Tag: barber

  • ಸಲೂನ್‌ನಲ್ಲಿ ಜನರಿಗೆ ಕ್ಷೌರ ಮಾಡಿ ಮತಯಾಚನೆ- ಗಮನ ಸೆಳೆದ ಅಭ್ಯರ್ಥಿಯ ಚುನಾವಣಾ ಪ್ರಚಾರ

    ಸಲೂನ್‌ನಲ್ಲಿ ಜನರಿಗೆ ಕ್ಷೌರ ಮಾಡಿ ಮತಯಾಚನೆ- ಗಮನ ಸೆಳೆದ ಅಭ್ಯರ್ಥಿಯ ಚುನಾವಣಾ ಪ್ರಚಾರ

    ಚೆನ್ನೈ: ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಅಭ್ಯರ್ಥಿಗಳು ಪ್ರಚಾರ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅಂತೆಯೇ ತಮಿಳುನಾಡಿನ (Tamilnadu) ಪರಮೇಶ್ವರಂನ ರಾಮನಾಥಪುರಂ ಲೋಕಸಭಾ ಕ್ಷೇತ್ರದ (Rameswaram Ramanathapuram Loksabha Constituency) ಅಭ್ಯರ್ಥಿಯೊಬ್ಬರು ವಿಭಿನ್ನವಾಗಿ ಮತಯಾಚನೆ ಮಾಡುವ ಮೂಲಕ ಎಲ್ಲರ ಗಮನಸೆಳೆದಿದ್ದಾರೆ.

    ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿರುವ ಪಾರಿರಾಜನ್ (Independent Candidate Parirajan) ಅವರು ತಮ್ಮ ಚುನಾವಣಾ ಪ್ರಚಾರಕ್ಕೆ ವಿಶಿಷ್ಠ ಮಾರ್ಗವನ್ನು ಕಂಡುಕೊಂಡಿದ್ದಾರೆ. ಮತದಾರರ ಗಮನ ಸೆಳೆಯಲು ಸ್ವತಂತ್ರ ಅಭ್ಯರ್ಥಿ ಕೆಲವು ಸಮಯ ಕ್ಷೌರಿಕರಾದರು.

    ಸ್ವತಂತ್ರ ಅಭ್ಯರ್ಥಿಯು ಮತದಾರರನ್ನು ಓಲೈಸಲು ಕೈಯಲ್ಲಿ ರೇಜರ್ ಹಿಡಿದು ಜನರಿಗೆ ಕ್ಷೌರ ಮಾಡಿಸಲು ಮುಂದಾದರು. ಇದರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದ್ದು, ಅಭ್ಯರ್ಥಿ ಪರ- ವಿರೋಧ ಕಾಮೆಂಟ್‌ ಗಳು ಬರುತ್ತಿವೆ. ಇದನ್ನೂ ಓದಿ: ಬಿಎಸ್‌ವೈ ಸಮ್ಮುಖದಲ್ಲಿ ಸುಮಲತಾ ಅಂಬರೀಶ್‌ ಬಿಜೆಪಿ ಸೇರ್ಪಡೆ

    2024ರ 18ನೇ ಲೋಕಸಭಾ ಚುನಾವಣೆಗೆ ದೇಶಾದ್ಯಂತ ಸಿದ್ಧತೆಗಳು ಭರದಿಂದ ನಡೆಯುತ್ತಿವೆ. 2024 ರ ಮಾರ್ಚ್‌ 16ರಂದು ಲೋಕಸಭೆ ಚುನಾವಣೆಯ ದಿನಾಂಕಗಳನ್ನು ಘೋಷಿಸಿತು. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಹೊಸದಾಗಿ ನೇಮಕಗೊಂಡ ಚುನಾವಣಾ ಆಯೋಗ ಜ್ಞಾನೇಶ್ ಕುಮಾರ್ ಮತ್ತು ಸುಖ್ಬೀರ್ ಸಿಂಗ್ ಸಿಂಧು ಚುನಾವಣಾ ದಿನಾಂಕಗಳನ್ನು ಘೋಷಿಸಿದರು.

    ಈ ಬಾರಿ ದೇಶಾದ್ಯಂತ 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಜೂನ್ 4 ರಂದು ಫಲಿತಾಂಶ ಪ್ರಕಟವಾಗಲಿದೆ. ಒಟ್ಟು 44 ದಿನಗಳ ಕಾಲ ನಡೆಯಲಿರುವ ಭಾರತದಲ್ಲಿ ಇದು ಸುದೀರ್ಘ ಅವಧಿಯ ಸಾರ್ವತ್ರಿಕ ಚುನಾವಣೆಯಾಗಿದೆ. ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎರಡನೇ ಅವಧಿಯನ್ನು ಪೂರ್ಣಗೊಳಿಸಲಿದ್ದು, ಸತತ ಮೂರನೇ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.

  • ತಲೆಗೆ ಕಲರ್ ಹಾಕೋ ರೇಟ್ ವಿಚಾರಕ್ಕೆ ಜಗಳ- ಕತ್ತರಿಯಿಂದ ಇರಿದು ಗ್ರಾಹಕನ ಕೊಲೆ

    ತಲೆಗೆ ಕಲರ್ ಹಾಕೋ ರೇಟ್ ವಿಚಾರಕ್ಕೆ ಜಗಳ- ಕತ್ತರಿಯಿಂದ ಇರಿದು ಗ್ರಾಹಕನ ಕೊಲೆ

    ಬಾಗಲಕೋಟೆ: ಸಲೂನ್‍ವೊಂದರಲ್ಲಿ ತಲೆಗೆ ಕಲರ್ ಹಾಕೋದರ ರೇಟ್ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ನಡೆದಿದ್ದು, ನಗರದ ರಬಕವಿ ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ಸಾಗರ್ ಅವಟಿ (22) ಕೊಲೆಗೀಡಾದ ಯುವಕ. ಸದಾಶಿವ ನಾವಿ ಕೊಲೆ ಮಾಡಿದ ಕ್ಷೌರಿಕ. ಸಾಗರ್ ತಲೆಗೆ ಕಲರ್ ಹಚ್ಚಿಸೋಕೆ ಬಂದಿದ್ದನು. ಈ ವೇಳೆ ಸಲೂನ್ ಮಾಲೀಕ ಲಕ್ಷ್ಮಣ ಕಲರ್ ಹಚ್ಚೋದಕ್ಕೆ ಮುಂದಾಗಿದ್ದನು. ಇನ್ನೊಂದು ಟೇಬಲ್‍ನಲ್ಲಿ ಸದಾಶಿವ ನಾವಿ ಬೇರೊಬ್ಬನ ಕಟಿಂಗ್ ಮಾಡುತ್ತಿದ್ದನು. ಈ ಸಂದರ್ಭದಲ್ಲಿ ಸಲೂನ್ ಮಾಲೀಕನು ಸಾಗರ್‌ಗೆ ಕಲರ್ ಹಚ್ಚೋದಕ್ಕೆ 20 ರೂ. ಕೊಡೋದಾಗಿ ಹೇಳಿದ್ದನು. ನಂತರದಲ್ಲಿ ಸದಾಶಿವ ನಾವಿ ಇದಕ್ಕೆ ತಕರಾರು ತೆಗೆದು ಜಗಳಕ್ಕೆ ಇಳಿದಿದ್ದಾನೆ. ಇದನ್ನೂ ಓದಿ: ವೇಶ್ಯಾವಾಟಿಕೆ ಅಕ್ರಮವಲ್ಲ – ಸುಪ್ರೀಂಕೋರ್ಟ್ ಮಹತ್ವದ ತೀರ್ಪು

