Tag: belagavi session

  • ಬೆಳಗಾವಿಯಲ್ಲಿ MES ಪುಂಡರಿಂದ ನಾಡದ್ರೋಹಿ ಘೋಷಣೆ – 20ಕ್ಕೂ ಹೆಚ್ಚು ಮಂದಿ ವಶ

    ಬೆಳಗಾವಿಯಲ್ಲಿ MES ಪುಂಡರಿಂದ ನಾಡದ್ರೋಹಿ ಘೋಷಣೆ – 20ಕ್ಕೂ ಹೆಚ್ಚು ಮಂದಿ ವಶ

    ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ (Belagavi) ಎಂಇಎಸ್ (MES) ಪುಂಡರು ತಮ್ಮ ಉದ್ಧಟತನ ಮುಂದುವರಿಸಿದ್ದು, ವ್ಯಾಕ್ಸಿನ್ ಡಿಪೋ ಬಳಿ ಹೇರಲಾಗಿದ್ದ ನಿಷೇಧಾಜ್ಞೆ ನಡುವೆಯೂ ಎಂಇಎಸ್ ಪುಂಡರು ನಾಡದ್ರೋಹಿ ಘೋಷಣೆ ಕೂಗಿದ್ದಾರೆ.

    ಬೆಳಗಾವಿ ಅಧಿವೇಶನದ (Belagavi Session) ಹಿನ್ನೆಲೆಯಲ್ಲಿ ಪುಂಡಾಟಿಕೆ ಮುಂದುವರಿಸಿರುವ ಎಂಇಎಸ್ ಪುಂಡರು, ನಗರದ 2ನೇ ರೇಲ್ವೆಗೇಟ್ ಬಳಿ ಘೋಷಣೆ ಕೂಗಿದ್ದಾರೆ. ಎಂಇಎಸ್ ಮಾಜಿ ಮೇಯರ್ ಸರಿತಾ ಪಾಟೀಲ್, ಉಪಮೇಯರ್ ರೇಣು ಕಿಲ್ಲೇಕರ್, ಶಿವಾನಿ ಪಾಟೀಲ್ ಹಲವು ಕಾರ್ಯಕರ್ತರು ಪುಂಡಾಟಿಕೆ ಮೆರೆದಿದ್ದು, ಬೆಳಗಾವಿ, ನಿಪ್ಪಾಣಿ, ಕಾರವಾರ (Karwar), ಬೀದರ್, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರ ಆಗಲೇಬೇಕು ಎಂದು ಒತ್ತಾಯಿಸಿದ್ದಾರೆ. `ಬೆಳಗಾವಿ ನಮ್ಮ ಹಕ್ಕು – ಯಾರ ಅಪ್ಪಂದಲ್ಲ’ ಎಂದು ಘೋಷಣೆ ಕೂಗಿದ್ದಾರೆ. ಬಳಿಕ ವ್ಯಾಕ್ಸಿನ್ ಡಿಪೋಗೆ ನುಗ್ಗಲು ಯತ್ನಿಸಿದ 20ಕ್ಕೂ ಹೆಚ್ಚು ಎಂಇಎಸ್ ಕಾರ್ಯಕರ್ತರನ್ನು ಪೊಲೀಸರು (Police) ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಮೊದಲ ಬಾರಿಗೆ ಎಂಇಎಸ್ ಮಹಾಮೇಳಾವ್‌ಗೆ ಬ್ರೇಕ್

    ಮಹಾಮೇಳಾವ್‌ಗೆ ಬ್ರೇಕ್‌ಹಾಕಲಾದ ಹಿನ್ನೆಲೆಯಲ್ಲಿ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಚೆಕ್ ಪೋಸ್ಟ್ ಮೂಲಕ ಶಿವಸೇನೆ, ಎನ್‌ಸಿಪಿ ಹಾಗೂ ಕಾಂಗ್ರೆಸ್ ಪಕ್ಷದ ಧ್ವಜ ಹಿಡಿದು ಬಂದ ಕಾರ್ಯಕರ್ತರು ಬೆಳಗಾವಿ ಗಡಿಗೆ ನುಗ್ಗಲು ಯತ್ನಿಸಿದ್ದಾರೆ. 300ಕ್ಕೂ ಅಧಿಕ ಕಾರ್ಯಕರ್ತರು ಬೆಳಗಾವಿ ನುಗ್ಗಲು ಯತ್ನಿಸಿದ್ದು, ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಂಚಾರ ಅಸ್ತವ್ಯಸ್ಥಗೊಂಡಿದೆ. ಇದೇ ವೇಳೆ ಗುಂಪಿನ ಪ್ರಮುಖರು ಕರ್ನಾಟಕ ಮಹಾರಾಷ್ಟ್ರದ ಗಡಿಯಲ್ಲಿರುವ ದೂದ್‌ಗಂಗಾ ನದಿ ಸೇತುವೆ ಮೇಲೆ ನಿಂತು ಭಾಷಣ ಮಾಡಿದ್ದು, ಕರ್ನಾಟಕದ ಗಡಿ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಜೆಡಿಎಸ್‌ನ 93 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ – ಯಾವ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್‌?

    ಪೊಲೀಸ್ ಸರ್ಪಗಾವಲು: ಅನುಮತಿಯಿಲ್ಲದೇ ಮಹಾಮೇಳಾವ್ ನಡೆಸಲು ಮುಂದಾಗಿರುವ ಎಂಇಎಸ್ ಪುಂಡರಿಗೆ ವೇದಿಕೆ ತೆರವು ಮಾಡಲು ಡಿಸಿಪಿ ರವೀಂದ್ರ ಗಡಾದಿ ಸೂಚನೆ ನೀಡಿದ್ದಾರೆ. `ಮಹಾಮೇಳಾವ್’ಗೆ ಬ್ರೇಕ್ ಹಾಕಲು ವ್ಯಾಕ್ಸಿನ್ ಡಿಪೋ ಮೈದಾನದ ಸುತ್ತಲೂ ಬ್ಯಾರಿಕೇಡ್ ಅಳವಡಿಸಲಾಗಿದೆ. ಓರ್ವ ಎಸಿಪಿ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿದೆ. ಒಂದು ಕೆಎಸ್‌ಆರ್‌ಪಿ ತುಕಡಿ ಬೀಡುಬಿಟ್ಟಿದೆ. ಒಟ್ಟಿನಲ್ಲಿ ವ್ಯಾಕ್ಸಿನ್ ಡಿಪೋ ಮೈದಾನದ 500 ಮೀಟರ್ ಸುತ್ತ ಸೆಕ್ಷನ್ 144 ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಬೆಳಗಾವಿ ಅಧಿವೇಶನ: ಸಾವರ್ಕರ್‌ ಸೇರಿ 7 ಮಂದಿ ಫೋಟೋ ಅನಾವರಣ

    ಬೆಳಗಾವಿ ಅಧಿವೇಶನ: ಸಾವರ್ಕರ್‌ ಸೇರಿ 7 ಮಂದಿ ಫೋಟೋ ಅನಾವರಣ

    ಬೆಳಗಾವಿ: ಸುವರ್ಣಸೌಧದ(Suvarna Soudha) ವಿಧಾನಸಭೆ ಸಭಾಂಗಣದ ಒಳಗಡೆ ಸಾವರ್ಕರ್‌(Savarkar) ಸೇರಿ 7 ಮಂದಿಯ ಫೋಟೋವನ್ನು ಅನಾವರಣ ಮಾಡಲಾಗಿದೆ.

    ಮಹಾತ್ಮ ಗಾಂಧೀಜಿ, ಡಾ. ಬಿ.ಆರ್‌. ಅಂಬೇಡ್ಕರ್‌, ಲಾಲ್ ಬಹಾದ್ದೂರ್ ಶಾಸ್ತ್ರೀ, ಸರ್ದಾರ್ ವಲ್ಲಭಭಾಯ್ ಪಟೇಲ್, ಬಸವಣ್ಣ, ಸ್ವಾಮಿ ವಿವೇಕಾನಂದ, ವಿ ಡಿ ಸಾವರ್ಕರ್ ಫೋಟೋವನ್ನು ಅನಾವರಣಗೊಳಿಸಲಾಗಿದೆ.

