Tag: BBMP Officers

  • PUBLiC TV Impact | ಕತ್ತಲಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಂದಿರಾ ಕ್ಯಾಂಟೀನ್‌ಗಳಿಗೆ ಬೆಳಕಿನ ಭಾಗ್ಯ

    PUBLiC TV Impact | ಕತ್ತಲಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಂದಿರಾ ಕ್ಯಾಂಟೀನ್‌ಗಳಿಗೆ ಬೆಳಕಿನ ಭಾಗ್ಯ

    ಬೆಂಗಳೂರು: ಇಂದಿರಾ ಕ್ಯಾಂಟೀನ್‌ಗಳನ್ನು (Indira Canteen) ಕತ್ತಲೆಗೆ ದೂಡಿದ್ದ ಬಿಬಿಎಂಪಿ ಇದೀಗ ಎಚ್ಚೆತ್ತುಕೊಂಡಿದ್ದು, ‘ಪಬ್ಲಿಕ್ ಟಿವಿ’ ವರದಿಯ ಬೆನ್ನಲ್ಲೇ ಇಂದಿರಾ ಕ್ಯಾಂಟೀನ್‌ಗಳಿಗೆ ಬೆಳಕಿನ ಭಾಗ್ಯ ಸಿಕ್ಕಿದೆ.

    ನಗರದ ಕೆಲವು ಇಂದಿರಾ ಕ್ಯಾಂಟೀನ್‌ಗಳಲ್ಲಿ ವಿದ್ಯುತ್ ಸಂಪರ್ಕವಿಲ್ಲದೇ, ಮೊಂಬತ್ತಿ ಬೆಳಕಿನಡಿ ಗ್ರಾಹಕರು ಊಟ ಮಾಡುತ್ತಿದ್ದರು. ಈ ಬಗ್ಗೆ ಇಂದಿರಾ ಕ್ಯಾಂಟೀನ್‌ಗಳಿಗೆ ಕತ್ತಲೆ ಭಾಗ್ಯ ಎಂದು ಪಬ್ಲಿಕ್ ಟಿವಿ ವರದಿಯೊಂದು ಬಿತ್ತರಿಸಿತ್ತು. ವರದಿ ಪ್ರಸಾರದ ಬೆನ್ನಲ್ಲೇ ಎಚ್ಚೆತ್ತ ಬಿಬಿಎಂಪಿ, ಬೆಸ್ಕಾಂಗೆ ಇನ್ನೆರೆಡು ತಿಂಗಳಲ್ಲಿ ಬಿಲ್ ಪಾವತಿ ಮಾಡುವುದಾಗಿ ಭರವಸೆ ನೀಡಿದ್ದು, ಮತ್ತೆ ವಿದ್ಯುತ್ ಸಂಪರ್ಕವನ್ನು ಪಡೆದುಕೊಂಡಿದೆ.ಇದನ್ನೂ ಓದಿ: ರಾಜ್ಯದ ಎರಡನೇ ದಸರಾ ಖ್ಯಾತಿಯ ಶಿವಮೊಗ್ಗ ದಸರಾಕ್ಕೆ 44ರ ಸಂಭ್ರಮ

    ಮೆಜೆಸ್ಟಿಕ್, ವೆಸ್ಟ್ ಹಾಫ್ ಕಾರ್ಡ್ ರಸ್ತೆ ಸೇರಿ ಹಲವು ಇಂದಿರಾ ಕ್ಯಾಂಟೀನ್‌ಗಳಲ್ಲಿ ನಾಲ್ಕೈದು ತಿಂಗಳುಗಳಿಂದ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿತ್ತು. ಮೆಜೆಸ್ಟಿಕ್‌ನ ಇಂದಿರಾ ಕ್ಯಾಂಟೀನ್‌ನ ಬಿಲ್ 8 ಸಾವಿರದ 340 ರೂ. ಆಗಿತ್ತು.

    ಪ್ರತಿಯೊಂದು ಇಂದಿರಾ ಕ್ಯಾಂಟೀನ್‌ಗಳ ವಿದ್ಯುತ್ ಬಿಲ್‌ನ್ನು ಆಯಾ ವಲಯದ ಬಿಬಿಎಂಪಿ (BBMP) ಇಂಜಿನಿಯರ್‌ಗಳೆ ಪಾವತಿ ಮಾಡಬೇಕು. ಈ ಇಂಜಿನಿಯರ್‌ಗಳಿಗೆ ಪಾಲಿಕೆಯ ಕೇಂದ್ರ ಕಚೇರಿಯಿಂದ ಹಣ ಬಿಡುಗಡೆ ಮಾಡದ ಹಿನ್ನೆಲೆ, ಬೆಸ್ಕಾಂಗೆ ಬಿಲ್ ಕಟ್ಟಿರಲಿಲ್ಲ. ಹೀಗಾಗಿ ಬಿಬಿಎಂಪಿಯ ಹೆಲ್ತ್ ಇನ್ಸ್ಪೆಕ್ಟರ್ ಅವರೇ ಖುದ್ದು ಇಂದಿರಾ ಕ್ಯಾಂಟೀನ್‌ಗೆ ಧಾವಿಸಿ ಪರಿಶೀಲಿಸಿದ್ದಾರೆ.

