ಮುಂಬೈ: ಟೋಲ್ ತಪ್ಪಿಸಿಕೊಳ್ಳಲು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಗಾಗಿ ಅಳವಡಿಸಿದ್ದ ಬ್ಯಾರಿಕೇಡ್ ತಳ್ಳಿಕೊಂಡೆ ಹೋಗಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಮುಂಬೈ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಘಟನೆ ವಾಷಿ ಟೋಲ್ ನಾಕಾದಲ್ಲಿ ಕಳೆದ ತಿಂಗಳು ನಡೆದಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು ವಿಚಾರಣೆ ನಡೆಸಿ ಆರೋಪಿಯನ್ನ ಬಂಧಿಸಿದ್ದರು.
ಏಪ್ರಿಲ್ 28 ರಂದು ಈ ವಿಡಿಯೋ ಮುಂಬೈ ಪೊಲೀಸರ ಗಮನಕ್ಕೆ ಬಂದಿದೆ. ಆಗ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮಾಡಲು ಆರಂಭಿಸಿದ್ದಾರೆ. ಆಗ ಏಪ್ರಿಲ್ 21 ರಂದು ಈ ಘಟನೆ ನಡೆದಿರುವುದು ತಿಳಿದು ಬಂದಿದೆ. ಈ ವಿಡಿಯೋವನ್ನು ಆಧಾರವಾಗಿಟ್ಟುಕೊಂಡು ಪೊಲೀಸರು ಕಾರ್ಯಚರಣೆ ಮುಂದುವರಿಸಿದ್ದಾರೆ.

ವ್ಯಕ್ತಿಯೊಬ್ಬ ಟೋಲ್ ನಲ್ಲಿ ಹಣ ಪಾವತಿಸಬೇಕಾಗುತ್ತದೆ ಎಂದು ಹೆದ್ದಾರಿಯಲ್ಲಿ ಅಳವಡಿಸಿದ್ದ ಬ್ಯಾರಿಕೇಡ್ ನ ತನ್ನ ಮಾರುತಿ ಸುಜುಕಿ ಸ್ವಿಫ್ಟ್ ಕಾರಿನಲ್ಲಿ ತಳ್ಳಿಕೊಂಡೆ ಹೋಗಿದ್ದಾನೆ. ಈ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ. ನಂತರ ಪೊಲೀಸರು ಈ ಕುರಿತು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.
ಸಂಚಾರದ ನಿಯಮಗಳನ್ನು ಉಲ್ಲಂಘಿಸಿದ ಪರಿಣಾಮವಾಗಿ ಮುಂಬೈ ಪೊಲೀಸರು ಈ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡು ಈ ಬಗ್ಗೆ ಸಂಪೂರ್ಣ ತನಿಖೆಯನ್ನು ಆರಂಭಿಸಿದ್ದಾರೆ. ಕೊನೆಗೂ ಆ ಕಾರಿನ ನಂಬರ್ ಮೂಲಕ ಆರೋಪಿಯನ್ನು ಪತ್ತೆ ಮಾಡಲಾಗಿದ್ದು, ಆತನನ್ನು ಬಂಧಿಸಿದ್ದಾರೆ. ತನಿಖೆ ನಡೆದ ನಂತರ ಆರೋಪಿ ಅಬಿದ್ ಅಲಿ ಸಯ್ಯಾದ್ ಎಂದು ತಿಳಿದು ಬಂದಿದೆ.

ಈ ಬಗ್ಗೆ ಮುಂಬೈ ಪೊಲೀಸರು ಟ್ವೀಟ್ ಮಾಡಿದ್ದು, “ಈ ಘಟನೆ ಏಪ್ರಿಲ್ 21 ರಂದು ನಡೆದಿದ್ದು, ಟೋಲ್ ತಪ್ಪಿಸಿಕೊಳ್ಳುವಾಗ ಈ ರೀತಿ ಮಾಡಿದ್ದಾನೆ. ನಾವು ಏಪ್ರಿಲ್ 28 ದಿನ ಗಮನಿಸಿದೆವು. ಬಳಿಕ ಸಂಪೂರ್ಣ ತನಿಖೆಯ ನಂತರ ಆರೋಪಿಯನ್ನು ಟ್ರೇಸ್ ಮಾಡಿ ಬಂಧಿಸಿದ್ದು, ಆತನನ್ನು ನವಿ ಮುಂಬೈ ಪೊಲೀಸರಿಗೆ ಗುರುವಾರ ಒಪ್ಪಿಸಲಾಗಿದೆ. ನೀವು ಓಡಬಹುದು, ನೀವು ಅಡಗಿಕೊಳ್ಳಬಹುದು ಆದರೆ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ!” ಎಂದು ಬರೆದಿದ್ದಾರೆ.
ಆರೋಪಿ ಸಯ್ಯಾದ ಮುಂಬ್ರಾದಲ್ಲಿ ಟೈಲರಿಂಗ್ ಶಾಪ್ ನಡೆಸುತ್ತಿದ್ದನು. ವಶಿ ಟೋಲ್ ಪ್ಲಾಜಾ ಸಿಬ್ಬಂದಿ, ಅರ್ಜುನ್ ಪರಾಬ್ ಅವರ ಹೇಳಿಕೆ ಕೂಡ ಈ ಪ್ರಕರಣದಲ್ಲಿ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ವಿರುದ್ಧ ನಿರ್ಲಕ್ಷ್ಯದ ಚಾಲನೆ ಅಡಿ ಅಂದರೆ ಐಪಿಸಿ ಸೆಕ್ಷನ್ 279 ಮತ್ತು 427 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆದರೆ ಆರೋಪಿ ಸಯ್ಯಾದ್ ಜಾಮೀನಿನ ಮೇರೆಗೆ ಹೊರ ಬಂದಿದ್ದಾನೆ ಎಂದು ವರದಿಯಾಗಿದೆ.