Tag: basava

  • ಇಬ್ಬರ ಜಗಳದಲ್ಲಿ ಬೀದಿಯಲ್ಲಿ ನಿಂತ ದೇವರ ಬಸವ

    ಇಬ್ಬರ ಜಗಳದಲ್ಲಿ ಬೀದಿಯಲ್ಲಿ ನಿಂತ ದೇವರ ಬಸವ

    ಮಂಡ್ಯ: ಗ್ರಾಮವೊಂದರ 2 ಗುಂಪುಗಳ ಪ್ರತಿಷ್ಠೆಯಿಂದ ದೇವಾಲಯದ ಪ್ರವೇಶ ಸಿಗದೆ ದೇವರ ಬಸವ ದೇವಸ್ಥಾನದ ಗೇಟ್ ಮುಂದೆ ಕಾದು ಕುಳಿತಿರುವ ಘಟನೆ ಮದ್ದೂರಿನ ದೊಡ್ಡರಸಿನಕೆರೆ ಗ್ರಾಮದಲ್ಲಿ ನಡೆದಿದೆ.

    ದೊಡ್ಡರಸಿನಕೆರೆ ಗ್ರಾಮದಲ್ಲಿ ಸಣ್ಣಿರಕ್ಕಿರಾಯನ ದೇವಾಲಯವಿದ್ದು, ಕುರುಬ ಸಮುದಾಯದವರು ಹಿಂದಿನಿಂದಲು ದೇವಸ್ಥಾನವನ್ನು ನಡೆಸಿಕೊಂಡು ಬರುತ್ತಿದ್ದರು. ಕಳೆದ ಕೆಲವು ವರ್ಷಗಳ ಹಿಂದೆ ದೇವಸ್ಥಾನ ಊರಿನ ನಿವೃತ್ತ ಪೊಲೀಸ್ ಅಧಿಕಾರಿ ಜಯಪ್ರಕಾಶ್ ಎಂಬುವವರು ದೇವಸ್ಥಾನ ಜೀರ್ಣೋದ್ದಾರ ಮಾಡಿಸೋಣ ಎಂದು ಎಂಟ್ರಿ ಕೊಟ್ಟರು. ಅವರು ದೇವಾಲಯದಲ್ಲಿ ಭಕ್ತಾಧಿಗಳಿಂದ ಸಂಗ್ರಹವಾಗಿದ್ದ ಕಾಣಿಕೆ ಹಣದ ಜೊತೆ ವೈಯಕ್ತಿಕ ಹಣದಿಂದಲೂ ದೇವಾಲಯ ಜೀರ್ಣೋದ್ದಾರ ಮಾಡಿದ್ದಾರೆ. ಇದನ್ನೂ ಓದಿ:  ಡೋಣಿ ನದಿ ಸೇತುವೆಯಲ್ಲಿ ಬಿರುಕು – ಆಗಮಿಸಲಿದ್ದಾರೆ ದೆಹಲಿ ಎಂಜಿನಿಯರ್‌ಗಳು

    ಬಳಿಕ ದೇವಸ್ಥಾನ ಟ್ರಸ್ಟ್ ರಚಿಸಿಕೊಂಡು ಅವರೇ ಅಧ್ಯಕ್ಷಕರು ಸಹ ಆಗಿದ್ದಾರೆ. ಬಳಿಕ ಅರ್ಚಕರ ವಿಷಯದಲ್ಲಿ ಊರಿನ ಗ್ರಾಮಸ್ಥರೊಂದಿಗೆ ಜಗಳ ಆರಂಭವಾಗಿದ್ದು, ಬೇರೆ ಸಮುದಾಯದ ಅರ್ಚಕರನ್ನು ನೇಮಿಸಲು ಮುಂದಾಗಿದ್ದಾರೆ.

    ಗ್ರಾಮಸ್ಥರು ಮಾತ್ರ ಕುರುಬ ಸಮುದಾಯದವರೆ ತಲೆತಲಾಂತರದಿಂದ ಪೂಜೆ ಪುನಸ್ಕಾರ ಮಾಡಿಕೊಂಡು ಬರ್ತಿದ್ದಾರೆ. ಅವರೇ ಮುಂದುವರೆಯಲಿ ಎಂದು ಹೇಳ್ತಿದ್ದಾರೆ. ಆದರೆ ಗ್ರಾಮಸ್ಥರ ಮಾತಿಗೆ ಒಪ್ಪದ ಟ್ರಸ್ಟ್ ನ ಅಧ್ಯಕ್ಷ ಜಯಪ್ರಕಾಶ್ ಮಂತ್ರ ಪಠನೆ ಬರಲ್ಲ ಎಂದು ಸಬೂಬು ಹೇಳಿಕೊಂಡು ದೇವಾಲಯಕ್ಕೆ ಒಂದು ವಾರದಿಂದ ಬೀಗ ಜಡಿದು ದೇವರಿಗೇ ದಿಗ್ಬಂಧನ ಹಾಕಿ ಹೋಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಇದನ್ನೂ ಓದಿ:  ಫಸ್ಟ್ ಟೈಂ ಭಾರತೀಯ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ಮೈಕ್ ಟೈಸನ್

    ಇತ್ತ ಪ್ರತಿ ಸೋಮವಾರ ಸಣ್ಣಕ್ಕಿರಾಯನ ದರ್ಶನಕ್ಕೆ ಬರುತ್ತಿದ್ದ ದೇವರ ಬಸವ ನಿನ್ನೆ ಬೆಳಗ್ಗೆಯಿಂದಲು ಕಾದು ಕುಳಿತಿದ್ದಾನೆ. ದೇವಾಲಯಕ್ಕೆ ಬೀಗ ಹಾಕಿರುವುದರಿಂದ ಗೇಟ್ ಮುಂದೆಯೆ ಜಗ್ಗದೆ ಠಿಕಾಣಿ ಹೂಡಿದ್ದು, ಗ್ರಾಮಸ್ಥರ ಮನವೊಲಿಕೆಗೂ ಜಗ್ಗದೆ ಕುಳಿತಿದ್ದಾನೆ.

