Tag: Basavaraj Bommayi
-

ನಮ್ಮ ಅಧಿಕಾರಿಗಳ ಹೇಳಿಕೆ ಮೇಲೆ ನನಗೆ ನಂಬಿಕೆ ಇಲ್ಲ: ಬಸವರಾಜ್ ಬೊಮ್ಮಾಯಿ
ಬೆಂಗಳೂರು: ನಮ್ಮ ಅಧಿಕಾರಿಗಳ ಹೇಳಿಕೆ ಮೇಲೆ ನನಗೆ ನಂಬಿಕೆ ಇಲ್ಲ. ಅದಕ್ಕೆ ಸ್ವತಃ ನಾನೇ ಪ್ರಕರಣದ ಫೈಲ್‍ಗಳನ್ನು ತರಿಸಿ ಪರಿಶೀಲಿಸುತ್ತಿದ್ದೇನೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದ ಕಾಶ್ಮೀರಿ ವಿದ್ಯಾರ್ಥಿಗಳ ಪ್ರಕರಣದ ಕುರಿತು ಪ್ರತಿಕ್ರಿಯಿಸಿದರು. ಪೊಲೀಸರಿಗೆ ಯಾರು ಸೆಲ್ಫ್ ಬಾಂಡ್ ಕೊಟ್ಟಿದ್ದಾರೆ ಎನ್ನುವ ಬಗ್ಗೆ ಸ್ಪಷ್ಟ ಮಾಡಿತಿ ಇಲ್ಲ. ಆದರೆ ಈ ಬಗ್ಗೆ ತನಿಖೆ ನಡೆಯುತ್ತಿದೆ. ಈ ಪ್ರಕರಣ ಸಂಬಂಧ ಎಲ್ಲಾ ವರದಿಯನ್ನು ನನಗೆ ನೀಡಲು ಅಧಿಕಾರಿಗಳ ಬಳಿ ಸೂಚಿಸಿದ್ದೇನೆ. ನಾಳೆ ನನಗೆ ಆ ವರದಿ ಸಿಗುತ್ತದೆ ಎಂದು ತಿಳಿಸಿದರು.

ಈ ಬಗ್ಗೆ ಪೊಲೀಸರಿಗೂ ಸ್ಪಷ್ಟ ಮಾಹಿತಿ ಇಲ್ಲ. ಹೀಗಾಗಿ ಒರಿಜಿನಲ್ ಫೈಲ್ ಕಾಪಿ ತರಿಸಿಕೊಳ್ಳುತ್ತಿದ್ದೇನೆ. ಅದನ್ನ ನಾನೇ ವಿಚಾರಣೆ ಮಾಡಿ ಸ್ಪಷ್ಟೀಕರಣ ಕೊಡುತ್ತಿದ್ದೇನೆ. ದೇಶದ್ರೋಹಿ ವಿಚಾರದಲ್ಲಿ ಯಾರನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಅವರು ಯಾರೇ ಇದ್ದರೂ ಕೂಡ. ಯಾರೇ ಸಹಾಯ ಮಾಡಿದರು ಕೂಡ ಅವರನ್ನು ಬಗ್ಗು ಬಡಿಯುತ್ತೇವೆ. ಈ ವಿಚಾರದಲ್ಲಿ ಹೆಚ್ಚಿನ ಮಾಹಿತಿ ಸಿಕ್ಕ ಮೇಲೆ ಎಲ್ಲರಿಗೂ ಸ್ಪಷ್ಟೀಕರಣ ನೀಡುತ್ತೇನೆ. ಅದರಲ್ಲಿ ಮುಚ್ಚುಮರೆ ಮಾಡುವ ಪ್ರಶ್ನೆಯೇ ಇಲ್ಲ ಎಂದರು.

ನಮ್ಮ ಅಧಿಕಾರಿಗಳ ಹೇಳಿಕೆ ಮೇಲೆ ನಂಬಿಕೆಯಿಲ್ಲ. ನನಗೆ ಆಫೀಶಿಯಲ್ ಮಾಹಿತಿ ಇಲ್ಲ. ಹೀಗಾಗಿ ನಾಳೆ ಒರಿಜಿನಲ್ ಕೇಸ್ ಫೈಲ್‍ನ್ನ ತರಿಸ್ತಿದ್ದೇನೆ. ನಾಳೆ ನನ್ನ ಮುಂದೆ ವರದಿ ಬರುತ್ತೆ ಎಂದು ಹೇಳಿದರು.
ಅಷ್ಟೇ ಅಲ್ಲದೇ ಅಮುಲ್ಯ ಲಿಯೋನಾ ಮತ್ತು ಆರುದ್ರಾ ನಾರಾಯನ್ ಹೇಳಿಕೆ ಬಗ್ಗೆ ಮಾತನಾಡಿ, ದೇಶದ್ರೋಹ ಪ್ರಕರಣದಲ್ಲಿ ಭಾಗಿಯಾದವರನ್ನು ಬಗ್ಗು ಬಡಿತೀವಿ. ರಾಷ್ಟ್ರದ್ರೋಹ ಬೆಳೆಸುವ ಕೆಲಸ, ಕೆಲ ಸಂಘಟನೆಗಳು ಮಾಡುತ್ತಿವೆ. ಹೆಣ್ಣುಮಕ್ಕಳು, ವಿದ್ಯಾರ್ಥಿಗಳು, ಯುವಕರಿಂದ ದೇಶದ್ರೋಹಿ ಹೇಳಿಕೆಗಳನ್ನು ಹೇಳಿಸುತ್ತಿದ್ದಾರೆ. ಇದರ ಹಿಂದೆ ಹಲವಾರು ಶಕ್ತಿಗಳ ಕೈವಾಡ ಇದೆ ಎಂದು ತಿಳಿಸಿದರು.

ಇಲ್ಲಿ ಪಾಕಿಸ್ತಾನಕ್ಕೆ ಜಿಂದಾಬಾದ್ ಎನ್ನುವವರು ಪಾಕಿಗೆ ಹೋಗಿ ಹಿಂದುಸ್ತಾನ್ ಜಿಂದಾಬಾದ್ ಎಂದು ಹೇಳಿ ಜೀವಂತವಾಗಿ ವಾಪಸ್ಸು ಬರಲಿ ನೋಡೋಣ. ತಾಕತ್ತಿದೆಯಾ ಅವರಿಗೆ ಕೆಲವು ರಾಜಕೀಯ ಪಕ್ಷಗಳು ದೇಶದ್ರೋಹಿ ಹೇಳಿಕೆಗಳು ಕೊಟ್ಟವರ ಪರ ನಿಲ್ಲುತ್ತಿವೆ. ದೇಶದ್ರೋಹ ಕೆಲಸದಲ್ಲಿ ಭಾಗಿಯಾಗದಂತೆ ವಿದ್ಯಾಸಂಸ್ಥೆ, ಯೂನಿವರ್ಸಿಟಿಗಳಿಗೆ ಸೂಚನೆ ನೀಡಲಾಗಿದೆ. ಯುನಿವರ್ಸಿಟಿ, ವಿದ್ಯಾಸಂಸ್ಥೆಗಳು ವಿದ್ಯೆಯನ್ನ ಪ್ರಸಾರ ಮಾಡಲಿ, ದೇಶದ್ರೋಹ ತಾಣಗಳಾಗದಿರಲಿ. ಕಾರ್ಯಕ್ರಮಗಳಲ್ಲಿ ಈ ರೀತಿಯ ಹೇಳಿಕೆಗಳು ಕಂಡು ಬಂದರೆ ಕಾರ್ಯಕ್ರಮದ ಆಯೋಜಕರೇ ನೇರ ಹೊಣೆಗಾರರಾಗುತ್ತಾರೆ ಎಂದು ಖಡಕ್ ಆಗಿ ಪ್ರತಿಕ್ರಿಯಿಸಿದರು.
-

ಚುನಾವಣೆ ಪ್ರಕ್ರಿಯೆಯಿಂದ ಗೃಹ ಸಚಿವರನ್ನು ದೂರ ಇಡಬೇಕು: ಹೆಚ್‍ಕೆ ಪಾಟೀಲ್ ಆಗ್ರಹ
ಕಾರವಾರ: ಗೃಹ ಸಚಿವ ಬಸವರಾಜ್ ಬೊಮ್ಮಾಯಿ ರಾಜೀನಾಮೆಗೆ ಮಾಜಿ ಸಚಿವ ಎಚ್‍ಕೆ ಪಾಟೀಲ್ ಆಗ್ರಹಿಸಿದ್ದಾರೆ.
ಇಂದು ಶಿರಸಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣೆ ನಡೆಯುವವರೆಗೂ ಬೊಮ್ಮಾಯಿ ಚುನಾವಣೆ ಪ್ರಕ್ರಿಯೆಯಿಂದ ದೂರ ಇಡಬೇಕು. ನವೆಂಬರ್ 20 ರಂದು ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ಯಲ್ಲಿ ಗೃಹ ಸಚಿವರ ಕಾರು ತಪಾಸಣೆ ಮಾಡದೇ ಹಾಗೇ ಬಿಡಲಾಗಿತ್ತು. ಈ ಬಗ್ಗೆ ಚೆಕ್‍ಪೋಸ್ಟ್ ನಲ್ಲಿದ್ದ ಪೊಲೀಸರು ಬೆಂಗಾವಲು ವಾಹನದ ಚಾಲಕನನ್ನು ಅಮಾನತು ಮಾಡಲಾಗಿದೆ. ಅಮಾನತು ಮಾಡಿರುವುದು ನೋಡಿದರೆ ಗೃಹ ಸಚಿವರೇ ಅಕ್ರಮ ನಡೆಸಿದಂತೆ ಕಾಣುತ್ತಿದೆ. ಈ ಹಿನ್ನಲೆಯಲ್ಲಿ ರಾಜೀನಾಮೆ ನೀಡುವಂತೆ ಆಗ್ರಹಿಸಿದರು.

ಬಿಜೆಪಿಯವರು ಮಾಡಿದ ಕುತಂತ್ರಕ್ಕೆ ಜನರು ಚುನಾವಣೆಯಲ್ಲಿ ಉತ್ತರ ಕೊಡಲಿದ್ದಾರೆ. ರಾಜಕೀಯ ಅನೈತಿಕತೆಯನ್ನೇ ಬಿಜೆಪಿಗರು ಅಸ್ತ್ರವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಮಹಾರಾಷ್ಟ್ರ, ಬೆಂಗಾಲ್‍ನಲ್ಲಿ ಆದ ಮುಖಭಂಗದಿಂದಾದರೂ ಬಿಜೆಪಿ ಪಾಠ ಕಲಿಯಬೇಕು ಎಂದರು.
ಸಿ.ಎಂ ಯಡಿಯೂರಪ್ಪ, ಸಿದ್ದರಾಮಯ್ಯ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂದಿದ್ದಾರೆ. ಅವರ ವಿರುದ್ಧ ಮಾನನಷ್ಟ ಮೊಕದಮ್ಮೆ ಹಾಕಲಿ. ಈಗ ಸಾರ್ವಜನಿಕರ ಮುಂದೆ ಹೇಳುವುದನ್ನೇ ನ್ಯಾಯಾಲಯದಲ್ಲಿ ಹೇಳುತ್ತೇವೆ. ಯಡಿಯೂರಪ್ಪ ಹುಬ್ಬಳ್ಳಿಯಲ್ಲಿ ಅಮಿತ್ ಶಾ ಒಪ್ಪಿಗೆ ಪಡೆದು ರಾಜೀನಾಮೆ ಕೊಡಿಸಿದ್ದೇವೆ ಎಂದು ಹೇಳಿದ್ದಾರೆ. ಇದರ ವಿಡಿಯೋ ಸಹ ಅವರ ಕಾರ್ಯಕರ್ತರೇ ಹೊರ ಬಿಟ್ಟಿದ್ದಾರೆ ಎಂದು ಹೇಳಿದರು.

ಭೀಮಣ್ಣ ಗೆಲ್ತಾರೆ: ಯಲ್ಲಾಪುರದ ಕ್ಷೇತ್ರದಲ್ಲಿ ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ ವಿರುದ್ಧ ಅಕ್ರೋಶದ ಅಲೆ ಇದೆ. ಇದರಿಂದ ಭೀಮಣ್ಣ ನಾಯ್ಕ ಗೆಲ್ಲುತ್ತಾರೆ. ಹೆಬ್ಬಾರ್ ಪಕ್ಷಕ್ಕೆ ದ್ರೋಹವೆಸಗಿ ಹೋಗಿದ್ದಾರೆ ಇದರಿಂದ ಕ್ಷೇತ್ರದಲ್ಲಿ ಅವರ ವಿರುದ್ಧ ಅಲೆ ಹೆಚ್ಚಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಪರ ಅನುಕಂಪವಿದೆ. ಈ ಕಾರಣದಿಂದ ಗೆಲ್ಲುತ್ತಾರೆ ಎಂದು ತಮ್ಮ ಅಭ್ಯರ್ಥಿ ಗೆಲುವಿನ ಕುರಿತು ಪಾಟೀಲ್ ಹೇಳಿದರು.
-

ಕಾರು ನಿಲ್ಲಿಸದೆ ಬಸವರಾಜ್ ಬೊಮ್ಮಾಯಿ ಉದ್ಧಟತನ
ಮಂಡ್ಯ: ಗೃಹ ಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನೀತಿ ಸಂಹಿತೆ ಉಲ್ಲಂಘಿಸಿದ್ದು, ಚುನಾವಣಾ ಸಿಬ್ಬಂದಿಗೂ ಕ್ಯಾರೆ ಎನ್ನದೇ ಮುಂದೆ ಸಾಗಿದ್ದಾರೆ.
ಬಸವರಾಜ್ ಬೊಮ್ಮಾಯಿ ಕಾರಿನಲ್ಲಿ ಹೋಗುತ್ತಿದ್ದಾಗ ವಾಹನ ತಪಾಸಣೆಗೆಂದು ಚುನಾವಣಾ ಸಿಬ್ಬಂದಿ ಕಾರನ್ನು ತಡೆಯಲು ಮುಂದಾದರು. ಆದರೆ ಬೊಮ್ಮಾಯಿ ವಾಹನ ತಪಾಸಣೆಗೆ ಸಹಕರಿಸದೆ ಚುನಾವಣಾ ಸಿಬ್ಬಂದಿಗೂ ಕ್ಯಾರೆ ಎನ್ನದೇ ಮುಂದೆ ಸಾಗಿದ್ದಾರೆ.

ಈಗಾಗಲೇ ಗೃಹ ಮಂತ್ರಿ ಎರಡು ಕಡೆ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಬುಧವಾರ ಬಸವರಾಜ್ ಬೊಮ್ಮಾಯಿ ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದರು. ಈ ವೇಳೆ ಅವರು ಮಂಡ್ಯ ಜಿಲ್ಲೆಯ ಗಡಿ ನಿಡಘಟ್ಟ ಹಾಗೂ ಮಂಡ್ಯ ತಾಲೂಕಿನ ಹನಕೆರೆ ಬಳಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ.
ಬುಧವಾರ ಎರಡು ಕಡೆ ಚೆಕ್ ಪೋಸ್ಟ್ ಸಿಬ್ಬಂದಿ ಬೆಂಗಳೂರಿಂದ ಮೈಸೂರಿನತ್ತ ತೆರಳುತ್ತಿದ್ದ ಬಸವರಾಜ್ ಅವರ ವಾಹವನ್ನು ತಡೆದಿದ್ದರು. ಮೊದಲು ನಿಡಘಟ್ಟ ಬಳಿ ವಾಹನ ನಿಲ್ಲಿಸದ ಹಿನ್ನೆಲೆಯಲ್ಲಿ ಹನಕೆರೆ ಬಳಿ ವಾಹನ ತಪಾಸಣೆಗೆ ಚೆಕ್ ಪೋಸ್ಟ್ ಸಿಬ್ಬಂದಿ ಸಿದ್ಧವಾಗಿದ್ದರು. ಇಲ್ಲೂ ವಾಹನ ನಿಲ್ಲಿಸದೆ ಸಚಿವರ ಉದ್ಧಟತನ ಪ್ರದರ್ಶಿಸಿದ್ದಾರೆ.

