Tag: beggars

  • ಮೆಟ್ರೋ ರೈಲಿನ ಒಳಗಡೆ ಭಿಕ್ಷಾಟನೆ, ದಂಗಾದ ಪ್ರಯಾಣಿಕರು!

    ಮೆಟ್ರೋ ರೈಲಿನ ಒಳಗಡೆ ಭಿಕ್ಷಾಟನೆ, ದಂಗಾದ ಪ್ರಯಾಣಿಕರು!

    ಬೆಂಗಳೂರು: ಟ್ರಾಫಿಕ್‌ ಸಿಗ್ನಲ್‌, ಬಸ್‌ ನಿಲ್ದಾಣ, ದೇವಸ್ಥಾನಗಳಲ್ಲಿ ಭಿಕ್ಷುಕರು (Beggars) ಇರುವುದು ಸಾಮಾನ್ಯ. ಆದರೆ ಈಗ ಭಿಕ್ಷುಕರು ನಮ್ಮ ಮೆಟ್ರೋಗೂ (Namma Metro) ಲಗ್ಗೆ ಇಟ್ಟಿದ್ದಾರೆ.

    ಹೌದು. ನಮ್ಮ ಮೆಟ್ರೋ ರೈಲು ಒಳಗಡೆ ವಿಶೇಷ ಚೇತನ ವ್ಯಕ್ತಿಯೊಬ್ಬ ಭಿಕ್ಷಾಟನೆ ಮಾಡಿದ್ದಾನೆ. ಚಲ್ಲಘಟ್ಟದಿಂದ ವೈಟ್ ಫೀಲ್ಡ್‌ ಮಾರ್ಗದ ಮೆಟ್ರೋದಲ್ಲಿ ಪ್ರಯಾಣಿಕರಂತೆ ಬಂದ ವ್ಯಕ್ತಿ ಭಿಕ್ಷೆ ಬೇಡಿದ್ದಾನೆ. ಇದನ್ನೂ ಓದಿ: ನಟ ಅಲ್ಲು ಅರ್ಜುನ್ ಬಂಧನ – ಪೊಲೀಸರ ನಡೆ ಸಮರ್ಥಿಸಿಕೊಂಡ ತೆಲಂಗಾಣ ಸಿಎಂ


    ತನ್ನ ದೈಹಿಕ ಊನವನ್ನು ತೋರಿಸಿ ಭಿಕ್ಷಾಟನೆ ಮಾಡಿದ್ದನ್ನು ಕಂಡು ಪ್ರಯಾಣಿಕರು ದಂಗಾಗಿದ್ದಾರೆ. ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಟಿಕೆಟ್‌ ಪಡೆದು ಭಿಕ್ಷೆ ಬೇಡಿದ್ದು ಹಲವರ ಅಚ್ಚರಿಗೆ ಕಾರಣವಾಗಿದೆ.

    ಮೆಟ್ರೋ ರೈಲಿನಲ್ಲಿ ಭಿಕ್ಷೆ ಬೇಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್‌ ಆಗಿದೆ. ನಮ್ಮ‌ ಮೆಟ್ರೊದಲ್ಲೂ ಭಿಕ್ಷುಕರು ಭಿಕ್ಷೆ ಬೇಡುವುದಕ್ಕೂ ಶುರು ಮಾಡಿದ್ರಾ ಎಂಬ ಪ್ರಶ್ನೆಗಳನ್ನು ನೆಟ್ಟಿಗರು ಕೇಳುತ್ತಿದ್ದಾರೆ.

  • ಹೆಚ್ಚಾದ ಭಿಕ್ಷುಕರ ಹಾವಳಿ – ಹಸುಗೂಸು ಎತ್ತಿಕೊಂಡು ಸುಡುಬಿಸಿಲಲ್ಲೇ ಭಿಕ್ಷಾಟನೆ

    ಹೆಚ್ಚಾದ ಭಿಕ್ಷುಕರ ಹಾವಳಿ – ಹಸುಗೂಸು ಎತ್ತಿಕೊಂಡು ಸುಡುಬಿಸಿಲಲ್ಲೇ ಭಿಕ್ಷಾಟನೆ

    ರಾಯಚೂರು: ಜಿಲ್ಲೆಯನ್ನ ಬಿಸಿಲನಾಡು ಅಂತ ಕರೆಯುವುದೇನೋ ನಿಜ ಆದರೆ ಇಲ್ಲಿನ ಭಿಕ್ಷುಕರಿಗೆ ಬಿಸಿಲು ತಟ್ಟುತ್ತೋ ಇಲ್ಲವೋ ಗೊತ್ತಿಲ್ಲ. ಚಿಕ್ಕಮಕ್ಕಳನ್ನ ಬಳಸಿಕೊಂಡು ಸುಡುಬಿಸಿಲಲ್ಲಿ ಮಹಿಳೆಯರು ಭಿಕ್ಷೆ ಬೇಡುವುದನ್ನೇ ಉದ್ಯೋಗ ಮಾಡಿಕೊಂಡಿದ್ದಾರೆ. ಎಲ್ಲೆಲ್ಲಿಂದಲೋ ಬರುವ ಭಿಕ್ಷುಕರ ಕಾಟಕ್ಕೆ ರಾಯಚೂರು ಜನ ಸಹ ಬೇಸತ್ತು ಹೋಗಿದ್ದಾರೆ.

    ಪುಟ್ಟಕಂದಮ್ಮಗಳನ್ನ ಕಂಕುಳಲ್ಲಿ ಇಟ್ಟುಕೊಂಡು ಭಿಕ್ಷೆ ಬೇಡುವವರ ಹಾವಳಿ ಇತ್ತೀಚೆಗೆ ನಗರದಲ್ಲಿ ವಿಪರೀತವಾಗಿದೆ. ಸುಡುಬಿಸಿಲಲ್ಲೂ ಸದಾ ನಿದ್ರೆಗೆ ಜಾರಿರುವ ಕಂದಮ್ಮಗಳೇ ಈ ಮಹಿಳೆಯರಿಗೆ ಬಂಡವಾಳ. ಟ್ರಾಫಿಕ್ ಸಿಗ್ನಲ್, ಹೋಟೆಲ್‍ಗಳ ಮುಂದೆ, ನಗರದ ಬಸವೇಶ್ವರ ವೃತ್ತ, ಚಂದ್ರಮೌಳೇಶ್ವರ ವೃತ್ತ ಸೇರಿದಂತೆ ನಗರದ ಹಲವೆಡೆ ಬೆಳಗ್ಗೆಯಿಂದ ರಾತ್ರಿವರೆಗೆ ನೂರಾರು ಜನ ಭಿಕ್ಷುಕರು ಕಾಣಿಸಿಕೊಳ್ಳುತ್ತಾರೆ.

    ಸಾರ್ವಜನಿಕರಿಗೆ ಈ ಭಿಕ್ಷುಕರದ್ದೇ ದೊಡ್ಡ ಕಾಟವಾಗಿದೆ. ಸಿಗ್ನಲ್‍ಗಳಲ್ಲಂತೂ ಸಿಕ್ಕಾಪಟ್ಟೆ ಹಿಂಸೆ ಕೊಡುತ್ತಾರೆ. ಆದರೆ ಇವರು ಭಿಕ್ಷಾಟನೆಗೆ ಬಳಸುವ ಮಕ್ಕಳು ಸದಾ ನಿದ್ರೆಯಲ್ಲೇ ಇರುವುದು ಅನುಮಾನಗಳಿಗೆ ಕಾರಣವಾಗಿದೆ. ಬೇರೆ ಜಿಲ್ಲೆ ಮಾತ್ರವಲ್ಲದೆ ಬೇರೆ ರಾಜ್ಯಗಳಿಂದಲೂ ಬಂದಿರುವ ಭಿಕ್ಷುಕರು ಇಲ್ಲೆ ಸೇರಿಕೊಂಡಿದ್ದಾರೆ.

    ಕಂದಮ್ಮಗಳಿಗೆ ನಿದ್ರೆ ಬರುವ ಔಷಧಿ ನೀಡಿ ಭಿಕ್ಷಾಟನೆ ದಂಧೆ ನಡೆದಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಿಲ್ಲ ಅಂತ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಒಂದೇ ಮಗುವನ್ನ ಬೇರೆ ಬೇರೆ ಮಹಿಳೆಯರು ಶಿಫ್ಟ್ ಪ್ರಕಾರ ಬಳಸಿಕೊಳ್ಳುತ್ತಿದ್ದಾರೆ ಅಂತ ಸಾರ್ವಜನಿಕರು ಆರೋಪಿಸಿದ್ದಾರೆ. ಜಿಲ್ಲೆಯಲ್ಲಿ ಮಹಿಳಾ ನಿರಾಶ್ರಿತರ ಕೇಂದ್ರ ಇಲ್ಲದೆ ಇರುವುದು ಹೆಚ್ಚು ಮಹಿಳಾ ಭಿಕ್ಷುಕರು ಇರಲು ಕಾರಣವಾಗಿದೆ. ಇಳಿವಯಸ್ಸಿನ ವೃದ್ದೆಯರು, ಅನಾರೋಗ್ಯ ಪೀಡಿತ ಅಜ್ಜಿಯರು ಸಹ ಸುಡುಬಿಸಿಲಲ್ಲೇ ಭಿಕ್ಷಾಟನೆ ಮಾಡುತ್ತಿದ್ದರೂ ಅವರ ರಕ್ಷಣೆಗೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಅಂತ ಜನ ಆರೋಪಿಸಿದ್ದಾರೆ.

    ಪುಟ್ಟ ಕಂದಮ್ಮಗಳನ್ನ ಭಿಕ್ಷಾಟನೆಯ ವಸ್ತುಗಳನ್ನಾಗಿ ಬಳಸಿಕೊಳ್ಳುತ್ತಿರುವುದು ತೀರಾ ಖಂಡನೀಯ. ಸುಡುಬಿಸಿಲಲ್ಲಿ ಏಳೆಂಟು ತಿಂಗಳ ಹಸುಗೂಸುಗಳನ್ನ ಹಿಡಿದು ಬರುವ ಭಿಕ್ಷುಕರ ಸಂಖ್ಯೆ ನಗರದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಕ್ರಮಕೈಗೊಳ್ಳಬೇಕಿದೆ. ಭಿಕ್ಷುಕರ ಹಾವಳಿಯನ್ನ ತಪ್ಪಿಸಬೇಕು ಅಂತ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.

  • ಭಿಕ್ಷುಕರ ವಿರುದ್ಧ ಕ್ರಮಕ್ಕೆ ಮುಂದಾದ ಪೊಲೀಸರು

    ಭಿಕ್ಷುಕರ ವಿರುದ್ಧ ಕ್ರಮಕ್ಕೆ ಮುಂದಾದ ಪೊಲೀಸರು

    ಮುಂಬೈ: ನಗರದ ಎಲ್ಲಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಂಡುಬರುವ ಭಿಕ್ಷುಕರನ್ನು ಗಮನಿಸಿ ಅವರನ್ನು ಕರೆತಂದು ಚೆಂಬೂರಿನಲ್ಲಿ ಸ್ಥಾಪಿಸಿರುವ ವಿಶೇಷ ಮನೆಗೆ ಸೇರಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ಈ ಮೂಲಕ ನಗರದಲ್ಲಿ ಭಿಕ್ಷಾಟನೆಗೆ ಬ್ರೇಕ್ ಹಾಕುವ ಕಾರ್ಯಕ್ಕೆ ಸನ್ನದ್ಧವಾಗಿದೆ.

    ಮುಂಬೈ ನಗರ ಜಂಟಿ ಪೊಲೀಸ್ ಆಯುಕ್ತ ವಿಶ್ವಾಸ್ ನಾಗ್ರೆ ಪಾಟೀಲ್ ಅವರ ಸೂಚನೆಯ ಮೇರೆಗೆ ನಗರದ ಎಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಭಿಕ್ಷುಕರನ್ನು ಪತ್ತೆ ಮಾಡಿ ಕರೆತಂದು ಕೋವಿಡ್ ಟೆಸ್ಟ್ ಮಾಡಿಸಿ ಚೆಂಬೂರಿನಲ್ಲಿ ಸ್ಥಾಪಿಸಿರುವ ವಿಶೇಷ ಮನೆಯಲ್ಲಿ ಆಶ್ರಯ ನೀಡುವಂತೆ ತಿಳಿಸಿದ್ದಾರೆ. ಇದರೊಂದಿಗೆ ನಗರದಲ್ಲಿ ಭಿಕ್ಷಾಟನೆಯನ್ನು ನಿಷೇಧ ಮಾಡಲು ಹೊರಟಿದ್ದಾರೆ.

    ಬಾಂಬೆ ಭಿಕ್ಷಾಟನೆ ಕಾಯ್ದೆ 1959ರ ಪ್ರಕಾರ ನಗರದಲ್ಲಿ ಭಿಕ್ಷಾಟನೆ ನಿಷೇಧಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ. ಭಿಕ್ಷಾಟನೆ ಒಂದು ಸಾಮಾಜಿಕ ಅಪರಾಧ ಎಂದು ತಿಳಿಸಿ ಎಲ್ಲಾ ಠಾಣೆಗಳಿಗೆ ಮಾಹಿತಿ ನೀಡಿ ಕೋರ್ಟ್ ನ ಆದೇಶದಂತೆ ಕೋವಿಡ್ ಟೆಸ್ಟ್ ಮಾಡಿಸಿ ನಂತರ ಭಿಕ್ಷುಕರ ನೂತನ ಮನೆಗೆ ಸೇರಿಸಲು ಡಿಸಿಪಿ ಎಸ್ ಚೈತನ್ಯ ಆದೇಶಿಸಿದ್ದಾರೆ.

    ಭಿಕ್ಷಾಟನೆ ಸಾಮಾಜಿಕ ಅಪರಾಧವಾಗಿದ್ದು ಚಿಕ್ಕ ಮಕ್ಕಳನ್ನು ಭಿಕ್ಷಾಟನೆಗೆ ತಲ್ಲುತ್ತಿರುವುದು ಕಂಡು ಬಂದಿದ್ದು, ಇದು ಮುಂಬೈ ನಗರಕ್ಕೆ ಕಪ್ಪು ಚುಕ್ಕೆಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಭಿಪ್ರಾಯಪಟ್ಟಿದ್ದಾರೆ.

    ಈ ಕುರಿತು ಸಾರ್ವಜನಿಕ ವರ್ಗದಿಂದ ಪ್ರಶ್ನೆ ಬಂದಿದ್ದು ಯಾವ ರೀತಿ ಭಿಕ್ಷುಕರನ್ನು ಹೊಸ ಮನೆಯಲ್ಲಿ ನೋಡಿಕೊಳ್ಳುವ ವ್ಯವಸ್ಥೆ ಇದೆ ಎಂದಿದ್ದಾರೆ. ಈಗಾಗಲೇ ಭಿಕ್ಷುಕರಿಗಾಗಿ ಚೆಂಬೂರಿನಲ್ಲಿ ಹೊಸದಾಗಿ ನಿರ್ಮಿಸುವ ಮನೆಯಲ್ಲಿ ಮೊದಲು ಕೋವಿಡ್ ಟೆಸ್ಟ್ ನಡೆಸಿ ನಂತರ ಅದನ್ನು ಪುನರ್‍ಶ್ಚೇತನ ಕೇಂದ್ರವಾಗಿಸುವ ಗುರಿ ಹೊಂದಲಾಗಿದೆ ಎಂದು ವಕೀಲರು ಮತ್ತು ಸಾಮಾಜಿಕ ಕಾರ್ಯಕರ್ತರಾದ ಅಭಾ ಸಿಂಗ್ ಹೇಳಿದ್ದಾರೆ. ಪ್ರಸ್ತುತ 14 ಮಂದಿ ಭಿಕ್ಷುಕರನ್ನು ಚೆಂಬೂರಿನ ಪುನರ್‌ಶ್ಚೇತನ ಕೇಂದ್ರಕ್ಕೆ ಪೊಲೀಸರು ದಾಖಲಿಸಿದ್ದಾರೆ.

  • ಜೈಪುರದಲ್ಲಿರುವ ಭಿಕ್ಷುಕರಲ್ಲಿ ಇಬ್ಬರು ಮಾಸ್ಟರ್ ಡಿಗ್ರಿ, 3 ಪದವೀಧರರು ಪತ್ತೆ

    ಜೈಪುರದಲ್ಲಿರುವ ಭಿಕ್ಷುಕರಲ್ಲಿ ಇಬ್ಬರು ಮಾಸ್ಟರ್ ಡಿಗ್ರಿ, 3 ಪದವೀಧರರು ಪತ್ತೆ

    – ಕೆಲಸ ನೀಡಿದರೆ ಮಾಡಲು ಸಿದ್ಧ

    ಜೈಪುರ: ರಾಜಸ್ತಾನದ ಜೈಪುರದಲ್ಲಿ ಪೊಲೀಸರು ಸಮೀಕ್ಷೆ ನಡೆಸಿದ್ದು, ನಗರದಲ್ಲಿರುವ 1,162 ಭಿಕ್ಷುಕರಲ್ಲಿ ಇಬ್ಬರು ಸ್ನಾತಕೋತ್ತರ ಮತ್ತು ಮೂವರು ಪದವೀಧರರನ್ನು ಪತ್ತೆ ಮಾಡಿದ್ದಾರೆ.

    ಜೈಪುರವನ್ನು ಭಿಕ್ಷುಕರಿಂದ ಮುಕ್ತವಾಗಿ ಮಾಡುವುದು ಮತ್ತು ಅವರಿಗೆ ಕೆಲವು ಉದ್ಯೋಗ ಕೌಶಲ್ಯಗಳನ್ನು ನೀಡುವುದು, ಇತರರನ್ನು ಕೌಶಲ್ಯರಹಿತ ಉದ್ಯೋಗಗಳಿಗೆ ಪರಿಚಯಿಸುವುದು ಈ ಸಮೀಕ್ಷೆಯ ಉದ್ದೇಶವಾಗಿದೆ. ಈ ಸಮೀಕ್ಷೆಯ ಪ್ರಕಾರ ಜೈಪುರದಲ್ಲಿ 825 ಭಿಕ್ಷಕರು ಅನಕ್ಷರಸ್ಥರು, 39 ಜನ ಅಕ್ಷರಸ್ಥರು ಮತ್ತು 193 ಜನ ಶಾಲೆಗೆ ಹೋಗಿದ್ದವರು ಸಿಕ್ಕಿದ್ದಾರೆ.

    ಸಮೀಕ್ಷೆಯ ಪ್ರಕಾರ, ಪದವೀಧರ ಭಿಕ್ಷುಕರು ಜೈಪುರದ ರಾಮ್ನಿವಾಸ್ ಬಾಗ್, ಸಿ-ಸ್ಕೀಮ್ ಮತ್ತು ವಾಲ್ಡ್ ಸಿಟಿಯಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ವಿದ್ಯಾವಂತ ಭಿಕ್ಷುಕರು ಅವಕಾಶ ನೀಡಿದರೆ ಗೌರವಯುತ ಜೀವನವನ್ನು ಕಟ್ಟಿಕೊಳ್ಳಲು ಸಿದ್ಧವಿದ್ದೇವೆ ಎಂದು ಹೇಳಿದ್ದಾರೆ ಎಂದು ಸಮೀಕ್ಷೆ ಮಾಡಿದ ಸಂಸ್ಥೆಯವರು ಹೇಳಿದ್ದಾರೆ. ಅಕ್ಷರಸ್ಥ ಐದು ಜನ ಭಿಕ್ಷುಕರಲ್ಲಿ ಇಬ್ಬರು 32 ಮತ್ತು 35 ವರ್ಷದೊಳಗಿನವರು, ಇನ್ನಿಬ್ಬರು 50 ರಿಂದ 55 ವರ್ಷದೊಳಗಿನವರು ಮತ್ತು ಒಬ್ಬರು 65 ವರ್ಷ ವಯಸ್ಸಿನವರು ಎಂದು ತಿಳಿದು ಬಂದಿದೆ.

    ಐದು ಉನ್ನತ ಮಟ್ಟದ ವಿದ್ಯಾವಂತ ಭಿಕ್ಷುಕರು ಹೋಟೆಲ್‍ಗಳು, ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಮತ್ತು ಇತರ ಕೌಶಲ್ಯರಹಿತ ಉದ್ಯೋಗಗಳಲ್ಲಿ ಕೆಲಸ ಮಾಡಲು ಸಿದ್ಧವಿದ್ದೇವೆ ಎಂದು ಸರ್ವೇಯರ್ ಗಳಿಗೆ ತಿಳಿಸಿದ್ದಾರೆ. ಒಟ್ಟು ಭಿಕ್ಷುಕರಲ್ಲಿ ಕನಿಷ್ಠ 419 ಮಂದಿ ಜನರು ಈ ಕೆಲಸವನ್ನು ಬಿಟ್ಟು ಒಳ್ಳೆಯ ಜೀವನವನ್ನು ಕಟ್ಟಿಕೊಳ್ಳಲು ಸಿದ್ಧರಿದ್ದಾರೆ. ಜೊತೆಗೆ 27 ಭಿಕ್ಷುಕರು ಅಧ್ಯಯನ ಮಾಡಲು ಇಚ್ಛೆ ವ್ಯಕ್ತಪಡಿಸಿದ್ದಾರೆ ಎಂದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

    ಇದರಲ್ಲಿ ಓರ್ವ ಭಿಕ್ಷುಕ ಮಾತನಾಡಿ, ನಾನು ಝೂನ್‍ಝುನು ಮೂಲದವನು. 25 ವರ್ಷಗಳ ಹಿಂದೆ ಸರ್ಕಾರಿ ಕಾಲೇಜಿನಿಂದ ಪದವಿ ಪಡೆದಿದ್ದೇನೆ. ಉದ್ಯೋಗ ಹುಡುಕಲು ಜೈಪುರಕ್ಕೆ ಬಂದೆ ಆದರೆ ನನಗೆ ಇಲ್ಲಿ ಉದ್ಯೋಗ ಸಿಗಲಿಲ್ಲ. ಈ ಸಮಯದಲ್ಲಿ ನನಗೆ ತಿನ್ನಲು ಮತ್ತು ಮಲಗಲು ಸ್ಥಳವಿಲ್ಲದ ಪರಿಸ್ಥಿತಿ ನಿರ್ಮಾಣವಾಯಿತು. ನನಗೆ ಕುಟುಂಬದವರೆಂದು ಯಾರೂ ಇಲ್ಲ. ಆದ್ದರಿಂದ ಅನಿವಾರ್ಯವಾಗಿ ಬೀದಿಯಲ್ಲಿ ಭಿಕ್ಷೆ ಬೇಡಿ ಜೀವನ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

    ನಮಗೆ ಅವಕಾಶ ಕೊಟ್ಟರೆ ಗೌರವಯುತ ಜೀವನವನ್ನು ಕಟ್ಟಿಕೊಳ್ಳಲು ಸಿದ್ಧವಿದ್ದೇವೆ. ನಾನು ಕಾರ್ಮಿಕ ಕೆಲಸ ಅಥವಾಸ ನಗರವನ್ನು ಸ್ವಚ್ಛ ಮಾಡುವ ಕೆಲಸವಾಗಲಿ ಮಾಡಲು ಸಿದ್ಧ. ನನಗೆ ದೈನಂದಿನ ಅಗತ್ಯಗಳನ್ನು ಖರೀದಿಸಲು ಮತ್ತು ಮನೆಗೆ ಬಾಡಿಗೆ ಪಾವತಿಸಲು ಸಾಧ್ಯವಾಗುವಷ್ಟು ಸಂಬಳ ನೀಡಿದರೆ ಸಾಕು. ಎಲ್ಲರೂ ಒಳ್ಳೆಯ ಜೀವನವನ್ನು ಬಯಸುತ್ತಾರೆ. ಹಾಗೆಯೇ ನಾವು ಕೂಡ ಗೌರವಯುತ ಜೀವನವನ್ನು ಬಯಸುತ್ತೇವೆ ಎಂದು ತಿಳಿಸಿದ್ದಾರೆ.

  • ಭಿಕ್ಷುಕಿಗೆ ಕೊರೊನಾ ಸೋಂಕು – ಖಾಕಿ ಪಡೆಗೆ ಆತಂಕ

    ಭಿಕ್ಷುಕಿಗೆ ಕೊರೊನಾ ಸೋಂಕು – ಖಾಕಿ ಪಡೆಗೆ ಆತಂಕ

    ಹುಬ್ಬಳ್ಳಿ: ಜಿಲ್ಲೆಯಲ್ಲಿ 75 ವರ್ಷದ ಭಿಕ್ಷುಕಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಬೆಂಡಿಗೇರಿ ಠಾಣೆಯ ಪೊಲೀಸರಿಗೂ ಕೊರೊನಾ ಆತಂಕ ಶುರುವಾಗಿದೆ.

    ಹೌದು ಜೂನ್ 12ರಂದು ತುಮಕೂರು ಮೂಲದ ವೃದ್ಧೆ ಹುಬ್ಬಳ್ಳಿಗೆ ಬಂದಿದ್ದರು. ಆ ಭಿಕ್ಷುಕಿಗೆ ಈಗ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆಕೆಯನ್ನು ವಾಹನದಲ್ಲಿ ಕರೆತಂದು ಹಾಸ್ಟೆಲ್ ಒಂದರಲ್ಲಿ ಕ್ವಾರಂಟೈನ್ ಮಾಡಿಸಿದ್ದ ಪೊಲೀಸರಿಗೆ ಆತಂಕ ಪ್ರಾರಂಭವಾಗಿದೆ. ನಾಲ್ವರು ಪೊಲೀಸರು ಹೋಂ ಕ್ವಾರಂಟೈನ್ ಮಾಡಲಾಗಿದೆ. ಈ ವೃದ್ಧ ಮಹಿಳೆ ಕಳೆದ ಹಲವಾರು ದಿನಗಳ ಹಿಂದೆಯೇ ತುಮಕೂರಿನಿಂದ ಆಗಮಿಸಿ ಹುಬ್ಬಳ್ಳಿಯಲ್ಲಿ ತಂಗಿದ್ದರು.

    ಸರ್ಕಾರಿ ಕ್ವಾರಂಟೈನ್‍ನಲ್ಲಿದ್ದ ಭಿಕ್ಷುಕಿಗೆ ಸೋಂಕು ದೃಢಪಟ್ಟಿರುವ ಹಿನ್ನಲೆ ಖಾಕಿ ಪಡೆಗೂ ಕೊರೊನಾ ಆತಂಕ ಶುರುವಾಗಿದೆ. ಹುಬ್ಬಳ್ಳಿಯ ಬೆಂಡಿಗೇರಿ ಠಾಣೆಯ ಎಲ್ಲ ಪೊಲೀಸರಿಗೆ ಕೋವಿಡ್ ತಪಾಸಣೆ ಮಾಡಿಸಲಾಗುತಿದ್ದು, ಬೆಂಡಿಗೇರಿ ಠಾಣೆಯ 40ಕ್ಕೂ ಹೆಚ್ಚು ಸಿಬ್ಬಂದಿಗೆ ಗಂಟಲು ದ್ರವನ್ನು ಟೆಸ್ಟ್ ಗೆ ಕೂಡ ಕಳುಹಿಸಲಾಗಿದೆ.

  • ಸೋಂಕಿತನೊಂದಿಗೆ 9 ಭಿಕ್ಷುಕರು ಪ್ರಯಾಣ- ಕೊಪ್ಪಳದಲ್ಲಿ ತೀವ್ರ ಆತಂಕ

    ಸೋಂಕಿತನೊಂದಿಗೆ 9 ಭಿಕ್ಷುಕರು ಪ್ರಯಾಣ- ಕೊಪ್ಪಳದಲ್ಲಿ ತೀವ್ರ ಆತಂಕ

    – ನೆಮ್ಮದಿ ಕೆಡಿಸಿದ ಮುಂಬೈ ವ್ಯಕ್ತಿ
    – ವಿವಿಧ ನಗರಗಳಲ್ಲಿ ಭಿಕ್ಷಾಟನೆ ಮಾಡಿರುವ 9ಜನ

    ಕೊಪ್ಪಳ: ಲಾಕ್‍ಡೌನ್ ಆರಂಭವಾದಗಿಂದ ಸೋಮವಾರದವರೆಗೆ ಒಂದೇ ಒಂದು ಪಾಸಿಟಿವ್ ಕೇಸ್ ಹೊಂದಿರದ ಕೊಪ್ಪಳ ಜಿಲ್ಲೆಯಲ್ಲಿ ಇದೀಗ ಮುಂಬೈನಿಂದ ಬಂದ ವ್ಯಕ್ತಿ ಹಾಗೂ ಆತನೊಂದಿಗೆ ಸಂಪರ್ಕ ಹೊಂದಿದ್ದ 9 ಜನ ಭಿಕ್ಷುಕರು ಜಿಲ್ಲೆಯ ಜನರನ್ನು ತೀವ್ರ ಆತಂಕಕ್ಕೀಡು ಮಾಡಿದ್ದಾರೆ.

    ವಲಸೆ ಕಾರ್ಮಿಕರು ಜಿಲ್ಲೆಗೆ ಬರಲು ಆರಂಭಿಸಿದಾಗಿನಿಂದ ಕೊಪ್ಪಳ ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿತ್ತು. ಅದು ಸೋಮವಾರ ಮೂರು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗುವುದರ ಮೂಲಕ ವಲಸೆ ಕಾರ್ಮಿಕರು ಕೊಪ್ಪಳ ಜನರ ವೃತವನ್ನು ಭಂಗ ಮಾಡಿದರು. ಮಾಹಾರಾಷ್ಟ್ರ ಮೂಲದ ಇಬ್ಬರು ಹಾಗೂ ತಮಿಳುನಾಡಿನ ಓರ್ವ ಕೊರೊನಾ ಹೊತ್ತು ತಂದಿದ್ದಾರೆ. ಅದರಲ್ಲಿ ಪ್ರಮುಖವಾಗಿ ರೋಗಿ ನಂ.1173 ಕೊರೊನಾ ಸೋಂಕಿತ ಜಿಲ್ಲೆಯ ಜನರ ನೆಮ್ಮದಿಯನ್ನು ಕೆಡಸಿದ್ದಾನೆ.

    ರೋಗಿ ನಂ.1174 ನವಿ ಮುಂಬೈಯಲ್ಲಿ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ, ನವಿ ಮುಂಬೈನಿಂದ ಟ್ರಕ್ ಮೂಲಕ ಹುಬ್ಬಳ್ಳಿಗೆ ಬಂದು, ಹುಬ್ಬಳ್ಳಿಯಿಂದ ಟಾಟಾ ಏಸ್ ವಾಹನದಲ್ಲಿ ಕೊಪ್ಪಳ ತಲುಪಿದ್ದ. ಈತ ಕೊಪ್ಪಳಕ್ಕೆ ಬಂದು ಕೆಎಸ್‍ಆರ್ ಟಿಸಿ ಬಸ್ ಮೂಲಕ ಕುಷ್ಟಗಿ ತಲುಪಿದ್ದ. ಈ ವೇಳೆ ಸೋಂಕಿತನೊಂದಿಗೆ ಜಿಲ್ಲೆಯ 9 ಜನ ಭಿಕ್ಷುಕರು ಮನೆ ಮನೆ ಅಲೆದಾಡಿ ಭಿಕ್ಷೆ ಬೇಡಿದ್ದಾರೆ. ಸ್ವತಃ ಈ ಬಗ್ಗೆ ಜಿಲ್ಲಾಧಿಕಾರಿ ಆತಂಕ ವ್ಯಕ್ತಪಡಿಸಿದ್ದಾರೆ. ಕೊರೊನಾ ಸೋಂಕಿತ ಬಸ್ ನಲ್ಲಿ ಬಂದಿದ್ದೆ ತಪ್ಪಾಯ್ತು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

    ಇಷ್ಟು ಮಾತ್ರವಲ್ಲದೆ ರೋಗಿ ನಂ.1173 ನೊಂದಿಗೆ 90 ಜನ ಪ್ರಾಥಮಿಕ ಸಂಪರ್ಕ ಹೊಂದಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ. ನಿನ್ನೆ ಕೊರೊನಾ ಪಾಸಿಟಿವ್ ಕೇಸ್ ಬಂದ ಮೂವರ ಜೊತೆ 141 ಜನ ಪ್ರಾಥಮಿಕ ಸಂಪರ್ಕ ಹಾಗೂ 97 ಜನ ದ್ವಿತೀಯ ಸಂಪರ್ಕ ಹೊಂದಿದಾರೆ. ಪ್ರಾಥಮಿಕ ಸಂಪರ್ಕ ಹೊಂದಿದ 141 ಜನರಲ್ಲಿ ಒಬ್ಬರು ಇದುವರೆಗೂ ಪತ್ತೆಯಾಗಿಲ್ಲ, ಅದೂ ಇವರು ರೋಗಿ ನಂ.1173 ಸೋಂಕಿತನೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದವರು. ಜಿಲ್ಲಾಡಳಿತ ಇಬ್ಬರನ್ನೂ ಪತ್ತೆ ಮಾಡಲು ಸಾಕಷ್ಟು ಹರಸಾಹಸ ಪಡುತ್ತಿದೆ.

    ಇನ್ನೊಂದೆಡೆ ಜಿಲ್ಲಾಡಳಿತ ಭಿಕ್ಷುಕರ ಹಿಂದೆ ಬಿದ್ದಿದೆ. ಭಿಕ್ಷುಕರು ಕೊಪ್ಪಳ, ಕುಷ್ಟಗಿ ಸೇರಿದಂತೆ ಬಹುತೇಕ ಕಡೆ ಅಲೆದಾಡಿದ್ದಾರೆ. 9 ಜನ ಭಿಕ್ಷುಕರಲ್ಲಿ ಯಾರಿಗಾದರೂ ಕೊರೊನಾ ಪಾಸಿಟಿವ್ ಬಂದರೆ ಅವರ ಪ್ರಾಥಮಿಕ ಸಂಪರ್ಕ ಪತ್ತೆ ಹಚ್ಚುವುದು ಜಿಲ್ಲಾಡಳಿತಕ್ಕೆ ಸವಾಲಾಗಿದೆ. ಇದರ ಮದ್ಯೆ ಜಿಲ್ಲೆಗೆ ಮಾಹಾರಷ್ಟ್ರದಿಂದ ನಿತ್ಯವೂ ಜನ ಬರ್ತಿದಾರೆ. ಅವರನ್ನು ಜಿಲ್ಲಾಡಳಿತ ಸರಿಯಾಗಿ ಕ್ವಾರಂಟೈನ್ ಮಾಡ್ತಿಲ್ಲ. ಸೋಮವಾರ ಸಂಜೆ ಬಂದ ನಾಲ್ವರು ವಲಸೆ ಕಾರ್ಮಿಕರನ್ನು ಜಿಲ್ಲಾಡಳಿತ ಮಂಗಳವಾರ ಮಧ್ಯಾಹ್ನ ಕ್ವಾರಂಟೈನ್ ಮಾಡಿದೆ. ನಾಲ್ವರು ವಲಸೆ ಕಾರ್ಮಿಕರು 12 ಗಂಟೆಗಳ ಕಾಲ ಬಸ್ ನಿಲ್ದಾಣದಲ್ಲಿ ಕಳೆದಿದ್ದು ಆತಂಕ ಮೂಡಿಸಿದೆ.

  • ರಾಯಚೂರು ಸಂಪೂರ್ಣ ಲಾಕ್‍ಡೌನ್ – ಊಟವಿಲ್ಲದೆ ಪರದಾಡುತ್ತಿರೋ ಭಿಕ್ಷುಕರು

    ರಾಯಚೂರು ಸಂಪೂರ್ಣ ಲಾಕ್‍ಡೌನ್ – ಊಟವಿಲ್ಲದೆ ಪರದಾಡುತ್ತಿರೋ ಭಿಕ್ಷುಕರು

    ರಾಯಚೂರು: ಜಿಲ್ಲೆಯಲ್ಲಿ ಪತ್ತೆಯಾದ ಆರು ಜನ ಕೊರೊನಾ ಸೋಂಕಿತರ ಸಂಪರ್ಕದಲ್ಲಿರುವವರ ಪತ್ತೆಗಾಗಿ ಇಡೀ ನಗರವನ್ನ ಇಂದು ಬಂದ್ ಮಾಡಲಾಗಿದೆ. ಸಂಪೂರ್ಣ ಲಾಕ್‍ಡೌನ್ ಇರುವುದರಿಂದ ಹೋಟೆಲ್, ಬೇಕರಿ, ಅಂಗಡಿ ಮುಗ್ಗಟ್ಟು ಸಂಪೂರ್ಣ ಬಂದ್ ಆಗಿದ್ದು, ಜನರ ಓಡಾಟವೂ ವಿರಳವಾಗಿದೆ. ಇದರಿಂದ ರಸ್ತೆಯ ಬದಿಯ ಭಿಕ್ಷುಕರು ಊಟವಿಲ್ಲದೆ ಪರದಾಡುತ್ತಿದ್ದಾರೆ.

    ಮೂರನೇ ಹಂತದ ಲಾಕ್‍ಡೌನ್ ಆರಂಭವಾದ ನಂತರ ರಾಯಚೂರಿನಲ್ಲಿ ಲಾಕ್‍ಡೌನ್ ಸಡಲಿಕೆಯಾಗಿತ್ತು. ಭಿಕ್ಷೆ ಬೇಡಿ ಬದುಕುತ್ತಿದ್ದವರು ಕೂಡ ಈಗ ಊಟಕ್ಕಾಗಿ ಪರದಾಡುತ್ತಿದ್ದಾರೆ.

    ಸಂಪೂರ್ಣ ಲಾಕ್‍ಡೌನ್ ಇರುವುದರಿಂದ ದಾನಿಗಳು ಸಹ ಊಟದ ಪಾಕೇಟ್ ನೀಡುತ್ತಿಲ್ಲ. ಹೀಗಾಗಿ ಕೇವಲ ನೀರು ಕುಡಿದು ಯಾರಾದರೂ ಊಟ ನೀಡುತ್ತಾರ ಅಂತ ನಿರೀಕ್ಷೆಯಲ್ಲೇ ಕಾಯುತ್ತಿದ್ದಾರೆ.

    ರಾಯಚೂರು ರೈಲು ನಿಲ್ದಾಣ ಸೇರಿದಂತೆ ವಿವಿಧೆಡೆ ಇರುವ 200ಕ್ಕೂ ಹೆಚ್ಚು ಭಿಕ್ಷುಕರು ಇಂದು ಊಟವಿಲ್ಲದೆ ಪರದಾಡುತ್ತಿದ್ದಾರೆ. ಜಿಲ್ಲಾಡಳಿತ ಸಹ ರಸ್ತೆ ಬದಿಯ ಭಿಕ್ಷುಕರು, ಅನಾರೋಗ್ಯ ಪೀಡಿತ ವೃದ್ಧರಿಗೆ ಯಾವುದೇ ವ್ಯವಸ್ಥೆ ಮಾಡಿಲ್ಲ.

  • ಭಿಕ್ಷೆ ಬೇಡಿ ಕೂಡಿಟ್ಟಿದ್ದ 6.61 ಲಕ್ಷ ಹಣವನ್ನು ಹುತಾತ್ಮ ಯೋಧರ ಕುಟುಂಬಕ್ಕೆ ನೀಡಿದ್ರು!

    ಭಿಕ್ಷೆ ಬೇಡಿ ಕೂಡಿಟ್ಟಿದ್ದ 6.61 ಲಕ್ಷ ಹಣವನ್ನು ಹುತಾತ್ಮ ಯೋಧರ ಕುಟುಂಬಕ್ಕೆ ನೀಡಿದ್ರು!

    ಜೈಪುರ: ಉಗ್ರರ ದಾಳಿಗೆ ಹುತಾತ್ಮರಾದ ಯೋಧರ ಕುಟುಂಬದವರಿಗೆ ಸರ್ಕಾರ ಸೇರಿದಂತೆ ಅನೇಕರು ಆರ್ಥಿಕ ಸಹಾಯ ಮಾಡುತ್ತಿದ್ದಾರೆ. ಆದರೆ ರಾಜಸ್ಥಾನದ ಅಜ್ಮೇರ್‍ದಲ್ಲಿ ಬದುಕಿದ್ದಾಗ ಭಿಕ್ಷೆ ಬೇಡಿ ಸಂಪಾದನೆ ಮಾಡಿದ್ದ ಅಜ್ಜಿಯೊಬ್ಬರ ಹಣವೂ ಈಗ ಯೋಧರ ಕುಟುಂಬಕ್ಕೆ ಸಹಾಯವಾಗಿದೆ.

    ಭಿಕ್ಷುಕಿ ನಂದಿನಿ ಶರ್ಮಾ ಸಂಪಾದನೆ ಮಾಡಿದ್ದ ಹಣವನ್ನು ಈಗ ಹುತಾತ್ಮರ ಕುಟುಂಬಕ್ಕೆ ನೀಡಲಾಗಿದೆ. ನಂದಿನಿ ಶರ್ಮಾ 2018 ಆಗಸ್ಟ್ ರಲ್ಲಿ ಮೃತಪಟ್ಟಿದ್ದು, ಮೃತಪಡುವುದಕ್ಕೂ ಮೊದಲು ನನ್ನ ಬಳಿ ಇರುವ ಹಣವನ್ನು ದೇಶ ಮತ್ತು ಸಮಾಜಕ್ಕಾಗಿ ಬಳಸಬೇಕೆಂಬುದು ಹೇಳಿಕೊಂಡಿದ್ದರಂತೆ. ಹೀಗಾಗಿ ಭಿಕ್ಷೆ ಬೇಡಿ ಸಂಪಾದನೆ ಮಾಡಿದ್ದ 6.61 ಲಕ್ಷ ಹಣವನ್ನು ಪುಲ್ವಾಮಾ ದಾಳಿಯಲ್ಲಿ ವೀರಮರಣ ಹೊಂದಿದ್ದ ಕುಟುಂಬದವರಿಗೆ ನೀಡಲಾಗಿದೆ.

    ಮೃತ ನಂದಿನಿ ಶರ್ಮಾ ಅಜ್ಮೇರ್  ಬಜರಂಗಢದಲ್ಲಿರುವ ಅಂಬೆ ಮಾತೆ ದೇವಸ್ಥಾನದ ಮುಂದೆ ಭಿಕ್ಷೆ ಬೇಡುತ್ತಿದ್ದರು. ಅವರು ಪ್ರತಿದಿನ ಗಳಿಸುತ್ತಿದ್ದ ಹಣವನ್ನು ಅಂದೇ ಬ್ಯಾಂಕಿಗೆ ಹೋಗಿ ಜಮಾ ಮಾಡುತ್ತಿದ್ದರು. ಅಷ್ಟೇ ಅಲ್ಲದೇ ತಾವು ಸಂಪಾದಿಸಿ ಹಣವನ್ನು ಸುರಕ್ಷಿತವಾಗಿ ಬಳಸಬೇಕೆಂದು ಇಬ್ಬರು ಟ್ರಸ್ಟಿಗಳ ಬಳಿ ಸಹ ಕೇಳಿಕೊಂಡಿದ್ದರು. ಅಷ್ಟೇ ಅಲ್ಲದೇ ಮೃತಪಟ್ಟ ನಂತರ ಈ ಹಣ ದೇಶಕ್ಕಾಗಿ ವಿನಿಯೋಗಿಸಬೇಕು ಎಂದು ವಿಲ್ ಬರೆದಿಟ್ಟಿದ್ದರು.

    ಶರ್ಮಾ 2018 ಮೃತಪಟ್ಟಿದ್ದಾರೆ. ಆದರೆ ಟ್ರಸ್ಟಿಗಳು ಸೂಕ್ತ ಸಮಯ ಬಂದಾಗ ಹಣವನ್ನು ದಾನ ಮಾಡಲು ಕಾಯುತ್ತಿದ್ದರು. ಇತ್ತೀಚೆಗೆ ಪುಲ್ವಾಮಾ ಉಗ್ರ ದಾಳಿಯಲ್ಲಿ 44 ಯೋಧರು ಮೃತಪಟ್ಟಿದ್ದರು. ಇದೇ ಸೂಕ್ತ ಸಮಯ ಎಂದು ಟ್ರಸ್ಟಿಗಳು ನಿರ್ಧಾರ ಮಾಡಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ಹುತಾತ್ಮ ಸೈನಿಕರ ಕುಟುಂಬಕ್ಕೆ ನೀಡಲಾಗುವ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ್ದಾರೆ. ಟ್ರಸ್ಟ್ ಗಳಿಂದ ಹಣವನ್ನು ಪಡೆದು ಅವರಿಗೆ ರಶೀದಿ ನೀಡಲಾಗಿದೆ ಎಂದು ಅಜ್ಮೇರ್ ಜಿಲ್ಲಾಧಿಕಾರಿ ವಿಶ್ವ ಮೋಹನ್ ಶರ್ಮಾ ತಿಳಿಸಿದ್ದಾರೆ.

    ಮೃತ ಅಜ್ಜಿ ಸಂಪಾದನೆ ಮಾಡಿದ್ದ ಹಣವನ್ನು ಹುತಾತ್ಮರ ಕುಟುಂಬಕ್ಕೆ ನೀಡಲಾದ ವಿಷಯ ತಿಳಿದು ದೇವಾಲಯ ಭಕ್ತರು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ಅವರಿಗೆ ಭಕ್ತರು ಯಾವಾಗಲೂ ಗೌರವ ಕೊಡುತ್ತಿದ್ದರು. ಶರ್ಮಾ ಅವರಿಗೆ ಹಣದ ಜತೆ ಊಟ, ಬಟ್ಟೆಯನ್ನು ಸಹ ದಾನ ಮಾಡುತ್ತಿದ್ದರು. ಅವರು ಪ್ರತಿದಿನ ಹಣವನ್ನು ಬ್ಯಾಂಕ್‍ನಲ್ಲಿ ಜಮೆ ಮಾಡುತ್ತಿದ್ದ ವಿಚಾರ ಬಗ್ಗೆ ನಮಗೆಲ್ಲ ತಿಳಿದಿತ್ತು ಎಂದು ದೇವಸ್ಥಾನದ ಪುರೋಹಿತರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭಿಕ್ಷುಕರಿಗಾಗಿ ಮಹಿಳೆಯಿಂದ ಮಹತ್ವದ ಕಾರ್ಯ

    ಭಿಕ್ಷುಕರಿಗಾಗಿ ಮಹಿಳೆಯಿಂದ ಮಹತ್ವದ ಕಾರ್ಯ

    ವಾಷಿಂಗ್ಟನ್: ನಾವು ವಾಸಿಸುವ ನಗರಗಳಲ್ಲಿ ಪ್ರತಿನಿತ್ಯ ಬಹುತೇಕ ಭಿಕ್ಷುಕರು ಮತ್ತು ನಿರಾಶ್ರಿತರನ್ನು ನೋಡುತ್ತಿರುತ್ತೇವೆ. ಅವರು ಆಹಾರಕ್ಕಾಗಿ ಟ್ರಾಫಿಕ್ ಸಿಗ್ನಲ್ ನಿಂದ ರೆಸ್ಟೋರೆಂಟ್ ಗಳ ಮುಂದೆಯೂ ಇರುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ಭಿಕ್ಷುಕರಿಗಾಗಿ ಒಂದು ಮಹತ್ವದ ಕಾರ್ಯವನ್ನು ಮಾಡಿದ್ದಾರೆ.

    ಮಿಶೆಲ್ ಲುಸಿಯರ್ ಎಂಬ ಮಹಿಳೆ ಉತ್ತರ ಡಕೋಟಾದ ಫಾರ್ಗೋದಲ್ಲಿ ಪಿಜ್ಜಾ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುತ್ತಿದ್ದರು. ಇವರ ಅಂಗಡಿಗೆ ನಿತ್ಯವೂ ನೂರಾರು ಜನರು ಪಿಜ್ಜಾ ತಿನ್ನಲು ಬರುತ್ತಿದ್ದರು. ಅವರು ಪಿಜ್ಜಾವನ್ನು ಅರ್ಧಂಬರ್ಧ ತಿಂದು ಉಳಿದನ್ನು ಕಸದ ತೊಟ್ಟಿಯಲ್ಲಿ ಬಿಸಾಕಿ ಹೋಗುತ್ತಿದ್ದರು. ಇದೇ ವೇಳೆ ಆಹಾರಕ್ಕಾಗಿ ಕಾಯುತ್ತಿದ್ದ ಭಿಕ್ಷುಕರು ಕಸದ ತೊಟ್ಟಿಯಿಂದ ಅದನ್ನು ಎತ್ತಿಕೊಂಡು ತಿನ್ನುತ್ತಿದ್ದರು.

    ಕೆಲವು ನಿರಾಶ್ರಿತರು ಕಸದ ತೊಟ್ಟಿಯಲ್ಲಿ ಬಿಸಾಡಿದ್ದ ತುಂಡುಗಳನ್ನು ಎತ್ತಿಕೊಂಡು ತಿನ್ನುತ್ತಿದ್ದರು. ಇದನ್ನು ಗಮನಿಸಿದ ಮಿಶೆಲ್ ಲುಸಿಯರ್ ಅವರು ಭಿಕ್ಷುಕರಿಗಾಗಿ ಒಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದರು. ಮಿಶೆಲ್ ಅವರು ಕೂಡಲೇ ತಮ್ಮ ಅಂಗಡಿ ಹೊರಗೆ ಬೋರ್ಡ್ ಹಾಕಿ, ಪಿಜ್ಜಾವನ್ನು ನಿರಾಶ್ರಿತರಿಗೆ ಉಚಿತವಾಗಿ ನೀಡಲಾರಂಭಿಸಿದ್ದರು. ಆ ಬೋರ್ಡಿ ನಲ್ಲಿ “ಕಸದ ತೊಟ್ಟಿಯಲ್ಲಿ ಎತ್ತಿಕೊಂಡು ತಿನ್ನುವ ವ್ಯಕ್ತಿಗಳೇ, ನೀವೂ ನಮ್ಮಂತೆ ಮನುಷ್ಯರು, ಆದ್ದರಿಂದ ಕಸದ ಬುಟ್ಟಿಯಲ್ಲಿ ಹಾಕಿರುವ ಆಹಾರಕ್ಕಿಂತ ಉತ್ತಮ ಆಹಾರ ತಿನ್ನಲು ನೀವು ಯೋಗ್ಯರಾಗಿದ್ದೀರಿ. ನೀವು ಬೇರೊಬ್ಬರ ಪಿಜ್ಜಾ ತಿನ್ನಬೇಡಿ, ನಮ್ಮ ಅಂಗಡಿಯೊಳಗೆ ಬಂದು ಉಚಿತವಾಗಿ ಪಿಜ್ಜಾ ಮತ್ತು ನೀರನ್ನು ತೆಗೆದುಕೊಂಡು ಹೋಗಿ” ಎಂದು ಮನವಿ ಮಾಡಿಕೊಂಡಿದ್ದಾರೆ.

    ಯಾವುದೇ ಹಿಂಜರಿತ ಸಂಕೋಚವಿಲ್ಲದೇ ನಮ್ಮ ಅಂಗಡಿಗೆ ಬಂದು ಪಿಜ್ಜಾ ತಿಂದು ಹೋಗಿ. ನೀವು ಅಂಗಡಿಗೆ ಬಂದರೆ ನಿಮ್ಮನ್ನು ಇಲ್ಲಿ ಯಾರೂ ಪ್ರಶ್ನೆ ಮಾಡಲ್ಲ ಎಂದು ಮಿಶೆಲ್ ಬೋರ್ಡ್ ಹಾಕಿದ್ದಾರೆ. ಈ ರೀತಿ ಬರೆದಿರುವ ಫೋಟೋವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಲಾಗಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಂಗ್ಳೂರಿನಲ್ಲಿದ್ದಾರೆ ಹೈ-ಫೈ ಭಿಕ್ಷುಕಿಯರು

    ಮಂಗ್ಳೂರಿನಲ್ಲಿದ್ದಾರೆ ಹೈ-ಫೈ ಭಿಕ್ಷುಕಿಯರು

    ಮಂಗಳೂರು: ಅತ್ತ ದುಡಿಯಲೂ ಆಗದೆ, ತಿನ್ನೋಕೂ ಗತಿಯಿಲ್ಲದವರುವ ಕೊನೆಗೆ ಭಿಕ್ಷೆಗೆ ಇಳಿಯುತ್ತಾರೆ. ಆದರೆ ನಗರದಲ್ಲೊಂದು ಯುವತಿಯರ ತಂಡ ಹೈ- ಫೈ ಆಗಿದ್ದುಕೊಂಡು ಭಿಕ್ಷಾಟನೆಗಿಳಿದಿದೆ.

    ನಗರದ ಹಲವು ಕಡೆ ಯುವತಿಯರು ಹೈ-ಫೈ ರೀತಿಯಲ್ಲಿ ಪ್ಯಾಂಟ್, ಶರ್ಟ್ ಹಾಕಿಕೊಂಡು ಹಿಂದಿ ಮಾತನಾಡುತ್ತಾ ಭಿಕ್ಷೆ ಬೇಡುತ್ತಿದ್ದಾರೆ. ಸಿಗ್ನಲ್ ಗಳ ಬಳಿ ವಾಹನ ಸವಾರರಿಗೆ ನಾವು ರಾಜಸ್ಥಾನದ ರಾಣಿಪುರ್ ಜಿಲ್ಲೆಯವರು, ಪ್ರವಾಹದಿಂದಾಗಿ ಎಲ್ಲವನ್ನು ಕಳೆದುಕೊಂಡಿದ್ದೇವೆ. ಹೀಗಾಗಿ ಗತಿಯಿಲ್ಲದೆ ಭಿಕ್ಷೆ ಬೇಡುತ್ತಿದ್ದೇವೆ ಎಂದು ಪ್ರವಾಹ ಪರಿಸ್ಥಿತಿಯ ಬಗ್ಗೆ ಬರೆದುಕೊಂಡಿರುವ ಪತ್ರವನ್ನು ಮುಂದಿಟ್ಟು ಭಿಕ್ಷೆ ಬೇಡುತ್ತಿದ್ದಾರೆ.

    ಯುವತಿಯರನ್ನು ನೋಡಿದರೆ ಯಾವ ಉದ್ಯೋಗಿಗಳಿಗೂ ಕಮ್ಮಿಯಿಲ್ಲದಂತಿದ್ದು, ರಸ್ತೆಯಲ್ಲಿ ಬೈಕಿನಲ್ಲಿ ಬರುವ ಯುವಕರನ್ನು ಯಾಮಾರಿಸಿಕೊಂಡು ನೂರು, ಇನ್ನೂರು ರೂಪಾಯಿಗಳನ್ನು ಕೀಳುತ್ತಿದ್ದಾರೆ. ಇವರ ಈ ವರ್ತನೆಯನ್ನು ಗಮನಿಸಿದ ಕೆಲವು ಯುವಕರು ಆಕ್ಷೇಪಿಸಿ, ಕದ್ರಿ ಪೊಲೀಸ್ ಠಾಣೆಯ ಗಮನಕ್ಕೆ ತಂದಿದ್ದರು.

    ಘಟನೆ ಕುರಿತು ಯುವತಿಯರನ್ನು ವಶಕ್ಕೆ ಪಡೆದ ಪೊಲೀಸರು ಈ ರೀತಿ ಇನ್ನೊಮ್ಮೆ ಮಾಡದ ಹಾಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಆದರೆ ಹಣಗಳಿಸಲು ಯುವತಿಯು ಹೈ-ಫೈ ಭಿಕ್ಷಾಟನೆಗಿಳಿದಿರುವುದು ವಿಪರ್ಯಾಸವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews