Tag: belagavi

  • ಬೆಳಗಾವಿಯಿಂದ ಹುಬ್ಬಳ್ಳಿಗೆ ಶಿಫ್ಟ್‌ | ಗರ್ಭಿಣಿ ಸಾವು, ವಿಷ ಸೇವಿಸಿದ ಪತಿ – ಐಸಿಯುನಲ್ಲಿ ಚಿಕಿತ್ಸೆ

    ಬೆಳಗಾವಿಯಿಂದ ಹುಬ್ಬಳ್ಳಿಗೆ ಶಿಫ್ಟ್‌ | ಗರ್ಭಿಣಿ ಸಾವು, ವಿಷ ಸೇವಿಸಿದ ಪತಿ – ಐಸಿಯುನಲ್ಲಿ ಚಿಕಿತ್ಸೆ

    ಧಾರವಾಡ: ತೀವ್ರ ಅನಾರೋಗ್ಯ ಹಿನ್ನೆಲೆ ಬೆಳಗಾವಿಯಿಂದ (Belagavi) ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ (KIMS Hospital) ಶಿಫ್ಟ್‌ ಆಗಿದ್ದ ಗರ್ಭಿಣಿ (Pregnant Women) ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಪತ್ನಿ ಮತ್ತು ಮಗು ಸಾವಿನಿಂದ ನೊಂದು ಪತಿ ಕೂಡ ಆಸ್ಪತ್ರೆಯಲ್ಲೇ ಆತ್ಮಹತ್ಯೆ ಯತ್ನಿಸಿದ ಘಟನೆ ನಡೆದಿದೆ.

    ಬೆಳಗಾವಿಯ 19 ವರ್ಷ ರಾಧಿಕಾ ಮೃತ ಗರ್ಭಿಣಿ. ಎಂಟು ತಿಂಗಳ‌ ಗರ್ಭಿಣಿಯಾಗಿದ್ದ ರಾಧಿಕಾ, ಹೊಟ್ಟೆ ನೋವಿನಿಂದ ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಬಿಮ್ಸ್‌ ಆಸ್ಪತ್ರೆಗೆ ರವಾನಿಸಲಾಗಿತ್ತು.

    ಬಿಮ್ಸ್‌ನಲ್ಲಿ ಸರಿಯಾದ ಚಿಕಿತ್ಸೆ ಇಲ್ಲದ ಕಾರಣ ಬೆಳಗಾವಿಯಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಈ ಹೊತ್ತಿಗೆ ರಾಧಿಕಾ ಹೊಟ್ಟೆಯೊಳಗಿದ್ದ ಮಗು ಸಾವನ್ನಪ್ಪಿತ್ತು. ಹೀಗಿದ್ದರೂ ಕಳೆದ 24 ಗಂಟೆಯಿಂದ ಕಿಮ್ಸ್ ವೈದ್ಯರು ರಾಧಿಕಾ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನಪಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಇಂದು (ಡಿ.31) ಬೆಳಗ್ಗೆ 11 ಗಂಟೆಗೆ ಕೊನೆಯುಸಿರೆಳೆದರು.  ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಸಿಲಿಂಡರ್ ಸ್ಫೋಟ ಕೇಸ್‌ – ಮತ್ತೊಬ್ಬ ಅಯ್ಯಪ್ಪ ಮಾಲಾಧಾರಿ ಸಾವು – 8 ಕ್ಕೇರಿದ ಸಾವಿನ ಸಂಖ್ಯೆ

    ಮಗು ಮತ್ತು ಪತ್ನಿಯ ಸಾವಿನ ಸುದ್ದಿ ತಿಳಿ ಪತಿ ಮಲ್ಲೇಶಿ ಆಸ್ಪತ್ರೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದು, ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ.

     

    ಕಿಮ್ಸ್‌ ವೈದ್ಯರು ಹೇಳಿದ್ದೇನು?
    ಈ ಬಗ್ಗೆ ಮಾತನಾಡಿದ ಕಿಮ್ಸ್ ನಿರ್ದೇಶಕ ಎಸ್ ಎಫ್ ಕಮ್ಮಾರ, ಬೆಳಗಾವಿಯಿಂದ ಕಿಮ್ಸ್ ಆಸ್ಪತ್ರೆ ಬಂದಾಗಲೇ ಗರ್ಭಿಣಿ ರಾಧಿಕಾ ಆರೋಗ್ಯ ಸ್ಥಿತಿ ಚಿಂತಾಜನಕವಾಗಿತ್ತು. ಬಿಪಿ, ನಾಡಿಮಿಡಿತ ಇರಲಿಲ್ಲ, ರಾಧಿಕಾ ಅವರಿಗೆ ಪ್ರಜ್ಞೆಯೇ ಇರಲಿಲ್ಲ. ಹೊಟ್ಟೆಯಲ್ಲಿ ಮಗು ಮೃತಪಟ್ಟು ಬಹಳಷ್ಟು ಸಮಯವಾಗಿತ್ತು. ಆದರೆ ನಮ್ಮ ವೈದ್ಯರು ಸಕಾಲದಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಿದ್ದರು. ರಾಧಿಕಾ ಅವರಿಗೆ ಪ್ರಜ್ಞೆ ಬಂದಾಗ ಗರ್ಭದಿಂದ ಮಗು ಹೊರ ತೆಗೆಯುವ ಆಲೋಚನೆ ಇತ್ತು. ಆದರೆ ಅವರ ಆರೋಗ್ಯ ಚೇತರಿಕೆ ಆಗಲೇ ಇಲ್ಲ. ಇಂದು ಬೆಳಗ್ಗೆ 11 ಗಂಟೆ ರಾಧಿಕಾ ಸಾವನ್ನಪ್ಪಿದ್ದಾರೆ. ಇದರಿಂದ ಮನನೊಂದು ಆಕೆ ಪತಿ ಮಲ್ಲೇಶಿ ಆತ್ಮಹತ್ಯೆ ಪ್ರಯತ್ನ ಮಾಡಿದ್ದು ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ಅವರಿಗೆ ಕಿಮ್ಸ್ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

  • ಬೆಳಗಾವಿ | ಬೆಡ್ ರೂಮ್‍ನಲ್ಲಿ ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ

    ಬೆಳಗಾವಿ | ಬೆಡ್ ರೂಮ್‍ನಲ್ಲಿ ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ

    ಬೆಳಗಾವಿ: ಗೃಹಿಣಿಯೊಬ್ಬಳು ನೇಣು ಬೀಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿಯ (Belagavi) ಸಾಂಬ್ರಾ ಗ್ರಾಮದಲ್ಲಿ ನಡೆದಿದೆ.

    ಸವಿತಾ ಮಾರುತಿ ಜೋಗಾಣಿ (32) ಆತ್ಮಹತ್ಯೆಗೆ ಶರಣಾದ ಮಹಿಳೆ. ಮನೆಯ ಮೊದಲ ಮಹಡಿಯ ಬೆಡ್‍ರೂಮ್‍ನಲ್ಲಿ ಮಹಿಳೆ ವೇಲ್‍ನಿಂದ ನೇಣು ಬಿಗಿದುಕೊಂಡಿದ್ದಾಳೆ. ಆಕೆಯನ್ನು ಕೂಡಲೇ ಬೀಮ್ಸ್ ಆಸ್ಪತ್ರೆ ಕರೆದುಕೊಂಡು ಬರಲಾಗಿದೆ. ಆದರೆ ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.

    ಈ ಸಂಬಂಧ ಮೃತಳ ತಾಯಿ ಭಾರತಾ ಮೋರೆ ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತಪಡಿಸಿ, ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


    ಮಾರುತಿ ಎಂಬವರ ಜೊತೆ ಸವಿತಾ ಮದುವೆಯಾಗಿ 6 ವರ್ಷವಾಗಿತ್ತು. ದಂಪತಿಗೆ 4 ವರ್ಷದ ಗಂಡು ಮಗುವಿದೆ. ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಬೀಮ್ಸ್ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ.

  • ಬೆಳಗಾವಿ ಕಾಂಗ್ರೆಸ್ ಅಧಿವೇಶನ ಸ್ವಾಗತ ಬ್ಯಾನರ್‌ಗಳಲ್ಲಿ ಎಡವಟ್ಟು – ತಪ್ಪಾದ ಭಾರತದ ನಕಾಶೆ ಮುದ್ರಣಕ್ಕೆ ಆಕ್ರೋಶ

    ಬೆಳಗಾವಿ ಕಾಂಗ್ರೆಸ್ ಅಧಿವೇಶನ ಸ್ವಾಗತ ಬ್ಯಾನರ್‌ಗಳಲ್ಲಿ ಎಡವಟ್ಟು – ತಪ್ಪಾದ ಭಾರತದ ನಕಾಶೆ ಮುದ್ರಣಕ್ಕೆ ಆಕ್ರೋಶ

    – ಪಿಒಕೆ & ಅಕ್ಸಾಯ್ ಚಿನ್ ಭಾರತದ ನಕಾಶೆಯಲ್ಲಿ ಕಣ್ಮರೆ

    ಬೆಳಗಾವಿ: ಇಲ್ಲಿ ಆಯೋಜಿಸಿರುವ ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವದ ಹಿನ್ನೆಲೆಯಲ್ಲಿ ಅಳವಡಿಸಲಾಗಿದ್ದ ಸ್ವಾಗತ ಕೋರುವ ಕಟೌಟ್, ಬ್ಯಾನರ್‌ಗಳಲ್ಲಿ ಕಾಂಗ್ರೆಸ್ ಎಡವಟ್ಟು ಮಾಡಿಕೊಂಡಿದೆ. ಬ್ಯಾನರ್‌ಗಳಲ್ಲಿ ತಪ್ಪಾದ ಭಾರತದ ನಕಾಶೆ ಮುದ್ರಿಸಿ ಟೀಕೆಗೆ ಗುರಿಯಾಗಿದೆ.

    ಅಧಿಕೃತವಾದದ್ದನ್ನು ಬಿಟ್ಟು ತಪ್ಪಾದ ಭಾರತದ ನಕಾಶೆ ಅಳವಡಿಸಿ ಕಾಂಗ್ರೆಸ್ ವಿವಾದಕ್ಕೆ ಗುರಿಯಾಗಿದೆ. ಜಮ್ಮು-ಕಾಶ್ಮೀರದ ಮೇಲ್ಭಾಗದ ಪ್ರದೇಶ ಮೊಟಕುಗೊಂಡ ನಕಾಶೆ ಮುದ್ರಿಸಿರುವುದು ಬ್ಯಾನರ್ ಮತ್ತು ಕಟೌಟ್‌ನಲ್ಲಿ ಕಂಡುಬಂದಿದೆ. ಪಿಒಕೆ ಮತ್ತು ಅಕ್ಸಾಯ್ ಚಿನ್ ಭಾರತದ ನಕಾಶೆಯಲ್ಲಿ ಕಣ್ಮರೆಯಾಗಿದೆ. ಇದನ್ನೂ ಓದಿ: ಎರಡು ದಿನ ಗಾಂಧಿ ಭಾರತ್ ಕಾರ್ಯಕ್ರಮ; ಬೆಳಗಾವಿಗೆ ಖರ್ಗೆ, ರಾಹುಲ್‌ ಗಾಂಧಿ ಆಗಮನ

    ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಯಿತು. ಪಾಕ್, ಚೀನಾ ವಿಭಜಿತ ನಕಾಶೆ ಹಾಕಿ ಅಪಮಾನ ಎಂದು ಸೋಶಿಯಲ್ ಮೀಡಿಯಾದಲ್ಲಿ ಟೀಕಾತ್ಮಕ ಪೋಸ್ಟ್‌ಗಳು ಹರಿದಾಡುತ್ತಿವೆ.

    ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ರಾತ್ರೋರಾತ್ರಿ ಭಾರತದ ಬ್ಯಾನರ್ ಮೇಲೆ ಮತ್ತೊಂದು ಬ್ಯಾನರ್ ಕಟ್ಟಿ ಎಡವಟ್ಟು ಮರೆಮಾಚಲು ಯತ್ನಿಸಲಾಗಿತ್ತು. ಕಾಂಗ್ರೆಸ್ ಪ್ರಮಾದಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಬಳಿಕ, ತಪ್ಪಾದ ಭಾರತದ ನಕಾಶೆ ಇರುವ ಬ್ಯಾನರ್‌ಗಳನ್ನು ತೆರವುಗೊಳಿಸಲಾಯಿತು. ಇದನ್ನೂ ಓದಿ: ಕಟೌಟ್‌ಗಳಲ್ಲಿ ಗಾಂಧಿ ಫೋಟೋನೇ ನೋಡಲಿಲ್ಲ, ನಕಲಿ ಗಾಂಧಿಗಳ ಫೋಟೋ ಆಕಾಶದೆತ್ತರಕ್ಕೆ ಹಾಕಿದ್ದಾರೆ: ಹೆಚ್‌ಡಿಕೆ

    ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟೀಕೆ
    ಸ್ವಾತಂತ್ರ‍್ಯಕ್ಕಾಗಿ ಅಸ್ತಿತ್ವ ಕಂಡುಕೊಂಡಿದ್ದ ಅಂದಿನ ಕಾಂಗ್ರೆಸ್ ಅನ್ನು ರಾಜಕೀಯ ಅಧಿಕಾರಕ್ಕಾಗಿ ಅಪೋಶನ ಮಾಡಿಕೊಂಡ ಕುಟುಂಬದ ಮುಷ್ಟಿಯಲ್ಲಿರುವ ಇಂದಿನ ಕಾಂಗ್ರೆಸ್, ಇಂದು ನಡೆಸುತ್ತಿರುವ ಬೆಳಗಾವಿ ಸಮಾವೇಶದ ಶತಮಾನದ ನೆನಪು ಕೇವಲ ರಾಜಕೀಯ ಹಿತಾಸಕ್ತಿಗಾಗಿ ಎಂಬುದು ದೇಶದ ಜನತೆಗೆ ತಿಳಿದಿದೆ.

