Tag: Basavanna Vachana

  • ತೇಲಲೀಯದು ಗುಂಡು, ಮುಳುಗಲೀಯದು ಬೆಂಡು: ಅನರ್ಹರ ಕಾಲೆಳೆದ ಎಚ್‍ಡಿಕೆ

    ತೇಲಲೀಯದು ಗುಂಡು, ಮುಳುಗಲೀಯದು ಬೆಂಡು: ಅನರ್ಹರ ಕಾಲೆಳೆದ ಎಚ್‍ಡಿಕೆ

    ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ಅವರು ಬಸವಣ್ಣನವರ ವಚನದ ಮೂಲಕ ಅನರ್ಹ ಶಾಸಕರ ಪರಿಸ್ಥಿತಿಯ ಕುರಿತು ಲೇವಡಿ ಮಾಡಿದ್ದಾರೆ.

    ಟ್ವೀಟ್ ಮಾಡಿರುವ ಮಾಜಿ ಸಿಎಂ, ಕಾಲಲಿ ಕಟ್ಟಿದ ಗುಂಡು… ಕೊರಳಲಿ ಕಟ್ಟಿದ ಬೆಂಡು… ತೇಲಲೀಯದು ಗುಂಡು.. ಮುಳುಗಲೀಯದು ಬೆಂಡು… ಇಂತಪ್ಪ ಸಂಸಾರಶರಧಿಯ ದಾಂಟಿಸಿ ಕಾಲಾಂತಕನೆ ಕಾಯೋ ಕೂಡಲಸಂಗಮ. ಅರ್ಹತೆ ಕಳೆದುಕೊಂಡ ಶಾಸಕರ ಪಾಡು ನೋಡಿ ಹೇಳಬೇಕೆನಿಸಿದ್ದು ಎಂದು ವ್ಯಂಗ್ಯವಾಡಿದ್ದಾರೆ.

    ಸಂಸಾರದಲ್ಲಿ ವ್ಯಕ್ತಿಯ ಕರುಣಾಜನಕ ಸ್ಥಿತಿಯನ್ನು ವಿಶ್ವಗುರು ಬಸವಣ್ಣನವರು ತಮ್ಮ ವಚನದ ಮೂಲಕ ತಿಳಿಸಿದ್ದಾರೆ. ಈ ವಚವನ್ನು ಎಚ್.ಡಿ.ಕುಮಾರಸ್ವಾಮಿ ಅವರು ಅನರ್ಹ ಶಾಸಕರಿಗೆ ಹೋಲಿಕೆ ಮಾಡಿದ್ದಾರೆ. ಅನರ್ಹರ ಪರಿಸ್ಥಿತಿ ಹೇಗಾಗಿದೆ ಎಂದರೆ ಅತ್ತಲೂ ಇಲ್ಲ, ಇತ್ತಲೂ ಎಂದು ಗೇಲಿ ಮಾಡಿದ್ದಾರೆ.

    ಇದಕ್ಕೂ ಮುನ್ನ ನಗರದ ಜೆ.ಪಿ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಮಾಜಿ ಸಿಎಂ, ಉಪ ಚುನಾವಣೆಗೆ ಸುಪ್ರೀಂಕೋರ್ಟ್ ತಡೆ ನೀಡಿರುವುದಕ್ಕೆ ಕೇಂದ್ರ ಸರ್ಕಾರ, ಬಿಜೆಪಿ ಹಾಗೂ ಚುನಾವಣಾ ಆಯೋಗದ ವಿರುದ್ಧ ಕಿಡಿಕಾರಿದ್ದರು. ಇತಿಹಾಸದಲ್ಲಿ ಮೊದಲ ಬಾರಿಗೆ ಚುನಾವಣೆ ಆಯೋಗ ಕೋರ್ಟ್ ಮುಂದೆ ಚುನಾವಣೆ ಮುಂದೂಡಬಹುದು ಎಂದು ಸ್ವಯಂಕೃತವಾಗಿ ಹೇಳಿದೆ. ಸಾಂವಿಧಾನಿಕ ಸಂಸ್ಥೆಯ ಈ ನಡವಳಿಕೆ ಸರಿಯಲ್ಲ. ಚುನಾವಣೆ ಆಯೋಗದ ಮೇಲೆ ಪ್ರಭಾವ ಬೀರಿದ್ದು ಯಾರು ಅನ್ನುವುದು ಯಕ್ಷ ಪ್ರಶ್ನೆಯಾಗಿದೆ. ಆದರೆ ಕೇಂದ್ರ ಸರ್ಕಾರ ಸಾಂವಿಧಾನಿಕ ಮತ್ತು ಸ್ವತಂತ್ರ ಸಂಸ್ಥೆಗಳನ್ನು ಕೈ ಗೊಂಬೆ ಮಾಡಿಕೊಂಡಿದೆ ಎಂದು ಹೇಳಿದ್ದರು.

    ನೆರೆ ಪರಿಹಾರ ತರಲು ಕೇಂದ್ರ ನಾಯಕರನ್ನು ಭೇಟಿ ಮಾಡಲು ಯಡಿಯೂರಪ್ಪನವರಿಗೆ ಸಮಯ ಇಲ್ಲ. ಆದರೆ ಚುನಾವಣೆ ಘೋಷಣೆಯಾದ ಕೂಡಲೇ ತರಾತುರಿಯಲ್ಲಿ ಯಡಿಯೂರಪ್ಪ ದೆಹಲಿಗೆ ಹೋದರು. ಅಲ್ಲಿ ಏನು ಚರ್ಚೆ ಆಗಿದೆ. ನೆರೆ ಪರಿಹಾರದ ಬಗ್ಗೆ ಚರ್ಚೆ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

  • ಪಡ್ಡೆಹುಲಿಯ ಬಾಯಲ್ಲಿ ಬಸವಣ್ಣನ ವಚನ!

    ಪಡ್ಡೆಹುಲಿಯ ಬಾಯಲ್ಲಿ ಬಸವಣ್ಣನ ವಚನ!

    ಬೆಂಗಳೂರು: ಎಂ. ರಮೇಶ್ ರೆಡ್ಡಿ ನಿರ್ಮಾಣ ಮಾಡಿರೋ ಪಡ್ಡೆಹುಲಿ ಚಿತ್ರ ಹಾಡುಗಳ ಮೂಲಕವೇ ಹುಟ್ಟಿಸಿರೋ ಕ್ರೇಜ್ ಸಣ್ಣದ್ದೇನಲ್ಲ. ಆದರೆ ನಿರ್ದೇಶಕ ಗುರುದೇಶಪಾಂಡೆ ಒಂದರ ಹಿಂದೊಂದರಂತೆ ಹೊಸ ಪ್ರಯೋಗದ, ಎಲ್ಲರನ್ನೂ ಸೆಳೆಯುವಂಥಾ ಹಾಡುಗಳನ್ನು ರೂಪಿಸುತ್ತಲೇ ಇದ್ದಾರೆ. ಇದೀಗ ಮಹಾಶಿವರಾತ್ರಿಯ ಕೊಡುಗೆಯೆಂಬಂತೆ ಬಸವಣ್ಣನವರ ಪ್ರಸಿದ್ಧ ವಚನವೊಂದನ್ನು ಹಾಡಾಗಿಸಿ ಬಿಡುಗಡೆಗೊಳಿಸಿದ್ದಾರೆ.

    ಅಜನೀಶ್ ಲೋಕನಾಥ್ ಈ ಮೂಲಕ ಮತ್ತೊಂದು ಕಮಾಲ್ ಸೃಷ್ಟಿಸಿದ್ದಾರೆ. ಬಸವಣ್ಣನವರ ಜನಪ್ರಿಯ ‘ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ’ ಎಂಬ ವಚನಕ್ಕೆ ಯುವ ಸಮುದಾಯವನ್ನು ಆವರಿಸಿಕೊಳ್ಳುವಂಥಾ ಸಂಗೀತ ಸಂಯೋಜನೆ ಮಾಡಿದ್ದಾರೆ. ಜೀವನದ ಅಸಲಿ ಮೌಲ್ಯ ಸಾರುವ ಈ ವಚನವನ್ನು ಯುವ ಸಮುದಾಯಕ್ಕೂ ದಾಟಿಸುವಂಥಾ ಈ ಪ್ರಯತ್ನಕ್ಕೆ ನಾರಾಯಣ ಶರ್ಮಾ ಅದ್ಭುತವಾಗಿಯೇ ಧ್ವನಿಯಾಗಿದ್ದಾರೆ. ಈ ಹಾಡಿನ ಮೂಲಕವೇ ನಾರಾಯಣ ಶರ್ಮಾ ಕನ್ನಡದ ಭರವಸೆಯ ಗಾಯಕರಾಗಿಯೂ ಹೊರ ಹೊಮ್ಮಿದ್ದಾರೆ.

    ಇದು ಈಗಿನ ಕಾಲಕ್ಕೆ ತುರ್ತಾಗಿ ಬೇಕಾಗಿದ್ದ ಪ್ರಯತ್ನ. ಇದರ ಮೂಲಕವೇ ಕೆ.ಮಂಜು ಅವರ ಪುತ್ರ ಶ್ರೇಯಸ್ ಮತ್ತೊಂದು ಅಚ್ಚರಿದಾಯಕ ಶೇಡಿನಲ್ಲಿಯೂ ಗಮನ ಸೆಳೆದಿದ್ದಾರೆ. ಈ ಹಾಡು ಮೂಡಿ ಬಂದಿರೋ ರೀತಿಯೇ ಶ್ರದ್ಧೆಗೆ ಯಾವತ್ತಿಗೂ ಸೋಲಿಲ್ಲ ಎಂಬುದಕ್ಕೂ ತಾಜಾ ಉದಾಹರಣೆ. ಒಂದೇ ಗುಕ್ಕಿನಲ್ಲಿ ಒಳಗಿಳಿದು ಬಿಡುವಂತಿರೋ ಈ ಹಾಡು ಬಸವಣ್ಣನವರ ವಚನಗಳನ್ನು ಈ ಪೀಳಿಗೆಗೂ ಪರಿಣಾಮಕಾರಿಯಾಗಿಯೇ ದಾಟಿಸಿರೋದು ನಿಜವಾದ ವಿಶೇಷ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv