Tag: belagavi

  • ಸಿದ್ದಗಂಗಾ ಶ್ರೀಗಳಿಗೆ ಕುಂಚ ನಮನ

    ಸಿದ್ದಗಂಗಾ ಶ್ರೀಗಳಿಗೆ ಕುಂಚ ನಮನ

    ಮೈಸೂರು/ಬೆಳಗಾವಿ: ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳಿಗೆ ನಾಡಿನ ಹಲವು ಕಲಾವಿದರು ಶ್ರೀಗಳ ಭಾವಚಿತ್ರ ಬಿಡಿಸುವ ಮೂಲಕ ನಮನ ಸಲ್ಲಿಸಿದ್ದಾರೆ.

    ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಕಲಾವಿದ ಶ್ರೀಶೈಲ್ ಗಸ್ತಿ ಸಾರ್ವಜನಿಕವಾಗಿ ಬಾಯಲ್ಲಿ ಕುಂಚ ಹಿಡಿದು ಸಿದ್ದಗಂಗಾ ಶ್ರೀಗಳ ಭಾವಚಿತ್ರ ರಚನೆ ಮಾಡಿ ಶಿವೈಕ್ಯರಾದ, ಶಿವಕುಮಾರ ಶ್ರೀಗಳಿಗೆ ನಮನ ಸಲ್ಲಿಸಿದರು. ಇದೇ ವೇಳೆ ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿ ಸಹಿ ಸಂಗ್ರಹ ಅಭಿಯಾನ ನಡೆಸಿದರು. ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿಗಳಿಗೆ ಭಾರತ ರತ್ನ ನೀಡಿ ಪ್ರಶಸ್ತಿಯ ಗೌರವ ಹೆಚ್ಚಿಸಬೇಕೆಂಬ ಆಗ್ರಹ ಸಾರ್ವಜನಿಕರಿಂದ ಕೇಳಿ ಬಂತು.

    ಇತ್ತ ಮೈಸೂರಿನಲ್ಲೂ ಹಲವು ಕಲಾವಿದರು ನಗರದ ಕೆ.ಆರ್ ವೃತ್ತದಲ್ಲಿ ಶ್ರೀಗಳ ಚಿತ್ರ ಬರೆದು ಗೌರವ ನಮನ ಸಲ್ಲಿಸಿದರು. ಮೈಸೂರು ಕುಂಚ ಕಲಾವಿದರ ಸಂಘದಿಂದ ಶ್ರೀಗಳಿಗೆ ನಮನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವೇಳೆ ಶ್ರೀಗಳ ಚಿತ್ರಗಳ ಮೇಲೆ ದಾಸೋಹ ರತ್ನ ತಿಲಕ, ವಿದ್ಯಾ ರತ್ನ ತಿಲಕ ಎಂದು ಬರೆದು ಕಲಾವಿದರು ಗೌರವ ಸಲ್ಲಿಸಿದರು.

    ಉಜಿರೆ ಕಲಾವಿದ ವಿಲಾಸ್ ನಾಯ್ಕ್ ಶ್ರೀಗಳ ಭಾವಚಿತ್ರ ಬಿಡಿಸುವ ಮೂಲಕ ಗೌರವ ಸಲ್ಲಿಸಿದ್ದಾರೆ. ವಿಲಾಸ್ ನಾಯ್ಕ್ ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಸ್ ಯಾಕೆ ನಿಲ್ಲಿಸಲಿಲ್ಲ ಎಂದು ಕೇಳಿದ್ದಕ್ಕೆ ಪ್ರಯಾಣಿಕನ ಬಟ್ಟೆ ಬಿಚ್ಚಿ ಹೊಡೆದ ನಿರ್ವಾಹಕ!

    ಬಸ್ ಯಾಕೆ ನಿಲ್ಲಿಸಲಿಲ್ಲ ಎಂದು ಕೇಳಿದ್ದಕ್ಕೆ ಪ್ರಯಾಣಿಕನ ಬಟ್ಟೆ ಬಿಚ್ಚಿ ಹೊಡೆದ ನಿರ್ವಾಹಕ!

    ಬೆಳಗಾವಿ: ಬಸ್ ಯಾಕೆ ನಿಲ್ಲಿಸಲಿಲ್ಲ ಎಂದು ಕೇಳಿದ್ದಕ್ಕೆ ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕ ಪ್ರಯಾಣಿಕನನ್ನು ಬಟ್ಟೆ ಬಿಚ್ಚಿ ಹಲ್ಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಮುಗಳಖೋಡ ಪಟ್ಟಣದಲ್ಲಿ ನಡೆದಿದೆ.

    ಗೋಕಾಕ್ ಪಟ್ಟಣದಿಂದ ಅಥಣಿ ಪಟ್ಟಣಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಮುಗಳಖೋಡ ಪಟ್ಟಣದ ಬಸ್ ನಿಲ್ದಾಣದಲ್ಲಿ ನಿಲುಗಡೆಯಾಗಿ ಮುಂದೆ ತೆರಳಬೇಕು. ಹೀಗಾಗಿ ಧಾರವಾಡ ಮೂಲದ ಮೊಬೈಲ್ ಟವರ್ ದುರಸ್ಥಿ ಮಾಡುವ ಕಾರ್ಮಿಕ ಬಸ್ ನಿಲ್ದಾಣದ ಒಂದು ಕಿ.ಮೀ ಹಿಂದೆಯೇ ಬಸ್ ನಿಲುಗಡೆ ಮಾಡುವಂತೆ ಕೋರಿದ್ದಾನೆ. ಆದರೆ ಇದಕ್ಕೆ ಒಪ್ಪದ ಕಂಡಕ್ಟರ್ ಶ್ರೀಮಂತ ಮುತ್ತೆನ್ನವರ ಹಾಗೂ ಕಾರ್ಮಿಕನ ನಡುವೆ ವಾಗ್ವಾದ ನಡೆದಿದೆ.

