Tag: BDA

  • ಮೊನ್ನೆ ವಿಶ್ವನಾಥ್‌, ಇಂದು ಸಿಎಂ – ಎರಡು ಬಾರಿ ಸಾಲುಮರದ ತಿಮ್ಮಕ್ಕಗೆ ನಿವೇಶನ ಕ್ರಯ ಪತ್ರ ಹಂಚಿದ್ದು ಯಾಕೆ?

    ಮೊನ್ನೆ ವಿಶ್ವನಾಥ್‌, ಇಂದು ಸಿಎಂ – ಎರಡು ಬಾರಿ ಸಾಲುಮರದ ತಿಮ್ಮಕ್ಕಗೆ ನಿವೇಶನ ಕ್ರಯ ಪತ್ರ ಹಂಚಿದ್ದು ಯಾಕೆ?

    ಬೆಂಗಳೂರು: ಬಿಡಿಎ ಮಂಜೂರು ಮಾಡಿರುವ ನಿವೇಶನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶತಾಯುಷಿ ಸಾಲುಮರದ ತಿಮ್ಮಕ್ಕ ಅವರಿಗೆ ಹಸ್ತಾಂತರಿಸಿದರು.

    ಕೆಲ ದಿನಗಳ ಹಿಂದಷ್ಟೇ ತಿಮ್ಮಕ್ಕ ಸಿಎಂ ಅವರನ್ನು ಭೇಟಿ ಮಾಡಿದ್ದರು. ಸಿಎಂ ಸೂಚನೆ ಮೇರೆಗೆ ನಿವೇಶನ ಹಂಚಿಕೆ ಪತ್ರವನ್ನು ಬಿಡಿಎ ತಿಮ್ಮಕ್ಕನಿಗೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಾಲುಮರದ ತಿಮ್ಮಕ್ಕನಿಗೆ ನಿವೇಶನ ಕ್ರಯ ಪತ್ರವನ್ನು ಹಸ್ತಾಂತರಿಸಿದ್ದಾರೆ.

    ಇಂದು ಮುಂಜಾನೆ ರೇಸ್ ಕೋರ್ಸ್ ನಿವಾಸದಲ್ಲಿ ಸಾಲುಮರದ ತಿಮ್ಮಕ್ಕ ಹಾಗೂ ಆಕೆಯ ಸಾಕು ಪುತ್ರನಿಗೆ ಸಿಎಂ ಕರಾರು ಪತ್ರ ನೀಡಿದರು. ನಾಡಪ್ರಭು ಕೆಂಪೇಗೌಡ ಬಡಾವಣೆಯ 7ನೇ ಬ್ಲಾಕ್ ಜೆ ಸೆಕ್ಟರ್‌ನಲ್ಲಿ ನಿವೇಶನ ಹಂಚಿಕೆ ಆಗಿದ್ದು, ಒಟ್ಟು 50*80 ಚದರ ಅಡಿಯ ನಿವೇಶನ ನೀಡಿದೆ. ಇದನ್ನೂ ಓದಿ: ಅಸ್ಸಾಂ ಪ್ರವಾಹ- 10 ಮಂದಿ ಬಲಿ, ಸಾವಿನ ಸಂಖ್ಯೆ 118ಕ್ಕೆ ಏರಿಕೆ

    ಎರಡು ಬಾರಿ ಬಿಡಿಎ ನಿವೇಶನವನ್ನು ಹಸ್ತಾಂತರಿಸಿದ್ದು ಯಾಕೆ: ವೃಕ್ಷಮಾತೆ ಸಾಲುಮರದ ತಿಮ್ಮಕ್ಕಗೆ ಸರ್ಕಾರದಿಂದ ಮಂಜೂರಾದ ಬಿಡಿಎ ನಿವೇಶನದ ಕ್ರಯಪತ್ರವನ್ನು ಎರಡೆರಡು ಸಲ ಹಸ್ತಾಂತರ ಮಾಡಿದ ಪ್ರಸಂಗ ನಡೆದಿದೆ. ನಿವೇಶನದ ಅದೇ ಕ್ರಯಪತ್ರವನ್ನು ಒಮ್ಮೆ ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥರಿಂದಲೂ, ಮತ್ತೊಮ್ಮೆ ಸಿಎಂ ಬೊಮ್ಮಾಯಿ ಅವರಿಂದಲೂ ಹಸ್ತಾಂತರ ಮಾಡಲಾಗಿದೆ. ರೇಸ್ ಕೋರ್ಸ್ ನಿವಾಸದಲ್ಲಿಂದು ಸಿಎಂ ಬೊಮ್ಮಾಯಿ, ಸಾಲುಮರದ ತಿಮ್ಮಕ್ಕಗೆ ಬಿಡಿಎ ನಿವೇಶನದ ಕ್ರಯ ಪತ್ರವನ್ನು ಹಸ್ತಾಂತರಿಸಿದರು. ಆದರೆ ಮೊನ್ನೆ 22ರಂದೇ ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್, ಸಿಎಂ ಸೂಚನೆ ಮೇರೆಗೆ ತಿಮ್ಮಕ್ಕಗೆ ಬಿಡಿಎ ಕಚೇರಿಯಲ್ಲಿ ನಿವೇಶನದ ಕ್ರಯಪತ್ರ ಹಸ್ತಾಂತರಿಸಿದ್ದರು.

    ಆದರೆ ನಿವೇಶನದ ಕ್ರಯಪತ್ರವನ್ನು ಸಿಎಂ ಅವರ ಕೈಯಿಂದಲೇ ಪಡೆಯಬೇಕೆಂಬ ಆಸೆ ಇಟ್ಕೊಂಡಿದ್ರು ತಿಮ್ಮಕ್ಕ. ಹೀಗಾಗಿ ಇಂದು ಸಿಎಂ‌ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮತ್ತೊಮ್ಮೆ ಅವರಿಂದ ಕ್ರಯಪತ್ರ ಪಡೆದುಕೊಂಡಿದ್ದಾರೆ. ನಾಡಪ್ರಭು ಕೆಂಪೇಗೌಡ ಬಡಾವಣೆಯ 7 ನೇ ಬ್ಲಾಕ್ ಜೆ ಸೆಕ್ಟರ್‌ನಲ್ಲಿ 50*80 ಚದರ ಅಡಿಯ ನಿವೇಶನವನ್ನು ತಿಮ್ಮಕ್ಕ ಅವರಿಗೆ ಹಂಚಿಕೆ ಮಾಡಲಾಗಿದೆ.

    Live Tv 

  • ಸಾಲುಮರದ ತಿಮ್ಮಕ್ಕಗೆ BDAಯಿಂದ ನಿವೇಶನ ಹಂಚಿಕೆ

    ಸಾಲುಮರದ ತಿಮ್ಮಕ್ಕಗೆ BDAಯಿಂದ ನಿವೇಶನ ಹಂಚಿಕೆ

    ಬೆಂಗಳೂರು: ಶತಾಯುಷಿ ಸಾಲುಮರದ ತಿಮ್ಮಕ್ಕ ಅವರಿಗೆ ಬಿಡಿಎ ವತಿಯಿಂದ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 50*80 ಅಳತೆಯ ನಿವೇಶನವನ್ನು ಬುಧವಾರ ನೀಡಲಾಯಿತು.

    ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಮತ್ತು ಆಯುಕ್ತ ರಾಜೇಶ್ ಗೌಡ ಅವರು ನಿವೇಶನದ ನೋಂದಣಿ ಪತ್ರವನ್ನು ಸಾಲುಮರದ ತಿಮ್ಮಕ್ಕ ಅವರಿಗೆ ಹಸ್ತಾಂತರ ಮಾಡಿದರು. ಇದನ್ನೂ ಓದಿ: ಪಠ್ಯಪುಸ್ತಕ ಪರಿಷ್ಕರಣೆ ಸಂಬಂಧ ಬೊಮ್ಮಾಯಿಗೆ ನಿರ್ಧಾರ ತೆಗೆದುಕೊಳ್ಳೋ ಧೈರ್ಯವಿಲ್ಲ: ಮುಖ್ಯಮಂತ್ರಿ ಚಂದ್ರು

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸೂಚನೆ ಮೇರೆಗೆ ಬುಧವಾರ ಕೆಂಪೇಗೌಡ ಬಡಾವಣೆಯ 7 ನೇ ಬ್ಲಾಕ್‌ನಲ್ಲಿರುವ ನಿವೇಶನದ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಯಿತು. ನಂತರ ಬಿಡಿಎ ಅಧ್ಯಕ್ಷರು ಮತ್ತು ಆಯುಕ್ತರು ಪರಿಸರ ಪ್ರೇಮಿ, ಶತಾಯುಷಿ ತಿಮ್ಮಕ್ಕ ಅವರನ್ನು ಸನ್ಮಾನಿಸಿ ನಿವೇಶನದ ನೋಂದಣಿ ಪತ್ರವನ್ನು ವಿತರಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಸಾಲುಮರದ ತಿಮ್ಮಕ್ಕ, ನನಗೆ ಬಿಡಿಎ ವತಿಯಿಂದ ನಿವೇಶನವನ್ನು ನೀಡಿರುವುದಕ್ಕೆ ಸಂತಸವಾಗುತ್ತಿದೆ. ಎಲ್ಲರೂ ಪರಿಸರ ರಕ್ಷಣೆಯತ್ತ ಕಾಳಜಿ ವಹಿಸಬೇಕು ಮತ್ತು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಅವರಲ್ಲಿ ಪರಿಸರ ಕಾಳಜಿ ಮೂಡುವಂತೆ ಮಾಡಬೇಕೆಂದು ಹಾರೈಸಿದರು. ಇದನ್ನೂ ಓದಿ: ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದ JDS ಇಬ್ಬರು ಶಾಸಕರು ಉಚ್ಚಾಟನೆ

    ಇದೇ ವೇಳೆ ಮಾತನಾಡಿದ ವಿಶ್ವನಾಥ್ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸೂಚನೆ ಮೇರೆಗೆ ಬಿಡಿಎ ವತಿಯಿಂದ ನಮ್ಮೆಲ್ಲರ ಮಾರ್ಗದರ್ಶಿಯಾಗಿರುವ ಸಾಲುಮರದ ತಿಮ್ಮಕ್ಕ ಅವರಿಗೆ ನಿವೇಶನ ನೀಡಿರುವುದು ಸಂತಸ ತಂದಿದೆ ಎಂದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಆನಂದ್, ಉಪಕಾರ್ಯದರ್ಶಿ ಡಾ.ಮಧು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಇದ್ದರು.

    Live Tv

  • ಬ್ರೋಕರ್ ಮೋಹನ್ ಮನೆಯಲ್ಲಿತ್ತು 5 ಕೆಜಿ ಚಿನ್ನ – ಎಸಿಬಿ ಅಧಿಕಾರಿಗಳೇ ಶಾಕ್

    ಬ್ರೋಕರ್ ಮೋಹನ್ ಮನೆಯಲ್ಲಿತ್ತು 5 ಕೆಜಿ ಚಿನ್ನ – ಎಸಿಬಿ ಅಧಿಕಾರಿಗಳೇ ಶಾಕ್

    ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರು ಸರ್ಕಾರದಿಂದ ಯಾವುದೇ ಯೋಜನೆ ಪಡೆಯಬೇಕೆಂದರೂ ಮಧ್ಯವರ್ತಿಗಳ ಮೂಲಕವೇ ಹೋಗಬೇಕಿದೆ. ತಾನು ಯೋಜನೆಯ ಪ್ರಯೋಜನ ಪಡೆಯಬೇಕಾದರೆ, ಇಷ್ಟು ಕಮಿಷನ್ ಕೊಡಬೇಕು ಎಂದು ಮಧ್ಯವರ್ತಿಯೇ ನಿಗದಿ ಮಾಡುತ್ತಾರೆ. ಒಮ್ಮೆ ಅವರು ಕಮಿಷನ್ ಪಡೆದು ಒಪ್ಪಿಗೆ ಕೊಟ್ಟರೆ, ಅಲ್ಲಿಗೆ ಆ ಕೆಲಸ ಮುಗಿಯಿತು ಎಂದೇ ಅರ್ಥ.

    ಹೀಗೆ ಕಮಿಷನ್ ಪಡೆಯುತ್ತಿರುವ ಮಧ್ಯವರ್ತಿಗಳು ಅಧಿಕಾರಿಗಳ ಸರಿಸಮನಾಗಿ ಆಸ್ತಿ ಮಾಡುತ್ತಿರುವುದು ಆಗಾಗ್ಗೆ ಬೆಳಕಿಗೆ ಬರುತ್ತಿದೆ. ಮಂಗಳವಾರ ಬಿಡಿಎ ಕಚೇರಿಯ ಮಧ್ಯವರ್ತಿ ಮೋಹನ್ ಎಂಬವರ ಮನೆ ಮೇಲೆ ಎಸಿಬಿ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಲಕ್ಷಾಂತರ ಮೌಲ್ಯದ ಚಿನ್ನ, ಬೆಳ್ಳಿ ವಸ್ತುಗಳು ಪತ್ತೆಯಾಗಿರುವುದನ್ನು ಕಂಡು ಅಧಿಕಾರಿಗಳೇ ದಂಗಾಗಿದ್ದಾರೆ.

    ಬ್ರೋಕರ್ ಮೋಹನ್ ಎಂಬವರ ಮನೆಯಲ್ಲಿ 5 ಕೆಜಿ ಚಿನ್ನ, ಬೆಳ್ಳಿ ತಟ್ಟೆ, ಲೋಟ, ದೀಪದ ಕಂಬಗಳು ಪತ್ತೆಯಾಗಿದೆ. ಶೋಧ ಕಾರ್ಯ ಮುಂದುವರಿದಿದ್ದು, ಇದರೊಂದಿಗೆ ಅಧಿಕಾರಿಗಳು ಚಿನ್ನ – ಬೆಳ್ಳಿ ಖರೀದಿಸಿದ ಮೂಲ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

    ಈಚೆಗಷ್ಟೇ ಬಿಡಿಎ ಅಧ್ಯಕ್ಷ ವಿಶ್ವನಾಥ್ ಸರ್ಕಾರಿ ಯೋಜನೆ ದಾಖಲೆಗಳೆಲ್ಲವೂ ಮಧ್ಯವರ್ತಿಗಳ ಮನೆಯಲ್ಲಿವೆ ಎಂದು, ಖುದ್ದು ಮೋಹನ್ ವಿರುದ್ಧ ಆರೋಪ ಮಾಡಿದ್ದರು.

    ಈ ಸಂಬಂಧ ವಿಶ್ವನಾಥ್ ಹಾಗೂ ಹಿಂದಿನ ಬಿಡಿಎ ಆಯುಕ್ತ ಮಹದೇವ್ ಹಾಗೂ ಬ್ರೋಕರ್ ಮೋಹನ್ ಮಧ್ಯೆ ದೊಡ್ಡ ಮಟ್ಟದ ವಾರ್ ನಡೆದಿತ್ತು. ಆದರೂ ಬಿಡಿಎನಲ್ಲಿ ಗಟ್ಟಿ ನೆಲೆಯೂರಿದ್ದ ಮೋಹನ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿರಲಿಲ್ಲ. ಇತ್ತೀಚೆಗೆ ಅರ್ಕಾವತಿ ವಿಚಾರದಲ್ಲೂ ಮೋಹನ್ ಕೈಚಳಕ ಎಂದು ಸಂಶಯ ವ್ಯಕ್ತವಾಗಿದೆ.

    ಸ್ವತಃ ದೂರು ಕೊಟ್ಟಿದ್ದರು : ಬಿಡಿಎ ಭ್ರಷ್ಟಾಚಾರ ಸಂಬಂಧ ವಿಶ್ವನಾಥ್ ಈ ಹಿಂದೆಯೇ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು. ಕೆಳಹಂತದ ಅಧಿಕಾರಿಗಳು ಲಂಚ ಇಲ್ಲದೇ ಕೆಲಸ ಮಾಡೋದಿಲ್ಲ ಎಂಬ ದೂರುಗಳಿವೆ. ಏನೇ ಕ್ರಮ ತೆಗೆದುಕೊಂಡರೂ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತರುತ್ತಾರೆ. ಅಂಥವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆರೋಪಿಸಿದ್ದರು. ಇದೆ ಮೊದಲ ಬಾರಿ ಬಿಡಿಎ ಬ್ರೋಕರ್‌ಗಳ ಮನೆ ಮೇಲೆ ಎಸಿಬಿ ದಾಳಿ

  • ಬಿಡಿಎನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ – ಮೊನ್ನೆ 300 ಕೋಟಿ, ಇಂದು 200 ಕೋಟಿ ಅಕ್ರಮ

    ಬಿಡಿಎನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ – ಮೊನ್ನೆ 300 ಕೋಟಿ, ಇಂದು 200 ಕೋಟಿ ಅಕ್ರಮ

    ಬೆಂಗಳೂರು: ಭ್ರಷ್ಟರ ಕೂಪ ಬಿಡಿಎ ಕಚೇರಿಗಳ ಮೇಲೆ ಎಸಿಬಿ ದಾಳಿ ಮುಂದುವರಿದಿದೆ. ಬಿಡಿಎ ಬೀಲಕ್ಕೆ ಕೈ ಹಾಕಿರೋ ಎಸಿಬಿ ಅಧಿಕಾರಿಗಳು ಬಗೆದಷ್ಟು ಅಕ್ರಮಗಳು ಬಯಲಾಗುತ್ತಿವೆ.

    3 ದಿನಗಳ ಗ್ಯಾಪ್ ಬಳಿಕ ಇವತ್ತು ಮತ್ತೆ ಬಿಡಿಎನಲ್ಲಿ ಸರ್ಚಿಂಗ್ ನಡೀತು. ಬಿಡಿಎ ಕೇಂದ್ರ ಕಚೇರಿಯಲ್ಲಿ ಲ್ಯಾಂಡ್ ಅಕ್ವಿಸಿಷನ್ ಅಧಿಕಾರಿ ಸೌಜನ್ಯ ಕಚೇರಿ, ಹೆಚ್.ಎಸ್.ಆರ್ ಲೇಔಟ್, ಆರ್.ಟಿ.ನಗರ ಬಿಡಿಎ ಕಚೇರಿ, ವಿಜಯನಗರ ಬಿಡಿಎ ಕಚೇರಿ, ಬನಶಂಕರಿ ಬಿಡಿಎ ಕಚೇರಿ ಮೇಲೆ ಪ್ರತ್ಯೇಕ ತಂಡಗಳಿಂದ ದಾಳಿ ಮಾಡಿ ಶೋಧ ಕಾರ್ಯ ಮಾಡಲಾಯ್ತು.

    ನಾಲ್ಕು ಕಚೇರಿಗಳಿಂದ ಎಸಿಬಿಗೆ ಸಾಲು ಸಾಲು ದೂರುಗಳು ಬಂದಿದ್ದವು. ಎಸಿಬಿ ಅಧಿಕಾರಿಗಳು ದೂರುದಾರರ ಬಳಿಯೇ ಮಾಹಿತಿ ಹಾಗೂ ದಾಖಲೆಗಳನ್ನು ಕಲೆಹಾಕಿ ಇಂದು ದಾಳಿ ಮಾಡಲಾಯ್ತು. ಬಿಡಿಎ ಕೇಂದ್ರ ಕಚೇರಿ ಮೇಲೆ ದಾಳಿಯಾದ ಬಳಿಕ 30ಕ್ಕೂ ಹೆಚ್ಚು ದೂರು ಬಂದಿದ್ದವು. ಬಂದ ದೂರುಗಳಲ್ಲಿ 20ಕ್ಕೂ ಹೆಚ್ಚು ದೂರುಗಳು ಈ ನಾಲ್ಕು ಬಿಡಿಎ ಕಚೇರಿಗಳದ್ದೇ ಇದ್ದ ಕಾರಣ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ರು. ಇದನ್ನೂ ಓದಿ: ಖಾಸಗಿ ಕ್ರಿಪ್ಟೋ ಕರೆನ್ಸಿ ಸಂಪೂರ್ಣ ನಿಷೇಧ ಮಸೂದೆ ಮಂಡಿಸಲು ಕೇಂದ್ರ ಚಿಂತನೆ?

    ಬಿಡಿಎಯ ಲ್ಯಾಂಡ್ ಅಕ್ವಸಿಷನ್ ಕಚೇರಿಯ ಸಿಸ್ಟಂ ತಡಕಾಡಿದ ಎಸಿಬಿ ಅಧಿಕಾರಿಗಳು ಗೆದ್ದಲಹಳ್ಳಿ, ಅರ್ಕಾವತಿ ಬಡಾವಣೆಗೆ ಸೇರಿದ್ದ ಆ ಎಂಟು ಫೈಲ್‍ಗಳ ಸಾಫ್ಟ್ ಕಾಪಿಗಳನ್ನ ಹಾರ್ಡ್ ಡಿಸ್ಕ್‍ನಲ್ಲಿ ಕಾಪಿ ಮಾಡಿಕೊಂಡು ಪರಿಶೀಲನೆ ನಡೆಸಿದ್ರು. ಲ್ಯಾಂಡ್ ಅಕ್ವಿಸಿಷನ್‍ನಲ್ಲಿ ಬಡಾವಣೆ ನಿರ್ಮಾಣ ಹೆಸ್ರಲ್ಲಿ 100 ಕೋಟಿಯಷ್ಟು ಹಗರಣದ ದಾಖಲೆಗಳು ಇದೀಗ ಎಸಿಬಿ ಕೈಗೆ ಸಿಕ್ಕಿದೆ. ಇದ್ರ ಬೆನ್ನಲ್ಲೇ ಈಗ ಮತ್ತೆ ಸುಮಾರು 200 ಕೋಟಿಗೂ ಅಧಿಕ ಮೌಲ್ಯದ ಅಕ್ರಮದ ದಾಖಲೆಗಳು ಪತ್ತೆ ಆಗಿದೆ.

    ಬಿಡಿಎ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ಬಿಡಿಎ ಅಧಿಕಾರಿಗಳು ಮತ್ತು ಸಿಬ್ಬಂದಿ ಅನರ್ಹ ವ್ಯಕ್ತಿಗಳಿಗೆ ಸೈಟ್‍ಗಳನ್ನ ನೀಡಿರೋದು ಕಂಡುಬಂದಿದೆ. ಹಳೆ ಬಡಾವಣೆಗಳಲ್ಲಿ ನಿವೇಶನಗಳನ್ನ ಹಂಚಿಕೆ ಮಾಡದೇ ಖಾಲಿ ಬಿಟ್ಟು ತಾತ್ಕಲಿಕಾವಾಗಿ ಶೆಡ್ ನಿರ್ಮಾಣ ಮಾಡಲು ಅವಕಾಶ ಕೊಟ್ಟು ಸರ್ಕಾರಕ್ಕೆ ನಷ್ಟ ಉಂಟು ಮಾಡಿರೋದು ಕಂಡು ಬಂದಿದೆ. ಇದನ್ನೂ ಓದಿ: ಕ್ರಿಪ್ಟೋ ಕರೆನ್ಸಿ ನಿಷೇಧದ ಬದಲು ನಿಯಂತ್ರಣ

  • 100 ಕೋಟಿ ಮೌಲ್ಯದ ಆಸ್ತಿ ವಶಕ್ಕೆ ಪಡೆದ BDA

    100 ಕೋಟಿ ಮೌಲ್ಯದ ಆಸ್ತಿ ವಶಕ್ಕೆ ಪಡೆದ BDA

    ಬೆಂಗಳೂರು: ಭೂಕಬಳಿಕೆದಾರರ ವಿರುದ್ಧದ ಕಾರ್ಯಾಚರಣೆಯನ್ನು ಮುಂದುವರಿಸಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಇಂದು ಜೆಪಿ ನಗರದ ಆಲಹಳ್ಳಿಯಲ್ಲಿ ಸುಮಾರು 100 ಕೋಟಿ ರೂಪಾಯಿ ಮೌಲ್ಯದ ತನ್ನ ಆಸ್ತಿಯನ್ನು ಮರುವಶಕ್ಕೆ ಪಡೆದುಕೊಂಡಿದೆ.

    ಜೆಪಿ ನಗರ ಬಡಾವಣೆಯ ಆಲಹಳ್ಳಿಯಲ್ಲಿ ಬಿಡಿಎ ಸ್ವಾಧೀನಪಡಿಸಿಕೊಂಡಿದ್ದ ಸರ್ವೆ ಸಂಖ್ಯೆ 5/7, 6/1, 6/4, 6/5, 7/2, 3, 4 ಮತ್ತು 8 ರ 4 ಎಕರೆ 20 ಗುಂಟೆ ಜಾಗದಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿದ್ದ 40 ಶೆಡ್ ಗಳನ್ನು ಬಿಡಿಎ ದಕ್ಷಿಣ ವಲಯದ ಕಾರ್ಯಪಾಲಕ ಅಭಿಯಂತರ ಎಚ್.ಎಸ್.ಚುಂಚೇಗೌಡ ನೇತೃತ್ವದಲ್ಲಿ ತೆರವುಗೊಳಿಸಲಾಯಿತು. ಇದನ್ನೂ ಓದಿ: ನೂರು ದಿನಗಳ ಆಡಳಿತಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ: ಬಸವರಾಜ ಬೊಮ್ಮಾಯಿ

    ಜೆಪಿ ನಗರ ಬಡಾವಣೆಯ 9 ನೇ ಹಂತದ ನಿರ್ಮಾಣಕ್ಕೆಂದು 1988 ರಲ್ಲಿ ಈ ಜಾಗವನ್ನು ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ಪ್ರಾಥಮಿಕ ಅಧಿಸೂಚನೆಯನ್ನು ಬಿಡಿಎ ಹೊರಡಿಸಿತ್ತು. ಇದಾದ ಬಳಿಕ 1997 ರಲ್ಲಿ ಅಂತಿಮ ಅಧಿಸೂಚನೆಯನ್ನು ಹೊರಡಿಸಿ ಜಾಗವನ್ನು ಸ್ವಾಧೀನಕ್ಕೆ ತೆಗೆದುಕೊಂಡಿತ್ತು. ಆದರೆ, ಪಟ್ಟಭದ್ರ ಹಿತಾಸಕ್ತಿಗಳು ಮತ್ತು ಕೆಲವರು ತಾತ್ಕಾಲಿಕವಾಗಿ 40 ಶೆಡ್‍ಗಳನ್ನು ನಿರ್ಮಾಣ ಮಾಡಿ ಜಾಗ ತಮ್ಮದೆಂದು ಪ್ರತಿಪಾದಿಸಿದ್ದರು. ಇದರ ವಿರುದ್ಧ ಬಿಡಿಎ ನ್ಯಾಯಾಲಯದ ಮೆಟ್ಟಿಲೇರಿದ ಪರಿಣಾಮ ನ್ಯಾಯಾಲಯ ಬಿಡಿಎ ಪರವಾಗಿ ತೀರ್ಪು ನೀಡಿ, ಸದರಿ ಜಾಗವನ್ನು ವಶಪಡಿಸಿಕೊಳ್ಳುವಂತೆ ಇತ್ತೀಚೆಗೆ ಆದೇಶ ನೀಡಿತ್ತು. ಇದನ್ನೂ ಓದಿ: ಇದು ಹುಚ್ಚುತನವೋ ಅಥವಾ ದೇಶದ್ರೋಹವೋ – ಕಂಗನಾ ವಿರುದ್ಧ ವರುಣ್ ಗಾಂಧಿ ಕಿಡಿ

    ನ್ಯಾಯಾಲಯದ ಆದೇಶದ ಮೇರೆಗೆ ಕಾರ್ಯಪಾಲಕ ಅಭಿಯಂತರ ಚುಂಚೇಗೌಡ, ಪೊಲೀಸ್ ವರಿಷ್ಠಾಧಿಕಾರಿ ಭಾಸ್ಕರ್, ಡಿವೈಎಸ್ ಪಿ ರವಿಕುಮಾರ್ ಸೇರಿದಂತೆ 75 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಭದ್ರತೆಯಲ್ಲಿ ಶೆಡ್ ಗಳನ್ನು 5 ಕ್ಕೂ ಅಧಿಕ ಜೆಸಿಬಿಗಳನ್ನು ಬಳಸಿ ತೆರವುಗೊಳಿಸಲಾಯಿತು. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಮತ್ತೆ ಭಾರೀ ಸ್ಫೋಟದ ಸದ್ದು- ಭೂಕಂಪ ಭಯಕ್ಕೆ ಊರು ಬಿಡ್ತಿರೋ ಜನ!

    ಅತಿಕ್ರಮಣ ತೆರವು ನಿರಂತರ ಪ್ರಕ್ರಿಯೆ
    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರು, ಬಿಡಿಎಗೆ ಸೇರಿದ ಹಲವಾರು ಆಸ್ತಿಗಳನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಇಂತಹ ಆಸ್ತಿಗಳನ್ನು ಮರು ವಶಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಕಳೆದ ಒಂದು ತಿಂಗಳಿಂದ ಆರಂಭಿಸಲಾಗಿದೆ. ಈ ಪ್ರಕ್ರಿಯೆ ಮುಂದುವರಿಯಲಿದೆ. ಹಲವಾರು ಬಡಾವಣೆಗಳಲ್ಲಿ ಬಿಡಿಎಗೆ ಸೇರಿದ ಸಾವಿರಾರು ಕೋಟಿ ರೂಪಾಯಿಗಳ ಮೌಲ್ಯದ ಆಸ್ತಿಗಳನ್ನು ಒತ್ತುವರಿ ಅಥವಾ ಭೂಕಬಳಿಕೆದಾರರು ಕಬಳಿಕೆ ಮಾಡಿದ್ದಾರೆ. ಅವರು ಎಷ್ಟೇ ಪ್ರಭಾವಿಗಳಾಗಿದ್ದರೂ ಕಾನೂನು ಪ್ರಕಾರ ಆಸ್ತಿಯನ್ನು ಮರು ಸ್ವಾಧೀನಕ್ಕೆ ತೆಗೆದುಕೊಳ್ಳಲಾಗುತ್ತದೆ ಎಂದು ಅವರು ಹೇಳಿದರು.

    ನಿವೇಶನಗಳ ಹರಾಜು
    ಬಿಡಿಎಗೆ ಸೇರಿದ ಸ್ವತ್ತುಗಳನ್ನು ವಶಪಡಿಸಿಕೊಂಡು ನಿವೇಶನಗಳನ್ನಾಗಿ ಅಭಿವೃದ್ಧಿಪಡಿಸಿ ಅವುಗಳನ್ನು ಸಾರ್ವಜನಿಕರಿಗೆ ಹರಾಜಿನ ಮೂಲಕ ಹಂಚಿಕೆ ಮಾಡಬೇಕೆಂದು ಇತ್ತೀಚೆಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ಈ ನಿರ್ದೇಶನದಂತೆ ಬಿಡಿಎ ಆಸ್ತಿಗಳನ್ನು ವಶಪಡಿಸಿಕೊಂಡು ಹಂತಹಂತವಾಗಿ ನಿವೇಶನಗಳನ್ನಾಗಿ ಅಭಿವೃದ್ಧಿಪಡಿಸಿ ಹರಾಜು ಪ್ರಕ್ರಿಯೆಯನ್ನು ನಡೆಸಲಾಗುತ್ತದೆ ಎಂದು ಹೇಳಿದರು.

  • ಆಸ್ತಿ ತೆರಿಗೆ, ಅಡುಗೆ ಅನಿಲ ಹೆಚ್ಚಳ ವಿರೋಧಿಸಿ ಕಾಂಗ್ರೆಸ್‍ನಿಂದ ಬಿಬಿಎಂಪಿಗೆ ಮುತ್ತಿಗೆ

    ಆಸ್ತಿ ತೆರಿಗೆ, ಅಡುಗೆ ಅನಿಲ ಹೆಚ್ಚಳ ವಿರೋಧಿಸಿ ಕಾಂಗ್ರೆಸ್‍ನಿಂದ ಬಿಬಿಎಂಪಿಗೆ ಮುತ್ತಿಗೆ

    ಬೆಂಗಳೂರು: ಬಿಜೆಪಿ ಸರ್ಕಾರದ ಹಲವು ನೀತಿಗಳನ್ನು ಖಂಡಿಸಿ ಕಾಂಗ್ರೆಸ್ ಬಿಬಿಎಂಪಿ ಮುತ್ತಿಗೆ ಹಾಕಿದೆ. ಜನವಿರೋಧಿ ಕೇಂದ್ರ, ರಾಜ್ಯ ಹಾಗೂ ಬಿಬಿಎಂಪಿ ನೀತಿಗಳ ವಿರುದ್ಧ ಕೈ ಕಾರ್ಯಕರ್ತರು, ಮುಖಂಡರು ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಂಗಳೂರು ಕೇಂದ್ರ, ದಕ್ಷಿಣ, ಮತ್ತು ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಸಲೀಂ ಅಹಮ್ಮದ್, ರಿಜ್ವಾನ್ ಅರ್ಷದ್, ರಾಮಲಿಂಗ ರೆಡ್ಡಿ ನಾಯಕರ ನೇತೃತ್ವದಲ್ಲಿ ಪಾಲಿಕೆಗೆ ಮುತ್ತಿಗೆ ಹಾಕಲಾಗಿದೆ. ಬಿಬಿಎಂಪಿ ಚಲೋ ಎಂಬ ಘೋಷವಾಕ್ಯದೊಂದಿಗೆ ಪ್ರತಿಭಟನೆ ನಡೆಸಲಾಗುತ್ತಿದೆ.

    ನಗರದಲ್ಲಿ ಆಸ್ತಿ ತೆರಿಗೆ ಹೆಚ್ಚಳ, ವಲಯ ವರ್ಗೀಕರಣ ನೆಪದಲ್ಲಿ ಸ್ವತ್ತು ಮಾಲೀಕರ ಮೇಲೆ 120 ಕೋಟಿ ಕಂದಾಯಕ್ಕೆ 240 ಕೋಟಿ ಬಡ್ಡಿ ವಸೂಲಿ ಮತ್ತು ಅಡುಗೆ ಅನಿಲ, ಪೆಟ್ರೋಲ್, ಡಿಸೇಲ್ ದರ ಹೆಚ್ಚಳದ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ.

    ಹಲಸೂರು ಗೇಟ್ ಪೊಲೀಸರಿಂದ, ಎಸಿಪಿ ನಜ್ಮಾ ಫಾರೂಖಿ ಹಾಗೂ ಪಿಐ ದೀಪಕ್ ನೇತೃತ್ವದಲ್ಲಿ ಬಂದೋ ಬಸ್ತ್ ಒದಗಿಸಲಾಗಿದೆ. ಬಿಬಿಎಂಪಿ ಆವರಣದಲ್ಲಿ ಸುಮಾರು 70 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಜೊತೆಗೆ ಒಂದು ಕೆಎಸ್‍ಆರ್‍ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಇದನ್ನೂ ಓದಿ: ಮತ್ತೆ ಕೊರೊನಾ ಸ್ಫೋಟದ ಲಕ್ಷಣಗಳು – ನೆರೆಯ ಕೇರಳ, ಮಹಾರಾಷ್ಟ್ರದಲ್ಲಿ ಮಹಾಮಾರಿಯ ಅಬ್ಬರ 

    ರಾಜ್ಯ ಹಾಗೂ ಕೇಂದ್ರದ ವಿರುದ್ಧ ಎಂಎಲ್‍ಸಿ ಪಿ.ಆರ್. ರಮೇಶ್ ಅಸಮಾಧಾನ ಹೊರಹಾಕಿ, ವಿನಾಕರಣ ನಗರದ ಜನತೆ ಮೇಲೆ ಆರ್ಥಿಕ ಹೊರೆ ಹೇರುತ್ತಿದ್ದಾರೆ. ಬಿಡಿಎ ಯನ್ನು ಖಾಸಗೀಕರಣ ಮಾಡಲು ಹೊರಟಿದ್ದಾರೆ. ಎಲ್ಲಾ ಕಾಂಪ್ಲೆಕ್ಸ್ ಗಳನ್ನ ಮಾರಾಟ ಮಾಡಲು ಹೊರಟಿದ್ದಾರೆ. ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಮುಂದಾಗಿದ್ದಾರೆ. ಕೂಡಲೇ ಅನಧಿಕೃತ ಹೊರೆ ಹಾಕ್ತಿರೋ ಹೆಚ್ಚುವರಿ ತೆರಿಗೆಯನ್ನು ವಾಪಾಸ್ ಪಡೆಯಬೇಕೆಂದು ಆಗ್ರಹಿಸಿದರು. ಇದನ್ನೂ ಓದಿ: ರಾಣಾ, ರಕುಲ್, ರವಿತೇಜ, ಚಾರ್ಮಿಗೆ ಜಾರಿ ನಿರ್ದೇಶನಾಲಯದ ನೋಟಿಸ್

    ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, ಕೋವಿಡ್ ಇರುವುದರಿಂದ ಹೆಚ್ಚು ಸಂಖ್ಯೆಯಲ್ಲಿ ಸೇರದೆ ಪ್ರತಿಭಟನೆ ಮಾಡುತ್ತಿದ್ದೇವೆ. ಬಿಬಿಎಂಪಿಯಿಂದ ಆಸ್ತಿ ತೆರಿಗೆ ವಿಚಾರದಲ್ಲಿ ತಪ್ಪಾಗಿದೆ. ಸರಿಪಡಿಸಲು ನೀಡಿದ ಗಡುವು ಮುಗಿದಿದ್ದು, ಈಗ ಮುತ್ತಿಗೆ ಹಾಕಿದ್ದೇವೆ. ವಲಯ ವರ್ಗೀಕರಣದ ನೆಪ ಹೇಳಿ ಆಸ್ತಿಮಾಲೀಕರಿಗೆ ವಿನಾಕಾರಣ 104 ಕೋಟಿ ರೂ ಕಂದಾಯಕ್ಕೆ 240 ಕೋಟಿ ರೂ ಬಡ್ಡಿ ಹಾಗೂ ದಂಡ ವಸೂಲಿ ಮಾಡಲು ಮುಂದಾಗಿದ್ದು ತಪ್ಪು. ಬಿಜೆಪಿ ಸರ್ಕಾರ ಜನರ ಹಿತ ಕಾಯುವಲ್ಲಿ ವಿಫಲವಾಗಿದೆ. ಪೆಟ್ರೋಲ್ 105, ಗ್ಯಾಸ್ ಬೆಲೆ 900 ದಾಟಿದೆ. ಅಧಿಕಾರದಲ್ಲಿ ಇಲ್ಲದೇ ಇರುವಾಗ ಒಂದು, ಇದ್ದಾಗ ಒಂದು ಜನವಿರೋಧಿ ನೀತಿ ಕೈಗೊಳ್ಳುತ್ತಿದ್ದಾರೆ ಎಂದರು. ಪ್ರಧಾನಿ ನರೇಂದ್ರ ಮೋದಿ ಆಡಳಿತಕ್ಕೆ ಬಂದ ನಂತರ 23 ಕೋಟಿ ಜನ ಬಡತನ ರೇಖೆಗಿಂತ ಕೆಳಗೆ ಬಂದಿದ್ದಾರೆ. ಕೇವಲ ಬಣ್ಣಬಣ್ಣದ ಮಾತಾಡಿ, ಜನರ ಸಂಕಷ್ಟ ಕೇಳೋರಿಲ್ಲ ಎಂದರು.

  • ರಾಜ್ಯದಲ್ಲಿ ಕೊರೊನಾ ಲಸಿಕೆಗೆ ಅಭಾವ: ವಿಶ್ವನಾಥ್

    ರಾಜ್ಯದಲ್ಲಿ ಕೊರೊನಾ ಲಸಿಕೆಗೆ ಅಭಾವ: ವಿಶ್ವನಾಥ್

    ನೆಲಮಂಗಲ: ರಾಜ್ಯದಲ್ಲಿ ವ್ಯಾಕ್ಸಿನ್ ಸಾಕಷ್ಟು ಪ್ರಮಾಣದಲ್ಲಿ ಸರಬರಾಜು ಹಾಗುತ್ತಿಲ್ಲ. ಈ ಬಗ್ಗೆ ಆರೋಗ್ಯ ಸಚಿವರು ಕೇಂದ್ರದ ಸಚಿವರ ಜೊತೆಗೆ ಸಂಪರ್ಕದಲ್ಲಿ ಇದ್ದಾರೆ ಎಂದು ಬಿಡಿಎ ಅಧ್ಯಕ್ಷ ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಸತ್ಯವನ್ನ ಹೊರ ಹಾಕಿದ್ದಾರೆ.

    ನೆಲಮಂಗಲ ಸಮೀಪದ ದಾಸನಪುರ ಹೋಬಳಿಯ ಗ್ರಾಮಸ್ಥರಿಗೆ ಅನುಕೂಲವಾಗಲಿ ಎಂದು ಎನ್.ಜಿ.ಓ ದವರ ಜೊತೆಗೂಡಿ ವ್ಯಾಕ್ಸಿನ್ ಅನ್ನು ನೀಡಲಾಗುತ್ತಿದೆ ಇಂದು 500 ಜನರಿಗೆ ವ್ಯಾಕ್ಸಿನ್ ನೀಡುವ ಉದ್ದೇಶವನ್ನು ಹೊಂದಿದ್ದೇವೆ. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳ ಸಲಹೆಗಾರ ಪ್ರಶಾಂತ್ ಸಹಕಾರದೊಂದಿಗೆ ವ್ಯಾಕ್ಸಿನ್ ವಿತರಣೆಯನ್ನು ಮಾಡಲಾಗುತ್ತಿದೆ ಎಂದರು.

    ಕಳೆದ 15 ದಿನಗಳಿಂದ 3000 ಜನರಿಗೆ ವ್ಯಾಕ್ಸಿನ್ ವಿತರಣೆ ಮಾಡಲಾಗಿದೆ. ಹಾಗೆಯೇ ದಾಸನಪುರ ಹೋಬಳಿಯಲ್ಲಿ ಇಂದು ಮತ್ತು ನಾಳೆ 1500 ಜನರಿಗೆ ವ್ಯಾಕ್ಸಿನ್ ಮಾಡಲಾಗುತ್ತದೆ. ನಮ್ಮ ರಾಜ್ಯದಲ್ಲಿ ವ್ಯಾಕ್ಸಿನೇಷನ್ ಸಾಕಷ್ಟು ಪ್ರಮಾಣದಲ್ಲಿ ಸರಬರಾಜು ಆಗುತ್ತಿಲ್ಲ. ಆದ್ದರಿಂದ ಅರೋಗ್ಯ ಸಚಿವರು ಕೇಂದ್ರದ ಸಚಿವರ ಜೊತೆಗೆ ಮಾತನಾಡುತ್ತಿದ್ದಾರೆ. ಜುಲೈ ಆಗಸ್ಟ್ ತಿಂಗಳ ಒಳಗಾಗಿ ಎಲ್ಲರಿಗೂ ಕೂಡ ಮೊದಲನೇ ಹಂತದ ಲಸಿಕೆ ಹಾಕಿಸಲಾಗುತ್ತದೆ ಎಂದು ತಿಳಿಸಿದರು.

    ಎಲ್ಲರೂ ಕೂಡ ಸರ್ಕಾರದ ನಿಯಮಗಳನ್ನ ಕಡ್ಡಾಯವಾಗಿ ಪಾಲಿಸಬೇಕು. ಅಂಕಿ-ಅಂಶಗಳ ಪ್ರಕಾರ ವ್ಯಾಕ್ಸಿನೇಷನ್ ಪಡೆದವರಲ್ಲಿ ಸಾವು-ನೋವುಗಳು ಆಗಿರುವುದಿಲ್ಲ. ಎಲ್ಲೋ ಕೆಲವರಿಗೆ ಜ್ವರ ಬಂದಿದೆ ಅಷ್ಟೇ. ಈಗಿನ ಪರಿಸ್ಥಿತಿಯಲ್ಲಿ ಪೂರ್ಣ ರೋಗ ಕಡಿಮೆ ಮಾಡುವ ಔಷಧಿ ಯಾವುದು ಬಂದಿರುವುದಿಲ್ಲ. ವ್ಯಾಕ್ಸಿನೇಷನ್ ಮಾಡಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಹೇಳಿದರು.

  • ಅಕ್ರಮ ಹಣ ಮಾಡಲು BDA ಅಧ್ಯಕ್ಷರಿಂದ ಹೊಸ ಹೊಸ ಯೋಜನೆ: ಆಪ್

    ಅಕ್ರಮ ಹಣ ಮಾಡಲು BDA ಅಧ್ಯಕ್ಷರಿಂದ ಹೊಸ ಹೊಸ ಯೋಜನೆ: ಆಪ್

    – ಸಾವಿರಾರು ಕೋಟಿ ಮೌಲ್ಯದ ಮೌಲ್ಯದ ಭೂ ಕಬಳಿಕೆ ಆರೋಪ
    – ಈ ಹಿಂದೆ ವಿರೋಧಿಸಿದ್ದ ಯೋಜನೆಗೆ ಬಿಜೆಪಿ ಮುಂದಾಗಿದ್ದೇಕೆ?

    ಬೆಂಗಳೂರು: ಬಿಡಿಎ ಅಧ್ಯಕ್ಷರಾದ ಎಸ್.ಆರ್.ವಿಶ್ವನಾಥ್ ರವರು ಅಕ್ರಮವಾಗಿ ಹಣ ಮಾಡಲು ಒಂದಿಲ್ಲೊಂದು ಯೋಜನೆ ರೂಪಿಸುತ್ತಲೇ ಇದ್ದಾರೆ. ಈಗ ಏಳು ಬಿಡಿಎ ಕಾಂಪ್ಲೆಕ್ಸ್ ಗಳ ಮರು ನಿರ್ಮಾಣ ಮಾಡುವ ಉದ್ದೇಶ ಕೂಡ ದೊಡ್ಡ ಪ್ರಮಾಣದಲ್ಲಿ ಲೂಟಿ ಮಾಡುವುದೇ ಆಗಿದೆ. ಇಂದಿರಾನಗರ, ಆಸ್ಟಿನ್ ಟೌನ್, ವಿಜಯನಗರ, ಸದಾಶಿವನಗರ ,ದೊಮ್ಮಲೂರು, ಎಚ್.ಎಸ್. ಆರ್ ಬಡಾವಣೆ ಸೇರಿದಂತೆ ಸೇರಿದಂತೆ ಯಾವುದೇ ಕಾರಣಕ್ಕೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಾಂಪ್ಲೆಕ್ಸ್ ಗಳನ್ನು ಒಡೆಯಲು ಹಾಗೂ ಅವು ಖಾಸಗಿಯವರ ಪಾಲಾಗಲು ಬಿಡುವುದಿಲ್ಲ ಎಂದು ಎಎಪಿಯ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಹೇಳಿದರು.

    ಈ ಹಿಂದೆ ಸಿದ್ದರಾಮಯ್ಯನವರ ಸರ್ಕಾರ ಕೂಡ ಇದೇ ಯೋಜನೆಗೆ ಕೈಹಾಕಿತ್ತು. ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಯೋಜನೆಯನ್ನು ಜಾರಿಗೆ ತಂದಿರಲಿಲ್ಲ. ಆಗ ವಿರೋಧಿಸಿದ್ದ ಬಿಜೆಪಿಯವರೇ ಈಗ ಮರುನಿರ್ಮಾಣದ ಹೆಸರಿನಲ್ಲಿ ದುಡ್ಡು ಮಾಡಲು ಹೊರಟಿದ್ದಾರೆ. ವಿರೋಧ ಪಕ್ಷದಲ್ಲಿದ್ದಾಗ ಒಂದು ನಿಲುವು, ಅಧಿಕಾರದಲ್ಲಿದ್ದಾಗ ಮತ್ತೊಂದು ನಿಲುವು ತೆಗೆದುಕೊಳ್ಳುವ ಬಿಜೆಪಿಗೆ ನಾಚಿಕೆಯಾಗಬೇಕು ಎಂದು ಮೋಹನ್ ದಾಸರಿ ಆಕ್ರೋಶ ವ್ಯಕ್ತಪಡಿಸಿದರು.

    ಬಿಡಿಎ ಕಾಂಪ್ಲೆಕ್ಸ್‍ಗಳು ಅಮೂಲ್ಯ ಸರ್ಕಾರಿ ಸ್ವತ್ತುಗಳು. ಮರುನಿರ್ಮಾಣದ ಹೆಸರಿನಲ್ಲಿ ಬರೋಬ್ಬರಿ 5,000 ಕೋಟಿ ರೂಪಾಯಿ ಮೌಲ್ಯದ ಅವುಗಳನ್ನು ಖಾಸಗಿಯವರಿಗೆ ನೀಡಲಾಗುತ್ತಿದೆ. ಇದಕ್ಕೆ ಪ್ರತಿಯಾಗಿ ಖಾಸಗಿಯವರಿಂದ ಬಿಡಿಎ ಅಧ್ಯಕ್ಷರಿಗೆ ಭಾರೀ ಪ್ರಮಾಣದ ಕಿಕ್‍ಬ್ಯಾಕ್ ಸಿಗಲಿದೆ. ಈಗ 30 ವರ್ಷಗಳ ಅವಧಿಗೆ ಖಾಸಗಿಯವರಿಗೆ ಬಿಟ್ಟುಕೊಟ್ಟು, ನಂತರ ಅದನ್ನು ಮತ್ತೆ 30 ವರ್ಷ ವಿಸ್ತರಿಸಲೂ ಅವಕಾಶ ನೀಡಲಾಗುತ್ತಿದೆ. ಆದರೆ 60 ವರ್ಷಗಳ ಬಳಿಕವೂ ಅವು ಸರ್ಕಾರದ ಸುಪರ್ದಿಗೆ ಮರಳುವುದಿಲ್ಲ. ದಿವ್ಯಶ್ರೀ ಚೇಂಬರ್ಸ್, ಚಿಕ್ಕಪೇಟೆಯಲ್ಲಿರುವ ಕೆಂಪೇಗೌಡ ಮಹಾರಾಜ ಕಾಂಪ್ಲೆಕ್ಸ್, ಗಾಂಧಿನಗರದಲ್ಲಿರುವ ಗುಪ್ತಾ ಮಾರುಕಟ್ಟೆಯು ಈಗಾಗಲೇ ಖಾಸಗಿಯವರ ಪಾಲಾಗಿದ್ದು, ಇವುಗಳನ್ನು ವಾಪಸ್ ಪಡೆಯಲು ಬಿಬಿಎಂಪಿಗೆ ಸಾಧ್ಯವಾಗುತ್ತಿಲ್ಲ ಎಂದು ಎಂದು ಮೋಹನ್ ದಾಸರಿ ಹೇಳಿದರು.

    ಯೋಜನೆಯ ಗುತ್ತಿಗೆ ಪಡೆದಿರುವ ಎಂಬೆಸ್ಸಿ, ಮೇವರಿಕ್ ಹಾಗೂ ಎಂ-ಫಾರ್ ಸಂಸ್ಥೆಗಳೊಂದಿಗೆ ಕಾಂಗ್ರೆಸ್ ಮುಖಂಡ ಕೆ.ಜೆ.ಜಾರ್ಜ್‍ಗೆ ಲಿಂಕ್ ಇದೆ. ಕಾಂಗ್ರೆಸ್ ಪಕ್ಷದ ಮಾಜಿ ಮಂತ್ರಿ ಕೆ.ಜೆ.ಜಾರ್ಜ್ ಮಾಲೀಕತ್ವದ ಎಂಬೆಸ್ಸಿ ಕಂಪನಿಯು ಚಿಕ್ಕಪೇಟೆ ಕ್ಷೇತ್ರದ ಬಿಜೆಪಿ ಹಾಲಿ ಶಾಸಕ ಉದಯ್ ಗರುಡಾಚಾರ್ ರವರ ಮೇವರಿಕ್ ಹಾಗೂ ಎಂ-ಫಾರ್ ಕಂಪನಿಗಳೊಂದಿಗೆ ಹಿಂದೆಯೂ ಅನೇಕ ಪ್ರಾಜೆಕ್ಟ್ ಗಳಲ್ಲಿ ಪಾಲುದಾರಿಕೆ ಹೊಂದಿತ್ತು. ಈಗಾಗಲೇ ಬಿಬಿಎಂಪಿ ಆಸ್ತಿಯಾಗಿದ್ದ ಎಂಜಿ ರಸ್ತೆಯ ಗರುಡಾಮಾಲ್ ಇವರುಗಳ ಪಾಲಾಗಿದೆ.

    ಪಿಪಿಪಿ ಮಾದರಿಯಲ್ಲಿ ಮರುನಿರ್ಮಾಣ ಎಂಬುದು ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು ಒಟ್ಟಾಗಿ ಮಾಡುತ್ತಿರುವ ಗೋಲ್‍ಮಾಲ್ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ:ಗಾಜಿಪುರ ಗಡಿಯಲ್ಲಿ ಧರಣಿ ನಿರತ ರೈತರು, ಬಿಜೆಪಿ ಕಾರ್ಯಕರ್ತರ ನಡುವೆ ಸಂಘರ್ಷ

    ಮುಖ್ಯಮಂತ್ರಿ ಯಡಿಯೂರಪ್ಪನವರು ಕಾಂಗ್ರೆಸ್- ಬಿಜೆಪಿ ಪಕ್ಷಗಳ ಪ್ರಭಾವಿ ನಾಯಕರುಗಳ ಒಡೆತನದ ಬಿಲ್ಡರ್ ಕಂಪೆನಿಗಳಿಗೆ ಬೆಂಗಳೂರಿನ ಸಾವಿರಾರು ಕೋಟಿ ಬೆಲೆಬಾಳುವ ಆಸ್ತಿಗಳನ್ನು ಅಭಿವೃದ್ಧಿಯ ಹೆಸರಿನಲ್ಲಿ ಸಾರಾಸಗಟಾಗಿ ನುಂಗಲು ಹೊರಟಿರುವುದು ಬೆಂಗಳೂರಿಗರ ಪಾಲಿಗೆ ದುರ್ದೈವದ ಸಂಗತಿ.ಸಾರ್ವಜನಿಕರ ಆಸ್ತಿಯನ್ನು ಕೊಳ್ಳೆ ಹೊಡೆಯುವ ಈ ನಿರ್ಧಾರದಿಂದ ತಕ್ಷಣವೇ ಹಿಂದೆಸರಿಯದಿದ್ದರೆ ಆಮ್ ಆದ್ಮಿ ಪಾರ್ಟಿ ಭಾರೀ ಪ್ರತಿಭಟನೆ ಮಾಡಲಿದೆ ಎಂದು ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ರಾಯಚೂರು ನಗರಸಭೆಯಲ್ಲಿ ತಿಂಗಳ ಮಾಮೂಲಿ ಜಗಳ-ಅಧ್ಯಕ್ಷನ ವಿರುದ್ಧ ಜೀವಬೆದರಿಕೆ ದೂರು

  • ಮೂಲಭೂತ ಸೌಕರ್ಯ ನೀಡದೆ ನಿರ್ವಹಣೆ ಶುಲ್ಕ ಹೆಚ್ಚಳ: ಬಿಡಿಎ ವಿರುದ್ಧ ಬಡಾವಣೆ ನಿವಾಸಿಗಳ ಆಕ್ರೋಶ

    ಮೂಲಭೂತ ಸೌಕರ್ಯ ನೀಡದೆ ನಿರ್ವಹಣೆ ಶುಲ್ಕ ಹೆಚ್ಚಳ: ಬಿಡಿಎ ವಿರುದ್ಧ ಬಡಾವಣೆ ನಿವಾಸಿಗಳ ಆಕ್ರೋಶ

    ಬೆಂಗಳೂರು: ನಗರದ ನಾಡ ಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಹಂಚಿಕೆ ಮಾಡಿರುವ ಬಿಡಿಎ ಸೈಟಿನ ನಿರ್ವಹಣಾ ಶುಲ್ಕವನ್ನು ಬಿಡಿಎ ಹೆಚ್ಚಳ ಮಾಡಿದ್ದು, ಬಿಡಿಎ ನಿರ್ಧಾರದ ವಿರುದ್ಧ ಕೆಂಪೇಗೌಡ ಬಡಾವಣೆಯ ಸೈಟಿನ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಐದು ವರ್ಷದ ಹಿಂದೆ ಬೆಂಗಳೂರು ನಗಾರಭಿವೃದ್ದಿ ಪ್ರಾಧಿಕಾರ ಆರ್ಹ ಫಲಾನುಭಾವಿಗಳಿಗೆ ಸೈಟುಗಳ ಹಂಚಿಕೆ ಮಾಡಿತ್ತು. ಜೊತೆಗೆ ಸೈಟು ಹಂಚಿಕೆಯಾಗಿ ಐದು ವರ್ಷ ಕಳೆದೆರು ಮೂಲ ಭೂತ ಸೌಕರ್ಯ ಒದಗಿಸಿಲ್ಲ. ಮೂಲ ಭೂತ ಸೌಕರ್ಯ ಒದಗಿಸದೇ ನಿರ್ವಾಹಣೆ ಶುಲ್ಕ ಹೆಚ್ಚಳ ಮಾಡಿರುವುದು ಮಾಲೀಕರ ಕೆಂಗಣ್ಣಿಗೆ ಗುರಿಯಾಗಿದೆ. ಇದನ್ನೂ ಓದಿ: 10 ದಿನದಲ್ಲಿ ಎಲ್ಲ ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೂ ಲಸಿಕೆ

    ಈ ಬಗ್ಗೆ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದು, ನಿರ್ವಾಹಣ ಶುಲ್ಕ ಹೆಸರಲ್ಲಿ ಹೆಚ್ಚಿನ ಹೊರೆಯನ್ನು ಮಾಲೀಕರ ಮೇಲೆ ಹೇರುತ್ತಿದ್ದಾರೆ. 1200 ರಿಂದ 3600 ರೂ ತನಕ ವಾರ್ಷಿಕವಾಗಿ ಹೆಚ್ಚಿನ ಶುಲ್ಕ ವಿಧಿಸುತ್ತಿದ್ದಾರೆ. ಇದರಿಂದ ಟ್ಯಾಕ್ಸ್ ನಮಗೆ ಕಳೆದ ವರ್ಷಕ್ಕಿಂತ ಮೂರು ಪಟ್ಟು ಹೆಚ್ಚಾಗಲಿದೆ. ಅಭಿವೃದ್ಧಿಯನ್ನೆ ಮಾಡದೇ ಟ್ಯಾಕ್ಸ್ ಗಳನ್ನು ಹಾಕುತ್ತಿರುವುದು ಸರಿಯಲ್ಲ. ಕೊರೊನಾ ಸಂಕಷ್ಟದ ಸಮಯದಲ್ಲಿ ಶುಲ್ಕ ಹೆಚ್ಚಳ ನಮ್ಮ ಮೇಲೆ ಮತ್ತಷ್ಟು ಹೊರೆಯಾಗಲಿದೆ. ಜೊತೆಗೆ ಅಭಿವೃದ್ಧಿ ಮಾಡದೇ ಕೇವಲ ಶುಲ್ಕ ಹೆಚ್ಚಳ ಮಾಡುವುದು ಎಷ್ಟರಮಟ್ಟಿಗೆ ಸರಿ. ತಕ್ಷಣ ಬಿಡಿಎ ತಮ್ಮ ನಿರ್ಧಾರವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ.

  • ನಿಗದಿತ ಅವಧಿಯೊಳಗೆ ಬೆಳ್ಳಂದೂರು ಕೆರೆ ಹೂಳೆತ್ತುವ ಕಾರ್ಯ ಪೂರ್ಣ: ಎಸ್.ಆರ್.ವಿಶ್ವನಾಥ್

    ನಿಗದಿತ ಅವಧಿಯೊಳಗೆ ಬೆಳ್ಳಂದೂರು ಕೆರೆ ಹೂಳೆತ್ತುವ ಕಾರ್ಯ ಪೂರ್ಣ: ಎಸ್.ಆರ್.ವಿಶ್ವನಾಥ್

    ಬೆಂಗಳೂರು: ಬೆಳ್ಳಂದೂರು ಕೆರೆಯಲ್ಲಿ ತುಂಬಿರುವ ಹೂಳೆತ್ತುವ ಕಾರ್ಯವನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕೆಂದು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.

    ಮಂಗಳವಾರ ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಮತ್ತು ಬಿಡಿಎ ಆಯುಕ್ತ ರಾಜೇಶ್ ಗೌಡ ಅವರೊಂದಿಗೆ ಬೆಳ್ಳಂದೂರು ಮತ್ತು ವರ್ತೂರು ಕೆರೆಯ ಹೂಳೆತ್ತುವ ಕಾಮಗಾರಿ ಹಾಗೂ ದೊಡ್ಡಬನಹಳ್ಳಿ ಮತ್ತು ಗುಂಜೂರು ವಸತಿ ಸಮುಚ್ಛಯಗಳಿಗೆ ಭೇಟಿ ನೀಡಿದ ನಂತರ ವಿಶ್ವನಾಥ್ ಈ ವಿಷಯ ತಿಳಿಸಿದರು. ಬೆಳ್ಳಂದೂರು ಕೆರೆಯ ಹೂಳೆತ್ತುವುದು ಮತ್ತು ಇನ್ನಿತರೆ ಕಾಮಗಾರಿಗಳಿಗೆಂದು 100 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗುತ್ತಿದ್ದು, ಇನ್ನೂ ಹೆಚ್ಚು ಯಂತ್ರೋಪಕರಣಗಳು ಮತ್ತು ಮಾನವ ಸಂಪನ್ಮೂಲವನ್ನು ಬಳಸಿಕೊಂಡು ನಿಗದಿತ ಸಮಯದೊಳಗೆ ಅಂದರೆ 2022 ರ ನವೆಂಬರ್ ಒಳಗೆ ಕಾಮಗಾರಿಯನ್ನು ಹಾಗೂ ವರ್ತೂರು ಕೆರೆಯ ಹೂಳೆತ್ತುವ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಬಿಡಿಎ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ನಿರ್ದೇಶನ ನೀಡಿದರು.

    ಎಲ್ಲಾ ಅಪಾರ್ಟ್ ಮೆಂಟ್ ಗಳಿಗೆ ಓಪನ್ ಜಿಮ್:
    ದೊಡ್ಡಬನಹಳ್ಳಿ ಬಿಡಿಎ ವಸತಿ ಸಂಕೀರ್ಣಗಳಿಗೆ ಭೇಟಿ ನೀಡಿ ಅಲ್ಲಿನ ನಿವಾಸಿಗಳಿಂದ ಅಹವಾಲುಗಳನ್ನು ಸ್ವೀಕರಿಸಿದ ವಿಶ್ವನಾಥ್ ಅವರು, ಕೂಡಲೇ ವಸತಿ ಸಂಕೀರ್ಣದಲ್ಲಿರುವ ಸಮಸ್ಯೆಗಳನ್ನು ನಿವಾರಣೆ ಮಾಡಲು ಕ್ರಮ ಕೈಗೊಳ್ಳಬೇಕು ಮತ್ತು ನಿವಾಸಿಗಳ ಸಂಘಕ್ಕೆ ಕಚೇರಿಯನ್ನು ನಿರ್ಮಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಿಡಿಎ ನಿರ್ಮಾಣ ಮಾಡಿರುವ ಬಹುತೇಕ ಎಲ್ಲಾ ಅಪಾರ್ಟ್ ಮೆಂಟ್ ಗಳಿಗೆ ಓಪನ್ ಜಿಮ್ ಮತ್ತು ಮಕ್ಕಳ ಆಟೋಟಗಳಿಗೆ ಪ್ರತ್ಯೇಕ ಸ್ಥಳದ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಓಪನ್ ಜಿಮ್ ನಲ್ಲಿ ಸೌಲಭ್ಯಗಳನ್ನು ಕಲ್ಪಿಸಲು ಸದ್ಯದಲ್ಲಿಯೇ ಪ್ರಾಧಿಕಾರ ಅನುಮೋದನೆ ನೀಡಲಿದೆ ಎಂದು ಭರವಸೆ ನೀಡಿದರು.

    ಗುಂಜೂರು ಸಮಸ್ಯೆ ನಿವಾರಣೆಗೆ ಆಗಸ್ಟ್ 15 ಗಡುವು:
    ಇನ್ನು ಗುಂಜೂರು ವಸತಿ ಸಂಕೀರ್ಣದಲ್ಲಿ ವಾಸವಾಗಿರುವ ನಿವಾಸಿಗಳ ಅಹವಾಲುಗಳನ್ನು ಸ್ವೀಕರಿಸಿದ ವಿಶ್ವನಾಥ್ ಅವರು, ಕುಡಿಯುವ ನೀರು ಸಮಸ್ಯೆ ಪರಿಹಾರಕ್ಕೆ ಕೂಡಲೇ ಎರಡು ಬೋರ್ ವೆಲ್ ಗಳನ್ನು ಹಾಕಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಶಾಶ್ವತ ವಿದ್ಯುತ್ ಸಂಪರ್ಕ, ಕಸ ವಿಲೇವಾರಿ, ಕಾಂಪೌಂಡ್ ನಿರ್ಮಾಣ ಸೇರಿದಂತೆ ಇನ್ನಿತರೆ ಕಾಮಗಾರಿಗಳನ್ನು ಆಗಸ್ಟ್ 15 ರೊಳಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಗಡುವು ವಿಧಿಸಿದರು. ಇದೇ ವೇಳೆ, ಕಾಮಗಾರಿಯಲ್ಲಿ ವಿಳಂಬ ಮತ್ತು ಲೋಪಗಳು ಕಂಡು ಬಂದರೆ ಅಂತಹ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.