Tag: Banyan Tree

  • ಧರೆಗುರುಳಿದ ಪಾರಂಪರಿಕ ವೃಕ್ಷ ದೊಡ್ಡಾಲದ ಮರ!

    ಧರೆಗುರುಳಿದ ಪಾರಂಪರಿಕ ವೃಕ್ಷ ದೊಡ್ಡಾಲದ ಮರ!

    ಬೆಂಗಳೂರು: ಪ್ರವಾಸಿಗರು ಹೆಚ್ಚು ಇಷ್ಟಪಡುವ ಜಾಗದಲ್ಲಿ ದೊಡ್ಡಾಲದ ಮರವೂ ಒಂದು. ಆದರೆ  ಬುಧವಾರ ಬೆಳಗ್ಗೆ ಈ ಪಾರಂಪರಿಕ ವೃಕ್ಷ ಧರೆಗುರುಳಿದೆ.

    ಬೆಂಗಳೂರಿನ ಕೇತೋಹಳ್ಳಿಯಲ್ಲಿರುವ ‘ದೊಡ್ಡಾಲದ ಮರ’ ಇಡೀ ದೇಶದ ಗಮನ ಸೆಳೆದಿದೆ. ಈ ದೊಡ್ಡಾಲದ ಮರಕ್ಕೆ 400 ವರ್ಷಗಳ ಇತಿಹಾಸವಿದ್ದು, ಈಗ ಎರಡು ಬೃಹದಾಕಾರದ ಆಲದ ಮರಗಳು ಧರೆಗೆ ಉರುಳಿದೆ. ಇದು ಮೂರು ಎಕ್ರೆ ವಿಸ್ತಾರಕ್ಕೆ ಚಾಚಿಕೊಂಡಿದ್ದು, ಭಾನುವಾರ ಸುರಿದ ಗಾಳಿ ಮಳೆಗೆ ಮರ ಧರೆಗೆ ಉರುಳಿದೆ ಎಂದು ತೋಟಗಾರಿಕ ಇಲಾಖೆ ಸಿಬ್ಬಂದಿ ಹೇಳಿದ್ದಾರೆ. ಇದನ್ನೂ ಓದಿ:  ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಎಂಪಿ ಶಿಕ್ಷಣ ಸಚಿವರ ಸೊಸೆ 

    ಆದ್ರೇ ಸ್ಥಳೀಯರು, ತೋಟಗಾರಿಕೆ ಇಲಾಖೆಯ ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ದೊಡ್ಡಾಲದ ಮರ ಧರೆಗುರುಳಿದೆ. ಇಲ್ಲಿ ಹುಲ್ಲಿನ ಹಾಸು ಹಾಕೋದಕ್ಕೆ ಮರದ ಬುಡದಲ್ಲಿರುವ ಮಣ್ಣನ್ನು ಸಿಬ್ಬಂದಿ ತೆಗೆದುಹಾಕಿದ್ದಾರೆ. ಇದ್ರಿಂದ ಈ ಅನಾಹುತ ಸಂಭವಿಸಿದೆ ಎಂದು ಆರೋಪ ಮಾಡಿದ್ದಾರೆ.

    ಅಲ್ಲದೇ ಇನ್ನಷ್ಟು ಮರಗಳು ಬಾಗಿದ ಸ್ಥಿತಿಯಲ್ಲಿದೆ. ಈ ಬಗ್ಗೆ ಸಿಬ್ಬಂದಿ, ಇಲಾಖೆಗೆ ಪತ್ರ ಬರೆದಿದ್ದಾರೆ.

  • ಚಲಿಸುತ್ತಿದ್ದ ಕಾರ್ ಮೇಲೆ ಬಿತ್ತು ಬೃಹತ್ ಆಲದ ಮರದ ಕೊಂಬೆ

    ಚಲಿಸುತ್ತಿದ್ದ ಕಾರ್ ಮೇಲೆ ಬಿತ್ತು ಬೃಹತ್ ಆಲದ ಮರದ ಕೊಂಬೆ

    ಚಿಕ್ಕಬಳ್ಳಾಪುರ: ಚಲಿಸುತ್ತಿದ್ದ ಕಾರಿನ ಮೇಲೆ ಆಲದ ಮರದ ಕೊಂಬೆ ಮುರಿದು ಬಿದ್ದು ಕಾರು ಜಖಂ ಆದ ಘಟನೆ ನಗರದ ಬಿ.ಬಿ ರಸ್ತೆಯಲ್ಲಿ ನಡೆದಿದೆ.

    ಬಾಲಾಜಿ ಚಿತ್ರಮಂದಿರದ ಬಳಿ ಸ್ವಿಫ್ಟ್ ಡಿಜೈರ್ ಕಾರಿನ ಮೇಲೆ ಆಲದ ಮರದ ಕೊಂಬೆ ಮುರಿದುಬಿದ್ದಿದೆ. ಕಾರು ಚಂದ್ರಶೇಖರಯ್ಯ ಅವರಿಗೆ ಸೇರಿದ್ದು ಎನ್ನಲಾಗಿದ್ದು, ಕಾರಿನ ಮುಂಭಾಗ ಜಖಂಗೊಂಡಿದೆ. ಕಾರಿನಲ್ಲಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಈ ಸಂಬಂಧ ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸರು ಭೇಟಿ ನೀಡಿ ಟ್ರಾಫಿಕ್ ಕ್ಲಿಯರ್ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ನಂತರ ಆಗಮಿಸಿದ ನಗರಸಭಾ ಅಧ್ಯಕ್ಷ ಆನಂದ್ ರೆಡ್ಡಿ, ನಗರಸಭೆ ಅಧಿಕಾರಿಗಳು ಸಿಬ್ಬಂದಿಗಳ ಮೂಲಕ ಕೊಂಬೆ ತೆರವು ಮಾಡಿಸಿದ್ದಾರೆ. ಸ್ಥಳದಲ್ಲಿ ಕೆಲ ಕಾಲ ಟ್ರಾಫಿಕ್ ಜಾಮ್ ಸಂಭವಿಸಿತ್ತು.

  • ನೆಲಕ್ಕುರುಳಿದ ಬೃಹತ್ ಮರ – ಆರು ಕಾರುಗಳು ಜಖಂ

    ನೆಲಕ್ಕುರುಳಿದ ಬೃಹತ್ ಮರ – ಆರು ಕಾರುಗಳು ಜಖಂ

    ಬೆಂಗಳೂರು: ಚಾಮರಾಜಪೇಟೆಯ ನಾಲ್ಕನೇ ಮುಖ್ಯರಸ್ತೆಯಲ್ಲಿ ಬೃಹತ್ ಆಲದ ಮರವೊಂದು ನೆಲಕ್ಕುರಿಳಿದ್ದು, ದೊಡ್ಡ ಅನಾಹುತ ತಪ್ಪಿದೆ.

    ಮರ ಟೊಳ್ಳಾಗಿ, ಗುಣಮಟ್ಟ ಕಳೆದುಕೊಂಡಿರುವ ಹಿನ್ನೆಲೆ ಬೆಳಗ್ಗೆ ಹತ್ತು ಗಂಟೆ ಸಮಯದಲ್ಲಿ ಮರ ಧರೆಗೆ ಉರುಳಿದೆ. ಪರಿಣಾಮ ಆರಕ್ಕೂ ಹೆಚ್ಚು ಕಾರುಗಳು ಸಂಪೂರ್ಣ ಜಖಂ ಅಗಿವೆ. ಅದೃಷ್ಟವಶಾತ್ ಬೃಹತ್ ಮರ, ರಸ್ತೆಯ ಪಕ್ಕಕ್ಕೆ ಬಿದ್ದಿದರಿಂದ ಅನಾಹುತ ತಪ್ಪಿ ಹೋಗಿದೆ.

    ಒಂದು ವೇಳೆ ರಸ್ತೆಗೆ ಬಿದ್ದಿದ್ದರೆ ರಸ್ತೆಯಲ್ಲಿ ಸಂಚಾರ ಮಾಡುವ ವಾಹನ ಸವಾರರ ಜೀವಕ್ಕೆ ಅಪಾಯವಾಗುವ ಸಾಧ್ಯತೆಯಿತ್ತು. ಬೃಹತ್ ಮರದಡಿ ಸಿಲುಕಿರುವ ಕಾರುಗಳ ಗಾಜುಗಳು ಪುಡಿ ಪುಡಿಯಾಗಿವೆ. ಘಟನಾ ಸ್ಥಳಕ್ಕೆ ಸ್ಥಳೀಯ ಕಾರ್ಪೊರೇಟರ್ ಕೋಕಿಲಾ ಭೇಟಿ ನೀಡಿ ಪರಿಶೀಲಿಸಿದ್ದಾರೆ. 10ಕ್ಕೂ ಹೆಚ್ಚು ಅಗ್ನಿಶಾಮಕದಳ ಸಿಬ್ಬಂದಿ ಮರ ತೆರವು ಕಾರ್ಯಚರಣೆ ನಡೆಸಿದ್ದಾರೆ.

  • ಹೊನ್ನಾವರ ಹೆದ್ದಾರಿಯಲ್ಲಿ ಭಾರೀ ಮಳೆಗೆ ಉರುಳಿ ಬಿತ್ತು ಆಲದ ಮರ – ಸಂಚಾರ ಅಸ್ತವ್ಯಸ್ತ

    ಹೊನ್ನಾವರ ಹೆದ್ದಾರಿಯಲ್ಲಿ ಭಾರೀ ಮಳೆಗೆ ಉರುಳಿ ಬಿತ್ತು ಆಲದ ಮರ – ಸಂಚಾರ ಅಸ್ತವ್ಯಸ್ತ

    ಕಾರವಾರ: ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಆಲದ ಮರ ಉರುಳಿ ಬಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪಟ್ಟಣದ ಕರ್ಕಿ ನಾಕಾ ಬಳಿ ನಡೆದಿದೆ.

    ಆಲದ ಮರ ಉರುಳಿ ಬಿದ್ದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಭಾನುವಾರದಿಂದ ಮಳೆ ಸುರಿಯುತ್ತಿರುವುದರಿಂದ ಆಲದ ಮರ ಉರುಳಿ ಬಿದ್ದಿದೆ. ಮರಬಿದ್ದ ಹಿನ್ನಲೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದೆ. ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಲ್ಲದೆ ಮರ ತೆರವು ಮಾಡುವ ಕಾರ್ಯಾಚರಣೆ ನಡೆಯುತ್ತಿದೆ.

    ಜಿಲ್ಲೆಯ ಭಟ್ಕಳದಲ್ಲಿ ಮಳೆರಾಯ ತನ್ನ ಅಬ್ಬರ ತೋರಿದ್ದಾನೆ. ಜಿಲ್ಲೆಯ ಬಹುತೇಕ ಭಾಗದಲ್ಲಿ ಅಲ್ಪ ಮಳೆಯಾಗುತ್ತಿದ್ದರೆ ಗಡಿ ಭಾಗದ ಭಟ್ಕಳದಲ್ಲಿ ವರುಣನ ಆರ್ಭಟ ಹೆಚ್ಚಾಗಿದೆ. ಮಳೆ ಆರ್ಭಟಕ್ಕೆ ರಸ್ತೆ ಅಂಗಡಿಗಳಿಗೆ ನೀರು ನುಗ್ಗಿದೆ. ಮಳೆಯ ಆರ್ಭಟಕ್ಕೆ ಉಡುಪಿ – ಭಟ್ಕಳ ಭಾಗದ ಹೆದ್ದಾರಿ ಸಂಚಾರ ಅಸ್ತವ್ಯಸ್ತವಾಗಿದ್ದು ಅಲ್ಲಲ್ಲಿ ನೀರು ತುಂಬಿ ಹರಿಯುತ್ತಿದೆ.

  • 700 ವರ್ಷದ ಆಲದ ಮರಕ್ಕೆ ಡ್ರಿಪ್ಸ್ ಹಾಕಿ ಚಿಕಿತ್ಸೆ!

    700 ವರ್ಷದ ಆಲದ ಮರಕ್ಕೆ ಡ್ರಿಪ್ಸ್ ಹಾಕಿ ಚಿಕಿತ್ಸೆ!

    ನವದೆಹಲಿ: 700 ವರ್ಷ ಹಳೆಯ ಆಲದ ಮರವನ್ನು ರಕ್ಷಿಸಲು ತೆಲಂಗಾಣದ ಅಧಿಕಾರಿಗಳು ಡ್ರಿಪ್ಸ್ ಹಾಕಿ ಚಿಕಿತ್ಸೆ ನೀಡುತ್ತಿದ್ದಾರೆ.

    ಮರದ ಕೆಲವು ಕೊಂಬೆಗಳಿಗೆ ಗೆದ್ದಲು ಹಿಡಿದಿದೆ. ಮರವನ್ನು ಗೆದ್ದಲಿನಿಂದ ಉಳಿಸಲು ಅಧಿಕಾರಿಗಳು ಕ್ರಿಮಿನಾಶಕವನ್ನು ಡ್ರಿಪ್ ಮೂಲಕ ಕೊಂಬೆಗಳಿಗೆ ನೀಡುತ್ತಿದ್ದಾರೆ.

    ಮಹಬೂಬ್ ನಗರದಲ್ಲಿರುವ ಪಿಳ್ಳಲಮರಿ ಅಥವಾ ಪೀರ್ಲಾ ಮರ್ರಿ ಎಂದು ಕರೆಯಲ್ಪಡುವ ಪ್ರಸಿದ್ಧ ಪ್ರವಾಸಿ ತಾಣದಲ್ಲಿ ಈ ಆಲದ ಮರ ಮೂರು ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ಪ್ರಪಂಚದಲ್ಲೇ ಎರಡನೇ ದೊಡ್ಡ ಆಲದ ಮರ ಇದಾಗಿದೆ.

    ಕಳೆದ ಡಿಸೆಂಬರ್ ನಲ್ಲಿ ಗೆದ್ದಲು ಹುಳುಗಳ ಕಾಟದಿಂದ ಒಂದು ಕೊಂಬೆ ಮುರಿದು ಬಿದ್ದಿತ್ತು. ಇದಾದ ನಂತರ ಸಾರ್ವಜನಿಕ ವೀಕ್ಷಣೆಗೆ ನಿರ್ಬಂಧ ಹೇರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಗೆದ್ದಲು ಹುಳಗಳಿಂದ ಮರವನ್ನು ರಕ್ಷಿಸಲು ಪ್ರತಿ ಎರಡು ಮೀಟರ್ ಗೆ ರಾಸಾಯನಿಕ ಕ್ಲೋರಿಪಿರಿಫೊಸ್ ಕ್ರಿಮಿನಾಶಕವನ್ನು ಡ್ರಿಪ್ ಮೂಲಕ ಮರಕ್ಕೆ ಕೊಡಲಾಗುತ್ತಿದೆ. ರೋಗಿಗಳಿಗೆ ಡ್ರಿಪ್ ಹಾಕಿ ವೈದ್ಯರು ಗಮನಿಸುವಂತೆ ಆಲದ ಮರವನ್ನು ಗಮನಿಸಲಾಗುತ್ತಿದೆ ಎಂದು ತಿಳಿಸಿದರು.

    ಮೊದಲಿಗೆ ಮರದ ಕಾಂಡಕ್ಕೆ ತೂತುಗಳನ್ನು ಮಾಡಿ ನೇರವಾಗಿ ಕ್ರಿಮಿನಾಶಕವನ್ನು ಹಾಕಿದೆವು. ಆದರೆ ಈ ಪ್ರಯತ್ನ ಫಲ ಕೊಡದ ಹಿನ್ನೆಲೆಯಲ್ಲಿ ಈಗ ಕೊಂಬೆಗಳಿಗೆ ಕ್ರಿಮಿನಾಶಕದ ಡ್ರಿಪ್ಸ್ ಹಾಕಿಸಲಾಗುತ್ತಿದೆ ಎಂದು ತಿಳಿಸಿದರು.

    ರಾಸಾಯನಿಕ ಇರುವ ನೀರನ್ನು ಮರಕ್ಕೆ ಕೊಡಲಾಗುತ್ತಿದೆ. ಗೆದ್ದಲು ಹಿಡಿದು ಬೀಳುವಂತೆ ಆಗಿರುವ ದೊಡ್ಡ ಕೊಂಬೆಗಳಿಗೆ ಬೀಳದಂತೆ ಗೋಡೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ಜಿಲ್ಲಾ ಅರಣ್ಯಾಧಿಕಾರಿ ಚುಕ್ಕಾ ಗಂಗಾ ರೆಡ್ಡಿ ಅವರು ತಿಳಿಸಿದ್ದಾರೆ.

    ಆಲದ ಮರದ ಆರೋಗ್ಯ ಈಗ ಸ್ಥಿರವಾಗಿದೆ. ಉನ್ನತ ಅಧಿಕಾರಿಗಳ ಜೊತೆ ಮಾತನಾಡಿ ಸ್ವಲ್ಪ ದಿನಗಳ ನಂತರ ಸಾರ್ವಜನಿಕ ವೀಕ್ಷಣೆ ಅನುವು ಮಾಡಿಕೊಡಲಾಗುತ್ತದೆ. ಆದರೆ ಈ ಸಮಯ ಪ್ರವಾಸಿಗರು ಸ್ವಲ್ಪ ದೂರದಿಂದ ವೀಕ್ಷಿಸಬಹುದಾಗಿದೆ ಎಂದು ತಿಳಿಸಿದರು.

    ಜಿಲ್ಲಾಧಿಕಾರಿ ರೊನಾಲ್ಡ್ ರೋಸ್ ಅವರೇ ಖುದ್ದು ಮರದ ಆರೋಗ್ಯವನ್ನು ಗಮನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

    https://www.youtube.com/watch?v=M681UNaVAO4