Tag: Barachukki falls

  • ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ಭರಚುಕ್ಕಿ ಜಲಪಾತ

    ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ಭರಚುಕ್ಕಿ ಜಲಪಾತ

    – ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿದೆ ಜಲಪಾತ

    ಚಾಮರಾಜನಗರ: ಕಬಿನಿ ಹಾಗೂ ಕೆಆರ್‍ಎಸ್ ಜಲಾಶಯಗಳಿಂದ 35 ಸಾವಿರ ಕ್ಯೂಸೆಕ್ಸ್ ಗೂ ಹೆಚ್ಚು ನೀರು ಬಿಡುಗಡೆ ಮಾಡಿರುವುದರಿಂದ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಇದರಿಂದಾಗಿ ಜಿಲ್ಲೆಯ ಭರಚುಕ್ಕಿ ಧುಮ್ಮಿಕ್ಕುತ್ತಿದ್ದು, ಕಾವೇರಿಯ ರುದ್ರ ರಮಣೀಯ ದೃಶ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು ಆಗಮಿಸುತ್ತಿದೆ.

    ಕೇರಳದ ವೈಯನಾಡು ಹಾಗೂ ಕಬಿನಿ ಜಲಾನಯನ ಪ್ರದೇಶದಲ್ಲಿ ಕಳೆದ ನಾಲ್ಕೈದು ದಿನಗಳಿಂದ ವ್ಯಾಪಕ ಮಳೆಯಾಗಿದ್ದು, ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನಲ್ಲಿರುವ ಕಬಿನಿ ಜಲಾಶಯ ಬಹುತೇಕ ಭರ್ತಿಯಾಗಿದ್ದು, ನದಿಗೆ 30 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗಿದೆ. ಇದರ ಜೊತೆಗೆ ಕೆಆರ್‍ಎಸ್ ಜಲಾಶಯದಿಂದಲು 6 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗಿದ್ದು, ಕಾವೇರಿ ನದಿ ಉಕ್ಕಿ ಹರಿಯುತ್ತಿದೆ.

    ಮೈಸೂರು ಜಿಲ್ಲೆಯ ಮೂಲಕ ಹರಿದು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿಗೆ ಪ್ರವೇಶಿಸುವ ಕಾವೇರಿ, ಶಿವನಸಮುದ್ರದ ಬಳಿ ಎರಡು ಕವಲಾಗಿ ಹರಿದು ಒಂದೆಡೆ ಗಗನಚುಕ್ಕಿಯಾಗಿ ಇನ್ನೊಂದೆಡೆ ಭರಚುಕ್ಕಿಯಾಗಿ ಭೋರ್ಗೆರೆದು ಧುಮ್ಮಿಕುತ್ತಿದೆ. ಕರ್ನಾಟಕದ ನಯಾಗಾರ ಎಂದೇ ಹೆಸರಾದ ಭರಚುಕ್ಕಿಯಲ್ಲಿ ಬೆಟ್ಟಗುಡ್ಡಗಳ ನಡುವೆ ಕವಲು ಕವಲಾಗಿ ಹಾಲ್ನೊರೆಯಂತೆ ಧುಮ್ಮಿಕ್ಕುವ ಕಾವೇರಿಯ ರುದ್ರ ರಮಣೀಯ ದೃಶ್ಯಗಳನ್ನು ನೋಡಲು ಕಣ್ಣುಗಳೆರಡು ಸಾಲದಂತೆ ಭಾಸವಾಗುತ್ತಿದೆ.