    ಇದೀಗ ಈ ಕ್ಯಾಂಟೀನ್‌ಗೂ ಬೆಳಕಿನ ಭಾಗ್ಯ ನೀಡಲಾಗಿದ್ದು, ವೆಸ್ಟ್ ಹಾಫ್ ಕಾರ್ಡ್ ರಸ್ತೆಯ ರಾಜುಕುಮಾರ್ ವಾರ್ಡ್ನ ಇಂದಿರಾ ಕ್ಯಾಂಟೀನ್‌ನಲ್ಲಿಯೂ ವಿದ್ಯುತ್ ಸಂಪರ್ಕವನ್ನ ಕಲ್ಪಿಸಲಾಗಿದೆ. ಪಬ್ಲಿಕ್ ಟಿವಿಯ ವರದಿಯ ಬೆನ್ನಲ್ಲೇ ಎಚ್ಚೆತ್ತ ಬಿಬಿಎಂಪಿ ಕತ್ತಲಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕ್ಯಾಂಟೀನ್‌ಗಳಿಗೆ ಬೆಳಕು ನೀಡಿದೆ.ಇದನ್ನೂ ಓದಿ: Mysuru Dasara: ಅದ್ದೂರಿ ಜಂಬೂಸವಾರಿಗೆ ಕ್ಷಣಗಣನೆ – ನಾಳೆ ಏನೆಲ್ಲಾ ವಿಶೇಷತೆ ಇರುತ್ತೆ?

     

  • ಸತ್ಯ ಹೇಳಿದ್ದೆ ತಪ್ಪಾಯ್ತು – ಕೆಲ್ಸದಿಂದ ಕೊರೊನಾ ವಾರಿಯರ್ ಔಟ್

    ಸತ್ಯ ಹೇಳಿದ್ದೆ ತಪ್ಪಾಯ್ತು – ಕೆಲ್ಸದಿಂದ ಕೊರೊನಾ ವಾರಿಯರ್ ಔಟ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಕಂಟ್ರೋಲ್ ರೂಂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಪಬ್ಲಿಕ್ ಟಿವಿಗೆ ಹೇಳಿಕೆ ನೀಡಿದ್ದ ಮಹಿಳಾ ಕೊರೊನಾ ವಾರಿಯರ್ ಒಬ್ಬರನ್ನು ಬಿಬಿಎಂಪಿ ಕೆಲಸದಿಂದ ಅಮಾನತು ಮಾಡಿದೆ.

    ಕೊರೊನಾ ಕಂಟ್ರೋಲ್ ರೂಂ ನಿರ್ವಹಣೆ ಮಾಡುತ್ತಿದ್ದ ಖಾಸಗಿ ಏಜೆನ್ಸಿಯ ಮಹಿಳಾ ಅಧಿಕಾರಿಯೊಬ್ಬರು, ಕೊರೊನಾ ರೋಗಿಗಳು ಕೈಕಾಲು ಹಿಡಿಯುತ್ತೇವೆ ಬೆಡ್ ವ್ಯವಸ್ಥೆ ಮಾಡಿ. ಒಂದು ಬೆಡ್ ಬ್ಲಾಕ್ ಮಾಡಿ ಅಂತಾರೆ. ಆದರೆ ಕಂಟ್ರೋಲ್ ರೂಂ ನಲ್ಲಿರುವ ನನಗೆ ಬೆಡ್ ಬ್ಲಾಕ್ ಮಾಡೋದಕ್ಕೆ ಅವಕಾಶ ಕೊಡಲ್ಲ. ಸೆಂಟ್ರಲ್ ವಾರ್ ರೂಂ ಟೀಮ್‍ಗೆ ರಿಪೋರ್ಟ್ ಮಾಡಿದರೆ ಅಲ್ಲಿ ಅವರು ರೋಗಿಗಳಿಗೆ ಸ್ಪಂದಿಸುವುದೇ ಇಲ್ಲ. ನಮಗೆ ಮತ್ತೆ ವಾಪಸ್ ರೋಗಿಗಳು ಕರೆ ಮಾಡಿ ಅಳಲು ತೋಡಿಕೊಳುತ್ತಾರೆ ಎಂದು ಹೇಳಿಕೆ ನೀಡಿದ್ದರು.

    ಜೊತೆಗೆ ನಾಲ್ಕು ಅಂಬುಲೆನ್ಸ್ ನನ್ನ ವಾರ್ಡ್‍ಗೆ ಕೊಟ್ಟಿದ್ದಾರೆ. ಆದರೆ ರೋಗಿಗಳು ತುರ್ತಾಗಿ ಕರೆ ಮಾಡಿ ಅಂಬುಲೆನ್ಸ್ ಬೇಕು ಕಳುಹಿಸಿ ಎಂದು ಕೇಳುತ್ತಾರೆ. ಆಗ ನಾವು ಹಿರಿಯ ಅಧಿಕಾರಿಗಳಿಗೆ ಕೇಳಿದರೆ, ನೀವು ಇಲ್ಲಿರುವ ಅಂಬುಲೆನ್ಸ್ ಕಳಿಸಬೇಡಿ ಅಂತಾರೆ. ಒಂದು ತಿಂಗಳಿಂದ ಹಾಗೆ ಬಿದ್ದಿದೆ. ಹೋಂ ಐಸೊಲೇಷನ್‍ನಲ್ಲಿರುವವರ ಆರೋಗ್ಯ ಏರುಪೇರಾದರೂ ಅವರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿಸುವುದಕ್ಕೆ ಅವಕಾಶ ಕೊಡಲ್ಲ ಎಂದು ಮಹಿಳಾ ಅಧಿಕಾರಿ ದೂರಿದ್ದರು.

    ವೆಂಟಿಲೇಟರ್ ನಲ್ಲಿರುವ ರೋಗಿಯನ್ನು ಏಳು ದಿನ ಆಯ್ತು ಎಂದು ಡೈರೆಕ್ಟ್ ಡಿಸ್ಚಾರ್ಜ್ ಮಾಡಿದ್ದಾರೆ. ಆಸ್ಪತ್ರೆಯ ವಿರುದ್ಧ ಅಧಿಕಾರಿಗಳ ಗಮನಕ್ಕೆ ತಂದರೆ ಯಾವುದೇ ಪ್ರಯೋಜನವಾಗಿಲ್ಲ. ಜನರಿಗೆ ಸಹಾಯ ಮಾಡೋಕೆ ಆಗಲ್ಲ. ಕೈಕಟ್ಟಿ ಹಾಕುತ್ತಾರೆ ಅಂದರೆ ಯಾಕೆ ಬೇಕು ಈ ವ್ಯವಸ್ಥೆ ಎಂದು ಮಹಿಳಾ ಅಧಿಕಾರಿ ಬೇಸರ ವ್ಯಕ್ತಪಡಿಸಿದ್ದರು. ಈ ಅಧಿಕಾರಿಯನ್ನು ಈಗ ಬಿಬಿಎಂಪಿ ಅಧಿಕಾರಿಗಳು ಕೆಲಸದಿಂದ ತೆಗೆದು ಹಾಕಿದ್ದಾರೆ. ಜೊತೆಗೆ ಎಫ್‍ಐಆರ್ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ.

    ಇಂದರಿಂದ ಭಯಗೊಂಡ ಮಹಿಳಾ ಅಧಿಕಾರಿ ವಿಡಿಯೋ ಮಾಡಿ ಅಳಲನ್ನು ತೋಡಿಕೊಂಡಿದ್ದು, ಸತ್ಯ ಹೇಳಿದ್ದೇ ತಪ್ಪಾಗಿದೆ. ನನ್ನನ್ನು ಕೆಲಸದಿಂದ ತೆಗದು ಹಾಕಿದ್ದಾರೆ. ಜೊತೆಗೆ ಎಫ್‍ಐಆರ್ ದಾಖಲಿಸಿ ಮನೆಯ ಹತ್ತಿರ ಪೊಲೀಸ್ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಮಹಿಳಾ ಅಧಿಕಾರಿ ಒತ್ತಾಯ ಮಾಡಿದ್ದಾರೆ.

  • ಬಿಬಿಎಂಪಿ ಅಧಿಕಾರಿಗಳಿಗೆ ನೊಬೆಲ್ ಪ್ರಶಸ್ತಿ ಕೊಡಬೇಕು: ಮುನಿರತ್ನ ಕಿಡಿ

    ಬಿಬಿಎಂಪಿ ಅಧಿಕಾರಿಗಳಿಗೆ ನೊಬೆಲ್ ಪ್ರಶಸ್ತಿ ಕೊಡಬೇಕು: ಮುನಿರತ್ನ ಕಿಡಿ

    ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳಿಗೆ ನೊಬೆಲ್ ಪ್ರಶಸ್ತಿ ಕೊಡಬೇಕು ಎಂದು ಶಾಸಕ ಮುನಿರತ್ನ ಅವರು ಅಸಮಾಧಾನ ಹೊರಹಕಿದ್ದಾರೆ.

    ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಮಾತನಾಡಿದ ಶಾಸಕರು, ಹಣ ಕೊಟ್ಟರೆ ರಾತ್ರೋ ರಾತ್ರಿ ಡಾಂಬರ್ ಹಾಕುತ್ತಾರೆ. ಆದರೆ ರಸ್ತೆ ಅಗಲೀಕರಣ ವಿಚಾರದಲ್ಲಿ ಮಾತ್ರ ಹಿಂದೇಟು ಹಾಕುತ್ತಿದ್ದಾರೆ. 2006ರಿಂದಲೂ ನಗರದಲ್ಲಿ ರಸ್ತೆ ಅಗಲೀಕರಣ ಆಗಿಲ್ಲ ಎಂದು ಗುಡುಗಿದರು.

    ಇಂದಿರಾ ಕ್ಯಾಂಟೀನ್‍ನಲ್ಲಿ ಪ್ರತಿ ದಿನ 100 ಜನರೂ ಊಟ ಮಾಡುತ್ತಿಲ್ಲ. ಸದ್ಯ ಇರುವ ಗುತ್ತಿಗೆದಾರರನ್ನು ರದ್ದು ಮಾಡಿ, ಹೊಸದಾಗಿ ಗುತ್ತಿಗೆದಾರರಿಗೆ ನೀಡಿ. ಈ ಸಂಬಂಧ ಆಗಸ್ಟ್‍ನಲ್ಲಿ ಹೊಸ ಟೆಂಡರ್ ನೀಡಬೇಕು ಎಂದು ಆಗ್ರಹಿಸಿದರು.

    ಈ ವೇಳೆ ಧ್ವನಿಗೂಡಿಸಿದ ಬಿಬಿಎಂಪಿ ಬಿಜೆಪಿ ಸದಸ್ಯ ಡಾ.ರಾಜು ಅವರು, ಚೆನ್ನಾಗಿಲ್ಲದ ಇಂದಿರಾ ಕ್ಯಾಂಟೀನ್ ಊಟವನ್ನೇ ಕೌನ್ಸಿಲ್ ಸಭೆಯಲ್ಲಿ ನಮಗೆ ಕೊಡುತ್ತಿದ್ದಾರೆ ಎಂದರು. ಕಾಂಗ್ರೆಸ್ ಪಕ್ಷದದಿಂದಲೇ ಊಟದ ಗುಣಮಟ್ಟದ ಬಗ್ಗೆ ಅಪಸ್ವರ ಕೇಳಿ ಬರುತ್ತಿದೆ. ಅಷ್ಟೇ ಅಲ್ಲದೆ ಊಟದ ಲೆಕ್ಕದಲ್ಲಿಯೂ ವ್ಯತ್ಯಾಸವಾಗುತ್ತಿದೆ. ತಿಂದವರು 10 ಜನ, ಆದರೆ ಬಿಲ್ ಇರುವುದು 100 ಜನರದ್ದು. ಕೂಡಲೇ ಲೆಕ್ಕದಲ್ಲಿ ಆಗುತ್ತಿರುವ ಅಕ್ರಮಕ್ಕೆ ಕಡಿವಾಣ ಹಾಕಿ ಎಂದು ಪಕ್ಷಾತೀತವಾಗಿ ಆಗ್ರಹ ಕೇಳಿ ಬಂದಿತು.

    ಬಿಬಿಎಂಪಿ ಕೌನ್ಸಿಲ್ ಸಭೆಯ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜೀದ್ ಮಾತನಾಡಿ, ಹೊಸ ಅಪಾರ್ಟ್‍ಮೆಂಟ್‍ಗಳಿಗೆ ಅನುಮತಿ ನೀಡಬಾರದು. ಈ ಕುರಿತಂತೆ ಗುರುವಾರ ಡಿಸಿಎಂ ಜಿ.ಪರಮೇಶ್ವರ್ ವಿಚಾರ ಪ್ರಸ್ತಾಪಿಸಿದ್ದರು. ನಗರದ ಹಿತ ದೃಷ್ಟಿಯಿಂದ ಈ ನಿರ್ಧಾರ ಒಳ್ಳೆಯದು ಎಂದು ಹೇಳಿದರು.

    ಬಿಬಿಎಂಪಿ ವಿಪಕ್ಷ ನಾಯಕ ಪದ್ಮನಾಭರೆಡ್ಡಿ ಅವರು ಮಾತನಾಡಿ, ಬೆಂಗಳೂರಿನಲ್ಲಿ ನೀರಿನ ಸಮಸ್ಯೆಯಿದೆ. ಜಲಮಮಂಡಳಿ ಪೂರೈಕೆ ಮಾರುತ್ತಿರುವ ನೀರಿನಲ್ಲಿ ಶೇ.40ರಷ್ಟು ಸೋರಿಕೆ ಆಗುತ್ತಿದೆ. ಪೆಟ್ರೋಲ್, ಡೀಸೆಲ್ ಲಕ್ಷಾಂತರ ಲೀಟರ್ ಪೂರೈಕೆ ಆಗುತ್ತಿದ್ದರೂ ಒಂದು ಹನಿಯೂ ಸೋರಿಕೆ ಆಗುತ್ತಿಲ್ಲ. ಆದರೆ ಜಲಮಂಡಳಿ ನೀರು ಮಾತ್ರ ಸೋರಿಕೆ ಆಗುತ್ತಿದೆ. ಇದು ಜಲಮಂಡಳಿ ನಿರ್ಲಕ್ಷ್ಯವನ್ನು ತಿಳಿಸುತ್ತದೆ ಎಂದು ಚಾಟಿ ಬೀಸಿದರು.

    ಈ ಮಧ್ಯೆ ಸಭೆಯಲ್ಲಿ ಬೆಂಗಳೂರು ವ್ಯಾಪ್ತಿಯಲ್ಲಿರುವ ಆರೋಗ್ಯ ಕೇಂದ್ರಗಳು, ಶಾಲೆಗಳನ್ನು ಬಿಬಿಎಂಪಿ ವ್ಯಾಪ್ತಿಗೆ ನೀಡುವಂತೆ ಆಗ್ರಹ ಕೇಳಿ ಬಂದಿತು. ಲೈಬ್ರರಿ ಸೆಸ್, ಬೆಗ್ಗರ್ ಸೆಸ್ ಹಣ ಪಾಲಿಕೆ ವ್ಯಾಪ್ತಿಗೆ ಸೇರಬೇಕು. ಬಿಬಿಎಂಪಿ ತೆರಿಗೆ ಸಂಗ್ರಹಿಸಿ ರಾಜ್ಯಕ್ಕೆ ಕೊಡುತ್ತಿದೆ. ಈ ಬಗ್ಗೆ ಅಧ್ಯಯನ ನಡೆಸಲು ಸಮಿತಿ ರಚನೆ ಮಾಡಲಿ ಎಂಬ ಆಗ್ರಹ ಕೇಳಿ ಬಂದಿತು.

    ಶಾಸಕ ಸತೀಶ್ ರೆಡ್ಡಿ ಅವರು ಮಾತನಾಡಿ, ತೆರಿಗೆ ಹಣ ಸಮರ್ಪಕವಾಗಿ ಬಳಕೆ ಮಾಡುವಲ್ಲಿ ಆಡಳಿತ ಪಕ್ಷ ವಿಫಲವಾಗಿದೆ. ಅಭಿವೃದ್ಧಿ ಹೆಸರಲ್ಲಿ ಹಣ ಪೋಲು ಮಾಡಲಾಗುತ್ತದೆ. ಟ್ರಾಫಿಕ್, ನೀರಿನ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಆಡಳಿತದಲ್ಲಿ ಹೊಸದಾಗಿ ಯಾವುದೇ ನೀರಿನ ಯೋಜನೆ ಜಾರಿ ತಂದಿಲ್ಲ. ಬಿಜೆಪಿ ಆಡಳಿತದಲ್ಲಿದ್ದಾಗ ನೀರಿನ ಯೋಜನೆ ಕೈಗೊಂಡಿದ್ದೇವು. ಆದರೆ ರಾಜ್ಯ, ಬಿಬಿಎಂಪಿ ಆಡಳಿತ ವರ್ಗ ಹೊಸ ಯೋಜನೆ ಜಾರಿಗೆ ತರಲು ವಿಫಲವಾಗಿವೆ ಎಂದು ಅಸಮಧಾನ ಹೊರ ಹಾಕಿದರು.