Tag: bbmp workers

  • ಮತ್ತೆ ಬೀದಿಗಿಳಿದ ಪೌರಕಾರ್ಮಿಕರು – ನೇಮಕಾತಿ ಷರತ್ತುಗಳ ಸಡಿಲಿಕೆಗೆ ಒತ್ತಾಯ

    ಮತ್ತೆ ಬೀದಿಗಿಳಿದ ಪೌರಕಾರ್ಮಿಕರು – ನೇಮಕಾತಿ ಷರತ್ತುಗಳ ಸಡಿಲಿಕೆಗೆ ಒತ್ತಾಯ

    ಬೆಂಗಳೂರು: ಪೌರಕಾರ್ಮಿಕರು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬಿಬಿಎಂಪಿ ಪೌರಕಾರ್ಮಿಕರ ಸಂಘದ ವತಿಯಿಂದ ಧರಣಿ ನಡೆಯಿತು.

    ಬೆಂಗಳೂರಿನ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ 18 ಸಾವಿರ ಪೌರಕಾರ್ಮಿಕರನ್ನು ಖಾಯಂಗೊಳಿಸಿ ಎಂದು ಧರಣಿ ನಡೆಸಿದರು. ಸದ್ಯ ಪಾಲಿಕೆಯಲ್ಲಿ 4 ಸಾವಿರ ಪೌರಕಾರ್ಮಿಕರ ನೇಮಕಾತಿಗೆ ನೋಟಿಫಿಕೇಶನ್ ಹೊರಡಿಸಲಾಗಿದೆ. ಇದರಿಂದ ಶೇ.50 ರಷ್ಟು ಗುತ್ತಿಗೆ ಆಧಾರದ ಪೌರ ಕಾರ್ಮಿಕರಿಗೆ ಕೆಲಸವೇ ಸಿಗದಂತೆ ಆಗಲಿದೆ. ಹೀಗಾಗಿ ನೇಮಕಾತಿ ಷರತ್ತುಗಳನ್ನ ಬದಲಾಯಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

    ಪ್ರಮುಖ ಬೇಡಿಕೆಗಳ ಪಟ್ಟಿ ಹೀಗಿದೆ;

    1. ಗುತ್ತಿಗೆ ಆಧಾರದ ಎಲ್ಲ ಪೌರಕಾರ್ಮಿಕರ ಖಾಯಂಗೊಳಿಸಬೇಕು
    2. ಕನ್ನಡ ಓದಲು ಬರೆಯಲು ಬರಬೇಕು ಎಂಬ ನಿಯಮ ತೆಗೆಯಬೇಕು
    3. 45 ವರ್ಷಗಳ ವಯೋಮೀತಿಗೆ ನೇಮಕಾತಿ ಹೊರಡಿಸಿರೊದನ್ನು 55 ವರ್ಷಕ್ಕೆ ಏರಿಕೆ ಮಾಡಬೇಕು
    4. ಆನ್ ಲೈನ್ ಅರ್ಜಿ ಸಲ್ಲಿಕೆಗೆ ಹೆಲ್ಪ್ ಲೈನ್ ಸಹಾಯ ಕೊಡಬೇಕು
    5. ಪೌರಕಾರ್ಮಿಕರು ಹಾಗೂ ಅವರ ಕುಟುಂಬಕ್ಕೆ ಶಿಕ್ಷಣ ಕೊಡಿಸಲು ಸಹಾಯ ಮಾಡಬೇಕು

    ಈ ಎಲ್ಲ ಬೇಡಿಕೆಗಳ ಆಧರಿಸಿ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಖುದ್ದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್, ವಿಶೇಷ ಆಯುಕ್ತ ಸಂದೀಪ್ ಭೇಟಿ ನೀಡಿ ಬೇಡಿಕೆಗಳ ಪರಿಶೀಲಿಸುವಯದಾಗಿ ಭರವಸೆ ನೀಡಿದರು.

  • ಪೌರ ಕಾರ್ಮಿಕರು ಸಂಬಳ ಕೇಳಿದ್ರೆ ಮಂಚಕ್ಕೆ ಕರಿತಾನಂತೆ ಗುತ್ತಿಗೆದಾರ

    ಪೌರ ಕಾರ್ಮಿಕರು ಸಂಬಳ ಕೇಳಿದ್ರೆ ಮಂಚಕ್ಕೆ ಕರಿತಾನಂತೆ ಗುತ್ತಿಗೆದಾರ

    ಬೆಂಗಳೂರು: ಗುತ್ತಿಗೆದಾರನೊಬ್ಬ ಪೌರ ಕಾರ್ಮಿಕರಿಗೆ ಲೈಂಗಿಕ ಕಿರುಕುಳ ನೀಡಿರೋ ಆರೋಪ ಕೇಳಿಬಂದಿದೆ.

    ಪೌರ ಕಾರ್ಮಿಕರಿಗೆ ಸರಿಯಾಗಿ ಸಂಬಳ ನೀಡದೇ ಅವಾಚ್ಯಶಬ್ದಗಳಿಂದ ನಿಂದಿಸಿ, ಲೈಂಗಿಕ ಕ್ರಿಯೆಗೆ ಒತ್ತಾಯ ಮಾಡುತ್ತಿದ್ದ ಗುತ್ತಿಗೆದಾರನ ವಿರುದ್ಧ ಬೆಂಗಳೂರಿನ ಕೆಆರ್ ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಕೆ.ಆರ್.ಪುರದ ದೇವಸಂದ್ರ ಹಾಗೂ ಬಸವನಪುರ ವಾರ್ಡ್ ಕಸ ವಿಲೇವಾರಿಯ ಗುತ್ತಿಗೆ ಪಡೆದಿರುವ ಗುತ್ತಿಗೆದಾರ ನಾಗೇಶ್, ಪೌರ ಕಾರ್ಮಿಕರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎನ್ನಲಾಗಿದೆ. ಇದರಿಂದ ಮನನೊಂದ ಪೌರಕಾರ್ಮಿಕರು ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಪ್ರತಿ ತಿಂಗಳು ಪೌರ ಕಾರ್ಮಿಕರು ಸಂಬಳಕ್ಕೆ ಹೋದಾಗ ನಾಗೇಶ್ ಅವರ ಮೈ ಕೈ ಮುಟ್ಟುತ್ತಿದ್ದ, ಮಂಚಕ್ಕೆ ಕರೆಯುತ್ತಿದ್ದ ಎಂದು ಆರೋಪಿಸಲಾಗಿದೆ. ನಾಗೇಶ್‍ನನ್ನು ಇನ್ನೂ ಪೊಲೀಸರು ಬಂಧಿಸಿಲ್ಲ.

    ಸ್ಥಳೀಯ ಶಾಸಕರಿಗೂ ಈ ಬಗ್ಗೆ ಮಾಹಿತಿ ನೀಡಿದ್ದು ಯಾವುದೇ ಕ್ರಮ ಕೈಗೊಳ್ಳದ ಕಾರಣ ಪೌರ ಕಾರ್ಮಿಕರು ಒಟ್ಟಿಗೆ ಹೋಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಗುತ್ತಿಗೆದಾರನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಮೇಯರ್ ಸಂಪತ್ ರಾಜ್, ಕೂಡಲೇ ಸಂಬಂಧಪಟ್ಟ ಜಂಟಿ ಆಯುಕ್ತರ ಜೊತೆ ಮಾತನಾಡುತ್ತೇವೆ. ಬಿಬಿಎಂಪಿ ವತಿಯಿಂದಲೂ ದೂರು ದಾಖಲಿಸಿ ಪರಿಶೀಲಿಸಲು ಹೇಳುತ್ತೇವೆ ಎಂದಿದ್ದಾರೆ.

  • ಪೌರ ಕಾರ್ಮಿಕರಿಗೆ ವಿದೇಶ ಪ್ರವಾಸ ಭಾಗ್ಯ -ಸಿಂಗಾಪುರಕ್ಕೆ ಹೊರಟಿದೆ ಮೊದಲ ತಂಡ

    ಪೌರ ಕಾರ್ಮಿಕರಿಗೆ ವಿದೇಶ ಪ್ರವಾಸ ಭಾಗ್ಯ -ಸಿಂಗಾಪುರಕ್ಕೆ ಹೊರಟಿದೆ ಮೊದಲ ತಂಡ

    – ಸರ್ಕಾರದಿಂದಲೇ ತಲಾ 75 ಸಾವಿರ ವೆಚ್ಚ

    ಬೆಂಗಳೂರು: ರಾಜ್ಯದ ಪೌರಕಾರ್ಮಿಕರಿಗೆ ವಿದೇಶ ಪ್ರವಾಸ ಭಾಗ್ಯ ದೊರಕಿದ್ದು, ಈಗ ಒಂದು ತಂಡ ವಿದೇಶ ಪ್ರವಾಸಕ್ಕೆ ತರಳುತ್ತಿದೆ. ನೈರ್ಮಲ್ಯ ಕಾಪಾಡುವ ಸಂಬಂಧ ಸರ್ಕಾರ ರೂಪಿಸಿರುವ ಪೌರಕಾರ್ಮಿಕರ ಅಧ್ಯಯನ ಪ್ರವಾಸ ಕಾರ್ಯಕ್ರಮದಡಿ ಪೌರಕಾರ್ಮಿಕರು ಸಿಂಗಾಪುರಕ್ಕೆ ತೆರಳ್ತಿದ್ದಾರೆ.

    ಈ ವರ್ಷದಲ್ಲಿ ಒಟ್ಟು 1 ಸಾವಿರ ಪೌರ ಕಾರ್ಮಿಕರನ್ನು ಅಧ್ಯಯನ ಪ್ರವಾಸಕ್ಕೆ ಕಳುಹಿಸಲು ನಿರ್ಧಾರ ಮಾಡಿದ್ದು, ಮೊದಲ ಹಂತದಲ್ಲಿ 40 ಜನ ತೆರಳಿದ್ದಾರೆ. ಸೋಮವಾರ ವಿಕಾಸಸೌಧದಲ್ಲಿ ಪೌರಾಡಳಿತ ಸಚಿವ ಈಶ್ವರ್ ಖಂಡ್ರೆ ಬೀಳ್ಕೊಡುಗೆ ಕೊಟ್ಟಿದ್ದಾರೆ.

    ಪ್ರವಾಸಕ್ಕೆ ತಲಾ 75 ಸಾವಿರ ರೂಪಾಯಿ ವೆಚ್ಚ ಮಾಡಲಾಗ್ತಿದ್ದು, ವೈಯಕ್ತಿಕ ಖರ್ಚಿಗೆ 5 ಸಾವಿರ ರೂ. ಹಣವನ್ನು ನೀಡಲಾಗಿದೆ. ಪೌರಕಾರ್ಮಿಕರಿಗೆ ಮಾರ್ಗದರ್ಶನ ನೀಡಲು ಇಬ್ಬರು ಅಧಿಕಾರಿಗಳು ತಂಡದ ಜೊತೆ ತೆರಳಿದ್ದಾರೆ. ಮೊದಲ ತಂಡದಲ್ಲಿ 37 ಮಂದಿ ಪುರುಷರು ಹಾಗೂ ಮೂವರು ಮಹಿಳೆಯರು ಸೇರಿದ್ದಾರೆ. ಸಿಂಗಾಪುರದಲ್ಲಿರುವ ವಿಯೋಲಾ ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಲಿರುವ ಪೌರಕಾರ್ಮಿಕರ ತಂಡ ಘನತ್ಯಾಜ ಸಂಗ್ರಹ ಮತ್ತು ಸಂಸ್ಕರಣೆ ಬಗ್ಗೆ ಅಧ್ಯಯನ ನಡೆಸಲಿದೆ.

     

  • ಮುಂಗಾರು ಟೈಂನಲ್ಲಿ ಕಸ ಕಗ್ಗಂಟು – 5 ಸಾವಿರ ಪೌರ ಕಾರ್ಮಿಕರಿಂದ ಅನಿರ್ದಿಷ್ಟಾವಧಿ ಮುಷ್ಕರ

    ಮುಂಗಾರು ಟೈಂನಲ್ಲಿ ಕಸ ಕಗ್ಗಂಟು – 5 ಸಾವಿರ ಪೌರ ಕಾರ್ಮಿಕರಿಂದ ಅನಿರ್ದಿಷ್ಟಾವಧಿ ಮುಷ್ಕರ

    ಬೆಂಗಳೂರು: ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿನ ಮಾನ ಹರಾಜು ಹಾಕಿದ್ದ ಕಸ ಈಗ ಮತ್ತೆ ಸುದ್ದಿಯಲ್ಲಿದೆ. ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪೌರ ಕಾರ್ಮಿಕರು ಮುಷ್ಕರ ಆರಂಭ ಮಾಡಿದ್ದು ಕಸ ಎತ್ತುವುದನ್ನು ಸ್ಥಗಿತಗೊಳಿಸಿದ್ದಾರೆ

    ಸೋಮವಾರದಿಂದ ಮಹಾನಗರಿಯಲ್ಲಿ ಕಸ ವಿಲೇವಾರಿ ಆಗುತ್ತಿಲ್ಲ. ಹೈಕೋರ್ಟ್ ಆದೇಶದಂತೆ ನಮ್ಮನ್ನು ಖಾಯಂಗೊಳಿಸಿ ಗುತ್ತಿಗೆ ಪದ್ಧತಿಯನ್ನು ರದ್ದು ಮಾಡಿ ಅಂತ ಪಟ್ಟು ಹಿಡಿದಿರೋ ಪೌರ ಕಾರ್ಮಿಕರು ಬೆಂಗಳೂರಿನ ಬನ್ನಪ್ಪಪಾರ್ಕ್‍ನಲ್ಲಿ ಅನಿರ್ದಿಷ್ಠಾವಧಿಯ ಮುಷ್ಕರ ನಡೆಸುತ್ತಿದ್ದಾರೆ. ಇದರಲ್ಲಿ 5 ಸಾವಿರ ಮಂದಿ ಪೌರ ಕಾರ್ಮಿಕರು ಭಾಗವಹಿಸಿದ್ದಾರೆ.

    ಬೇಡಿಕೆ ಈಡೇರುವವರೆಗೆ ಕಸ ಎತ್ತಲ್ಲ ಎಂದು ಕಾರ್ಮಿಕರು ಸ್ಪಷ್ಟಪಡಿಸಿದ್ದಾರೆ. ಒಂದು ಕಡೆ ಮುಂಗಾರು ಮಳೆ ಕೂಡಾ ಬರುತ್ತಿರುವ ಕಾರಣ ಕಸ ವಿಲೇವಾರಿಯಾಗದೇ ರೋಗ-ರುಜಿನಗಳು ಶುರುವಾಗೋ ಆತಂಕ ಎದುರಾಗಿದೆ.