    ಕಳೆದ ಕೆಲವು ತಿಂಗಳಿಂದ ನೀರಿಲ್ಲದೆ ಬಣಗುಡುತ್ತಿದ್ದ ಭರಚುಕ್ಕಿಗೆ ಮತ್ತೆ ಜೀವ ಕಳೆ ಬಂದಿದೆ. ಕಾವೇರಿಯ ಜಲವೈಭವ ಅನಾವರಣಗೊಂಡಿದೆ. ಸುತ್ತಲೂ ಹಸಿರಿನಿಂದ ಕಂಗೊಳಿಸುತ್ತಿರುವ ಬೆಟ್ಟಗುಡ್ಡಗಳು. ಬೆಟ್ಟಗುಡ್ಡಗಳ ನಡುವೆ ಧುಮ್ಮಿಕ್ಕಿ ಹರಿಯುತ್ತಿರುವ ಕಾವೇರಿ ಭರಚುಕ್ಕಿಯಲ್ಲಿ ಅತ್ಯಂತ ವಿಶಾಲವಾಗಿ ಕವಲು ಕವಲಾಗಿ ರಭಸದಿಂದ ಧುಮ್ಮಿಕ್ಕುವ ದೃಶ್ಯಕಾವ್ಯ ವರ್ಣನಾತೀತವಾಗಿದೆ.

  • ಅಧಿಕಾರಿಗಳ ನಿರ್ಲಕ್ಷ್ಯದಿಂದ ಮೂಲೆಗುಂಪಾಗುತ್ತಿದೆ ಭರಚುಕ್ಕಿ ಜಲಪಾತೋತ್ಸವ!

    ಅಧಿಕಾರಿಗಳ ನಿರ್ಲಕ್ಷ್ಯದಿಂದ ಮೂಲೆಗುಂಪಾಗುತ್ತಿದೆ ಭರಚುಕ್ಕಿ ಜಲಪಾತೋತ್ಸವ!

    ಚಾಮರಾಜನಗರ: ದಟ್ಟ ಕಾನನದ ಮಧ್ಯೆ ಬೋರ್ಗರೆಯುತ್ತಿರುವ ಜಲಪಾತ. ಆ ಜಲಪಾತಕ್ಕೆ ವಿವಿಧ ಬಣ್ಣಬಣ್ಣದ ದೀಪಾಲಂಕಾರ. ಕಣ್ಣು ಹಾಯಿಸಿದೆಲ್ಲೆಲ್ಲಾ ರಂಗೋ ರಂಗು ಚಿತ್ತಾರ. ಇದೆಲ್ಲ ಒಂದು ಕಡೆಯಾದರೆ ಜನರನ್ನು ಹುಚ್ಚೆದ್ದು ಕುಣಿಸುವಂತ ನಾನಾ ಪ್ರದರ್ಶನ ಮತ್ತೊಂದು ಕಡೆ. ಇಂತಹದ್ದೊಂದು ಸುಂದರ ಸಂಜೆ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕು ಭರಚುಕ್ಕಿ ಜಲಪಾತದ ಆವರಣದಲ್ಲಿ ಕಳೆದ ಮೂರು ವರ್ಷಗಳಿಂದ ಸೃಷ್ಟಿಯಾಗುತಿತ್ತು. ಆದ್ರೆ ಈಗ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯ ದಿಂದ ಅದ್ಧೂರಿ ಕಾರ್ಯಕ್ರಮ ಮೂಲೆಗುಂಪಾಗುವ ಹಂತದಲ್ಲಿದೆ. ಈ ತಾಣಕ್ಕೆ ಬಂದ ಪ್ರವಾಸಿಗರು ಬಂದ ದಾರಿಗೆ ಸುಂಕ ಇಲ್ಲ ಅಂತ ಹಿಂತಿರುಗಿ ಹೋಗುತ್ತಿದ್ದಾರೆ.

     

    ಹೌದು. ಸ್ವರ್ಗವನ್ನೇ ಧರೆಗಿಳಿಸಿದ್ದ ಜಲಪಾತೋತ್ಸವದಲ್ಲಿ ಸಾವಿರಾರು ಪ್ರವಾಸಿಗರು ಬಂದು ತಮ್ಮ ತನು ಮನಗಳನ್ನು ತಂಪು ಮಾಡಿಕೊಳ್ಳುತ್ತಿದ್ದರು. ಸಹಕಾರ ಸಚಿವರಾಗಿದ್ದ ಎಚ್.ಎಸ್. ಮಹದೇವ ಪ್ರಸಾದ್ ಅವರು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಯಶಸ್ವಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದರು.

    ಈ ಜಲಪಾತೋತ್ಸವದಿಂದ ಪ್ರವಾಸೋದ್ಯಮ ಇಲಾಖೆಗೆ ಆದಾಯ ಹರಿದು ಬರುತ್ತಿತ್ತು. ಆದರೆ ಈಗ ಜಲಪಾತದಲ್ಲಿ ನೀರು ಹರಿಯುತ್ತಿದ್ದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜಲಪಾತೋತ್ಸವ ಕಾರ್ಯಕ್ರಮವನ್ನು ಮಾಡಲು ಕಿಂಚಿತ್ತು ಆಸಕ್ತಿ ತೋರಿಸುತ್ತಿಲ್ಲ.

    ಜಲಾಪಾತೋತ್ಸವದ ವೇಳೆ ಆಹಾರ ಮೇಳ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿತ್ತು. ಬಾಯಲ್ಲಿ ನೀರೂರಿಸುವ ಖಾದ್ಯಗಳು ಸ್ಥಳದಲ್ಲೇ ತಯಾರಾಗುತ್ತಿದ್ದವು. ಪ್ರವಾಸಿಗರು ಅದನ್ನು ಚಪ್ಪರಿಸಿಕೊಂಡು ತಿನ್ನುತ್ತಿದ್ದರು. ಇನ್ನೂ ಸ್ಟಾರ್ ನಟರು ಹಾಗೂ ಕಲಾವಿದರನ್ನು ಆಹ್ವಾನಿಸಿ ಪ್ರತಿ ನಿತ್ಯ ರಾತ್ರಿ ಅದ್ಧೂರಿ ಕಾರ್ಯಕ್ರಮಗಳು ನಡೆಯುತಿತ್ತು.

     

    ಪ್ರವಾಸಿಗರು ಸಂಗೀತಕ್ಕೆ ಹುಚ್ಚೆದ್ದು ಕುಣಿಯುತ್ತಿದ್ದರು. ಭರಚುಕ್ಕಿ ಜಲಪಾತೋತ್ಸವ ಪ್ರವಾಸಿಗರಿಗೆ ಅಕ್ಷರಶಃ ಸ್ವರ್ಗವೇ ಆಗಿತ್ತು. ಸತತ ಮೂರು ವರ್ಷಗಳ ಕಾಲ ಯಶಸ್ವಿಯಾಗಿ ನಡೆದ ಕಾರ್ಯಕ್ರಮವನ್ನು ಈ ವರ್ಷವೂ ಆಯೋಜಿಸಿ ಎಂದು ಪ್ರವಾಸಿಗರು ಹಾಗೂ ಜನ ಬೇಡಿಕೆ ಇಟ್ಟಿದ್ದಾರೆ.

    ಒಟ್ಟಾರೆ ಹೇಳುವುದಾದರೆ ಮೂರು ವರ್ಷಗಳ ಕಾಲ ಯಶಸ್ವಿಯಾಗಿ ನಡೆದುಕೊಂಡು ಬಂದ ಜಲಪಾತೋತ್ಸವ ಕಾರ್ಯಕ್ರಮಕ್ಕೆ ಪ್ರವಾಸಿಗರಿಂದ ಬೇಡಿಕೆ ಹೆಚ್ಚಾಗಿದ್ದು, ಈ ವಿಷಯದಲ್ಲಿ ಸದ್ಯ ತಟಸ್ಥವಾಗಿರುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಜಲಪಾತೋತ್ಸವ ಕಾರ್ಯಕ್ರಮ ನಡೆಸಲು ಮುಂದಾಗಬೇಕಿದೆ.