ಹಾವೇರಿ: ಕೃಷಿ ಸಚಿವರಾದ ಬಿ.ಸಿ ಪಾಟೀಲರು ಮತ್ತು ಸಹಕಾರಿ ಸಚಿವ ಎಸ್.ಟಿ ಸೋಮಶೇಖರ್ ಅವರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಸ್ವಗ್ರಾಮ ಯಲವಾಳ ಗ್ರಾಮದ ಕೃಷಿ ಸಚಿವರ ತೋಟದಲ್ಲಿ ಯೋಗ ದಿನಾಚರಣೆ ಪ್ರಯುಕ್ತ ಯೋಗ ದಿನಾಚರಣೆಯಲ್ಲಿ ಅಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೃಷಿ ಸಚಿವ ಬಿ.ಸಿ.ಪಾಟೀಲ್, ಯೋಗ ಎನ್ನುವುದು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ನೆಮ್ಮದಿಯನ್ನೂ ನೀಡಬಲ್ಲದು. ಋಷಿಮುನಿಗಳು ಈ ಹಿಂದೆ ಆಚರಿಸಿ ಅನುಸರಿಸುತ್ತಿದ್ದ ಯೋಗವನ್ನು ಇಂದಿಗೂ ನಮ್ಮ ದೇಶದಲ್ಲಿ ಪಾರಂಪರಿಕವಾಗಿ ಮುಂದುವರಿಸಿಕೊಂಡು ಬರಲಾಗುತ್ತಿದೆ. ಯೋಗ ದಿನಾಚರಣೆಯಂದು ಮಾತ್ರ ಯೋಗ ಮಾಡದೇ ಪ್ರತಿನಿತ್ಯ ವ್ಯಾಯಾಮ ಯೋಗ ಮಾಡುವುದು ಒಳ್ಳೆಯದು. ಯೋಗ ಎಲ್ಲರ ದೈನಂದಿನ ಭಾಗವಾಗಬೇಕು ಎಂದು ಕರೆ ನೀಡಿದರು.
ಯೋಗಕ್ಕೆ ತನ್ನದೇ ಆದ ಇತಿಹಾಸದ ಜೊತೆಗೂ ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಯೋಗವನ್ನು ಗುರುಗಳಿಂದ ಯೋಗ ಶಾಲೆಯಲ್ಲಿ ಕಲಿಯಬಹುದು. ಕೈಬೆರಳಲ್ಲಿರುವ ಮೊಬೈಲ್‍ನಲ್ಲಿ ಯೋಗ ಕಲಿಸುವ ಅದೆಷ್ಟೋ ಯೋಗದ ವಿಡಿಯೋ ಚಾನೆಲ್‍ಗಳು ಆ್ಯಪ್‍ಗಳು ಸಹ ಲಭ್ಯ. ನಮ್ಮ ನಮ್ಮ ದೇಹಕ್ಕೆ ಅನುಕೂಲಕರವಾಗುವಂತೆ ಆದಷ್ಟು ಮಾರ್ಗದರ್ಶನ ಪಡೆದೇ ಯೋಗವನ್ನು ಅನುಸರಿಸುವುದು ಉತ್ತಮ ಎಂದು ಸಚಿವರು ಸಲಹೆಯಿತ್ತರು.
ಕೊಪ್ಪಳ: ಬಿಜೆಪಿ ನಂಬಿಕೆ ದ್ರೋಹ ಮಾಡುವ ಪಕ್ಷವಲ್ಲ. ಮೂವರಿಗೆ ಟಿಕೆಟ್ ನೀಡುತ್ತೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.
ಇಂದು ಕೊಪ್ಪಳ ಕುಷ್ಟಗಿಯಲ್ಲಿ ಡಿಸಿಎಂ ಗೋವಿಂದ್ ಕಾರಜೋಳರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಟಿಬಿ ನಾಗರಾಜ್, ವಿಶ್ವನಾಥ್, ಆರ್ ಶಂಕರ್ ಗೆ ವಿಧಾನ ಪರಿಷತ್ ಟಿಕೆಟ್ ನೀಡಬೇಕೆಂದು ನಾವು ಒತ್ತಾಯ ಮಾಡಿದ್ದೇವೆ ಎಂದರು.
ತಮ್ಮ ಸ್ಥಾನಗಳನ್ನು ತ್ಯಾಗ ಮಾಡಿ, ಸಮ್ಮಿಶ್ರ ಸರ್ಕಾರ ಕೆಡವಿ ಬಂದ ಈ ಮೂವರಿಗೆ ಟಿಕೆಟ್ ನೀಡಬೇಕೆಂದು ಒತ್ತಾಯ ಮಾಡಿದ್ದೇವೆ. ಪಕ್ಷ ಟಿಕೆಟ್ ನೀಡುತ್ತೆ ಎಂಬ ವಿಶ್ವಾಸವಿದೆ. ಬಿಜೆಪಿ ಪಕ್ಷ ನಂಬಿಕೆ ದ್ರೋಹ ಮಾಡೋಪಕ್ಷ ಅಲ್ಲ ಅವರಿಗೆ ಟಿಕೆಟ್ ನೀಡುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪನವರು ಕೂಡ ಮಾತು ಕೊಟ್ಟಿದ್ದಾರೆ. ಮಾತು ಕೊಟ್ಟಂತೆ ಅವರು ನಡೆದುಕೊಳ್ಳುತ್ತಾರೆ. ಮೂವರಿಗೆ ಟಿಕೆಟ್ ನೀಡಲು ಜಾತಿ ಅಡ್ಡ ಬರುತ್ತೆ ಎಂದು ಹೇಳಲಾಗುತ್ತಿದ್ದು ಅದಕ್ಕೆ ಜಾತಿ ಅಡ್ಡ ಬರುವ ವಿಚಾರವಾಗಿ ಪಕ್ಷದಲ್ಲಿ ಯಾರೂ ಪ್ರಸ್ತಾಪ ಮಾಡಿಲ್ಲ ಎಂದರು.
ಹಾವೇರಿ: ನಕಲಿ ಬಿತ್ತನೆ ಬೀಜ ಸಂಗ್ರಹ ಮಾಡಿ ಇಟ್ಟಿದ್ದವರ ಮೇಲೆ ಕ್ರಮ ಕೈಗೊಳ್ಳದಂತೆ ಕೆಲವು ರಾಜಕಾರಣಿಗಳು ಮತ್ತು ಜನಪ್ರತಿನಿಧಿಗಳು ಒತ್ತಡ ಹೇರುತ್ತಿದ್ದಾರೆ. ಆದರೆ ನಾನು ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ. ಒತ್ತಡಕ್ಕೆ ಮಣಿದರೆ ರೈತರ ಪರಿಸ್ಥಿತಿ ತಾಯಿಯೇ ಮಗನಿಗೆ ವಿಷ ಹಾಕಿದಂತಾಗುತ್ತದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಹಿರೇಕೆರೂರು ಪಟ್ಟಣದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಅವರು, ಕಳೆದ ವಾರ ಹಾವೇರಿ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ನಕಲಿ ಬಿತ್ತನೆ ಬೀಜ ಸಂಗ್ರಹ ಮಾಡಿದ್ದ ಅಡ್ಡೆಗಳ ಮೇಲೆ ದಾಳಿ ಮಾಡಿದ್ದರು ಎಂದು ತಿಳಿಸಿದ್ದಾರೆ.
ದಾಳಿ ವೇಳೆ ಒಂದು 1 ಲಕ್ಷದ 685 ಕ್ವಿಂಟಲ್ ನಕಲಿ ಬಿತ್ತನೆ ಬೀಜವನ್ನು ಜಪ್ತಿ ಮಾಡಲಾಗಿದೆ. ಆದರೆ ಪೊಲೀಸ್ ಇಲಾಖೆ ಈವರೆಗೂ ಒಬ್ಬ ಆರೋಪಿಯನ್ನೂ ಬಂಧನ ಮಾಡಿಲ್ಲ. ಇದು ಬೇಸರದ ಸಂಗತಿ. ನಕಲಿ ಬೀಜ ಸಂಗ್ರಹ ಮಾಡಿದ್ದವರು ಮತ್ತು ನಕಲಿ ಬೀಜ ಮಾರಾಟ ಮಾಡುತ್ತಿದ್ದವರನ್ನು ಬಂಧಿಸಿ ಜೈಲಿಗೆ ಅಟ್ಟುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದೇನೆ ಎಂದು ಹೇಳಿದರು.
ನಕಲಿ ಬಿತ್ತನೆ ಬೀಜ ತಯಾರಿಸುತ್ತಿರುವ ಮೂಲವನ್ನು ಪತ್ತೆ ಮಾಡಿ ರೈತರಿಗೆ ಆಗುತ್ತಿರುವ ದೊಡ್ಡ ಅನ್ಯಾಯವನ್ನು ತಪ್ಪಿಸುವಂತೆ ಗೃಹ ಸಚಿವರು ಮತ್ತು ಪೊಲೀಸ್ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದೇನೆ. ಅಲ್ಲದೇ ಅವಧಿ ಮೀರಿದ ರಸಗೊಬ್ಬರ ಮಾರಾಟ ಮಾಡೋದು ಕಂಡುಬಂದರೆ ಅಂಥಾ ಅಂಗಡಿಗಳ ಲೈಸನ್ಸ್ ರದ್ದು ಮಾಡುವುದಾಗಿ ತಿಳಿಸಿದರು. ಪ್ರಸಕ್ತ ವರ್ಷ ರೈತರಿಗೆ ಬೇಕಾದ ಬಿತ್ತನೆ ಬೀಜ ಮತ್ತು ರಸಗೊಬ್ಬರದ ಕೊರತೆ ಆಗದಂತೆ ಕ್ರಮ ಕೈಗೊಂಡಿದ್ದೇವೆ ಎಂದು ಸಚಿವ ಪಾಟೀಲ್ ಹೇಳಿದರು.
– ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಥರ್ಮಲ್ ಸ್ಕ್ಯಾನರ್ ನೀಡಿ
– 263 ಜನರ ಸ್ಯಾಂಪಲ್ ಪರೀಕ್ಷೆ, ಎಲ್ಲವೂ ನೆಗೆಟಿವ್
– ಜಿಲ್ಲೆಯಲ್ಲಿ ಈ ವರೆಗೆ ಯಾವುದೇ ಕೊರೊನಾ ಪ್ರಕರಣವಿಲ್ಲ
ಕೊಪ್ಪಳ: ಗ್ರಾಮೀಣ ಭಾಗದಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ಮನೆಗೆ ತೆರಳಿ ಥರ್ಮಲ್ ಸ್ಕ್ಯಾನರ್ ಬಳಸಿ ಪ್ರತಿಯೊಬ್ಬರ ಆರೋಗ್ಯ ಪರೀಕ್ಷಿಸಲು ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ನಂತರ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈ ವರೆಗೆ ಕೊರೊನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿಲ್ಲ. ಆದರೂ ಸೋಂಕು ಪತ್ತೆ ಹಚ್ಚಲು ಎಲ್ಲರನ್ನೂ ಕಡ್ಡಾಯವಾಗಿ ಪರೀಕ್ಷೆ ನಡೆಸಬೇಕೆಂದು ಸರ್ಕಾರ ಸೂಚಿಸಿದ್ದು, ಗ್ರಾಮೀಣ ಭಾಗದಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ಮನೆಗೆ ತೆರಳಿ ಕುಟುಂಬ ಸದಸ್ಯರ ಆರೋಗ್ಯ ತಪಾಸಣೆ ಮಾಡಬೇಕು. ಅವರಿಗೆ ಅವಶ್ಯವಾಗಿ ಬೇಕಾದ ಥರ್ಮಲ್ ಸ್ಕ್ಯಾನರ್ ಗಳನ್ನು ಪ್ರತಿ ಪಂಚಾಯಿತಿಗೆ ಎರಡರಂತೆ ಒದಗಿಸಬೇಕು ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೂಪಿಸಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ. ಜಿಲ್ಲಾಸ್ಪತ್ರೆಯನ್ನು ಕೋವಿಡ್ 19 ಆಸ್ಪತ್ರೆಯಾಗಿ ಮಾರ್ಪಡಿಸಲಾಗಿದೆ. ಹೀಗಾಗಿ ಸಾಮಾನ್ಯ ಖಾಯಿಲೆಗಳಿಗೆ ಚಿಕಿತ್ಸೆ ನೀಡಲು ಪರ್ಯಾಯವಾಗಿ ವ್ಯವಸ್ಥೆ ಮಾಡಲಾಗಿರುವ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಅಗತ್ಯ ಚಿಕಿತ್ಸೆ ಸಿಗುವಂತೆ ವ್ಯವಸ್ಥೆ ಮಾಡಿ. ಔಷಧ ಮತ್ತು ಇತರ ವೈದ್ಯಕೀಯ ಸೌಲಭ್ಯಗಳನ್ನು ಸೂಕ್ತ ರೀತಿಯಲ್ಲಿ ಒದಗಿಸಿ. ಜಿಲ್ಲೆಯಲ್ಲಿನ ಸರ್ಕಾರಿ ವೈದ್ಯರನ್ನು ಕೋವಿಡ್ ಚಿಕಿತ್ಸೆಗೆಂದು ನಿಯೋಜಿಸಿರುವದರಿಂದ ಪರ್ಯಾಯ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಾಗಬಹುದು. ಆಸ್ಪತ್ರೆಗಳಲ್ಲಿ ಅಗತ್ಯ ಸಂಖ್ಯೆಯ ವೈದ್ಯರನ್ನು ಪಾಳಿ ಪ್ರಕಾರ ನಿಯೋಜಿಸಿ ರೋಗಿಗಳಿಗೆ ತೊಂದರೆ ಆಗದಂತೆ ಕ್ರಮ ವಹಿಸಿ. ಕೋವಿಡ್ ಸೋಂಕಿತರು ಪತ್ತೆಯಾದಲ್ಲಿ ಅವರ ಚಿಕಿತ್ಸೆಗೆ ಬೇಕಾದ ಎಲ್ಲ ವೈದ್ಯಕೀಯ ಸೌಲಭ್ಯಗಳನ್ನು ಸಿದ್ಧವಾಗಿಟ್ಟುಕೊಳ್ಳಿ. ಅಗತ್ಯವಿದ್ದಲ್ಲಿ ವೈದ್ಯರನ್ನು ನೇಮಕ ಮಾಡಿಕೊಳ್ಳಿ. ಕೊರೊನಾ ಚಿಕಿತ್ಸೆಗೆ ತಜ್ಞರಿಂದ ವೈದ್ಯರಿಗೆ ಸೂಕ್ತ ತರಬೇತಿ ಕೊಡಿಸಿ. ವೆಂಟಿಲೇಟರ್‍ಗಳ ನಿರ್ವಹಣೆ ಕುರಿತು ಸಿಬ್ಬಂದಿಗೆ ಅಗತ್ಯ ಮಾರ್ಗದರ್ಶನ ನೀಡಿ ಚಿಕಿತ್ಸೆಗೆ ಸಿದ್ಧಗೊಳಿಸಿ. ಪಿಪಿಇ ಕಿಟ್, ಮಾಸ್ಕ್ ಸೇರಿದಂತೆ ಚಿಕಿತ್ಸೆ ಹಾಗೂ ವೈದ್ಯರ ಸುರಕ್ಷತೆಗಾಗಿ ಅಗತ್ಯವಿರುವ ಎಲ್ಲ ವೈದ್ಯಕೀಯ ಸಲಕರಣೆಗಳನ್ನು ಖರೀದಿಸಿ ಎಂದರು.
