Tag: Bear Grylls

  • ಬಂಡೀಪುರ ಅರಣ್ಯದಲ್ಲಿ ಹುಲಿ ಘರ್ಜನೆಯ ಮಧ್ಯೆ ತಲೈವಾ ನಗು

    ಬಂಡೀಪುರ ಅರಣ್ಯದಲ್ಲಿ ಹುಲಿ ಘರ್ಜನೆಯ ಮಧ್ಯೆ ತಲೈವಾ ನಗು

    ಚಾಮರಾಜನಗರ: ಡಿಸ್ಕವರಿ ಚಾನೆಲ್‍ನಲ್ಲಿ ಪ್ರಸಾರವಾಗುವ ಜನಪ್ರಿಯ ಶೋ ‘ಮ್ಯಾನ್ ವರ್ಸಸ್ ವೈಲ್ಡ್’ನಲ್ಲಿ ಬಂಡೀಪುರದಲ್ಲಿ ಚಿತ್ರೀಕರಣಗೊಂಡ ಸೂಪರ್ ಸ್ಟಾರ್ ರಜನಿಕಾಂತ್‍ರ ವಿಶೇಷ ಸಂಚಿಕೆಯ ಟೀಸರ್ ಬಿಡುಗಡೆಯಾಗಿದೆ. ಈ ಟೀಸರ್ ನಲ್ಲಿ ಅರಣ್ಯದಲ್ಲಿ ಹುಲಿ ಘರ್ಜನೆಯ ನಡುವೆ ತಲೈವಾರ ನಗು ಕಂಡು ಅಭಿಮಾನಿಗಳು ಖುಷ್ ಆಗಿದ್ದಾರೆ.

    ರಜನಿಕಾಂತ್ ಅವರು ಬೇರ್ ಗ್ರಿಲ್ಸ್ ಜೊತೆ ಬಂಡೀಪುರದ ಅರಣ್ಯದಲ್ಲಿ ‘ಮ್ಯಾನ್ ವರ್ಸಸ್ ವೈಲ್ಡ್’ನ ವಿಶೇಷ ಸಂಚಿಕೆಯ ಚಿತ್ರೀಕರಣ ನಡೆಯುತ್ತಿದ್ದ ವಿಚಾರವೇ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿತ್ತು. ಆದರೆ ಈಗ ಮ್ಯಾನ್ ವರ್ಸಸ್ ವೈಲ್ಡ್‌ನ ರಜನಿಕಾಂತ್‍ರ ವಿಶೇಷ ಸಂಚಿಕೆಯ ಟೀಸರ್ ನಲ್ಲಿ ಹುಲಿ ಘರ್ಜನೆ ನಡುವೆ ತಲೈವಾರ ನಗು ಅಭಿಮಾನಿಗಳ ಗಮನ ಸೆಳೆದಿದೆ.

    ಈ ವಿಶೇಷ ಸಂಚಿಕೆಯ 40 ಸೆಕೆಂಡ್‍ಗಳ ಟೀಸರ್ ನಲ್ಲಿ ಬುಲೆಟ್ ಏರಿ ಬರುವ ಸಾಹಸಿಗ ಬೇರ್ ಗ್ರಿಲ್ಸ್ ಹಾಗೂ ಹುಲಿ ಘರ್ಜನೆ ಮತ್ತು ರಜಿನಿಯ ನಗುವಿದ್ದು ಸಾಕಷ್ಟು ಕೂತೂಹಲ ಕೆರಳಿಸಿದೆ. ಜೊತೆಗೆ ಮಾರ್ಚ್ 23ರ ರಾತ್ರಿ 8ಕ್ಕೆ ವಿಶೇಷ ಸಂಚಿಕೆ ಪ್ರಸಾರಗೊಳ್ಳಲಿದೆ ಎಂದು ಡಿಸ್ಕವರಿ ಚಾನೆಲ್ ಅಧಿಕೃತ ಟ್ವಿಟರ್ ಅಕೌಂಟ್‍ನಲ್ಲಿ ತಿಳಿಸಲಾಗಿದೆ. ಟೀಸರ್ ನಲ್ಲಿ ರಜಿನಿಯವರ ಮುಖ ತೋರಿಸದೇ ಅವರ ನಗುವಿನ ಶಬ್ಧವನ್ನು ಬಳಸಿಕೊಂಡಿರುವುದು ತಲೈವಾ ಅಭಿಮಾನಿಗಳು ಕಾತರದಿಂದ ಕಾಯುವಂತೆ ಮಾಡಿದೆ.

    ಕಾರ್ಯಕ್ರಮದ ನಿರ್ದೇಶಕ ಬೇರ್ ಗ್ರಿಲ್ಸ್ ನೇತೃತ್ವದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಆಕ್ಷನ್ ಹೀರೋ ಅಕ್ಷಯ್ ಕುಮಾರ್ ಅವರ ಮ್ಯಾನ್ ವರ್ಸಸ್ ವೈಲ್ಡ್‌ನ ವಿಶೇಷ ಸಂಚಿಕೆಯ ಶೂಟಿಂಗ್ ಬಂಡೀಪುರದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿತ್ತು. ಜನವರಿ 27 ರಿಂದ ಜನವರಿ 29 ರವರೆಗೆ ಅರಣ್ಯ ಇಲಾಖಾಧಿಕಾರಿಗಳ ಸಮಕ್ಷಮದಲ್ಲಿ ಈ ವಿಶೇಷ ಸಂಚಿಕೆಯ ಶೂಟಿಂಗ್ ನಡೆದಿತ್ತು. ಮೂರು ದಿನಗಳ ಕಾಲ ನಡೆದಿದ್ದ ಶೂಟಿಂಗ್‍ಗೆ ಅನುಮತಿ ನೀಡಲು ಅರಣ್ಯ ಇಲಾಖೆಯಿಂದ 17 ಕಂಡೀಷನ್ ವಿಧಿಸಲಾಗಿತ್ತು. ಶಬ್ದಮಾಲಿನ್ಯ, ವಾಯುಮಾಲಿನ್ಯ, ಬೆಂಕಿ ಅನಾಹುತ ನಡೆಯದಂತೆ ನೋಡಿಕೊಳ್ಳುವ 17 ಕಂಡೀಷನ್ ವಿಧಿಸಿ ಅನುಮತಿ ನೀಡಲಾಗಿತ್ತು.

    ಮೂಳೆಹೊಲೆ ಅರಣ್ಯ ವಲಯದಲ್ಲಿ ರಜನಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾಗ ಗುಡ್ಡದಿಂದ ಹತ್ತಿ ಜಾರುವ ದೃಶ್ಯವೊಂದಿತ್ತು. ಆ ವೇಳೆ ನೆಲಕ್ಕೆ ಕೈ ಊರಿದಾಗ ಲಂಟಾನ ಮುಳ್ಳು ತರಚಿ ರಜನಿ ಗಾಯಮಾಡಿಕೊಂಡಿದ್ದರು. ಚಿತ್ರೀಕರಣದ ವೇಳೆ ಬಂಡೀಪುರ ಕಾಡನ್ನು ಕಂಡು ಫಿದಾ ಆಗಿದ್ದ ತಲೈವಾ, ಈ ರೀತಿಯ ಕಾಡನ್ನು ರಕ್ಷಿಸುವ ಹೊಣೆ ಎಲ್ಲರ ಮೇಲಿದೆ. ಈ ಕುರಿತು ನಾನೊಂದು ಸಂದೇಶವನ್ನು ನೀಡುತ್ತೇನೆ ಎಂದು ಹೇಳಿದ್ದರು.

  • ಶೀಘ್ರದಲ್ಲೇ ‘ಮ್ಯಾನ್ ವರ್ಸಸ್ ವೈಡ್’ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮೋದಿ

    ಶೀಘ್ರದಲ್ಲೇ ‘ಮ್ಯಾನ್ ವರ್ಸಸ್ ವೈಡ್’ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮೋದಿ

    ನವದೆಹಲಿ: ಪ್ರಸಿದ್ಧ ಡಿಸ್ಕವರಿ ಚಾನೆಲ್‍ನಲ್ಲಿ ಪ್ರಸಾರವಾಗುವ `ಮ್ಯಾನ್ ವರ್ಸಸ್ ವೈಡ್’ ಮಿತ್ ಬೈರ್ ಗ್ರಿಲ್ಸ್ ಒಂದು ಅಡ್ವೆನ್ಚರ್ ಕಾರ್ಯಕ್ರಮವಾಗಿದ್ದು, ಶೀಘ್ರದಲ್ಲೇ ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಣಿಸಿಕೊಳ್ಳಲಿದ್ದಾರೆ.

    ಹೌದು. ರಾಜಕೀಯವನ್ನು ಸ್ಪಲ್ಪ ಬದಿಗಿಟ್ಟು ಮೋದಿ ಅವರು ಅಡ್ವೆನಚರ್ ಮಾಡಿ ಥ್ರಿಲ್ ಪಡೆದಿದ್ದಾರೆ. ಆಗಸ್ಟ್ 12ರಂದು ಡಿಸ್ಕವರಿ ಚಾನೆಲ್‍ನಲ್ಲಿ ಪ್ರಸಾರವಾಗುವ ‘ಮ್ಯಾನ್ ವರ್ಸಸ್ ವೈಡ್’ ಕಾರ್ಯಕ್ರಮದಲ್ಲಿ ಮೋದಿ ಕಾಣಿಸಿಕೊಳ್ಳಲಿದ್ದಾರೆ ಎಂದು ಈ ಕಾರ್ಯಕ್ರಮದ ಹೋಸ್ಟ್ ಬೈರ್ ಗ್ರಿಲ್ಸ್ ಟ್ವೀಟ್ ಮಾಡಿದ್ದಾರೆ. ಉತ್ತರಾಖಂಡ್‍ನ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ಮೋದಿ ಅವರು ಬೈರ್ ಗ್ರಿಲ್ಸ್ ಜೊತೆ ಆಗಸ್ಟ್ 12ರ ಸಂಚಿಕೆಯಲ್ಲಿ ಕಾಣಸಿಗಲಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    ಜಗತ್ತಿನ ಸುಮಾರು 180 ದೇಶಗಳ ಜನರು ಯಾರಿಗೂ ತಿಳಿಯದ ಮೋದಿ ಅವರನ್ನು ಕಾಣಲಿದ್ದಾರೆ. ಭಾರತದ ವನ್ಯ ಜಗತ್ತು, ಪ್ರಾಣಿ ಸಂರಕ್ಷಣೆ ಮತ್ತು ಪರಿಸರದಲ್ಲಾಗುವ ಬದಲಾವಣೆ ಕುರಿತು ಜಾಗೃತಿ ಮೂಡಿಸಲಿದ್ದಾರೆ. ಆಗಸ್ಟ್ 12 ರಾತ್ರಿ 9ಕ್ಕೆ ಮ್ಯಾನ್ ವರ್ಸಸ್ ವೈಡ್ ವಿಥ್ ನರೇಂದ್ರ ಮೋದಿ ನೋಡಿ ಎಂದು ಬರೆದು #PMModionDiscovery ಹ್ಯಾಶ್‍ಟ್ಯಾಗ್ ಹಾಕಿ ವಿಡಿಯೋ ಜೊತೆ ಬೈರ್ ಗ್ರಿಲ್ಸ್ ಟ್ವೀಟ್ ಮಾಡಿದ್ದಾರೆ.

    ಈ ಬಗ್ಗೆ ಮೋದಿ ಅವರು ಪ್ರತಿಕ್ರಿಯಿಸಿ, ವರ್ಷಾನುಗಟ್ಟಲೆ ನಾನು ಪ್ರಕೃತಿ, ಪರ್ವತ ಹಾಗೂ ಅರಣ್ಯದಲ್ಲಿ ಸಮಯ ಕಳೆದಿದ್ದೇನೆ. ಆ ಸಮಯ ನನ್ನ ಜೀವನಲ್ಲಿ ಪ್ರಭಾವ ಬೀರಿದೆ. ಆದ್ದರಿಂದ ರಾಜಕೀಯದಿಂದ ಹೊರಬಂದು ಕೊಂಚ ಸಮಯ ನಿಸರ್ಗದಲ್ಲಿ ಕಳೆಯಲು ಅವಕಾಶ ದೊರೆತಾಗ, ಕುತೂಹಲದಿಂದ ಭಾಗಿಯಾದೆ ಎಂದು ಖುಷಿಯನ್ನು ಹಂಚಿಕೊಂಡಿದ್ದಾರೆ.

    ಈ ಕಾರ್ಯಕ್ರಮದಲ್ಲಿ ಭಾರತದ ಶ್ರೀಮಂತ ಪರಿಸರ ಪರಂಪರೆಯ ಬಗ್ಗೆ ತಿಳಿಸಲು, ಪರಿಸರ ಸಂರಕ್ಷಣೆಯ ಪ್ರಾಮುಖ್ಯತೆ ಹಾಗೂ ಪ್ರಕೃತಿಯಲ್ಲಿ ಸಾಮರಸ್ಯದಿಂದ ಬದುಕುವ ಕುರಿತು ತಿಳಿಸಲು ಅವಕಾಶ ಸಿಕ್ಕಿತು ಎಂದಿದ್ದಾರೆ.

    ಸೋಮವಾರದಂದು ಮೋದಿ ಅವರು 2018ರ ಅಖಿಲ ಭಾರತ ಹುಲಿ ಅಂದಾಜು ವರದಿಯನ್ನು ಬಿಡುಗಡೆಗೊಳಿಸಿದರು. ಈ ವರದಿ ಪ್ರಕಾರ, ದೇಶದಲ್ಲಿ ಒಟ್ಟು 2,967 ಹುಲಿಗಳು ಇವೆ. ಈ ಹಿಂದಿನ 2014ರ ವರದಿ ಪ್ರಕಾರ ದೇಶದಲ್ಲಿ 2,226 ಹುಲಿಗಳು ಇದ್ದವು. 2010ರ ವರದಿಯಲ್ಲಿ 1,706 ಹುಲಿಗಳು ದೇಶದಲ್ಲಿದೆ ಎಂದು ಉಲ್ಲೇಖಿಸಲಾಗಿತ್ತು.

    ವರದಿ ಬಗ್ಗೆ ಮಾತನಾಡಿ, ಇಂದು ಸುಮಾರು 3,000 ಹುಲಿಗಳನ್ನು ಹೊಂದಿರುವ ಭಾರತವು ವಿಶ್ವದ ಅತಿದೊಡ್ಡ ಮತ್ತು ಸುರಕ್ಷಿತ ಆವಾಸಸ್ಥಾನಗಳಲ್ಲಿ ಒಂದಾಗಿದೆ ಎಂದು ಮೋದಿ ಹೆಮ್ಮೆಯಿಂದ ಹೇಳಿದರು.