    ಈ ವೇಳೆ ಜಗಳವು ತಾರಕಕ್ಕೇರಿದ್ದು ಸದಾಶಿವ ಅಲ್ಲೇ ಇದ್ದ ಕತ್ತರಿಯಿಂದ ಆತನಿಗೆ ಎದೆಯ ಎಡಭಾಗಕ್ಕೆ ಚುಚ್ಚಿದ್ದಾನೆ. ಈ ಮೊದಲು ಸಾಗರ, ಸದಾಶಿವ ನಾವಿಯನ್ನು ಅವಮಾನ ಮಾಡಿ ಕಾಡಿಸುತ್ತಿದ್ದನಂತೆ. ನಿನ್ನೆ ಕೂಡ ಕೆಲ ಹೊತ್ತು ಕ್ಷೌರಿಕನಿಗೆ ಆತ ಕಾಡಿಸಿದ್ದನಂತೆ. ನಂತರ ತಲೆಗೆ ಕಲರ್ ಹಚ್ಚುವಾಗ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಇದನ್ನೂ ಓದಿ: ಅಸ್ಸಾಂ ಪ್ರವಾಹ: ಸಾವಿನ ಸಂಖ್ಯೆ 30ಕ್ಕೆ ಏರಿಕೆ

    ಈ ವೇಳೆ ಕೂಡಲೇ ಸಾಗರನನ್ನು ಜಮಖಂಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೆ ಆತ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಬನಹಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

  • ಹೆಣ್ಣು ಮಗುವಿಗೆ ತಂದೆಯಾದ ಕ್ಷೌರಿಕ- ಫ್ರೀ ಕಟ್ಟಿಂಗ್

    ಹೆಣ್ಣು ಮಗುವಿಗೆ ತಂದೆಯಾದ ಕ್ಷೌರಿಕ- ಫ್ರೀ ಕಟ್ಟಿಂಗ್

    – ಮೂರು ಸಲೂನ್ ಗಳಲ್ಲಿ ಉಚಿತ ಸೇವೆ
    – ಕ್ಷೌರಿಕನ ಕೆಲಸಕ್ಕೆ ಗ್ರಾಮಸ್ಥರಿಂದ ಮೆಚ್ಚುಗೆ

    ಭೋಪಾಲ್ : ಹೆಣ್ಣು ಮಗುವಿನ ತಂದೆಯಾದ ಸಂಭ್ರಮವನ್ನು ವಿಶೇಷವಾಗಿ ಆಚರಿಸುವ ಮೂಲಕ ಕ್ಷೌರಿಕರೊಬ್ಬರು ಗಮನ ಸೆಳೆದಿದ್ದಾರೆ. ಹೆಣ್ಣು ಮಗು ಹುಟ್ಟಿದ ಕಾರಣಕ್ಕಾಗಿ ತನ್ನ ಕ್ಷೌರದ ಅಂಗಡಿಗೆ ಬರುವ ಗ್ರಾಹಕರಿಗೆ ಒಂದು ದಿನದ ಕಟ್ಟಿಂಗ್‍ನ್ನು ಉಚಿತವಾಗಿ ಮಾಡಿದ್ದಾರೆ.

    ಮಧ್ಯಪ್ರದೇಶದ ಗ್ವಾಲಿಯರ್‍ನಲ್ಲಿ 3 ಸಲೂನ್‍ಗಳನ್ನು ನಡೆಸುತ್ತಿರುವ ಸಲ್ಮಾನ್ ಎಂಬವರು ತಮಗೆ ಹೆಣ್ಣು ಮಗುವಾದ ಸಂಭ್ರಮಾಚರಣೆಯನ್ನು ಮಾಡಿ ಸಮಾಜಕ್ಕೆ ವಿಶೇಷವಾದ ಸಂದೇಶ ರವಾನಿಸಿದ್ದಾರೆ.

    ಸಲ್ಮಾನ್ ಅವರಿಗೆ ಡಿಸೆಂಬರ್ 26 ರಂದು ಹೆಣ್ಣು ಮಗು ಜನಿಸಿತ್ತು. ಈ ಸಂಭ್ರಮವನ್ನು ವಿಶೇಷವಾಗಿ ಆಚರಿಸಲು ನಿರ್ಧರಿಸಿದ ಇವರು ತಮ್ಮ ಸಲೂನ್‍ಗಳಲ್ಲಿ ಉಚಿತವಾಗಿ 1 ದಿನದ ಸೇವೆ ಸಲ್ಲಿಸಿದ್ದಾರೆ. ಮೂರು ಸಲೂನ್‍ಗಳ ಮಾಲೀಕರಾಗಿರುವ ಸಲ್ಮಾನ್ ತಮ್ಮ ಎಲ್ಲ ಶಾಪ್ ಗಳಲ್ಲೂ ಉಚಿತವಾಗಿ ಗ್ರಾಹಕರಿಗೆ ಕಟ್ಟಿಂಗ್ ಮಾಡಿದ್ದಾರೆ.

    ಹೆಣ್ಣು ಮಕ್ಕಳು ಹುಟ್ಟಿದ ತಕ್ಷಣ ಕೆಲ ಜನರು ದುಃಖಿತರಾಗುತ್ತಾರೆ. ಇವರ ಮಧ್ಯೆ ನಾನು ಗಂಡು ಹೆಣ್ಣು ಎಂಬ ಲಿಂಗವನ್ನು ಲೆಕ್ಕಿಸದೆ ಮಗುವಿನ ಜನನದ ಬಗ್ಗೆ ಜನರು ಸಂತೋಷವಾಗಿರಬೇಕೆಂದು ತೋರಿಸುವ ಉದ್ದೇಶದಿಂದ ನಮ್ಮ ಮೂರು ಅಂಗಡಿಗಳಲ್ಲಿ ಈ ರೀತಿಯ ಸೇವೆಗೆ ನಿರ್ಧಾರ ಮಾಡಿರುವುದಾಗಿ ಸಲ್ಮಾನ್ ಸಂತೋಷ ಹಂಚಿಕೊಂಡರು.