    ಬಸ್ ನಿಲ್ದಾಣ ಬರುತ್ತಿದ್ದಂತೆ ನಿರ್ವಾಹಕ ತನ್ನ ಗೂಂಡಾಗಿರಿ ಪ್ರದರ್ಶಿಸಿದ್ದು ಪ್ರಯಾಣಿಕನ ಬಟ್ಟೆ ಬಿಚ್ಚಿ ನಡು ರಸ್ತೆಯಲ್ಲೇ ಹಲ್ಲೆ ನಡೆಸಿದ್ದಾನೆ. ಎರಡು ದಿನಗಳ ಹಿಂದೆ ನಡೆದ ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ನಿರ್ವಾಹಕನ ವಿರುದ್ಧ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಬಳಿಕ ಇಬ್ಬರಿಗೂ ರಾಜಿ ಸಂಧಾನ ಮಾಡಿಸಿ ಹಾರೋಗೇರಿ ಪೊಲೀಸರು ಮನೆಗೆ ಕಳುಹಿಸಿಕೊಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಜೆ ಮೇಲೆ ಊರಿಗೆ ಬಂದಿದ್ದ ಯೋಧ ಅಪಘಾತಕ್ಕೆ ಬಲಿ

    ರಜೆ ಮೇಲೆ ಊರಿಗೆ ಬಂದಿದ್ದ ಯೋಧ ಅಪಘಾತಕ್ಕೆ ಬಲಿ

    ಚಿಕ್ಕೋಡಿ/ಬೆಳಗಾವಿ: ಟ್ರಾಕ್ಟರ್ ಹಿಂಬದಿಗೆ ಬೈಕ್ ಡಿಕ್ಕಿಯಾದ ಪರಿಣಾಮ ರಜೆಯ ಮೇಲೆ ಊರಿಗೆ ಬಂದಿದ್ದ ಯೋಧರೊಬ್ಬರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.

    ನಾಗರಮುನ್ನೋಳಿ ಗ್ರಾಮ ನಿವಾಸಿ ಸಿಕಂದರ್ ಮುಲ್ತಾನಿ (28) ಮೃತ ಯೋಧ. ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿ ಮೇಲೆ ಈ ಘಟನೆ ನಡೆದಿದೆ. ಕಳೆದ 9 ವರ್ಷಗಳಿಂದ ಸಿಕಂದರ್ ಮುಲ್ತಾನಿ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ ಆಫ್ ಸೆಂಟರ್ ಪಂಜಾಬ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು.

    ಸಿಕಂದರ್ ಮುಲ್ತಾನಿ 40 ದಿನ ರಜೆ ಪಡೆದು ಊರಿಗೆ ಬಂದಿದ್ದರು. ಆದರೆ ಶುಕ್ರವಾರ ನಾಗರಮುನ್ನೋಳಿ ಗ್ರಾಮದಿಂದ ಪಕ್ಕದ ಗ್ರಾಮದಲ್ಲಿ ನಡೆಯುತ್ತಿದ್ದ ಜಾತ್ರೆಗೆ ಹೋಗಿದ್ದರು. ತಡರಾತ್ರಿ ಮನೆಗೆ ಹಿಂದಿರುಗಿ ವಾಪಸ್ ಬರುವಾಗ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ವಾಹನವನ್ನು ತಪ್ಪಿಸಲು ಹೋಗಿ ಟ್ರಾಕ್ಟರ್ ಹಿಂಬದಿಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಸಿಕಂದರ್ ಮುಲ್ತಾನಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಇನ್ನು ಈ ಘಟನೆ ಬಗ್ಗೆ ಮಾಹಿತಿ ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಯೋಧ ಅವರಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಈ ಘಟನೆ ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಮೇಶ್ ಜಾರಕಿಹೊಳಿ ಮಾತಿನಿಂದ ಮಾಜಿ ಸಿಎಂ ಗರಂ!

    ರಮೇಶ್ ಜಾರಕಿಹೊಳಿ ಮಾತಿನಿಂದ ಮಾಜಿ ಸಿಎಂ ಗರಂ!

    ಬೆಳಗಾವಿ: ಸರ್ ನಿಮ್ಮ ಜೊತೆ ಖುದ್ದಾಗಿ ಮಾತನಾಡುತ್ತೇನೆ. ಬಹಳ ವಿಚಾರ ಮಾತನಾಡಬೇಕು ಎಂದು ಶಾಸಕ ರಮೇಶ್ ಜಾರಕಿಹೊಳಿ ಹೇಳಿ ಫೋನ್ ಕಟ್ ಮಾಡಿದ್ದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ.

    ಕಾಂಗ್ರೆಸ್ ಹೈಕಮಾಂಡ್ ಆದೇಶದಂತೆ ಅತೃಪ್ತ ಶಾಸಕರ ಸಂಧಾನಕ್ಕೆ ಗುರುವಾರ ಬೆಳಗಾವಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೋಗಿದ್ದರು. ಈ ವೇಳೆ ಮುಂಬೈನಲ್ಲಿದ್ದ ಅತೃಪ್ತ ಶಾಸಕರಿಗೆ ಕರೆ ಮಾಡಿ ಮಾತನಾಡಲು ಪ್ರಯತ್ನ ಮಾಡಿದ್ದು, ವಿಫಲವಾಗಿತ್ತು. ಬಳಿಕ ರಮೇಶ್ ಜಾರಕಿಹೊಳಿ ಸಂಪರ್ಕಕ್ಕೆ ಸಿಕ್ಕಿ ಮಾತನಾಡಿದ್ದಾರೆ. ಆದರೆ ರಮೇಶ್ ಜಾರಕಿಹೊಳಿ ಮಾತಿನಿಂದ ಸಿದ್ದರಾಮಯ್ಯ ಕೋಪಗೊಂಡಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಸಿಕ್ಕಿವೆ.

    ರಮೇಶ್ ಜಾರಕಿಹೊಳಿ ಸಿದ್ದರಾಮಯ್ಯ ಅವರು ಫೋನ್ ಮಾಡಿದಾಗ, ಸರ್ ನಿಮ್ಮ ಜೊತೆ ನಾನೇ ಖದ್ದಾಗಿ ಮಾತನಾಡುತ್ತೇನೆ. ಬಹಳ ವಿಚಾರಗಳನ್ನು ಮಾತನಾಡಬೇಕು. ಆದರೆ ಫೋನಿನಲ್ಲಿ ಮಾತನಾಡುವುದು ಬೇಡ ಎಂದು ಹೇಳಿ ತಕ್ಷಣ ಸಿದ್ದರಾಮಯ್ಯ ಅವರ ಕರೆಯನ್ನು ಕಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಘಟನೆಯಿಂದ ಸಿಟ್ಟಾದ ಸಿದ್ದರಾಮಯ್ಯ, ಏನಾದರೂ ಮಾಡಿಕೊಳ್ಳಲಿ ನಡೆಯಿರಿ ಎಂದು ಬೇಸರದಿಂದ ಬೆಳಗಾವಿ ವಿಮಾನ ನಿಲ್ದಾಣದ ಕಡೆ ಹೆಜ್ಜೆ ಹಾಕಿದರು ಎನ್ನುವ ವಿಚಾರ ತಿಳಿದು ಬಂದಿದೆ.

