ಸ್ವಾಮೀಜಿಗಳಿಂದ ಮೋದಿಗೆ ಅಭಿನಂದನೆ

    ಚಿಕ್ಕೋಡಿ(ಬೆಳಗಾವಿ): ಪ್ರಸಿದ್ಧ ಧಾರ್ಮಿಕ ಪಂಚಪೀಠಗಳಲ್ಲಿ ಒಂದಾದ ಶ್ರೀಶೈಲ ಮಲ್ಲಿಕಾರ್ಜುನ ಕ್ಷೇತ್ರಕ್ಕೆ ಬರಲು ಪ್ರಧಾನಿ ಮೋದಿಯವರು ರೈಲ್ವೆ ಕೊಡುಗೆ ನೀಡಿದ್ದಕ್ಕೆ ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಅಭಿನಂದಿಸಿದರು.

    ಹುಕ್ಕೇರಿ ಪಟ್ಟಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ದಕ್ಷಿಣ ಮಧ್ಯ ರೈಲ್ವೆ ವಿಭಾಗದ ಮ್ಯಾನೇಜರ್ ವಿನೋದ್ ಕುಮಾರ್ ಯಾದವ್ ಅವರು ಸಮೀಕ್ಷೆ ನಡೆಸಿ ಹೈದರಾಬಾದ್-ಜಡಚರ್ಲಾ-ಅಚ್ಛಂಪೇಠ ಮಾರ್ಗವಾಗಿ ಶ್ರೀಶೈಲಂ ತಲುಪುವ ರೈಲು ಮಾರ್ಗಕ್ಕೆ ಹಸಿರು ನಿಶಾನೆ ಸಿಕ್ಕಿದೆ. 1, 307 ಕೋಟಿ ವೆಚ್ಚದಲ್ಲಿ 171 ಕಿ.ಮೀ ಉದ್ದದ ರೈಲು ಮಾರ್ಗ ನಿರ್ಮಾಣಕ್ಕೆ ಮಂಜೂರಾತಿ ಮಾಡಿ ಶಂಕುಸ್ಥಾಪನೆಯನ್ನೂ ಸಹ ನೆರವೇರಿಸಲಾಗಿದೆ ಅಂತ ಹೇಳಿದ್ರು.

    ಈ ಯೋಜನೆಯಿಂದ ಶ್ರೀಶೈಲಕ್ಕೆ ಬರುವ ಕರ್ನಾಟಕ, ತೆಲಂಗಾಣ ಆಂಧ್ರ ಮತ್ತು ಮಹಾರಾಷ್ಟ್ರದ ಲಕ್ಷಾಂತರ ಜನರಿಗೆ ಅನುಕೂಲವಾಗಲಿದೆ. ಈ ಮಹತ್ವದ ಯೋಜನೆ ಜಾರಿಗೊಳಿಸಲು ಕಾರಣಿಕರ್ತರಾದ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆಯನ್ನ ಸ್ವಾಮೀಜಿ ಸಲ್ಲಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತಡರಾತ್ರಿ ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿ ಪ್ರತ್ಯಕ್ಷ – ಬೆಳಗ್ಗೆ 8 ಗಂಟೆಗೆ ಮತ್ತೆ ಅಜ್ಞಾತವಾಸ

    ತಡರಾತ್ರಿ ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿ ಪ್ರತ್ಯಕ್ಷ – ಬೆಳಗ್ಗೆ 8 ಗಂಟೆಗೆ ಮತ್ತೆ ಅಜ್ಞಾತವಾಸ

    – ರಮೇಶ್ ರಾಜೀನಾಮೆ ಕೊಟ್ರೆ ನಾವೇನು ಮಾಡೋಕಾಗುತ್ತೆ: ಸಚಿವ ಸತೀಶ್ ಜಾರಕಿಹೊಳಿ

    ಬೆಳಗಾವಿ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಳಿಕ ಪಕ್ಷದ ಮುಖಂಡರು ವಿರುದ್ಧ ಅಸಮಾಧಾನಗೊಂಡಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಡರಾತ್ರಿ ತಮ್ಮ ಗೋಕಾಕ್ ನಿವಾಸದಲ್ಲಿ ಪ್ರತ್ಯಕ್ಷರಾಗಿದ್ದಾರೆ.

