Tag: Bargi

  • ಚಿರತೆಗೆ ವಾಹನ ಡಿಕ್ಕಿ- ಮರುಕಪಟ್ಟು ರಕ್ಷಿಸಲು ಹೋದವನ ಮೇಲೆ ದಾಳಿ

    ಚಿರತೆಗೆ ವಾಹನ ಡಿಕ್ಕಿ- ಮರುಕಪಟ್ಟು ರಕ್ಷಿಸಲು ಹೋದವನ ಮೇಲೆ ದಾಳಿ

    ಕಾರವಾರ: ವಾಹನವೊಂದು ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಚಿರತೆಯನ್ನು ರಕ್ಷಣೆಗೆ ಹೋಗಿದ್ದ ವ್ಯಕ್ತಿ ಮೇಲೆ ಚಿರತೆಯೇ ದಾಳಿ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟ ತಾಲೂಕಿನಲ್ಲಿ ನಡೆದಿದೆ.

    ಕುಮಟ ತಾಲೂಕಿನ ಚಂದ್ರಹಾಸ ನಾಯಕ ಚಿರತೆ ದಾಳಿಗೆ ಒಳಗಾದವರು. ಬರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದ್ದು, ಅದೃಷ್ಟವಶಾತ್ ಚಂದ್ರಹಾಸ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಚಂದ್ರಹಾಸ ಅವರು ದ್ವಿಚಕ್ರ ವಾಹನದಲ್ಲಿ ಅಂಕೋಲದಿಂದ ಬರ್ಗಿ ಕಡೆಗೆ ಹೋಗುತ್ತಿದ್ದರು. ಈ ವೇಳೆ ವಾಹನವೊಂದು ಹೆದ್ದಾರಿ ಮೇಲೆ ಮಲಗಿದ್ದ ಚಿರತೆಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಗಂಭೀರವಾಗಿ ಗಾಯಗೊಂಡು ಬಿದ್ದಿದ್ದ ಚಿರತೆಯನ್ನು ಕಂಡು ಚಂದ್ರಹಾಸ ರಕ್ಷಣೆಗೆ ಮುಂದಾಗಿದ್ದರು. ಆದರೆ ಚಿರತೆ ಏಕಾಏಕಿ ಅವರ ಮೇಲೆ ದಾಳಿ ಮಾಡಿ ಅಲ್ಲಿಂದ ಪರಾರಿಯಾಗಿದೆ.

    ಚಿರತೆ ದಾಳಿಯಿಂದಾಗಿ ಚಂದ್ರಹಾಸ ಅವರ ಕೈಗೆ ಗಾಯವಾಗಿತ್ತು. ತಕ್ಷಣವೇ ಸ್ಥಳೀಯರು ಅವರನ್ನು ಕುಮಟ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

    ಕುಮಟ ತಾಲೂಕಿನ ಬರ್ಗಿ ಗ್ರಾಮದಲ್ಲಿ ಇದೇ ಜನವರಿ 31ರಂದು ನಾಯಿಯನ್ನು ಅಟ್ಟಿಸಿಕೊಂಡು ಬಂದಿದ್ದ ಚಿರತೆಯೊಂದು ಆಯಾ ತಪ್ಪಿ ಬಾವಿಗೆ ಬಿದ್ದು ನರಳಾಡಿತ್ತು. ಚಿರತೆ ಬಾವಿಯಿಂದ ಏಳಲು ಪ್ರಯತ್ನಿಸಿತ್ತು. ಆಗ ಅದರ ಗರ್ಜನೆಗೆ ಮನೆಯವರಿಗೆ ಕೇಳಿಸಿ, ಬಾವಿಯಲ್ಲಿ ಚಿರತೆ ಬಿದ್ದಿರುವುದು ಗೊತ್ತಾಗಿತ್ತು. ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಸ್ಥಳಕ್ಕೆ ಆಗಮಿಸಿದ್ದ ಅರಣ್ಯ ಇಲಾಖೆಗೆ ಅಧಿಕಾರಿಗಳು, ದೊಡ್ಡ ಬುಟ್ಟಿಯನ್ನು ಇಳೆ ಬಿಡುವ ಮೂಲಕ ಚಿರತೆಯನ್ನು ಬಲೆ ಹಾಕಿ ರಕ್ಷಣೆ ಮಾಡಿದ್ದರು.