Tag: belagavi

  • ಚರಂಡಿಯಲ್ಲಿ ಪತ್ತೆಯಾಯ್ತು ಮನುಷ್ಯರ ತಲೆಬುರುಡೆ!

    ಚರಂಡಿಯಲ್ಲಿ ಪತ್ತೆಯಾಯ್ತು ಮನುಷ್ಯರ ತಲೆಬುರುಡೆ!

    ಬೆಳಗಾವಿ(ಚಿಕ್ಕೋಡಿ): ಅಥಣಿ ಪಟ್ಟಣದ ವಿಕ್ರಮಪುರ ನಗರದ ಚರಂಡಿಯಲ್ಲಿ ಎರಡು ತಲೆ ಬುರುಡೆ ಪತ್ತೆಯಾಗಿದೆ.

    ಇಂದು ವಿಕ್ರಮಪುರ ನಗರದ ನಿವಾಸಿ ಡಾ.ರಾಮ್ ಕುಲಕರ್ಣಿ ಎಂಬುವವರ ಮನೆಯ ಮುಂದಿನ ಚರಂಡಿಯಲ್ಲಿ ತಲೆ ಬುರುಡೆ ಪತ್ತೆಯಾಗಿದೆ. ಪುರಸಭೆ ಕಾರ್ಮಿಕರು ಸ್ವಚ್ಛತಾ ಕಾರ್ಯ ಮಾಡುವಾಗ ಚರಂಡಿಯಲ್ಲಿ ಎರಡು ತಲೆ ಬುರುಡೆ ಸಿಕ್ಕಿದೆ.

    ಎರಡು ತಲೆ ಬುರುಡೆಯನ್ನು ಚರಂಡಿಯಿಂದ ಹೊರತೆಗೆದಾಗ ಸ್ಥಳೀಯರು ಅದನ್ನು ಕಂಡು ಆತಂಕಕ್ಕೆ ಒಳಗಾಗಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಅಮವಾಸ್ಯೆ ಇದ್ದ ಕಾರಣಕ್ಕೆ, ವಾಮಾಚಾರ ಮಾಡಲು ತಲೆ ಬುರುಡೆಗಳನ್ನು ಉಪಯೋಗಿಸಿಕೊಂಡು ಬಳಿಕ ಅದನ್ನು ಚರಂಡಿಯಲ್ಲಿ ಎಸೆದಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.

    ಯಾರು ಈ ಬುರುಡೆಗಳನ್ನು ಚರಂಡಿಯಲ್ಲಿ ಎಸೆದಿದ್ದು ಎಂಬ ಪ್ರಶ್ನೆ ಈಗ ಹುಟ್ಟಿಕೊಂಡಿದೆ. ಅಥಣಿ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿ ತಲೆ ಬುರುಡೆ ಪತ್ತೆಯಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತಲ್ವಾರ್​ನಿಂದ ಕೇಕ್ ಕತ್ತರಿಸಿದ ಬಿಜೆಪಿ ಮುಖಂಡ ಅರೆಸ್ಟ್

    ತಲ್ವಾರ್​ನಿಂದ ಕೇಕ್ ಕತ್ತರಿಸಿದ ಬಿಜೆಪಿ ಮುಖಂಡ ಅರೆಸ್ಟ್

    ಬೆಳಗಾವಿ: ತಲ್ವಾರ್​ನಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದಕ್ಕೆ ಬೆಳಗಾವಿಯ ಬಿಜೆಪಿ ಮುಖಂಡ ನಿಖಿಲ್ ಮುರ್ಕುಟೆಯನ್ನು ಮಾಳಮಾರುತಿ ಪೊಲೀಸರು ಬಂಧಿಸಿದ್ದಾರೆ.

    ನಿಖಿಲ್ ಮುರ್ಕುಟೆ ಬೆಳಗಾವಿ ಮಹಾನಗರ ಬಿಜೆಪಿ ಯುವ ಮೋರ್ಚಾ ಘಟಕದ ಅಧ್ಯಕ್ಷನಾಗಿದ್ದಾನೆ. ಫೆ.1 ರಂದು ಬೆಳಗಾವಿಯ ಗಾಂಧಿನಗರದಲ್ಲಿ ಬರ್ತ್ ಡೇ ಪಾರ್ಟಿ ನಡೆದಿತ್ತು. ನಿಖಿಲ್ ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಅನಿಲ್ ಬೆನಕೆ ಹಾಗೂ ಮಾಜಿ ಶಾಸಕ ಸಂಜಯ್ ಪಾಟೀಲ್ ಆಗಮಿಸಿದ್ದರು.

    ಬೆಳಗಾವಿ ಮಾಳಮಾರುತಿ ಪೊಲೀಸರು ತಡರಾತ್ರಿ ಕಾರ್ಯಚರಣೆ ನಡೆಸಿ ನಿಖಿಲ್ ಮುರ್ಕುಟೆನನ್ನು ಬಂಧಿಸಿ ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ.