    ತಡರಾತ್ರಿ ಮನೆಗೆ ಆಗಮಿಸಿದ್ದ ರಮೇಶ್ ಜಾರಕಿಹೊಳಿ ಅವರು ಬೆಳಗ್ಗೆ 8 ಗಂಟೆ ಬಳಿಕ ಮತ್ತೆ ಮನೆಯಿಂದ ಹೊರ ನಡೆದಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಈ ವೇಳೆ ಬೆಳಗಾವಿಗೆ ತೆರಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿತ್ತು.

    ಕಳೆದ 8 ದಿನಗಳಿಂದ ಪಕ್ಷದ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಫೋನ್ ಸ್ವಿಚ್ ಆಫ್ ಮಾಡಿದ್ದ ರಮೇಶ್ ಜಾರಕಿಹೊಳಿ ಅವರು, 8 ದಿನಗಳ ಬಳಿಕ ಮನೆಗೆ ಆಗಮಿಸಿದ್ದರು. ಬೆಳಗಾವಿಯ ಗೋಕಾಕ್ ನ ನಿವಾಸಕ್ಕೆ ಬಂದಿದ್ದ ಅವರು ಬೆಳಗಾವಿಗೂ ಬಾರದೇ ಮತ್ತೆ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ.

    ಇತ್ತ ರಮೇಶ್ ಜಾರಕಿಹೊಳಿ ಅವರ ರಾಜೀನಾಮೆ ಕುರಿತು ಪ್ರತಿಕ್ರಿಯೆ ನೀಡಿರುವ ಸಹೋದರ, ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಅವರು, ಅವರು ರಾಜೀನಾಮೆ ಕೊಡುವ ಪ್ರಶ್ನೆ ಇಲ್ಲವೇ ಇಲ್ಲ. ನಮ್ಮ ಪಕ್ಷದಲ್ಲೇ ರಮೇಶ್ ಮುಂದುವರಿಯುತ್ತಾರೆ, ನಮಗೆ ಅವರು ಸಿಕ್ಕಿಲ್ಲ. ರಮೇಶ್ ಅವರು ಇಂದು ಸಿಗುತ್ತಾರೆ ಅವರೊಂದಿಗೆ ಮಾತನಾಡುತ್ತೇನೆ. ಪಕ್ಷದ ಹೈಕಮಾಂಡ್ ಕೂಡ ರಮೇಶ್ ಜಾರಕಿಹೊಳಿ ಅವರನ್ನ ಸಂಪರ್ಕ ಮಾಡಲು ಪ್ರಯತ್ನಿಸುತ್ತಿದೆ ಎಂದು ಸ್ಪಷ್ಟನೆ ನೀಡಿದರು.

    ನಾವೇನು ಮಾಡೋಕೆ ಬರುತ್ತೆ:
    ಇದೇ ವೇಳೆ ಗೋಕಾಕ್ ನಗರಸಭೆ ಸದಸ್ಯರು ರಾಜೀನಾಮೆ ವಿಚಾರ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಯಾವುದೇ ಸದಸ್ಯರು ಕೂಡ ರಾಜೀನಾಮೆ ಕೊಡುವ ಪರಿಸ್ಥಿತಿ ಇನ್ನೂ ಬಂದಿಲ್ಲ. ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುವ ಅವಶ್ಯಕತೆ ಇದೆ. ಒಂದು ವೇಳೆ ಅವರು ರಾಜೀನಾಮೆ ಕೊಟ್ಟರೆ ನಾವೇನು ಮಾಡೋಕೆ ಬರುತ್ತೆ. ಅವರು ನಮ್ಮ ಪಕ್ಷದ ಪರವಾಗಿ ಇದ್ದಾರೆ. ರಮೇಶ್ ರಾಜೀನಾಮೆ ಕೊಟ್ಟರೆ ಅದಕ್ಕೂ ನಮಗೂ ಸಂಬಂಧವಿಲ್ಲ. ನಾವು ಪಕ್ಷದಲ್ಲೇ ಮುಂದುವರಿಯುತ್ತೇವೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರೋಗಿಗಳ ಸಂಬಂಧಿಗಳೇ ತಳ್ಳಬೇಕು – ಅಥಣಿ ಆಸ್ಪತ್ರೆಯಲ್ಲಿದೆ ಡಕೋಟಾ ಅಂಬುಲೆನ್ಸ್!

