ಬೆಂಗಳೂರು: ಬಿಸಿಲನ್ನು ತಾಳಲಾರದೆ ಕಾಳಿಂಗ ಸರ್ಪವೊಂದು ಶಾಂತ ರೀತಿಯಿಂದ ನೀರಿಗೆ ತಲೆಯೊಡ್ಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಣದಲ್ಲಿ ಸಖತ್ ವೈರಲ್ ಆಗಿದೆ.
ಈಗ ಬಿಸಿಲಿನ ತಾಪಮಾನ ಬಹಳ ಜಾಸ್ತಿ ಇದೆ. ಮಾನವರಿಗೆ ಬಿಸಿಲನ್ನು ತಡೆಯಲು ಆಗುತ್ತಿಲ್ಲ. ಹೀಗಿರುವಾಗ ಕಾಡಿನಿಂದ ನಾಡಿಗೆ ಬಂದ ಕಾಳಿಂಗ ಸರ್ಪವೊಂದು ಬಿಸಿಲ ಬೇಗೆಯನ್ನು ತಡೆಯಲಾರದೇ ಮನೆಯೊಂದರ ಬಳಿ ಬಂದಿದೆ. ಈ ವೇಳೆ ಅಲ್ಲಿ ಓರ್ವ ಅದರ ತಲೆ ಮೇಲೆ ನೀರು ಹಾಕಿದ್ದು, ಹಾವು ಕೂಡ ಸುಮ್ಮನೇ ಇರುವುದು ಅಚ್ಚರಿ ಮೂಡಿಸಿದೆ.
ಕಾಳಿಂಗ ಸರ್ಪಕ್ಕೆ ಸ್ನಾನ ಮಾಡಿಸುತ್ತಿರುವ ವಿಡಿಯೋವನ್ನು ಮೊದಲಿಗೆ ಟ್ವಿಟ್ಟರ್ ನಲ್ಲಿ ಉಮಾ ಜೆ ಎನ್ನುವವರು ಹಂಚಿಕೊಂಡಿದ್ದಾರೆ. ಆದರೆ ಈವರೆಗೆ ಅದು ಎಲ್ಲಿಯ ವಿಡಿಯೋ ಎಂಬ ಮಾಹಿತಿ ಸಿಕ್ಕಿಲ್ಲ. ಆದರೆ ವಿಡಿಯೋದಲ್ಲಿ ಜನರು ಮಲೆಯಾಳಂ ಮಾತನಾಡುತ್ತಿದ್ದು, ಈ ವಿಡಿಯೋ ಕೇರಳದ ಇರಬಹುದು ಎಂದು ಅಂದಾಜಿಸಲಾಗಿದೆ. ಈಗ ಈ ವಿಡಿಯೋ ಟ್ವಿಟ್ಟರ್ ನಲ್ಲಿ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ಶೇರ್ ಆಗುತ್ತಿದೆ.

ಒಂದು ನಿಮಿಷ ನಾಲ್ಕು ಸೆಕೆಂಡ್ ಇರುವ ಈ ವಿಡಿಯೋದಲ್ಲಿ, ಮೊದಲಿಗೆ ಕಾಳಿಂಗ ಸರ್ಪ ಯಾವುದೋ ಮನೆಯ ಹತ್ತಿರ ಬಂದಿರುತ್ತದೆ. ಈ ವೇಳೆ ಹಾವಿನ ಬಗ್ಗೆ ತಿಳಿದ ವ್ಯಕ್ತಿ ಬಂದು ಹಾವಿಗೆ ಬಿಸಿಲಿನ ತಾಪ ತಡೆಯಲು ಆಗುತ್ತಿಲ್ಲ ಎಂದು ಪಕ್ಕದಲ್ಲಿ ಇದ್ದ ಬಕೆಟ್ ತೆಗೆದುಕೊಂಡು ನೀರನ್ನು ಸುರಿಯುತ್ತಾನೆ. ಮೂರು ಬಾರಿ ನೀರು ಸುರಿದರು ಕಾಳಿಂಗ ಸರ್ಪ ಮಾತ್ರ ಎಲ್ಲೂ ಹೋಗದೆ ಸುಮ್ಮನೆ ಇರುತ್ತದೆ.
ಬೇಸಿಗೆ ಕಾಲದಲ್ಲಿ ಕಾಡಿನಲ್ಲೂ ನೀರು ಹೆಚ್ಚಿಗೆ ಇರುವುದಿಲ್ಲ. ಹೀಗಾಗಿ ಹಾವುಗಳು, ಪ್ರಾಣಿ ಪಕ್ಷಿಗಳು ಈ ಸಮಯದಲ್ಲಿ ನೀರನ್ನು ಮತ್ತು ಆಹಾರವನ್ನು ಅರಸಿ ನಾಡಿಗೆ ಬರುತ್ತವೆ. ಈ ವೇಳೆ ಕೆಲವರ ಅವುಗಳನ್ನು ಹೊಡೆದು ಕೊಲ್ಲುತ್ತಾರೆ. ಆದರೆ ಈ ವಿಡಿಯೋದಲ್ಲಿ ಹಾವಿನ ಕಷ್ಟವನ್ನು ತಿಳಿದ ವ್ಯಕ್ತಿ ಅದಕ್ಕೆ ನೀರಿನಿಂದ ಸ್ನಾನ ಮಾಡಿಸಿ ಮಾನವೀಯತೆ ಮೆರೆದಿದ್ದಾನೆ.

ಕಾಳಿಂಗ ಸರ್ಪ ಹಾವುಗಳ ಜಾತಿಯಲ್ಲೇ ಅತ್ಯಂತ ವಿಷಕಾರಿ ಹಾವು ಹಾಗೂ ಇದರಲ್ಲಿ ಒಂದು ಆನೆ ಅಥವಾ 20 ಮನುಷ್ಯರನ್ನು ಕೊಲ್ಲುವಷ್ಟು ವಿಷವಿರುತ್ತದೆ ಎಂದು ಉರಗತಜ್ಞರು ಹೇಳಿದ್ದಾರೆ. ಇದರ ಜೊತೆಗೆ ಸರಿಯಾದ ಟ್ರೈನಿಂಗ್ ತಗೆದುಕೊಳ್ಳದೆ ಕಾಳಿಂಗ ಸರ್ಪದ ಜೊತೆ ಸರಸಕ್ಕೆ ಇಳಿಯಬಾರದು. ಹಾಗೇ ಮಾಡಿದರೆ ಜೀವಕ್ಕೆ ಅಪಾಯವಾಗುವ ಸಾಧ್ಯತೆಯೇ ಹೆಚ್ಚು ಎಂದು ಉರಗ ತಜ್ಞರು ಸಲಹೆ ನೀಡಿದ್ದಾರೆ.