    ಹುಬ್ಬಳ್ಳಿ, ವಿಜಯಪುರ ನಂತರ ಬೆಳಗಾವಿಯಲ್ಲೂ ಈ ಪ್ರಕರಣ ಮುಂದುವರಿದಿದೆ. ಇಲ್ಲಿಯವರೆಗೂ ಪುಡಿ ರೌಡಿಗಳು ತಲ್ವಾರ್ ನಿಂದ ಕೇಕ್ ಕಟ್ ಮಾಡುತ್ತಿದ್ದರು. ಆದರೆ ಈಗ ಬಿಜೆಪಿ ಪಕ್ಷದ ಮುಖಂಡ ತಲ್ವಾರ್ ನಿಂದ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಚರ್ಚೆಗೆ ಗ್ರಾಸವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆಗೆ ವಿಶ್ವಚೇತನ ಪ್ರಶಸ್ತಿ

    ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆಗೆ ವಿಶ್ವಚೇತನ ಪ್ರಶಸ್ತಿ

    ಬೆಳಗಾವಿ/ಚಿಕ್ಕೋಡಿ: ಖ್ಯಾತ ಕ್ರಿಕೆಟ್ ಆಟಗಾರ ಹಾಗೂ ಟೀಂ ಇಂಡಿಯಾ ಮಾಜಿ ಕೋಚ್ ಅನಿಲ್ ಕುಂಬ್ಳೆ ಅವರಿಗೆ ವಿಶ್ವಚೇತನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

    ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಯಡೂರು ಗ್ರಾಮದ ವೀರಭದ್ರೇಶ್ವರ ವಿಶಾಳಿ ಜಾತ್ರಾ ಮಹೋತ್ಸವದಲ್ಲಿ ಕಾಡಸಿದ್ದೇಶ್ವರ ಮಠದಿಂದ ಈ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ. ಯಡೂರು ಮಠದ ಪೀಠಾಧಿಪತಿಗಳು, ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಸ್ವಾಮೀಜಿ, ನಿಡಸೋಶಿ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹಾಗೂ ಕಾಶಿ ಜಗದ್ಗುರು ಸ್ವಾಮೀಜಿಗಳು ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರಿಗೆ ಈ ಪ್ರಶಸ್ತಿ ನೀಡಿ ಸನ್ಮಾನಿಸಿದ್ದಾರೆ.

    ಪ್ರಶಸ್ತಿ ಸ್ವೀಕರಿಸಿದ ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅನಿಲ್ ಕುಂಬ್ಳೆ ಇಂದಿನ ಯುವಕರು ತಾವು ಮಾಡುವ ಕೆಲಸದಲ್ಲಿ ಶ್ರಮವಹಿಸಬೇಕು ಎಂದಾಗ ಮಾತ್ರ ಯಶಸ್ಸು ಸಿಗಲು ಸಾಧ್ಯ. 619 ವಿಕೆಟ್ ಪಡೆಯಲು 42 ಸಾವಿರ ಎಸೆತಗಳನ್ನು ಎಸೆಯಬೇಕಾಯಿತು. ಶ್ರಮವಿಲ್ಲದೆ ಏನನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಯುವ ಜನಾಂಗಕ್ಕೆ ಕಿವಿ ಮಾತು ಹೇಳಿದರು.

    ಅಲ್ಲದೇ ಇಂದಿನ ಮಕ್ಕಳು ಮೊಬೈಲಿನಲ್ಲಿ ಮುಳುಗಿ ನೈಜ ಕ್ರೀಡೆಗಳನ್ನು ಮರೆಯುತ್ತಿದ್ದಾರೆ. ಮಕ್ಕಳನ್ನು ಮೈದಾನಗಳಿಗೆ ಸೆಳೆಯಲು ಕ್ರೀಡೆಗಳಿಗೆ ಉತ್ತೇಜನ ನೀಡಬೇಕಿದೆ ಎಂದ ಅವರು ಈ ಇತಿಹಾಸ ಪ್ರಸಿದ್ಧ ತಾಣದಲ್ಲಿ ಪ್ರಶಸ್ತಿ ಸ್ವೀಕರಿಸುತ್ತಿರುವದು ಸಂತಸ ತಂದಿದೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಂಡ್ಯವನ್ನು ಜೆಡಿಎಸ್ಸಿಗೆ ಬಿಟ್ಟುಕೊಟ್ಟಿದ್ದೇವೆ – ಸತೀಶ್ ಜಾರಕಿಹೊಳಿ

    ಮಂಡ್ಯವನ್ನು ಜೆಡಿಎಸ್ಸಿಗೆ ಬಿಟ್ಟುಕೊಟ್ಟಿದ್ದೇವೆ – ಸತೀಶ್ ಜಾರಕಿಹೊಳಿ

    ಬೆಳಗಾವಿ: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಅವರಾ ಅಥವಾ ಹಿರಿಯ ನಟ ಅಂಬರೀಶ್ ಅವರ ಪತ್ನಿ ಸುಮಲತಾ ಅವರು ಸ್ಪರ್ಧಿಸುತ್ತಾರಾ ಎನ್ನುವ ಬಗ್ಗೆ ರಾಜಕೀಯದಲ್ಲಿ ಚರ್ಚೆಯಾಗುತ್ತಿದೆ. ಈ ಮಧ್ಯೆ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ಸಿಗೆ ಬಿಟ್ಟುಕೊಟ್ಟಿದ್ದೇವೆ ಎಂದು ಹೇಳಿದ್ದಾರೆ.