    ರೋಗಿಗಳ ಸಂಬಂಧಿಗಳೇ ತಳ್ಳಬೇಕು – ಅಥಣಿ ಆಸ್ಪತ್ರೆಯಲ್ಲಿದೆ ಡಕೋಟಾ ಅಂಬುಲೆನ್ಸ್!

    ಬೆಳಗಾವಿ(ಚಿಕ್ಕೋಡಿ): ಜಿಲ್ಲೆಯ ಅಥಣಿ ತಾಲೂಕು ಆಸ್ಪತ್ರೆಯಲ್ಲಿ ಡಕೋಟಾ ಅಂಬುಲೆನ್ಸ್ ಇದ್ದು, ಪ್ರತಿದಿನವೂ ತಳ್ಳಿ ಚಾಲನೆ ಮಾಡಬೇಕಾದ ದುಸ್ಥಿತಿಗೆ ತಲುಪಿದೆ.

    ಹೌದು, ಅಥಣಿ ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಪ್ರತಿ ನಿತ್ಯ 108 ಅಂಬುಲೆನ್ಸ್ ಗಳನ್ನು ತಳ್ಳುವ ಮೂಲಕವೇ ಚಾಲನೆ ಮಾಡುತ್ತಿದ್ದಾರೆ. ಅಂಬುಲೆನ್ಸ್ ಗಳ ವ್ಯವಸ್ಥೆ ಸರಿಯಾಗಿಲ್ಲ. ಆದರೂ ಕೂಡ ಆಸ್ಪತ್ರೆಯವರು ಈ ಕುರಿತು ಕ್ರಮ ತೆಗೆದುಕೊಳ್ಳದೇ, ಅಂಬುಲೆನ್ಸ್ ಗಳನ್ನು ರಿಪೇರಿಯೂ ಮಾಡಿಸದೇ ಹಾಗೆಯೇ ಬಳಕೆ ಮಾಡುತ್ತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಈ ಆಸ್ಪತ್ರೆಗೆ ಬರುವವರು ಅವ್ಯವಸ್ಥೆಯಲ್ಲಿರುವ ಅಂಬುಲೆನ್ಸ್ ನೋಡಿ ದಂಗಾಗಿದ್ದಾರೆ. ತುರ್ತು ಪರಿಸ್ಥಿತಿಯಲ್ಲಿ ಅಂಬುಲೆನ್ಸ್ ಸ್ಟಾರ್ಟ್ ಆಗದೇ ಇದ್ದಾಗ ರೋಗಿಗಳು ಹೈರಾಣಾಗುತ್ತಿದ್ದಾರೆ. ಅಷ್ಟೇ ಅಲ್ಲದೇ ರೋಗಿಯನ್ನು ರವಾನಿಸುವ ವೇಳೆ ಅವರ ಸಂಬಂಧಿಗಳೇ ಅಂಬುಲೆನ್ಸ್ ತಳ್ಳಬೇಕಾದ ಪರಿಸ್ಥಿತಿ ಈಗ ನಿರ್ಮಾಣವಾಗಿದೆ.

    ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಧಾನಿ ಮೋದಿ ವಿರುದ್ಧ ಪತ್ರ ಚಳುವಳಿ – ಪ್ರಮೋದ್ ಮುತಾಲಿಕ್ ಎಚ್ಚರಿಕೆ

    ಪ್ರಧಾನಿ ಮೋದಿ ವಿರುದ್ಧ ಪತ್ರ ಚಳುವಳಿ – ಪ್ರಮೋದ್ ಮುತಾಲಿಕ್ ಎಚ್ಚರಿಕೆ

    ಬೆಳಗಾವಿ: ರಾಮ ಮಂದಿರ ನಿರ್ಮಾಣ ಸುಗ್ರೀವಾಜ್ಞೆ ಕುರಿತು ಪ್ರಧಾನಿ ಮೋದಿ ಅವರು ನೀಡಿರುವ ಹೇಳಿಕೆಯನ್ನು ವಿರೋಧಿಸುವುದಾಗಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದು, ಚುನಾವಣೆ ದಿನಾಂಕ ಘೋಷನೆಗೂ ಮುನ್ನ ಸುಗ್ರೀವಾಜ್ಞೆ ಜಾರಿ ಮಾಡದಿದ್ದರೆ ಪತ್ರ ಚಳುವಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

    ಹುಕ್ಕೇರಿ ಪಟ್ಟಣದಲ್ಲಿ ಪ್ರಧಾನಿ ಮೋದಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಮುತಾಲಿಕ್, ಅಯೋಧ್ಯೆ ರಾಮಮಂದಿರಕ್ಕೆ ಸುಗ್ರೀವಾಜ್ಞೆ ಇಲ್ಲ ಎಂಬ ಪ್ರಧಾನಿಗಳ ಹೇಳಿಕೆಯನ್ನು ನಾನು ಒಪ್ಪೋದಿಲ್ಲ. ಶ್ರೀ ರಾಮ ಸೇನೆ ಈ ಹೇಳಿಕೆಯನ್ನ ವಿರೋಧಿಸುತ್ತದೆ. ಶ್ರೀ ರಾಮ ಜನ್ಮ ಸ್ಥಳದಲ್ಲಿ ಮೋದಿ ಮಂದಿರ ನಿರ್ಮಾಣ ಮಾಡುತ್ತಾರೆ ಎನ್ನುವುದು ಹಿಂದೂಗಳ ಇಚ್ಛೆ ಆಗಿತ್ತು. ಆದರೆ ರಾಮಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಮಾಡುವುದಿಲ್ಲ ಎನ್ನುವ ಮೋದಿ ಅವರ ಹೇಳಿಕೆ ಸರಿಯಲ್ಲ ಎಂದರು.

    ಸುಪ್ರೀಂ ಕೋರ್ಟ್ ಈ ಬಗ್ಗೆ ಹೇಳುವುದಾದರೆ ಆಂದೋಲನ ಏಕೆ ಮಾಡಬೇಕಿತ್ತು. ರಾಮಮಂದಿರ ಆಂದೋಲನದಿಂದ ಬಿಜೆಪಿ ಪಕ್ಷ ಹಾಗೂ ಮೋದಿ ಅವರು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದ್ದಾರೆ ಎಂಬುವುದನ್ನು ಮರೆತಂತೆ ಇದೆ. ಅಧಿಕಾರಕ್ಕೆ ಬಂದ ಬಳಿಕ ರಾಮ ಮಂದಿರ ನಿರ್ಮಾಣ ಮಾಡುವ ವಿಶ್ವಾಸ ಇತ್ತು. ಆದರೆ ಅವರ ಈ ನಿರ್ಧಾರ ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ ಎಂದು ತಿಳಿಸಿದರು.

    2019ರ ಲೋಕಸಭಾ ಚುನಾವಣೆಯಲ್ಲಿ ಈ ಹೇಳಿಕೆ ಬಿಜೆಪಿ ಪಕ್ಷಕ್ಕೆ ಬಹಳ ಹೊಡೆತ ಬೀಳಲಿದೆ ಎಂದು ಭವಿಷ್ಯ ನುಡಿದ ಮುತಾಲಿಕ್, ರಾಮ ಮಂದಿರ ನಿರ್ಮಾಣ ವಿಳಂಬಕ್ಕೆ ಕಾಂಗ್ರೆಸ್ ಪಕ್ಷದ ವಕೀಲರು ಕಾರಣ ಎಂಬ ಸಬೂಬು ಹೇಳುವುದು ಬೇಡ. ಬೇರೆ ಅವರ ಮೇಲೆ ಆಪಾದನೆ ಮಾಡಿ ಮೋದಿ ಅವರು ತಪ್ಪಿಸಿಕೊಳ್ಳಬಾರದು. ಲೋಕಸಭಾ ಚುನಾವಣೆಗೆ ದಿನಾಂಕ ಸೂಚಿಸಿವ ಮುನ್ನ ಕೇಂದ್ರ ಬಿಜೆಪಿ ಸರ್ಕಾರ ಸುಗ್ರೀವಾಜ್ಞೆ ತಂದು ಮಂದಿರ ನಿರ್ಮಾಣ ಮಾಡುವಂತೆ ಆಗ್ರಹ ಮಾಡುತ್ತೇವೆ. ಇಲ್ಲವಾದಲ್ಲಿ ಮೋದಿ ಅವರ ಹೇಳಿಕೆ ವಿರುದ್ಧ ರಾಜ್ಯಾದ್ಯಂತ ಪತ್ರ ಚಳುವಳಿ ಆರಂಭಿಸುತ್ತೇವೆ. ಒಂದು ಲಕ್ಷಕ್ಕೂ ಹೆಚ್ಚು ಪತ್ರಗಳನ್ನು ಪ್ರಧಾನಿ ಮೋದಿ ಅವರ ಮನೆ ಬಾಗಿಲಿಗೆ ಬೀಳುವಂತೆ ಚಳುವಳಿ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೊಸ ವರ್ಷಕ್ಕೆ ಯುವಕರಿಂದ ಕ್ಯಾಂಡಲ್ ಮಾರ್ಚ್

    ಹೊಸ ವರ್ಷಕ್ಕೆ ಯುವಕರಿಂದ ಕ್ಯಾಂಡಲ್ ಮಾರ್ಚ್

    ಬೆಳಗಾವಿ (ಚಿಕ್ಕೋಡಿ): ಅಥಣಿ ಪಟ್ಟಣದ ಜನತೆ ಕ್ಯಾಂಡಲ್ ಮಾರ್ಚ್ ಮಾಡುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ.

    ಹೊಸ ವರ್ಷ ಬಂದ್ರೆ ಸಾಕು ಪಾರ್ಟಿ ಮಾಡ್ಕೊಂಡು, ಮೋಜು ಮಸ್ತಿ ಅಂತ ಆಚರಿಸುವ ಯುವಕರೇ ಹೆಚ್ಚು. ಆದ್ರೆ ಅಥಣಿ ಪಟ್ಟಣದಲ್ಲಿ ಮಾತ್ರ ಯುವಕರು ಶಾಂತಿಯುತವಾಗಿ ಮೇಣದ ಬತ್ತಿ ಬೆಳಗಿಸಿ, ಮೆರವಣಿಗೆ ಹೋಗುವ ಮೂಲಕ ವಿಶಿಷ್ಠವಾಗಿ ಹೊಸ ವರ್ಷವನ್ನು ಆಚರಿಸಿದ್ದಾರೆ. ಹಾಗೆಯೇ ಈ ಅರ್ಥಪೂರ್ಣ ಆಚರಣೆಗೆ ಸ್ಥಳೀಯರು ಕೂಡ ಸಾಥ್ ನೀಡಿದ್ದು, ನಗರದ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ 20ಕ್ಕೂ ಹೆಚ್ಚು ಮಂದಿ ಕ್ಯಾಂಡಲ್ ಮಾರ್ಚ್ ನಡೆಸುವ ಮೂಲಕ ಮೋಜು ಮಸ್ತಿಯಿಂದ ಹೊರಗುಳಿದು ಶಾಂತಿಯುತವಾಗಿ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ.

    2018ರ ಸಾಲಿನಲ್ಲಿ ಕರ್ನಾಟಕದಲ್ಲಾದ ದುರಂತಗಳಿಂದ ಸಾವನ್ನಪ್ಪಿದ ಜನರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮೇಣದ ಬತ್ತಿ ಹೊತ್ತಿಸಿ ಪ್ರಾರ್ಥಿಸಿದರು. ಕೊಡಗಿನಲ್ಲಾದ ಪ್ರವಾಹದಲ್ಲಿ ಮಡಿದವರಿಗೆ ಮತ್ತು ಸುಳ್ವಾಡಿ ದುರಂತ ಹಾಗೂ ಮಂಡ್ಯ ಬಸ್ ಅಪಘಾತದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥಿಸುವ ಮೂಲಕ ಹೊಸ ವರ್ಷದ ಆಚರಣೆಯನ್ನು ಅರ್ಥಪೂರ್ಣವಾಗಿ ಯುವಕರು ಆಚರಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv