ಬೆಂಗಳೂರು: ಹೊಸೂರು ಮುಖ್ಯ ರಸ್ತೆಯ ಸರ್ಜಾಪುರ ಜಂಕ್ಷನ್ ಬಳಿ ನೂತನವಾಗಿ ನಿರ್ಮಾಣವಾದ ಸ್ಕೈವಾಕ್‍ಗೆ ಮೇಯರ್ ಗೌತಮ್ ಕುಮಾರ್, ಸ್ಥಳೀಯ ಶಾಸಕ ರಾಮಲಿಂಗಾರೆಡ್ಡಿ ಹಾಗೂ ಸಂಸದ ತೇಜಸ್ವಿ ಸೂರ್ಯ ಚಾಲನೆ ನೀಡಿದರು.
ಬಿಬಿಎಂಪಿ ವತಿಯಿಂದ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಹೊಸೂರು ಮುಖ್ಯ ರಸ್ತೆಯ ಸರ್ಜಾಪುರ ಜಂಕ್ಷನ್ ಬಳಿ ನೂತನವಾಗಿ ಸ್ಕೈವಾಕ್ ನಿರ್ಮಿಸಲಾಗಿದೆ. ಹೊಸೂರು ಮುಖ್ಯರಸ್ತೆ ಸರ್ಜಾಪುರ ಜಂಕ್ಷನ್‍ನಲ್ಲಿ ಪಾದಚಾರಿ ಮೇಲ್ಸೇತುವೆಗೆ ಬಹಳ ದಿನಗಳಿಂದ ಬೇಡಿಕೆ ಇತ್ತು. ಸ್ಥಳೀಯರ ಮನವಿ ಮೇರೆಗೆ ಸಾರ್ವಜನಿಕರ ಓಡಾಟಕ್ಕೆ ಅನುಕೂಲವಾಗಲು ಖಾಸಗೀ ಸಂಸ್ಥೆಯ ಸಹಭಾಗಿತ್ವದಲ್ಲಿ ಸುಸಜ್ಜಿತ ಸ್ಕೈವಾಕ್ ನಿರ್ಮಾಣ ಮಾಡಲಾಗಿದೆ.
ವಿನೂತನ ರೀತಿಯಲ್ಲಿ ಸ್ಕೈವಾಕ್ ಅನ್ನು ನಿರ್ಮಿಸಿದ್ದು, ಸಿಸಿಟಿವಿ ಕ್ಯಾಮೆರಾ, ಎರಡೂ ಬದಿಯಲ್ಲಿ ಲಿಫ್ಟ್, ಸಾರ್ವಜನಿಕರು ರಾತ್ರಿ ವೇಳೆ ಸುರಕ್ಷಿತವಾಗಿ ತೆರಳಲು ಎಲ್‍ಇಡಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ ಎಂದು ಉದ್ಘಾಟನೆ ಬಳಿಕ ಮೇಯರ್ ಗೌತಮ್ ಕುಮಾರ್ ತಿಳಿಸಿದರು.
ಬೆಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿರುವ ಮಾರುಕಟ್ಟೆಗಳ ಸಮಸ್ಯೆಯನ್ನು ಪಾಲಿಕೆ ಇತ್ಯರ್ಥ ಮಾಡಲಿದೆ. ಕೆ.ಆರ್ ಮಾರ್ಕೆಟ್ ನಲ್ಲಿರುವ 24 ಅನಧಿಕೃತ ಮಳಿಗೆಗಳನ್ನು ತೆರವುಗೊಳಿಸಿದ್ದು, ಅದಕ್ಕೆ ಯಾರು ಕೂಡ ಅಡ್ಡಿಪಡಿಸದೆ ಸಹಕಾರ ನೀಡುವಂತೆ ಮಾರುಕಟ್ಟೆ ಅಸೋಸಿಯೇಷನ್ ಪದಾಧಿಕಾರಿಗಳಿಗೆ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಸೂಚನೆ ನೀಡಿದರು.
ಮಾರುಕಟ್ಟೆ ಅಸೋಸಿಯೇಷನ್ ಪದಾಧಿಕಾರಿಗಳ ಜೊತೆ ಇಂದು ಸಂಜೆ ನಡೆದ ಸಭೆಯಲ್ಲಿ ಮೇಯರ್ ಈ ಸೂಚನೆಯನ್ನು ಕೊಟ್ಟಿದ್ದು, ಉದ್ದಿಮೆ ಪರವಾನಗಿ ಇಲ್ಲದ ಮಳಿಗೆಗಳಿಗೆ ಕೂಡಲೇ ಪರವಾನಗಿ ಮಾಡಿಸಿಕೊಳ್ಳಬೇಕು. ಪಾಲಿಕೆ ನಿಗದಿಪಡಿಸಿರುವ ಬಾಡಿಗೆಯನ್ನು ಸರಿಯಾಗಿ ಪಾವತಿಸಬೇಕು ಅಂತ ಸೂಚಿಸಿದರು.
ಮಾರುಕಟ್ಟೆಗಳ ವಿಚಾರವಾಗಿ ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಇತ್ಯರ್ಥ ಮಾಡುವ ಬಗ್ಗೆ ಪಾಲಿಕೆ, ಕಾನೂನು ಕೋಶ ವಿಭಾಗದವರ ಜೊತೆ ಚರ್ಚಿಸಲಾಗುವುದು. ಜೊತೆಗೆ 5 ವರ್ಷಗಳ ಕಾಲ ಮಾತ್ರ ವ್ಯಾಪಾರ ಮಾಡಲು ಅನುಮತಿ ನೀಡುವ ನಿಯಮವನ್ನು ತಿದ್ದುಪಡಿ ಮಾಡುವ ಬಗ್ಗೆ ಆಯುಕ್ತರ ಜೊತೆ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಅಂತ ತಿಳಿಸಿದರು.
ಈ ಸಭೆಯಲ್ಲಿ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಹಾಗೂ ಸಂಸದ ಪಿ.ಸಿ.ಮೋಹನ್ ಭಾಗಿಯಾಗಿದ್ದರಿ. ಸ್ಥಳದಲ್ಲಿಯೇ ಸಂಸದ ಪಿ.ಸಿ.ಮೋಹನ್, ಕೆ.ಆರ್.ಮಾರ್ಕೆಟ್, ರಸೆಲ್ ಮಾರ್ಕೆಟ್ ಸೇರಿದಂತೆ ಇನ್ನೂ ಕೆಲವು ಮಾರುಕಟ್ಟೆಗಳಲ್ಲಿ 5 ವರ್ಷಗಳ ಕಾಲ ಮಾತ್ರ ವ್ಯಾಪಾರ ಮಾಡಲು ಅನುಮತಿ ನೀಡುವ ನಿಯಮವನ್ನು ತಿದ್ದುಪಡಿ ಮಾಡುವಂತೆ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದರು.
ಬೆಂಗಳೂರು: ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆದ್ದಿದ್ದರೂ ಅಧಿಕಾರದಿಂದ ವಂಚಿತಗೊಂಡಿದ್ದ ಬಿಜೆಪಿ ಈ ಬಾರಿ ಬಿಬಿಎಂಪಿ ಮೇಯರ್ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.
ಇಂದು ನಡೆದ ಚುನಾವಣೆಯಲ್ಲಿ ಒಟ್ಟು 129 ಮತಗಳನ್ನು ಪಡೆಯುವ ಮೂಲಕ ಜೋಗುಪಾಳ್ಯ ವಾರ್ಡಿನ ಬಿಜೆಪಿ ಸದಸ್ಯ ಗೌತಮ್ ಕುಮಾರ್ ಜೈನ್ ಮೇಯರ್ ಆಗಿ ಆಯ್ಕೆ ಆಗಿದ್ದರೆ, ಬೊಮ್ಮನಹಳ್ಳಿ ವಾರ್ಡ್ನ ರಾಮ್ ಮೋಹನ್ ರಾಜು ಉಪ ಮೇಯರ್ ಆಗಿ ಆಯ್ಕೆ ಆಗಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸಿದ್ದರೂ ಕೊನೆ ಕ್ಷಣದಲ್ಲಿ ಪಕ್ಷೇತರ ಪಾಲಿಕೆ ಸದಸ್ಯರ ಜೊತೆಗಿನ ಮಾತುಕತೆ ಯಶಸ್ವಿಯಾಗದ ಪರಿಣಾಮ ಮೇಯರ್ ಹುದ್ದೆ ಕೈ ತಪ್ಪಿತ್ತು. ಆದರೆ ಈ ಬಾರಿ ಎಲ್ಲವನ್ನೂ ಯಶಸ್ವಿಯಾಗಿ ನಿಭಾಯಿಸಿದ ಪರಿಣಾಮ ಬಿಜೆಪಿ ಬಿಬಿಎಂಪಿ ಅಧಿಕಾರವನ್ನು ಹಿಡಿದಿದೆ.
ಮೇಯರ್, ಉಪ ಮೇಯರ್ ಚುನಾವಣೆಯಲ್ಲಿ 257 ಮಂದಿ ಮತ ಚಲಾಯಿಸುವ ಹಕ್ಕು ಹೊಂದಿದ್ದರೂ 249 ಮಂದಿ ಹಾಜರಾಗಿದ್ದರು. 8 ಮಂದಿ ಗೈರಾಗಿರುವ ಕಾರಣ ಬಹುಮತಕ್ಕೆ 125 ಸದಸ್ಯರ ಬೆಂಬಲ ಬೇಕಿತ್ತು. ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ್ದ ಪದ್ಮನಾಭ ರೆಡ್ಡಿ ನಾಮಪತ್ರವನ್ನು ಹಿಂದಕ್ಕೆ ಪಡೆದಿದ್ದರು.
ಪಕ್ಷೇತರ ಸದಸ್ಯರು ಬಿಜೆಪಿ ಕೈ ಹಿಡಿಯಲಿರುವ ಕಾರಣ ಚುನಾವಣೆಗೂ ಮೊದಲೇ ಈ ಬಾರಿ ಮೇಯರ್ ಪಟ್ಟ ಸಿಗಲಿದೆ ಎನ್ನುವ ನಿರೀಕ್ಷೆ ಇತ್ತು. ನಿರೀಕ್ಷಿಸಿದಂತೆ 5 ಮಂದಿ ಪಕ್ಷೇತರ ಸದಸ್ಯರು ಬಿಜೆಪಿಯನ್ನು ಬೆಂಬಲಿಸಿದ್ದರು. ಪ್ರಾದೇಶಿಕ ಚುನಾವಣಾ ಆಯುಕ್ತ ಹರ್ಷ ಗುಪ್ತಾ ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.
ಗೆದ್ದಿದ್ದು ಹೇಗೆ?
ಕಳೆದ 4 ವರ್ಷಗಳಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳನ್ನು ಮೇಯರ್, ಉಪ ಮೇಯರ್ ಸ್ಥಾನಕ್ಕೆ ಗೆಲ್ಲಿಸಲು ರಣತಂತ್ರ ರೂಪಿಸಿ, ಯಶಸ್ವಿಯಾಗುತ್ತಿದ್ದ ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜ್ ಮತ್ತು ಮುನಿರತ್ನ ಶಾಸಕ ಸ್ಥಾನದಿಂದ ಅನರ್ಹಗೊಂಡು, ಕಾಂಗ್ರೆಸ್‍ನಿಂದ ದೂರ ಉಳಿದಿದ್ದರು.
ರಾಜ್ಯಮಟ್ಟದಲ್ಲಿಮೈತ್ರಿ ಮುರಿದುಕೊಂಡಿದ್ದರೂ ಬಿಬಿಎಂಪಿಯಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಮಾಡಿಕೊಂಡಿತ್ತು. ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮೇಯರ್ ಸ್ಥಾನಕ್ಕೆ ಸತ್ಯನಾರಾಯಣ ನಾಮಪತ್ರ ಸಲ್ಲಿಕೆ ಮಾಡಿದ್ದರೆ ಉಪಮೇಯರ್ ಸ್ಥಾನಕ್ಕೆ ಗಂಗಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಜೆಡಿಎಸ್‍ನಿಂದ ಅನರ್ಹಗೊಂಡಿರುವ ಶಾಸಕ ಗೋಪಾಲಯ್ಯ ಅವರ ಪತ್ನಿ ಹೇಮಲತಾ ಅವರು ಮೈತ್ರಿ ಅಭ್ಯರ್ಥಿ ಸತ್ಯನಾರಾಯಣ ಅವರನ್ನು ಬೆಂಬಲಿಸಿದ್ದರು.
ಬೆಂಗಳೂರು: ಬಿಬಿಎಂಪಿ ಮೇಯರ್ ಅಭ್ಯರ್ಥಿ ಆಯ್ಕೆಯಲ್ಲೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಬಿಎಸ್‍ವೈ ವಿರುದ್ಧ ಸೆಡ್ಡು ಹೊಡೆದು ಗೆದ್ದಿದ್ದಾರೆ.
ಹೌದು. ಕಳೆದ 4 ವರ್ಷಗಳಿಂದ ವಿರೋಧ ಪಕ್ಷದ ನಾಯಕರಾಗಿದ್ದ ಪದ್ಮನಾಭ ರೆಡ್ಡಿ ಅಥವಾ ಎಲ್ ಶ್ರೀನಿವಾಸ್ ಅವರನ್ನು ಮೇಯರ್ ಅಭ್ಯರ್ಥಿಯನ್ನಾಗಿ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಮುಂದಾಗಿದ್ದರು. ಆದರೆ ಜೋಗುಪಾಳ್ಯದ ಕಾರ್ಪೊರೇಟರ್ ಗೌತಮ್ ಕುಮಾರ್ ಜೈನ್ ಪರ ನಳೀನ್ ಕುಮಾರ್ ಬ್ಯಾಟಿಂಗ್ ನಡೆಸಿದ್ದರು. ಅಂತಿಮವಾಗಿ ಹೈಕಮಾಂಡ್ ಗೌತಮ್ ಹೆಸರು ಆಯ್ಕೆ ಮಾಡಿದ್ದು ಮೇಯರ್ ಆಯ್ಕೆ ವಿಚಾರದಲ್ಲೂ ಬಿಎಸ್‍ವೈಗೆ ಹಿನ್ನಡೆಯಾಗಿದೆ. ಪಕ್ಷ ಸಂಘ ನಿಷ್ಠೆ ಹೊಂದಿದವರಿಗೆ ಮೇಯರ್ ಪಟ್ಟ ನೀಡಲು ಮುಂದಾದ ಹಿನ್ನೆಲೆಯಲ್ಲಿ ಗೌತಮ್ ಕುಮಾರ್ ಹೆಸರನ್ನು ಅಂತಿಮಗೊಳಿಸಲಾಗಿದೆ.
ಸರ್ಕಾರ ಬಿಬಿಎಂಪಿ ಮೇಯರ್ ಚುನಾವಣೆಯನ್ನು ಮುಂದೂಡಲು ಪ್ರಯತ್ನ ನಡೆಸಿತ್ತು. ಆದರೆ ಪ್ರಾದೇಶಿಕ ಚುನಾವಣಾ ಆಯುಕ್ತ ಹರ್ಷ ಗುಪ್ತಾ ಇಂದೇ ಚುನಾವಣೆ ನಡೆಸುವುದಾಗಿ ಹೇಳಿದ್ದರು. ಹೀಗಾಗಿ ಸೋಮವಾರ ರಾತ್ರಿ ಯಡಿಯೂರಪ್ಪ ಮೇಯರ್ ಚುನಾವಣೆ ಸಂಬಂಧ ಚರ್ಚೆ ನಡೆಸಲು ಬೆಂಗಳೂರಿಗೆ ಬರಬೇಕಿತ್ತು. ಆದರೆ ತಾನು ಸೂಚಿಸಿದ ವ್ಯಕ್ತಿಗಳಿಗೆ ಬೆಂಬಲ ಸಿಗುತ್ತಿಲ್ಲ ಎನ್ನುವುದು ತಿಳಿಯುತ್ತಿದ್ದಂತೆ ಶಿಕಾರಿಪುರದಲ್ಲೇ ಇರಲು ನಿರ್ಧರಿಸಿದರು ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಪದ್ಮನಾಭ ರೆಡ್ಡಿ ಸೋತಿದ್ದು ಎಲ್ಲಿ?
ಕಳೆದ ನಾಲ್ಕು ವರ್ಷವೂ ಬಿಬಿಎಂಪಿ ವಿಪಕ್ಷ ನಾಯಕನಾಗಿದ್ದೂ ಮಾತ್ರವಲ್ಲದೇ ಈ ಸ್ಥಾನವನ್ನು ಯಾರಿಗೂ ಬಿಟ್ಟುಕೊಟ್ಟಿರಲಿಲ್ಲ. ಪಕ್ಷದ ಪಾಲಿಕೆ ಸದಸ್ಯರಲ್ಲಿ ವಿಶ್ವಾಸ ಕಳೆದುಕೊಂಡ ಹಿನ್ನೆಲೆಯಲ್ಲಿ ಮೇಯರ್ ಅಭ್ಯರ್ಥಿಯಾಗುವುದು ತಪ್ಪಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೆಜೆ ಜಾರ್ಜ್ ವಿರುದ್ಧ ಸರ್ವಜ್ಞನಗರ ಕ್ಷೇತ್ರದಲ್ಲಿ ಸ್ಪರ್ಧೆಗೆ ನಿಲ್ಲುವಂತೆ ಸೂಚಿಸಲಾಗಿತ್ತು. ಖುದ್ದು ಹೈಕಮಾಂಡ್ ಸೂಚನೆ ನೀಡಿದ್ದರೂ ಪದ್ಮನಾಭ ರೆಡ್ಡಿ ಸ್ಪರ್ಧಿಸಲು ಹಿಂದೇಟು ಹಾಕಿದ್ದರು. ಮುಖ್ಯವಾಗಿ ಪದ್ಮನಾಭ ರೆಡ್ಡಿ ಯಡಿಯೂರಪ್ಪ ತಂಡದಲ್ಲಿ ಗುರುತಿಸಿಕೊಂಡಿದ್ದಾರೆ. ಇದರ ಜೊತೆ ಇವರು ಮೂಲ ಬಿಜೆಪಿಯವರಲ್ಲ. ಜೆಡಿಎಸ್‍ನಿಂದ ವಲಸೆ ಬಂದಿದ್ದಾರೆ ಎನ್ನುವುದನ್ನು ಪರಿಗಣಿಸಿ ಆಯ್ಕೆ ಮಾಡಿಲ್ಲ ಎಂಬ ವಿಚಾರ ತಿಳಿದುಬಂದಿದೆ.
ಗೌತಮ್ ಆಯ್ಕೆಗೆ ಕಾರಣ:
ಮೊದಲನೆಯದು ಸಂಘದ ನಿಷ್ಠರಾಗಿರುವುದು ಪ್ರಮುಖ ಕಾರಣ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹ್ಯಾರಿಸ್ ವಿರುದ್ಧ ಸ್ಪರ್ಧಿಸಲು ಶಾಂತಿನಗರ ಕ್ಷೇತ್ರದ ಟಿಕೆಟ್ ಕೇಳಿದ್ದರು. ಆದರೆ ಯಡಿಯೂರಪ್ಪ ಮತ್ತು ತಂಡ ಟಿಕೆಟ್ ನೀಡಲು ಒಪ್ಪಿಗೆ ಸೂಚಿಸಿರಲಿಲ್ಲ. ಬೆಂಗಳೂರು ಕೇಂದ್ರ ಕ್ಷೇತ್ರದ ಸಂಸದ ಪಿಸಿ ಮೋಹನ್ ಬೆಂಬಲ ಗೌತಮ್ ಅವರಿಗೆ ಇದೆ. ಮೂಲ ಬಿಜೆಪಿಯವರಿಗೆ ಹೆಚ್ಚು ಪ್ರಾಧನ್ಯತೆ ನೀಡಬೇಕೆಂಬ ನಿರ್ಧಾರದ ಹಿನ್ನೆಲೆಯಲ್ಲಿ ಗೌತಮ್ ಅವರನ್ನೇ ಆಯ್ಕೆ ಮಾಡಲಾಗಿದೆ ಎನ್ನುವ ವಿಚಾರ ತಿಳಿದು ಬಂದಿದೆ.
ಈ ಎಲ್ಲ ಕಾರಣದ ಜೊತೆಗೆ ನಳೀನ್ ಕುಮಾರ್ ಕಟೀಲ್ ಬೆಂಗಳೂರಿನ ನಾಯಕರ ಮಾತನ್ನು ಆಲಿಸಿದರೂ ಸಂಘ ಪರಿವಾರದ ಮುಖಂಡರ ನಿರ್ಧಾರ ಕೇಳಿದರೂ ಅಂತಿಮವಾಗಿ ಹೈಕಮಾಂಡ್ ತೀರ್ಮಾನವನ್ನೇ ಒಪ್ಪಿಕೊಳ್ಳುತ್ತಾರೆ. ಹೀಗಾಗಿ ಮೇಯರ್ ಅಭ್ಯರ್ಥಿಯನ್ನಾಗಿ ಗೌತಮ್ ಕುಮಾರ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ.
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ ಇಂದು ನಡೆಯಲಿದ್ದೂ, ಬಿಜೆಪಿಯಿಂದ ಯಾರು ಸ್ಪರ್ಧಿಸುತ್ತಾರೆ ಎನ್ನುವುದು ಇನ್ನೂ ಅಂತಿಮವಾಗಿಲ್ಲ.
ಸೋಮವಾರ ತಡರಾತ್ರಿಯವರೆಗೆ ಬಿಜೆಪಿ ನಾಯಕರು ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಮೇಯರ್ ಸ್ಥಾನಕ್ಕೆ ಸರ್ವಜ್ಞನಗರದ ಪದ್ಮನಾಭರೆಡ್ಡಿ, ಶಾಂತಿನಗರ ಗೌತಮ್ ಹೆಸರು ಕೇಳಿ ಬಂದಿದ್ದರೆ ಉಪಮೇಯರ್ ಸ್ಥಾನಕ್ಕೆ ವಿಜಯನಗರದ ಮಹಾಲಕ್ಷ್ಮಿ, ಬೊಮ್ಮನಹಳ್ಳಿಯ ಗುರುಮೂರ್ತಿ ಹೆಸರು ಕೇಳಿಬಂದಿದೆ. ಒಟ್ಟು ನಾಲ್ಕು ಮಂದಿಯಲ್ಲಿ ಅಂತಿಮವಾಗಿ ಯಾರು ಆಯ್ಕೆ ಆಗಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ.
ಮೋದಿ, ಅಮಿತ್ ಶಾ ಅಧಿಕಾರದ ಸಮಯದಲ್ಲಿ ಹಲವು ಬಾರಿ ಕೊನೆ ಕ್ಷಣದಲ್ಲಿ ಹೊಸ ವ್ಯಕ್ತಿಗೆ ಮಣೆ ಹಾಕಿದ್ದು ಇದೆ. ಹೀಗಾಗಿ ಕೊನೆ ಕ್ಷಣದಲ್ಲಿ ಮೇಯರ್, ಉಪಮೇಯರ್ ಹುದ್ದೆ ಬೇರೆ ವ್ಯಕ್ತಿ ಆಯ್ಕೆಯಾದರೂ ಅಚ್ಚರಿ ಇಲ್ಲ ಎನ್ನುವ ಮಾತು ಕೇಳಿಬಂದಿದೆ.
ಇಂದು ಬೆಳಗ್ಗೆ 8.30ರಿಂದ ನಾಮಪತ್ರ ಸಲ್ಲಿಕೆಯಾಗಲಿದ್ದು, ಈ ಬಾರಿಯೂ ಬಿಬಿಎಂಪಿಯಲ್ಲಿ ಮೈತ್ರಿಯನ್ನು ಮುಂದುವರಿಸಿಕೊಂಡು ಹೋಗಲು ಕಾಂಗ್ರೆಸ್ ಹಾಗೂ ಜೆಡಿಎಸ್ ನಿರ್ಧರಿಸಿದೆ. ಮೈತ್ರಿ ಅನ್ವಯ ಕಾಂಗ್ರೆಸ್‍ಗೆ ಮೇಯರ್ ಸ್ಥಾನ ಹಾಗೂ ಜೆಡಿಎಸ್‍ಗೆ ಉಪ ಮೇಯರ್ ಸ್ಥಾನ ಹಂಚಿಕೆ ಮಾಡಿಕೊಳ್ಳಲಾಗಿದೆ.
ಮೈತ್ರಿ ಅನ್ವಯ ಕಾಂಗ್ರೆಸ್, ಜೆಡಿಎಸ್‍ನಿಂದ ಮೇಯರ್ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಲು ದತ್ತಾತ್ರೇಯ ವಾರ್ಡ್ ಸದಸ್ಯರಾದ ಸತ್ಯನಾರಾಯಣರನ್ನು ಆಯ್ಕೆ ಮಾಡಲಾಗಿದ್ದು, ಕೆಪಿಸಿಸಿ ಅಧಿಕೃತವಾಗಿ ಪ್ರಕಟಿಸಿದೆ. ಮಂಗಳವಾರ ಸತ್ಯನಾರಾಯಣ ಅವರು ಮೈತ್ರಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಇದನ್ನೂ ಓದಿ: ಸಿಎಂ ಮಾತಿಗೂ ಡೋಂಟ್ ಕೇರ್ – ಸರ್ಕಾರಕ್ಕೆ ಸವಾಲೆಸೆದ ನಿಷ್ಠಾವಂತ ಅಧಿಕಾರಿ
ಇತ್ತ ಉಪಮೇಯರ್ ಸ್ಥಾನಕ್ಕೆ ಅಂತಿಮ ಕ್ಷಣದಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಬದಲಿಸಿದ್ದು, ಶಕ್ತಿ ಗಣಪತಿ ವಾರ್ಡ್ 74ರ ಪಾಲಿಕೆ ಸದಸ್ಯೆ ಗಂಗಮ್ಮ ರಾಜಣ್ಣ ಅವರಿಗೆ ನಾಮಪತ್ರ ಸಲ್ಲಿಕೆ ಮಾಡಲು ಜೆಡಿಎಸ್ ವರಿಷ್ಠರು ಸೂಚನೆ ನೀಡಿದ್ದಾರೆ. ಇದಕ್ಕೂ ಮುನ್ನ ವಾರ್ಡ್ 32 ಕಾವಲಭೈರಸಂದ್ರ ಪಾಲಿಕೆ ಸದಸ್ಯೆ ನೇತ್ರಾ ನಾರಾಯಣ ಅಥವಾ ಇಮ್ರಾನ್ ಪಾಷಾ ಅವರಿಗೆ ಉಪಮೇಯರ್ ಸ್ಥಾನಕ್ಕೆ ಸ್ಪರ್ಧೆ ನಡೆಸಲು ಅವಕಾಶ ನೀಡಲಾಗುತ್ತದೆ ಎನ್ನಲಾಗಿತ್ತು.
ಬೆಂಗಳೂರು: ತನಗೆ ವಿಧಿಸಿಲಾಗಿದ್ದ 500 ರೂ. ದಂಡವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಮೇಯರ್ ಗಂಗಾಂಬಿಕೆ ಅವರು ಕಟ್ಟಿದ್ದಾರೆ.
ಮೇಯರ್ ಅವರು ದಂಡ ಕಟ್ಟುವ ಮೂಲಕ ಪ್ರತಿಯೊಬ್ಬರೂ ಈ ಪ್ಲಾಸ್ಟಿಕ್ ಬಳಸುವುದನ್ನು ನಿಷೇಧ ಮಾಡಲಾಗಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅಲ್ಲದೆ ಎಲ್ಲರೂ ಈ ನಿಯಮಕ್ಕೆ ಕೈ ಜೋಡಿಸುತ್ತಾರೆ ಎಂದು ನಂಬಿದ್ದಾರೆ.
ದಂಡ ವಿಧಿಸಿದ್ದು ಯಾಕೆ..?
ಜುಲೈ 19ರಂದು ಬಿ.ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಅಭಿನಂದನೆ ಸಲ್ಲಿಸಲು ಮೇಯರ್, ಬಿಎಸ್‍ವೈ ಅವರನ್ನು ಭೇಟಿ ಮಾಡಿದ್ದರು. ಭೇಟಿಯ ವೇಳೆ ಪ್ಲಾಸ್ಟಿಕ್ ನಲ್ಲಿ ಸುತ್ತಿದ್ದ ಡ್ರೈ ಫ್ರೂಟ್ಸ್ ಪ್ಯಾಕನ್ನು ನೀಡಿದ್ದಾರೆ.
ಗಿಫ್ಟ್ ನೀಡಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಆಗುತ್ತಿದ್ದಂತೆ ಜನ ಮೇಯರ್ ಅವರಿಗೆ, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ಎಂದು ಬಿಬಿಎಂಪಿ ಹೇಳುತ್ತಿದೆ. ಆದರೆ ನೀವೇ ಪ್ಲಾಸ್ಟಿಕ್ ಬಳಸಿದ ಗಿಫ್ಟ್ ನೀಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸತೊಡಗಿದರು.
Karnataka: Bengaluru Mayor Gangambike Mallikarjun paid Rs 500 fine for presenting a gift wrapped in plastic to Chief Minister BS Yediyurappa. Plastic was banned by Bruhat Bengaluru Mahanagara Palike (BBMP) in 2016. pic.twitter.com/4To7o9BAGQ
ಈ ಹಿನ್ನೆಲೆಯಲ್ಲಿ ಶನಿವಾರ ಸಂಪಂಗಿರಮನಗರ್ ವಾರ್ಡ್ ನಂಬರ್ 110ರ ಆರೋಗ್ಯಾಧಿಕಾರಿಯವರನ್ನು ಕರೆಸಿಕೊಂಡ ಮೇಯರ್, ಅವರಿಗೆ ತನ್ನ ದಂಡದ ಮೊತ್ತವನ್ನು ನೀಡಿದ್ದಾರೆ. ಅಲ್ಲದೆ 2016ರಲ್ಲೇ ರಾಜ್ಯದಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡಲಾಗಿದೆ. ಆದರೆ ಇದು ಈವರೆಗೂ ಸರಿಯಾದ ರೀತಿಯಲ್ಲಿ ನಿಷೇಧವಾಗಿಲ್ಲ. ಹೀಗಾಗಿ ಈ ಬಾರಿ ಕಟ್ಟುನಿಟ್ಟಾಗಿ ಪ್ಲಾಸ್ಟಿಕ್ ನಿಷೇಧ ಮಾಡಲಾಗುತ್ತಿದ್ದು, ನಾನೂ ದಂಡ ಕಟ್ಟುವ ಮೂಲಕ ಎಲ್ಲರಿಗೂ ಈ ನಿಯಮ ಅನ್ವಯವಾಗುತ್ತದೆ ಎಂಬುದನ್ನು ತೋರಿಸಿದ್ದೇನೆ. ನಾನೂ ಕೂಡ ಪ್ಲಾಸ್ಟಿಕ್ ಬಳಕೆ ಮಾಡಿರುವುದರಿಂದ ದಂಡ ಕಟ್ಟುತ್ತಿದ್ದೇನೆ. ಈ ಮೂಲಕ ಪ್ಲಾಸ್ಟಿಕ್ ನಿಷೇಧಕ್ಕೆ ಕೈ ಜೋಡಿಸುತ್ತಾರೆ ಎಂಬುದನ್ನು ನಂಬಿದ್ದೇನೆ ಎಂದು ತಿಳಿಸಿದರು.