Tag: BBMP officials

  • ವಿದ್ಯಾರ್ಥಿನಿ ಮೇಲೆ ಮರ ಬಿದ್ದ ಕೇಸ್- ಘಟನೆ ನಂತರ ಎಚ್ಚೆತ್ತ ಬಿಬಿಎಂಪಿ ಅಧಿಕಾರಿಗಳು

    ವಿದ್ಯಾರ್ಥಿನಿ ಮೇಲೆ ಮರ ಬಿದ್ದ ಕೇಸ್- ಘಟನೆ ನಂತರ ಎಚ್ಚೆತ್ತ ಬಿಬಿಎಂಪಿ ಅಧಿಕಾರಿಗಳು

    ಬೆಂಗಳೂರು: ಸಿಲಿಕಾನ್ ಸಿಟಿಯ ರಾಮಮೂರ್ತಿನಗರದಲ್ಲಿ ಎಂಟು ವರ್ಷದ ಬಾಲಕಿ ಮೇಲೆ ಮರಬಿದ್ದ ಪ್ರಕರಣ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ಘಟನೆ ನಂತರ ಸ್ಥಳೀಯರು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಕೆಟ್ಟ ಮೇಲೆ ಬುದ್ದಿ ಬಂತು ಎನ್ನುವ ಹಾಗೇ ಇಂದು ಘಟನೆ ನಡೆದ ಜಾಗದಲ್ಲಿ ಒಣಗಿನ ಮರಗಳನ್ನು ತೆರವು ಕಾರ್ಯ ನಡೆಯುತ್ತಿದೆ.

    ಗಾಯಗೊಂಡ ಬಾಲಕಿ ತ್ರಿಷಾ ಸ್ಥಿತಿ ಗಂಭೀರವಾಗಿದ್ದು, ಹೆಚ್‍ಎಎಲ್‍ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಆಸ್ಪತ್ರೆಗೆ ಮೇಯರ್ ಗೌತಮ್ ಕುಮಾರ್ ಜೈನ್, ಬಿಬಿಎಂಪಿ ಕಮೀಷನರ್ ಅನಿಲ್ ಕುಮಾರ್ ಭೇಟಿ ನೀಡಿ ಬಾಲಕಿಯ ಸದ್ಯದ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದುಕೊಂಡರು.

    ಭೇಟಿ ಮಾಡಿದ ನಂತರ ಮಾತಾಡಿದ ಕಮೀಷನರ್ ಅನಿಲ್ ಕುಮಾರ್, ಕಳೆದ ವಾರದಿಂದ ನಮ್ಮ ಅಧಿಕಾರಿಗಳು, ಒಣಗಿದ ಮರಗಳ ತೆರವು ಕಾರ್ಯಕ್ಕೆ ಮುಂದಾಗಿದ್ದಾರೆ. ಈ ವೇಳೆ ಅರಳಿಕಟ್ಟೆ ಇರುವ ಜಾಗದಲ್ಲಿನ ಮರದಲ್ಲೂ ತೆರವು ಮಾಡುವ ವೇಳೆ ಅಲ್ಲಿನ ಸ್ಥಳೀಯರೇ ಇದನ್ನು ವಿರೋಧಿಸಿದ್ದಾರೆ. ಇದು ಅರಳಿಕಟ್ಟೆ ಮರ ಇದನ್ನು ಬಿಟ್ಟು ಬೇರೆ ಮರಗಳಲ್ಲಿನ ಒಣಮರಗಳನ್ನು ಕಟ್ ಮಾಡುವಂತೆ ಸೂಚಿಸಿದ್ದಾರೆ. ಹಾಗಾಗಿ ಆ ಮರದ ಒಣಮರವನ್ನು ಕಟ್ ಮಾಡಿಲ್ಲ. ಈಗ ಅದೇ ಮರದ ಕೊಂಬೆ ಬಿದ್ದು ಘಟನೆ ಆಗಿದೆ. ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸಭೆ ಮಾಡಿ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಬಾಲಕಿ ತ್ರಿಷಾಳ ಆಸ್ಪತ್ರೆ ವೆಚ್ಚವನ್ನು ಬಿಬಿಎಂಪಿ ಭರಿಸಲಿದೆ ಎಂದರು.

    ಇದೇ ವೇಳೆ ಸ್ಥಳೀಯ ಕಾರ್ಪೋರೇಟರ್ ಪದ್ಮಾವತಿ ವಿದ್ಯಾರ್ಥಿನಿ ಕುಟುಂಬಕ್ಕೆ ಒಂದು ಲಕ್ಷ ಪರಿಹಾರ ಕೊಟ್ಟರು. ಸದ್ಯ ಬಾಲಕಿ ಸ್ಥಿತಿ ಗಂಭೀರವಾಗಿದ್ದು, ಐಸಿಯೂನಲ್ಲಿ ಚಿಕಿತ್ಸೆ ನಡೆದಿದೆ. ಬುಧವಾರ ಬೆಳಗ್ಗೆ ಬಾಲಕಿ ತ್ರಿಷಾ ತನ್ನ ತಂದೆ ರಾಜು ಜೊತೆಗೆ ಸ್ಕೂಲ್‍ಗೆ ಬೈಕಿನಲ್ಲಿ ಹೋಗುತ್ತಿದ್ದ ವೇಳೆ ಮರದ ಕೊಂಬೆ ಬಿದ್ದು ತ್ರಿಷಾ ಗಂಭೀರವಾಗಿ ಗಾಯಗೊಂಡಿದ್ದಳು.

  • ಪ್ಲಾಸ್ಟಿಕ್ ಬಳಕೆ – ಎ2ಬಿ ಹೋಟೆಲ್‍ಗೆ 1 ಲಕ್ಷ ದಂಡ

    ಪ್ಲಾಸ್ಟಿಕ್ ಬಳಕೆ – ಎ2ಬಿ ಹೋಟೆಲ್‍ಗೆ 1 ಲಕ್ಷ ದಂಡ

    ಬೆಂಗಳೂರು: ಪ್ರತಿಷ್ಠಿತ ಹೋಟೆಲ್ ಗಳಲ್ಲಿ ಒಂದಾದ ಎ2ಬಿ ಯಲ್ಲಿ ಅತಿಹೆಚ್ಚು ಪ್ಲಾಸ್ಟಿಕ್ ಬಳಕೆಯಾಗುತ್ತಿದೆ ಎನ್ನುವ ದೂರು ಬಂದ ಹಿನ್ನೆಲೆಯಲ್ಲಿ ಬೊಮ್ಮನಹಳ್ಳಿ ಬಿಬಿಎಂಪಿ ಅಧಿಕಾರಿಗಳ ತಂಡ ದಾಳಿ ನಡೆಸಿ 1 ಲಕ್ಷ ದಂಡ ವಿಧಿಸಿದ್ದಾರೆ.

    ತಮಿಳುನಾಡು ಮೂಲದ ಎ2ಬಿ ಹೋಟೆಲ್ ಗಳು ಬೆಂಗಳೂರಿನಾದ್ಯಂತ ಅತಿ ಹೆಚ್ಚಾಗಿದ್ದು, ಹೆಚ್.ಎಸ್.ಆರ್ ಲೇಔಟ್‍ನ ಬಿಡಿಎ ಕಾಂಪ್ಲೆಕ್ಸ್ ನಲ್ಲಿರುವ ಎ2ಬಿ ಹೋಟೆಲ್ ನಲ್ಲಿ ಒಂದು ವರ್ಷದ ಹಿಂದೆಯೇ ಕೇಂದ್ರ ಸರ್ಕಾರ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧ ಹೇರಿದ್ರು ಸಹ ಇದಕ್ಕೆ ಕ್ಯಾರೆ ಎನ್ನದೇ ಬಳಸುತ್ತಿದ್ದರು. ಈ ಎ2ಬಿ ಹೋಟೆಲ್ ಗಳಲ್ಲಿ ಅತಿಹೆಚ್ಚು ಪ್ಲಾಸ್ಟಿಕ್ ನ್ನು ಬಳಸುತ್ತಿದ್ದಾರೆ ಎಂಬಾ ಮಾಹಿತಿ ಮೇರೆಗೆ ಇಂದು ಬೊಮ್ಮನಹಳ್ಳಿ ಬಿಬಿಎಂಪಿ ಜಂಟಿ ಆಯುಕ್ತ ರಾಮಕೃಷ್ಣ ನೇತೃತ್ವದ ತಂಡ ದಾಳಿ ನಡೆಸಿ 8 ಕೆಜಿಗೂ ಅಧಿಕ ಪ್ಲಾಸ್ಟಿಕ್ ವಶಕ್ಕೆ ಪಡೆದು 1 ಲಕ್ಷ ರೂಪಾಯಿಗಳ ದಂಡ ವಿಧಿಸಿದ್ದಾರೆ.

    ದಾಳಿ ವೇಳೆ ಮಾತನಾಡಿದ ಜಂಟಿ ಆಯುಕ್ತ ರಾಮಕೃಷ್ಣ, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿದ್ದರೂ ಹೋಟೆಲ್, ಅಂಗಡಿ ಸೇರಿದಂತೆ ಹಲವು ಕಡೆಗಳಲ್ಲಿ ಬಳಕೆ ಮಾಡುತ್ತಿರುವುದರ ಬಗ್ಗೆ ಮಾಹಿತಿ ಬಂದಾಗ ಇಂದು ದಾಳಿ ನಡೆಸಲಾಗಿದೆ. 8 ಕೆ.ಜಿಗೂ ಅಧಿಕ ಪ್ಲಾಸ್ಟಿಕ್ ಎ2ಬಿ ಹೋಟೆಲ್‍ನಲ್ಲಿ ದಾಳಿ ವೇಳೆ ಸಿಕ್ಕಿದ್ದು, 1 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ ಮುಂದಿನ ದಿನಗಳಲ್ಲಿ ಮತ್ತೆ ಪ್ಲಾಸ್ಟಿಕ್ ಬಳಕೆಯನ್ನು ಮುಂದುವರೆಸಿದರೆ ಲೈಸೆನ್ಸ್ ರದ್ದು ಮಾಡಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.

  • ಕೆ.ಆರ್ ಮಾರ್ಕೆಟ್‍ನಲ್ಲಿ ನಿಲ್ಲುತ್ತಿಲ್ಲ ರೋಲ್ ಕಾಲ್ ದಂಧೆ – ಬಾಲಕನಿಗೆ ಹೆದರಿಸಿ ಬಾಳೆ ದಿಂಡು ಪಡೆದ ಬಿಬಿಎಂಪಿ ಅಧಿಕಾರಿ

    ಕೆ.ಆರ್ ಮಾರ್ಕೆಟ್‍ನಲ್ಲಿ ನಿಲ್ಲುತ್ತಿಲ್ಲ ರೋಲ್ ಕಾಲ್ ದಂಧೆ – ಬಾಲಕನಿಗೆ ಹೆದರಿಸಿ ಬಾಳೆ ದಿಂಡು ಪಡೆದ ಬಿಬಿಎಂಪಿ ಅಧಿಕಾರಿ

    ಬೆಂಗಳೂರು: ಕೆ.ಆರ್ ಮಾರ್ಕೆಟ್‍ನಲ್ಲಿ ಬಡ ವ್ಯಾಪರಸ್ಥರ ಮೇಲೆ ಪಾಲಿಕೆಯ ಅಧಿಕಾರಿಗಳು ಘರ್ಜಿಸುತ್ತಿದ್ದಾರೆ. ಹಾಡಹಗಲೇ ರೋಲ್ ಕಾಲ್ ದಂಧೆಗಿಳಿದು, ಕಾಸು ತಮ್ಮ ಜೇಬಿಗೆ ಇಳಿಸಿಕೊಳ್ಳುತ್ತಿದ್ದಾರೆ. ಕೆ.ಆರ್ ಮಾರ್ಕೆಟ್‍ನ ಮಾಮೂಲು ಜಗತ್ತಿನ ಕರಾಳ ದಂಧೆಯನ್ನ ನಿಮ್ಮ ಪಬ್ಲಿಕ್ ಟಿವಿ ಬಟಾಬಯಲು ಮಾಡುತ್ತಿದೆ.

    ಕೆ.ಆರ್ ಮಾರ್ಕೆಟ್‍ನಲ್ಲಿ ನಡೆಯುವ ಮಾಮೂಲು ವಸೂಲಿ ದಂಧೆಗೆ ವ್ಯಾಪಾರಸ್ಥರು ಹೈರಣಾಗಿದ್ದಾರೆ. ಗಸ್ತು ತಿರುಗುವ ಪೊಲೀಸರು, ಕಸ ಎತ್ತುವ ಬಿಬಿಎಂಪಿಯ ಸಿಬ್ಬಂದಿ, ಅವರ ಮೇಲ್ವಿಚಾರಕರು, ಪುಡಿ ರೌಡಿಗಳು, ಹೀಗೆ ಇಲ್ಲಿ ಎಲ್ಲರೂ ಮಾಮೂಲಿ ವೀರರಾಗಿ ಘರ್ಜಿಸುತ್ತಿದ್ದಾರೆ.

    ತುತ್ತಿನ ಚೀಲ ತುಂಬಿಸಿಕೊಳ್ಳಲು ಅದೆಷ್ಟೋ ವ್ಯಾಪಾರಸ್ಥರು ಕೆ.ಆರ್ ಮಾರ್ಕೆಟ್‍ಗೆ ಬರುತ್ತಾರೆ. ಆದರೆ ಪಾಲಿಕೆಯ ಅಧಿಕಾರಿಗಳು, ಪೊಲೀಸರು ರಾಜಾರೋಷವಾಗಿ ಪ್ರತಿಯೊಬ್ಬ ವ್ಯಾಪಾರಸ್ಥರಿಂದ ದಿನಕ್ಕೆ 10, 20, 50 ರೂ.ಯಂತೆ ಬೆಳಗ್ಗೆಯಿಂದ ಸಂಜೆ ತನಕ 30ಕ್ಕೂ ಹೆಚ್ಚು ಜನರು ಮಾಮೂಲಿ ವಸೂಲಿ ಮಾಡುತ್ತಿದ್ದಾರೆ. ಹಣ ಕೊಡಲ್ಲ ಎಂದರೆ ಅವರ ಮೇಲೆ ಅಟ್ಯಾಕ್ ಮಾಡಿ ಅಂಗಡಿಯನ್ನು ಎತ್ತಿಸುತ್ತಾರೆ. ಅದಕ್ಕಾಗಿಯೇ ಈ ಬಗ್ಗೆ ಧ್ವನಿಯೆತ್ತಲು ವ್ಯಾಪಾರಸ್ಥರು ಹೆದರುತ್ತಾರೆ.

    ಪ್ರತಿನಿತ್ಯ ಈ ಅಧಿಕಾರಿ, ಪುಡಿ ರೌಡಿಗಳಿಂದ ರೋಸಿ ಹೋಗಿದ್ದ ಕೆಲ ವ್ಯಾಪಾರಸ್ಥರು ಪಬ್ಲಿಕ್ ಟಿವಿಯೊಂದಿಗೆ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಕಳೆದ ಎರಡು ದಿನದ ಹಿಂದೆ ದಸರಾ ಹಬ್ಬಕ್ಕೆ ಬಾಳೆ ದಿಂಡನ್ನು ಖರೀದಿಸಲು ಬಂದಿದ್ದ ಬಿಬಿಎಂಪಿ ಅಧಿಕಾರಿಯೊಬ್ಬ ಪುಟ್ಟ ವ್ಯಾಪಾರಿ ಬಾಲಕನ ಮೇಲೆ ದರ್ಪ ತೋರಿಸಿದ್ದಾನೆ. ಪುಗ್ಸಟ್ಟೆಯಾಗಿ ಬಾಳೆ ದಿಂಡನ್ನು ಕೇಳಿದ್ದಾನೆ. ಕೊಡಲ್ಲ ಎಂದಿದ್ದಕ್ಕೆ ಅವಾಚ್ಯವಾಗಿ ನಿಂದಿಸಿ, ದರ್ಪ ಮೆರೆದಿದ್ದಾನೆ.

    ಉತ್ತರ ಕುಮಾರನ ಪೌರುಷ ಒಲೆ ಮುಂದೆ ಅಂತಾರಲ್ಲ. ಹಾಗಾಯ್ತು ಈ ಬಿಬಿಎಂಪಿ ಅಧಿಕಾರಿಯ ದರ್ಪ, ದೌಲತ್ತು. ಊರಿಗೆಲ್ಲಾ ಬುದ್ಧಿ ಹೇಳುವ ಬಿಬಿಎಂಪಿ, ತನ್ನ ಸಿಬ್ಬಂದಿಯೇ ಹಗಲು ದರೋಡೆಗೆ ಇಳಿದಿರುವುದು ಇದು ಬಿಬಿಎಂಪಿಗೆ ನಾಚಿಕೆಗೇಡಿನ ಸಂಗತಿಯೇ ಸರಿ. ಪ್ರತಿನಿತ್ಯ ಅಂದಾಜು ಲೆಕ್ಕದಲ್ಲಿ ಎಷ್ಟು ಹಣವನ್ನು ವಸೂಲಿ ಮಾಡುತ್ತಾರೆ ಎನ್ನುವುದನ್ನು ನೋಡುವುದಾದರೆ,

    (ಒಂದು ದಿನಕ್ಕೆ ವಸೂಲಿಯಾಗುವ ಹಣ) ಅಂದಾಜು ಲೆಕ್ಕದಲ್ಲಿ
    1 ಸಾವಿರ ವ್ಯಾಪಾರಿಗಳಿಂದ ವಸೂಲಿ
    ಒಂದು ದಿನಕ್ಕೆ 30 ರೂ. 30 ಜನರಿಂದ ವಸೂಲಿ ಮಾಡಿದರೂ ಒಂದು ದಿನಕ್ಕೆ 90 ಸಾವಿರ ರೂ.

    ಇದು ಕೇವಲ ಸಣ್ಣಪುಟ್ಟ ವ್ಯಾಪಾರಸ್ಥರಿಂದ ವಸೂಲಿಯಾಗುವ ಹಣ. ದೊಡ್ಡ ದೊಡ್ಡ ಅಂಗಡಿಗಳಲ್ಲಿ 50, 60 ರೂ.ಯಂತೆ ವಸೂಲಿ ಮಾಡುತ್ತಾರೆ. ಇವೆಲ್ಲವನ್ನು ಲೆಕ್ಕಚಾರ ಮಾಡಿದರೆ, ದಿನಕ್ಕೆ ಏನಿಲ್ಲಾ ಅಂದರೂ 2 ಲಕ್ಷ ರೂ. ದಾಟುತ್ತೆ. ತಿಂಗಳಿಗೆ ಮೈ ಬಗ್ಗಿಸದೆ, ಬೆವರು ಸುರಿಸದೇ ಪುಕ್ಕಟ್ಟೆಯಾಗಿ ಅಕ್ರಮವಾಗಿ ಸಂಪಾದಿಸುವ ಹಣವಿದು. ಹಾಡಹಗಲೇ ಈ ವಸೂಲಿ ದಂಧೆ ನಡೆಯುತ್ತಿದ್ದರೂ ನಮ್ಮ ಬೆಂಗಳೂರು ಪೊಲೀಸ್ ಕಮೀಷನರ್ ಕಣ್ಣಿಗೆ ಬಿದ್ದಿಲ್ವಾ ಎಂದು ಬಡ ವ್ಯಾಪಾರಸ್ಥರು ಪ್ರಶ್ನಿಸುತ್ತಿದ್ದಾರೆ.

  • ವಾಡಿಕೆಗಿಂತ ಜಾಸ್ತಿ ಮಳೆ, ಕೊಡಗಿಗೆ ಬರಲಿದ್ದಾರೆ ಬಿಬಿಎಂಪಿ ಅಧಿಕಾರಿಗಳು

    ವಾಡಿಕೆಗಿಂತ ಜಾಸ್ತಿ ಮಳೆ, ಕೊಡಗಿಗೆ ಬರಲಿದ್ದಾರೆ ಬಿಬಿಎಂಪಿ ಅಧಿಕಾರಿಗಳು

    ಮಡಿಕೇರಿ: ವಾಡಿಕೆಗಿಂತ ಶೇಕಡಾ 73 ರಷ್ಟು ಮಳೆಯಾಗಿದೆ. ಪ್ರವಾಹ ಸ್ಥಳಗಳಿಂದ ಈಗಾಗಲೇ 3,120 ಜನರನ್ನು ರಕ್ಷಿಸಿ ತರಲಾಗಿದ್ದು, ಇದಕ್ಕೆ ಶ್ರಮಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

    ವೈಮಾನಿಕ ಸಮೀಕ್ಷೆ ನಡೆಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಜಿಲ್ಲೆಯಲ್ಲಿ ಉಂಟಾಗಿರುವ ಹಾನಿಯನ್ನು ಲೆಕ್ಕ ಹಾಕಲು ಹೆಚ್ಚು ದಿನಗಳು ಬೇಕಾಗುತ್ತದೆ. ಅಲ್ಲಲ್ಲಿ ಗುಡ್ಡ ಕುಸಿತವಾಗಿದೆ, ರಸ್ತೆಗಳು ಬಿರುಕುಬಿಟ್ಟಿವೆ. ಹಿಂದೆಂದು ಕಾಣದ ಅನಾಹುತಗಳು ಆಗುತ್ತಿವೆ. ಇತ್ತ ಸಂತ್ರಸ್ತರ ರಕ್ಷಣಾ ಕಾರ್ಯ ಮುಂದುವರಿದಿದೆ ಎಂದರು.

    ಇಂತಹ ಸಂದರ್ಭದಲ್ಲಿ ಕಳ್ಳಾಟ ಆಡುವ ಅಧಿಕಾರಿಗಳ ಅಮಾನತು ಮಾಡಿ, ಸೂಕ್ತ ವ್ಯವಸ್ಥೆ ಮಾಡಲು ಬಿಬಿಎಂಪಿ ಅಧಿಕಾರಿಗಳನ್ನು ಮಡಿಕೇರಿಗೆ ಕರೆಸಿಕೊಳ್ಳಲಾಗುತ್ತದೆ. ಆದರೆ ಕೆಲವರು ರಕ್ಷಣಾ ಕಾರ್ಯನಿರತರ ಮೇಲೆ ಕೆಲವರು ರಾಜಕೀಯ ಪ್ರದರ್ಶಿಸುತ್ತಿದ್ದಾರೆ. ಇದು ಒಳ್ಳೆಯದಲ್ಲ, ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಯ ಮೇಲೆ ಒತ್ತಡ ತರುವ ಕೆಲಸ ಮಾಡಬೇಡಿ ಎಂದು ಖಡಕ್ ಎಚ್ಚರಿಕೆ ನೀಡಿದರು.

    ಸಂತ್ರಸ್ತರಿಗೆ ಸರ್ಕಾರವು ಅಗತ್ಯ ಅನುಕೂಲಗಳನ್ನು ಮಾಡಿಕೊಡುತ್ತಿದೆ. ಮೊಬೈಲ್ ಶೌಚಾಲಯ ವ್ಯವಸ್ಥೆ ಸೇರಿದಂತೆ ಎಲ್ಲ ರೀತಿಯ ಸೌಲಭ್ಯ ಒದಗಿಸುತ್ತಿದ್ದಾರೆ. ಕೆಲವು ಅಧಿಕಾರಿಗಳು ಜೀವನದ ಹಂಗು ತೊರೆದು ರಕ್ಷಣಾ ಕಾರ್ಯದಲ್ಲಿ ಶ್ರಮಿಸುತ್ತಿದ್ದಾರೆ. ಆದರೆ ಕೆಲವರು ಅವರಿಗೆ ಬೆರಳು ಮಾಡಿ ತೋರಿಸುತ್ತಿದ್ದು, ಸಣ್ಣತನ ಮೆರೆಯುತ್ತಿದ್ದಾರೆ ಎಂದು ಸಿಎಂ ಕಿಡಿಕಾರಿದರು.


    ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯ ಕಷ್ಟವಾಗುತ್ತಿದೆ. 40 ಪರಿಹಾರ ಕೇಂದ್ರ ಕೇಂದ್ರಗಳು ವ್ಯವಸ್ಥೆ ಮಾಡಲಾಗಿದ್ದು, ಕೆಲವರು ಪರಿಹಾರ ಕೇಂದ್ರಗಳಲ್ಲಿ ಇರಲು ಇಷ್ಟ ಪಡುತ್ತಿಲ್ಲ. ಹೀಗಾಗಿ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದಾರೆ. ಮಳೆ ಆರ್ಭಟ ನಿಂತ ತಕ್ಷಣವೇ ಸರ್ಕಾರದ ಭೂಮಿ ಗುರುತು ಮಾಡಿ ಶೆಡ್ ನಿರ್ಮಾಣ, ರಸ್ತೆ ನಿರ್ಮಾಣಕ್ಕೆ ಮುಂದಾಗಲಿದೆ ಎಂದು ಸ್ಪಷ್ಟನೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv