ಬೆಂಗಳೂರು: ಬಿಡಿಎ ನೂತನ ಆಯುಕ್ತರಾಗಿ ಹಿರಿಯ ಐಎಎಸ್ ಅಧಿಕಾರಿ ಎಂ.ಬಿ.ರಾಜೇಶ್ ಗೌಡ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ನೂತನ ಆಯುಕ್ತರಿಗೆ ಶುಭ ಕೋರಿ ಮಾತನಾಡಿದ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ಪ್ರಾಧಿಕಾರ ಸಾರ್ವಜನಿಕರ ಸೇವೆಯ ಸಂಸ್ಥೆಯಾಗಿದ್ದು, ಸಾರ್ವಜನಿಕ ಸ್ನೇಹಿ ಸಂಸ್ಥೆಯನ್ನಾಗಿ ಮಾಡುವ ಹೊಣೆ ಎಲ್ಲರದ್ದಾಗಿದೆ. ಸಣ್ಣಪುಟ್ಟ ಕೆಲಸಗಳಿಗಾಗಿ ಸಾರ್ವಜನಿಕರು ಬಿಡಿಎಗೆ ಅಲೆಯದಂತೆ ನೋಡಿಕೊಳ್ಳಬೇಕು. ಬಿಡಿಎ ಒಂದು ಕುಟುಂಬ ಇದ್ದಂತೆ. ಎಲ್ಲರೂ ಒಗ್ಗಟ್ಟಾಗಿ ಸಂಸ್ಥೆ ಮತ್ತು ಸಾರ್ವಜನಿಕರ ಏಳ್ಗೆಗಾಗಿ ಶ್ರಮಿಸಿ, ಸಂಸ್ಥೆಗೆ ಹೆಸರು ತರೋಣ ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ನೂತನ ಆಯುಕ್ತ ರಾಜೇಶ್ ಗೌಡ ಮಾತನಾಡಿ, ಸಾರ್ವಜನಿಕರಿಗಾಗಿ ಇರುವ ಸಂಸ್ಥೆಯ ಉನ್ನತಿಗೆ ಕೆಲಸ ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ಬಿಡಿಎನ ಹಲವಾರು ಅಧಿಕಾರಿಗಳು ಇದ್ದರು.
ನೀವು ಬಾಡಿಗೆ ಮನೆಯಲ್ಲಿದ್ದೀರಾ? ಖರೀದಿಸಲು ಹೊಸ ಮನೆ ಹುಡುಕುತ್ತಿದ್ದೀರಾ? ಅದರಲ್ಲೂ ಕಡಿಮೆ ಬೆಲೆಗೆ ಗುಣಮಟ್ಟದ ಮನೆಯನ್ನೇ ಹುಡುಕುತ್ತಿದ್ದೀರಾ? ಹಾಗಾದ್ರೆ ನಿಮಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಗುಡ್‌ನ್ಯೂಸ್ ನೀಡಿದೆ.
ಬಿಡಿಎ ನಗರದ ವಿವಿಧ ಪ್ರದೇಶಗಳಲ್ಲಿ ನಿರ್ಮಿಸಿರುವ ಫ್ಲಾಟ್‍ಗಳನ್ನು ಖರೀದಿಸಲು ಆನ್‍ಲೈನ್ ಸೇವೆಯನ್ನು ಪ್ರಾರಂಭಿಸಿದೆ. ಮಾಳಗಾಳ(ನಾಗರಬಾವಿ), ಕಣಿಮಿಣಿಕೆ(ಕುಂಬಳಗೋಡು), ಕೊಮ್ಮಘಟ್ಟ(ಕೆಂಗೇರಿ, ನೈಸ್ ರಸ್ತೆ ಬಳಿ), ವಲಗೇರಹಳ್ಳಿ(ಕೆಂಗೇರಿ), ದೊಡ್ಡಬನಹಳ್ಳಿ(ಕೆ.ಆರ್.ಪುರಂ) ಬಡಾವಣೆಗಳಲ್ಲಿ ವಿವಿಧ ಅಳತೆಯ 1,381 ಫ್ಲಾಟ್‍ಗಳು ಆನ್‍ಲೈನ್‍ನಲ್ಲಿ ಲಭ್ಯವಿದ್ದು, ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು.
ಈ ಹಿಂದೆ ಫ್ಲಾಟ್‍ಗಳನ್ನು ಖರೀದಿಸಲು ಪ್ರಾಧಿಕಾರಕ್ಕೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬೇಕಾಗಿತ್ತು. ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಫ್ಲಾಟ್‍ಗಳನ್ನು ಖರೀದಿಸಲು ಆನ್‍ಲೈನ್ ಸೇವೆ ಪ್ರಾರಂಭಿಸಿದೆ. ಸಾರ್ವಜನಿಕರು ಪ್ರಾಧಿಕಾರದ ವೆಬ್‍ಸೈಟ್ www.housing.bdabangalore.org ಗೆ ಭೇಟಿ ನೀಡಿ, ಫ್ಲಾಟ್‍ಗಳ ವಿವರ, ಬಡಾವಣೆಗಳ ಹೆಸರು, ನಕಾಶೆ, ಫ್ಲಾಟ್‍ಗಳ ಫೋಟೋ ಮತ್ತು ವೀಡಿಯೋ, ಫ್ಲಾಟ್‍ಗಳ ಸಂಖ್ಯೆ ಇವೆಲ್ಲವನ್ನೂ ವೀಕ್ಷಿಸಬಹುದು. ಫ್ಲಾಟ್‍ಗಳಿಗೆ ನಿಗದಿಪಡಿಸಿರುವ ದರಗಳಂತೆ ಆನ್‍ಲೈನ್ ಮೂಲಕವೇ ತಮಗಿಷ್ಟವಾದ ಫ್ಲಾಟ್‍ಗಳನ್ನು ಕಾಯ್ದಿರಿಸಬಹುದು.
ಬಿಡಿಎ ಅಧ್ಯಕ್ಷರು ನಗರದ ವಿವಿಧೆಡೆ ನಿರ್ಮಿಸಿರುವ ವಸತಿ ಸಮುಚ್ಛಯಗಳಿಗೆ ಭೇಟಿ ನೀಡಿ, ವಸತಿ ಸಮುಚ್ಛಯಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇರುವುದನ್ನು ಗಮನಿಸಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾರ್ಯಗಳಿಗೆ ಹಣವನ್ನು ಬಿಡುಗಡೆಗೊಳಿಸಿದ್ದಾರೆ ಹಾಗೂ ಕಾಮಗಾರಿಯೂ ಪೂರ್ಣಗೊಳ್ಳುವ ಹಂತದಲ್ಲಿದೆ. ಆಟದ ಮೈದಾನ, ಉದ್ಯಾನವನ, ಮಕ್ಕಳ ಆಟಿಕೆಗಳು, ಜಿಮ್, ವೆಲ್‍ಫೇರ್ ಅಸೋಸಿಯೇಷನ್‍ಗೆ ಕಚೇರಿ ನಿರ್ಮಿಸಲು ಸ್ಥಳ ಕಾಯ್ದಿರಿಸುವುದು, ವಸತಿ ಸಮುಚ್ಛಯಗಳಿಗೆ ಸೌರ ಫಲಕಗಳನ್ನು ಅಳವಡಿಸುವ ಕಾರ್ಯ ಶೀಘ್ರದಲ್ಲಿ ನಡೆಯಲಿದೆ.
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮತ್ತು ಆಯುಕ್ತರ ನಡುವಿನ ಜಟಾಪಟಿ ಬಿಡಿಎ ಹುಳುಕುಗಳನ್ನು ಬಯಲು ಮಾಡಿದೆ.
ಬಿಡಿಎಯಲ್ಲಿ ಮಿಡ್ ನೈಟ್ ಡೀಲ್ ನಡೆಯುತ್ತಿವೆ. ಎರಡು ಸಾವಿರ ಕೋಟಿ ರೂಪಾಯಿ ಹಗರಣ ನಡೆದಿದೆ ಎಂದು ಸ್ವತಃ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಆರೋಪಿಸಿದ್ದಾರೆ. ನನಗೆ ಆಯುಕ್ತ ಮಹಾದೇವ್ ಸಹಕರಿಸುತ್ತಿಲ್ಲ, ಗೌರವ ನೀಡುತ್ತಿಲ್ಲ. ಒಂದು ಕಡತ ನೋಡೋಕು ಬಿಡಲ್ಲ. ಏನೊಂದು ಮಾಹಿತಿ ನೀಡಲ್ಲ. ತಮ್ಮ ಪಾಡಿಗೆ ತಾವು ತೀರ್ಮಾನ ತಗೋತಿದ್ದಾರೆ ಎಂದು ಎಸ್‍ಆರ್ ವಿಶ್ವನಾಥ್ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ನಾನು ಬೇಡ ಅಂದ್ರೂ ಕೂಡ ಭವಾನಿ ಸೊಸೈಟಿಗೆ 5 ಎಕರೆ ಭೂಮಿಯನ್ನು ಈಗಿನ ಬೆಲೆಯಲ್ಲಿ ನೀಡಲು ಆಯುಕ್ತರು ನಿರ್ಧರಿಸಿದ್ದಾರೆ. ನಿನ್ನೆ ರಾತ್ರಿ 10.45ರವರೆಗೂ ಬಿಡಿಎಯಲ್ಲಿ ಅಧಿಕಾರಿಗಳನ್ನು ಕೂರಿಸಿಕೊಂಡು ಈ ನಿರ್ಧಾರ ಮಾಡಿದ್ದಾರೆ. ಇದರಿಂದ ಬಿಡಿಎಗೆ 500 ಕೋಟಿ ಲಾಸ್ ಆಗಿದೆ ಎಂದು ಎಸ್‍ಆರ್ ವಿಶ್ವನಾಥ್ ಕಿಡಿಕಾರಿದ್ದಾರೆ. ಈ ಹಿಂದೆ ಭವಾನಿಗೆ ಸೊಸೈಟಿಗೆ ಅಕ್ರಮವಾಗಿ ಜಮೀನು ಹಂಚಿಕೆಯಾದಾಗ ಎಸ್‍ಟಿ ಸೋಮಶೇಖರ್ ಅಧ್ಯಕ್ಷರಾಗಿದ್ರು. ಈ ಬಗ್ಗೆ ಸಿಎಂ ಜೊತೆ ಚರ್ಚಿಸ್ತೀನಿ ಅಂತಲೂ ವಿಶ್ವನಾಥ್ ಹೇಳಿದರು.
ಬಿಡಿಎ ಉಪಕಾರ್ಯದರ್ಶಿ ಚಿದಾನಂದ್ ತಮ್ಮ ಸಂಬಂಧಿಕರಿಗೆ ಸೈಟು ಹಂಚಿಕೆ ಮಾಡಿದ್ದಾರೆ. ಕಾರ್ನರ್ ಸೈಟು, ಬಲ್ಕ್ ಅಲಾಟ್‍ಮೆಂಟ್, ಸರ್ಕಾರಿ ಜಾಗಕ್ಕೆ ನಕಲಿ ದಾಖಲೆ. ಈ ರೀತಿಯಲ್ಲಿ 2ಸಾವಿರ ಕೋಟಿ ಮೊತ್ತದ ಹಗರಣ ನಡೀತಿದೆ ಎಂದು ಆರೋಪ ಮಾಡಿದರು. ಅಂತಿಮವಾಗಿ ಏನ್ ಮಾಡಬೇಕು ಅನ್ನೋದು ಗೊತ್ತು ಎನ್ನುವ ಮೂಲಕ ಪರೋಕ್ಷ ಎಚ್ಚರಿಕೆ ನೀಡಿದರು.
ಈ ಬೆನ್ನಲ್ಲೇ ಪ್ರತ್ಯೇಕವಾಗಿ ಸುದ್ದಿಗೋಷ್ಠಿ ನಡೆಸಿದ ಬಿಡಿಎ ಆಯುಕ್ತ ಮಹಾದೇವ್, ನಾನು ಅಧ್ಯಕ್ಷರನ್ನು ಕೆಟ್ಟದಾಗಿ ನಡೆಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು. ನಾನು ಆರು ತಿಂಗಳಲ್ಲಿ ಒಂದು ಸಾವಿರ ಕೋಟಿ ಉಳಿಸಿದ್ದೀನಿ ಎಂದು ತಿರುಗೇಟು ನೀಡಿದರು. ಎಲ್ಲವನ್ನು ಅಧ್ಯಕ್ಷರ ಗಮನಕ್ಕೆ ತರುವ ಅಗತ್ಯವಿಲ್ಲ. ಸಿಎಂಗೆ ದೂರು ಕೊಟ್ರೇ ನಾನು ನೋಡಿಕೊಳ್ಳುತ್ತೇನೆ. ಭವಾನಿ ಸೊಸೈಟಿಗೆ ಸಗಟು ಹಂಚಿಕೆ ಮಾಡಿಲ್ಲ. ಇದು ಪರ್ಯಾಯ ಜಾಗ. ನನಗೆ ಬೆದರಿಕೆ ಕರೆ ಬಂದಿದೆ. ಆದರೆ ಅವರ ಹೆಸರನ್ನು ಹೇಳಲ್ಲ ಎಂದ ಮಹಾದೇವ್, ಬಲ್ಕ್ ಅಲಾಟ್‍ಮೆಂಟ್ ಬಗ್ಗೆ ತನಿಖೆ ನಡೆಯುತ್ತಿದೆ ಎಂದರು.
ಬೆಂಗಳೂರು: ಅದಾನಿ ಒಡೆತನದ ಪವರ್ ಕಾರ್ಪೋರೇಷನ್ ಗೆ ರಾಜ್ಯ ಸರ್ಕಾರ ಯಾವುದೇ ಹೆಚ್ಚುವರಿ ಹಣ ಕೊಡುತ್ತಿಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸಿಎಂ ಬದಲಿಗೆ ಪಿ.ಆರ್.ರಮೇಶ್ ಪ್ರಶ್ನೆಗೆ ಉತ್ತರಿಸಿದ ಅವರು, ಸಿಇಆರ್‍ಸಿ ಆದೇಶದ ಅನ್ವಯ ಪ್ರತಿ ಯುನಿಟ್ ಗೆ 1.45 ರೂ. ನಿಗದಿಪಡಿಸಲಾಗಿದೆ. ಕಲ್ಲಿದ್ದಲು, ಸುಣ್ಣದ ಕಲ್ಲು, ತೈಲದರ ಏರಿಳಿತ ಆದಾಗ ದರ ಹೆಚ್ವಳ ಆಗುತ್ತೆ. ಏಪ್ರಿಲ್ 2020 ರಿಂದ ಡಿಸೆಂಬರ್ 2020ರ ವರೆಗೆ ಪ್ರತಿ ಯುನಿಟ್‍ಗೆ ಕನಿಷ್ಠ 2.75 ರೂ. ಹಾಗೂ ಗರಿಷ್ಠ 3.72 ರೂ. ನಿಗದಿಪಡಿಸಲಾಗಿದೆ.
ಕೆಇಆರ್ ಸಿ ಮತ್ತು ಸಿಇಆರ್ ಸಿ ನಿಯಮಾವಳಿ ಪ್ರಕಾರ ನಿಭಾಯಿಸಲಾಗುತ್ತಿದೆ. ಹೀಗಾಗಿ ವಿದ್ಯುತ್ ಸರಬರಾಜು ಕಂಪನಿ 1,600 ಕೋಟಿ ರೂ. ನಷ್ಟದಲ್ಲಿದೆ. ಹೆಚ್ಚುವರಿಯಾಗಿ ಯಾವುದೇ ಹಣ ಅದಾನಿ ಕಂಪನಿಗೆ ನೀಡಿಲ್ಲ. ನಿಯಮಗಳ ಅನ್ವಯ ಹಣ ಪಾವತಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಬಿಡಿಎ ನಿರ್ಮಿಸುತ್ತಿರುವ ಸಮುಚ್ಛಯಗಳ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು ಎಂದು ಬಸವರಾಜ್ ಬೊಮ್ಮಾಯಿ ತಿಳಿಸಿದರು. ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಪ್ರಕಾಶ್ ರಾಥೋಡ್ ಬದಲಿಗೆ ನಾರಾಯಣಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬಿಡಿಎದಿಂದ ಸದ್ಯ 31 ವಸತಿ ಸಮುಚ್ಛಯಗಳನ್ನ ನಿರ್ಮಿಸಲಾಗಿದೆ. ಈ ವರೆಗೆ ಸುಮಾರು 7,909 ಫ್ಲಾಟ್ ಮಾರಾಟವಾಗಿದೆ. 1,914 ಫ್ಲಾಟ್ ಮಾತ್ರ ಮಾರಾಟವಾಗದೇ ಬಾಕಿ ಇವೆ. ಅಲ್ಲದೆ ಹೊಸ 5,086 ಕಾಮಗಾರಿ ಚಾಲ್ತಿಯಲ್ಲಿ ಇದೆ ಎಂದು ಮಾಹಿತಿ ನೀಡಿದರು. ಮೂಲಭೂತ ಸೌಕರ್ಯ ಇಲ್ಲದ ಕಡೆ ಕೂಡಲೇ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುತ್ತೆ. ಗುಣಮಟ್ಟದ ಕಾಮಗಾರಿ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದು ಸ್ಪಷ್ಟಪಡಿಸಿದರು.
ಬೆಂಗಳೂರು: ಬಿಡಿಎ ಕಾರ್ನರ್ ಸೈಟ್ ಇ ಹರಾಜು ವೇಳೆನಲ್ಲಿ ಪ್ರೊಕ್ಯೂರ್ಮೆಂಟ್ ವೆಬ್‍ಸೈಟಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಬಿಡ್ಡಿಂಗ್ ಅವಧಿಯನ್ನು ವಿಸ್ತರಣೆ ಮಾಡಿದೆ.
ಇಂದು ಸಂಜೆ 6 ಗಂಟೆಗೆ ಬಿಡ್ಡಿಂಗ್ ಅಂತ್ಯವಾಗಬೇಕಿತ್ತು. ಆದರೆ ಸಂಜೆ 5:30ರ ವೇಳೆಗೆ ಇ ಪ್ರೊಕ್ಯೂರ್ಮೆಂಟ್ ವೆಬ್‍ಸೈಟಿನಲ್ಲಿ ದೋಷ ಕಾಣಿಸಿಕೊಂಡಿದೆ. ಇದಾದ ತಕ್ಷಣ ಬಿಡಿಐ ಆಯುಕ್ತ ಹೆಚ್. ಆರ್. ಮಹಾದೇವ್ ಅಧಿಕಾರಿಗಳ ಸಭೆ ಕರೆದಿದ್ದು, ಬಿಡ್ಡಿಂಗ್ ಅವಧಿಯನ್ನು ನಾಳೆ ಸಂಜೆ 6ರವರೆಗೆ ವಿಸ್ತರಣೆ ಮಾಡಿದ್ದಾರೆ.
ಈಗಾಗಲೇ ಬಿಡ್ಡಿಂಗ್ ನಡೆದಿದ್ದು, 200 ಸೈಟಿಗೆ ಸುಮಾರು ಎರಡು ಸಾವಿರಕ್ಕೂ ಹೆಚ್ಚಿನ ಬಿಡ್ಡಿಂಗ್ ಬಂದಿವೆ. ಹೀಗಾಗಿ ವೈಬ್‍ಸೈಟಿನಲ್ಲಿ ಒಮ್ಮೆಲೇ ಎಲ್ಲರೂ ಬಿಡ್ ಮಾಡಿದ್ದರಿಂದ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಈ ಕಾರಣದಿಂದ ಬಿಡ್ಡಿಂಗ್ ಅವಧಿಯನ್ನು ನಾಳೆ ಸಂಜೆ 6ರವರೆಗೆ ವಿಸ್ತರಣೆ ಮಾಡಿರುವ ಆಯುಕ್ತ ಮಹದೇವ್ ಕೊನೆ ತನಕ ಕಾಯದೆ ಬಿಡ್ಡಿಂಗ್ ಮಾಡಲು ಮನವಿ ಮಾಡಿದ್ದಾರೆ.
– 1 ಸಾವಿರ ಮಂದಿಯಿಂದ 15 ಸಾವಿರ ಪಡೆದು ವಂಚನೆ
– 50 ಜನರಿಗೆ ನಕಲಿ ಹಕ್ಕು ಪತ್ರ ವಿತರಣೆ
ಬೆಂಗಳೂರು: ನಿವೇಶನಗಳಿಗೆ ನಕಲಿ ಹಕ್ಕು ಪತ್ರಗಳನ್ನು ಸೃಷ್ಟಿಸಿಕೊಂಡು ಸಾರ್ವಜನಿಕರಿಗೆ ಸೈಟ್ ಹಂಚುತ್ತೇವೆ ಎಂದು ಸುಳ್ಳು ಹೇಳಿ ಹಣ ಬಾಚುತ್ತಿದ್ದ ಜಾಲವೊಂದನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಜನರಿಗೆ ಮೋಸ ಮಾಡುತ್ತಿದ್ದ ವ್ಯಕ್ತಿಯನ್ನು ವಿಜಯನಂದಸ್ವಾಮಿ ಎಂದು ಗುರುತಿಸಲಾಗಿದೆ. ಈತ ಉತ್ತರ ಕರ್ನಾಟಕ ಪ್ರದೇಶ ರೈತ ಸಂಘ ಓಪನ್ ಮಾಡಿಕೊಂಡು ಬೆಂಗಳೂರು ಮೂಲಕ ರಮೇಶ್ ಎಂಬಾತನನ್ನು ಪರಿಚಯ ಮಾಡಿಕೊಂಡು ಇಬ್ಬರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಾಡಪ್ರಭು ಕೆಂಪೇಗೌಡ ಬಡವಾಣೆಯಲ್ಲಿ ಸೈಟ್ ಕೊಡಿಸುವುದಾಗಿ ಹೇಳಿ ವಂಚಿಸುತ್ತಿದ್ದ.
ನಿಮಗೆ ರಿಯಾಯಿತಿ ದರದಲ್ಲಿ ನಿವೇಶನಗಳನ್ನು ಕೊಡಿಸುತ್ತೇವೆ ಎಂದು ವಿಜಯಾನಂದ ಸ್ವಾಮಿ ಮತ್ತು ರಮೇಶ್ ಜನರನ್ನು ನಂಬಿಸಿದ್ದಾರೆ. ಜೊತೆಗೆ ತನ್ನ ರೈತ ಸಂಘದ ಹೆಸರಿನಲ್ಲಿ ಸದ್ಯರನ್ನಾಗಿ ನೋಂದಾಯಿಸಕೊಳ್ಳುವುದಾಗಿ ಹೇಳಿ ಸುಮಾರು 1000 ಜನರ ಬಳಿ ತಲಾ 15 ಸಾವಿರ ರೂ.ಗಳನ್ನು ಪಡೆದುಕೊಂಡಿದ್ದಾನೆ. ಜೊತೆಗೆ ಅವರಿಗೆ ನಿವೇಶನದ ನಕಲಿ ಹಕ್ಕು ಪತ್ರವನ್ನು ನೀಡಿದ್ದಾರೆ. ಇವನ ಮಾತು ನಂಬಿ ಸುಮಾರು ಸಾವಿರ ಜನ ಮೋಸ ಹೋಗಿದ್ದಾರೆ.
ಅಲ್ಲದೇ ಈಗಾಗಲೇ 50 ಜನರಿಗೆ ನಕಲಿ ಹಕ್ಕು ಪತ್ರಗಳನ್ನು ಹಂಚಿದ್ದಾರೆ. ಈ ಪತ್ರದಲ್ಲಿ ಬಿಡಿಎ ನಕಲಿ ರಬ್ಬರ್ ಸ್ಟಾಂಪ್ ಹಾಕಲಾಗಿದೆ ಹಾಗೂ ಅಯುಕ್ತರ ಸಹಿಯನ್ನು ಕೂಡ ನಕಲಿ ಮಾಡಲಾಗಿದೆ. ಜನರಿಗೆ ನಿವೇಶನ ಪತ್ರ ನೀಡಿ ಅವರಿಂದ 50 ಸಾವಿರದಿಂದ 3 ಲಕ್ಷದವರೆಗೆ ಹಣ ಪಡೆದಿದ್ದಾರೆ. ಈಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಸುಮಾರು 3000 ಜನಕ್ಕೆ ಈ ರೀತಿ ಮೋಸ ಮಾಡುವ ಯೋಜನೆ ಹೊಂದಿದ್ದರು ಎಂದು ಒಪ್ಪಿಕೊಂಡಿದ್ದಾರೆ. ಈ ಸಂಬಂಧ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
3 ಲಕ್ಷ ಕೊಟ್ಟು ಒಟ್ಟು ಆರು ನಿವೇಶದ ನಕಲಿ ಹಕ್ಕು ಪತ್ರಗಳನ್ನು ಪಡೆದುಕೊಂಡ ವ್ಯಕ್ತಿಯೊಬ್ಬರು ಪತ್ರದ ಅಸಲೀತವನ್ನು ಚೆಕ್ ಮಾಡಲು ಬೆಂಗಳೂರು ಪ್ರಾಧಿಕಾರಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅವರು ಅಧಿಕಾರಿಗಳಿಗೆ ಹಕ್ಕು ಪತ್ರವನ್ನು ನೀಡಿದಾಗ ಇವು ನಕಲಿ ಪತ್ರ ಎಂದು ತಿಳಿದಿದೆ. ಆಗ ತಕ್ಷಣ ಅಧಿಕಾರಿಗಳು ಕಾರ್ಯಚರಣೆ ಇಳಿದು ನಕಲಿ ಜಾಲವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ವಿಜಯಾನಂದ ಕಚೇರಿಗೆ ದಾಳಿ ಮಾಡಿ ನಕಲಿ ಹಕ್ಕು ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು: ಮಹಾನಗರದಲ್ಲಿ ಬಿಡಿಎ ಕಾಯಿದೆ ಉಲ್ಲಂಘನೆ ಮಾಡಿ ಮನೆ ಕಟ್ಟಿಕೊಂಡಿರುವ ಮಂದಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ನಿಯಮ ಉಲ್ಲಂಘಿಸಿನೆ ಮನೆ ಕಟ್ಟಿದ್ದರೆ ದಂಡ ಕಟ್ಟಿಸಿಕೊಂಡು ಕಾನೂನು ಬದ್ಧ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ.
ಇಂದು ಸಿಎಂ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಅಲ್ಲದೇ ಬಿಡಿಎ 38 ಜ ಕಾಯಿದೆ ತಿದ್ದುಪಡಿ ಸುಗ್ರೀವಾಜ್ಞೆಗೆ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ.
ತಿದ್ದುಪಡಿ ಅನ್ವಯ 12 ವರ್ಷದ ಹಿಂದೆ ಮನೆ ಕಟ್ಟಿಕೊಂಡಿದ್ದವರಿಗೆ ಮಾತ್ರ ಈ ಸೌಲಭ್ಯ ಲಭ್ಯವಾಗಲಿದೆ. 20*30 ನಿವೇಶನದಲ್ಲಿ ಮನೆ ಕಟ್ಟಿಕೊಂಡಿರುವವರು ಮಾರುಕಟ್ಟೆ ಮೌಲ್ಯದ ಶೇ.10ರಷ್ಟು ದಂಡ ಕಟ್ಟಬೇಕಿದೆ. 30*40 ನಿವೇಶನದಲ್ಲಿ ಮನೆ ಕಟ್ಟಿಕೊಂಡಿರುವವರು ಮಾರುಕಟ್ಟೆ ಮೌಲ್ಯದ ಶೇ.20ರಷ್ಟು ದಂಡ ಪಾವತಿಸಬೇಕು. 40*50 ಹಾಗೂ 50*80 ನಿವೇಶನದಲ್ಲಿ ಮನೆ ಕಟ್ಟಿಕೊಂಡಿರುವವರು ಶೇ.40 ರಷ್ಟು ಮಾರುಕಟ್ಟೆ ಮೌಲ್ಯದ ದಂಡ ಕಟ್ಟ ಬೇಕಿದೆ.
ಉಳಿದಂತೆ 50*80 ನಂತರದ ಕಟ್ಟಡಗಳಿಗೆ ಯಾವುದೇ ಸಕ್ರಮ ಮಾಡಲ್ಲ. ಖಾಲಿ ನಿವೇಶನ ಮತ್ತು ಹೊಸದಾಗಿ ಮನೆ ಕಟ್ಟಿಕೊಂಡಿರುವವರಿಗೆ ಈ ಸೌಲಭ್ಯ ಅನ್ವಯ ಆಗುವುದಿಲ್ಲ. ಇದರಿಂದ ಅಂದಾಜು 50 ಸಾವಿರ ಮಂದಿಗೆ ಲಾಭ ಆಗಲಿದೆ.
ಬೆಂಗಳೂರು: ಬಿಡಿಎಯು ಪೆರಿಪೆರಲ್ ರಿಂಗ್ ರಸ್ತೆ ಯೋಜನೆಗೆ ಸ್ವಾಧೀನ ಪಡೆಸಿಕೊಳ್ಳುತ್ತಿರುವ ರೈತರ ಭೂಮಿಗೆ ನ್ಯಾಯಯುತವಾದ ಪರಿಹಾರಕ್ಕೆ ಆಗ್ರಹಿಸಿ, ನೂರಾರು ರೈತರು ಬಿಡಿಎ ಮುಂದೆ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಮುಂದುವರಿಸಿದ್ದಾರೆ.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಈ ಸತ್ಯಾಗ್ರಹ ನಡೆಯುತ್ತಿದೆ. 15 ವರ್ಷದ ಹಿಂದಿನ ಯೋಜನೆಗೆ ತ್ವರಿತಗತಿಯಲ್ಲಿ ಸರ್ಕಾರ ಪರಿಹಾರ ನೀಡಬೇಕು. 65 ಕಿಲೋ ಮೀಟರ್ ಯೋಜನೆಗಾಗಿ ರೈತರ ಭೂಮಿಯನ್ನು ಬಿಡಿಎ ವಶಪಡಿಸಿಕೊಂಡಿತ್ತು. ಆದರೆ ಸ್ವಾಧೀನ ಮಾಡಿಕೊಂಡಿರುವ ರೈತರ ಭೂಮಿಗೆ ಸರ್ಕಾರ ನಿಗದಿತ ಬೆಲೆ ನೀಡಿಲ್ಲ. ರೈತರ ಭೂಮಿಗೆ ಎಕರೆಗೆ 5 ಕೋಟಿ ಪರಿಹಾರ ನೀಡಬೇಕು ಎಂಬುದು ಭೂಮಿ ಕಳೆದುಕೊಳ್ಳುತ್ತಿರುವ ರೈತರ ಆಗ್ರಹವಾಗಿದೆ.
ರೈತರ ಅಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಬಂದ ಸಿಎಂ ರಾಜಕೀಯವ ಕಾರ್ಯದರ್ಶಿ ಎಸ್. ಆರ್ ವಿಶ್ವನಾಥ್ ರೈತರನ್ನು ಮನವೊಲಿಸುವ ಪ್ರಯತ್ನ ಮಾಡಿದರು. ಈ ಬಗ್ಗೆ ಸರ್ಕಾರದ ಅಡ್ವಕೇಟ್ ಜನರಲ್ ಜೊತೆ ಮಾತನಾಡುತ್ತೇನೆ. ಅದಕ್ಕೂ ಮುನ್ನ ನಿಮ್ಮ ರೈತ ಮುಖಂಡರ ಜೊತೆ ಮಾತನಾಡಿ, ಸಾಧಕ-ಬಾಧಕಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಚರ್ಚೆ ಮಾಡಿದ ಬಳಿಕ ನೇರವಾಗಿ ಸಿಎಂ ಜೊತೆ ಮಾತನಾಡುತ್ತೇನೆ. ಈ ಸಮಸ್ಯೆಗೆ ಆದಷ್ಟು ಬೇಗ ಪರಿಹಾರ ಕಲ್ಪಿಸಿಕೊಡಬೇಕು ಎಂಬುದು ನನ್ನ ಅಪೇಕ್ಷೆ ಕೂಡ ಎಂದು ಹೇಳಿದ್ರು.
ರೈತರ ಜೊತೆ ಮಾತನಾಡುವ ವೇಳೆ, ಎಸ್ ಆರ್ ವಿಶ್ವನಾಥ್ ಅವರನ್ನು ಕೆಲ ರೈತರು ತರಾಟೆಗೆ ತೆಗೆದುಕೊಂಡ ಪ್ರಸಂಗವು ನಡೆಯಿತು. ಯಾವುದೇ ಕಾರಣಕ್ಕೂ ಅಹೋರಾತ್ರಿ ಧರಣಿ ಸತ್ಯಾಗ್ರಹ ಕೈ ಬಿಡಲ್ಲ ಎಂದು ಹೇಳಿ ರೈತರು ಬಿಡಿಎ ಮುಂದೆಯೇ ಅಡುಗೆ ಮಾಡುತ್ತಾ ಪ್ರತಿಭಟಿಸಿದರು.
ಬೆಂಗಳೂರು: ಉಪಚುನಾವಣೆ ನೀತಿ ಸಂಹಿತೆ ಮುಗಿದ ಬಳಿಕ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮತ್ತೆ ಒತ್ತುವರಿ ತೆರವು ಕಾರ್ಯಚರಣೆ ಆರಂಭಿಸಿದೆ.
ನಾಗವಾರ ಗ್ರಾಮದ ಸರ್ವೆ ನಂಬರ್ 75ರಲ್ಲಿ ಹೆಚ್‍ಬಿಆರ್ 2ನೇ ಹಂತ ಬಡಾವಣೆ ನಿರ್ಮಾಣಕ್ಕಾಗಿ ಪ್ರಾಧಿಕಾರ ನೋಟಿಫಿಕೇಶನ್ ಹೊರಡಿಸಿದ್ದ ಜಾಗದ ಒತ್ತುವರಿಯಾಗಿತ್ತು. ಈ ಒತ್ತುವರಿಯಲ್ಲಿ 3 ಅಂತಸ್ತಿನ ಕಟ್ಟಡ, ಹಲವು ಶೆಡ್‍ಗಳ ನಿರ್ಮಾಣವಾಗಿತ್ತು. ಎಲ್ಲವನ್ನ ಇಂದು ಬಿಡಿಎ ತನ್ನ ವಶಕ್ಕೆ ಪಡೆದಿದೆ. ಸುಮಾರು 6 ಎಕ್ರೆ 3 ಗುಂಟೆ ಬಿಡಿಎಗೆ ಸೇರಬೇಕಾದ ಜಾಗ ಒತ್ತುವರಿಯಾಗಿದ್ದು, ಎಲ್ಲಾ ಜಾಗವನ್ನ ವಶಕ್ಕೆ ಪಡೆಯಲಾಗಿದೆ. ಸುಮಾರು 320 ಕೋಟಿ ರೂ. ಬೆಲೆ ಬಾಳುವ ಜಾಗವನ್ನು ಒತ್ತುವರಿ ಮಾಡಿಕೊಂಡಿರೋ ಸ್ಥಳೀಯರಿಂದ ಜಾಗವನ್ನು ವಶಕ್ಕೆ ಪಡೆಯಲಾಯಿತು.
ಈ ವೇಳೆ ಮಾತನಾಡಿದ ಬಿಡಿಎ ಆಯುಕ್ತ ಪ್ರಕಾಶ್, ಇಷ್ಟು ದಿನ ನೀತಿ ಸಂಹಿತೆ ಇತ್ತು. ಆದ್ದರಿಂದ ಇಷ್ಟು ದಿನ ಒತ್ತುವರಿ ತೆರವಿಗೆ ಮುಂದಾಗಿರಲಿಲ್ಲ. ಒಟ್ಟು ನಗರದಲ್ಲಿ 5 ಸಾವಿರ ಕೋಟಿ ರೂ. ಮೊತ್ತದ ಜಾಗ ಒತ್ತುವರಿಯಾಗಿದೆ. ಇನ್ನು 6 ತಿಂಗಳೊಳಗೆ ಬಿಡಿಎಗೆ ಸೇರಬೇಕಾದ ಎಲ್ಲಾ ಜಾಗವನ್ನು ವಶಕ್ಕೆ ಪಡೆಯುತ್ತೇವೆ. ಇಂದಿನಿಂದ ಒತ್ತುವರಿ ತೆರವು ಆರಂಭ ಮಾಡಿದ್ದೇವೆ. ನಾಗಾವಾರದಲ್ಲಿ 6 ಎಕ್ರೆ 17 ಗುಂಟೆ ಜಾಗ ಒತ್ತುವರಿಯಾಗಿದೆ. ಸುಮಾರು 320 ಕೋಟಿ ರೂ. ಬೆಲೆಬಾಳುವ ಜಾಗ ಇದಾಗಿದೆ. ಈ ಜಾಗವನ್ನು ಇಂದು ಇದನ್ನು ವಶಕ್ಕೆ ಪಡೆದಿದ್ದೇವೆ. ಸುಮಾರು 20 ವರ್ಷಗಳಿಂದಲೂ ಈ ಜಾಗ ಹೀಗೇ ಇತ್ತು. ಈ ಹಿನ್ನೆಲೆ ಇಂದು ಜಾಗವನ್ನು ನಮ್ಮ ವಶಕ್ಕೆ ಪಡೆದಿದ್ದೇವೆ ಎಂದರು.
ಬೆಂಗಳೂರು: ನಗರ ಹೊರವಲಯದ ಹುಳಿಮಾವು ಕೆರೆ ಒಡೆದು ದೊಡ್ಡ ಅವಾಂತರ ಸೃಷ್ಟಿಯಾಗಿದೆ. ಸುಮಾರು 3 ಸಾವಿರಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿದ್ದು, ಶಾಂತಿನಿಕೇತನ, ಕೃಷ್ಣನಗರ, ಸೇರಿ ಹಲವು ಲೇಔಟ್‍ಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿದೆ. ರಸ್ತೆಯಲ್ಲಿ ನಿಲ್ಲಿಸಿದ್ದ ಕಾರು, ಬೈಕ್‍ಗಳು ನೀರಿನಲ್ಲಿ ಮುಳುಗಿ ಹೋಗಿವೆ. ಬಿಳೇಕಳ್ಳಿ ಬಳಿಯ ನ್ಯಾನೋ ಆಸ್ಪತ್ರೆಗೂ ನೀರು ನುಗ್ಗಿದ್ದು, ರೋಗಿಗಳು ಪರದಾಡುತ್ತಿದ್ದಾರೆ.
140 ಎಕರೆ ವಿಸ್ತೀರ್ಣದಲ್ಲಿರುವ ಹುಳಿಮಾವು ಕೆರೆಯನ್ನು ಬಿಡಿಎ ವತಿಯಿಂದ ಸ್ವಚ್ಛಗೊಳಿಸಲಾಗುತ್ತಿತ್ತು. ಈ ವೇಳೆ ಜೆಸಿಬಿಯಿಂದ ಕೆರೆಯ ಕಟ್ಟೆಗೆ ಡ್ಯಾಮೇಜ್ ಆಗಿದ್ದರಿಂದ ನೀರು ಜನವಸತಿ ಪ್ರದೇಶಕ್ಕೆ ನುಗ್ಗಿದೆ. ಬಿಬಿಎಂಪಿ ಗಮನಕ್ಕೆ ತರದೇ ಸ್ವಚ್ಛತಾ ಕಾರ್ಯ ಮಾಡಲಾಗುತ್ತಿತ್ತು ಎಂದು ಹೇಳಲಾಗಿದೆ.
ಬಿಡಿಎದವರು ನಮ್ಮ ಗಮನಕ್ಕೂ ತರದೇ ಈ ಕೆಲಸ ಮಾಡಿದ್ದಾರೆ ಎಂದು ಸ್ಥಳೀಯ ಕಾರ್ಪೊರೇಟರ್ ಭಾಗ್ಯಲಕ್ಷ್ಮಿ ಹೇಳುತ್ತಾರೆ. ಆದರೆ ಮೇಯರ್ ಗೌತಮ್ ಕುಮಾರ್, ಇದು ಕಿಡಿಗೇಡಿಯ ಕೃತ್ಯ ಅಂತ ಆರೋಪಿಸಿದ್ದಾರೆ. ಅಲ್ಲದೇ ಹಾನಿಯಾದ ಮನೆಗಳಿಗೆ ಅಗತ್ಯ ಪರಿಹಾರ ನೀಡುವದಾಗಿ ಭರವಸೆ ನೀಡಿದ್ದಾರೆ.
ಸದ್ಯ ನೀರಿನಲ್ಲಿ ಸಿಲುಕಿದ ಜನರನ್ನ ಬೇರೆಡೆಗೆ ಸ್ಥಳಾಂತರ ಮಾಡಲಾಗಿದ್ದು, ಬಿಬಿಎಂಪಿ ವತಿಯಿಂದ ಊಟ ಹಾಗೂ ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಡಿಸಿಪಿ, ಎಸಿಪಿ, ಕೆಎಸ್‍ಆರ್‍ಪಿ, ಎನ್‍ಡಿಆರ್‍ಎಫ್, ಸಿಆರ್ ಪಿಎಫ್‍ನಿಂದ ಕೆರೆ ಒಡೆದು ಹೋದ ಸ್ಥಳದಲ್ಲಿ ಮಣ್ಣು ಹಾಕಿ ಹರಿಯುವ ನೀರನ್ನ ತಡೆಯುವ ಕಾರ್ಯಚರಣೆ ನಡೆಯುತ್ತಿದೆ. ಬಿಡಿಎ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಲು ಪಾಲಿಕೆ ಮುಂದಾಗಿದೆ.