    ಮಾಧ್ಯಮಗಳನ್ನ ನಿರ್ಬಂಧ ಮಾಡಿ ಸಿಎಂ ಬಸವರಾಜ ಬೊಮ್ಮಾಯಿ, ಸಚಿವರು, ಸ್ಪೀಕರ್ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆಯಿತು. ಸ್ಪೀಕರ್‌ ಕುಳಿತುಕೊಳ್ಳುವ ಆಸನದ ಮೇಲೆ ಬಸವಣ್ಣನ ಫೋಟೋ ಹಾಕಲಾಗಿದೆ.

    ಸಿದ್ದರಾಮಯ್ಯ ಕಿಡಿ:
    ಸ್ಪೀಕರ್ ಕಚೇರಿಯಿಂದ ಗಾಂಧಿ ಹಾಗೂ ಅಂಬೇಡ್ಕರ್ ಸೇರಿದಂತೆ ಮಹನ್‌ ನಾಯಕರ ಫೋಟೋ ಹಾಕುತ್ತೇವೆ ಎಂದು ಹೇಳಿದ್ದರು. ಆದರೆ ಇಲ್ಲಿಗೆ ಬಂದ ಮೇಲೆ ಮಾಧ್ಯಮ ಮೂಲಕ ಸಾವರ್ಕರ್ ಫೋಟೋ ಹಾಕುವುದು ಗೊತ್ತಾಯಿತು.

    Live Tv
    [brid partner=56869869 player=32851 video=960834 autoplay=true]

  • ಬೆಳಗಾವಿಯಲ್ಲಿ ಸರ್ಕಾರಿ ವಾಹನದ ಮೇಲೆ ಕಲ್ಲು ತೂರಾಟ – ಸಿಸಿಟಿವಿಯಿಂದ ಚಾಲಕನ ಸುಳ್ಳು ಬಯಲು

    ಬೆಳಗಾವಿಯಲ್ಲಿ ಸರ್ಕಾರಿ ವಾಹನದ ಮೇಲೆ ಕಲ್ಲು ತೂರಾಟ – ಸಿಸಿಟಿವಿಯಿಂದ ಚಾಲಕನ ಸುಳ್ಳು ಬಯಲು

    ಬೆಳಗಾವಿ: ಸರ್ಕಾರಿ ವಾಹನ ಮೇಲೆ ಕಲ್ಲು ತೂರಾಟ (Stone Pelting) ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ತನ್ನ ತಪ್ಪು ಮರೆಮಾಚಲು ಚಾಲಕ(Driver) ಸುಳ್ಳು ದೂರು ನೀಡಿದ ವಿಚಾರ ಈಗ ಬೆಳಕಿಗೆ ಬಂದಿದೆ.

    ಬೆಳಗಾವಿ ಅಧಿವೇಶನದ(Belagavi Session) ಕರ್ತವ್ಯಕ್ಕೆ ಬರುತ್ತಿದ್ದ ಬೆಂಗಳೂರಿನ ಅಗ್ರಿಕಲ್ಚರ್ ರೂರಲ್ ಡೆವಲಪ್ಮೆಂಟ್ ಬ್ಯಾಂಕ್‌ಗೆ ಸೇರಿದ ಬೊಲೆರೊ ವಾಹನದ ಮುಂಭಾಗದ ಗಾಜು ಜಖಂಗೊಂಡಿತ್ತು.

    ಸುವರ್ಣಸೌಧ(Suvarna Soudha) ಬಳಿ ಮರಾಠಿ ಭಾಷಿಕರು ಕಲ್ಲು ತೂರಾಟ ನಡೆಸಿದ್ದಾರೆಂದು ಚಾಲಕ ಚೇತನ್ ಎನ್.ವಿ ದೂರು ನೀಡಿದ್ದ. ಬುಧವಾರ ನಿನ್ನೆ ರಾತ್ರಿ 10:30ರ ಸುಮಾರಿಗೆ ಮರಾಠಿ ಮಾತನಾಡುತ್ತಿದ್ದ ಯುವಕರು ಕಲ್ಲು ತೂರಿದ್ದಾರೆಂದು ದೂರು ನೀಡಿದ್ದ ಹಿನ್ನೆಲೆಯಲ್ಲಿ ಹಿರೇಬಾಗೇವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಅಧಿವೇಶನ ಹಿನ್ನೆಲೆಯಲ್ಲಿ ಭದ್ರತೆ ಚುರುಕುಗೊಳಿಸಿದ್ದ ಪೊಲೀಸರು ಈ ಪ್ರಕರಣದ ತನಿಖೆಗೆ ಇಳಿದಿದ್ದಾರೆ. ತನಿಖೆಯ ವೇಳೆ ಹಿರೇಬಾಗೇವಾಡಿ ಟೋಲ್‌ಗೇಟ್ ಸಿಸಿ ಕ್ಯಾಮೆರಾ ಚಾಲಕ ಹೇಳಿದ್ದ ಸುಳ್ಳನ್ನು ಬಯಲು ಮಾಡಿದೆ. ಇದನ್ನೂ ಓದಿ: ಬಿಎಸ್‌ಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ

    ನಿಜವಾಗಿ ಆಗಿದ್ದೇನು?
    ಬುಧವಾರ ಬೆಳಗ್ಗೆ 7.45ಕ್ಕೆ ಬೆಂಗಳೂರಿಂದ ಬೆಳಗಾವಿಯತ್ತ ಪ್ರಯಾಣ ಬೆಳೆಸಿದ್ದ ಚಾಲಕ ಶಿಗ್ಗಾಂವ್‌ ತಾಲೂಕಿನ ತಡಸ ಗ್ರಾಮದ ಬಳಿ ಬಾರ್‌ವೊಂದರಲ್ಲಿ ಮದ್ಯಪಾನ ಮಾಡಿದ್ದಾನೆ. ನಂತರ ಧಾರವಾಡ – ಹಿರೇಬಾಗೇವಾಡಿ ಟೋಲ್ ನಾಕಾ ಮಧ್ಯೆ ಸ್ಟೀಲ್ ಬಾರ್ ಸಾಗಿಸುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ.

    ಡಿಕ್ಕಿಯ ರಭಸಕ್ಕೆ ಬೊಲೆರೊ ವಾಹನದ ಗಾಜು ಜಖಂಗೊಂಡಿತ್ತು. ಬೆಳಗಾವಿಗೆ ಬರುತ್ತಿದ್ದಾಗ ಹಿರೇಬಾಗೇವಾಡಿ ಟೋಲ್‌ಗೇಟ್‌ನಲ್ಲಿರುವ ಸಿಸಿ ಕ್ಯಾಮೆರಾದಲ್ಲಿ ಮುಂಭಾಗದ ಗಾಜು ಜಖಂಗೊಂಡ ಬೊಲೆರೊ ವಾಹನ ಸಂಚರಿಸುವ ದೃಶ್ಯ ಸೆರೆಯಾಗಿದೆ. ನಂತರ ತನ್ನ ತಪ್ಪು ಗೊತ್ತಾದರೆ ಮೇಲಾಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆಂಬ ಭಯದಿಂದ ಚಾಲಕ ಸುಳ್ಳು ದೂರು ನೀಡಿದ್ದ.

    ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ಮಾಧ್ಯಮ ಪ್ರಕಟಣೆ ಹೊರಡಿಸಿ, ಸುಳ್ಳು ಸುದ್ದಿಗೆ ಕಿವಿಗೊಡದಂತೆ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲದೇ ಸುಳ್ಳು ದೂರು ನೀಡಿದ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಚಮಚಾಗಿರಿ ಮಾಡಲ್ಲ, ಅದಕ್ಕೆ ರಾಜಕೀಯದಲ್ಲಿ ಹಿಂದೆ ಇದ್ದೇನೆ:  ಯತ್ನಾಳ್

    ಚಮಚಾಗಿರಿ ಮಾಡಲ್ಲ, ಅದಕ್ಕೆ ರಾಜಕೀಯದಲ್ಲಿ ಹಿಂದೆ ಇದ್ದೇನೆ: ಯತ್ನಾಳ್

    ಧಾರವಾಡ: ನಾನೇನೂ ರಾಜಕೀಯ ಜ್ಯೋತಿಷಿ ಅಲ್ಲ ಒಮ್ಮೊಮ್ಮೆ ಏನು ಅನಿಸುತ್ತದೆ ಅದನ್ನು ವ್ಯಾಖ್ಯಾನ ಮಾಡುತ್ತೇನೆ ಅಷ್ಟೇ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸದ್ಯ ಪಂಚರಾಜ್ಯ ಚುನಾವಣೆ ನಡೆದಿದೆ. ಸ್ವಲ್ಪ ಹೆಚ್ಚು ಕಡಿಮೆ ಆಗಲಿದೆ. ಒಟ್ಟಾರೆ ಒಳ್ಳೆ ದಿನಗಳು ಬರಲಿವೆ. ನಾನಂತೂ ಪಕ್ಷದಲ್ಲಿ ಯಾವುದೇ ಅಪೇಕ್ಷೇ ಮಾಡಿಲ್ಲ. ಆದರೂ ನಮ್ಮನ್ನೂ ಸೇರಿಯೇ ಒಳ್ಳೆ ದಿನ ಬರಲಿದೆ. ಕಾಕತಾಳೀಯ ಎಂಬಂತೆ ನಾನು ಹೇಳಿದ್ದು ನಿಜವಾಗುತ್ತಿದೆ. ನಾನೇನು ರಾಜಕೀಯ ಜ್ಯೋತಿಷಿ ಅಲ್ಲ. ಒಮ್ಮೊಮ್ಮೆ ಏನು ಅನಿಸುತ್ತದೆ ಅದನ್ನು ವ್ಯಾಖ್ಯಾನ ಮಾಡುತ್ತೇನೆ ಅಷ್ಟೇ ಎಂದರು. ಇದನ್ನೂ ಓದಿ: ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ್‌ ನಿಧನ

    ಯತ್ನಾಳರಿಗೆ ಸಿಎಂ ಸ್ಥಾನದ ಬಗ್ಗೆ ಸ್ವಾಮೀಜಿಗಳ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನನ್ನಷ್ಟು ಯೋಗ್ಯತೆ, ಅರ್ಹತೆ ಬಿಜೆಪಿಯಲ್ಲಿ ಯಾರಿಗಿದೆ. ನಾನು ವಾಜಪೇಯಿ ಆಡಳಿತದಲ್ಲಿ ಮಂತ್ರಿ ಆಗಿದ್ದೆ. ಸಚಿವ ಸಂಪುಟದಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡಿದ್ದಾಗಿ ಅಟಲ್‍ಜೀ ಹಸ್ತಾಕ್ಷರದಿಂದ ಪತ್ರ ಪಡೆದಿದ್ದೇನೆ. ಆದರೆ ದುರ್ದೈವ ಅಂದರೆ ರಾಜಕಾರಣದಲ್ಲಿ ನೇರ ಮಾತನಾಡಬಾರದು ಚಮಚಾಗಿರಿ ಮಾಡಬೇಕು, ಅದನ್ನು ನಾನು ಮಾಡೋದಿಲ್ಲ. ನಾನೂ ಇನ್ನೊಬ್ಬರ ಕಾಲು ಹಿಡಿದು, ಭೋಗದ ವಸ್ತು ಕೊಡುವವನು ಅಲ್ಲ. ಅದಕ್ಕೆ ಹಿಂದೆ ಉಳಿದಿದ್ದೇನೆ. ನಾನು ಓರ್ವ ಸಾಮಾನ್ಯ ಕಾರ್ಯಕರ್ತರ ಸಂಬಂಧ, ಸಾಮಾಜಿಕ ನ್ಯಾಯಕ್ಕಾಗಿ ಗುಡುಗಿದ್ದೇನೆ. ಮಂತ್ರಿ, ಸಿಎಂ ಮಾಡಿ ಅಂತಾ ನಾನು ಗುಡುಗಿಲ್ಲ ಎಂದರು.

    ಸಿ.ಟಿ ರವಿ ಮೊನ್ನೆ ಒಂದು ಹೇಳಿಕೆ ಕೊಟ್ಟಿದ್ದು, 2023ರಲ್ಲಿ ಯಾರ ನೇತೃತ್ವ ಅಂತಾ ಹೈಕಮಾಂಡ್ ಹೇಳುತ್ತೆ ಅಂದಿದ್ದಾರೆ. ಏನೇ ನಿರ್ಣಯ ಮಾಡಿದ್ದಲ್ಲಿ ಅದಕ್ಕೆ ನಾವು ಬದ್ಧನಾಗಿರುತ್ತೇನೆ. ಯಾವ ಯಾವುದೋ ಅನಿವಾರ್ಯಗಳು ಇರಬಹುದು. 2023ಕ್ಕೆ ಹೊಸ ಶಕ್ತಿಯೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಅಫ್ಘಾನಿಸ್ತಾನಕ್ಕೆ ಭಾರತದ ನೆರವು – ಇರಾನ್ ಸಹಾಯ

    ಬೆಳಗಾವಿ ಅಧಿವೇಶದಲ್ಲಿ ಉತ್ತರ ಕರ್ನಾಟಕ ನಿರ್ಲಕ್ಷ್ಯ ವಿಚಾರವಾಗಿ ಮಾತನಾಡಿ, ಬೆಳಗಾವಿ ಅಧಿವೇಶನದಲ್ಲಿ ಕೊನೆಗೆ ಎರಡೇ ದಿನ ನನಗೆ ಮಾತನಾಡಲಿಕ್ಕೆ ಕೊಟ್ಟಿದ್ದಾರೆ. ಮುಂದಿನ ಅಧಿವೇಶನದಲ್ಲಿ ಮೊದಲೇ ನಾಲ್ಕು ದಿನ ಕೊಡಬೇಕು, ಉತ್ತರ ಕರ್ನಾಟಕಕ್ಕೆ ಮೊದಲೇ ಸಮಯ ಕೊಡುವಂತೆ ಸಭಾಪತಿಯವರಿಗೆ ಕೇಳಿದ್ದೇನೆ. ಉದ್ದೇಶಪೂರ್ವಕವಾಗಿ ಕಾಂಗ್ರೆಸ್ ಸದನದ ಸಮಯ ಹಾಳು ಮಾಡಿದೆ. ಉತ್ತರ ಕರ್ನಾಟಕದ ಚರ್ಚೆಯಾಗದಂತೆ ಕಾಂಗ್ರೆಸ್ ಮಾಡಿದೆ. ಸಿದ್ದರಾಮಯ್ಯ ಎಂಟೆಂಟು ತಾಸು ಮಾತನಾಡುತ್ತಾರೆ. ಅವರ ಶಾಸಕರಿಗೂ ಅವರು ಮಾತನಾಡಲಿಕ್ಕೆ ಅವಕಾಶ ಕೊಡುವದಿಲ್ಲ. ಹಾಡಿದ್ದು ಹಾಡೋ ಕಿಸಬಾಯಿದಾಸ ಅಂತಾರಲ್ಲ ಹಾಗೇ ಸಿದ್ದರಾಮಯ್ಯ ಹೇಳಿದ್ದೇ ಹೇಳುತ್ತಾರೆ ಎಂದು ವ್ಯಂಗ್ಯ ವಾಡಿದರು.

    ಕೈ ನಾಯಕರು ಅದೇ ಟಿಪ್ಪು ಸುಲ್ತಾನ್ ವರ್ಣನೆ ಮಾಡುತ್ತಾರೆ. ಅದು ಬಿಟ್ಟರೇ ಬೇರೆ ಗೊತ್ತಿಲ್ಲ. ಟಿಪ್ಪು ಸುಲ್ತಾನ್ ವರ್ಣನೆಯಿಂದಲೇ ಕಾಂಗ್ರೆಸ್ ಹಾಳಾಗುತ್ತಿದೆ. ಮೇಕೆದಾಟು ಪಾದಯಾತ್ರೆಯಿಂದಲೂ ಇವರ ಬಣ್ಣ ಬಯಲಾಗುತ್ತಿದ್ದು, ನಿನ್ನೆ ರಾತ್ರಿಯಿಂದ ಬಣ್ಣ ಬಯಲಾಗುತ್ತಿದೆ ಎಂದರು.