    ಒಟ್ಟಿನಲ್ಲಿ ತಮ್ಮ ತಮ್ಮ ಪ್ರತಿಷ್ಠೆಗಾಗಿ ದೇವರಿಗೆ ದಿಗ್ಬಂಧನ ವಿಧಿಸಿರುವುದು ಎಷ್ಟು ಸರಿ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

     

  • ಐದು ವರ್ಷದ ಸಮಸ್ಯೆಗೆ ಒಂದೇ ಗಂಟೆಯಲ್ಲಿ ಉತ್ತರ ನೀಡಿದ ಬಸವ

    ಐದು ವರ್ಷದ ಸಮಸ್ಯೆಗೆ ಒಂದೇ ಗಂಟೆಯಲ್ಲಿ ಉತ್ತರ ನೀಡಿದ ಬಸವ

    – ಬಸಪ್ಪನ ಪವಾಡಕ್ಕೆ ಭಕ್ತರ ಉಘೇ ಉಘೇ

    ಮಂಡ್ಯ: ಮಂಡ್ಯದ ಚೀರನಹಳ್ಳಿ ಗ್ರಾಮದಲ್ಲಿ ಐದು ವರ್ಷಗಳಿಂದ ದೇವಸ್ಥಾನದ ಅರ್ಚಕನನ್ನು ನೇಮಕ ಮಾಡಲು ಜನರಲ್ಲಿ ಎದ್ದಿದ್ದ ಗೊಂದಲಗೆ ಬಸಪ್ಪ ಒಂದೇ ಗಂಟೆಯಲ್ಲಿ ಉತ್ತರ ನೀಡಿದ್ದಾನೆ.

    ಚೀರನಹಳ್ಳಿ ಗ್ರಾಮದಲ್ಲಿ ಇರುವ ಉರುಗಮ್ಮದೇವಿ ದೇವಸ್ಥಾನದಲ್ಲಿ ಅರ್ಚಕನಾಗಿದ್ದ ಮಸಣಯ್ಯ ಐದು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಅಲ್ಲಿಂದ ಇಲ್ಲಿಯವರೆಗೆ ಯಾರನ್ನು ಅರ್ಚಕರನ್ನಾಗಿ ನೇಮಕ ಮಾಡುವುದು ಎಂದು ಗ್ರಾಮದ ಜನರಲ್ಲಿ ಗೊಂದಲ ನಿರ್ಮಾಣವಾಗಿತ್ತು. ಈ ಗೊಂದಲ ಬಗೆಹರಿಸಿಕೊಳ್ಳಲು ಇಂದು ಚಿಕ್ಕರಸಿನಕೆರೆಯ ಕಾಲಭೈರವೇಶ್ವರಸ್ವಾಮಿ ಬಸಪ್ಪನನ್ನು ಗ್ರಾಮಕ್ಕೆ ಕರೆಸಲಾಗಿತ್ತು. ಗ್ರಾಮಕ್ಕೆ ಬಂದ ಬಸಪ್ಪನಿಗೆ ಗ್ರಾಮಸ್ಥರು ಪೂಜೆ ಮಾಡಿ ಬರ ಮಾಡಿಕೊಂಡರು. ನಂತರ ಊರಿನ ಹೊರಭಾಗದಲ್ಲಿ ಇರುವ ಕಲ್ಯಾಣಿಯ ಬಳಿ ಅರ್ಚಕ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭ ಮಾಡಲಾಯಿತು. ಈ ವೇಳೆ ಚೀರನಹಳ್ಳಿ ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲಿನ ಸಾವಿರಾರು ಗ್ರಾಮಸ್ಥರು ಸೇರಿದ್ದರು.

    ಈ ಸಂದರ್ಭದಲ್ಲಿ ಅಷ್ಟೊಂದು ಜನರ ಮಧ್ಯ ಇದ್ದ ಅದೇ ಗ್ರಾಮದ ಶಿವಣ್ಣ ಅವರನ್ನು ಬಸಪ್ಪ ಕೊಂಬಿನಿಂದ ತಿವಿದು ಆಯ್ಕೆಯ ಸೂಚನೆ ನೀಡಿತು. ಬಳಿಕ ಶಿವಣ್ಣ ಅವರನ್ನು ನೂಕಿಕೊಂಡು ಬಂದು ಕಲ್ಯಾಣಿಯ ಒಳಗೆ ತಳಿತು. ಈ ಮೂಲಕ ಗ್ರಾಮದಲ್ಲಿದ್ದ ಐದು ವರ್ಷದ ಸಮಸ್ಯೆಯಾದ ಅರ್ಚಕ ನೇಮಕಾತಿಯನ್ನು ಬಸಪ್ಪ ಒಂದೇ ಗಂಟೆಯಲ್ಲಿ ಬಗೆಹರಿಸಿತು. ಈ ಪವಾಡವನ್ನು ಕಂಡ ಜನರು ಉಘೇ ಉಘೇ ಎಂದು ಕೂಗಿದರು.

  • ದರ್ಶನ್ ನಿರೀಕ್ಷೆಯಲ್ಲಿದ್ದ ಬಸವ ಸಾವು

    ದರ್ಶನ್ ನಿರೀಕ್ಷೆಯಲ್ಲಿದ್ದ ಬಸವ ಸಾವು

    ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಭೇಟಿಯ ನಿರೀಕ್ಷೆಯಲ್ಲಿದ್ದ ಬಸವ ಇಂದು ವಿಧಿವಶವಾಗಿದೆ.

    ಮೈಸೂರು ಸಮೀಪದ ಕೆ.ಆರ್.ನಗರ ತಾಲೂಕಿನ ಕಾಳಮ್ಮನಕೊಪ್ಪಲು ಗ್ರಾಮದ ಬಸವನ ಅನಾರೋಗ್ಯದಿಂದ ನರಳುತ್ತಿತ್ತು. ಬಸವ ಬೇಗ ಚೇತರಿಸಿಕೊಳ್ಳಲಿ ಎಂದು ಗ್ರಾಮಸ್ಥರು ನಿತ್ಯ ಪೂಜೆ, ಪುನಸ್ಕಾರಗಳಲ್ಲಿ ತೊಡಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದೆ.

    ಕಾಳಮ್ಮನಕೊಪ್ಪಲು ಗ್ರಾಮಸ್ಥರಿಗೆ ಊರ ದೈವವೇ ಆಗಿದ್ದ ಬಸವ ಅನಾರೋಗ್ಯಕ್ಕೆ ತುತ್ತಾಗಿತ್ತು. ಈ ಹಿನ್ನೆಲೆಯಲ್ಲಿ ದರ್ಶನ್ ಬಸವನನ್ನು ಭೇಟಿ ಮಾಡಿದ್ದರು. ಗ್ರಾಮಸ್ಥರೆಲ್ಲರೂ ದರ್ಶನ್ ಅವರು ಪುನಃ ಬಂದು ಭೇಟಿ ಮಾಡಿದರೆ ಬಸವ ಉಳಿಯುತ್ತಾನೆ ಎಂದು ದಚ್ಚು ಭೇಟಿಗೂ ಮನವಿ ಮಾಡಿದ್ದರು. ಆದರೆ ಕೊರೊನಾ ಲಾಕ್‍ಡೌನ್‍ನಿಂದಾಗಿ ದರ್ಶನ್ ಅವರಿಗೆ ಬಸವನನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ದರ್ಶನ್ ಅವರ ಪರವಾಗಿ ಅವರ ಸ್ನೇಹಿತರು ಬಸವನಿಗೆ ಔಷಧಿಗಳನ್ನು ತರಿಸಿ ಕೊಟ್ಟಿದ್ದರು.

    ದಚ್ಚು ಸ್ಪರ್ಶದ ಬಳಿಕ ದಾರಿ ಬಿಟ್ಟಿದ್ದ ಬಸವ:
    2019 ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರ ಪರ ದರ್ಶನ್ ಪ್ರಚಾರ ನಡೆಸಿದ್ದರು. ಈ ವೇಳೆ ದಚ್ಚು ಕೆ.ಆರ್.ನಗರ ತಾಲೂಕಿನ ಕಾಳಮ್ಮನಕೊಪ್ಪಲು ಗ್ರಾಮಕ್ಕೆ ಹೋಗಿದ್ದರು. ಅಭಿಮಾನಿಗಳು ಸೇರಿದಂತೆ ಅಪಾರ ಜನಸ್ತೋಮ ಗ್ರಾಮದಲ್ಲಿ ನೆರೆದಿತ್ತು. ಆದರೆ ಪ್ರಚಾರದ ಮಾರ್ಗದಲ್ಲಿ ಬಂದ ಬಸವ ಗುಟುರು ಹಾಕಿ ಅಡ್ಡಿಯಾಗಿ ನಿಂತಿತ್ತು. ಬಸವನನ್ನು ಕಂಡ ಜನ ಬೆದರಿ ನಿಂತಿದ್ದರು.

    ಪ್ರಚಾರ ವಾಹನದಿಂದ ಕೆಳಗೆ ಇಳಿದು ಬಂದ ದರ್ಶನ್, ಪರಿಚಯವಿರದ ಬಸವ ಕಡೆಗೆ ಧಾವಿಸಿ, ಅದರ ಮೈದಡವಿ ಸಮಾಧಾನ ಮಾಡಿದ್ದರು. ದರ್ಶನ್ ನಡವಳಿಕೆಗೆ ಸ್ಪಂದಿಸಿದ ಬಸವ ಶಾಂತವಾಗಿತ್ತು. ಈ ಪ್ರಸಂಗ ಎಲ್ಲರಿಗೂ ಅಚ್ಚರಿಯನ್ನು ಉಂಟು ಮಾಡಿತ್ತು. ಅಂದಿನಿಂದ ದರ್ಶನ್ ಜೊತೆಗೆ ಬಾಂಧವ್ಯ ಬೆಸೆದುಕೊಂಡಿದ್ದ ಬಸವನ ಕಾಲಿಗೆ ಇತ್ತೀಚೆಗೆ ಪೆಟ್ಟು ಬಿದ್ದಿತ್ತು. ಗಾಯಗೊಂಡಿದ್ದ ಬಸವ ಮಲಗಿದ ಜಾಗ ಬಿಟ್ಟು ಏಳಲೇ ಇಲ್ಲ. ಚಿಕಿತ್ಸೆ ಫಲಕಾರಿಯಾಗದೆ ಬಸವ ಸಾವನ್ನಪ್ಪಿದೆ.

  • ಅನ್ನದ ರಾಶಿ ಮೇಲೆ ಭವಿಷ್ಯ ಬರೆದ ಬಸವ – ಇನ್ಮುಂದೆ ನಾಡು ಸುಭಿಕ್ಷ

    ಅನ್ನದ ರಾಶಿ ಮೇಲೆ ಭವಿಷ್ಯ ಬರೆದ ಬಸವ – ಇನ್ಮುಂದೆ ನಾಡು ಸುಭಿಕ್ಷ

    ತುಮಕೂರು: ಚಿಕ್ಕನಾಯಕನಹಳ್ಳಿ ತಾಲೂಕಿನ ಶ್ರೀ ಕ್ಷೇತ್ರ ಕುಪ್ಪೂರು ಮಠದ ಬಸವ ನಂದೀಶ್ವರ ಭವಿಷ್ಯ ಬರೆದಿದ್ದಾನೆ. ಅನ್ನದ ರಾಶಿ ಮೇಲೆ ಬಲಪಾದ ಸ್ಪರ್ಶಸಿ ಇನ್ಮುಂದೆ ಈ ನಾಡು ಸುಭಿಕ್ಷವಾಗಿರಲಿದೆ ಎಂದು ಭವಿಷ್ಯ ನುಡಿದಿದ್ದಾನೆ. ಈ ಭವಿಷ್ಯದಿಂದ ಭಕ್ತಾದಿಗಳಲ್ಲಿ ಸಂತಸ ಮನೆ ಮಾಡಿದೆ.