    ಈ ಬಗ್ಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಮಂಡ್ಯದಲ್ಲಿ ಜೆಡಿಎಸ್ ಇದೆ. ಕಾಂಗ್ರೆಸ್ ಅಭ್ಯರ್ಥಿ ಸ್ಪರ್ಧಿಸುವ ಪ್ರಶ್ನೆಯಿಲ್ಲ. ಹೀಗಾಗಿ ನಾವು ಮಂಡ್ಯ ಲೋಕಸಭೆಯನ್ನು ಜೆಡಿಎಸ್ ಗೆ ಬಿಟ್ಟು ಕೊಡುತ್ತೇವೆ. ಅಲ್ಲಿ ಯಾರು ಸ್ಪರ್ಧಿಸಬೇಕೆಂಬುದನ್ನ ಜೆಡಿಎಸ್ ನವರು ತೀರ್ಮಾನ ಮಾಡಬೇಕು. ನಾನು ಹೇಳಲು ಸಾಧ್ಯವಿಲ್ಲ. ಇನ್ನೂ ಸುಮಲತಾ ಅವರು ಯಾವ ಅರ್ಥದಲ್ಲಿ ಮಾತನಾಡಿದ್ದಾರೆ ನನಗೆ ಗೊತ್ತಿಲ್ಲ ಎಂದು ಹೇಳಿದರು.

    ಇದೇ ವೇಳೆ ರಮೇಶ್ ಜಾರಕಿಹೊಳಿ ಸೇರಿ ನಾಲ್ವರು ಶಾಸಕರನ್ನ ಅರ್ಹನಗೊಳಿಸುವ ವಿಚಾರವಾಗಿ ಮಾತನಾಡಿದ ಅವರು, ಪಕ್ಷ ಈಗಾಗಲೇ ಅವರಿಗೆ ನೋಟಿಸ್ ಕೊಟ್ಟಿದೆ. ಮತ್ತೆ ಅವರಿಗೆ ಹಾಜರಾಗಲು ಪಕ್ಷ ಅವಕಾಶಕೊಟ್ಟಿದೆ. ಹೀಗಾಗಿ ಅಲ್ಲಿಗೆ ರಮೇಶ್ ಜಾರಕಿಹೊಳಿ ಅವರು ಬಂದು ತಮ್ಮ ಸಮಸ್ಯೆ ಹೇಳಬಹುದು. ಇಲ್ಲವಾದರೆ ಪಕ್ಷ ತನ್ನದೆ ಆಗ ತೀರ್ಮಾನವನ್ನು ತೆಗೆದುಕೊಳ್ಳುತ್ತದೆ ಎಂದು ತಿಳಿಸಿದರು.

    ಸಿಎಂ ಕುಮಾರಸ್ವಾಮಿ ಅವರೇ ಬಜೆಟ್ ಮಂಡನೆ ಮಾಡುತ್ತಾರೆ. ಈಗಾಗಲೇ ಫೆಬ್ರವರಿ 8 ಕ್ಕೆ ಬಜೆಟ್ ಅಂತ ಘೋಷಣೆ ಮಾಡಿದ್ದಾರೆ ಎಂದು ಸತೀಶ್ ಜಾರಕಿಹೊಳಿ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾಂಗ್ರೆಸ್ ಬಂಡಾಯ ಶಮನವಾಗಿಲ್ಲ – ಅಲರ್ಟ್ ಆಗಿದ್ದೇವೆ: ಸತೀಶ್ ಜಾರಕಿಹೊಳಿ

    ಕಾಂಗ್ರೆಸ್ ಬಂಡಾಯ ಶಮನವಾಗಿಲ್ಲ – ಅಲರ್ಟ್ ಆಗಿದ್ದೇವೆ: ಸತೀಶ್ ಜಾರಕಿಹೊಳಿ

    ಬೆಳಗಾವಿ: ಸಮ್ಮಿಶ್ರ ಸರ್ಕಾರದ ದೋಸ್ತಿ ಪಕ್ಷವಾದ ಕಾಂಗ್ರೆಸ್ ನಲ್ಲಿ ಇನ್ನು ಬಂಡಾಯ ಶಮನ ಆಗಿಲ್ಲ, ಅದನ್ನು ಶಮನಗೊಳಿಸುವ ಪ್ರಯತ್ನ ನಡೆಸಲಾಗಿದೆ ಎಂದು ಅರಣ್ಯ ಸಚಿವ ಜಾರಕಿಹೊಳಿ ಹೇಳಿದ್ದಾರೆ.

    ಬೆಳಗಾವಿಯ ನಿಪ್ಪಾಣಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನ ಇರುವುದು ನಿಜ. ಅದು ಇನ್ನು ಶಮನ ಆಗಿಲ್ಲ. ಎಷ್ಟು ಶಾಸಕರು ಬಂಡಾಯದ ಬಾವುಟ ಹಿಡಿದಿದ್ದಾರೆ ಎಂಬ ಬಗ್ಗೆ ನಿರ್ದಿಷ್ಟ ಮಾಹಿತಿ ಇಲ್ಲ. ಆದರೆ ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಗೊಂದಲ ಇಲ್ಲ. ನಮ್ಮ ಪಕ್ಷದಲ್ಲಿ ಗೊಂದಲವಿದೆ ಅಷ್ಟೇ, ನಾವು ಅಲರ್ಟ್ ಇದ್ದೇವೆ. ರೆಸಾರ್ಟ್ ರಾಜಕಾರಣಕ್ಕೆ ಬಿಜೆಪಿಯಿಂದ ನಿರಂತರ ಪ್ರಯತ್ನ ನಡೆದಿದೆ ಎಂದರು.

    ಇದೇ ವೇಳೆ ಕೇಂದ್ರ ಬಿಜೆಟ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ಕಳೆದ 4 ವರ್ಷಗಳಲ್ಲಿ ಸರ್ಕಾರ ಘೋಷಣೆ ಮಾಡಿದ ಯಾವುದೇ ಯೋಜನೆ ಸಮರ್ಪಕವಾಗಿ ಜಾರಿ ಆಗಿಲ್ಲ. ಅಲ್ಲದೇ ಬಜೆಟ್‍ನಲ್ಲಿ ಯಾವುದೇ ವಿಶೇಷ ಯೋಜನೆ, ಘೋಷಣೆ ಇಲ್ಲ. ಇದರಿಂದ ಜನರಿಗೆ ನಿರಾಸೆ ಆಗಿದೆ. ದೇಶದ ಅಭಿವೃದ್ಧಿಗೆ ಸಂಬಂಧಿಸಿದ ಯಾವುದೇ ಅಂಶಗಳಿಲ್ಲದೇ ಕೇವಲ ಚುನಾವಣಾ ಬಜೆಟ್ ಆಗಿದೆ ಅಷ್ಟೇ ಎಂದರು.

    ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ಜಾರಕಿಹೊಳಿ ನಮ್ಮ ಸಿಎಂ ಎಂದು ಅಭಿಮಾನಿಗಳು ಪೋಸ್ಟ್ ಮಾಡಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈ ಹಿಂದೆ ಕೂಡ ಇಂತಹ ಅಭಿಯಾನ ನಡೆದಿತ್ತು. ಇದು ಪ್ರೀತಿ, ವಿಶ್ವಾಸಕ್ಕೆ ಅಭಿಮಾನಿಗಳ ಬೇಡಿಕೆ ಅಷ್ಟೇ. ಇದರಿಂದ ಸರ್ಕಾರಕ್ಕೆ ತೊಂದರೆ ಆಗಲ್ಲ. ಸರ್ಕಾರದ ಸುಗಮವಾಗಿ ನಡೆಯುತ್ತದೆ ಎಂದು ಭರವಸೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಜೀವಜಲಕ್ಕಾಗಿ ನೀರೆಯರ ಪರದಾಟ..!- ಕಿ.ಮೀಗಟ್ಟಲೆ ಗುಡ್ಡ ಹತ್ತಿ ನೀರು ತರುತ್ತಾರೆ ಗ್ರಾಮಸ್ಥರು

    ಜೀವಜಲಕ್ಕಾಗಿ ನೀರೆಯರ ಪರದಾಟ..!- ಕಿ.ಮೀಗಟ್ಟಲೆ ಗುಡ್ಡ ಹತ್ತಿ ನೀರು ತರುತ್ತಾರೆ ಗ್ರಾಮಸ್ಥರು

    ಬೆಳಗಾವಿ: ತಲೆಯ ಮೇಲೊಂದು, ಸೊಂಟದ ಮೇಲೊಂದು ಕೊಡ ಹೊತ್ತು ಕಿಲೋಮೀಟರ್ ಗಟ್ಟಲೆ ಗುಡ್ಡ ಹತ್ತಿ ಇಳೀದು ನೀರು ತರುವ ತುಂಬು ಗರ್ಭಿಣಿ, ಶಾಲಾ ಮಕ್ಕಳು ಹಾಗೂ ಮಹಿಳೆಯರು ಪರದಾಟ ನಡೆಸುತ್ತಿರೋ ಮನಕಲಕುವ ದೃಶ್ಯ ಜಿಲ್ಲೆಯ ರಾಮದುರ್ಗ ತಾಲೂಕಿನ ಬುದ್ನಿಖುರ್ದ ಗ್ರಾಮದಲ್ಲಿ ಕಂಡುಬಂದಿದೆ.

    ಹೌದು. ಹಲವು ವರ್ಷಗಳಿಂದಲೂ ಬುದ್ನಿಖುರ್ದ ಗ್ರಾಮದಲ್ಲಿ ನೀರಿನ ಸಮಸ್ಯೆ ಇದೆ. ಆದ್ರೆ ಈ ಸಮಸ್ಯೆಯನ್ನು ಮಾತ್ರ ಯಾರಿಂದಲೂ ಬಗೆಹರಿಸಲು ಸಾಧ್ಯವಾಗಿಲ್ಲ. ಈ ಗ್ರಾಮದಲ್ಲಿರೋ ಒಂದು ಬೋರ್ ವೆಲ್ ನೀರಿನಿಂದಲೇ ಇಡೀ ಗ್ರಾಮದ ಜನ ನೀರು ಕುಡಿಯುತ್ತಿದ್ದಾರೆ. ಸುಮಾರು ಐದು ಸಾವಿರ ಜನಸಂಖ್ಯೆ ಇರುವ ಈ ಗ್ರಾಮದಲ್ಲಿ ನೀರು ಹೊತ್ತು ತರುವುದೇ ಒಂದು ದೊಡ್ಡ ಕೆಲಸವಾಗಿಬಿಟ್ಟಿದೆ. ನಿತ್ಯವೂ ಎರಡು ಕಿ.ಮೀ ನಡೆದುಕೊಂಡು ಹೋಗಿಯೇ ನೀರು ತರುವ ಸ್ಥಿತಿ ಇಲ್ಲಿದೆ. ಒಂದೆಡೆ ಪುರುಷರು ಕೂಲಿ ಮಾಡಲು ಹೋದರೆ, ಮತ್ತೊಂದೆಡೆ ಮಹಿಳೆಯರು ಹಾಗೂ ಮಕ್ಕಳು ನೀರು ತುಂಬುವ ಕೆಲಸ ಮಾಡುತ್ತಾರೆ.

    ವಿಪರ್ಯಾಸ ಅಂದ್ರೆ ಗರ್ಭಿಣಿ ಮಹಿಳೆಯರು ಕೂಡ ಎರಡು ಕಿ.ಮೀ ನಡೆದುಕೊಂಡು ಹೋಗಿ ನೀರು ತರುತ್ತಾರೆ. ರಸ್ತೆಗಳು ಕೂಡ ಸರಿಯಿಲ್ಲದ ಕಾರಣ ಈ ಗ್ರಾಮದಲ್ಲಿ ಒಂದು ಕಿ.ಮೀ ನಷ್ಟು ಗುಡ್ಡವನ್ನ ಹತ್ತಿ ನೀರು ತರುವುದರಿಂದ ಮಹಿಳೆಯರು ಹೊಟ್ಟೆನೋವು ಸೇರಿದಂತೆ ಹಲವು ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಅದರಲ್ಲೂ ಗರ್ಭಿಣಿ ಮಹಿಳೆಯರು ಕೆಲವೊಮ್ಮೆ ಬಿದ್ದು ಆಸ್ಪತ್ರೆಗಳಲ್ಲಿ ದಾಖಲಾದ ಪ್ರಕರಣಗಳು ಕೂಡ ನಡೆದಿದೆ.

    ಈ ಗ್ರಾಮದಲ್ಲಿ ನೀರಿನ ಸಮಸ್ಯೆ ಎಷ್ಟರ ಮಟ್ಟಿಗೆ ಇದೆ ಅಂದರೆ, ಪುಟ್ಟ ಪುಟ್ಟ ಮಕ್ಕಳು ಕೂಡ ನೀರಿಗಾಗಿ ಕೆಲವೊಮ್ಮೆ ಶಾಲೆಯನ್ನ ಬಿಟ್ಟು ನೀರು ತುಂಬುತ್ತಾರೆ. ಇತ್ತ ನೀರಿನ ಸಮಸ್ಯೆ ಇದ್ದುದರಿಂದ ದನಕರುಗಳನ್ನ ಸಾಕುವುದನ್ನು ಕೂಡ ಗ್ರಾಮಸ್ಥರು ಬಹುತೇಕವಾಗಿ ನಿಲ್ಲಿಸಿದ್ದಾರೆ. ಮಕ್ಕಳು ಹಾಗೂ ಮಹಿಳೆಯರು ಸೇರಿದಂತೆ ಗ್ರಾಮದ ಎಲ್ಲಾ ಜನರು ನಿತ್ಯವೂ ಕಿ.ಮೀ ಗಟ್ಟಲೇ ನಡೆದುಕೊಂಡು ಹೋಗಿ ನೀರು ತರುವ ಸ್ಥಿತಿ ಇದ್ದು, ಇದನ್ನ ಪರಿಹರಿಸಿ ಎಂದು ಹಲವು ಬಾರಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಓ ಗೆ ಮನವಿ ಮಾಡಿಕೊಂಡ್ರೂ ಯಾವುದೇ ಪ್ರಯೋಜನ ಆಗಿಲ್ಲ. ಅಲ್ಲದೆ ಸ್ಥಳೀಯ ಶಾಸಕರಂತೂ ಬರೀ ಚುನಾವಣೆ ಬಂದಾಗ ಮಾತ್ರ ಗ್ರಾಮಕ್ಕೆ ಬರ್ತಾರೆ ಚುನಾವಣೆ ಮುಗಿದ ಮೇಲೆ ಇತ್ತ ಸುಳಿಯುವುದೇ ಇಲ್ಲ. ಹೀಗಾಗಿ ಈ ಬಾರಿ ವೋಟ್ ಕೇಳೊಕೆ ಬಂದರೇ ಅವರನ್ನ ಸುಮ್ಮನೆ ಬಿಡುವುದಿಲ್ಲ ಎಂದು ಗ್ರಾಮಸ್ಥರು ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ.

    ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇದ್ದರೂ ಯಾವುದೇ ಪ್ರಯೋಜನ ಆಗ್ತಿಲ್ಲ. ವಿದ್ಯುತ್ ಕಡಿತಗೊಂಡರೇ ಕೆಲವೊಮ್ಮೆ ಕೆರೆ ನೀರು ಕುಡಿದು ಕಾಯಿಲೆಯಿಂದ ಗ್ರಾಮಸ್ಥರು ಬಳಲುತ್ತಿದ್ದಾರೆ. ಸದ್ಯ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವ ಬೆನ್ನಲ್ಲೆ ಜನನಾಯಕರ ವಿರುದ್ಧ ಗ್ರಾಮಸ್ಥರು ಆಕ್ರೋಶಗೊಂಡಿದ್ದು, ಮತ ಕೇಳಲು ಹೋಗುವ ಮುಖಂಡರಿಗೆ ಸರಿಯಾಗಿ ಉತ್ತರಿಸಲು ಜನರು ತಯಾರಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಅಮ್ಮನ ಕ್ಷೇತ್ರದಲ್ಲಿ ಪುತ್ರನ ದರ್ಬಾರ್ – ಲಕ್ಷ್ಮೀ ಹೆಬ್ಬಾಳ್ಕರ್ ಗೈರಲ್ಲಿ ಗುದ್ದಲಿ ಪೂಜೆ ನೆರವೇರಿಸಿದ ಮನ್ರಾಲ್

    ಅಮ್ಮನ ಕ್ಷೇತ್ರದಲ್ಲಿ ಪುತ್ರನ ದರ್ಬಾರ್ – ಲಕ್ಷ್ಮೀ ಹೆಬ್ಬಾಳ್ಕರ್ ಗೈರಲ್ಲಿ ಗುದ್ದಲಿ ಪೂಜೆ ನೆರವೇರಿಸಿದ ಮನ್ರಾಲ್

    ಬೆಳಗಾವಿ: ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾಡಬೇಕಿದ್ದ ಅಭಿವೃದ್ಧಿ ಕಾಮಗಾರಿಯ ಉದ್ಘಾಟನೆಯನ್ನು ಅವರ ಗೈರು ಹಾಜರಿಯಲ್ಲಿ ಪುತ್ರ ನೆರವೇರಿಸಿದ್ದು, ಈ ಮೂಲಕ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ.

