Tag: BC Patil

  • ರೈತರ ಕೃಷಿ ಚಟುವಟಿಕೆಗೆ ತೊಂದರೆ ಮಾಡ್ಬೇಡಿ: ಬಿ.ಸಿ ಪಾಟೀಲ್

    ರೈತರ ಕೃಷಿ ಚಟುವಟಿಕೆಗೆ ತೊಂದರೆ ಮಾಡ್ಬೇಡಿ: ಬಿ.ಸಿ ಪಾಟೀಲ್

    ಚಿಕ್ಕಮಗಳೂರು: ಪಟ್ಟಣ ಪ್ರದೇಶದಲ್ಲಿರೋ ರೈತರು ಗ್ರಾಮೀಣ ಭಾಗದ ಹೊಲ-ಗದ್ದೆಗಳಿಗೆ ಹೋಗಲು ತೊಂದರೆ ಆಗ್ತಿದ್ದು, ಹೊಲ-ಗದ್ದೆಗಳಿಗೆ ಹೋಗುವ ಯಾವ ರೈತರಿಗೂ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿದ್ದಾರೆ.

    ಜಿಲ್ಲೆಯ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಜೊತೆ ರೈತರ ಸಮಸ್ಯೆ ಕುರಿತಂತೆ ಚರ್ಚೆ ನಡೆಸಿ ಮಾತನಾಡಿದ ಅವರು, ಸ್ಥಳೀಯ ಅಧಿಕಾರಿಗಳನ್ನ ಬಳಸಿಕೊಂಡು ರೈತರಿಗೆ ಕೃಷಿ ಚಟುವಟಿಕೆಗೆ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದರು.

    ಈ ವರ್ಷ ಚಿಕ್ಕಮಗಳೂರು ಜಿಲ್ಲೆಗೆ ಕೃಷಿ ಬಿತ್ತನೆಗೆ ಬೇಕಾದ ಬೀಜ ಹಾಗೂ ಗೊಬ್ಬರವನ್ನ ಸರಬರಾಜು ಮಾಡಲು ಸರ್ಕಾರ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಯಾವುದೇ ರೀತಿಯ ತೊಂದರೆ ಹಾಗೂ ದಾಸ್ತಾನಿನ ಕೊರತೆ ಇರುವುದಿಲ್ಲ. ಹಾಗಾಗಿ ಮಳೆ ಬಿದ್ದ ಬಳಿಕ ರೈತರು ತಮ್ಮ ಬಿತ್ತನೆ ಕಾರ್ಯವನ್ನ ಪ್ರಾರಂಭ ಮಾಡುಬಹುದು ಎಂದಿದ್ದಾರೆ.

    ಕೃಷಿಗೆ ಸಂಬಂಧಿಸಿದಂತೆ ಯಾವುದೇ ಚಟುವಟಿಕೆಗೂ ನಿರ್ಬಂಧ ಇಲ್ಲದಂತೆ ನಡೆಯಬೇಕು. ಅದಕ್ಕೆ ಪೂರಕವಾಗಿ ಟ್ರ್ಯಾಕ್ಟರ್ ರಿಪೇರಿ ಮಾಡುವ ಗ್ಯಾರೇಜ್ ಹಾಗು ಬೋರ್ ತೆಗೆಸಿದರೆ ಅದಕ್ಕೆ ಬೇಕಾದ ಮೆಷಿನ್, ಪೈಪ್‍ಗಳು ಹಾಗೂ ಸ್ಪ್ರಿಂಕ್ಲರ್ ಪೈಪ್‍ಗಳ ಎಲ್ಲಾ ಅಂಗಡಿ ತೆರೆಯಲು ಸೂಚಿಸಿದ್ದೇವೆ. ಸಾಮಾಜಿಕ ಅಂತರದೊಂದಿಗೆ ಎಲ್ಲವನ್ನು ನಡೆಸಿಕೊಂಡು ಹೋಗುವಂತೆ ರೈತ ಸಮುದಾಯಕ್ಕೆ ಮನವಿ ಮಾಡಿದ್ದಾರೆ.

  • ಕಳಪೆ ಬಿತ್ತನೆ ಬೀಜ ಮಾರಾಟ ಮಾಡೋರ ಮೇಲೆ ನಿರ್ದಾಕ್ಷಿಣ್ಯ ಕ್ರಮ: ಬಿ.ಸಿ ಪಾಟೀಲ್

    ಕಳಪೆ ಬಿತ್ತನೆ ಬೀಜ ಮಾರಾಟ ಮಾಡೋರ ಮೇಲೆ ನಿರ್ದಾಕ್ಷಿಣ್ಯ ಕ್ರಮ: ಬಿ.ಸಿ ಪಾಟೀಲ್

    – ರೈತರಿಗೆ ಅಗತ್ಯವಿರುವಷ್ಟು ಪೆಟ್ರೋಲ್, ಡೀಸೆಲ್ ನೀಡಬೇಕು

    ಹಾವೇರಿ: ರೈತರ ವಸ್ತುಗಳನ್ನು ಸಾಗಾಣಿಕೆ ಮಾಡಲು ಯಾವುದೇ ನಿರ್ಬಂಧವಿಲ್ಲ. ಕೃಷಿ ಮತ್ತು ಕೃಷಿಗೆ ಪೂರಕವಾದ ಚಟುವಟಿಕೆಗಳಿಗೆ ಸರ್ಕಾರದಿಂದ ನಿರ್ಬಂಧವಿಲ್ಲ. ರೈತರಿಗೆ ಅಗತ್ಯವಿರುವಷ್ಟು ಬಂಕ್‍ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ವಿತರಣೆ ಮಾಡಬೇಕು ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ.

    ಹಾವೇರಿ ನಗರದ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಅವರು ಸಭೆ ನಂತರ ಮಾಧ್ಯಮದವರ ಜೊತೆಗೆ ಮಾತನಾಡಿದರು. ಪೊಲೀಸರು ಸಹ ರೈತರಿಗೆ ಯಾವುದೇ ತೊಂದರೆ ಮಾಡದಂತೆ ಸೂಚಿಸಿದರು. ಕಳಪೆ ಬಿತ್ತನೆ ಬೀಜ ಮಾರಾಟ ಮಾಡುವವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲು ಅಧಿಕಾರಿಗಳು ಹಿಂದೇಟು ಹಾಕಬಾರದು ಅಧಿಕಾರಿಗಳ ಜೊತೆಗೆ ನಾವಿದ್ದೇವೆ ಎಂದರು.

    ಒಂದು ವೇಳೆ ಕಳಪೆ ಬಿತ್ತನೆ ಬೀಜದಿಂದ ರೈತರು ಆತ್ಮಹತ್ಯೆ ಮಾಡಿಕೊಂಡರೆ ಅದು ಆತ್ಮಹತ್ಯೆ ಅಲ್ಲ ಅವರ ಕೊಲೆ ಮಾಡಿದಂತೆ. ಹೀಗಾಗಿ ಕಳಪೆ ಬಿತ್ತನೆ ಬೀಜ ಮಾರಾಟ ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಲಾಕ್‍ಡೌನ್‍ನಿಂದ ಹೂವಿನ ಮಾರುಕಟ್ಟೆಗೂ ತೊಂದರೆ ಆಗಿರುವುದು ನಿಜ. ಎಷ್ಟು ಪ್ರಮಾಣದ ಹಾನಿಯಾಗಿದೆ ಎಂಬುದರ ಬಗ್ಗೆ ಸಮೀಕ್ಷೆ ನಡೆಸಿ ವರದಿ ಕೊಡಲು ಸಿಎಂ ಸೂಚಿಸಿದ್ದಾರೆ. ವರದಿ ನಂತರ ಸೂಕ್ತ ಪರಿಹಾರ ವಿತರಣೆ ಮಾಡಲಾಗುವುದು. ಇದರ ಜೊತೆಗೆ ಬಿತ್ತನೆ ಬೀಜ, ರಸಗೊಬ್ಬರವನ್ನು ಎಂ.ಆರ್.ಪಿಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಅಂಥವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ಪಾಟೀಲ್ ಹೇಳಿದರು.

  • ರೈತರ ಕೃಷಿ ಚಟುವಟಿಕೆಗಳಿಗೆ ಯಾವುದೇ ನಿರ್ಬಂಧವಿಲ್ಲ: ಬಿ.ಸಿ ಪಾಟೀಲ್

    ರೈತರ ಕೃಷಿ ಚಟುವಟಿಕೆಗಳಿಗೆ ಯಾವುದೇ ನಿರ್ಬಂಧವಿಲ್ಲ: ಬಿ.ಸಿ ಪಾಟೀಲ್

    ಕೊಪ್ಪಳ: ರೈತರು ಬೆಳೆದ ತರಕಾರಿ, ಹಣ್ಣು ಹಾಗೂ ಇತರ ದವಸ ಧಾನ್ಯಗಳ ಮಾರಾಟ ಮತ್ತು ಅವುಗಳ ಸಾಗಾಟಕ್ಕೆ ಯಾವುದೇ ನಿರ್ಬಂಧವಿರುವುದಿಲ್ಲ ಎಂದು ಕರ್ನಾಟಕ ಸರ್ಕಾರದ ಕೃಷಿ ಸಚಿವರಾದ ಬಿ.ಸಿ ಪಾಟೀಲ್ ಹೇಳಿದರು.

    ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಕೋವಿಡ್-19 ಕುರಿತು ಜಿಲ್ಲಾಡಳಿತ ಕೈಗೊಂಡ ಕ್ರಮಗಳು, ಕೃಷಿ ಉತ್ಪನ್ನಗಳ ಸರಕು ಸಾಗಾಣಿಕೆ ಮತ್ತು ಬೀಜ ಗೊಬ್ಬರಗಳ ಸರಬರಾಜು ಹಾಗೂ ಇತರೆ ಚಟುವಟಿಕೆಗಳ ಬಗ್ಗೆ ಸಭೆ ನಡೆಸಿ ಮಾತನಾಡಿದರು.

    ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸುತ್ತೋಲೆಯಂತೆ ರೈತರು ಬೆಳೆದ ಯಾವುದೇ ಬೆಳೆಗಳಿಗೆ ನಿರ್ಬಂಧವಿರುವುದಿಲ್ಲ. ರೈತರು ತಮ್ಮ ಬೆಳೆಗಳನ್ನು ಯಾವುದೇ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದಾಗಿದೆ. ರೈತರ ಅನುಕೂಲಕ್ಕಾಗಿ ಕೃಷಿ ಉತ್ಪನ್ನ ಮಾರುಕಟ್ಟೆಗಳ ಮೇಲಿನ ನಿರ್ಬಂಧವನ್ನು ತೆಗೆಯಲಾಗಿದ್ದು, ರೈತರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ತಾವು ಬೆಳೆದ ಫಸಲುಗಳನ್ನು ಮಾರಾಟ ಮಾಡಬಹುದಾಗಿದೆ ಎಂದರು.

    ಪ್ರತಿಯೊಂದು ಕಾಲದಲ್ಲಿ ರೈತರು ಒಂದಿಲ್ಲೊಂದು ಸಮಸ್ಯೆಗಳ ಹೊಡೆತಕ್ಕೆ ಸಿಲುಕಿಕೊಳ್ಳುತ್ತಾರೆ. ಈ ಹಿಂದೆ ಪ್ರಕೃತಿ ವಿಕೋಪ, ಬರಗಾಲ ಹಾಗೂ ಪ್ರಸ್ತುತ ಕೋವಿಡ್-19 ನಿಂದಾಗಿ ರೈತ ಬೆಳೆದ ಫಸಲುಗಳ ಮಾರಾಟಕ್ಕೆ ತೊಂದರೆಯಾಗುತ್ತಿದ್ದು, ಇದರ ನಿವಾರಣೆಗಾಗಿ ಸರ್ಕಾರವು ರೈತರ ಅನುಕೂಲಕ್ಕಾಗಿ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ರೈತರ ದೈನಂದಿನ ಕೃಷಿ ಚಟುವಟಿಕೆಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುವುದು ನಮ್ಮ ಸರ್ಕಾರದ ಉದ್ದೇಶವಾಗಿದೆ ಎಂದರು.

    ಜಿಲ್ಲೆಯ ಗಂಗಾವತಿ, ಕಾರಟಗಿ ಮತ್ತು ಕೊಪ್ಪಳದ ಕೆಲವು ಭಾಗಗಳಲ್ಲಿ ಮೊನ್ನೆ ಆಲಿಕಲ್ಲು ಮಳೆಯಿಂದಾಗಿ ಬಹಳ ದೊಡ್ಡ ಪ್ರಮಾಣದ ಭತ್ತದ ಬೆಳೆ ಹಾನಿಯಾಗಿದೆ. ಹಾನಿಯಾದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದ್ದು, ರೈತರಿಗೆ ಅಪಾರ ಪ್ರಮಾಣದ ನಷ್ಟವಾಗಿದ್ದು, ಈ ಕುರಿತು ಕೂಡಲೇ ಜಿಲ್ಲಾಡಳಿತ ತಾಲೂಕು ಮಟ್ಟದ ಅಧಿಕಾರಿಗಳ ವಿಶೇಷ ಸಮಿತಿ ರಚಿಸಿ, ಹಾನಿಯಾದ ಪ್ರದೇಶಕ್ಕೆ ಖುದ್ದು ಭೇಟಿ ನೀಡಿ, ಸಮೀಕ್ಷೆ ನಡೆಸಿ ಹಾನಿಯಾದ ಅಂದಾಜು ಮೊತ್ತದ ವರದಿಯನ್ನು ಸೋಮವಾರದೊಳಗೆ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

    ರೈತರಿಗೆ ಬೇಕಾಗುವ ಬೀಜ, ಗೊಬ್ಬರವನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ವಿತರಣೆಗೆ ಕೂಡಲೇ ಕ್ರಮ ಕೈಗೊಳ್ಳಬೇಕು. ರೈತರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಅವರಿಗೆ ಎಲ್ಲಾ ಅನುಕೂಲ ಮಾಡಿಕೊಡಲಾಗುವುದು. ಕೊಪ್ಪಳ ಜಿಲ್ಲೆಯಲ್ಲಿ ಈಗಾಗಲೇ ಭತ್ತ ಕಟಾವಿಗೆ ಬಂದಿದ್ದು, ಅವುಗಳ ಕಟಾವಿನ ಯಂತ್ರಗಳ ಮಾಲೀಕರು ತಮಗೆ ಬೇಕಾದ ರೀತಿಯಲ್ಲಿ ದರ ನಿಗದಿಪಡಿಸಿ ರೈತರಿಂದ ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಈ ಕೂಡಲೇ ಭತ್ತದ ಕಟಾವು ದರವನ್ನು ನಿಗದಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

    ಜಿಲ್ಲೆಯಲ್ಲಿ ಟೊಮೆಟೋ ಬೆಳೆಗಾರರು ತಮ್ಮ ಫಸಲನ್ನು ಕೆಚ್‍ಅಪ್ ಕಾರ್ಖಾನೆಗಳಿಗೆ ಮಾರಾಟ ಮಾಡಬಹುದು. ರಾಜ್ಯದಲ್ಲಿ ಸಾಧ್ಯವಾಗದಿದ್ದರೆ ಬೇರೆ ರಾಜ್ಯದ ಕಾರ್ಖಾನೆಗಳನ್ನು ಸಂಪರ್ಕಿಸಿ ಅವರಿಗೆ ನಮ್ಮ ಜಿಲ್ಲೆಯ ಟೊಮೆಟೋವನ್ನು ಮಾರಾಟ ಮಾಡಬಹುದು. ಕೇರಳ ಹೊರತುಪಡಿಸಿ ಬೇರೆ ರಾಜ್ಯಗಳ ಗಡಿಗಳಲ್ಲಿ ಕೃಷಿ, ತೋಟಗಾರಿಕೆ ಸೇರಿದಂತೆ ಅತ್ಯವಶ್ಯಕ ಸಾಮಗ್ರಿಗಳ ಸಾಗಾಟಕ್ಕೆ ವಿನಾಯಿತಿ ನೀಡಲಾಗಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಖರೀದಿಗಾರರ ಪಟ್ಟಿಯನ್ನು ಸಿದ್ಧಪಡಿಸಿ ರೈತರಿಗೆ ಹಾಗೂ ಜಿಲ್ಲೆಯಲ್ಲಿನ ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳ ಕುರಿತು ಖರೀದಿದಾರರಿಗೆ ಮಾಹಿತಿ ನೀಡಿದರೆ ಅವರಿಗೆ ಅನುಕೂಲವಾದೆಡೆ ಅಥವಾ ಅವಶ್ಯವಿದ್ದೆಡೆ ತಮ್ಮ ಕೃಷಿ ಉತ್ಪನ್ನವನ್ನು ಮಾರಾಟ ಮಾಡಬಹುದು ಎಂದರು.

    ಫಸಲ್ ಬೀಮಾ, ಪಿಎಂಕೆವೈ ಮುಂತಾದ ಯೋಜನೆಗಳಲ್ಲಿ ರೈತರ ಖಾತೆಗೆ ನೇರವಾಗಿ ಹಣ ಜಮಾ ಆಗುತ್ತದೆ. ಯಾವುದೇ ಬ್ಯಾಂಕುಗಳು ಆ ಹಣವನ್ನು ರೈತರ ಸಾಲಕ್ಕೆ ಖಡಿತಗೊಳಿಸುವಂತಿಲ್ಲ. ಅಂತಹ ಪ್ರಕರಣಗಳು ಕಂಡುಬಂದಲ್ಲಿ ಸಂಬಂಧಿಸಿದ ಬ್ಯಾಂಕುಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

    ಕೋವಿಡ್ ನಿರ್ಮೂಲನೆಗೆ ಸಾಮಾಜಿಕ ಅಂತರವೇ ಒಳ್ಳೆಯ ಔಷಧಿಯಾಗಿದ್ದು, ನಮ್ಮಷ್ಟಕ್ಕೆ ನಾವೇ ನಿರ್ಬಂಧವನ್ನು ಹಾಕಿಕೊಳ್ಳುವ ಮೂಲಕ ಹಾಗೂ ಅನಾವಶ್ಯಕವಾಗಿ ಮನೆಗಳಿಂದ ಹೊರಬರದೇ ನಾವೆಲ್ಲರೂ ಸರ್ಕಾರದ ಸುತ್ತೋಲೆಗಳನ್ನು ಪಾಲಿಸಿ ಈ ಸಾಂಕ್ರಾಮಿಕ ರೋಗ ನಿರ್ಮೂಲನೆ ಕೈಜೋಡಿಸಬೇಕಾಗಿದೆ ಎಂದರು.

    ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ಮಾತನಾಡಿ, ರೈತರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಅವರು ಬೆಳೆದ ಬೆಳೆಗಳ ಮಾರಾಟಕ್ಕಾಗಿ ಪಾಸ್‍ಗಳನ್ನು ಕೊಡಲಾಗಿದೆ. ಇದು ಕೇವಲ ರೈತರಿಗೆ ಮಾತ್ರವಲ್ಲದೇ ಹಮಾಲರಿಗೂ ನೀಡಲಾಗಿದೆ. ಅವರ ಹಣ್ಣು ಮತ್ತು ತರಕಾರಿಗಳ ಮಾರಾಟಕ್ಕಾಗಿ ಹಾಫ್‍ಕಾಮ್ಸ್ ಮಳಿಗೆಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಕಡಲೆ ಖರೀದಿಗೆ ಜಿಲ್ಲೆಯಾದ್ಯಂತ 13 ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.

  • ರೈತರಿಗಾಗುವ ತೊಂದರೆ ಇಡೀ ದೇಶಕ್ಕಾಗುವ ತೊಂದರೆಯಿದ್ದಂತೆ: ಬಿ.ಸಿ ಪಾಟೀಲ್

    ರೈತರಿಗಾಗುವ ತೊಂದರೆ ಇಡೀ ದೇಶಕ್ಕಾಗುವ ತೊಂದರೆಯಿದ್ದಂತೆ: ಬಿ.ಸಿ ಪಾಟೀಲ್

    – ಆನ್‍ಲೈನ್ ದ್ರಾಕ್ಷಿ ಮಾರಾಟಕ್ಕೆ ಕ್ರಮ
    – ಪರಿಸ್ಥಿತಿಯ ದುರ್ಲಾಭ ಪಡೆದರೆ ಕಠಿಣ ಕ್ರಮ

    ವಿಜಯಪುರ: ರೈತ ಸಮುದಾಯಕ್ಕಾಗುವ ತೊಂದರೆ ಇಡೀ ದೇಶಕ್ಕಾಗುವ ತೊಂದರೆಯಿದ್ದಂತೆ. ಹೀಗಾಗಿ ರೈತರಿಗೆ ಅನುಕೂಲವಾಗಲೆಂದು ಕೃಷಿ ಉತ್ಪನ್ನಗಳ ಸುಲಲಿತ ಮಾರಾಟಕ್ಕೆ ಅಂತರಾಜ್ಯ ನಿರ್ಬಂಧಗಳನ್ನು ಸಹ ತೆಗೆದುಹಾಕಲಾಗಿದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

    ವಿಜಯಪುರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೃಷಿ ಸಚಿವರು ಕೊರೊನಾ ಹಿನ್ನಲೆಯಲ್ಲಿ ರೈತ ಮತ್ತು ಕೃಷಿ ಚಟುವಟಿಕೆಗಳ ಕುರಿತು ಜಿಲ್ಲಾ ಕೃಷಿ, ತೋಟಗಾರಿಕೆ, ಆರೋಗ್ಯ ಇಲಾಖೆ, ಪೊಲೀಸ್ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು. ಈ ವೇಳೆ ವಿಜಯಪುರ ಜಿಲ್ಲಾ ಕೃಷಿ ಚಟುವಟಿಕೆಗಳ ಪ್ರಗತಿ ಪರಿಶೀಲನೆ ನಡೆಸಿ ರೈತರು, ಅಧಿಕಾರಿಗಳಿಂದ ಮಾಹಿತಿ ಪಡೆದರು.

    ಈ ಸಂದರ್ಭದಲ್ಲಿ ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕರು, ಜಿಲ್ಲೆಯಲ್ಲಿ ಪ್ರಸ್ತುತ ಯಾವುದೇ ಕೃಷಿ ಚಟುವಟಿಕೆ ನಡೆಯುತ್ತಿಲ್ಲ. ಈ ಚಟುವಟಿಕೆಗಳು ಜೂನ್ ನಂತರ ಪ್ರಾರಂಭವಾಗಲಿದ್ದು, ಅದಕ್ಕಾಗಿ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಿತ್ತನೆಬೀಜ, ರಸಗೊಬ್ಬರ, ಕೀಟನಾಶಕ ಮತ್ತು ಕೃಷಿ ಯಂತ್ರೋಪಕರಣಗಳಿಗೆ ಕೊರತೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ ಎಂದರು. ಜಿಲ್ಲೆಯ ದ್ರಾಕ್ಷಿ ಬೆಳೆಗಾರರು ಆನ್‍ಲೈನ್ ಟ್ರೆಡಿಂಗ್ ಕೊರತೆಗಳ ಬಗ್ಗೆ ಸಚಿವರ ಗಮನ ಸೆಳೆದರು. ರೈತರು, ಅಧಿಕಾರಿಗಳು ಮತ್ತು ಜಿಲ್ಲೆಯ ಶಾಸಕರಿಂದ ಅಗತ್ಯ ಮಾಹಿತಿ ಪಡೆದ ನಂತರ ಕೃಷಿ ಸಚಿವ ಬಿ.ಸಿ. ಪಾಟೀಲ್ ಮಾತನಾಡಿ ಸೂಕ್ತ ನಿರ್ದೇಶನಗಳನ್ನು ನೀಡಿದರು.

    ವಿಜಯಪುರ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಎಲ್ಲಾ ಇಲಾಖೆಗಳ ಸಭೆ ನಡೆಸಿದ್ದೇನೆ. ಈ ಸಭೆಯ ಮುಖ್ಯ ಉದ್ದೇಶ ರೈತರಿಗೆ ಅನುಕೂಲ ಕಲ್ಪಿಸುವುದಾಗಿದೆ. ವಿಜಯಪುರ ಜಿಲ್ಲೆಗೆ ಬೇಕಾದ ಎಲ್ಲಾ ಬೀಜ, ಗೊಬ್ಬರ ವ್ಯವಸ್ಥೆ ಆಗಿದೆ. ಕಡಲೇ ಖರೀದಿಗೆ ಕೇಂದ್ರಗಳನ್ನು ತೆರೆಯಬೇಕು. ಇಲ್ಲದಿದ್ದರೆ ಬೆಳೆಗಾರರಿಗೆ ನಷ್ಟವುಂಟಾಗುತ್ತದೆ. ಸಾರಿಗೆ ಸಮಸ್ಯೆಯೂ ಉಂಟಾಗುತ್ತದೆ. ಆದ್ದರಿಂದ ಖರೀದಿ ಕೇಂದ್ರ ತೆರೆಯಲು ತಕ್ಷಣ ಕ್ರಮ ಕೈಗೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಇದಕ್ಕೆ ವ್ಯಾಪಕ ಪ್ರಚಾರವೂ ಅಗತ್ಯವಿದ್ದು, ಮುದ್ರಣ ಮತ್ತು ದೃಶ್ಯ ಮಾಧ್ಯಮಗಳ ನೆರವು ಪಡೆಯುವಂತೆ ಸಲಹೆ ನೀಡಿದರು.

    ದ್ರಾಕ್ಷಿ ಬೆಳೆಗಾರರು ಗಮನ ಸೆಳೆದ ವಿಷಯಕ್ಕೆ ಸಂಬಂಧಿಸಿ ಮಾತನಾಡಿದ ಅವರು, ದ್ರಾಕ್ಷಿ ಆನ್‍ಲೈನ್ ವ್ಯಾಪಾರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಯಾವುದೇ ತೊಡಕುಗಳಿದ್ದರೂ ನಿವಾರಿಸಲು ಜಿಲ್ಲಾಧಿಕಾರಿಗೆ ಕೃಷಿ ಸಚಿವರು ಸೂಚನೆ ನೀಡಿದರು. ಜಿಲ್ಲೆಯಲ್ಲಿ ಕಲ್ಲಂಗಡಿ ಬೆಳೆ ಉತ್ತಮವಾಗಿ ಬಂದಿದೆ. ಆದರೆ ಕಿಡಿಗೇಡಿಗಳು ಕಲ್ಲಂಗಡಿ ತಿಂದರೆ ರೋಗ ಬರುತ್ತದೆ ಎಂದು ವದಂತಿ ಹಬ್ಬಿಸಿದ್ದಾರೆ. ಇದು ಸುಳ್ಳು, ಹೀಗೆ ವದಂತಿ ಹಬ್ಬಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಬಿ.ಸಿ ಪಾಟೀಲ್ ಎಚ್ಚರಿಕೆ ನೀಡಿದರು.

    ಕಲ್ಲಂಗಡಿ, ಸೌತೆಕಾಯಿ ತಿನ್ನುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಈ ಬಗ್ಗೆ ವೈದ್ಯರು ಹೇಳಿಕೆ ನೀಡಿದ್ದಾರೆ. ಅವರಿಂದ ಮಾಹಿತಿಗಳನ್ನು ಪಡೆಯಲಾಗಿದೆ. ಆದ್ದರಿಂದ ಭೀತಿಯಿಲ್ಲದೇ ಈ ಹಣ್ಣುಗಳ ಸೇವನೆ ಮಾಡುವಂತೆ ಸಚವರು ಸಲಹೆ ನೀಡಿದರು. ಕಲ್ಲಂಗಡಿ ತಿಂದರೆ ಕೊರೊನಾ ಬರುತ್ತೆ ಅಂತ ಅಪಪ್ರಚಾರ ಮಾಡಲಾಗಿದೆ. ಹಾಗಾಗಿ ಕಲ್ಲಂಗಡಿ ಮಾರಾಟ ಆಗುತ್ತಿಲ್ಲ ಎಂದು ದೂರುಗಳು ಬಂದಿವೆ. ಒಂದು ಮೂಲದ ಪ್ರಕಾರ, ಕಲ್ಲಂಗಡಿ ಹಾಗೂ ಸವತೆಕಾಯಿ ತಿಂದರೆ ಮನುಷ್ಯನ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಹೀಗಾಗಿ ಯಾರೂ ಭಯಪಡಬಾರದು. ರೈತರಿಗೆ ಯಾರೇ ಅಧಿಕಾರಿಗಳು ತೊಂದರೆ ಮಾಡಿದಲ್ಲಿ ಅಂಥವರ ಮೇಲೆ ಹಿಂದುಮುಂದು ನೋಡದೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದೇನೆ. ಹಾಪ್ ಕಾಮ್ಸ್ ನಲ್ಲಿ ತರಕಾರಿ, ಹಣ್ಣು, ಮೊಟ್ಟೆ ಮಾರಾಟಕ್ಕೆ ಸೂಚಿಸಲಾಗಿದೆ. ರೈತರೆಲ್ಲ ಹೆದರಬಾರದು, ಆತ್ಮಹತ್ಯೆ ಮಾಡಿಕೊಳ್ಳುವ ಹೇಡಿ ಕೆಲಸ ಮಾಡಬೇಡಿ ಎಂದು ಮನವಿ ಮಾಡಿದರು.

    ಹಾಗೆಯೇ ಯಾರಾದರೂ ಪರಿಸ್ಥಿತಿಯ ದುರ್ಲಾಭ ಪಡೆದುಕೊಳ್ಳುವುದಾಗಲೀ, ಪಡೆದುಕೊಂಡಿದ್ದಾಗಲಿ ತಮ್ಮ ಗಮನಕ್ಕೆ ಬಂದರೆ ಅವರು ಯಾರೇ ಆಗಲಿ ಅವರ ವಿರುದ್ಧ ಕಠಿಣ ಕ್ರಮಜರುಗಿಸ ಬೇಕಾಗುತ್ತದೆ ಎಂದು ಕೃಷಿ ಸಚಿವರು ಖಡಕ್ ಎಚ್ಚರಿಕೆ ನೀಡಿದರು.

    ತಾವು ಹಾಗೂ ಸರ್ಕಾರ ರೈತರ ಜೊತೆಗೆ ಇದ್ದೇವೆ. ರೈತರು ಹತಾಶರಾಗಬಾರದು. ಕೊರೊನಾ ಹಾವಳಿ ಆದಷ್ಟು ಬೇಗ ಕಡಿಮೆಯಾಗಲಿದೆ, ನಾವೆಲ್ಲರೂ ಇದರಿಂದ ಪಾರಾಗುತ್ತೇವೆ. ಕೊರೊನಾ ಎಂಬ ಸಾಮಾಜಿಕ ಕುತ್ತು ಆದಷ್ಟು ಬೇಗ ನಿವಾರಣೆಯಾಗಲಿದೆ. ಕೊರೊನಾ ಕಂಟಕದಿಂದ ಪಾರಾಗಿ ಜನರನ್ನು ಬದುಕಿಸಿಕೊಳ್ಳುವ ಕೆಲಸ ಸರ್ಕಾರ ಮಾಡುತ್ತಿದೆ ಎಂದರು. ಹಾಗೆಯೇ ರಾಜ್ಯದ ಸಹಕಾರ ಸಚಿವರು 1200 ಕೋಟಿ ಬಿಡುಗಡೆ ಮಾಡಿರುವುದಾಗಿ ತಿಳಿಸಿದ್ದಾರೆ. ಆದ್ದರಿಂದ ಕೃಷಿಗೆ ಸಂಬಂಧಿಸಿದ ಸೊಸೈಟಿಗಳ ಚಟುವಟಿಕೆಗೆ ಯಾವುದೇ ತೊಂದರೆಯೂ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

    ಅಲ್ಲದೇ ಜಿಲ್ಲಾಧಿಕಾರಿಗಳ ಕಾರ್ಯಾಲಯ ಮುಂಭಾಗದಲ್ಲಿ ರೈತರಿಂದ ನೇರವಾಗಿ ಗ್ರಾಹಕರ ಮನೆಬಾಗಿಲಿಗೆ ತಾಜಾ ಹಣ್ಣು ಮತ್ತು ತರಕಾರಿ ಮಾರಾಟ ಸೇವೆಗೆ ಕೃಷಿ ಸಚಿವರು ಚಾಲನೆ ನೀಡಿದರು. ಶಾಸಕರಾದ ಶಿವಾನಂದ್ ಪಾಟೀಲ್, ಅರುಣ್ ಶಾಪುರ್, ಬಸನಗೌಡ ಪಾಟೀಲ್ ಯತ್ನಾಳ, ಈಶ್ವಂತ್ ರಾಯ್, ದೇವಾನಂದ್ ಚೌಹಣ್, ಮುರುಗೇಶ್ ನಿರಾಣಿ ಸೇರಿದಂತೆ ಇಲಾಖಾಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.

  • ಕಲ್ಲಂಗಡಿ, ಸೌತೆಕಾಯಿ ತಿಂದರೆ ಕೊರೊನಾ ಬರೋ ಸಾಧ್ಯತೆ ಕಡಿಮೆ: ಬಿ.ಸಿ.ಪಾಟೀಲ್

    ಕಲ್ಲಂಗಡಿ, ಸೌತೆಕಾಯಿ ತಿಂದರೆ ಕೊರೊನಾ ಬರೋ ಸಾಧ್ಯತೆ ಕಡಿಮೆ: ಬಿ.ಸಿ.ಪಾಟೀಲ್

    ಕಲಬುರಗಿ: ಕಲ್ಲಂಗಡಿ ಹಾಗೂ ಸೌತೆಕಾಯಿ ಹಣ್ಣು ತಿಂದರೆ ಲಂಗ್ಸ್ ಕ್ಲಿಯರ್ ಆಗುತ್ತೆ, ಇದರಿಂದ ಕೊರೊನಾ ಬರದಂತೆ ನಾವು ತಡೆ ಹಿಡಿಯಬಹುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಇಂದು ನಗರದಲ್ಲಿ ನಡೆದ ಕೃಷಿ ಅಧಿಕಾರಿಗಳ ಜೊತೆಗಿನ ಸಭೆಯಲ್ಲಿ ಮಾತನಾಡಿದ ಅವರು, ಕಲ್ಲಂಗಡಿ ಹಣ್ಣು ತಿಂದರೆ ಕೊರೊನಾ ಬರುತ್ತೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಆದರೆ ವಿಜ್ಞಾನಿಗಳ ಪ್ರಕಾರ ಕಲ್ಲಂಗಡಿ ಹಾಗೂ ಸೌತೆಹಣ್ಣು ಜಾಸ್ತಿ ತಿನ್ನಬೇಕು. ಈ ಮೂಲಕ ಲಂಗ್ಸ್ ಕ್ಲಿಯರ್ ಇದ್ದರೆ ಕೊರೊನಾ ಸಹ ಬರುವುದಿಲ್ಲ ಎಂದರು.

    ಇದರ ಬಗ್ಗೆ ಜನರಿಗೆ ಮಾಧ್ಯಮದವರು ಹಾಗೂ ಅಧಿಕಾರಿಗಳು ತಿಳುವಳಿಕೆ ನೀಡಬೇಕು ಎಂದು ತಿಳಿಸಿದರು. ಸಭೆಗೂ ಮುನ್ನ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ರೈತ ಚಂದ್ರಕಾಂತ ಕುಟುಂಬಕ್ಕೆ, ಸರ್ಕಾರದ 5 ಲಕ್ಷ ಹಾಗೂ ವೈಯಕ್ತಿಕವಾಗಿ 1 ಲಕ್ಷ ರೂಪಾಯಿ ಪರಿಹಾರದ ಚೆಕ್‍ನ್ನು ಬಿ.ಸಿ.ಪಾಟೀಲ್ ವಿತರಿಸಿದರು. ಇದೇ ವೇಳೆ ಮಾತನಾಡಿದ ಸಚಿವರು ಯಾವುದೇ ಕಾರಣಕ್ಕೂ ರೈತರ ಬೆಳೆದ ಸಾಮಗ್ರಿಗಳನ್ನು ಪೊಲೀಸರು ತಡೆಹಿಡಿಯ ಬಾರದು ಎಂದು ಪೊಲೀಸ್ ಅಧಿಕಾರಿಗಳಿಗೆ ಹೇಳಿದ್ದರು.

  • ಖಾಸಗಿ ಕ್ಲಿನಿಕ್ ತೆರೆಯದ ವೈದ್ಯರ ಲೈಸೆನ್ಸ್ ರದ್ದು – ಬಿ.ಸಿ.ಪಾಟೀಲ್ ಖಡಕ್ ಎಚ್ಚರಿಕೆ

    ಖಾಸಗಿ ಕ್ಲಿನಿಕ್ ತೆರೆಯದ ವೈದ್ಯರ ಲೈಸೆನ್ಸ್ ರದ್ದು – ಬಿ.ಸಿ.ಪಾಟೀಲ್ ಖಡಕ್ ಎಚ್ಚರಿಕೆ

    ಹಾವೇರಿ: ಖಾಸಗಿ ಕ್ಲಿನಿಕ್ ತೆರೆಯದ ವೈದ್ಯರ ಪರವಾನಗಿ ರದ್ದು ಪಡಿಸಲಾಗುವುದು ಎಂದು ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ಹಾವೇರಿ ನಗರಸಭಾ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ಸಿ.ಪಾಟೀಲ್, ಕೊರೊನಾ ಬಗ್ಗೆ ಜಾಗೃತಿ ಮೂಡಿಸುವುದು ಆರೋಗ್ಯದ ದೃಷ್ಟಿಯಿಂದ. ಆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮಾಡುವುದು ಆರೋಗ್ಯ, ವೈದ್ಯಕೀಯ, ಗೃಹ ಈ ಇಲಾಖೆಗಳದ್ದಷ್ಟೇ ಕೆಲಸ ಎಂದು ಭಾವಿಸದೆ ಜನರು ಈ ಬಗ್ಗೆ ಸ್ವಯಂಪ್ರೇರಿತರಾಗಿ ಜಾಗೃತರಾಗುವುದು ಮುಖ್ಯ ಎಂದು ಕರೆ ನೀಡಿದರು.

    ಖಾಸಗಿ ವೈದ್ಯರು ಮೆಡಿಕಲ್ ಶಾಪ್, ಆಸ್ಪತ್ರೆಗಳನ್ನಾಗಲೀ ಯಾವುದೇ ಕಾರಣಕ್ಕೂ ಬಂದ್ ಮಾಡಬಾರದು ಎಂದು ಜಿಲ್ಲಾಧಿಕಾರಿಗಳ ಮೂಲಕ ಖಾಸಗಿ ವೈದ್ಯರಿಗೆ ನೊಟೀಸ್ ನೀಡಲಾಗಿದೆ. ಒಂದು ವೇಳೆ ಸರ್ಕಾರದ ನೊಟೀಸ್‍ಗೂ ಬೆಲೆಕೊಡದೆ ಯಾರಾದರೂ ವೈದ್ಯರು ಆಸ್ಪತ್ರೆ ತೆರೆಯದೇ ಇದ್ದಲ್ಲಿ ಅಂತಹ ವೈದ್ಯರ ಪರವಾನಗಿ ರದ್ದು ಪಡಿಸಲಾಗುವುದು ಎಂದು ಬಿ.ಸಿ.ಪಾಟೀಲ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಮನೆಯಿಂದ ಹೊರಬರಬೇಡಿ. ನಮ್ಮ ನಮ್ಮ ಮನೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ವ-ದಿಗ್ಬಂಧನ ಹಾಕಿಕೊಳ್ಳುವ ಮೂಲಕ ನಮ್ಮ ಹಾಗೂ ನಮ್ಮ ಕುಟುಂಬದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಜನರ ಆರೋಗ್ಯ ಕಾಪಾಡಲು ಬದ್ಧರಾಗಿದ್ದು, ಜನತೆ ಸಾಮಾಜಿಕ ಅಂತರ ಕಾಯ್ದುಕೊಂಡು ಸಹಕರಿಸಬೇಕು. ಅನಾವಶ್ಯಕ ಮನೆಯಿಂದ ಹೊರಬರಬೇಡಿ, ಅನಿವಾರ್ಯತೆ ಇದ್ದಲ್ಲಿ ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಮನೆಯಿಂದ ಹೊರಬರಬೇಕು ಎಂದು ಮನವಿ ಮಾಡಿದರು.

    ಈಗಾಗಲೇ ಅತಿ ಅವಶ್ಯಕ ವಸ್ತುಗಳಾದ ದಿನಸಿ, ತರಕಾರಿ, ಹಣ್ಣು-ಹಂಪಲುಗಳನ್ನು ವಾರ್ಡ್ ವಾರು ತಳ್ಳುವಗಾಡಿಯ ಮೂಲಕ ಮಾರಲು ಅನುಕೂಲ ಮಾಡಿಕೊಡಲಾಗಿದೆ ಎಂದು ಕೃಷಿ ಸಚಿವರು ಸ್ಪಷ್ಟಪಡಿಸಿದರು.

    ಬಿ.ಸಿ.ಪಾಟೀಲ್ ಇಂದು ಜಿಲ್ಲೆಯ ಹಿರೇಕೆರೂರು ನಗರ, ರಾಣೆಬೆನ್ನೂರು, ರಾಣೆಬೆನ್ನೂರು ಸರ್ಕಾರಿ ಆಸ್ಪತ್ರೆ, ಹಾವೇರಿ ಎಪಿಎಂಸಿ ಸೇರಿದಂತೆ ಹಲವೆಡೆ ಭೇಟಿ ನೀಡಿದ್ದರು. ಅಲ್ಲದೇ ಕೊರೊನಾ ಬಗ್ಗೆ ಜನತೆಗೆ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಹಾವೇರಿ ಶಾಸಕ ನೆಹರು ಓಲೇಕಾರ್, ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ, ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಉಪಸ್ಥಿತರಿದ್ದರು.

  • ಹುಬ್ಬಳ್ಳಿಯ ಕಿಮ್ಸ್ ಗೆ ಪಾಪು ನಾಮಕರಣ ಮಾಡಲು ಯತ್ನ- ಬಿ.ಸಿ.ಪಾಟೀಲ್ ಭರವಸೆ

    ಹುಬ್ಬಳ್ಳಿಯ ಕಿಮ್ಸ್ ಗೆ ಪಾಪು ನಾಮಕರಣ ಮಾಡಲು ಯತ್ನ- ಬಿ.ಸಿ.ಪಾಟೀಲ್ ಭರವಸೆ

    ಹಾವೇರಿ: ನಾಡೋಜ ಪಾಟೀಲ ಪುಟ್ಟಪ್ಪನವರ ಹೆಸರನ್ನು ಉಳಿಸುವ ಸಲುವಾಗಿ ಅವರ ಹೆಸರನ್ನು ಹುಬ್ಬಳ್ಳಿ ಕಿಮ್ಸ್ ಗೆ ನಾಮಕರಣ ಮಾಡಲು ಸಿಎಂ ಜೊತೆ ಹಾಗೂ ಸಚಿವ ಸಂಪುಟ ಸಭೆಯದಲ್ಲಿ ಚರ್ಚೆ ಮಾಡುವೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಭರವಸೆ ನೀಡಿದರು.

    ಪಾಟೀಲ ಪುಟ್ಟಪ್ಪ ವಿಧಿವಶರಾದರ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆಯಲ್ಲಿ ಸರ್ಕಾರದ ಪರವಾಗಿ ಭಾಗಿಯಾಗಿ ಮಾತನಾಡಿದ ಅವರು, ಪಾಟೀಲ ಪುಟ್ಟಪ್ಪ ಕನ್ನಡದ ಗಟ್ಟಿಧ್ವನಿಯಾಗಿದ್ದರು. ಇಂದು ಆ ಗಟ್ಟಿ ಧ್ವನಿ ಸ್ಥಬ್ದವಾಗಿದೆ. ನಾನು ಸಚಿವನಾಗಬೇಕು ಎನ್ನುವ ಆಸೆ ಅವರಿಗೆ ತುಂಬಾ ಇತ್ತು. ಸಚಿವನಾದ ನಂತರ ಅವರನ್ನು ಮಾತನಾಡಿಸಲು ಹೋದಾಗ ಮಾತನಾಡುವ ಸ್ಥಿತಿಯಲ್ಲಿ ಅವರು ಇರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಪಾಪು ಅವರು ಹುಟ್ಟು ಹೋರಾಟಗಾರರಾಗಿದ್ದರು. ಹೀಗಾಗಿ ಅವರ ಹೆಸರು ಅಮರವಾಗಿರಲು ಕಿಮ್ಸ್ ಆಸ್ಪತ್ರೆಗೆ ಅವರ ಹೆಸರು ನಾಮಕರಣ ಮಾಡುವ ಬಗ್ಗೆ ಸಿಎಂ ಜೊತೆ ಹಾಗೂ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡುವೆ ಎಂದರು.

  • ಸಿದ್ದರಾಮಯ್ಯ ಲಾಯರ್, ಬಿ.ಸಿ.ಪಾಟೀಲ್ ಪೊಲೀಸ್: ಸದನದಲ್ಲಿ ಸ್ವಾರಸ್ಯಕರ ಚರ್ಚೆ

    ಸಿದ್ದರಾಮಯ್ಯ ಲಾಯರ್, ಬಿ.ಸಿ.ಪಾಟೀಲ್ ಪೊಲೀಸ್: ಸದನದಲ್ಲಿ ಸ್ವಾರಸ್ಯಕರ ಚರ್ಚೆ

    – ನಾನು ಸಂಡೆ ಮಂಡೆ ಲಾಯರ್: ಸಿದ್ದರಾಮಯ್ಯ

    ಬೆಂಗಳೂರು: ವಿಧಾನಸೌಧದಲ್ಲಿ ಇಂದು ಸ್ವಾರಸ್ಯಕರ ಚರ್ಚೆ ನಡೆಯಿತು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಲಾಯರ್‌ಗಿರಿ ಬಗ್ಗೆ ನಡೆದ ಚರ್ಚೆಗೆ ಇಡೀ ಸದನ ನಗೆಗಡಲಲ್ಲಿ ತೇಲಿತು. ನಾನು ಪೂರ್ಣವಾಗಿ ಲಾಯರ್ ಕೆಲಸ ಮಾಡಲಿಲ್ಲ, ಸಂಡೆ ಮಂಡೆ ಲಾಯರ್ ಎಂದು ಸಿದ್ದರಾಮಯ್ಯ ಹೇಳಿದ್ದಕ್ಕೆ ಚರ್ಚೆಯ ದಿಕ್ಕೇ ಬದಲಾಗಿಹೋಯಿತು.

    ವಿಧಾನಸಭೆಯಲ್ಲಿ ಸಚಿವ ಸುಧಾಕರ್ ವಿಧಾನಸಭಾಧ್ಯಕ್ಷರ ಪೀಠಕ್ಕೆ ಅಗೌರವ ಮಾಡಿದ್ದಾರೆ ಎಂದು ಹಕ್ಕುಚ್ಯುತಿ ಪ್ರಸ್ತಾಪ ಮಾಡಿ ಸಿದ್ದರಾಮಯ್ಯ ಮಾತನಾಡಿದರು. ಸುಪ್ರಿಂಕೋರ್ಟ್ ತೀರ್ಪಿನಲ್ಲಿ ಹಾಗೆಂದು ಹೇಳಲಾಗಿದೆ ಎಂದು ಸುಧಾಕರ್ ಹೇಳಿದರು ಎಂಬ ಅಂಶವನ್ನು ಬಿಟ್ಟು ಸಿದ್ದರಾಮಯ್ಯ ಹಿಂದಿನ ಸುಧಾಕರ್ ಹೇಳಿಕೆಯನ್ನ ಉಲ್ಲೇಖಿಸಿದು. ಇದಕ್ಕೆ ಸಚಿವ ಡಾ. ಸುಧಾಕರ್ ಆಕ್ಷೇಪ ವ್ಯಕ್ತಪಡಿಸಿದಾಗ ಮೊದಲು ಆ ವಾಕ್ಯವೇ ನನ್ನ ಪುಟದಲ್ಲಿ ಇಲ್ಲ ಎಂದ ಸಿದ್ದರಾಮಯ್ಯ, ಬಳಿಕ ಸ್ಪೀಕರ್ ಈ ವಾಕ್ಯ ನಿಮ್ಮ ದಾಖಲೆಯಲ್ಲಿಯೂ ಇದೆ ಓದಿ ಎಂದರು. ಆಗ ಜಾಣತನ ಮೆರೆದ ಸಿದ್ದರಾಮಯ್ಯ, ವಿಧಾನಸಭೆ ಕಡತದ ದಾಖಲೆಯಲ್ಲಿ ಇಂಗ್ಲೀಷ್‍ಗೂ ಮೊದಲು ಕನ್ನಡದಲ್ಲಿ ಇದ್ದಿದ್ದರಿಂದ ತಾವು ನೋಡಲಿಲ್ಲ, ಉದ್ದೇಶಪೂರ್ವಕವಾಗಿ ಆ ಸಾಲು ಬಿಟ್ಟು ಓದಿಲ್ಲ ಎಂದರು.

    ಈ ವೇಳೆ ಜಗದೀಶ್ ಶೆಟ್ಟರ್ ಮಧ್ಯಪ್ರವೇಶ ಮಾಡಿ ನೀವು ಗುಡ್ ಲಾಯರ್ ಚೆನ್ನಾಗಿ ಡಿಫೆನ್ಸ್ ಮಾಡ್ತೀರಿ ಅಂತ ಕೆಣಕಿದರು. ಅಯ್ಯೋ ಶೆಟ್ರೆ, ನಾನು ಪೂರ್ಣ ಲಾಯರ್ ಕೆಲಸ ಮಾಡಲಿಲ್ಲ, ಸಂಡೆ ಮಂಡೆ ಲಾಯರ್ ಆಗಿದ್ದೆ. ಅರ್ಧ ರಾಜಕಾರಣ, ಅರ್ಧ ಲಾಯರ್ ಕೆಲಸ ಆಗಿತ್ತು. ಬೆಳಗ್ಗೆ ತಾಲೂಕು ಆಫೀಸ್‍ಗೆ ಹೋಗೋದು, ಮಧ್ಯಾಹ್ನ ಲಾಯರ್ ಕೆಲಸ ಮಾಡೋದು ಆಗಿತ್ತು. ನಾನು ಲಾಯರ್ ಆಗಿದ್ದಿದ್ದರೆ ಜೀವನ ಬೇರೆಯ ರೀತಿಯೇ ಆಗಿರುತ್ತಿತ್ತು ಎಂದು ಹೇಳಿದಾಗ ಇಡೀ ಸದನ ನಗೆಗಡಲಲ್ಲಿ ತೇಲಿತು.

    ಈ ನಡುವೆ ಸಂಡೆಮಂಡೆ ಲಾಯರ್ ಎಂಬ ಪದ ಬಳಕೆಗೆ ಮಾಜಿ ಸ್ಪೀಕರ್ ಬೋಪಯ್ಯ ಆಕ್ಷೇಪ ವ್ಯಕ್ತಪಡಿಸಿದರು. ಲಾಯರ್ ವೃತ್ತಿ ಗೌರವಯುತ ವೃತ್ತಿ. ಹಾಗೆ ಹೇಳಬಾರದು ಎಂದರು. ಇದು ನನಗೆ ನಾನೇ ಹೇಳಿಕೊಂಡಿದ್ದು. ನಾನು ಸಂಡೆಮಂಡೆ ಲಾಯರ್ರೇ ಆಗಿದ್ದು. ಈಗ ಲಾಯರ್ ಆಗಿ ಉಳಿದಿಲ್ಲ, ಮುಖ್ಯಮಂತ್ರಿ ಆದ ಮೇಲೆ ಆ ಸನ್ನದನ್ನೇ ರದ್ದು ಮಾಡಿಸಿದ್ದೆ. ಆದರೂ ಅವರ ಖುಷಿಗಾಗಿ ಸಂಡೆ ಮಂಡೆ ಲಾಯರ್ ಎಂಬ ಶಬ್ದ ಕಡತದಿಂದ ತೆಗೆದು ಹಾಕಿ ಎಂದು ಸಿದ್ದರಾಮಯ್ಯ ಮಾಡಿದರು.

    ಇದೇ ವೇಳೆ ಬೋಪಯ್ಯ ಮಾತಿಗೆ ಬಿ.ಸಿ.ಪಾಟೀಲ್ ಧ್ವನಿಗೂಡಿಸುತ್ತಿದ್ದಾಗ ಏಯ್, ನೀನು ಲಾಯರ್ ಅಲ್ಲ. ಸುಮ್ನಿರಪ್ಪ ನೀನು ಪೊಲೀಸ್ ಅಷ್ಟೇ, ಲಾಯರ್ ಅಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಸರ್, ನಾನು ಪೊಲೀಸ್ ಆಗಿದ್ದೆ. ಆಗ ನನಗೆ ಲಾಯರ್ ಗಳ ಒಡನಾಟ ಇತ್ತು. ಸಂಡೆ ಲಾಯರ್ ಅಂತ ಮಾತ್ರ ಹೇಳುತ್ತಾರೆ. ಆದರೆ ಸಂಡೇ ಮಂಡೇ ಲಾಯರ್ ಅಂತ ಹೇಳಲ್ಲ ಎಂದು ಬಿ.ಸಿ.ಪಾಟೀಲ್ ಹೇಳಿದರು.

  • ಕೃಷಿ ಸಚಿವರೇ ತೆವಲಿಗೆ ಮಾತಾಡಬೇಡಿ: ಎಚ್‍ಡಿಕೆ ಕಿಡಿ

    ಕೃಷಿ ಸಚಿವರೇ ತೆವಲಿಗೆ ಮಾತಾಡಬೇಡಿ: ಎಚ್‍ಡಿಕೆ ಕಿಡಿ

    ಮೈಸೂರು: ಕೃಷಿ ಸಚಿವರೇ ನಾಲಿಗೆ ಇದೆ ಅಂತ ತೆವಲಿಗೆ ಮಾತನಾಡಬೇಡಿ. ಸುಮ್ಮನೆ ಸುಳ್ಳು ಹೇಳಿಕೊಂಡು ಓಡಾಡಬೇಡಿ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ವಿರುದ್ಧ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಗರಂ ಆಗಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಬಿ.ಸಿ.ಪಾಟೀಲ್‌ಗೆ ಸಾಲ ಮನ್ನದ ಬಗ್ಗೆ ಮಾಹಿತಿಯೇ ಇಲ್ಲ. ಸಾಲ ಮನ್ನದ ಬಗ್ಗೆ ಆ ಕೃಷಿ ಸಚಿವರಿಗೆ ವಿಷಯವೇ ಗೊತ್ತಿಲ್ಲ ಅನ್ನಿಸುತ್ತೆ. ನಾನು ಅಧಿಕಾರದಿಂದ ಇಳಿಯುವಾಗ ಬರಿ ಘೋಷಣೆ ಮಾಡಿಲ್ಲ. ಬದಲಿಗೆ 25 ಸಾವಿರ ಕೋಟಿ ಹಣ ಹೊಂದಿಸಿ ಅಧಿಕಾರದಿಂದ ಇಳಿದಿದ್ದೇನೆ. ನಾನು ಹೊಂದಿಸಿಕೊಟ್ಟಿದ್ದ 800 ಕೋಟಿ ಹಣವನ್ನ ಇನ್ನೂ ಬಿಡುಗಡೆ ಮಾಡದೆ ಹಾಗೆಯೇ ಇಟ್ಟುಕೊಂಡಿದ್ದಾರೆ ಎಂದು ಕಿಡಿಕಾರಿದರು.

    ನಾವು ರೈತರಿಂದ ಸರಳ ದಾಖಲೆ ಕೇಳಿದ್ವಿ. ರೈತರ ದಾಖಲೆ ತಪ್ಪಿದ್ದರೆ ಸರಿಪಡಿಸೋದು ಇಲಾಖೆ ಕೆಲಸ. ಅದನ್ನು ತೆವಲಿಗೆ ಮಾತನಾಡುವುದು, ಸುಳ್ಳು ಹೇಳಿಕೊಂಡು ಓಡಾಡೋದು ಬೇಡ ಎಂದರು.

    ಇದೇ ವೇಳೆ ಬಿಜೆಪಿಯಿಂದ ಶಾದಿಭಾಗ್ಯ ಯೋಜನೆಗೆ ತಿಲಾಂಜಲಿ ಇಟ್ಟ ಬಗ್ಗೆ ಕಿಡಿಕಾರಿದ್ದಾರೆ. ಬಿಜೆಪಿ ಸರ್ಕಾರ ಶಾದಿ ಭಾಗ್ಯ ಒಂದೆ ಅಲ್ಲ ರಾಜ್ಯದ ಎಲ್ಲ ಅಭಿವೃದ್ಧಿ ಕಾರ್ಯ ಸ್ಥಗಿತ ಮಾಡಿದೆ. ಬೆಳಗಾವಿಯಲ್ಲಿ ಬಿಜೆಪಿ ಶಾಸಕರೇ ನಮ್ಮ ಕ್ಷೇತ್ರಕ್ಕೆ ಅನುದಾನ ಬಂದಿಲ್ಲ ಅಂತ ಗಲಾಟೆ ಮಾಡಿದ್ದಾರೆ. ಅಲ್ಲದೇ ಮಂತ್ರಿಯನ್ನ ಕೂರಿಸಿಕೊಂಡು ಅನುದಾನ ಕೊಡಿ ಅಂತ ಕೇಳಿದ್ದಾರೆ. ಸಿಎಂ ನೆರೆ ಹಾವಳಿಯ ಜನರಿಗೆ ಹಣ ಬಿಡುಗಡೆ ಮಾಡಿ ಅಂತ ಹೇಳಿದ್ದಾರೆ. ಆದರೂ ಅಧಿಕಾರಿಗಳು ಬಿಡುಗಡೆ ಮಾಡಿಲ್ಲ ಅಂತ ಬಿಜೆಪಿ ಶಾಸಕರೇ ಆರೋಪಿಸಿದ್ದಾರೆ. ಇದು ಸದ್ಯದ ಬಿಜೆಪಿ ಸರ್ಕಾರದ ಸ್ಥಿತಿ ಎಂದು ಹೇಳಿದರು.

  • ‘ಕೈ’ ಪಕ್ಷ ಬಿಟ್ಟೇವಿ, ಹಾಗಾಗಿ ಯಾರಿಗೂ ಕೈ ಕೊಡಲ್ಲ: ಬಿ.ಸಿ.ಪಾಟೀಲ್

    ‘ಕೈ’ ಪಕ್ಷ ಬಿಟ್ಟೇವಿ, ಹಾಗಾಗಿ ಯಾರಿಗೂ ಕೈ ಕೊಡಲ್ಲ: ಬಿ.ಸಿ.ಪಾಟೀಲ್

    – ಪರಿಷತ್ ಕಲಾಪದಲ್ಲೂ ಕೊರೊನಾ ಬಗ್ಗೆ ಬಿಸಿ ಬಿಸಿ ಚರ್ಚೆ

    ಬೆಂಗಳೂರು: ವಿಧಾನ ಪರಿಷತ್ ಕಲಾಪದಲ್ಲಿ ಕೊರೊನಾ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯಿತು. ಈ ವಿಚಾರದಲ್ಲಿಯೂ ಆಡಳಿತ ಮತ್ತು ವಿಪಕ್ಷಗಳ ಸದಸ್ಯರು ಪರಸ್ಪರ ಕಾಲೆಳೆದುಕೊಳ್ಳುವ ಕೆಲಸ ಮಾಡಿದರು.

    ಮಾತು ಆರಂಭಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್, ಕೊರೊನಾ ವೈರಸ್ ವಿವಿಧ ದೇಶಗಳಿಗೆ ಹರಡಿ ಆತಂಕ ಹೆಚ್ಚಿಸಿದೆ. ಅದು ವಿರೋಧ ಪಕ್ಷ, ಆಡಳಿತ ಪಕ್ಷ ಎಂದು ಭೇದಭಾವ ಮಾಡುವುದಿಲ್ಲ. ಆದರೆ ನಿಮಗೆ ಸ್ವಲ್ಪ ಜಾಸ್ತಿ ಆತಂಕ ಇದೆ ಎಂದು ವಿಪಕ್ಷ ನಾಯಕರ ಕಾಲೆಳೆದರು.

    ಈ ಮಧ್ಯೆ ಎದ್ದು ನಿಂತ ಎಸ್.ಆರ್.ಪಾಟೀಲ್ ಅವರು, ನಿನ್ನೆ ಪ್ರಭಾಕರ್ ಕೋರೆ ಅವರು ಸಿಕ್ಕಿದ್ರು. ಅವರಿಗೆ ಶೇಕ್‍ಹ್ಯಾಂಡ್ ಮಾಡೋದಕ್ಕೆ ಹೋದ್ರೆ ಅವರು, ಬೇಡ ಬೇಡ ಎಂದು ಹೋಗಿ ಬಿಟ್ಟರು. ಅದಕ್ಕೆ ನಾನು, ಯಾಕ್ರಿ ಎಂದು ಪ್ರಶ್ನಿಸಿದೆ. ಆಗ ಕೋರೆ, ಕೊರೊನಾ ಬಂದ್ರೆ ಏನ್ ಮಾಡ್ಲಿ ಅಂತ ಹೇಳಿದರು. ಹೀಗಾಗಿ ನಿಮಗೆ ಕೊರೊನಾ ಆಂತಕ ಹೆಚ್ಚಾಗಿದೆ ಎಂದು ಬಿ.ಸಿ.ಪಾಟೀಲ್ ಅವರಿಗೆ ಟಾಂಗ್ ಕೊಟ್ಟರು.

    ಸಚಿವನಾದ ಬಳಿಕ ನಾನು ಸ್ವಕ್ಷೇತ್ರಕ್ಕೆ ಭೇಟಿ ನೀಡಿದ್ದಾಗ ಜನರು ಕೈಕುಲುಕಿ ಅಭಿನಂದನೆ ಸಲ್ಲಿಸಲು ಬರುತ್ತಿದ್ದರು. ಆದರೆ ನಾನು ಕೈಮುಗಿದು ಅವರನ್ನು ಮಾತನಾಡಿಸುತ್ತಿದ್ದೆ. ನನಗೆ ಕೊರೊನಾ ಭೀತಿ ಇತ್ತು. ಹೀಗಾಗಿ ಜನರು ತಪ್ಪು ತಿಳಿಯಬಾರದು ಎನ್ನುವ ಕಾರಣಕ್ಕೆ, ನಾನು ‘ಕೈ’ ಪಕ್ಷ ಬಿಟ್ಟಿದ್ದೇನೆ. ಹೀಗಾಗಿ ಕೈ ಕೊಡುವುದಿಲ್ಲ ಅಂತ ಹೇಳಿದ್ದೆ ಎಂದು ಸದನದಲ್ಲಿ ನಗೆ ಹರಿಸಿದರು.

    ಈ ವೇಳೆ ವಿಪಕ್ಷದ ಸದಸ್ಯರೊಬ್ಬರು ‘ಕೈ’ ಪಕ್ಷಕ್ಕೆ ಕೈಕೊಟ್ಟು ಹೋದೆ ಅಂತ ಹೇಳಿ ಎಂದು ಕಾಲೆಳೆದರು. ಆಗ ಬಿ.ಸಿ.ಪಾಟೀಲ್, ನಾನು ಕೈಕೊಟ್ಟು ಹೋಗಿಲ್ಲ. ರಾಜೀನಾಮೆ ಕೊಟ್ಟು, ಜನಾದೇಶ ಪಡೆದು ಬಂದಿದ್ದೇವೆ ಎಂದರು. ಈ ಮಧ್ಯೆ ಧ್ವನಿಗೂಡಿಸಿದ ತೇಜಸ್ವಿನಿ ರಮೇಶ್, ಕೈ ಬಿಟ್ಟವರು ಯಾಕೆ ಕೈ ಕೊಟ್ಟಿದ್ದರ ಬಗ್ಗೆ ಮಾತನಾಡುತ್ತಿದ್ದೀರಿ ಎಂದು ಹೇಳಿದರು. ತಕ್ಷಣವೇ ಧ್ವನಿ ಏರಿಸಿದ ಬಿ.ಸಿ.ಪಾಟೀಲ್, ನೀವು ಯಾರಿಗೆ ಹೇಗೆ ಕೈಕೊಟ್ರಿ ಅಂತ ಯೋಚನೆ ಮಾಡಿ ಎಂದರು.