Tag: Basavaraj Bommai

  • ಬಾರದ ನೆರೆ ಪರಿಹಾರ – ರೈತ ಆತ್ಮಹತ್ಯೆಗೆ ಶರಣು

    ಬಾರದ ನೆರೆ ಪರಿಹಾರ – ರೈತ ಆತ್ಮಹತ್ಯೆಗೆ ಶರಣು

    ಹಾವೇರಿ: ನೆರೆ ಪರಿಹಾರದ ಹಣ ಬಾರದೆ ಅನ್ನದಾತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸ್ವಕ್ಷೇತ್ರದಲ್ಲೇ ನಡೆದಿದೆ.

    ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಹಳೇಮನ್ನಂಗಿ ಗ್ರಾಮದ ರೈತ ಬಸವರಾಜ ದೇವಗಿರಿ (45) ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿ ರೈತ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಬಸವರಾಜ ಅವರು ಎರಡೂವರೆ ಎಕರೆ ಜಮೀನು ಹೊಂದಿದ್ದರು. ಬ್ಯಾಂಕ್ ಮತ್ತು ಕೈಸಾಲ ಸೇರಿ ಆರು ಲಕ್ಷ ರೂ.ಗೂ ಅಧಿಕ ಸಾಲ ಮಾಡಿಕೊಂಡಿದ್ದರು. ಈ ಬಾರಿ ಮಳೆ ಚೆನ್ನಾಗಿ ಆಗುತ್ತದೆ. ಇದರಿಂದ ಬೆಳೆಯೂ ಚೆನ್ನಾಗಿ ಬರುತ್ತದೆ. ಎಲ್ಲ ಸಾಲವನ್ನೂ ತೀರಿಸಿಬಿಡಬಹುದು ಎಂದುಕೊಂಡಿದ್ದರು. ಅಲ್ಲದೆ ಸಾಲ ಮನ್ನಾ ಯೋಜನೆಯು ಸಹಾಯವಾಗಲಿದೆ ಎಂಬ ಭರವಸೆಯಲ್ಲಿದ್ದರು. ಆದರೆ, ರಣಮಳೆಯಿಂದಾಗಿ ಅತಿವೃಷ್ಟಿ ಮತ್ತು ವರದಾ ನದಿ ತುಂಬಿ ಹರಿದಿದ್ದರಿಂದ ಹೊಲಕ್ಕೆ ಸಂಪೂರ್ಣ ನೀರು ನುಗ್ಗಿ ಬೆಳೆ ಹಾಳಾಗಿ ಬಸವರಾಜ ಅವರು ಕಂಗಾಲಾಗಿದ್ದರು. ಹೀಗಾಗಿ ಮನನೊಂದು ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ರೈತನ ಆತ್ಮಹತ್ಯೆಯಿಂದಾಗಿ ಕುಟುಂಬ ಕಂಗಾಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇಷ್ಟೆಲ್ಲ ನಡೆದರೂ ಸಹ ಯಾವೊಬ್ಬ ಅಧಿಕಾರಿಯೂ ಸ್ಥಳಕ್ಕೆ ಆಗಮಿಸಿ ವಿಚಾರಿಸಿಲ್ಲ. ನೆರೆ ಸಂಭವಿಸಿದಾಗ ಗ್ರಾಮಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಪರಿಹಾರದ ಭರವಸೆ ನೀಡಿದ್ದರು. ಇದೀಗ ನೆರೆ ನಿಂತು ತಿಂಗಳು ಕಳೆದರೂ ಸಹ ನೆರೆ ಪರಿಹಾರ ಹಾಗೂ ಬೆಳೆ ಪರಿಹಾರ ಎರಡೂ ಬಂದಿಲ್ಲ. ಹೀಗಾಗಿ ಮನನೊಂದು ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಕುರಿತು ಸವಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

