Tag: Basavana Gowda Patil Yatnal

  • ತಂದೆ, ಮಗನಿಂದ ಸುಳ್ಳು ಸುದ್ದಿ – ಮತ್ತೆ ಯತ್ನಾಳ್ ಗುಡುಗು

    ತಂದೆ, ಮಗನಿಂದ ಸುಳ್ಳು ಸುದ್ದಿ – ಮತ್ತೆ ಯತ್ನಾಳ್ ಗುಡುಗು

    ವಿಜಯಪುರ: ಬಿಜೆಪಿ ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಾಮಾಜಿಕ ಜಾಲತಾಣದಲ್ಲಿ ಹೊಸ ಪೋಸ್ಟ್ ಮಾಡಿದ್ದಾರೆ. ಪೋಸ್ಟ್ ನಲ್ಲಿ ಯತ್ನಾಳ್ ದೆಹಲಿ ಪ್ರಯಾಣದ ಬಗ್ಗೆ ಸ್ಪಷ್ಟನೆ ನೀಡಿದ್ದು, ನಿನ್ನೆ ಮಾಧ್ಯಮಗೋಷ್ಠಿ ನಡೆಸಿ ಯತ್ನಾಳ್ ವಿರುದ್ಧ ಹರಿಹಾಯ್ದಿದ್ದ ಬಿಜೆಪಿ ಸಚಿವರ ವಿರುದ್ಧ ಯತ್ನಾಳ್ ಗುಡುಗಿದ್ದಾರೆ.

    ಪೋಸ್ಟ್ ನಲ್ಲಿ ಏನಿದೆ?
    ಎಲ್ಲರಿಗೂ ನಮಸ್ಕಾರಗಳು
    ರವಿವಾರ ರಾತ್ರಿ ನಾನು ವಿಜಯಪುರದ ಶ್ರೀ ಸಿದ್ಧೇಶ್ವರ ಸಂಸ್ಥೆಯ ಅಡಿಯಲ್ಲಿ ನಿರ್ಮಿಸಲಾದ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಶಿಶು ನಿಕೇತನ ಶಾಲೆಯ ಸಿ.ಬಿ.ಎಸ್.ಇ ನೊಂದಣಿ ತುರ್ತು ಕಾರ್ಯ ನಿಮಿತ್ತ ನವ ದೆಹಲಿಗೆ ಬಂದಿದ್ದೇನೆ. ನನಗೆ ಪಕ್ಷದ ಹೈಕಮಾಂಡ್ ಯಾವುದೇ ರೀತಿಯ ತುರ್ತು ಬುಲಾವ್ ಆಗಲಿ ಅಥವಾ ಸಮಯ ಕೊಟ್ಟು ನನ್ನ ವಿಚಾರಣೆಗೆ ಕರೆದಿಲ್ಲ.

    ನಾನು ಯಾವುದೇ ನಾಯಕರ ಭೇಟಿಗೆ ಸಮಯ ಕೇಳಲಿಲ್ಲ. ಮಾಧ್ಯಮಗಳಲ್ಲಿ ತಂದೆ ಮತ್ತು ಮಗ ಸುಳ್ಳು ಸುದ್ದಿ ಮಾಡಿಸಿದ್ದಾರೆ. ಬಲ್ಲ ಮೂಲಗಳಿಂದ ಎಂದು ಹೇಳಿಸಿ ಮತ್ತು ಬರೆಸಿ ರಾಜ್ಯದ ಜನರಲ್ಲಿ ಪಕ್ಷದ ಶಾಸಕರು ಮತ್ತು ಕಾರ್ಯಕರ್ತರಲ್ಲಿ ಆತಂಕ ಉಂಟು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

    ಯತ್ನಾಳ್‍ಗೆ ಮುಖಭಂಗ, ಬೀಗ್ ಶಾಕ್ ಎಚ್ಚರಿಕೆ ಮತ್ತು ಬಾಯಿಗೆ ಬೀಗ ಅಂತ ವ್ಯವಸ್ಥಿತ ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಯಾರನ್ನೂ ಭೇಟಿಯಾಗಿಲ್ಲ ಮತ್ತು ಯಾರ ಸಮಯ ಕೇಳಲಿಲ್ಲ. ನನ್ನ ಹೋರಾಟ ನನ್ನ ಆದರ್ಶ ಗುರು ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಹಾಗೂ ನಮ್ಮ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ಅವರ ಸಂಕಲ್ಪದ ಕುಟುಂಬ ರಾಜಕಾರಣ ಮತ್ತು ಭ್ರಷ್ಟಾಚಾರ ಮುಕ್ತ ಭಾರತದ ಭಾಗವಾಗಿದೆ. ವೈಯಕ್ತಿಕ ವ್ಯಕ್ತಿ ವಿರುದ್ಧ ಅಲ್ಲ. ನನ್ನ ಮಾತೃ ಪಕ್ಷದ ವಿರುದ್ಧ ಅಲ್ಲವೇ ಅಲ್ಲ. ನಿನ್ನೆ ಕರ್ನಾಟಕ ರಾಜ್ಯದ ಇಬ್ಬರು ಸಚಿವರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ನನ್ನ ಬಗ್ಗೆ ಮತ್ತು ನಮ್ಮ ಪೂಜ್ಯರ ಬಗ್ಗೆ ಅತ್ಯಂತ ಹಗುರವಾಗಿ ಮಾತನಾಡಿದ್ದಾರೆ. ಅದಕ್ಕೆ ಸೂಕ್ತ ಉತ್ತರ ದೆಹಲಿಯಿಂದ ಬಂದ ಮೇಲೆ ಕೊಡುತ್ತೇನೆ ಎಂದಿದ್ದಾರೆ.

    ಹಿಂದೂ ಸಮಾಜದಲ್ಲಿನ ಸಾಮಾಜಿಕ ನ್ಯಾಯಕ್ಕಾಗಿ ನನ್ನ ಹೋರಾಟ ನಿಲ್ಲುವುದಿಲ್ಲ, ಅಂಜುವುದಿಲ್ಲ, ಬಗ್ಗುವದು ಇಲ್ಲ ಮತ್ತು ಪಲಾಯನ ಇಲ್ಲವೇ ಇಲ್ಲ. ನ: ಧೈನ್ಯಂ ನ: ಪಲಾಯನಮ್
    ಸತ್ಯ ಮೇವ ಜಯತೆ ಎಂದು ಬರೆದು ಪೋಸ್ಟ್ ಹಾಕಿದ್ದಾರೆ.

  • ಕೇಂದ್ರ ಸಚಿವರೇ ಖಡಕ್ಕಾಗಿರಿ – ಅಂಗಡಿಗೆ ಯತ್ನಾಳ್ ಸಲಹೆ

    ಕೇಂದ್ರ ಸಚಿವರೇ ಖಡಕ್ಕಾಗಿರಿ – ಅಂಗಡಿಗೆ ಯತ್ನಾಳ್ ಸಲಹೆ

    ವಿಜಯಪುರ: ಕೇಂದ್ರ ಸಚಿವರೇ ನೀವು ಖಡಕ್ಕಾಗಿರಿ ಎಂದು ಕೇಂದ್ರ ರಾಜ್ಯ ರೈಲ್ವೇ ಸಚಿವ ಸುರೇಶ್ ಅಂಗಡಿಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಲಹೆ ನೀಡಿದರು.

    ಇಂದು ವಿಜಯಪುರದಲ್ಲಿ ವಿಜಯಪುರ-ಯಶವಂತಪುರ ನೂತನ ರೈಲು ಸೇವೆ ಉದ್ಗಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಯತ್ನಾಳ್, ಜನೋಪಯೋಗಿ ರೈಲು ಸೇವೆ ಮತ್ತು ರೈಲು ನಿಲುಗಡೆಗೆಯ ಬಗ್ಗೆ ರೈಲ್ವೆ ಅಧಿಕಾರಿಗಳು ಸಬೂಬು ಹೇಳುತ್ತಾರೆ. ಇದು ಕಾರ್ಯಸಾಧುವಲ್ಲ ಎಂದು ನೆಪ ಹೇಳುತ್ತಾರೆ. ಈ ರೀತಿಯ ಅಧಿಕಾರಿಗಳಿಗೆ ಕಿವಿಗೊಡಬೇಡಿ. ಅವರಿಗೆ ಖಡಕ್ಕಾಗಿ ಮಾಡಲೇಬೇಕೆಂದು ಸೂಚಿಸಿ ಎಂದು ಹೇಳಿದರು.

    ಇದೇ ವೇಳೆ ವಿಜಯಪುರ-ಯಶವಂತಪುರ ನೂತನ ರೈಲು ವೇಳಾಪಟ್ಟಿಗೂ ಯತ್ನಾಳ್ ಆಕ್ಷೇಪ ವ್ಯಕ್ತಪಡಿಸಿದ್ದು, ಮಧ್ಯಾಹ್ನ 1 ಗಂಟೆಗೆ ಬೆಂಗಳೂರಿಗೆ ರೈಲು ಬಿಟ್ಟರೆ ಹೇಗೆ? ಇದು ಸರಿಯಿಲ್ಲ ಸಂಜೆ 7 ಗಂಟೆಗೆ ವಿಜಯಪುರದಿಂದ ರೈಲು ಹೊರಡುವಂತಾಗಬೇಕು ಎಂದು ಆಗ್ರಹಿಸಿದರು.