ಜಿಲ್ಲೆಯ ತೋಟಗಾರಿಕೆ ಬೆಳೆಗಳನ್ನು ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಗೆ ರಫ್ತು ಮಾಡಲು ಕ್ರಮ ಕೈಗೊಂಡು ರೈತರಿಗೆ ಅನುಕೂಲ ಮಾಡಿಕೊಡಿ. ಜಿಲ್ಲೆಯ ಗಡಿ ಭಾಗಗಳಲ್ಲಿ ಸ್ಯಾನಿಟೈಸರ್ ಟನಲ್‍ಗಳನ್ನು ಸ್ಥಾಪಿಸಿ ಬೇರೆ ಜಿಲ್ಲೆ, ರಾಜ್ಯಗಳಿಂದ ಬರುವ ಸರಕು ಸಾಗಣೆ ವಾಹನಗಳ ಚಾಲಕರು ಮತ್ತಿತರರ ಆರೋಗ್ಯ ತಪಾಸಣೆಗೆ ಕ್ರಮ ಕೈಗೊಳ್ಳಿ. ಎಲ್ಲ ಚೆಕ್‍ಪೋಸ್ಟ್‍ಗಳಲ್ಲೂ ನಿಯಮ ಮೀರಿ ಯಾವ ವಾಹನಗಳನ್ನೂ ಬಿಡಬೇಡಿ. ವೈದ್ಯಕೀಯ ಚಿಕಿತ್ಸೆ ಸೇರಿದಂತೆ ತುರ್ತು ವಿಷಯಗಳಿಗಾಗಿ ಜಿಲ್ಲೆಯ ಗಡಿ ದಾಟಿ ಹೋಗಬೇಕಾದಾಗ ಅವರ ವಸ್ತು ಸ್ಥಿತಿಯನ್ನು ಪರಿಶೀಲಿಸಿ ಪಾಸ್ ನೀಡಿ ಎಂದು ತಿಳಿಸಿದರು.
ಜಿಲ್ಲೆಯ ಶಾಸಕರು ಶಿಫಾರಸ್ಸು ಮಾಡಿರುವ ಪ್ರಕರಣಗಳಲ್ಲಿ ಅವಶ್ಯಕತೆಯನ್ನು ಪರಿಗಣಿಸಿ ಮಾನವೀಯತೆ ಆಧಾರದಲ್ಲಿ (ಅತ್ಯಂತ ತುರ್ತು ಇರುವ ಪ್ರಕರಣಗಳಲ್ಲಿ) ಪಾಸ್‍ಗಳನ್ನು ಒದಗಿಸಿ. ಜಿಲ್ಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಈಗಾಗಲೇ ಮನೆ ಮನೆಗೆ ತೆರಳಿ ದಿನಸಿ ಸೇರಿದಂತೆ ಅಗತ್ಯ ವಸ್ತುಗಳನ್ನು ನೀಡಲಾಗುತ್ತಿದೆ. ಅದರೊಂದಿಗೆ ದಿನಸಿ ಅಂಗಡಿಗಳನ್ನು ತೆರೆದಿಡುವ ಸಮಯವನ್ನು ವಿಸ್ತರಿಸಿ. ಅಗತ್ಯವಿದ್ದವರು ದಿನಸಿ ಅಂಗಡಿಗಳಿಂದಲೇ ಖರೀದಿಸಲಿ. ಈಗಾಗಲೇ ಪಡಿತರ ಚೀಟಿ ಹೊಂದಿರುವವರಿಗೆ ಹಾಗೂ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದವರಿಗೆ ಸರ್ಕಾರದಿಂದ ಪಡಿತರ ನೀಡಲಾಗುತ್ತಿದೆ. ಪಡಿತರ ಚೀಟಿ ಇಲ್ಲದವರು ಹಾಗೂ ಅರ್ಜಿ ಸಲ್ಲಿಸದವರಿಗೆ ದಾನಿಗಳಿಂದ ಪಡೆದ ಅಗತ್ಯ ಸಾಮಗ್ರಿಗಳನ್ನು ಒದಗಿಸಲಾಗುತ್ತಿದೆ. ಬೇರೆ ರಾಜ್ಯದ ವಲಸೆ ಕಾರ್ಮಿಕರಿಗೆ ಜಿಲ್ಲೆಯಲ್ಲಿ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಿ ವೈದ್ಯಕೀಯ ಸೇರಿದಂತೆ ಎಲ್ಲ ಅಗತ್ಯ ಸೌಲಭ್ಯಗಳನ್ನು ನಿಡಲಾಗುತ್ತಿದೆ. ಏಪ್ರಿಲ್ 20ರ ನಂತರ ಲಾಕ್‍ಡೌನ್ ಕುರಿತು ಹೊಸ ನಿಯಮಾವಳಿಗಳು ಬರುವ ಸಾಧ್ಯತೆ ಇದ್ದು, ಅವುಗಳ ಆಧಾರದಲ್ಲಿ ವಲಸೆ ಕಾರ್ಮಿಕರನ್ನು ಅವರ ರಾಜ್ಯಗಳಿಗೆ ಕಳುಹಿಸಿಕೊಡುವ ಬಗ್ಗೆ, ಜಿಲ್ಲೆಯಲ್ಲಿ ಲಾಕ್‍ಡೌನ್ ನಿಯಮಗಳಲ್ಲಿ ಯಾವ ವಿಷಯಗಳಲ್ಲಿ ವಿನಾಯಿತಿ ನೀಡವ ಸಾಧ್ಯತೆ ಕುರಿತು ಪರಿಶೀಲಿಸಿ ನಿರ್ಧರಿಸೋಣ ಎಂದರು.
ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಮಾತನಾಡಿ, ಕೋವಿಡ್-19 ಸೋಂಕಿನ ಕುರಿತಂತೆ ಈ ವರೆಗೆ 263 ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಅವರಲ್ಲಿ 4 ಜನರು ವಿದೇಶ ಪ್ರಯಾಣದ ಹಿನ್ನೆಲೆಯುಳ್ಳವರು, 25 ಜನ ತಬ್ಲೀಘಿ ಜಮಾತ್‍ಗೆ ಸಂಬಂಧಿಸಿದವರು, ರಾಜಸ್ಥಾನಕ್ಕೆ ತೆರಳಿದ್ದ ಕಾರಟಗಿಯ 8 ಜನರ ಸ್ಯಾಂಪಲ್‍ಗಳು ಸೇರಿದಂತೆ 263 ಜನರ ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಆ ಎಲ್ಲ ಸ್ಯಾಂಪಲ್‍ಗಳೂ ನೆಗೆಟಿವ್ ಎಂದು ವರದಿ ಬಂದಿವೆ. ಇನ್ನೂ ನಾಲ್ಕು ಸ್ಯಾಂಪಲ್‍ಗಳ ವರದಿ ಬರುವುದು ಬಾಕಿ ಇದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಪ್ರತಿ ಒಂದು ಲಕ್ಷ ಜನರಿಗೆ 19 ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿಲಾಗಿದೆ. ಸ್ಯಾಂಪಲ್‍ಗಳ ಪರೀಕ್ಷೆ ಪ್ರಮಾಣದಲ್ಲಿ ಜಿಲ್ಲೆಯು ರಾಜ್ಯದಲ್ಲಿ 13 ನೇ ಸ್ಥಾನದಲ್ಲಿದೆ. ಸರ್ಕಾರ ನೀಡಿದ ಸೂಚನೆಯಂತೆ ಏಪ್ರಿಲ್ 19 ರವರೆಗೆ ದಿನನಿತ್ಯ 100 ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ನಂತರ ನಿತ್ಯ 50 ರಂತೆ ಸ್ಯಾಂಪಲ್‍ಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ವಿವರಿಸಿದರು.
ದಾವಣಗೆರೆ: ಯಾರೂ ತಮ್ಮ ಬೆಳೆಗಳನ್ನು ನಾಶ ಪಡಿಸಿಕೊಳ್ಳಬಾರದು. ಬೆಳೆ ನಾಶ ಪಡಿಸಿಕೊಂಡವರಿಗೆ ಯಾವುದೇ ಕಾರಣಕ್ಕೂ ಸರ್ಕಾರ ಪರಿಹಾರ ಕೊಡುವುದಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಎಚ್ಚಸಿದ್ದಾರೆ.
ನಗರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೇವಲ ಪ್ರಕೃತಿ ವಿಕೋಪಕ್ಕೆ ನಾಶವಾದರೆ ಮಾತ್ರ ಪರಿಹಾರ ನೀಡುತ್ತೇವೆ. ರೈತರು ಯಾವು ಬೆಳೆದ ಬೆಳೆಗಳನ್ನು ಅವರೇ ನಾಶ ಪಡಿಸಿಕೊಂಡರೆ ಪರಿಹಾರ ನೀಡುವುದಿಲ್ಲ. ಹೂವಿನ ಬೆಳೆ ನಷ್ಟವಾದರೆ ಅದಕ್ಕೆ ಪರಿಹಾರದ ನೀಡುವ ಕುರಿತು ಸಿಎಂ ಜೊತೆ ಚರ್ಚಿಸುತ್ತೇನೆ. ದಾವಣಗೆರೆಯಲ್ಲಿ 2.58 ಕೋಟಿ ರೂ.ಗಳಷ್ಟು ಬೆಳೆ ನಷ್ಟವಾಗಿದೆ ಎಂದು ವರದಿ ಬಂದಿದೆ. ಸಿಎಂ ಎಲ್ಲ ಜಿಲ್ಲೆಗಳಿಂದ ವರದಿ ತರಿಸಿಕೊಂಡಿದ್ದಾರೆ ಎಂದರು.
ಹೂವು ಬೆಳೆದ ರೈತರು ಸಾಕಷ್ಟು ನಷ್ಟವನ್ನು ಅನುಭವಿಸಿದ್ದಾರೆ. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಕೃಷಿ ಚಟುವಟಿಕೆಗಳು ನಿಲ್ಲಬಾರದು. ಸರ್ಕಾರ ಕೂಡ ಎಲ್ಲ ಇಲಾಖೆಗೆ ನಿರ್ದೇಶನ ನೀಡಿದೆ. ನಾನೂ ಪ್ರತಿಯೊಂದು ಜಿಲ್ಲೆಗೂ ಹೋಗಿ ಪರಿಶೀಲನೆ ಮಾಡುತ್ತಿದ್ದೇನೆ. ಕೃಷಿ ಚಟುವಟಿಕೆಗಳಿಗೆ ಎಲ್ಲ ರೀತಿಯ ಬೆಂಬಲ ನೀಡುತ್ತೇವೆ. ದಾವಣಗೆರೆಯಲ್ಲಿ ಕೆಲ ಕಡೆ ಕಳಪೆ ಬೀಜಗಳನ್ನು ಮಾರಾಟ ಮಾಡುತ್ತಾರೆ ಎನ್ನುವುದು ತಿಳಿದು ಬಂದಿದೆ. ಕಳಪೆ ಬೀಜ ಮಾರಾಟ ಮಾಡುವವರು ಎಷ್ಟೇ ದೊಡ್ಡವರಾಗಿದ್ದರು ಅವರ ಮೇಲೆ ಕೇಸ್ ಮಾಡುತ್ತೇವೆ ಎಂದು ಭರವಸೆ ನೀಡಿದರು.
ದಾವಣಗೆರೆಯಲ್ಲಿ ಮೂರು ಕೊರೊನಾ ಪ್ರಕರಣಗಳು ನೆಗೆಟಿವ್ ಬಂದಿವೆ. 28 ದಿನ ಪೂರೈಸಿದರೆ ಕ್ಲೀನ್ ಜೋನ್‍ಗೆ ಬರುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ನಾವು ಯಾವುದೇ ಕಾರಣಕ್ಕೂ ಮೈಮರೆಯಬಾರದು ಎಂದರು.
ಚಿತ್ರದುರ್ಗ: ಮುಂಗಾರು ಹಂಗಾಮು ಪ್ರಾರಂಭವಾಗಿದೆ ಹೀಗಾಗಿ ರೈತರಿಗೆ ಉತ್ತಮ ಗುಣಮಟ್ಟದ ಶೇಂಗಾ ಬಿತ್ತನೆ ಬೀಜವನ್ನು ವಿತರಣೆ ಮಾಡಬೇಕು. ಯಾವುದೇ ಕಾರಣಕ್ಕೂ ಕಳಪೆ ಬಿತ್ತನೆ ಬೀಜ ಮಾರಾಟ ಮಾಡಬಾರದು. ಒಂದು ವೇಳೆ ಕಳಪೆ ಬೀಜ ಪೂರೈಕೆ ಮಾಡಿದರೆ ರೈತನ ಕೊಲೆ ಮಾಡಿದಂತಾಗುತ್ತದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಕೃಷಿ ಅಧಿಕಾರಿಗಳ ವಿರುದ್ಧ ಗುಡುಗಿದ್ದಾರೆ.
ಕೆಲ ರೈತರು ತಮ್ಮ ಜಮೀನಿನಲ್ಲಿ ಉಳುಮೆ ಮಾಡಲು ತಮ್ಮ ಪತ್ನಿಯ ತಾಳಿ ಮಾರಾಟ ಮಾಡಿ ಬೀಜ ಖರೀದಿಸಿ ಬೆಳೆ ಬೆಳೆದಿರುತ್ತಾರೆ. ಆದ್ದರಿಂದ ರೈತರಿಗೆ ಬಿತ್ತನೆ ಬೀಜ ವಿತರಣೆ ಮಾಡುವ ಮುನ್ನ ಬಿತ್ತನೆ ಬೀಜ ಪರೀಕ್ಷೆ ಮಾಡಬೇಕು. ಒಂದು ವೇಳೆ ಅದು ಕಳಪೆಯಾಗಿದ್ದರೆ ಅವುಗಳನ್ನು ತಿರಸ್ಕರಿಸಬೇಕು. ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ವಿತರಿಸುವಂತೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸಚಿವರು ಸೂಚಿಸಿದರು.
ಚಿತ್ರದುರ್ಗದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಲಾಕ್‍ಡೌನ್ ಹಿನ್ನೆಲೆ ಇಂದು ಕೃಷಿ ಉತ್ಪನ್ನಗಳ ಸರಕು ಸಾಗಾಣಿಕೆ, ಬೀಜ, ಗೊಬ್ಬರ ಸರಬರಾಜು ಸೇರಿದಂತೆ ಕೃಷಿ ಚಟುವಟಿಕೆಗಳ ಬಗ್ಗೆ ಕೈಗೊಂಡ ಅಗತ್ಯ ಕ್ರಮಗಳ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಲಾಗಿತ್ತು. ಈ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಚಿವರು ಮಾತನಾಡಿ, ಕೋವಿಡ್-19 ಲಾಕ್‍ಡೌನ್ ಹಿನ್ನೆಲೆ ಕೃಷಿ ಚಟುವಟಿಕೆ ನಡೆಸಲು ಯಾವುದೇ ನಿರ್ಬಂಧ ಇಲ್ಲ. ಏಪ್ರಿಲ್ 1ರಿಂದಲೇ ಎಲ್ಲಾ ನಿರ್ಬಂಧಗಳನ್ನು ತೆರವು ಮಾಡಲಾಗಿದೆ. ಇತರೆ ಜಿಲ್ಲೆಗಳು ಸೇರಿದಂತೆ ಅಂತರಾಜ್ಯಗಳಿಗೂ ಸಾಗಾಟ ನಡೆಯುತ್ತಿದೆ. ರೈತರಿಗೆ ಮುಂದಿನ ದಿನಗಳಲ್ಲಿ ಬೇಕಾಗಿರುವ ಬಿತ್ತನೆ ಬೀಜ, ಕೃಷಿ ಪರಿಕರಗಳು, ಇದಕ್ಕೆ ಪೂರಕವಾದ ರಿಪೇರಿ ಕೇಂದ್ರಗಳನ್ನು ತೆರೆಯಲು ಸೂಚಿಸಿದ್ದು, ಯಾವುದೇ ಅಡೆತಡೆಗಳಿರುವುದಿಲ್ಲ. ಉಳುಮೆ, ಕೊಯ್ಲ ನಡೆಯಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ರೈತರು ಕೃಷಿ ಚಟುವಟಿಕೆ ಕೈಗೊಳ್ಳಬಹುದು ಎಂದು ಹೇಳಿದರು.
ಇದೇ ವೇಳೆ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಣ್ಣು, ತರಕಾರಿಗಳು ಬೆಳೆಯಲಾಗುತ್ತಿದ್ದು, ಇವುಗಳನ್ನು ಹೆಚ್ಚಿನ ದಿನ ಸಂಗ್ರಹಿಸುವ ದೃಷ್ಠಿಯಿಂದ ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ಕೋಲ್ಡ್ ಸ್ಟೋರೆಜ್‍ಗಳು ಹಾಗೂ ಆಹಾರ ಸಂಸ್ಕರಣೆ ಘಟಕಗಳ ಅವಶ್ಯಕತೆ ಇದೆ. ಇದರಿಂದ ರೈತರಿಗೆ ತುಂಬಾ ಸಹಾಯಕವಾಗಲಿದೆ. ಈ ನಿಟ್ಟಿನಲ್ಲಿ ಕಂಟೈನರ್ ಗಳ ಮೂಲಕ ತಾತ್ಕಾಲಿಕವಾಗಿ ಎಲ್ಲಾ ಎಪಿಎಂಸಿಗಳಲ್ಲಿ ಕೋಲ್ಡ್ ಸ್ಟೋರೇಜ್ ಮಾಡಿದಲ್ಲಿ ಇಂತಹ ಸಂದರ್ಭದಲ್ಲಿ ರೈತರಿಗೆ, ಬೆಳೆಗಾರರಿಗೆ ಅನುಕೂಲವಾಗಲಿದೆ. ಈ ಬಗ್ಗೆ ಮಾರುಕಟ್ಟೆ ಸಚಿವರೊಂದಿಗೆ ಚರ್ಚಿಸಲಾಗಿದೆ ಎಂದು ಕೃಷಿ ಸಚಿವರು ತಿಳಿಸಿದರು.
ರೈತರು ಬೆಳೆದ ಯಾವುದೇ ಬೆಳೆ ಮಾರಾಟ, ತೋಟಗಾರಿಕೆ ಹಣ್ಣು-ತರಕಾರಿ ಮಾರಾಟಕ್ಕೆ ಅಡೆತಡೆಗಳಿರುವುದಿಲ್ಲ. ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಸಹ ಯಾವುದೇ ಅಡೆತಡೆಗಳಿರುವುದಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾ ಆಡಳಿತ ಜನರಲ್ಲಿ ವಿಶ್ವಾಸ ತುಂಬುವ ಕೆಲಸ ಮಾಡುವ ಮೂಲಕ ರೈತರಿಗೆ ನೆರವಾಗಲು ತಿಳಿಸಿದರು.
ಈ ಸಭೆಯಲ್ಲಿ ಶಾಸಕರಾದ ಜಿ.ಹೆಚ್ ತಿಪ್ಪಾರೆಡ್ಡಿ, ಎಂ. ಚಂದ್ರಪ್ಪ, ಗೂಳಿಹಟ್ಟಿ ಡಿ. ಶೇಖರ್, ಟಿ. ರಘುಮೂರ್ತಿ, ವಿಧಾನ ಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್, ಜಿಲ್ಲಾಧಿಕಾರಿ ವಿನೋತ್ ಪ್ರಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹೊನ್ನಾಂಬ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ರೈತ ಮುಖಂಡರು ಉಪಸ್ಥಿತರಿದ್ದರು.
– ರಾಜ್ಯದಲ್ಲಿ ಯಾವ್ದೇ ಕೋಮು ಗಲಭೆಗಳಿಲ್ಲ, ಈಗ ಇರೋದು ಕೊರೊನಾ ಮಾತ್ರ
– ಪಕ್ಷಭೇದ ಬಿಟ್ಟು ಕೊರೊನಾ ಯುದ್ಧದಲ್ಲಿ ಹೋರಾಡೋಣ
ಚಿತ್ರದುರ್ಗ: ಇದು ಯಾರೂ ರಾಜಕೀಯ ಮಾಡುವ ಸಮಯವಲ್ಲ. ಕೊರೊನಾ ಮಹಾಮಾರಿ ವಿರುದ್ಧ ಯುದ್ಧ ಮಾಡುವ ಸಮಯ. ಇಂತಹ ಸಂದಿಗ್ಧ ಕಾಲದಲ್ಲಿಯೂ ವಿರೋಧ ಪಕ್ಷದವರು ಅನಗತ್ಯ ಟೀಕೆ-ಟಿಪ್ಪಣಿ ಮಾಡುವುದು ಬೇಸರದ ಸಂಗತಿ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ವಿಷಾದ ವ್ಯಕ್ತಪಡಿಸಿದರು.
ಈ ಸರ್ಕಾರದಲ್ಲಿರುವ ಶಾಸಕರುಗಳ ಹೇಳಿಕೆಗಳು ಕೋಮು ಗಲಭೆಗಳನ್ನು ಸೃಷ್ಟಿಸುತ್ತಿವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಟೀಕಿಸಿದ್ದ ವಿಚಾರಕ್ಕೆ ಪ್ರತಿಕ್ರಿಯಿಸಿರು. ರಾಜ್ಯದಲ್ಲಿ ಎಲ್ಲೂ ಸಹ ಕೋಮು ಗಲಭೆಗಳ ಆತಂಕದ ಪರಿಸ್ಥಿತಿ ಇಲ್ಲ. ನಮ್ಮ ರಾಜ್ಯದಲ್ಲಿ ಈಗ ಇರೋದು ಕೇವಲ ಕೊರೊನಾ ಮಾತ್ರವೆಂದು ಮಾತಿನ ಚಾಟಿ ಬೀಸಿದರು.
ಇದೇ ವೇಳೆ ಈ ಸರ್ಕಾರ ಕೃಷಿ ಹಾಗೂ ರೈತರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ವಿಚಾರದಲ್ಲಿ ಕೇವಲ ಘೋಷಣೆಗಳಿಗೆ ಸೀಮಿತವಾಗಿದೆ ಎಂಬ ಡಿಕೆಶಿ ಟೀಕೆಗೆ ಬಿ.ಸಿ ಪಾಟೀಲ್ ಪ್ರತಿಕ್ರಿಯಿಸಿ, ಕೆಪಿಸಿಸಿಯ ಹಾಲಿ ಅಧ್ಯಕ್ಷರು ಅವರ ಸರ್ಕಾರ ಅಧಿಕಾರದಲ್ಲಿದ್ದಾಗ ಎಲ್ಲವನ್ನೂ ದೋಚಿಕೊಂಡು ಹೋಗಿದ್ದಾರೆ. ಆದರೂ ಬಿಜೆಪಿ ಸರ್ಕಾರ ಕಂಗೆಡದೆ ಪರಿಸ್ಥಿತಿಯನ್ನು ನಿಭಾಯಿಸುತ್ತಿದೆ ಎಂದು ತಿರುಗೇಟು ನೀಡಿದರು.
ಕೊರೊನಾ ವೈರಸ್ ಹಬ್ಬದಂತೆ ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಸಮರೋಪಾದಿ ಕಾರ್ಯ ಕೈಗೊಂಡಿವೆ. ಇಂಥ ಸಂದರ್ಭದಲ್ಲಿಯೂ ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗದಂತೆ ಪರಿಶ್ರಮವಹಿಸಲಾಗಿದೆ. ಬಡವರಿಗೆ ಹಾಲು, ಪಡಿತರ ಪೂರೈಕೆ ಮಾಡಲಾಗ್ತಿದೆ. ರೈತರು ಬೆಳೆದ ಪದಾರ್ಥಗಳನ್ನು ಮಾರುಕಟ್ಟೆಗೆ ಸರಬರಾಜು ಮಾಡಲು ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ ಎಂದು ವಿವರಿಸಿದರು.
ಹಾಗೆಯೇ ಗಂಗಾವತಿ ಭಾಗದಲ್ಲಿ ಪ್ರಾಕೃತಿಕ ವಿಕೋಪದಿಂದ ಆದ ಬೆಳೆ ನಷ್ಟಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸ್ಪಂದಿಸಿದ್ದಾರೆ. ಪರಿಹಾರ ಬಿಡುಗಡೆ ಮಾಡಿದ್ದಾರೆ. ಸಬ್ಸಿಡಿ ದರದಲ್ಲಿ ಬಿತ್ತನೆಬೀಜ, ರಸಗೊಬ್ಬರ ಲಭ್ಯವಾಗುವಂತೆ ಮಾಡಿದ್ದೇವೆ. ರಾಜ್ಯದ್ಯಂತ ಇವುಗಳ ಪೂರೈಕೆಗೆ ಕಿಂಚಿತ್ತೂ ತೊಂದರೆಯಾಗಿಲ್ಲ. ಕೃಷಿಯುತ್ಪನ್ನಗಳ ಸಾಗಣೆ, ಮಾರಾಟಕ್ಕೆ ಅಡ್ಡಿಯಾಗದಂತೆ ನೋಡಿಕೊಂಡಿದ್ದೇವೆ. ಅತ್ಯವಶ್ಯಕ ವಸ್ತುಗಳ ಪೂರೈಕೆಗೆ ತೊಂದರೆಯಾಗಲ್ಲ. ಹಾಲನ್ನು ಸರ್ಕಾರವೇ ಖರೀದಿಸಿ ಸಾರ್ವಜನಿಕರಿಗೆ ಉಚಿತವಾಗಿ ಪೂರೈಕೆ ಮಾಡುತ್ತಿದೆ. ಸರ್ಕಾರ ವಹಿಸಿರುವ ಇಷ್ಟೆಲ್ಲ ಮುತುವರ್ಜಿ, ಕಾರ್ಯ ತತ್ಪರತೆ ನೋಡಿ ಕೆಪಿಸಿಸಿ ಅಧ್ಯಕ್ಷರ ಕಣ್ಣು ಕೆಂಪಗಾಗಿದೆ. ಹೀಗಾಗಿ ಅವರು ತಮ್ಮ ಅಸಹನೆ ವ್ಯಕ್ತಪಡಿಸುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು.
ಕೊರೊನಾ ಮಹಾಮಾರಿಯನ್ನು ಎಲ್ಲರೂ ಪಕ್ಷಭೇದ ಮರೆತು ಎದುರಿಸಬೇಕಾಗಿದೆ. ಇಂತಹ ಸಮಯದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ಸಚಿವರು ಮತ್ತೊಮ್ಮೆ ಪುನರುಚ್ಚರಿಸಿದರು.
ಚಿಕ್ಕಬಳ್ಳಾಪುರ: ಕೊರೊನಾ ಸಂದರ್ಭದ ದುರ್ಲಾಭ ಪಡೆದು ಬಿತ್ತನೆ ಬೀಜ, ಕ್ರಿಮಿನಾಶಕ ಹಾಗೂ ರಸಗೊಬ್ಬರಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವವರು ಮತ್ತು ಸರ್ಕಾರ ನಿಗದಿಪಡಿಸಿದ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಕೃಷಿ, ರೇಷ್ಮೆ ಮತ್ತು ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳು ಹಾಗೂ ರೈತ ಪ್ರತಿನಿಧಿಗಳ ಸಭೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಹಿನ್ನೆಲೆಯಲ್ಲಿ ತುಂಬಾ ಬಿಕ್ಕಟ್ಟಿನ ಪರಿಸ್ಥಿತಿ ಇದೆ. ಕೃಷಿ ಕ್ಷೇತ್ರ ಅನುಭವಿಸಿದ ನಷ್ಟದ ಪ್ರಮಾಣದಷ್ಟು ಮತ್ಯಾವ ಕ್ಷೇತ್ರವೂ ನಷ್ಟ ಅನುಭವಿಸಿಲ್ಲ. ಆದರೂ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಾಧ್ಯವಾದಷ್ಟೂ ರೈತರ ಬೆಂಬಲಕ್ಕೆ ನಿಂತಿದ್ದಾರೆ ಎಂದು ತಿಳಿಸಿದರು.
ಈ ಮಧ್ಯೆ ಕೆಲವು ರಸಗೊಬ್ಬರಗಳ ಅಂಗಡಿಯ ಮಾಲೀಕರು ರಸಗೊಬ್ಬರ, ಕ್ರಿಮಿನಾಶಕ ಮತ್ತು ಬಿತ್ತನೆ ಬೀಜಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂಬ ದೂರುಗಳು ಬಂದಿವೆ. ಈ ರೀತಿ ಪರಿಸ್ಥಿತಿಯ ದುರ್ಲಾಭ ಪಡೆದು ಮೊದಲೇ ಕಷ್ಟನಷ್ಟಕ್ಕೆ ಸಿಲುಕಿರುವ ರೈತರನ್ನು ಶೋಷಿಸುವವರನ್ನು ಸರ್ಕಾರ ಸಹಿಸುವ ಪ್ರಶ್ನೆಯೇ ಇಲ್ಲ. ಅಂತವರ ವಿರುದ್ಧ ಸರ್ಕಾರ ಪ್ರಕರಣ ದಾಖಲಿಸಲಿದೆ ಎಂದು ಎಚ್ಚರಿಸಿದರು.
ಬೇಗ ಕೊಳೆಯುವ ಕೃಷಿ ಉತ್ಪನ್ನಗಳನ್ನು ಕೆಲಕಾಲ ಶೇಖರಿಸಿಡಲು ಅಗತ್ಯವಿರುವ ಶೀಥಲ ಗೃಹಗಳು ಹಾಗೂ ಹಣ್ಣು ಮತ್ತು ತರಕಾರಿ ಸಂಸ್ಕರಣಾ ಘಟಕಗಳನ್ನು ತೆರೆಯಲು ಅವಶ್ಯಕತೆ. ಇದು ಸರ್ಕಾರದ ಗಮನಕ್ಕೂ ಬಂದಿದೆ. ಈ ಸಲಹೆಗಳನ್ನು ಸಿಎಂ ಯಡಿಯೂರಪ್ಪ ಅವತಿಗೂ ಶಿಫಾರಸು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಕುರಿತು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
ರಾಜ್ಯ ಕೃಷಿ ಇಲಾಖೆಯಲ್ಲಿ ಶೇ.50ರಷ್ಟು ಹುದ್ದೆಗಳು ಖಾಲಿಯಿದ್ದು, ಇದರಿಂದ ಇಲಾಖೆ ಸಮರ್ಪಕವಾಗಿ ಕಾರ್ಯನಿರ್ವಸಹಿಲು ಸಾಧ್ಯವಾಗುತ್ತಿಲ್ಲ. ರಾಜ್ಯದ ಕೆಲವೆಡೆ ಕಳಪೆ ಕೀಟನಾಶಕ, ಬಿತ್ತನೆ ಬೀಜ ಮಾರಾಟವಾಗುತ್ತಿದ್ದು, ಈವರೆಗೆ 370 ಮಾದರಿಗಳನ್ನು ಸಂಗ್ರಹಿಸಲಾಗಿದೆ. ಈ ಪೈಕಿ 175 ಮಾದರಿಗಳು ಕಳಪೆ ಎಂದು ಖಚಿತ ಪಟ್ಟಿವೆ. 32 ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ. ಚಿಕ್ಕಬಳ್ಳಾಪುರದ ಅಂಗಡಿಯೊಂದರಲ್ಲಿ 20 ಲಕ್ಷ ರೂ.ಗಳ ಕಳಪೆ ಸರಕನ್ನು ಜಫ್ತಿ ಮಾಡಲಾಗಿದೆ ಎಂದು ತಿಳಿಸಿದರು.
– ಸಚಿವರೇ ಅಧಿಕಾರಿಗಳ ಮಾತು ಕೇಳಬೇಡಿ, ಸುಳ್ಳು ಮಾಹಿತಿ ನೀಡ್ತಿದ್ದಾರೆ
– ಸುಳ್ಳು ಮಾಹಿತಿ ಕೊಡಬೇಡಿ ಅಧಿಕಾರಿಗಳ ವಿರುದ್ಧ ಗರಂ
ರಾಮನಗರ: ಸರ್ಕಾರವೇ ರೈತರಿಂದ ತರಕಾರಿ ಕೊಂಡು ಹಾಪ್‍ಕಾಮ್ಸ್, ಹಾಲು ಒಕ್ಕೂಟಗಳ ಮೂಲಕ ಗ್ರಾಹಕರಿಗೆ ಮಾರಾಟ ಮಾಡುವ ವ್ಯವಸ್ಥೆ ಜಾರಿಗೆ ತರಬೇಕು ಎಂದು ಸಂಸದ ಡಿ.ಕೆ.ಸುರೇಶ್ ಅವರು ಕೃಷಿ ಸಚಿವ ಬಿ.ಸಿ ಪಾಟೀಲ್ ಅವರನ್ನು ಒತ್ತಾಯಿಸಿದ್ದಾರೆ.
ರಾಮನಗರ ಜಿಲ್ಲಾ ಪಂಚಾಯತ್‍ನಲ್ಲಿ ಕೃಷಿ ಸಚಿವ ಬಿ.ಸಿ ಪಾಟೀಲ್ ನೇತೃತ್ವದಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಕೋವಿಡ್-19 ಹಿನ್ನೆಲೆಯಲ್ಲಿ ರೈತರ ಬೆಳೆಗಳಿಗೆ ಮಾರುಕಟ್ಟೆ ಹಾಗೂ ನೆರವು ಯಾವ ರೀತಿಯಲ್ಲಿ ನೀಡಲಾಗುತ್ತಿದೆ ಎಂದು ಚರ್ಚೆ ನಡೆಸಲಾಯಿತು. ಚರ್ಚೆಯ ವೇಳೆ ರೈತರಿಂದ ತರಕಾರಿ ಖರೀದಿ ಮಾಡಿ ಮಾರಾಟ ಮಾಡಲಾಗುತ್ತಿದೆ ಎಂಬ ಅಧಿಕಾರಿಗಳ ಮಾತಿಗೆ ಗರಂ ಆದ ಡಿ.ಕೆ.ಸುರೇಶ್, ಸುಖಾಸುಮ್ಮನೆ ಸಚಿವರ ಮುಂದೆ ಸುಳ್ಳು ಮಾಹಿತಿ ಕೊಡಬೇಡಿ ಎಂದು ಗದರಿದರು.
ಎಪಿಎಂಸಿಗಳಲ್ಲಿ ಬೆಳೆಗಳು ಸರಿಯಾಗಿ ಮಾರಾಟ ಆಗುತ್ತಿಲ್ಲ. ಹೊಲದ ಕೆಲಸಗಳಿಗೆ ಕೂಲಿ ಕಾರ್ಮಿಕರು ಸಿಗುತ್ತಿಲ್ಲ. ಬೇರೆ ಊರುಗಳಿಂದ ಕಾರ್ಮಿಕರು ಬರಲು ಅಧಿಕಾರಿಗಳು, ಪೊಲೀಸರು ಬಿಡುತ್ತಿಲ್ಲ. ಹೀಗಾಗಿ ಬೆಳೆಗಳನ್ನು ಕಟಾವು ಮಾಡಲು ಆಗದ ಪರಿಸ್ಥಿತಿ ಇದೆ. ರೈತರಿಗಾಗಿ ವಿಶೇಷ ಪ್ಯಾಕೇಜ್ ರೂಪಿಸಿದಾಗ ಮಾತ್ರ ಮತ್ತೆ ಕೃಷಿ ಮಾಡಲು ಸಾಧ್ಯ ಎಂದು ತಿಳಿಸಿದರು.
ಬೆಂಬಲ ಬೆಲೆಯಡಿ ಸರ್ಕಾರದಿಂದ ರಾಗಿ ಖರೀದಿ ಅವಧಿಯನ್ನು ವಿಸ್ತರಣೆ ಮಾಡಬೇಕು. ಒಬ್ಬರಿಂದ 15 ಕ್ವಿಂಟಲ್ ಮಾತ್ರ ಖರೀದಿಗೆ ಅವಕಾಶ ನೀಡಲಾಗಿದ್ದು, ಅದನ್ನು ಹೆಚ್ಚಿಸಬೇಕು. ಹೆಚ್ಚುವರಿಯಾಗಿ ಬೆಳೆದ ರಾಗಿಯನ್ನೂ ಬೆಂಬಲ ಬೆಲೆ ಅಡಿ ಖರೀದಿ ಮಾಡಬೇಕು. ಅಲ್ಲದೆ ನರೇಗಾ ಯೋಜನೆಯಡಿ ಉದ್ಯೋಗ ಚೀಟಿ ಹೊಂದಿರುವ ಪ್ರತಿ ಕಾರ್ಮಿಕರಿಗೆ ಹಣ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಇದರಿಂದ ಪ್ರತಿ ರೈತನಿಗೆ 4-5 ಸಾವಿರ ಸಿಗುತ್ತದೆ ಎಂದರು.
ಇದೇ ವೇಳೆ ಪರಿಷತ್ ಸದಸ್ಯ ಅ.ದೇವೇಗೌಡ ಮಾತನಾಡಿ, ಕೃಷಿ ಇಲಾಖೆಯಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇದ್ದು ಸರ್ಕಾರ ಅದನ್ನು ಭರ್ತಿ ಮಾಡಬೇಕು. ಗ್ರಾ.ಪಂ. ಮಟ್ಟದಲ್ಲಿ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ತೆರೆಯಬೇಕು. ಎರಡು ವರ್ಷಗಳಿಂದ ರೈತರಿಗೆ ಟ್ರಾಕ್ಟರ್ ಖರೀದಿ ಸಬ್ಸಿಡಿ ಹಣ ಸ್ಥಗಿತಗೊಂಡಿದ್ದು, ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ರಾಮನಗರ: ರೈತರಿಗಾಗಿ ವಿಶೇಷ ಪ್ಯಾಕೇಜ್ ಘೋಷಣೆ ಸಂಬಂಧ ಭಾನುವಾರ ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ, ಸಹಕಾರಿ ಸಚಿವ ಜೊತೆ ಚರ್ಚೆ ನಡೆಸಿ ಬಳಿಕ ಸೋಮವಾರ ಮುಖ್ಯಮಂತ್ರಿಗಳ ಜೊತೆ ಚರ್ಚಿಸುವುದಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ ಭರವಸೆ ನೀಡಿದ್ದಾರೆ.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ರಾತ್ರಿ ನಡೆದ ಜಿಲ್ಲೆಯ ಕೃಷಿ ಚಟುವಟಿಕೆಗಳ ಪ್ರಗತಿ ಪರಿಶೀಲನಾ ಸಭೆಯ ನಂತರ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾ ವೈರಸ್ ಹಾವಳಿಯಿಂದಾಗಿ ರೈತರು ತೀವ್ರ ಸಂಕಷ್ಟದಲ್ಲಿ ಇದ್ದಾರೆ. ಅವರನ್ನು ಈ ಕೂಪದಿಂದ ಮೇಲೆತ್ತುವುದು ನಮ್ಮ ಮೊದಲ ಆದ್ಯತೆ ಆಗಲಿದೆ. ತೋಟಗಾರಿಕೆ, ರೇಷ್ಮೆ, ಪಶು ಸಂಗೋಪನೆ, ಕೃಷಿ ಮಾರುಕಟ್ಟೆ ಸಚಿವರ ಜೊತೆಗೂಡಿ ಈ ಸಂಬಂಧ ಮುಖ್ಯಮಂತ್ರಿಗಳ ಬಳಿ ಚರ್ಚಿಸಲಾಗುವುದು ಎಂದು ತಿಳಿಸಿದರು.
ಸದ್ಯ 19 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದು, ರೈತರು ಉತ್ತಮ ಸಲಹೆಗಳನ್ನು ನೀಡಿದ್ದಾರೆ. ಇನ್ನೂ ಮೂರು ತಿಂಗಳು ಪರಿಸ್ಥಿತಿ ಹೀಗೇ ಮುಂದುವರಿದರೆ ಕೃಷಿ ಮಾಡುವುದು ಕಷ್ಟವಿದೆ. ಹೀಗಾಗಿ ಕೃಷಿ ಚಟುವಟಿಕೆ ಉತ್ತೇಜನಕ್ಕೆ ಅಗತ್ಯ ನೆರವು ನೀಡಲು ಸರ್ಕಾರ ಸಿದ್ಧವಿದೆ ಎಂದರು. ಸಭೆಯಲ್ಲಿ ಸಂಸದ ಡಿಕೆ ಸುರೇಶ್, ವಿಧಾನಪರಿಷತ್ ಸದಸ್ಯರಾದ ಸಿ.ಎಂ ಲಿಂಗಪ್ಪ, ಎಚ್.ಎಂ.ರೇವಣ್ಣ, ಎಸ್.ರವಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.