  • ವಿಧಾನ ಪರಿಷತ್‌ನಲ್ಲಿ ಇಂದು ಮತಾಂತರ ನಿಷೇಧ ಮಸೂದೆ ಮಂಡನೆ?

    ವಿಧಾನ ಪರಿಷತ್‌ನಲ್ಲಿ ಇಂದು ಮತಾಂತರ ನಿಷೇಧ ಮಸೂದೆ ಮಂಡನೆ?

    ಬೆಳಗಾವಿ: ವಿಧಾನಸಭೆಯಲ್ಲಿ ಅಂಗೀಕಾರ ಪಡೆದಿರುವ ಮತಾಂತರ ನಿಷೇಧ ಮಸೂದೆ ವಿಧಾನ ಪರಿಷತ್‌ ಇಂದು ಮಂಡನೆಯಾಗುವ ಸಾಧ್ಯತೆ ಇದೆ.

    ವಿಧಾನ ಪರಿಷತ್‌ನಲ್ಲಿ ದೊಡ್ಡ ಹೈಡ್ರಾಮಕ್ಕೆ ವೇದಿಕೆ ಸಿದ್ಧವಾಗಿದೆ. ಪ್ರತಿಪಕ್ಷಗಳ ಪ್ರಬಲ ವಿರೋಧವಿದ್ದರೂ ಬಹುಮತದ ಆಧಾರದ ಮೇಲೆ ಮಸೂದೆಯನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು. ಆದರೆ ವಿಧಾನ ಪರಿಷತ್‌ನಲ್ಲಿ ಬಿಜೆಪಿ ಪಕ್ಷಕ್ಕೆ ಬಹುಮತ ಇಲ್ಲ. ಮಸೂದೆ ವಿರುದ್ಧ ಧ್ವನಿಯೆತ್ತಿರುವ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು, ಮಸೂದೆ ಮತಕ್ಕೆ ಹಾಕಿದಾಗ ಸೋಲಿಸಲು ಯೋಜನೆ ರೂಪಿಸಿವೆ. ಪ್ರತಿಪಕ್ಷಗಳ ಅಸ್ತ್ರಕ್ಕೆ ಬಿಜೆಪಿಯಿಂದಲೂ ಪ್ರತಿ ಅಸ್ತ್ರ ಪ್ರಯೋಗಿಸಲು ತಂತ್ರ ರೂಪಿಸಲಾಗಿದೆ. ಇದನ್ನೂ ಓದಿ: ಮತಾಂತರ ಕಾಯ್ದೆ ವಿಧಾನಸಭೆಯಲ್ಲಿ ಪಾಸ್: ಕಟೀಲ್ ಸ್ವಾಗತ

    ಇಂದು ಮಸೂದೆಯನ್ನು ಕೇವಲ ಮಂಡಿಸುವುದಕ್ಕಷ್ಟೇ ಬಿಜೆಪಿ ಕಾರ್ಯತಂತ್ರ ರೂಪಿಸಿದೆ. ಮಸೂದೆ ಮೇಲಿನ ಚರ್ಚೆ, ಅಂಗೀಕಾರ ಕಸರತ್ತಿಗೆ ಕೈಹಾಕಿಲ್ಲ. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ಸಂವಿಧಾನಾತ್ಮಕ ಹಾಗೂ ಜನಪರ: ಬೊಮ್ಮಾಯಿ

  • ವಿಧಾನಮಂಡಲ ಅಧಿವೇಶನ ಅವಧಿ ವಿಸ್ತರಣೆ ಕುರಿತು ಚರ್ಚಿಸಿ ತೀರ್ಮಾನ: ಸಿಎಂ

    ವಿಧಾನಮಂಡಲ ಅಧಿವೇಶನ ಅವಧಿ ವಿಸ್ತರಣೆ ಕುರಿತು ಚರ್ಚಿಸಿ ತೀರ್ಮಾನ: ಸಿಎಂ

    ಬೆಳಗಾವಿ: ಮುಂಬರುವ ದಿನಗಳಲ್ಲಿ ಜಂಟಿ ಅಧಿವೇಶನ, ಬಜೆಟ್ ಅಧಿವೇಶನ ಸೇರಿದಂತೆ ಅಧಿವೇಶನ ಕಲಾಪದ ಅವಧಿಯನ್ನು ಹೆಚ್ಚಿಗೆ ನಿಗದಿಪಡಿಸುವ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಇದರಿಂದ ಸದನದಲ್ಲಿ ಹೆಚ್ಚಿನ ಸಮಯ ಅರ್ಥಪೂರ್ಣ ಚರ್ಚೆ ನಡೆಯಲು ಸಾಧ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಇಂದು ಅವರು ಸದನ ಮತ್ತಷ್ಟು ಅರ್ಥಪೂರ್ಣವಾಗಿ ನಡೆಯಬೇಕೆನ್ನುವ ಕುರಿತು ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭೆ ಅಧಿವೇಶನದಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಸದನದ ಅಧಿವೇಶನದಲ್ಲಿ ನಿಗದಿಪಡಿಸಿರುವ ನಿಯಮಾವಳಿಗಳನ್ನು ಪಾಲಿಸಿದರೆ ಯಾವುದೇ ಸಮಸ್ಯೆ ಬರುವುದಿಲ್ಲ. ಎರಡೂ ಸದನಕ್ಕೆ ಒಂದು ಪರಂಪರೆ ಇದೆ. ವಿಷಯಗಳನ್ನು ಚರ್ಚಿಸಲು ರೀತಿ ನೀತಿ ಇದೆ ಎಂದರು. ರೂಲ್ಸ್ ಬುಕ್ ಇದೆ. ಅದರಂತೆ ನಾವು ನಡೆದುಕೊಳ್ಳಬೇಕು ಎಂದರು. ಇದನ್ನೂ ಓದಿ: ಸುವರ್ಣಸೌಧಕ್ಕೆ ಮಾಧ್ಯಮಗಳ ನಿರ್ಬಂಧ ಸಂವಿಧಾನದ ಒಂದು ಕಾಲು ಮುರಿಯುವ ಪ್ರಯತ್ನದಂತೆ: ಎಚ್‍ಡಿಕೆ

    ವಿರೋಧ ಪಕ್ಷಕ್ಕೆ ಸಹಜವಾಗಿ ಹೆಚ್ಚಿನ ಅವಧಿ ದೊರೆಯಬೇಕು. ಆಡಳಿತ ಪಕ್ಷದವರೂ ತಮ್ಮ ಅಭಿಪ್ರಾಯಗಳನ್ನು ಹೇಳಬಹುದು. ಕೆಲವು ವಿಚಾರಗಳಲ್ಲಿ ವಿರೋಧ ಪಕ್ಷಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕಾಗುತ್ತದೆ. ಈ ನೀತಿಯ ಅನುಸಾರ, ಸದಸ್ಯರ ಸಂಖ್ಯೆಯ ಆಧಾರದ ಮೇಲೆ ಪಕ್ಷಕ್ಕೆ ವಿಷಯಗಳ ಬಗ್ಗೆ ಚರ್ಚಿಸಲು ಅವಧಿ ನೀಡುವ ವ್ಯವಸ್ಥೆ ಲೋಕಸಭೆಯಲ್ಲಿಯೂ ಇದೆ. ಈ ನೀತಿಯನ್ನು ಇಲ್ಲಿಯೂ ಪಾಲಿಸಿದರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು.