    ಭಾರತದ ಕಿರೀಟ ಕಾಶ್ಮೀರಕ್ಕೆ ಕತ್ತರಿ ಪ್ರಯೋಗಿಸಿ ಮಹಾತ್ಮನನ್ನು ಸ್ಮರಿಸಲು ಹೊರಟಿರುವುದು ಮಹಾತ್ಮನ ಆತ್ಮಕ್ಕೆ ಇರಿದಂತೆ ಅಲ್ಲವೇ? ಅಖಂಡ ಭಾರತದ ಅಸ್ತಿತ್ವ ಹಾಗೂ ರಾಷ್ಟ್ರ ವಿಭಜನೆಯನ್ನು ತಡೆಯಲು ಕಡೇ ಕ್ಷಣದವರೆಗೂ ಪ್ರಯತ್ನಿಸಿದ ಗಾಂಧಿಯವರನ್ನು ಅಪಮಾನಿಸಲು ಹೊರಟಿರುವ ಬೆಳಗಾವಿಯ ಕಾಂಗ್ರೆಸ್ ಅಧಿವೇಶನದ ಶತಮಾನದ ನೆನಪಿನ ಕಾರ್ಯಕ್ರಮ, ದೇಶಪ್ರೇಮವನ್ನು ಮೆರೆಯಲೋ, ಅಥವಾ ರಾಷ್ಟ್ರವಿದ್ರೋಹಿ ಶಕ್ತಿಗಳನ್ನು ಓಲೈಸಲೋ? ಅಥವಾ ನಿಮ್ಮ ಮಿತ್ರರಾದ ಕಾಶ್ಮೀರಿ ಪ್ರತ್ಯೇಕತಾವಾದಿಗಳ ಓಲೈಕೆಗೋ ಎನ್ನುವುದನ್ನು ಕಾಂಗ್ರೆಸ್ಸಿಗರು ಸ್ಪಷ್ಟಪಡಿಸಬೇಕು. ಇದನ್ನೂ ಓದಿ: ನಕಲಿ ಕಾಂಗ್ರೆಸ್ ನೀತಿ ವಿರುದ್ಧ ನಾಳೆ ಮಹಾತ್ಮ ಗಾಂಧಿ ಪ್ರತಿಮೆ ಮುಂದೆ ಧರಣಿ: ಬಿ.ವೈ.ವಿಜಯೇಂದ್ರ

    ಭಾರತದ ಭೂಪಟಕ್ಕೆ ಅಪಚಾರವೆಸಗಿ ಕಾಶ್ಮೀರವಿಲ್ಲದ ಭಾರತದ ಭೂಪಟವನ್ನು ಪ್ರದರ್ಶಿಸುವ ಮೂಲಕ ರಾಷ್ಟ್ರದ್ರೋಹ, ಗಾಂಧಿದ್ರೋಹ ಎರಡನ್ನು ಎಸೆಗಿರುವ ಕಾಂಗ್ರೆಸಿಗರು ಈ ಕೂಡಲೇ ದೇಶದ ಜನತೆಯ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸುತ್ತೇನೆ ಎಂದು ಎಕ್ಸ್ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ಪೋಸ್ಟ್ ಹಾಕಿದ್ದಾರೆ.

  • ಕಟೌಟ್‌ಗಳಲ್ಲಿ ಗಾಂಧಿ ಫೋಟೋನೇ ನೋಡಲಿಲ್ಲ, ನಕಲಿ ಗಾಂಧಿಗಳ ಫೋಟೋ ಆಕಾಶದೆತ್ತರಕ್ಕೆ ಹಾಕಿದ್ದಾರೆ: ಹೆಚ್‌ಡಿಕೆ

    ಕಟೌಟ್‌ಗಳಲ್ಲಿ ಗಾಂಧಿ ಫೋಟೋನೇ ನೋಡಲಿಲ್ಲ, ನಕಲಿ ಗಾಂಧಿಗಳ ಫೋಟೋ ಆಕಾಶದೆತ್ತರಕ್ಕೆ ಹಾಕಿದ್ದಾರೆ: ಹೆಚ್‌ಡಿಕೆ

    – ಕಾಂಗ್ರೆಸ್ ವಿಸರ್ಜನೆ ಮಾಡಿ ಎಂದು ಗಾಂಧೀಜಿ ಆವಾಗ್ಲೇ ಹೇಳಿದ್ದರು
    – ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಶತಮಾನೋತ್ಸವ ಕಾರ್ಯಕ್ರಮ ಕುರಿತು ಹೆಚ್‌ಡಿಕೆ ಟೀಕೆ

    ಮಂಡ್ಯ: ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಗಾಂಧಿ (Gandhiji) ಹೆಸರಿನಲ್ಲಿ ಕಾರ್ಯಕ್ರಮ ಮಾಡುತ್ತಿದೆ. ಆದ್ರೆ ಕಟೌಟ್‌ಗಳಲ್ಲಿ ಗಾಂಧೀಜಿ ಫೋಟೋನೇ ನೋಡಲಿಲ್ಲ. ನಕಲಿ ಗಾಂಧಿಗಳ ಫೋಟೋ ಆಕಾಶದೆತ್ತರಕ್ಕೆ ಹಾಕಿದ್ದಾರೆ ಎಂದು ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) ಟೀಕಿಸಿದರು.

    ಮಂಡ್ಯದಲ್ಲಿ (Mandya) ದಿಶಾ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಕೆಂಡಾಮಂಡಲರಾದರು.

    ರಾಮರಾಜ್ಯ ಪರಿಕಲ್ಪನೆ ರಾಜ್ಯದಲ್ಲಿದ್ಯಾ?
    ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಶತಮಾನೋತ್ಸವ (Belagavi Session Centenary) ಕಾರ್ಯಕ್ರಮ ಕುರಿತು ಮಾತನಾಡಿದ ಹೆಚ್‌ಡಿಕೆ, ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಗಾಂಧಿ ಹೆಸರಲ್ಲಿ ಕಾರ್ಯಕ್ರಮ ಮಾಡುತ್ತಿದೆ. ಆದ್ರೆ ಕಟೌಟ್‌ಗಳಲ್ಲಿ ಗಾಂಧೀಜಿ ಫೋಟೋನೇ ನೋಡಲಿಲ್ಲ. ನಕಲಿ ಗಾಂಧಿಗಳ ಫೋಟೋ ಆಕಾಶದೆತ್ತರಕ್ಕೆ ಹಾಕಿದ್ದಾರೆ. ಗಾಂಧೀಜಿ ಹೆಸರಲ್ಲಿ ಕಾರ್ಯಕ್ರಮ ಮಾಡಲು ನನ್ನ ತಕರಾರಿಲ್ಲ. ಸಂಘಟಿತ ಹೋರಾಟದ ಮೂಲಕ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಗಾಂಧೀಜಿ. ಆದ್ರೆ ಅವರ ರಾಮರಾಜ್ಯ ಪರಿಕಲ್ಪನೆ ಇವತ್ತು ರಾಜ್ಯದಲ್ಲಿದ್ಯಾ? ಎಂದು ಪ್ರಶ್ನಿಸಿದರು.

    2.75 ಲಕ್ಷ ಸರ್ಕಾರಿ ಹುದ್ದೆ ಖಾಲಿ ಇದೆ:
    ಗ್ರಾಮ ಪಂಚಾಯಿತಿಗಳ ಅಭಿವೃದ್ಧಿಗೆ ಹಣ ಬಿಡುಗಡೆ ಆಗಿಲ್ಲ. ಸರಿಯಾದ ಚಿಕಿತ್ಸೆ ಇಲ್ಲದೇ ಬಾಣಂತಿಯರು, ಮಕ್ಕಳು ಸಾಯುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ವೈದ್ಯರು, ನರ್ಸ್‌ಗಳಿಲ್ಲ. 2.75 ಲಕ್ಷ ಸರ್ಕಾರಿ ನೌಕರಿ ಖಾಲಿ ಇಟ್ಟುಕೊಂಡಿದ್ದಾರೆ. ಪ್ರತಿನಿತ್ಯ ರಾಜ್ಯದಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಏನು ಹೇಳ್ತೀರಿ? ಎಂದು ಆಕ್ರೋಶ ಹೊರಹಾಕಿದ್ರು.

    ಕಾಂಗ್ರೆಸ್ ವಿಸರ್ಜನೆ ಮಾಡಿ ಎಂದು ಗಾಂಧೀಜಿ ಆವಾಗಲೇ ಹೇಳಿದ್ದರು. ಏಕೆಂದರೆ ಈಗ ಇರೋದು ಆಲಿಬಾಬ ಮತ್ತು 40 ಮಂದಿ ಕಳ್ಳರಿದ್ದಾರಲ್ಲ, ಆ ರೀತಿಯ ಕಾಂಗ್ರೆಸ್. ಜನಪರ ಕೆಲಸ ಮಾಡುವ ಕಾಂಗ್ರೆಸ್ ಅಲ್ಲ. ಗ್ಯಾರಂಟಿ ಗ್ಯಾರಂಟಿ ಅಂತಾರೆ ಏನ್‌ ಗ್ಯಾರಂಟಿ ಕೊಡ್ತಿದ್ದಾರೆ? ಮಹಿಳೆಯರಿಗೆ 2 ಸಾವಿರ ರೂ. ಕೊಡ್ತಿದ್ದಾರೆ, ಇನ್ನೂ 2 ಸಾವಿರ ಕೊಡಲಿ. ಆದ್ರೆ ಟ್ಯಾಕ್ಸ್ ಯಾವ ರೀತಿ ಹಾಕ್ತಿದ್ದಾರೆ? 2 ಲಕ್ಷ ಕೋಟಿ ಸಾಲ ಮಾಡಿ ಗ್ಯಾರಂಟಿ ಕೊಡೋದಕ್ಕೆ ನೀವೆ ಬೇಕಾ? ಆ ಸಾಲ ತೀರಿಸುವವರು ಯಾರು? ಜನಸಾಮಾನ್ಯರೆ ತೀರಿಸಬೇಕಲ್ವಾ? ಗಾಂಧೀಜಿ ಹೆಸರು ಹೇಳಿದ್ರೆ ಆಗಲ್ಲ, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು ಎಂದು ವಾಗ್ದಾಳಿನಡೆಸಿದರು.

    ಇನ್ನೂ ಸರ್ಕಾರದಿಂದ ಪೊಲೀಸ್‌ ಇಲಾಖೆ ದುರ್ಬಳಕೆ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವರು, ನಮ್ಮ ರಾಜ್ಯದ ಪೊಲೀಸ್ ಇಲಾಖೆ ಮೇಲೆ ದೇಶವೇ ಗೌರವ, ನಂಬಿಕೆ ಇಟ್ಟಿತ್ತು. ಎಲ್ಲರೂ ಪೊಲೀಸ್ ವ್ಯವಸ್ಥೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಅಂತಹ ಪೊಲೀಸ್ ಇಲಾಖೆಯನ್ನ ಯಾವ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ? ರಾಜ್ಯದ ಆಡಳಿತ ವ್ಯವಸ್ಥೆ ಏನಾಗಿದೆ? ಆಸ್ಪತ್ರೆಗಳಲ್ಲಿ ವೈದ್ಯರಿಲ್ಲ, ಗ್ಲೂಕೋಸ್, ಮೆಡಿಸನ್ ಡಿಫಾಲ್ಟ್‌ ಅಂತ ನೀವೇ ಹೇಳ್ಕೊಂಡಿದ್ದೀರಿ. ದೇಶದಲ್ಲಿ ಹೆಣ್ಣು ಮಕ್ಕಳಿಗೆ ಕಾಂಗ್ರೆಸ್ ಬಿಟ್ಟರೇ ಯಾರು ಗೌರವ ಕೊಡಲ್ಲ ಅಂತೀರಿ. ಪಾಪ ಬಾಣಂತಿಯರ ಸಾವು ಆದಾಗ ಪಶ್ಚಾತಾಪ ಪಟ್ರಾ? ಏನು ಆಗಿಯೇ ಇಲ್ಲ ಅನ್ನೋ ರೀತಿ ಓಡಾಡಿಕೊಂಡಿದ್ದಾರೆ, ಬರೀ ವೀರಾವೇಶದ ಮಾತುಗಳಷ್ಟೇ ಇವರದ್ದು ಎಂದು ಕುಟುಕಿದ್ದಾರೆ.

  • ಪೂಂಚ್‍ನಲ್ಲಿ ಸೇನಾ ವಾಹನ ಅಪಘಾತದಲ್ಲಿ ಹುತಾತ್ಮರಾಗಿದ್ದ ರಾಜ್ಯದ ಮೂವರು ಯೋಧರಿಗೆ ಕಣ್ಣೀರ ವಿದಾಯ

    ಪೂಂಚ್‍ನಲ್ಲಿ ಸೇನಾ ವಾಹನ ಅಪಘಾತದಲ್ಲಿ ಹುತಾತ್ಮರಾಗಿದ್ದ ರಾಜ್ಯದ ಮೂವರು ಯೋಧರಿಗೆ ಕಣ್ಣೀರ ವಿದಾಯ

    • ತವರಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿದ ಅಂತ್ಯಕ್ರಿಯೆ

    ಬೆಳಗಾವಿ/ ಉಡುಪಿ/ ಬಾಗಲಕೋಟೆ: ಜಮ್ಮು ಕಾಶ್ಮೀರದ (Jammu And Kashmir) ಪೂಂಚ್‍ನಲ್ಲಿ ನಡೆದ ಸೇನಾ (Indian Army) ವಾಹನ ಅಪಘಾತದಲ್ಲಿ ಹುತಾತ್ಮರಾಗಿದ್ದ ರಾಜ್ಯದ ಮೂವರು ಯೋಧರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ನಡೆದಿದೆ.

    ಬೆಳಗಾವಿ: ಅಪಘಾತದಲ್ಲಿ ಹುತಾತ್ಮರಾದ ಯೋಧ ಪಂತ ಬಾಳೇಕುಂದ್ರಿ ದಯಾನಂದ ತಿರಕನ್ನವರ್ ಅವರ ಅಂತ್ಯಸಂಸ್ಕಾರ ಸಾಂಬ್ರಾ ಲಿಂಗಾಯತ ರುದ್ರಭೂಮಿಯಲ್ಲಿ ನೆರವೇರಿತು. ಯೋಧನ ಪಾರ್ಥಿವ ಶರೀರಕ್ಕೆ ಮಗ ಗಣೇಶ್ ಬಿಲ್ವಪತ್ರೆ ಹಾಕಿ ಅಗ್ನಿ ಸ್ಪರ್ಶ ಮಾಡಿದ್ದಾರೆ.

    ಈ ವೇಳೆ ಯೋಧನ ತಾಯಿ ಶ್ರೀಮತಿ, ತಂದೆ ಕಲ್ಲಪ್ಪಾ ಹಾಗೂ ಪತ್ನಿ ನಂದಾ ಹಾಗೂ ಮಗಳು ವೈಷ್ಣವಿ ಇದ್ದರು. ಯೋಧನ ಅಂತ್ಯಕ್ರಿಯೆಯಲ್ಲಿ ಅಪಾರ ಸಂಖ್ಯೆಯ ಜನ ಭಾಗಿಯಾಗಿದ್ದರು.

    ಉಡುಪಿ: ಇನ್ನೂ ದುರಂತದಲ್ಲಿ ಮೃತಪಟ್ಟ ಮತ್ತೋರ್ವ ಯೋಧ ಅನೂಪ್ ಪೂಜಾರಿಯವರ ಅಂತ್ಯಕ್ರಿಯೆ ಬಿಜಾಡಿ ಕಡಲ ಕಿನಾರೆಯಲ್ಲಿ ನಡೆದಿದೆ.

     

    ಅಂತ್ಯ ಸಂಸ್ಕಾರಕ್ಕೂ ಮುನ್ನ ಸೇನಾಧಿಕಾರಿಗಳಿಂದ ಅನೂಪ್ ಪೂಜಾರಿಯವರ ಮೃತದೇಹಕ್ಕೆ ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ, ಉಡುಪಿ -ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸೇನಾಧಿಕಾರಿಗಳು ಗೌರವ ನಮನ ಸಲ್ಲಿಸಿದ್ದಾರೆ. ಅವರ ಪಾರ್ಥಿವ ಶರೀರಕ್ಕೆ ಸಹೋದರ ಶಿವರಾಮ್ ಅಗ್ನಿ ಸ್ಪರ್ಶ ಮಾಡಿದ್ದಾರೆ.

    ಬಾಗಲಕೋಟೆ: ದುರಂತದಲ್ಲಿ ಹುತಾತ್ಮರಾದ ಮತ್ತೋರ್ವ ಯೋಧ ಮುಧೋಳ್‍ನ ಮಹಾಲಿಂಗಪುರದ ಮಹೇಶ್ ಮರಿಗೊಂಡ ಅವರ ಅಂತ್ಯಕ್ರಿಯೆ ಸ್ವಗ್ರಾಮ ಕೆಂಗೇರಿಮಡ್ಡಿಯ ಸರ್ಕಾರಿ ಜಮೀನಿನಲ್ಲಿ ನೆರವೇರಿದೆ.

    ಅಂತ್ಯಕ್ರಿಯೆ ವೇಳೆ ಯೋಧನ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಅಗಲಿದ ವೀರ ಯೋಧನಿಗೆ ಗ್ರಾಮಸ್ಥರು ಅಮರ್ ರಹೇ ಎಂಬ ಘೋಷಣೆ ಮೊಳಗಿತು.

    ಮಂಗಳವಾರ ಸಂಜೆ 5:30ಕ್ಕೆ 300 ಅಡಿ ಕಂದಕಕ್ಕೆ ಸೇನಾ ವಾಹನ ಬಿದ್ದು ಮರಾಠಾ ರೆಜಿಮೆಂಟ್‌ನ (Maratha Light Infantry) ಐವರು ಮೃತಪಟ್ಟಿದ್ದರು. ಐವರು ಪೈಕಿ ಮೂವರು ಕರ್ನಾಟಕದವರಾಗಿದ್ದರು.

  • ಎರಡು ದಿನ ಗಾಂಧಿ ಭಾರತ್ ಕಾರ್ಯಕ್ರಮ; ಬೆಳಗಾವಿಗೆ ಖರ್ಗೆ, ರಾಹುಲ್‌ ಗಾಂಧಿ ಆಗಮನ

    ಎರಡು ದಿನ ಗಾಂಧಿ ಭಾರತ್ ಕಾರ್ಯಕ್ರಮ; ಬೆಳಗಾವಿಗೆ ಖರ್ಗೆ, ರಾಹುಲ್‌ ಗಾಂಧಿ ಆಗಮನ

    ಬೆಳಗಾವಿ: ನಗರದಲ್ಲಿ ಎರಡು ದಿನ ಗಾಂಧಿ ಭಾರತ್ ಕಾರ್ಯಕ್ರಮ ಹಿನ್ನೆಲೆ ದೇಶದ ಕಾಂಗ್ರೆಸ್ (Congress) ನಾಯಕರ ದಂಡೆ ಬೆಳಗಾವಿಗೆ ಆಗಮಿಸಿದೆ.

    ಸಿಎಂ ಸಿದ್ದರಾಮಯ್ಯ ಹಾಗೂ ಇಡೀ ಮಂತ್ರಿ ಮಂಡಲ ಮತ್ತು ಕಾಂಗ್ರೆಸ್ ನಾಯಕರು ಈಗಾಗಲೇ ಬೆಳಗಾವಿಯಲ್ಲಿ (Belagavi) ಬಿಡು ಬಿಟ್ಟಿದ್ದಾರೆ. ಇದನ್ನೂ ಓದಿ: INDIA ಒಕ್ಕೂಟದಿಂದ ಕಾಂಗ್ರೆಸ್‌ ಉಚ್ಚಾಟಿಸಿ – ಆಪ್‌ ಬಂಡಾಯ!

    ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಹಿಮಾಚಲ ಸಿಎಂ ಸುಖ್ವಿಂದ್ರ ಸಿಂಗ್ ಸುಖು, ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ, ಶಶಿ ತರೂರ್, ಅಶೋಕ್ ಗೆಹ್ಲೋಟ್‌, ಸಚಿನ್ ಫೈಲಟ್, ವೇಣುಗೋಪಾಲ್, ಯುವ ಕಾಂಗ್ರೆಸ್ ಮುಖಂಡ ಕನ್ಹಯ್ಯ ಸೇರಿದಂತೆ ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯಗಳ‌ ಸಚಿವರು, ಶಾಸಕರು ಮತ್ತು ಸಂಸತ್ತಿನ ಸದಸ್ಯರು ಬೆಳಗಾವಿಗೆ ಬಂದಿದ್ದಾರೆ.

    ಕಾಂಗ್ರೆಸ್ ಕಾರ್ಯಕರ್ತರು ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಪಕ್ಷದ ನಾಯಕರಿಗೆ ಭರ್ಜರಿ ಸ್ವಾಗತ ಕೋರಿದ್ದಾರೆ. ಇದನ್ನೂ ಓದಿ: ಚಿತ್ರರಂಗದ ವರ್ತನೆಗೆ ಆಕ್ಷೇಪ- ತೆಲುಗು ನಟರ ಕಿವಿ ಹಿಂಡಿದ ಸಿಎಂ ರೇವಂತ್ ರೆಡ್ಡಿ

    ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಅಂಗವಾಗಿ ನಡೆಯುತ್ತಿರುವ ನವ ಸತ್ಯಾಗ್ರಹ ಸಭೆಗೂ ಮುನ್ನ ಧ್ವಜಾರೋಹಣ ನೆರವೇರಿಸಲಾಯಿತು. ನಂತರ ನಡೆದ ಪಥಸಂಚಲನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಸೇರಿ ಅನೇಕ ಕಾಂಗ್ರೆಸ್‌ ನಾಯಕರು ಪಾಲ್ಗೊಂಡಿದ್ದರು.

  • ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ ಶತಮಾನದ ಸಂಭ್ರಮ – ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಿದೆ ಕುಂದಾನಗರಿ

    ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ ಶತಮಾನದ ಸಂಭ್ರಮ – ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಿದೆ ಕುಂದಾನಗರಿ

    ಬೆಳಗಾವಿ: ಶತಮಾನ ಹಿಂದೆ ಮಹಾತ್ಮ ಗಾಂಧಿ (Mahatma Gandhi) ಅವರು ಅಧ್ಯಕ್ಷತೆ ವಹಿಸಿದ್ದ ಏಕೈಕ ಕಾಂಗ್ರೆಸ್ (Congress) ಅಧಿವೇಶನವನ್ನು ಸ್ಮರಣಿಯಗೊಳಿಸಲು ಕರ್ನಾಟಕದ ಗಡಿ ಜಿಲ್ಲೆ ಬೆಳಗಾವಿ (Belagavi) ಸಜ್ಜಾಗಿದೆ. 1924ರ ಡಿಸೆಂಬರ್ 26 ಹಾಗೂ 27ರಂದು ಮಹಾತ್ಮ ಗಾಂಧೀಜಿ ಬೆಳಗಾವಿ ಭೇಟಿ ನೀಡಿ, ಕಾಂಗ್ರೆಸ್ ಅಧಿವೇಶದಲ್ಲಿ ಭಾಗಿಯಾಗಿದ್ದರು. ಈ ಅಧಿವೇಶನಕ್ಕೆ 100 ವರ್ಷಗಳಾದ ಹಿನ್ನಲೆ ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ಶತಮಾನೋತ್ಸವ ಕಾರ್ಯಕ್ರಮವನ್ನು ಬಹಳ ಅದ್ದೂರಿಯಾಗಿ ಆಚರಣೆ ಮಾಡುತ್ತಿದೆ. ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಶತಮಾನೋತ್ಸವ ಕಾರ್ಯಕ್ರಮ ನಡೆಯಲಿದೆ.

    ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಮಹಾ ಸಮಾವೇಶ ನಡೆಯಲಿದೆ. ಇದಕ್ಕೆ ಸತ್ಯಾಗ್ರಹ ಬೈಠಕ್ ಎಂದು ಕಾಂಗ್ರೆಸ್ ನಾಮಕರಣ ಮಾಡಿದೆ. ಮೈಸೂರು ದಸರಾದಂತೆ ಗಡಿ ಜಿಲ್ಲೆ ಕಂಗೊಳಿಸುತ್ತಿದೆ. ಸಿಎಂ ಸಿದ್ದರಾಮಯ್ಯ, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ರಾಜ್ಯ ಸಚಿವರು ಹಾಗೂ ಘಟಾನುಘಟಿ ನಾಯಕರು ಬೆಳಗಾವಿಯಲ್ಲೇ ವಾಸ್ತವ್ಯ ಹೂಡಿದ್ದಾರೆ.

    ಇಂದು ಏನೇನು ಕಾರ್ಯಕ್ರಮ?
    ಬೆಳಗ್ಗೆ 10 ಗಂಟೆಗೆ ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಂಡರೆ 10:45ಕ್ಕೆ ಖಾದಿ ಉತ್ಸವ ಹಾಗೂ ಮಳಿಗೆಗಳ ಉದ್ಘಾಟನೆಯಾಗಲಿದೆ. ಮಧ್ಯಾಹ್ನ 12:30ಕ್ಕೆ ದೆಹಲಿಯಿಂದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಬೆಳಗಾವಿ ನಗರಕ್ಕೆ ಆಗಮಿಸಲಿದ್ದು, ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಇದನ್ನೂ ಓದಿ: ಬೆಂಗಳೂರು| ನಂದಿನಿ ಇಡ್ಲಿ, ದೋಸೆ ಹಿಟ್ಟು ಬಿಡುಗಡೆ ಮಾಡಿದ ಸಿಎಂ

    11:15ಕ್ಕೆ ಗಂಗಾಧರ್ ರಾವ್ ದೇಶಪಾಂಡೆ ಸ್ಮಾರಕ ಭವನ ಉದ್ಘಾಟನೆ, ಮಧ್ಯಾಹ್ನ 3 ಗಂಟೆಗೆ ಟಿಳಕವಾಡಿಯ ವೀರಸೌಧದಲ್ಲಿ ಎಐಸಿಸಿ (AICC) ಕಾರ್ಯಕಾರಣಿ ಸಭೆ ನಡೆಯಲಿದೆ. ನಂತರ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಎಐಸಿಸಿ ಕಾರ್ಯಕಾರಣಿ ಸಭೆ ನಡೆಯಲಿದೆ.

     

    ಸಮಾವೇಶದ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತಾಡಿದ ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar), ಮಹಾತ್ಮ ಗಾಂಧಿ 1924 ಡಿಸೆಂಬರ್ 26ರ ಮಧ್ಯಾಹ್ನ 3 ಗಂಟೆಗೆ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ನಡೆಸಿದ್ದರು.ಅದೇ ಸಮಯಕ್ಕೆ ಸರಿಯಾಗಿ ಅಂದರೆ ಮಧ್ಯಾಹ್ನ 3 ಗಂಟೆಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ (CWC Session) ಆರಂಭವಾಗಲಿದೆ. ಈ ಕಾರ್ಯಕ್ರಮ ಆಯೋಜನೆ ಮಾಡುವ ಅವಕಾಶ ನನಗೆ ಸಿಕ್ಕಿದೆ. ಶತಮಾನೋತ್ಸವ ಬೇರೆ ಕಡೆ ಮಾಡಬಾರದು. ಇಲ್ಲೇ ನಡೆಯಬೇಕು ಅಂತ ನಾನು ಹಠ ಹಿಡಿದು ಇಲ್ಲೇ ಮಾಡಲು ತೀರ್ಮಾನ ಮಾಡಿದೆವು ಎಂದಿದ್ದಾರೆ.

    ಒಟ್ಟಿನಲ್ಲಿ ಕಾಂಗ್ರೆಸ್ ಅಧಿವೇಶದನ ಶತಮಾನೋತ್ಸವ ಕಾರ್ಯಕ್ರಮಕ್ಕೆ ಬೆಳಗಾವಿ ನಗರ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಈ ಅಧಿವೇಶನದ ಮೂಲಕ ರಾಜ್ಯಕ್ಕೆ ಹೊಸದೊಂದು ಸಂದೇಶ ರವಾನಿಸುವ ಕೆಲಸ ಕೈ ಪಡೆ ಮಾಡುತ್ತಿದೆ.

     

  • ಗೂಂಡಾಗಳಿಂದ ಗಲಾಟೆ ಮಾಡಿಸಿ ನನ್ನ ಮೇಲೆ ಆರೋಪ: ಮುನಿರತ್ನಗೆ ಡಿಕೆಸು ತಿರುಗೇಟು

    ಗೂಂಡಾಗಳಿಂದ ಗಲಾಟೆ ಮಾಡಿಸಿ ನನ್ನ ಮೇಲೆ ಆರೋಪ: ಮುನಿರತ್ನಗೆ ಡಿಕೆಸು ತಿರುಗೇಟು

    ಬೆಳಗಾವಿ: ಶಾಸಕ ಮುನಿರತ್ನ (Munirathna) ಅವರೇ ಗೂಂಡಾಗಳಿಂದ ಗಲಾಟೆ ಮಾಡಿಸಿ ನನ್ನ ಮೇಲೆ ಆರೋಪ ಬರುವಂತೆ ಮಾಡಲು ಮುಂದಾಗಿದ್ದಾರೆ ಎಂದು ಮಾಜಿ ಸಂಸದ ಡಿ.ಕೆ ಸುರೇಶ್‌ (D.K Suresh) ತಿರುಗೇಟು ನೀಡಿದ್ದಾರೆ.

    ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ ಕುಸುಮಾ ಅವರನ್ನು ಶಾಸಕಿಯನ್ನಾಗಿ ಮಾಡಲು ಡಿ.ಕೆ ಸುರೇಶ್‌, ಡಿಕೆ ಶಿವಕುಮಾರ್‌ ಅವರ ಕಡೆಯವರಿಂದ ದಾಳಿ ನಡೆದಿದೆ ಎಂಬ ಮುನಿರತ್ನ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ನನಗೆ ಆ ವಿಚಾರ ಗೊತ್ತಿಲ್ಲ. ಕಾಂಗ್ರೆಸ್‌ ಕಾರ್ಯಕರ್ತರಿಗೆ ಅವರೇ ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂಬ ವಿಚಾರ ತಿಳಿದು ಬಂದಿದೆ ಎಂದು ಹೇಳಿದ್ದಾರೆ.

    ಅವರ ವ್ಯಕ್ತಿತ್ವ ಏನು ಎಂಬುದು ಇಡೀ ರಾಜ್ಯಕ್ಕೆ ಗೊತ್ತಿದೆ. ಬಿಜೆಪಿಯವರಿಗಾಗಲಿ, ಬೇರೆಯವರಿಗಾಗಲಿ ನನ್ನ ವಿರುದ್ಧ ಮಾತಾಡುವ ನೈತಿಕತೆ ಇಲ್ಲ ಎಂದು ಕಿಡಿಕಾರಿದ್ದಾರೆ.

    ಕುಸುಮ ಅವರನ್ನು ಎಂಎಲ್‌ಎ ಮಾಡುವ ನಿಟ್ಟಿನಲ್ಲಿ ಈ ರೀತಿ ಮಾಡ್ತಿದ್ದಾರೆ ಎಂಬ ಆರೋಪಕ್ಕೆ, ಬೆಂಗಳೂರಿಗೆ ಬಂದ ಮೇಲೆ ಮಾತಾಡ್ತೀನಿ ಎಂದು ಶಾಸಕರಿಗೆ ಹೇಳಿ ಎಂದು ತೆರಳಿದ್ದಾರೆ.

  • ಆ ರೀತಿ ಹೇಳಿಲ್ಲ ಅನ್ನೋದಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲಿ – ಸಿ.ಟಿ ರವಿಗೆ ಲಕ್ಷ್ಮಿ ಹೆಬ್ಬಾಳ್ಕರ್‌ ಸವಾಲ್‌

    ಆ ರೀತಿ ಹೇಳಿಲ್ಲ ಅನ್ನೋದಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲಿ – ಸಿ.ಟಿ ರವಿಗೆ ಲಕ್ಷ್ಮಿ ಹೆಬ್ಬಾಳ್ಕರ್‌ ಸವಾಲ್‌

    – ರಾಮಾಯಣ, ಮಹಾಭಾರತ ಆಗಿದ್ದು ಮಹಿಳೆ ಅಪಮಾನ ಮಾಡಿದ್ದಕ್ಕೆ
    – Public TV ಸಂದರ್ಶನದಲ್ಲಿ ಹೆಬ್ಬಾಳ್ಕರ್‌ ಆಕ್ರೋಶಭರಿತ ನುಡಿ

    ಬೆಂಗಳೂರು/ಬೆಳಗಾವಿ: ರಾಮಾಯಣ, ಮಹಾಭಾರತ ಆಗಿದ್ದು, ಮಹಿಳೆಯನ್ನ ಅಪಮಾನ ಮಾಡಿದ್ದಕ್ಕೆ. ಅಲ್ಲಿ ಅಪಮಾನ ಮಾಡಿದ ಎಲ್ಲರಿಗೂ ಶಿಕ್ಷೆ ಆಗಿದೆ. ಇಲ್ಲಿಯೂ ಆಗುತ್ತೆ. ಸಿ.ಟಿ ರವಿ ಅವರು ಆ ರೀತಿ ಹೇಳಿಲ್ಲ ಅನ್ನೋದಾದ್ರೆ, ಧರ್ಮಸ್ಥಳಕ್ಕೆ (Dharmasthala) ಬಂದು ಆಣೆ, ಪ್ರಮಾಣ ಮಾಡಲಿ. ಆಣೆ ಮಾಡಲಿಕ್ಕೆ ನಾನೂ ನನ್ನ ಕುಟುಂಬ ಸಮೇತವಾಗಿ ಬರ್ತೀನಿ….. ಸಚಿವೆ ಲಕ್ಷ್ಮಿ ಹೆಬ್ಬಾಲ್ಕರ್‌ ಆಕ್ರೋಶಭರಿತ ನುಡಿಗಳಿವು.

    ಡಿ.19ರಂದು ಸುವರ್ಣಸೌಧದ ಪರಿಷತ್‌ ಕಲಾಪದಲ್ಲಿ ಎಂಎಲ್‌ಸಿ ಸಿ.ಟಿ ರವಿ ಅವರು ಸಂವಿಧಾನಿಕ ಪದ ಬಳಸಿ ನಿಂಧಿಸಿದ್ದಾರೆ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ʻಪಬ್ಲಿಕ್‌ ಟಿವಿʼ (Public TV) ನಡೆಸಿದ ವಿಶೇಷ ಸಂದರ್ಶನದಲ್ಲಿ ಅವರು ಮಾತನಾಡಿದರು. ಸಿ.ಟಿ ರವಿ ಆ ರೀತಿ ಹೇಳಿಲ್ಲ ಅನ್ನೋದಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ, ಪ್ರಮಾಣ ಮಾಡಲಿ ಅಂತ ಸವಾಲ್‌ ಎಸೆದರು.

    ಸಿ.ಟಿ ರವಿ ಈ ರೀತಿ ಅಂದಿದ್ದಾರೆ ಅಂತಾ ನಾನು ನಾಟಕ ಮಾಡೋದಕ್ಕೆ ಆಗುತ್ತಾ? ಸದನದಲ್ಲಿ ನಿಂತು ಸುಳ್ಳು ಆರೋಪ ಮಾಡೋದಕ್ಕೆ ಆಗುತ್ತಾ? ಸುಳ್ಳು ಹೇಳೋದಕ್ಕೆ ನನಗೇನು ಹುಚ್ಚಾ? ನಾಟಕವಾಡಿ ರಾಜಕಾರಣದಲ್ಲಿ ನಾನು ಏನಾದ್ರೂ ಗಳಿಸೋದು ಇದ್ಯಾ? ಎಂದು ಪ್ರಶ್ನೆಗಳ ಮಳೆ ಸುರಿಸಿದ್ರು.

    ʻಫ್ರೆಟ್ಟ್ರೇಟ್‌ʼ ಎಂದು ಉಚ್ಚಾರ ಮಾಡಿರುವುದಾಗಿ ಸಿ.ಟಿ ರವಿ ಹೇಳ್ತಾರಲ್ಲಾ? ಎಂಬ ʻಪಬ್ಲಿಕ್‌ ಟಿವಿ‌ʼ ಪ್ರಶ್ನೆಗೆ ಉತ್ತರಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌, ಫ್ರೆಸ್ಟ್ರೇಟ್‌ ಅನ್ನೋದಕ್ಕೂ ಆಪದಕ್ಕೂ ವ್ಯತ್ಯಾಸ ಇರಲ್ವಾ? ಅವರು ಹೇಳಿರೋದಕ್ಕೆ ಆಡಿಯೋ, ವಿಡಿಯೋ ಎಲ್ಲವೂ ನನ್ನತ್ರ ಸಾಕ್ಷಿ ಇದೆ. ಲಕ್ಷ್ಮಿ ಹೆಬ್ಬಾಳ್ಕರ್‌ನ ನೋಡಿ ಸಾವಿರಾರು ಜನ ರಾಜಕಾರಣಕ್ಕೆ ಬರಲು ಮುಂದಾಗಿದ್ದಾರೆ. ಈಗ ಹೋರಾಟ ಮಾಡಲಿಲ್ಲ ಅಂದ್ರೆ, ನನ್ನ ಆತ್ಮಸಾಕ್ಷಿಗೆ ವಂಚನೆ ಮಾಡಿದಂತೆ ಆಗುತ್ತದೆ. ನಾನು ಸಂಘರ್ಷ ಅಪಮಾನ ಮೆಟ್ಟಿನಿಂತು ಬೆಳೆದಿದ್ದೇನೆ. ಆದ್ರೆ ಈ ಘಟನೆಯಿಂದ ನನ್ನ ಮನಸ್ಸಿಗೆ ಆಘಾತ ಉಂಟಾಗಿದೆ ಎಂದು ನುಡಿದಿದ್ದಾರೆ.

    ʻಕೊಲೆಗಾರʼ ಎನ್ನುವಂತಹ ಪ್ರಶ್ನೆ ಯಾಕೆ ಬಂತು? ಎಂಬ ʻಪಬ್ಲಿಕ್‌ ಟಿವಿʼ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚಿವೆ, ಸಿ.ಟಿ ರವಿ ಆಕ್ಸಿಡೆಂಟ್‌ ಮಾಡಿರುವ ವೀಡಿಯೋ ನನ್ನ ಬಳಿಯಿದೆ. ಆದ್ರೆ ನಾನು ʻಕೊಲೆಗಾರʼ ಅಂದಿಲ್ಲ ಅಂತ ಹೇಳ್ತಿಲ್ಲ.. ಅವರ ಹಾಗೆ ನನಗೆ ಚಪಲಾನಾ, ಪ್ರತಿಯೊಂದಕ್ಕೆ ಎದ್ದು ನಿಂತು ಮಾತಾಡೋದಕ್ಕೆ? ನಾನು ಗಾಂಧಿ ಹಾಕಿಕೊಟ್ಟಂತಹ ಮಾರ್ಗದಲ್ಲಿ ನಡೆಯುತ್ತಿರುವವಳು, ಗೋಡ್ಸೆ ಮಾರ್ಗದಲ್ಲಿ ನಡೆಯುವಂತಹವರಲ್ಲ ಎಂದು ತಿರುಗೇಟು ನೀಡಿದರು.

    ಆ ರೀತಿಯ ಯಾವುದೇ ವಿಡಿಯೋ ಇಲ್ಲ, ಅದು ನಕಲಿ ಎಂಬ ಸಭಾಪತಿಗಳ ಹೇಳಿಕೆ ಕುರಿತು ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್‌, ಸುಮಾರು ಸಂದರ್ಭದಲ್ಲಿ ನನಗೆ ಮಾರ್ಗದರ್ಶನ ಕೊಟ್ಟವರು ಸಭಾಪತಿಗಳು. ನನಗೆ ಫೋನ್ ಮಾಡಿ ಸಾಂತ್ವನ ಹೇಳಿದ್ದಾರೆ. ಅವರು ಯಾಕೆ ಈ ರೀತಿ ಹೇಳಿದ್ದಾರೋ ನನಗೆ ಗೊತ್ತಿಲ್ಲ, ಅವರ ರೂಲಿಂಗ್ ಬಗ್ಗೆ ಮಾತಾಡುವಷ್ಟು ಹಿರಿಯಳೂ ನಾನಲ್ಲ ಎಂದು ಸ್ಪಷ್ಟಪಡಿಸಿದರು.

    ಸಿ.ಟಿ ರವಿ ಅವರು ಕ್ಷಮೆ ಕೇಳಿದ್ರೆ ಒಪ್ಪುತ್ತೀರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನನ್ನನ್ನ ಕ್ಷಮಿಸು ಅಂದ್ರೂ ನಾನು ಸಿ.ಟಿ ರವಿ ಅವರನ್ನ ಕ್ಷಮಿಸಲ್ಲ, ರಾಮಾಯಣ, ಮಹಾಭಾರತ ಆಗಿದ್ದು, ಮಹಿಳೆಯನ್ನ ಅಪಮಾನ ಮಾಡಿದ್ದಕ್ಕೆ. ಅಲ್ಲಿ ಅಪಮಾನ ಮಾಡಿದ ಎಲ್ಲರಿಗೂ ಶಿಕ್ಷೆ ಆಗಿದೆ. ಇಲ್ಲಿಯೂ ಆಗುತ್ತೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್‌ ತನ್ನ ನೋವನ್ನು ಆಕ್ರೋಶಭರಿತವಾಗಿ ಹೊರಹಾಕಿದ್ದಾರೆ.

  • ಬೆಳಗಾವಿ| ಸಾಕಿದ್ದ ಮಾವುತನನ್ನೇ ತಿವಿದು ಕೊಂದ ಆನೆ

    ಬೆಳಗಾವಿ| ಸಾಕಿದ್ದ ಮಾವುತನನ್ನೇ ತಿವಿದು ಕೊಂದ ಆನೆ

    ಚಿಕ್ಕೋಡಿ: ತಾನೇ ಸಾಕಿ ಸಲುಹುತ್ತಿದ್ದ ಮಾವುತನನ್ನು ಆನೆಯೊಂದು (Elephant) ಸೊಂಡಿಲಿನಿಂದ ತಿವಿದು ಕೊಂದಿರುವ ಮನಕಲಕುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ರಾಯಬಾಗ ತಾಲೂಕಿನ‌ ಅಲಖನೂರು ಗ್ರಾಮದಲ್ಲಿ ನಡೆದಿದೆ.

    ಅಲಖನೂರ ಗ್ರಾಮದ ಕರಿಯಪ್ಪ ಬೇವನೂರ (30) ಮೃತ ದುರ್ದೈವಿ. ಅಲಖನೂರ ಶ್ರೀ ಕರಿಸಿದ್ದೇಶ್ವ ದೇವಸ್ಥಾನದ 21 ವರ್ಷದ ಧ್ರುವ ಹೆಸರಿನ ಆನೆ ತನ್ನ ಮಾವುತನನ್ನೆ ಸಾಯಿಸಿದೆ. ಇದನ್ನೂ ಓದಿ: ಖ್ಯಾತ ಚಲನಚಿತ್ರ ನಿರ್ಮಾಪಕ ಶ್ಯಾಮ್ ಬೆನಗಲ್ ಇನ್ನಿಲ್ಲ

     

    ಭಾನುವಾರ ರಾತ್ರಿ ಆನೆಗೆ ಮದ ಬಂದಿತ್ತು. ಇಂದು ಬೆಳಗ್ಗೆ ಕರಿಯಪ್ಪ ಮೇವು ಹಾಕಲು ಹೋದಾಗ ಗಂಡಾನೆ ಸೊಂಡಿಲಿನಿಂದ ಹಾಗೂ ದಂತಗಳಿಂದ ತಿವಿದು ಹತ್ಯೆ ಮಾಡಿದೆ.

    ಕಳೆದ 10 ದಿನದ ಹಿಂದೆಯಷ್ಟೇ ಕರಿಯಪ್ಪಗೆ ಗಂಡು ಮಗು ಜನಿಸಿತ್ತು. ಕರಿಯಪ್ಪ ಸಾವಿನ ವಿಷಯ ತಿಳಿದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಹಾರೂಗೇರಿ ಪೊಲೀಸರು ಭೇಟಿ ನೀಡಿ ಪರಶೀಲನೆ ನಡೆಸಿದ್ದು ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.