Tag: BCM Hostel

  • 88% ಅಂಕ ಪಡೆದ್ರೂ ಹಾಸ್ಟೆಲ್‌ ಸಿಗದ್ದಕ್ಕೆ ವೇದಿಕೆಯಲ್ಲೇ ಸನ್ಮಾನ ತಿರಸ್ಕರಿಸಿ ವಿದ್ಯಾರ್ಥಿನಿಯಿಂದ ಆಕ್ರೋಶ!

    88% ಅಂಕ ಪಡೆದ್ರೂ ಹಾಸ್ಟೆಲ್‌ ಸಿಗದ್ದಕ್ಕೆ ವೇದಿಕೆಯಲ್ಲೇ ಸನ್ಮಾನ ತಿರಸ್ಕರಿಸಿ ವಿದ್ಯಾರ್ಥಿನಿಯಿಂದ ಆಕ್ರೋಶ!

    – ಸಚಿವ ತಿಮ್ಮಾಪೂರ್ ವಿರುದ್ಧ ವಿದ್ಯಾರ್ಥಿನಿ‌ ಬಹಿರಂಗ ಅಸಮಾಧಾನ
    – ಅನರ್ಹರಿಗೆ ಬಿಸಿಎಂ ಹಾಸ್ಟೆಲ್ ಸೀಟ್‌ ಸಿಕ್ಕಿದ್ದು ಹೇಗೆ?
    – ನಮಗೆ ಸನ್ಮಾನ ಬೇಡ, ಬೇಕಾದ ಸವಲತ್ತು ಕೊಡಿ ಸಾಕು

    ಬಾಗಲಕೋಟೆ: ಉತ್ತಮ ಅಂಕ ಪಡೆದರೂ ಬಿಸಿಎಂ ಹಾಸ್ಟೆಲ್‌ (BCM Hostel) ಸಿಗದ್ದಕ್ಕೆ ಸಚಿವ ಆರ್‌ಬಿ ತಿಮ್ಮಾಪುರ (RB Timmapur) ವಿರುದ್ಧ ವಿದ್ಯಾರ್ಥಿನಿಯೊಬ್ಬಳು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿರುವ ಘಟನೆ ಸಚಿವರ ಸ್ವಕ್ಷೇತ್ರ ಮುಧೋಳ (Mudhol) ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ನಡೆದಿದೆ.

    ಪೆಟ್ಲೂರ ಗ್ರಾಮದ ಬಡ ಕುಟುಂಬದ ಐಶ್ವರ್ಯ ಪಾಯಗೊಂಡ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಯಲ್ಲಿ 88% ಅಂಕ ಪಡೆದಿದ್ದಳು. ನಂತರ ಪ್ರಥಮ ಪಿಯು ವಿಜ್ಞಾನ ವಿಭಾಗಕ್ಕೆ ಮುಧೋಳ ತಾಲೂಕಿನ ಯಡಹಳ್ಳಿ ಸರ್ಕಾರಿ ಕಾಲೇಜಿಗೆ ಪ್ರವೇಶ ಪಡೆದಿದ್ದಳು.

    ಮನೆಯಿಂದ ಕಾಲೇಜಿಗೆ ಹೋಗಲು ದೂರ ಇರುವ ಕಾರಣ ಬಿಸಿಎಂ ಹಾಸ್ಟೆಲ್‌ಗೆ ಅರ್ಜಿ ಹಾಕಿದ್ದಾಳೆ. ಆದರೆ ಅಧಿಕಾರಿಗಳು ಆಕೆಗೆ ಪ್ರವೇಶ ನೀಡಿರಲಿಲ್ಲ. ಹೀಗಾಗಿ ವಿದ್ಯಾರ್ಥಿನಿ ಪೆಟ್ಟೂರ್‌ನಿಂದ ನಿತ್ಯ ಬಸ್‌ನಲ್ಲಿ ಪ್ರಯಾಣ ಮಾಡಿ ಕಾಲೇಜಿಗೆ ಹೋಗುತ್ತಿದ್ದಳು.

    ಕೆಲ ದಿನಗಳ ಹಿಂದೆ ಮುಧೋಳ ತಾಲೂಕಿನ ಹೆಬ್ಬಾಳದ ಪಿಕೆಪಿಎಸ್ ವಾರ್ಷಿಕ ಸಾಧಾರಣ ಸಭೆಯಲ್ಲಿ ಐಶ್ವರ್ಯಾಗೆ ಸನ್ಮಾನವನ್ನು ಆಯೋಜಿಸಲಾಗಿತ್ತು. ಸನ್ಮಾನ ಸ್ವೀಕರಿಸುವ ಮೊದಲು ತನ್ನ ಸಾಧನೆಯ ಬಗ್ಗೆ ಮಾತನಾಡಲು ಐಶ್ವರ್ಯಾ ವೇದಿಕೆಗೆ ಆಗಮಿಸಿದ್ದಾಳೆ. ವೇದಿಕೆ ಆಗಮಿಸಿದ ಆಕೆ ಹಾಸ್ಟೆಲ್‌ ರಾಜಕೀಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟು ಸಿಟ್ಟು ಹೊರ ಹಾಕಿದ್ದಾಳೆ. ಈಕೆಯ ಭಾಷಣದ ವಿಡಿಯೋ ಈಗ ವೈರಲ್‌ ಆಗುತ್ತಿದ್ದಂತೆ ವಿದ್ಯಾರ್ಥಿನಿಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡಳಿತ ಮುಂದಾಗಿದೆ. ಇದನ್ನೂ ಓದಿ:  ವಿಜಯಪುರ| ಎಸ್‌ಬಿಐ ಬ್ಯಾಂಕ್‌ನಲ್ಲಿ ದರೋಡೆಯಾಗಿದ್ದ ಚಿನ್ನಾಭರಣ, ನಗದು ಮಹಾರಾಷ್ಟ್ರದಲ್ಲಿ ಪತ್ತೆ

     

    ವಿದ್ಯಾರ್ಥಿನಿ ಹೇಳಿದ್ದೇನು?
    ನಾನು ಅತ್ಯಂತ ಬಡಕುಟುಂಬದ ಮಗಳು, ಅಂತಹ ಬಡ ಕುಟುಂಬದಲ್ಲಿ ಓದಿ ಒಳ್ಳೆಯ ಅಂಕ ಪಡೆದಿದ್ದೇನೆ. ಆದರೂ ನನಗೆ ಹಾಸ್ಟೆಲ್‌ ಸೀಟ್ ಸಿಗಲಿಲ್ಲ. ಅಧಿಕಾರಿಗಳು ರಾಜಕೀಯ ನಾಯಕರ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ.

    ಹಾಸ್ಟೆಲ್‌ ವಿಚಾರವಾಗಿ ಅಧಿಕಾರಿಗಳನ್ನು ಕೇಳಿದರೆ ತಿಮ್ಮಾಪುರ ಸಾಹೇಬ್ರು ಹೇಳಿದ್ರೆ ಮಾತ್ರ ಆಯ್ಕೆ ಮಾಡುತ್ತೇವೆ. ತಿಮ್ಮಾಪುರ ಸಾಹೇಬರ ಆಫೀಸಿಗೆ ಹೋದರೆ ನಮ್ಮನ್ನು ಮಾತನಾಡಿಸಲೇ ಇಲ್ಲ. 50- 55% ಅಂಕ ಪಡೆದವರಿಗೆ ಹಾಸ್ಟೆಲ್‌ ಸಿಕ್ಕಿದೆ. ಆದರೆ 90-95% ಅಂಕ ಪಡೆದವರು ಬಸ್ಸಿನಲ್ಲಿ ಹೋಗುತ್ತಿದ್ದೇವೆ.

    ಇಂತಹ ಕೆಟ್ಟ ರಾಜಕೀಯ ವ್ಯವಸ್ಥೆಯಲ್ಲಿ ಸಿಕ್ಕ ನಮ್ಮಂತಹ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿದೆ. ನಮ್ಮ ಕನಸು ಕನಸಾಗಿಯೇ ಉಳಿಯುತ್ತಿದೆ. ನಮಗೆ ಸನ್ಮಾನ ಬೇಡ, ಬೇಕಾದ ಸವಲತ್ತು ಕೊಡಿ ಸಾಕು ಎಂದು‌ ಸನ್ಮಾನ ತಿರಸ್ಕರಿಸಿದ್ದಾಳೆ.

  • ಲಾ ಕಾಲೇಜ್‌ಗೆ ಸೇರಿಸದಿದ್ದರೇ ಆಸ್ತಿಯಲ್ಲಿ ಭಾಗ ಕೊಡು ಅಂತ ನಮ್ಮಪ್ಪನನ್ನ ಕೇಳಿದ್ದೆ: ಸಿಎಂ

    ಲಾ ಕಾಲೇಜ್‌ಗೆ ಸೇರಿಸದಿದ್ದರೇ ಆಸ್ತಿಯಲ್ಲಿ ಭಾಗ ಕೊಡು ಅಂತ ನಮ್ಮಪ್ಪನನ್ನ ಕೇಳಿದ್ದೆ: ಸಿಎಂ

    ನಾನು ಲಾ ಓದದಿದ್ದರೇ ಇವತ್ತು ಸಿಎಂ ಆಗುತ್ತಿರಲಿಲ್ಲ

    ಮೈಸೂರು: ನಮ್ಮ ಅಪ್ಪ ನನಗೆ ಲಾ ಓದಿಸಲು ತಯಾರಿರಲಿಲ್ಲ. ಅದಕ್ಕೆ ಲಾ ಕಾಲೇಜ್ ಸೇರಿಸದಿದ್ದರೆ ನನ್ನ ಆಸ್ತಿ ಭಾಗ ನನಗೆ ಕೊಡು ಎಂದು ನಮ್ಮ ಅಪ್ಪನನ್ನು ಕೇಳಿದ್ದೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.

    ನಗರದಲ್ಲಿ ಬಿಸಿಎಂ ಹಾಸ್ಟೆಲ್ (BCM Hostel) ವಿದ್ಯಾರ್ಥಿಗಳ ಸಂಘ ಉದ್ಘಾಟಸಿ ಮಾತನಾಡಿದ ಅವರು, ನಮ್ಮ ಅಪ್ಪ ನನಗೆ ಲಾ (Law) ಓದಿಸಲು ತಯಾರಿರಲಿಲ್ಲ. ಅದಕ್ಕಾಗಿ ಲಾ ಕಾಲೇಜ್ ಸೇರಿಸದಿದ್ದರೆ ನನ್ನ ಆಸ್ತಿ ಭಾಗ ನನಗೆ ಕೊಡು ಎಂದು ನಮ್ಮ ಅಪ್ಪನನ್ನು ಕೇಳಿದ್ದೆ. ನಮ್ಮ ಊರಿನ ಶಾನಭೋಗ ಕುರುಬರೆಲ್ಲಾ ಲಾ ಓದುತ್ತಾರಾ ಅಂತಾ ಹೇಳುತ್ತಿದ್ದರು. ನಮ್ಮ ಅಪ್ಪ ಅದನ್ನೇ ಕೇಳಿಕೊಂಡು ಲಾ ಓದೋದು ಬೇಡ ಅಂತಿದ್ದ. ನಾನು ಲಾ ಓದದಿದ್ದರೆ ಇವತ್ತು ಸಿಎಂ ಆಗುತ್ತಿರಲಿಲ್ಲ. ಹಿಂದೆ ಗುರು, ಮುಂದೆ ಗುರಿ ಇರಬೇಕು. ಈಗ ಹಿಂದೆ ಗುರುವು ಇಲ್ಲ ಮುಂದೆ ಗುರಿಯೂ ಇಲ್ಲ. ಓದಿದವರು ಜಾತಿ ಮಾಡುವುದನ್ನು ಮೊದಲ ಬಿಡಬೇಕು. ವೈಚಾರಿಕತೆ, ವೈಜ್ಞಾನಿಕತೆ ಬೆಳೆಸಿಕೊಳ್ಳಿ ಎಂದರು.ಇದನ್ನೂ ಓದಿ: ದೊಡ್ಮನೆ ಶೋಗೂ ಮೊದಲೇ ಸ್ವರ್ಗ, ನರಕದ ಲುಕ್ ರಿವೀಲ್- ಸ್ಪರ್ಧಿಗಳು ಶಾಕ್

    ಕರ್ಮ ಸಿದ್ಧಾಂತ, ಹಣೆಬರಹ ಅನ್ನುವುದೆಲ್ಲಾ ಸುಳ್ಳು. ಯಾವ ಧರ್ಮ, ಯಾವ ದೇವರು ಕರ್ಮ ಸಿದ್ಧಾಂತವನ್ನು ಬೆಂಬಲಿಸಲ್ಲ. ಮನುಷ್ಯನಿಗೆ ಅವಕಾಶ ಸಿಕ್ಕರೆ ಒಳ್ಳೆಯ ಶಿಕ್ಷಣ ಪಡೆದು ಒಳ್ಳೆಯ ಜೀವನ ಮಾಡುತ್ತಾನೆ. ನಾನು ಓದುವಾಗ ಹಿಂದುಳಿದವರಿಗೆ ಮೀಸಲಾತಿ ಇರಲಿಲ್ಲ. ಹೀಗಾಗಿ ನನಗೆ ಎಂಬಿಬಿಎಸ್ ಸೀಟು ಸಿಗಲಿಲ್ಲ. ಎಂಎಸ್ಸಿ ಸೀಟು ಸಿಗಲಿಲ್ಲ. ಸೀಟು ಸಿಗದೇ ಒಂದು ವರ್ಷ ಹೊಲ ಉಳುವ ಕೆಲಸ ಮಾಡಿದ್ದೆ. ಮೈಸೂರಿನಲ್ಲಿ ನಮ್ಮಪ್ಪ ಹಾಸ್ಟೆಲ್‌ಗೆ ಸೇರಿಸಲಿಲ್ಲ. ಇದರಿಂದ ನಾನೇ ರೂಂ ಮಾಡಿಕೊಂಡಿದ್ದೆ. ರೂಂನಲ್ಲಿ ಅಡುಗೆ ಮಾಡಿಕೊಂಡು ಊಟ ಮಾಡ್ತಿದ್ದೆ ಎಂದು ಹೇಳಿದರು.

    ಇದೇ ವೇಳೆ ಜಾತಿಗಣತಿ ಕುರಿತು ಮಾತನಾಡಿದ ಅವರು, ಜಾತಿಗಣತಿ ವರದಿ ನನ್ನ ಕೈ ಸೇರಿದೆ. ನಾನು ಇನ್ನೂ ಅದನ್ನು ಪರಿಪೂರ್ಣವಾಗಿ ನೋಡಿಲ್ಲ. ಮುಂದಿನ ದಿನಗಳಲ್ಲಿ ಅದನ್ನು ಕ್ಯಾಬಿನೆಟ್‌ಗೆ ಇಟ್ಟು ಜಾರಿಗೆ ತರುತ್ತೇನೆ. ಜಾತಿಗಣತಿ ಜಾರಿಗೆ ತರುವುದು ನಮ್ಮ ಪಕ್ಷದ ಅಜೆಂಡಾ. ಜಾರಿ ಮಾಡೇ ಮಾಡುತ್ತೇನೆ ಎಂದು ಖಡಕ್ಕಾಗಿ ಉತ್ತರಿಸಿದ್ದಾರೆ.ಇದನ್ನೂ ಓದಿ: ಜಮ್ಮು-ಕಾಶ್ಮೀರ: ಕಥುವಾ ಎನ್‌ಕೌಂಟರ್‌ನಲ್ಲಿ ಓರ್ವ ಭಯೋತ್ಪಾದಕನ ಹತ್ಯೆ – ಉಗ್ರರಿಗಾಗಿ ಮುಂದುವರಿದ ಶೋಧ

  • ಹಾಸ್ಟೆಲ್‌ನಲ್ಲಿ ಊಟ ಸೇವಿಸಿ 13 ವಿದ್ಯಾರ್ಥಿನಿಯರು ಅಸ್ವಸ್ಥ – ಇಬ್ಬರು ಗಂಭೀರ

    ಹಾಸ್ಟೆಲ್‌ನಲ್ಲಿ ಊಟ ಸೇವಿಸಿ 13 ವಿದ್ಯಾರ್ಥಿನಿಯರು ಅಸ್ವಸ್ಥ – ಇಬ್ಬರು ಗಂಭೀರ

    ಚಿತ್ರದುರ್ಗ: ಹಾಸ್ಟೆಲ್‌ನಲ್ಲಿ ರಾತ್ರಿ ಊಟ ಸೇವಿಸಿದ ಬಳಿಕ 13 ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಯರ ಬಿಸಿಎಂ ಹಾಸ್ಟೆಲ್‌ನಲ್ಲಿ ನಡೆದಿದೆ.

    ರಾತ್ರಿ ಹಾಸ್ಟೆಲ್‌ನಲ್ಲಿ ಅನ್ನ – ಸಾಂಬಾರ್ ಸೇವಿಸಿದ ಬಳಿಕ 13 ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದು, ಹೊಳಲ್ಕೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಒಟ್ಟು 35 ವಿದ್ಯಾರ್ಥಿಗಳು ರಾತ್ರಿ ಊಟ ಮಾಡಿದ್ದರು. ಅವರಲ್ಲಿ 13 ಮಂದಿ ಅಸ್ವಸ್ಥಗೊಂಡಿದ್ದು, ಇಬ್ಬರು ಗಂಭೀರ ಸ್ಥಿತಿ ತಲುಪಿದ್ದಾರೆ. ಅವರನ್ನ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯಗೆ ಮೊದಲೇ ಗೊತ್ತಿತ್ತು ವರುಣಾ ರಹಸ್ಯ – ಸಿದ್ದುಗೆ ಗುಟ್ಟು ಬಿಟ್ಟುಕೊಟ್ಟಿದ್ರು ಬಿಎಸ್‍ವೈ

    ಸದ್ಯ ವಿದ್ಯಾರ್ಥಿಗಳಿಗೆ ಯಾವುದೇ ಪ್ರಾಣಾಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ಹೇಳಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಬಿಸಿಎಂ ಹಾಸ್ಟೆಲ್‌ನಲ್ಲಿ ಕೋವಿಡ್ ಕೇರ್ ಸೆಂಟರ್ – ಮಂಡ್ಯ ವಿದ್ಯಾರ್ಥಿಗಳ ವಿರೋಧ

    ಬಿಸಿಎಂ ಹಾಸ್ಟೆಲ್‌ನಲ್ಲಿ ಕೋವಿಡ್ ಕೇರ್ ಸೆಂಟರ್ – ಮಂಡ್ಯ ವಿದ್ಯಾರ್ಥಿಗಳ ವಿರೋಧ

    ಮಂಡ್ಯ: ಕೆರೆ ಅಂಗಳದಲ್ಲಿರುವ ಬಿಸಿಎಂ ಹಾಸ್ಟೆಲ್‌ನಲ್ಲಿ ಕೋವಿಡ್ ಸೆಂಟರ್ ತೆರೆಯಲು ಮುಂದಾದ ಕ್ರಮಕ್ಕೆ ಮಂಡ್ಯ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

    ಸುಮಾರು 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿದ್ದು ಮುಂದಿನ ತಿಂಗಳು ನಮಗೆ ಪರೀಕ್ಷೆ ಇದೆ. ಆದರೆ ಈಗ ಹಾಸ್ಟೆಲ್ ಬಿಟ್ಟು ಕೊಡುವಂತೆ ಹೇಳಿದ್ದಾರೆ. ಬೇರೆ ಹಾಸ್ಟೆಲ್‌ನಲ್ಲಿ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ಅಲ್ಲಿಗೆ ನಮ್ಮನ್ನು ಕಳುಹಿಸುವುದರಿಂದ ನಮಗೆ ಓದಿಕೊಳ್ಳಲು ತೊಂದರೆಯಾಗುತ್ತದೆ ಎಂದು ಕಷ್ಟವನ್ನು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಉಡುಪಿ ಹಿಜಬ್ ವಿವಾದ – NSUI ಭೇಟಿ ನಿರಾಕರಿಸಿದ ಕಾಲೇಜು ಆಡಳಿತ ಮಂಡಳಿ

    ಇನ್ನೊಂದೆಡೆ ಸ್ಥಳೀಯರು ಇಲ್ಲಿ ಕೋವಿಡ್ ಕೇರ್ ಸೆಂಟರ್ ಮಾಡಿದರೆ ನಮಗೂ ತೊಂದರೆಯಾಗುತ್ತೆ, ನಮ್ಮನ್ನು ದಿನಗೂಲಿ ಕೆಲಸಕ್ಕೆ ಎಲ್ಲಿಯೂ ಕರೆಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕ್ಷೇತ್ರದ ಸಮಸ್ಯೆ ಹೇಳಲು ಫೋನ್ ಮಾಡಿದ್ದ ಮಹಿಳೆಗೆ ಅನಿಲ್ ಬೆನಕೆ ಅವಾಜ್

    ಪ್ರತಿಭಟನಾ ಸ್ಥಳಕ್ಕೆ ಹಿಂದುಳಿದ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ಹರೀಶ್ ಭೇಟಿ ನೀಡಿ ವಿದ್ಯಾರ್ಥಿಗಳ ಮನವೊಲಿಸಲು ಪ್ರಯತ್ನಿಸಿದ್ದಾರೆ. ಜಿಲ್ಲಾಧಿಕಾರಿ ಸೂಚನೆಯಂತೆ ವಿದ್ಯಾರ್ಥಿಗಳನ್ನು ಸೂಕ್ತ ಸ್ಥಳಕ್ಕೆ ವರ್ಗಾಯಿಸುವುದಾಗಿ ತೀರ್ಮಾನಿಸಲಾಗಿದೆ. ಆದರೆ ಇಲ್ಲಿ ಕ್ವಾರಂಟೈನ್ ಕೇಂದ್ರ ಬೇಡ ಎಂದು ಸ್ಥಳೀಯರು ಪಟ್ಟು ಹಿಡಿದಿದ್ದು, ಅಧಿಕಾರಿಗಳೊಂದಿಗೆ ತರಾಟೆ ನಡೆಸಿದ್ದಾರೆ.

  • ಹಾಸ್ಟೆಲ್ ನಲ್ಲಿ ಸ್ನಾನಕ್ಕೆ ನೀರಿಲ್ಲ ಎಂದು ಕಾಲುವೆಗೆ ಹೋದ ವಿದ್ಯಾರ್ಥಿ ನೀರು ಪಾಲು

    ಹಾಸ್ಟೆಲ್ ನಲ್ಲಿ ಸ್ನಾನಕ್ಕೆ ನೀರಿಲ್ಲ ಎಂದು ಕಾಲುವೆಗೆ ಹೋದ ವಿದ್ಯಾರ್ಥಿ ನೀರು ಪಾಲು

    ಬಳ್ಳಾರಿ: ವಿದ್ಯಾರ್ಥಿಯೊಬ್ಬ ಹಾಸ್ಟೆಲ್ ನಲ್ಲಿ ನೀರು ಇಲ್ಲದೇ ಇರುವದರಿಂದ ಕಾಲುವೆಯಲ್ಲಿ ಸ್ನಾನ ಮಾಡಲು ಹೋದಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ.

    ಮೊದನ್ ಸಾಬ್(21) ಮೃತ ವಿದ್ಯಾರ್ಥಿ. ಬಳ್ಳಾರಿಯ ಗೌತಮ್ ನಗರದ ಬಿಸಿಎಂ ಹಾಸ್ಟೆಲ್ ನಲ್ಲಿರುವ ಭಾಷಾ ಇಂದು ಮುಂಜಾನೆ ಎಚ್‍ಎಲ್‍ಸಿ ಕಾಲುವೆಯಲ್ಲಿ ಸ್ನಾನ ಮಾಡಲು ಹೋಗಿದ್ದಾರೆ. ನೀರು ಜೋರಾಗಿ ಹರಿಯುತ್ತಿದ್ದರಿಂದ ಸ್ನಾನ ಮಾಡುವ ವೇಳೆಯಲ್ಲಿ ಸುಳಿಗೆ ಸಿಲುಕಿ ಸಾವನ್ನಪ್ಪಿದ್ದಾರೆ.

    ಬಿಸಿಎಂ ಹಾಸ್ಟೆಲ್‍ನಲ್ಲಿ ಸರಿಯಾಗಿ ಮೂಲಭೂತ ಸೌಲಭ್ಯಗಳು ಇಲ್ಲದ ಪರಿಣಾಮ ವಿದ್ಯಾರ್ಥಿಗಳು ಕಾಲುವೆ ನೀರಿನಲ್ಲೆ ಸ್ನಾನ ಮಾಡಬೇಕಾಗಿದೆ. ಹೀಗಾಗಿ ಸ್ನಾನ ಮಾಡಲು ಹೋಗಿದ್ದ ಭಾಷಾ ನೀರುಪಾಲಾಗಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಹಾಸ್ಟೆಲ್ ಮುಂಭಾಗದಲ್ಲಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

    ವಿಷಯ ತಿಳಿದು ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಮೃತ ದೇಹಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಈ ಸಂಬಂಧ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.