    ಸಾಂದರ್ಭಿಕ ಚಿತ್ರ

    ಮಗಳ ಜನನವನ್ನು ಆಚರಿಸಲು ನಿರ್ಧಾರ ಮಾಡಿದ ಸಲ್ಮಾನ್ ತಮ್ಮ ಅಂಗಡಿಯ ಮುಂಭಾದಲ್ಲಿ ಪೋಸ್ಟರ್ ಒಂದನ್ನು ಹಾಕಿಕೊಂಡಿದ್ದರು. ನಮ್ಮ ಮನೆಯಲ್ಲಿ ಹೆಣ್ಣು ಮಗುವಿನ ಜನನವನ್ನು ಸ್ವಾಗತಿಸಲು ಜನವರಿ 4 ರಂದು ಗ್ರಾಹಕರಿಗೆ ಉಚಿತವಾಗಿ ಸೇವೆ ಲಭ್ಯವಿರುತ್ತದೆ ಎಂದು ಪೋಸ್ಟರ್ ನಲ್ಲಿ ನಮೂದಿಸಿದ್ದರು. ಅದರಂತೆ ಜನವರಿ 4 ರಂದು 70 ರಿಂದ 80 ಜನರಿಗೆ ಉಚಿತವಾಗಿ ಸೇವೆ ಸಲ್ಲಿಸಿದ್ದೇವೆ. ಇದರ ಮೌಲ್ಯ 3 ಸಾವಿರ ದಿಂದ 3 ಸಾವಿರದ ಐನೂರು ರೂಪಾಯಿ ಆಗಿದೆ ಎಂದರು.

    ನಾವೆಲ್ಲರೂ ಹೆಣ್ಣು ಮಗುವಿನ ಜನನವನ್ನು ಆಚರಿಸಬೇಕು. ಇದು ಸಮಾಜಕ್ಕೆ ಸಕಾರಾತ್ಮಕ ಸಂದೇಶವನ್ನು ನೀಡುತ್ತದೆ ಎಂದು ಗ್ರಾಹಕರೊಬ್ಬರು ಸಲ್ಮಾನ್ ಕಾರ್ಯಕ್ಕೆ ಬೆಂಬಲ ಸೂಚಿಸಿದರು.

    ಹೆಣ್ಣು ಮಗು ಜನಿಸಿದರೆ ಹೆಚ್ಚಾಗಿ ಇಷ್ಟಪಡದೆ ಇರುವ ಜನಗಳ ಮಧ್ಯೆ ಸಲ್ಮಾನ್ ಅವರು ಖುಷಿ ಪಟ್ಟು ಸಮಾಜಕ್ಕೆ ಹೆಣ್ಣು ಮಗುವಿನ ಜನನದ ಸಿಹಿ ಈ ರೀತಿ ಹಂಚಿರುವುದನ್ನು ಕಂಡು ಎಲ್ಲೆಡೆಯಿಂದ ಮೆಚ್ಚುಗೆಯ ಮಹಾಪೂರ ಹರಿದುಬಂದಿದೆ.

  • ಹೇರ್ ಕಟಿಂಗ್ ಮಾಡಿದ್ದಕ್ಕೆ ಶಿಕ್ಷೆ – 50 ಸಾವಿರ ದಂಡದ ಜೊತೆ ಸಾಮಾಜಿಕ ಬಹಿಷ್ಕಾರ!

    ಹೇರ್ ಕಟಿಂಗ್ ಮಾಡಿದ್ದಕ್ಕೆ ಶಿಕ್ಷೆ – 50 ಸಾವಿರ ದಂಡದ ಜೊತೆ ಸಾಮಾಜಿಕ ಬಹಿಷ್ಕಾರ!

    – ಆರೋಪಿಗಳ ವಿರುದ್ಧ ಕ್ರಮಕ್ಕೆ ತಹಶೀಲ್ದಾರ್ ಸೂಚನೆ

    ಮೈಸೂರು: ವಂಶಪಾರಂಪರ್ಯವಾಗಿ ಗ್ರಾಮದಲ್ಲಿ ಕ್ಷೌರಿಕ ಕೆಲಸ ಮಾಡುತ್ತಿರುವ ಏಕೈಕ ಕುಟುಂಬವೊಂದಕ್ಕೆ ಗ್ರಾಮದ ಮುಖಂಡರು ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ಅಲ್ಲದೆ 50 ಸಾವಿರ ದಂಡ ಕಟ್ಟುವಂತೆ ಆದೇಶ ಹೊರಡಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

    ಹೌದು. ಹಲ್ಲರೆ ಗ್ರಾಮದ ಮಲ್ಲಿಕಾರ್ಜುನ ಶೆಟ್ಟಿ ಕುಟುಂಬಸ್ಥರಿಗೆ ಈ ಶಿಕ್ಷೆ ನೀಡಲಾಗಿದೆ. ಈ ಮೂಲಕ ನಂಜನಗೂಡಿನ ಹಲ್ಲರೆ ಗ್ರಾಮದಲ್ಲಿ ಸಾಮಾಜಿಕ ಬಹಿಷ್ಕಾರದ ಪಿಡುಗು ಇನ್ನೂ ಜೀವಂತವಾಗಿರುವಂತೆ ಕಾಣುತ್ತಿದೆ.

    ಗ್ರಾಮದ ಚನ್ನನಾಯಕ ಮತ್ತು ಸಹಚರರು ಮಲ್ಲಿಕಾರ್ಜುನ ಅವರಿಗೆ ಹಲ್ಲರೆ ಗ್ರಾಮದ ಪರಿಶಿಷ್ಟ ಜಾತಿ ವರ್ಗದವರಿಗೆ ಕಟಿಂಗ್ ಮತ್ತು ಶೇವಿಂಗ್ ಮಾಡಬಾರದೆಂದು ನಿರ್ಬಂಧ ಹಾಕಿದ್ದರು. ಆದರೆ ಮಲ್ಲಿಕಾರ್ಜುನ ಅವರು ಗ್ರಾಮದ ಮುಖಂಡರ ಆದೇಶ ಧಿಕ್ಕರಿಸಿ ಪರಿಶಿಷ್ಠ ಜಾತಿ ವರ್ಗದವರಿಗೆ ಹೇರ್ ಕಟಿಂಗ್ ಮಾಡಿದ್ದಾರೆ.

    ಇದರಿಂದ ರೊಚ್ಚಿಗೆದ್ದ ಚೆನ್ನನಾಯಕ ಮತ್ತು ಸಹಚರರು ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ಈ ಮೂಲಕ ಜಾತಿ ತಾರತಮ್ಯವಿಲ್ಲದೆ ಕಸುಬಿನಲ್ಲಿ ತೊಡಗಿದ್ದ ಕುಟುಂಬಕ್ಕೆ ಶಿಕ್ಷೆ ವಿಧಿಸಿದ್ದಾರೆ. ಅಲ್ಲದೆ 50 ಸಾವಿರ ದಂಡ ಕಟ್ಟುವಂತೆ ಆದೇಶ ಕೂಡ ಹೊರಡಿಸಿದ್ದಾರೆ.

    ಮಲ್ಲಿಕಾರ್ಜುನ ಶೆಟ್ಟಿ ಅವರು ಈಗಾಗಲೇ ಎರಡು ಬಾರಿ ದಂಡ ಕಟ್ಟಿದ್ದಾರೆ. ಇತ್ತ ಕಳೆದ 2 ತಿಂಗಳಿಂದ ನೊಂದ ಮಲ್ಲಿಕಾರ್ಜುನ ಕುಟುಂಬ ತಹಶೀಲ್ದಾರ್ ಕಚೇರಿಗೆ ಅಲೆಯುತ್ತಿದೆ. ಅಲ್ಲದೆ ಸಾಮಾಜಿಕ ಬಹಿಷ್ಕಾರದಿಂದ ಆತ್ಮಹತ್ಯೆಯ ದಾರಿ ಹಿಡಿಯಲು ನಿರ್ಧಾರ ಮಾಡಿದ್ದು, ನಂಜನಗೂಡಿನ ತಹಶೀಲ್ದಾರ್ ಮಹೇಶ್ ಕುಮಾರ್ ಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿರುವ ತಹಶೀಲ್ದಾರ್ ಅವರು ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಪತ್ರ ಬರೆದಿದ್ದಾರೆ.

  • ಮನೆಯೇ ಮಂತ್ರಾಲಯ ಇಂಪ್ಯಾಕ್ಟ್ – ಕ್ಷೌರಿಕನ ಸಹಾಯಕ್ಕೆ ಬಂದ ಶಾಸಕ

    ಮನೆಯೇ ಮಂತ್ರಾಲಯ ಇಂಪ್ಯಾಕ್ಟ್ – ಕ್ಷೌರಿಕನ ಸಹಾಯಕ್ಕೆ ಬಂದ ಶಾಸಕ

    ಮಂಗಳೂರು: ಪಬ್ಲಿಕ್ ಟಿವಿಯ ಮನೆಯೇ ಮಂತ್ರಾಲಯ ಕಾರ್ಯಕ್ರಮಕ್ಕೆ ಕರೆ ಮಾಡಿದ್ದ ದಕ್ಷಿಣ ಕನ್ನಡದ ಬೆಳ್ತಂಗಡಿಯ ಸಲೂನ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಮಲ್ಲೇಶ್ ಎಂಬವರಿಗೆ ಬೇಕಾದ ದಿನಚರಿ ವಸ್ತುಗಳನ್ನು ಇಂದು ನೀಡಲಾಯಿತು.

    ಮಲ್ಲೇಶ್ ಚಿತ್ರದುರ್ಗ ಮೂಲದವರಾಗಿದ್ದು ಕಳೆದ ಕೆಲವು ವರ್ಷದಿಂದ ಬೆಳ್ತಂಗಡಿಯ ಸಲೂನ್ ನಲ್ಲಿ ಕೆಲಸ ಮಾಡುತ್ತಿದ್ದು ಲಾಕ್ ಡೌನ್ ಬಳಿಕ ಸಲೂನ್ ಓಪನ್ ಆದ್ರೂ ಜನ ಬರದೇ ದಿನಕ್ಕೆ 100 ರೂಪಾಯಿ ಸಂಪಾದನೆ ಮಾಡಲು ಸಾಧ್ಯವಾಗದೆ ಊಟಕ್ಕೂ ಕಷ್ಟವಾಗಿತ್ತು. ಹೀಗಾಗಿ ಮನೆಯೇ ಮಂತ್ರಾಲಯ ಕಾರ್ಯಕ್ರಮಕ್ಕೆ ಮಲ್ಲೇಶ್ ಕರೆ ಮಾಡಿದ್ದರು.

    ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ “ಶ್ರಮಿಕ ನೆರವು” ಮೂಲಕ ದಿನ ಬಳಕೆಗೆ ಬೇಕಾದ ಅಕ್ಕಿ, ದಿನಸಿ ಸಾಮಾಗ್ರಿಗಳನ್ನು ಇಂದು ಹಸ್ತಾಂತರಿಸಲಾಯಿತು. ಈ ಸಂದರ್ಭ ಮಾತನಾಡಿದ ಮಲ್ಲೇಶ್ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಎಚ್.ಆರ್.ರಂಗನಾಥ್ ಹಾಗೂ ಶಾಸಕ ಹರೀಶ್ ಪೂಂಜಾ ಬಳಗಕ್ಕೆ ಕೃತಜ್ಞತೆ ಸಲ್ಲಿಸಿದರು. ಈ ವೇಳೆ ಜಗದೀಶ್ ಲಾಯಿಲಾ, ರಾಜೇಶ್ ಪೆಂರ್ಬುಡ, ಪ್ರತೀಶ್ ಹೊಸಂಗಡಿ, ಸುಪ್ರಿತ್ ಜೈನ್, ಆದೇಶ್ ಶೆಟ್ಟಿ ಜೊತೆಗಿದ್ದರು.

  • ಮಗನ ಹೇರ್ ಕಟ್ ಮಾಡಿದ ಸಚಿನ್- ವಿಡಿಯೋ

    ಮಗನ ಹೇರ್ ಕಟ್ ಮಾಡಿದ ಸಚಿನ್- ವಿಡಿಯೋ

    ಮುಂಬೈ: ಬ್ಯಾಟಿಂಗ್ ಕೌಶಲ್ಯದಿಂದ ವಿಶ್ವದಾದ್ಯಂತ ಪ್ರಸಿದ್ಧರಾಗಿರುವ, ಕ್ರಿಕೆಟ್ ದಂತ ಕಥೆ ಸಚಿನ್ ತೆಂಡೂಲ್ಕರ್ ಅವರು ಲಾಕ್‍ಡೌನ್‍ನಿಂದಾಗಿ ಮಗನ ಹೇರ್ ಕಟಿಂಗ್ ಮಾಡಿದ್ದಾರೆ.

    ಈ ಹಿಂದೆ ಸಚಿನ್ ಸ್ವತಃ ತಮ್ಮ ಕೂದಲನ್ನು ಕತ್ತರಿಸಿಕೊಂಡಿದ್ದರು. ಇದಾದ ಒಂದು ತಿಂಗಳ ನಂತರ, ತಮ್ಮ ಮಗ ಅರ್ಜುನ್ ತೆಂಡೂಲ್ಕರ್ ಹೇರ್ ಕಟ್ ಮಾಡಿದ್ದಾರೆ. ತಮ್ಮ 20 ವರ್ಷದ ಮಗನ ಹೇರ್ ಕಟಿಂಗ್ ಮಾಡುತ್ತಿರುವ ವಿಡಿಯೋವನ್ನು ಲಿಟಲ್ ಮಾಸ್ಟರ್ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಇಂದು ಹಂಚಿಕೊಂಡಿದ್ದಾರೆ. ಜೊತೆಗೆ ಈ ವೇಳೆ ಸಹಾಯಕ್ಕೆ ನಿಂತ ಮಗಳು ಸಾರಾಗೆ ಸಚಿನ್ ಧನ್ಯವಾದ ತಿಳಿಸಿದ್ದಾರೆ.

    ತಂದೆಯಾಗಿ ನೀವು ಎಲ್ಲವನ್ನೂ ಮಾಡಬೇಕಾಗುತ್ತದೆ. ನಿಮ್ಮ ಮಕ್ಕಳೊಂದಿಗೆ ಆಟವಾಡುವುದು, ಅವರೊಂದಿಗೆ ಜಿಮ್ ಮಾಡುವುದು ಅಥವಾ ಅವರ ಕೂದಲನ್ನು ಕತ್ತರಿಸುವುದು ಎಂದು ಸಚಿನ್ ಬರೆದುಕೊಂಡಿದ್ದಾರೆ. ಜೊತೆಗೆ ಕಟಿಂಗ್ ಹೇಗಾದರೂ ನೀನು ಯಾವಾಗಲೂ ಸುಂದರವಾಗಿ ಕಾಣುತ್ತಿಯಾ ಅರ್ಜುನ್. ನನ್ನ ಈ ಸಲೂನ್‍ಗೆ ಸಹಾಯಕಳಾದ ಸಾರಾಗೆ ವಿಶೇಷ ಧನ್ಯವಾದಗಳು ಎಂದು ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

    ಕೊರೊನಾವೈರಸ್ ಲಾಕ್‍ಡೌನ್‍ನ ನಾಲ್ಕನೇ ಹಂತವನ್ನು ಘೋಷಿಸಿದ ಬಳಿಕ ಸರ್ಕಾರವು ಕೆಲವು ನಿರ್ಬಂಧಗಳನ್ನು ಸಡಿಲಗೊಳಿಸಿದ್ದರೂ, ಸಲೂನ್‍ಗಳನ್ನು ತೆರೆಯಲು ಇನ್ನೂ ಅವಕಾಶ ನೀಡಿಲ್ಲ. ಇದರಿಂದಾಗಿ ಜನರು ತಮ್ಮ ಕುಟುಂಬ ಸದಸ್ಯರಿಗೆ ಹೇರ್ ಕಟಿಂಗ್ ಮಾಡುವುದನ್ನು ಬಿಟ್ಟರೆ ಬೇರೆ ದಾರಿಯೇ ಇಲ್ಲದಂತಾಗಿದೆ. ಹೀಗಾಗಿ ಸಚಿನ್ ತೆಂಡೂಲ್ಕರ್ ಅವರು ಮಗ ಅರ್ಜುನ್ ಅವರ ಹೇರ್ ಕಟಿಂಗ್ ಮಾಡಿದ್ದಾರೆ.

    https://www.instagram.com/p/CAXhC5klnr-/

    ಕೇಂದ್ರ ಸರ್ಕಾರವು ಮಾರ್ಚ್ ನಲ್ಲಿ ಮೊದಲ ಹಂತದ ಲಾಕ್‍ಡೌನ್ ಘೋಷಿಸಿದ ಕೆಲವೇ ದಿನಗಳ ನಂತರ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಕೂದಲನ್ನು ಪತ್ನಿ ಅನುಷ್ಕಾ ಶರ್ಮಾ ಕತ್ತರಿಸಿದ್ದರು.

  • ಕೊರೊನಾದಿಂದ ಮೃತ ವೃದ್ಧನಿಗೆ ಕ್ಷೌರ ಮಾಡಿದ್ದ ಕ್ಷೌರಿಕನಿಗೆ ಕ್ವಾರಂಟೈನ್

    ಕೊರೊನಾದಿಂದ ಮೃತ ವೃದ್ಧನಿಗೆ ಕ್ಷೌರ ಮಾಡಿದ್ದ ಕ್ಷೌರಿಕನಿಗೆ ಕ್ವಾರಂಟೈನ್

    ಚಿಕ್ಕಬಳ್ಳಾಪುರ: ನಗರದಲ್ಲಿ ಕೊರೊನಾಗೆ ಬಲಿಯಾದ ವೃದ್ಧನಿಗೆ ಕ್ಷೌರ ಮಾಡಿದ್ದ ಕ್ಷೌರಿಕನನ್ನೂ ಇದೀಗ ಕ್ವಾರಂಟೈನ್‍ನಲ್ಲಿ ಇಡಲಾಗಿದೆ. ಇದರ ಜೊತೆಗೆ ಈ ಕ್ಷೌರಿಕನ ಬಳಿ ಕ್ಷೌರ ಮಾಡಿಸಿಕೊಂಡವರಿಗೆ ಈಗ ಕೊರೊನಾ ಆತಂಕ ಶುರುವಾಗಿದೆ.

    ಕಳೆದ 4 ದಿನಗಳ ಹಿಂದೆ ಚಿಕ್ಕಬಳ್ಳಾಪುರ ನಗರದ 65 ವರ್ಷದ ವೃದ್ಧ ಕೊರೊನಾಗೆ ಬಲಿಯಾಗಿದ್ದರು. ಈಗಾಗಲೇ ವೃದ್ಧನ ಮಗ ಹಾಗೂ ಮನೆಯ ಎದುರಗಡೆಯ ಇಬ್ಬರು ಯುವಕರಿಗೆ ಕೊರೊನಾ ಸೋಂಕಿರುವುದು ದೃಢವಾಗಿದೆ. ಹೀಗಾಗಿ ಇವರ ಬಳಿ ಕ್ಷೌರ ಮಾಡಿಸಿಕೊಂಡವರಿಗೂ ಕೊರೊನಾ ಭೀತಿ ಎದುರಾಗಿದೆ.

    ಲಾಕ್‍ಡೌನ್ ಹಿನ್ನೆಲೆ ಮಾರ್ಚ್ ತಿಂಗಳ ಅಂತ್ಯದಲ್ಲಿ ವೃದ್ಧನ ಮನೆಗೆ ಹೋಗಿ ಕ್ಷೌರ ಮಾಡಿದ್ದರು. ಇದಾದ ಬಳಿಕ ವೃದ್ಧ ಆಸ್ಪತ್ರೆಗೆ ದಾಖಲಾಗಿದ್ದರು. ಸದ್ಯ ಕ್ಷೌರಿಕನಿಗೆ ಕೊರೊನಾ ಭೀತಿ ಶುರುವಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಮೃತ ಸೊಂಕಿತನ ಏರಿಯಾದಲ್ಲೇ ಕ್ಷೌರಿಕ ಅಂಗಡಿ ಇಟ್ಟುಕೊಂಡಿರುವ 65 ವರ್ಷದ ವ್ಯಕ್ತಿಯನ್ನು ಇನ್ಸ್ಟಿಟಿಟ್ಯೂಟ್ ಕ್ವಾರಂಟೈನ್ ಮಾಡಲಾಗಿದೆ. ಈತನ ಪತ್ನಿ ಹಾಗೂ ಮಗನನ್ನು ಹೋಮ್ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಈ ಕ್ಷೌರಿಕ ಸಾವನ್ನಪ್ಪಿದ ವೃದ್ಧನಿಗೆ ಕ್ಷೌರ ಮಾಡಿ ಬಂದ ನಂತರ ಸುಮಾರು 50ಕ್ಕೂ ಹೆಚ್ಚು ಮಂದಿಗೆ ಕ್ಷೌರ ಮಾಡಿದ್ದಾರೆ ಎನ್ನಲಾಗಿದ್ದು, ಈಗ ಅವರಿಗೂ ಕೊರೊನಾ ಆತಂಕ ಶುರುವಾಗಿದೆ.

    ಕ್ಷೌರಿಕನ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಜಿಲ್ಲಾಡಳಿತ ವರದಿಯ ನಿರೀಕ್ಷೆಯಲ್ಲಿದೆ. ಈ ವೃದ್ಧನ ಬಳಿ ಯಾರಾದರೂ ಕ್ಷೌರ ಮಾಡಿಸಿಕೊಂಡಿದ್ದಲ್ಲಿ ಸ್ವಯಂಪ್ರೇರಿತವಾಗಿ ಪರೀಕ್ಷೆಗೆ ಒಳಪಡುವಂತೆ ಜಿಲ್ಲಾಡಳಿತ ಹಾಗೂ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.

  • ಮೀಸೆಗೆ ಕತ್ತರಿ – ಕ್ಷೌರಿಕನ ವಿರುದ್ಧ ದೂರು ದಾಖಲು

    ಮೀಸೆಗೆ ಕತ್ತರಿ – ಕ್ಷೌರಿಕನ ವಿರುದ್ಧ ದೂರು ದಾಖಲು

    ಮುಂಬೈ: ತಲೆ ಕೂದಲು ಕತ್ತರಿಸುವ ಬದಲು ಮೀಸೆ ಬೋಳಿಸಿದಕ್ಕೆ ನಡೆದ ನಡೆದ ಗಲಾಟೆ ಈಗ ಪೊಲೀಸ್ ಠಾಣೆಯವರೆಗೆ ತಲುಪಿದೆ.

    ಮಹಾರಾಷ್ಟ್ರದ ನಾಗ್ಪುರ ನಿವಾಸಿ ಕಿರಣ್ ಠಾಕೂರ್ (35), ಕ್ಷೌರಿಕ ಸುನಿಲ್ ಲಕ್ಷಣೆ ವಿರುದ್ಧ ದೂರು ದಾಖಲಿಸಿದ್ದಾರೆ. ಕ್ಷೌರದಂಗಡಿಯಿಂದ ಮನೆಗೆ ಹೋದಾಗ ನನ್ನ ಮೀಸೆಯನ್ನು ಕತ್ತರಿಸಿರೋದು ಗಮನಕ್ಕೆ ಬಂದಿದೆ. ನಾನು ಕೂಡಲೇ ಸುನಿಲ್‍ಗೆ ಕರೆ ಮಾಡಿ, ನನ್ನ ಅನುಮತಿ ಪಡೆಯದೇ ಹೇಗೆ ಮೀಸೆಗೆ ಕತ್ತರಿ ಹಾಕಿದೆ ಎಂದು ಪ್ರಶ್ನಿಸಿದೆ. ಆದ್ರೆ ಸುನಿಲ್ ತಪ್ಪನ್ನು ಒಪ್ಪಿಕೊಳ್ಳದೇ ನನಗೆ ಬೆದರಿಕೆ ಹಾಕಿದ ಎಂದು ಕಿರಣ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಕಿರಣ್ ದೂರಿನನ್ವಯ ಪೊಲೀಸರು ಐಪಿಸಿ ಸೆಕ್ಷನ್ 507 (ಜೀವ ಬೆದರಿಕೆ) ಅಡಿ ಆರೋಪಿ ಸುನಿಲ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆ ಬಳಿಕ ಕ್ಷೌರಿಕ ಸಮಾಜದ ಮುಖ್ಯಸ್ಥರು ಮಾಹಿತಿ ಪಡೆದು, ಕಿರಣ್ ಅವರಿಗೆ ಯಾವುದೇ ಕ್ಷೌರಿಕ ಸೇವೆ ಒದಗಿಸಬಾರದು ಎಂದು ಆದೇಶ ಹೊರಡಿಸಿದ್ದಾರೆ.

    ಘಟನೆ ಕುರಿತು ಪ್ರತಿಕ್ರಿಯಿಸಿರುವ ಕ್ಷೌರಿಕ ಸಮಾಜದ ಅಧ್ಯಕ್ಷ ಶರದ್ ವಾಟಕರ್, ಗ್ರಾಹಕ ಕಿರಣ್ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು. ಮೀಸೆ ಕತ್ತರಿಸುವ ಮುನ್ನ ಗ್ರಾಹಕನ ಅನುಮತಿ ಪಡೆಯಲಾಗಿತ್ತು. ಅಂಗಡಿಯಿಂದ ಹೊರ ಹೋದ ಗ್ರಾಹಕ ಕಿರಣ್ ಸಂಜೆ ಬಂದು ಗಲಾಟೆ ಮಾಡಿದ್ದಾನೆ. ಪ್ರಕರಣದ ಹಿನ್ನೆಲೆಯಲ್ಲಿ ಗ್ರಾಹಕನ ವಿರುದ್ಧ ದೂರು ದಾಖಲಿಸಲಾಗಿದೆ. ಇಂದು(ಸೋಮವಾರ) ಘಟನೆಯನ್ನು ಖಂಡಿಸಿ ಕನಹನ ಕ್ಷೇತ್ರದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.

  • ದಲಿತರಿಗೆ ಅಂಗಡಿ ಪ್ರವೇಶ ನಿರ್ಬಂಧಿಸಿದ ಮುಸ್ಲಿಂ ಕ್ಷೌರಿಕರು

    ದಲಿತರಿಗೆ ಅಂಗಡಿ ಪ್ರವೇಶ ನಿರ್ಬಂಧಿಸಿದ ಮುಸ್ಲಿಂ ಕ್ಷೌರಿಕರು

    ಲಕ್ನೋ: ಉತ್ತರ ಪ್ರದೇಶದ ಒಂದು ಹಳ್ಳಿಯಲ್ಲಿ ದಲಿತರಿಗೆ ಪ್ರವೇಶ ನಿರಾಕಾರಿಸಿದ ಮುಸ್ಲಿಂ ಕ್ಷೌರಿಕರ ಮೇಲೆ ಗ್ರಾಮದ ದಲಿತ ಯುವಕರು ಪೊಲೀಸರಿಗೆ ದೂರು ನೀಡಿದ್ದಾರೆ.

    ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯ ಭೋಜಪುರ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಪೀಪಲ್ಸಾನ ಎಂಬ ಗ್ರಾಮದಲ್ಲಿ. ಮುಸ್ಲಿಂ ಸಮುದಾಯವೇ ಹೆಚ್ಚು ಇರುವ ಈ ಗ್ರಾಮದಲ್ಲಿ ದಲಿತರಿಗೆ ಕ್ಷೌರದ ಅಂಗಡಿಗೆ ಪ್ರವೇಶ ನೀಡುತ್ತಿಲ್ಲ ಮತ್ತು ನಮಗೆ ಹೇರ್ ಕಟ್ ಮಾಡುತ್ತಿಲ್ಲ ಎಂದು ದಲಿತರು ಪೊಲೀಸರಿಗೆ ದೂರು ನೀಡಿದ್ದಾರೆ.

    ಪೀಪಲ್ಸಾನ ಗ್ರಾಮದ ದಲಿತರು ನಮ್ಮ ಗ್ರಾಮದಲ್ಲಿ ಮುಸ್ಲಿಂ ಕ್ಷೌರಿಕರು ಜಾತಿ ಆಧಾರಿತ ತಾರತಮ್ಯವನ್ನು ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ದೂರಿನ ವಿರುದ್ಧ ತಮ್ಮ ಕ್ಷೌರದ ಅಂಗಡಿಯನ್ನು ಮುಚ್ಚಿ ಪ್ರತಿಭಟನೆ ಮಾಡಿರುವ ಮುಸ್ಲಿಂರು ನಾವು ದಲಿತರಿಗೆ ನಮ್ಮ ಅಂಗಡಿಯಲ್ಲಿ ಹೇರ್ ಕಟ್ ಮಾಡಿದರೆ, ನಮ್ಮ ಸಮಾಜದವರು ಅಂಗಡಿಗೆ ಬರುವುದಿಲ್ಲ ಎಂದು ವಾದಿಸಿದ್ದಾರೆ.

    ನಾವು ನಮ್ಮ ಜೀವನ ಪೂರ್ತಿ ಈ ಜಾತಿ ಆಧಾರಿತ ತಾರತಮ್ಯವನ್ನು ಅನುಭವಿಸಿದ್ದೇವೆ. ಆದರೆ ನಮ್ಮ ಸಮಾಜದ ಮುಂದಿನ ಪೀಳಿಗೆ ಈ ತಾರತಮ್ಯವನ್ನು ಅನುಭವಿಸಬಾರದು. ಈ ಜಾತಿ ಆಧಾರಿತ ತಾರತಮ್ಯ ನಮ್ಮ ಕಾಲಕ್ಕೆ ಕೊನೆಗೊಳ್ಳಬೇಕು. ಆದರೆ ಮುಸ್ಲಿಮರು ನಡೆಸುವ ಸಲೂನ್‍ಗಳಿಗೆ ನಮ್ಮ ಮಕ್ಕಳು ಭೇಟಿ ನೀಡಿದಾಗ ತಾರತಮ್ಯಕ್ಕೊಳಗಾಗುತ್ತಾರೆ ಎಂದು ಗ್ರಾಮದ ದಲಿತರು ಹೇಳಿದ್ದಾರೆ.

    ತಮ್ಮ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ ಮತ್ತು ಬದಲಾಗುತ್ತಿರುವ ಈ ಜಗತ್ತಿನಲ್ಲಿ ಪ್ರತಿಯೊಬ್ಬರೂ ಘನತೆಯಿಂದ ಬದುಕಲು ಅವಕಾಶ ನೀಡಬೇಕು. ಈ ವಿಷಯವನ್ನು ಬಗೆಹರಿಸಲಾಗುವುದು ಎಂದು ಪೊಲೀಸರು ಮತ್ತು ಜಿಲ್ಲಾಡಳಿತ ಭರವಸೆ ನೀಡಿದೆ ಎಂದು ದಲಿತರು ತಿಳಿಸಿದ್ದಾರೆ.

    ಈ ವಿಚಾರದ ಬಗ್ಗೆ ಮುಸ್ಲಿಂರನ್ನು ಕೇಳಿದರೆ ಅವರೇ ಬೇರೆ ರೀತಿ ಹೇಳುತ್ತಾರೆ. ದಲಿತರು ಎಂದಿಗೂ ನಮ್ಮ ಕ್ಷೌರಿಕರ ಅಂಗಡಿಗಳಿಗೆ ಹೇರ್ ಕಟ್ ಮಾಡಿಸಲು ಬರುತ್ತಿರಲಿಲ್ಲ. ಅವರು ಭೋಜ್‍ಪುರದಲ್ಲಿ ದಲಿತರು ನಡೆಸುವ ಕ್ಷೌರಿಕನ ಅಂಗಡಿಗೆ ಹೋಗುತ್ತಿದ್ದರು. ಆದರೆ ಈಗ ಅವರು ಇಲ್ಲಿ ಹೇರ್ ಕಟ್ ಮಾಡಿಸಲು ಬಯಸುತ್ತಾರೆ. ಇದರ ಜೊತೆಗೆ ಪೊಲೀಸರು ನಮ್ಮ ಕ್ಷೌರಿಕರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಈಗ ಕ್ಷೌರಿಕರ ಕುಟುಂಬದವರು ತುಂಬ ಆತಂಕಕ್ಕೊಳಗಾಗಿದ್ದಾರೆ. ಇದ್ದ ಒಂದು ಕ್ಷೌರದ ಅಂಗಡಿಯು ಮುಚ್ಚಿದೆ ಈಗ ಮನೆಗೆ ಆದಾಯದ ಮೂಲವೇ ಇಲ್ಲವಾಗಿದೆ ಎಂದು ಕ್ಷೌರಿಕ ಕುಟುಂಬಸ್ಥರು ಹೇಳುತ್ತಾರೆ.

    ಈ ಗ್ರಾಮದಲ್ಲಿ ಶೇ.95 ರಷ್ಟು ಮುಸ್ಲಿಂ ಸಮುದಾಯದ ಜನಗಳಿದ್ದಾರೆ. ಇಂದು ದಲಿತರು ನಮ್ಮ ಅಂಗಡಿಗಳ ಪ್ರವೇಶಕ್ಕೆ ಒತ್ತಾಯಿಸುತ್ತಿದ್ದಾರೆ. ನಾಳೆ ಅವರು ಸಮುದಾಯದ ಮದುವೆಗೆ ನಮ್ಮ ಮಂಟಪಗಳನ್ನು ಬುಕ್ ಮಾಡಲು ಪ್ರಾರಂಭಿಸುತ್ತಾರೆ. ಈ ಗ್ರಾಮ ಹಲವಾರು ವರ್ಷಗಳಿಂದ ಶಾಂತಿಯಾಗಿದೆ. ಇಲ್ಲಿ ಕೆಲವರು ಅ ಶಾಂತಿಯನ್ನು ಹಾಳು ಮಾಡಿ ಅವ್ಯವಸ್ಥೆ ಸೃಷ್ಟಿಸಲು ಬಯಸುತ್ತಿದ್ದಾರೆ ಎಂದು ಮುಸ್ಲಿಂ ಮುಖಂಡರು ಆರೋಪಿಸಿದ್ದಾರೆ.