    ಇತ್ತ ನೀವು ಚುನಾವಣಾ ಸಿದ್ಧತೆ ಮಾಡಿಕೊಳ್ಳಿ. ನಾನು ಉಪ ಮುಖ್ಯಮಂತ್ರಿಯಾಗಿಯೇ ಗೋಕಾಕ್‍ಗೆ ಬರುತ್ತೇನೆ. ಮದ್ಯಂತರ ಚುನಾವಣೆಗೆ ಸಿದ್ಧವಾಗುತ್ತದೆ ಎಂದು ಆಪ್ತನಿಗೆ ರಮೇಶ್ ಜಾರಕಿಹೊಳಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾಂಗ್ರೆಸ್ಸಿಗೆ ಬಿಗ್ ಶಾಕ್ ಕೊಡಲು ರಮೇಶ್ ಜಾರಕಿಹೊಳಿ ತಯಾರು!

    ಕಾಂಗ್ರೆಸ್ಸಿಗೆ ಬಿಗ್ ಶಾಕ್ ಕೊಡಲು ರಮೇಶ್ ಜಾರಕಿಹೊಳಿ ತಯಾರು!

    ಬೆಳಗಾವಿ: ಕಾಂಗ್ರೆಸ್ ಗೆ ಬಿಗ್ ಶಾಕ್ ಕೊಡಲು ಶಾಸಕ ರಮೇಶ್ ಜಾರಕಿಹೊಳಿ ತಯಾರು ನಡೆಸಿದ್ದು, ರಾತ್ರೋರಾತ್ರಿ ಮುಂಬೈ ಹೋಟೆಲ್ ಖಾಲಿ ಮಾಡಿದ್ದಾರೆ.

    ಶಾಸಕ ರಮೇಶ್ ಜಾರಕಿಹೊಳಿ ಅಷ್ಟೇ ಅಲ್ಲದೇ ಮಹೇಶ್ ಕುಮಟಳ್ಳಿ ಕೂಡ ರಾತ್ರೋರಾತ್ರಿ ಮುಂಬೈ ಹೋಟೆಲಿನಿಂದ ಹೊರಟ್ಟಿದ್ದು, ಈಗ ಬೆಂಗಳೂರಿನತ್ತ ರಮೇಶ್ ಜಾರಕಿಹೊಳಿ ಮತ್ತು ಮಹೇಶ್ ಕುಮಟಳ್ಳಿ ಪ್ರಯಾಣ ಬೆಳಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಶುಕ್ರವಾರ ಸಂಜೆ ವಿಧಾನಸೌಧದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಈ ಸಭೆಗೆ ಇಬ್ಬರು ಹಾಜರಾಗುತ್ತಿದ್ದು, ಸಿಎಲ್‍ಪಿ ಸಭೆಯಲ್ಲಿ ಗದ್ದಲ ಎಬ್ಬಿಸಲು ರಮೇಶ್ ಜಾರಕಿಹೊಳಿ ಪ್ಲಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ. ರಮೇಶ್ ಜಾರಕಿಹೊಳಿ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರನ್ನೇ ಟಾರ್ಗೆಟ್ ಮಾಡಿಕೊಂಡಿದ್ದು, ಸಭೆಯಲ್ಲಿ ರಾಜಕೀಯ ಹೈಡ್ರಾಮ ಮತ್ತು ಭಿನ್ನಮತ ಚಟುವಟಿಕೆಗಳಿಗೆ ಡಿಕೆಶಿ ಕಾರಣರಾಗಿದ್ದಾರೆ ಎಂದು ಆರೋಪಿಸುವ ಸಾಧ್ಯತೆಯಿದೆ.

    ಅಷ್ಟೇ ಅಲ್ಲದೇ ನಾವು ಈ ರೀತಿ ಊರು ಬಿಟ್ಟು ದೂರ ದೂರ ಅಡ್ಡಾಡುತ್ತಿದ್ದೇವೆ ಎನ್ನುವ ವಿಚಾರ ಹೈಕಮಾಂಡ್‍ಗೂ ಗೊತ್ತಾಗಬೇಕು. ಯಾಕೆ ಮುಂಬೈನಲ್ಲಿ ಇದ್ದೀವಿ? ಮುಂಬೈನಲ್ಲಿ ಏನೆಲ್ಲಾ ಚರ್ಚೆ ನಡೆಸಿದ್ದೇವೆ ಇದೆಲ್ಲವನ್ನು ಸಭೆಯ ಮುಂದಿಡಲಿದ್ದು, ಬಳಿಕ ತಮ್ಮ ಮುಂದಿನ ನಡೆ ಏನೆಂಬುದನ್ನು ಸಭೆಯಲ್ಲಿ ತಿಳಿಸುವ ಸಾಧ್ಯತೆ ಇದೆ.

    ಕಾಂಗ್ರೆಸ್ ಹೈಕಮಾಂಡ್ ಆದೇಶದಂತೆ ಅತೃಪ್ತ ಶಾಸಕರ ಸಂಧಾನಕ್ಕೆ ಗುರುವಾರ ಬೆಳಗಾವಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಂದಿದ್ದರು. ಆದರೆ ಸಂಧಾನ ವಿಫಲವಾಗಿದೆ. ಸಿದ್ದರಾಮಯ್ಯ ಅವರು ಮುಂಬೈ ಹೋಟೆಲ್ ನಲ್ಲಿ ತಂಗಿದ್ದ ಅತೃಪ್ತ ಶಾಸಕರಿಗೆ ದೂರವಾಣಿ ಮುಖಾಂತರ ಸಂಪರ್ಕ ಸಾಧಿಸಲು ಯತ್ನಿಸಿದ್ದಾರೆ. ಅಷ್ಟೇ ಅಲ್ಲದೇ ರಮೇಶ್ ಜಾರಕಿಹೊಳಿಗೆ ಹಲವು ಬಾರಿ ಫೋನ್ ಮಾಡಿದ್ದಾರೆ. ಆದರೆ ಜಾರಕಿಹೊಳಿ ಸಿದ್ದರಾಮಯ್ಯರ ಫೋನ್ ಸ್ವೀಕರಿಸಿಲ್ಲ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಅತೃಪ್ತ ಶಾಸಕರನ್ನ ಮನವೊಲಿಸಿ ಸಿಎಲ್‍ಪಿ ಸಭೆಗೆ ಹಾಜರಾಗುವಂತೆ ಸಂಧಾನ ಮಾಡಲು ಹೈ ಕಮಾಂಡ್ ಆದೇಶ ನೀಡಿತ್ತು. ಆದರೆ ರಮೇಶ್ ಜಾರಕಿಹೊಳಿ ಸಂಪರ್ಕ ಸಾಧ್ಯವಾಗುತ್ತಿಲ್ಲ ಎಂದು ಸಬೂಬು ಹೇಳಿ ಸಿದ್ದರಾಮಯ್ಯ ಸುಮ್ಮನಾಗಿದ್ದಾರೆ. ಹೀಗಾಗಿ ಇಂದಿನ ಶಾಸಕಾಂಗ ಸಭೆಯಲ್ಲಿ ಅತೃಪ್ತರ ನಡೆ ಏನು ಎನ್ನುವುದು ಕುತೂಹಲಕಾರಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾಲು-ಬಾಯಿ ಜ್ವರದಿಂದ ಸಾವನ್ನಪ್ಪಿದ ಹಸುಗಳು- ರೆಸಾರ್ಟ್ ನಲ್ಲಿ ಕುಳಿತ್ರು ಕಷ್ಟ ಕೇಳಬೇಕಾದ ಶಾಸಕರು !

    ಕಾಲು-ಬಾಯಿ ಜ್ವರದಿಂದ ಸಾವನ್ನಪ್ಪಿದ ಹಸುಗಳು- ರೆಸಾರ್ಟ್ ನಲ್ಲಿ ಕುಳಿತ್ರು ಕಷ್ಟ ಕೇಳಬೇಕಾದ ಶಾಸಕರು !

    ಬೆಳಗಾವಿ/ಚಿಕ್ಕೋಡಿ: ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮುಗುಳಿ ಗ್ರಾಮಸ್ಥರು ಕುಡಿಯಲು ನೀರು ಕೇಳಿದ್ರೆ ಮಜ್ಜಿಗೆ ಕೊಡುತ್ತಾರೆ. ಕಾರಣ ಗ್ರಾಮದ ಪ್ರತಿಯೊಬ್ಬರು ಹೈನುಗಾರಿಕೆಯನ್ನು ಉದ್ಯೋಗ ಮಾಡಿಕೊಂಡಿದ್ದಾರೆ. ಆದ್ರೆ ಕಳೆದ ಕೆಲ ದಿನಗಳಿಂದ ಜೀವನಾಧಾರವಾದ ಹಸುಗಳು ಕಾಲು, ಬಾಯಿ ಬೇನೆಯಿಂದ ಸಾವನ್ನಪ್ಪುತ್ತಿವೆ. ನಮ್ಮ ಕಷ್ಟ ಕೇಳಬೇಕಾದ ಶಾಸಕರು ಗುರುಗ್ರಾಮದ ರೆಸಾರ್ಟ್ ನಲ್ಲಿ ಕುಳಿತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಮುಗುಳಿ ಗ್ರಾಮದಲ್ಲಿ ಸರಿ ಸುಮಾರು 3 ಸಾವಿರಕ್ಕೂ ಅಧಿಕ ಹಸುಗಳಿವೆ. ಇಲ್ಲಿನ ರೈತರ ಮೂಲ ಉದ್ಯೋಗವೆಂದರೆ ಅದು ಹೈನುಗಾರಿಕೆಯಾಗಿದ್ದು, ಅದನ್ನೆ ಉಸಿರಾಗಿಸಿಕೊಂಡು ಇಲ್ಲಿನ ರೈತರು ಬದುಕುತ್ತಿದ್ದಾರೆ. ಆದರೆ ಕಳೆದ ಎರಡು ತಿಂಗಳ ಅವಧಿಯಲ್ಲಿ ಈ ಹಸುಗಳಿಗೆ ಕಾಲು ಬೇನೆ ಮತ್ತು ಬಾಯಿ ಬೇನೆ ಬಂದು ಸುಮಾರು 15 ಕ್ಕೂ ಹೆಚ್ಚು ಹಸುಗಳು ಅಸುನೀಗಿವೆ. ಹೀಗಾಗಿ ಇಲ್ಲಿನ ರೈತರಿಗೆ ಹಸುಗಳನ್ನ ಕಾಪಾಡಿಕೊಳ್ಳುವುದು ದೊಡ್ಡ ಚಿಂತೆಯಾಗಿದೆ. ನಮ್ಮ ಕಷ್ಟವನ್ನ ರಾಯಬಾಗ ಕ್ಷೇತ್ರದ ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ಅವರಿಗೆ ಮನವಿ ಸಲ್ಲಿಸಿದ್ದರು ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತ ಗಣಪತಿ ಬಡಿಗೇರ್ ಹೇಳುತ್ತಾರೆ.

    ಗ್ರಾಮದ ರೈತರ ವತಿಯಿಂದ ಪಶು ಸಂಗೋಪನೆ ಇಲಾಖೆ ಅಧಿಕಾರಿಗಳಿಗೆ ಮತ್ತು ಸ್ಥಳೀಯ ಶಾಸಕರಿಗೆ ಮನವಿ ಮಾಡಿದರು ಇಲ್ಲಿಯವರೆಗೂ ಗ್ರಾಮದಲ್ಲಿ ಪಶು ಆಸ್ಪತ್ರೆ ಆಗಿಲ್ಲ. ಹೀಗಾಗಿ ಇಲ್ಲಿನ ರೈತರು ತಮ್ಮ ಹಸುಗಳನ್ನ ದೂರದ ಚಿಕ್ಕೋಡಿ ಅಥವಾ ಇಲ್ಲವೇ ಅಕ್ಕ ಪಕ್ಕದ ಹಳ್ಳಿಗಳಿಗೆ ಹೋಗಿ ಚಿಕಿತ್ಸೆ ಪಡೆಯುವ ಅಗತ್ಯ ಎದುರಾಗಿದೆ. ಈ ಬಗ್ಗೆ ಪಶುಸಂಗೋಪನೆ ಇಲಾಖೆಯ ಉಪನಿರ್ದೆಶಕರನ್ನ ಕೇಳಿದ್ರೆ ಸರ್ಕಾರಕ್ಕೆ ನಾವು ಸಹ ಪ್ರಸ್ತಾವನೆ ಕಳಿಸಿದ್ದೇವೆ ಆದರೆ ಸರ್ಕಾರ ಹೊಸ ಚಿಕಿತ್ಸಾಲಯಗಳನ್ನು ತೆರೆಯುವ ಮನಸ್ಸು ಮಾಡುತ್ತಿಲ್ಲ. ಬದಲಾಗಿ ಈಗಾಗಲೇ ಇದ್ದ ಚಿಕಿತ್ಸಾಲಯಗಳನ್ನು ಮೇಲ್ದರ್ಜೆಗೇರಿಸುವ ಪ್ರಯತ್ನ ಮಾಡುತ್ತಿದೆ ಚಿಕ್ಕೋಡಿ ಪಶುಸಂಗೋಪನಾ ಇಲಾಖೆಯ ಹಿರಿಯ ಅಧಿಕಾರಿ ಡಾ.ಸದಾಶಿವ ಉಪ್ಪಾರ ಹೇಳುತ್ತಾರೆ.

