Tag: bbmp

  • ಬಿಬಿಎಂಪಿ ಲಾರಿ ಡಿಕ್ಕಿ – ಮೃತಪಟ್ಟ ಯುವತಿಯ ಮದುವೆ ಸಿದ್ಧತೆ ನಡೆಸಿದ್ದ ಕುಟುಂಬ

    ಬಿಬಿಎಂಪಿ ಲಾರಿ ಡಿಕ್ಕಿ – ಮೃತಪಟ್ಟ ಯುವತಿಯ ಮದುವೆ ಸಿದ್ಧತೆ ನಡೆಸಿದ್ದ ಕುಟುಂಬ

    ಬೆಂಗಳೂರು: ಬಿಬಿಎಂಪಿ (BBMP) ಲಾರಿ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ (Accident) ಮೃತ ಪಟ್ಟ ಯುವತಿಯ ಮದುವೆಗೆ (Marriage) ಕುಟುಂಬ ಸಿದ್ಧತೆ ನಡೆಸಿತ್ತು.

    ಕೆಆರ್ ಸರ್ಕಲ್‌ನಲ್ಲಿ ಭಾನುವಾರ ರಾತ್ರಿ ನಡೆದ ಅಪಘಾತದಲ್ಲಿ ಯುವಕ ಪ್ರಶಾಂತ್ ಮತ್ತು ಯುವತಿ ಶಿಲ್ಪಾ ಸಾವನ್ನಪ್ಪಿದ್ದರು. ಅಪಘಾತದಲ್ಲಿ ಮೃತಪಟ್ಟ ಯುವತಿಯ ಮದುವೆಗೆ ಪೋಷಕರು ಸಿದ್ಧತೆ ನಡೆಸಿದ್ದರು ಎಂದು ತಿಳಿದು ಬಂದಿದೆ.

    ಮೃತ ಶಿಲ್ಪ ಆಂಧ್ರಪ್ರದೇಶದ ಇಂದುಪುರ ನಿವಾಸಿಯಾದ್ದು, ನಾಗವಾರದ ಪಿಜಿಯಲ್ಲಿ ವಾಸವಾಗಿದ್ದರು. ಶಿಲ್ಪ ತಂದೆ ವೆಂಕಟರಾಮ ರೆಡ್ಡಿ ಗಾರೆ ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದಾರೆ. ಅವರಿಗೆ ಒಟ್ಟು ಮೂವರು ಹೆಣ್ಣು ಮಕ್ಕಳಿದ್ದು, ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಆಗಿದೆ. ಶಿಲ್ಪ ಕೊನೆಯ ಮಗಳಾಗಿದ್ದು, ಮದುವೆ ತಯಾರಿ ಮಾಡಿಕೊಂಡು, ಅದಕ್ಕಾಗಿ ಚಿನ್ನವನ್ನು ಮಾಡಿಸಿಟ್ಟಿದ್ದರು ಎಂಬ ವಿಚಾರ ತಿಳಿದು ಬಂದಿದೆ.

    ಶಿಲ್ಪ ಮದುವೆ ವಿಚಾರವಾಗಿ ಭಾನುವಾರ ಬೆಳಗ್ಗೆ ಸಹ ವೆಂಕಟರಾಮ ರೆಡ್ಡಿಯವರು ಪ್ರಸ್ತಾಪ ಮಾಡಿದ್ದರು. ದುರಾದೃಷ್ಟವಶಾತ್ ಸಂಜೆ ಹೊತ್ತಿಗೆ ಯುವತಿ ಅಪಘಾತದಲ್ಲಿ ಸಾವನ್ನಪ್ಪಿದ್ದಾಳೆ.

    ಇನ್ನೂ ಲಾರಿ ಚಾಲಕನ ನಿರ್ಲಕ್ಷ್ಯದಿಂದ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಮೃತರ ಪೋಷಕರು ಆರೋಪಿಸಿದ್ದಾರೆ. ಈ ಸಂಬಂಧ ಹಲಸೂರು ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೆಂಗಳೂರಿನ ಹೋಟೆಲ್‌, ಪಬ್‌, ಬಾರ್‌ & ರೆಸ್ಟೋರೆಂಟ್‌ಗಳಿಗೆ ಹೊಸ ರೂಲ್ಸ್‌ – ಇಲ್ಲಿದೆ ಡೀಟೆಲ್ಸ್

    ಬೆಂಗಳೂರಿನ ಹೋಟೆಲ್‌, ಪಬ್‌, ಬಾರ್‌ & ರೆಸ್ಟೋರೆಂಟ್‌ಗಳಿಗೆ ಹೊಸ ರೂಲ್ಸ್‌ – ಇಲ್ಲಿದೆ ಡೀಟೆಲ್ಸ್

    ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (BBMP) ತನ್ನ ವ್ಯಾಪ್ತಿಯಲ್ಲಿರುವ ಹೋಟೆಲ್‌, ಪಬ್‌, ಬಾರ್‌, ರೆಸ್ಟೋರೆಂಟ್‌ (Bar And Restaurant) ಹಾಗೂ ಕಾಫಿ ಬಾರ್‌ಗಳಿಗೆ ಹೊಸ ನಿಯಮಗಳನ್ನ ಜಾರಿಗೊಳಿಸಿದೆ.

    ಬಿಬಿಎಂಪಿ ವ್ಯಾಪ್ತಿಯಲ್ಲಿನ ಹೋಟೆಲ್‌, ಬಾರ್‌ & ರೆಸ್ಟೋರೆಂಟ್‌ಗಳಲ್ಲಿ ಧೂಮಪಾನ ವಲಯ ಮಾಡದೇ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವ ಬಗ್ಗೆ ಸಾಕಷ್ಟು ದೂರುಗಳು ಕೇಳಿಬರುತ್ತಿತ್ತು. ಆಗಾಗ್ಗೆ ನಿಯಮ ಉಲ್ಲಂಘನೆ ಪ್ರಕರಣಗಳೂ ದಾಖಲಾಗುತ್ತಿದ್ದವು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಬಿಬಿಎಂಪಿ ಹೋಟೆಲ್, ಪಬ್, ಬಾರ್ ಗಳಿಗೆ ಹೊಸ ನಿಯಮ ಜಾರಿಗೊಳಿಸಿದೆ.

    ಬಿಬಿಎಂಪಿ ಹೊಸ ನಿಯಮ ಏನು?

    • 30 ಕೊಠಡಿಗಳಿಗಿಂತ ಮೇಲ್ಪಟ್ಟ ಹೋಟೆಲ್ (Bengaluru Hotels), ಬಾರ್ & ರೆಸ್ಟೋರೆಂಟ್, ಪಬ್ ಇದ್ರೆ 30 ಕುರ್ಚಿ ಇರುವ ಧೂಮಪಾನ ಪ್ರದೇಶ ನಿಗದಿ ಮಾಡಬೇಕು
    • ಧೂಮಪಾನ ವಲಯ (Smoking zone) ನಿರ್ಮಾಣ ಮಾಡಿ ಪೋಟೋ ಸಮೇತ ಸ್ಮೋಕಿಂಗ್ ಝೂನ್‌ಗೆ ಪರವಾನಗಿಗೆ ಅರ್ಜಿ ಹಾಕಬೇಕು
    • ಅಧಿಕಾರಿಗಳು ಸ್ಥಳಕ್ಕೆ ಭೇಟಿ ನಿಯಮಾನುಸಾರ ಸ್ಮೋಕಿಂಗ್ ಝೂನ್ ಇದೆಯೇ ಅಂತ ರಿಪೋರ್ಟ್ ಕೊಟ್ಟರೆ, ಆಮೇಲೆ ಎನ್‌ಒಸಿ ವಿತರಣೆಗೆ ಸೂಚನೆ ನೀಡಲಾಗುತ್ತದೆ.
    • ಸ್ಮೋಕಿಂಗ್ ಏರಿಯಾ ಕೊಠಡಿಗೆ ಎಂಟ್ರಿ ಆದಾಗ ಸ್ವಯಂಚಾಲಿತವಾಗಿ ಬಾಗಿಲು ಬಂದ್‌ ಆಗುವ ರೀತಿಯಲ್ಲಿ ಇರಬೇಕು
    • ಸ್ಮೋಕಿಂಗ್ ಏರಿಯಾ ಅಂತ ನಾಮಫಲಕ ದೊಡ್ಡದಾಗಿ ಇರಬೇಕು. 60-30ರ ನಿಯಮದಲ್ಲಿ ಅಕ್ಷರಗಳು ಇರಬೇಕು
    • ಸ್ಮೋಕಿಂಗ್‌ ಝೂನ್‌ಗಳಲ್ಲಿ ಏರ್‌ ಫ್ಲೋ ಸಿಸ್ಟಂ ಇರಬೇಕು. ಪಕ್ಕದ ಮನೆ ಅಥವಾ ಪಕ್ಕದ ಕಟ್ಟಡಗಳಿಗೆ ಹೊಗೆ ಹೋಗುವಂತೆ ಇರಬಾರದು
    • ಸ್ಮೋಕಿಂಗ್ ಝೂನ್ ನಿಯಮ ಉಲ್ಲಂಘನೆಯಾದ್ರೆ ಕಾನೂನು ಕ್ರಮ ಮತ್ತು ದಂಡ ವಿಧಿಸಲಾಗುತ್ತದೆ ಎಂದು ಬಿಬಿಎಂಪಿ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದೆ.

  • ಮೆಟ್ರೊಪಾಲಿಟನ್ ಸಿಟಿಗಳ ಪೈಕಿ ಬೆಂಗಳೂರಿನಲ್ಲಿ ಹೆಚ್ಚು ವಾಹನಗಳಿವೆ: ಪರಮೇಶ್ವರ್

    ಮೆಟ್ರೊಪಾಲಿಟನ್ ಸಿಟಿಗಳ ಪೈಕಿ ಬೆಂಗಳೂರಿನಲ್ಲಿ ಹೆಚ್ಚು ವಾಹನಗಳಿವೆ: ಪರಮೇಶ್ವರ್

    – ಬೆಂಗಳೂರು ಟ್ರಾಫಿಕ್ ಸಮಸ್ಯೆ ಕುರಿತು ಸುದೀರ್ಘ ಚರ್ಚೆ

    ಬೆಂಗಳೂರು: ಇಲ್ಲಿನ ಸಂಚಾರಿ ಪೊಲೀಸ್ (Bengaluru Traffic Police) ಇಲಾಖೆಯ ಕೇಂದ್ರ ಕಚೇರಿಗೆ ಗೃಹ ಸಚಿವ ಡಾ.ಜಿ ಪರಮೇಶ್ವರ್ (G Parameshwara) ಭೇಟಿ ನೀಡಿ ಸಂಚಾರಿ ವಿಭಾಗ ಮುಖ್ಯಸ್ಥ ಅನುಚೇತ್ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ವೇಳೆ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಮತ್ತು ನಿರ್ವಹಣೆ ಬಗ್ಗೆ ಮಾಹಿತಿ ಪಡೆದುಕೊಂಡರು.

    ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಬೆಂಗಳೂರು ಟ್ರಾಫಿಕ್ ಸಮಸ್ಯೆಯಲ್ಲಿ (Bengaluru Traffic Violation) ಕುಖ್ಯಾತಿ ಪಡೆದುಕೊಂಡಿದೆ. ನಮ್ಮವರು ಸಾಕಷ್ಟು ಉತ್ತಮ ಪಡಿಸುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: 2028ರೊಳಗೆ ಮತ್ತೆ ರಾಮನಗರ ಅಂತ ಬರುತ್ತೆ – ರಾಮನ ಹೆಸರು ತೆಗೆಯಲು ಸಾಧ್ಯವಿಲ್ಲ: ಹೆಚ್‌ಡಿಕೆ ತಿರುಗೇಟು

    ಅತಿ ಹೆಚ್ಚು ವಾಹನಗಳು ಬೆಂಗಳೂರು ನಗರದಲ್ಲಿವೆ. ಮೆಟ್ರೊಪಾಲಿಟನ್ ಸಿಟಿಗಳ ಪೈಕಿ ಬೆಂಗಳೂರಿನಲ್ಲಿ ಹೆಚ್ಚು ವಾಹನಗಳಿವೆ. ನಗರದಲ್ಲಿ 1.16 ಲಕ್ಷ ವಾಹನಗಳಿವೆ, 70% ಭಾಗ ದ್ವಿಚಕ್ರ ವಾಹನಗಳಿವೆ. ಆ ಕಾಲಕ್ಕೆ ರಸ್ತೆ ಎಷ್ಟು ಬೇಕು ಅಷ್ಟು ಮಾಡಿದ್ದರು. ಇರುವಂತ ಸೌಲಭ್ಯ ಬಳಸಿಕೊಂಡು ಮ್ಯಾನೇಜ್ ಮಾಡ್ತಿದ್ದಾರೆ. ಬಿಬಿಎಂಪಿಯವರು, ಬಿಎಂಟಿಸಿಯವರು ಇದಕ್ಕೆ ಸಾಥ್ ನೀಡಬೇಕು ಎಂದು ಮನವಿ ಮಾಡಿದರು.

    ಟ್ರಾಫಿಕ್ ಸಮಸ್ಯೆಗಳನ್ನ ಪರಿಹರಿಸುವ ಬಗ್ಗೆ ಚರ್ಚೆ ಮಾಡಿದ್ದೀವಿ. ಅಧಿಕಾರಿಗಳು ಕೆಲವು ಸಮಸ್ಯೆಗಳನ್ನ ಗಮನಕ್ಕೆ ತಂದಿದ್ದಾರೆ. ಶೀಘ್ರದಲ್ಲೇ ಬಿಬಿಎಂಪಿ, ಬಿಎಂಟಿಸಿ ಜೊತೆ ಒಟ್ಟಿದೇ ಸಭೆ ಮಾಡಬೇಕು ಅಂತ ಅಂದುಕೊಂಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: Women’s Asia Cup: ಸ್ಮೃತಿ, ರೇಣುಕಾ ಶೈನ್‌ – ಬಾಂಗ್ಲಾ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಜಯ; ಫೈನಲ್‌ ಪ್ರವೇಶಿಸಿದ ಭಾರತ!

  • ಬೆಂಗಳೂರು 5 ಭಾಗಗಳಾಗಿ ವಿಭಜನೆ – ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಮಸೂದೆಯಲ್ಲಿ ಏನಿದೆ? ಇಲ್ಲಿದೆ ಕಂಪ್ಲೀಟ್‌ ಮಾಹಿತಿ

    ಬೆಂಗಳೂರು 5 ಭಾಗಗಳಾಗಿ ವಿಭಜನೆ – ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಮಸೂದೆಯಲ್ಲಿ ಏನಿದೆ? ಇಲ್ಲಿದೆ ಕಂಪ್ಲೀಟ್‌ ಮಾಹಿತಿ

    ವಿಧಾನಸಭೆಯಲ್ಲಿ ಡಿಕೆ ಶಿವಕುಮಾರ್‌ ಮಸೂದೆ ಮಂಡನೆ
    – 10 ಪಾಲಿಕೆ ರಚಿಸಲು ಪ್ರಸ್ತಾಪ
    – ನಗರ ಪಾಲಿಕೆಗಳ ಆದಾಯದಲ್ಲಿ ಪ್ರಾಧಿಕಾರಕ್ಕೆ ಪಾಲು

    ಬೆಂಗಳೂರು: ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (Greater Bengaluru Authority) ರಚಿಸಿ ಬೆಂಗಳೂರು ನಗರವನ್ನು 10 ಪಾಲಿಕೆಗಳವರೆಗೆ ವಿಭಜಿಸುವ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಆಡಳಿತ ಮಸೂದೆ -2024ನ್ನು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಇಂದು ವಿಧಾನಸಭೆಯಲ್ಲಿ ಮಂಡನೆ ಮಾಡಿದ್ದಾರೆ.

    ಮೇಯರ್‌ ಹಾಗೂ ಉಪ ಮೇಯರ್‌ ಅವಧಿಯನ್ನು 5 ವರ್ಷಕ್ಕೆ ಹೆಚ್ಚಳ, 400 ವಾರ್ಡ್ ಗಳನ್ನು ಮಾಡುವುದು ಸೇರಿದಂತೆ ಹಲವು ಮಹತ್ವದ ಅಂಶಗಳು ಗ್ರೇಟರ್‌ ಬೆಂಗಳೂರು ಆಡಳಿತ ಮಸೂದೆಯಲ್ಲಿದೆ.

    ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ, ಹೊಸಕೋಟೆ, ನೆಲಮಂಗಲ, ದೇವನಹಳ್ಳಿ, ದೊಡ್ಡಬಳ್ಳಾಪುರ, ಎಲೆಕ್ಟ್ರಾನಿಕ್‌ ಸಿಟಿ, ಬಿಡದಿ, ಆನೇಕಲ್‌ ಸೇರಿ ಎರಡೂ ಜಿಲ್ಲೆ ಹಾಗೂ ಸುತ್ತಮುತ್ತ ಪ್ರದೇಶಗಳನ್ನು ಸೇರಿಸಿ ಗ್ರೇಟರ್‌ ಬೆಂಗಳೂರು ರಚಿಸುವ ಮಸೂದೆ ಇದಾಗಿದೆ.

     

    ಮಸೂದೆಯಲ್ಲಿ ಏನಿದೆ?
    10 ಪಾಲಿಕೆ ರಚಿಸಲು ಪ್ರಸ್ತಾಪ
    ಕನಿಷ್ಠ ಹತ್ತು ಲಕ್ಷ ಜನಸಂಖ್ಯೆಗೆ ಕಡಿಮೆ ಇಲ್ಲದಂತೆ ಒಂದೊಂದು ನಗರ ಪಾಲಿಕೆ ರಚನೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ವೇಳೆ ಪ್ರತಿ ಚದರ ಕಿ.ಮೀ.ಗೆ 5 ಸಾವಿರ ಜನಸಂಖ್ಯೆ ಇರಬೇಕು ಎಂಬುದನ್ನು ಗಮನದಲ್ಲಿಟ್ಟುಕೊಂಡು ಒಂದೊಂದು ಪಾಲಿಕೆಗೆ 200 ವಾರ್ಡ್‌ವರೆಗೆ ರಚನೆ ಮಾಡಲು ಅವಕಾಶ ಕಲ್ಪಿಸಲಾಗಿದೆ.

    ಕನಿಷ್ಠ 50 ರಿಂದ ಗರಿಷ್ಠ 200 ವಾರ್ಡ್‌ವರೆಗೆ ರಚನೆ ಮಾಡಲು ಅವಕಾಶ ಕಲ್ಪಿಸಿದ್ದು, ಈ ಮೂಲಕ ಗರಿಷ್ಠ 2,000 ವಾರ್ಡ್‌ ರಚನೆಗೆ ಬಿಲ್‌ನಲ್ಲಿ ಅವಕಾಶ ಸಿಗಲಿದೆ. ಇದನ್ನೂ ಓದಿ: ಬಜೆಟ್‌ ಭಾಷಣ ಮುಗಿದ ಬೆನ್ನಲ್ಲೇ ಚಿನ್ನ, ಬೆಳ್ಳಿ ದರ ದಿಢೀರ್‌ ಭಾರೀ ಇಳಿಕೆ

    ಬಿಬಿಎಂಪಿ ವ್ಯಾಪ್ತಿ ಸದ್ಯ 708 ಚ.ಕಿ.ಮೀ. ಇದೆ. ಪ್ರತಿಯೊಂದು ಪಾಲಿಕೆಯು ಸರಾಸರಿ 200 ಚ.ಕಿ.ಮೀ. ವಿಸ್ತೀರ್ಣ ಹೊಂದಿರಲಿವೆ. ಜಿಬಿಎ ವ್ಯಾಪ್ತಿ ಸುಮಾರು 1400 ಚ.ಕಿ.ಮೀ. ಇರಲಿದೆ. ಎಲೆಕ್ಟ್ರಾನಿಕ್‌ ಸಿಟಿ ಸೇರಿದಂತೆ ಹೊರವಲಯದಲ್ಲಿ ಹೆಚ್ಚು ಅಭಿವೃದ್ಧಿ ಹೊಂದಿರುವ ಪ್ರದೇಶಗಳು ಜಿಬಿಎ ವ್ಯಾಪ್ತಿಗೆ ತರಲು ಶಿಫಾರಸು ಮಾಡಲಾಗಿದೆ.

    ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ರಚನೆ ಬಳಿಕ ಬಿಡಿಎ ಭೂ ಬಳಕೆ ಮತ್ತು ಅಭಿವೃದ್ಧಿ ನಕ್ಷೆ ಅನುಮೋದಿಸುವ ಅಧಿಕಾರ ಕಳೆದುಕೊಳ್ಳಲಿದೆ. ಕೇವಲ ಯೋಜನೆಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ಮಾತ್ರ ಹೊಂದಿರುತ್ತದೆ. ರಾಜ್ಯ ಸರ್ಕಾರವು ಬಿಡುಗಡೆ ಮಾಡುವ ಅನುದಾನವನ್ನು ಯಾವ ಪಾಲಿಕೆಗೆ ಎಷ್ಟು ಹಂಚಿಕೆ ಮಾಡಬೇಕೆಂಬುದನ್ನು ಪ್ರಾಧಿಕಾರವೇ ನಿರ್ಧರಿಸಲಿದೆ.

    ಮೂರು ಹಂತದ ಆಡಳಿತ ವ್ಯವಸ್ಥೆ:
    ಗ್ರೇಟರ್‌ ಬೆಂಗಳೂರು, ನಗರ ಪಾಲಿಕೆ ಹಾಗೂ ವಾರ್ಡ್‌ ಸಮಿತಿಗಳು ಸೇರಿ ಮೂರು ಹಂತದ ಆಡಳಿತ ವ್ಯವಸ್ಥೆ ಜಾರಿಗೆ ಬರಲಿದೆ. ಇದರಡಿ ಮೇಯರ್‌, ಆಯುಕ್ತರು, ಜಂಟಿ ಆಯುಕ್ತರು, ಸ್ಥಾಯಿ ಸಮಿತಿ, ವಲಯ ಸಮಿತಿ, ವಾರ್ಡ್‌ ಸಮಿತಿ ಹಾಗೂ ಏರಿಯಾ ಸಭೆ ಕಾರ್ಯನಿರ್ವಹಿಸಲಿವೆ.

    ಪ್ರಮುಖ ಮೇಲ್ಸೇತುವೆಗಳು, ಎಕ್ಸ್‌ಪ್ರೆಸ್‌ ಎಲಿವೇಟೆಡ್‌ ರಸ್ತೆಗಳು, ಆರ್ಟಿರಿಯಲ್‌, ಸಬ್‌ ಆರ್ಟಿರಿಯಲ್‌ ರಸ್ತೆ ನಿರ್ಮಾಣ ಹಾಗೂ ನಿರ್ವಹಣೆ ಮಳೆ ನೀರು ಕಾಲುವೆಗಳ ನಿರ್ವಹಣೆ, ಕುಡಿಯುವ ನೀರು ಸರಬರಾಜು ಹಾಗೂ ಒಳಚರಂಡಿ ವ್ಯವಸ್ಥೆಯೂ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಗೆ ಬರಲಿದೆ.

    ಆಸ್ತಿ ತೆರಿಗೆ ನಿಗದಿ, ರಿಬೇಟರ್‌ ಘೋಷಣೆ, ಹೊಸ ತೆರಿಗೆಗಳ ಬಗ್ಗೆ ಸರ್ಕಾರಕ್ಕೆ ಶಿಫಾರಸು ಮಾಡುವುದು ಸೇರಿ ಬಹುತೇಕ ಅಧಿಕಾರಿಗಳನ್ನು ಪ್ರಾಧಿಕಾರಕ್ಕೆ ನೀಡಲಾಗಿದೆ.

    ಸಿಎಂ ಪ್ರಾಧಿಕಾರದ ಅಧ್ಯಕ್ಷರು:
    ಗ್ರೇಟರ್‌ ಬೆಂಗಳೂರು ಪ್ರಾಧಿಕಾರಕ್ಕೆ ಮುಖ್ಯಮಂತ್ರಿಗಳು ಅಧ್ಯಕ್ಷರಾಗಿದ್ದು, ಬೆಂಗಳೂರು ನಗರ ಉಸ್ತುವಾರಿ ಸಚಿವರು ಉಪಾಧ್ಯಕ್ಷರಾಗಿರುತ್ತಾರೆ.

    ಗ್ರೇಟರ್‌ ಬೆಂಗಳೂರು ಪ್ರಾಧಿಕಾರಕ್ಕೆ ಮುಖ್ಯಮಂತ್ರಿಗಳು ಅಧ್ಯಕ್ಷರಾಗಿರಲಿದ್ದಾರೆ. ಅವರೊಂದಿಗೆ ಬೆಂಗಳೂರು ನಗರಾಭಿವೃದ್ದಿ ಸಚಿವರು ಉಪಾಧ್ಯಕ್ಷರಾಗಿ ಕೆಲಸ ಮಾಡಲಿದ್ದಾರೆ. ಹಾಗೆಯೇ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರು ಸದಸ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡಲಿದ್ದಾರೆ.

    ಉಳಿದಂತೆ ಗೃಹ ಸಚಿವ, ನಗರಾಭಿವೃದ್ಧಿ ಸಚಿವ, ಸಾರಿಗೆ ಸಚಿವ, ಇಂಧನ ಸಚಿವ, ಬೃಹತ್‌ ಬೆಂಗಳೂರು ವ್ಯಾಪ್ತಿಯ ಶಾಸಕರಾಗಿ ಸಚಿವರಾಗಿರುವವರು ಸದಸ್ಯರಾಗಿರಲಿದ್ದಾರೆ. ಅದೇ ರೀತಿ ಮಹಾನಗರ ಪಾಲಿಕೆಗಳ ಮೇಯರ್‌ಗಳು, ಪ್ರತಿ ಮಹಾನಗರ ಪಾಲಿಕೆಯಿಂದ ನಾಮ ನಿರ್ದೇಶನಗೊಂಡ ಇಬ್ಬರು, ಬಿಡಿಎ ಆಯುಕ್ತ, ಜಲಮಂಡಳಿ ಅಧ್ಯಕ್ಷ, ಬಿಎಂಟಿಸಿ ಎಂಡಿ, ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ, ಬೆಂಗಳೂರು ನಗರ ಪೊಲೀಸ್‌ ಆಯುಕ್ತ, ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರದ ಸಿಇಒ, ಬೆಂಗಳೂರು ಘನತ್ಯಾಜ್ಯ ನಿರ್ವಹಣೆಯ ವ್ಯವಸ್ಥಾಪಕ ನಿರ್ದೇಶಕ, ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಮುಖ್ಯ ನಗರ ಯೋಜನಾಧಿಕಾರಿ, ಪ್ರಧಾನ ಮುಖ್ಯ ಎಂಜಿನಿಯರ್‌, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ನಿರ್ದೇಶಕರು ಸದಸ್ಯರಾಗಿರಲಿದ್ದಾರೆ. ಇದನ್ನೂ ಓದಿ: Budget 2024 | ಮೊದಲ ಬಾರಿಗೆ ಉದ್ಯೋಗ ಪಡೆದವರಿಗೆ 15 ಸಾವಿರ ರೂ.

    ನಗರಕ್ಕೆ ಸಂಬಂಧಿಸಿದ ಎಲ್ಲಾ ಇಲಾಖೆ ಪ್ರಾಧಿಕಾರ ವ್ಯಾಪ್ತಿಗೆ:
    ಜಿಬಿಎ ಅಡಿಯಲ್ಲಿಯೇ ಬಿಬಿಎಂಪಿ, ಬಿಡಿಎ, ಜಲಮಂಡಳಿ, ಬೆಸ್ಕಾಂ, ಮೆಟ್ರೊ, ಸಂಚಾರ ಪೊಲೀಸ್‌ ಹಾಗೂ ಸಾರಿಗೆ ಇಲಾಖೆ ಸೇರಿದಂತೆ ನಗರಕ್ಕೆ ಸಂಬಂಧಿಸಿದ ಎಲ್ಲ ಇಲಾಖೆಗಳೂ ಕಾರ್ಯ ನಿರ್ವಹಿಸಬೇಕಾಗುತ್ತದೆ.

    ಪ್ರತಿ ಪಾಲಿಕೆಗೆ ಒಬ್ಬರು ಆಯುಕ್ತರು
    ಬಿಬಿಎಂಪಿಯನ್ನು ಐದು ಪಾಲಿಕೆಗಳನ್ನಾಗಿ ವಿಭಜಿಸುವ ಪ್ರಸ್ತಾವವೂ ಸಮಿತಿ ಸಲ್ಲಿಸಿರುವ ಕರಡು ವಿಧೇಯಕದಲ್ಲಿದೆ. ತಲಾ ಒಬ್ಬರು ಮೇಯರ್‌, ಉಪ ಮೇಯರ್‌ ಜತೆಗೆ 10 ಸದಸ್ಯರ ಸಂಪುಟವೂ ಇರಲಿದೆ. ಆದರೆ, ಸ್ಥಾಯಿ ಸಮಿತಿಗಳು ರದ್ದಾಗಲಿವೆ. ಪ್ರತಿ ಪಾಲಿಕೆಗೂ ಸರ್ಕಾರದಿಂದ ನೇಮಿಸಲ್ಪಟ್ಟ ಒಬ್ಬ ಆಯುಕ್ತರು ಮತ್ತು ಪ್ರತಿ ವಲಯಕ್ಕೆ ಒಬ್ಬ ವಲಯ ಆಯುಕ್ತರು ಇರಲಿದ್ದಾರೆ.

    ನಿಗಾ ವಹಿಸಲು ಕಾರ್ಯಕಾರಿ ಸಮಿತಿ ರಚನೆ
    ಗ್ರೇಟರ್‌ ಬೆಂಗಳೂರು ಪ್ರಾಧಿಕಾರವು ಸಿಎಂ ಅಥವಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ 3 ತಿಂಗಳಲ್ಲಿ ಒಮ್ಮೆಯಾದರೂ ಸಭೆ ನಡೆಸಬೇಕಿದೆ. ಅಲ್ಲದೆ, ಈ ಸಭೆಯಲ್ಲಿ ನಿರ್ಧರಿಸುವ ಹಾಗೂ ಇತರ ಕಾರ್ಯಗಳನ್ನು ಅನುಷ್ಠಾನಗೊಳಿಸಲು ಪ್ರತ್ಯೇಕ ಕಾರ್ಯಕಾರಿ ಸಮಿತಿ ರಚನೆಗೆ ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ. ಈ ಸಮಿತಿಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಅಥವಾ ಮುಖ್ಯಮಂತ್ರಿಗಳು ಸೂಚಿಸುವ ಸಚಿವರು ಅಧ್ಯಕ್ಷರಾಗಿ ಕೆಲಸ ಮಾಡಲಿದ್ದಾರೆ. ಅವರೊಂದಿಗೆ ಮುಖ್ಯ ಆಯುಕ್ತ ಸದಸ್ಯ ಕಾರ್ಯದರ್ಶಿಯಾಗಿ ಹಾಗೂ ಉಳಿದ ಅಧಿಕಾರಿಗಳು ಸದಸ್ಯರಾಗಿರಲಿದ್ದಾರೆ.

    ನಗರ ಪಾಲಿಕೆಗಳ ಆದಾಯದಲ್ಲಿ ಪ್ರಾಧಿಕಾರಕ್ಕೆ ಪಾಲು
    ನಗರ ಪಾಲಿಕೆಗಳು ಸಂಗ್ರಹಿಸುವ ಆದಾಯದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಪಾಲು ನೀಡಬೇಕಿದೆ. ಅದು ರಾಜ್ಯ ಸರ್ಕಾರ ಸೂಚಿಸುವಷ್ಟು ಆದಾಯದಿಂದ ಘನತ್ಯಾಜ್ಯ ನಿರ್ವಹಣೆ ಸೇರಿದಂತೆ ಇನ್ನಿತರ ಕಾರ್ಯಗಳನ್ನು ಮಾಡಲಾಗುತ್ತದೆ. ಅಲ್ಲದೆ, ಆ ಆದಾಯವನ್ನು ಕಡಿಮೆ ಆದಾಯ ಹೊಂದಿದ ನಗರ ಪಾಲಿಕೆಗೆ ಹಂಚಿಕೆ ಮಾಡಲಾಗುತ್ತದೆ.

    ಆರ್ಥಿಕ ಅಭಿವೃದ್ಧಿ ಸಂಸ್ಥೆ ರಚನೆ
    ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಹೂಡಿಕೆ ಆಕರ್ಷಣೆ ಸೇರಿದಂತೆ ಆರ್ಥಿಕವಾಗಿ ಬಲ ತುಂಬಲು ಆರ್ಥಿಕ ಅಭಿವೃದ್ಧಿ ಸಂಸ್ಥೆ ರಚಿಸುವ ಕುರಿತು ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ. ಪ್ರಾಧಿಕಾರ ರಚನೆಯಾದ ಒಂದು ವರ್ಷದಲ್ಲಿ ಆರ್ಥಿಕ ಅಭಿವೃದ್ಧಿ ಸಂಸ್ಥೆ ರಚನೆಯಾಗಲಿದೆ. ಈ ಸಂಸ್ಥೆಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರು ಅಧ್ಯಕ್ಷರಾಗಿರಲಿದ್ದು, ಹೂಡಿಕೆ ಆಕರ್ಷಣೆ, ಉದ್ಯೋಗ ಸೃಷ್ಟಿಯಂತಹ ಕೆಲಸ ಮಾಡಲಿದೆ. ಇದನ್ನೂ ಓದಿ: ದಿಢೀರ್‌ ಕುಸಿತಗೊಂಡು ನಂತರ ಸಾವಿರ ಅಂಕ ಏರಿಕೆಯಾಗಿ ಸೆನ್ಸೆಕ್ಸ್‌ ಮತ್ತೆ ಕುಸಿದಿದ್ದು ಯಾಕೆ?

    ಪ್ರತ್ಯೇಕ ಭದ್ರತಾ ಪಡೆ ರಚನೆ
    ಗ್ರೇಟರ್‌ ಬೆಂಗಳೂರು ಪ್ರಾಧಿಕಾರಕ್ಕಾಗಿ ಪ್ರತ್ಯೇಕ ಭದ್ರತಾ ಪಡೆ ರಚಿಸುವುದಾಗಿ ವಿಧೇಯಕದಲ್ಲಿ ತಿಳಿಸಲಾಗಿದೆ. ಈ ಪಡೆಯು ನಗರ ಪಾಲಿಕೆಗಳ ಆಸ್ತಿ ರಕ್ಷಣೆ, ಆದಾಯ ಸೋರಿಕೆ ತಡೆ, ಬೈಲಾಗಳ ಉಲ್ಲಂಘಟನೆ ಮಾಡುವವರ ವಿರುದ್ಧ ಕ್ರಮದಂತಹ ಕೆಲಸ ಮಾಡಲಿದೆ ಎಂದು ಹೇಳಲಾಗಿದೆ.

    ಎಸ್‌/ಎಸ್‌ಟಿ-ಹಿಂದುಳಿದ ವರ್ಗಕ್ಕೆ 50% ರಷ್ಟು ಮೀಸಲು
    ಗ್ರೇಟರ್‌ ಬೆಂಗಳೂರು ಪ್ರದೇಶ ವ್ಯಾಪ್ತಿಯಲ್ಲಿ ರಚಿಸಲಾಗುವ ನಗರ ಪಾಲಿಕೆಗಳಿಗೆ ನಡೆಯುವ ಚುನಾವಣೆಯಲ್ಲಿ 50% ರಷ್ಟು ಸ್ಥಾನಗಳನ್ನು ಪರಿಶಿಷ್ಟ ಜಾತಿ/ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಮೀಸಲಿಡಲಾಗುವುದು ಎಂದು ತಿಳಿಸಲಾಗಿದೆ. ಹಾಗೆಯೇ ಪ್ರತಿ ನಗರ ಪಾಲಿಕೆಗಳು 50ರಿಂದ 200 ವಾರ್ಡ್‌ಗಳನ್ನು ಹೊಂದಿರುವುದು ಕಡ್ಡಾಯವಾಗಿಸಿ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ.

    ಬಿ.ಎಸ್‌. ಪಾಟೀಲ್‌ ನೇತೃತ್ವದ ವರದಿ ಆಧರಿಸಿ ಬಿಲ್
    ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್. ಪಾಟೀಲ್ ನೇತೃತ್ವದ ಸಮಿತಿ ಜುಲೈನಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಸುಧಾರಣಾ ಸಮಿತಿ ಸರ್ಕಾರಕ್ಕೆ ಸಲ್ಲಿಸಿತ್ತು. ನಿವೃತ್ತ ಐಎಎಸ್‌ ಅಧಿಕಾರಿ ಸಿದ್ದಯ್ಯ, ನಗರತಜ್ಞ ವಿ. ರವಿಚಂದರ್‌ ಅವರು ಈ ವರದಿ ಸಿದ್ದಪಡಿಸಿ ಸಲ್ಲಿಸಿದ್ದರು. ಈ ವರದಿ ಆಧಾರದ ಮೇಲೆ ಬಿಲ್‌ ರಚನೆ ಮಾಡಿದ್ದು, ಇದಕ್ಕೆ ಸಂಪುಟ ಒಪ್ಪಿಗೆ ನೀಡಿದೆ.

    ಮೇಯರ್ ಅವಧಿ 5 ವರ್ಷಕ್ಕೆ ಹೆಚ್ಚಳ
    ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ರಚನೆಯಾಗುವ ನಗರ ಪಾಲಿಕೆ ಚುನಾವಣೆ ನಂತರ ನಡೆಯುವ ಮೊದಲ ಸಭೆಯಲ್ಲಿ ಮೇಯರ್‌ ಮತ್ತು ಉಪ ಮೇಯರ್‌ಗಳನ್ನು ಸದಸ್ಯರು ಆಯ್ಕೆ ಮಾಡಬೇಕಿದೆ. ಅಲ್ಲದೆ, ಮೇಯರ್‌ ಮತ್ತು ಉಪಮೇಯರ್‌ ಅವಧಿಯನ್ನು 5 ವರ್ಷಕ್ಕೆ ಹೆಚ್ಚಿಸಲಾಗಿದೆ ಎಂದು ವಿಧೇಯಕದಲ್ಲಿ ತಿಳಿಸಲಾಗಿದೆ.

    6 ಸ್ಥಾಯಿ ಸಮಿತಿಗಳ ರಚನೆ
    ಪ್ರತಿ ನಗರ ಪಾಲಿಕೆಯಲ್ಲಿ 6 ಸ್ಥಾಯಿ ಸಮಿತಿ ರಚಿಸಲಾಗುತ್ತದೆ. ಆಡಳಿತ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ, ಕಂದಾಯ, ಆದಾಯ ಮತ್ತು ಲೆಕ್ಕಪತ್ರ ಸ್ಥಾಯಿ ಸಮಿತಿ, ಸಾರ್ವಜನಿಕ ಕಾಮಗಾರಿ ಮತ್ತು ಎಂಜಿನಿಯರಿಂಗ್‌ ಸ್ಥಾಯಿ ಸಮಿತಿ, ಸಾರ್ವಜನಿಕ ಆರೋಗ್ಯ ಮತ್ತು ನೈಸರ್ಗಿಕ ವಿಕೋಪ ನಿರ್ವಹಣಾ ಸ್ಥಾಯಿ ಸಮಿತಿ, ಅರಣ್ಯ, ಪರಿಸರ, ಕೆರೆ ಮತ್ತು ತೋಟಗಾರಿಕೆ ಸ್ಥಾಯಿ ಸಮಿತಿ, ನಗರ ಯೋಜನೆ ಮತ್ತು ಮೂಲಸೌಕರ್ಯ ಸ್ಥಾಯಿ ಸಮಿತಿಗಳನ್ನು ರಚಿಸಲಾಗುತ್ತದೆ. ಪ್ರತಿ ಸ್ಥಾಯಿ ಸಮಿತಿಯೂ 5 ಸದಸ್ಯರಿರಲಿದ್ದು, ಅವರನ್ನು ನಗರ ಪಾಲಿಕೆ ಸಭೆಯಲ್ಲಿ ಕೌನ್ಸಿಲರ್‌ಗಳು ಆಯ್ಕೆ ಮಾಡಲಿದ್ದಾರೆ. ಅಲ್ಲದೆ, ಆ ಐವರಲ್ಲಿ ಒಬ್ಬರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗುತ್ತದೆ. ಈ ಸ್ಥಾಯಿ ಸಮಿತಿಗಳಿಗೆ ಆಯ್ಕೆಯಾದ ಸದಸ್ಯರ ಅವಧಿ 30 ತಿಂಗಳವರೆಗೆ ಇರಲಿದೆ ಎಂದು ವಿಧೇಯಕದಲ್ಲಿ ಉಲ್ಲೇಖಿಸಲಾಗಿದೆ.

    5 ಪಾಲಿಕೆ ರಚನೆ ಮಾಡಲು ಸರ್ಕಾರ ನಿರ್ಧಾರ
    ಕಳೆದ ಐದು ವರ್ಷಗಳ ಹಿಂದೆಯೇ ಬಿಬಿಎಂಪಿ ಪುನರ್‌ರಚನಾ ವರದಿ ಸಲ್ಲಿಸಲಾಗಿದೆ. ಅದರಲ್ಲಿ 5 ಪಾಲಿಕೆ ರಚನೆ, 400 ವಾರ್ಡ್‌ಗಳ ವಿಂಗಡಣೆ ಕುರಿತು ಪ್ರಸ್ತಾಪಿಸಲಾಗಿತ್ತು. ಆ ವರದಿಯನ್ನು ಸರ್ಕಾರ ಈ ಹಿಂದೆಯೇ ಅಂಗೀಕರಿಸಿದೆ. ಹೀಗಾಗಿ ಆ ವರದಿಯಲ್ಲಿನ ಶಿಫಾರಸುಗಳ ಅನುಷ್ಠಾನಕ್ಕಾಗಿ ಕಾಯಿದೆ ರೂಪಿಸಬೇಕಿದೆ. ಈ ಮಸೂದೆ ಅನ್ವಯ 1 ರಿಂದ 10 ಪಾಲಿಕೆ ರಚಿಸಬಹುದು. ಆದರೆ ಸರ್ಕಾರ ಸುಮಾರು ಐದು ಪಾಲಿಕೆ ಮಾತ್ರ ರಚನೆಗೆ ಮುಂದಾಗಬಹುದು ಎನ್ನಲಾಗುತ್ತಿದೆ.

     

  • ಬಿಬಿಎಂಪಿ ವ್ಯಾಪ್ತಿಯಲ್ಲಿ ಆರೋಗ್ಯ ಸೇವೆ ಪರಿಷ್ಕರಣೆಗೆ ನಿರ್ಧಾರ: ದಿನೇಶ್ ಗುಂಡೂರಾವ್

    ಬಿಬಿಎಂಪಿ ವ್ಯಾಪ್ತಿಯಲ್ಲಿ ಆರೋಗ್ಯ ಸೇವೆ ಪರಿಷ್ಕರಣೆಗೆ ನಿರ್ಧಾರ: ದಿನೇಶ್ ಗುಂಡೂರಾವ್

    ಬೆಂಗಳೂರು: ಬಿಬಿಎಂಪಿ (BBMP) ವ್ಯಾಪ್ತಿಯಲ್ಲಿ ಆರೋಗ್ಯ ಸೇವೆ ಪರಿಷ್ಕರಣೆಗೆ ನಿರ್ಧಾರ ಮಾಡಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಬಿಬಿಎಂಪಿ ವಲಯದಲ್ಲಿನ ಆರೋಗ್ಯ ಸೇವೆಗಳ ಪರಿಷ್ಕರಣೆಯ ಬಗ್ಗೆ ಚರ್ಚೆ ಮಾಡಿದ್ದೇವೆ. ಬಿಬಿಎಂಪಿ ಮುಖ್ಯ ಆಯುಕ್ತರು ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಈ ಬಗ್ಗೆ ಚರ್ಚೆ ಮಾಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯ ಆರೋಗ್ಯ ವ್ಯವಸ್ಥೆಯ ಬಗ್ಗೆ ಕೆಲವು ಗೊಂದಲಗಳಿವೆ. ಬಿಬಿಎಂಪಿ ಕೆಲವು ಆಸ್ಪತ್ರೆಯನ್ನು ನಿರ್ವಹಣೆ ಮಾಡ್ತಿದೆ. ಕೆಲವನ್ನು ಆರೋಗ್ಯ ಇಲಾಖೆ ಮಾಡ್ತಿದೆ. ಬಿಬಿಎಂಪಿ ಹೊರವಲಯದ ಆಸ್ಪತ್ರೆಗೆ ಜಿಲ್ಲಾಪಂಚಾಯತಿ ಮೂಲಕ ಅನುದಾನ ಬರುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಮೆಟರ್ನಿಟಿ ಆಸ್ಪತ್ರೆಗಳನ್ನು ಬಿಬಿಎಂಪಿಯವರು ತಾವೇ ನೋಡಿಕೊಳ್ಳೊದಾಗಿ ಹೇಳಿದ್ದಾರೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.

    ಇನ್ನೂ ಉಳಿದ ಹೆಚ್ಚಿನ ಸೌಲಭ್ಯ ಇರುವ ಆಸ್ಪತ್ರೆಗಳನ್ನು ಆರೋಗ್ಯ ಇಲಾಖೆಯೇ ನೋಡಿಕೊಳ್ಳಲಿ ಎಂದು ಬಿಬಿಎಂಪಿ ಆಯುಕ್ತರು ಹೇಳಿದ್ದಾರೆ. ನಿರ್ವಹಣೆ ಸಮಸ್ಯೆ ಉಂಟಾಗಿರುವುದರಿಂದ ಈ ರೀತಿ ಹೇಳಿದ್ದಾರೆ. ಡಿಸಿಎಂ ಬಳಿ ಇದರ ಬಗ್ಗೆ ಚರ್ಚೆ ಮಾಡಿ ನಾವು ತಿರ್ಮಾನಕ್ಕೆ ಬರುತ್ತಿದ್ದೇವೆ. ಸರಿಯಾಗಿ ಯಾರ ಅಡಿಯಲ್ಲಿ ಆಸ್ಪತ್ರೆಗಳು ಬರುತ್ತವೆ ಎಂಬ ಬಗ್ಗೆ ಸ್ಪಷ್ಟತೆ ಇರಬೇಕು. ಈ ಬಗ್ಗೆ ಮತ್ತೊಮ್ಮೆ ಸಭೆ ನಡೆಸಿ ತೀರ್ಮಾನ ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ.

  • ಲೋಕಸಭಾ ಚುನಾವಣೆಗಾಗಿ ಬಿಬಿಎಂಪಿಯಲ್ಲಿ 2,000 ಕೋಟಿ ರೂ. ಟೆಂಡರ್ ಹಗರಣ – ಮಾಜಿ ಉಪಮೇಯರ್ ಹೊಸ ಬಾಂಬ್

    ಲೋಕಸಭಾ ಚುನಾವಣೆಗಾಗಿ ಬಿಬಿಎಂಪಿಯಲ್ಲಿ 2,000 ಕೋಟಿ ರೂ. ಟೆಂಡರ್ ಹಗರಣ – ಮಾಜಿ ಉಪಮೇಯರ್ ಹೊಸ ಬಾಂಬ್

    – ಗುಂಡಿ ಬೀಳದ ರಸ್ತೆಗಳನ್ನೇ ಆಯ್ದುಕೊಂಡು ಅಕ್ರಮ ಆರೋಪ

    ಬೆಂಗಳೂರು: ಬಿಬಿಎಂಪಿಯಲ್ಲಿ (BBMP) ಲೋಕಸಭಾ ಚುನಾವಣೆಗೆ (Lokshabha Election) ಹಣ ಸಂಗ್ರಹಿಸಲು ರಸ್ತೆ ಕಾಮಗಾರಿಯ ದೊಡ್ಡ ಹಗರಣ ನಡೆಸಿದ್ದಾರೆ ಎಂದು ಮಾಜಿ ಉಪಮೇಯರ್ ಮತ್ತು ಬಿಜೆಪಿ (BJP) ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್.ಹರೀಶ್ ಹೊಸ ಬಾಂಬ್ ಸಿಡಿಸಿದ್ದಾರೆ.

    ಬೆಂಗಳೂರು (Bengaluru) ಮಲ್ಲೇಶ್ವರಂನ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಲೋಕಸಭಾ ಚುನಾವಣೆಗೂ ಮೊದಲು 2 ಸಾವಿರ ಕೋಟಿ ರೂ. ಟೆಂಡರ್ ಪ್ರಕ್ರಿಯೆ ಆರಂಭಿಸಿದ್ದರು. ಫೆ.5ರಂದು ಟೆಂಡರ್ ಕರೆದಿದ್ದು, ಫೆ.17ಕ್ಕೆ ಆಗಿತ್ತು. ಫೆ.21ರಂದು ಟೆಂಡರ್ ತೆರೆಯುವುದಾಗಿ ಹೇಳಿದ್ದರು. ಫೆ.22ರಂದು ತಾಂತ್ರಿಕ ಮೌಲ್ಯಮಾಪನ ಸಮಿತಿಯಲ್ಲಿ ಚರ್ಚಿಸಿ ಅವತ್ತೇ ಅನುಮೋದನೆ ಕೊಟ್ಟಿದ್ದರು ಎಂದು ಅವರು ಹೇಳಿದ್ದಾರೆ.

    ಅದೇ ತಿಂಗಳು 23ರಂದು ಆರ್ಥಿಕ ಮೌಲ್ಯಮಾಪನ ಮಾಡಿ, ಟೆಂಡರ್‍ಗೆ ಅನುಮೋದನೆ ನೀಡಿದ್ದರು. ಬಳಿಕ ಮಾ.16ರಂದು ನೀತಿ ಸಂಹಿತೆ ಜಾರಿಯಾಗಿತ್ತು. ಇದರಿಂದಾಗಿ ಮಾ.15ರೊಳಗೆ ಎಲ್ಲಾ ಟೆಂಡರ್‍ಗಳ ಕಾಮಗಾರಿ ಮಾಡುವಂತೆ ಎಲ್ಲಾ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಿದ್ದರು. ಚುನಾವಣಾ ಹಣಕ್ಕಾಗಿ 15ರವರೆಗೆ ಕಾದು ಹೀಗೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

    ಚೆನ್ನಾಗಿರುವ ರಸ್ತೆಗಳೇ ಆಯ್ಕೆ:
    ಗುಂಡಿ ಬೀಳದೇ, ರೋಡ್ ಕಟ್ಟಿಂಗ್ ಆಗದೇ ಚೆನ್ನಾಗಿರುವ ರಸ್ತೆಗಳನ್ನೇ ಆಯ್ಕೆ ಮಾಡಿದ್ದಾರೆ. ಗುಂಡಿ-ಹಳ್ಳವಿರುವ ರಸ್ತೆಗಳಿದ್ದರೂ ಅದರ ಕಾಮಗಾರಿ ಮಾಡಿಲ್ಲ. ಡಿಎಲ್‍ಪಿ ಅವಧಿ ಮುಗಿಯದ ರಸ್ತೆಗಳನ್ನೂ ಆಯ್ಕೆ ಮಾಡಿಕೊಂಡು, ಟೆಂಡರ್ ಶೂರ್ ರಸ್ತೆಗಳನ್ನೂ ಪರಿಗಣಿಸಿದ್ದಾರೆ. ಅಲ್ಲದೇ 2018-19ರಲ್ಲಿ ಕಾರ್ಯಾದೇಶ ನೀಡಿದ್ದ ರಸ್ತೆಗಳನ್ನೇ ಪರಿಗಣಿಸಿದ್ದಾರೆ. ಗುತ್ತಿಗೆದಾರರು ಹತ್ತಾರು ಕೋಟಿ ರೂ. ಇಎಂಡಿ ಮೊತ್ತ ಕಟ್ಟಿದ್ದ ರಸ್ತೆಯನ್ನೇ ಆರಿಸಿದ್ದಾರೆ ಎಂದು ಆರೋಪಿಸಿದ್ದಾರೆ.

    ಚುನಾವಣೆಗೆ ಹಣ ಸಂಗ್ರಹಿಸಲು ಟೆಂಡರ್:
    ಲೋಕಸಭಾ ಚುನಾವಣೆಗೆ ದುಡ್ಡಿನ ಅವಶ್ಯಕತೆಯಿಂದ ಏಜೆಂಟ್, ಮಿಡಲ್‍ಮೆನ್, ಕಲೆಕ್ಷನ್ ಏಜೆಂಟ್ ಎನ್ನಲಾದ, ಮುಖ್ಯವಾಗಿ ಬಿಬಿಎಂಪಿ ಆಯಕ್ತ ತುಷಾರ್ ಗಿರಿನಾಥ್, ಇಂಜಿನಿಯರಿಂಗ್ ಚೀಫ್, ಚೀಫ್ ಎಂಜಿನಿಯರ್ ಪ್ರಹ್ಲಾದ್, ಲೋಕೇಶ್ ಅವರ ಮೂಲಕ ಇದು ನಡೆದಿದೆ. ಹಿಂದಿನ ಕಾರ್ಯಾದೇಶ ರದ್ದು ಮಾಡಿದ್ದರೆ, ಸಂಪುಟದ ಅನುಮತಿ ಬೇಕಾಗಿತ್ತು. ಆದರೆ ಯಾವುದೇ ಅನುಮತಿ ಪಡೆದಿರಲಿಲ್ಲ ಎಂದು ದೂರಿದ್ದಾರೆ.

    ಲೋಕಾಯುಕ್ತಕ್ಕೆ ಕೊಡುತ್ತೇವೆ:
    ಕಾಯ್ದೆ ಉಲ್ಲಂಘಿಸಿ ಒಂದು ಸಿಂಗಲ್ ಟೆಂಡರ್ ಕೊಟ್ಟಿದ್ದಾರೆ. ಮಂಗಳೂರಿನಲ್ಲಿ ಸ್ಪರ್ಧಿಸಿದ್ದ ಮೊಹಿಯುದ್ದೀನ್ ಬಾವ ಅವರ ತಮ್ಮ ಸೈಫುದ್ದೀನ್‍ರಿಗೆ ಸೇರಿದ ಓಶಿಯನ್ ಕಂಪನಿಗೆ ಸಿಂಗಲ್ ಟೆಂಡರ್ ಕೊಟ್ಟಿದ್ದಾರೆ. ಚೀಫ್ ಎಂಜಿನಿಯರ್ ಪ್ರಹ್ಲಾದ್ ಅವರೇ ಇ-ನೋಟ್ ಹಾಕಿ ಮಂಜೂರಾತಿ ಕೊಟ್ಟಿದ್ದಾರೆ. ಬಳಿಕ ಅವರೇ ಎಂಜಿನಿಯರಿಂಗ್ ಚೀಫ್ ಆಗಿ ಅನುಮೋದಿಸಿದೆ ಎಂದು ಬರೆದಿದ್ದಾರೆ. 2018-19ರ ಟೆಂಡರ್ ರದ್ದು ಮಾಡದೆ, ಯಾರೋ ಒಬ್ಬರ ಓಲೈಕೆಗೆ ಸಿಂಗಲ್ ಟೆಂಡರ್ ಕೊಟ್ಟಿದ್ದಾರೆ. ಮೊನ್ನೆ ಡಿಸಿಎಂ ಅವರು ಈ ವೈಟ್ ಟ್ಯಾಪಿಂಗ್ ರಸ್ತೆ ಕಾಮಗಾರಿಗಳಿಗೆ ಚಾಲನೆ ಕೊಟ್ಟಿದ್ದಾರೆ. ತರಾತುರಿಯಲ್ಲಿ ಟೆಂಡರ್ ಮಾಡಿದ್ದೇಕೆ? ಪ್ರಕೃತಿ ವಿಕೋಪ ಇದ್ದರೆ ಟೆಂಡರ್ ಅವಧಿಯನ್ನು ಸ್ವಲ್ಪ ಕಡಿಮೆ ಮಾಡಬಹುದು. ಇದೊಂದು ದೊಡ್ಡ ಹಗರಣ. ಇದನ್ನು ಲೋಕಾಯುಕ್ತಕ್ಕೂ ಕೊಡುತ್ತೇವೆ. ಗುತ್ತಿಗೆದಾರರಿಗೆ ಸರ್ಟಿಫಿಕೇಟ್ ಕೊಟ್ಟದ್ದೆಲ್ಲವೂ ನಕಲಿ ಎಂದು ಅವರು ಆರೋಪಿಸಿದ್ದಾರೆ.

  • ಡೆಂಗ್ಯೂ ಬಗ್ಗೆ ಜಾಗೃತಿ ಮೂಡಿಸಿ ಬಂಪರ್ ಬಹುಮಾನ ಗೆಲ್ಲಿ – ರೀಲ್ಸ್ ಪ್ರಿಯರಿಗೆ ಬಿಬಿಎಂಪಿ ಆಫರ್

    ಡೆಂಗ್ಯೂ ಬಗ್ಗೆ ಜಾಗೃತಿ ಮೂಡಿಸಿ ಬಂಪರ್ ಬಹುಮಾನ ಗೆಲ್ಲಿ – ರೀಲ್ಸ್ ಪ್ರಿಯರಿಗೆ ಬಿಬಿಎಂಪಿ ಆಫರ್

    – ಐದು ಉತ್ತಮ ರೀಲ್ಸ್‌ಗೆ ತಲಾ 25,000 ರೂ. ಬಹುಮಾನ
    – ಹೆಚ್ಚು ವಿದ್ಯಾರ್ಥಿಗಳನ್ನು ಬಳಸಿಕೊಂಡು ರೀಲ್ಸ್ ಮಾಡುವ ಶಾಲೆಗೆ 1 ಲಕ್ಷ ರೂ.

    ಬೆಂಗಳೂರು: ರೀಲ್ಸ್ ಪ್ರಿಯರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಆರೋಗ್ಯ ಇಲಾಖೆ ಭರ್ಜರಿ ಆಫರ್ ಕೊಟ್ಟಿದೆ. ಡೆಂಗ್ಯೂ (Degue) ಕುರಿತು ಜಾಗೃತಿ ಮೂಡಿಸುವ ರೀಲ್ಸ್ ಮಾಡಿ ಬಹುಮಾನ ಗೆಲ್ಲಿ ಎಂದು ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ.

    ರಾಜ್ಯಾದ್ಯಂತ ಹಾಗೂ ಬೆಂಗಳೂರಲ್ಲಿ (Bengaluru) ಡೆಂಗ್ಯೂ ಸೋಂಕು ಮತ್ತು ಸಾವು ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಬಿಬಿಎಂಪಿ ಆರೋಗ್ಯ ಇಲಾಖೆ ಹೊಸ ಪ್ರಯತ್ನ ಮಾಡಿದೆ. ರೀಲ್ಸ್ ಮೂಲಕ ಡೆಂಗ್ಯೂ ವಾರಿಯರ್ ಆಗಲು ಬಿಬಿಎಂಪಿ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿದೆ. ಇದನ್ನೂ ಓದಿ: ಡೆಂಗ್ಯೂ ಜ್ವರದಿಂದ MBBS ವಿದ್ಯಾರ್ಥಿ ಸಾವು – ಮುಗಿಲು ಮುಟ್ಟಿದ ಪೋಷಕರ ಆಕ್ರಂದನ!

    ಸೋಷಿಯಲ್ ಮೀಡಿಯಾದಲ್ಲಿ ಡೆಂಗ್ಯೂ ಕುರಿತು ರೀಲ್ಸ್ ವೀಡಿಯೋಗಳನ್ನು ಬಿಬಿಎಂಪಿ ಆಹ್ವಾನಿಸಿದೆ. ಡೆಂಗ್ಯೂ ಬಗ್ಗೆ ಜಾಗೃತಿ ಮೂಡಿಸುವ ರೀಲ್ಸ್ ಮಾಡಿದವರಿಗೆ ಬಹುಮಾನ ನೀಡಲಾಗುವುದು. ಮೊದಲ ಐದು ಉತ್ತಮ ರೀಲ್ಸ್‌ಗೆ 25,000 ರೂ. ಬಹುಮಾನ ನೀಡಲಾಗುವುದು. ದ್ವಿತೀಯ ಬಹುಮಾನಕ್ಕೆ ಆಯ್ಕೆಯಾಗುವ ಐವರಿಗೆ ತಲಾ 10 ಸಾವಿರ ರೂ. ಬಹುಮಾನ ನೀಡುವುದಾಗಿ ಬಿಬಿಎಂಪಿ ಪ್ರಕಟಣೆಯಲ್ಲಿ ತಿಳಿಸಿದೆ.

    ಶಾಲಾ ಮಕ್ಕಳಿಗೆ ಬಂಪರ್ ಆಫರ್
    ಉತ್ತಮ ರೀತಿಯಲ್ಲಿ ಹೆಚ್ಚು ವಿದ್ಯಾರ್ಥಿಗಳ ಮೂಲಕ ರೀಲ್ಸ್ ಮಾಡಿಸುವ ಶಾಲೆಗೆ ಬರೋಬ್ಬರಿ 1 ಲಕ್ಷ ಬಹುಮಾನ ನೀಡುವುದಾಗಿ ಬಿಬಿಎಂಪಿ ತಿಳಿಸಿದೆ. ಅಲ್ಲದೇ ಮಕ್ಕಳಿಗೆ ಜಾಗೃತಿ ಮೂಡಿಸುವ ವೀಡಿಯೋ ಮಾಡಲು ಉತ್ತೇಜಿಸುವ ಶಿಕಕ್ಷಕರಿಗೂ 35 ಸಾವಿರ ಬಹುಮಾನ ನೀಡುವುದಾಗಿ ತಿಳಿಸಿದೆ. ಇದನ್ನೂ ಓದಿ: ರಾಮನಗರದಲ್ಲಿ ಡೆಂಗ್ಯೂಗೆ 19 ವರ್ಷದ ಯುವತಿ ಬಲಿ

    ಡೆಂಗ್ಯೂ ಬಗ್ಗೆ ಜಾಗೃತಿ ಮೂಡಿಸುವ ರೀಲ್ಸ್ ಮಾಡಿ ಅದನ್ನು ಬಿಬಿಎಂಪಿ ಆರೋಗ್ಯ ಇಲಾಖೆಗೆ ಫೇಸ್‌ಬುಕ್ ಮತ್ತು ಎಕ್ಸ್ (ಟ್ವಿಟ್ಟರ್) ಖಾತೆಗೆ ಟ್ಯಾಗ್ ಮಾಡಬೇಕು. ಡೆಂಗ್ಯೂ ಬಗ್ಗೆ ಹೆಚ್ಚಿನ ಮಾಹಿತಿಯೊಂದಿಗೆ ಹೆಚ್ಚು ವೀಕ್ಷಣೆ ಪಡೆಯುವ ರೀಲ್ಸ್ಗೆ ತಕ್ಕಂತೆ ಬಹುಮಾನ ನೀಡಲಾಗುವುದು ಎಂದು ತಿಳಿಸಿದೆ. ರೀಲ್ಸ್ ಹಂಚಿಕೊಳ್ಳುವ ಪ್ರತಿಯೊಬ್ಬರಿಗೂ ಡೆಂಗ್ಯೂ ವಾರಿಯರ್ ಎಂಬ ಪಟ್ಟವನ್ನು ಪಾಲಿಕೆ ಆರೋಗ್ಯ ವಿಭಾಗ ನೀಡಲಿದೆ.

    ಸಿಲಿಕಾನ್ ಸಿಟಿಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಷಿಯಲ್ ಮೀಡಿಯಾ ಬಳಸಿಕೊಂಡು ಜಾಗೃತಿ ಮೂಡಿಸಲು ಬಿಬಿಎಂಪಿ ಮುಂದಾಗಿದೆ. ಅದಕ್ಕಾಗಿ ವಿಭಿನ್ನ ಕಾರ್ಯಕ್ರಮಕ್ಕೆ ಉತ್ತೇಜನ ನೀಡಿದೆ. ಇದನ್ನೂ ಓದಿ: ಡೆಂಗ್ಯೂ ನಿಯಂತ್ರಣಕ್ಕೆ ಮಾರ್ಗಸೂಚಿ ಪ್ರಕಟ – ಬಿಪಿಎಲ್‌ ಕಾರ್ಡ್‌ದಾರರಿಗೆ ಸೊಳ್ಳೆ ನಿರೋಧಕ, ಬೇವಿನ ಎಣ್ಣೆ ವಿತರಿಸಲು ಸೂಚನೆ!

  • ರೈತನಿಗೆ ಅಪಮಾನ ಪ್ರಕರಣ – ಬೆಂಗಳೂರಿನ ಜಿ.ಟಿ ಮಾಲ್ ಬಂದ್!

    ರೈತನಿಗೆ ಅಪಮಾನ ಪ್ರಕರಣ – ಬೆಂಗಳೂರಿನ ಜಿ.ಟಿ ಮಾಲ್ ಬಂದ್!

    – 1.70 ಕೋಟಿ ರೂ. ತೆರಿಗೆ ಬಾಕಿ – ಬಿಬಿಎಂಪಿ ನೋಟಿಸ್‌ ಬಗ್ಗೆ ಮಾಲೀಕರು ಹೇಳಿದ್ದೇನು?
    – ಇದರಲ್ಲಿ ರಾಜಕೀಯವಿಲ್ಲ: ಮಾಲೀಕ ಪ್ರಶಾಂತ್‌

    ಬೆಂಗಳೂರು: ರೈತರೊಬ್ಬರಿಗೆ (Farmer) ಅಪಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು ಸ್ವಯಂ ಪ್ರೇರಿತವಾಗಿ ಜಿ.ಟಿ ಮಾಲ್ (GT Mall) ಬಂದ್ ಮಾಡುವ ನಿರ್ಧಾರವನ್ನು ಮಾಲೀಕ ಪ್ರಶಾಂತ್ ಕೈಗೊಂಡಿದ್ದಾರೆ.

    ಕಳೆದ ಎರಡು ದಿನಗಳ ಹಿಂದೆಯಷ್ಟೇ ಹಾವೇರಿ ಮೂಲದ ರೈತ ಫಕೀರಪ್ಪ ಅವರಿಗೆ ಅಪಮಾನ ಮಾಡಿರುವ ಘಟನೆ ಬೆಳಕಿಗೆ ಬಂದಿತ್ತು. ಪಂಚೆ ಧರಿಸಿ ಬಂದಿದ್ದಕ್ಕೆ ಸಿಬ್ಬಂದಿ ಮಾಲ್ ಒಳಗೇ ಬಿಡದೇ ಅಪಮಾನ ಮಾಡಿದ್ದರು. ಈ ಪ್ರಕರಣ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೇ ವಿಧಾನಸಭೆಯ ಅಧಿವೇಶನದಲ್ಲೂ ಸಚಿವ ಬೈರತಿ ಸುರೇಶ್ ಅವರು ಮಾಲ್ ಮುಚ್ಚಿಸುತ್ತೇವೆ ಎಂದು ಪ್ರಸ್ತಾಪಿಸಿದ್ದರು. ಈ ಎಲ್ಲ ಬೆಳವಣಿಗೆಗಳ ನಡುವೆ ಮಾಲೀಕರು ಸ್ವಯಂಪ್ರೇರಿತವಾಗಿ ಮಾಲ್ ಬಂದ್ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಇದನ್ನೂ ಓದಿ: ಮದ್ಯದ ಅಂಗಡಿಗೆ ಪರವಾನಗಿ ನೀಡಲು ಅಧಿಕಾರಿಗಳು ಲಕ್ಷಾಂತರ ರೂಪಾಯಿ ಲಂಚ ಪಡೆಯುತ್ತಿದ್ದಾರೆ – ಕಾಂಗ್ರೆಸ್‌ ಸದಸ್ಯ ಬಾಂಬ್‌!

    ಈ ಕುರಿತು `ಪಬ್ಲಿಕ್ ಟಿವಿ’ (Public TV) ಜೊತೆಗೆ ಮಾತನಾಡಿದ ಜಿ.ಟಿ ಮಾಲ್ ಮಾಲೀಕ ಪ್ರಶಾಂತ್ (Prashanth), ನಮ್ಮ ಮಾಲ್‌ನಲ್ಲಿ ಆಗಬಾರದಂತಹ ಘಟನೆ ಆಗಿದೆ. ಅದು ಹೊಸ ಸಿಬ್ಬಂದಿಯಿಂದ ಆಗಿದೆ. ನಾನು ಮಾಲ್ ಮಾಲೀಕನಾಗಿ ಆ ಘಟನೆ ಬಗ್ಗೆ ಕ್ಷಮೆ ಕೇಳುತ್ತೇನೆ. ಇದನ್ನ 2 ದಿನಗಳ ಹಿಂದೆಯೇ ಕ್ಷಮೆ ಕೇಳಬೇಕಾಗಿತ್ತು. ನಮ್ಮ ತಂದೆ ಅನಾರೋಗ್ಯದ ವಿಚಾರವಾಗಿ ಸ್ಪಲ್ವ ಆಸ್ಪತ್ರೆಯಲ್ಲಿದ್ದೆವು. ರೈತ ಫಕೀರಪ್ಪ ಅವ್ರಿಗೆ ನಮ್ಮಿಂದ ಆಗಿರೋದ ತಪ್ಪು. ನನ್ನ ತಂದೆ ಕೂಡ ಫಕೀರಪ್ಪ ಜೊತೆಗೆ ಫೋನ್ ಕಾಲ್ ಮಾಡಿ ಕ್ಷಮೆ ಕೇಳಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: 7 ದಿನಗಳ ಕಾಲ ಜಿ.ಟಿ ಮಾಲ್ ಮುಚ್ಚಿಸುತ್ತೇವೆ: ವಿಧಾನಸಭೆಯಲ್ಲಿ ಸಚಿವ ಬೈರತಿ ಸುರೇಶ್ ಘೋಷಣೆ

    1.70 ಕೋಟಿ ತೆರಿಗೆ ಬಾಕಿ:
    ಮುಂದುವರಿದು ಮಾತನಾಡಿದ ಅವರು, ಬಿಬಿಎಂಪಿಯಿಂದ (BBMP) ನೋಟಿಸ್ ಬಂದಿದೆ. ಆದ್ರೆ ಮಾಲ್ ಬಂದ್ ಮಾಡುವಂತೆ ಹೇಳಿಲ್ಲ. ಘಟನೆ ಬಗ್ಗೆ ವರದಿ ನೀಡಿ ಎಂದು ನೀಡಿದ್ದಾರೆ ಎಂದರು. ಇದೇ ವೇಳೆ ಮಾಲ್ ತೆರಿಗೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, 1 ವರ್ಷದ ತೆರಿಗೆ ಬಾಕಿಯಿದೆ. 1.70 ಕೋಟಿ ರೂ. ಬಾಕಿ ಇದೆ. ಆದ್ರೆ ತೆರಿಗೆ ವಿಚಾರಕ್ಕೂ ಮಾಲ್ ಬಂದ್ ಮಾಡುತ್ತಿಲ್ಲ. ನಮ್ಮ ಕಡೆಯಿಂದ ತಪ್ಪಾಗಿದೆ, ಹಾಗಾಗಿ ನಾವು ಮಾಲ್ ಕ್ಲೋಸ್ ಮಾಡ್ತಿದ್ದೇವೆ. 24 ಗಂಟೆಗಳಲ್ಲಿ ಉತ್ತರ ನೀಡುವಂತೆ ಹೇಳಿದ್ದಾರೆ. ನಾವು ಇನ್ನೂ ಎರಡ್ಮೂರು ದಿನ ಮಾಲ್ ಕ್ಲೋಸ್ ಮಾಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ನಟ ದರ್ಶನ್ & ಗ್ಯಾಂಗ್‌ಗೆ ಆ.1ರ ವರೆಗೆ ಜೈಲೇ ಗತಿ – ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ

    ಇದರಲ್ಲಿ ರಾಜಕೀಯ ಇಲ್ಲ:
    ಮಾಲ್ ಬಂದ್ ಮಾಡುವ ವಿಚಾರದಲ್ಲಿ ಯಾವುದೇ ರಾಜಕೀಯ ನಡೆದಿಲ್ಲ. ನಮ್ಮ ಕಡೆಯಿಂದ ತಪ್ಪಾಗಿದೆ. ಫಕೀರಪ್ಪ ಅವ್ರಿಗೆ ಆಗಿರೋದಕ್ಕೆ ನೈತಿಕ ಹೊಣೆ ನಮ್ಮದೇ. ಮಾಲ್ ಎಷ್ಟು ದಿನ ಬಂದ್ ಆಗುತ್ತೆ ಗೊತ್ತಿಲ್ಲ. ಸೆಷನ್‌ನಲ್ಲಿ 7 ದಿನ ಬಂದ್ ಮಾಡುತ್ತೇವೆ ಅಂತ ಹೇಳಿದ್ದಾರೆ. ಗುರುವಾರ ಮಧ್ಯಾಹ್ನದ ಬಳಿಕವೇ ನಾವು ಈ ನಿರ್ಧಾರ ಕೈಗೊಂಡಿರೋದು, ಮಾಲ್ 7 ದಿನ ಬಂದ್ ಆಗಬಹುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Valmiki Corporation Scam | ಮಾಜಿ ಸಚಿವ ನಾಗೇಂದ್ರಗೆ ಮತ್ತೆ 5 ದಿನ ಇಡಿ ಕಸ್ಟಡಿ – ಕೋರ್ಟ್ ಆದೇಶ

  • ಬೆಂಗ್ಳೂರಲ್ಲಿ ಕಸ ತೆಗೆಯಲು 30 ವರ್ಷಕ್ಕೆ ಗುತ್ತಿಗೆ – 45 ಸಾವಿರ ಕೋಟಿ ಟೆಂಡರ್‌ನಲ್ಲಿ 15 ಸಾವಿರ ಕೋಟಿ ಕಿಕ್‌ ಬ್ಯಾಕ್‌: ಹೆಚ್‌ಡಿಕೆ ಬಾಂಬ್‌

    ಬೆಂಗ್ಳೂರಲ್ಲಿ ಕಸ ತೆಗೆಯಲು 30 ವರ್ಷಕ್ಕೆ ಗುತ್ತಿಗೆ – 45 ಸಾವಿರ ಕೋಟಿ ಟೆಂಡರ್‌ನಲ್ಲಿ 15 ಸಾವಿರ ಕೋಟಿ ಕಿಕ್‌ ಬ್ಯಾಕ್‌: ಹೆಚ್‌ಡಿಕೆ ಬಾಂಬ್‌

    ಮಂಡ್ಯ: ಬೆಂಗಳೂರಿನಲ್ಲಿ ಕಸ ತೆಗೆಯಲು ಬ್ಲಾಕ್‌ ಲಿಸ್ಟ್‌ನಲ್ಲಿ ಇರುವ ಗುತ್ತಿಗೆದಾರನಿಗೆ ಸಚಿವರೊಬ್ಬರು ಟೆಂಡರ್ (Garbage Tender) ಕೊಟ್ಟಿದ್ದಾರೆ. 30 ವರ್ಷಕ್ಕೆ ಲೀಸ್‌ಗೆ (ಬೋಗ್ಯ) ಕೊಟ್ಟಿದ್ದಾರೆ. 45 ಸಾವಿರ ಕೋಟಿ ರೂ.ಗೆ ಟೆಂಡರ್‌ ಕೊಟ್ಟು, 15 ಸಾವಿರ ಕೋಟಿ ರೂ. ಕಿಕ್ ಬ್ಯಾಕ್ ಪಡೆಯಲು ಪೆನ್ನು ಪೇಪರ್ ಪಡೆದವರು ಮುಂದಾಗಿದ್ದಾರೆ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಹೊಸ ಬಾಂಬ್‌ ಸಿಡಿಸಿದ್ದಾರೆ.

    ಮಂಡ್ಯದ (Mandya) ಪಾಂಡವಪುರ ಪಟ್ಟಣದಲ್ಲಿ ತಮಗೆ ನಡೆದ ಅಭಿನಂದನಾ ಹಾಗೂ ಕೃತಜ್ಞತಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕಸ ಎತ್ತಲು ಬ್ಲಾಕ್‌ ಲಿಸ್ಟ್‌ನಲ್ಲಿ ಇರುವ ಗುತ್ತಿಗೆದಾರನಿಗೆ ಟೆಂಡರ್ ಕೊಟ್ಟಿದ್ದಾರೆ. 30 ವರ್ಷಕ್ಕೆ ಲೀಸ್‌ಗೆ (ಬೋಗ್ಯ) ಕೊಟ್ಟಿದ್ದಾರೆ. ಅದರಲ್ಲೂ 15 ಸಾವಿರ ಕೋಟಿ ರೂ. ಕಿಕ್ ಬ್ಯಾಕ್ ತೆಗೆದುಕೊಂಡಿದ್ದಾರೆ. 45 ಸಾವಿರ ಕೋಟಿ ರೂ.ಗೆ ಟೆಂಡರ್‌ ಕೊಟ್ಟು, 15 ಸಾವಿರ ಕೋಟಿ ರೂ. ಕಿಕ್ ಬ್ಯಾಕ್ ಪಡೆಯಲು ಪೆನ್ನು ಪೇಪರ್ ಪಡೆದವರು ಮುಂದಾಗಿದ್ದಾರೆ. 30 ವರ್ಷಕ್ಕೆ ನಾವು ನೀವು ಬದುಕಿರುತ್ತೀವೋ ಇಲ್ಲವೋ ಎಂದು ಬಾಂಬ್‌ ಸಿಡಿಸಿದ್ದಾರೆ. ಇದನ್ನೂ ಓದಿ: Karnataka Assembly Session| ಟಾರ್ಗೆಟ್‌ ಸಿದ್ದರಾಮಯ್ಯ – ಪ್ರತಿಪಕ್ಷಗಳಿಗೆ ಸಿಕ್ಕಿವೆ 3 ಬ್ರಹ್ಮಾಸ್ತ್ರಗಳು

    ಪೇಪರ್ ಪೆನ್ನು ಕೇಳಿದವರಿಗೂ ಮಂಡ್ಯ ಜನ 6 ಸ್ಥಾನ ಕೊಟ್ಟರು. ಈಗ ಏನಾಗಿದೆ, ಕಿಕ್ ಬ್ಯಾಕ್ ತೆಗೆದುಕೊಳ್ಳುವುದರಲ್ಲಿ ಉಪಯೋಗ ಮಾಡ್ತಿದ್ದಾರೆ. ನೀವು ನನಗೆ ಕೊಟ್ಟ ಶಕ್ತಿ ರಾಜ್ಯದ ಅಭಿವೃದ್ಧಿಗೆ ಮುಡಿಪು. ನನಗೆ ಕಾಂಗ್ರೆಸ್ ನಾಯಕರ ಸರ್ಟಿಫಿಕೇಟ್ ಬೇಡ. ಜನರ ಋಣ ತೀರಿಸಿ ಮಣ್ಣಲ್ಲಿ ಮಣ್ಣಾಗುತ್ತೇನೆ ಎಂದು ಭಾವುಕರಾಗಿದ್ದಾರೆ. ಇದನ್ನೂ ಓದಿ: Wimbledon Champion: ಸತತ 2ನೇ ಬಾರಿಗೆ ಅಲ್ಕರಾಜ್‌ಗೆ ವಿಂಬಲ್ಡನ್‌ ಕಿರೀಟ – ಜೊಕೊವಿಕ್‌ಗೆ ಮತ್ತೆ ಸೋಲು!

    ಇದಕ್ಕೂ ಮುನ್ನ ಮಾತನಾಡಿದ ಹೆಚ್‌ಡಿಕೆ, ಅಲ್ಲದೇ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರೈತರ ಆತ್ಮಹತ್ಯೆ ಹೆಚ್ಚಾಗಿದೆ. ಇದು ನನ್ನ ಮನಸ್ಸಿಗೆ ಹೆಚ್ಚಿನ ನೋವುಂಟು ಮಾಡಿದೆ. ಕೇಂದ್ರ ಸಚಿವನಾದ ನಂತರ ಮಂಡ್ಯದಲ್ಲಿ ಜನತಾ ದರ್ಶನ ಮಾಡಿದೆ. ಅಂದು ಸಂದಾಯವಾದ ಅರ್ಜಿಗಳಲ್ಲಿ 400ಕ್ಕೂ ಹೆಚ್ಚು ಅರ್ಜಿಗಳು ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳು. ಆರ್ಥಿಕ ನೆರವಿಗೆ ಕೋರಿ 300ಕ್ಕೂ ಹೆಚ್ಚು ಅರ್ಜಿಗಳು, ನಿರುದ್ಯೋಗ ಸಮಸ್ಯೆ ಕುರಿತ 300ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಮನೆ ಹಾಗೂ ನಿವೇಶನ ಕೋರಿದ ಅರ್ಜಿಗಳು ಬಂದಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾವೇರಿ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ವರೆಗೂ ಹೋಗೋಣ – ರಾಜ್ಯ ಸರ್ಕಾರಕ್ಕೆ ಆರ್‌. ಅಶೋಕ್‌ ಬೆಂಬಲ!

    ಜನ ನೀಡಿದ ಅರ್ಜಿಗಳ ವಿಲೇವಾರಿಗೆ ಮಂಡ್ಯದಲ್ಲಿ ಡಿಸಿ ಆಗಿ ಕೆಲಸ ಮಾಡಿದ್ದ ಕೃಷ್ಣಯ್ಯ ಅವ್ರನ್ನ ವಿಶೇಷಾಧಿಕಾರಿಯಾಗಿ ನೇಮಕ ಮಾಡಿದ್ದೇನೆ. ಅವರು ನಿಮ್ಮ ಸಮಸ್ಯೆ ಆಲಿಸಿ ನನ್ನ ಗಮನಕ್ಕೆ ತರುತ್ತಾರೆ. ಪ್ರತಿ ಮಂಗಳವಾರ, ಬುಧವಾರ ಸಂಸದರ ಕಚೇರಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಜನರಿಗೆ ಭರವಸೆ ನೀಡಿದರು.

  • ರಾಜ್ಯದಲ್ಲಿ ಡೆಂಗ್ಯೂ ತಾಂಡವ – ಮಹದೇವಪುರ ಟೆಕ್ ಹಬ್‍ನಲ್ಲಿ ಹೆಚ್ಚಿದ ಕೇಸ್

    ರಾಜ್ಯದಲ್ಲಿ ಡೆಂಗ್ಯೂ ತಾಂಡವ – ಮಹದೇವಪುರ ಟೆಕ್ ಹಬ್‍ನಲ್ಲಿ ಹೆಚ್ಚಿದ ಕೇಸ್

    ಬೆಂಗಳೂರು: ಮಹದೇವಪುರದ ಟೆಕ್ ಹಬ್‍ನಲ್ಲಿ ಡೆಂಗ್ಯೂ (Dengue) ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬೆಂಗಳೂರಿನಲ್ಲಿ (Bengaluru) ವರದಿಯಾಗುತ್ತಿರುವ ಪ್ರತಿ 4 ಡೆಂಗ್ಯೂ ಪ್ರಕರಣಗಳಲ್ಲಿ 1 ಪ್ರಕರಣ ಮಹದೇವಪುರ ವಲಯದ್ದಾಗಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

    ಬಿಬಿಎಂಪಿ (BBMP) ಅಂಕಿ ಅಂಶಗಳ ಪ್ರಕಾರ, ನಗರದಲ್ಲಿ ಮಂಗಳವಾರದವರೆಗೆ 4,194 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಮಹದೇವಪುರ ವಲಯದಲ್ಲಿ 1,126 ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಮಹದೇವಪುರ ಮೊದಲನೇ ಸ್ಥಾನದಲ್ಲಿದೆ. ಇನ್ನೂ 970 ಕೇಸ್ ವರದಿಯಾಗುವ ಮೂಲಕ ಪೂರ್ವ ವಲಯ 2ನೇ ಸ್ಥಾನದಲ್ಲಿದೆ.

    ಬೊಮ್ಮನಹಳ್ಳಿ ವಲಯದಲ್ಲಿ ಕಳೆದ 9 ದಿನಗಳಲ್ಲಿ ಒಟ್ಟು 256 ಪ್ರಕರಣ ವರದಿಯಾಗಿದೆ. ವರ್ತೂರು, ದೊಡ್ಡನೆಕ್ಕುಂದಿ, ಮಾರತ್ತಹಳ್ಳಿ, ಬೆಳ್ಳಂದೂರು, ಕೆಆರ್‍ಪುರ, ಜೋಗುಪಾಳ್ಯ ಹಾಗೂ ಈಜಿಪುರ ಭಾಗದಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ.

    ರಾಜ್ಯದಲ್ಲಿ ಬುಧವಾರ 293 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 118 ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದು, ರಾಜ್ಯದಲ್ಲಿ ಒಟ್ಟು ಡೆಂಗ್ಯೂ ಪ್ರಕರಣಗಳ ಸಂಖ್ಯೆ 7,840ಕ್ಕೆ ಏರಿಕೆ ಕಂಡಿದೆ. ಇದುವರೆಗೂ ಡೆಂಗ್ಯೂಗೆ 07 ಜನರು ಬಲಿಯಾಗಿದ್ದಾರೆ.

    ಬಿಬಿಎಂಪಿ ವ್ಯಾಪ್ತಿಯ ವಲಯವಾರು ಪ್ರಕರಣ

    ಮಹಾದೇವಪುರ – 1126
    ದಕ್ಷಿಣ ವಲಯ – 522
    ಪೂರ್ವ ವಲಯ – 970
    ಪಶ್ಚಿಮ ವಲಯ – 388
    ಯಲಹಂಕ – 258
    ಆರ್‍ಆರ್ ನಗರ – 311
    ದಾಸರಹಳ್ಳಿ – 43
    ಬೊಮ್ಮನಹಳ್ಳಿ – 576
    ಒಟ್ಟು – 4194