Tag: bat

  • ಇಬ್ಬರ ನಡುವೆ ಒಂದೇ ಬ್ಯಾಟ್- ಕಷ್ಟದ ದಿನಗಳನ್ನ ನೆನೆದ ಪಾಂಡ್ಯ ಬ್ರದರ್

    ಇಬ್ಬರ ನಡುವೆ ಒಂದೇ ಬ್ಯಾಟ್- ಕಷ್ಟದ ದಿನಗಳನ್ನ ನೆನೆದ ಪಾಂಡ್ಯ ಬ್ರದರ್

    ಮುಂಬೈ: ಒಂದೇ ಕುಟುಂಬದಿಂದ ಇಬ್ಬರು ಅಂತರರಾಷ್ಟ್ರೀಯ ಕ್ರಿಕೆಟಿಗರನ್ನು ನಾವು ಹೆಚ್ಚಾಗಿ ನೋಡಿಲ್ಲ. ಇಂದಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಭಾರೀ ಸ್ಪರ್ಧೆ ಇದೆ. ಆದರೆ ಪಾಂಡ್ಯ ಸಹೋದರರಾದ ಕೃನಾಲ್ ಮತ್ತು ಹಾರ್ದಿಕ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರ್ಯಾಂಚೈಸ್ ಮುಂಬೈ ಇಂಡಿಯನ್ಸ್ ಮತ್ತು ಭಾರತೀಯ ರಾಷ್ಟ್ರೀಯ ತಂಡಕ್ಕೆ ಸ್ಥಿರವಾದ ಪ್ರದರ್ಶನ ನೀಡಿ, ಗುರುತಿಸಿಕೊಂಡಿದ್ದಾರೆ.

    ಪಾಂಡ್ಯ ಸಹೋದರರು ಆರಂಭಿಕ ದಿನಗಳಿಂದ ಇಲ್ಲಿಯವರೆಗೆ ಗಮನಾರ್ಹ ಪ್ರಗತಿಯನ್ನು ಸಾಧಿಸಿದ್ದಾರೆ. ಕೃನಾಲ್ ಮತ್ತು ಹಾರ್ದಿಕ್ ಅವರ ಬಾಲ್ಯ, ಬೆಳವಣಿಗೆ ಕುರಿತು ‘ರಾಗ್ಸ್ ಟು ರಿಚಸ್’ ಕಥೆ ತಿಳಿಸುತ್ತಿದೆ. ಇದೇ ವಿಚಾರವಾಗಿ ಸಂದರ್ಶನವೊಂದರಲ್ಲಿ ಮಾತನಾಡಿದ ಕೃನಾಲ್ ಪಾಂಡ್ಯ, ಆರಂಭಿಕ ದಿನಗಳಲ್ಲಿ ಸೋಹದರರಿಬ್ಬರು ಒಂದೇ ಬ್ಯಾಟ್ ಬಳಸುತ್ತಿದ್ದ ಕಥೆಯನ್ನು ಬಿಚ್ಚಿಟ್ಟಿದ್ದಾರೆ.

    ಇಂದು ನಾವು ಹೀಗೆ ಇರುವುದು ನಿಜವೇ? ನಮ್ಮ ಸದ್ಯದ ಸ್ಥಿತಿಯನ್ನುನಂಬಲು ನಾನು ಆಗಾಗ್ಗೆ ನನ್ನನ್ನು ಪ್ರಶ್ನಿಸಿಕೊಳ್ಳುತ್ತಲೇ ಇರುತ್ತೇನೆ ಎಂದು ಕೃನಾಲ್ ಹೇಳಿದ್ದಾರೆ.

    ”ಗುಜರಾತ್‍ನ ವಡೋದರಾದ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ನಮಗೆ ಎಲ್ಲ ರೀತಿಯ ಸೌಲಭ್ಯಗಳು ಸಿಗುವುದು ಸುಲಭದ ವಿಚಾರವಲ್ಲ. ಆ ಸಮಯದಲ್ಲಿ ಉತ್ತಮ-ಗುಣಮಟ್ಟದ ಇಂಗ್ಲಿಷ್ ವಿಲೋ ಬ್ಯಾಟ್ ಐಎನ್‍ಆರ್ ಬೆಲೆ 7ರಿಂದ 8 ಸಾವಿರ ರೂ. ಆಗಿತ್ತು. ಆಗ ಅದು ದೊಡ್ಡ ಮೊತ್ತ. ನಾನು ಹಾಗೂ ಹಾರ್ದಿಕ್ ಕ್ರಿಕೆಟ್ ಆಡುತ್ತಿದ್ದರಿಂದ ಇಬ್ಬರಿಗೂ ದುಬಾರಿ ಮೌಲ್ಯದ ಬ್ಯಾಟ್, ಕಿಟ್ ಕೊಡಿಸಲು ಅಪ್ಪನಿಗೂ ಕಷ್ಟವಾಗುತ್ತಿತ್ತು. ತಂದೆಯ ಹೆಗಲ ಮೇಲೆ ನಮ್ಮಿಬ್ಬರ ಮೇಲೆ ಜವಾಬ್ದಾರಿ ಇತ್ತು” ಎಂದು ಕೃನಾಲ್ ಬಹಿರಂಗಪಡಿಸಿದ್ದಾರೆ.

    ”ರಣಜಿ ಟ್ರೋಫಿ ಆಡುವವರೆಗೂ ನಮ್ಮ ಬಳಿ ಬ್ಯಾಟ್ ಇರಲಿಲ್ಲ. ವಿಜಯ್ ಹಜಾರೆ ಟೂರ್ನಿಯಲ್ಲಿ ನಾವು ವಡೋದರಾ ಪರ ಆಡುತ್ತಿದ್ದಾಗ ಹಾರ್ದಿಕ್‍ಗೆ ಟೀಂ ಇಂಡಿಯಾ ಮಾಜಿ ಆಲ್‍ರೌಂಡರ್ ಇರ್ಫಾನ್ ಪಠಾಣ್ ಅವರು ಉಡುಗೊರೆಯಾಗಿ ಬ್ಯಾಟ್ ನೀಡಿದ್ದರು. ಆದರೆ ನಾನು ಇನ್ನೊಂದು ಬ್ಯಾಟ್ ಹೊಂದಿದ್ದೆ. ನಿರ್ಣಾಯಕ ಆಟದ ವೇಳೆ ಹಾರ್ದಿಕ್‍ನ ಬ್ಯಾಟ್ ಮುರಿಯಿತು. ಆಗ ಅವರು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರೆ, ನಾನು ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕಿತ್ತು. ಹೀಗಾಗಿ ಹಾರ್ದಿಕ್ ನನ್ನ ಬ್ಯಾಟ್ ತೆಗೆದುಕೊಂಡು ಆಟ ಮುಂದುವರಿಸಿದ್ದ” ಎಂದು ಕೃನಾಲ್ ನೆನೆದಿದರು.

    ”ನಾನು ನಂತರ ಬ್ಯಾಟಿಂಗ್ ಮಾಡಲು ಹೊರಟಾಗ ಹಾರ್ದಿಕ್ ಇನ್ನೂ ಕ್ರೀಸ್‍ನಲ್ಲಿದ್ದ. ಆಗ ನನಗೆ ಬ್ಯಾಟ್ ಕೂಡ ಇರಲಿಲ್ಲ. ಹೀಗಾಗಿ ಸ್ಪೇರ್ ಬ್ಯಾಟ್ ನೀಡುವಂತೆ ತಂಡದ ಸಹ ಆಟಗಾರನಿಗೆ ವಿನಂತಿಸಿಕೊಂಡಿದ್ದೆ. ಈ ಸನ್ನಿವೇಶ ಬಹಳ ಮುಜುಗರ ತಂದಿತ್ತು. ಹೀಗೆ ಮತ್ತೊಬ್ಬರ ಬ್ಯಾಟ್ ಕೇಳುವುದು ರಣಜಿ ಟ್ರೋಫಿ ಮಟ್ಟದಲ್ಲಿಯೂ ಸರಿಯಾದ ಕ್ರಮವಲ್ಲ. ಮುಂದೆ ಹೀಗಾಗದಂತೆ ನೋಡಿಕೊಳ್ಳಬೇಕು ಅಂತ ತೀರ್ಮಾನಿಸಿದೆ ಎಂದು ಹೇಳಿದರು.

  • ರವಿಶಾಸ್ತ್ರಿ ಕಾಮೆಂಟ್ರಿಯೊಂದಿಗೆ ಬಾಟಲ್ ಕ್ಯಾಪ್ ತೆಗೆದ ಕೊಹ್ಲಿ: ವಿಡಿಯೋ

    ರವಿಶಾಸ್ತ್ರಿ ಕಾಮೆಂಟ್ರಿಯೊಂದಿಗೆ ಬಾಟಲ್ ಕ್ಯಾಪ್ ತೆಗೆದ ಕೊಹ್ಲಿ: ವಿಡಿಯೋ

    ನವದೆಹಲಿ: ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ತುಂಬ ಸದ್ದು ಮಾಡಿದ ಬಾಟಲ್ ಕ್ಯಾಪ್ ಚಾಲೆಂಜ್‍ನ್ನು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಮಾಡಿದ್ದಾರೆ.

    ತಡವಾದರೂ ವಿಶೇಷವಾಗಿ ಬಾಟಲ್ ಕ್ಯಾಪ್ ಚಾಲೆಂಜ್ ಮಾಡಿರುವ ಕೊಹ್ಲಿ ಅವರು, ಭಾರತ ತಂಡದ ಮುಖ್ಯ ಕೋಚ್ ರವಿ ಶಾಸ್ತ್ರಿ ಅವರ ಕಾಮೆಂಟ್ರಿಯನ್ನು ಹಿನ್ನೆಲೆಯಾಗಿ ಬಳಸಿಕೊಂಡು ತಮ್ಮ ಬ್ಯಾಟ್ ಮೂಲಕ ಕ್ಯಾಪ್ ಓಪನ್ ಮಾಡಿದ್ದಾರೆ.

    ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಕೊಹ್ಲಿ ಅವರು ನಿಧಾನವೂ ಒಳ್ಳೆಯದು ಎಂದು ಬರೆದು ಬಾಟಲ್ ಕ್ಯಾಪ್ ಚಾಲೆಂಜ್ ಎಂಬ ಹ್ಯಾಶ್‍ಟ್ಯಾಗ್ ಬಳಿಸಿದ್ದಾರೆ. ಈ 15 ಸೆಕೆಂಡ್‍ಗಳ ಈ ವಿಡಿಯೋದಲ್ಲಿ ತಮ್ಮ ಬ್ಯಾಟ್ ಮೂಲಕ ಕ್ಯಾಪ್‍ನ್ನು ತೆರೆದಿರುವ ಕೊಹ್ಲಿ ನಂತರ ಅದರಲ್ಲಿ ನೀರನ್ನು ಕುಡಿಯುತ್ತಾರೆ.

    ಈ ವಿಡಿಯೋದಲ್ಲಿ ಹಿನ್ನೆಲೆಯಲ್ಲಿ ಬರುವ ರವಿ ಶಾಸ್ತ್ರಿ ಅವರ ಕಾಮೆಂಟ್ರಿಯೂ ಕೂಡ ಕೊಹ್ಲಿ ಅವರ ಚಾಲೆಂಜ್‍ಗೆ ಸಾಥ್ ನೀಡಿದೆ. ಕೊಹ್ಲಿ ಅವರು ತಮ್ಮ ಬ್ಯಾಟ್‍ನಿಂದ ಕ್ಯಾಪ್ ಬೀಳಿಸಿದ ತಕ್ಷಣ ರವಿ ಶಾಸ್ತ್ರಿ ಅವರು ವಾವ್ ತುಂಬಾ ಒಳ್ಳೆಯ ಹೊಡೆತ ಎಂದು ಜೋರಾಗಿ ಹೇಳುತ್ತಾರೆ. ಈ ಬಾಟಲ್ ಕ್ಯಾಪ್ ಚಾಲೆಂಜ್‍ನ್ನು ಭಾರತದಲ್ಲಿ ಹಲವಾರು ಸೆಲೆಬ್ರಿಟಿಗಳು ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೆಂಡ್ ಹುಟ್ಟಿಹಾಕಿತ್ತು.

    ಕೊಹ್ಲಿ ಪ್ರಸ್ತುತ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಕೆರಿಬಿಯನ್ ತಂಡದ ವಿರುದ್ಧ ಟೀಮ್ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ. ಭಾರತ ಟಿ-20 ಸರಣಿಯನ್ನು 3:0 ಅಂತರದಲ್ಲಿ ಗೆದ್ದಿದೆ ಮತ್ತು ಪ್ರಸ್ತುತ ಏಕದಿನ ಸರಣಿಯಲ್ಲಿ ಭಾಗವಹಿಸುತ್ತಿದೆ, ಅದರಲ್ಲಿ ಮೊದಲನೆಯ ಪಂದ್ಯ ಮಳೆಯಿಂದಾಗಿ ಯಾವುದೇ ಫಲಿತಾಂಶ ಬಂದಿಲ್ಲ.

  • ಜೀವ ಉಳಿಸಿಕೊಳ್ಳಲು ಇರುವೆಗಳ ಜೊತೆ ಬಾವಲಿ ಕಾಳಗ

    ಜೀವ ಉಳಿಸಿಕೊಳ್ಳಲು ಇರುವೆಗಳ ಜೊತೆ ಬಾವಲಿ ಕಾಳಗ

    ಚಿಕ್ಕಮಗಳೂರು: ಜೀವ ಉಳಿಸಿಕೊಳ್ಳಲು ಬಾವಲಿಯೊಂದು ಕೆಂಜಿಗ ಇರುವೆಗಳ ಜೊತೆ ಹೋರಾಟ ನಡೆಸಿದ ಘಟನೆಗೆ ಚಿಕ್ಕಮಗಳೂರಿನ ಪ್ರವಾಸಿ ಮಂದಿರ ಸಾಕ್ಷಿಯಾಗಿದೆ.

