Tag: BC Patil

  • ಸಕ್ಕರೆ ತುಲಾಭಾರ ಮಾಡಿ ಹರಿಕೆ ತೀರಿಸಿದ ಬಿ.ಸಿ.ಪಾಟೀಲ್ ಅಭಿಮಾನಿ ಮುಸ್ತಫಾ

    ಸಕ್ಕರೆ ತುಲಾಭಾರ ಮಾಡಿ ಹರಿಕೆ ತೀರಿಸಿದ ಬಿ.ಸಿ.ಪಾಟೀಲ್ ಅಭಿಮಾನಿ ಮುಸ್ತಫಾ

    ಹಾವೇರಿ: ಕೃಷಿ ಸಚಿವ ಬಿ.ಸಿ.ಪಾಟೀಲ್ ಅಭಿಮಾನಿ ತಮ್ಮ ನಾಯಕನಿಗೆ ಸಚಿವ ಸ್ಥಾನ ಸಿಗಲಿ ಎಂದು ದೇವರಲ್ಲಿ ಹರಕೆ ಹೊತ್ತಿದ್ದರು. ಸಚಿವ ಸ್ಥಾನ ಸಿಕ್ಕ ಹಿನ್ನೆಲೆ ಇದೀಗ ತಮ್ಮ ಮನೆಗೆ ಸಚಿವರನ್ನು ಕರೆದು, ಸಕ್ಕರೆಯಲ್ಲಿ ತುಲಾಭಾರ ಮಾಡಿದ್ದಾರೆ.

    ಜಿಲ್ಲೆಯ ಹಿರೇಕೆರೂರು ತಾಲೂಕಿನ ಹಂಸಭಾವಿ ಗ್ರಾಮದ ಮುಸ್ತಫಾ ಪ್ಯಾಟಿ ತಮ್ಮ ಮನೆಯಲ್ಲಿ ಸಚಿವ ಬಿ.ಸಿ.ಪಾಟೀಲ್ ಅವರಿಗೆ ತುಲಾಭಾರ ಮಾಡಿದ್ದಾರೆ. ಮುಸ್ತಫಾ ಬಿ.ಸಿ.ಪಾಟೀಲರ ಅಪ್ಪಟ ಅಭಿಮಾನಿ. ಬಿ.ಸಿ.ಪಾಟೀಲ್ ಅವರಿಗೆ ಸಚಿವ ಸ್ಥಾನ ಸಿಗಲಿ ಎಂದು ಗ್ರಾಮದಲ್ಲಿರುವ ಉಸ್ಮಾನ್ ಚಾವಲಿ ದರ್ಗಾಗೆ ಹರಕೆ ಕಟ್ಟಿದ್ದರು. ಹರಕೆ ತೀರಿದರೆ ಸಚಿವರಿಗೆ ಸಕ್ಕರೆಯಿಂದ ತುಲಾಭಾರ ಮಾಡೋದಾಗಿ ಉಸ್ಮಾನ ಚಾವಲಿ ದರ್ಗಾದಲ್ಲಿ ಬೇಡಿಕೊಂಡಿದ್ದರಂತೆ. ಬಿ.ಸಿ.ಪಾಟೀಲ್ ಅವರಿಗೆ ಸಚಿವ ಸ್ಥಾನ ಸಿಕ್ಕಿದ್ದು, ಕೃಷಿ ಖಾತೆ ಸಹ ಸಿಕ್ಕಿದೆ. ಹೀಗಾಗಿ ಇಂದು ಸಕ್ಕರೆಯಿಂದ ತುಲಾಭಾರ ಮಾಡಿ ಹರಕೆ ತೀರಿಸಲಾಯಿತು.

    ದೊಡ್ಡ ತಕ್ಕಡಿಯಲ್ಲಿ ಒಂದೆಡೆ ಸಕ್ಕರೆ ಚೀಲವಿಟ್ಟು, ಮತ್ತೊಂದೆಡೆ ಸಚಿವರನ್ನು ಕೂರಿಸಿ ತುಲಾಭಾರ ಮಾಡಿ ಹರಕೆ ತೀರಿಸಲಾಯಿತು. ಹಿರೇಕೆರೂರು ಕ್ಷೇತ್ರದಲ್ಲಿ ಒಮ್ಮೆಯೂ ನಿರಂತರವಾಗಿ ಎರಡು ಬಾರಿ ಶಾಸಕರಾದ ಉದಾಹರಣೆಗಳು ಇರಲಿಲ್ಲ. ಆಗಲೂ ಬಿ.ಸಿ.ಪಾಟೀಲ್ ಸತತವಾಗಿ ಎರಡು ಬಾರಿ ಶಾಸಕರಾದರೆ ಸಕ್ಕರೆ ತುಲಾಭಾರ ಮಾಡುವ ಹರಕೆಯನ್ನು ಮುಸ್ತಫಾ ಹೊತ್ತಿದ್ದರು. ಆಗಲೂ ಪಾಟೀಲ್‍ರನ್ನು ಮನೆಗೆ ಕರೆಸಿ ಮುಸ್ತಫಾ ಸಕ್ಕರೆ ತುಲಾಭಾರ ಮಾಡಿದ್ದರು. ಆದರೆ ಹಿರೇಕೆರೂರು ಕ್ಷೇತ್ರ ಸುಮಾರು ವರ್ಷಗಳಿಂದ ಸಚಿವ ಸ್ಥಾನದಿಂದ ವಂಚಿತವಾಗಿತ್ತು. ಹೀಗಾಗಿ ಪಾಟೀಲರಿಗೆ ಸಚಿವ ಸ್ಥಾನ ಸಿಕ್ಕರೆ ಸಕ್ಕರೆಯಿಂದ ತುಲಾಭಾರ ಮಾಡೋದಾಗಿ ಅಭಿಮಾನಿ ಮುಸ್ತಫಾ ದರ್ಗಾದಲ್ಲಿ ಹರಕೆ ಹೊತ್ತಿದ್ದರು.

    ಬಿ.ಸಿ.ಪಾಟೀಲ್ ಒಂದು ಕ್ವಿಂಟಲ್ ಐದು ಕೆ.ಜಿ ತೂಕವಿದ್ದಾರೆ. ಹೀಗಾಗಿ ಅವರ ತೂಕಕ್ಕೆ ಸಮನಾಗಿ ಒಂದು ಕ್ವಿಂಟಲ್ ಐದು ಕೆ.ಜಿ. ಸಕ್ಕರೆ ಇಟ್ಟು ತುಲಾಭಾರ ಮಾಡಿದರು. ಅಭಿಮಾನಿ ತೋರಿಸಿದ ಪ್ರೀತಿಗೆ ನಾನು ಋಣಿ. ಜನರ ಪ್ರೀತಿ ಹೆಚ್ಚಾಗಿದೆ, ಇದರಿಂದ ಮೊದಲಿಗಿಂತ ಈಗ ತೂಕ ಹೆಚ್ಚಾಗಿದೆ ಎಂದರು. ತುಲಾಭಾರ ಕಾರ್ಯಕ್ರಮದಲ್ಲಿ ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಥರು ಭಾಗಿಯಾಗಿದ್ದು ವಿಶೇಷವಾಗಿತ್ತು.

  • ರೈತರೊಂದಿಗೆ ಒಂದು ದಿನ ಕಾರ್ಯಕ್ರಮದಲ್ಲಿ ಬಿ.ಸಿ ಪಾಟೀಲ್ ಭಾಗಿ

    ರೈತರೊಂದಿಗೆ ಒಂದು ದಿನ ಕಾರ್ಯಕ್ರಮದಲ್ಲಿ ಬಿ.ಸಿ ಪಾಟೀಲ್ ಭಾಗಿ

    ವಿಜಯಪುರ: ಕೃಷಿ ಸಚಿವ ಬಿ.ಸಿ ಪಾಟೀಲ್ ನೇತೃತ್ವದಲ್ಲಿ ರೈತರೊಂದಿಗೆ ಒಂದು ದಿನ ಕಾರ್ಯಕ್ರಮ ವಿಜಯಪುರ ಜಿಲ್ಲೆ ಮುದ್ದೆಬಿಹಾಳ ತಾಲೂಕಿನ ಬಸರಕೋಡ ಗ್ರಾಮದಲ್ಲಿ ನಡೆಯಿತು. ಗ್ರಾಮದ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ರೈತರೊಂದಿಗೆ ಸಚಿವ ಬಿ.ಸಿ ಪಾಟೀಲ್ ಸಭೆ ನಡೆಸಿದರು.

    ಪ್ರಗತಿಪರ ರೈತರಾದ ಪವಾಡೆಪ್ಪ ವಡ್ಡರ್ ಅವರ ಜಮೀನಿಗೆ ಭೇಟಿ ನೀಡಿ ಜಮೀನಿನಲ್ಲಿರುವ ದೇಶಿ ಕುರಿ, ಕೋಳಿ, ಎಮ್ಮೆ ಸಾಕಾಣಿಕೆ ಕೇಂದ್ರ ವೀಕ್ಷಿಸಿದರು. ದೇಶಿ ಕುರಿ-ಕೋಳಿ ಹಾಗೂ ಎಮ್ಮೆ ಹಾಕುವುದರ ಮೂಲಕ ಸ್ವಾವಲಂಬಿಯಾದ ರೈತ ಪವಾಡೆಪ್ಪನನ್ನು ಹಾಡಿ ಹೊಗಳಿದ್ದಾರೆ.

    ಸ್ವತಃ ರಾಶಿ ಯಂತ್ರ ಚಲಾಯಿಸಿ ಗೋಧಿ ಕಟಾವು ಮಾಡಿದರು. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಶಶಿಕಲಾ ಜೊಲ್ಲೆ ಸ್ಥಳಿಯ ಶಾಸಕ ನಡಹಳ್ಳಿ ಸಾಥ್ ನೀಡಿದರು.

    ಈ ಸಂದರ್ಭದಲ್ಲಿ ಕೃಷಿಯಲ್ಲಿ ವಿವಿಧ ಸಾಧನೆ ಮಾಡಿದ ರೈತರಿಗೆ ಹಾಗೂ ರೈತ ಮಹಿಳೆಯರಿಗೆ ಪ್ರಮಾಣಪತ್ರ ನೀಡಿ ಸನ್ಮಾನಿಸಿದರು. ಇದೆ ವೇಳೆ ಮಾತನಾಡಿದ ಸಚಿವ ಬಿ ಸಿ ಪಾಟೀಲ್ ರೈತರಿಗಾಗಿ 90% ಸಬ್ಸಿಡಿಯಲ್ಲಿ ಯೋಜನೆಗಳಿವೆ ಅದನ್ನ ರೈತರು ಸದುಪಯೋಗ ಪಡೆದುಕೊಳ್ಳ ಬೇಕು. ಕೃಷಿಕರು ಸ್ವಾವಲಂಬಿಯಾಗ ಬೇಕೆಂದು ಕರೆ ನೀಡಿದರು.

  • ಜೋಳದ ಹೊಲದಲ್ಲಿ ಧ್ವನಿವರ್ಧಕ, ಹೊಳೆಯುವ ರಿಬ್ಬನ್ ಕಟ್ಟಿ ಹಕ್ಕಿ ಓಡಿಸಿದ ಬಿ.ಸಿ.ಪಾಟೀಲ್

    ಜೋಳದ ಹೊಲದಲ್ಲಿ ಧ್ವನಿವರ್ಧಕ, ಹೊಳೆಯುವ ರಿಬ್ಬನ್ ಕಟ್ಟಿ ಹಕ್ಕಿ ಓಡಿಸಿದ ಬಿ.ಸಿ.ಪಾಟೀಲ್

    – ಕಬ್ಬಿನ ಗದ್ದೆಗೆ ಕರಗುವ ರಸಗೊಬ್ಬರ ಹಾಕಿದ ಸಚಿವ

    ಬೀದರ್: ಟ್ರ್ಯಾಕ್ಟರ್ ಓಡಿಸುತ್ತ ಕಬ್ಬಿನ ಬೆಳೆಗೆ ನೀರಿನಲ್ಲಿ ಕರಗುವ ರಸಗೊಬ್ಬರ ಸಿಂಪರಣೆ ಮಾಡಿ, ಜೋಳದ ಹೊಲದಲ್ಲಿ ಧ್ವನಿವರ್ಧಕ ಹಾಗೂ ಹೊಳೆಯುವ ರಿಬ್ಬನ್ ಕಟ್ಟುವ ಮೂಲಕ ಕೃಷಿ ಸಚಿವ ಬಿ.ಸಿ.ಪಾಟೀಲ್ ಹಕ್ಕಿ ಓಡಿಸಿದರು.

    ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮುಸ್ತಾಪೂರ್ ಗ್ರಾಮದ ರೈತರ ಹೊಲಗಳಲ್ಲಿ ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಸಚಿವ ಬಿ.ಸಿ.ಪಾಟೀಲ್ ಭಾಗವಹಿಸಿದ್ದರು. ಗೋಧಿ ಬೆಳೆಯಲ್ಲಿ ಕಂಬೈನ್ಡ್ ಹಾರ್ವೇಸ್ಟರ್ ಮೂಲಕ ರಾಶಿಗೆ ಚಾಲನೆ ನೀಡಿದರು. ಜೊತೆಗೆ ಆಲೆಮನೆಯಲ್ಲಿ ಬೆಲ್ಲದ ಗಾಣ ಹಾಯಿಸಿದರು. ಹೀಗೆ ರೈತರ ವಿವಿಧ ಕೆಲಸಗಳಲ್ಲಿ ಭಾಗವಹಿಸುವ ಮೂಲಕ ಸಚಿವರು ಗಮನ ಸೆಳೆದರು.

    ಇದೇ ವೇಳೆ ರಿಬ್ಬನ್ ಕಟ್ ಮಾಡುವ ಮೂಲಕ ಪ್ರತಾಪ್ ನಗರದಲ್ಲಿನ ರೈತ ಸಂಪರ್ಕ ಕೇಂದ್ರ ಉದ್ಘಾಟನೆ ಮಾಡಿದರು. ಇದಕ್ಕೂ ಮೊದಲು ಗೋವಿಗೆ ಪೂಜೆ ಮಾಡಿದರು. ಸಂಸದ ಭಗವಂತ್ ಖೂಬಾ ಹಾಗೂ ಕೃಷಿ ಅಧಿಕಾರಿಗಳು ಸಾಥ್ ನೀಡಿದರು.

    ಇಂದು ಇಡೀ ದಿನ ಬಸವಕಲ್ಯಾಣದ ರೈತರೊಂದಿಗೆ ಕೃಷಿ ಸಚಿವರು ಕಾಲ ಕಳೆಯಲಿದ್ದಾರೆ. ಬಸವಕಲ್ಯಾಣ ತಾಲೂಕಿನ ಮುಸ್ತಾಪೂರ್, ಧನ್ನೂರ್, ಮಂಠಾಳ ಗ್ರಾಮದ ವಿವಿಧ ಕಾರ್ಯಕ್ರಮಗಳಲ್ಲಿ ರೈತರೊಂದಿಗೆ ಭಾಗವಹಿಸಲಿದ್ದಾರೆ. ಉಪ ಚುನಾವಣೆಯ ಸನಿಹದಲ್ಲಿ ಬಸವಕಲ್ಯಾಣಕ್ಕೆ ಮಾತ್ರ ಕೃಷಿ ಸಚಿವರು ಸೀಮಿತವಾಗಿರುವುದು ಅಚ್ಚರಿ ಮೂಡಿಸಿದೆ. ರೈತರನ್ನು ಓಲೈಕೆ ಮಾಡುತ್ತಿದ್ದಾರಾ ಎಂಬ ಅನುಮಾನ ಎದ್ದಿದೆ.

    ಟ್ರ್ಯಾಕ್ಟರ್ ಓಡಿಸುತ್ತ ಕಬ್ಬಿನ ಬೆಳೆಗೆ ನೀರಿನಲ್ಲಿ ಕರಗುವ ರಸಗೊಬ್ಬರ ಸಿಂಪರಣೆ ಮಾಡಿದ್ದಾರೆ. ಅಲ್ಲದೆ ಜೋಳದ ಹೊಲದಲ್ಲಿ ಧ್ವನಿವರ್ಧಕ ಹಾಗೂ ಹೊಳೆಯುವ ರಿಬ್ಬನ್ ಕಟ್ಟುವ ಮೂಲಕ ಹಕ್ಕಿ ಓಡಿಸಿದ್ದಾರೆ. ಗೋಧಿ ಬೆಳೆಯಲ್ಲಿ ಕಂಬೈನ್ಡ್ ಹಾರ್ವೇಸ್ಟರ್ ಮೂಲಕ ರಾಶಿಗೆ ಚಾಲನೆ ನೀಡಿದ್ದು, ಆಲೆಮನೆಯಲ್ಲಿ ಬೆಲ್ಲದ ಗಾಣ ಹಾಯಿಸಿದ್ದಾರೆ. ಬಳಿಕ ಹೊಲದಲ್ಲಿ ರೈತರಿಂದ ಸಂವಾದ ಕಾರ್ಯಕ್ರಮ ಆಯೋಜಿಸಿದ್ದು, ಕೃಷಿ ಸಚಿವರ ಮುಂದೆ ರೈತರು ಅಳಲು ತೋಡಿಕೊಂಡಿದ್ದಾರೆ. ವಿದ್ಯುತ್ ಸಮಸ್ಯೆ, ಬೆಂಬಲ ಬೆಲೆ, ವಿವಿಧ ಯೋಜನೆಗಳ ಅನುಷ್ಠಾನದ ಬಗ್ಗೆ ಚರ್ಚಿಸಿದ್ದಾರೆ.

  • ದೆಹಲಿಯಲ್ಲಿ ಪ್ರತಿಭಟನೆ ಮಾಡೋ ರೈತರು ಭಯೋತ್ಪಾದಕರು: ಮತ್ತೆ ನಾಲಗೆ ಹರಿಬಿಟ್ಟ ಕೌರವ

    ದೆಹಲಿಯಲ್ಲಿ ಪ್ರತಿಭಟನೆ ಮಾಡೋ ರೈತರು ಭಯೋತ್ಪಾದಕರು: ಮತ್ತೆ ನಾಲಗೆ ಹರಿಬಿಟ್ಟ ಕೌರವ

    ಕೊಪ್ಪಳ: ಕೃಷಿ ಸಚಿವ ಬಿ.ಸಿ.ಪಾಟೀಲ್ ಮತ್ತೆ ತಮ್ಮ ನಾಲಗೆ ಹರಿಬಿಟ್ಟಿದ್ದು, ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿರುವ ರೈತರು ಭಯೋತ್ಪಾದಕರು ಎಂಬ ವಿವಾದಾತ್ಮಕ ಹೇಳಿಕೆಯನ್ನ ನೀಡಿದ್ದಾರೆ.

    ಕೊಪ್ಪಳದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿರುವರಿಗೆ ಬೇರೆ ದೇಶಗಳ ಬೆಂಬಲದ ಜೊತೆ ಪಾಕಿಸ್ತಾನದ ಕುಮ್ಮಕ್ಕು ಇದೆ. ಕೆಂಪು ಕೋಟೆ ಬಳಿ ಗಲಾಟೆ ಮಾಡ್ತಾರೆ ಅಂದ್ರೆ ಇವರಿಗೆ ಭಯೋತ್ಪಾದಕರ ಬೆಂಬಲ ಎಷ್ಟಿದೆ ಎಂಬುದನ್ನ ಅರ್ಥ ಮಾಡಿಕೊಳ್ಳಬೇಕಿದೆ. ಕೆಂಪುಕೋಟಿಗೆ ಮುತ್ತಿಗೆ ಹಾಕಿರೋದು ಭಯೋತ್ಪಾದನೆ ಕೃತ್ಯ ಎಂದು ಆಕ್ರೋಶ ಹೊರ ಹಾಕಿದರು.

    ನಮ್ಮ ದೇಶದ ರೈತರು ಯಾವತ್ತೂ ಕಾನೂನುಗಳನ್ನು ಕೈಗೆ ತೆಗೆದುಕೊಳ್ಳುವದಿಲ್ಲ. ಪ್ರತಿಭಟನಾ ನಿರತರ ಹಿಂದೆ ಪಾಕಿಸ್ತಾನ ಮತ್ತು ಕಾಂಗ್ರೆಸ್ ಇದೆ. ಪ್ರಧಾನಿ ಮೋದಿಯವರ ಜನಪ್ರಿಯತೆ ಕಂಡು ಭಯೋತ್ಪಾದಕರನ್ನ ಕರೆ ತಂದು ಅವರಿಗೆ ರೈತರು ಹೆಸರಿಟ್ಟು ಭಯೋತ್ಪಾದನೆ ಮಾಡಿಸುತ್ತಿದ್ದಾರೆ. ಈ ಪ್ರತಿಭಟನೆಗೆ ಸಂಪೂರ್ಣ ಪಾಕಿಸ್ತಾನ ಮತ್ತು ಕಾಂಗ್ರೆಸ್ ನವರ ಕುಮ್ಮುಕ್ಕು ಇದ್ದು, ಯಾರೇ ಕಾನೂನು ಕೈಗೆ ತಗೆದುಕೊಂಡರು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗವುದು ಎಂದು ಹೇಳಿದರು.


    ಈ ಹಿಂದೆ ಆತ್ಮಹತ್ಯೆಗೆ ಶರಣಾಗುವ ರೈತರು ಹೇಡಿಗಳು. ಸರ್ಕಾರದ ಕಾನೂನುಗಳು ರೈತರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಲ್ಲ ಎಂದು ಮಡಿಕೇರಿಯಲ್ಲಿ ಹೇಳಿದ್ದರು. ಇನ್ನೂ ಕೆಲ ದಿನಗಳ ಹಿಂದೆ ಮೈಸೂರಿನಲ್ಲಿಯೂ ತಮ್ಮ ವಿವಾದಾತ್ಮಕ ಹೇಳಿಕೆ ಪುನರುಚ್ಛಿರಿಸಿದ್ದರು.

  • ರೈತರನ್ನು ದಾರಿ ತಪ್ಪಿಸುವ ಕೆಲಸ: ಬಿಸಿ ಪಾಟೀಲ್

    ರೈತರನ್ನು ದಾರಿ ತಪ್ಪಿಸುವ ಕೆಲಸ: ಬಿಸಿ ಪಾಟೀಲ್

    -ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮ

    ಕೊಪ್ಪಳ: ರೈತರನ್ನು ಕೆಲವರು ಪ್ರಚೋದನೆ ಮಾಡುತ್ತಿದ್ದಾರೆ. ಈ ಮೂಲಕ ರೈತರನ್ನು ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಸಚಿವ ಬಿ.ಸಿ ಪಾಟೀಲ್ ಆರೋಪಿಸಿದ್ದಾರೆ.

    ಕೊಪ್ಪಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೇರೆ ಬೇರೆ ಸಂದರ್ಭಗಳಲ್ಲಿ ಕಾಯ್ದೆ ವಿರೋಧಿಸಿದವರು ಪ್ರಚೋದನೆ ಮಾಡುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಅಧಿಕಾರಿಗಳು ಟ್ರ್ಯಾಕ್ಟರ್ ಗಳನ್ನು ಸೀಜ್ ಮಾಡುತ್ತಿರಬಹುದು ಎಂದು ಹೇಳಿದ್ದಾರೆ.

    ಖಾತೆಗಳ ಬದಲಾವಣೆ ಮುಖ್ಯಮಂತ್ರಿಗಳ ವಿವೇಚನೆಂಗೆ ಬಿಟ್ಟಿದ್ದು. ಸಿಎಂ ಹಿರಿಯರು, ಬುದ್ಧಿವಂತರು, ಮುತ್ಸದ್ದಿಗಳಾಗಿದ್ದಾರೆ. ಹೀಗಾಗಿ ಅವರು ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗ್ತಾರೆ. ಇನ್ನು ಆನಂದ್ ಸಿಂಗ್ ಅರಣ್ಯ ಇಲಾಖೆಯಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದರು. ಖಾತೆ ಬದಲಾವಣೆಯಿಂದ ಸ್ವಲ್ಪ ಅಸಮಧಾನಗೊಂಡಿದ್ದಾರೆ. ಬೆಂಗಳೂರಿಗೆ ತೆರಳಿ ಸಿಎಂ ಭೇಟಿ ಆಗುವುದಾಗಿ ಹೇಳಿದ್ದಾರೆ ಎಂದು ನುಡಿದರು.

    ಖಾತೆ ವಿಷಯದಲ್ಲಿ ಬಾಂಬೆ ಟೀಂ ಅಸಮಾಧಾನವಾಗಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಬಾಂಬೆನೂ ಇಲ್ಲ ಬೆಂಗಳೂರು ಇಲ್ಲ. ಎಲ್ಲಾ ಬಿಜೆಪಿ ಟೀಂ ಇದ್ದು, ನಾಲ್ಕೈದು ದಿನಗಳಲ್ಲಿ ಎಲ್ಲವೂ ಸರಿ ಹೋಗುತ್ತದೆ. ಇನ್ನು ವಿಶ್ವನಾಥ್ ಅವರ ಕೇಸ್ ಬೇರೆ ಆಗಿದ್ದು, ಅವರ ಪ್ರಕರಣ ಕೋರ್ಟ್ ನಲ್ಲಿದೆ. ಅವರನ್ನು ಸರ್ಕಾರ ನೇಮಕ ಮಾಡಿದ್ದು, ಇದರಿಂದಾಗಿ ಅವರನ್ನು ಸಚಿವರನ್ನಾಗಿ ಮಾಡಲು ಆಗಿಲ್ಲ ಎಂದು ಹೇಳಿದ್ದಾರೆ.

    ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಕುರಿತು ಸಿಎಂ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ. ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಮತ್ತು ಅಕ್ರಮವಾಗಿ ಅಕ್ಕಿ ಸಾಗಾಟ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಡಿಸಿ, ಎಸ್ಪಿಗೆ ಸೂಚಿಸಲಾಗಿದೆ. ಅಕ್ರಮ ಗಣಿಗಾರಿಕೆಯಲ್ಲಿ ಶಾಮೀಲಾದವರ ವಿರುದ್ಧ ತನಿಖೆ ಮಾಡಿಸಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

  • ದರ್ಶನ್ ತೋಟದ ಮನೆಗೆ ಬಿ.ಸಿ.ಪಾಟೀಲ್ ಭೇಟಿ

    ದರ್ಶನ್ ತೋಟದ ಮನೆಗೆ ಬಿ.ಸಿ.ಪಾಟೀಲ್ ಭೇಟಿ

    ಮೈಸೂರು: ಸ್ಯಾಂಡಲ್‍ವುಡ್ ಐರಾವತ ದರ್ಶನ್ ಅವರ ತೋಟದ ಮನೆಗೆ ಕೃಷಿ ಸಚಿವರಾದ ಬಿ.ಸಿ ಪಾಟೀಲ್ ಭೇಟಿ ನೀಡಿ ಕೆಲಕಾಲ ವಿಶ್ರಾಂತಿ ಪಡೆದಿದ್ದಾರೆ.

    ನಟ ದರ್ಶನ್ ಅವರ ಮೈಸೂರಿನ ಟಿ.ನರಸೀಪುರದಲ್ಲಿರುವ ತೋಟದ ಮನೆಗೆ ಭೇಟಿ ನೀಡಿದ ಕೃಷಿ ಸಚಿವ ಬಿ,ಸಿ.ಪಾಟೀಲ್, ಅಲ್ಲಿನ ತೋಟದಲ್ಲಿ ಸುತ್ತಾಡಿ ಸಮಯ ಕಳೆದರು. ಇತ್ತ ಸಚಿವರು ತಮ್ಮ ಮನೆಗೆ ಆಗಮಿಸುತ್ತಿದ್ದಂತೆ ದರ್ಶನ್ ಸಚಿವರನ್ನು ಆತ್ಮೀಯವಾಗಿ ಸ್ವಾಗತಿಸಿ ಸನ್ಮಾನ ಮಾಡಿದರು.

    ಇನ್ನೂ ದರ್ಶನ್ ಅವರ ತೋಟದ ಮನೆಯನ್ನು ಸುತ್ತಾಡಿದ ಸಚಿವರು ಅಲ್ಲಿನ ವೈಶಿಷ್ಟ್ಯ ಮತ್ತು ಕೃಷಿಯ ಬಗ್ಗೆ ಮಾಹಿತಿ ಪಡೆದರು. ನಂತರ ಅಲ್ಲಿನ ನಿಸರ್ಗದ ಸೊಗಸಾದ ವಾತಾವರಣದಲ್ಲಿ ಕೆಲಕಾಲ ವಿಶ್ರಾಂತಿ ಪಡೆದು ಉತ್ತಮ ಸಮಯವನ್ನು ಕಳೆದರು. ಸಚಿವರೊಂದಿಗೆ ಬಿಜೆಪಿಯ ಮುಖಂಡರು ಮತ್ತು ನಿರ್ಮಾಪಕ ಎನ್. ಸಂದೇಶ್ ಜೊತೆಗಿದ್ದರು.

     

  • ಬಿಜೆಪಿಯಲ್ಲಿ ಬಾಂಬೆ ಟೀಂ ಅಲ್ಲ, ಬಿಎಸ್ ವೈ, ಬಿಜೆಪಿ ಟೀಂ ಇದೆ: ಬಿ.ಸಿ ಪಾಟೀಲ್

    ಬಿಜೆಪಿಯಲ್ಲಿ ಬಾಂಬೆ ಟೀಂ ಅಲ್ಲ, ಬಿಎಸ್ ವೈ, ಬಿಜೆಪಿ ಟೀಂ ಇದೆ: ಬಿ.ಸಿ ಪಾಟೀಲ್

    ಚಾಮರಾಜನಗರ: ನಮ್ಮದು ಈಗ ಬಾಂಬೆ ಟೀಂ ಅಲ್ಲ. ಬಿಎಸ್ ವೈ ಟೀಂ, ಬಿಜೆಪಿ ಟೀಂ. ನಮ್ಮಲ್ಲಿ ಯಾವುದೇ ರೀತಿಯ ಬಿರುಕಿಲ್ಲ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ.

    ಇಂದು ಚಾಮರಾಜನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂಪುಟ ಪುನಾರಚನೆಯ ಅಸಮಾಧಾನ ವಿಚಾರವಾಗಿ, ನಮ್ಮ ಐದು ಬೆರಳುಗಳೇ ಸಮವಿಲ್ಲ. ಅಂತೆಯೇ ಕೆಲವರಿಗೆ ಅತೃಪ್ತಿ ಆಗಿರುವುದು ಸಹಜ. ಶಾಸಕರು ಕೆಲ ಇಲಾಖೆಯನ್ನು ನಿರ್ವಹಿಸುವ ಇಚ್ಛೆ ಇರುವುದರಿಂದ ಅಸಮಾಧಾನ ಇರಲಿದ್ದು, ಬಳಿಕ ಶಮನ ಆಗಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

    ಮೂರು ಕೃಷಿ ಕಾನೂನು ವಿರುದ್ಧ ದೆಹಲಿಯಲ್ಲಿ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ಕೇಂದ್ರ ಸರ್ಕಾರ 10 ಬಾರಿ ಸಭೆ ನಡೆಸಿದೆ. ಮುಂದಿನ ದಿನಗಳಲ್ಲಿ ಸರ್ಕಾರ ಮತ್ತು ರೈತರೊಂದಿಗೆ ಹೊಂದಾಣಿಕೆ ಏರ್ಪಡಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

    ಶಿವಮೊಗ್ಗದಲ್ಲಿ ನಡೆದ ಗಣಿ ದುರಂತದ ಬಗ್ಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಈಗಾಗಲೇ ತನಿಖೆಗೆ ಆದೇಶಿಸಿದ್ದಾರೆ. ಚಾಮರಾಜನಗರದಲ್ಲಿ ಗಣಿಗಾರಿಕೆಯಿಂದ ಎಲ್ಲೆಲ್ಲಿ ರೈತರಿಗೆ ತೊಂದರೆ ಉಂಟಾಗುತ್ತಿದೆ ಎಂಬ ಬಗ್ಗೆ ತಿಳಿಸಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ಬಗ್ಗೆ ಗಣಿ ಸಚಿವರೊಂದಿಗೆ ಚರ್ಚೆ ನಡೆಸುತ್ತೇನೆ ಎಂದು ಹೇಳಿದರು.

    ನಾನು ಇಚ್ಛೆಪಟ್ಟು ಕೃಷಿ ಖಾತೆಯನ್ನು ತೆಗೆದುಕೊಂಡಿದ್ದು, ರೈತರ ಬಾಳು ಹಸನಾದಾಗ ಮಾತ್ರ ನನಗೆ ತೃಪ್ತಿ. ರೈತರ ಬೆಳೆಗಳಿಗೆ ಸೂಕ್ತ ಬೆಲೆ ಸಿಗಬೇಕು, ಉತ್ತಮ ಸೌಕರ್ಯ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿದ್ದೇನೆ ಎಂದು ಹೇಳಿದರು.

  • ಇಲ್ಲಿದ್ರೆ ಹಿಡಿತಾರೆ, ಹೊಡಿತಾರೆ ಅಂತಾ ಮುಂಬೈಗೆ ಹೋಗಿದ್ದೇವು : ಬಿ.ಸಿ. ಪಾಟೀಲ್

    ಇಲ್ಲಿದ್ರೆ ಹಿಡಿತಾರೆ, ಹೊಡಿತಾರೆ ಅಂತಾ ಮುಂಬೈಗೆ ಹೋಗಿದ್ದೇವು : ಬಿ.ಸಿ. ಪಾಟೀಲ್

    ಮೈಸೂರು : ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಗೆ ಹೋಗಿದ್ದು ಯಾಕೆ ಎಂಬ ಪ್ರಶ್ನೆಗೆ ಸಚಿವ ಬಿ.ಸಿ. ಪಾಟೀಲ್ ಮೌನ ಮುರಿದಿದ್ದಾರೆ. ನಮ್ಮನ್ನು  ಹಿಡಿತಾರೆ ಹೊಡಿತಾರೆ ಅಂತಾ ಮುಂಬೈಗೆ ಹೋಗಿದ್ದೇವು ಎಂದಿದ್ದಾರೆ.

    ಮೈಸೂರಿನಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕರ್ನಾಟಕದಲ್ಲಿ ಆಗ ಭಯಾನಕವಾದ ಪರಿಸ್ಥಿತಿ ಇತ್ತು. ಅದಕ್ಕಾಗಿ ಹೆದರಿಕೆಯಿಂದ ಮುಂಬೈಗೆ ಹೋಗಿದ್ದೇವು ಎಂದು ಉತ್ತರಿಸಿದ್ದಾರೆ. ನಮ್ಮದು ಬಾಂಬೆ ಟೀಂ ಅಂತ ಯಾವುದು ಇರಲಿಲ್ಲ. ಮಾಧ್ಯಮದವರೇ ನಮಗೆ ಬಾಂಬೆ ಟೀಂ ಅಂತ ಹೆಸರು ಕೊಟ್ಟಿದ್ದು. ನಾವು ಬಾಂಬೆಗೆ ಹೋಗುವುದಕ್ಕೆ ಇಲ್ಲಿನ ಭಯಾನಕ ಪರಿಸ್ಥಿತಿ ಕಾರಣವಾಗಿತ್ತು ಎಂದು ಪ್ರತಿಕ್ರಿಯಿಸಿದರು.

    ರಾಜೀನಾಮೆ ಕೊಟ್ಟ ಸಂದರ್ಭದಲ್ಲಿ ಸುಧಾಕರ್‍ ಗೆ ಲಿಫ್ಟ್ ಅಲ್ಲಿ ಹಾಕಿಕೊಂಡು ಹೊಡೆದಿದ್ದರು. ಆ ಮೇಲೆ ಖರ್ಗೆ ಆಫೀಸ್ ಗೆ ಕರೆದುಕೊಂಡು ಹೋಗಿ ಒಳಗೆ ಹಾಕಿದ್ದರು. ಇದರಿಂದಾಗಿ ನಮಗೆ ಏನಾಗುತ್ತದೋ ಎಂಬ ಹೆದರಿಕೆಯಿಂದ ನಾವು ಮುಂಬೈಗೆ ಹೋಗಿದ್ದೇವು. ನಾವು ನಮ್ಮ ಸ್ವತಂತ್ರದಲ್ಲಿ ರಾಜೀನಾಮೆ ಕೊಟ್ಟಿರುವುದು. ನಮ್ಮ ಟೀಂ ಅಲ್ಲಿ ಒಡಕು ಏನಿಲ್ಲ ನಾವೆಲ್ಲ ಒಗ್ಗಟ್ಟಾಗಿದ್ದೇವೆ. ನಾವು ಮುಂಬೈ ಟೀಂ ಅಲ್ಲ ಈಗ ನಾವೆಲ್ಲ ಕರ್ನಾಟಕದಲ್ಲೆ ಇದ್ದೇವೆ. ಮತ್ತೆ ಮುಂಬೈಗೆ ಹೋಗುವಂತ ಪರಿಸ್ಥಿತಿ ಇಲ್ಲ, ಹೋಗಿದ್ದ ನಾವೆಲ್ಲರು ಸ್ನೇಹಿತರು. ಈಗ ಇನ್ನು 104 ಜನ ಹೆಚ್ಚು ಸ್ನೇಹಿತರು ಸಿಕ್ಕಿದ್ದಾರೆ ಈಗ ನಾವೆಲ್ಲ ಒಂದೇ ಎಂದು ಸ್ಪಷ್ಟಪಡಿಸಿದರು.

  • ರೈತರ ಆತ್ಮಹತ್ಯೆಗೆ ಅವರ ವೀಕ್ ಮೈಂಡ್ ಕಾರಣ: ಬಿ.ಸಿ ಪಾಟೀಲ್

    ರೈತರ ಆತ್ಮಹತ್ಯೆಗೆ ಅವರ ವೀಕ್ ಮೈಂಡ್ ಕಾರಣ: ಬಿ.ಸಿ ಪಾಟೀಲ್

    ಮೈಸೂರು: ವೀಕ್ ಮೈಂಡ್ ನಿಂದಲೇ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೋ ಕಾರಣದಲ್ಲಿ ಯಾವುದೋ ಒಂದು ಟೈಂ ಅಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅವರ ಆತ್ಮಹತ್ಯೆ ಆಗಬಾರದು ಅಂತಾನೆ ಹಲವು ಕಾರ್ಯಕ್ರಮ ಮಾಡುತ್ತಿದ್ದೇವೆ. ರೈತರು ಆತ್ಮಹತ್ಯೆ ಮಾಡಿಕೊಂಡ ತಕ್ಷಣ ಅವರ ಮನೆಗೆ ಹೋಗಿ ಹಾರ ಹಾಕಿದ್ರೆ. ಸಾಂತ್ವನ ಹೇಳಿದ್ರೆ ಆತ್ಮಹತ್ಯೆ ನಿಲ್ಲೋಲ್ಲ. ಅದಕ್ಕೆ ಪರ್ಯಾಯವಾಗಿ ಕಾರ್ಯಕ್ರಮ ರೂಪಿಸಬೇಕು ಎಂದರು.

    ರೈತರ ಆತ್ಮಹತ್ಯೆಗೆ ಸರ್ಕಾರದ ನೀತಿಗಳು ಕಾರಣವಲ್ಲ. ವೀಕ್ ಮೈಂಡ್ ನಿಂದ ಕೆಲ ರೈತರು ಆತ್ಮಹತ್ಯೆ ಮಾಡಿಕೊಳ್ತಾರೆ. ಎಲ್ಲ ರೈತರು ಏನ್ ಆತ್ಮಹತ್ಯೆ ಮಾಡಿಕೊಂಡಿದ್ದಾರಾ? ಇಲ್ಲ ತಾನೆ. ರೈತರಷ್ಟೆ ಅಲ್ಲ ಬೇರೆ ಬೇರೆಯವರು ಆತ್ಮಹತ್ಯೆ ಮಾಡಿಕೊಳ್ತಾರೆ. ಉದ್ಯಮಿಗಳು, ಅಧಿಕಾರಿಗಳು ಹಾಗೂ ಇತರೇ ಕ್ಷೇತ್ರದ ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಸರ್ಕಾರದ ನೀತಿಗಳು ಕಾರಣವಲ್ಲ ಎಂದು ತಿಳಿಸಿದ್ದಾರೆ.

    ಸರ್ಕಾರಗಳು ತನ್ನ ಕೆಲಸ ಮಾಡುತ್ತಿವೆ. ಹಳ್ಳಿಯಲ್ಲಿರುವವರು ಬಹುತೇಕರು ರೈತರೇ ಆಗಿರುತ್ತಾರೆ. ಹಾಗಂತ ಹಳ್ಳಿಗಳಲ್ಲಿ ಆಗುವ ಎಲ್ಲ ಸಾವುಗಳು ರೈತರ ಆತ್ಮಹತ್ಯೆ ಅಂದುಕೊಳ್ಳೋಕೆ ಆಗುತ್ತಾ?. ಸಮಸ್ಯೆಗೆ ಕಾರಣ ಹುಡುಕೋದೆ ತಜ್ಞರ ಸಮಿತಿಗಳ ಕೆಲಸ. ಅವರು ನೀಡುವ ವರದಿಯಂತೆಯೆ ಸರ್ಕಾರ ತೀರ್ಮಾನ ಕೈಗೊಳ್ಳುತ್ತದೆ ಎಂದು ಬಿ.ಸಿ.ಪಾಟೀಲ್ ಹೇಳಿದ್ದಾರೆ.

  • ಚಾಲೆಂಜಿಂಗ್ ಸ್ಟಾರ್ ದರ್ಶನ್ ಓಟಿಟಿ ಅಭಿಪ್ರಾಯಕ್ಕೆ ಕೌರವ ಪ್ರತಿಕ್ರಿಯೆ

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಓಟಿಟಿ ಅಭಿಪ್ರಾಯಕ್ಕೆ ಕೌರವ ಪ್ರತಿಕ್ರಿಯೆ

    ದಾವಣಗೆರೆ: ಓಟಿಟಿ ಸಿನಿಮಾ ರಂಗಕ್ಕೇನು ಮಾರಕವಲ್ಲ. ಓಟಿಟಿ ಆಧುನಿಕಥೆಗೆ ತಕ್ಕ ಹಾಗೆ ಕೆಲ ಬದಲಾವಣೆ ಆಗುತ್ತೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ.

    ದಾವಣಗೆರೆಯ ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ 5ಜಿ ಯಿಂದ ದೊಡ್ಡ ಸ್ಕ್ಯಾಮ್ ಇದೆ ಎಂಬ ದರ್ಶನ್ ಹೇಳಿಕೆಗೆ ಪ್ರತಿಕ್ರಿಯಿಸಿದರು. ಓಟಿಟಿ ಆಧುನಿಕಥೆಗೆ ತಕ್ಕ ಹಾಗೆ ಕೆಲ ಬದಲಾವಣೆ ಆಗುತ್ತೆ. ಆದರೆ ಚಿತ್ರಮಂದಿರದಲ್ಲಿ ಸಿನಿಮಾ ನೋಡಿದಾಗ ಸಿಗುವ ಖುಷಿ ಓಟಿಟಿ, ಟಿವಿಯಲ್ಲಿ ಸಿಗಲ್ಲ. ಓಟಿಟಿ ಮತ್ತು ಟಿವಿಯಲ್ಲಿ ನೋಡಿ ಸಿಳ್ಳೆ ಹೊಡೆಯೋಕೆ ಆಗಲ್ಲ ಎಂದರು.

    ಚಿತ್ರರಂಗದಲ್ಲಿ ನಿರ್ದೇಶಕರು ಮನೆ-ಮಠ ಮಾರಿಕೊಂಡ ಸಿನಿಮಾ ಮಾಡಿರುತ್ತಾರೆ. ಹೀರೋಗಳು ತಮ್ಮ ಎಫರ್ಟ್ ಹಾಕಿ ಸಿನಿಮಾ ಮಾಡಿರುತ್ತಾರೆ. ಸಿನಿಮಾವನ್ನ ಸಿಳ್ಳೆ, ಚಪ್ಪಾಳೆ ಮೂಲಕ ಥಿಯೇಟರ್ ನಲ್ಲಿ ನೋಡಿದ್ರೆ ಒಂದು ರೀತಿ ಖುಷಿ ಇರುತ್ತೆ. ಅದನ್ನ ಟಿವಿಯಲ್ಲಿ ನೋಡಿದ್ರೆ ಆ ರೀತಿಯ ಖುಷಿ ಸಿಗುತ್ತಾ ಎಂದು ಪ್ರಶ್ನಿಸಿದ್ದರು.

    ಜನವರಿ 10ರಂದು ಫೇಸ್‍ಬುಕ್ ಲೈವ್ ಬಂದಿದ್ದ ಸಾರಥಿ, ಆರಂಭದಲ್ಲಿ ಎಲ್ಲರಿಗೂ ಹೊಸ ವರ್ಷದ ಶುಭಾಶಯ ತಿಳಿಸಿದ್ದರು. ನಂತರ ಬಹುನಿರೀಕ್ಷೆಯ ರಾಬರ್ಟ್ ಸಿನಿಮಾ ಮಾರ್ಚ್ 11ರಂದು ಚಿತ್ರಮಂದಿರಗಳಲ್ಲೇ ಬಿಡುಗಡೆಯಾಗಲಿದೆ ಎಮದು ಹೇಳಿದ್ದರು. ಇದೇ ವೇಳೆ ಓಟಿಟಿ ಪ್ಲಾಟ್‍ಫಾರಂನಲ್ಲಿ ಸಿನಿಮಾ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿದ ಅವರು, ಥಿಯೇಟರ್ ನಲ್ಲಿ ಕೇಳುವ ಚಪ್ಪಾಳೆಗಳೇ ನಮಗೆ ಮುಖ್ಯ. ಸದ್ಯ ಶೇ.50ರಷ್ಟು ಆಸನ ಭರ್ತಿಗೆ ಸರ್ಕಾರ ಅನುಮತಿ ನೀಡಿದೆ. ಆದ್ರೂ ನಾವು ಚಿತ್ರಮಂದಿರದಲ್ಲಿಯೇ ಸಿನಿಮಾ ಬಿಡುಗಡೆ ಮಾಡಲು ಪ್ಲಾನ್ ಮಾಡಿಕೊಂಡಿದ್ದೇವೆ ಎಂದು ತಿಳಿಸಿದ್ದರು.

    ಚಿತ್ರಮಂದಿರಗಳಲ್ಲಿ ಸಂಪೂರ್ಣ ಸೀಟು ಭರ್ತಿಗೆ ಅವಕಾಶ ನೀಡದೆ ಇರುವುದರ ಹಿಂದೆ ಅಂಬಾನಿಯ 5ಜಿ ಸ್ಕ್ಯಾಮ್ ಇದೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಯಾಕೆಂದರೆ ಮಾಲ್ ಗಳು, ಮಾರುಕಟ್ಟೆ, ಅಂಗಡಿ, ಕಲ್ಯಾಣ ಮಂಟಪಗಳು, ಶಾಲಾ- ಕಾಲೇಜುಗಳು ತೆರೆದಿವೆ. ಎಲ್ಲ ಕಡೆ ಜನ ಸೇರುತ್ತಿದ್ದಾರೆ. ಆದರೆ ಚಿತ್ರಮಂದಿರಗಳಲ್ಲಿ ಮಾತ್ರ ಶೇ.100ರಷ್ಟು ಸೀಟು ಭರ್ತಿಗೆ ಅವಕಶ ನೀಡುತ್ತಿಲ್ಲ. ಅಂಬಾನಿ 5 ಜಿ ನೆಟ್ ವರ್ಕ್ ಲಾಂಚ್ ಮಾಡುತ್ತಿದ್ದಾರೆ. ಅವರ 5 ಜಿ ನೆಟ್‍ವರ್ಕ್ ಚಾಲ್ತಿಯಲ್ಲಿರಬೇಕು ಎಂದರೆ ಎಲ್ಲರೂ ಮೊಬೈಲ್ ಗೆ ಅಡಿಕ್ಟ್ ಆಗಬೇಕು. 5 ಜಿ ಓಡಬೇಕು ಅಂದರೆ ಓಟಿಟಿಯಲ್ಲಿ ಸಿನಿಮಾಗಳು ಇರಬೇಕು. ಆಗಲೇ ಅವರಿಗೆ ಹಣ ಬರುವುದು. ಅದೇ ಚಿತ್ರಮಂದಿರಗಳು ತೆರೆದರೆ ಓಟಿಟಿಗಳ ಮಾರುಕಟ್ಟೆ ಕುಸಿಯುತ್ತದೆ. ಹಾಗಾಗಿ ಅಂಬಾನಿ ದೊಡ್ಡವರಿಗೆ ಹೇಳಿ ಚಿತ್ರಮಂದಿರಗಳಿಗೆ ಅವಕಾಶ ನಿರಾಕರಿಸುತ್ತಿರಬಹುದು ಎಂದು ಅಭಿಪ್ರಾಯ ಪಟ್ಟಿದ್ದರು.