  • ಸಾರ್ವಜನಿಕರಿಗೆ ತೊಂದರೆಯಾಗುತ್ತೆ, ಝಿರೋ ಟ್ರಾಫಿಕ್ ಬೇಡ: ಬಸವರಾಜ ಬೊಮ್ಮಾಯಿ

    ಸಾರ್ವಜನಿಕರಿಗೆ ತೊಂದರೆಯಾಗುತ್ತೆ, ಝಿರೋ ಟ್ರಾಫಿಕ್ ಬೇಡ: ಬಸವರಾಜ ಬೊಮ್ಮಾಯಿ

    ಹಾವೇರಿ: ಝಿರೋ ಟ್ರಾಫಿಕ್ ಬೇಡ ಹಾಗೂ ಜಿಲ್ಲೆಗೆ ಭೇಟಿ ನೀಡಿದಾಗೊಮ್ಮೆ ಗಾರ್ಡ್ ಆಫ್ ಆನರ್ ಬೇಡ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

    ಈ ಕುರಿತು ತಮ್ಮ ಟ್ವಿಟ್ಟರ್, ಫೇಸ್‍ಬುಕ್ ಖಾತೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ಸಚಿವರು, ‘ಝಿರೋ ಟ್ರಾಫಿಕ್‍ನಿಂದ ಸಾಮಾನ್ಯ ಜನರಿಗೆ ತೊಂದರೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಝಿರೋ ಟ್ರಾಫಿಕ್ ಬೇಡ. ಹಾವೇರಿ ಮತ್ತು ಧಾರವಾಡ ಜಿಲ್ಲೆಗಳಿಗೆ ಶುಕ್ರವಾರ ಭೇಟಿ ನೀಡಿದ್ದಾಗ ಝಿರೋ ಟ್ರಾಫಿಕ್‍ನಿಂದ ಸಾರ್ವಜನಿಕರಿಗೆ ಉಂಟಾದ ಸಮಸ್ಯೆಯನ್ನು ನೋಡಿದ್ದೇನೆ ಎಂದು ತಿಳಿಸಿದ್ದಾರೆ.

    ಝಿರೋ ಟ್ರಾಫಿಕ್ ಜೊತೆಗೆ ಜಿಲ್ಲೆಗೆ ಭೇಟಿ ನೀಡಿದಾಗ ಪ್ರತಿ ಬಾರಿಯೂ ಗಾರ್ಡ್ ಆಫ್ ಹಾನರ್ ಸಲ್ಲಿಸುವುದು ಬೇಡ. ಈ ಸಂಬಂಧ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದ್ದಾರೆ.

    ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಝಿರೋ ಟ್ರಾಫಿಕ್‍ನಿಂದಾಗಿ ಮಾಜಿ ಡಿಸಿಎಂ ಪರಮೇಶ್ವರ್ ಅವರು ವಿವಾದಕ್ಕೆ ಗುರಿಯಾಗಿದ್ದರು. ಈ ವಿಚಾರವಾಗಿ ಎಚ್ಚೆತ್ತುಕೊಂಡ ಬಿಜೆಪಿ ಹೈಕಮಾಂಡ್, ತಮ್ಮ ಉಪ ಮುಖ್ಯಮಂತ್ರಿಗಳಿಗೆ ಝಿರೋ ಟ್ರಾಫಿಕ್ ಸೌಲಭ್ಯ ಪಡೆಯದಂತೆ ಖಡಕ್ ಸೂಚನೆ ನೀಡಿದೆ.

    ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಅಶ್ವಥ್ ನಾರಾಯಣ ಹಾಗೂ ಲಕ್ಷ್ಮಣ ಸವದಿ ಅವರು ಝಿರೋ ಟ್ರಾಫಿಕ್ ತೆಗೆದುಕೊಳ್ಳಬಾರದು. ಝಿರೋ ಟ್ರಾಫಿಕ್‍ನಿಂದ ಸಂಚಾರ ಅಸ್ತವ್ಯಸ್ತವಾಗಲಿದೆ. ಅಷ್ಟೇ ಅಲ್ಲದೆ ಸಾರ್ವಜನಿಕರಿಗೂ ತೊಂದರೆಯಾಗುತ್ತದೆ. ಇದರಿಂದಾಗಿ ಜನರಿಗೆ ಕೆಟ್ಟ ಸಂದೇಶ ಹೋಗಿ ಪಕ್ಷಕ್ಕೆ ಮುಜುಗರ ಆಗಲಿದೆ ಎಂದು ಬಿಜೆಪಿ ಹೈಕಮಾಂಡ್ ಇತ್ತೀಚೆಗಷ್ಟೇ ಎಚ್ಚರಿಕೆ ನೀಡಿತ್ತು.

    ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಡಿಸಿಎಂ ಸಿ.ಎನ್.ಅಶ್ವಥ್ ನಾರಾಯಣ ಅವರು, ಸಾರ್ವಜನಿಕ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಝಿರೋ ಟ್ರಾಫಿಕ್ ವ್ಯವಸ್ಥೆಯ ಅನುಕೂಲವನ್ನು ತೆಗೆದುಕೊಳ್ಳದಿರಲು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದರು.

  • ಸರ್ಕಾರ ಉರುಳೋ ಸಮಯದಲ್ಲಿ ಕಡತ ವಿಲೇವಾರಿ ಬಲು ಜೋರು?

    ಸರ್ಕಾರ ಉರುಳೋ ಸಮಯದಲ್ಲಿ ಕಡತ ವಿಲೇವಾರಿ ಬಲು ಜೋರು?

    – ಬಿಜೆಪಿಯಿಂದ ಗಂಭೀರ ಆರೋಪ
    – ರಾಜ್ಯಪಾಲರ ಆದೇಶದ ನಡುವೆಯೂ ಓವರ್ ಟೈಂ ಕೆಲಸ

    ಬೆಂಗಳೂರು: ಮೈತ್ರಿ ಸರ್ಕಾರ ಬಹುಮತದ ಸಾಬೀತು ಪಡಿಸುವ ಒತ್ತಡದಲ್ಲಿ ಸಿಲುಕಿದ್ದ ಸಮಯದಲ್ಲಿ ಮೈತ್ರಿ ಸರ್ಕಾರದ ಸಚಿವರು ಬಾಕಿ ಇರುವ ಕಡತಗಳನ್ನು ವಿಲೇವಾರಿ ಮಾಡುವ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.

    ಇಂದು ವಿಧಾನಸೌಧದಲ್ಲಿ ಸಚಿವ ಜಮೀರ್ ಅವರು ತಮ್ಮ ಖಾತೆಗೆ ಸಂಬಂಧಿಸಿದ ಫೈಲ್ ಕ್ಲೀಯರ್ ಮಾಡುವ ಕಾರ್ಯದಲ್ಲಿ ಮಗ್ನರಾಗಿದ್ದರು. ಎರಡು ಮೂರು ಬಾರಿ ಯುಟಿ ಖಾದರ್ ಅವರ ಬಳಿ ಬಂದು ಚರ್ಚೆ ನಡೆಸಿದ್ದು ಕಂಡು ಬಂತು.

    ಇದರ ಬೆನ್ನಲ್ಲೇ ಬಿಎಸ್‍ವೈ ನಿವಾಸ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಬಸವರಾಜ್ ಬೊಮ್ಮಾಯಿ ಅವರು, ಗುರುವಾರ ಬಹುಮತ ಸಾಬೀತು ಪಡಿಸಬೇಕಾದ ದಿನಾಂಕ ನಿಗದಿ ಮಾಡಿರುವುದಿಂದ ಮೈತ್ರಿ ಸರ್ಕಾರದ ಎಲ್ಲ ಸಚಿವರು ಕೂಡ ಓವರ್ ಟೈಂ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳ ಬಡ್ತಿ, ನೇಮಕಾತಿ, ವರ್ಗಾವಣೆ ಸೇರಿದಂತೆ ಅನುದಾನ ಬಿಡುಗಡೆ ಮಾಡುವ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಕೂಡಲೇ ಸರ್ಕಾರ ಕಾರ್ಯದರ್ಶಿಗಳು ಇದಕ್ಕೆ ಬ್ರೇಕ್ ಹಾಕಬೇಕು. ಯಾವುದೇ ರೀತಿಯ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂದು ರಾಜ್ಯಪಾಲರ ಆದೇಶದ ನಡುವೆಯೂ ಕೂಡ ಓವರ್ ಟೈಂ ಕೆಲಸ ಮಾಡಿ ಕ್ಲಿಯರ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    ಈಗಾಗಲೇ ಈ ಆದೇಶ ಮುಖ್ಯ ಕಾರ್ಯದರ್ಶಿಗಳಿಗೆ ರಾಜ್ಯಪಾಲರು ನೀಡಿದ್ದಾರೆ. ಸಚಿವರ ಈ ನಡೆ ನೋಡಿದರೆ ಸರ್ಕಾರ ಉರುಳುವುದು ಖಚಿತವಾದಂತೆ ಅವರಿಗೆ ಕಾಣುತ್ತಿದೆ. ಆದ್ದರಿಂದಲೇ ಹಳೆಯ ದಿನಾಂಕವನ್ನು ಹಾಕಿ ಕಡತಗಳನ್ನು ವಿಲೇವಾರಿ ಮಾಡುತ್ತಿದ್ದಾರೆ. ಆ ಮೂಲಕ ಭ್ರಷ್ಟಾಚಾರಕ್ಕೆ ಮೈತ್ರಿ ಸರ್ಕಾರ ಸಚಿವರು ಮುಂದಾಗಿದ್ದಾರೆ ಎಂದು ದೂರಿದರು.

    ಸರ್ಕಾರ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂದು ರಾಜ್ಯಪಾಲರು ಆದೇಶ ನೀಡಿದ್ದರೂ ವಿಶೇಷ ಸರ್ಕಾರಿ ವಕೀಲರಾಗಿ ಬಿ.ಎನ್ ಜಗದೀಶ್ ಅವರನ್ನು ನೇಮಿಸಿ ಸರ್ಕಾರದ ಆದೇಶ ಹೊರಡಿಸಿದೆ.

  • ಸಮ್ಮಿಶ್ರ ಸರ್ಕಾರವನ್ನು ಮತ್ತೆ ಕೆಣಕಿದ ಬಸವರಾಜ್ ಬೊಮ್ಮಾಯಿ

    ಸಮ್ಮಿಶ್ರ ಸರ್ಕಾರವನ್ನು ಮತ್ತೆ ಕೆಣಕಿದ ಬಸವರಾಜ್ ಬೊಮ್ಮಾಯಿ

    – ಅಧಿಕಾರ ಕೈ ತಪ್ಪಿದ್ದಕ್ಕೆ ಎಂಟು ತಿಂಗಳಿಂದ ಕಾರ್ಯಕರ್ತರು ದುಃಖದಲ್ಲಿದ್ದಾರೆ

    ಗದಗ: ಕೆಲವೇ ದಿನಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗುವುದು ಗ್ಯಾರೆಂಟಿ ಎಂದು ಶಾಸಕ ಬಸವರಾಜ್ ಬೊಮ್ಮಾಯಿ ಅವರು, ಸಮ್ಮಿಶ್ರ ಸರ್ಕಾರವನ್ನು ಮತ್ತೆ ಕೆಣಕಿದ್ದಾರೆ.

    ನಗರದಲ್ಲಿ ನಡೆದ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಶಾಸಕರು, ಬಿ.ಎಸ್.ಯಡಿಯೂರಪ್ಪ ಅವರ ಹೇಗೆ ಸಿಎಂ ಅಂತ ಕೇಳಬೇಡಿ. ಅದನ್ನು ಹೇಳುವುದಕ್ಕೆ ಆಗಲ್ಲ ಎಂದು ಹೇಳುವ ಮೂಲಕ ಸಮ್ಮಿಶ್ರ ಸರ್ಕಾರದ ನಿದ್ದೆಗೆಡುವಂತೆ ಮಾಡಿದ್ದಾರೆ.

    ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಅಂತ ವಿಶ್ವಾಸವಿತ್ತು. ಕೇವಲ ಎಂಟು ಸ್ಥಾನ ಕಡಿಮೆ ಬಂದಿದ್ದರಿಂದ ಸರ್ಕಾರ ರಚನೆ ಆಗಲಿಲ್ಲ. ಇದರಿಂದ ಎಲ್ಲರಿಗೂ ನಿರಾಸೆಯಾಗಿದೆ. ಎಂಟು ತಿಂಗಳಿಂದ ನೀವು ದುಃಖದಲ್ಲಿ ಇದ್ದೀರಿ. ಚಿಂತೆ ಮಾಡಬೇಡಿ ಕೆಲವೇ ದಿನದಲ್ಲಿ ಮತ್ತೆ ಬಿ.ಎಸ್.ಯಡಿಯೂರಪ್ಪ ಸಿಎಂ ಆಗುತ್ತಾರೆ ಎಂದು ಕಾರ್ಯಕರ್ತರಿಗೆ ಬೊಮ್ಮಾಯಿ ಹೇಳಿದರು.

    ಲೋಕಸಭಾ ಚುನಾವಣೆಗೆ ಭಾರೀ ಸಿದ್ಧತೆ ನಡೆದಿದೆ. ನಿಮ್ಮ ಶ್ರಮ ವ್ಯರ್ಥವಾಗಬಾರದು. ಆಶಾವಾದಿಗಳಾಗಿ ಇರಬೇಕಾಗಿದ್ದು, ರಾಜಕೀಯ ನಿಂತ ನೀರಲ್ಲ. ರಾಜಕಾರಣದಲ್ಲಿ ಬದಲಾವಣೆಗಳು ಆಗುತ್ತಲೇ ಇರುತ್ತವೆ. ಮುಂದಿನ ದಿನಗಳಲ್ಲಿ ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗುತ್ತಾರೆ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತಾರೆ ಎಂದು ಕಾರ್ಯಕರ್ತರಿಗೆ ಹುಮ್ಮಸ್ಸು ತುಂಬಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಅಶೋಕ್ ಖೇಣಿಯನ್ನ ಜನರು ಮನೆಯಲ್ಲಿ ಕೂರಿಸಿದ್ದು ಯಾಕೆ: ಎಚ್‍ಡಿಕೆ ಮಾತಲ್ಲಿ ಕೇಳಿ

    ಅಶೋಕ್ ಖೇಣಿಯನ್ನ ಜನರು ಮನೆಯಲ್ಲಿ ಕೂರಿಸಿದ್ದು ಯಾಕೆ: ಎಚ್‍ಡಿಕೆ ಮಾತಲ್ಲಿ ಕೇಳಿ

    ಬೆಂಗಳೂರು: ಮಾಜಿ ಶಾಸಕ ಅಶೋಕ್ ಖೇಣಿ ಸಮ್ಮಿಶ್ರ ಸರ್ಕಾರದಲ್ಲಿ ನನಗೆ ಬೆಂಬಲ ನೀಡಬಾರದು ಎಂದು ಜನಗಳೇ ಅವರನ್ನೇ ಮನೆಯಲ್ಲಿ ಕೂರಿಸಿದ್ದಾರೆ ಎಂದು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

    ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ನಡೆದ ಚರ್ಚೆಯಲ್ಲಿ ಸಿಎಂ ವಿರೋಧ ಪಕ್ಷದ ವಿರೋಧ ನಾಯಕರ ಹೇಳಿಕೆಗಳಿಗೆ ತಿರುಗೇಟು ನೀಡುತ್ತಿದ್ದರು. ಚುನಾವಣೆ ಸಂದರ್ಭದಲ್ಲಿ ತಮ್ಮ ಪ್ರತಿ ಸ್ಪರ್ಧಿಗಳ ವಿರುದ್ಧ ಮಾತನಾಡಿದ್ದಾರೆ. ಅಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜೆಡಿಎಸ್ ವಿರುದ್ಧ ಮಾತನಾಡಿದರು. ರಾಜಕಾರಣದಲ್ಲಿ ಯಾರು ಶತ್ರುಗಳಲ್ಲಿ, ಮಿತ್ರರೂ ಅಲ್ಲ. ಬದಲಾದ ಪರಿಸ್ಥಿತಿ ಮತ್ತು ಸನ್ನಿವೇಶದಲ್ಲಿ ಇಂದು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾಗಿದೆ ಎಂದು ತಿಳಿಸಿದರು.

    ಈ ಹಿಂದೆ ನೈಸ್ ಕಂಪೆನಿಯ ಒಪ್ಪಂದವನ್ನು ರದ್ದುಗೊಳಿಸಲು ಸಂಪುಟ ಸಭೆಯನ್ನು ಕರೆದರೆ, ಬಿಜೆಪಿಯವರು 6 ಗಂಟೆಗಳ ಕಾಲ ಸಭೆಯಿಂದ ಹೊರ ನಡೆದಿದ್ದರು ಎಂದು ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ಈ ವೇಳೆ ಮಾಜಿ ಸಚಿವ ಎಸ್.ಆರ್.ಬೊಮ್ಮಾಯಿ ಈಗ ಖೇಣಿ ನಿಮ್ಮ ಬಳಿಯಲ್ಲಿದ್ದಾರೆ. ಇವಾಗ ನೀವೇ ಮುಖ್ಯಮಂತ್ರಿಯಾಗಿದ್ದು, ನೈಸ್ ಪ್ರಸ್ತಾಪವನ್ನು ಸಂಪುಟದಲ್ಲಿಟ್ಟು ಚರ್ಚಿಸಿ. ಈಗಲೂ ನಮ್ಮ ಮುಂದೆ ಜಯಚಂದ್ರ ವರದಿ ಇದೆ. ಆದ್ರೆ ನೈಸ್ ಪ್ರಸ್ತಾಪವನ್ನು ಸಂಪುಟದಲ್ಲಿಡಲು ನಿಮ್ಮಿಂದ ಸಾಧ್ಯವಾಗಲ್ಲ. ಅಶೋಕ್ ಖೇಣಿಗೆ ಕಾಂಗ್ರೆಸ್‍ನಿಂದ ದೊಡ್ಡ ಬೆಂಬಲವಿದೆ ಎಂದು ಟೀಕಿಸಿದರು.

    ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಇನ್ನು ಕಾಲಾವಕಾಶವಿದ್ದು, ನೈಸ್ ಕಂಪೆನಿ ಪ್ರಸ್ತಾಪವನ್ನು ಸಂಪುಟದಲ್ಲಿ ಇಡುತ್ತೇವೆಯೋ ಇಲ್ಲವೋ ಎಂಬುವುದನ್ನು ಮುಂದಿನ ದಿನಗಳಲ್ಲಿ ತಿಳಿಯಲಿದೆ ಅಂತಾ ಉತ್ತರಿಸಿದರು.

  • ಆಯ್ತು ಬಿಡ್ರಪ್ಪ, ನನ್ನ ಕೈಯಿಂದ ಆಗೋದಿಲ್ಲ ನಿಮಗೆ ಹೇಳೋದಕ್ಕೆ ಬರ್ತೀನಿ : ಬಿಎಸ್‍ವೈ

    ಆಯ್ತು ಬಿಡ್ರಪ್ಪ, ನನ್ನ ಕೈಯಿಂದ ಆಗೋದಿಲ್ಲ ನಿಮಗೆ ಹೇಳೋದಕ್ಕೆ ಬರ್ತೀನಿ : ಬಿಎಸ್‍ವೈ

    ಬೆಂಗಳೂರು: ಬಿಜೆಪಿ ಕಚೇರಿ ಬಳಿ ಪ್ರತಿಭಟನೆ ನಡೆಸುತ್ತಿದ್ದರೂ ನಮ್ಮನ್ನು ಭೇಟಿ ಮಾಡಲೇ ಇಲ್ಲ ಎಂದು ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಮಂಗಳವಾರ ಬಿಎಸ್ ಯಡಿಯೂರಪ್ಪ, ಮಾಜಿ ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ, ರಾಮಚಂದ್ರ ಗೌಡರ ಜೊತೆ ಧರಣಿ ಸ್ಥಳಕ್ಕೆ ಆಗಮಿಸಿದರು.

    ಈ ವೇಳೆ, ಯಡಿಯೂರಪ್ಪರನ್ನು ರೈತ ಮುಖಂಡರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ನೀವು ಕೊಟ್ಟ ಮಾತನ್ನು ಮೊದಲು ಉಳಿಸಿಕೊಳ್ಳಿ ಎಂದು ಆಗ್ರಹಿಸಿದರು. ಈ ವೇಳೆ ಯಡಿಯೂರಪ್ಪ ಹೋಗಿ ಸಿಎಂ ಮನೆ ಮುಂದೆ ಪ್ರತಿಭಟನೆ ಮಾಡಿ ಅಂತಾ ಹೇಳುತ್ತಲೇ ಹೋರಾಟಗಾರರು ಗರಂ ಆದರು.

    ಮುಂದೆ ಬಿಎಸ್‍ವೈಗೆ ಮಾತನಾಡಲು ಅವಕಾಶ ನೀಡದೇ ಧಿಕ್ಕಾರ ಕೂಗಿದರು. ಬಸವರಾಜ್ ಬೊಮ್ಮಾಯಿ ಕೈಮುಗಿದು ಬೇಡಿದರೂ ಹೋರಾಟಗಾರರು ಕೇಳಲಿಲ್ಲ. ಹಸಿರು ಶಾಲೂ ಬೀಸಿದರು. ಈ ವೇಳೆ ಕೂಗಾಟ, ತಳ್ಳಾಟ ನಡೆಯಿತು. ಬಿಎಸ್‍ವೈಗೆ ಘೇರಾವ್ ಹಾಕುವ ಯತ್ನವೂ ನಡೆಯಿತು. ಕೊನೆಗೆ ಅಲ್ಲಿಂದ ಯಡಿಯೂರಪ್ಪ ನಿರ್ಗಮಿಸಿದರು. ಈ ವೇಳೆ ಫಕೀರವ್ವ ಎಂಬ ಮಹಿಳೆ ಅಸ್ವಸ್ಥರಾದರು.

    ಈ ನಡುವೆ ಬುಧವಾರ ಮಹದಾಯಿ ಹೋರಾಟಗಾರರು ರಾಜಭವನ, ಸಿಎಂ ಸಿದ್ದರಾಮಯ್ಯ ನಿವಾಸ, ಎಚ್ ದೇವೇಗೌಡ ನಿವಾಸಕ್ಕೆ ಪಾದಯಾತ್ರೆ ಕೈಗೊಳ್ಳಲು ನಿರ್ಧರಿಸಿದ್ದಾರೆ. ಇದನ್ನೂ ಓದಿ: Exclusive ಮಹದಾಯಿ ಪ್ರತಿಭಟನೆ, ಅನಂತ್‍ ಕುಮಾರ್ ಭಾಷಣ: ಬಿಜೆಪಿ ಸಭೆಯ ಇನ್‍ಸೈಡ್ ಸ್ಟೋರಿ ಇಲ್ಲಿದೆ

    ರೈತರು ಮತ್ತು ಬಿಎಸ್‍ವೈ ನಡುವೆ ಮಾತುಕತೆ ಹೀಗೆ ನಡೆಯಿತು:
    ಬಿಎಸ್‍ವೈ – ಸಿಎಂ ಮನೆ ಮುಂದೆಯೇ ಹೋಗಿ ಧರಣಿ ನಡೆಸಿ.. ಇಲ್ಲಿ ಯಾಕೆ ಬಂದು ಧರಣಿ ಮಾಡುತ್ತೀರಾ..?
    ರೈತರು – ಅದು ನಮ್ಮ ಕೈಯಾಗ ಸಾಧ್ಯ ಇಲ್ರಿ.. ನೀವು ಕೊಟ್ಟ ಭರವಸೆಯನ್ನ ಮೊದಲು ಈಡೇರಿಸ್ರಿ ಸಾಯೇಬ್ರಾ.

    ಬಿಎಸ್‍ವೈ – ಗೋವಾ ಸಿಎಂ ಬರೆದಿರುವ ಪತ್ರವನ್ನ ನಿಮಗೆ ಕೊಡುತ್ತೇನೆ. ನನ್ನ ಕೈಯಲ್ಲಿ ಆಗುವುದು ಇಷ್ಟೇನೆ.. ನೀವು ಅದನ್ನ ತೆಗೆದುಕೊಂಡು ಹೋಗಿ ನ್ಯಾಯಾಧೀಕರಣಕ್ಕೆ ಕೊಡಿ
    ರೈತರು – ಅದೆಲ್ಲಾ ಆಗಲ್ರೀ. ಶೆಟ್ರು ಮನೆ ಮುಂದ ಹೋದಾಗ ನಿವ್ಯಾಕ ಬಂದಿದ್ದು. ಅವತ್ತು ಸಮಾವೇಶದಾಗ ಓದಿದ ಪತ್ರ ನಮಗೆ ಕೊಡಿ. ಗೋವಾ ಸಿಎಂ ರೈಟಿಂಗ್‍ನಲ್ಲಿ ಕೊಟ್ಟ ಕಾಪಿಯನ್ನ ನಮಗೆ ಕೊಡಿ

    ಬಸವರಾಜ ಬೊಮ್ಮಯಿ – ನಿಮ್ಮ ಕೈ ಮುಗೀತಿನ್ರಪ್ಪ, ಸುಮ್ನೆ ರಾಜಕೀಯ ಮಾಡ್ತಾಯಿರೋದು ಕಾಂಗ್ರೆಸ್ ಮಂದಿ. ನಮ್ಮ ಮಾತು ಕೇಳಿ ಪ್ರತಿಭಟನೆ ವಾಪಸ್ಸು ತಕ್ಕೊಳಿ. ಈ ಹಿಂದಾ ಕೂಡ ಕೃಷ್ಣಾ ಗಲಾಟೆಯಾದಾಗ ರೈತರೇ ನ್ಯಾಯಾಧೀಕರಣದ ಮುಂದೆ ಹೋಗಿದ್ರು. ಆಗ ನ್ಯಾಯ ನಮಗೆ ಸಿಕ್ಕಿತ್ತು. ಈಗ್ಲೂ ಹಂಗೆ ಮಾಡುದ್ರಾತು. ಇದನ್ನೂ ಓದಿ: ಮಹದಾಯಿಗಾಗಿ ಉತ್ತರ ಕರ್ನಾಟಕ ಬಂದ್: ಎಲ್ಲಿ ಬಂದ್? ಏನ್ ಇರುತ್ತೆ? ಏನ್ ಇರಲ್ಲ?

    ರೈತರು – ರೀ ಸಾಯೇಬ್ರಾ. ನಿಮ್ಮ ಸಾಧನೆ ನಾವು ನೋಡಿದ್ದೀವಿ ನೀವು ತೆಪ್ಪಗಿರಿ. ನಾವು ಬಂದಿರೋದಾ ಯಡಿಯ್ಯೂರಪ್ಪ ಜೊತೆ ಮಾತನಾಡ್ಲಿಕ್ಕಾ. ನಿಮ್ಮ ಜೊತೆ ಅಲ್ಲ, ಸುಮ್ಮನ ಹೊರಡಿ ಇಲ್ಲಿಂದ
    ಬಿಎಸ್‍ವೈ – ಆಯ್ತು ಬಿಡ್ರಪ್ಪ ನನ್ನ ಕೈಯಿಂದ ಆಗೋದಿಲ್ಲ ನಿಮಗೆ ಹೇಳೋದಕ್ಕೆ. ಬರ್ತೀನಿ ಬಿಡ್ರಪ್ಪ. ಇದನ್ನೂ ಓದಿ: ಮಹದಾಯಿ ಬಂದ್- ಬುಧವಾರದ ವಿಟಿಯು ಪರೀಕ್ಷೆಗಳು ಮುಂದೂಡಿಕೆ