Tag: BC Patil

  • ಕುಮಾರಸ್ವಾಮಿ ಕೆಟ್ಟ ಮುಖ್ಯಮಂತ್ರಿಯಾಗಿದ್ದರು, ಬಿಎಸ್‍ವೈ ಸಿಎಂ ಆದ ಮೇಲೆ ಶನಿ ಹರಿದಿದೆ – ಬಿ.ಸಿ.ಪಾಟೀಲ್

    ಕುಮಾರಸ್ವಾಮಿ ಕೆಟ್ಟ ಮುಖ್ಯಮಂತ್ರಿಯಾಗಿದ್ದರು, ಬಿಎಸ್‍ವೈ ಸಿಎಂ ಆದ ಮೇಲೆ ಶನಿ ಹರಿದಿದೆ – ಬಿ.ಸಿ.ಪಾಟೀಲ್

    ಹಾವೇರಿ: ಕುಮಾರಸ್ವಾಮಿ ಒಬ್ಬ ಕೆಟ್ಟ ಮುಖ್ಯಮಂತ್ರಿ. ಬಿಎಸ್‍ವೈ ಸಿಎಂ ಆದ ನಂತರ ರಾಜ್ಯದ ಶನಿ ಹರಿದುಹೋಗಿದೆ ಎಂದು ಹೇಳುವ ಮೂಲಕ ಎಚ್‍ಡಿಕೆಯವರನ್ನು ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಪರೋಕ್ಷವಾಗಿ ಶನಿ ಎಂದು ಕಿಡಿ ಕಾರಿದ್ದಾರೆ.

    ಹಿರೇಕೆರೂರಿನ ರಟ್ಟಿಹಳ್ಳಿಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿಯವರ ಬಳಿ ಕ್ಷೇತ್ರದ ನೀರಾವರಿ ಯೋಜನೆಗೆ ಅನುದಾನ ಕೇಳಿದರೆ 14 ತಿಂಗಳಾದರೂ ಹಣ ಕೊಡಲಿಲ್ಲ. ಆದರೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನಿಖಿಲ್ ಕುಮಾರಸ್ವಾಮಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧೆ ಮಾಡಿದಾಗ ಮಂಡ್ಯ ಜಿಲ್ಲೆ ಅಭಿವೃದ್ಧಿಗೆ 8 ಸಾವಿರ ಕೋಟಿ ರೂ. ಕೊಡುತ್ತೇನೆ ಅಂತ ಹೇಳಿದ್ದರು ಎಂದು ವಾಗ್ದಾಳಿ ನಡೆಸಿದರು.

    ಹಾವೇರಿ ಜಿಲ್ಲೆಗೆ 1 ಸಾವಿರ ಕೋಟಿ ರೂ. ಅನುದಾನ ನೀಡಲು ಸಹ ಹಣ ಇಲ್ಲ ಎಂದರು. ಹೀಗಾಗಿ ನಾನು ಮೈತ್ರಿ ಸರ್ಕಾರದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದೆ. ನಾನು ರಾಜೀನಾಮೆ ಕೊಟ್ಟಿದ್ದು ಸರಿಯೇ ಎಂದು ಇದೇ ಸಂದರ್ಭದಲ್ಲಿ ನೆರೆದಿದ್ದ ಜನರನ್ನು ಕೇಳಿದರು.

    ಇದೇ ವೇಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಹಾಡಿ ಹೊಗಳಿದ ಬಿ.ಸಿ.ಪಾಟೀಲ್, ಬಿಎಸ್‍ವೈ ನಮಗೆ ಕಾಮಧೇನು ಆಗಿದ್ದಾರೆ. ಅವರು ಈ ಹಿಂದೆ ಹಿರೇಕೆರೂರಿಗೆ ಬಂದಾಗ ಅಂದು ನಾನು ಬಿಜೆಪಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡೆ. ಕಳೆದ 14ರಂದು ನಾನು ಬಿಜೆಪಿ ಸೇರಿದ್ದೇನೆ. ಇಂದು 10ನೇ ದಿನದ ಸಂಸಾರ ನನ್ನದು. ಯುದ್ಧ ಪ್ರಾರಂಭವಾಗಿದೆ. ಹೀಗಾಗಿ ನಾನು ಎಲ್ಲರನ್ನೂ ಭೇಟಿಯಾಗಲು ಆಗುತ್ತಿಲ್ಲ. ಇದೊಂದು ಮಹಾಪರ್ವ. ನಾನು ಯು.ಬಿ ಬಣಕಾರ ಒಂದೇ ವೇದಿಕೆಯಲ್ಲಿ ಬರುತ್ತೇವೆ ಎಂದುಕೊಂಡಿರಲಿಲ್ಲ. ಕಳೆದ 16 ತಿಂಗಳಿನಲ್ಲಿ ನಮ್ಮ ತಾಲೂಕಿಗೆ ವಿಪರೀತ ತಾರತಮ್ಯ ಆಯಿತು. ಸಮ್ಮಿಶ್ರ ಸರ್ಕಾರ 6-8 ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿತ್ತು ಎಂದು ವಾಗ್ದಾಳಿ ನಡೆಸಿದರು.

  • ಬಿಜೆಪಿ ಜೊತೆಗಿನ ಒಂಬತ್ತು ದಿನದ ಸಂಸಾರ ಚೆನ್ನಾಗಿದೆ: ಬಿ.ಸಿ.ಪಾಟೀಲ್

    ಬಿಜೆಪಿ ಜೊತೆಗಿನ ಒಂಬತ್ತು ದಿನದ ಸಂಸಾರ ಚೆನ್ನಾಗಿದೆ: ಬಿ.ಸಿ.ಪಾಟೀಲ್

    ಹಾವೇರಿ: ಬಿಜೆಪಿ ಬಂದು ಒಂಬತ್ತು ದಿನ ಆಗಿದೆ, ಸಂಸಾರ ತುಂಬಾ ಚೆನ್ನಾಗಿದೆ. ಅತ್ತೆ, ಮಾವ, ಸೊಸೆ, ಭಾವ, ಕಾಕಾ ಎಲ್ಲರೂ ಹೊಂದಿಕೊಳ್ಳುತ್ತಿದ್ದೇವೆ ಎಂದು ಹಿರೇಕೆರೂರು ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಸಂತಸ ವ್ಯಕ್ತಪಡಿಸಿದ್ದಾರೆ.

    ಕ್ಷೇತ್ರ ವ್ಯಾಪ್ತಿಯ ಮಕರಿ ಗ್ರಾಮದಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಬಂದು ಇಂದಿಗೆ ಒಂಬತ್ತು ದಿನ ಆಗಿದೆ, ಸಂಸಾರ ತುಂಬಾ ಚೆನ್ನಾಗಿದೆ. ಅತ್ತೆ, ಮಾವ, ಸೊಸೆ, ಭಾವ, ಕಾಕಾ ಎಲ್ಲರೂ ಹೊಂದಿಕೊಳ್ಳುತ್ತಿದ್ದೇವೆ. ಕುಟುಂಬದಲ್ಲಿ ಒಳ್ಳೆಯ ಹೊಂದಾಣಿಕೆ ಇದೆ. ಎಲ್ಲರೂ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಮುಂದೆಯು ಪ್ರೀತಿಯಿಂದ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದು ಅಭಿಪ್ರಾಯಪಟ್ಟರು.

    17 ವರ್ಷಗಳಿಂದ ನಾನು ಬಣಕಾರ ಅವರ ಪ್ರತಿ ಸ್ಪರ್ಧಿಯಾಗಿ ಕೆಲಸ ಮಾಡಿದ್ದೆವು. ನಾವಿಬ್ಬರು ಒಂದಾದ ಮೇಲೆ ಕಾರ್ಯಕರ್ತರು ಯಾಕೆ ಎರಡು ಭಾಗವಾಗಿರಬೇಕು ಎಂದು ಒಂದಾಗುತ್ತಿದ್ದಾರೆ. ಒಬ್ಬರು ಇದ್ದಾಗ ಭಾರ ಹೆಚ್ಚಾಗಿತ್ತು. ಯು.ಬಿ.ಬಣಕಾರ ಬಂದ ಮೇಲೆ ಭಾರ ಕಡಿಮೆ ಅಗಿದೆ. ನನ್ನದೇ ಚುನಾವಣೆ ಎಂದು ಭಾವಿಸಿ ಅವರು ಕೆಲಸ ಮಾಡುತ್ತಿದ್ದಾರೆ. ಬಿಜೆಪಿಗೆ ಬಂದಿದ್ದರಿಂದ ಕಾರ್ಯಕರ್ತರಿಗೆ ಸಂತೋಷವಾಗಿದೆ ಎಂದರು.

    ಕಾಂಗ್ರೆಸ್ ಮುಳುಗುವ ಹಡಗು: ನಮ್ಮನ್ನು ಸೋಲಿಸಲು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಯಾರು? ನಮ್ಮನ್ನು ಸೋಲಿಸುವುದು ಗೆಲ್ಲಿಸುವುದು ಜನರು. ಕುಮಾರಸ್ವಾಮಿಯವರು ಸರಿಯಾಗಿ ಆಡಳಿತ ಮಾಡಿದ್ದರೆ ಮಾಜಿ ಆಗುತ್ತಿರಲಿಲ್ಲ. ಸಿದ್ದರಾಮಯ್ಯ ದೊಡ್ಡವರು ಅವರ ಬಗ್ಗೆ ಏನೂ ಮಾತನಾಡುವುದಿಲ್ಲ. ಕಾಂಗ್ರೆಸ್‍ನಲ್ಲಿ ಇದೀಗ ಗುಂಪುಗಾರಿಕೆ ಆಗಿದೆ. ಮೂಲ ಹಾಗೂ ವಲಸಿಗರು ಎಂದು ಎರಡು ಗುಂಪುಗಳಾಗಿವೆ. ಹೀಗಾಗಿ ಒಬ್ಬರ ಮೇಲೆ ಒಬ್ಬರಿಗೆ ವಿಶ್ವಾಸ ಇಲ್ಲ. ಕಾಂಗ್ರೆಸ್ ಮುಳುಗುವ ಹಡಗು ಆಗಿದೆ ಎಂದು ಆರೋಪಿಸಿದರು.

    ಮುಳುಗುತ್ತಿರುವ ಹಡಗನ್ನು ದಡ ಸೇರಿಸಬೇಕು ಎನ್ನುವವರು ಕಡಿಮೆ ಆಗಿದ್ದಾರೆ. ಎಷ್ಟೋ ಸಾಧ್ಯವೋ ಅಷ್ಟು ರಂಧ್ರ ಮಾಡಿ ಮುಳುಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್ಸಿಗೆ ಮುಂದಿನ ದಿನಗಳಲ್ಲಿ ಭವಿಷ್ಯ ಇಲ್ಲ. ಈಗ ಕಾಂಗ್ರೆಸ್ ಪಕ್ಷದ ಕಥೆ ಹಾಳು ಊರಿಗೆ ಆಳಿದವನೆ ಗೌಡ ಎನ್ನುವಂತಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಬಿ.ಎಚ್.ಬನ್ನಿಕೋಡ ಸಹ ಅದೇ ರೀತಿ ಆಗಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಬಿ.ಎಚ್.ಬನ್ನಿಕೋಡಗೆ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಮಾಜಿ ಡಿಸಿಎಂ ಪರಮೇಶ್ವರ್ ಮೋಸ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

  • ನಾನು ಸೇಫ್ ಆಗಿದ್ದೇನೆ, ನಿಲುವು ಬದಲಿಸಲ್ಲ: ಜೆಡಿಎಸ್ ಅಭ್ಯರ್ಥಿ ಹಿರೇಕೆರೂರು ಸ್ವಾಮೀಜಿ

    ನಾನು ಸೇಫ್ ಆಗಿದ್ದೇನೆ, ನಿಲುವು ಬದಲಿಸಲ್ಲ: ಜೆಡಿಎಸ್ ಅಭ್ಯರ್ಥಿ ಹಿರೇಕೆರೂರು ಸ್ವಾಮೀಜಿ

    ಹಾವೇರಿ: ನಾಮಪತ್ರ ಸಲ್ಲಿಸಿದ ನಂತರ ಜೆಡಿಎಸ್ ಅಭ್ಯರ್ಥಿ ಕಬ್ಬಿಣಕಂಥಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿಗಳು ಮಠದಲ್ಲಿ ಕಾಣುತ್ತಿಲ್ಲ ಎಂಬ ಆತಂಕ ಭಕ್ತರಲ್ಲಿ ಮನೆ ಮಾಡಿತ್ತು. ಆದರೆ ಅವರದ್ದೇ ಎನ್ನಲಾದ ಆಡಿಯೋ ಇದೀಗ ಬಿಡುಗಡೆಯಾಗಿದ್ದು, ಸೇಫ್ ಆಗಿದ್ದೇನೆ ಎಂದು ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.

    ಜೆಡಿಎಸ್ ತಾಲೂಕು ಅಧ್ಯಕ್ಷ ಬಸನಗೌಡ್ರ ಜೊತೆ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಕರೆ ಮಾಡಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ನಾನು ಸೇಫ್ ಆಗಿದ್ದೇನೆ, ಹರಿಬ್ರಹ್ಮ ಬಂದರೂ ನನ್ನ ನಿಲುವು ಬದಲಾಗುವುದಿಲ್ಲ. ನವೆಂಬರ್ 21, ರಂದು ಸಂಜೆ ಬರುತ್ತೇನೆ ಎಂದು ಆಡಿಯೋದಲ್ಲಿ ಸ್ವಾಮೀಜಿ ಹೇಳಿದ್ದಾರೆ. ಇದನ್ನೂ ಓದಿ: ಸ್ವಾಮೀಜಿಗೆ ಟಿಕೆಟ್, ಕೌರವನಿಗೆ ಶಾಕ್ ಕೊಡಲು ಜೆಡಿಎಸ್ ನಿರ್ಧಾರ

    ನಾಮಪತ್ರ ಸಲ್ಲಿಕೆ ನಂತರ ಸ್ವಾಮೀಜಿ ಮಠದಲ್ಲಿ ಕಾಣಿಸಿಕೊಂಡಿರಲಿಲ್ಲ. ನಿಮ್ಮ ಸಹವಾಸವೇ ಸಾಕು ಎಂದು ಶ್ರೀಗಳು ಅಜ್ಞಾತ ಸ್ಥಳಕ್ಕೆ ಹೋಗಿದ್ದಾರೆ. ನಾಮಪತ್ರ ವಾಪಸ್ ಪಡೆಯುವಂತೆ ಬಿಜೆಪಿ ಮುಖಂಡರಿಂದ ಒತ್ತಡ ಹೆಚ್ಚಾಗಿತ್ತು. ಕರೆ ಹಾಗೂ ಸಂದೇಶಗಳ ಮೂಲಕ ಸ್ವಾಮೀಜಿಗೆ ಒತ್ತಾಯ ಮಾಡುತ್ತಿದ್ದರು. ಇದರಿಂದ ಬೇಸತ್ತ ಸ್ವಾಮೀಜಿ ಮಠದಿಂದ ಕಾಣೆಯಾಗಿದ್ದಾರೆ. ಆದರೆ ಸ್ವಾಮೀಜಿ ಸುರಕ್ಷಿತ ಸ್ಥಳದಲ್ಲಿದ್ದಾರೋ ಇಲ್ಲವೋ ಎಂಬುದು ಭಕ್ತರ ಆತಂಕವಾಗಿತ್ತು ಇದೀಗ ಸ್ವಾಮೀಜಿಗಳದ್ದು ಎನ್ನಲಾದ ಆಡಿಯೋ ಹರಿದಾಡುತ್ತಿದೆ.

    ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಹಾವೇರಿ ಜಿಲ್ಲೆ ಹಿರೇಕೆರೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

  • ಬಿಜೆಪಿಗೆ ಬಂದು ಇಬ್ಬರು ಹೆಂಡಿರನ್ನು ಸಾಕಬೇಕಿದೆ- ಬಿ.ಸಿ ಪಾಟೀಲ್

    ಬಿಜೆಪಿಗೆ ಬಂದು ಇಬ್ಬರು ಹೆಂಡಿರನ್ನು ಸಾಕಬೇಕಿದೆ- ಬಿ.ಸಿ ಪಾಟೀಲ್

    ಹಾವೇರಿ: ನನಗೆ ಒಬ್ಬಳೇ ಹೆಂಡತಿ. ಆದರೆ ಬಿಜೆಪಿಗೆ ಬಂದು ಇಬ್ಬರು ಹೆಂಡಿರನ್ನು ಸಾಕುವಂತಾಗಿದೆ ಎಂದು ಹಿರೇಕೆರೂರು ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಕಿಚಾಯಿಸಿದ್ದಾರೆ.

    ಉಪಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಹಿರೇಕೆರೂರು ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆ ನಡೆಸಿ ನಂತರ ಮಾತನಾಡಿದ ಅವರು, ಬಿಜೆಪಿಗೆ ಬಂದು ಆರನೇ ದಿನದ ಸಂಸಾರ ನನ್ನದು. ಬಣಕಾರ್ ನಾವು ಹೊಂದಿಕೊಂಡಿದ್ದೇವೆ. ಆದರೆ ಕೆಳಮಟ್ಟದ ಕಾರ್ಯಕರ್ತರೊಂದಿಗೆ ಇನ್ನೂ ಹೊಂದಿಕೊಳ್ಳಬೇಕಿದೆ. ಆ ಕಾರ್ಯಕರ್ತರು, ಈ ಕಾರ್ಯಕರ್ತರು ಅನ್ನೋದು ಇನ್ನೂ ಸ್ವಲ್ಪ ಇದೆ. ಕಾರ್ಯಕರ್ತರನ್ನ ಒಗ್ಗೂಡಿಸುವ ಕೆಲಸವಾಗಬೇಕಿದೆ. ಏಕೆಂದರೆ ಒಬ್ಬರನ್ನು ನೋಡಿದರೆ, ಇನ್ನೊಬ್ಬರು ನನ್ನನ್ನೇಕೆ ನೋಡಿಲ್ಲ ಎಂದು ತಿಳಿದುಕೊಳ್ಳುತ್ತಾರೆ. ಹೀಗಾಗಿ ಬಿಜೆಪಿಗೆ ಬಂದು ಇಬ್ಬರು ಹೆಂಡತಿಯರನ್ನು ನಿಭಾಯಿಸಿದಂತಾಗುತ್ತದೆ ಎಂದರು.

    ನನಗೆ ಇರೋದು ಒಬ್ಬಳೇ ಹೆಂಡತಿ ಎಂದಾಗ ಕೌರವನಿಗೆ ಇರೋದು ಒಬ್ಬಳೇ ಹೆಂಡತಿ ಎಂದು ಮಹಿಳಾ ಕಾರ್ಯಕರ್ತೆಯೊಬ್ಬರು ಕಿಚಾಯಿಸಿದರು. ಇಂದು ಪ್ರಚಾರಕ್ಕೆ ಹೋಗಬೇಕಿತ್ತು. ಆದರೆ ಕಾರ್ಯಕರ್ತರನ್ನು ಒಗ್ಗೂಡಿಸುವ ಸಲುವಾಗಿ ಪ್ರಚಾರಕ್ಕೆ ಹೋಗಲು ಆಗಲಿಲ್ಲ. ನಾವಿಬ್ಬರೂ ಒಂದಾದಾಗ ನೀವು ಬೇರೆ ಬೇರೆ ಆಗಿರೋದು ಒಳ್ಳೆಯದಲ್ಲ. ಇನ್ನೊಂದಿಷ್ಟು ಮತ ಹಾಕಿದ್ದರೆ ಬಣಕಾರ್ ಗೆಲ್ಲುತ್ತಿದ್ದರು ಅಂದುಕೊಂಡಿರುತ್ತೀರಿ. ಆದರೆ ಬಣಕಾರ್ ಗೆದ್ದಿದ್ದರೂ ಯಡಿಯೂರಪ್ಪ ಸಿಎಂ ಆಗುತ್ತಿರಲಿಲ್ಲ ಎಂದರು.

    ನಾನು ಬಿಜೆಪಿಗೆ ಬರಬೇಕು ಎಂದು ಬಹಳ ಜನ ಬಯಸಿದ್ದಿರಿ ಅನ್ನಿಸುತ್ತದೆ. ನಾನು ಗೆದ್ದು ರಾಜೀನಾಮೆ ಕೊಟ್ಟು ಬಿಜೆಪಿಗೆ ಬಂದು ಮತ್ತೆ ಸ್ಪರ್ಧಿಸಬೇಕು, ಬಣಕಾರ್ ನಾವು ಒಂದಾಗಬೇಕು ಎನ್ನುವುದೆಲ್ಲ ಹಣೆಬರಹ. ಅದೇ ರೀತಿಯಾಗಿದೆ ಎಂದು ಪಾಟೀಲ್ ತಮ್ಮ ಕಾರ್ಯಕರ್ತರಿಗೆ ತಿಳಿಸಿದರು.

  • ಇಲ್ಲಿ ತಂದೆ ಜೊತೆ ಮಗಳು – ಅಲ್ಲಿ ಪತಿಗೆ ಪ್ರತಿಸ್ಪರ್ಧಿಯಾದ ಪತ್ನಿ

    ಇಲ್ಲಿ ತಂದೆ ಜೊತೆ ಮಗಳು – ಅಲ್ಲಿ ಪತಿಗೆ ಪ್ರತಿಸ್ಪರ್ಧಿಯಾದ ಪತ್ನಿ

    – ಗೋಕಾಕ್‍ನಲ್ಲಿ ಅಣ್ಣ, ತಮ್ಮ
    – ಚುನಾವಣೆ ಅಖಾಡದಲ್ಲಿ ಡಮ್ಮಿ ಕ್ಯಾಂಡಿಡೇಟ್ಸ್

    ಬೆಂಗಳೂರು/ಹಾವೇರಿ: ಚುನಾವಣಾ ಅಭ್ಯರ್ಥಿಗಳು ಮುನ್ನೆಚ್ಚರಿಕೆಯಾಗಿ ತಮ್ಮ ಕುಟುಂಬಸ್ಥರಿಂದ ಪ್ರತ್ಯೇಕವಾಗಿ ನಾಮಿನೇಷನ್ ಮಾಡಿದ್ದಾರೆ. ಹಿರೇಕೆರೂರಿನಲ್ಲಿ ತಂದೆಗಾಗಿ ಮಗಳು, ಮಹಾಲಕ್ಷ್ಮಿ ಲೇಔಟ್ ನಲ್ಲಿ ಪತಿಗಾಗಿ ಪತ್ನಿ ಮತ್ತು ಗೋಕಾಕ್‍ನಲ್ಲಿ ತಮ್ಮನಿಗಾಗಿ ಅಣ್ಣ ನಾಮಪತ್ರ ಸಲ್ಲಿಸಿದ್ದಾರೆ.

    ಹಿರೇಕೆರೂರು ವಿಧಾನಸಭಾ ಕ್ಷೇತ್ರದಿಂದ ಅನರ್ಹ ಶಾಸಕ ಬಿ.ಸಿ.ಪಾಟೀಲ್ ಪುತ್ರಿ ಸೃಷ್ಟಿ ಪಾಟೀಲ್ ಸಹ ಪ್ರತ್ಯೇಕವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಮೊದಲು ಅನರ್ಹ ಶಾಸಕ ಬಿ.ಸಿ.ಪಾಟೀಲ್ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದರು. ತಂದೆಯ ಬಳಿಕ ಸೃಷ್ಟಿ ಅವರು ಸಹ ನಾಮಿನೇಷನ್ ಫೈಲ್ ಮಾಡಿದ್ದಾರೆ.

    ನಾಮಪತ್ರ ಸಲ್ಲಿಕೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸೃಷ್ಟಿ ಪಾಟೀಲ್, ಕೆಲವೊಮ್ಮೆ ತಾಂತ್ರಿಕ ಕಾರಣಗಳಿಂದ ನಾಮಪತ್ರಗಳು ತಿರಸ್ಕೃತವಾಗುತ್ತವೆ. ಹಾಗಾಗಿ ತಂದೆಯವರ ಸೂಚನೆ ಮೇರೆಗೆ ನಾಮಪತ್ರ ಸಲ್ಲಿಸಿದ್ದೇನೆ. ಬಿ.ಸಿ.ಪಾಟೀಲ್ ಅವರ ನಾಮಪತ್ರ ಅಂಗೀಕಾರವಾದ ಕೂಡಲೇ ನಾನು ನಾಮಿನೇಷನ್ ಹಿಂದಕ್ಕೆ ಪಡೆದುಕೊಳ್ಳುತ್ತೇನೆ. ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಚುನಾವಣೆಗೆ ಸ್ಪರ್ಧೆ ಮಾಡಬಹುದು. ಯಾರು ಬೇಕಾದರೂ ನಾಮಪತ್ರ ಸಲ್ಲಿಕೆ ಮಾಡಲಿ ಗೆಲುವು ಮಾತ್ರ ನಮ್ಮದೇ ಎಂದು ಸೃಷ್ಟಿ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ನಾಮಪತ್ರ ಸಲ್ಲಿಸಿದ ಸತೀಶ್ ಜಾರಕಿಹೊಳಿ

    ಇತ್ತ ಗೋಕಾಕ್ ವಿಧಾನಸಭಾ ಕ್ಷೇತ್ರದಲ್ಲಿಯೂ ಲಖನ್ ಜಾರಕಿಹೊಳಿ ಅವರ ಜೊತೆಯಲ್ಲಿಯೇ ಸೋದರ, ಶಾಸಕ ಸತೀಶ್ ಜಾರಕಿಹೊಳಿ ಸಹ ಪ್ರತ್ಯೇಕವಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯನವರ ಜೊತೆ ಪತ್ನಿ ಹೇಮಲತಾ ಸಹ ಪ್ರತ್ಯೇಕವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಹಾಗೂ ನಾಮಪತ್ರ ಸಲ್ಲಿಕೆಯಲ್ಲಿ ಯಾವುದಾದರೂ ಕಾನೂನು ತೊಡಕುಗಳು ಉಂಟಾಗಬಹುದು ಎಂದು ಪ್ರತಿ ಬಾರಿ ಪತಿಗೆ ಪ್ರತಿ ಸ್ಪರ್ಧಿಯಾಗಿ ಹೇಮಲತಾ ಗೋಪಾಲಯ್ಯ ನಾಮಪತ್ರ ಸಲ್ಲಿಸುತ್ತಾರೆ. ಇದನ್ನೂ ಓದಿ: ಮಂಡ್ಯ ಲೋಕಸಭಾ ಅಖಾಡದಲ್ಲಿ ಒಂದೇ ಹೆಸರಿನ ನಾಲ್ವರು ಅಭ್ಯರ್ಥಿಗಳು

  • ಸಿದ್ದರಾಮಯ್ಯಗೆ ಮಾಡಲು ಬೇರೆ ಕೆಲಸವಿಲ್ಲ: ಬಿಸಿ ಪಾಟೀಲ್

    ಸಿದ್ದರಾಮಯ್ಯಗೆ ಮಾಡಲು ಬೇರೆ ಕೆಲಸವಿಲ್ಲ: ಬಿಸಿ ಪಾಟೀಲ್

    ಹಾವೇರಿ: ಸಿದ್ದರಾಮಯ್ಯಗೆ ಮಾಡಲು ಬೇರೆ ಕೆಲಸವಿಲ್ಲ. ವಾಗ್ದಾಳಿ ಮಾಡೋದು ಅವರ ಮೂಲಭೂತ ಹಕ್ಕು ಎಂದು ತಿಳ್ಕೊಂಡಿದ್ದಾರೆ. ಚುನಾವಣೆಯಲ್ಲಿ ಜನರು ಉತ್ತರ ಕೊಡುತ್ತಾರೆ ಎಂದು ಬಿ.ಸಿ.ಪಾಟೀಲ್ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.

    ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ಲಿಂಗದೇವರಕೊಪ್ಪ ಕ್ರಾಸ್ ನಲ್ಲಿ ಮಾತನಾಡಿದ ಅವರು, ಇವತ್ತು ನನ್ನ ಜನ್ಮದಿನ. ಕಾಕತಾಳೀಯ ಎಂಬಂತೆ ನಾನು ಹೊಸದಾಗಿ ಪಕ್ಷ ಸೇರಿದ್ದೇನೆ. ಹಿರೇಕೆರೂರು ಕ್ಷೇತ್ರದಲ್ಲಿ ಗೆಲುವು ಸಾಧಿಸೋದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಬಿಜೆಪಿ ಮಾಜಿ ಶಾಸಕ ಯು.ಬಿ.ಬಣಕಾರ ಸಹ ನನ್ನೊಂದಿಗೆ ಇದ್ದಾರೆ. ನನಗೆ ಆನೆ ಬಲಬಂದಂತೆ ಆಗಿದೆ. ಅವರು ಮತ ನನ್ನ ಮತಗಳು ಸೇರಿದರೆ ರಾಜ್ಯದಲ್ಲಿಯೇ ಅತಿಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸುತ್ತೇನೆ ಎಂದು ಬಿ.ಸಿ.ಪಾಟೀಲ್ ಹೇಳಿದ್ದಾರೆ. ಅಲ್ಲದೆ ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತ ಕೋರಿ, ರಸ್ತೆಯಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ ಮಾಡಿದರು.

  • ಹಿರೇಕೆರೂರು ಕ್ಷೇತ್ರದಿಂದ ಸ್ಪರ್ಧಿಸುವಂತೆ ಸ್ವಾಮೀಜಿಗೆ ಭಕ್ತರ ಒತ್ತಾಯ – ನಾಳೆ ಸಭೆ

    ಹಿರೇಕೆರೂರು ಕ್ಷೇತ್ರದಿಂದ ಸ್ಪರ್ಧಿಸುವಂತೆ ಸ್ವಾಮೀಜಿಗೆ ಭಕ್ತರ ಒತ್ತಾಯ – ನಾಳೆ ಸಭೆ

    ಹಾವೇರಿ: ಜಿಲ್ಲೆಯ ಎರಡು ಅನರ್ಹ ಕ್ಷೇತ್ರಗಳಲ್ಲಿ ಉಪಚುನಾವಣೆ ಕಾವು ಹೆಚ್ಚುತ್ತಿರುವ ಬೆನ್ನಲ್ಲೇ ಸ್ವಾಮೀಜಿಗೆ ಭಕ್ತರು ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ.

    ಹಿರೇಕೆರೂರು ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸುವಂತೆ ರಟ್ಟೀಹಳ್ಳಿ ಪಟ್ಟಣದಲ್ಲಿರುವ ಕಬ್ಬಿಣಕಂಥಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿಗೆ ಭಕ್ತರು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯ ಮಾಡುತ್ತಿದ್ದಾರೆ.

    ಹಿರೇಕೆರೂರು ಕ್ಷೇತ್ರದ ರಾಜಕಾರಣ ಅಪಮೌಲ್ಯ ಆಗಿದೆ. ಕ್ಷೇತ್ರದ ರಾಜಕೀಯ ವ್ಯವಸ್ಥೆ ಸರಿಪಡಿಸಲು ಚುನಾವಣೆಗೆ ಸ್ಪರ್ಧಿಸಿ ಎಂದು ಒತ್ತಡ ಹಾಕುತ್ತಿದ್ದಾರೆ. ಭಕ್ತರ ಒತ್ತಾಯದ ಕುರಿತು ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಇನ್ನೂ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಮಠದ ಬಳಿ ಇರುವ ಸಮುದಾಯ ಭವನದಲ್ಲಿ ನಾಳೆ ಭಕ್ತರ ಹಾಗೂ ಅಭಿಮಾನಿಗಳ ಸಭೆ ನಡೆಸಲಿದ್ದಾರೆ. ಸಭೆ ನಂತರ ಅಂತಿಮ ನಿರ್ಧಾರ ಪ್ರಕಟಣೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

    ಬಿ.ಸಿ.ಪಾಟೀಲ್ ಅವರನ್ನು ಅನರ್ಹಗೊಳಿಸಿದ್ದರಿಂದ ಹಿರೇಕೇರೂರು ಕ್ಷೇತ್ರ ಈಗ ತೆರವಾಗಿದೆ. ಈ ಕ್ಷೇತ್ರಕ್ಕೆ ಈಗಾಗಲೇ ಹಲವರು ಪೈಪೋಟಿ ನಡೆಸಿದ್ದರು. ಅಲ್ಲದೆ ಬಿ.ಸಿ.ಪಾಟೀಲ್ ಅವರ ಸ್ಪರ್ಧೆಗೂ ಸಹ ಬಿಜೆಪಿ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಸ್ವಾಮೀಜಿ ಸ್ವರ್ಧೆ ಮಾಡುತ್ತಾರಾ ಎನ್ನುವ ಪ್ರಶ್ನೆ ಕಾಡುತ್ತಿದೆ. ಹಿರೇಕೇರೂರಿನಲ್ಲಿ ಡಿಸೆಂಬರ್ 5 ರಂದು ಉಪಚುನಾವಣೆ ನಡೆಯಲಿದೆ.

  • ಕೌರವನ ಬೇಡಿಕೆಗೆ ಕ್ಯಾಬಿನೆಟ್‍ನಲ್ಲಿ ಅಸ್ತು – ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್ ಕಾಲೇಜ್ ಶಿಫ್ಟ್?

    ಕೌರವನ ಬೇಡಿಕೆಗೆ ಕ್ಯಾಬಿನೆಟ್‍ನಲ್ಲಿ ಅಸ್ತು – ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್ ಕಾಲೇಜ್ ಶಿಫ್ಟ್?

    ಬೆಂಗಳೂರು: ಬಿಜೆಪಿ ಸರ್ಕಾರ ರಚನೆಗೆ ಕಾರಣರಾದ ಅನರ್ಹ ಶಾಸಕರಿಗೆ ಕ್ಯಾಬಿನೆಟ್ ಸಭೆಯಲ್ಲಿ ಗಿಫ್ಟ್ ಮೇಲೆ ಗಿಫ್ಟ್ ಸಿಕ್ಕಿದೆ.

    ಹಿರೇಕೆರೂರಿನ ಅನರ್ಹ ಶಾಸಕ ಬಿಸಿ ಪಾಟೀಲ್ ಕ್ಷೇತ್ರದ ರಟ್ಟಿಹಳ್ಳಿ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಇದಕ್ಕೆ ಬಿ.ಸಿ.ಪಾಟೀಲ್ ಟ್ವಿಟ್ಟರಿನಲ್ಲಿ ರಾಜ್ಯ ಸರ್ಕಾರಕ್ಕೆ ಧನ್ಯವಾದ ಹೇಳಿದ್ದಾರೆ.

    ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ರಟ್ಟಿಹಳ್ಳಿ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲಾಗಿದೆ ಕರ್ನಾಟಕ ಸರ್ಕಾರಕ್ಕೆ ಧನ್ಯವಾದಗಳು ಎಂದು ಬಿಸಿ ಪಾಟೀಲ್ ಟ್ವೀಟ್ ಮಾಡಿದ್ದಾರೆ.

    ಕನಕಪುರದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಮೆಡಿಕಲ್ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ಶಿಫ್ಟ್ ಮಾಡುವ ಚಿಂತನೆ ಮಾಡಲಾಗಿದೆ. ಈ ಬಗ್ಗೆ ಏನು ತೀರ್ಮಾನ ಆಗಿಲ್ಲ ಎಂದು ಸಚಿವ ಮಾಧುಸ್ವಾಮಿ ಹೇಳಿದರು. ಮೆಡಿಕಲ್ ಕಾಲೇಜು ಶಿಫ್ಟ್ ಬಗ್ಗೆ ಡಿಸಿಎಂ ಅಶ್ವಥನಾರಾಯಣ್ ಪ್ರಸ್ತಾಪ ಮಾಡಿದ್ದಾರೆ. ಆದರೆ ಸಂಪುಟದಿಂದ ನಿರ್ಧಾರ ಆಗಿಲ್ಲ ಎಂದು ತಿಳಿಸಿದರು.

    15 ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆ 15 ಅನರ್ಹ ಶಾಸಕರ ಜೊತೆ ಸಭೆ ಶೀಘ್ರದಲ್ಲೇ ನಡೆಸಲು ಸಿಎಂ ನಿರ್ಧಾರ ಮಾಡಿದ್ದಾರೆ. ಉಪಚುನಾವಣೆಗಳಿಗೆ ಅನರ್ಹರಿಗೆ ಟಿಕೆಟ್ ಕೊಡುವ ವಿಚಾರ, ಸ್ಥಳೀಯ ಬಿಜೆಪಿಗರ ವಿರೋಧ ಸಂಬಂಧ ಚರ್ಚೆ ನಡೆಸಲಿದ್ದು ಅನರ್ಹರಿಗೆ ಟಿಕೆಟ್ ಭರವಸೆ ಕೊಡಲಿದ್ದಾರೆ ಎನ್ನಲಾಗಿದೆ.

    ಸುಪ್ರೀಂಕೋರ್ಟ್ ವಿಚಾರಣೆ ಅಕ್ಟೋಬರ್ 22ಕ್ಕೆ ಇದೆ ಈ ಹಿನ್ನೆಲೆ ಕೋರ್ಟ್ ನಿಲುವು ನೋಡಿಕೊಂಡು ಮುಂದುವರಿಯಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ.

  • ಅನರ್ಹರ ಬಗ್ಗೆ ಕೆಟ್ಟದಾಗಿ ಮಾತಾಡೋರ ಬಾಯಿಗೆ ಸಕ್ಕರೆ ಹಾಕೋಣ: ಬಿಸಿ ಪಾಟೀಲ್

    ಅನರ್ಹರ ಬಗ್ಗೆ ಕೆಟ್ಟದಾಗಿ ಮಾತಾಡೋರ ಬಾಯಿಗೆ ಸಕ್ಕರೆ ಹಾಕೋಣ: ಬಿಸಿ ಪಾಟೀಲ್

    ಬೆಂಗಳೂರು: ಶಾಸಕರ ಅನರ್ಹತೆಯ ಪ್ರಕರಣ ಮುಂದಿನ ತಿಂಗಳು 22ಕ್ಕೆ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ಬರಲಿದೆ. ಈ ಸಂಬಂಧ ಮಾತುಕತೆ ನಡೆಸಲು ರಮೇಶ್ ಜಾರಕಿಹೊಳಿ ಅವರ ನಿವಾಸಕ್ಕೆ ಅನರ್ಹ ಶಾಸಕರೆಲ್ಲರೂ ಆಗಮಿಸಿದ್ದೇವು ಎಂದು ಅನರ್ಹ ಶಾಸಕರ ಬಿಸಿ ಪಾಟೀಲ್ ಹೇಳಿದ್ದಾರೆ.

    ಅನರ್ಹ ಶಾಸಕರ ಸಭೆಯ ಬಳಿಕ ಮಾತನಾಡಿದ ಬಿಸಿ ಪಾಟೀಲ್ ಅವರು, ಚುನಾವಣೆ ಎದುರಾದರೆ ಕೆಲ ಸಮಸ್ಯೆಗಳು ಉದ್ಭವಿಸುತ್ತದೆ. ಈ ಬಗ್ಗೆ ಚರ್ಚೆ ನಡೆಸಲು ಆಗಮಿಸಿದ್ದೇವು ಎಂದರು. ಇದೇ ವೇಳೆ ಅನರ್ಹ ಶಾಸಕರ ಬಗೆಗಿನ ಉಮೇಶ್ ಕತ್ತಿ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ನಾನು ಈಗ ಬಿಜೆಪಿ ಬಗ್ಗೆ ಮಾತನಾಡಲು ಇಷ್ಟ ಪಡುವುದಿಲ್ಲ. ಆದರೆ ನಮ್ಮ ವಿರುದ್ಧವಾಗಿ ಯಾರು ಯಾರು ಕೊಟ್ಟದಾಗಿ ಮಾತನಾಡುತ್ತಾರೋ ಅವರ ಬಾಯಿಗೆ ಸಕ್ಕರೆ ಹಾಕೋಣ ಎಂದು ಮಾರ್ಮಿಕವಾಗಿ ಹೇಳಿಕೆ ನೀಡಿದರು.

    ಇದೇ ವೇಳೆ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಡಿಸಿಎಂ ಅಶ್ವಥ್ ನಾರಾಯಣ ಅವರು ಭೇಟಿ ನೀಡಿದ್ದಾಗಿ ಪ್ರತಿಕ್ರಿಯೆ ನೀಡಿದ ಅವರು, ಬಿಎಸ್ ಯಡಿಯೂರಪ್ಪ ಅವರು ಪಕ್ಷಕ್ಕೆ ಆಹ್ವಾನ ನೀಡಿದ್ದರು ಕೂಡ ಈ ಬಗ್ಗೆ ಇದುವರೆಗೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಅನರ್ಹ ಶಾಸಕರಾಗಿರುವ ನಾವು ಅರ್ಹರಾಗುವ ಪ್ರಯತ್ನದಲ್ಲಿ ಇದ್ದೇವೆ. ಆ ಕುರಿತು ಚರ್ಚೆ ನಡೆಸಿ ವಕೀಲರಿಗೆ ಕೆಲ ಮಾಹಿತಿಯನ್ನು ನೀಡಿದ್ದೇವೆ. ಆದರೆ ಡಿಸಿಎಂ ಅಶ್ವಥ್ ನಾರಾಯಣ ಅವರು ಭೇಟಿ ನೀಡಿರುವ ಬಗ್ಗೆ ನಮಗೆ ಗೊತ್ತಿಲ್ಲ. ಆದರೆ ನಾವು ಬಿಜೆಪಿ ಸೇರುವ ಬಗ್ಗೆ ಯಾವುದೇ ಚರ್ಚೆ, ತೀರ್ಮಾನ ನಡೆಸಿಲ್ಲ ಎಂದು ಸ್ಪಷ್ಟನೆ ನೀಡಿದರು.

  • ಕುಮಾರಸ್ವಾಮಿಯಂತಹ ವಿಶ್ವಾಸದ್ರೋಹ ಯಾರೂ ಮಾಡಿಲ್ಲ- ಬಿ.ಸಿ.ಪಾಟೀಲ್

    ಕುಮಾರಸ್ವಾಮಿಯಂತಹ ವಿಶ್ವಾಸದ್ರೋಹ ಯಾರೂ ಮಾಡಿಲ್ಲ- ಬಿ.ಸಿ.ಪಾಟೀಲ್

    ಹಾವೇರಿ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸದ್ರೋಹಿ. ಕಾಂಗ್ರೆಸ್ ಬೆಂಬಲದಿಂದ ಸಿಎಂ ಆದರು, ಒಬ್ಬರಿಗಾದರೂ ಧನ್ಯವಾದ ಹೇಳಿದರಾ ಎಂದು ಅನರ್ಹ ಶಾಸಕ ಬಿ.ಸಿ.ಪಾಟೀಲ್ ಪ್ರಶ್ನಿಸಿದ್ದಾರೆ.

    ಜಿಲ್ಲೆಯ ಹಿರೇಕೆರೂರಿನ ತಮ್ಮ ನಿವಾಸದಲ್ಲಿ ಬೆಂಬಲಿಗರ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕಕ್ಕೆ ಕುಮಾರಸ್ವಾಮಿ ವಿಶ್ವಾಸದ್ರೋಹ ಮಾಡಿದ್ದಾರೆ. ಒಬ್ಬ ಮುಖ್ಯಮಂತ್ರಿಯನ್ನು ಬದಲಾಯಿಸುವ ಶಕ್ತಿ ನಮ್ಮ ತಾಲೂಕಿಗೆ ಇದೆ. ಎಲ್ಲ ಜನರ ಕಾಣಿಕೆ ಹಣ ತೆಗೆದುಕೊಂಡು ಚುನಾವಣೆಗೆ ಡೆಪಾಸಿಟ್ ಮಾಡಿದ್ದೆ. ಈಗಲೂ ಕಾರ್ಯಕರ್ತರ ಹಣವೇ ಡಿಪಾಸಿಟ್ ಆಗಿದೆ ಎಂದು ಬಿ.ಸಿ.ಪಾಟೀಲ್ ತಿಳಿಸಿದರು.

    ಇಂದು, ಇಲ್ಲವೆ ನಾಳೆಯೊಳಗೆ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ. ಜನರ ಆದೇಶ ಪಡೆದುಕೊಂಡಿದ್ದೆ. ರಾಜೀನಾಮೆಯ ನಂತರ ಕಾರ್ಯಕರ್ತರನ್ನು ಸಾಮೂಹಿಕವಾಗಿ ಭೇಟಿ ಆಗಿರಲಿಲ್ಲ. ರಾಜೀನಾಮೆಗೆ ಕಾರಣ ಹೇಳಿರಲಿಲ್ಲ. 2004ರಿಂದ ಈಗಿನ ಕಾಂಗ್ರೆಸ್ ಅಭ್ಯರ್ಥಿ ಬಿ.ಎಚ್.ಬನ್ನಿಕೋಡ ನನ್ನ ಪ್ರತಿಸ್ಪರ್ಧಿ. ಜನ ನನ್ನ ಕೈ ಹಿಡಿಯುತ್ತಾರೆ. ಮುಂದಿನ ಉಪಚುನಾವಣೆಯಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ. ನೂರಕ್ಕೆ ನೂರರಷ್ಟು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಒಲ್ಲದ ಮನಸ್ಸಿನಿಂದ ಕುಮಾರಸ್ವಾಮಿ ಪಟ್ಟಕ್ಕೆ ಕೂರಿಸಲಾಯ್ತು. ಮಾತೆತ್ತಿದರೆ ಬ್ರದರ್ ಅಂತಾ ಚೆನ್ನಾಗಿ ಮಾತನಾಡುತ್ತಾರೆ. ಆಗ ಕುಮಾರಸ್ವಾಮಿ ನನ್ನ ಮಗಳಿಗೆ ಫೋನ್ ಮಾಡಿದ್ದರು. ಬಿಜೆಪಿಯವರು ಎಷ್ಟು ಕೊಟ್ಟಿದ್ದಾರೆ ಅದರ ಡಬಲ್ ಕೊಡುತ್ತೇನೆ ಎಂದರು. ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಮುಂದಿಟ್ಟ ಹೆಜ್ಜೆ ಹಿಂದಿಡಲಿಲ್ಲ. ಬಿ.ಸಿ.ಪಾಟೀಲ್ ಹಣಕ್ಕೆ ಆಸೆ ಪಡುವ ವ್ಯಕ್ತಿಯಲ್ಲ ಎಂದು ಕಾರ್ಯಕರ್ತರ ಸಭೆಯಲ್ಲಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

    ಯಾವ ಮಂತ್ರಿ ಸ್ಥಾನ ಕೇಳುತ್ತಾರೆ ಅದನ್ನು ಕೊಡುತ್ತೇನೆ ಎಂದರು. ಜಿಲ್ಲೆಯ ಏಕೈಕ ಶಾಸಕನಾಗಿದ್ದೆ. ಮೂರು ಬಾರಿ ಕರೆದು ಸಚಿವ ಸ್ಥಾನ ನೀಡುತ್ತೇನೆ ಎಂದು ಹೇಳಿದರು. ಮಂತ್ರಿ ಇರದಿದ್ದರೆ ಪರವಾಗಿಲ್ಲ. ಅಭಿವೃದ್ಧಿಗೆ ಸರಿಯಾದ ಹಣ ನೀಡಲ್ಲ. ಆಡಳಿತ ಮಾತ್ರ ನಾಲ್ಕೈದು ಜಿಲ್ಲೆಗಳಿಗೆ ಸೀಮಿತವಾಗಿತ್ತು. ಮಂಡ್ಯ ಜಿಲ್ಲೆಗೆ ಎಂಟು ಸಾವಿರ ಕೋಟಿ ರೂ. ನೀಡಿದರು. ನಮ್ಮ ಜಿಲ್ಲೆಗೆ ಒಂದು ಸಾವಿರ ಕೋಟಿಯನ್ನೂ ಕೊಡಲಿಲ್ಲ. ಕೆರೆ ತುಂಬಿಸುವುದಕ್ಕೂ ಡಿಕೆಶಿ ಭೇಟಿ ಮಾಡಿದ್ದೆ. ಏನೂ ಪ್ರಯೋಜನವಾಗಲಿಲ್ಲ ಎಂದರು.

    ಮಾಜಿ ಸ್ಪೀಕರ್ ರಮೇಶಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ರಮೇಶ್ ಕುಮಾರ್ ಮಾತಿನಲ್ಲಿ ಹರಿಶ್ಚಂದ್ರ, ಮಾಡೋದೆಲ್ಲ ಕೆಟ್ಟ ಕೆಲಸಗಳೇ ಸರ್ಕಾರಿ ಭೂಮಿ ಲೂಟಿ ಹೊಡೆದಿದ್ದಾರೆ. ಕೊಲೆ ಕೇಸ್ ಗಳಲ್ಲಿದ್ದಾರೆ. ಇಂಥವರು ನಮ್ಮನ್ನು ಅನರ್ಹ ಮಾಡಿದರು. ಜಾತಿ ಬೇಧ ಎನಿಸದೆ ಕೆಟ್ಟ ಸರಕಾರ ಕಿತ್ತೊಗೆಯಲು ಒಂದಾದೆವು. ಅಷ್ಟು ಕೋಟಿ ತಗೊಂಡಿದ್ದಾರೆ. ಇಂಥವರಿಗೆ ಮತ ಹಾಕುತ್ತೀರಾ ಅಂತಾರೆ. ಕೆಟ್ಟ ಸರ್ಕಾರ ತೆಗೆದಿದ್ದೇವೆ ಎಂದು ಹೆಮ್ಮೆಯಿಂದ ಹೇಳಿ. ಮುಂದೆ ಎಲ್ಲರಿಗೂ ನ್ಯಾಯ ಸಿಗುತ್ತೆ. ಹಿಂದೆ ಖಾಕಿ ಬಟ್ಟೆ ತೊಟ್ಟು ಜನರ ರಕ್ಷಣೆ ಮಾಡಿದ್ದೇನೆ. ಈಗಲೂ ನಿಮ್ಮನ್ನು ರಕ್ಷಣೆ ಮಾಡುತ್ತೇನೆ. ಬೆಂಕಿ ಹಚ್ಚೋ ಜನ ಇರುತ್ತಾರೆ. ಯಾವುದಕ್ಕೂ ತಲೆಕೆಡಿಸಿಕೊಳ್ಳಬೇಡಿ ಎಂದು ಬಿ.ಸಿ.ಪಾಟೀಲ್ ಕಾರ್ಯಕರ್ತರಿಗೆ ಸಲಹೆ ನೀಡಿದ್ದಾರೆ.