    ಅವಶ್ಯಕತೆ ಇರುವ ಜಾಗಗಳಲ್ಲಿ ಹೊಸ ಪಶು ಚಿಕಿತ್ಸಾಲಯ ತೆರೆಯೋದು ಬಿಟ್ಟು ಈಗಾಗಲೇ ಇರುವ ಪಶು ಚಿಕಿತ್ಸಾಲಯಗಳನ್ನು ಮೇಲ್ದರ್ಜೆಗೆ ಏರಿಸುವ ಸರ್ಕಾರದ ಕೆಲಸಕ್ಕೆ ಚಿಕ್ಕೋಡಿಯ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಇನ್ನಾದ್ರೂ ಸರ್ಕಾರ ಹೊಸ ಪ್ರಸ್ತಾವನೆಯನ್ನ ಸ್ವೀಕಾರ ಮಾಡಿ ಹೊಸ ಚಿಕಿತ್ಸಾಲಯಗಳನ್ನ ಪ್ರಾರಂಭಿಸುತ್ತಾ ಕಾದು ನೋಡಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಲ್ಯಾಣ ಮಹೋತ್ಸವ ನಡೆದರೂ ಕೊನೆಗೆ ದೇವರಿಗೆ ಇಲ್ಲಿ ಕಂಕಣ ಭಾಗ್ಯ ಇಲ್ಲ!

    ಕಲ್ಯಾಣ ಮಹೋತ್ಸವ ನಡೆದರೂ ಕೊನೆಗೆ ದೇವರಿಗೆ ಇಲ್ಲಿ ಕಂಕಣ ಭಾಗ್ಯ ಇಲ್ಲ!

    ಬೆಳಗಾವಿ: ಪ್ರತಿಯೊಂದು ಗಂಡಿಗೂ ಒಂದು ಹೆಣ್ಣನ್ನು ಸೃಷ್ಟಿ ಮಾಡಿಯೇ ಮಾಡಿರುತ್ತಾನೆ ಆ ದೇವರು ಎನ್ನುವ ಮಾತು ಪ್ರಚಲಿತದಲ್ಲಿದೆ. ಆದರೆ ಹುಕ್ಕೇರಿ ತಾಲೂಕಿನ ಅಮ್ಮಣಗಿ ಗ್ರಾಮದ ಮಲ್ಲಿಕಾರ್ಜುನ(ಮಲ್ಲಯ್ಯ) ದೇವರಿಗೆ ಇನ್ನೂ ಮದುವೆಯಾಗಿಲ್ಲ. ಏಕೆಂದರೆ ಪ್ರತಿ ವರ್ಷ ಮಲ್ಲಯ್ಯ ತಾಳಿ ಕಟ್ಟುವುದರೊಳಗೆ ಸಂಕ್ರಾಂತಿ ಬರುತ್ತಿರುವ ಹಿನ್ನೆಲೆಯಲ್ಲಿ ಮದುವೆಯನ್ನು ನಿಲ್ಲಿಸಲಾಗುತ್ತದೆ. ಹೀಗಾಗಿ ಈ ದೇವರಿಗೆ ಇದೂವರೆಗೂ ಕಂಕಣ ಭಾಗ್ಯವೇ ಕೂಡಿ ಬಂದಿಲ್ಲ.

    ಅಮ್ಮಣಗಿ ಗ್ರಾಮದ ಮಲ್ಲಯ್ಯ ದೇವಸ್ಥಾನದಲ್ಲಿ ಪ್ರತಿ ವರ್ಷದ ಸಂಕ್ರಾಂತಿ ಹಬ್ಬ ಸಂದರ್ಭದಲ್ಲಿ ಅದ್ಧೂರಿಯಾಗಿ ಜಾತ್ರೆ ನಡೆಯುತ್ತದೆ. ಸಂಕ್ರಮಣದ ನಿಮಿತ್ತವಾಗಿ ಐದು ದಿನಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ಹತ್ತು ಹಲವು ಆಚರಣೆಗಳು ನಡೆಯುತ್ತಲೇ ಇರುತ್ತವೆ. ಅಂತಹ ಆಚರಣೆಗಳಲ್ಲಿ ಮಲ್ಲಯ್ಯ ಹಾಗೂ ಭ್ರಮರಾಂಭ ದೇವಿಯ ಕಲ್ಯಾಣ ಮಹೋತ್ಸವವೂ ಕೂಡ ಒಂದಾಗಿದೆ.

    ಪ್ರತಿ ವರ್ಷವೂ ಕೂಡ ಸಂಕ್ರಾಂತಿಯ ಸಂದರ್ಭದಲ್ಲಿ ಮದುವೆಯ ರೀತಿಯಲ್ಲೇ ಎಲ್ಲಾ ತಯಾರಿಯನ್ನು ಮಾಡಲಾಗಿರುತ್ತದೆ. ಅಕ್ಷತೆ, ಮಾಂಗಲ್ಯ, ಭಾಜಾ ಭಜಂತ್ರಿ ಎಲ್ಲವೂ ಕೂಡ ಇರುತ್ತದೆ. ಇನ್ನೇನು ಇವರಿಬ್ಬರ ಮದುವೆಯಾಗಬೇಕು ಎನ್ನುವುದರೊಳಗಾಗಿಯೇ ಮಧ್ಯರಾತ್ರಿಯಲ್ಲಿ ಸಂಕ್ರಮಣ ಬಂದೇ ಬಿಡುತ್ತದೆ. ಈ ಸಂದರ್ಭದಲ್ಲಿ ಮದುವೆ ನಡೆಸುವುದು ನಿಷಿದ್ಧ ತೀರ್ಮಾನಿಸಿ ಮದುವೆಯನ್ನೇ ಗ್ರಾಮಸ್ಥರು ರದ್ದು ಮಾಡುತ್ತಾರೆ. ಮುಂದಿನ ವರ್ಷ ಈ ಆಚರಣೆ ಪುನರಾವರ್ತನೆ ಆಗುತ್ತದೆ. ಹೀಗೆ ಕಳೆದ 400 ವರ್ಷಗಳಿಂದ ಆಚರಣೆ ನಡೆದುಕೊಂಡು ಬಂದಿದೆ ಎಂದು ಹಿರಿಯರು ಹೇಳುತ್ತಾರೆ.

    ಸಂಭ್ರಮ ಹೇಗಿರುತ್ತೆ?
    ಸಂಕ್ರಾಂತಿಯ ಸಂದರ್ಭದಲ್ಲಿ ಅಮ್ಮಣಗಿ ಮಲ್ಲಯ್ಯ ದೇವಸ್ಥಾನವನ್ನು ದೀಪದಿಂದ ಅಲಂಕಾರ ಮಾಡಲಾಗುತ್ತದೆ. ವಧು-ವರರಿಗಾಗಿ ಕಲ್ಯಾಣ ಮಂಟಪವನ್ನು ಕೂಡ ಸಿಂಗರಿಸಲಾಗಿರುತ್ತದೆ. ಭಾಜಾ ಭಜಂತ್ರಿ, ಭೋಜನಾ ಎಲ್ಲವೂ ಸಿದ್ಧಗೊಂಡಿರುತ್ತದೆ. ಆದರೆ ಮದುವೆ ಮಾತ್ರ ಈ ದೇವರಿಗೆ ನಡೆಯುವುದೇ ಇಲ್ಲ.

    ಮದುವೆಗಾಗಿ ಎಲ್ಲಾ ಆಚರಣೆಗಳನ್ನೂ ಕೂಡ ಮಲ್ಲಯ್ಯ ದೇವಸ್ಥಾನದಲ್ಲಿ ಭಕ್ತ ವೃಂದ ಮಾಡಿಕೊಂಡು ಬರುತ್ತದೆ. ಆದರೂ ಕೂಡ ಕೊನೆ ಗಳಿಗೆಯಲ್ಲಿ ಮುಹೂರ್ತ ಮೀರಿ ಹೋಯಿತು ಎನ್ನುವ ಕಾರಣಕ್ಕಾಗಿಯೇ ಮಲ್ಲಯ್ಯನಿಗೆ ಕಂಕಣ ಭಾಗ್ಯ ಕೈ ತಪ್ಪಿ ಹೋಗುತ್ತದೆ.

    ಪ್ರತಿ ವರ್ಷ ಪುನರಾವರ್ತನೆಯಾಗುತ್ತಿದ್ದರೂ ಯಾಕೆ ಈ ಆಚರಣೆ ಮಾಡಲಾಗುತ್ತಿದೆ ಎಂದು ಕೇಳಿದ್ದಕ್ಕೆ, ಹಲವು ವರ್ಷಗಳಿಂದ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ಇದನ್ನು ನಾವು ಮುಂದುವರಿಸುವುದು ನಮ್ಮ ಕರ್ತವ್ಯ ಎಂದು ಗ್ರಾಮದ ಹಿರಿಯರು ಹೇಳುತ್ತಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾಲುವೆಗೆ ಬಿದ್ದ ಕಾರ್ – ಅಂತ್ಯಕ್ರಿಯೆ ಮುಗಿಸ್ಕೊಂಡು ಬರ್ತಿದ್ದ ಒಂದೇ ಕುಟುಂಬದ ಐವರ ದುರ್ಮರಣ

    ಕಾಲುವೆಗೆ ಬಿದ್ದ ಕಾರ್ – ಅಂತ್ಯಕ್ರಿಯೆ ಮುಗಿಸ್ಕೊಂಡು ಬರ್ತಿದ್ದ ಒಂದೇ ಕುಟುಂಬದ ಐವರ ದುರ್ಮರಣ

    ಬೆಳಗಾವಿ: ಅಂತ್ಯಕ್ರಿಯೆ ಮುಗಿಸಿಕೊಂಡು ಮನೆಗೆ ವಾಪಾಸ್ ಆಗುತ್ತಿದ್ದ ಕಾರು ಕಾಲುವೆಗೆ ಬಿದ್ದು ಐದು ಜನ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸವದತ್ತಿ ತಾಲೂಕಿನ ಕಡಬಿ ಶಿವಾಪುರ್ ಬಳಿ ನಡೆದಿದೆ.

    ಕಡಬಿ ಗ್ರಾಮದ ಒಂದೇ ಕುಟುಂಬದ ನಿವಾಸಿಗಳಾದ ಪಕ್ಕೀರವ್ವ ಪೂಜೇರಿ(29), ಹನುಮಂತ ಪೂಜೇರಿ(60), ಲಗಮಣ್ಣ ಪೂಜೇರಿ(38), ಪಾರವ್ವ ಪೂಜೇರಿ(50) ಮತ್ತು ಲಕ್ಷ್ಮೀ ಪೂಜೇರಿ(40) ಮೃತ ದುರ್ದೈವಿಗಳು. ಸೋಮವಾರ ಸಂಜೆ ಗೋಕಾಕ್ ಪಟ್ಟಣದಲ್ಲಿರುವ ಸಂಬಂಧಿ ಲಕ್ಷ್ಮಣ ಎಂಬವರ ಅಂತ್ಯಸಂಸ್ಕಾರ ಮುಗಿಸಿಕೊಂಡು ಕಡಬಿ ಗ್ರಾಮಕ್ಕೆ ವಾಪಸ್ ಆಗುವಾಗ ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ.

    ಘಟಪ್ರಭಾ ಎಡದಂಡೆ ಕಾಲುವೆಯಲ್ಲಿ ಈ ಅವಘಡ ಸಂಭವಿಸಿದ್ದು, ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ಕಾರು ನೀರಿನಲ್ಲಿ ಮುಳುಗಿ ಎಲ್ಲರು ಕಾರ್ ಒಳಗೆ ಮೃತಪಟ್ಟಿದ್ದಾರೆ. ಇನ್ನೂ ಕಾರ್ ಕಾಲುವೆಗೆ ಬೀಳುತ್ತಿದ್ದಂತೆ ಸ್ಥಳೀಯರು ಹೇಗಾದರೂ ಮಾಡಿ ಕಾರಿನಲ್ಲಿದ್ದವರನ್ನ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಆದರೆ ನೀರು ರಭಸವಾಗಿ ಹರಿಯುತ್ತಿರುವುದರಿಂದ ಅವರನ್ನ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.

    ಕಾರ್ ಚಾಲಕ ಅಡಿವೇಪ್ಪ ಮಾಳಗಿ ಎಂಬಾತ ಕಾರು ಕಾಲುವೆಗೆ ಬೀಳುತ್ತಿದ್ದಂತೆ ಈಜಿಕೊಂಡು ಹೊರ ಬಂದಿದ್ದರಿಂದ ಬದುಕುಳಿದಿದ್ದಾನೆ. ಇತ್ತ ಮೃತರೆಲ್ಲರೂ ಕಾರಿನಲ್ಲೇ ಸಾವನ್ನಿಪ್ಪಿದ್ದಾರೆ. ಕತ್ತಲಾಗಿದ್ದರಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಸದ್ಯ ಕಾರ್ಯಚರಣೆಯನ್ನ ನಿಲ್ಲಿಸಿದ್ದು, ಇಂದು ಬೆಳಗ್ಗೆ ಮತ್ತೆ ಕಾರ್ಯಾಚರಣೆ ಮುಂದುವರಿಸಿ ಮೃತ ದೇಹಗಳನ್ನ ಹೊರ ತೆಗೆಯಲಿದ್ದಾರೆ.

    ಈ ಘಟನೆ ಸಂಬಂಧ ಮುರಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳದಲ್ಲೇ ಪೊಲೀಸರು ಕೂಡ ಬೀಡು ಬಿಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗಣೇಶ್ ಹುಕ್ಕೇರಿ ಬಿಜೆಪಿ ಸೇರೋ ಬಗ್ಗೆ ಸತೀಶ್ ಜಾರಕಿಹೊಳಿ ಸ್ಪಷ್ಟನೆ

    ಗಣೇಶ್ ಹುಕ್ಕೇರಿ ಬಿಜೆಪಿ ಸೇರೋ ಬಗ್ಗೆ ಸತೀಶ್ ಜಾರಕಿಹೊಳಿ ಸ್ಪಷ್ಟನೆ

    – ಊಹಾಪೋಹಗಳಿಗೆ ಶಾಸಕ ಖಡಕ್ಕಾಗಿ ಪ್ರತಿಕ್ರಿಯೆ

    ಬೆಳಗಾವಿ: ಚಿಕ್ಕೋಡಿ ಕಾಂಗ್ರೆಸ್ ಶಾಸಕ ಗಣೇಶ್ ಹುಕ್ಕೇರಿ ಅವರು ಬಿಜೆಪಿ ಸೇರುವ ವಿಚಾರ ಸತ್ಯಕ್ಕೆ ದೂರವಾಗಿದೆ. ಹಲವು ತಿಂಗಳಿನಿಂದ ಇಂತಹ ಸುದ್ದಿಗಳು ಕೇಳಿಬರುತ್ತಿವೆ. ಜನವರಿ 19ರಂದು ಬಿಜೆಪಿ ಸೇರುವ ಬಗ್ಗೆ ಹೇಳಿದ್ದಾರೆ. ಅಲ್ಲಿಯವರೆಗೆ ತಾಳ್ಮೆಯಿಂದ ಕಾಯೋಣ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಗಣೇಶ್ ಹುಕ್ಕೇರಿಗೆ ಯಾವುದೇ ಅಸಮಾಧಾನ ಇಲ್ಲ. ಈಗಾಗಲೇ ಅವರ ತಂದೆ ಸಂಸದರಿದ್ದಾರೆ. ಗಣೇಶ್ ಹುಕ್ಕೇರಿಗೂ ವರಿಷ್ಠರು ಪಕ್ಷದಲ್ಲಿ ಉನ್ನತ ಸ್ಥಾನ ನೀಡಿದ್ದಾರೆ. ಏಳು ತಿಂಗಳಿಂದ ಇದನ್ನೇ ಹೇಳುತ್ತಿದ್ದಾರೆ. ಅಮಿತ್ ಶಾ ಜೊತೆ ಇದ್ದಾರಾ ಅಥವಾ ಮೋದಿ ಜೊತೆಗೆ ನಮ್ಮ ಶಾಸಕರು ಇದ್ದಾರೆಯಾ ಹೇಳಿ. ಇನ್ನೂ ಯಾರು ಬಿಜೆಪಿಗೆ ಹೋಗಿಲ್ಲ ಹೋದಾಗ ನೋಡೋಣ ಅಂತ ಅವರು ಹೇಳಿದ್ರು.

    ಯಾರು ಎಲ್ಲೂ ಹೋಗಲ್ಲ, ನಮ್ಮ ಪಕ್ಷ ಸುರಕ್ಷಿತವಾಗಿದೆ. ಕೆಲವರು ವೈಯಕ್ತಿಕ ಕೆಲಸದ ಮೇಲೆ ದೆಹಲಿಯಲ್ಲಿದ್ದಾರೆ. ಬಿಜೆಪಿಯವರು ಆರು ತಿಂಗಳಿನಿಂದ ಹೇಳ್ತಾನೆ ಇದ್ದಾರೆ ಅದನ್ನ ಪ್ರೂವ್ ಮಾಡೋಕು ಆಗ್ತಿಲ್ಲ. ಯಾರಾದ್ರೂ ದೊಡ್ಡ ಅಮೌಂಟ್ ಕೊಡ್ತೀನಿ ಅಂದ್ರೆ ಕೆಲವರು ಸ್ವಲ್ಪ ಯೋಚನೆ ಮಾಡ್ತಾರೆ. ಶನಿವಾರ ನಾನು, ಅವರು ಎರಡು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆವು. ಗಣೇಶ್ ಹುಕ್ಕೇರಿ ಅವರು ಬಿಜೆಪಿಗೆ ಹೋಗಲ್ಲ. ಹಲವು ತಿಂಗಳಿನಿಂದ ಇಂತಹ ಸುದ್ದಿಗಳು ಕೇಳಿಬರುತ್ತಿವೆ. ಆದರೆ ಯಾವುದೇ ಶಾಸಕರು ಬಿಜೆಪಿ ಸೇರಿಲ್ಲ. ಜನವರಿ 19ರಂದು ಬಿಜೆಪಿ ಸೇರುವ ಬಗ್ಗೆ ಹೇಳಿದ್ದರೆ ಆ ಬಗ್ಗೆ ಕಾದು ನೋಡೋಣ. ಒಟ್ಟಿನಲ್ಲಿ ನಮ್ಮ ಪಕ್ಷ ಸುಭದ್ರವಾಗಿದೆ ಅಂತ ಅವರು ಸ್ಪಷ್ಟಪಡಿಸಿದ್ರು.

    ಗಣೇಶ್ ಸ್ಪಷ್ಟನೆ:
    ಜನವರಿ 19ರಂದು ಶಾಸಕ ಗಣೇಶ್ ಹುಕ್ಕೇರಿಯವರು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹಗಳಿಗೆ ಸ್ವರ್ತ ಗಣೇಶ್ ಹುಕ್ಕೇರುಯವರೇ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಹುಟ್ಟಿದಾಗಿನಿಂದ ಕಾಂಗ್ರೆಸ್ ಪಕ್ಷ ನನ್ನ ಮನೆ. ನನ್ನ ಮನೆಯನ್ನು ನಾನ್ಯಾಕೆ ತೊರೆದು ಹೋಗಲಿ ಎಂದು ಹೇಳುವ ಮೂಲಕ ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

     ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜೀವದ ಹಂಗು ತೊರೆದು 1500 ಜನ್ರ ಜೀವ ಉಳಿಸಿದ ಸಾಹಸಿ ಯುವಕರು

    ಜೀವದ ಹಂಗು ತೊರೆದು 1500 ಜನ್ರ ಜೀವ ಉಳಿಸಿದ ಸಾಹಸಿ ಯುವಕರು

    ಬೆಳಗಾವಿ: ಜೀವದ ಹಂಗು ತೊರೆದು ಚಲಿಸುತ್ತಿರುವ ರೈಲಿನ ವಿರುದ್ಧ ಓಡಿ ಹೋಗಿ ರೈಲು ನಿಲ್ಲಿಸುವ ಮೂಲಕ ದೊಡ್ಡ ದುರಂತವನ್ನೇ ಯುವಕರಿಬ್ಬರು ತಪ್ಪಿಸಿದ್ದು, ಸಾವಿರಾರು ಪ್ರಯಾಣಿಕರ ಜೀವವನ್ನು ಉಳಿಸಿದ್ದಾರೆ.

    ರಿಯಾಜ್ ಹಾಗೂ ತೋಫಿಕ್ ಸಾಹಸಿ ಯುವಕರು. ಶುಕ್ರವಾರ ಸಂಜೆ ಬೆಳಗಾವಿಯ ಖಾನಾಪೂರದ ಗಾಂಧಿ ನಗರದ ರೈಲ್ವೆ ಟ್ರ್ಯಾಕ್ ನಲ್ಲಿ ಈ ಘಟನೆ ನಡೆದಿದೆ. ಕೊಲ್ಹಾಪುರ – ಹೈದರಾಬಾದ್ ರೈಲು ಹುಬ್ಬಳ್ಳಿ ಕಡೆ ಚಲಿಸುತ್ತಿತ್ತು. ಆದರೆ ರೈಲಿನ ಟ್ರ್ಯಾಕ್ ಮೇಲೆ ಏಕಾಎಕಿ ಮರ ಬಿದ್ದಿದೆ. ಇದೇ ಮಾರ್ಗವಾಗಿ ಬೈಕ್ ಮೇಲೆ ರಿಯಾಜ್ ಹಾಗೂ ತೋಫಿಕ್ ತೋಟದ ಕಡೆಗೆ ಹೋಗುತ್ತಿದ್ದರು. ಆಗ ಟ್ರ್ಯಾಕ್ ಮೇಲೆ ಮರ ಬಿದ್ದಿದ್ದನ್ನು ಗಮನಿಸಿದ್ದಾರೆ. ಇದನ್ನು  ಓದಿ: ಬಸ್‍ನಲ್ಲಿ ಕಾಣಿಸ್ತು ಬೆಂಕಿ ಕಿಡಿ – 1 ಕಿಮೀ ಹಿಂಬಾಲಿಸಿ ಬಂದು 70 ಪ್ರಯಾಣಿಕರ ಜೀವ ಉಳಿಸಿದ ಬೈಕ್ ಸವಾರ

    ಅತ್ತ ದೂರದಲ್ಲಿ ರೈಲು ಬರುವುದನ್ನು ಗಮನಿಸಿದ್ದಾರೆ. ತಕ್ಷಣ ಇಬ್ಬರು ತಮ್ಮ ಶರ್ಟ್ ಬಿಚ್ಚಿ ರೈಲಿನ ಮುಂದೆ ಓಡಿ ಅಪಾಯವಿದೆ ಎಂದು ಸೂಚಿಸಿದ್ದಾರೆ. ಇದನ್ನು ನೋಡಿದ ರೈಲು ಸಿಬ್ಬಂದಿ ತಕ್ಷಣ ಬ್ರೇಕ್ ಹಾಕಿದ್ದಾರೆ. ರೈಲು ಸರಿಯಾಗಿ ಮರದ ಹತ್ತಿರವೇ ಬಂದು ನಿಂತಿದೆ. ಒಂದು ವೇಳೆ ಯುವರಿಬ್ಬರು ಈ ಸಾಹಸ ಮಾಡಿಲ್ಲ ಎಂದಿದ್ದರೆ, ರೈಲಿನಲ್ಲಿದ್ದ ಅಷ್ಟು ಪ್ರಯಾಣಿಕರಿಗೂ ಅಪಾಯವಾಗುವ ಸಾಧ್ಯತೆ ಇತ್ತು.

    ಈ ರೈಲಿನಲ್ಲಿ 1,200 ಜನರು ಪ್ರಯಾಣ ಮಾಡುತ್ತಿದ್ದರು. ಆದರೆ ಯುವಕರಿಬ್ಬರು ಸಮಯ ಪ್ರಜ್ಞೆಯಿಂದ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ. ರಿಯಾಜ್ ಹಾಗೂ ತೋಫಿಕ್ ಸಾಹಸದ ಬಗ್ಗೆ ನೈಋತ್ಯ ರೈಲ್ವೆ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಇವರಿಬ್ಬರಿಗೆ ಶೌರ್ಯ ಪ್ರಶಸ್ತಿ ಕೊಡಬೇಕೆಂದು ಸೂಚಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv