Tag: beedar

  • ರಸ್ತೆ ಅಗಲೀಕರಣದ ವೇಳೆ ಧಗಧಗನೇ ಹೊತ್ತಿ ಉರಿದ ಹಿಟಾಚಿ!

    ರಸ್ತೆ ಅಗಲೀಕರಣದ ವೇಳೆ ಧಗಧಗನೇ ಹೊತ್ತಿ ಉರಿದ ಹಿಟಾಚಿ!

    ಬೀದರ್: ಕೆಲಸ ಮಾಡುತ್ತಿದ್ದ ಹಿಟಾಚಿಗೆ ಏಕಾಏಕಿ ಬೆಂಕಿ ತಗುಲಿ ಧಗ ಧಗ ಉರಿದ ಘಟನೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಭಂಡಾರಕುಮಠಾ ಗ್ರಾಮದ ಬಳಿ ನಡೆದಿದೆ.

    ಜ್ಯೋತಿ ಕನ್ ಸ್ಟ್ರಕ್ಷನ್ ಮಾಲೀಕ ಮತ್ತು ಗುತ್ತಿಗೆದಾರ ಸೂರ್ಯಕಾಂತ ಅಲ್ಮಾಜೆ ಅವರಿಗೆ ಸೇರಿದ ಯಂತ್ರ ಇದಾಗಿದೆ. ಖೆರ್ಡಾ-ಡೊಂಗರಗಾಂವ ರಸ್ತೆ ಅಗಲೀಕರಣ ಕೆಲಸ ಮಾಡುತ್ತಿದ್ದಾಗ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ.

    ಹಿಟಾಚಿಯಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣವೇ ಚಾಲಕ ವಾಹನದಿಂದ ಕೆಳಗಿಳಿದಿದ್ದು, ಅಷ್ಟರಲ್ಲಾಗಲೇ ಯಂತ್ರ ಧಗಧಗನೆ ಬೆಂಕಿಗಾಹುತಿಯಾಗಿದೆ. ಸುಮಾರು ಎರಡು ಗಂಟೆಗಳ ಕಾಲ ಹೊತ್ತಿ ಉರಿದ ಹಿಟಾಚಿಯ ಬೆಂಕಿ ನಂದಿಸಲು ಅಗ್ನಿ ಶಾಮಕ ವಾಹನ ತಡವಾಗಿ ಬಂದಿದ್ದರೂ ಪ್ರಯೋಜನವಾಗಿಲ್ಲ. ಘಟನೆಯಿಂದಾಗಿ ಯಾವುದೇ ಜೀವ ಹಾನಿಯಾಗಿಲ್ಲ ಎಂಬುದಾಗಿ ತಿಳಿದುಬಂದಿದೆ.

    https://www.youtube.com/watch?v=we0Kngz_5Eg

  • ಬೀದರ್‍ನಲ್ಲಿ ಗೋವುಗಳ ಮಾರಣಹೋಮ – ಅಕ್ರಮ ಕಸಾಯಿಖಾನೆಗಳಲ್ಲಿ ಮೂಳೆ, ಕೊಂಬುಗಳ ರಾಶಿ

    ಬೀದರ್‍ನಲ್ಲಿ ಗೋವುಗಳ ಮಾರಣಹೋಮ – ಅಕ್ರಮ ಕಸಾಯಿಖಾನೆಗಳಲ್ಲಿ ಮೂಳೆ, ಕೊಂಬುಗಳ ರಾಶಿ

    ಬೀದರ್: ಗಡಿ ಜಿಲ್ಲೆ ಬೀದರ್‍ನಲ್ಲಿ ಅಕ್ರಮವಾಗಿ ಕಸಾಯಿಖಾನೆಗಳು ಎಗ್ಗಿಲ್ಲದೆ ಸಾಗಿದ್ದು ಪೊಲೀಸ್ ಇಲಾಖೆ ಕಣ್ಣು ಮುಚ್ಚಿಕೊಂಡಿದೆ. ಗೋವುಗಳ ಮಾರಣಹೋಮಕ್ಕೆ ಈ ದೃಶಾವಳಿಗಳು ಸಾಕ್ಷಿಯಾಗಿದೆ.

    ಬೀದರ್ ತಾಲೂಕಿನ ಕಂಗನಕೋಟೆ ಗ್ರಾಮದ ಹೊರವಲಯದ ಅರಣ್ಯ ಪ್ರದೇಶದ ಬಳಿ ಹಲವು ವರ್ಷಗಳಿಂದ ಕಾಸಾಯಿಖಾನೆ ಅಕ್ರಮವಾಗಿ ನಡೆಯುತ್ತಿದ್ದು, ಗೋವುಗಳ ಕತ್ತು, ಕಾಲು, ಮೂಳೆ, ಕೊಂಬುಗಳು ಸೇರಿದಂತೆ ಗೋವುಗಳ ಅಸ್ಥಿಪಂಜರಗಳು ರಾಶಿ ರಾಶಿಯಾಗಿ ಪತ್ತೆಯಾಗಿವೆ. ಕಂಗನಕೋಟೆ, ಮಂದಕನಹಳ್ಳಿ, ಶೆಮಶ್‍ನಗರ್ ಮತ್ತು ಕೆಲ ತಾಂಡಗಳು ಸೇರಿದಂತೆ ಎಲ್ಲಾ ಗ್ರಾಮದ ಜನರು ಅಕ್ರಮ ಕಸಾಯಿಖಾನೆಯ ವಾಸನೆಗೆ ಬೇಸತ್ತು ಹೋಗಿದ್ದಾರೆ.

    ಇಂದು ಆಕ್ರೋಶಗೊಂಡ ಜನ ಕಸಾಯಿಖಾನೆಗೆ ನುಗ್ಗಿ ಟಿನ್‍ಗಳನ್ನು ಒಡೆದುಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ರು. ಕಸಾಯಿಖಾನೆ ವಾಸನೆಯಿಂದ ಊಟ ಮಾಡಲು ಅಸಾಧ್ಯವಾಗಿದೆ. ವಾಂತಿಯಾಗುವಷ್ಟರ ಮಟ್ಟಿಗೆ ಇಲ್ಲಿ ವಾಸನೆಯಿದೆ. ಈ ಬಗ್ಗೆ ಅಶೋಕ್ ಖೇಣಿ ಹಾಗೂ ಪೊಲೀಸರ ಗಮನಕ್ಕೆ ತಂದರೂ ಇಬ್ಬರೂ ಸಹ ತಲೆಕೆಡಿಸಿಕೊಂಡಿಲ್ಲ. ಸಿಂಗಪುರ್ ಮಾಡುವುದಾಗಿ ಹೇಳಿ ನಮ್ಮ ಗ್ರಾಮಗಳನ್ನು ಕೊಳಕು ಗ್ರಾಮಗಳನ್ನಾಗಿ ಮಾಡಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಶಾಸಕರಿಗೆ ಈ ಬಗ್ಗೆ ಮಾಹಿತಿ ರವಾನಿಸಿದ್ದೇವೆ. ಅವರು ಕ್ರಮ ಕೈಗೊಳ್ಳುತ್ತೇವೆ ಅಂತಾ ಹೇಳಿದ್ದರು. ಆದ್ರೆ ಇಲ್ಲಿಯವರೆಗೆ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಅವಾಗ ಸಣ್ಣ ಪ್ರಮಾಣದ ಕಸಾಯಿಖಾನೆಯಿತ್ತು. ಜನ ಈ ಬಗ್ಗೆ ಗಮನಹರಿಸದ ಹಿನ್ನೆಲೆಯಲ್ಲಿ ಇದೀಗ ದೊಡ್ಡ ಪ್ರಮಾಣದಲ್ಲಿ ವಹಿವಾಟುಗಳು ನಡೆಯುತ್ತಿವೆ. ಸಂಜೆಯ ಹೊತ್ತಲ್ಲಿ ತಂಪುಗಾಳಿಯ ಜೊತೆ ದುರ್ವಾಸನೆಯೂ ಬರುತ್ತಿದೆ. ಒಟ್ಟಿನಲ್ಲಿ ನೆಮ್ಮದಿಯಾಗಿ ಮಲಗಲು ಸಾಧ್ಯವಾಗದ ಸ್ಥಿತಿ ಎದುರಾಗಿದೆ ಅಂತಾ ಸ್ಥಳೀಯ ನಿವಾಸಿಯೊಬ್ಬರು ಹೇಳಿದ್ರು.

  • ಪಿಯು ಪರೀಕ್ಷೆಯಲ್ಲಿ ಶಿಕ್ಷಕರಿಂದಲೇ ನಕಲಿಗೆ ಸಹಕಾರ- ವಿಡಿಯೋ ನೋಡಿ

    ಪಿಯು ಪರೀಕ್ಷೆಯಲ್ಲಿ ಶಿಕ್ಷಕರಿಂದಲೇ ನಕಲಿಗೆ ಸಹಕಾರ- ವಿಡಿಯೋ ನೋಡಿ

    ಬೀದರ್: ನಗರದ ಖಾಸಗಿ ಕಾಲೇಜೊಂದರಲ್ಲಿ ಮಾರ್ಚ್ 9ರಂದು ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯ ವೇಳೆ ಶಿಕ್ಷಕರೇ ವಿದ್ಯಾರ್ಥಿಗಳಿಗೆ ನಕಲು ಮಾಡಲು ಸಹಕಾರ ನೀಡಿದ ವಿಚಾರವೊಂದು ಬೆಳಕಿಗೆ ಬಂದಿದೆ.

    ಮಾರ್ಚ್ 9ರಂದು ನಡೆದ ಜೀವಶಾಸ್ತ್ರ ಪರೀಕ್ಷೆಯಲ್ಲಿ ಕಾಲೇಜಿನ ಪ್ರಾಂಶುಪಾಲರು, ಪರೀಕ್ಷೆ ನಿರ್ವಹಿಸುವ ಅಧಿಕಾರಿಗಳು, ಕಾಲೇಜಿನ ಸಿಬ್ಬಂದಿಗಳು ಪರೀಕ್ಷೆಯಲ್ಲಿ ನಕಲು ಮಾಡಲು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಮಾಡಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿದ್ಯಾರ್ಥಿಗಳಿಗೆ ನಕಲು ಮಾಡಲು ಸಹಕಾರ ಮಾಡುತಿರುವ ಈ ದೃಶ್ಯಗಳು ಇದೀಗ ಪಬ್ಲಿಕ್ ಟಿವಿಗೆ ಲಭಿಸಿದೆ.

    ಬೀದರ್‍ನ ಹೊರವಲಯದಲ್ಲಿರುವ ನೂರ ಕಾಲೇಜಿನ ಕೋಣೆ ನಂಬರ್ 1, ಸಿಸಿ ಕ್ಯಾಮರಾ 10 ರಲ್ಲಿ ನಕಲಿಗೆ ಸಿಬ್ಬಂದಿಗಳು ಪ್ರೋತ್ಸಾಹ ಮಾಡುತ್ತಿರುವ ದೃಶ್ಯಗಳು ಸೆರೆಯಾಗಿವೆ. ವ್ಯಕ್ತಿಯೊಬ್ಬ ರಾಜಾರೋಷವಾಗಿ ವಿದ್ಯಾರ್ಥಿನಿಗೆ ಮೊಬೈಲ್ ನೀಡಿ ನಕಲು ಮಾಡಲು ಸಹಕಾರ ಮಾಡುತ್ತಿದ್ದು ಜೊತೆಗೆ ವಾಟರ್‍ಬಾಯಿ ಕೂಡ ವಿದ್ಯಾರ್ಥಿಗಳಿಗೆ ಚೀಟಿಗಳನ್ನು ನೀಡಿ ಹೋಗುತ್ತಿರುವ ದೃಶ್ಶ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ.

    ಚೀಟಿಗಳನ್ನು ನೀಡಿ ನಕಲು ಮಾಡಲು ಪ್ರೋತ್ಸಾಹ ಮಾಡುತ್ತಿರುವಾಗ ಕಾಲೇಜಿನ ಆಡಳಿತ ಮಂಡಳಿ ಎಲ್ಲಿ ಹೋಗಿದ್ರು ಎಂಬ ಹಲವು ಅನುಮಾನಗಳು ಕಾರಣವಾಗಿದೆ. ಈಗಾಗಲೇ ಈ ವಿಚಾರ ಜಿಲ್ಲಾಧಿಕಾಗಳ ಗಮನಕ್ಕೆ ಬಂದಿದ್ದು ಡಿಡಿಪಿಯೂ ಮೂಲಕ ಗಾಂಧಿಗಾಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇನ್ನು ಪಿಯು ಬೋರ್ಡ್ ಈ ಬಗ್ಗೆ ಯಾವ ರೀತಿಯ ಕ್ರಮ ತೆಗೆದುಕೊಳ್ಳುತ್ತೆ ಎಂಬುದನ್ನು ಕಾದು ನೋಡಬೇಕು.

    https://www.youtube.com/watch?v=uLxQjBR3pXw&feature=youtu.be

  • ಬೀದರ್: ಸರ್ಕಾರಿ ಶಾಲೆಯಲ್ಲಿ ಶೌಚಾಲಯವಿಲ್ದೆ ಸಂಕಟ ಪಡ್ತಿದ್ದಾರೆ ವಿದ್ಯಾರ್ಥಿನಿಯರು

    ಬೀದರ್: ಸರ್ಕಾರಿ ಶಾಲೆಯಲ್ಲಿ ಶೌಚಾಲಯವಿಲ್ದೆ ಸಂಕಟ ಪಡ್ತಿದ್ದಾರೆ ವಿದ್ಯಾರ್ಥಿನಿಯರು

    ಬೀದರ್: ಪ್ರತಿ ಮನೆಯಲ್ಲೂ ಶೌಚಾಲಯಗಳಿರಬೇಕು ಎನ್ನುವ ಈ ಕಾಲದಲ್ಲಿ ಜಿಲ್ಲೆಯ ಸರ್ಕಾರಿ ಪ್ರೌಢ ಶಾಲೆಯೊಂದರಲ್ಲಿ ಶೌಚಾಲಯವಿಲ್ಲದೆ ವಿದ್ಯಾರ್ಥಿನಿಯರು ಬಯಲಿನಲ್ಲಿ ಶೌಚ ಮಾಡಬೇಕಾದ ದುರಾದೃಷ್ಟ ಎದುರಾಗಿದೆ.

    190 ವಿದ್ಯಾರ್ಥಿಗಳಿರುವ ಬೀದರ್ ತಾಲೂಕಿನ ಅಲಿಯಂಬರ್ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ 80%ರಷ್ಟು ವಿದ್ಯಾರ್ಥಿನಿಯರಿದ್ದು, ಪ್ರತಿದಿನ ಬಹಿರ್ದೆಸೆಗೆ ಹೋಗಲು ನರಕಯಾತನೆ ಪಡುತ್ತಿದ್ದಾರೆ. ಶೌಚ ಮಾಡಲು ಶಾಲೆಯಲ್ಲಿ ಶೌಚಾಲಯವಿಲ್ಲದೆ ಬಯಲಿಗೆ ಹೋಗಬೇಕಾಗಿದ್ದರಿಂದ ವಿದ್ಯಾರ್ಥಿನಿಯರು ಶಾಲೆಗೆ ಬರಲು ಮುಜುಗರ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೂಲಕವಾದ್ರು ಈ ಶಾಲೆಯ ವಿದ್ಯಾರ್ಥಿನಿಯರಿಗೆ ಶೌಚಾಲಯ ದೊರಕುತ್ತೆ ಎಂಬ ಭರವಸೆಯಿಂದ ಮನವಿ ಮಾಡಿಕೊಂಡಿದ್ದಾರೆ.

    ಶಾಲೆಯಲ್ಲಿ ಓದುವ ವಿದ್ಯಾರ್ಥಿನಿಯರಿಗೆ ಶೌಚಾಲಯ ಕಡ್ಡಾಯವಾಗಿ ಇರಬೇಕು ಎಂಬ ನಿಯಮವನ್ನು ಇಲ್ಲಿನ ಶಿಕ್ಷಣ ಇಲಾಖೆ ಮತ್ತು ಜನಪ್ರತಿನಿಧಿಗಳು ಧಿಕ್ಕರಿಸಿದ್ದಾರೆ. ಈ ವಿದ್ಯಾರ್ಥಿನಿಯರು ಶೌಚಕ್ಕೆ ಹೋಗಬೇಕು ಅಂದ್ರೆ ಶಾಲೆಯಲ್ಲಿ ಶೌಚಾಲಯದ ವ್ಯವಸ್ಥೆ ಇಲ್ಲ. ಇದರಿಂದ ಬಯಲಲ್ಲಿ ಮುಜುಗರದಿಂದ ಶೌಚ ಮಾಡಬೇಕಾದ ಕರ್ಮ ಅವರದ್ದಾಗಿದೆ. ಈ ರೀತಿಯ ಮುಜುಗರದಿಂದಾಗಿ ವಿದ್ಯಾರ್ಥಿನಿಯರು ಶಾಲೆಗೆ ಗುಡ್ ಬೈ ಹೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ನಮಗೆ ಶೌಚ ಮಾಡಲು ತುಂಬ ಸಮಸ್ಯೆಯಾಗುತ್ತಿದ್ದು ಪ್ಲೀಸ್ ಒಂದೆ ಒಂದು ಶೌಚಾಲಯ ನಿರ್ಮಾಣ ಮಾಡಿಕೊಡಿ ಎಂದು ಬೇಡಿಕೊಳ್ಳುತ್ತಿದ್ದಾರೆ.

    ಆದ್ರೆ ವಿದ್ಯಾರ್ಥಿನಿಯರ ಈ ಜ್ವಲಂತ ಸಮಸ್ಯೆಯನ್ನು ಬಗೆಹರಿಸಬೇಕಿರುವ ಜನಪ್ರತಿನಿಧಿಗಳು ಕಾಣೆಯಾಗಿರುವುದು ಬೇಸರದ ಸಂಗತಿಯಾಗಿದೆ. ಇನ್ನು ಶಿಕ್ಷಣ ಇಲಾಖೆ ಮಾತ್ರ ಜಾಣ ಕುರುಡತನ ತೋರಿಸುತ್ತಿದ್ದು, ವಿದ್ಯಾರ್ಥಿನಿಯರ ಆಕ್ರೋಶಕ್ಕೆ ಕಾರಣವಾಗಿದೆ. ಮೊದಲೇ ಸರ್ಕಾರಿ ಶಾಲೆಗಳಿಗೆ ಮಕ್ಕಳು ಬರೋದು ಕಡಿಮೆ ಎಂಬ ಆರೋಪವಿದ್ದು, ಈ ರೀತಿ ಮೂಲಭೂತ ಸೌಕರ್ಯ ನೀಡದೆ ಶಾಲೆಯ ವಿದ್ಯಾರ್ಥಿಗಳನ್ನು ಸಂಕಷ್ಟಕ್ಕೆ ದೂಡುತ್ತಿರುವುದು ಎಷ್ಟು ಸರಿ? ಎಂಬ ಪ್ರಶ್ನೆ ಎದ್ದಿದೆ. ಬೀದರ್ ಉತ್ತರ ಕ್ಷೇತ್ರದ ಮಾನ್ಯ ಶಾಸಕ ರಹೀಂಖಾನ್ ವಿದ್ಯಾರ್ಥಿನಿಯರ ಸಮಸ್ಯೆಗೆ ಸ್ಪಂದಿಸಿ ಮಾನವೀಯತೆ ಮೆರೆಯಬೇಕಿದೆ.

    ಗ್ರಾಮದಲ್ಲಿ ನಡೆಯುವ ಗ್ರಾಮಸಭೆಯಲ್ಲಿ 5 ವರ್ಷದಿಂದ ಈ ಜ್ವಲಂತ ಸಮಸ್ಯೆಯ ಬಗ್ಗೆ ತಿಳಿಸಿದ್ರೂ ಸ್ಥಳೀಯ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ಗ್ರಾಮದ ವಿದ್ಯಾರ್ಥಿನಿಯರ ಸಂಕಷ್ಟ ನೋಡದೆ ಪೋಷಕರು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೂಲಕ ವಿದ್ಯಾರ್ಥಿನಿಯರ ಜ್ವಲಂತ ಸಮಸ್ಯೆಗೆ ಮುಕ್ತಿ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.