Tag: BC Patil

  • ನಾಮಪತ್ರ ಸಲ್ಲಿಸದಿದ್ದರೆ ವಿಷ ಕುಡಿತೀವಿ ಅಂತಿದ್ದಾರೆ ಕಾರ್ಯಕರ್ತರು, ಧರ್ಮ ಸಂಕಟದಲ್ಲಿದ್ದೇನೆ – ಬಿಜೆಪಿ ಟಿಕೆಟ್ ಆಕಾಂಕ್ಷಿ

    ನಾಮಪತ್ರ ಸಲ್ಲಿಸದಿದ್ದರೆ ವಿಷ ಕುಡಿತೀವಿ ಅಂತಿದ್ದಾರೆ ಕಾರ್ಯಕರ್ತರು, ಧರ್ಮ ಸಂಕಟದಲ್ಲಿದ್ದೇನೆ – ಬಿಜೆಪಿ ಟಿಕೆಟ್ ಆಕಾಂಕ್ಷಿ

    ಹಾವೇರಿ: ಸೋಮವಾರ ನಾಮಪತ್ರ ಸಲ್ಲಿಸದೇ ಇದ್ದಲ್ಲಿ ವಿಷ ಕುಡಿಯುತ್ತೇವೆ ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ. ನಾನೀಗ ಧರ್ಮ ಸಂಕಟದಲ್ಲಿದ್ದೇನೆ. ಮತದಾರರ ಮಾತು ಕೇಳಬೇಕೋ ಅಥವಾ ನಾಯಕರ ಮಾತು ಕೇಳಬೇಕೋ ಎನ್ನುವ ಗೊಂದಲದಲ್ಲಿದ್ದೇನೆ ಎಂದು ಹಿರೇಕೆರೂರು ಮಾಜಿ ಶಾಸಕ, ಬಿಜೆಪಿ ಟಿಕೆಟ್ ಆಕಾಂಕ್ಷಿ ಯು.ಬಿ.ಬಣಕಾರ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

    ಹಿರೇಕೆರೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಯಕರು ಹೊಂದಿಕೊಂಡರೆ ಕಾರ್ಯಕರ್ತರು ಹೊಂದಿಕೊಳ್ಳಲು ಸಾಧ್ಯವಿಲ್ಲ ಎಂಬ ಪ್ರಶ್ನೆ ಕಾಡುತ್ತಿದೆ. ಯಡಿಯೂರಪ್ಪನವರ ಮೇಲೆ ಗೌರವವಿಟ್ಟು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದರೆ ಜನ ಕೇಳುವ ಸ್ಥಿತಿಯಲ್ಲಿಲ್ಲ. ಸಾಧ್ಯವಾದಷ್ಟು ಕಾರ್ಯಕರ್ತರ ಮನವೊಲಿಸುತ್ತೇನೆ. ಇನ್ನೂ ಸಮಯ ಇದೆ. ಸೋಮವಾರದವರೆಗೆ ಕಾದು ನೋಡೋಣ. ಕಾರ್ಯಕರ್ತರು ಮತ್ತು ಬೆಂಬಲಿಗರ ಮನವೊಲಿಸುತ್ತೇನೆ ಎಂದು ತಿಳಿಸಿದ್ದಾರೆ.

    ಅನರ್ಹ ಶಾಸಕರೇ ಚುನಾವಣೆಗೆ ಸ್ಪರ್ಧಿಸುತ್ತಾರೋ ಅಥವಾ ಅವರ ಕುಟುಂಬದವರು ಸ್ಪರ್ಧಿಸುತ್ತಾರೋ ಎಂಬುದು ಇನ್ನೂ ನಿರ್ಧಾರ ಆಗಿಲ್ಲ. ಪ್ರತಿಭಟನೆ ಮಾಡುತ್ತಿರುವ ಮುಖಂಡರನ್ನು ಸಮಾಧಾನ ಮಾಡಿ ಕಳುಹಿಸಬೇಕು ಎಂಬ ವಿಚಾರದಲ್ಲಿದ್ದೇನೆ. ಇಷ್ಟೊಂದು ಜನರು ಸೇರಿದ್ದಾರೆ. ಟಿಕೆಟ್ ಕೈ ತಪ್ಪಿದೆ ಎನ್ನವ ಪ್ರಶ್ನೆ ಉದ್ಭವಿಸಲ್ಲ. ಎರಡು ದಿನಗಳು ಕಾದು ನೋಡೋಣ ಎಂದರೂ ಕೇಳುತ್ತಿಲ್ಲ. ಈಗಲೇ ನಾಮಪತ್ರ ಸಲ್ಲಿಸಿ ಎನ್ನುತ್ತಿದ್ದಾರೆ. ಈ ಬೆಳವಣಿಗೆಗಳ ಕುರಿತು ರಾಜ್ಯ ಮತ್ತು ಜಿಲ್ಲೆಯ ನಾಯಕರ ಗಮನಕ್ಕೆ ತರುತ್ತೇನೆ ಎಂದು ತಿಳಿಸಿದರು.

    ಉಪಚುನಾವಣೆ ಘೋಷಣೆಯಾದ ನಂತರ ಹಾವೇರಿ ಜಿಲ್ಲೆಯ ಎರಡು ಅನರ್ಹ ಕ್ಷೇತ್ರಗಳಲ್ಲಿ ಟಿಕೆಟ್ ಫೈಟ್ ಜೋರಾಗಿದೆ. ಬಿಜೆಪಿಯ ಮಾಜಿ ಶಾಸಕ ಯು.ಬಿ.ಬಣಕಾರಗೆ ಟಿಕೆಟ್ ನೀಡುವಂತೆ ಒತ್ತಾಯಿಸಿ ಇಂದು ಬಣಕಾರ ನಿವಾಸದ ಮುಂದೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಬಣಕಾರ ನಿವಾಸದ ಮುಂದೆ ನೂರಾರು ಕಾರ್ಯಕರ್ತರು, ಅಭಿಮಾನಿಗಳು ಜಮಾಯಿಸಿ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ, ಅನರ್ಹ ಶಾಸಕ ಬಿ.ಸಿ.ಪಾಟೀಲ್‍ಗೆ ಟಿಕೆಟ್ ನೀಡದಂತೆ ಆಗ್ರಹಿಸಿದ್ದಾರೆ.

    ಬಣಕಾರ ಅವರಿಗೆ ಬಿಜೆಪಿ ಟಿಕೆಟ್ ನೀಡದಿದ್ದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸುತ್ತೇವೆ ಎಂದು ಕಾರ್ಯಕರ್ತರು ಎಚ್ಚರಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಕೇವಲ 555 ಮತಗಳ ಅಂತರದಿಂದ ಬಣಕಾರ ಸೋತಿದ್ದರು. ಈ ಬಾರಿ 80 ಸಾವಿರಕ್ಕೂ ಅಧಿಕ ಮತಗಳನ್ನು ಕೊಡಿಸುತ್ತೇವೆ. ಅವರು ಮನೆಯಲ್ಲೇ ಕುಳಿತರೂ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡುತ್ತೇವೆ. ಬಣಕಾರ ಅವರು ಚುನಾವಣಾ ಕಣದಲ್ಲಿ ಇರಲೇಬೇಕು ಎಂದು ಆಗ್ರಹಿದ್ದಾರೆ.

    ಯು.ಬಿ.ಬಣಕಾರ ನಿರ್ಧಾರ ಪ್ರಕಟಿಸಲು ವಿಳಂಬ ಮಾಡುತ್ತಿರುವುದಕ್ಕೆ ಬೇಸತ್ತು ಕಾರ್ಯಕರ್ತ ಬಸವರಾಜ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬಿಜೆಪಿ ಟಿಕೆಟ್ ಕೊಡಬೇಕು ಇಲ್ಲವಾದಲ್ಲಿ, ಪಕ್ಷೇತರರಾಗಿ ನಿಲ್ಲಬೇಕೆಂದು ಒತ್ತಾಯಿಸುತ್ತಿದ್ದಾನೆ. ನಿಮ್ಮನ್ನೆ ನಂಬಿದ ಕಾರ್ಯಕರ್ತರಿಗೆ ವಿಷ ಕೊಡಿ, ಇಲ್ಲ ಚುನಾವಣೆಗೆ ನಿಲ್ಲಿ ಎಂದು ಬಣಕಾರ್ ಅವರನ್ನು ಮನೆಯೊಳಗೆ ಬಿಡದೆ ಮನೆ ಮುಂದೆ ಕುಳಿತು ಕಾರ್ಯಕರ್ತರು ಪಟ್ಟು ಹಿಡಿದ್ದಾರೆ.

  • ಅರ್ಜಿ ವಿಚಾರಣೆ ವಿಳಂಬವಾಗಿರುವುದು ಬೇಸರವಾಗಿದೆ: ಬಿಸಿ ಪಾಟೀಲ್

    ಅರ್ಜಿ ವಿಚಾರಣೆ ವಿಳಂಬವಾಗಿರುವುದು ಬೇಸರವಾಗಿದೆ: ಬಿಸಿ ಪಾಟೀಲ್

    ಬೆಂಗಳೂರು: ಅನರ್ಹ ಶಾಸಕರ ಅರ್ಜಿ ವಿಚಾರ ಸುಪ್ರೀಂಕೋರ್ಟ್‍ನಲ್ಲಿ ವಿಳಂಬವಾಗ್ತಿರೋದು ಅನರ್ಹ ಶಾಸಕರಿಗೆ ನುಂಗಲಾರದ ಬಿಸಿ ತುಪ್ಪದಂತಾಗಿದೆ. ಮೊನ್ನೆ ಮೊನ್ನೆ ತಾನೇ ನಾರಾಯಣಗೌಡ ಬಿಜೆಪಿ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದರು.

    ಈಗ ಬಿಸಿ ಪಾಟೀಲ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ನನಗೆ ಈ ಪ್ರಕ್ರಿಯೆ ಬೇಸರ ತಂದಿದೆ ಎಂದು ಹೇಳಿದ್ದಾರೆ. ಈ ಮೂಲಕ ಪರೋಕ್ಷವಾಗಿ ಬಿಜೆಪಿ ವಿರುದ್ಧ ತಮ್ಮ ಅಸಮಾಧಾನ ಹಾಗೂ ಕೋರ್ಟ್ ಪ್ರಕ್ರಿಯೆಯ ಬಗ್ಗೆಯೂ ಬೇಸರ ಹೊರಹಾಕಿದ್ದಾರೆ.

    ಕೋರ್ಟ್ ಕಲಾಪಕ್ಕೆ ವೆಚ್ಚ ಆಗುತ್ತಿರೊದು ದುಬಾರಿ, ಆದರೆ ಬೇರೆ ದಾರಿಯಿಲ್ಲ. ತಾಳಿದವನು ಬಾಳಿಯನು ಎಂಬಂತೆ ಕಾದುನೋಡುತ್ತಿದ್ದಿವಿ. ಮೊದಲಿಗೆ ನಾವು ಈ ವಿಚಾರದಲ್ಲಿ ಕೋರ್ಟ್‍ಗೆ ಹೋಗಬೇಕು ಎಂದುಕೊಂಡಿರಲಿಲ್ಲ. ಆದರೆ ರಮೇಶ್ ಕುಮಾರ್ ಅವರ ರಾಜಕೀಯ ಪ್ರೇರಿಪಿತವಾಗಿ ನೀಡಿದ ಕೆಟ್ಟ ತೀರ್ಪು ನಮ್ಮನ್ನು ಕೋರ್ಟ್‍ಗೆ ಹೋಗುವ ಹಾಗೇ ಮಾಡಿತು ಎಂದು ಕಿಡಿಕಾರಿದರು.

    ಇದೇ ವೇಳೆ ಔರಾದ್ಕರ್ ವರದಿಯ ಪ್ರಕಾರ ಪೊಲೀಸರಿಗೆ ವೇತನವನ್ನು ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು. ಮೋಟಾರು ವೆಹಿಕಲ್ ಕಾಯ್ದೆ ಜಾರಿ ಹಿನ್ನೆಲೆಯಲ್ಲಿ ದಂಡ ಹೆಚ್ಚಾಗಿರೊದು ಸ್ವಾಗತಾರ್ಹ. ತಪ್ಪು ಮಾಡಬೇಡಿ ದಂಡ ಬೀಳಲ್ಲ ಎಂದು ಅನರ್ಹ ಶಾಸಕ ಬಿಸಿ ಪಾಟೀಲ್ ಹೇಳಿದರು.

  • ಸಿದ್ದರಾಮಯ್ಯ, ಹೆಚ್‍ಡಿಡಿ ಮಾತು ಕೇಳಿ ಸ್ಪೀಕರ್ ಅನ್ಯಾಯ ಮಾಡಿದ್ರು: ಬಿ.ಸಿ ಪಾಟೀಲ್

    ಸಿದ್ದರಾಮಯ್ಯ, ಹೆಚ್‍ಡಿಡಿ ಮಾತು ಕೇಳಿ ಸ್ಪೀಕರ್ ಅನ್ಯಾಯ ಮಾಡಿದ್ರು: ಬಿ.ಸಿ ಪಾಟೀಲ್

    ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಮಾಜಿ ಪ್ರಧಾನಿ ದೇವೇಗೌಡರ ಮಾತು ಕೇಳಿಕೊಂಡು ಸ್ಪೀಕರ್ ರಮೇಶ್ ಕುಮಾರ್ ಅನ್ಯಾಯ ಮಾಡಿದರು ಎಂದು ಅನರ್ಹ ಶಾಸಕ ಬಿ.ಸಿ.ಪಾಟೀಲ್ ಬೇಸರ ವ್ಯಕ್ತಪಡಿಸಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಡಿ.ಕೆ ಶಿವಕುಮಾರ್ ಬಂಧನ ವಿಚಾರದಲ್ಲಿ ಅನರ್ಹ ಶಾಸಕರ ಕೈವಾಡವಿಲ್ಲ. ಹಾಗೆ ಅಂದುಕೊಂಡಿದ್ದರೆ ಅದು ಮೂರ್ಖತನ ಅಷ್ಟೇ ಎಂದು ಕಿಡಿಕಾರಿದರು.

    ಕಾನೂನಿನ ಮುಂದೆ ಎಲ್ಲರೂ ಒಂದೇ. ಡಿ.ಕೆ ಶಿವಕುಮಾರ್ ಅವರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗುತ್ತದೆ ಇಲ್ಲ ಅವರು ತಪ್ಪೇ ಮಾಡಿಲ್ಲ ಎಂದರೆ ಶಿಕ್ಷೆ ಆಗಲ್ಲ ಅಷ್ಟೇ ಎಂದು ಹೇಳಿದರು. ಇದೇ ವೇಳೆ ಅನರ್ಹರಾಗಿರೋ ನಾವು ಸುಪ್ರೀಂ ಕೊರ್ಟಿನಲ್ಲಿ ಗೆದ್ದು ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಬಿಜೆಪಿ ಸೇರುವ ಬಗ್ಗೆ ಅನರ್ಹ ಶಾಸಕ ಬಿ.ಸಿ ಪಾಟೀಲ್ ಹೇಳಿದ್ದೇನು?

    ಬಿಜೆಪಿ ಸೇರುವ ಬಗ್ಗೆ ಅನರ್ಹ ಶಾಸಕ ಬಿ.ಸಿ ಪಾಟೀಲ್ ಹೇಳಿದ್ದೇನು?

    ಬೆಂಗಳೂರು: ಬಿಜೆಪಿ ಸೇರ್ಪಡೆಯಾಗುವ ಬಗ್ಗೆ ಯಾವುದೇ ತೀರ್ಮಾನ ಮಾಡಿಲ್ಲ. ನನ್ನ ಕ್ಷೇತ್ರಕ್ಕೆ ನಾಲ್ಕು ಬಾರಿ ಹೋಗಿ ಬಂದಿದ್ದೇನೆ. ಕ್ಷೇತ್ರದ ಜನರ ಜೊತೆ ಚರ್ಚೆ ಮಾಡಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಹಾವೇರಿ ಜಿಲ್ಲೆಯ ಹಿರೇಕೆರೂರು ಕ್ಷೇತ್ರದ ಅನರ್ಹ ಶಾಸಕ ಬಿ.ಸಿ ಪಾಟೀಲ್ ಹೇಳಿದ್ದಾರೆ.

    ಸಿಎಂ ಗೃಹ ಕಚೇರಿಯಲ್ಲಿ ಯಡಿಯೂರಪ್ಪ ಭೇಟಿ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮನ್ನು ಕಾಂಗ್ರೆಸ್ ನಿಂದ ಉಚ್ಛಾಟನೆ ಮಾಡಲಾಗಿದೆ. ಹಾಗಾಗಿ ನಾನು ಕಾಂಗ್ರೆಸ್‍ನಲ್ಲಿ ಇಲ್ಲ ಎಂದರು.

    ಸುಪ್ರೀಂಕೋರ್ಟಿನಲ್ಲಿ ಅನರ್ಹತೆ ತೀರ್ಪು ಪ್ರಶ್ನಿಸಿದ್ದೇವೆ. ಮುಂದಿನ ವಾರ ಅರ್ಜಿ ವಿಚಾರಣೆಗೆ ಬರಬಹುದು. ಸುಪ್ರೀಂಕೋರ್ಟ್ ಅಯೋಧ್ಯೆ ಕುರಿತ ಅರ್ಜಿಗಳ ವಿಚಾರಣೆ ಮಾಡುತ್ತಿದೆ. ಹಾಗಾಗಿ ನಮ್ಮ ಅರ್ಜಿ ವಿಚಾರಣೆ ವಿಳಂಬವಾಗಿದೆ ಎಂದು ತಿಳಿಸಿದರು.

    ಮುಂದಿನ ರಾಜಕೀಯ ನಡೆ ಬಗ್ಗೆ ಚರ್ಚೆ ಮಾಡಿಲ್ಲ. ಬಿಜೆಪಿ ಸೇರ್ಪಡೆ ಬಗ್ಗೆ ಯಾವುದೇ ತೀರ್ಮಾನ ಮಾಡಿಲ್ಲ. ಕ್ಷೇತ್ರಕ್ಕೆ ನಾಲ್ಕು ಬಾರಿ ಹೋಗಿ ಬಂದಿದ್ದೇನೆ. ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡುವ ಸಂಬಂಧ ಸಿಎಂ ಭೇಟಿ ಮಾಡಿದ್ದೇನೆ. ಅನುದಾನ ನೀಡೋದಾಗಿ ಸಿಎಂ ಭರವಸೆ ನೀಡಿದ್ದಾರೆ. ಕುಟುಂಬದವರ ರಾಜಕೀಯ ಪ್ರವೇಶ ಬಗ್ಗೆ ಚಿಂತನೆ ಮಾಡಿಲ್ಲ ಎಂದು ಬಿ.ಸಿ ಪಾಟೀಲ್ ತಿಳಿಸಿದರು.

    ಇತ್ತೀಚೆಗೆ ತಮ್ಮ ಮಗಳೊಂದಿಗೆ ಹಾವೇರಿ ಜಿಲ್ಲೆಯ ಹಿರೇಕೆರೂರು ಕ್ಷೇತ್ರದ ಅನರ್ಹ ಶಾಸಕ ಬಿ.ಸಿ ಪಾಟೀಲ್ ಅವರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದರು. ಹೀಗಾಗಿ ಶಾಸಕರು ಬಿಜೆಪಿ ಸೇರುತ್ತಾರೆ ಎಂಬ ಸುದ್ದಿ ಹರಿದಾಡುತ್ತಿತ್ತು.

  • ಪುತ್ರಿಯೊಂದಿಗೆ ಸಿಎಂ ಭೇಟಿ – ಕುತೂಹಲ ಕೆರಳಿಸಿದ ಕೌರವನ ನಡೆ

    ಪುತ್ರಿಯೊಂದಿಗೆ ಸಿಎಂ ಭೇಟಿ – ಕುತೂಹಲ ಕೆರಳಿಸಿದ ಕೌರವನ ನಡೆ

    ಬೆಂಗಳೂರು: ಒಂದು ವೇಳೆ ಸುಪ್ರೀಂ ಕೋರ್ಟ್ ಸ್ಪೀಕರ್ ಆದೇಶವನ್ನು ಎತ್ತಿ ಹಿಡಿದರೆ ಹಿರೆಕೇರೂರು ಕ್ಷೇತ್ರದಿಂದ ಬಿಸಿ ಪಾಟೀಲ್ ಪುತ್ರಿ ಸೃಷ್ಟಿ ಕಣಕ್ಕೆ ಇಳಿಯುತ್ತಾರಾ ಹೀಗೊಂದು ಪ್ರಶ್ನೆ ಈಗ ಎದ್ದಿದೆ.

    ಡಾಲರ್ಸ್ ಕಾಲೋನಿಯ ಬಿ.ಎಸ್.ಯಡಿಯೂರಪ್ಪ ಅವರ ನಿವಾಸಕ್ಕೆ ಅನರ್ಹ ಶಾಸಕ ಬಿ.ಸಿ.ಪಾಟೀಲ್ ಮಗಳೊಂದಿಗೆ ಭೇಟಿ ಮಾಡಿದ್ದರಿಂದ ಈ ಪ್ರಶ್ನೆ ಚರ್ಚೆಯಾಗುತ್ತಿದೆ. ಸುಪ್ರೀಂ ಕೋರ್ಟ್ ತೀರ್ಪು ವಿಳಂಬವಾದಲ್ಲಿ ಸೃಷ್ಟಿ ಪಾಟೀಲ್ ಕಣಕ್ಕಿಳಿಸುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

    ಸಿಎಂ ಭೇಟಿ ನಂತರ ಬಿ.ಸಿ.ಪಾಟೀಲ್ ಪ್ರತಿಕ್ರಿಯಿಸಿ, ಯಾವ ಪಕ್ಷದಿಂದ ಸ್ಪರ್ಧಿಸಬೇಕು ಎಂಬುದರ ಕುರಿತು ಕ್ಷೇತ್ರದ ಜನತೆ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆ. ಮಗಳು ಸೃಷ್ಟಿ ಪಾಟೀಲ್ ಉಪ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಈ ಕುರಿತು ಚಿಂತನೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಅನರ್ಹತೆ ಆದರೂ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅಡ್ಡಿ ಇಲ್ಲ. ಈ ವಿಚಾರದಲ್ಲಿ ಸ್ಪೀಕರ್ ತಪ್ಪು ಮಾಹಿತಿ ಕೊಟ್ಟಿದ್ದಾರೆ. ತಮಿಳುನಾಡಿನಲ್ಲೂ ಶಾಸಕರು ಅನರ್ಹರಾದ ಬಳಿಕ ಕೋರ್ಟ್ ಅನುನತಿ ಪಡೆದು ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಹೀಗಾಗಿ ನಾವೂ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಬಹುದು ಎಂದು ತಿಳಿಸಿದರು.

    ಹಿರೆಕೇರೂರು ಕ್ಷೇತ್ರದಿಂದ ಬಿ.ಸಿ.ಪಾಟೀಲ್ ಸ್ಪರ್ಧೆಗೆ ಬಿಜೆಪಿ ಮಾಜಿ ಶಾಸಕ ಯು.ಬಿ.ಬಣಕಾರ್ ವಿರೋಧ ವ್ಯಕ್ತಪಡಿಸಿದ ಕುರಿತು ಪ್ರತಿಕ್ರಿಯಿಸಿದ ಅವರು, ಯು.ಬಿ.ಬಣಕಾರ್ ವಿರೋಧ ಮಾಡುತ್ತಿರುವ ಕುರಿತು ನನಗೆ ತಿಳಿದಿಲ್ಲ. ನಾನು ಕ್ಷೇತ್ರದ ಜನ ಹೇಳಿದಂತೆ ಕೇಳುತ್ತೇನೆ ಎಂದು ಸ್ಪಷ್ಟಪಡಿಸಿದರು.

    ಸೌಜನ್ಯಕ್ಕಾಗಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಶುಭಾಶಯ ಕೋರಿದೆ. ಕ್ಷೇತ್ರದ ಸಮಸ್ಯೆಗಳ ಬಗ್ಗೆ ಮಾತ್ರ ಚರ್ಚೆಸಿದ್ದು, ಹಿರೆಕೇರೂರು ತಾಲೂಕಿನ ಅಭಿವೃದ್ಧಿಗೆ ಒತ್ತು ಕೊಡುವಂತೆ ಮನವಿ ಮಾಡಿದ್ದೇನೆ. ಅವರು ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕಾನೂನು ಹೋರಾಟದ ಸಂಬಂಧ ಬಿಎಸ್‍ವೈ ಜೊತೆ ಮಾತನಾಡಿಲ್ಲ. ಈ ಕುರಿತು ವಕೀಲ ಮುಕುಲ್ ರೊಹಟಗಿ ಜೊತೆ ಅನರ್ಹ ಶಾಸಕರೆಲ್ಲರೂ ಚರ್ಚೆ ನಡೆಸಿದ್ದೇವೆ. ಮತ್ತೆ ಕಾಂಗ್ರೆಸ್‍ಗೆ ಹೋಗುವ ಪ್ರಶ್ನೆಯೇ ಇಲ್ಲ. ಅನರ್ಹ ಶಾಸಕರಾರೂ ಮತ್ತೆ ಕಾಂಗ್ರೆಸ್ ಸೇರುವುದಿಲ್ಲ ಎಂದು ತಿಳಿಸಿದ್ದಾರೆ.

    ನಿನ್ನೆಯಷ್ಟೇ ಅನರ್ಹ ಶಾಸಕ ಸುಧಾಕರ್ ಹಾಗೂ ರೋಷನ್ ಬೇಗ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರು. ಇದೀಗ ಬಿ.ಸಿ.ಪಾಟೀಲ್ ಅವರು ಸಿಎಂ ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ.

  • 1 ತಿಂಗ್ಳ ಬಳಿಕ ರಾಜ್ಯಕ್ಕೆ ಅನರ್ಹ ಶಾಸಕ ಬಿಸಿ ಪಾಟೀಲ್ ವಾಪಸ್

    1 ತಿಂಗ್ಳ ಬಳಿಕ ರಾಜ್ಯಕ್ಕೆ ಅನರ್ಹ ಶಾಸಕ ಬಿಸಿ ಪಾಟೀಲ್ ವಾಪಸ್

    – ಮೈತ್ರಿ ಸರ್ಕಾರ, ಎಚ್‍ಡಿಕೆ ಕುಟುಂಬ ರಾಜಕಾರಣ ವಿರುದ್ಧ ವಾಗ್ದಾಳಿ

    ಬೆಂಗಳೂರು: ಅನರ್ಹಗೊಂಡಿದ್ದ ಅತೃಪ್ತ ಶಾಸಕ ಬಿ.ಸಿ.ಪಾಟೀಲ್ ಅವರು ಬರೋಬ್ಬರಿ ಒಂದು ತಿಂಗಳ ಬಳಿಕ ರಾಜ್ಯಕ್ಕೆ ವಾಪಸ್ಸಾಗಿದ್ದಾರೆ. ಇಂದು ಸಂಜೆ 05.45ರ ವೇಳೆಗೆ ಇಂಡಿಗೋ ವಿಮಾನದಲ್ಲಿ ದೆಹಲಿಯಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.

    ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ಒಂದು ವರ್ಷ 2 ತಿಂಗಳಿನಿಂದ ರಾಜ್ಯದಲ್ಲಿ ರಾಕ್ಷಸ ಸರ್ಕಾರವಿತ್ತು. ಕಾಂಗ್ರೆಸ್ಸಿನ ಇಬ್ಬರು, ಮೂವರು ನಾಯಕರಿಗೆ ಬಿಟ್ಟರೆ ಸಂಪೂರ್ಣ ಆಡಳಿತ ಒಂದೇ ಕುಟುಂಬದ ಹಿಡಿತದಲ್ಲಿತ್ತು. ಮೂರ್ನಾಲ್ಕು ಜಿಲ್ಲೆಗಳಿಗೆ ಮಾತ್ರ ಸರ್ಕಾರ ಆಡಳಿತ ನಡೆಯುತಿತ್ತು. ಹೀಗಾಗಿ ನನ್ನ ಸ್ವಾಭಿಮಾನಕ್ಕೆ ಧಕ್ಕೆ ಹಾಗೂ ಉತ್ತರ ಕರ್ನಾಟಕ, ನಮ್ಮ ಕ್ಷೇತ್ರಗಳಿಗೆ ಆಗುತ್ತಿದ್ದ ಅನ್ಯಾಯ ತಡೆಯಲು ನಾವು ರಾಜೀನಾಮೆ ನೀಡಿದ್ದೇವೆ ಎಂದರು.

    ಸ್ಪೀಕರ್ ಅನರ್ಹತೆ ತೀರ್ಮಾನದ ಕುರಿತು ಮಾತನಾಡಿದ ಅವರು, ಈ ನಿರ್ಧಾರದ ವಿರುದ್ಧ ಈಗಾಗಲೇ ಸುಪ್ರೀಂಕೋರ್ಟ್ ಮೊರೆಹೋಗಿದ್ದು ಮುಂದಿನ ವಾರ ಉತ್ತಮ ನಿರ್ಣಯ ಬರುತ್ತೆ ಎಂಬ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ತಮ್ಮ ಮುಂದಿನ ರಾಜಕೀಯ ನಡೆ ಕುರಿತು ಸ್ಪಷ್ಟ ಪಡಿಸಿದ ಅವರು, ಕ್ಷೇತ್ರಕ್ಕೆ ಹಾಗೂ ಉತ್ತರ ಕರ್ನಾಟಕ ಭಾಗಕ್ಕೆ ಆಗುತ್ತಿದ್ದ ಅನ್ಯಾಯವನ್ನು ತಡೆಯಲು ರಾಜೀನಾಮೆ ನೀಡಿ ಸರ್ಕಾರ ಕೆಡುವುದರಲ್ಲಿ ಯಶಸ್ವಿಯಾಗಿದ್ದೇವೆ. ಆದ್ದರಿಂದ ಮುಂದಿನ ಚುನಾವಣೆಯಲ್ಲಿ ಹಿರೇಕೆರೂರಿನಿಂದಲೇ ನಾನು ಸ್ಪರ್ಧೆ ಮಾಡುತ್ತೇನೆ. ಕ್ಷೇತ್ರದ ಜನರ ಅಭಿಪ್ರಾಯ ಸಂಗ್ರಹಿಸಿ ಯಾವ ಪಕ್ಷದಿಂದ ಎಂಬ ತೀರ್ಮಾನ ಮಾಡುತ್ತೇನೆ ಎಂದರು.

    ಚುನಾವಣೆಯಲ್ಲಿ ಪುತ್ರಿ ಸ್ಪರ್ಧೆ ಮಾಡುತ್ತರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಮಗಳು ಕೂಡ ಯಾವುದೇ ಕ್ಷೇತ್ರದಿಂದ ಸ್ಪರ್ಧೆ ಮಾಡಬಹುದು. ನಾನು ಕೇವಲ ಹಿರೇಕೆರೂರು ಕ್ಷೇತ್ರಕ್ಕೆ ಮಾತ್ರ ಸಮೀತವಾಗಿಲ್ಲ. ಇಡೀ ರಾಜ್ಯಕ್ಕೆ ನನ್ನ ಬಗ್ಗೆ ತಿಳಿದಿದೆ. ನನ್ನ ಜೀವನದಲ್ಲಿ ಎರಡನೇ ರಾಜೀನಾಮೆ ನೀಡಿದ್ದೇನೆ. 2002 ರಲ್ಲಿ ಪೊಲೀಸ್ ಕೆಲಸಕ್ಕೆ ರಾಜೀನಾಮೆ ನೀಡಿದ್ದೆ. ಅಂದು ಸಹ ನಾನು ಆಸೆ ಆಕಾಂಕ್ಷೆಗಳನ್ನು ಹೊಂದಿರಲಿಲ್ಲ. ಯಾವುದೇ ಆಸೆ ಆಕಾಂಕ್ಷೆಗಳಿಗೆ ಒಳಗಾಗುವ ವ್ಯಕ್ತಿ ನಾನಲ್ಲ. ಮುಂದಿನ ಚುನಾವಣೆಯಲ್ಲಿ ನಾನು ಗೆದ್ದು ಮತ್ತೆ ವಿಧಾನಸಭೆ ಪ್ರವೇಶ ಮಾಡುವ ಅರ್ಹತೆ ಪಡೆದುಕೊಳ್ಳುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಯಾವುದೇ ಅನರ್ಹ ಭೀತಿ ಇಲ್ಲ, ಆರಾಮಾಗಿದ್ದಾರೆ: ಬಿ.ಸಿ.ಪಾಟೀಲ್ ಪುತ್ರಿ

    ಯಾವುದೇ ಅನರ್ಹ ಭೀತಿ ಇಲ್ಲ, ಆರಾಮಾಗಿದ್ದಾರೆ: ಬಿ.ಸಿ.ಪಾಟೀಲ್ ಪುತ್ರಿ

    ಹಾವೇರಿ: ಕಾಂಗ್ರೆಸ್ ನಾಯಕರು ಮೊದಲು ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದರು. ಮೂರನೇ ಬಾರಿ ಅವರು ಕೇಳಲಿಲ್ಲ. ಆದರೂ ಅವರೇ ಕರೆದು ಸಚಿವ ಸ್ಥಾನ ನೀಡುವ ಭರವಸೆ ಕೊಟ್ಟಿದ್ದರು. ಕೊನೆಗೆ ಮೋಸ ಮಾಡಿದರು ಎಂದು ರಾಜೀನಾಮೆ ನೀಡಿದ ಅತೃಪ್ತ ಶಾಸಕ ಬಿ.ಸಿ ಪಾಟೀಲ್ ಪುತ್ರಿ ಸೃಷ್ಟಿ ಪಾಟೀಲ್ ಹೇಳಿದ್ದಾರೆ.

    ಹಿರೇಕೆರೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ನಮ್ಮ ಕಾರ್ಯಕರ್ತರು ಅವರ ಪರವಾಗಿ ನಿಂತಿದ್ದಾರೆ. ಅವರೊಬ್ಬರೇ ರಾಜೀನಾಮೆ ನಿರ್ಧಾರ ಮಾಡಿಲ್ಲ. ಮುಂಚಿತವಾಗಿ ಬೆಂಬಲಿಗರಿಗೆ ತಿಳಿಸಿ ರಾಜೀನಾಮೆ ನೀಡಿದ್ದಾರೆ. ಯಾವುದೇ ಅರ್ನಹತೆ ಭೀತಿ ಅವರಿಗಿಲ್ಲ. ಅವರು ಆರಾಮಾಗಿದ್ದಾರೆ. ಅವರು ಯಾವುದೇ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ರಾಜೀನಾಮೆ ವಾಪಸ್ ಪಡೆಯುವ ಬಗ್ಗೆ ಬಿ.ಸಿ.ಪಾಟೀಲ್ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಸೃಷ್ಟಿ ಪಾಟೀಲ್ ತಿಳಿಸಿದರು. ಇದನ್ನೂ ಓದಿ: ಕ್ಷೇತ್ರದ ಅಭಿವೃದ್ಧಿಗಾಗಿ ರಾಜೀನಾಮೆ, ಪತಿಯ ನಡೆಗೆ ನಾವು ಬದ್ಧ – ಬಿ.ಸಿ ಪಾಟೀಲ್ ಪತ್ನಿ

    ಮನಷ್ಯನಿಗೆ ಪದೆ ಪದೇ ಮೋಸ ಮಾಡಿದರೆ ಯಾರು ತಡೆದುಕೊಳ್ಳುತ್ತಾರೆ. ಪಕ್ಷದ ಉಳಿವಿಗಾಗಿ ಒಂದು ಸಚಿವ ಸ್ಥಾನ ನೀಡಬೇಕಿತ್ತು. ಪಕ್ಷೇತರರಿಗೆ ಸಚಿವ ಸ್ಥಾನ ನೀಡುವ ಅವಶ್ಯಕತೆ ಇರಲಿಲ್ಲ. ಪಕ್ಷ ಕಟ್ಟಿ ಬೆಳೆಸಿದ ವ್ಯಕ್ತಿಗೆ ಬೆಲೆ ಕೊಟ್ಟಿಲ್ಲ. ಹೀಗಾಗಿ ಅವರಿಗೆ ಬೇಜಾರಾಗಿ ರಾಜೀನಾಮೆ ಕೊಟ್ಟಿದ್ದಾರೆ. ಬಿ.ಸಿ.ಪಾಟೀಲ್ ಯಾವುದೇ ಆಸೆ ಆಮಿಷಕ್ಕೆ ಒಳಗಾಗಿಲ್ಲ. ಅದು ಸುಳ್ಳು. ಪಕ್ಷದ ನಡವಳಿಕೆಯಿಂದ ಬೇಜಾರಾಗಿ ರಾಜೀನಾಮೆ ನೀಡಿದ್ದಾರೆ. ಆದರೆ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಪಕ್ಷಕ್ಕೆ ರಾಜೀನಾಮೆ ನೀಡಿಲ್ಲ ಎಂದರು.

    ಮೊನ್ನೆ ಫೋನ್ ಮಾಡಿದ್ದಾಗ ಇದೇ ಮೊದಲ ಬಾರಿಗೆ ನಾನು ಹಿರೇಕೆರೂರು ಬಿಟ್ಟು ಒಂದು ತಿಂಗಳಾಗಿದೆ. ನಾನು ಜನರನ್ನು ನೋಡಬೇಕು. ಅವರ ಜೊತೆ ಮಾತನಾಡಬೇಕು ಎಂದು ಹೇಳುತ್ತಿದ್ದರು. ಆದಷ್ಟು ಬೇಗ ಹಿರೇಕೆರೂರು ಕ್ಷೇತ್ರಕ್ಕೆ ಆಗಮಿಸಲಿದ್ದಾರೆ. ಕ್ಷೇತ್ರಕ್ಕೆ ಬಾರದೇ ಎಲ್ಲೂ ಹೋಗಲ್ಲ. ಅನರ್ಹ ಮಾಡಿದರೆ 5 ವರ್ಷದ ಚುನಾವಣೆಯಲ್ಲಿ ನಿಲ್ಲಬಾರದು ಎಂಬುದು ಇಲ್ಲ. 6 ತಿಂಗಳ ಒಳಗೆ ಚುನಾವಣೆಗೆ ನಿಲ್ಲಬಹುದು ಎಂದು 2018ರ ತೀರ್ಪಿನಲ್ಲಿ ರಾವತ್ ಹೇಳಿದ್ದಾರೆ ಎಂದು ಸೃಷ್ಟಿ ಹೇಳಿದರು.

  • ಕ್ಷೇತ್ರದ ಅಭಿವೃದ್ಧಿಗಾಗಿ ರಾಜೀನಾಮೆ, ಪತಿಯ ನಡೆಗೆ ನಾವು ಬದ್ಧ – ಬಿ.ಸಿ ಪಾಟೀಲ್ ಪತ್ನಿ

    ಕ್ಷೇತ್ರದ ಅಭಿವೃದ್ಧಿಗಾಗಿ ರಾಜೀನಾಮೆ, ಪತಿಯ ನಡೆಗೆ ನಾವು ಬದ್ಧ – ಬಿ.ಸಿ ಪಾಟೀಲ್ ಪತ್ನಿ

    ಹಾವೇರಿ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈ ಸೇರಿರುವ ಹಿರೇಕೆರೂರಿನ ಕ್ಷೇತ್ರದ ಶಾಸಕ ಬಿ.ಸಿ ಪಾಟೀಲ್ ಜನರ ಒಪ್ಪಿಗೆ ಪಡೆದು ರಾಜೀನಾಮೆ ನೀಡಿದ್ದಾರೆ. ಅವರ ಈ ತೀರ್ಮಾನಕ್ಕೆ ನಾವು ಬದ್ಧ ಎಂದು ಅವರ ಧರ್ಮಪತ್ನಿ ವನಜಾ ಪಾಟೀಲ್ ಅವರು ಹೇಳಿದ್ದಾರೆ.

    ಇಂದು ಅವರು ನಿವಾಸದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಬಿ.ಸಿ ಪಾಟೀಲ್ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಲ್ಲ. ಶಾಸಕ ಸ್ಥಾನಕ್ಕೆ ಮಾತ್ರ ರಾಜೀನಾಮೆ ನೀಡಿದ್ದಾರೆ. ಕ್ಷೇತ್ರದ ಜನರ ಒಪ್ಪಿಗೆ ಪಡೆದು ರಾಜೀನಾಮೆ ನೀಡಿದ್ದಾರೆ ಎಂದು ಹೇಳಿದರು.

    ಹಿರೇಕೆರೂರು ಕ್ಷೇತ್ರದಲ್ಲಿ 38 ವರ್ಷದಲ್ಲಿ ಕಾಂಗ್ರೆಸ್ ಪಕ್ಷದ ಯಾವ ಶಾಸಕರು ಗೆಲುವು ಪಡೆದಿಲ್ಲ. ಆದರೆ ಬಿ.ಸಿ.ಪಾಟೀಲ್ ಗೆದ್ದಿದ್ದಾರೆ. ಅವರು ಯಾವುದೇ ಆಮಿಷಕ್ಕೆ ಒಳಗಾಗಿ ರಾಜೀನಾಮೆ ನೀಡಿಲ್ಲ. ಹಾಗಿದ್ದರೆ ಚುನಾವಣೆಯ ಸಮಯದಲ್ಲಿ ಮನೆ ಸೈಟ್ ಮಾರಾಟ ಮಾಡುತ್ತಿರಲಿಲ್ಲ. ಅವರ ಈ ನಡೆಗೆ ನಾವು ಬದ್ಧರಾಗಿದ್ದೇವೆ ಎಂದು ಪತಿಯ ತೀರ್ಮಾನವನ್ನು ಸಮರ್ಥಿಸಿಕೊಂಡರು.

    ದಕ್ಷಿಣ ಕರ್ನಾಟಕ ಅಭಿವೃದ್ಧಿಯಾಗಿದೆ. ಅದರೆ ನಮ್ಮ ಕ್ಷೇತ್ರದ ಅಭಿವೃದ್ಧಿ ಆಗಿಲ್ಲ. ಅದ್ದರಿಂದ ಅಭಿವೃದ್ಧಿಗಾಗಿ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಜನರಿಗೆ ತಿಳಿಸಿ ಹೋಗಿದ್ದಾರೆ. ಜನರಿಗೆ ತಿಳಿಸಿಯೇ ಕ್ಷೇತ್ರಕ್ಕೆ ವಾಪಸ್ ಬರುತ್ತಾರೆ. ರಾಜೀನಾಮೆ ವಾಪಸ್ ಪಡೆಯುವ ಸಾಧ್ಯತೆ ಕಡಿಮೆ ಎಂದು ಈ ವೇಳೆ ತಿಳಿಸಿದರು.

  • ಪೊಲೀಸ್ ಇಲಾಖೆಯಲ್ಲಿ ಕೆಲ್ಸ ಮಾಡಿದವನು, ಬಂಧನ ಮಾಡಲು ಸಾಧ್ಯವಿಲ್ಲ: ಬಿ.ಸಿ.ಪಾಟೀಲ್

    ಪೊಲೀಸ್ ಇಲಾಖೆಯಲ್ಲಿ ಕೆಲ್ಸ ಮಾಡಿದವನು, ಬಂಧನ ಮಾಡಲು ಸಾಧ್ಯವಿಲ್ಲ: ಬಿ.ಸಿ.ಪಾಟೀಲ್

    ಮುಂಬೈ: ಯಾವ ಬಂಧನದಲ್ಲಿಯೂ ನಾವಿಲ್ಲ. ಎಲ್ಲರೂ ಫ್ರೀಯಾಗಿ ಇದ್ದೀವಿ. ನಾನು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದ್ದೇನೆ. ನಮ್ಮನ್ನು ಬಂಧನ ಮಾಡುವವರು ಯಾರು ಇಲ್ಲ ಎಂದು ಬಿ.ಸಿ ಪಾಟೀಲ್ ಮುಂಬೈ ಹೋಟೆಲ್‍ನಲ್ಲಿ ಹೇಳಿದರು.

    ಹೋಟೆಲಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2018ರಲ್ಲಿ ಸರ್ಕಾರ ರಚನೆಯಾದ ಸಂದರ್ಭದಲ್ಲಿ ಆಸೆ, ಆಮಿಷಗಳು ಬಂದಾಗ ಬಲಿಯಾಗಲಿಲ್ಲ. ಇಂದು ಬಲಿಯಾಗುವ ಅವಶ್ಯಕತೆ ನಮಗೆ ಯಾರಿಗೂ ಇಲ್ಲ. ಯಾವ ಬಂಧನದಲ್ಲಿಯೂ ಇಲ್ಲ. ಎಲ್ಲರೂ ಫ್ರೀಯಾಗಿ ಇದ್ದೇವೆ. ನಾವು ಬಂಧನ ಮಾಡಿದ ಜನರು. ನಮ್ಮನ್ನು ಬಂಧನ ಮಾಡುವವರು ಯಾರು ಇಲ್ಲ. ನಾವು ಬಹಳ ಸ್ವತಂತ್ರವಾಗಿದ್ದೇವೆ. ಸಮಾನ ಮನಸ್ಥಿತಿಯವರು ರಾಜೀನಾಮೆ ಕೊಟ್ಟಿದ್ದೇವೆ. ಒಬ್ಬೊಬ್ಬರಿದ್ದರೆ ಬೇರೆ ಬೇರೆ ರೀತಿಯಲ್ಲಿ ವಿಷಯಗಳನ್ನು ಹರಡಿಸಿ ಅದರ ಉಪಯೋಗವನ್ನು ಪಡೆದುಕೊಳ್ಳುಲು ಪ್ರಯತ್ನ ಮಾಡುತ್ತಾರೆ ಎಂದು ನಾವೆಲ್ಲಾ ಒಟ್ಟಾಗಿ ಇದ್ದೇವೆ ಎಂದು ತಿಳಿಸಿದರು.

    ಸಿದ್ದರಾಮಯ್ಯ ಅವರು ಅನರ್ಹಗೊಳಿಸುವಂತೆ ದೂರು ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ದೂರು ಕೊಡುವುದು ಅವರ ಕರ್ತವ್ಯ. ತೀರ್ಮಾನ ಮಾಡುವುದು ಸ್ಪೀಕರ್. ಅವರು ನ್ಯಾಯಾಲಯದಲ್ಲಿ ನ್ಯಾಯಾಧೀಶರಿದ್ದಂತೆ. ಹೀಗಾಗಿ ಅವರು ಆಗುಹೋಗುಗಳನ್ನು ತಿಳಿದು ತೀರ್ಮಾನ ತೆಗೆದುಕೊಳ್ಳುತ್ತಾರೆ. ದೂರು ಕೊಟ್ಟ ತಕ್ಷಣ ಅದೇ ಫೈನಲ್ ಅಲ್ಲ. ಅನರ್ಹಗೊಳಿಸುವಂತಹ ಯಾವುದೇ ಕೆಲಸ ಮಾಡಿಲ್ಲ. ಯಾವುದೇ ಪಕ್ಷ ವಿರೋಧಿ ಕೆಲಸವನ್ನು ಮಾಡಿಲ್ಲ. ನಾವು ನಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ರಾಜೀನಾಮೆ ಕೊಟ್ಟಿದ ತಕ್ಷಣ ಅದು ಪಕ್ಷ ವಿರೋಧಿ ಚಟುವಟಿಕೆಯಲ್ಲ. ಹೀಗಾಗಿ ಅನರ್ಹ ಮಾಡುವಂತಹ ಕಾರಣವೂ ಅಲ್ಲ ಎಂದು ಹೇಳಿ ಮಾಜಿ ಸಿಎಂಗೆ ತಿರುಗೇಟು ಕೊಟ್ಟರು.

    ನಮಗೆ ಸ್ಪೀಕರ್ ಮೇಲೆ ಬಹಳ ನಂಬಿಕೆಯಿದೆ. ಅವರು ಬಹಳ ಬುದ್ಧಿವಂತರಾಗಿದ್ದು, ಕಾನೂನನ್ನು ಅರೆದು ಕುಡಿದಿದ್ದಾರೆ. ಹೀಗಾಗಿ ಸ್ಪೀಕರ್ ಅವರು ಕಾನೂನಿನ ಚೌಕಟ್ಟಿನಲ್ಲಿ ಸರಿಯಾದ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬ ಭರವಸೆ ನಮಗೆ ಇದೆ. ಒಂದು ವೇಳೆ ಸ್ಪೀಕರ್ ನೀವೆಲ್ಲರೂ ಬಂದು ಹಾಜರಾಗಬೇಕು ಎಂದು ಕರೆ ಮಾಡಿದರೆ, ತಕ್ಷಣ ನಾವು ಅವರ ಮುಂದೆ ಹಾಜರಾಗಿ ಹೇಳಿಕೆ ಕೊಡುತ್ತೇವೆ ಎಂದು ಪಾಟೀಲ್ ತಿಳಿಸಿದರು.

    ಯಾರು ಯಾರನ್ನು ಹಿಡಿದಿಡಲು ಆಗಲ್ಲ. ಎಲ್ಲರೂ ಸ್ವತಂತ್ರವಾಗಿದ್ದೀವಿ. ಇಲ್ಲಿ ಯಾರು ಶಾಲೆ ಮಕ್ಕಳಲ್ಲ. ನಾವೆಲ್ಲ ಜವಾಬ್ದಾರಿ ಸ್ಥಾನದಲ್ಲಿದ್ದವರು. 3 ಬಾರಿ ಶಾಸಕರಾಗಿರುವವರು. ವಿಶೇಷವಾಗಿ ನಾನು 25 ವರ್ಷದ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದವನು. ಹೀಗಾಗಿ ನಾವು ಯಾರ ಒತ್ತಡದಲ್ಲಿಯೂ ಇಲ್ಲ. ಸ್ವ-ಇಚ್ಚೆಯಿಂದ ಬಂದಿದ್ದೇವೆ ಎಂದರು.

    ನಮ್ಮ ಕ್ಷೇತ್ರದ ಜನತೆ ನನ್ನ ನಡೆಯನ್ನು ತುಂಬು ಹೃದಯದಿಂದ ಸ್ವಾಗತ ಮಾಡಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ. ಅದರಲ್ಲೂ ಹಾವೇರಿ ಜಿಲ್ಲೆಗೆ ದೊಡ್ಡ ಅನ್ಯಾಯ ಮಾಡಲಾಗಿದೆ. ಉತ್ತರ ಕರ್ನಾಟಕ, ತಾಲೂಕಿಗೆ ಅನ್ಯಾಯ ಮಾಡಿದರು. ಬಿ.ಸಿ.ಪಾಟೀಲ್ ಅವರ ನಿರ್ಧಾರ ಸರಿಯಾಗಿದೆ ಎಂದು ನಮ್ಮ ಕ್ಷೇತ್ರದ ಜನರು ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸಿದ್ದಾರೆ. ನಮ್ಮ ಜೊತೆ ಜನರು ಇದ್ದಾರೆ. ಅವರ ಜೊತೆ ನಾವಿದ್ದೇವೆ. ಜಿಲ್ಲೆಯ ಅಭಿವೃದ್ಧಿಯೇ ನಮ್ಮ ಧ್ಯೇಯವಾಗಿದೆ ಎಂದು ಬಿ.ಸಿ. ಪಾಟೀಲ್ ಹೇಳಿದರು.

  • ದೋಸ್ತಿ ಸರ್ಕಾರದ ನಿರ್ಧಾರದ ವಿರುದ್ಧವೇ ಬಿಸಿ ಪಾಟೀಲ್ ಕಿಡಿ

    ದೋಸ್ತಿ ಸರ್ಕಾರದ ನಿರ್ಧಾರದ ವಿರುದ್ಧವೇ ಬಿಸಿ ಪಾಟೀಲ್ ಕಿಡಿ

    ಹಾವೇರಿ: ಬೆಂಗಳೂರಿಗೆ ಶಿವಮೊಗ್ಗ ಜಿಲ್ಲೆಯ ಶರಾವತಿ ನದಿ ನೀರು ಹರಿಸುವ ಯೋಜನೆಯನ್ನು ವಿರೋಧಿಸುತ್ತೇವೆ. ಬೆಂಗಳೂರು ಬೆಳೆಯುವುದನ್ನು ನಿಲ್ಲಿಸಿ, ಉತ್ತರ ಕರ್ನಾಟಕವನ್ನು ಬೆಳೆಸಿ ಎಂದು ಹಿರೇಕೆರೂರಿನ ಕಾಂಗ್ರೆಸ್ ಶಾಸಕ ಬಿ.ಸಿ.ಪಾಟೀಲ್ ಟ್ವೀಟ್ ಮೂಲಕ ದೊಸ್ತಿ ಸರ್ಕಾರದ ನಿರ್ಧಾರದ ವಿರುದ್ಧ ಕಿಡಿಕಾರಿದ್ದಾರೆ.

    ಬೆಂಗಳೂರಿಗೆ ಶರಾವತಿ ನೀರು ಹರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಲೆನಾಡು ಜನತೆ ಮತ್ತು ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈಗ ಬಿಸಿ ಪಾಟೀಲ್ ಟ್ವೀಟ್ ಮಾಡುವ ಮೂಲಕ ನೇರವಾಗಿ ಸರ್ಕಾರದ ನಡೆಯನ್ನು ಟೀಕಿಸಿದ್ದಾರೆ.

    ಈ ಯೋಜನೆಗೆ ವಿರೋಧವಿದೆ. ಬೆಂಗಳೂರು ಬೆಳೆಯುವುದನ್ನ ನಿಲ್ಲಿಸಿ, ಉತ್ತರ ಕರ್ನಾಟಕವನ್ನ ಬೆಳೆಸಿ. ಇಲ್ಲಿ ಸಾಕಷ್ಟು ನದಿಗಳಿವೆ. ಅವುಗಳನ್ನ ಅಭಿವೃದ್ಧಿ ಮಾಡಿ. ಉತ್ತರ ಕರ್ನಾಟಕದ ಬಗ್ಗೆ ಕಾಳಜಿ ವಹಿಸಿ ಎಂದು ಪರೋಕ್ಷವಾಗಿ ಮೈತ್ರಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    ಬೆಂಗಳೂರಿಗೆ ಶರಾವತಿ ನದಿಯ ನೀರನ್ನು ತೆಗೆದುಕೊಂಡು ಹೋಗಲು ನಮ್ಮ ವಿರೋಧ. ಬೆಂಗಳೂರು ಬೆಳೆಯುವುದನ್ನು ನಿಲ್ಲಿಸಿ, ಉತ್ತರ ಕರ್ನಾಟಕವನ್ನು ಬೆಳೆಸಿ ಇಲ್ಲಿ ಸಾಕಷ್ಟು ನದಿಗಳಿವೆ ಎಂದು ಬರೆದು, ಹೆಚ್.ಡಿ ಕುಮಾರಸ್ವಾಮಿ ಹಾಗೂ ಸಿಎಂ ಆಫ್ ಕರ್ನಾಟಕ ಟ್ಯಾಗ್ ಮಾಡಿ ಟ್ವೀಟ್ ಮೂಲಕ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.

    ಶಿವಮೊಗ್ಗ ಬಂದ್‍ಗೆ ಕರೆ: ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ನೀರು ಹರಿಸುವ ಯೋಜನೆಯಿಂದ ಅಪಾರ ಪರಿಸರ ನಾಶವಾಗುತ್ತದೆ. ಅದ್ದರಿಂದ ಈ ಯೋಜನೆಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಜುಲೈ 10 ರಂದು ಶರಾವತಿ ಉಳಿಸಿ ಹೋರಾಟ ಒಕ್ಕೂಟದ ಸಭೆ ಶಿವಮೊಗ್ಗ ಬಂದ್‍ಗೆ ಕರೆ ನೀಡಿದೆ.

    ಶನಿವಾರ ಜಿಲ್ಲೆಯ ನೌಕರರ ಭವನದಲ್ಲಿ ತಾಲೂಕು ಒಕ್ಕೂಟದ ವತಿಯಿಂದ ನಡೆದ ಸಮಾಲೋಚನಾ ಸಭೆಯಲ್ಲಿ ಶಿವಮೊಗ್ಗದ ವಿವಿಧ ಸಂಘ, ಸಂಸ್ಥೆಗಳ ಮತ್ತು ಜನಪ್ರತಿನಿಧಿಗಳು ಸೇರಿ ಈ ಯೋಜನೆ ಜಾರಿ ಆದರೆ ಮಲೆನಾಡಿನ ಜನರಿಗೆ ತೊಂದರೆಯಾಗುತ್ತದೆ ಎಂದು ಈ ತೀರ್ಮಾನ ಕೈಗೊಂಡಿದೆ.