Tag: bbmp

  • ಬಫರ್‌ ವಲಯದಲ್ಲಿ ಮನೆ ನಿರ್ಮಿಸಿದವರಿಗೆ ಬಿಬಿಎಂಪಿ ಶಾಕ್‌

    ಬಫರ್‌ ವಲಯದಲ್ಲಿ ಮನೆ ನಿರ್ಮಿಸಿದವರಿಗೆ ಬಿಬಿಎಂಪಿ ಶಾಕ್‌

    ಬೆಂಗಳೂರು: ಬಫರ್ ವಲಯದಲ್ಲಿ (Buffer Zone) ಮನೆಗಳನ್ನು ನಿರ್ಮಾಣ ಮಾಡಿದವರಿಗೆ ಬಿಬಿಎಂಪಿ (BBMP) ಶಾಕ್‌ ನೀಡಲು ಮುಂದಾಗಿದೆ. ಮೊದಲು ವಿದ್ಯುತ್ ಕಡಿತ ಮಾಡಿ ನಂತರ ಬಫರ್ ಝೋನ್‌ನಲ್ಲಿ ನಿರ್ಮಾಣ ಆಗಿರುವ ಕಟ್ಟಡಗಳ ತೆರವಿಗೆ ಪ್ಲ್ಯಾನ್ ಮಾಡಿದ್ದು, ನಿರ್ಮಾಣ ಹಂತದ ಕಟ್ಟಡಗಳನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ಮಾಡುತ್ತಿದೆ.

    ಬೆಂಗಳೂರಿನಲ್ಲಿ ರಾಜ ಕಾಲುವೆ, ಸರ್ಕಾರಿ ಜಾಗ, ಕೆರೆ ಒತ್ತುವರಿ ಮಾಡಿ ಮನೆ ನಿರ್ಮಾಣ ಮಾಡಿದ ಪ್ರಕರಣ ಜಾಸ್ತಿ ಇದೆ. ಇವುಗಳನ್ನೇ ತೆರವು ಮಾಡಿಸಲು ಬಿಬಿಎಂಪಿ ಹೆಣಗಾಡುತ್ತಿದೆ. ಈಗ ಬಫರ್ ಝೋನ್‌ ಗುರಿಯಾಗಿಸಿಕೊಂಡು ಕಾರ್ಯಾಚರಣೆ ಮಾಡಲು ಮುಂದಾಗಿದೆ.  ಇದನ್ನೂ ಓದಿ: ʻದೈಹಿಕ ಸಂಬಂಧʼ ಅಂದ್ರೆ ಲೈಂಗಿಕ ದೌರ್ಜನ್ಯ ಎಂದರ್ಥವಲ್ಲ – ಪೋಕ್ಸೋ ಕೇಸ್‌ ಆರೋಪಿ ಖುಲಾಸೆಗೊಳಿಸಿದ ದೆಹಲಿ ಹೈಕೋರ್ಟ್

    ಬಫರ್ ವಲಯದಲ್ಲಿ, ಚರಂಡಿ, ಕಾಲುವೆ ಮೇಲೆ ಮನೆ ನಿರ್ಮಾಣ ಮಾಡಲಾಗಿದೆ. ಆ ರೀತಿ ಬಫರ್ ಝೋನ್‌ ಮೇಲೆ ಕಟ್ಟಡ ನಿರ್ಮಾಣ ಮಾಡುತ್ತಿರುವ ಕಡೆ ಗುರುತು ಮಾಡಿ ಬೆಸ್ಕಾಂ ಕಡೆಯಿಂದ ನೋಟಿಸ್ ಕೊಡಿಸಲು ಪಾಲಿಕೆ ಚಿಂತನೆ ನಡೆಸಿದೆ. ಬಿಬಿಎಂಪಿ ಮುಖ್ಯ ಆಯುಕ್ತರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನೋಟಿಸ್ ಕೊಡಿಸುವ ತೀರ್ಮಾನಕ್ಕೆ ಬರಲಾಗಿದೆ.

    ಯಲಹಂಕದ ನರಸೀಪುರ ಸೇರಿದಂತೆ ಹಲವು ಕಡೆ ಕೆರೆ ಜಾಗವನ್ನು ಒತ್ತುವರಿ ಮಾಡಿ ಮನೆ ನಿರ್ಮಾಣ ನಿರ್ಮಿಸಲಾಗುತ್ತಿದೆ. ನಿರ್ಮಾಣ ಹಂತದಲ್ಲಿರುವಾಗಲೇ ಬೆಸ್ಕಾಂ ಕಡೆಯಿಂದ ನೋಟಿಸ್ ಕೊಡಿಸಿ, ವಿದ್ಯುತ್ ಸಂಪರ್ಕ ಕಡಿತ ಮಾಡಿ ನಂತರ ಸೂಕ್ತ ಕ್ರಮ ಜರುಗಿಸುವಂತೆ ಮುಖ್ಯ ಆಯುಕ್ತರು ಎಲ್ಲಾ ವಲಯದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ಎಲ್ಲಾ ಕಡೆ ಕೂಡ ಬೆಸ್ಕಾಂ ಕಡೆಯಿಂದ ಬಿಬಿಎಂಪಿ ನೋಟಿಸ್ ನೀಡಿ ಕಟ್ಟಡ ತೆರವು ಮಾಡುತ್ತಾ? ಅಥವಾ ಒತ್ತಡಕ್ಕೆ ಮಣಿದು ಸುಮ್ಮನಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.

     

  • ಬೆಂಗಳೂರು – ತುಮಕೂರು ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ನಿಯಂತ್ರಣಕ್ಕೆ ಬಿಬಿಎಂಪಿ ಪ್ಲ್ಯಾನ್‌

    ಬೆಂಗಳೂರು – ತುಮಕೂರು ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ನಿಯಂತ್ರಣಕ್ಕೆ ಬಿಬಿಎಂಪಿ ಪ್ಲ್ಯಾನ್‌

    ಬೆಂಗಳೂರು: ನಗರದ ವಾಹನ ಸವಾರರು ಅದರಲ್ಲೂ ಬೆಂಗಳೂರು – ತುಮಕೂರು ರಾಷ್ಟ್ರೀಯ ಹೆದ್ದಾರಿಯ (Bengaluru – Tumkur National Highway) ವಾಹನ ಸವಾರರು ನೋಡಲೇಬೇಕಾದ ಸ್ಟೋರಿ ಇದು. ದಿನೇ ದಿನೇ ಬೆಂಗಳೂರು – ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಜಾಸ್ತಿ ಆಗ್ತಾ ಇದ್ದು ಬಿಬಿಎಂಪಿ ಟ್ರಾಫಿಕ್ ಜಾಮ್ (Traffic Jam) ನಿಯಂತ್ರಣ ಮಾಡೋಕೆ ಹಲವು ಯೋಜನೆ ಹಾಕಿಕೊಂಡಿದೆ. ಹಾಗಾಗಿ ಟ್ರಾಫಿಕ್ ಜಾಮ್ ಸರ್ವೆ ನಡೆಸಿದೆ. ಇದನ್ನೂ ಓದಿ: ಗಣರಾಜ್ಯೋತ್ಸವ ಪರೇಡ್‌ಗೆ ಮತ್ತೆ ದೆಹಲಿ ಟ್ಯಾಬ್ಲೋ ತಿರಸ್ಕಾರ – ಆಪ್‌, ಬಿಜೆಪಿ ನಡುವೆ ವಾಗ್ವಾದ

    ಎಲ್ಲಿ ಟ್ರಾಫಿಕ್ ಜಾಮ್ ಆಗ್ತಿದೆ? ಒಂದು ಸ್ಟೇಜ್‌ನಿಂದ ಮತ್ತೊಂದು ಸ್ಟೇಜ್‌ಗೆ ತಲುಪಲು ಎಷ್ಟು ಸಮಯ ಹಿಡಿಯುತ್ತೆ ಅಂತಾ ಸರ್ವೆ ಮಾಡಿದೆ. ಬೆಂಗಳೂರು – ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಯಶವಂತಪುರದಿಂದ 8ನೇ ಮೈಲಿ ನೈಸ್ ರಸ್ತೆ ತಲುಪಲು ಟ್ರಾಫಿಕ್‌ನಿಂದ ಹೆಚ್ಚು ಸಮಯ ತೆಗೆದುಕೊಳ್ತಿದೆ ಎಂಬ ಸರ್ವೆ ಲೆಕ್ಕಾಚಾರ ಇಲ್ಲಿದೆ. ಇದನ್ನೂ ಓದಿ: ಉಪನ್ಯಾಸಕನ ಮೇಲೆ ವಿದ್ಯಾರ್ಥಿ, ಪೋಷಕರಿಂದ ಹಲ್ಲೆ – ದೂರು ದಾಖಲು

    * ಯಶವಂತಪುರ ಬಿಎಂಟಿಸಿ ಬಸ್ ಸ್ಟಾಪ್ ಟು ಯಶವಂತಪುರ ಸ್ಕೈವಾಕ್‌
    ಅಂತರ – 0.8 ಕಿಮೀ
    ಟ್ರಾಫಿಕ್ ಇದ್ದರೆ – 197 ಸೆಕೆಂಡ್
    ಟ್ರಾಫಿಕ್ ಇಲ್ಲದಿದ್ದರೆ – 117 ಸೆಕೆಂಡ್
    ತಡ – 80 ಸೆಕೆಂಡ್

    * ಯಶವಂತಪುರ ಸ್ಕೈವಾಕ್ ಟು ಎಂಇಐ ಜಂಕ್ಷನ್
    ಅಂತರ – 1.2 ಕಿಮೀ
    ಟ್ರಾಫಿಕ್ ಇದ್ದರೆ – 287 ಸೆಕೆಂಡ್
    ಟ್ರಾಫಿಕ್ ಇಲ್ಲದಿದ್ದರೆ- 224 ಸೆಕೆಂಡ್
    ತಡ – 63 ಸೆಕೆಂಡ್

    * ಎಂಇಐ ಜಂಕ್ಷನ್ ಟು ಗೊರಗುಂಟೆ ಪಾಳ್ಯ
    ಅಂತರ – 0.6 ಕಿಮೀ
    ಟ್ರಾಫಿಕ್ ಇದ್ದರೆ – 128 ಸೆಕೆಂಡ್
    ಟ್ರಾಫಿಕ್ ಇಲ್ಲದಿದ್ದರೆ- 107 ಸೆಕೆಂಡ್
    ತಡ – 21 ಸೆಕೆಂಡ್

    * ಗೊರಗುಂಟೆ ಪಾಳ್ಯ ಟು ಓಆರ್‌ಆರ್ ಜಂಕ್ಷನ್
    ಅಂತರ – 0.5 ಕಿಮೀ
    ಟ್ರಾಫಿಕ್ ಇದ್ದರೆ – 120 ಸೆಕೆಂಡ್
    ಟ್ರಾಫಿಕ್ ಇಲ್ಲದಿದ್ದರೆ- 69 ಸೆಕೆಂಡ್
    ತಡ – 51 ಸೆಕೆಂಡ್

    * ಎಸ್‌ಆರ್‌ಎಸ್ ಜಂಕ್ಷನ್ ಟು ಪೀಣ್ಯ ಜಂಕ್ಷನ್ ಪಿಲ್ಲರ್
    ಅಂತರ – 1 ಕಿಮೀ
    ಟ್ರಾಫಿಕ್ ಇದ್ದರೆ- 112 ಸೆಕೆಂಡ್
    ಟ್ರಾಫಿಕ್ ಇಲ್ಲದಿದ್ದರೆ – 96 ಸೆಕೆಂಡ್
    ತಡ – 16 ಸೆಕೆಂಡ್

    * ಪೀಣ್ಯ ಜಂಕ್ಷನ್ ಟು ಜಾಲಹಳ್ಳಿ
    ಅಂತರ – 0.5 ಕಿಮೀ
    ಟ್ರಾಫಿಕ್ ಇದ್ದರೆ- 65 ಸೆಕೆಂಡ್
    ಟ್ರಾಫಿಕ್ ಇಲ್ಲದಿದ್ದರೆ -55 ಸೆಕೆಂಡ್
    ತಡ – 10 ಸೆಕೆಂಡ್

    * ಜಾಲಹಳ್ಳಿ ಟು ದಾಸರಹಳ್ಳಿ ಜಂಕ್ಷನ್
    ಅಂತರ – 0.8 ಕಿಮೀ
    ಟ್ರಾಫಿಕ್ ಇದ್ದರೆ- 143 ಸೆಕೆಂಡ್
    ಟ್ರಾಫಿಕ್ ಇಲ್ಲದಿದ್ದರೆ – 110 ಸೆಕೆಂಡ್
    ತಡ – 33 ಸೆಕೆಂಡ್

    * ದಾಸರಹಳ್ಳಿ ಜಂಕ್ಷನ್ ಟು ಎಂಟನೇ ಮೈಲಿ
    ಅಂತರ – 0.6 ಕಿಮೀ
    ಟ್ರಾಫಿಕ್ ಇದ್ದರೆ- 88 ಸೆಕೆಂಡ್
    ಟ್ರಾಫಿಕ್ ಇಲ್ಲದಿದ್ದರೆ- 47 ಸೆಕೆಂಡ್
    ತಡ – 41 ಸೆಕೆಂಡ್

    * 8ನೇ ಮೈಲಿ ಟು ನೈಸ್ ರೋಡ್
    ಅಂತರ – 4 ಕಿಮೀ
    ಟ್ರಾಫಿಕ್ ಇದ್ದರೆ- 312 ಸೆಕೆಂಡ್
    ಟ್ರಾಫಿಕ್ ಇಲ್ಲದಿದ್ದರೆ- 290 ಸೆಕೆಂಡ್
    ತಡ – 22 ಸೆಕೆಂಡ್

  • ಬಿಬಿಎಂಪಿ‌ ವ್ಯಾಪ್ತಿಯಲ್ಲಿ ಇ-ಖಾತಾ ನಾಗರಿಕ ಸಹಾಯವಾಣಿ ಪ್ರಾರಂಭ

    ಬಿಬಿಎಂಪಿ‌ ವ್ಯಾಪ್ತಿಯಲ್ಲಿ ಇ-ಖಾತಾ ನಾಗರಿಕ ಸಹಾಯವಾಣಿ ಪ್ರಾರಂಭ

    * ಇ-ಖಾತಾ ಪಡೆಯಲು ಲಂಚ ಕೇಳಿದ್ರೆ ಸಹಾಯವಾಣಿಗೆ ಕರೆ ಮಾಡಿ

    ಬೆಂಗಳೂರು: ಬಿಬಿಎಂಪಿ (BBMP) ವ್ಯಾಪ್ತಿಯಲ್ಲಿ ನಾಗರಿಕರಿಗೆ ಇ-ಖಾತಾ (E-Khata) ಪಡೆಯಲು ಅನುಕೂಲವಾಗುವ ನಿಟ್ಟಿನಲ್ಲಿ ವೃತ್ತಿಪರ, ಏಕ ಇ-ಖಾತಾ ನಾಗರಿಕ ಸಹಾಯವಾಣಿಯನ್ನು (9480683695) ಪ್ರಾರಂಭಿಸಲಾಗಿದೆ.

    ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರ ನಿರ್ದೇಶನದಂತೆ ಸಾರ್ವಜನಿಕರಿಗೆ ಇ-ಖಾತಾಗಳು ಸುಗಮವಾಗಿ ಸಿಗುವುದನ್ನು ಖಚಿತಪಡಿಸಿಕೊಳ್ಳಲು, ಬಿಬಿಎಂಪಿಯು ತಕ್ಷಣದ ಕ್ರಮಗಳನ್ನು ಕೈಗೊಂಡಿದೆ. ಇದನ್ನೂ ಓದಿ: ಸರ್ಜಾಪುರದಿಂದ ಹೆಬ್ಬಾಳದವರೆಗೆ ‘ನಮ್ಮ ಮೆಟ್ರೋ 3ಎ ಹಂತ’ – ಸಚಿವ ಸಂಪುಟ ಅನುಮೋದನೆ

    ಬಿಬಿಎಂಪಿಯು ಕೈಗೊಂಡಿರುವ ತಕ್ಷಣದ ಕ್ರಮಗಳ ವಿವರ:
    * ವೃತ್ತಿಪರ, ಏಕ ಇ-ಖಾತಾ ನಾಗರಿಕ ಸಹಾಯವಾಣಿ ಪ್ರಾರಂಭ. eKhata Citizen Helpline – 9480683695
    * ಯಾರೇ ಲಂಚ ಕೇಳಿದರೆ ಅಥವಾ ವಿಳಂಬವಾದರೆ, ದಯವಿಟ್ಟು ನಾಗರಿಕ ಸಹಾಯವಾಣಿಗೆ ಕರೆ ಮಾಡಿ.
    * ನಾಗರಿಕರು ತಾವೇ ಆನ್‌ಲೈನ್‌ನಲ್ಲಿ ಇ-ಖಾತಾವನ್ನು ರಚಿಸಲು ಪ್ರೋತ್ಸಾಹಿಸಲಾಗುತ್ತದೆ. https://BBMPeAasthi.karnataka.gov.in

    ನಾಗರಿಕರು YouTube ತರಬೇತಿ ವೀಡಿಯೊಗಳನ್ನು ನೋಡಬಹುದು:
    ಕನ್ನಡ ಭಾಷೆ: https://youtu.be/JR3BxET46po
    ಆಂಗ್ಲ ಭಾಷೆ: https://youtu.be/GL8CWsdn3wo

    ಸಹಾಯಕ ಕಂದಾಯ ಅಧಿಕಾರಿ ಕಚೇರಿಗಳನ್ನು ನಾಗರಿಕರಿಗೆ ಸುಗಮವಾಗಿ ಇ-ಖಾತಾ ನೀಡಲು ವಿಸ್ತರಿಸಲಾಗಿದೆ:
    * 1,000 ಕ್ಕೂ ಅಧಿಕ ಹೆಚ್ಚುವರಿ ಕೇಸ್ ವರ್ಕರ್ ಲಾಗಿನ್‌ಗಳನ್ನು ನೀಡಲಾಗಿದೆ.
    * 200 ಕ್ಕೂ ಅಧಿಕ ಹೆಚ್ಚುವರಿ ಸಹಾಯಕ ಕಂದಾಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
    * ಯಾರಿಂದಾದರೂ ಯಾವುದಾದರೂ ಅನಗತ್ಯ ವಿಳಂಬವಾದಲ್ಲಿ, ಪಾಲಿಕೆಯು ಕ್ರಮ ಕೈಗೊಳ್ಳುತ್ತದೆ ಮತ್ತು ನಾಗರಿಕರು ಬದಲಿ ಸಹಾಯಕ ಕಂದಾಯ ಅಧಿಕಾರಿ/ಕೇಸ್ ವರ್ಕರ್‌ಗಳನ್ನು ಸಹ ಭೇಟಿ ನೀಡಬಹುದಾಗಿರುತ್ತದೆ.

  • ಬಿಬಿಎಂಪಿ ವ್ಯಾಪ್ತಿಯ ರಸ್ತೆ ಅಭಿವೃದ್ಧಿಗೆ 694 ಕೋಟಿ ಅನುದಾನ ಬಿಡುಗಡೆಗೆ ಸಂಪುಟ ಅಸ್ತು!

    ಬಿಬಿಎಂಪಿ ವ್ಯಾಪ್ತಿಯ ರಸ್ತೆ ಅಭಿವೃದ್ಧಿಗೆ 694 ಕೋಟಿ ಅನುದಾನ ಬಿಡುಗಡೆಗೆ ಸಂಪುಟ ಅಸ್ತು!

    – ಎಸ್ಸಿ, ಎಸ್ಟಿ ಸಮುದಾಯದ ಜನರಿಗೆ ವಿಶೇಷ ನಿಧಿ ಸ್ಥಾಪನೆ
    – ಜನನ ಮರಣ ನೊಂದಣಿ ತಿದ್ದುಪಡಿಗೆ ಸಂಪುಟ ಒಪ್ಪಿಗೆ

    ಬೆಂಗಳೂರು: ಅಲ್ಪಸಂಖ್ಯಾತ ಶಿಕ್ಷಣ ಕಾಯ್ದೆ ತಿದ್ದುಪಡಿಗೆ ಒಪ್ಪಿಗೆ, ಬೆಂಗಳೂರು ಅಭಿವೃದ್ಧಿಗೆ ಅನುದಾನ ಬಿಡುಗಡೆ, ಸಂಪನ್ಮೂಲ ಕ್ರೋಢೀಕರಣಕ್ಕೆ ಒನ್ ಟೈಮ್ ಸೆಟಲ್ ಮೆಂಟ್‌ ಯೋಜನೆ ಜಾರಿಗೆ ತರುವುದು ಸೇರಿದಂತೆ ಹಲವು ಮಹತ್ವದ ಯೋಜನೆಗಳಿಗೆ ಇಂದಿನ ಸಂಪುಟ ಸಭೆಯಲ್ಲಿ (Cabinet Meeting) ಒಪ್ಪಿಗೆ ನೀಡಲಾಗಿದೆ.

    ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಒಟ್ಟು 20 ವಿಷಯಗಳ ಕುರಿತು ಚರ್ಚಿಸಿ ಅನುಮೋದನೆ ನೀಡಲಾಗಿದೆ. ಆದ್ರೆ ಮೆಟ್ರೋ 2ನೇ ಹಂತದ ಕಾಮಗಾರಿಯ ಹೆಚ್ಚುವರಿ ಕ್ರಿಯಾ ಯೋಜನೆಗೆ ಹಣ ಬಿಡುಗಡೆ ಸಂಬಂಧ ಇಂದಿನ ಸಭೆಯಲ್ಲಿ ಯಾವುದೇ ತೀರ್ಮಾನ ಆಗಿಲ್ಲ. ಕೆಲವು ತಾಂತ್ರಿಕ ಕಾರಣಗಳಿಗೆ ಇದಕ್ಕೆ ಒಪ್ಪಿಗೆ ನೀಡುವುದನ್ನು ಮುಂದೂಡಲಾಗಿದೆ. ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಮುಖ್ಯಾಂಶಗಳು ಈ ಕೆಳಗಿನಂತಿವೆ. ಇದನ್ನೂ ಓದಿ: ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಮಾನ್ಯತೆ ನಿಯಮ ಸಡಿಲ – ಶೇ.25ರಷ್ಟು ವಿದ್ಯಾರ್ಥಿಗಳಿದ್ದರೂ ಮಾನ್ಯತೆ!

    ಬಿಬಿಎಂಪಿ (BBMP) ವ್ಯಾಪ್ತಿಯ ಉಪಮುಖ್ಯರಸ್ತೆಗಳ ಅಭಿವೃದ್ಧಿಗೆ ಸಂಪುಟ ತೀರ್ಮಾನಿಸಿದೆ. 1,681 ಕಿ.ಮೀ ರಸ್ತೆಗಳ ಅಭಿವೃದ್ಧಿಗೆ ರಸ್ತೆ ಡಾಂಬರೀಕರಣಕ್ಕೆ 694 ಕೋಟಿ ರೂ. ಅನುದಾನ ಬಿಡುಗಡೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಖನಿಜಗಳನ್ನ ಹೊಂದಿರುವ ಭೂಮಿಗೆ ತೆರಿಗೆಯನ್ನ ಹಾಕಲು ಸರ್ಕಾರದ ನಿರ್ಧಾರ ಮಾಡಿದೆ. ಒಂದು ಟನ್‌ಗೆ 100 ರೂನಂತೆ ರಾಯಲ್ಟಿ ಹಾಕಲಿದ್ದು, ಈ ತೆರಿಗೆಯನ್ನ ಭೂಮಾಲಿಕರು ಕಟ್ಟಬೇಕಿದೆ. ಅಲ್ಲದೇ ಕೆಕೆಆರ್‌ಡಿಬಿಯಿಂದ ರಸ್ತೆಗಳ ಅಭಿವೃದ್ಧಿ, ಇಜೇರಿಯಿಂದ ಯಡ್ರಾಮಿ ವರೆಗೆ ರಸ್ತೆ ಅಭಿವೃದ್ಧಿಗೆ 25 ಕೋಟಿ ರೂ. ಅಂದಾಜು ವೆಚ್ಚಕ್ಕೆ ಸಂಪುಟ ಒಪ್ಪಿಗೆ. ನೀಡಲಾಗಿದೆ. ಅಲ್ಲದೇ ಮೆಟ್ರಿಕ್‌ ಪೂರ್ವ ಮತ್ತು ಮೆಟ್ರಿಕ್‌ ನಂತರದ ವಸತಿ ಶಾಲೆಗಳಿಗೆ ಕೆಕೆಆರ್‌ಡಿಬಿಯಿಂದ 42.66 ಕೋಟಿ ರೂ. ವೆಚ್ಚದಲ್ಲಿ ಹಾಸಿಗೆ, ಮಂಚ ಖರೀದಿಸಲು ಅನುಮತಿ ನೀಡಲಾಗಿದೆ.

    ಜನನ ಮರಣ ನೊಂದಣಿ ತಿದ್ದುಪಡಿಗೆ ಒಪ್ಪಿಗೆ ನೀಡಲಾಗಿದೆ. ಜೊತೆಗೆ ಹೊಸಕೋಟೆ ತಾಲೂಕಿನ ಕೊರಳೂರು ಗ್ರಾಮದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ಇದಕ್ಕಾಗಿ 97.27 ಕೋಟಿ ವೆಚ್ಚಕ್ಕೆ ಹೆಚ್ಚುವರಿ 54 ಕೋಟಿ ರೂ. ಸೇರ್ಪಡೆಗೆ ಸಮ್ಮತಿಸಲಾಗಿದೆ. ಬೆಂಗಳೂರಿನ ಸಂಪಂಗಿ ರಾಮನಗರದಲ್ಲಿ ಸಮಾಜ ಕಲ್ಯಾಣ ಭವನ ನಿರ್ಮಾಣಕ್ಕೆ 40.50 ಕೋಟಿ ರೂ. ಅನುದಾನಕ್ಕೆ ಸಮ್ಮತಿ ಸೂಚಿಸಲಾಗಿದೆ. ಸಮಾಜಕಲ್ಯಾಣ ಇಲಾಖೆ ವ್ಯಾಪ್ತಿಯ ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ ಪೌಷ್ಠಿಕ ಆಹಾರ ನೀಡಲು 43.95 ಕೋಟಿ ರೂ. ಅನುದಾನ ಒದಗಿಸಲು ತೀರ್ಮಾನ. ಇದರೊಂದಿಗೆ ಆಹಾರ ಗುಣಮಟ್ಟ ಹಾಗೂ ಔಷಧ ನಿಯಂತ್ರಣ ಇಲಾಖೆ ವಿಲೀನಗೊಳಿಸಲು ಸಂಪುಟ ಒಪ್ಪಿಗೆ ಸೂಚಿಸಿದೆ.

    ಎಸ್ಸಿ, ಎಸ್ಟಿ ಸಮುದಾಯದ ಜನರಿಗೆ ವಿಶೇಷ ನಿಧಿ ಸ್ಥಾಪನೆ:
    ಸಂಪುಟದಲ್ಲಿ ಎಸ್ಸಿ, ಎಸ್ಟಿ ಸಮುದಾಯದ ಜನರಿಗೆ ವಿಶೇಷ ನಿಧಿ ಸ್ಥಾಪನೆ ಮಾಡಲಾಗಿದೆ. 33 ವಿರಳ ದುಬಾರಿ ಕಾಯಿಲೆಗಳಿಗೆ 3,4 ಲಕ್ಷ ರೂ. ವೆರೆಗೂ ಚಿಕಿತ್ಸೆ ನೀಡುವ ಯೋಜನೆಗೆ ಒಪ್ಪಿಗೆ ಸೂಚಿಸಲಾಗಿದೆ. SCSP, TSP ಹಣವನ್ನೂ ಇದಕ್ಕೆ ಬಳಕೆ ಮಾಡಲಾಗುತ್ತದೆ. ಪ್ರಸ್ತುತ 47 ಕೋಟಿ ರೂ. ಅನುದಾನ ಮೀಸಲಿಡಲಾಗುತ್ತದೆ ಎಂದು ಸಚಿವ ಹೆಚ್‌.ಕೆ ಪಾಟೀಲ್‌ ತಿಳಿಸಿದ್ದಾರೆ.  ಇದನ್ನೂ ಓದಿ: ಸಂಪನ್ಮೂಲ ಕ್ರೋಢೀಕರಣಕ್ಕೆ ಹೊಸ ದಾರಿ – 6,105 ಕೋಟಿ ದಂಡ ಸಂಗ್ರಹಕ್ಕೆ ಒನ್‌ಟೈಮ್ ಸೆಟಲ್ಮೆಂಟ್ ಆಫರ್‌!

    ಬಾಣಂತಿಯರ ಸಾವಿನ ಬಗ್ಗೆ ಕಳವಳ:
    ಇನ್ನೂ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಸಂಭವಿಸಿದ ಬಾಣಂತಿಯರ ಸರಣಿ ಸಾವಿನ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಲಾಯಿತು. ಈ ವೇಳೆ ಸಿಎಂ ಕಳವಳ ವ್ಯಕ್ತಪಡಿಸಿದರು. ಸಚಿವ ದಿನೇಶ್ ಗುಂಡೂರಾವ್ ಈ ಕುರಿತು ಸಭೆಗೆ ಮಾಹಿತಿ ನೀಡಿದರು. ಬಳಿಕ ಇದರ ಬಗ್ಗೆ ಜಾಗೃತರಾಗಿರಬೇಕು ಎಂದು ಸಚಿವರಿಗೆ ಸೂಚಿಸಲಾಯಿತು. ಇದನ್ನೂ ಓದಿ:  ಗುರುಪ್ರಸಾದ್‌ಗೆ ಕೋಟಿಗಟ್ಟಲೇ ಸಾಲ, ರಮ್ಮಿ ಗೀಳು, ಖಿನ್ನತೆ ಇತ್ತಾ?: ಪತ್ನಿ ಸುಮಿತ್ರಾ ಸ್ಪಷ್ಟನೆ

  • ಮನೆ ಮನೆಗಳಿಂದ ಕಸ ಸಂಗ್ರಹಕ್ಕೆ ಶುಲ್ಕ ವಸೂಲಿ – ರಾಜ್ಯ ಸರ್ಕಾರಕ್ಕೆ ಬಿಬಿಎಂಪಿಯಿಂದ ಪ್ರಸ್ತಾವನೆ

    ಮನೆ ಮನೆಗಳಿಂದ ಕಸ ಸಂಗ್ರಹಕ್ಕೆ ಶುಲ್ಕ ವಸೂಲಿ – ರಾಜ್ಯ ಸರ್ಕಾರಕ್ಕೆ ಬಿಬಿಎಂಪಿಯಿಂದ ಪ್ರಸ್ತಾವನೆ

    ಬೆಂಗಳೂರು: ಮನೆ ಮನೆಯಿಂದ ಕಸ ಸಂಗ್ರಹಿಸಲು ಶುಲ್ಕ ವಸೂಲಿಗೆ ರಾಜ್ಯ ಸರ್ಕಾರಕ್ಕೆ ಬಿಬಿಎಂಪಿ ಪ್ರಸ್ತಾವನೆ ಸಲ್ಲಿಸಿದೆ. 46 ಲಕ್ಷ ಮನೆಗಳಿಂದ 2025 ರಿಂದ ಶುಲ್ಕ ವಸೂಲಿ ಆರಂಭಿಸಲು ಚಿಂತನೆ ನಡೆಸಿದೆ.

    ಬೆಂಗಳೂರು ಘನತ್ಯಾಜ್ಯ ನಿರ್ವಹಣೆಯಿಂದ ಪ್ರಸ್ತಾವನೆ ಸಲ್ಲಿಕೆಯಾಗಿದೆ. 2025 – 06ನೇ ಆರ್ಥಿಕ ವರ್ಷದಿಂದ ಈ ಮಾದರಿಯ ಶುಲ್ಕ ವಸೂಲಾತಿಗೆ ಬಿಬಿಎಂಪಿಯಿಂದ ಪ್ರಸ್ತಾವನೆ ಹೋಗಿದ್ದು, ಸರ್ಕಾರ ಒಪ್ಪಿಗೆ ನೀಡಿಲ್ಲ. ಇದನ್ನೂ ಓದಿ: ಅನ್ನಭಾಗ್ಯ ಫಲಾನುಭವಿಗಳಿಗೆ ಸರ್ಕಾರ ಶಾಕ್ – ಕಳೆದೆರಡು ತಿಂಗಳಿಂದ ಸಿಕ್ಕಿಲ್ಲ ಅಕ್ಕಿ ದುಡ್ಡು

    46 ಲಕ್ಷ ಮನೆಗಳಿಂದ ಪ್ರತಿ ತಿಂಗಳು 200 ರಿಂದ 400 ರೂಪಾಯಿ ಶುಲ್ಕ ನಿಗದಿ ಮಾಡುವ ಪ್ರಸ್ತಾವನೆ ಇದಾಗಿದೆ. ಆಸ್ತಿ ತೆರಿಗೆ ಜೊತೆಗೆ ಕಸದ ಶುಲ್ಕವನ್ನ ಸಂಗ್ರಹ ಮಾಡೋದರ ಬಗ್ಗೆ ಬಿಬಿಎಂಪಿ ಚಿಂತನೆ ನಡೆಸಿದೆ. ಈಗಾಗಲೇ ತ್ಯಾಜ್ಯ ವಿಲೇವಾರಿಗೆ ಬಿಬಿಎಂಪಿ ಟೆಂಡರ್ ಕರೆದಿದೆ. ತ್ಯಾಜ್ಯ ವಿಲೇವಾರಿಯಲ್ಲಿ ಹೊಸ ವ್ಯವಸ್ಥೆ ಜಾರಿಗೆ ತರುವ ಸಂಬಂಧ ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ನಿಗಮ ಟೆಂಡರ್ ಕರೆದಿದೆ.

    ಮನೆ ಮನೆಯಿಂದ ಕಸ ಸಂಗ್ರಹ, ದ್ವಿತೀಯ ಹಂತದ ವರ್ಗಾವಣೆ ಕೇಂದ್ರಗಳಿಗೆ ಸಾಗಣೆ, ಈ ಕೇಂದ್ರಗಳಿಂದ ಸಂಸ್ಕರಣ ಘಟಕಗಳಿಗೆ ದ್ವಿತೀಯ ಹಂತದ ಸಾಗಣೆ ಒಳಗೊಂಡ ಪ್ಯಾಕೇಜ್ ಇದಾಗಿದೆ. ಪ್ರತಿ ಮನೆಯಿಂದ ಕಸ ಸಂಗ್ರಹದ ಶುಲ್ಕ ವಸೂಲಿ ಮಾಡುವುದರಿಂದ ಬ್ಲಾಕ್ ಸ್ಪಾಟ್‌ಗಳ ಸಂಖ್ಯೆ ಇಳಿಮುಖ ಆಗಲಿದೆ ಎನ್ನಲಾಗಿದೆ. ಇದನ್ನೂ ಓದಿ: ಸುಪ್ರೀಂ ಕೋರ್ಟ್​ನಲ್ಲೂ ಪ್ರಜ್ವಲ್‌ ರೇವಣ್ಣಗೆ ಸಿಗಲಿಲ್ಲ ಜಾಮೀನು!

  • ಇ-ಖಾತಾ ಪರೀಕ್ಷೆಗೆ ಹೆಲ್ಪ್‌ಡೆಸ್ಕ್‌ ತೆರೆದ ಬಿಬಿಎಂಪಿ

    ಇ-ಖಾತಾ ಪರೀಕ್ಷೆಗೆ ಹೆಲ್ಪ್‌ಡೆಸ್ಕ್‌ ತೆರೆದ ಬಿಬಿಎಂಪಿ

    – 20 ಲಕ್ಷಕ್ಕೂ ಅಧಿಕ ಇ-ಖಾತಾ ಡಿಜಿಟಲೀಕರಣ
    – 8 ವಲಯಗಳಲ್ಲೂ ಸಹಾಯವಾಣಿ ಬಿಡುಗಡೆ

    ಬೆಂಗಳೂರು: ಬಿಬಿಎಂಪಿ 20 ಲಕ್ಷಕ್ಕೂ ಅಧಿಕ ಇ-ಖಾತಾಗಳನ್ನು ಡಿಜಿಟಲೀಕರಣ ಮಾಡಿದೆ. ಇ-ಖಾತಾ (E-Khata) ಪರೀಕ್ಷೆಗೆ ಸಹಾಯವಾಣಿ ಬಿಡುಗಡೆ ಮಾಡಿದೆ.

    20 ಲಕ್ಷಕ್ಕೂ ಅಧಿಕ ಖಾತೆಗಳನ್ನ ಇ-ಖಾತಾ ಮಾಡಿ ಬಿಬಿಎಂಪಿ (BBMP) ರೋಲ್ ಔಟ್ ಮಾಡಿದೆ. ಬೆಂಗಳೂರಿನ (Bengaluru) ಆಸ್ತಿದಾರರು ನಮ್ಮ ಖಾತೆ ಇ-ಖಾತಾ ಆಗಿದೆಯೇ ಅಥವಾ ಇಲ್ಲವೇ ಎಂಬ ಗೊಂದಲದಲ್ಲಿ ಇದ್ದಾರೆ. ಜೊತೆಗೆ ಇ-ಖಾತಾ ಮಾಡಿಸೋದು ಹೇಗೆ? ಸೈಟ್ ಮತ್ತು ಜಾಗ ಮಾರಾಟ ಮಾಡ್ತಾ ಇದ್ದರೆ, ಇ-ಖಾತಾ ಮಾಡಿಸೋದು ಹೇಗೆ ಎಂಬ ಗೊಂದಲ ಇದೆ. ಇದನ್ನೂ ಓದಿ: ಮುಡಾ ಬ್ರಹ್ಮಾಂಡ ಭ್ರಷ್ಟಾಚಾರ ಮತ್ತಷ್ಟು ಬಯಲು – 50:50 ಅನುಪಾತದ ದಾಖಲೆಗಳೇ ಮಾಯ?

    ಬಿಬಿಎಂಪಿ ತನ್ನ ಎಂಟು ವಲಯಗಳಲ್ಲೂ ಇ-ಖಾತೆಗೆ ಸಂಬಂಧಿಸದಂತೆ ಗೊಂದಲ, ಸಮಸ್ಯೆಗಳನ್ನ ಬಗೆಹರಿಸಿಕೊಳ್ಳಲು ಹೆಲ್ಪ್ ಡೆಸ್ಕ್ ತೆರೆದಿದೆ. ನಾಗರಿಕರು ಸಹಾಯವಾಣಿಗಳಿಗೆ ಕರೆ ಮಾಡಿ ಇ-ಖಾತಾಗೆ ಸಂಬಂಧಿಸಿದಂತೆ ಇರುವ ಗೊಂದಲಗಳನ್ನ ನಿವಾರಣೆ ಮಾಡಿಕೊಳ್ಳಬಹುದಾಗಿದೆ.

    ಎಂಟು ವಲಯಗಳ ಸಹಾಯವಾಣಿ..
    ಬೊಮ್ಮನಹಳ್ಳಿ ವಲಯ – 9480683182
    ದಾಸರಹಳ್ಳಿ ವಲಯ – 9480683710
    ಮಹಾದೇವಪುರ ವಲಯ – 9480683720
    ಪೂರ್ವ ವಲಯ – 9480683203
    ಪಶ್ಚಿಮ ವಲಯ – 9480683204
    ದಕ್ಷಿಣ ವಲಯ – 9480683179
    ಆರ್.ಆರ್ ನಗರ ವಲಯ – 9480683645
    ಯಲಹಂಕ ವಲಯ – 9480683516

  • ವೈಟ್ ಟಾಪಿಂಗ್ ಕಾಮಗಾರಿ- ಜೆಸಿ ರಸ್ತೆಯಲ್ಲಿ 1 ತಿಂಗಳು ವಾಹನ ಸಂಚಾರ ಸ್ಥಗಿತ

    ವೈಟ್ ಟಾಪಿಂಗ್ ಕಾಮಗಾರಿ- ಜೆಸಿ ರಸ್ತೆಯಲ್ಲಿ 1 ತಿಂಗಳು ವಾಹನ ಸಂಚಾರ ಸ್ಥಗಿತ

    ಬೆಂಗಳೂರು: ವೈಟ್ ಟಾಪಿಂಗ್ (White Topping) ಕಾಮಗಾರಿ ಹಿನ್ನೆಲೆ ಜೆ.ಸಿ. ರಸ್ತೆಯಲ್ಲಿ 1 ತಿಂಗಳು ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ.

    ನ.7 ರಿಂದ ಡಿ.8 ವರೆಗೆ ಒಂದು ತಿಂಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಇಂದಿನಿಂದ ಬಿಬಿಎಂಪಿ (BBMP) ವತಿಯಿಂದ ಜೆ.ಸಿ. ರಸ್ತೆಯ ನಾಲಾ ಜಂಕ್ಷನ್‌ನಿಂದ ಟೌನ್ ಹಾಲ್ ಜಂಕ್ಷನ್‌ವರೆಗೆ ಕಾಮಗಾರಿ ನಡೆಯಲಿದೆ. ಈ ಕಾರಣ ವಾಹನ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಆಗಿದೆ. ಪರ್ಯಾಯ ರಸ್ತೆಗಳನ್ನ ಬಳಸುವಂತೆ ಸಂಚಾರ ಪೊಲೀಸರ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಮುಡಾ ಕೇಸಲ್ಲಿ ಸಿಎಂಗೆ ಮತ್ತೆ ಸಂಕಷ್ಟ; ಲೋಕಾಯುಕ್ತ ಬಳಿಕ ಇ.ಡಿ ವಿಚಾರಣೆ ಭೀತಿ ಶುರು

    ಹೊಸೂರು ರಸ್ತೆಯಿಂದ ಜೆಸಿ ರಸ್ತೆ ಮುಖಾಂತರ ಮೆಜೆಸ್ಟಿಕ್‌ಗೆ (Mejestic) ಹೋಗಬಹುದು. ಬೆಂಗಳೂರು ಉತ್ತರ ದಿಕ್ಕಿನ ಕಡೆಗೆ ಸಂಚರಿಸುತ್ತಿದ್ದ ವಾಹನಗಳು ಲಾಲ್‌ಬಾಗ್ ಮುಖ್ಯದ್ವಾರದ ಬಳಿ ಬಲ ತಿರುವು ಪಡೆದು, ಕೆ.ಹೆಚ್ ರಸ್ತೆ, ಶಾಂತಿನಗರ, ರಿಚ್ಚಂಡ್, ಆರ್‌ಆರ್‌ಎಂಆರ್ ರಸ್ತೆ, ಜಂಕ್ಷನ್ ತಲುಪಬಹುದು. ಸೌತ್ ಎಂಡ್ ಸರ್ಕಲ್‌ನಿಂದ ಜೆಸಿ ರಸ್ತೆ ಮುಖಾಂತರ ಮೆಜೆಸ್ಟಿಕ್, ಬೆಂಗಳೂರು ಉತ್ತರ ದಿಕ್ಕಿನ ಕಡೆಗೆ ಸಂಚರಿಸುತ್ತಿದ್ದ ವಾಹನಗಳು ಮಿನರ್ವ ಸರ್ಕಲ್ ಬಳಿ ಎಡ ತಿರುವು ಪಡೆದು, ಲಾಲ್‌ಬಾಗ್ ಪೋರ್ಟ್ ರಸ್ತೆ, ಕೆ.ಆರ್ ರಸ್ತೆ ಮುಖಾಂತರ ಸಂಪರ್ಕ ಪಡೆಯಬಹುದು. ಇದನ್ನೂ ಓದಿ: Hubballi| ಜನವಸತಿ ಪ್ರದೇಶದಲ್ಲಿ ಬಾರ್ ಆರಂಭ- ಸ್ಥಳೀಯರಿಂದ ತೀವ್ರ ಪ್ರತಿಭಟನೆ

  • ವಿಶ್ವಗುರು ಬಸವಣ್ಣರನ್ನೇ ಕತ್ತಲೆಗೆ ದೂಡಿದ ಬಿಬಿಎಂಪಿ – ನಿರ್ವಹಣೆ ಇಲ್ಲದೇ ಉದುರುತ್ತಿದೆ ಪುತ್ಥಳಿ ಬಣ್ಣ!

    ವಿಶ್ವಗುರು ಬಸವಣ್ಣರನ್ನೇ ಕತ್ತಲೆಗೆ ದೂಡಿದ ಬಿಬಿಎಂಪಿ – ನಿರ್ವಹಣೆ ಇಲ್ಲದೇ ಉದುರುತ್ತಿದೆ ಪುತ್ಥಳಿ ಬಣ್ಣ!

    ಬೆಂಗಳೂರು: ಬಿಬಿಎಂಪಿ (BBMP) ವಿಶ್ವಗುರು ಬಸವಣ್ಣರನ್ನೇ (Basavanna) ಕತ್ತಲೆಗೆ ದೂಡಿದೆ. ಸರಿಯಾದ ನಿರ್ವಹಣೆ ಇಲ್ಲದೆ ಪುತ್ಥಳಿಯ ಕೆಲವು ಕಡೆ ಬಣ್ಣ ಉದುರುತ್ತಿದ್ದು, ಬಿಬಿಎಂಪಿ ನಡೆ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

    ಜಗತ್ತಿಗೆ ಮಾನವತೆ ಸಂದೇಶ ಸಾರಿದ ಮಹಾನ್ ವ್ಯಕ್ತಿ ಬಸವಣ್ಣ. ರಾಜ್ಯ ಮಾತ್ರ ಅಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹಾನ್ ನಾಯಕರಿಗೆ ನೀಡುವ ಗೌರವ ನಮ್ಮೆಲ್ಲರಿಗೂ ಹೆಮ್ಮೆ. ಆದರೆ ನಮ್ಮ ನೆಲದಲ್ಲೇ ಈ ಮಹಾನ್ ಶಕ್ತಿಯನ್ನು ಬಿಬಿಎಂಪಿ ಕತ್ತಲೆಗೆ ತಳ್ಳಿದೆ. ಸರಿಯಾದ ನಿರ್ವಹಣೆ ಇಲ್ಲದ ಕಾರಣ ಕೋಟಿ ಕೋಟಿ ಖರ್ಚು ಮಾಡಿ ನಿರ್ಮಾಣ ಮಾಡಿದ್ದ ಬಸವಣ್ಣನವರ ಪುತ್ಥಳಿಯಲ್ಲಿ ಬಣ್ಣಗಳು ಉದುರುತ್ತಿದ್ದು, ಬಿಬಿಎಂಪಿ ನಡೆ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: Bengaluru Traffic Jam: ರಜೆ ಮುಗಿಸಿ ಬೆಂಗಳೂರಿನತ್ತ ಜನ, ಎಲ್ಲೆಲ್ಲೂ ಜಾಮ್‌ ಜಾಮ್!

    ವಿಧಾನಸೌಧದಿಂದ ಸ್ವಲ್ಪ ದೂರದಲ್ಲಿರುವ ಬಸವಣ್ಣನ ಪ್ರತಿಮೆ ದುಸ್ಥಿತಿಯಾಗಿದೆ. 2020ರಲ್ಲಿ ಬಿಜೆಪಿ (BJP) ಸರ್ಕಾರದ ಅವಧಿಯಲ್ಲಿ ನಗರದ ಚಾಲುಕ್ಯ ಸರ್ಕಲ್‌ನಲ್ಲಿ ಬಸವಣ್ಣನ ಕಂಚಿನ ಪುತ್ಥಳಿ ಸ್ಥಾಪಿಸಲಾಗಿತ್ತು. ಆದರೆ ಪ್ರತಿಮೆ ನಿರ್ವಹಣೆ 4 ವರ್ಷಕ್ಕೆ ಬಿಬಿಎಂಪಿಗೆ ಸಾಕಾದಂತಿದೆ. ಅನೇಕ ದಿನಗಳಿಂದ ಈ ಪ್ರತಿಮೆ ಸುತ್ತ ಲೈಟ್‌ಗಳು ಉರಿಯುತ್ತಿಲ್ಲ. ಜೊತೆಗೆ ಇದರ ಕಾವಲಿಗಾಗಿ ಹಾಕಿದ್ದ ಸಿಸಿ ಕ್ಯಾಮರಾಗಳು ಕೂಡ ಕೆಲಸ ನಿಲ್ಲಿಸಿವೆ. ಜನರಿಗೆ ಬಸವಣ್ಣನವರ ತತ್ವ ಸಿದ್ಧಾಂತಗಳ ಜ್ಞಾನ ಸಾರುವ ಸಲುವಾಗಿಯೇ ಈ ಪುತ್ಥಳಿಯ ಸುತ್ತ ಗೋಡೆಗಳಲ್ಲಿ ಅವರ ಸಾಧನೆಗಳನ್ನೆ ಮೂಡಿಸಿ, ಜನರಿಗೆ ತಿಳಿಸುವ ಪ್ರಯತ್ನ ಮಾಡಲಾಗಿತ್ತು. ಈಗ ಲೈಟ್‌ಗಳು ಇಲ್ಲದ ಕಾರಣ ಕತ್ತಲೆ ಕವಿದ ಹಿನ್ನೆಲೆ, ರಾತ್ರಿಯಾದರೆ ಇಲ್ಲಿ ಪುತ್ಥಳಿ ಇದೆ ಅನ್ನೋದೇ ಕಾಣದಂತಾಗಿದೆ. ಹೀಗಿದ್ದರು ಅಧಿಕಾರಿಗಳು ಮಾತ್ರ ನಿದ್ದೆಯಿಂದ ಎದ್ದು ಸಮಸ್ಯೆ ಬಗೆಹರಿಸುವ ಕೆಲಸವನ್ನು ಮಾಡುತ್ತಿಲ್ಲ. ಇದನ್ನೂ ಓದಿ: ರಾಜಕೀಯ ಏನಾದ್ರೂ ಇರಲಿ, ಜಯನಗರಕ್ಕೆ ಅನುದಾನ ಕೊಡಿ – ಡಿಕೆಶಿಗೆ ಸೆಲೆಬ್ರಿಟಿಗಳ ಮನವಿ

  • ಬೆಂಗಳೂರು ಹೊರವಲಯದ ಹೆಮ್ಮಿಗೆಪುರದಲ್ಲಿ ಸ್ಕೈಡೆಕ್ ನಿರ್ಮಾಣಕ್ಕೆ ಜಾಗ ಅಂತಿಮ

    ಬೆಂಗಳೂರು ಹೊರವಲಯದ ಹೆಮ್ಮಿಗೆಪುರದಲ್ಲಿ ಸ್ಕೈಡೆಕ್ ನಿರ್ಮಾಣಕ್ಕೆ ಜಾಗ ಅಂತಿಮ

    – ಆಕ್ಷೇಪಣೆಗಳಿದ್ದರೆ 7 ದಿನದಲ್ಲಿ ಸಲ್ಲಿಸುವಂತೆ ಬಿಬಿಎಂಪಿ ಮನವಿ

    ಬೆಂಗಳೂರು: ಬೆಂಗಳೂರಿನ (Bengaluru) ಅತಿ ಎತ್ತರದ ಸ್ಕೈಡೆಕ್ (Skydeck) ನಿರ್ಮಾಣಕ್ಕೆ ಬಿಬಿಎಂಪಿ (BBMP) ಜಾಗ ಫೈನಲ್ ಮಾಡಿದೆ. ಹೆಮ್ಮಿಗೆಪುರದಲ್ಲಿ (Hemmigepura) ಸ್ಕೈಡೆಕ್ ನಿರ್ಮಾಣಕ್ಕೆ ನಿರ್ಧರಿಸಿದ್ದು, ಈ ಜಾಗದಲ್ಲಿ ಗೋಪುರ ನಿರ್ಮಾಣಕ್ಕೆ ಆಕ್ಷೇಪಣೆ ಇದ್ದರೆ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದೆ. ನವೆಂಬರ್ 8ರ ಒಳಗಡೆ ಆಕ್ಷೇಪಣೆ ಸಲ್ಲಿಸಬಹುದಾಗಿದೆ.

    ರಾಜ್ಯ ಸರ್ಕಾರ ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಬ್ರ‍್ಯಾಂಡ್ ಬೆಂಗಳೂರಿನಡಿ ಅತಿ ಎತ್ತರದ ಆಕಾಶ ಗೋಪುರ ನಿರ್ಮಾಣಕ್ಕೆ ಮುಂದಾಗಿದೆ. ಇದಕ್ಕೆ ಹೆಮ್ಮಿಗೆಪುರದಲ್ಲಿ ಜಾಗ ಕೂಡ ಫೈನಲ್ ಆಗಿದೆ. ಹೆಮ್ಮಿಗೆಪುರದಲ್ಲಿ ಸ್ಕೈಡೆಕ್ ನಿರ್ಮಾಣ ಮಾಡೋದಕ್ಕೆ ಆಕ್ಷೇಪಣೆ ಇದ್ದರೆ ನವೆಂಬರ್ 8ರ ಒಳಗಡೆ ಆಕ್ಷೇಪಣೆ ಸಲ್ಲಿಸಲು ಬಿಬಿಎಂಪಿ ಸಾರ್ವಜನಿಕರಿಗೆ ಮನವಿ ಮಾಡಿದೆ. ಇದನ್ನೂ ಓದಿ: ಹಾಸನಾಂಬೆ ದರ್ಶನಕ್ಕೆ ವಿದ್ಯುಕ್ತ ತೆರೆಗೆ ಕ್ಷಣಗಣನೆ – ಭಕ್ತ ಸಾಗರ, ದಾಖಲೆಯ ಆದಾಯ

    ಪ್ರವಾಸೋದ್ಯಮ ಉತ್ತೇಜನದ ಜೊತೆಗೆ ಬೆಂಗಳೂರು ನಗರವನ್ನು ವೀಕ್ಷಣೆ ಮಾಡುವ ಉದ್ದೇಶದಿಂದ ಆಕಾಶ ಗೋಪುರ ನಿರ್ಮಾಣ ಮಾಡಲು ಬಿಬಿಎಂಪಿ ತೀರ್ಮಾನಿಸಿತ್ತು. ಇದಕ್ಕಾಗಿ ಎನ್‌ಜಿಇಎಫ್, ಯಶವಂತಪುರ ಬಳಿಯ ಸಾಬೂನು ಕಾರ್ಖಾನೆ, ವೈಟ್‌ಫೀಲ್ಡ್, ಜಿಕೆವಿಕೆ, ರೇಸ್‌ಕೋರ್ಸ್, ಬೆಂಗಳೂರು ಅರಮನೆ ಆವರಣದ ಜಾಗಗಳನ್ನು ಗುರುತಿಸಲಾಗಿತ್ತು. ಆದರೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಹೆಚ್‌ಎಎಲ್ ವಿಮಾನ ನಿಲ್ದಾಣ ಸುರಕ್ಷತೆ ದೃಷ್ಟಿಯಿಂದ ಒಪ್ಪಿಗೆ ಕೊಡಲಿಲ್ಲ. ಇದರ ಜೊತೆಗೆ ಎನ್‌ಜಿಇಎಫ್, ಯಶವಂತಪುರ ಬಳಿಯ ಸಾಬೂನು ಕಾರ್ಖಾನೆ, ವೈಟ್‌ಫೀಲ್ಡ್, ಜಿಕೆವಿಕೆ, ರೇಸ್‌ಕೋರ್ಸ್, ಬೆಂಗಳೂರು ಅರಮನೆ ಆವರಣದ ಜಾಗಗಳನ್ನು ಬಳಕೆ ಮಾಡಿಕೊಳ್ಳಲು ನಿರ್ಬಂಧವಿದೆ. ಇದನ್ನೂ ಓದಿ: ಮಂಗಳೂರು| ಚಲಿಸುತ್ತಿದ್ದ ಸ್ಕೂಟಿ ಮೇಲೆ ಮರ ಬಿದ್ದು ಸವಾರ ಸಾವು

    ಸಾರ್ವಜನಿಕರು ಆಕ್ಷೇಪಣೆ ಜೊತೆಗೆ ಬೆಂಗಳೂರಿನ ನೈಋತ್ಯ ಮತ್ತು ಪಶ್ವಿಮ ಭಾಗದಲ್ಲಿ ಜಾಗ ಇದ್ದರೆ ಸಲಹೆ ಕೂಡ ಕೊಡಿ ಅಂತಾ ಕೇಳಿದೆ. ಸ್ಕೈಡೆಕ್ ನಿರ್ಮಾಣಕ್ಕೆ ಆಕ್ಷೇಪಣೆ ಜೊತೆಗೆ ಸಲಹೆ ಏನು ಬರಲಿವೆ ಎಂದು ಕಾದು ನೋಡಬೇಕಿದೆ.‌ ಇದನ್ನೂ ಓದಿ: Uttar Pradesh| ಹಳಿ ದಾಟುತ್ತಿದ್ದ ವೇಳೆ ರೈಲು ಡಿಕ್ಕಿ- ಇಬ್ಬರು ಮಕ್ಕಳು ಸಾವು

  • ದೀಪಾವಳಿ ಹಬ್ಬ – ಬೆಂಗಳೂರಲ್ಲಿ ಪಟಾಕಿ ಸಿಡಿಸಲು ಬಿಬಿಎಂಪಿ ಮಾರ್ಗಸೂಚಿ

    ದೀಪಾವಳಿ ಹಬ್ಬ – ಬೆಂಗಳೂರಲ್ಲಿ ಪಟಾಕಿ ಸಿಡಿಸಲು ಬಿಬಿಎಂಪಿ ಮಾರ್ಗಸೂಚಿ

    – ಸ್ಫೋಟಕ ಪಟಾಕಿ ನಿಷೇಧ, ಆನ್‌ಲೈನ್‌ನಲ್ಲೂ ಮಾರಾಟ ಇಲ್ಲ

    ಬೆಂಗಳೂರು: ದೀಪಾವಳಿ (Deepavali) ಹಬ್ಬದ ಹಿನ್ನೆಲೆ ಸಾರ್ವಜನಿಕ ಹಿತದೃಷ್ಟಿಯಿಂದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (Karnataka State Pollution Control Board) ಸೂಚನೆ ಮೇರೆಗೆ ಬಿಬಿಎಂಪಿ (BBMP) ಮಾರ್ಗಸೂಚಿ ಪ್ರಕಟಿಸಿದೆ.

    ಸ್ಫೋಟಕ ಪಟಾಕಿಗಳನ್ನು ಸಿಡಿಸುವುದು ಸಂಪೂರ್ಣ ನಿಷೇಧಿಸಿದ್ದು, ಹಸಿರು ಪಟಾಕಿ (Green Crackers) ಮಾತ್ರ ಸಿಡಿಸುವಂತೆ ಸಾರ್ವಜನಿಕರಿಗೆ ಮಾಲಿನ್ಯ ಮಂಡಳಿ ಮನವಿ ಮಾಡಿದೆ. ಅಕ್ಟೋಬರ್ 31ರಿಂದ ನವೆಂಬರ್ 2ರ ವರೆಗೆ ಮೂರು ದಿನ ಮಾತ್ರ ಪಟಾಕಿ ಸಿಡಿಸಲು ಅವಕಾಶ ನೀಡಲಾಗಿದೆ. ಇದನ್ನೂ ಓದಿ: 14,201 ಎಕರೆಯಲ್ಲಿ 773 ಎಕರೆ ಮಾತ್ರ ವಕ್ಫ್‌ಗೆ ನೋಟಿಫಿಕೇಶನ್ ಆಗಿದೆ: ಕೃಷ್ಣಭೈರೇಗೌಡ

    ಯಾವ ಸಮಯದಲ್ಲಿ ಪಟಾಕಿ ಸಿಡಿಸಬೇಕು?
    ಈ ಮೂರು ದಿನಗಳಲ್ಲಿ ರಾತ್ರಿ 8 ಗಂಟೆಯಿಂದ 10 ಗಂಟೆ ಅವಧಿಯಲ್ಲಿ ಮಾತ್ರ ಹಸಿರು ಪಟಾಕಿ ಸಿಡಿಸಬೇಕು. ಅದರ ಹೊರತಾಗಿ ಬೇಕಾಬಿಟ್ಟಿ ಪಟಾಕಿ ಸಿಡಿಸುವುದಕ್ಕೆ ಕೆಎಸ್‌ಪಿಸಿಬಿ ಸೂಚನೆಯಂತೆ ಪಾಲಿಕೆ ನಿಷೇಧಿಸಿದೆ. ಇದನ್ನೂ ಓದಿ: ನಟ ವಿಜಯ್ ಬಿಜೆಪಿಯ ʻಸಿʼ ಟೀಂ – ತಮಿಳುನಾಡು ಡಿಎಂಕೆ ಸಚಿವ ಟೀಕೆ

    ಅನಗತ್ಯವಾಗಿ ಪಟಾಕಿ ಮನೆ ಹಾಗೂ ಇತರೆ ಜಾಗದಲ್ಲಿ ಶೇಖರಣೆ ಮಾಡದಂತೆಯೂ ಸೂಚನೆ ನೀಡಲಾಗಿದೆ. ಆನ್‌ಲೈನ್‌ನಲ್ಲೂ ಬೇಕಾಬಿಟ್ಟಿ ಸ್ಫೋಟಕ ಪಟಾಕಿ ಮಾರಾಟ ಮಾಡದಂತೆ ತಾಕೀತು ಮಾಡಲಾಗಿದೆ. ಸರ್ವೋಚ್ಛ ನ್ಯಾಯಾಲಯದ ಆದೇಶ ಸಂಖ್ಯೆ ಉಲ್ಲೇಖಿಸಿ ಸಾರ್ವಜನಿಕ ಸುತ್ತೋಲೆ ಹೊರಡಿಸಲಾಗಿದೆ. ಇದನ್ನೂ ಓದಿ: 1974 ಮುಂಚಿನ ದಾಖಲೆ ಇದ್ದರೆ ರೈತರು ಟಾಸ್ಕ್‌ ಫೋರ್ಸ್‌ಗೆ ತಂದುಕೊಡಿ – ಎಂ.ಬಿ ಪಾಟೀಲ್‌

    ಕಳೆದ ವಾರವಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಹಸಿರು ಪಟಾಕಿಗೆ ಮಾತ್ರ ಅವಕಾಶ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಇದನ್ನೂ ಓದಿ: 13 ವರ್ಷ ಪ್ರೀತಿಸಿದ ಹುಡುಗಿ ಮತ್ತೊಬ್ಬನ ಜೊತೆ ಮದುವೆ – ಡೆತ್ ನೋಟ್ ಬರೆದಿಟ್ಟು ಪ್ರಿಯಕರ  ಆತ್ಮಹತ್ಯೆ