    ಆಹಾರದ ಅರಸಿ ಪ್ರವಾಸಿ ಮಂದಿರದ ಆವರಣಕ್ಕೆ ಬಂದಿದ್ದ ದೊಡ್ಡ ಗಾತ್ರದ ಬಾವಲಿ ಕೆಂಜಿಗಗಳ ಕೈಗೆ ಸಿಕ್ಕಿ ತಪ್ಪಿಸಿಕೊಳ್ಳಲು ಹೋರಾಡಿದೆ. ಮರವೊಂದರ ಕೆಳಗೆ ಕಂಡ ಕೆಂಜಿಗವನ್ನು ತಿನ್ನಲು ಬಂದ ಬಾವಲಿ ಅರಿವಿಲ್ಲದೆ ಕೆಂಜಿಗಗಳ ಗೂಡಿನ ಮೇಲೆ ಇಳಿದಿದೆ. ಒಂದೊಂದೇ ಕೆಂಜಿಗವನ್ನು ತಿನ್ನಲು ಪ್ರಾರಂಭಿಸುತ್ತಿದ್ದಂತೆ ರಾಶಿ-ರಾಶಿ ಪ್ರಮಾಣದ ಕೆಂಜಿಗ ಇರುವೆಗಳು ಬಾವಲಿಯನ್ನು ಸಂಪೂರ್ಣ ಮುತ್ತಿಕೊಂಡು ಕಚ್ಚಲು ಆರಂಭಿಸಿವೆ.

    ಹಾರಲು ಆಗದೆ, ತಪ್ಪಿಸಿಕೊಳ್ಳಲು ಆಗದ ಬಾವಲಿ ನೋವಿನಿಂದ ಸ್ಥಳದಲ್ಲೇ ಬಿದ್ದು ಒದ್ದಾಡಿದೆ. ಬಾವಲಿ ದೊಡ್ಡ ರೆಕ್ಕೆಗಳನ್ನು ಹರಡಿಕೊಂಡಿದ್ದರಿಂದ ಬೇರಿಗೆ ಸಿಕ್ಕಿಕೊಂಡು ತಪ್ಪಿಸಿಕೊಳ್ಳಲಾಗದೆ ವಿಫಲ ಹೋರಾಟ ನಡೆಸಿತ್ತು. ಆ ನೋವಿನ ಮಧ್ಯೆಯೂ ಬಾವಲಿ ಒಂದೊಂದೆ ಕೆಂಜಿಗವನ್ನು ತಿನ್ನಲು ಆರಂಭಿಸಿತು. ಆದರೆ ಕೆಂಜಿಗಗಳು ಕೂಡ ಮತ್ತೊಂದು ಕಡೆಯಿಂದ ಬಾವಲಿ ಮೇಲೆ ದಾಳಿ ಮಾಡಿದೆ.

    ಹಾಗೋ-ಹೀಗೋ ಕಷ್ಟಪಟ್ಟು ಮರ ಏರಲು ಪ್ರಾರಂಭಿಸಿದ ಬಾವುಲಿ ನೋವಿನಿಂದ ನಿಂತ್ರಾಣಗೊಂಡು ಮತ್ತದೇ ಕೆಂಜಿಗಗಳ ಗೂಡಿನ ಮೇಲೆ ಬಿದ್ದಿತ್ತು. ಸಾಮಾನ್ಯವಾಗಿ ರಾತ್ರಿ ಪಾಳಯದಲ್ಲಿ ಆಹಾರ ಸೇವನೆ ಮಾಡೋ ಬಾವಲಿಗಳು ಹಗಲಲ್ಲೇ ಆಹಾರ ಹುಡಿಕಿಕೊಂಡು ಬಂದು ಕೆಂಜಿಗಗಳನ್ನ ತಿನ್ನುತ್ತಿರುವುದು ವಿಶೇಷವಾಗಿದೆ.

  • 22 ಸ್ಪೈ ಕ್ಯಾಮೆರಾ ಮನೆಯಲಿಟ್ಟ ಟೆಕ್ಕಿ ಪತಿಯ ತಲೆ ಒಡೆದ ಪತ್ನಿ!

    22 ಸ್ಪೈ ಕ್ಯಾಮೆರಾ ಮನೆಯಲಿಟ್ಟ ಟೆಕ್ಕಿ ಪತಿಯ ತಲೆ ಒಡೆದ ಪತ್ನಿ!

    – ಮೊಬೈಲ್ ಮೇಲೂ ಕಣ್ಣು
    – ಪತ್ನಿಯ ಮೇಲೆ ಕಣ್ಣಿಡಲು ಜನ ನೇಮಿಸಿದ್ದ

    ಬೆಂಗಳೂರು: ಪತ್ನಿ ಮೇಲಿದ್ದ ಅನುಮಾನದಿಂದ ಟೆಕ್ಕಿಯೊಬ್ಬನು ಮನೆಯಲ್ಲಿ ಹಾಗೂ ಪತ್ನಿಯ ಮೊಬೈಲ್‍ನಲ್ಲಿ ಸ್ಪೈಕ್ಯಾಮೆರಾವನ್ನು ಅಳವಡಿಸಿದ್ದನು. ಈ ವಿಷಯ ತಿಳಿಯುತ್ತಿದ್ದಂತೆ ಪತ್ನಿ ಪತಿಗೆ ಬ್ಯಾಟ್‍ನಿಂದ ಭರ್ಜರಿಯಾಗಿ ಗೂಸ ನೀಡಿದ್ದಾಳೆ. ಪರಿಣಾಮ ಪತಿಯ ತಲೆಗೆ ಗಂಭೀರ ಗಾಯಗಳಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ದಂಪತಿಯು ರಾಜಧಾನಿಯ ಜಯನಗರದಲ್ಲಿ ವಾಸವಾಗಿದ್ದರು. ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ 44 ವರ್ಷದ ಸುದರ್ಶನ್ ಮೇಲೆ ಪತ್ನಿ ವಿನಯ (ದಂಪತಿಯ ಹೆಸರು ಬದಲಾಯಿಸಲಾಗಿದೆ) ಹಲ್ಲೆ ಮಾಡಿದ್ದಾಳೆ. ಪತ್ನಿಯ ಮೇಲಿದ್ದ ಅನುಮಾನದಿಂದ ಆಕೆಯ ಮೇಲೆ ಸದಾ ಕಣ್ಣಿಡಲು ಮನೆಯಲ್ಲಿ ಬರೋಬ್ಬರಿ 22 ಸ್ಪೈ ಕ್ಯಾಮೆರಾಗಳನ್ನು ಟೆಕ್ಕಿ ಅಳವಡಿಸಿದ್ದನು. ಅಲ್ಲದೆ ಪತ್ನಿಯ ಫೋನ್‍ನಲ್ಲಿ ಸ್ಪೈವೇರ್ ಪ್ರೋಗ್ರಾಮ್‍ನನ್ನು ಹಾಕಿ ಆಕೆಯ ಮೊಬೈಲ್ ಮೇಲೆಯೂ ಕಣ್ಣಿಟ್ಟಿದ್ದನು. ಪತಿಯ ಈ ಅತಿಯಾದ ಅನುಮಾನ ಬುದ್ಧಿಯಿಂದ ಬೇಸತ್ತಿದ್ದ ಪತ್ನಿ ಅತನ ತಲೆಗೆ ಬ್ಯಾಟ್ ನಿಂದು ಹೊಡೆದು ತನ್ನ ಸಿಟ್ಟನ್ನು ತೀರಿಸಿಕೊಂಡಿದ್ದಾಳೆ.

    2007ರಲ್ಲಿ ಸುದರ್ಶನ್ ವಿನಯಾಳನ್ನು ಇಷ್ಟಪಟ್ಟಿದ್ದನು. ಆದರೆ ಆಗಿನ್ನೂ ವಿನಯ ಓದುತ್ತಿದ್ದಳು ಎಂಬ ಕಾರಣಕ್ಕೆ ಅವರ ಮನೆಯವರು ಮದುವೆಗೆ ಒಪ್ಪಿಗೆ ನೀಡಿರಲಿಲ್ಲ. ಅವರಿಬ್ಬರ ನಡುವೆ 11 ವರ್ಷಗಳ ವಯಸ್ಸಿನ ಅಂತರವಿದ್ದರೂ, ಮೂರು ವರ್ಷ ಕಾದ ಸುದರ್ಶನ್ 2010ರಲ್ಲಿ ವಿನಯಾಳನ್ನು ಮದುವೆ ಆಗಿದ್ದನು. ದಂಪತಿಗೆ ಒಬ್ಬ ಮಗ ಕೂಡ ಇದ್ದಾನೆ. ಅವರ ಜೀವನ ಸರಿಯಾಗಿಯೇ ಸಾಗುತ್ತಿತ್ತು. ಆದರೆ ಕೆಲ ವರ್ಷಗಳಿಂದ ಸುದರ್ಶನ್ ಪತ್ನಿ ಮೇಲೆ ಅನುಮಾನ ಪಡಲು ಶುರುಮಾಡಿದ್ದಾನೆ. ಆದ್ದರಿಂದ ಮನೆಯಲ್ಲಿ ಸ್ಪೈ ಕ್ಯಾಮೆರಾಗಳನ್ನು ಅಳವಡಿಸಿದ್ದನು. ಜೊತೆಗೆ ಪತ್ನಿ ಹೊರಗಡೆ ಹೋದಾಗ ಆಕೆಯ ಮೇಲೆ ಕಣ್ಣಿಡಲು ಜನರನ್ನೂ ಕೂಡ ಛೂ ಬಿಡುತ್ತಿದ್ದನು.

    ಈ ಅನುಮಾನದ ಬುದ್ಧಿಯಿಂದಲೇ ದಂಪತಿ ಮಧ್ಯೆ ಹಲವಾರು ಬಾರಿ ಜಗಳ ನಡೆದಿದೆ. ಆದರೂ ಕೂಡ ಟೆಕ್ಕಿ ತನ್ನ ಅನುಮಾನದ ಬುದ್ಧಿಯನ್ನು ಬಿಟ್ಟಿರಲಿಲ್ಲ. ಕೆಲವು ದಿನಗಳ ಹಿಂದೆ ತಾನು ಬದಲಾಗಿದ್ದೇನೆ ಎಂದು ಹೇಳಿ ಪತ್ನಿಗೆ ಪ್ರೀತಿಯಿಂದ ಮೊಬೈಲ್‍ವೊಂದನ್ನು ಪತಿ ಗಿಫ್ಟ್ ಮಾಡಿದ್ದನು. ಆದರೆ ಅದರಲ್ಲೂ ಕೂಡ ಸ್ಪೈವೇರ್ ಪ್ರೋಗ್ರಾಮ್ ಅಳವಡಿಸಿ ಪತ್ನಿಯ ಕರೆ, ಮೆಸೆಜ್‍ಗಳ ಮೇಲೆ ಕಣ್ಣಿಟ್ಟಿದ್ದನು.

    ಏಪ್ರಿಲ್‍ನಲ್ಲಿ ಪತ್ನಿ ಸಂಬಂಧಿ ಎಂದು ತಿಳಿಯದೆ ಅವರಿಬ್ಬರು ಜೊತೆಗಿರುವ ಫೋಟೋವೊಂದನ್ನು ಹಿಡಿದು ಟೆಕ್ಕಿ ಅನುಮಾನ ವ್ಯಕ್ತಪಡಿಸಿದ್ದನು. ಆಗ ಪತಿಯೂ ಸರಿಯಾಗಿದ್ದಾನೆ ಎಂದು ನಂಬಿದ್ದ ಪತ್ನಿಗೆ ನಿಜಾಂಶ ತಿಳಿದಿದೆ. ಇದರಿಂದ ಕೋಪಗೊಂಡ ಪತ್ನಿ ಮನಗ ಕ್ರಿಕೆಟ್ ಬ್ಯಾಟಿಂದ ಪತಿಯ ತಲೆಗೆ ಬಾರಿಸಿದ್ದಾಳೆ.

    ಪತ್ನಿ ಪತಿಗೆ ಹೊಡೆದ ಪರಿಣಾಮ ಆತನ ತಲೆಗೆ ಗಂಭೀರ ಗಾಯಗಳಾಗಿ ಹೊಲಿಗೆ ಹಾಕಲಾಗಿದೆ. ಪತ್ನಿ ತನ್ನ ಮೇಲೆ ಹಲ್ಲೆ ಮಾಡಿದ್ದಾಳೆ ಎಂದು ಪತಿರಾಯ ಆಕೆಯ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಅಲ್ಲದೆ ತನ್ನ ಮುಖದ ಆಕಾರವನ್ನೇ ಬದಲಿಸಿದ್ದಾಳೆ ಎಂದು ದೂರಿ ಟೆಕ್ಕಿ ವಿಚ್ಛೇದನಕ್ಕೆ ಅರ್ಜಿಯನ್ನೂ ಕೂಡ ಸಲ್ಲಿಸಿದ್ದಾನೆ. ಈ ಸಂಬಂಧ ದಂಪತಿಯನ್ನು ಒಂದು ಮಾಡಲು ವಾರಾನು ಗಟ್ಟಲೆ ಕೌನ್ಸ್​​ಲಿಂಗ್ ಮಾಡಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ದಂಪತಿ ಮಾತ್ರ ಇಬ್ಬರೂ ಮತ್ತೆ ಒಂದಾಗಲು ಒಪ್ಪುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

  • ಗಿನ್ನಿಸ್ ದಾಖಲೆಗೆ ಸೇರಿತು ಧೋನಿ ಬ್ಯಾಟ್!

    ಗಿನ್ನಿಸ್ ದಾಖಲೆಗೆ ಸೇರಿತು ಧೋನಿ ಬ್ಯಾಟ್!

    ಮುಂಬೈ: 2011ರ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಬಳಕೆ ಮಾಡಿದ್ದ ಬ್ಯಾಟ್ ಭಾರೀ ಮೊತ್ತಕ್ಕೆ ಹರಾಜು ಆಗಿದ್ದು, ಆ ಮೂಲಕ ವಿಶ್ವದ ದುಬಾರಿ ಬ್ಯಾಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಏಪ್ರಿಲ್ 2, 2011 ರಂದು ನಡೆದ ಫೈನಲ್ ಪಂದ್ಯದಲ್ಲಿ ಧೋನಿ ಶ್ರೀಲಂಕಾ ವಿರುದ್ಧ ಕೊನೆಯಲ್ಲಿ ಸಿಕ್ಸರ್ ಸಿಡಿಸಿದ್ದರು. ಈ ಮೂಲಕ ಭಾರತ 28 ವರ್ಷಗಳ ಬಳಿಕ ವಿಶ್ವಕಪ್‍ಗೆ ಮುತ್ತಿಟ್ಟಿತ್ತು. ಈ ಸಾಧನೆಗೆ ಸದ್ಯ 8 ವರ್ಷ ಪೂರ್ಣಗೊಂಡಿದ್ದು, ಈ ವೇಳೆಯೇ ಒಂದು ವಿಶೇಷ ಸಾಧನೆಯನ್ನು ಗಿನ್ನಿಸ್ ಬುಕ್ ಆಫ್ ವಲ್ರ್ಡ್ ರೆಕಾರ್ಡ್ ರಿವೀಲ್ ಮಾಡಿದೆ.

    ಧೋನಿಯ ರಿಬಾಕ್ ಈ ಬ್ಯಾಟ್ 161,295 ಯುಎಸ್ ಡಾಲರ್ (ಸುಮಾರು 1.1 ಕೋಟಿ ರೂ.) ಗಳಿಗೆ ಹರಾಜಾಗಿದೆ. ಆರ್ ಕೆ ಗ್ಲೋಬಾಲ್ ಶೇರ್ಸ್ ಅಂಡ್ ಸೆಕ್ಯೂರಿಟಿ ಲಿಮಿಟೆಡ್ ಸಂಸ್ಥೆ ಜುಲೈ 18 2011ರಲ್ಲಿ ಲಂಡನ್ ನಲ್ಲಿ ನಡೆದ ಹರಾಜು ಪ್ರತಿಕ್ರಿಯೆಯಲ್ಲಿ ಖರೀದಿ ಮಾಡಿತ್ತು. ಬ್ಯಾಟ್ ಮೇಲೆ ಧೋನಿ ಅವರ ಹಸ್ತಾಕ್ಷರವಿದ್ದು, ಈ ಬ್ಯಾಟನ್ನು ಈಸ್ಟ್ ಮೀಟ್ಸ್ ವೆಸ್ಟ್ ಚಾರಿಟಿ ಡಿನ್ನರ್ ಕಾರ್ಯಕ್ರಮಲ್ಲಿ ಹರಾಜು ಹಾಕಲಾಗಿತ್ತು. ಅಲ್ಲದೇ ಈ ಹಣವನ್ನು ಭಾರತದಲ್ಲಿರುವ ಅನಾಥ ಮಕ್ಕಳ ಅಭಿವೃದ್ಧಿಗೆ ಬಳಕೆ ಮಾಡಲು ವಿನಿಯೋಗಿಸಲಾಗುತ್ತದೆ ಎಂಬ ಮಾಹಿತಿ ಲಭಿಸಿದೆ.

    ಶ್ರೀಲಂಕಾ ವಿರುದ್ಧ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಧೋನಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. 85 ಎಸೆತಗಳಲ್ಲಿ ಅಜೇಯ 91 ರನ್ ಗಳಿಸಿದ್ದ ಧೋನಿ, ಶ್ರೀಲಂಕಾ ನೀಡಿದ್ದ 276 ರನ್ ಗಳ ಗುರಿ ಮುಟ್ಟಲು ಕಾರಣರಾಗಿದ್ದರು. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆದಿತ್ತು.

  • ಕೋಳಿಯಿಂದ ನಿಪಾ ವೈರಸ್ ಹರಡಲ್ಲ: ಉಡುಪಿ ವೈದ್ಯ

    ಕೋಳಿಯಿಂದ ನಿಪಾ ವೈರಸ್ ಹರಡಲ್ಲ: ಉಡುಪಿ ವೈದ್ಯ

    ಉಡುಪಿ: ಕೋಳಿಯಿಂದ ನಿಪಾ ವೈರಸ್ ಹರಡವುದಿಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಲಾಗುತ್ತಿದೆ ಎಂದು ಮಣಿಪಾಲ ವೈರಸ್ ರಿಸರ್ಚ್ ಇಲಾಖೆ ಮುಖ್ಯಸ್ಥ ಡಾ. ಅರುಣ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

    ಲಕ್ಷ ಬಾವಲಿಗಳಲ್ಲಿ ಕೇವಲ ಐದರಲ್ಲಿ ಮಾತ್ರ ಇಂತಹ ವೈರಸ್ ಕಾಣಲು ಸಾಧ್ಯ. ಮಣಿಪಾಲ ಸೆಂಟರ್ ನಲ್ಲಿ ನಿಪಾ ವೈರಸ್ ಮಾದರಿ ಪರೀಕ್ಷೆ ಮಾಡಲಾಗಿತ್ತು. ಪರೀಕ್ಷೆಯಲ್ಲಿ ನಿಪಾ ವೈರಸ್ ಪತ್ತೆಯಾಗಿಲ್ಲ ಎಂದು ತಿಳಿಸಿದರು.

    ಕೇರಳ ಸರ್ಕಾರದ ಕೋರಿಕೆಯ ಮೇರೆಗೆ ನಿಫಾ ವೈರಸ್ ರೋಗಿಗಳನ್ನು ಪರೀಕ್ಷಿಸಲು ಮಣಿಪಾಲದ ವೈದ್ಯರ ತಂಡ ಕೇರಳಕ್ಕೆ ತೆರಳಿತ್ತು. ಬಾವಲಿ ಹೊರತಾಗಿ ಬೇರೆ ಯಾವ ಪ್ರಾಣಿ-ಪಕ್ಷಿಗಳಲ್ಲೂ ನಿಪಾ ವೈರಸ್ ಕಾಣಸಿಕ್ಕಿಲ್ಲ ಎಂದು ದೃಢಪಡಿಸಿದರು.

    ನಿಪಾ ಎನ್ನುವುದು ಸಾಂಕ್ರಾಮಿಕ ರೋಗವಲ್ಲ. ಆದರೆ ಮುನ್ನೆಚ್ಚರಿಕೆ ಅತ್ಯಗತ್ಯ. ಬಾವಲಿ ಕಚ್ಚಿದ ಹಣ್ಣುಗಳನ್ನು ತಿನ್ನದಿರುವುದು ಒಳಿತು. ಕೋಳಿಯಿಂದ ಹರಡುತ್ತದೆ ಅನ್ನೋದೆಲ್ಲ ಸುಳ್ಳು ಸುದ್ದಿ. ಈ ಬಗ್ಗೆ ಅನಗತ್ಯ ಭಯಪಡುವ ಅಗತ್ಯವೇ ಇಲ್ಲ. ಕೇರಳದಲ್ಲಿ ಈಗಾಗಲೇ ವಿದೇಶಗಳಿಂದ ಔಷಧಿಗಳನ್ನು ತರಲಾಗಿದೆ ಎಂದು ತಿಳಿಸಿದರು.

  • ನಿಪಾ ವೈರಸ್ ಬಾವಲಿಗಳಿಂದ ಬರಲ್ಲ -ವರದಿಯಲ್ಲಿ ಸಾಬೀತು

    ನಿಪಾ ವೈರಸ್ ಬಾವಲಿಗಳಿಂದ ಬರಲ್ಲ -ವರದಿಯಲ್ಲಿ ಸಾಬೀತು

    ಭೋಪಾಲ್: ಇಂದು ಕೇರಳದಲ್ಲಿ ಹರಡುತ್ತಿರುವ ನಿಪಾ ವೈರಸ್ ಗೆ ದೇಶದ ಜನರು ಆತಂಕಗೊಂಡಿದ್ದಾರೆ. ನಿಪಾ ವೈರಸ್ ಬಾವಲಿಗಳಿಂದ ಬರುತ್ತೆ ಅಂತಾ ಹೇಳಲಾಗುತ್ತಿತ್ತು. ಆದ್ರೆ ಮಧ್ಯ ಪ್ರದೇಶ ರಾಜ್ಯದ ಭೋಪಾಲ ನಗರದ ‘ಹೈ ಸೆಕ್ಯೂರಿಟಿ ಅನಿಮಲ್ ಡಿಸೀಸ್ ಲ್ಯಾಬೊರೆಟರಿ’ ನಿಪಾ ವೈರಸ್ ಬಾವಲಿಗಳಿಂದ ಬರಲ್ಲ ಎಂದು ಸ್ಪಷ್ಟಪಡಿಸಿದೆ.

    ಕೇರಳದಿಂದ ಒಟ್ಟು ಸ್ಯಾಂಪಲ್ ರೂಪದಲ್ಲಿ 21 ಬಾವಲಿ ಮತ್ತು ಹಂದಿಗಳನ್ನು ಭೋಪಾಲ್ ನ ಲ್ಯಾಬೊರೇಟರಿಗೆ ಕಳುಹಿಸಿಕೊಡಲಾಗಿತ್ತು. ಈ ಸ್ಯಾಂಪಲ್‍ಗಳ ವರದಿ ಶುಕ್ರವಾರ ಬಂದಿದ್ದು, ಎಲ್ಲ ಪ್ರಾಣಿಗಳಲ್ಲಿ ನಿಪಾ ವೈರಸ್ ಲಕ್ಷಣಗಳು ಕಂಡು ಬಂದಿಲ್ಲ. ಈ ಹಿಂದೆ ಕೇಂದ್ರ ಪ್ರಾಣಿ-ಪಶು ಇಲಾಖೆಯ ಕಮಿಷನರ್ ಎಸ್‍ಪಿ ಸುರೇಶ್, ನಿಪಾ ವೈರಸ್ ನಿಂದ ಸಾವನ್ನಪ್ಪಿದವರ ಕುಟುಂಬಗಳ ಸುತ್ತಲಿನ ಪ್ರಾಣಿಗಳನ್ನು ಪರೀಕ್ಷೆಗೆ ಒಳಪಡಿಸಿದ್ರು. ಆದ್ರೆ ಅಲ್ಲಿಯ ಪ್ರಾಣಿಗಳಲ್ಲಿ ನಿಪಾ ವೈರಸ್ ಲಕ್ಷಣಗಳು ಕಂಡು ಬಂದಿರಲಿಲ್ಲ ಅಂತಾ ತಿಳಿಸಿದ್ರು.

    ನಿಪಾ ವೈರಸ್ ದಾಳಿಗೆ ತುತ್ತಾಗಿರುವ ಕೇರಳದ ಪೆರಂಬರಾ ಗ್ರಾಮದಿಂದ ಕೆಲ ಪ್ರಾಣಿಗಳನ್ನು ಸ್ಯಾಂಪಲ್ ರೂಪದಲ್ಲಿ ತೆಗೆದುಕೊಂಡು ಭೋಪಾಲ್‍ನ ಲ್ಯಾಬೋರೆಟರಿಗೆ ಕಳುಹಿಸಲಾಗಿತ್ತು.

    ಭೋಪಾಲ್ ಲ್ಯಾಬೊರೇಟರಿ ವರದಿಯ ಪ್ರಕಾರ, ನಿಪಾ ವೈರಸ್ ಬಾವಲಿಗಳಿಂದ ಬಂದಿಲ್ಲ ಅಂತಾ ಹೇಳಲಾಗಿತ್ತು. ಸದ್ಯ ಈ ಗೊಂದಲ ಇನ್ನು ಮುಂದುವರೆದಿದ್ದು, ಮತ್ತಷ್ಟು ನಿಪಾ ವೈರಸ್ ಪೀಡಿತ ಗ್ರಾಮಗಳಿಂದ ಪ್ರಾಣಿಗಳ ರಕ್ತವನ್ನು ಪಡೆದು ಪರೀಕ್ಷೆ ನಡೆಸಲಾಗುವುದು ಎಂದು ಲ್ಯಾಬೊರೆಟರಿ ಮೂಲಗಳು ತಿಳಿಸಿವೆ.

  • ಅಸೌಖ್ಯದಲ್ಲಿದ್ರೂ ನೋವನ್ನು ಲೆಕ್ಕಿಸದೇ ಕೆಲಸ ಮಾಡ್ತಿದ್ಳು: ನಿಪಾ ವೈರಸ್‍ಗೆ ಬಲಿಯಾದ ನರ್ಸ್ ಪತಿ ಕಣ್ಣೀರು

    ಅಸೌಖ್ಯದಲ್ಲಿದ್ರೂ ನೋವನ್ನು ಲೆಕ್ಕಿಸದೇ ಕೆಲಸ ಮಾಡ್ತಿದ್ಳು: ನಿಪಾ ವೈರಸ್‍ಗೆ ಬಲಿಯಾದ ನರ್ಸ್ ಪತಿ ಕಣ್ಣೀರು

    ಕೋಝಿಕೋಡ್: ನರ್ಸಿಂಗ್ ಎಂಬುದು ಒಂದು ಕಷ್ಟದ ಕೆಲಸ. ಹೀಗಾಗಿ ನನ್ನ ಪತ್ನಿಯ ಬಗ್ಗೆ ನನಗೆ ಹೆಮ್ಮೆಯಾಗುತ್ತದೆ ಅಂತ ಕೇರಳದಲ್ಲಿ ಇತ್ತೀಚೆಗೆ ನಿಪಾ ವೈರಸ್ ಗೆ ಬಲಿಯಾದ ಲಿನಿ ಪತಿ ಸಜೀಶ್ ಹೇಳಿದ್ದಾರೆ.

    ನನ್ನ ಪತ್ನಿ ಎಷ್ಟು ನಿಯತ್ತಿನಿಂದ ಕೆಲಸ ಮಾಡುತ್ತಿದ್ದಳು ಅಂದ್ರೆ ಆಕೆಗೆ ಹುಷಾರಿಲ್ಲ ಅಂದ್ರೂ ರಜೆ ಹಾಕದೇ ಕಷ್ಟಪಟ್ಟಾದರೂ ತನ್ನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಿದ್ದಳು ಅಂತ 36 ವರ್ಷದ ಸಜೀಶ್ ತಿಳಿಸಿದ್ದಾರೆ.

    ಏನಿದು ಪ್ರಕರಣ?:
    ಬಾವಲಿಗಳ ಮೂಲಕ ಹರಡುವ ನಿಪಾ ವೈರಸ್ ಗೆ ಕೇರಳದ ಲಿನಿ ಬಲಿಯಾಗಿದ್ದರು. ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದ 31 ವರ್ಷ ಲಿನಿ, ತನ್ನ ಸಾವು ಖಚಿತವಾದ ಹಿನ್ನೆಲೆಯಲ್ಲಿ ಪತಿಗೆ ಭಾವನಾತ್ಮಕ ಪತ್ರ ಬರೆದಿದ್ದರು. ಈ ವಿಚಾರ ತಿಳಿದು ಕೂಡಲೇ ಬಹರೈನ್ ನಲ್ಲಿ ಉದ್ಯೋಗದಲ್ಲಿದ್ದ ಪತಿ ಸಜೀಶ್ ಊರಿಗೆ ವಾಪಸ್ಸಾಗಿದ್ದರು. ಅಲ್ಲದೇ ಕೇವಲ 2 ನಿಮಿಷವಷ್ಟೇ ಪತ್ನಿ ಮುಖ ನೋಡಿದ್ದರು. ಭಾನುವಾರ ಸಂಜೆ ಲಿನಿ ಮೃತಪಟ್ಟಿದ್ದರು.

    `ಭಾನುವಾರ ಬೆಳಗ್ಗೆ ನಾನು ಪತ್ನಿಯನ್ನು ನೋಡಲೆಂದು ಆಸ್ಪತ್ರೆಗೆ ತೆರಳಿದ್ದೆ. ಆದ್ರೆ ಈ ವೇಳೆ ಅವಳ ಮುಖಕ್ಕೆ ಆಕ್ಸಿಜನ್ ಮಾಸ್ಕ್ ಹಾಕಲಾಗಿತ್ತು. ಹೀಗಾಗಿ ನನಗೆ ಅವಳೊಂದಿಗೆ ಮಾತನಾಡಲು ಅವಕಾಶ ಸಿಕ್ಕಿಲ್ಲ. ಕೇವಲ 2 ನಿಮಿಷವಷ್ಟೇ ಅವಳನ್ನು ನೋಡಿ, ಅವಳ ಮೇಲೆ ನನ್ನ ಕೈಯಿಟ್ಟೆ. ಆಗ ಅವಳಿಗೆ ಪ್ರಜ್ಞೆಯಿತ್ತು ‘ಅಂತ ಅವರು ವಿವರಿಸಿದ್ರು.

    ಬಿಡುವಿಲ್ಲದೇ ತಾನು ಅಸೌಖ್ಯದಿಂದ ಇದ್ದರೂ ಲೆಕ್ಕಿಸದೇ ಕೆಲಸ ಮಾಡುತ್ತಿದ್ದಳು. ಹೀಗಾಗಿ ನನಗೆ ಅವಳ ಬಗ್ಗೆ ಗೌರವ ಹಾಗೂ ಹೆಮ್ಮೆಯಿದೆ ಎಂದು ನೆನಪು ಮಾಡಿಕೊಂಡು ದುಃಖಿತರಾದ್ರು. ಇದನ್ನೂ ಓದಿ: ನಾನು ಸಾಯ್ತೀನಿ, ಮಕ್ಕಳನ್ನು ಚೆನ್ನಾಗಿ ನೋಡ್ಕೊಳ್ಳಿ- ಪತಿಗೆ ನಿಪಾ ವೈರಸ್‍ಗೆ ಬಲಿಯಾದ ಕೇರಳ ನರ್ಸ್ ಪತ್ರ

    ಸಾವಿಗೂ ಮೊದಲು ಅಂದ್ರೆ ಬುಧವಾರ ಫೋನ್ ಕರೆಯಲ್ಲಿ ಮಾತನಾಡಿದಾಗ, ನನಗೆ ಜ್ವರ ಬರೋ ಹಾಗೆ ಇದೆ ಅಂತ ಹೇಳಿದ್ದಳು. ಆಗ ನಾನು ರಜೆ ಮಾಡಿ ರೆಸ್ಟ್ ಮಾಡು ಅಂತ ಹೇಳಿದ್ದೆ. ಆದ್ರೆ ಆಸ್ಪತ್ರೆಯಲ್ಲಿ ತುಂಬಾ ರೋಗಿಗಳಿದ್ದಾರೆ. ಹೀಗಾಗಿ ರಜೆ ತಗೊಳಲ್ಲ ಅಂತ ಹೇಳಿದಳು. ಅಲ್ಲದೇ ಕೆಲಸಕ್ಕೆಂದು ಆಸ್ಪತ್ರೆಗೆ ತೆರಳಿದ್ದಳು ಅಂದ್ರು. ಇದನ್ನೂ ಓದಿ: ನಿಪಾ ವೈರಸ್ ಗೆ ಬಲಿಯಾದ ನರ್ಸ್ ಕುಟುಂಬಕ್ಕೆ 20 ಲಕ್ಷ ರೂ.: ಪತಿಗೆ ಸರ್ಕಾರಿ ಉದ್ಯೋಗ ಘೋಷಿಸಿದ ಕೇರಳ

    ಡೆತ್ ನೋಟ್:
    ತನ್ನ ಸಾವು ಖಚಿತವಾದ ಲಿನಿ ತನ್ನ ಪತಿ ಸಜೀಶ್ ಗೆ ಪತ್ರವೊಂದನ್ನು ಬರೆದಿದ್ದಾರೆ. ಅದರಲ್ಲಿ ಇಬ್ಬರು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ತಿಳಿಸಿದ್ದರು. ಈ ಪತ್ರ ಕೂಡಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೇ ಸಜೀಶ್ ಅವರಿಗೂ ಈ ಪತ್ರ ತಲುಪಿತ್ತು. ಲಿನಿ ಅವರು ಸರ್ಕಾರಿ ಕೆಲಸಕ್ಕಾಗಿ ಪ್ರಯತ್ನಿಸುತ್ತಿದ್ದರು. ಅಲ್ಲದೇ ಇತ್ತ 5 ಹಾಗೂ 2 ವರ್ಷದ ಮಕ್ಕಳ ಜೊತೆಯೂ ಕಾಲ ಕಳೆಯುತ್ತಿದ್ದರು. ಸದ್ಯ ಈ ಇಬ್ಬರೂ ಮಕ್ಕಳು ಇನ್ನೂ ತಾಯಿಯ ಬರುವಿಕೆಗೆ ಕಾದು ಕುಳಿತಿದ್ದು, ಮಕ್ಕಳ ಮುಖವನ್ನು ನೋಡಿದಾಗ ಕರುಳು ಚುರುಕ್ ಅನ್ನುತ್ತದೆ. ಇದನ್ನೂ ಓದಿ: ಬಾವಲಿ ಜ್ವರಕ್ಕೆ ಕರ್ನಾಟಕದಲ್ಲೂ ಹೈಅಲರ್ಟ್ – ಈ ಮಾಹಿತಿ ನಿಮಗೆ ಗೊತ್ತಿರಲಿ..!

    ಇದರಲ್ಲಿ ದೊಡ್ಡ ಮಗ ತನ್ನ ತಾಯಿಗೆ ಕರೆ ಮಾಡು ಮಾತಾಡಬೇಕು ಅಂತ ಹಠ ಹಿಡಿಯುತ್ತಿದ್ದರೆ, ಸಣ್ಣವ ಇನ್ನೂ ಚಿಕ್ಕವನಾಗಿದ್ದಿದ್ದರಿಂದ ಮಾತನಾಡುತ್ತಿಲ್ಲ. ಆದ್ರೆ ಈ ಇಬ್ಬರೂ ಅಮ್ಮ ಹೊರಗಡೆ ಹೋಗಿದ್ದಾಳೆ, ಇನ್ನೇನೋ ಬರುತ್ತಾಳೆ ಅನ್ನೋ ನಿರೀಕ್ಷೆಯಲ್ಲಿದ್ದಾರೆ ಅಂತ ಲಿನಿ ಸೋದರ ಸಂಬಂಧಿಯೊಬ್ಬರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.

    ಸದ್ಯ ಲಿನಿ ಪತಿಗೆ ಸರ್ಕಾರಿ ಕೆಲಸ ಹಾಗೂ 20 ಲಕ್ಷ ಪರಿಹಾರವನ್ನು ಕೊಡುವುದಾಗಿ ಕೇರಳ ಸರ್ಕಾರ ಘೋಷಿಸಿದೆ. ಹೀಗಾಗಿ ಸಜೀಶ್ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

  • ಬಾವಲಿಯನ್ನ ನುಂಗಲೆತ್ನಿಸಿದ ದೈತ್ಯ ಹೆಬ್ಬಾವು- ಮೈ ಜುಮ್ಮೆನಿಸೋ ವಿಡಿಯೋ ನೋಡಿ

    ಬಾವಲಿಯನ್ನ ನುಂಗಲೆತ್ನಿಸಿದ ದೈತ್ಯ ಹೆಬ್ಬಾವು- ಮೈ ಜುಮ್ಮೆನಿಸೋ ವಿಡಿಯೋ ನೋಡಿ

    ಸಿಡ್ನಿ: ದೈತ್ಯ ಹೆಬ್ಬಾವೊಂದು ಮರದಲ್ಲಿ ಬಾವಲಿಯನ್ನು ನುಂಗಲು ಪ್ರಯತ್ನಿಸುತ್ತಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ.

    ಆಸ್ಟ್ರೇಲಿಯಾದ ಬ್ರಿಸ್ಬೇನ್‍ನಲ್ಲಿ ಈ ಘಟನೆ ನಡೆದಿದೆ. ಹೆಬ್ಬಾವು, ಬಾವಲಿ ನಡುವಿನ ಕಾಳಗದ ವಿಡಿಯೋ ಮೈ ಜುಮ್ಮೆನಿಸುವಂತಿದೆ.

    ಕಾರ್ಪೆಟ್ ಪೈಥಾನ್ ಜಾತಿಗೆ ಸೇರಿದ ಹೆಬ್ಬಾವು ಬಾವಲಿಯನ್ನ ಸುಮಾರು ಅರ್ಧ ಗಂಟೆ ಕಾಲ ತನ್ನ ಹಿಡಿತದಲ್ಲಿ ಸಿಲುಕಿಸಿಕೊಂಡು ನುಂಗಲು ಯತ್ನಿಸಿದೆ. ಬಾವಲಿ ಕೂಡ ತನ್ನ ಪ್ರಾಣ ಉಳಿಸಿಕೊಳ್ಳಲು ಹೋರಾಡಿದೆ. ಬಾವಲಿಯ ಅದೃಷ್ಟಕ್ಕೆ ಹೆಬ್ಬಾವು ಅರ್ಧ ಗಂಟೆ ನಂತರ ವಿಫಲವಾಗಿ ಬಾವಲಿಯನ್ನ ನೆಲಕ್ಕುಳುರುವಂತೆ ಕೆಳಗೆ ಬಿಟ್ಟಿದೆ.

    ಉರಗ ರಕ್ಷಕ ಟೋನಿ ಮಾರಿಸ್ಸನ್ ಎಂಬವರು ಇದರ ವಿಡಿಯೋ ಮಾಡಿದ್ದು ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದಾರೆ. ಬಾವಲಿಯ ರೆಕ್ಕೆಯನ್ನ ನುಂಗಲಾಗದೆ ಹಾವು ವಿಫಲವಾಯ್ತು ಎಂದು ಅವರು ಬರೆದುಕೊಂಡಿದ್ದಾರೆ .

    ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಪೆಟ್ ಪೈಥಾನ್‍ಗಳು ಕಾಣಸಿಗುತ್ತವೆ. ಇವು ಮಾನವನಿಗೆ ಯಾವುದೇ ಅಪಾಯ ಮಾಡಲ್ಲ ಎಂದು ಮಾರಿಸ್ಸನ್ ಹೇಳಿದ್ದಾರೆ.

    https://www.facebook.com/redlandssnakes/videos/2053112358250176/

    https://www.facebook.com/redlandssnakes/posts/2053116511583094