Tag: Baroda

  • 20 ಓವರ್‌ಗಳಲ್ಲಿ 37 ಸಿಕ್ಸರ್‌, 349 ರನ್‌ – ಟಿ20 ಕ್ರಿಕೆಟ್‌ನಲ್ಲಿ ಹೊಸ ದಾಖಲೆ

    20 ಓವರ್‌ಗಳಲ್ಲಿ 37 ಸಿಕ್ಸರ್‌, 349 ರನ್‌ – ಟಿ20 ಕ್ರಿಕೆಟ್‌ನಲ್ಲಿ ಹೊಸ ದಾಖಲೆ

    ಮುಂಬೈ: ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯ ಗ್ರೂಪ್-ಬಿ ಪಂದ್ಯದಲ್ಲಿ ಬರೋಡಾ (Baroda), ಸಿಕ್ಕಿಂ ತಂಡದ ವಿರುದ್ಧ ರನ್‌ ರಣಮಳೆಯನ್ನೇ ಸುರಿಸಿದೆ.

    ಇಂದೋರ್​​ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಕೃನಾಲ್‌ ಪಾಂಡ್ಯ ನಾಯಕತ್ವದ ಬರೋಡಾ ತಂಡ 20 ಓವರ್‌ನಲ್ಲಿ ಬರೋಬ್ಬರಿ 349 ರನ್‌ ಸಿಡಿಸಿ ವಿಶ್ವ ದಾಖಲೆ ಬರೆದಿದೆ. ಆರಂಭಿಕರಾಗಿ ಕಣಕ್ಕಿಳಿದ ಬರೋಡಾದ ಶಾಶ್ವತ್ ರಾವತ್ ಹಾಗೂ ಅಭಿಮನ್ಯು ಸಿಂಗ್ 92 ರನ್‌ ಗಳ ಜೊತೆಯಾಟ ನೀಡಿ ಸ್ಫೋಟಕ ಆರಂಭ ನೀಡಿದರು. ಇದರಲ್ಲಿ ಅಭಿಮನ್ಯು 17 ಎಸೆತಗಳಲ್ಲಿ 53 ರನ್‌ ಬಾರಿಸಿದ್ರೆ, ಶಾಶ್ವತ್‌ 16 ಎಸೆತಗಳಲ್ಲಿ 43 ರನ್ ಸಿಡಿಸಿದರು.

    ಇವರಿಬ್ಬರ ವಿಕೆಟ್‌ ಪತನಗೊಳ್ಳುತ್ತಿದ್ದಂತೆ ಕ್ರೀಗಿಳಿದ ಭಾನು ಪಾನಿಯಾ (Bhanu Pani) ಭರ್ಜರಿ ಸಿಕ್ಟರ್‌ ಬೌಂಡರಿಗಳ ಮಳೆ ಸುರಿಸಿದರು. ತಾನು ಎದುರಿಸಿದ 51 ಎಸೆಯಗಳಲ್ಲಿ 15 ಭರ್ಜರಿ ಸಿಕ್ಸರ್‌, 5 ಬೌಂಡರಿ ಸೇರಿ 262.74 ಸ್ಟ್ರೈಕ್‌ರೇಟ್‌ನೊಂದಿಗೆ ಅಜೇಯ 134 ರನ್‌ ಚಚ್ಚಿದರು. ಇದನ್ನೂ ಓದಿ: ಅಂತಾರಾಷ್ಟ್ರೀಯ ಟೆಕ್ವಾಂಡೋ ಸ್ಪರ್ಧೆ: ಪಾಣೆಮಂಗಳೂರಿನ‌ ಆಯಿಶಾ ಹಫೀಝ್‌ಗೆ ಚಿನ್ನ

    ಇದರೊಂದಿಗೆ ಜೊತೆಯಾದ ಶಿವಾಲಿಕ್ ಶರ್ಮಾ 17 ಎಸೆತಗಳಲ್ಲಿ 6 ಸಿಕ್ಸರ್‌ ಗಳನ್ನು ಬಾರಿಸಿ 55 ರನ್‌ ಗಳಿಸಿದರು. ಇನ್ನಿಂಗ್ಸ್‌ನ ಕೆಲ ಓವರ್‌ ಬಾಕಿ ಇರುವಾಗ ಕಣಕ್ಕಿಳಿದ ವಿಕೆಟ್ ಕೀಪರ್ ಬ್ಯಾಟರ್ ವಿಷ್ಣು ಸೋಲಂಕಿ 16 ಎಸೆತಗಳಲ್ಲಿ 6 ಸಿಕ್ಸರ್​​ಗಳೊಂದಿಗೆ 50 ರನ್ ಬಾರಿಸಿದರು.

    ಒಟ್ಟಾರೆಯಾಗಿ ಬರೋಡಾ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 349 ರನ್‌ ಪೇರಿಸಿತು. ಬೃಹತ್‌ ಮೊತ್ತದ ಗುರಿ ಬೆನ್ನಟ್ಟಿದ್ದ ಸಿಕ್ಕಿಂ ತಂಡ 20 ಓವರ್‌ಗಳಲ್ಲಿ ಕೇವಲ 86 ರನ್‌ಗಳಿಸಿ 7 ವಿಕೆಟ್‌ ಕಳೆದುಕೊಂಡು 263 ರನ್‌ಗಳ ಅಂತರದಿಂದ ಸೋಲೊಪ್ಪಿಕೊಂಡಿತು. ಇದನ್ನೂ ಓದಿ: ಡಿ.22 ರಂದು ಹಸೆಮಣೆ ಏರಲಿದ್ದಾರೆ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು

    ಈ ಹಿಂದೆ (2024 ರಲ್ಲಿ) ಜಿಂಬಾಬ್ಬೆ ತಂಡ ಗಾಂಬಿಯಾ ವಿರುದ್ಧದ ಪಂದ್ಯದಲ್ಲಿ ತಂಡವು 344 ರನ್ ಬಾರಿಸಿ ವಿಶ್ವ ದಾಖಲೆ ನಿರ್ಮಿಸಿತ್ತು. ಇದಕ್ಕೂ ಮುನ್ನ ನೇಪಾಳ ತಂಡ ಮಂಗೋಲಿಯಾ ವಿರುದ್ಧ ಹ್ಯಾಂಗ್‌ಝೌ (2023ರಲ್ಲಿ) 314/3 ರನ್‌ ಗಳಿಸಿತ್ತು.

    ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ರನ್‌ ಗಳಿಸಿದ ಟಾಪ್‌-5 ತಂಡಗಳು
    * ಜಿಂಬಾಬ್ವೆ – 344 ರನ್‌
    * ನೇಪಾಳ – 314 ರನ್‌
    * ಭಾರತ – 297 ರನ್‌
    * ಜಿಂಬಾಬ್ವೆ – 286 ರನ್‌
    * ಭಾರತ – 283 ರನ್‌

  • ಬರೋಡಾ ವಿರುದ್ಧ 8 ವಿಕೆಟ್‍ಗಳ ಗೆಲುವು- ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಕರ್ನಾಟಕ

    ಬರೋಡಾ ವಿರುದ್ಧ 8 ವಿಕೆಟ್‍ಗಳ ಗೆಲುವು- ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಕರ್ನಾಟಕ

    ಬೆಂಗಳೂರು: ಬೌಲಿಂಗ್ ಹಾಗೂ ಬ್ಯಾಟಿಂಗಿನಲ್ಲಿ ಉತ್ತಮ ಪ್ರದರ್ಶನ ನೀಡಿದ ಕರ್ನಾಟಕ ತಂಡವು 2019-20ನೇ ಸಾಲಿನ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯ ಕೊನೆಯ ಲೀಗ್ ಪಂದ್ಯದಲ್ಲಿ ಬರೋಡಾ ತಂಡದ ವಿರುದ್ಧ ಎಂಟು ವಿಕೆಟ್‍ಗಳ ಗೆಲುವು ಸಾಧಿಸಿದೆ.

    ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೂರನೇ ದಿನದಾಟದಲ್ಲಿ ಬರೋಡಾ ನೀಡಿದ್ದ 149 ರನ್‍ಗಳ ಗೆಲುವಿನ ಗುರಿ ಬೆನ್ನಟ್ಟಿದ ಕರ್ನಾಟಕದ ತಂಡವು ಎರಡು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

    ಕರ್ನಾಟಕ ವಿರುದ್ಧದ ಮೊದಲ ಇನ್ನಿಂಗ್ಸ್ ನಲ್ಲೇ ಬರೋಡಾ 85 ರನ್‍ಗಳಿಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡಿತ್ತು. ಇದೇ ಸಮಯದಲ್ಲಿ ಕರ್ನಾಟಕದ ಅಭಿಮನ್ಯು ಮಿಥುನ್ ಹಾಗೂ ಕೃಷ್ಣಪ್ಪ ಗೌತಮ್ ತಲಾ ಮೂರು ವಿಕೆಟ್ ಕಿತ್ತರೆ, ಪ್ರಸಿದ್ಧ ಕೃಷ್ಣ 2 ವಿಕೆಟ್ ಹಾಗೂ ಶ್ರೇಯಸ್ ಗೋಪಾಲ್ ಒಂದು ವಿಕೆಟ್ ಪಡೆದಿದ್ದರು.

    ಬಳಿಕ ಬ್ಯಾಟಿಂಗ್ ಆರಂಭಿಸಿದ ಮೊದಲ ಇನ್ನಿಂಗ್ಸ್ ನಲ್ಲೇ ಕರ್ನಾಟಕ ಎಲ್ಲಾ ವಿಕೆಟ್ ಕಳೆದುಕೊಂಡು 233 ರನ್ ಪೇರಿಸಿ, 148 ರನ್‍ಗಳ ಮಹತ್ವದ ಮುನ್ನಡೆ ದಾಖಲಿಸಿತ್ತು. ಈ ಬೆನ್ನಲ್ಲೇ ದ್ವಿತೀಯ ಇನ್ನಿಂಗ್ಸ್ ನಲ್ಲಿ ತಿರುಗೇಟು ನೀಡಲು ಮುಂದಾದ ಬರೋಡಾ ತಂಡವು ಎಲ್ಲಾ ವಿಕೆಟ್ ಕಳೆದುಕೊಂಡು 296 ರನ್ ಗಳಿಸಿತ್ತು. ಇದೇ ಸಮಯದಲ್ಲಿ ಕರ್ನಾಟಕ ತಂಡದ ಬೌಲರ್ ಪ್ರಸಿದ್ಧ ಕೃಷ್ಣ ನಾಲ್ಕು ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ರೋನಿತ್ ಮೋರೆ 3 ವಿಕೆಟ್, ಕೃಷ್ಣಪ್ಪ ಗೌತಮ್ 2 ವಿಕೆಟ್ ಹಾಗೂ ಅಭಿಮನ್ಯು ಮಿಥುನ್ ಒಂದು ವಿಕೆಟ್ ಕಿತ್ತು ತಂಡದ ಗೆಲುವಿಗೆ ಕೊಡುಗೆ ನೀಡಿದರು.

    ಕರ್ನಾಟದ ದ್ವಿತಿಯ ಇನ್ನಿಂಗ್ಸ್ ನಲ್ಲಿ ನಾಯಕ ಕರುಣ್ ನಾಯರ್ ಔಟಾಗದೆ 71 ರನ್ (126 ಎಸೆತ, 7 ಬೌಂಡರಿ) ಹಾಗೂ ಕೃಷ್ಣಮೂರ್ತಿ ಸಿದ್ದಾರ್ಥ್ ಔಟಾಗದೆ 29 ರನ್ (68 ಎಸೆತ 3 ಬೌಂಡರಿ, 1 ಸಿಕ್ಸ್) ಗಳಿಸಿ ತಂಡಕ್ಕೆ ಗೆಲುವು ತಂದು ಕೊಟ್ಟರು. ಉಳಿದಂತೆ ರವಿಕುಮಾರ್ ಸಮರ್ಥ್ 25 ರನ್ ಹಾಗೂ ದೇವದತ್ ಪಡಿಕ್ಕಲ್ 6 ರನ್ ಕೊಡುಗೆ ನೀಡಿದರು.

    ಈವರೆಗೆ ಕರ್ನಾಟಕ ಎಂಟು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆಲುವು ದಾಖಲಿಸಿದ್ದು, ನಾಲ್ಕು ಪಂದ್ಯಗಳು ಡ್ರಾ ಫಲಿತಾಂಶ ಕಂಡಿವೆ. ಕರ್ನಾಟಕ ತಂಡವು ಒಟ್ಟು 31 ಅಂಕಗಳೊಂದಿಗೆ ಎಂಟರ ಘಟ್ಟಕ್ಕೆ ಪ್ರವೇಶಿಸಿದ್ದು, ಎಲೈಟ್ ಅಂಕಪಟ್ಟಿಯಲ್ಲಿ ಸದ್ಯಕ್ಕೆ ಎರಡನೇ ಸ್ಥಾನಕ್ಕೆ ನೆಗೆದಿದೆ. 8 ಪಂದ್ಯವಾಡಿರುವ ಬಂಗಾಳ 32 ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದುಕೊಂಡಿದೆ. ಜಮ್ಮು ಕಾಶ್ಮೀರದ ವಿರುದ್ಧ ಕರ್ನಾಟಕ ಕ್ವಾರ್ಟರ್ ಫೈನಲ್ ಆಡಲಿದೆ.

    ಸಂಕ್ಷಿಪ್ತ ಸ್ಕೋರ್ ವಿವರ:
    ಬರೋಡಾ ಮೊದಲ ಇನ್ನಿಂಗ್ಸ್: 85/10
    ಕರ್ನಾಟಕ ಮೊದಲ ಇನ್ನಿಂಗ್ಸ್: 233/10
    ಬರೋಡಾ ದ್ವಿತೀಯ ಇನ್ನಿಂಗ್ಸ್: 296/10
    ಕರ್ನಾಟಕ ದ್ವಿತೀಯ ಇನ್ನಿಂಗ್ಸ್: 150/2 ವಿಕೆಟ್