    ಇಂದು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮುತಗಾ ಗ್ರಾಮದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ಕಾರ್ಯ ಏರ್ಪಡಿಸಲಾಗಿತ್ತು. ಆದರೆ ಈ ವೇಳೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಗೈರು ಹಾಜರಿ ಆಗಿದ್ದರು. ಪರಿಣಾಮ ಜನಪ್ರತಿನಿಧಿಗಳು ಮಾಡಬೇಕಿದ್ದ ಕಾರ್ಯವನ್ನು ಶಾಸಕಿ ಪುತ್ರ  ಮನ್ರಾಲ್ ಮಾಡಿದ್ದು, ಕ್ಷೇತ್ರದಲ್ಲಿ ತಮ್ಮ ದರ್ಬಾರ್ ನಡೆಸಿದ್ದಾರೆ.

    ಶಿಷ್ಟಾಚಾರ ಪ್ರಕಾರ ಕ್ಷೇತ್ರದ ಶಾಸಕರು ಗೈರು ಹಾಜರಿ ಇರುವ ವೇಳೆ ಆ ಕ್ಷೇತ್ರದ ಇತರೇ ಜನ ಪ್ರತಿನಿಧಿಗಳಾದ ಗ್ರಾಮ ಪಂಚಾಯತ್ ಅಧ್ಯಕ್ಷ ಅಥವಾ ತಾಲೂಕು ಪಂಚಾಯತ್ ಅಧ್ಯಕ್ಷರು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಾರೆ. ಇಲ್ಲವಾದರೆ ಇಲಾಖೆಗೆ ಸಂಬಂಧಿಸಿದ ಉನ್ನತ ಅಧಿಕಾರಿಗಳು ಈ ಕಾರ್ಯವನ್ನು ನಡೆಸುತ್ತಾರೆ. ಆದರೆ ಇಲ್ಲಿ ಮಾತ್ರ ಶಾಸಕರ ಪುತ್ರ ಚಾಲನೆ ನೀಡಿ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ. ಈ ಕುರಿತು ಸ್ಥಳೀಯ ಬಿಜೆಪಿ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದು, ಅವರ ವಿರೋಧದ ನಡುವೆಯೇ ಕಾರ್ಯಕ್ರಮ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಜಾರಕಿಹೊಳಿ ಬೆಂಬಲಿಗರಿಗೆ ಐಟಿ ನೋಟಿಸ್ – ಬಂಧನದ ಭೀತಿಯಲ್ಲಿ ಊರು ಬಿಟ್ಟ ಗೋಕಾಕ್ ಜನ

    ಜಾರಕಿಹೊಳಿ ಬೆಂಬಲಿಗರಿಗೆ ಐಟಿ ನೋಟಿಸ್ – ಬಂಧನದ ಭೀತಿಯಲ್ಲಿ ಊರು ಬಿಟ್ಟ ಗೋಕಾಕ್ ಜನ

    ಬೆಳಗಾವಿ: ತಮ್ಮ ಶಾಸಕನ ಮೇಲೆ ನಂಬಿಕೆ ಇಟ್ಟು ಕೇಳಿದ್ದಲ್ಲವನ್ನೂ ಕೊಟ್ಟು ಗೋಕಾಕ್ ಜನ ಬೆನ್ನಿಗೆ ನಿಂತರು. ಆದ್ರೆ ನಂಬಿದ ಬೆಂಬಲಿಗರಿಗೆ ಗೋಕಾಕ್ ಶಾಸಕ ಹಾಗೂ ಸುಪುತ್ರ ಮಾಡಿದ ಮಹಾಮೋಸಕ್ಕೆ ಇಂದು ಅವರೆಲ್ಲರೂ ತಮ್ಮ ಊರು ಬಿಟ್ಟು ಅಜ್ಞಾತವಾಗಿದ್ದಾರೆ. ಮೂರು ವರ್ಷದ ಹಿಂದೆ ನಡೆದ ಐಟಿ ದಾಳಿಗೆ ಸಂಬಂಧಿಸಿದಂತೆ ಈಗ ಐಟಿ ಇಲಾಖೆಯಿಂದ ಬಡ ಕುಟುಂಬಗಳಿಗೆ ನೋಟಿಸ್ ಬಂದಿದೆ.

    ಹೌದು. ಮಾಜಿ ಮಂತ್ರಿ ದಿ ಗ್ರೇಟ್ ರಮೇಶ್ ಜಾರಕಿಹೊಳಿ ಅವರು ತಮ್ಮ ಮಂತ್ರಿ ಸ್ಥಾನ ಹೋದ ಬಳಿಕ ದೋಸ್ತಿ ಸರ್ಕಾರದ ವಿರುದ್ಧ ಸಿಡಿದೆದ್ದು, ಬಿಜೆಪಿ ಸೇರೋ ಸಲುವಾಗಿ ಮುಂಬೈ ಸೇರಿ ತಿಂಗಳಾಗ್ತಾ ಬಂದಿದೆ. ತಾವು ಪ್ರತಿನಿಧಿಸ್ತಿರೋ ಗೋಕಾಕ್ ಕ್ಷೇತ್ರದ ಮತದಾರರ ಪಾಡು ಏನಾಯ್ತು ಎಂಬ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಮತದಾರರು ಹೋಗ್ಲಿ, ಅವ್ರ ಬೆಂಬಲಿಗರು ಪಾಡನ್ನು ವಿಚಾರಿಸೋರಿಲ್ಲ.

    ರಮೇಶ್ ಮೇಲೆ ಐಟಿ ರೇಡ್ ನಡೆದ ಮೂರು ವರ್ಷದ ನಂತರ ಬೇನಾಮಿ ಆಸ್ತಿ ಹಾಗೂ ಹಣ ವರ್ಗಾವಣೆ ಸಂಬಂಧಿಸಿದಂತೆ ಈಗ ಅವರ ಬೆಂಬಲಿಗರಿಗೆ ಐಟಿ ಇಲಾಖೆ ಸಮನ್ಸ್ ನೀಡಿದೆ. ಗೋಕಾಕ್ ತಾಲೂಕಿನ ಅಕ್ಕತಂಗೇರಹಾಳ, ಗುಜನಾಳ, ಅಂಕಲಗಿ, ಮಲ್ಲಾಪುರ ಸೇರಿದಂತೆ 9ಕ್ಕೂ ಅಧಿಕ ಗ್ರಾಮಗಳಲ್ಲಿನ 50ಕ್ಕೂ ಅಧಿಕ ಜನರಿಗೆ ಐಟಿ ನೋಟಿಸ್ ನೀಡಿದೆ. ಈ ನೋಟಿಸ್ ಬೆನ್ನಲ್ಲೇ ಜನ ಊರು ತೊರೆದಿದ್ದಾರೆ.

    ನಾಲ್ಕೈದು ವರ್ಷದ ಹಿಂದೆ ರೈತ ಭೀಮಗೌಡನಿಂದ ವೋಟರ್ ಐಡಿ ಹಾಗೂ ಒಂದು ಫೋಟೋ ಪಡೆದಿದ್ದ ರಮೇಶ್ ಜಾರಕಿಹೊಳಿ, ಅವರಿಗೆ ಗೊತ್ತಿಲ್ಲದಂತೆ ಅಕೌಂಟ್ ನಿಂದ ಸುಮಾರು ಮೂವತ್ತು ಲಕ್ಷ ಹಣ ವರ್ಗಾವಣೆ ಮಾಡಿದ್ರಂತೆ. ಇದು ಐಟಿ ದಾಳಿ ವೇಳೆ ಬಯಲಾಗಿದ್ದು, ಇದರ ಆಧಾರದ ಮೇಲೆ ಸದ್ಯ ಐಟಿ ಇಲಾಖೆ ಸಮನ್ಸ್ ನೀಡಿದೆ ಎನ್ನಲಾಗುತ್ತಿದೆ. ತಮ್ಮಿಂದ ಮುಗ್ಧ ರೈತರು ಇಷ್ಟೆಲ್ಲಾ ಕಷ್ಟ ಅನುಭವಿಸ್ತಿದ್ರೂ ಜಾರಕಿಹೊಳಿ ಮಾತ್ರ ಮುಂಬೈ ರೇಸಾರ್ಟ್‍ನಲ್ಲಿ ಮಸ್ತ್ ಮಜಾ ಮಾಡುತ್ತಿರುವುದು ಇದೀಗ ಅವರ ಬೆಂಬಲಿಗರನ್ನೇ ಕೆರಳಿಸಿದೆ.

    ಒಟ್ಟಿನಲ್ಲಿ ಗೋಕಾಕ್ ಶಾಸಕರನ್ನು ಬೆಂಬಲಿಸಿದ ಏಕೈಕ ಕಾರಣಕ್ಕೆ ಅವರು ಆದಾಯ ತೆರಿಗೆ ದಾಳಿಯ ಬಿಸಿ ಅನುಭವಿಸಬೇಕಾಗಿ ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಮದ್ವೆಯಲ್ಲಿ ನವದಂಪತಿಗೆ ಸಿಕ್ತು ಮೋದಿ ಭಾವಚಿತ್ರದ ಗಿಫ್ಟ್

    ಮದ್ವೆಯಲ್ಲಿ ನವದಂಪತಿಗೆ ಸಿಕ್ತು ಮೋದಿ ಭಾವಚಿತ್ರದ ಗಿಫ್ಟ್

    ಬೆಳಗಾವಿ/ಚಿಕ್ಕೋಡಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಪ್ರಧಾನಿ ಮೋದಿ ಹೆಸರು ಬಳಸಿದ್ದು ನೋಡಿದ್ದೀರಿ, ಮೋದಿ ಸಾಧನೆಗಳನ್ನು ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಿರುವದನ್ನು ನೋಡಿದ್ದೀರಿ. ಆದರೆ ಅದಕ್ಕೂ ವಿಶೇಷ ಎನ್ನುವಂತೆ ಮದುವೆ ಕಾರ್ಯಕ್ರಮದಲ್ಲಿ ವಧು-ವರರಿಗೆ ಮೋದಿ ಭಾವಚಿತ್ರ ಗಿಫ್ಟ್ ಕೊಡಲಾಗಿದೆ.

    ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಮ್ ಗ್ರಾಮದಲ್ಲಿ ಮೂರು ದಿನಗಳ ಹಿಂದೆ ಜರುಗಿದ ಕಲ್ಲಪ್ಪ ಪಾಯನ್ನವರ ಹಾಗೂ ಜಯಾ ಅವರ ಮದುವೆ ಕಾರ್ಯಕ್ರಮದಲ್ಲಿ ಈಶ್ವರ್ ಶೇಗುನಿಶಿ ಎಂಬವರು ವಧು-ವರರಿಗೆ ಮೋದಿ ಭಾವಚಿತ್ರ ಗಿಫ್ಟ್ ನೀಡಿದ್ದಾರೆ. ಮೋದಿ ಭಾವಚಿತ್ರದ ಜೊತೆಗೆ ಚಿನ್ನದ ಉಂಗುರ ಕೊಡುಗೆಯಾಗಿ ಕೊಟ್ಟಿದ್ದಾರೆ. ಈ ವೇಳೆ ಮೋದಿ ಭಾವಚಿತ್ರದ ಗಿಫ್ಟ್ ಸಂತಸ ತಂದಿದೆ ಎಂದು ವರ ಕಲ್ಲಪ್ಪ ಹೇಳಿಕೊಂಡಿದ್ದಾರೆ.

    ವರ ಕಲ್ಲಪ್ಪ ಪಾಯನ್ನವರ ಮೂಲತಃ ಹುಕ್ಕೇರಿ ತಾಲೂಕಿನ ಕರಗುಪ್ಪಿ ಗ್ರಾಮದವರಾಗಿದ್ದರು. ಐರ್ಲ್ಯಾಂಡ್ ದೇಶದ ಟಿಪ್ಪೆರೇರಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತಿದ್ದರೆ, ಗಿಫ್ಟ್ ನೀಡಿರುವ ಈಶ್ವರ್ ಶೇಗುಣಶಿ ಮೂಲತ ಹುಕ್ಕೇರಿ ತಾಲೂಕಿನ ಕುರಣಿವಾಡಿ ಗ್ರಾಮದವರಾಗಿದ್ದು, ಐರ್ಲ್ಯಾಂಡ್ ದೇಶದ ಗಾಲವೇ ಆರೋಗ್ಯ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಇಬ್ಬರೂ ಸ್ನೇಹಿತರು ವಿದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ದೇಶದ ಪ್ರಧಾನಿ ಮೋದಿ ಅವರ ಮೇಲೆ ಸಾಕಷ್ಟು ಅಭಿಮಾನ ಇಟ್ಟುಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತವರು ಮನೆಗೆ ಹೊರಟ ಪತ್ನಿ- ರಸ್ತೆಯಲ್ಲೇ ಪತಿಯ ರಂಪಾಟ

    ತವರು ಮನೆಗೆ ಹೊರಟ ಪತ್ನಿ- ರಸ್ತೆಯಲ್ಲೇ ಪತಿಯ ರಂಪಾಟ

    ಬೆಳಗಾವಿ(ಚಿಕ್ಕೋಡಿ): ನಾಲ್ಕು ಗೋಡೆಗಳ ನಡುವೆ ಮುಗಿಯಬೇಕಿದ್ದ ವೈಮನಸ್ಸು ಬೀದಿಗೆ ಬಂದು ಗಂಡ ಹೆಂಡತಿ ಜಗಳ ಹಾದಿ ರಂಪಾಟವಾದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ.

    ಅಥಣಿ ತಾಲೂಕಿನ ಜಂಬಗಿ ಗ್ರಾಮದ ಬಾಳಾಸಾಬ್ ವಾಗ್ಮೋರೆ ಎನ್ನುವ ಖಾಸಗಿ ಶಾಲೆಯ ಶಿಕ್ಷಕ ಕಳೆದ ಒಂದುವರೆ ವರ್ಷದ ಹಿಂದೆ ಬೆಳಗಾವಿ ಮೂಲದ ಮಹಿಳೆಯನ್ನು ಮದುವೆಯಾಗಿದ್ದನು. ನಿತ್ಯದ ಕಿರುಕುಳದಿಂದ ಬೇಸತ್ತ ಮಹಿಳೆ ತನ್ನ ತಾಯಿಯ ಜೊತೆ ತವರು ಮನೆಗೆ ಹೊರಟ್ಟಿದ್ದರು. ಈ ವೇಳೆ ಅವರಿಬ್ಬರನ್ನು ತಡೆದ ಬಾಳಾಸಾಬ್ ಗಲಾಟೆ ಮಾಡಿದ್ದಾನೆ.

    ಪತಿ ಗಲಾಟೆ ಮಾಡುತ್ತಿರುವುದನ್ನು ನೋಡಿ ನೊಂದ ಮಹಿಳೆ ಅಸಹಾಯಕರಾಗಿ ಕಣ್ಣೀರು ಹಾಕಿದ್ದಾರೆ. ಪತಿ- ಪತ್ನಿಯ ಈ ಜಗಳ ಸಾರ್ವಜನಿಕರಿಗೆ ಕೆಲ ಹೊತ್ತು ಮೋಜಿನ ವಿಷಯವಾಗಿತ್ತು. ನಂತರ ಕೆಲ ಪ್ರಜ್ಞಾವಂತರ ಮಧ್ಯಸ್ಥಿಕೆಯಿಂದ ಬಾಳಾಸಾಬ್‍ನಿಂದ ನೊಂದ ಮಹಿಳೆಯರು ತಮ್ಮ ಊರಿಗೆ ತೆರಳಿದ್ದಾರೆ.

    ಸಾರ್ವಜನಿಕರು ಜಮಾಯಿಸುತ್ತಿದ್ದಂತೆ ರಂಪಾಟ ಮುಕ್ತಾಯಗೊಳಿಸಿದ ಬಾಳಾಸಾಬ್ ಮನೆಗೆ ಮರಳಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv