Tag: beer bottle

  • ಬಿಯರ್ ಬಾಟಲಿನಿಂದ ಚುಚ್ಚಿ ಬಿಜೆಪಿ ಮುಖಂಡನ ಬರ್ಬರ ಕೊಲೆ

    ಬಿಯರ್ ಬಾಟಲಿನಿಂದ ಚುಚ್ಚಿ ಬಿಜೆಪಿ ಮುಖಂಡನ ಬರ್ಬರ ಕೊಲೆ

    – ಬರ್ತ್ ಡೇ ದಿನವೇ ಪಾರ್ಟಿಯಲ್ಲಿ ಹೆಣವಾದ ರೌಡಿ ಶೀಟರ್
    – ಕೊಲೆಗೈದ ಸ್ನೇಹಿತರು ಪರಾರಿ

    ಮೈಸೂರು: ಬಿಯರ್ ಬಾಟಲಿನಿಂದ ಚುಚ್ಚಿ ಹುಟ್ಟುಹಬ್ಬದ ದಿನವೇ ಬಿಜೆಪಿ ಮುಖಂಡನನ್ನು ಆತನ ಸ್ನೇಹಿತರೇ ಕೊಲೆ ಮಾಡಿರುವ ಘಟನೆ ಮೈಸೂರಿನ ಕುವೆಂಪುನಗರದಲ್ಲಿ ನಡೆದಿದೆ.

    ಕೊಲೆಯಾದ ವ್ಯಕ್ತಿಯನ್ನು ಬಿಜೆಪಿಯ ಮೈಸೂರು ನಗರ ಸ್ಲಂ ಮೋರ್ಚಾ ಉಪಾಧ್ಯಕ್ಷ ಆನಂದ್ ಎಂದು ಗುರುತಿಸಲಾಗಿದೆ. ಗುರುವಾರ ಆನಂದ್ ಹುಟ್ಟುಹಬ್ಬವಿದ್ದು, ಕುವೆಂಪು ನಗರದ ಲವಕುಶ ಪಾರ್ಕ್ ಬಳಿಯ ಸರ್ವಿಸ್ ಅಪಾರ್ಟ್‍ಮೆಂಟ್‍ನಲ್ಲಿ ರೂಮ್ ಮಾಡಿಕೊಂಡು ಪಾರ್ಟಿ ಮಾಡುತ್ತಿದ್ದಾಗ ಸ್ನೇಹಿತರಿಂದಲೇ ಭೀಕರವಾಗಿ ಹತ್ಯೆಯಾಗಿದ್ದಾನೆ.

    ಉತ್ತನಹಳ್ಳಿ ಸಮೀಪ ಖಾಸಗಿ ಕಲ್ಯಾಣ ಮಂಟಪದಲ್ಲಿ ಪಾರ್ಟಿ ಮುಗಿಸಿ ಬಂದಿದ್ದ ಆನಂದ್, ನಂತರ ವಾಪಸ್ ಬಂದು ಸರ್ವಿಸ್ ಅಪಾರ್ಟ್‍ಮೆಂಟ್ ನಲ್ಲಿ ರೂಮ್ ಫಿಕ್ಸ್ ಮಾಡಿ ಸ್ನೇಹಿತರ ಜೊತೆ ಪಾರ್ಟಿ ಮಾಡುತ್ತಿದ್ದ. ಪಾರ್ಟಿ ನಡೆಯುವಾಗಲೇ ಸ್ನೇಹಿತರೊಂದಿಗೆ ಮಾತಿನ ಚಕಮಕಿಯಾಗಿದೆ. ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಬಿಯರ್ ಬಾಟಲಿಯಿಂದ ಸ್ನೇಹಿತರೇ ಆನಂದನಿಗೆ ಚುಚ್ಚಿ ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

    ಕೊಲೆ ಮಾಡಿದ್ದ ಆನಂದ್
    ಬಿಜೆಪಿ ಮುಖಂಡ ರಾಜೀವ್ ಬೆಂಬಲಿಗನಾಗಿದ್ದ ಆನಂದ್, ರಿಯಲ್ ಎಸ್ಟೇಟ್ ಹಾಗೂ ಫೈನಾನ್ಸ್ ನಡೆಸುತ್ತಿದ್ದ. ಕಳೆದ 13 ವರ್ಷಗಳ ಹಿಂದೆ ಜನತಾನಗರದ ಮಾರುತಿ ಟೆಂಟ್ ರಸ್ತೆಯಲ್ಲಿ ಕುಮಾರಸ್ವಾಮಿ ಎಂಬಾತನನ್ನು ಮರ್ಡರ್ ಮಾಡಿದ್ದ. ನಂತರ ಜೈಲು ಶಿಕ್ಷೆ ಅನುಭವಿಸಿ ವಾಪಸ್ ಆಗಿದ್ದ. ಆತನ ಮೇಲೆ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಓಪನ್ ಮಾಡಲಾಗಿತ್ತು. ಆದ್ದರಿಂದ ಹಳೇ ವೈಷಮ್ಯದ ಮೇಲೆ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕುವೆಂಪುನಗರ ಪೊಲೀಸರು, ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದಾರೆ. ಜೊತೆಗೆ ಓರ್ವ ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ಮುಂದುವರಿಸಿದ್ದಾರೆ.

  • ತಾ.ಪಂ ಅಧ್ಯಕ್ಷರ ಕೊಠಡಿಯಲ್ಲಿ ಬಿಯರ್ ಬಾಟಲ್ ಒಡೆದ ಕಿಡಿಗೇಡಿಗಳು

    ತಾ.ಪಂ ಅಧ್ಯಕ್ಷರ ಕೊಠಡಿಯಲ್ಲಿ ಬಿಯರ್ ಬಾಟಲ್ ಒಡೆದ ಕಿಡಿಗೇಡಿಗಳು

    ಯಾದಗಿರಿ: ತಾಲೂಕು ಪಂಚಾಯತ್ ಅಧ್ಯಕ್ಷರ ಕೊಠಡಿಯಲ್ಲಿ ಕಿಡಿಗೇಡಿಗಳು ಬಿಯರ್ ಬಾಟಲ್ ಒಡೆದಿರುವ ಘಟನೆ ನಡೆದಿದೆ. ಕೊಠಡಿ ತುಂಬೆಲ್ಲ ಬಿಯರ್ ಬಾಟಲ್ ಗ್ಲಾಸ್ ಹಾಗೂ ಕಲ್ಲುಗಳು ಬಿಸಾಕಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

    ತಾ.ಪಂ ಅಧ್ಯಕ್ಷೆ ಭಿಮ್ಮವ್ವ ಅಚ್ಚೋಲಾ ಮತ್ತು ಸದಸ್ಯರ ನಡುವೆ ಮುಸುಕಿನ ಗುದ್ದಾಟ ಹಿನ್ನೆಲೆಯಲ್ಲಿ ಕೃತ್ಯ ಮಾಡಿದ್ದಾರೆ ಎನ್ನಲಾಗಿದೆ. ಒಂದೇ ತಿಂಗಳಲ್ಲಿ ಎರಡು ಬಾರಿ ಇದೇ ರೀತಿಯ ಘಟನೆ ನಡೆದಿದ್ದು ಗೊಂದಲಕ್ಕೆ ಕಾರಣವಾಗಿದೆ. ಅಧ್ಯಕ್ಷರ ಹೆಸರಿಗೆ ಕಳಂಕ ತರಲು ತಾ.ಪಂ ಸದಸ್ಯರೇ ಈ ರೀತಿ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

    ಒಂದೇ ತಿಂಗಳಲ್ಲಿ ಎರಡು ಬಾರಿ ಈ ರೀತಿಯ ಘಟನೆ ನಡೆದ ಹಿನ್ನೆಲೆಯಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪೊಲೀಸರಿಗೆ ದೂರು ಕೊಟ್ಟು ಕಿಡಿಗೇಡಿಗಳ ಪತ್ತೆಗೆ ಮುಂದಾಗುವುದಾಗಿ ತಿಳಿಸಿದ್ದಾರೆ. ಅಲ್ಲದೆ ಇನ್ನುಮುಂದೆ ಕಚೇರಿಯಲ್ಲಿ ಸಿಸಿಟಿವಿ ಅಳವಡಿಸುವುದಾಗಿ ತಿಳಿಸಿದ್ದಾರೆ.

  • ಬಾಯಲ್ಲಿಟ್ಟ ಕ್ಷಣಾರ್ಧದಲ್ಲೇ ಬಿಯರ್ ಬಾಟಲಿ ಖಾಲಿ- ವಿಡಿಯೋ ವೈರಲ್

    ಬಾಯಲ್ಲಿಟ್ಟ ಕ್ಷಣಾರ್ಧದಲ್ಲೇ ಬಿಯರ್ ಬಾಟಲಿ ಖಾಲಿ- ವಿಡಿಯೋ ವೈರಲ್

    – ಕುಡಿಯುವ, ಕೈಯಿಂದ ಬಾಟಲಿ ಒಡೆಯುವುದರಿಂದಲೇ ಕಾರ್ಮಿಕ ಫೇಮಸ್

    ಬೀಜಿಂಗ್: ಬಿಯರ್ ಕುಡಿಯುವ ಶೈಲಿಯಿಂದ ಕಾರ್ಮಿಕರೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದು, ಕ್ಷಣಾರ್ಧದಲ್ಲೇ ಬಿಯರ್ ಕುಡಿಯುವ ಮೂಲಕ ನೆಟ್ಟಿಗರನ್ನು ನಿಬ್ಬೆರಗಾಗಿಸಿದ್ದಾರೆ.

    ಚೀನಾದ ಹೆಬೀ ಪಾಂಗ್ಜೈ ಎಂಬುವವರು ಬೀಯರ್ ಕುಡಿಯುವ ಶೈಲಿಯಿಂದ ಯುವಕರು ಹಾಗೂ ನೆಟ್ಟಿಗರನ್ನು ನಿಬ್ಬೆರಗಾಗುವಂತೆ ಮಾಡಿದ್ದು, ಒಂದು ಸಾರಿ ಬಿಯರ್ ಬಾಟಲಿ ಎತ್ತಿದ ನಂತರ ಕ್ಷಣಾರ್ಧದಲ್ಲೇ ಅದನ್ನು ಖಾಲಿ ಮಾಡುತ್ತಾರೆ. ಬಿಯರ್ ಬಾಟಲಿಯ ಕ್ಯಾಪ್ ತೆಗೆಯುವುದರಿಂದ ಹಿಡಿದು ಕುಡಿದು ಮುಗಿಸುವವರೆಗೂ ವಿಭಿನ್ನ ಶೈಲಿ ಅನುಸರಿಸುತ್ತಾರೆ. ಅಲ್ಲದೆ ಕುಡಿಯಲು ಬಿಯರ್ ಬಾಟಲಿ ಎತ್ತಿದ ಕ್ಷಣಾರ್ಧದಲ್ಲೇ ಅದನ್ನು ಖಾಲಿ ಮಾಡುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಪಾಂಗ್ಜೈ ಚೀನಾದ ಪುಟ್ಟ ಗ್ರಾಮ ಝೆಂಗ್ಯುವಾನ್ಸಿ ಯಲ್ಲಿ ಕಾರ್ಮಿಕರಾಗಿದ್ದಾರೆ. ಇವರ ಬಿಯರ್ ಕುಡಿಯುವ ಶೈಲಿಯ ವಿಡಿಯೋದಿಂದಲೇ ಟ್ವಿಟ್ಟರಿನಲ್ಲಿ ಸುಮಾರು 1.30 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ. ಆದರೆ ಬಹುತೇಕ ಹಿಂಬಾಲಕರಿಗೆ ಇವರ ಹೆಸರು ಲಿಯು ಶಿಚಾವೊ ಎಂಬುದು ತಿಳಿದಿಲ್ಲ.

    ಬಿಯರ್ ಕುಡಿಯುವ ಹಾಗೂ ಬಿಯರ್ ಬಾಟಲಿಗಳ ಮೂಲಕ ವಿವಿಧ ಸ್ಟಂಟ್ ಮಾಡುವುದರಿಂದಲೇ ಇವರು ಸಾಮಾಜಿಕ ಜಾಲತಾಣಗಳಲ್ಲಿ ಸುಪರ್ ಸ್ಟಾರ್ ಆಗಿದ್ದಾರೆ. ಪಾಂಗ್ಜೈ ಬಿಯರ್ ಜೊತೆಗೆ ಇನ್ನೂ ಹಲವು ವಿಧದ ಮದ್ಯವನ್ನು ಬೆರೆಸುತ್ತಾರೆ. ಅಲ್ಲದೆ ಚೀನಾದ ಮದ್ಯದವನ್ನು ಬೆರೆಸಿ ಕುಡಿಯುತ್ತಾರೆ.

    ಇವರು ಟ್ವಿಟ್ಟರ್ ಖಾತೆ ತೆರೆಯುವುದಕ್ಕೂ ಮೊದಲು ಕುಯಿಶೌ ಎಂಬ ಶಾರ್ಟ್ ವಿಡಿಯೋ ವಾಹಿನಿ ಮೂಲಕ ತಮ್ಮ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು. ಇದರಲ್ಲಿ ಪ್ರತಿದಿನ ನೂರಾರು ವೀಕ್ಷಕರು ಹೆಚ್ಚುತ್ತಿದ್ದಂತೆ, ಇನ್ನೂ ಹೆಚ್ಚು ಜನರನ್ನು ಸೆಳೆಯಲು ಟ್ವಿಟ್ಟರ್ ಖಾತೆ ತೆರೆಯಲು ನಿರ್ಧರಿಸಿದರು.

    ಬಿಯರ್ ಬಾಟಲಿಯ ಸ್ಟಂಟ್ ಜೊತೆಗೆ ಇಟ್ಟಿಗೆ ಒಡೆಯುವುದು ಹಾಗೂ ಕೈಯಿಂದಲೇ ಬಿಯರ್ ಬಾಟಲಿಗಳನ್ನು ಒಡೆಯುವ ತಂತ್ರಗಳ ಮೂಲಕ ಪ್ರಸಿದ್ಧಿ ಪಡೆದಿದ್ದಾರೆ. ಇಟ್ಟಿಗೆ ಒಡೆಯುವ ವಿಡಿಯೋವನ್ನು ನಾನು ಮೊದಲು ನೋಡಿದಾಗ ನಕಲಿ ಎನಿಸಿತು. ಹೀಗಾಗಿ ನಾನೇ ಪ್ರಯತ್ನ ಮಾಡಬೇಕು ಎಂದುಕೊಂಡು ಸ್ವತಃ ನಾನೇ ಇಟ್ಟಿಗೆ ಒಡೆಯಲು ಪ್ರಾರಂಭಿಸಿದೆ ಎಂದು ಪಾಂಗ್ಜೈ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

  • ಬಿಯರ್ ಕೊಡದಿದ್ದಕ್ಕೆ ಬಾಟಲಿಯಿಂದಲೇ ಯುವಕನ ಹತ್ಯೆಗೈದ ಗೆಳೆಯರು

    ಬಿಯರ್ ಕೊಡದಿದ್ದಕ್ಕೆ ಬಾಟಲಿಯಿಂದಲೇ ಯುವಕನ ಹತ್ಯೆಗೈದ ಗೆಳೆಯರು

    ಬೆಳಗಾವಿ: ಎಣ್ಣೆ ಪಾರ್ಟಿ ಮಾಡುತ್ತಿದ್ದ ವೇಳೆ ಯುವಕ ಬಿಯರ್ ಕೇಳಿದಾಗ ಕೊಡಲಿಲ್ಲ ಎಂದು ಗೆಳೆಯರೇ ಆತನನ್ನು ಬಾಟಲಿಯಿಂದ ಹೊಡೆದು ಕೊಲೆ ಮಾಡಿದ ಅಮಾನುಷ ಘಟನೆ ಬೆಳಗಾವಿಯಲ್ಲಿ ನಡೆದಿದೆ.

    ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬೆಳಗಾವಿ ನಗರದ ಆರ್.ಟಿ.ಒ ವೃತ್ತದ ಬಳಿ ಸಾಯಿ ಲಾಡ್ಜ್ ನಲ್ಲಿ ಈ ಘಟನೆ ನಡೆದಿದೆ. ಸಾಯಿ ಲಾಡ್ಜ್ ನಲ್ಲಿ ವೇಟರ್‍ ಗಳಾಗಿ ಕೆಲಸ ಮಾಡುತ್ತಿದ್ದ ಅಮಿತ್, ಶಶಿಕುಮಾರ್, ನವೀನ್ ಕೊಲೆ ಮಾಡಿದ ಆರೋಪಿಗಳು ಎಂದು ಗುರುತಿಸಲಾಗಿದ್ದು, ರೂಮ್ ಬಾಯ್ ವಿನಾಯಕ ಕಲಾಲ್ ಈ ಮೂವರು ಸೇರಿಕೊಂಡು ಕೊಲೆ ಮಾಡಿದ್ದಾರೆ. ಸಾಯಿ ಲಾಡ್ಜ್ ಮಾಲೀಕ ತಿಮ್ಮಪ್ಪ ಶೆಟ್ಟಿ ಭಾನುವಾರ ರಾತ್ರಿ ತಿರುಪತಿಗೆ ಹೋಗಿ ಬರುತ್ತೇನೆಂದು ಹೋಗಿದ್ದರು. ಹೀಗಾಗಿ ಮಾಲೀಕ ಹೋಗುತ್ತಿದ್ದ ಹಾಗೆ ಇತ್ತ ಫುಲ್ ಖುಷಿಯಲ್ಲಿ ಇಲ್ಲಿನ ಸಿಬ್ಬಂದಿ ಎಲ್ಲಾ ಸೇರಿಕೊಂಡು ಎಣ್ಣೆ ಪಾರ್ಟಿ ಶುರುಮಾಡಿದ್ದರು. ವಿನಾಯಕ, ಅಮಿತ್, ಶಶಿಕುಮಾರ್, ನವೀನ್ ನಾಲ್ಕು ಜನ ಸೇರಿಕೊಂಡು ಫುಲ್ ಟೈಟ್ ಆಗಿದ್ದರು.

    ಈ ವೇಳೆ ವಿನಾಯಕ ಬಿಟ್ಟರೆ ಉಳಿದವರ ಮದ್ಯ ಖಾಲಿಯಾಯ್ತು. ಆಗ ವಿನಾಯಕನ ಬಳಿ ಶಶಿಕುಮಾರ್ ಬಿಯರ್‍ನ ಕೇಳಿದ್ದಾನೆ. ಆದರೆ ವಿನಾಯಕ ಕೊಡಲ್ಲ ಎಂದಿದ್ದೇ ತಡ ಮೂವರು ಸೇರಿ ಅವನ ಮೇಲೆ ಹಲ್ಲೆ ಮಾಡಿದ್ದಾರೆ. ನಶೆಯಲ್ಲಿ ಮದ್ಯದ ಬಾಟಲಿಯಿಂದಲೇ ಅವನನ್ನ ಹೊಡೆದು ಕೊಲೆ ಮಾಡಿದ್ದಾರೆ.

    ಹತ್ಯೆ ಬಳಿಕ ರಾತ್ರಿ ಪೂರ್ತಿ ಲಾಡ್ಜ್ ನಲ್ಲಿಯೇ ಆರೋಪಿಗಳು ಮಲಗಿದ್ದು, ಸೋಮವಾರ ಬೆಳಗ್ಗೆ ನಶೆ ಇಳಿದ ಮೇಲೆ ತಮ್ಮ ತಪ್ಪಿನ ಅರಿವಾಗಿ ಅಮಿತ್ ಹಾಗೂ ನವೀನ್ ಪೊಲೀಸರಿಗೆ ಶರಣಾಗಿದ್ದಾರೆ. ಆದರೆ ಶಶಿಕುಮಾರ್ ಮಾತ್ರ ಎಸ್ಕೇಪ್ ಆಗಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ಶಶಿಕುಮಾರ್‌ನನ್ನು ಬಂಧಿಸಲು ಬಲೆ ಬೀಸಿದ್ದಾರೆ.

  • ಬಿಯರ್ ಹಿಡಿದು ಕೃಷ್ಣನ ಹಾಡಿಗೆ ಟಿಕ್ ಟಾಕ್ – ಚಳಿ ಬಿಡಿಸಿದ ಜನ

    ಬಿಯರ್ ಹಿಡಿದು ಕೃಷ್ಣನ ಹಾಡಿಗೆ ಟಿಕ್ ಟಾಕ್ – ಚಳಿ ಬಿಡಿಸಿದ ಜನ

    ಉಡುಪಿ: ಗುರುವಾಯೂರಿನ ಶ್ರೀಕೃಷ್ಣ ಜನ್ಮಾಷ್ಟಮಿಯ ಮೊಸರು ಕುಡಿಕೆಯ ಹಾಡನ್ನು ಬಿಯರ್ ಬಾಟಲಿ ಹಿಡ್ಕೊಂಡು ಟಿಕ್ ಟಾಕ್ ಮಾಡಿದ ಯುವಕರ ಚಳಿ ಬಿಡಿಸಲಾಗಿದೆ.

    ಮೊಸರು ಕುಡಿಕೆಯ ಉತ್ಸವದಲ್ಲಿ ಕುಣಿದ ಕೇರಳದ ಯುವತಿಯ ವೀಡಿಯೋ ಅಷ್ಟಮಿ ಸಂದರ್ಭ ಸಿಕ್ಕಾಪಟ್ಟೆ ವೈರಲಾಗಿತ್ತು. ಆ ನಂತರ ಬಂದ ವೈಷ್ಣವಿಯ ಫೋಟೋಗಳು ಭಾರೀ ಜನಮನ್ನಣೆ ಪಡೆದಿತ್ತು. ಫೇಸ್ ಬುಕ್, ವಾಟ್ಸಾಪ್ ನಲ್ಲಿ ಗುರುವಾಯೂರು ಕೃಷ್ಣೆ ಆವರಿಸಿದ್ದಳು.

    ಇದನ್ನು ಟಿಕ್ ಟಾಕ್ ಕಿಡಿಗೇಡಿಗಳು ಅದೇ ಹಾಡಿಗೆ ವೈಷ್ಣವಿಯನ್ನು ಹೋಲುತ್ತಾ ಕುಣಿದಿದ್ದರು. ಮೊಸರು ಕುಡಿಕೆಯ ಬದಲು ಬಿಯರ್ ಬಾಟಲಿ ನೇತು ಹಾಕಿದ್ದರು. ಚಿಕ್ಕಮಗಳೂರಿನ ಈ ಯುವಕರಿಗೆ ಉಡುಪಿ ಜಿಲ್ಲೆ ಕಾರ್ಕಳದ ಹಿಂದೂ ಸಂಘಟನೆಯವರು ಚಳಿ ಬಿಡಿಸಿದ್ದಾರೆ. ಕಾರ್ಕಳ ತಾಲೂಕು ಬಜರಂಗದಳದ ಕಾರ್ಯಕರ್ತರು ಟಿಕ್ ಟಾಕ್ ಶೂರರ ವಿಳಾಸ ಪತ್ತೆ ಮಾಡಿದ್ದಾರೆ. ಇದನ್ನು ಓದಿ:ಕೃಷ್ಣನ ಅವತಾರದಲ್ಲಿ ಯುವತಿ ವೈರಲ್ – ವಿಡಿಯೋದ ಅಸಲಿಯತ್ತು ಏನು?

    ದಕ್ಷಿಣ ಕ್ನನಡ ಜಿಲ್ಲೆಯ ಮೂಡುಬಿದಿರೆಯ ಹುಡುಗನೊಬ್ಬ ತಂಡದಲ್ಲಿದ್ದು, ಅವನಿಗೆ ಎಚ್ಚರಿಕೆ ನೀಡಿ, ಠಾಣೆಗೆ ದೂರು ನೀಡಲು ಮುಂದಾಗಿದ್ದರು. ಇದರಿಂದ ಭಯಗೊಂಡ ಮೂರು ಟಿಕ್ ಟಾಕ್ ಕಲಾವಿದರು ಕ್ಷಮೆ ಕೇಳಿದ್ದಾರೆ. ವೀಡಿಯೋ ಮಾಡಿ ತಮ್ಮ ತಪ್ಪಾಗಿದೆ ಎಂದು ಕೇಳಿಕೊಂಡಿದ್ದಾರೆ.

    ಭಜರಂಗದಳದ ನಾಯಕ ಮಹೇಶ್ ಶೆಣೈ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಟಿಕ್ ಟಾಕ್ ಅವಾಂತರ ಮಿತಿ ಮೀರಿದೆ. ಅದರಲ್ಲೂ ದೇವರ ವಿಚಾರದಲ್ಲಿ ಟಿಕ್ ಟಾಕ್ ಮಾಡಿದ್ದು ನೋವಿನ ಸಂಗತಿ. ಕಲೆ, ಸಂಸ್ಕೃತಿ, ನಂಬಿಕೆ ವಿಚಾರವನ್ನು ವಿಡಂಬನೆ ಮಾಡುವುದು ಎಷ್ಟು ಸರಿ? ಯುವಕರನ್ನು ಫೋನ್  ಮೂಲಕ ಪತ್ತೆಹಚ್ಚಿ ಕ್ಷಮೆ ಕೇಳಿಸಿದ್ದೇವೆ. ಇನ್ನು ಈ ತರಹ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಇಂತಹ ಘಟನೆ ಮುಂದುವರೆಯಬಾರದು ಎಂದು ಹೇಳಿದರು.

  • ಪ್ರೀತಿಗೆ ಅಡ್ಡಿಯಾದ ಸ್ನೇಹಿತನಿಗೇ ಬಿಯರ್ ಬಾಟ್ಲಿಯಿಂದ ಹೊಡೆದ 10ನೇ ಕ್ಲಾಸ್ ವಿದ್ಯಾರ್ಥಿ!

    ಪ್ರೀತಿಗೆ ಅಡ್ಡಿಯಾದ ಸ್ನೇಹಿತನಿಗೇ ಬಿಯರ್ ಬಾಟ್ಲಿಯಿಂದ ಹೊಡೆದ 10ನೇ ಕ್ಲಾಸ್ ವಿದ್ಯಾರ್ಥಿ!

    ಹೈದರಾಬಾದ್: 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ಪ್ರೀತಿ ವಿಚಾರಕ್ಕೆ ಸಿಟ್ಟಿಗೆದ್ದು ಸ್ನೇಹಿತನಿಗೇ ಬಿಯರ್ ಬಾಟಲಿಯಿಂದ ಹೊಡೆದಿರುವ ಘಟನೆ ಮೀರ್‍ಪೇಟ್‍ನ ಜಿಲ್ಲೆಲಾಗುಡಾದಲ್ಲಿ ನಡೆದಿದೆ.

    ಜಿಲ್ಲೆಲಾಗುಡಾದ ಜಿಲ್ಲಾ ಪರಿಷದ್ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದೆ. ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದರು. ಹೀಗಾಗಿ ಪ್ರೀತಿ ವಿಚಾರಕ್ಕೆ ಹಾಗೂ ಬೇರೆ ವೈಯಕ್ತಿಕ ವಿಚಾರಗಳಿಗೆ ಇಬ್ಬರ ನಡುವೆ ಜಗಳ ನಡೆಯುತ್ತಲೇ ಇತ್ತು.

    ಆದ್ರೆ ಶುಕ್ರವಾರ ಈ ಜಗಳ ಮಿತಿಮೀರಿತ್ತು. ಮತ್ತೆ ಶನಿವಾರ ಇಬ್ಬರು ಶಾಲೆಗೆ ಬಂದಾಗ ಕೂಡ ಜಗಳ ಮುಂದುವರಿಸಿದ್ದರು. ಕೊನೆಗೆ ಜಗಳ ತಾರಕಕ್ಕೇರಿ ಕೋಪಗೊಂಡ ವಿದ್ಯಾರ್ಥಿ ಇನ್ನೊಬ್ಬ ವಿದ್ಯಾರ್ಥಿ ಮೂತ್ರ ವಿಸರ್ಜನೆ ಮಾಡಲು ಹೊರಹೋದಾಗ ಆತನಿಗೆ ಖಾಲಿ ಬಿಯರ್ ಬಾಟಲಿಯಿಂದ ಹೊಡೆದು ಹಲ್ಲೆ ಮಾಡಿಸಿದ್ದಾನೆ. ಅಷ್ಟೇ ಅಲ್ಲದೆ, ಆತನನ್ನು ತಡೆಯಲು ಬಂದ ಸ್ನೇಹಿತನ ಮೇಲೆ ಕೂಡ ಹಲ್ಲೆ ನಡೆಸಿದ್ದಾನೆ.

    ಈ ಘಟನೆಯಿಂದ ಹಲ್ಲೆಗೊಳಗಾದ ಇಬ್ಬರು ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಈ ಘಟನೆ ಕುರಿತು ರಾಚಕೊಂಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

    ಈ ಹಿಂದೆ ಕೂಡ ಪ್ರೀತಿಯ ವಿಚಾರಕ್ಕೆ ಇಬ್ಬರು 10ನೇ ತರಗತಿ ವಿದ್ಯಾರ್ಥಿಗಳನ್ನು ಬೆಂಕಿ ಹಚ್ಚಿ ಸುಟ್ಟ ಘಟನೆ ಹೈದರಾಬಾದ್‍ನಿಂದ 190 ಕಿ.ಮೀ ದೂರವಿರುವ ತೆಲಂಗಾಣದ ಜಗ್ತಿಯಾಲ್ ಪಟ್ಟಣದಲ್ಲಿ ನಡೆದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ರಾತ್ರಿ ವೇಳೆ ರೈತನ ಜಮೀನು ಕಾಯುತ್ತಿವೆ ಬಿಯರ್ ಬಾಟಲ್‍ಗಳು!

    ರಾತ್ರಿ ವೇಳೆ ರೈತನ ಜಮೀನು ಕಾಯುತ್ತಿವೆ ಬಿಯರ್ ಬಾಟಲ್‍ಗಳು!

    ಬೀದರ್: ಬಿಯರ್ ಎಂದ್ರೆ ಸಾಕು ಮದ್ಯ ಪ್ರಿಯರಿಗೆ ಅರ್ಧ ನಶೆ ಏರುತ್ತದೆ. ಮದ್ಯ ಖಾಲಿಯಾದರೆ ಬಾಟಲ್‍ನನ್ನು ಎಲ್ಲಂದರಲ್ಲಿ ಎಸೆಯುತ್ತಾರೆ. ಆದರೆ ಇದೇ ಬಾಟಲ್‍ಗಳು ಬೀದರ್ ರೈತರೊಬ್ಬರ ಜಮೀನನ್ನು ಕಾಯುತ್ತಿವೆ.

    ಔರಾದ್ ತಾಲೂಕಿನ ನಾಗೂರ ಗ್ರಾಮದ ರೈತ ಶಿವರಾಜ ಸಾಗರ್ ಅವರು ಇಂತಹ ವಿನೂತನ ಪ್ರಯೋಗದ ಮೂಲಕ ಬೆಳೆಯನ್ನು ರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ. ರಾತ್ರಿ ವೇಳೆ ಜಮೀನಿಗೆ ನುಗ್ಗುತ್ತಿದ್ದ ಕಾಡು ಹಂದಿ, ಜಿಂಕೆ ಹಾಗೂ ತೋಳಗಳು ಬೆಳೆ ಹಾಳು ಮಾಡುತ್ತಿದ್ದವು. ಇದನ್ನು ತಡೆಯುವ ಉದ್ದೇಶದಿಂದ ಶಿವರಾಜ ಸಾಗರ್ ಈ ರೀತಿ ಉಪಾಯ ಕಂಡುಕೊಂಡಿದ್ದಾರೆ.

    ಏನಿದು ಉಪಾಯ?
    ಜಮೀನಿನ ಸುತ್ತ ಹಾಗೂ ಮಧ್ಯದಲ್ಲಿ ಇರುವ ಮರಗಳಿಗೆ ನೇತಾಡುವಂತೆ ಎರಡು-ಮೂರು ಬಿಯರ್ ಬಾಟಲ್‍ಗಳನ್ನು ಜೋಡಿಸಿ ನೇತಾಡುವಂತೆ ಕಟ್ಟಿದ್ದಾರೆ. ಗಾಳಿ ಬೀಸಿದರೆ ಬಾಟಲ್‍ಗಳು ಒಂದಕ್ಕೊಂದು ಬಡಿದು ಒಂದು ರೀತಿಯ ಶಬ್ದವನ್ನು ಹೊಮ್ಮಿಸುತ್ತವೆ. ಇದರಿಂದಾಗಿ ಜಮೀನಿನಲ್ಲಿ ಯಾರೋ ಇದ್ದಾರೆ ಅಂತಾ ಪ್ರಾಣಿಗಳು ಹೆದರಿ, ಅಲ್ಲಿಂದ ಓಡುತ್ತವೆ.

    ಸಿಂದಗಿ ಭಾಗದ ನಾಗೂರ, ಬೋರ್ಗಿ, ಜೋಜನಾ, ಚಟನಳ್ಳಿ, ಜಿರಗಾ, ಮುಸ್ತಾಪುರ, ಪಾಷಾಪುರ ಹಾಗೂ ಕೌಡಗಾಂವ್ ಗ್ರಾಮಗಳ ಜಮೀನುಗಳಿಗೆ ಕಾಡು ಹಂದಿ, ಜಿಂಕೆ, ಮಂಗ ಹಾಗೂ ಹಕ್ಕಿಗಳ ಕಾಟ ಹೆಚ್ಚಾಗುತ್ತಿದೆ. ಅದರಲ್ಲೂ ಮುಂಗಾರಿನ ಹೆಸರು, ಉದ್ದು, ಜೋಳ, ತೊಗರಿ, ಸೋಯಾಬಿನ್ ಬೆಳೆಗಳನ್ನು ರಾತ್ರಿ ವೇಳೆ ರಕ್ಷಣೆ ಮಾಡಿಕೊಳ್ಳುವುದೇ ಕಷ್ಟವಾಗಿತ್ತು.

    ಜಿಂಕೆ ಹಾಗೂ ಕಾಡು ಹಂದಿ ಹಾವಳಿ ತಡೆಯಲು ಈ ಮೊದಲು ರೈತರು ಜಮೀನಿನ ಸುತ್ತ ಮುಳ್ಳಿನ ಬೇಲಿ ಹಾಕುತ್ತಿದ್ದರು. ಆದರೂ ಬೆಳೆ ರಕ್ಷಣೆ ಕಷ್ಟವಾಗಿತ್ತು. ಅಷ್ಟೇ ಅಲ್ಲದೆ ಇತ್ತೀಚಿನ ದಿನಗಳಲ್ಲಿ ಮುಳ್ಳಿನ ಕಂಟಿ ಕೂಡ ಸಿಗುತ್ತಿಲ್ಲ. ಇದನ್ನು ಅರಿತ ರೈತ ಶಿವರಾಜ ಅವರು ಡಾಬಾ, ಹೋಟೆಲ್ ಹಾಗೂ ಬಾರ್ ಗಳಲ್ಲಿ ಸಿಗುವ ಖಾಲಿ ಬಿಯರ್ ಬಾಟಲ್‍ಗಳನ್ನು ತಂದಿದ್ದಾರೆ. ಮೊದಲು ಪ್ರಾಯೋಗಿಕವಾಗಿ ಎರಡು ಬಾಟಲ್‍ಗಳನ್ನು ಮರಕ್ಕೆ ನೇತುಬಿಟ್ಟು ಕಟ್ಟಿದ್ದಾರೆ. ಅವುಗಳ ಶಬ್ದದಿಂದ ಜಮೀನಿನಲ್ಲಿ ಯಾರೋ ಇದ್ದಾರೆ ಅಂತಾ ಹೆದರಿ ವನ್ಯ ಜೀವಿಗಳು ಹಾಗೂ ಪಕ್ಷಿಗಳು ಜಮೀನಿನ ಕಡೆಗೆ ಬರಲು ಹಿಂಜರಿಯುತ್ತಿವೆ. ತಮ್ಮ ಪ್ರಯೋಗದಿಂದ ಯಶಸ್ವಿಯಾದ ರೈತ ಶಿವರಾಜ್ ಅವರು ಜಮೀನಿನ ಸುತ್ತಲಿನ ಮರಗಳಿಗೆ ಬಾಟಲ್ ಕಟ್ಟಿ ಕಾಡು ಪ್ರಾಣಿಗಳಿಂದ ಬೆಳೆಯನ್ನು ರಕ್ಷಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸ್ವಚ್ಛತೆ ವೇಳೆ ಸಿಕ್ಕ ಬಿಯರ್ ಬಾಟಲಿ ಹಿಡಿದು ಅಮ್ಮನ ಬಳಿ ಓಡಿ ಹೋದ ಬಾಲಕ!

    ಸ್ವಚ್ಛತೆ ವೇಳೆ ಸಿಕ್ಕ ಬಿಯರ್ ಬಾಟಲಿ ಹಿಡಿದು ಅಮ್ಮನ ಬಳಿ ಓಡಿ ಹೋದ ಬಾಲಕ!

    – ಉಡುಪಿಯಲ್ಲಿ ಗಾಂಧಿಜಯಂತಿಯಂದು ಬಾಲಕ ಕಕ್ಕಾಬಿಕ್ಕಿ

    ಉಡುಪಿ: ಮಹಾತ್ಮ ಗಾಂಧೀಜಿಯವರ 150ನೇ ಜಯಂತಿಯನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಉಡುಪಿಯಲ್ಲಿ ಮಾತಾ ಅಮೃತಾನಂದಮಯಿ ಸಂಸ್ಥೆ ಸ್ವಚ್ಛತಾ ಅಭಿಯಾನ ಮಾಡಿದರು. ಈ ಸಂದರ್ಭದಲ್ಲಿ ಸಿಕ್ಕ ಬಿಯರ್ ಬಾಟಲಿ ಎತ್ತಿದ ಬಾಲಕ ಕಕ್ಕಾಬಿಕ್ಕಿಯಾಗಿದ್ದಾನೆ.

    ಗಾಂಧಿಜಯಂತಿ ಹಿನ್ನೆಲೆಯಲ್ಲಿ ಇಂದು ಎಲ್ಲೆಡೆ ವಿಭಿನ್ನ ರೀತಿಯಲ್ಲಿ ರಾಷ್ಟ್ರಪಿತನ ಹುಟುಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಉಡುಪಿಯ ಮಾತಾ ಅಮೃತಾನಂದಮಯಿ ಸಂಸ್ಥೆಯ ನೂರಕ್ಕೂ ಹೆಚ್ಚು ಜನ ಉಡುಪಿ ನಗರದಾದ್ಯಂತ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು. ಮಹಿಳೆಯರು-ಯುವಕರು, ಮಕ್ಕಳು-ವೃದ್ಧರು ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

    ಬೆಳಗ್ಗೆ 7 ಗಂಟೆಗೆ ಆರಂಭವಾದ ಸ್ವಚ್ಛತಾ ಅಭಿಯಾನ ಉಡುಪಿಯ ಕಲ್ಸಂಕಕ್ಕೆ ಬಂದಿತ್ತು. ವೈನ್ ಗೇಟ್ ಮುಂದೆ ಸ್ವಚ್ಛತಾ ಅಭಿಯಾನ ಮಾಡುವಾಗ ಪುಟ್ಟ ಬಾಲಕನಿಗೆ ಬಿಯರ್ ಬಾಟಲಿಯೊಂದು ಸಿಕ್ಕಿದೆ. ಬಿಯರ್ ಬಾಟಲಿ ಎತ್ತಿದ ಬಾಲಕ, ಬಿಯರ್ ಬಿಯರ್ ಅಂತ ಅಮ್ಮನ ಬಳಿ ಓಡಿ ಹೋಗಿದ್ದಾನೆ. ಅಮ್ಮ ಬಾಟಲಿ ಇಲ್ಲಿ ಹಾಕ್ಬೇಡ ಅಂತ ಹೇಳಿದ್ದಾರೆ.

    ಬಿಯರ್ ಬಾಟಲಿ ಬಿಸಾಕಲೂ ಆಗದೇ, ಅಲ್ಲೇ ಇಡಲೂ ಆಗದೇ ಕೊನೆಗೆ ಬಾಲಕ ಖಾಲಿ ಬಾಟಲಿಯನ್ನು ಕಸದ ಬುಟ್ಟಿಗೆ ತುಂಬಿದ್ದಾನೆ. ಸಾರಾಯಿ ವಿರುದ್ಧ ಸಮರ ಸಾರಿದ್ದ ಗಾಂಧೀಜಿ ಈ ಸಂದರ್ಭದಲ್ಲಿ ಎಲ್ಲರಿಗೂ ನೆನಪಾದರು. ಈ ಮೂಲಕ ಮದ್ಯ ವಿರೋಧಿ ಅಭಿಯಾನಕ್ಕೆ ಯುವ ಪೀಳಿಗೆ ಮುಂದಾಗಬೇಕು ಎಂಬ ನೇರ ಸಂದೇಶವನ್ನು ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿಡಿಯೋ: ಆನಂದ್ ಗುರೂಜಿ ನಿವಾಸದ ಮೇಲೆ ಮಾಂಸದ ತುಂಡು, ಬಿಯರ್ ಬಾಟಲ್ ಎಸೆದ ಕಿಡಿಗೇಡಿಗಳು!

    ವಿಡಿಯೋ: ಆನಂದ್ ಗುರೂಜಿ ನಿವಾಸದ ಮೇಲೆ ಮಾಂಸದ ತುಂಡು, ಬಿಯರ್ ಬಾಟಲ್ ಎಸೆದ ಕಿಡಿಗೇಡಿಗಳು!

    ಬೆಂಗಳೂರು: ಮಹರ್ಷಿ ಆನಂದ್ ಗುರೂಜಿ ಮನೆ ಮೇಲೆ ದುಷ್ಕರ್ಮಿಗಳು ಬಿಯರ್ ಬಾಟಲಿ ಮತ್ತು ಮಾಂಸದ ತುಂಡನ್ನು ಎಸೆದಿರುವ ಘಟನೆ ನಡೆದಿದೆ.

    ಬನಶಂಕರಿ ಮೂರನೇ ಹಂತದ ಕಾಮಾಕ್ಯ ಬಡವಾಣೆಯಲ್ಲಿರುವ ಆನಂದ್ ಗುರುಜಿ ನಿವಾಸದ ಮೇಲೆ ದುಷ್ಕರ್ಮಿಗಳು ಬಿಯರ್ ಬಾಟಲಿ ಮತ್ತು ಮಾಂಸದ ತುಂಡನ್ನು ಎಸೆದಿದ್ದಾರೆ. ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಬೈಕ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮನೆಯ ಮೇಲೆ ಮತ್ತು ಬಾಗಲಿಗೆ ಬಿಯರ್ ಬಾಟಲಿ ಒಡೆದು ಮಾಂಸ ಎಸೆದು ಪರಾರಿಯಾಗಿದ್ದಾರೆ. ದುಷ್ಕರ್ಮಿಗಳ ಈ ಕೃತ್ಯ ಆನಂದ್ ಗುರುಜಿ ಮನೆಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಗೋವಿನ ಬಗ್ಗೆ ಆನಂದ್ ಗುರೂಜಿಯ ವಿಶೇಷ ಕಾರ್ಯಕ್ರಮ ನಾಳೆ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುವ ಹಿನ್ನಲೆಯಲ್ಲಿ ದುಷ್ಕರ್ಮಿಗಳು ಈ ರೀತಿಯ ಕೃತ್ಯವೆಸಗಿರಬಹುದು ಅಂತ ಆನಂದ್ ಗುರೂಜಿ ಶಂಕೆ ವ್ಯಕ್ತಪಡಿಸಿದ್ದಾರೆ.

    ಈ ಸಂಬಂಧ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪೊಲೀಸರು ಸಿಸಿಟಿವಿ ದೃಶ್ಯಾವಳಿಗನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    https://www.youtube.com/watch?v=gwXEy-dY6SA&feature=youtu.be