    ಕುಪ್ಪೂರು ಮಠಕ್ಕೆ ತನ್ನದೆ ಆದ ಪೌರಾಣಿಕ ಹಿನ್ನಲೆಯಿದೆ. ಈ ಮಠದಲ್ಲಿ ಸಾಕಲಾಗುವ ನಂದೀಶ್ವರ ಹೆಸರಿನ ಬಸವನಿಗೆ ದೈವಿ ಶಕ್ತಿ ಎಂದು ನಂಬಲಾಗಿದೆ. ಅದರಂತೆ ಪ್ರತಿ ವರ್ಷ ಕಾರ್ತಿಕ ಮಾಸದ ಕೊನೆಯಲ್ಲಿ ನಡೆಯುವ ಜಾತ್ರೋತ್ಸವದ ಅನ್ನ ಸಂತರ್ಪಣೆಯಲ್ಲಿ ಬಸವನ ನಂದೀಶ್ವರ ಭವಿಷ್ಯ ಬರೆಯುತ್ತಾ ಬಂದಿದ್ದಾನೆ.

    ಬೃಹತ್ ಅನ್ನದ ರಾಶಿಯ ಮುಂದೆ ಬಸವನಿಗೆ ಪೂಜೆ ಸಲ್ಲಿಸಲಾಗುತ್ತದೆ. ಪೂಜೆ ಬಳಿಕ ಅನ್ನದ ರಾಶಿ ಮೇಲೆ ಪಾದ ಸ್ಪರ್ಶ ಮಾಡುವಂತೆ ಭಕ್ತಾದಿಗಳು ಪ್ರಾರ್ಥಿಸುತ್ತಾರೆ. ಭಕ್ತರ ಪ್ರಾರ್ಥನೆಗೆ ಓಗೊಟ್ಟು ನಂದೀಶ್ವರ ಪಾದ ಸ್ಪರ್ಶ ಮಾಡುತ್ತಾನೆ. ನಂದೀಶ್ವರನ ಪಾದ ಸ್ಪರ್ಶದಲ್ಲಿ ಒಂದು ವರ್ಷದ ಈ ನಾಡಿನ ಒಳಿತು, ಕೆಡುಕು ಅವಿತಿರುತ್ತದೆ. ಎಡಗಾಲಿಟ್ಟರೆ ಕೆಡುಕಾಗಲಿದೆ. ಬಲಗಾಲಿಟ್ಟರೆ ಒಳಿತಾಗಲಿದೆ ಎಂಬ ನಂಬಿಕೆ ಇದೆ. ಈ ಬಾರಿ ಅನ್ನದ ರಾಶಿ ಮೇಲೆ ಬಸವ ನಂದೀಶ್ವರ ಬಲಗಾಲಿಟ್ಟಿದ್ದಾನೆ. ಹಾಗಾಗಿ ಈ ವರ್ಷ ನಾಡು ಸುಭಿಕ್ಷವಾಗಿರಲಿದೆ ಎಂಬ ಸಂದೇಶ ರವಾನೆಯಾಗಿದೆ.

    ಸಹಸ್ರಾರು ಭಕ್ತಾದಿಗಳು ಶ್ರೀಮಠದ ಜಾತ್ರೆಗೆ ಆಗಮಿಸುತ್ತಾರೆ. ಬಸವ ಭವಿಷ್ಯವನ್ನು ಆಲಿಸಲೇಂದೇ ಬರುತ್ತಾರೆ. ಕಳೆದ ವರ್ಷ ಅನ್ನದ ರಾಶಿ ಮೇಲೆ ಬಲಗಾಲು ಸ್ಪರ್ಶ ಮಾಡಿತ್ತು. ಹಾಗಾಗಿ ರಾಜ್ಯದಲ್ಲಿ ಮಳೆ-ಬೆಳೆ ಉತ್ತಮವಾಗಿರಲಿದೆ ಎಂಬ ನಂಬಿಕೆ. 2017 ಮತ್ತು 2016ರಂದು ಎಡಗಾಲು ಸ್ಪರ್ಶ ಮಾಡಿತ್ತು ಎಂದು ಇಲ್ಲಿನ ಜನರು ಹೇಳುತ್ತಿದ್ದಾರೆ. ಆ ಎರಡು ವರ್ಷ ಭೀಕರ ಬರಗಾಲಕ್ಕೆ ತುತ್ತಾಗಿದ್ದನ್ನು ನಾವು ಗಮನಿಸಬಹುದಾಗಿದೆ. ಈ ವರ್ಷ ಮತ್ತೆ ಬಲಗಾಲಿನ ಸ್ಪರ್ಶ ಆಗಿರುವುದರಿಂದ ಭಕ್ತಾದಿಗಳಲ್ಲಿ ಸಂತಸ ಮನೆ ಮಾಡಿದೆ.

    ಬಸವನ ಭವಿಷ್ಯ ವೈಜ್ಷಾನಿಕವಾಗಿ ಎಷ್ಟು ಸತ್ಯವೋ ಗೊತ್ತಿಲ್ಲ. ಆದರೆ ಇಲ್ಲಿನ ಭಕ್ತಾದಿಗಳು, ಗ್ರಾಮಸ್ಥರು ಹಿಂದಿನಿಂದಲು ಬಸವ ನಂದೀಶ್ವರನ ಭವಿಷ್ಯ ನಂಬಿಕೊಂಡು ಬಂದಿದ್ದಾರೆ.

  • ನಿಖಿಲ್ ಗೆಲುವಿಗೆ ಬಸವ ಆಶೀರ್ವಾದ!

    ನಿಖಿಲ್ ಗೆಲುವಿಗೆ ಬಸವ ಆಶೀರ್ವಾದ!

    ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಸರ್ಕಾರದಿಂದ ಮಂಡ್ಯ ಜೆಡಿಎಸ್ ಅಭ್ಯರ್ಥಿಯಾಗಿ ಕಣದಲ್ಲಿರೋ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪುತ್ರ ನಿಖಿಲ್‍ ಕುಮಾರಸ್ವಾಮಿಗೆ  ದೇವರ ಆಶೀರ್ವಾದ ಸಿಕ್ಕಿದೆ.

    ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ನಿಖಿಲ್, ಭಾನುವಾರ ಮದ್ದೂರು ತಾಲೂಕಿನ ಹೊನ್ನನಾಯ್ಕನಹಳ್ಳಿ ಗ್ರಾಮದ ಮಂಟೇಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದರು. ಈ ವೇಳೆ ಬಸವ ನಿಖಿಲ್ ಅಂಗೈ ಮೇಲೆ ಪಾದವಿಟ್ಟು ಆಶೀರ್ವಾದ ಮಾಡಿದ್ದಾನೆ.

    ಆರಂಭದಲ್ಲಿ ಬಸವನಿಗೆ ಹೆದರಿದ ನಿಖಿಲ್‍ಗೆ ಸ್ಥಳೀಯರು ಹೆದರದಂತೆ ಧೈರ್ಯ ಹೇಳಿದ್ರು. ಬಳಿಕ ನಿಖಿಲ್ ಧೈರ್ಯವಾಗಿ ಬಸವನ ಬಳಿ ಆಶೀರ್ವಾದ ಪಡೆದ್ರು. ಅಂಗೈ ನೀಡಿ ಬಸವನ ಆಶೀರ್ವಾದ ಬೇಡುವುದು ಇಲ್ಲಿಯ ವಾಡಿಕೆಯಾಗಿದೆ.

    ಇದಕ್ಕೂ ಮೊದಲು ನಿಖಿಲ್ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಸೋಮನಹಳ್ಳಿ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿ ಪ್ರಚಾರ ಮಾಡಿದ್ರು. ಸೋಮನಹಳ್ಳಿಯ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಈ ವೇಳೆ ಪಟಾಕಿ ಸಿಡಿಸಿ ನಿಖಿಲ್‍ರನ್ನು ಗ್ರಾಮಸ್ಥರು ಸ್ವಾಗತಿಸಿದರು. ಬಳಿಕ ಮನೆ ಮನೆಗೆ ತೆರಳಿ ಮತಯಾಚಿಸಿದ್ರು.

  • ಬಿಜೆಪಿಯ ಟೆಂಪಲ್ ರನ್ ಟೀಕೆಗೆ ಖಡಕ್ ಪ್ರತಿಕ್ರಿಯೆ ಕೊಟ್ಟ ರಾಹುಲ್ ಗಾಂಧಿ!

    ಬಿಜೆಪಿಯ ಟೆಂಪಲ್ ರನ್ ಟೀಕೆಗೆ ಖಡಕ್ ಪ್ರತಿಕ್ರಿಯೆ ಕೊಟ್ಟ ರಾಹುಲ್ ಗಾಂಧಿ!

    ಬೆಂಗಳೂರು: ಈ ಚುನಾವಣೆ ನನ್ನ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ನಡುವಿನ ಚುನಾವಣೆಯಲ್ಲ. ರಾಜ್ಯದ ಜನರ ಸ್ಫೂರ್ತಿಯ ಚುನಾವಣೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

    ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಕಡೆಯ ದಿನವಾದ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮ್ಮ ನಂಬಿಕೆಗಳ ಮೇಲೆ ನಾವು ಜೀವನ ಮಾಡುತ್ತಿದ್ದೇವೆ. ಕಳೆದ 15 ವರ್ಷದಿಂದ ನಾನು ಹಲವು ದೇವಸ್ಥಾನಗಳಿಗೆ ಭೇಟಿ ಕೊಟ್ಟಿದ್ದೇನೆ. ಮಂದಿರ, ಮಸೀದಿ, ಚರ್ಚ್ ಗಳಿಗೆ ಭೇಟಿ ನೀಡಿದ್ದೇನೆ. ನಮಗೆ ಎಲ್ಲ ಸಮುದಾಯಗಳೂ ಮುಖ್ಯ. ಅವರು ಬೇಡ, ಇವರು ಬೇಡ ಅನ್ನುವ ಪಕ್ಷ ನಮ್ಮದಲ್ಲ. ಆದರೆ ಹೀಗೆ ಭೇಟಿ ಕೊಟ್ಟಾಗ ಬಿಜೆಪಿಯವರಿಗೆ ಅದನ್ನ ಸಹಿಸಿಕೊಳ್ಳಲು ಆಗುವುದಿಲ್ಲ. ಚುನಾವಣೆ ಸಂದರ್ಭದಲ್ಲಿ ಮಠ ಮಾನ್ಯಗಳು ನೆನಪಾಗುತ್ತದೆ ಎಂದು ಟೀಕಿಸುತ್ತಾರೆ. ಹಿಂದಿನ ಅನೇಕ ಚುನಾವಣೆಗಳಲ್ಲಿ ಇದೇ ರೀತಿಯ ಟೀಕೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ರಾಜ್ಯದ ಜನರ ಮೇಲೆ ನಂಬಿಕೆಯಿಟ್ಟಿದ್ದೇವೆ. ಯುವಜನತೆಗೆ ಉದ್ಯೋಗ ಸೃಷ್ಠಿ ನಮ್ಮ ಗುರಿ. ಐಟಿ ಸಿಟಿ, ಗಾರ್ಡನ್ ಸಿಟಿ ಹೆಸರು ನಾವು ಉಳಿಸುತ್ತೇವೆ. ಮಹದಾಯಿ ನದಿ ನೀರು ಹಂಚಿಕೆ ಕುರಿತು ಕಾಂಗ್ರೆಸ್ ನಿಲುವೇನು ಎಂಬುದನ್ನು ಶೀಘ್ರದಲ್ಲಿಯೇ ಸ್ಪಷ್ಟಪಡಿಸುತ್ತೇವೆ ಎಂದು ಹೇಳಿದರು.

