Tag: bcci

  • ವೈಯಕ್ತಿಕ ಹಗೆತನಕ್ಕೆ ಬಲಿಯಾಗ್ತಿದೆಯೇ ಟೀಂ ಇಂಡಿಯಾ – ಇನ್ನೂ ಮುಗಿದಿಲ್ವಾ ಕೊಹ್ಲಿ-ಗಂಭೀರ್‌ ಮುನಿಸು?

    ವೈಯಕ್ತಿಕ ಹಗೆತನಕ್ಕೆ ಬಲಿಯಾಗ್ತಿದೆಯೇ ಟೀಂ ಇಂಡಿಯಾ – ಇನ್ನೂ ಮುಗಿದಿಲ್ವಾ ಕೊಹ್ಲಿ-ಗಂಭೀರ್‌ ಮುನಿಸು?

    ಇತ್ತೀಚೆಗೆ ಭಾರತೀಯ ಪುರುಷರ ಕ್ರಿಕೆಟ್‌ ತಂಡ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನ 2-0 ಅಂತರದಲ್ಲಿ ಸೋಲನುಭವಿಸಿತು. ಈ ಸರಣಿಯೊಂದಿಗೆ ನಿವೃತ್ತಿಯ ಅಂಚಿನಲ್ಲಿರುವ ಸ್ಟಾರ್‌ ಕ್ರಿಕೆಟಿಗರಾದ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಆಸ್ಟ್ರೇಲಿಯಾ ಮಣ್ಣಿಗೆ ವಿದಾಯ ಹೇಳಿದರು. ಸರಣಿ ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾ ಕೋಚ್‌ ಗೌತಮ್ ಗಂಭೀರ್ ಮತ್ತು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಅವರ ವಿರುದ್ಧ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ. ತಂಡದ ಆಯ್ಕೆ ಮತ್ತು ತಂತ್ರಗಾರಿಕೆಯಲ್ಲಿ ಲೋಪಗಳಾಗಿವೆ ಎಂಬ ಆರೋಪಗಳು ಕೇಳಿಬರುತ್ತಿವೆ. ಹಿರಿಯ ಆಟಗಾರರ ಅನುಭವವನ್ನು ಬಳಸಿಕೊಳ್ಳದಿರುವುದು ಕೂಡ ಟೀಕೆಗೆ ಗುರಿಯಾಗಿದೆ. ಇಬ್ಬರೂ ತಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡರೆ ತಂಡದ ಭವಿಷ್ಯ ಸುಗಮವಾಗಲಿದೆ ಎಂಬುದು ಕೂಡ ಕ್ರಿಕೆಟ್‌ ತಜ್ಞರ ಅಭಿಪ್ರಾಯವಾಗಿದೆ.

    ಅಷ್ಟಕ್ಕೂ ಟೀಂ ಇಂಡಿಯಾದಲ್ಲಿ ಏನಾಗ್ತಿದೆ? ವಿರಾಟ್‌ ಕೊಹ್ಲಿ, ಗೌತಮ್‌ ಗಂಭೀರ್‌, ರೋಹಿತ್‌ ಶರ್ಮಾ ನಡುವಿನ ಮುನಿಸು ಇನ್ನೂ ಬಗೆಹರಿದಿಲ್ಲವೇ? ಆಯ್ಕೆಯಲ್ಲಿ ಅನುಭವಿಗಳನ್ನೇ ಕಡೆಗಣಿಸುತ್ತಿರುವುದು ಏಕೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ…

    ಗಂಭಿರ್‌ ಕೋಚ್‌ ಆದ ಆರಂಭದಲ್ಲೇ ವಿಘ್ನ!
    ಹೌದು.. 2024ರ ವರ್ಷ ಟೀಂ ಇಂಡಿಯಾಕ್ಕೆ ಅವಿಸ್ಮರಣೀಯ ಕ್ಷಣಗಳನ್ನ ತಂದುಕೊಟ್ಟಿತ್ತು. ಟೀಂ ಇಂಡಿಯಾ ಮಾಜಿ ಮುಖ್ಯಕೋಚ್‌ ರಾಹುಲ್‌ ದ್ರಾವಿಡ್‌ ಅವರ ಮಾರ್ಗದರ್ಶನದಲ್ಲಿ ಭಾರತ ತಂಡ ಟಿ20 ವಿಶ್ವಕಪ್‌ ಗೆದ್ದು ಬೀಗಿತ್ತು. ಈ ವಿಶ್ವಕಪ್‌ನೊಂದಿಗೆ ರಾಹುಲ್‌ ದ್ರಾವಿಡ್‌ ಕೋಚ್‌ ಹುದ್ದೆಗೆ ಗುಡ್‌ಬೈ ಹೇಳಿದ್ರು. ಹಾಗೆಯೇ ಲೆಜೆಂಡ್‌ ಆಟಗಾರರಾದ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದರು. 2024ರ ಜುಲೈ ಅಂತ್ಯದಿಂದ ಗೌತಮ್‌ ಗಂಭೀರ್‌ ಟೀಂ ಇಂಡಿಯಾ ಮುಖ್ಯಕೋಚ್‌ ಆಗಿ ಆಯ್ಕೆಯಾದರು. ಗಂಭೀರ್‌ ಸಾರಥ್ಯ ವಹಿಸಿಕೊಂಡ ನಂತರ ಟಿ20 ಸರಣಿಯಲ್ಲಿ ಸಾಲು ಸಾಲು ಗೆಲುವು ಸಾಧಿಸಿಸುತ್ತಿದ್ದ ಭಾರತ ನಿರ್ಣಾಯಕ ಏಕದಿನ, ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೀನಾಯ ಸೋಲು ಅನುಭವಿಸುತ್ತಲೇ ಬಂದಿತು.

    ಕೋಚ್‌ ಆದ ಆರಂಭದಲ್ಲೇ ಶ್ರೀಲಂಕಾ ವಿರುದ್ಧ ಏಕದಿನ ಸರಣಿ, ಬಳಿಕ ನ್ಯೂಜಿಲೆಂಡ್‌ ವಿರುದ್ಧ 3 ಪಂದ್ಯಗಳ ಟೆಸ್ಟ್‌ ಸರಣಿ ಸೋತಿತು. ಆ ಬಳಿಕ ಭಾರತಕ್ಕೆ ಪ್ರತಿಷ್ಠೆಯ ಸರಣಿಯಾಗಿದ್ದ ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲೂ ಭಾರತ 1-4 ಅಂತರದಲ್ಲಿ ಹೀನಾಯ ಸೋಲು ಕಂಡಿತು.

    ಗಂಭೀರ್‌ಗೆ ಬಲ ತುಂಬಿದ ʻಚಾಂಪಿಯನ್ಸ್‌ ಟ್ರೋಫಿʼ
    ಯೆಸ್‌. ಸಾಲು ಸಾಲು ಸರಣಿಗಳನ್ನ ಸೋತು ಭಾರೀ ಟೀಕೆಗೆ ಗುರಿಯಾಗಿದ್ದ ಗಂಭೀರ್‌ ಅವರ ನಾಯಕತ್ವಕ್ಕೆ ಬಲ ತುಂಬಿದ್ದು 2025ರ ಚಾಂಪಿಯನ್ಸ್‌ ಟ್ರೋಫಿ ಟೂರ್ನಿ. ರೋಹಿತ್‌ ಶರ್ಮಾ ನಾಯಕತ್ವದಲ್ಲಿ ಈ ಟೂರ್ನಿಯಲ್ಲಿ ಭಾರತ ಒಂದೇ ಒಂದು ಪಂದ್ಯವನ್ನೂ ಸೋಲದೇ ಟ್ರೋಫಿ ಎತ್ತಿ ಹಿಡಿಯಿತು. ಇದು ಗಂಭೀರ್‌ ನಾಯಕತ್ವದಲ್ಲಿ ಭಾರತ ಗೆದ್ದ ಮೊದಲ ಐಸಿಸಿ ಟ್ರೋಫಿ. ಅಲ್ಲದೇ ಕಳೆದ ತಿಂಗಳಷ್ಟೇ ನಡೆದ ಟಿ20 ಏಷ್ಯಾಕಪ್‌ ಟ್ರೋಫಿಯನ್ನು ಭಾರತ ತನ್ನದಾಗಿಸಿಕೊಂಡಿತು. ಇದ್ರ ಹೊರತಾಗಿಯೂ ಇತ್ತೀಚಿನ ಟೂರ್ನಿಗಳಲ್ಲಿ ಗೌತಮ್‌ ಗಂಭಿರ್‌ ಹಾಗೂ ಆಯ್ಕೆಯ ಸಮಿತಿ ನಿರ್ಧಾರಗಳು ಟೀಂ ಇಂಡಿಯಾ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿವೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಮೊದಲ ಎರಡು ಸ್ಥಾನಗಳಲ್ಲೇ ಇರುತ್ತಿದ್ದ ಟೀಂ ಇಂಡಿಯಾ ಈಗ ಐಸಿಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಕುಸಿದಿದೆ. ವಿಶ್ವಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ 3ನೇ ಸ್ಥಾನಕ್ಕೆ ಕುಸಿದಿದೆ. ಟಿ20 ಕ್ರಿಕೆಟ್‌ನಲ್ಲಿ ನಂ.1 ರ‍್ಯಾಂಕಿಗ್‌ ಇದ್ದರೂ, ರೇಟಿಂಗ್ಸ್‌ ಕಡಿಮೆ ಅಂತರದಲ್ಲೇ ಇದೆ. ಇದಕ್ಕೆ ಅನುಭವಿಗಳನ್ನ ಕಡೆಗಣಿಸುತ್ತಿರುವುದೇ ಕಾರಣ ಅಂತ ಗಂಭೀರ್‌ ಹಾಗೂ ಆಯ್ಕೆ ಸಮಿತಿ ವಿರುದ್ಧ ಅಸಮಾಧಾನ ಭುಗಿಲೆದ್ದಿದೆ.

    ಇನ್ನೂ ಕೊನೆಯಾಗಿಲ್ವಾ ಕೊಹ್ಲಿ-ಗಂಭೀರ್‌ ಮುನಿಸು?
    ಒಂದು ಕಾಲದಲ್ಲಿ ದೋಸ್ತಿಗಳಾಗಿದ್ದ ಗೌತಮ್‌ ಗಂಭೀರ್‌, ಕೊಹ್ಲಿ ನಡುವೆ ಈಗಲೂ ಮುಸುಕಿನ ಗುದ್ದಾಟ ನಡೆಯುತ್ತಿದೆ ಅನ್ನೋದು ಕೆಲವರ ಅಭಿಪ್ರಾಯ. 2009ರಲ್ಲಿ ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ಗೌತಮ್‌ ಗಂಭೀರ್‌ ತಮ್ಮ ಮ್ಯಾನ್‌ ಆಫ್‌ದಿ ಮ್ಯಾಚ್‌ (ಪಂದ್ಯಶ್ರೇಷ್ಠ) ಪ್ರಶಸ್ತಿಯನ್ನ ಕೊಹ್ಲಿಗೆ ಬಿಟ್ಟುಕೊಟ್ಟಿದ್ದರು. ಆದ್ರೆ 2013ರ ಐಪಿಎಲ್‌ ಟೂರ್ನಿವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುವ ವೇಳೆ ವಿರಾಟ್‌ ಹಾಗೂ ಗಂಭೀರ್‌ ನಡುವೆ ಫಸ್ಟ್‌ ಟೈಂ ವಾಗ್ವಾದ ಏರ್ಪಟ್ಟಿತು. ಬಳಿಕ ಇದು ದೊಡ್ಡಾಗುತ್ತಲೇ ಸಾಗಿತು. ಗಂಭೀರ್‌, ಕೊಹ್ಲಿ ಇರುವ ತಂಡಗಳು ಪರಸ್ಪರ ಮುಖಾಮುಖಿಯಾದಾಗೆಲ್ಲ ಪರಸ್ಪರ ಕೌಂಟರ್‌ಗಳು ಮುಂದುವರಿಯಿತು. 2023ರ ಐಪಿಎಲ್‌ನಲ್ಲಿ ಗಂಭೀರ್‌ ಲಕ್ನೋ ಸೂಪರ್‌ ಜೈಂಟ್ಸ್‌ ಮೆಂಟರ್‌ ಆಗಿದ್ದಾಗ ಕೊಹ್ಲಿ ಅಭಿಮಾನಿಗಳಿಗೆ ಟಾಂಗ್‌ ಕೊಟ್ಟಿದ್ದರು, ಇದಕ್ಕೆ ಕೊಹ್ಲಿಗೆ ನೀಡಿದ ಕೌಂಟರ್‌ ಕೊಟ್ಟಾಗ ವಿವಾದ ದೊಡ್ಡಾಗಿತ್ತು. ಇದು ಈ ಇಬ್ಬರ ವೈಮನಸ್ಯ ಮುಂದುವರಿಯಲು ಕಾರಣವಾಗಿದೆ ಎನ್ನಲಾಗ್ತಿದೆ. ಮೇಲ್ನೋಟಕ್ಕೆ ಕೊಹ್ಲಿ-ರೋಹಿತ್‌-ಗಂಭೀರ್‌ ನಡುವೆ ಹೊಂದಾಣಿಕೆ ಇದ್ದಂತೆ ಕಂಡುಬಂದರೂ ಮುಸುಕಿನ ಗುದ್ದಾಟ ನಿಂತಿಲ್ಲ ಎನ್ನುತ್ತಿವೆ ಆಪ್ತ ಮೂಲಗಳು. ಮತ್ತೊಂದೆಡೆ ಈಗಾಗಲೇ 38 ವರ್ಷ ವಯಸ್ಸಿನ ರೋಹಿತ್‌, 37 ವರ್ಷದ ಕೊಹ್ಲಿಗೆ 2027ರ ವಿಶ್ವಕಪ್‌ಗೆ ಅವಕಾಶ ಸಿಗಲಿದೆಯೇ ಎಂಬುದನ್ನ ಕಾದುನೋಡಬೇಕಿದೆ.

    ರಾಹುಲ್‌, ಅಯ್ಯರ್‌ ಬಿಟ್ಟು ಗಿಲ್‌ಗೆ ಮಣೆಹಾಕಿದ್ದೇಕೆ?
    ಯೆಸ್‌. ಮತ್ತೊಂದು ಕಡೆ ಶುಭಮನ್‌ ಗಿಲ್‌ ಅವರನ್ನ ಟೀಂ ಇಂಡಿಯಾ ಕ್ಯಾಪ್ಟನ್‌ ಆಗಿ ಮಾಡಿದ್ದು, ಕೆಲವರಲ್ಲಿ ಬೇಸರ ತರಿಸಿದೆ. ಏಕೆಂದ್ರೆ 33 ವರ್ಷದ ಕೆ.ಎಲ್‌ ರಾಹುಲ್‌, 30 ವರ್ಷದ ಶ್ರೇಯಸ್‌ ಅಯ್ಯರ್‌ ತಂಡದಲ್ಲಿ ಅನುಭವಿಗಳಿದ್ದಾರೆ. ಚಾಂಪಿಯನ್ಸ್‌ ಟ್ರೋಫಿಯಲ್ಲಿ ಶ್ರೇಯಸ್‌ ಅಯ್ಯರ್‌ ಟೀಂ ಇಂಡಿಯಾ ಪರ ಉತ್ತಮ ಪ್ರದರ್ಶನದೊಂದಿಗೆ ಗರಿಷ್ಠ ರನ್‌ ಗಳಿಸಿದ್ರು. ಇನ್ನೂ ಕೆ.ಎಲ್‌ ರಾಹುಲ್‌ ಮ್ಯಾಚ್‌ ಫಿನಿಷರ್‌ ಆಗಿ ಅದ್ಭುತ ಪ್ರದರ್ಶನ ನೀಡಿದ್ದರು. ಅಲ್ಲದೇ 2023ರಲ್ಲೂ ರಾಹುಲ್‌ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಗೆಲ್ಲಿಸಿ ಸೈ ಎನಿಸಿಕೊಂಡಿದ್ದರು. ಹೀಗಾಗಿ ಕೆಲವರು ಕೆ.ಎಲ್‌ ರಾಹುಲ್‌ಗೆ ನಾಯಕತ್ವ ಸಿಗುತ್ತೇ ಎಂದೇ ಭಾವಿಸಿದ್ದರು. ಇನ್ನೂ ಕೆಲವರು ಶ್ರೇಯಸ್‌ ಅಯ್ಯರ್‌ ಅವರಿಗೆ ಅವಕಾಶ ಸಿಗಲಿದೆ ಅಂದುಕೊಂಡಿದ್ದರು. ಏಕೆಂದ್ರೆ 26 ವರ್ಷದ ಗಿಲ್‌ಗೆ ಇನ್ನೂ 8-10 ವರ್ಷ ಆಡುವ ಅವಕಾಶವಿದೆ. ಆದ್ರೆ ಗಂಭೀರ್‌ ಅವರ ಮಾಸ್ಟರ್‌ ಪ್ಲ್ಯಾನ್‌ ಬೇರೆಯೇ ಇತ್ತು. ಏಕಾಏಕಿ ಗಿಲ್‌ ಅವರಿಗೆ ನಾಯಕತ್ವದ ಹಣೆಪಟ್ಟಿ ಕಟ್ಟಿದರು. ಇದು ರಾಹುಲ್‌, ಅಯ್ಯರ್‌ ಅಭಿಮಾನಿಗಳಲ್ಲಿ ತೀರ ಬೇಸರ ಮೂಡಿಸಿದೆ.

    ಆಸಿಸ್‌ ವಿರುದ್ಧ ಸರಣಿಯಲ್ಲಿ ಗಂಭೀರ್‌ ಮಾಡಿದ ತಪ್ಪುಗಳೇನು?
    SENA ದೇಶಗಳಲ್ಲಿ ಅಂದ್ರೆ ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ದೇಶಗಳಲ್ಲಿನ ಕ್ರಿಕೆಟ್ ಪಿಚ್‌ಗಳು ಒಂದೇ ರೀತಿಯ ಭೌಗೋಳಿಕ – ಪ್ರಾಕೃತಿಕ ಮೂಲಗುಣಗಳನ್ನ ಹೊಂದಿರುತ್ತವೆ. ಹಾಗಾಗಿ, ಆ ದೇಶಗಳಲ್ಲಿ ನಡೆಯುವ ಕ್ರಿಕೆಟ್ ಸರಣಿಗಳಿಗೆ ಹೋಗುವ ಭಾರತ ತಂಡವನ್ನು ಅತ್ಯಂತ ಜಾಣತನದಿಂದ ಆಯ್ಕೆ ಮಾಡಬೇಕಾಗುತ್ತದೆ. ಆದರೆ, ಇದೇ ವರ್ಷ ನಡೆದಿರುವ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನೆಲದಲ್ಲಿ ನಡೆದಿರುವ ಸರಣಿಗಳಿಗಾಗಿ ಆಯ್ಕೆ ಮಾಡಿರುವ ಭಾರತ ತಂಡಕ್ಕೆ ಸೂಕ್ತ ಆಟಗಾರರನ್ನ ಆಯ್ಕೆ ಮಾಡದಿರುವುದು ಗೌತಮ್ ಗಂಭೀರ್ ಮೇಲಿರುವ ಪ್ರಮುಖವಾದ ಆಪಾದನೆಯಾಗಿದೆ. ಅಂಥ ತಪ್ಪುಗಳನ್ನು ಹೀಗೆ ಪಟ್ಟಿ ಮಾಡಬಹುದು.

    * ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ಕ್ರಮಾಂಕ ಬದಲಾಯಿಸಿದ್ದು,
    * ಇಂಗ್ಲೆಂಡ್ ವಿರುದ್ಧ ಕುಲ್‌ದೀಪ್‌ ಯಾದವ್ ಅವರ ಟ್ರ್ಯಾಕ್ ರೆಕಾರ್ಡ್ ಉತ್ತಮವಾಗಿದ್ದರೂ ಅವರನ್ನು ಇಂಗ್ಲೆಂಡ್ ವಿರುದ್ಧದ ಸರಣಿಯ‌ಲ್ಲಿ ಪ್ಲೇಯಿಂಗ್‌-11ನಿಂದ ಹೊರಗಿಟ್ಟಿದ್ದು,
    * ಆಸ್ಟ್ರೇಲಿಯಾದಲ್ಲಿನ ಗ್ರೀನ್-ಟಾಪ್ ಪಿಚ್ ಗಳಲ್ಲಿ ಇಬ್ಬರು ಸ್ಪಿನ್ನರ್ ಗಳನ್ನು ತಂಡದಲ್ಲಿ ಆಡಿಸಿದ್ದು,
    * ಆಸೀಸ್ ಪಿಚ್‌ಗಳಲ್ಲಿ ಇನ್ನೂ ನುರಿತಿರಲಾರದ ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಹರ್ಷಿತ್ ರಾಣಾ ಅವರನ್ನ ಕಣಕ್ಕಿಳಿಸಿದ್ದು.

    AUS vs IND 2nd ODI

    ಇದನ್ನು ಹೊರತುಪಡಿಸಿಯೂ, ಗಂಭೀರ್ ಅವರ ತಪ್ಪು ಆಯ್ಕೆಗಳಿಂದಾಗಿ ತಂಡದ ಪ್ರದರ್ಶನದ ಕಳಪೆಯಾದಾಗ ಯಾರಾದರೂ ಆ ಬಗ್ಗೆ ಮಾತನಾಡಿದರೆ ಅವರಿಗೆ ಧಿಮಾಕಿನ ಉತ್ತರ ಕೊಡುವುದು ಗಂಭೀರ್ ಅವರ ಮತ್ತೊಂದು ಗುಣ. ಕ್ರಿಸ್ ಶ್ರೀಕಾಂತ್ ಅವರು ಹಿಂದೆ ತಂಡದ ಪ್ರದರ್ಶನದ ಬಗ್ಗೆ ಮಾತನಾಡಿದಾಗ ಅವರು ಲೆಜೆಂಡ್ ಎಂಬುದನ್ನೂ ಕೇರ್ ಮಾಡದೇ ಒರಟಾಗಿ ಉತ್ತರ ಕೊಟ್ಟಿದ್ದರು ಗಂಭೀರ್. ಅದೂ ಅಲ್ಲದೆ, ಅವರ ಸೋಷಿಯಲ್ ಮೀಡಿಯಾ ಪೋಸ್ಟ್ ಗಳು, ಸರ್ಫರಾಜ್ ಖಾನ್ ಅವರ ವಿರುದ್ಧ ಧೋರಣೆ… ಇವೆಲ್ಲದರ ಬಗ್ಗೆಯೂ ಈಗ ಅಸಮಾಧಾನ ಭುಗಿಲೆದ್ದಿದೆ. ಇದಕ್ಕೆ ಬಿಸಿಸಿಐ ಯಾವ ರೀತಿ ಮದ್ದು ಅರೆಯುತ್ತದೆ ಎಂಬುದನ್ನ ಇನ್ನಷ್ಟೇ ಕಾದುನೋಡಬೇಕಿದೆ.

  • Shreyas Iyer In ICU | ಪಕ್ಕೆಲುಬು ಗಾಯದಿಂದ ರಕ್ತಸ್ರಾವ – ಐಸಿಯುನಲ್ಲಿ ಶ್ರೇಯಸ್‌ ಅಯ್ಯರ್‌ಗೆ ಚಿಕಿತ್ಸೆ

    Shreyas Iyer In ICU | ಪಕ್ಕೆಲುಬು ಗಾಯದಿಂದ ರಕ್ತಸ್ರಾವ – ಐಸಿಯುನಲ್ಲಿ ಶ್ರೇಯಸ್‌ ಅಯ್ಯರ್‌ಗೆ ಚಿಕಿತ್ಸೆ

    ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಕೊನೇ ಪಂದ್ಯದಲ್ಲಿ ಕ್ಯಾಚ್‌ ಹಿಡಿಯವ ವೇಳೆ ಎಡ ಪಕ್ಕೆಲುಬು ಗಾಯಕ್ಕೆ ತುತ್ತಾಗಿ ಟೀಂ ಇಂಡಿಯಾ ಉಪನಾಯಕ ಶ್ರೇಯಸ್‌ ಅಯ್ಯರ್‌ (Shreyas Iyer) ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಂತರಿಕ ರಕ್ತಸ್ರಾವದಿಂದ ಬಳಲುತ್ತಿರುವ ಅಯ್ಯರ್ ಅವರನ್ನ ಸಿಡ್ನಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    34ನೇ ಓವರ್‌ನಲ್ಲಿ ಆಸ್ಟ್ರೇಲಿಯಾದ ಅಲೆಕ್ಸ್‌ ಕ್ಯಾರಿ (Alex Carey) ಬಾರಿಸಿದ ಚೆಂಡನ್ನು ಹಿಡಿಯಲು ಹಿಂದಕ್ಕೆ ಓಡಿ ಅದ್ಭುತ ಕ್ಯಾಚ್ ಪಡೆದುಕೊಂಡಿದ್ದರು. ಆ ಸಂದರ್ಭದಲ್ಲಿ ಅಯ್ಯರ್ ಪಕ್ಕೆಲುಬಿನ ಗಾಯಕ್ಕೆ ಒಳಗಾಗಿ ಮೈದಾನ ತೊರಿದಿದ್ದರು. ಅಲ್ಲದೇ ಡ್ರೆಸ್ಸಿಂಗ್‌ ರೂಮ್‌ಗೆ ಬರ್ತಿದ್ದಂತೆ ಅಯ್ಯರ್‌ ಅವರನ್ನ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವರದಿಯಲ್ಲಿ ಆಂತರಿಕ ರಕ್ತಸ್ರಾವವಾಗಿರುವುದು ಪತ್ತೆಯಾಗಿದ್ದು, ಕಳೆದ ಎರಡು ದಿನಗಳಿಂದ ಐಸಿಯುನಲ್ಲೇ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ತಿಳಿದುಬಂದಿದೆ.

    ರಕ್ತಸ್ರಾವದಿಂದ ಸೋಂಕು ಹರಡುವುದನ್ನ ತಪ್ಪಿಸುವ ಉದ್ದೇಶದಿಂದ ಚೇತರಿಕೆಯ ಆಧಾರದಲ್ಲಿ ಅವರನ್ನು ಎರಡರಿಂದ ಏಳು ದಿನಗಳ ಕಾಲ ವೈದ್ಯರ ಮೇಲ್ವಿಚಾರಣೆಯಲ್ಲಿಡಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.

    ಬಿಸಿಸಿಐ ಹೇಳೋದೇನು?
    ಸ್ಕ್ಯಾನ್‌ ವರದಿಯಲ್ಲಿ ಪಕ್ಕೆಲುಬು ಗಾಯವಾಗಿರುವುದು ಕಂಡುಬಂದಿದೆ. ಆದ್ರೆ ವೈದ್ಯಕೀಯವಾಗಿ ಸ್ಥಿರವಾಗಿದ್ದು, ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತಿದ್ದಾರೆ. ಸಿಡ್ನಿ ಮತ್ತು ಭಾರತದ ತಜ್ಞರ ಸಮನ್ವಯದೊಂದಿಗೆ ಬಿಸಿಸಿಐ ವೈದ್ಯಕೀಯ ತಂಡವು ಅಯ್ಯರ್‌ ಆರೋಗ್ಯ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಅದಕ್ಕಾಗಿ ವೈದ್ಯಕೀಯ ತಂಡವನ್ನ ಸಿಡ್ನಿಯಲ್ಲೇ ಇರಿಸಲಾಗಿದೆ ಎಂದು ಬಿಸಿಸಿಐ (BCCI) ಹೇಳಿದೆ.

    ಆರಂಭದಲ್ಲಿ ಅಯ್ಯ‌ರ್ ಸುಮಾರು 3 ವಾರಗಳ ಕಾಲ ಆಟದಿಂದ ಹೊರಗುಳಿಯಬೇಕಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದ್ರೆ ಪರಿಸ್ಥಿತಿ ಗಮನಿಸಿದರೆ ಅವರ ಚೇತರಿಕೆಯ ಅವಧಿ ಇನ್ನಷ್ಟು ವಿಸ್ತರಣೆಯಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

  • ಏಪ್ಯಾ ಕಪ್ ಗೆದ್ದ ಭಾರತಕ್ಕೆ ವಿಶ್, ಬಳಿಕ ಟ್ವಿಸ್ಟ್ ಕೊಟ್ಟ ನಖ್ವಿ!

    ಏಪ್ಯಾ ಕಪ್ ಗೆದ್ದ ಭಾರತಕ್ಕೆ ವಿಶ್, ಬಳಿಕ ಟ್ವಿಸ್ಟ್ ಕೊಟ್ಟ ನಖ್ವಿ!

    ಮುಂಬೈ: ಏಷ್ಯಾಕಪ್ (Asia Cup) ಟ್ರೋಫಿ ಹಿಂದಿರುಗಿಸುವಂತೆ ಬಿಸಿಸಿಐ (BCCI) ಇಮೇಲ್ ಪತ್ರಕ್ಕೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿ (Mohsin Naqwi) ಪ್ರತಿಕ್ರಿಯಿಸಿದ್ದಾರೆ. ಟ್ರೋಫಿ ಗೆದ್ದ ಟೀಂ ಇಂಡಿಯಾಕ್ಕೆ ಅಭಿನಂದನೆ ಸಲ್ಲಿಸಿರುವ ನಖ್ವಿ ಕೊನೆಯಲ್ಲಿ ಟ್ವಿಸ್ಟ್ ಕೊಟ್ಟಿದ್ದಾರೆ. `ಬಿಸಿಸಿಐ ಅಥವಾ ತಂಡದ ಯಾರಾದ್ರೂ ಬಂದು ಟ್ರೋಫಿ ಪಡೆಯಬಹುದು’ ಅಂತ ಹೇಳಿದ್ದಾರೆ.

    ಮಂಗಳವಾರ (ಅ.21) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮೊಹ್ಸಿನ್ ನಖ್ವಿಗೆ ಏಷ್ಯಾ ಕಪ್ ಟ್ರೋಫಿ ಹಸ್ತಾಂತರಿಸುವಂತೆ ಇಮೇಲ್ ಮೂಲಕ ಪತ್ರ ಬರೆದಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಏಪ್ಯಾ ಕಪ್ ಗೆದ್ದ ಭಾರತ ತಂಡಕ್ಕೆ ಅಭಿನಂದನೆ ತಿಳಿಸುತ್ತೇನೆ. ಬಿಸಿಸಿಐ ಅಥವಾ ಭಾರತ ತಂಡದ ಯಾರಾದರೂ ಬಂದು ತೆಗೆದುಕೊಂಡು ಹೋಗಬಹುದು. ಅಲ್ಲದೇ ಭಾರತ ತಂಡಕ್ಕೆ ಏಷ್ಯಾ ಕಪ್ ಟ್ರೋಫಿಯನ್ನು ನೀಡಬೇಕೆಂದು ಬಯಸಿದರೆ, ದುಬೈನಲ್ಲಿ ಇನ್ನೊಮ್ಮೆ ಪ್ರಶಸ್ತಿ ವಿತರಿಸಲು ಕಾರ್ಯಕ್ರಮ ಆಯೋಜಿಸುವಂತೆ ಕೇಳಿಕೊಂಡಿದ್ದಾರೆ.ಇದನ್ನೂ ಓದಿ: ಏಷ್ಯಾ ಕಪ್‌ ಟ್ರೋಫಿಯನ್ನ ಭಾರತಕ್ಕೆ ಹಸ್ತಾಂತರಿಸಿ – ಮೊಹ್ಸಿನ್‌ ನಖ್ವಿಗೆ ಬಿಸಿಸಿಐ ವಾರ್ನಿಂಗ್‌

    ಮೂಲಗಳ ಪ್ರಕಾರ, ಭಾರತಕ್ಕೆ ನಾನು ಟ್ರೋಫಿ ನೀಡುವುದಿಲ್ಲ, ಅದರ ಬದಲು ನವೆಂಬರ್ ಮೊದಲ ವಾರದಲ್ಲಿ ಕಾರ್ಯಕ್ರಮ ಆಯೋಜಿಸುತ್ತೇವೆ. ಭಾರತ ತಂಡದ ಯಾರಾದರೂ ಬಂದು ಟ್ರೋಫಿ ಪಡೆಯಬಹುದು ಎಂದು ತಿಳಿಸಿದ್ದಾರೆ. ನಖ್ವಿ ಪ್ರತಿಕ್ರಿಯೆನ್ನು ಬಿಸಿಸಿಯ ನಿರಾಕರಿಸಿದ್ದು, ನಮಗೆ ಏಷ್ಯಾ ಕಪ್ ಟ್ರೋಫಿಯೇ ಬೇಡ ಎನ್ನುವ ನಿರ್ಧಾರ ಕೈಗೊಂಡಿದೆ ಎನ್ನಲಾಗುತ್ತಿದೆ. ಜೊತೆಗೆ ಈ ಕುರಿತು ಐಸಿಸಿ ಸಭೆಯಲ್ಲಿ ನಿರ್ಧರಿಸುವ ಸಾಧ್ಯತೆಯಿದೆ.

    ಕಳೆದ ಸೆಪ್ಟೆಂಬರ್ 28ರಂದು ನಡೆದ ಟಿ೨೦ ಏಷ್ಯಾಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ, ಪಾಕ್ ವಿರುದ್ಧ ೫ ವಿಕೆಟ್‌ಗಳ ಜಯ ಸಾಧಿಸಿತು. ಆದ್ರೆ ನಖ್ವಿ ಅವರಿಂದ ಟ್ರೋಫಿ ಪಡೆಯಲು ಟೀಂ ಇಂಡಿಯಾ ನಿರಾಕರಿಸಿತು. ಹೀಗಾಗಿ ನಖ್ವಿ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಿಂದ ಹೊರಟರು ಜೊತೆಗೆ ಟ್ರೋಫಿಯನ್ನ ತೆಗೆದುಕೊಂಡು ಹೋದರು. ಹೀಗಾಗಿ ಭಾರತ ತಂಡ ಗೆದ್ದಿರುವ ಟ್ರೋಫಿಯನ್ನ ಹಿಂದಿರುಗಿಸುವಂತೆ ಹೇಳಿದೆ.

    ಟ್ರೋಫಿ ಎಲ್ಲಿದೆ?
    ಸದ್ಯ ಭಾರತ ಗೆದ್ದಿರುವ ಏಷ್ಯಾಕಪ್ ಟ್ರೋಫಿ ದುಬೈನ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಕಚೇರಿಯಲ್ಲೇ ಇದೆ. ತಮ್ಮ ಅನುಮತಿಯಿಲ್ಲದೇ ಯಾರೋ ಟ್ರೋಫಿಯನ್ನ ಹಸ್ತಾಂತರಿಸಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

    ನಖ್ವಿಯವರ ಆಪ್ತ ಮೂಲದ ಪ್ರಕಾರ, ಟ್ರೋಫಿ ದುಬೈನ ಎಸಿಸಿ ಕಚೇರಿಯಲ್ಲಿದೆ. ತನ್ನ ಅನುಮತಿಯಿಲ್ಲದೇ ಯಾರಿಗೂ ಟ್ರೋಫಿ ಹಸ್ತಾಂತರಿಸಬಾರದು. ಒಂದು ವೇಳೆ ಹಸ್ತಾಂತರಿಸಬೇಕಿದ್ರೆ, ನಾನೇ ಭಾರತ ತಂಡ ಅಥವಾ ಬಿಸಿಸಿಐಗೆ ವೈಯಕ್ತಿಕವಾಗಿ ಟ್ರೋಫಿ ಹಸ್ತಾಂತರಿಸೋದಾಗಿ ಹೇಳಿದ್ದಾರೆ.ಇದನ್ನೂ ಓದಿ: ಭಾರತಕ್ಕೆ ಏಷ್ಯಾ ಕಪ್‌ ನೀಡದ ಸಚಿವ ನಖ್ವಿಗೆ ಪಾಕ್‌ನಲ್ಲಿ ಚಿನ್ನದ ಪದಕ ನೀಡಿ ಸನ್ಮಾನಕ್ಕೆ ನಿರ್ಧಾರ

  • ಏಷ್ಯಾ ಕಪ್‌ ಟ್ರೋಫಿಯನ್ನ ಭಾರತಕ್ಕೆ ಹಸ್ತಾಂತರಿಸಿ – ಮೊಹ್ಸಿನ್‌ ನಖ್ವಿಗೆ ಬಿಸಿಸಿಐ ವಾರ್ನಿಂಗ್‌

    ಏಷ್ಯಾ ಕಪ್‌ ಟ್ರೋಫಿಯನ್ನ ಭಾರತಕ್ಕೆ ಹಸ್ತಾಂತರಿಸಿ – ಮೊಹ್ಸಿನ್‌ ನಖ್ವಿಗೆ ಬಿಸಿಸಿಐ ವಾರ್ನಿಂಗ್‌

    ಮುಂಬೈ: ಏಷ್ಯಾ ಕಪ್‌ ಟ್ರೋಫಿಯನ್ನ ಭಾರತಕ್ಕೆ ಹಸ್ತಾಂತರಿಸುವಂತೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (BCCI), ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ (ACC) ಅಧ್ಯಕ್ಷ ಹಾಗೂ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಅಧ್ಯಕ್ಷ ಮೊಹ್ಸಿನ್‌ ನಖ್ವಿಗೆ (Mohsin Naqvi) ಅಧಿಕೃತವಾಗಿ ಇ-ಮೇಲ್‌ ಪತ್ರ ಬರೆದಿದೆ.

    ಕಳೆದ ಸೆಪ್ಟೆಂಬರ್‌ 28ರಂದು ನಡೆದ ಟಿ20 ಏಷ್ಯಾಕಪ್‌ (Asia Cup ) ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಭಾರತ, ಪಾಕ್‌ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿತು. ಆದ್ರೆ ನಖ್ವಿ ಅವರಿಂದ ಟ್ರೋಫಿ ಪಡೆಯಲು ಟೀಂ ಇಂಡಿಯಾ ನಿರಾಕರಿಸಿತು. ಹೀಗಾಗಿ ನಖ್ವಿ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಿಂದ ಹೊರಟರು ಜೊತೆಗೆ ಟ್ರೋಫಿಯನ್ನ ತೆಗೆದುಕೊಂಡು ಹೋದರು. ಹೀಗಾಗಿ ಭಾರತ ತಂಡ ಗೆದ್ದಿರುವ ಟ್ರೋಫಿಯನ್ನ ಹಿಂದಿರುಗಿಸುವಂತೆ ಹೇಳಿದೆ.

    ಈ ಕುರಿತು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ಬಿಸಿಸಿಐ ನಖ್ವಿ ಅವರ ಪ್ರತಿಕ್ರಿಯೆಗಾಗಿ ಕಾಯುತ್ತಿದೆ. ಅವರ ಕಡೆಯಿಂದ ಯಾವುದೇ ಉತ್ತರ ಬರದಿದ್ದರೆ, ಐಸಿಸಿಗೆ (ICC) ದೂರು ನೀಡುವುದಾಗಿ ಎಚ್ಚರಿಸಿದೆ.

    ಟ್ರೋಫಿ ಎಲ್ಲಿದೆ?
    ಸದ್ಯ ಭಾರತ ಗೆದ್ದಿರುವ ಏಷ್ಯಾಕಪ್‌ ಟ್ರೋಫಿ ದುಬೈನ ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ ಕಚೇರಿಯಲ್ಲೇ ಇದೆ. ತಮ್ಮ ಅನುಮತಿಯಿಲ್ಲದೇ ಯಾರೋ ಟ್ರೋಫಿಯನ್ನ ಹಸ್ತಾಂತರಿಸಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

    ನಖ್ವಿಯವರ ಆಪ್ತ ಮೂಲದ ಪ್ರಕಾರ, ಟ್ರೋಫಿ ದುಬೈನ ಎಸಿಸಿ ಕಚೇರಿಯಲ್ಲಿದೆ. ತನ್ನ ಅನುಮತಿಯಿಲ್ಲದೇ ಯಾರಿಗೂ ಟ್ರೋಫಿ ಹಸ್ತಾಂತರಿಸಬಾರದು. ಒಂದು ವೇಳೆ ಹಸ್ತಾಂತರಿಸಬೇಕಿದ್ರೆ, ನಾನೇ ಭಾರತ ತಂಡ ಅಥವಾ ಬಿಸಿಸಿಐಗೆ ವೈಯಕ್ತಿಕವಾಗಿ ಟ್ರೋಫಿ ಹಸ್ತಾಂತರಿಸೋದಾಗಿ ಹೇಳಿದ್ದಾರೆ.

  • 2027ರ ವಿಶ್ವಕಪ್‌ ಆಡೋದು ಡೌಟ್‌ – ಆಸೀಸ್‌ ಸರಣಿ ಬಳಿಕ ʻಹಿಟ್‌ಮ್ಯಾನ್‌, ಕ್ರಿಕೆಟ್‌ ಲೋಕದ ಕಿಂಗ್‌ ಯುಗ ಅಂತ್ಯ?

    2027ರ ವಿಶ್ವಕಪ್‌ ಆಡೋದು ಡೌಟ್‌ – ಆಸೀಸ್‌ ಸರಣಿ ಬಳಿಕ ʻಹಿಟ್‌ಮ್ಯಾನ್‌, ಕ್ರಿಕೆಟ್‌ ಲೋಕದ ಕಿಂಗ್‌ ಯುಗ ಅಂತ್ಯ?

    ಭಾರತೀಯ ಕ್ರಿಕೆಟ್ ಲೋಕ ಎಂದೂ ನೆನಪಿಟ್ಟುಕೊಳ್ಳುವ ಸ್ಟಾರ್‌ ಆಟಗಾರ ಹಿಟ್‌ಮ್ಯಾನ್‌ ರೋಹಿತ್ ಶರ್ಮಾ (Rohit Sharma). ಇನ್ನೂ ಕೆಲ ವರ್ಷಗಳವರೆಗೆ ಟಾಪ್-10 ಕ್ರಿಕೆಟಿಗರ ಪಟ್ಟಿಯಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುವ ಹೆಸರೆಂದರೇ ಅದು ರೋಹಿತ್ ಶರ್ಮಾ. ಅವರಿಗೆ ತಮ್ಮ ಕ್ರೆಕೆಟ್‌ ಬದುಕಿಗೆ ತೆರೆ ಎಳೆಯುವ ಸನಿಹಕ್ಕೆ ಬಂದಿದ್ದಾರೆ. ಅಲ್ಲದೇ ಕ್ರಿಕೆಟ್‌ ಲೋಕದ ಕಿಂಗ್‌ ಆಗಿ ಮೆರೆದಾಡಿದ ವಿರಾಟ್‌ ಕೊಹ್ಲಿ (Virat kohli) ಕೂಡ ಆಸ್ಟ್ರೇಲಿಯಾ ಏಕದಿನ ಸರಣಿ ಬಳಿಕ ಕ್ರಿಕೆಟ್‌ ವೃತ್ತಿ ಜೀವನಕ್ಕೆ ಗುಡ್‌ಬೈ ಹೇಳುವ ಸಾಧ್ಯತೆಗಳಿವೆ.

    ರೋಹಿತ್ ಶರ್ಮಾ ಅವರು ಈ ಮಟ್ಟಕ್ಕೆ ಬೆಳೆಯಲು ಕಠಿಣಶ್ರಮವೇ ಕಾರಣ. ಯಶಸ್ಸಿಗೆ ಮತ್ತೇನಾದ್ರೂ ಸೂತ್ರ ಇದೆಯಾ ಅಂತ ರೋಹಿತ್ ಅವರನ್ನೊಮ್ಮೆ ಕೇಳಿ ನೋಡಿದ್ರೆ ಅವರು ಕೊಡುವ ಆನ್ಸರ್, `ಹಾರ್ಡ್ ವರ್ಕ್.. ಹಾರ್ಡ್ ವರ್ಕ್.. ಓನ್ಲಿ ಹಾರ್ಡ್ ವರ್ಕ್’. ಬಾಲ್ಯದಿಂದಲೇ ರೋಹಿತ್‌ಗೆ ಕ್ರಿಕೆಟ್ (Cricket) ಅಂದರೆ ಪ್ರಾಣ. ಮುಂಬೈಗೆ ಬಂದ ಮೇಲೆ ಗಲ್ಲಿಗಲ್ಲಿಗಳಲ್ಲಿ ಕ್ರಿಕೆಟ್ ಆಡಿಕೊಂಡಿದ್ದರು. 2006ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಹಿಟ್‌ಮ್ಯಾನ್‌ 2007ರ ಹೊತ್ತಿಗೆ ಟೀಂ ಇಂಡಿಯಾದಲ್ಲಿ ಅವಕಾಶ ಪಡೆದುಕೊಂಡರು. 2007ರ ಜೂನ್‌ 23ರಂದು ಐರ್ಲೆಂಡ್‌ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ (International Cricket) ಪದಾರ್ಪಣೆ ಮಾಡಿದರು. ಇದೀಗ ತಮ್ಮ 18 ವರ್ಷಗಳ ಕ್ರಿಕೆಟ್‌ ವೃತ್ತಿ ಜೀವನಕ್ಕೆ ತೆರೆ ಎಳೆಯುವ ಸನಿಹದಲ್ಲಿದ್ದಾರೆ. ಇದನ್ನೂ ಓದಿ: ಆಸೀಸ್‌ ವಿರುದ್ಧ ಸರಣಿಗೆ ಭಾರತ ತಂಡ ಪ್ರಕಟ – ಏಕದಿನ ಕ್ರಿಕೆಟ್‌ಗೆ ಗಿಲ್‌ ಕ್ಯಾಪ್ಟನ್‌; ರೋಹಿತ್‌, ಕೊಹ್ಲಿ ನಿವೃತ್ತಿ ಬಯಸಿದ್ಯಾ ಬಿಸಿಸಿಐ?

    ರೋಹಿತ್‌ ಸಾಧನೆ
    ಭಾರತದ ಆತಿಥ್ಯದಲ್ಲಿ ನಡೆದ 2023ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ 11 ಪಂದ್ಯಗಳ ಪೈಕಿ 10ರಲ್ಲಿ ಭಾರತ ವಿಜಯ ಸಾಧಿಸಿತ್ತು. ಈ ವೇಳೆ ರೋಹಿತ್‌ ಕ್ಯಾಪ್ಟನ್‌ ಆಗಿದ್ದರು. ಅಲ್ಲದೇ 2024ರಲ್ಲಿ ಭಾರತ ತಂಡಕ್ಕೆ ಟಿ20 ವಿಶ್ವಕಪ್‌, 2025ರಲ್ಲಿ ಚಾಂಪಿಯನ್ಸ್‌ ಟ್ರೋಫಿ ಗೆದ್ದುಕೊಟ್ಟರು. ಸದ್ಯ ಟಿ20, ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿರುವ ರೋಹಿತ್‌, ವಿರಾಟ್‌ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಮುಂದುವರಿಯುತ್ತಿದ್ದಾರೆ.

    ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ ಪ್ರಕಟವಾಗಿದ್ದು, ಯುವ ಆಟಾರ ಶುಭಮನ್‌ ಗಿಲ್ ಅವರಿಗೆ ನಾಯಕನ ಪಟ್ಟ ಕಟ್ಟಲಾಗಿದೆ. ಆದರೆ ರೋಹಿತ್‌ ಶರ್ಮಾ ಅವರಿಂದ ನಾಯಕತ್ವ ಕಸಿದುಕೊಂಡಿರುವ ಬಿಸಿಸಿಐ ಆಯ್ಕೆ ಸಮಿತಿ ವಿರುದ್ಧ ಅವರ ಅಭಿಮಾನಿಗಳು ಕೆರಳಿದ್ದಾರೆ. ಈ ಮಧ್ಯೆ ಮಾಜಿ ಇಂಗ್ಲೆಂಡ್‌ ಆಟಗಾರ ಡೇವಿಡ್‌ ಗೋವರ್‌ ಅವರು, ರೋಹಿತ್‌ ಶರ್ಮಾ ಮತ್ತು ವಿರಾಟ್‌ ಕೊಹ್ಲಿ ಅವರು 2027ರ ಏಕದಿನ ವಿಶ್ವಕಪ್‌ ಹೊತ್ತಿಗೆ ಭಾರತ ತಂಡದ ಭಾಗವಾಗಿರುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.‌  

    ಡೇವಿಡ್‌ ಗೋವರ್‌ ಹೇಳಿದ್ದೇನು?
    ರೋ-ಕೊ (ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ) ಖ್ಯಾತಿಯ ಇಬ್ಬರು ಅನುಭವಿ ಆಟಗಾರರು 2027ರ ವಿಶ್ವಕಪ್‌ ಆಡುವುದಿಲ್ಲ. ಇದೇ ಕಾರಣಕ್ಕೆ ಟೀಂ ಇಂಡಿಯಾದಲ್ಲಿ ಮಹತ್ವದ ಬದಲಾವಣೆಗಳಾಗುತ್ತಿವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತ ನನ್ನ ಮಾತೃಭೂಮಿ, ಪಾಕಿಸ್ತಾನ ನನ್ನ ಜನ್ಮಭೂಮಿ – ಪಾಕ್‌ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ

    ಅಜಿತ್‌ ಅಗರ್ಕರ್‌ ಸಮರ್ಥನೆ
    ಇನ್ನೂ ಏಕದಿನ ಕ್ರಿಕೆಟ್‌ ಕ್ಯಾಪ್ಟನ್‌ ಆಗಿ ಶುಭಮನ್‌ ಗಿಲ್‌ ಅಯ್ಕೆಯನ್ನು ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್‌ ಅಗರ್ಕರ್‌ ಸಮರ್ಥಿಸಿಕೊಂಡಿದ್ದಾರೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ 2027ರ ವಿಶ್ವಕಪ್ ಆಡುವ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ ಆಸೀಸ್‌ ಸರಣಿ ಬಳಿಕ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಅವರ ಒಂದು ಯುಗ ಅಂತ್ಯವಾಗಲಿದೆ ಎನ್ನೋದು ಕೋಟ್ಯಂತರ ಅಭಿಮಾನಿಗಳ ಬೇಸರ. ಇದನ್ನೂ ಓದಿ: ವಿಂಡೀಸ್‌ ವಿರುದ್ಧ ಇನ್ನಿಂಗ್ಸ್ & 140 ರನ್‌ಗಳ ಭರ್ಜರಿ ಗೆಲುವು – WTC ಅಂಕಪಟ್ಟಿಯಲ್ಲಿ 3ನೇ ಸ್ಥಾನ ಕಾಯ್ದುಕೊಂಡ ಭಾರತ

  • ಆಸೀಸ್‌ ವಿರುದ್ಧ ಸರಣಿಗೆ ಭಾರತ ತಂಡ ಪ್ರಕಟ – ಏಕದಿನ ಕ್ರಿಕೆಟ್‌ಗೆ ಗಿಲ್‌ ಕ್ಯಾಪ್ಟನ್‌; ರೋಹಿತ್‌, ಕೊಹ್ಲಿ ನಿವೃತ್ತಿ ಬಯಸಿದ್ಯಾ ಬಿಸಿಸಿಐ?

    ಆಸೀಸ್‌ ವಿರುದ್ಧ ಸರಣಿಗೆ ಭಾರತ ತಂಡ ಪ್ರಕಟ – ಏಕದಿನ ಕ್ರಿಕೆಟ್‌ಗೆ ಗಿಲ್‌ ಕ್ಯಾಪ್ಟನ್‌; ರೋಹಿತ್‌, ಕೊಹ್ಲಿ ನಿವೃತ್ತಿ ಬಯಸಿದ್ಯಾ ಬಿಸಿಸಿಐ?

    ಮುಂಬೈ: ಇದೇ ಅಕ್ಟೋಬರ್‌ 19ರಿಂದ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ 5 ಪಂದ್ಯಗಳ ಟಿ20 ಸರಣಿಗೆ ಬಿಸಿಸಿಐ ಟೀಂ ಇಂಡಿಯಾದ ಬಲಿಷ್ಠ ತಂಡವನ್ನ ಪ್ರಕಟಿಸಿದೆ.

    ಟಿ20 ಸರಣಿಗೆ ನಿರೀಕ್ಷೆಯಂತೆ ಸೂರ್ಯಕುಮಾರ್‌ ಯಾದವ್‌ ನಾಯಕನಾಗಿದ್ದಾರೆ. ಆದ್ರೆ ರೋಹಿತ್‌, ಕೊಹ್ಲಿ ತಂಡದಲ್ಲಿದ್ದರೂ ಏಕದಿನ ಕ್ರಿಕೆಟ್‌ಗೆ ನೂತನ ನಾಯಕನಾಗಿ ಶುಭಮನ್‌ ಗಿಲ್‌ ಅವರನ್ನ ಆಯ್ಕೆ ಮಾಡಿದೆ. ಹೀಗಾಗಿ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಅವರ ನಿವೃತ್ತಿಯ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ.

    ಸರಣಿ ಬಳಿಕ ನಿವೃತ್ತಿ ಹೇಳ್ತಾರಾ ರೊ-ಕೊ?
    ಈಗಾಗಲೇ ಟೆಸ್ಟ್‌‌ ಹಾಗೂ ಟಿ20 ಕ್ರಿಕೆಟ್‌ಗೆ (T20 Cricket) ನಿವೃತ್ತಿ ಘೋಷಿಸಿರುವ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಇದೀಗ ಏಕದಿನ ಕ್ರಿಕೆಟ್‌ ವೃತ್ತಿ ಜೀವನಕ್ಕೂ ತೆರೆ ಎಳೆಯುವ ಸನಿಹದಲ್ಲಿದ್ದಾರೆ. ಮೂಲಗಳ ಹೇಳುವಂತೆ, 2027ರ ಏಕದಿನ ವಿಶ್ವಕಪ್‌ ತಂಡದಲ್ಲಿ ಈ ಜೋಡಿ ಸ್ಥಾನ ಪಡೆಯುವುದು ಖಚಿತವಿಲ್ಲ. ಏಕೆಂದ್ರೆ ಈಗಾಗಲೇ ಇಬ್ಬರೂ ದಿಗ್ಗಜರು ಟೆಸ್ಟ್‌ ಹಾಗೂ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಕಾರಣ ಮುಂಬರುವ ವರ್ಷಗಳಲ್ಲಿ ಪಂದ್ಯದ ಸಮಯವೂ ಸೀಮಿತವಾಗಿರಲಿದೆ. ಹೀಗಾಗಿ ಭಾರತೀಯ ಕ್ರಿಕೆಟ್‌ (Indian Cricket) ನಿಯಂತ್ರಣ ಮಂಡಳಿ ಕೂಡ ಇವರಿಬ್ಬರ ಆಯ್ಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ. ಈ ಅಕ್ಟೋಬರ್‌ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಅತ್ಯಂತ ನಿರ್ಣಾಯಕವಾಗಿದೆ.

    ರೋಹಿತ್‌ ಮತ್ತು ಕೊಹ್ಲಿ 2027ರ ಏಕದಿನ ವಿಶ್ವಕಪ್‌ (World Cup 2027) ರೇಸ್‌ನಲ್ಲಿ ಉಳಿಯಬೇಕಾದ್ರೆ ಈ ವರ್ಷ ಡಿಸೆಂಬರ್‌ನಲ್ಲಿ ಶುರುವಾಗಲಿರುವ ದೇಸಿ ಕ್ರಿಕೆಟ್‌ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಬೇಕಾಗುತ್ತೆ. ಇಲ್ಲದಿದ್ದರೆ, ಬಹುತೇಕ ಏಕದಿನ ಕ್ರಿಕೆಟ್‌ನಿಂದಲೂ ಔಟ್‌ ಆಗಲಿದ್ದಾರೆ. ಇದಕ್ಕೆ ವಯಸ್ಸಿನ ಮಿತಿಯೂ ಒಂದು ಕಾರಣವಾಗಿರಲಿದೆ.

    ಅಯ್ಯರ್‌ ಕಂಬ್ಯಾಕ್‌
    ಇನ್ನೂ ಏಷ್ಯಾಕಪ್‌ ಟೂರ್ನಿಯಿಂದ ಕಡೆಗಣಿಸಲ್ಪಟ್ಟಿದ್ದ ಶ್ರೇಯಸ್‌ ಅಯ್ಯರ್‌ಗೆ ಮುಂಬರುವ ಟೂರ್ನಿಗಳನ್ನ ಗಮನದಲ್ಲಿಟ್ಟಿಕೊಂಡು ಉಪನಾಯಕನ ಸ್ಥಾನ ನೀಡಲಾಗಿದೆ. ಚಾಂಪಿಯನ್ಸ್‌ ಟ್ರೋಫಿ ಟೂರ್ನಿ ಬಳಿಕ ಏಕದಿನ ಕ್ರಿಕೆಟ್‌ಗೆ ಕನ್ನಡಿಗ ಕೆ.ಎಲ್‌ ರಾಹುಲ್‌ ಕೂಡ ಕಂಬ್ಯಾಕ್‌ ಮಾಡಿದ್ದಾರೆ. ಇದರೊಂದಿಗೆ ಇದೇ ಮೊದಲಬಾರಿಗೆ ಏಕದಿನ ಕ್ರಿಕೆಟ್‌ಗೆ ಯುವ ಆಟಗಾರ ಯಶಸ್ವಿ ಜೈಸ್ವಾಲ್‌ ಪದಾರ್ಪಣೆ ಮಾಡಲಿದ್ದಾರೆ. ಆದ್ರೆ ಯಾರ್ಕರ್‌ ಸ್ಪೆಷಲಿಸ್ಟ್‌ ಜಸ್ಪ್ರೀತ್‌ ಬುಮ್ರಾ ಅವರನ್ನು ಏಕದಿನ ತಂಡದಿಂದ ಕೈಬಿಟ್ಟು, ಟಿ20 ತಂಡಕ್ಕೆ ಮಾತ್ರ ಆಯ್ಕೆ ಮಾಡಿರೋದು ಅಚ್ಚರಿ ಮೂಡಿಸಿದೆ. ಅಲ್ಲದೇ ಧ್ರುವ್‌ ಜುರೆಲ್‌, ನಿತೀಶ್‌ ಕುಮಾರ್‌ ರೆಡ್ಡಿ ಹೊಸ ಮುಖಗಳಿಗೆ ಬಿಸಿಸಿಐ ಮಣೆ ಹಾಕಿದೆ.

    ಭಾರತ ಏಕದಿನ ತಂಡ
    ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಅಕ್ಷರ್‌ ಪಟೇಲ್, ಕೆ.ಎಲ್ ರಾಹುಲ್ (ವಿಕೆಟ್‌ ಕೀಪರ್‌), ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲ್ದೀಪ್‌ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್, ಅರ್ಷ್‌ದೀಪ್ ಸಿಂಗ್, ಪ್ರಸಿದ್ಧ್‌ ಕೃಷ್ಣ, ಧ್ರುವ್‌ ಜುರೆಲ್ (ವಿಕೆಟ್‌ ಕೀಪರ್‌), ಯಶಸ್ವಿ ಜೈಸ್ವಾಲ್‌.

    ಭಾರತ ಟಿ20 ತಂಡ
    ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಶುಭಮನ್ ಗಿಲ್ (ಉಪನಾಯಕ), ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ (ವಿಕೆಟ್‌ ಕೀಪರ್‌), ವರುಣ್ ಚಕ್ರವರ್ತಿ, ಜಸ್ಪ್ರೀತ್‌ ಬುಮ್ರಾ, ಅರ್ಷ್‌ದೀಪ್ ಸಿಂಗ್, ಕುಲ್ದೀಪ್‌ ಯಾದವ್, ಹರ್ಷಿತ್ ರಾಣಾ, ಸಂಜು ಸ್ಯಾಮ್‌ಸನ್ (ವಿಕೆಟ್‌ ಕೀಪರ್‌), ವಾಷಿಂಗ್ಟನ್‌ ಸುಂದರ್‌.

    ಅ.19ರಿಂದ ನವೆಂಬರ್‌ 8ರ ವರೆಗೆ ಮೂರು ಏಕದಿನ ಪಂದ್ಯಗಳು ಹಾಗೂ 5 ಟಿ20 ಪಂದ್ಯಗಳ ಸರಣಿ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ಇದಕ್ಕಾಗಿ ಭಾರತ ತಂಡ ಶೀಘ್ರವೇ ಆಸ್ಟ್ರೇಲಿಯಾಕ್ಕೆ ಪ್ರವಾಸ ತೆರಳಲಿದ್ದು, ಅಭ್ಯಾಸ ಆರಂಭಿಸಲಿದೆ.

    ಗಿಲ್‌ ಮೇಲೆ ಹೆಚ್ಚಿದ ಭರವಸೆ
    ಕೆಲ ದಿನಗಳ ಹಿಂದೆ ಇಂಗ್ಲೆಂಡ್‌ನಲ್ಲಿ ನಡೆದ ʻಆಂಡರ್ಸನ್‌-ತೆಂಡೂಲ್ಕರ್‌ʼ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಟೀಂ ಇಂಡಿಯಾದ ಯುವ ನಾಯಕನಾಗಿದ್ದ ಗಿಲ್‌ ಅವರ ಯಶಸ್ಸು ಆಯ್ಕೆ ಸಮಿತಿಗೆ ನಂಬಿಕೆ ತಂದುಕೊಟ್ಟಿದೆ. ಹೀಗಾಗಿ 2027ರ ವಿಶ್ವಕಪ್‌ಗೆ ಹೊಸ ಪ್ರತಿಭೆಗಳೊಂದಿಗೆ ಮುನ್ನಡೆಯಲು ಬಿಸಿಸಿಐ ನಿರ್ಧರಿಸಿದ್ದು, ಶುಭಮನ್‌ ಗಿಲ್‌ ಅವರನ್ನೇ ಟೀಂ ಇಂಡಿಯಾದ ದೀರ್ಘಾವಧಿ ನಾಯಕನ್ನಾಗಿ ಆಯ್ಕೆ ಮಾಡಲು ನಿರ್ಧರಿಸಿದೆ. ಆದ್ದರಿಂದ ರೋಹಿತ್‌, ಕೊಹ್ಲಿ ಅಂತಹ ದಿಗ್ಗಜರು ಇರುವಾಗಲೇ ಗಿಲ್‌ಗೆ ನಾಯಕನ ಹೊಣೆ ನೀಡಲಾಗಿದೆ.

  • ಬಿಸಿಸಿಐ ಮುಂದೆ ಮಂಡಿಯೂರಿದ ಪಾಕ್‌ ಸಚಿವ – ಕದ್ದೊಯ್ದಿದ್ದ ಏಷ್ಯಾ ಕಪ್‌ ವಾಪಸ್‌

    ಬಿಸಿಸಿಐ ಮುಂದೆ ಮಂಡಿಯೂರಿದ ಪಾಕ್‌ ಸಚಿವ – ಕದ್ದೊಯ್ದಿದ್ದ ಏಷ್ಯಾ ಕಪ್‌ ವಾಪಸ್‌

    ಮುಂಬೈ: ಬಿಸಿಸಿಐ ಮುಂದೆ ಕೊನೆಗೂ ಪಾಕ್‌ ಸಚಿವ, ಎಸಿಸಿ ಮುಖ್ಯಸ್ಥ ಮೊಹ್ಸಿನ್‌ ನಖ್ವಿ (Mohsin Naqvi) ಮಂಡಿಯೂರಿದ್ದಾರೆ. ಏಷ್ಯಾ ಕಪ್‌ ಟ್ರೋಫಿಯನ್ನು ಯುಎಇ ಕ್ರಿಕೆಟ್‌ ಮಂಡಳಿಗೆ ವಾಪಸ್‌ ಕೊಟ್ಟಿದ್ದಾರೆ.

    ಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನ ಮಣಿಸಿ ಏಷ್ಯಾ ಕಪ್‌ (Asia Cup) ಟ್ರೋಪಿ ಜಯಿಸಿತು. ಆದರೆ, ಪಾಕ್‌ ಸಚಿವ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ಭಾರತ ತಂಡ ನಿರಾಕರಿಸಿತು. ಈ ವೇಳೆ, ಟ್ರೋಫಿ ಕೊಡದೇ ಪಾಕ್‌ ಸಚಿವ ಉದ್ಧಟತನ ತೋರಿದರು. ಈ ಬೆಳವಣಿಗೆ ಸಾಕಷ್ಟು ವಿವಾದ ಸೃಷ್ಟಿಸಿತು. ಇದನ್ನೂ ಓದಿ: ಪಾಕ್‌ ಸಚಿವನಿಂದ ಏಷ್ಯಾಕಪ್‌ ಟ್ರೋಫಿ ಸ್ವೀಕರಿಸಲು ನಿರಾಕರಿಸಿದ ಟೀಂ ಇಂಡಿಯಾ

    ಏಷ್ಯಾ ಕಪ್‌ ಟ್ರೋಫಿ ಕಳ್ಳತನ ಮಾಡಿದ್ದಾರೆಂಬ ಅಪವಾದವನ್ನೂ ನಖ್ವಿ ಹೊತ್ತುಕೊಂಡರು. ಟ್ರೋಫಿಯನ್ನು ಟೀಂ ಇಂಡಿಯಾ ಕ್ಯಾಪ್ಟನ್‌ ಕಚೇರಿಗೆ ಬಂದು ತೆಗೆದುಕೊಂಡು ಹೋಗಬಹುದು ಎಂಬಂತಹ ದರ್ಪದ ಮಾತುಗಳನ್ನು ಆಡಿದ್ದರು.

    ನಖ್ವಿ ನಡೆಯನ್ನು ಖಂಡಿಸಿದ ಬಿಸಿಸಿಐ, ಪಾಕ್‌ ಜೊತೆಗೆ ಕ್ರಿಕೆಟ್‌ ಪಂದ್ಯವಾಡುವ ಯಾವ ತಂಡದ ಜೊತೆಗೂ ಭಾರತದ ತಂಡ ಆಟವಾಡಲ್ಲ ಎಂದು ಖಡಕ್‌ ಸಂದೇಶ ರವಾನಿಸಿತು. ಬಿಸಿಸಿಐನಿಂದ ಹೇಳಿಕೆ ಹೊರಬಿದ್ದ ಬೆನ್ನಲ್ಲೇ, ಕದ್ದೊಯ್ದಿದ್ದ ಕಪ್‌ನ್ನು ನಖ್ವಿ ಹಿಂದಿರುಗಿಸಿದ್ದಾರೆ. ಇದನ್ನೂ ಓದಿ: ಚೆಕ್‌ ಹರಿದು ಎಸೆದ ಪಾಕ್‌ ಕ್ಯಾಪ್ಟನ್‌ ದುರಹಂಕಾರ – ಗೆದ್ರೂ ಟ್ರೋಫಿ ಇಲ್ಲದೇ ಸಂಭ್ರಮಿಸಿದ ಭಾರತ!

    ನವೆಂಬರ್‌ನಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಗೆ ದೂರು ಸಲ್ಲಿಸುವುದಾಗಿ ಭಾರತ ಬೆದರಿಕೆ ಹಾಕಿತ್ತು. ‘ಟ್ರೋಫಿ ಮತ್ತು ಪದಕಗಳನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗುವ ಹಕ್ಕನ್ನು ನೀಡುವುದಿಲ್ಲ. ಇದು ಅತ್ಯಂತ ದುರದೃಷ್ಟಕರ ಮತ್ತು ಕ್ರೀಡಾ ಮನೋಭಾವಕ್ಕೆ ವಿರುದ್ಧವಾಗಿದೆ. ಟ್ರೋಫಿ ಮತ್ತು ಪದಕಗಳನ್ನು ಆದಷ್ಟು ಬೇಗ ಭಾರತಕ್ಕೆ ಹಿಂದಿರುಗಿಸುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದು ಬಿಸಿಸಿಐ ತಿಳಿಸಿತ್ತು.

  • ಬಿಸಿಸಿಐ ಅಧ್ಯಕ್ಷರಾಗಿ ಮಿಥುನ್‌ ಮನ್ಹಾಸ್‌ ಅವಿರೋಧ ಆಯ್ಕೆ

    ಬಿಸಿಸಿಐ ಅಧ್ಯಕ್ಷರಾಗಿ ಮಿಥುನ್‌ ಮನ್ಹಾಸ್‌ ಅವಿರೋಧ ಆಯ್ಕೆ

    ಮುಂಬೈ: ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (BCCI)ಯ ಅಧ್ಯಕ್ಷರಾಗಿ ಮಿಥುನ್‌ ಮನ್ಹಾಸ್‌ (Mithun Manhas) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ಭಾನುವಾರ ಮುಂಬೈನಲ್ಲಿ ನಡೆದ ವಾರ್ಷಿಕ ಸಾಮಾನ್ಯ ಸಭೆ (ಎಜಿಎಂ) ಬಳಿಕ ಮಿಥುನ್ ಮನ್ಹಾಸ್ ಅವರನ್ನು ಅಧಿಕೃತವಾಗಿ ನೇಮಿಸಲಾಗಿದೆ. ಸೌರವ್ ಗಂಗೂಲಿ ಮತ್ತು ರೋಜರ್ ಬಿನ್ನಿ ನಂತರ ಈ ಹುದ್ದೆಯನ್ನು ಅಲಂಕರಿಸಿದ ಮೂರನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಮತ್ತೆ ಪಾಕಿಗೆ ನೋ ಎಂದ ಸ್ಕೈ – ನಾನು ಏನು ಹೇಳಲ್ಲ ಎಂದ ಸಲ್ಮಾನ್ ಅಲಿ

    ರೋಜರ್ ಬಿನ್ನಿ ನಂತರ ಭಾರತೀಯ ಕ್ರಿಕೆಟ್ ಆಡಳಿತವನ್ನು ಮಾರ್ಗದರ್ಶನ ಮಾಡುವ ಜವಾಬ್ದಾರಿಯನ್ನು ಮನ್ಹಾಸ್ ವಹಿಸಿಕೊಂಡಿದ್ದಾರೆ. ಈ ಹಿಂದೆ ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಅಸೋಸಿಯೇಷನ್‌ನ ಕ್ರಿಕೆಟ್ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

    ರಾಜೀವ್ ಶುಕ್ಲಾ ಅವರನ್ನು ಉಪಾಧ್ಯಕ್ಷರನ್ನಾಗಿ ಘೋಷಿಸಲಾಗಿದೆ. ಅವರು ಕ್ರಿಕೆಟ್ ಆಡಳಿತ ಮತ್ತು ಕಾರ್ಯತಂತ್ರದ ಯೋಜನೆ ಎರಡರಲ್ಲೂ ಅಪಾರ ಅನುಭವ ಹೊಂದಿದ್ದಾರೆ. ದೇವಜಿತ್ ಸೈಕಿಯಾ ಅವರನ್ನು ಗೌರವಾನ್ವಿತ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು. ಆದರೆ, ಪ್ರಭತೇಜ್ ಸಿಂಗ್ ಭಾಟಿಯಾ ಜಂಟಿ ಕಾರ್ಯದರ್ಶಿಯಾಗಿ ಪಾತ್ರ ವಹಿಸಿದರು. ಎ.ರಘುರಾಮ್ ಭಟ್ ಅವರು ಖಜಾಂಚಿಯಾಗಿ ಹಣಕಾಸು ಉಸ್ತುವಾರಿ ವಹಿಸಲಿದ್ದಾರೆ. ಇದನ್ನೂ ಓದಿ: ಏಷ್ಯಾ ಕಪ್‌ಗಾಗಿ ಇಂದು ಭಾರತ-ಪಾಕ್‌ ಸಮರ – 41 ವರ್ಷಗಳ ಇತಿಹಾಸಲ್ಲೇ ಫೈನಲ್‌ನಲ್ಲಿ ಮೊದಲ ಮುಖಾಮುಖಿ

  • ಭಾರತ-ಪಾಕ್ ಪಂದ್ಯದ ವೇಳೆ ದುವರ್ತನೆ – ಫರ್ಹಾನ್, ರೌಫ್‌ ವಿರುದ್ಧ ಐಸಿಸಿಗೆ ಬಿಸಿಸಿಐ ದೂರು

    ಭಾರತ-ಪಾಕ್ ಪಂದ್ಯದ ವೇಳೆ ದುವರ್ತನೆ – ಫರ್ಹಾನ್, ರೌಫ್‌ ವಿರುದ್ಧ ಐಸಿಸಿಗೆ ಬಿಸಿಸಿಐ ದೂರು

    – ಪಹಲ್ಗಾಮ್‌ ಸಂತ್ರಸ್ತರಿಗೆ ಗೆಲುವು ಅರ್ಪಿಸಿದ್ದಕ್ಕೆ ಸೂರ್ಯ ವಿರುದ್ಧ ಪಿಸಿಬಿ ಕಂಪ್ಲೆಂಟ್‌

    ದುಬೈ: ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಬಳಿಕ ಭಾರತ-ಪಾಕ್‌ (Ind vs Pak) ಮುಖಾಮುಖಿಯಾಗಿರುವ ಮೊದಲ ಟೂರ್ನಿ ವಿವಾದದ ಕಣವಾಗಿ ಮಾರ್ಪಟ್ಟಿದೆ. ಕಳೆದ ಭಾನುವಾರ ಭಾರತ ಮತ್ತು ಪಾಕ್‌ ನಡುವಿನ ಮೊದಲ ಸೂಪರ್‌ ಫೋರ್‌ ಪಂದ್ಯ ಕೂಡ ಸ್ಲೆಡ್ಜಿಂಗ್‌ಗೆ (ಕೆಣಕುವುದು) ವೇದಿಕೆಯಾಗಿತ್ತು.

    ಸೂಪರ್‌-4 ಪಂದ್ಯದ ವೇಳೆ ದುವರ್ತನೆ ತೋರಿದ ಪಾಕಿಸ್ತಾನಿ ಕ್ರಿಕೆಟಿಗರಾದ ಹ್ಯಾರಿಸ್ ರೌಫ್ (Haris Rauf) ಮತ್ತು ಸಾಹಿಬ್‌ಝಾದಾ ಫರ್ಹಾನ್ (Sahibzada Farhan) ವಿರುದ್ಧ ಐಸಿಸಿಗೆ ಬಿಸಿಸಿಐ (BCCI) ದೂರು ನೀಡಿದೆ. ಐಸಿಸಿಗೆ ಇ-ಮೇಲ್ ಮೂಲಕ ದೂರು ನೀಡಿದೆ. ಸಾಹಿಬ್‌ಝಾದಾ ಫರ್ಹಾನ್ ಮತ್ತು ರೌಫ್ ಈ ಆರೋಪಗಳನ್ನು ಲಿಖಿತವಾಗಿ ನಿರಾಕರಿಸಿದ್ರೆ ಐಸಿಸಿ ವಿಚಾರಣೆ ನಡೆಸುವ ನಿರೀಕ್ಷೆಯಿದೆ. ಅವರು ಐಸಿಸಿ ಎಲೈಟ್ ಪ್ಯಾನಲ್ ರೆಫರಿ ರಿಚಿ ರಿಚರ್ಡ್ಸನ್ ಅವರ ಮುಂದೆ ವಿಚಾರಣೆಗೆ ಹಾಜರಾಗಬೇಕಾಗಬಹುದು ಎಂದು ವಿಶ್ವಾಸಾರ್ಹ ಮೂಲಗಳಿಂದ ತಿಳಿದುಬಂದಿದೆ.

    Abhishek Sharma 3

    ವಿವಾದ ಆಗಿದ್ದೇನು?
    ಸೂಪರ್‌-4 ಪಂದ್ಯದ ವೇಳೆ ಸಾಹಿಬ್‌ಝಾದಾ ಫರ್ಹಾನ್ ಫಿಫ್ಟಿ ಬಾರಿಸಿದ ಬಳಿಕ ಗನ್‌ ಸೆಲಬ್ರೇಷನ್‌ ಮಾಡಿದ್ದರು. ರೈಫಲ್‌ ರೀತಿ ಶೋ ಮಾಡಿ ಮೂರು ಸುತ್ತು ಗುಂಡು ಹಾರಿಸಿದ ರೀತಿ ಆಕ್ಷನ್‌ ಮಾಡಿದ್ದರು. ಇನ್ನೂ ಫೀಲ್ಡಿಂಗ್‌ ವೇಳೆ ಹ್ಯಾರಿಸ್‌ ರೌಫ್‌ಗೆ ಕೊಹ್ಲಿ ಅಭಿಮಾನಿಗಳು ಕಾಡಿಸಿದರು. 2022ರ ಟಿ20 ವಿಶ್ವಕಪ್‌ ಪಂದ್ಯದಲ್ಲಿ ಹ್ಯಾರಿಸ್‌ ರೌಫ್‌ಗೆ ಬಾರಿಸಿದ್ದ ಸಿಕ್ಸ್‌ ಅನ್ನು ಉಲ್ಲೇಖಿಸುತ್ತಾ ಕೊಹ್ಲಿ ಕ್ಲೊಹ್ಲಿ ಅಂತ ಕೂಗುತ್ತಿದ್ದರು. ಈ ವೇಳೆ ರೌಫ್‌ ವಿಮಾನ ಕ್ರ್ಯಾಶ್‌ ರೀತಿ ಸನ್ನೆ ಮಾಡಿ ಅಣುಕಿಸಿದ್ದರು. ಇದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಹೀಗಾಗಿ ರೌಫ್ ಮತ್ತು ಫರ್ಹಾನ್‌ ಇಬ್ಬರೂ ಐಸಿಸಿ ವಿಚಾರಣೆಯಲ್ಲಿ ತಮ್ಮ ಸನ್ನೆಗಳನ್ನು ವಿವರಿಸಬೇಕಾಗುತ್ತದೆ. ಒಂದು ವೇಳೆ ಅವರು ಮನವೊಲಿಸಲು ಸಾಧ್ಯವಾಗದಿದ್ದರೇ ನೀತಿ ಸಂಹಿತೆಯ ಉಲ್ಲಂಘನೆ ಪ್ರಕಾರ ನಿರ್ಬಂಧ ಎದುರಿಸಬೇಕಾಗುತ್ತೆ ಎಂದು ತಿಳಿದುಬಂದಿದೆ.

    ಸೂರ್ಯ ವಿರುದ್ಧ ದೂರು
    ಇನ್ನೂ ಲೀಗ್‌ ಸುತ್ತಿನಲ್ಲಿ ಪಾಕ್‌ ವಿರುದ್ಧದ ಪಂದ್ಯದಲ್ಲಿ ಗೆದ್ದ ಬಳಿಕ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್‌ ಯಾದವ್‌ (Suryakumar Yadav), ಪಂದ್ಯದ ಗೆಲುವುನ್ನು ಪಹಲ್ಗಾಮ್‌ ದಾಳಿಯ ಸಂತ್ರಸ್ತರು ಹಾಗೂ ಭಾರತೀಯ ಸಶಸ್ತ್ರಪಡೆಗಳಿಗೆ ಅರ್ಪಿಸಿದ್ದರು. ಇದಕ್ಕಾಗಿ ಸೂರ್ಯಕುಮಾರ್‌ ಯಾದವ್‌ ವಿರುದ್ಧ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (PCB) ಐಸಿಸಿಗೆ ದೂರು ನೀಡಿದೆ.

    ಸೂರ್ಯಕುಮಾರ್‌ ಹೇಳಿಕೆಗಳು ರಾಜಕೀಯ ಪ್ರೇರಿತವಾಗಿದ್ದು, ಕ್ರೀಡಾ ಪ್ರತಿಷ್ಠೆಗೆ ಹಾನಿಯಾಗಿದೆ. ಹೀಗಾಗಿ ಕ್ರಮಕ್ಕೆ ಆಗ್ರಹಿಸಿ ದೂರು ನೀಡಿದ್ದಾರೆ. ಸೂರ್ಯ ಈ ಆರೋಪಗಳನ್ನು ನಿರಾಕರಿಸಿದ್ರೆ, ಅಧಿಕೃತ ವಿಚಾರಣೆಗೆ ಐಸಿಸಿ ಮುಂದೆ ಹಾಜರಾಗಬೇಕಾಗುತ್ತೆ ಎಂದು ತಿಳಿದುಬಂದಿದೆ.

  • Asia Cup 2025 | ಮತ್ತೊಮ್ಮೆ ರೋಚಕ ಹಣಾಹಣಿ – ಸೂಪರ್‌ ಸಂಡೇ ಭಾರತ-ಪಾಕ್‌ ಮುಖಾಮುಖಿ

    Asia Cup 2025 | ಮತ್ತೊಮ್ಮೆ ರೋಚಕ ಹಣಾಹಣಿ – ಸೂಪರ್‌ ಸಂಡೇ ಭಾರತ-ಪಾಕ್‌ ಮುಖಾಮುಖಿ

    ದುಬೈ: 2025ರ ಟಿ20 ಏಷ್ಯಾಕಪ್‌ (T20 Asia Cup) ಟೂರ್ನಿಯಲ್ಲಿ ಹ್ಯಾಂಡ್‌ ಶೇಕ್‌ ವಿವಾದ ತಣ್ಣಗಾಗುವ ಮುನ್ನವೇ ಭಾರತ – ಪಾಕಿಸ್ತಾನ (Ind vs Pak) ತಂಡಗಳು ಮತ್ತೊಮ್ಮೆ ಮುಖಾಮುಖಿಯಾಗಲು ಸಜ್ಜಾಗಿವೆ.

    ಟೂರ್ನಿಯ ಲೀಗ್‌ ಸುತ್ತಿನಲ್ಲಿ ಅಗ್ರಸ್ಥಾನದಲ್ಲಿರುವ ಟೀಂ ಇಂಡಿಯಾ (Team India) ಹಾಗೂ 2ನೇ ಸ್ಥಾನದಲ್ಲಿರುವ ಪಾಕಿಸ್ತಾನ ತಂಡಗಳು ಭಾನುವಾರ (ಸೆ.21) ಮತ್ತೊಮ್ಮೆ ಮುಖಾಮುಖಿಯಾಗಲಿವೆ. ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್‌ ಮೈದಾನದಲ್ಲಿ ರಾತ್ರಿ 8 ಗಂಟೆಗೆ ಪಂದ್ಯ ನಡೆಯಲಿದೆ. ಇದನ್ನೂ ಓದಿ: ಕೆಲ ವಿಷಯಗಳು ಕ್ರೀಡಾ ಮನೋಭಾವಕ್ಕಿಂತಲೂ ದೊಡ್ಡದು – ಕೈಕುಲುಕದ್ದಕ್ಕೆ ಸೂರ್ಯ ಸ್ಪಷ್ಟನೆ

    ಈಗಾಗಲೇ ಲೀಗ್‌ ಸುತ್ತಿನಲ್ಲಿ ತನ್ನ ಮೂರು ಪಂದ್ಯಗಳನ್ನಾಡಿರುವ ಪಾಕ್‌ 2 ರಲ್ಲಿ ಗೆದ್ದು 4 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದರೆ, ಭಾರತ ಎರಡೂ ಪಂದ್ಯಗಳಲ್ಲಿ ಗೆದ್ದು ಅಗ್ರಸ್ಥಾನದಲ್ಲಿದೆ. ಸೆ.19ರಂದು ಒಮನ್‌ ವಿರುದ್ಧ ತನ್ನ ಕೊನೆಯ ಲೀಗ್‌ ಪಂದ್ಯವನ್ನಾಡಲಿದ್ದು, ಭಾನುವಾರ ಸೂಪರ್‌ ಫೋರ್‌ ಮೊದಲ ಪಂದ್ಯದಲ್ಲಿ ಪಾಕ್‌ ವಿರುದ್ಧ ಮುಖಾಮುಖಿಯಾಗಲಿದೆ.

    ಕಳೆದ ಭಾನುವಾರ ಪಾಕ್‌ ವಿರುದ್ಧ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿತ್ತು. ಆದ್ರೆ ಈ ಪಂದ್ಯದ ಟಾಸ್‌ ವೇಳೆ ಹಾಗೂ ಪಂದ್ಯದ ಗೆದ್ದ ಬಳಿಕ ಭಾರತೀಯ ಆಟಗಾರರು ಹ್ಯಾಂಡ್‌ ಶೇಕ್‌ ಮಾಡೋದನ್ನ ಬಿಟ್ಟಿದ್ದರು. ಸದ್ಯ ಹ್ಯಾಂಡ್‌ ಶೇಕ್‌ ವಿವಾದ ತೀವ್ರತೆ ಕಡಿಮೆಯಾಗುವ ಮುನ್ನವೇ ಭಾರತ-ಪಾಕ್‌ ಸೂಪರ್‌ ಫೋರ್‌ನಲ್ಲಿ ಮತ್ತೊಮ್ಮೆ ಮುಖಾಮುಖಿಯಾಗುತ್ತಿರುವುದು ಭಾರೀ ಥ್ರಿಲ್ಲಿಂಗ್‌ ಆಗಿಸಿದೆ. ಇದನ್ನೂ ಓದಿ: ಭಾರತ-ಪಾಕ್‌ ಕದನ ಯಾವಾಗಲೂ ಏಕೆ ರಣಕಣ? – ಆಕ್ರಮಣಕಾರಿ ಆಟಕ್ಕೆ ಟೀಂ ಇಂಡಿಯಾ ರೆಡಿ!

    suryakumar yadav shivam dube

    ಆಪರೇಷನ್‌ ಸಿಂಧೂರ ಬಳಿಕ ಮೊದಲ ಟೂರ್ನಿ
    ಕಳೆದ ಏಪ್ರಿಲ್‌ 22ರಂದು ನಡೆದ ಪಹಲ್ಗಾಮ್‌ ಭಯೋತ್ಪಾದಕ ದಾಳಿ ಹಾಗೂ ಆಪರೇಷನ್‌ ಸಿಂಧೂರ ಪ್ರತೀಕಾರದ ಬಳಿಕ ಭಾರತ ಪಾಕ್‌ ಮುಖಾಮುಖಿಯಾಗಿರುವ ಮೊದಲ ಟೂರ್ನಿ ಇದಾಗಿದೆ. ಲೀಗ್‌ ಸುತ್ತಿನಲ್ಲಿ ಮೊದಲಬಾರಿಗೆ ಮುಖಾಮುಖಿಯಾದಾಗ ಪಂದ್ಯ ರದ್ದುಗೊಳಿಸಬೇಕು, ಶತ್ರು ರಾಷ್ಟ್ರದ ವಿರುದ್ಧ ಭಾರತ ಆಡದಂತೆ ನಿಷೇಧಿಸಬೇಕು ಎಂಬ ಕೂಗು ಕೇಳಿಬಂದಿತ್ತು. ಸೋಷಿಯಲ್‌ ಮೀಡಿಯಾದಲ್ಲೂ ಬಾಯ್ಕಾಟ್‌ ಅಭಿಮಾನ ಸದ್ದು ಮಾಡಿತ್ತು. ಇದೆಲ್ಲದರ ಹೊರತಾಗಿಯೂ ಪಂದ್ಯವಾಡಿದ್ದ ಭಾರತ, ಮೈದಾನದಲ್ಲೇ ಪಾಕ್‌ ಆಟಗಾರರ ಮಾತ ಕಳೆದಿತ್ತು. ಸೆ.21ರ ಭಾನುವಾರ ಮತ್ತೊಮ್ಮೆ ಟೂರ್ನಿಯಲ್ಲಿ ಮುಖಾಮುಖಿಯಾಗಲಿದ್ದು, ತೀವ್ರತೆ ಹೇಗಿರಲಿದೆ ಎಂಬುದನ್ನು ಕಾದುನೋಡಬೇಕಿದೆ. ಇದನ್ನೂ ಓದಿ: India vs Pakistan: ಟಾಸ್‌ ಬಳಿಕ ಪಾಕ್‌ ನಾಯಕನಿಗೆ ಹ್ಯಾಂಡ್‌ಶೇಕ್‌ ಮಾಡದ ಸೂರ್ಯಕುಮಾರ್‌ ಯಾದವ್‌

    ಪಹಲ್ಗಾಮ್‌ ನರಮೇಧ-ಸಿಂಧೂರ ಪ್ರತೀಕಾರ
    ಕಾಶ್ಮೀರದ ಪಹಲ್ಗಾಮ್‌ನ ಬೈಸರನ್‌ ಕಣಿವೆ ಪ್ರದೇಶದಲ್ಲಿ ಕಾಲ ಕಳೆಯುತ್ತಿದ್ದ ಪ್ರವಾಸಿಗರ ಮೇಲೆ ಏ.22ರಂದು ಸೈನಿಕರ ಸೋಗಿನಲ್ಲಿ ಬಂದ ಉಗ್ರರು ಅಮಾಯಕರನ್ನ ಗುಂಡಿಟ್ಟು ಕೊಂದಿದ್ದರು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಬೇಕೆಂದೇ ಪಣ ತೊಟ್ಟಿದ್ದ ಭಾರತ ʻಆಪರೇಷನ್‌ ಸಿಂಧೂರʼ ಹೆಸರಿನಡಿ ಪಾಕ್‌ ಮತ್ತು ಪಾಕ್‌ ಆಕ್ರಮಿತ ಪ್ರದೇಶದಲ್ಲಿದ್ದ ಉಗ್ರರ 9 ಅಡಗುತಾಣಗಳನ್ನ ಧ್ವಂಸ ಮಾಡಿತು. ಆದ್ರೂ ಮತ್ತೆ ಕಿತಾಪತಿ ಮಾಡಿದ್ದ ಪಾಕ್‌ ಭಾರತದ 15 ನಗರಗಳ ಮೇಲೆ ದಾಳಿ ನಡೆಸಲು ಹೊಂಚುಹಾಕಿತ್ತು. ಇದನ್ನರಿತ ಭಾರತ, ಪಾಕ್‌ ದಾಳಿಯನ್ನ ವಿಫಲಗೊಳಿಸಿದ್ದಲ್ಲದೇ ಲಾಹೋರ್‌ನಲ್ಲಿನ ರೆಡಾರ್‌ ಕೇಂದ್ರವನ್ನೇ ಛಿದ್ರ ಛಿದ್ರ ಮಾಡಿತು. ಪಾಕ್‌ ಜೊತೆಗಿನ ಈ ಸಂಘರ್ಷ ಇಡೀ ದೇಶವೇ ಭಯೋತ್ಪಾದನೆ ವಿರುದ್ಧ ಒಗ್ಗೂಡುವಂತೆ ಮಾಡಿತು. ಈ ಬೆಳವಣಿಗೆಯ ನಂತರ ಶತ್ರು ರಾಷ್ಟ್ರಗಳೊಂದಿಗಿನ ಎಲ್ಲ ಚಟುವಟಿಕೆಗಳಿಗೆ ಬ್ರೇಕ್‌ ಹಾಕಲಾಯಿತು. ಆದ್ದರಿಂದಲೇ ಇನ್ನೆಂದಿಗೂ ಭಾರತ – ಪಾಕಿಸ್ತಾನ ನಡುವೆ ಪಂದ್ಯವನ್ನಾಡಬಾರದು ಎಂಬ ಒತ್ತಾಯ ಭಾರತೀಯರದ್ದಾಗಿದೆ.