    ಯಾವುದಾದರೂ ಸದಸ್ಯರು ಒಂದು ವಿಷಯ ಚರ್ಚೆಗೆ ತೆಗೆದುಕೊಂಡಾಗ, ಉಳಿದ ಸದಸ್ಯರು ಅದೇ ವಿಷಯವಾಗಿ ಮಾತನಾಡಿದಾಗ ಸಮಯದ ಕೊರತೆ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ಕೆಲವು ನೀತಿ ನಿಯಮಗಳನ್ನು ಪುನರ್ ಪರಿಶೀಲನೆ ಮಾಡಬೇಕಾದ ಅವಶ್ಯಕತೆ ಇದೆ. ಸದನದ ಸಮಯವನ್ನು ಇನ್ನಷ್ಟು ವಿಸ್ತರಿಸಬೇಕು. ಸದನದ ಅವಧಿ ವಿಸ್ತರಣೆಯ ಜೊತೆಗೆ ಅಧಿವೇಶನದ ಸಂದರ್ಭದಲ್ಲಿ ಎಷ್ಟು ಚರ್ಚೆಗಳು ಫಲಪ್ರದವಾದವು ಎಂಬ ಬಗ್ಗೆಯೂ ಗಮನ ಹರಿಸಬೇಕಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಅಧಿವೇಶನದಲ್ಲಿ ವಿರೋಧ ಪಕ್ಷದವರು ಚರ್ಚೆಯಿಂದ ಓಡಿ ಹೋದರು: ಜೋಶಿ ವ್ಯಂಗ್ಯ

  • ಪ್ರತಿಪಕ್ಷಗಳ ವಿರೋಧದ ನಡುವೆಯೂ ಮತಾಂತರ ನಿಷೇಧ ಮಸೂದೆ ಮಂಡನೆ

    ಪ್ರತಿಪಕ್ಷಗಳ ವಿರೋಧದ ನಡುವೆಯೂ ಮತಾಂತರ ನಿಷೇಧ ಮಸೂದೆ ಮಂಡನೆ

    ಬೆಳಗಾವಿ: ಪ್ರತಿಪಕ್ಷಗಳ ತೀವ್ರ ವಿರೋಧದ, ಗದ್ದಲದ ನಡುವೆಯೂ ಮಂಗಳವಾರ ವಿಧಾನಸಭೆಯಲ್ಲಿ ಮತಾಂತರ ನಿಷೇಧ ಮಸೂದೆಯನ್ನು ಮಂಗಳವಾರ ಮಂಡಿಸಲಾಯಿತು. ಭೋಜನ ನಂತರ ಕಲಾಪದ ಬಳಿಕ ವಿಧೇಯಕವನ್ನು ದಿಢೀರ್ ವಿಧೇಯಕ ಮಂಡಿಸಲಾಗಿದೆ.

    ಕಾಂಗ್ರೆಸ್ ವಿರೋಧಿಸುತ್ತಿದ್ದರೂ ಗೃಹ ಸಚಿವ ಆರಗ ಜ್ಞಾನೇಂದ್ರ ಮಸೂದೆ ಮಂಡಿಸಲು ಮುಂದಾದರು. ಈ ವೇಳೆ ಮಸೂದೆ ಮಂಡನೆಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದರು. ಇದನ್ನೂ ಓದಿ: ಮತಾಂತರ ನಿಷೇಧ ಜೊತೆಗೆ ಪಕ್ಷಾಂತರ ನಿಷೇಧ ಕಾನೂನನ್ನೂ ಜಾರಿಗೆ ತರಲಿ: ಸಿ.ಎಂ ಇಬ್ರಾಹಿಂ

    ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣಾ ಹಕ್ಕು-2021 ತಿದ್ದುಪಡಿ ಮಸೂದೆ ಮಂಡಿಸಲಾಯಿತು. ಹೆಚ್ಚುವರಿ ಕಾರ್ಯಸೂಚಿಯಲ್ಲಿ ಮಸೂದೆ ಮಂಡನೆ ಬಗ್ಗೆ ಪ್ರಸ್ತಾಪಿಸಲಾಗಿದೆ. ಚರ್ಚೆ ಮಾಡಿ ಎಂದು ಸ್ಪೀಕರ್ ವಿಶೇಶ್ವರ ಹೆಗಡೆ ಕಾಗೇರಿ ಹೇಳಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು, ಚರ್ಚೆ ಮಾಡಿ ಮೊದಲು ಎಂದು ಮನವಿ ಮಾಡಿದರು. ಆಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕದ್ದು ಮುಚ್ಚಿ ಮಸೂದೆ ಯಾಕೆ ಮಾಡಿದ್ದೀರಿ ಎಂದು ಖಾರವಾಗಿ ಪ್ರಶ್ನಿಸಿದರು. ಶಿವಕುಮಾರ್ ಮಾತು ವಾಪಸ್ ತೆಗೆದುಕೊಳ್ಳಬೇಕು. ಕದ್ದುಮುಚ್ಚಿ ಮಾಡಿಲ್ಲ, ಅಜೆಂಡಾದಲ್ಲಿ ತಂದೇ ಮಾಡಿರುವುದು ಎಂದ ಸ್ಪೀಕರ್ ಪ್ರತ್ಯುತ್ತರ ನೀಡಿದರು. ಆಗ ವಿಧಾನಸಭೆಯಲ್ಲಿ ಕಾಂಗ್ರೆಸ್ ಗದ್ದಲ ಎಬ್ಬಿಸಿತು. ಸರ್ಕಾರ ಕಳ್ಳತನದಿಂದ ಮಸೂದೆ ಮಂಡನೆ ಮಾಡುತ್ತಿದೆ ಎಂದು ಸಿದ್ದರಾಮಯ್ಯ ಟೀಕಿಸಿದರು. ಶೇಮ್ ಶೇಮ್ ಎಂದು ಕಾಂಗ್ರೆಸ್ ಸದಸ್ಯರ ಗದ್ದಲ ಸೃಷ್ಟಿಸಿದರು.

    ನಿನ್ನೆ ಮಸೂದೆ ಮುದ್ರಣ ಆಗಿರಲಿಲ್ಲ, ಅದಕ್ಕೆ ನಿನ್ನೆ ಅಜೆಂಡಾದಲ್ಲಿ ಸೇರಿಸಿರಲಿಲ್ಲ. ಇವತ್ತು ಮುದ್ರಣ ಆಗಿ ತಂದರು. ಇವತ್ತೇ ಮಾಡಿ ಅಂತಾ ಸರ್ಕಾರ ಹೇಳಿದ ಮೇಲೆ ಹೆಚ್ಚುವರಿ ಅಜೆಂಡಾದಲ್ಲಿ ಸೇರಿಸಿದ್ದು. ಕದ್ದುಮುಚ್ಚಿ ಮಾಡಿಲ್ಲ, ಚರ್ಚೆ ಮಾಡಿ. ಕಾನೂನಿನ ಪ್ರಕಾರವೇ ಮಸೂದೆ ಮಂಡನೆಗೆ ಅವಕಾಶ ಕೊಡಲಾಗಿದೆ. ನಾಳೆ ಚರ್ಚೆಗೆ ಅವಕಾಶ ಕೊಡುತ್ತೇವೆ ಎಂದು ಸ್ಪೀಕರ್ ತಿಳಿಸಿದರು. ಇದನ್ನು ಒಪ್ಪದ ಸಿದ್ದರಾಮಯ್ಯ, ಇದೊಂದು ಕೆಟ್ಟ ಸರ್ಕಾರ, ವಿಧಾನಸಭೆ ನಡೆಸೋದು ಹೀಗೆನಾ ಎಂದು ಖಾರವಾಗಿ ಪ್ರಶ್ನಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆಯ ಅವಶ್ಯಕತೆ ಏನಿದೆ?: ಎಚ್.ಡಿ ರೇವಣ್ಣ

    ಈ ವೇಳೆ ವಿಧಾನಸಭೆಯಲ್ಲಿ ಅತಿವೃಷ್ಟಿ ಹಾನಿ ಬಗ್ಗೆ ನಡೆದ ಚರ್ಚೆಗೆ ಸರ್ಕಾರದ ಉತ್ತರ ಕೊಡಲು ಸ್ಪೀಕರ್ ಸೂಚನೆ ನೀಡಿದರು. ಉತ್ತರ ಕೊಡಲು ಕಂದಾನ ಸಚಿವ ಅಶೋಕ್ ಎದ್ದು ನಿಂತಾಗ, ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿ, ಈ ಬಿಲ್ ಅಷ್ಟು ಅರ್ಜೆಂಟ್ ಇತ್ತಾ ಎಂದು ಪ್ರಶ್ನಿಸಿದರು. ಆಗ ಡಿ.ಕೆ.ಶಿವಕುಮಾರ್ ಮಸೂದೆ ಪ್ರತಿಯನ್ನು ಹರಿದು ಹಾಕಿದರು. ಡಿಕೆಶಿ ನೀವು ಹಿರಿಯ ಶಾಸಕರು, ಬಿಲ್ ಹರಿದು ಹಾಕಿದ್ದು ಸರಿಯಲ್ಲ. ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಮತಾಂತರ ನಿಷೇಧ ಮಸೂದೆ ಸಂವಿಧಾನಕ್ಕೆ ವಿರುದ್ಧವಾಗಿದೆ: ಡಿಕೆಶಿ

    ಮಸೂದೆಗೆ ಜೆಡಿಎಸ್ ನಿಂದಲೂ ವಿರೋಧ ವ್ಯಕ್ತವಾಯಿತು. ಮತಾಂತರ ನಿಷೇಧ ಮಸೂದೆ ವಿರೋಧಿಸಿ ಕಾಂಗ್ರೆಸ್ ಸಭಾತ್ಯಾಗ ಮಾಡಿತು.

    ಮತಾಂತರ ನಿಷೇಧ ವಿಧೇಯಕದಲ್ಲಿ ಇರುವ ಪ್ರಮುಖ ಅಂಶಗಳೇನು?
    * ಬಲವಂತ, ವಂಚನೆ, ಒತ್ತಾಯ ಹಾಗೂ ಆಮಿಷದ ಮೂಲಕ ನಡೆಸುವ ಮತಾಂತರ ಹಾಗೂ ಮದುವೆಯಾಗುವ ಭರವಸೆಯ ಮೂಲಕ ನಡೆಸುವ ಮತಾಂತರಕ್ಕೆ ನಿಷೇಧವಿದೆ.

    * ವ್ಯಕ್ತಿಯು ಆತನ ನಿಕಟ ಪೂರ್ವ ಧರ್ಮಕ್ಕೆ ಮರು ಮತಾಂತರಗೊಂಡರೆ ಅದನ್ನು ಈ ಅಧಿನಿಯಮದ ಅಡಿಯಲ್ಲಿ ಮತಾಂತರವೆಂದು ಪರಿಗಣಿಸಲಾಗುವುದಿಲ್ಲ

    * ಮತಾಂತರಗೊಂಡ ವ್ಯಕ್ತಿಯ ಪೋಷಕರು, ಸಹೋದರ, ಸಹೋದರಿ, ಸಹವರ್ತಿ ಅಥವಾ ಸಹೋದ್ಯೋಗಿಗಳಿಗೂ ಮತಾಂತರದ ಬಗ್ಗೆ ದೂರನ್ನು ನೀಡಿದರೆ ಎಫ್ ಐಆರ್ ದಾಖಲಿಸುವ ಅವಕಾಶವಿದೆ.

    * ಬಲವಂತದ ಮತಾಂತರಕ್ಕೆ ಮೂರು ವರ್ಷದಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ಇಪ್ಪತ್ತೈದು ಸಾವಿರ ರೂಪಾಯಿಗಳ ದಂಡ ವಸೂಲಾತಿಗೆ ಅವಕಾಶವಿದೆ.

    * ಅಪ್ರಾಪ್ತರು, ಬುದ್ದಿಮಾಂದ್ಯ ವ್ಯಕ್ತಿಗಳು, ಸೇರಿದ ವ್ಯಕ್ತಿಯ ಬಲವಂತದ ಮತಾಂತರಕ್ಕೆ ಮೂರು ವರ್ಷದಿಂದ ಹತ್ತು ವರ್ಷಗಳ ವರೆಗೆ ಜೈಲು ಶಿಕ್ಷೆಗೆ ಕಾಯ್ದೆಯಲ್ಲಿ ಅವಕಾಶವಿದೆ. ಅಷ್ಟೇ ಅಲ್ಲದೆ 50 ಸಾವಿರ ದಂಡ ವಸೂಲಿಗೂ ಅವಕಾಶವಿದೆ.

    * ಮತಾಂತರಕ್ಕೆ ಬಲಿಯಾದವರಿಗೆ ಆಪಾದಿತನಿಂದ ಸಂದಾಯವಾಗುವಂತೆ ಗರಿಷ್ಠ ಐದು ಲಕ್ಷ ರೂಪಾಯಿ ಪರಿಹಾರ ಕೊಡಿಸಲು ಅವಕಾಶ ಕಲ್ಪಿಸಲಾಗಿದೆ.

    * ಅಪರಾಧ ಪುನರಾವರ್ತನೆ ಆದಲ್ಲಿ ಐದು ವರ್ಷ ಜೈಲು ಶಿಕ್ಷೆ ಹಾಗೂ ಎರಡು ಲಕ್ಷ ದಂಡ ವಸೂಲಿಗೂ ಅವಕಾಶವಿದೆ.

    * ಮತಾಂತರದ ಉದ್ದೇಶದ ಆದ ಮದುವೆಯನ್ನು ಅಸಿಂಧುವೆಂದು ಘೋಷಿಸಲು ನ್ಯಾಯಾಲಯಕ್ಕೆ ಅವಕಾಶ ನೀಡಲಾಗಿದೆ.

    ಮತಾಂತರ ಆಗಬೇಕಾದಲ್ಲಿ ಪಾಲಿಸಬೇಕಿದೆ ನಿಯಮಾವಳಿಗಳು!
    * ಮತಾಂತರವಾಗಲು‌ ಮುಂದಾಗಿರುವ ವ್ಯಕ್ತಿ ಕನಿಷ್ಠ ಮೂವತ್ತು ದಿನಗಳ ಮೊದಲು ಜಿಲ್ಲಾ ದಂಡಾಧಿಕಾರಿಗೆ ಈ ಬಗ್ಗೆ ತಿಳಿಸಬೇಕು.

    * ಮತಾಂತರ ಮಾಡುವ ವ್ಯಕ್ತಿಯೂ ಈ ಬಗ್ಗೆ ಜಿಲ್ಲಾ ದಂಡಾಧಿಕಾರಿಗೆ ಮೂವತ್ತು ದಿನಗಳ ಮೊದಲೇ ಈ ಬಗ್ಗೆ ಮಾಹಿತಿ ಕೊಡಬೇಕು.

    * ಈ ಮಾಹಿತಿಯನ್ನು ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಕಚೇರಿ ಸೂಚನಾ ಫಲಕದಲ್ಲಿ ಹಾಕಬೇಕು. ಇದಕ್ಕೆ 30 ದಿನಗಳ ಒಳಗಾಗಿ ಆಕ್ಷೇಪಣೆ ಬಂದರೆ ಕಂದಾಯ ಅಥವಾ ಸಮಾಜ ಕಲ್ಯಾಣ ಇಲಾಖೆಯ ಮೂಲಕ ವಿಚಾರಣೆ ನಡೆಸಲು ಅವಕಾಶ ಇದೆ.

    * ವಿಚಾರಣೆಯ ಸಂದರ್ಭದಲ್ಲಿ ತಪ್ಪು ಕಂಡುಬಂದಲ್ಲಿ ಕ್ರಿಮಿನಲ್ ಕ್ರಮಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚಿಸಲು ಅವಕಾಶವಿದೆ.

    * ಮತಾಂತರಗೊಂಡ ವ್ಯಕ್ತಿಯೂ ಮತಾಂತರಗೊಂಡ ದಿನಾಂಕದಿಂದ ಹಿಡಿದು ಮೂಲ ಧರ್ಮ, ಮತಾಂತರಗೊಂಡ ಧರ್ಮ ಹಾಗೂ ಇನ್ನಿತರ ಮಾಹಿತಿಯನ್ನು ಜಿಲ್ಲಾಧಿಕಾರಿಗೆ ನೀಡಬೇಕು.

    * ಅಪರಾಧಕ್ಕೆ ನೆರವು ಹಾಗೂ ದುಷ್ಪ್ರೇರಣೆ ನೀಡಿ ವ್ಯಕ್ತಿಯನ್ನು ಆರೋಪಿಯನ್ನಾಗಿ ಪರಿಗಣಿಸುವ ಅವಕಾಶವೂ ಇದೆ.

  • ಮರಾಠಾ ಅಭಿವೃದ್ಧಿ ನಿಗಮ ಅಸ್ತಿತ್ವಕ್ಕೆ ತನ್ನಿ: ಸರ್ಕಾರಕ್ಕೆ ಆಡಳಿತ ಪಕ್ಷದ ಸದಸ್ಯರಿಂದಲೇ ಆಗ್ರಹ

    ಮರಾಠಾ ಅಭಿವೃದ್ಧಿ ನಿಗಮ ಅಸ್ತಿತ್ವಕ್ಕೆ ತನ್ನಿ: ಸರ್ಕಾರಕ್ಕೆ ಆಡಳಿತ ಪಕ್ಷದ ಸದಸ್ಯರಿಂದಲೇ ಆಗ್ರಹ

    ಬೆಳಗಾವಿ: ಮರಾಠಾ ಅಭಿವೃದ್ಧಿ ನಿಗಮ ಅಸ್ತಿತ್ವಕ್ಕೆ ತರಬೇಕು ಎಂದು ಸರ್ಕಾರವನ್ನು ಆಡಳಿತ ಪಕ್ಷದ ಸದಸ್ಯರೇ ಆಗ್ರಹಿಸಿರುವ ಘಟನೆ ಸುವರ್ಣಸೌಧದ ವಿಧಾನಸಭೆ ಅಧಿವೇಶನದಲ್ಲಿ ನಡೆಯಿತು.

    ಬಿ.ಎಸ್.ಯಡಿಯೂರಪ್ಪ ಅವಧಿಯಲ್ಲಿ ಘೋಷಣೆ ಮಾಡಲ್ಪಟ್ಟ ಮರಾಠಾ ಅಭಿವೃದ್ಧಿ ನಿಗಮ ಅಸ್ತಿತ್ವಕ್ಕೆ ಬಂದಿಲ್ಲ ಎಂದು ಬಿಜೆಪಿ ಶಾಸಕ‌ ಬಸನಗೌಡ ಪಾಟೀಲ್ ಯತ್ನಾಳ್ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದರು. ಶೂನ್ಯವೇಳೆಯಲ್ಲಿ ಮಾತನಾಡಿದ ಅವರು, ತಕ್ಷಣವೇ ‌ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆಗೆ ಇದೇ ಅಧಿವೇಶನದಲ್ಲೇ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ಯತ್ನಾಳ್ ಪ್ರಸ್ತಾಪಕ್ಕೆ ಸದನದಲ್ಲಿ ಹಲವು ಶಾಸಕರು ಬೆಂಬಲ ಸೂಚಿಸಿದರು‌. ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ರೈತ ಸಮುದಾಯಕ್ಕೆ ಶುಭ ಸುದ್ದಿ, ಎಥೆನಾಲ್ ನೀತಿ ಜಾರಿಗೆ ನಿರ್ಣಯ: ಮುನೇನಕೊಪ್ಪ

    ಇನ್ನು ಸರ್ಕಾರದ ಉತ್ತರ ನೀಡಲು ಸಚಿವ ಅಶೋಕ್ ಹಿಂದೇಟು ಹಾಕಿದಾಗ, ಅಶೋಕ್ ನೀವು ಆ ಕಡೆ ನೋಡಬೇಡಿ, ನನ್ನ ನೋಡಿ ಉತ್ತರ ಕೊಡಿ ಎಂದು ಸ್ಪೀಕರ್‌ ಹೇಳಿದರು.

    ಬಳಿಕ ಮಾತನಾಡಿದ ಆರ್.ಅಶೋಕ್, ಮರಾಠಾ ನಿಗಮಕ್ಕೆ ಅಧ್ಯಕ್ಷರು ಮತ್ತು ಸದಸ್ಯರ ನೇಮಕಕ್ಕೆ ಕ್ರಮವಹಿಸುತ್ತೇವೆ. ಈಗಾಗಲೇ ಘೋಷಿತ 50 ಕೋಟಿ ರೂ. ಜೊತೆಗೆ ಹೆಚ್ಚುವರಿ ಅನುದಾನ ಕೊಡಿಸುವ ಬಗ್ಗೆ ಕ್ರಮಕೈಗೊಂಡು ಯತ್ನಾಳ್ ಅವರನ್ನು ಸಿಎಂ ಜೊತೆ ಭೇಟಿ ಮಾಡಿಸುತ್ತೇನೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಮುಂದಿನ ವರ್ಷ ಕೆಲ ಶಾಲೆಗಳಲ್ಲಿ NEP ಜಾರಿ: ಬಿ.ಸಿ.ನಾಗೇಶ್

  • ನಾಳೆಯಿಂದ ಬೆಳಗಾವಿಯಲ್ಲಿ ಅಧಿವೇಶನ – ಸಿದ್ಧತೆ ಪರಿಶೀಲಿಸಿದ ಸ್ಪೀಕರ್ ಕಾಗೇರಿ

    ನಾಳೆಯಿಂದ ಬೆಳಗಾವಿಯಲ್ಲಿ ಅಧಿವೇಶನ – ಸಿದ್ಧತೆ ಪರಿಶೀಲಿಸಿದ ಸ್ಪೀಕರ್ ಕಾಗೇರಿ

    ಬೆಳಗಾವಿ: ಚಳಿಗಾಲದ ಅಧಿವೇಶನಕ್ಕೆ ಕುಂದಾ ನಗರಿ ಬೆಳಗಾವಿ ಸಜ್ಜಾಗಿದೆ. ನಾಳೆಯಿಂದ ಬೆಳಗಾವಿ ಸುವರ್ಣ ಸೌಧದಲ್ಲಿ ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇಂದು ಸಿದ್ಧತೆಗಳನ್ನು ಪರಿಶೀಲಿಸಿದರು.

    ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾಳೆಯಿಂದ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.

    ನಾಳೆ ಬೆಳಗ್ಗೆ 10.30ಕ್ಕೆ ಕಾರ್ಯಕಲಾಪಗಳ ಸಮಿತಿಯ ಸಭೆ ನಡೆಯಲಿದೆ. ಎಲ್ಲಾ ಪಕ್ಷದ ಸದಸ್ಯರು ಭಾಗವಹಿಸಲಿದ್ದಾರೆ. ಸಭೆಯ ಎಲ್ಲಾ ದಿನದ ಕಾರ್ಯ ಕಲಾಪದ ವಿವರಗಳನ್ನ ಚರ್ಚೆ ಮಾಡುತ್ತೇವೆ. ಸಭೆಯಲ್ಲಿ ಚರ್ಚೆ ಮಾಡಿ ಕಾರ್ಯಕಲಾಪದ ವಿವರ ಪಡೆಯುತ್ತೇವೆ ಎಂದರು.

    ಮಸೂದೆಗಳಿನ್ನೂ ಬಂದಿಲ್ಲ: ಸರ್ಕಾರ ಇದುವರೆಗೂ ಸದನದಲ್ಲಿ ಯಾವ ಯಾವ ಬಿಲ್ ಮಂಡಿಸಲಿದೆ ಎನ್ನುವುದನ್ನು ಕಳುಹಿಸಿಲ್ಲ. ಬಿಲ್ ಕಳಿಸ್ತೀವಿ ಎಂದು ಹೇಳಿದ್ದಾರೆ, ಆದರೆ ಇದುವರೆಗೂ ಬಂದಿಲ್ಲ. ನಾಳೆಯೊಳಗೆ ಕಳುಹಿಸುತ್ತೇವೆ ಎಂದು ಮೌಖಿಕವಾಗಿ ತಿಳಿಸಿದ್ದಾರೆ ಎಂದರು. ಇದನ್ನೂ ಓದಿ: ವಿವಾಹ ನೋಂದಣಿಯಂತೆ ಮತಾಂತರ ನೋಂದಣಿ ಮಾಡೋ ಚಿಂತನೆ ನಡೆದಿದೆ: ಮಾಧುಸ್ವಾಮಿ

    2 ದಿನವಾದ್ರೂ ಉತ್ತರ ಕರ್ನಾಟಕದ ಚರ್ಚೆ ಬೇಕು: ಈ ಅಧಿವೇಶನದಲ್ಲಿ ಎರಡು ದಿನವಾದರೂ ಉತ್ತರ ಕರ್ನಾಟಕ ಭಾಗದ ವಿಷಯ ಚರ್ಚೆ ಮಾಡಬೇಕು ಎಂದು ಸಲಹೆಗಳು ಬಂದಿವೆ. ಬಿಎಸಿ ಸಭೆಯಲ್ಲಿ ಇದರ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು. ಇದನ್ನೂ ಓದಿ: ರಾಜ್ಯದಲ್ಲಿ APMC ಕಾಯ್ದೆ ವಾಪಸ್ ಇಲ್ಲ: ಸೋಮಶೇಖರ್

    ಕೋವಿಡ್ ಮುಂಜಾಗ್ರತೆ: ಕೋವಿಡ್ ಹಿನ್ನೆಲೆಯಲ್ಲಿ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನ ತೆಗೆದುಕೊಂಡಿದ್ದೇವೆ. ಕಲಾಪ ಚೆನ್ನಾಗಿ ನಡೆಯುವ ಅಗತ್ಯತೆ ಇದೆ. ಇಷ್ಟೆಲ್ಲ ವ್ಯವಸ್ಥೆ ಮಾಡಿ ಕಲಾಪ ಚೆನ್ನಾಗಿ ನಡೆಯಲಿಲ್ಲ ಅಂದ್ರೆ ಹೇಗೆ ಎಂದ ಅವರು, ಎಲ್ಲಾ ಶಾಸಕರಿಗೂ ಸಕ್ರಿಯವಾಗಿ ಚರ್ಚೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡುತ್ತೇನೆ. ನಿಯಮಾನುಸಾರ ಎಲ್ಲರಿಗೂ ಚರ್ಚೆಗೆ ಅವಕಾಶ ಮಾಡಿಕೊಡುತ್ತೇನೆ ಎಂದರು.

    ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತದೆ ಎಂದು ಸದಸ್ಯರು ಗೈರು ಹಾಜರಾಗುವುದು ಸರಿಯಲ್ಲ ಎಂದು ಕಾಗೇರಿ ಅವರು ಇದೇ ವೇಳೆ ಕಿವಿಮಾತು ಹೇಳಿದರು. ಇದನ್ನೂ ಓದಿ: ಹಿಂದುತ್ವವಾದಿಗಳು ಅಧಿಕಾರಕ್ಕಾಗಿ ಯಾರನ್ನು ಬೇಕಾದ್ರೂ ಕೊಲ್ತಾರೆ: ರಾಹುಲ್ ಗಾಂಧಿ

  • ನಾಳೆ ಸುವರ್ಣಸೌಧ ಮುತ್ತಿಗೆ ಹಾಕಿ ಹೋರಾಟ ಮಾಡ್ತೀವಿ: ಕೋಡಿಹಳ್ಳಿ ಚಂದ್ರಶೇಖರ್

    ನಾಳೆ ಸುವರ್ಣಸೌಧ ಮುತ್ತಿಗೆ ಹಾಕಿ ಹೋರಾಟ ಮಾಡ್ತೀವಿ: ಕೋಡಿಹಳ್ಳಿ ಚಂದ್ರಶೇಖರ್

    ಬೆಳಗಾವಿ: ನಾಳೆ ನಡೆಯುವ ಅಧಿವೇಶನದಲ್ಲಿ ಕೃಷಿ ಕಾಯ್ದೆ ವಿರೋಧಿಸಿ ಸುವರ್ಣ ಸೌಧ ಮುತ್ತಿಗೆ ಹಾಕಲಾಗುತ್ತದೆ. ಕೃಷಿ ಕಾಯ್ದೆ ವಾಪಸ್ ಪಡೆಯುವವರೆಗೆ ನಿರಂತರ ಹೋರಾಟ ಮಾಡುತ್ತೇವೆ. ಸುಮ್ಮನೆ ಕೈ ಕಟ್ಟಿ ಕುಳಿತು ಕೊಳ್ಳುವ ಮಾತೇ ಇಲ್ಲ. ಅರೆಸ್ಟ್ ಮಾಡಿದರೂ ಹೆದರಲ್ಲ. ಹೋರಾಟ ಮುಂದುವರೆಸುತ್ತೇವೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ರೈತ ವಿರೋಧಿ ಕೃಷಿ ಕಾಯ್ದೆ ಕೇಂದ್ರ ಸರ್ಕಾರವೇ ಹಿಂಪಡೆದಿದೆ. ರಾಜ್ಯ ಸರ್ಕಾರವೂ ಕೂಡಾ ವಾಪಸ್ ಪಡೆಯಬೇಕು. ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಸುಗ್ರೀವಾಜ್ಞೆ ಮೂಲಕ ರಾಜ್ಯದಲ್ಲಿ ಕೃಷಿ ಕಾಯ್ದೆಯನ್ನ ಜಾರಿಗೊಳಿಸಿದ್ದಾರೆ. ಭಾರತ ಸರ್ಕಾರ ರೈತರ ಒಂದು ವರ್ಷ ಹೋರಾಟ ನೋಡಿ ಕೃಷಿ ಕಾಯ್ದೆ ವಾಪಸ್ ಪಡೆದಿದ್ದಾರೆ. ರಾಜ್ಯ ಸರ್ಕಾರವೂ ಕೂಡ ರೈತ ವಿರೋಧಿ ಕೃಷಿ ಕಾಯ್ದೆ ವಾಪಸ್ ಪಡೆಯುತ್ತಾರೆ ಅಂತಾ ನಿರೀಕ್ಷೆಯನ್ನು ಇಟ್ಟುಕೊಂಡಿದ್ದೇವೆ. ಈ ಅಧಿವೇಶನದಲ್ಲಿ ಈ ವಿಷಯ ಮಂಡನೆ ಮಾಡುತ್ತಾರೆ ಅಂತಾ ಅಂದುಕೊಂಡಿದ್ದೇವೆ. ಆದರೆ ಸರ್ಕಾರದ ನಡುವಳಿಕೆ ಬದಲಾಗಿ ಕಾಣುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಲವ್ ಇದ್ಮೇಲೆ ಜಿಹಾದ್ ಯಾಕೆ ಬರುತ್ತೆ – ಇಬ್ರಾಹಿಂ ತಿರುಗೇಟು

    ಕೇಂದ್ರ ಸರ್ಕಾರ ವಾಪಸ್ ಪಡೆದರೆ ರಾಜ್ಯ ಸರ್ಕಾರ ವಾಪಸ್ ಪಡೆಬೇಕು ಅಂತ ಕಾನೂನು ಇಲ್ಲ ಎಂಬ ಮಾಧುಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾನೂನು ಸಚಿವ ಮಾಧುಸ್ವಾಮಿ ರೈತರಿಗೆ ಕಾನೂನು ಪಾಠ ಹೇಳುತ್ತಿದ್ದಾರೆ. ರೈತ ವಿರೋಧಿ ಕೃಷಿ ಕಾಯ್ದೆ ವಾಪಸ್ ಪಡೆಯದೇ ಇದ್ದರೆ, ಬಿಜೆಪಿ ಕಾರ್ಯಕ್ರಮ ಎಲ್ಲಿ ಇರುತ್ತದೆ ಅಲ್ಲಲ್ಲಿ ಕಪ್ಪು ಬಾವುಟ ಹಿಡಿದು ರೈತರು ಪ್ರತಿಭಟನೆ ಮಾಡುತ್ತೇವೆ. ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿ ದಿಲ್ಲಿ ಮಾದರಿಯ ರೈತ ಹೋರಾಟ ಮಾಡುತ್ತೇವೆ. ಮಹಾಪಂಚಾಯತ ಸಭಾ ಕಾರ್ಯಕ್ರಮ ಮಾಡುತ್ತೇವೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಇದರ ಪರಿಣಾಮ ಎದುರಿಸಲು ತಯಾರಾಗಬೇಕು. ಎಂದು ಈ ಮುಲಕ ಸಂದೇಶ ನೀಡುತ್ತೇವೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ‘ಬೀಸ್ಟ್’ ಸಿನಿಮಾ ವಿಶೇಷ ಫೋಟೋ ಶೇರ್ ಮಾಡಿದ ಚಿತ್ರತಂಡ