    ಮಾತನಾಡಿದ ಅವರು ಈ ಚುನಾವಣೆ ನನ್ನ ಭವಿಷ್ಯಕ್ಕಾಗಿ ಅಲ್ಲ. ಮುಂದೆ ಪ್ರಧಾನಿ ಆಗಲು ಸಹಕಾರಿಯೂ ಅಲ್ಲ. ಬೆಂಗಳೂರು ರಾಷ್ಟ್ರದ ಹೆಮ್ಮೆ. ದೇಶಕ್ಕೆ ಕರ್ನಾಟಕದ ಕೊಡುಗೆ ಅಪಾರ. ಈ ಚುನಾವಣೆಯಿಂದ ಕರ್ನಾಟಕ ಇನ್ನೂ ಹೆಚ್ಚಿನ ಅಭಿವೃದ್ಧಿಯ ಕಡೆಗೆ ನಡೆಯಬೇಕಿದೆ ಎಂದು ಹೇಳಿದರು.

    ಕಳೆದ ಹಲವು ದಿನಗಳಿಂದ ರಾಜ್ಯದಲ್ಲಿ ಓಡಾಡಿದ್ದೇನೆ. ನಾವು ಯಾರ ವಿರುದ್ಧವೂ ಟೀಕೆ ಮಾಡಿಲ್ಲ. ಸಂವಿಧಾನದ ಆಶಯಗಳನ್ನಿಟ್ಟುಕೊಂಡು ಚುನಾವಣೆಗೆ ಹೊರಟಿದ್ದೇವೆ. ರಾಜ್ಯದ ಜನರನ್ನ ಗಮನದಲ್ಲಿಟ್ಟುಕೊಂಡು ಪ್ರಣಾಳಿಕೆ ರಚಿಸಿದ್ದೇವೆ. ಜನರ ಆಶಯಗಳಿಗೆ ಅನುಗುಣವಾಗಿ ಪ್ರಣಾಳಿಕೆ ತಯಾರಾಗಿದೆ. ವೀರಪ್ಪ ಮೊಯ್ಲಿ ಉತ್ತಮ ಪ್ರಣಾಳಿಕೆ ರಚಿಸಿದ್ದಾರೆ. ಕರ್ನಾಟಕದ ಜನರ ಧ್ವನಿಯಾಗಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದೇವೆ. ಕೊಟ್ಟ ಭರವಸೆ ಈಡೇರಿಸುವ ಗುರಿ ನಮ್ಮದು. ರಾಜ್ಯದ ಜನ ಚುನಾವಣೆಯಲ್ಲಿ ನಮ್ಮ ಪರ ನಿಲ್ಲಲಿದ್ದಾರೆ, ಆ ಭರವಸೆ ನಮಗಿದೆ ಎಂದು ಆತ್ಮ ವಿಶ್ವಾಸ ವ್ಯಕ್ತಪಡಿಸಿದರು.

    ಕಾಂಗ್ರೆಸ್ ಗೆ ಬಹುಮತ ಬರುತ್ತದೆ. ಅತಂತ್ರ ವಿಧಾನಸಭೆಗೆ ಆಸ್ಪದವೇ ಇಲ್ಲ. ಈ ಚುನಾವಣೆ ಕನ್ನಡದ ಅಸ್ಮಿತೆ ಮೇಲೆ ನಡೆಯುತ್ತಿದೆ. ಕರ್ನಾಟಕದ ಜನ ಕಾಂಗ್ರೆಸ್ಸನ್ನು ಆರಿಸುತ್ತಾರೆ. ಬಸವ ತತ್ವವೇ ನಮ್ಮ ತತ್ವ. ಅದೇ ನಮಗೆ ಸ್ಪೂರ್ತಿ. ಆರ್‍ಎಸ್‍ಎಸ್ ಕರ್ನಾಟಕವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಅವಕಾಶ ಕೊಡಬಾರದು. ಜಾಗ್ರತೆಯಿಂದ ಇರಿ ಎಂದು ಎಚ್ಚರಿಕೆ ನೀಡಿದರು.

    ಭಾಷೆ, ಸಂಸ್ಕ್ರತಿ ಮತ್ತು ಬಸವ ತತ್ವದ ಮೇಲೆ ಸವಾರಿ ಮಾಡಲು ಆರ್‍ಎಸ್‍ಎಸ್ ಹೊರಟಿದೆ. ಆರ್‍ಎಸ್‍ಎಸ್ ಸಿದ್ಧಾಂತ ಮತ್ತು ಕರ್ನಾಟಕದ ಅಸ್ಮಿತೆಯ ಮಧ್ಯೆ ನಡೆಯುವ ಹೋರಾಟ ಈ ಚುನಾವಣೆ. ಕರ್ನಾಟಕದ ಅಸ್ಮಿತೆಯನ್ನ ಉಳಿಸಲು ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದರು.

    ಈ ಬಾರಿ ಬಿಜೆಪಿಯವರು ನನ್ನ ಹಾಗೂ ನಮ್ಮ ನಾಯಕರುಗಳ ಮೇಲೆ ವೈಯುಕ್ತಿಕವಾಗಿ ವಾಗ್ದಾಳಿ ಮಾಡುವ ಮಟ್ಟಕ್ಕೆ ಇಳಿದಿದ್ದಾರೆ. ಆದರೆ ಮಹಿಳೆ, ಯುವತಿಯರ ಮೇಲಿನ ಅತ್ಯಾಚಾರ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿಲ್ಲ. ಇದು ದೇಶದಲ್ಲೇ ಚರ್ಚೆಯಾಗಬೇಕಾದ ವಿಚಾರ. ದೇಶದ ಜನರ ಹಕ್ಕು, ರಕ್ಷಣೆಯ ವಿಚಾರ. ಕಚ್ಛಾ ತೈಲ ಬ್ಯಾರಲ್ ಬೆಲೆ 140 ಡಾಲರ್ ನಿಂದ 70 ಡಾಲರ್ ಗೆ ಇಳಿದಿದೆ. ಆದರೂ ಪೆಟ್ರೋಲ್ ಬೆಲೆ ಕಡಿಮೆ ಮಾಡಿಲ್ಲ ಇದರಿಂದ ದೇಶದ ಜನರಿಗೆ ಮತ್ತಷ್ಟು ಹೊರೆಯಾಗಿದೆ ಎಂದು ಕಿಡಿಕಾರಿದರು.

    ರೆಡ್ಡಿ ಬ್ರದರ್ಸ್ ರಾಜ್ಯವನ್ನೇ ಲೂಟಿ ಹೊಡೆದಿದ್ದಾರೆ. 35 ಸಾವಿರ ಕೋಟಿ ರಾಜ್ಯದ ಬೊಕ್ಕಸಕ್ಕೆ ನಷ್ಟ ಮಾಡಿದ್ದಾರೆ. ಇದರ ಬಗ್ಗೆ ಯಾಕೆ ಯಾರು ಮಾತನಾಡುವುದಿಲ್ಲ ಎಂದು ಪ್ರಶ್ನೆ ಮಾಡಿದರು.

    ದಲಿತರಿಗೆ ದೇಶದಲ್ಲಿ ರಕ್ಷಣೆಯಿಲ್ಲದಂತಾಗಿದೆ. ಉತ್ತರ ಪ್ರದೇಶದಲ್ಲಿ ದಲಿತರ ಮೇಲಿನ ಹಲ್ಲೆ ನಿಂತಿಲ್ಲ. ತಡೆಯುವಲ್ಲಿ ಪ್ರಧಾನಿ ವಿಫಲರಾಗಿದ್ದಾರೆ. ರೋಹಿತ್ ವೇಮುಲ ಸಾವು ಏನಾಯ್ತು?. ಉನ್ನಾವ್, ಕತುವಾ ಅತ್ಯಾಚಾರದಲ್ಲಿ ಹೇಗೆ ನಡೆದುಕೊಂಡರು ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

    ನಮ್ಮ ನಂಬಿಕೆಗಳ ಮೇಲೆ ನಾವು ಜೀವನ ಮಾಡುತ್ತಿದ್ದೇವೆ. ಕಳೆದ 15 ವರ್ಷದಿಂದ ನಾನು ಹಲವು ದೇವಸ್ಥಾನಗಳಿಗೆ ಭೇಟಿ ಕೊಟ್ಟಿದ್ದೇನೆ. ಮಂದಿರ, ಮಸೀದಿ, ಚರ್ಚ್ ಗಳಿಗೆ ಭೇಟಿ ನೀಡಿದ್ದೇನೆ. ನಮಗೆ ಎಲ್ಲ ಸಮುದಾಯಗಳೂ ಮುಖ್ಯ. ಅವರು ಬೇಡ, ಇವರು ಬೇಡ ಅನ್ನುವ ಪಕ್ಷ ನಮ್ಮದಲ್ಲ. ಆದರೆ ಹೀಗೆ ಭೇಟಿ ಕೊಟ್ಟಾಗ ಬಿಜೆಪಿಯವರಿಗೆ ಅದನ್ನ ಸಹಿಸಿಕೊಳ್ಳಲು ಆಗುವುದಿಲ್ಲ. ಚುನಾವಣೆ ಸಂದರ್ಭದಲ್ಲಿ ಮಠ ಮಾನ್ಯಗಳು ನೆನಪಾಗುತ್ತದೆ ಎಂದು ಟೀಕಿಸುತ್ತಾರೆ. ಹಿಂದಿನ ಅನೇಕ ಚುನಾವಣೆಗಳಲ್ಲಿ ಇದೇ ರೀತಿಯ ಟೀಕೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

     

     

  • ನಿಧಿಗಾಗಿ ಬಸವ ಮೂರ್ತಿ ಭಗ್ನಗೊಳಿಸಿದ ಇಬ್ಬರ ಬಂಧನ

    ನಿಧಿಗಾಗಿ ಬಸವ ಮೂರ್ತಿ ಭಗ್ನಗೊಳಿಸಿದ ಇಬ್ಬರ ಬಂಧನ

    ರಾಯಚೂರು: ನಿಧಿಯ ಆಸೆಗಾಗಿ ಬಸವ ಮೂರ್ತಿಯನ್ನ ಭಗ್ನಗೊಳಿಸಿದ ಇಬ್ಬರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಕಲುಬುರಗಿಯ ಸೋಮು ಹಾಗೂ ಜಮಖಂಡಿ ತಾಂಡದ ಭೀಮು ಬಂಧಿತ ಆರೋಪಿಗಳು. ರಾಯಚೂರಿನ ದೇವದುರ್ಗದ ಬೆಣಕಲ್ ಗ್ರಾಮದ ಬಳಿಯಿರುವ ಅಣೇಲಿಂಗೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದೆ. ದೇವಸ್ಥಾನದಲ್ಲಿದ್ದ ಬಸವನ ಮೂರ್ತಿಯನ್ನು ದುಷ್ಕರ್ಮಿಗಳು ಭಗ್ನಗೊಳಿಸಿದ್ದಾರೆ.

    ಜನವರಿಯಲ್ಲಿ ಬಳ್ಳಾರಿ ತಾಲೂಕಿನ ಕುರಗೋಡ ಪಟ್ಟಣದ ವಜ್ರಬಂಡೆಯಲ್ಲಿ ನಿಧಿಯ ಆಸೆಗಾಗಿ ಕೆಲ ದುಷ್ಕರ್ಮಿಗಳು ಪುರಾತನ ಕಾಲದ ಬಸವ ಮೂರ್ತಿಯ ತಲೆ ಕತ್ತರಿಸಿ ಬಳಿಕ ಪರಾರಿಯಾಗಿದ್ದರು.

    ರಾಯಚೂರಿನಲ್ಲಿ ನಡೆದ ಘಟನೆ ಸಂಬಂಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ದಲಿತರು ದೇವಾಲಯ ಪ್ರವೇಶಿಸಿದ್ದಕ್ಕೆ ಜಾತ್ರೆಯನ್ನ ಅರ್ಧಕ್ಕೆ ನಿಲ್ಸಿದ್ರು- ಆಹಾರ ನೀರು ಬಿಟ್ಟು ಮೂಕಪ್ರಾಣಿಯ ರೋಧನೆ

    ದಲಿತರು ದೇವಾಲಯ ಪ್ರವೇಶಿಸಿದ್ದಕ್ಕೆ ಜಾತ್ರೆಯನ್ನ ಅರ್ಧಕ್ಕೆ ನಿಲ್ಸಿದ್ರು- ಆಹಾರ ನೀರು ಬಿಟ್ಟು ಮೂಕಪ್ರಾಣಿಯ ರೋಧನೆ

    ತುಮಕೂರು: ಗೃಹ ಸಚಿವರ ಹಾಗೂ ಕಾನೂನು ಸಚಿವರ ತವರಲ್ಲೇ ದಲಿತರ ದೇವಾಲಯ ಪ್ರವೇಶ ನಿಷೇಧಕ್ಕೆ ಮೂಕ ಪ್ರಾಣಿಯೊಂದು ಆಹಾರ ನೀರು ಬಿಟ್ಟು ರೋಧಿಸುತ್ತಿದೆ.

    ತುಮಕೂರು ತಾಲೂಕಿನ ಕೊತ್ತಿಹಳ್ಳಿ ಹಾಗೂ ಮಲ್ಲಸಂದ್ರಪಾಳ್ಯ ಎನ್ನುವ ಎರಡು ಗ್ರಾಮಗಳ ದೇವತೆಯಾಗಿರೋ ಕುಚ್ಚಂಗಿಯಮ್ಮನ ಜಾತ್ರೆ ಅರ್ಧಕ್ಕೆ ನಿಂತು ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ.

    ಕಳೆದ ಮೂರು ದಿನಗಳ ಹಿಂದೆ ಕುಚ್ಚಂಗಿಯಮ್ಮನ ಜಾತ್ರೆಯನ್ನು ಊರಿನಲ್ಲಿ ನಡೆಸುತ್ತಿದ್ದರು. ಮೊದಲನೇ ದಿನ ಆರತಿ ಸೇವೆಯಲ್ಲಿ ದಲಿತ ಕಾಲೋನಿಯ ಜನರು ದೇವಾಲಯ ಪ್ರವೇಶ ಮಾಡಿದ್ದಾರೆ ಎನ್ನುವ ಕಾರಣಕ್ಕೆ ಇಡೀ ಜಾತ್ರೆ ಅರ್ಧಕ್ಕೆ ನಿಂತುಬಿಟ್ಟಿದೆ. ದಲಿತರಿಗೆ ಇಷ್ಟು ವರ್ಷಗಳ ಕಾಲ ಕೇವಲ ದೇವಾಲಯದ ಆಚೆಯಿಂದಲೇ ಆರತಿಗೆ ಅನುಮತಿ ಇದ್ದು, ಮೊನ್ನೆ ನಡೆದ ಜಾತ್ರೆಯಲ್ಲಿ ದೇವಾಲಯ ಪ್ರವೇಶಿಸಿದ್ದಾರೆ. ಇದರಿಂದ ದೇವರಿಗೆ ಅಮಂಗಳ ಎಂದು ಜಾತ್ರೆಯನ್ನೇ ನಿಲ್ಲಿಸಿದ್ದಾರೆ.

    ಜಾತ್ರೆ ಅರ್ಧಕ್ಕೆ ನಿಂತ ದಿನದಿಂದಲೂ ಊರಿನ ಬಸವನ ರೋಧನೆ ಮಾತ್ರ ನಿಂತಿಲ್ಲ. ಕುಚ್ಚಂಗಿಯಮ್ಮ ದೇವಿಯೇ ಸ್ವತಃ ಬಸವನ ಮೈಮೇಲೆ ಬಂದು ರೋಧಿಸಿದಂತೆ ಗ್ರಾಮದಲ್ಲಿ ಮಾತುಗಳು ಕೇಳಿಬರುತ್ತಿವೆ. ಒಂದು ಕುರ್ಚಿಯನ್ನು ಬಿಟ್ಟು ಬಸವ ಎಲ್ಲಿಗೂ ಕದಲದಂತಾಗಿದೆ. ಯಾರನ್ನು ಹತ್ತಿರಕ್ಕೆ ಸೇರಿಸದ ಬಸವ ಎರಡು ದಿನಗಳ ಕಾಲ ಕಣ್ಣೀರು ಹಾಕುತ್ತಿದೆ. ನಿಂತ ಜಾತ್ರೆ ಮುಂದುವರೆಯಬೇಕು ಎನ್ನುವ ಹಂಬಲದಿಂದ ಇದ್ದ ಕಡೆಯೇ ಇದ್ದು ಜಾತಿ ವ್ಯವಸ್ಥೆಯ ವಿರುದ್ಧ ಮೂಕಪ್ರತಿಭಟನೆ ನಡೆಸುತ್ತಿರುವಂತಿದೆ. ಪ್ರತಿನಿತ್ಯ ಗ್ರಾಮಸ್ಥರಿಂದ ಪೂಜಿಸಲ್ಪಡುತ್ತಿದ್ದ ಈ ಬಸವ ಜಾತ್ರೆ ನಿಂತ ದಿನದಿಂದ ಯಾರಿಂದಲೂ ಪೂಜೆ ಮಾಡಿಸಿಕೊಳ್ಳದೇ ತನ್ನ ಹಠ ವ್ಯಕ್ತಪಡಿಸುತ್ತಿದೆ.