    ದೂರನ್ನು ಪಡೆದಿರುವ ಪೊಲೀಸರು ತನಿಖೆ ಪ್ರಾರಂಭ ಮಾಡಿದ್ದು, ದಲಿತರು ಮಾಡಿರುವ ಆರೋಪ ನಿಜವೆಂದು ಕಂಡುಬಂದಲ್ಲಿ, ಸಂಬಂಧಪಟ್ಟ ವ್ಯಕ್ತಿಗಳ ಮೇಲೆ ಕಾನೂನುಗಳ ಅಡಿಯಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

  • ಹೇರ್‍ಕಟ್‍ಗೆ ಹೋದ್ರೆ ಕಿವಿಗೆ ಕತ್ತರಿ ಹಾಕಿ ಈ ಅವಸ್ಥೆ ಮಾಡಿದ ಕ್ಷೌರಿಕ

    ಹೇರ್‍ಕಟ್‍ಗೆ ಹೋದ್ರೆ ಕಿವಿಗೆ ಕತ್ತರಿ ಹಾಕಿ ಈ ಅವಸ್ಥೆ ಮಾಡಿದ ಕ್ಷೌರಿಕ

    ವಾಷಿಂಗ್ಟನ್: ಹೇರ್‍ಕಟ್‍ಗೆ ಅಂತ ಹೋದಾಗ ಕೆಲವೊಮ್ಮೆ ಕ್ಷೌರಿಕರು ಮಾಡಿದ ಹೇರ್‍ಕಟ್ ನಿಮಗೆ ಇಷ್ಟವಾಗಿಲ್ಲದಿರೋ ದಿನಗಳು ಇದ್ದೇ ಇರುತ್ತದೆ. ಆದ್ರೆ ಅಮೆರಿಕದ ವಿಸ್ಕಾನ್‍ಸಿನ್‍ನ ಈ ವ್ಯಕ್ತಿಗೆ ಆದ ಗತಿ ಅವೆಲ್ಲವನ್ನೂ ಮೀರಿಸುಂತದ್ದು.

    22 ವರ್ಷದ ವ್ಯಕ್ತಿಯೊಬ್ಬರು ಕ್ರಿಸ್‍ಮಸ್‍ಗೆ ಅಂತ ಹೇರ್‍ಕಟ್ ಮಾಡಿಸಲು ಹೋಗಿದ್ದರು. ಆದ್ರೆ ಸಲೋನ್‍ನಲ್ಲಿ ನಡೆದಿದ್ದೇ ಬೇರೆ. ಹೇರ್ ಕಟ್ ಮಾಡಪ್ಪ ಅಂದ್ರೆ ಆ ವ್ಯಕ್ತಿಯ ತಲೆಯಲ್ಲಿ ಮಧ್ಯ ಭಾಗದ ಕೂದಲನ್ನೇ ಬೋಳಿಸಿದ್ದಲ್ಲದೇ, ಕಿವಿಗೆ ಕತ್ತರಿ ಹಾಕಿ ರಕ್ತಸ್ರಾವವಾಗುವಂತೆ ಮಾಡಿದ್ದಾನೆ.

    ಸಲೋನ್‍ಗೆ ಹೋದ ವ್ಯಕ್ತಿ, ನಂಬರ್ 2 ಕ್ಲಿಪ್ಪರ್ ಬಳಸಿ ತಲೆಯ ಸೈಡ್‍ನಲ್ಲಿ ಸ್ವಲ್ಪ ಕಟ್ ಮಾಡಿ. ಹಾಗೇ ಮಧ್ಯದಲ್ಲಿ ಕತ್ತರಿಯಿಂದ ಟ್ರಿಮ್ ಮಾಡಲು ಹೇಳಿದ್ರು. ಆದ್ರೆ ಚೇರ್ ಮೇಲೆ ಕುಳಿತ ನಂತರ ಆ ವ್ಯಕ್ತಿಗೆ ಏನೋ ಸರಿ ಹೋಗ್ತಿಲ್ಲವಲ್ಲ ಅನ್ನಿಸಿತ್ತು. ಹಾಗೇ ಕ್ಷೌರಿಕ ನೀವು ತುಂಬಾ ಅಲುಗಾಡುತ್ತಿದ್ದೀರಾ ಅಂತ ಆ ಗ್ರಾಹಕನ ಕಿವಿಯನ್ನ ತಿರುಚಲು ಶುರು ಮಾಡಿದ್ದ. ಅಲ್ಲಿಗೆ ಅನಾಹುತ ನಡೆದೇ ಹೋಯ್ತು. ಕ್ಷೌರಿಕ ಗ್ರಾಹಕನ ಕಿವಿಗೆ ಕತ್ತರಿ ಹಾಕಿದ್ದ. ಹಾಗೇ ಎಲೆಕ್ಟ್ರಿಕ್ ರೇಜರ್‍ಗೆ ನಂಬರ್ 0 ಅಟ್ಯಾಚ್‍ಮೆಂಟ್ ಹಾಕಿ ತಲೆಯ ಮಧ್ಯಭಾಗವನ್ನ ಬೋಳಿಸಿದ್ದ.

     

    ಕ್ಷೌರಿಕ ಇದನ್ನೆಲ್ಲಾ ಬೇಕಂತಲೇ ಮಾಡಿದ್ದಾನೆ ಎಂದು ಗ್ರಾಹಕ ಪೊಲೀಸರಿಗೆ ಹೇಳಿದ್ದಾರೆ. ಕ್ಷೌರಿಕನನ್ನು 46 ವರ್ಷದ ಶಬಾನಿ ಖಲೀದ್ ಎಂದು ಗುರುತಿಸಲಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಆದ್ರೆ ಕ್ಷೌರಿಕ ಆ ಗ್ರಾಹಕನ ಆರೋಪವನ್ನ ತಳ್ಳಿಹಾಕಿದ್ದು, ಇದೆಲ್ಲಾ ಆಕಸ್ಮಿಕವಾಗಿ ನಡೆದಿದ್ದು ಎಂದು ಹೇಳಿದ್ದಾನೆ.

    ವಿಚಿತ್ರ ಹೇರ್‍ಕಟ್ ಪಡೆದ ಗ್ರಾಹಕ ಕೊನೆಗೆ ವಿಧಿ ಇಲ್ಲದೆ ಇಡೀ ತಲೆಯನ್ನ ಬೋಳಿಸಿದ್ದಾರೆ.