Tag: Banks

  • ಬ್ಯಾಂಕಲ್ಲಿ 5 ಲಕ್ಷಕ್ಕಿಂತ ಹೆಚ್ಚು ಹಣ ಇಟ್ಟರೆ ಸೇಫ್ ಆಗಿರುತ್ತಾ, ಇಲ್ವಾ? – ಏನಿದು ಠೇವಣಿ ವಿಮೆ?

    ಬ್ಯಾಂಕಲ್ಲಿ 5 ಲಕ್ಷಕ್ಕಿಂತ ಹೆಚ್ಚು ಹಣ ಇಟ್ಟರೆ ಸೇಫ್ ಆಗಿರುತ್ತಾ, ಇಲ್ವಾ? – ಏನಿದು ಠೇವಣಿ ವಿಮೆ?

    – ಠೇವಣಿ ವಿಮೆ ಹೆಚ್ಚಳಕ್ಕೆ ಸರ್ಕಾರ ಚಿಂತನೆ; ಠೇವಣಿದಾರರಿಗೆ ಹೇಗೆ ಸಹಾಯ ಮಾಡುತ್ತೆ?

    ದುಡಿಯುವ ಹಣಕ್ಕೆ ಸುರಕ್ಷಿತೆ ಬೇಕು, ಅದನ್ನು ಲಾಭದಾಯಕವಾಗಿ ಪರಿವರ್ತಿಸಬೇಕು ಎಂಬ ಉದ್ದೇಶದಿಂದ ಜನರು ಬ್ಯಾಂಕ್‌ಗಳಲ್ಲಿ ಠೇವಣಿ ಇಡುತ್ತಾರೆ. ಠೇವಣಿ ಇಟ್ಟರೂ ಕೆಲವೇ ಲಕ್ಷಕ್ಕೆ ಮಾತ್ರ ಬ್ಯಾಂಕ್‌ನಲ್ಲಿ ಗ್ಯಾರಂಟಿ ಎಂಬ ಚಿಂತೆ ಜನರಲ್ಲಿತ್ತು. ಈಗ ಆ ಚಿಂತೆಯನ್ನು ದೂರ ಮಾಡಲು ಸರ್ಕಾರ ಮುಂದಾಗಿದೆ. ಪ್ರಸ್ತುತ ಇರುವ ಠೇವಣಿ ವಿಮಾ ಮಿತಿಯನ್ನು ಮತ್ತಷ್ಟು ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸಿದೆ. ಇದರಿಂದ ಹೆಚ್ಚಿನ ಹಣವನ್ನು ಬ್ಯಾಂಕ್‌ನಲ್ಲಿ ಠೇವಣಿ ಇಡಲು ಗ್ರಾಹಕರಿಗೆ ತುಂಬಾ ಅನುಕೂಲ ಆಗಲಿದೆ.

    ಏನಿದು ಠೇವಣಿ ವಿಮೆ? ಇದುವರೆಗೆ ಬ್ಯಾಂಕ್‌ನಲ್ಲಿ ಒಬ್ಬ ಗ್ರಾಹಕರಿಗೆ ಎಷ್ಟು ಹಣಕ್ಕೆ ಸುರಕ್ಷತೆ ಇತ್ತು. ಈಗ ಎಷ್ಟು ಹೆಚ್ಚಿಸಲು ಸರ್ಕಾರ ಮುಂದಾಗಿದೆ? ಇದರಿಂದ ಠೇವಣಿದಾರರಿಗೆ ಸಹಾಯವಾಗುತ್ತಾ ಎಂಬ ಪ್ರಶ್ನೆಗಳಿಗೆ ವಿವರ ಇಲ್ಲಿದೆ.

    ಠೇವಣಿ ಎಂದರೇನು?
    ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಬ್ಯಾಂಕ್‌ನಲ್ಲಿ ಇರಿಸಲಾಗುವುದ ಹಣದ ಮೊತ್ತ. ಠೇವಣಿಯನ್ನು ಯಾರು ಇಡುತ್ತಾರೋ ಅವರ ಹೆಸರಲ್ಲೇ ಹಣ ಜಮೆ ಆಗಿರುತ್ತದೆ. ಈ ಹಣವನ್ನು ಅವರು ತಮಗೆ ಬೇಕೆಂದಾಗ ಹಿಂತೆಗೆದುಕೊಳ್ಳಬಹುದು. ಅಥವಾ ಬ್ಯಾಂಕ್ ವಹಿವಾಟು ಮೂಲಕ ಬೇರೆಯವರ ಖಾತೆಗೆ ವರ್ಗಾಯಿಸಲೂ ಬಹುದು.

    ಠೇವಣಿ ವಿಮೆ ಎಂದರೇನು?
    ಯಾವುದೇ ಬ್ಯಾಂಕ್ ತನ್ನ ಗ್ರಾಹಕನ ಠೇವಣಿ ಮೇಲೆ ವಿಮೆ (ಡೆಪಾಸಿಟ್ ಇನ್ಶುರೆನ್ಸ್) ಮಾಡಿಸಿರುತ್ತದೆ. ಆರ್‌ಬಿಐನ ಅಂಗಸಂಸ್ಥೆಯಾಗಿರುವ ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್‌ಗೆ (ಡಿಐಸಿಜಿಸಿ) ನಿರ್ದಿಷ್ಟ ಕಂತು ಪಾವತಿಸುವ ಮೂಲಕ ಬ್ಯಾಂಕ್‌ಗಳು ಗ್ರಾಹಕರ ಠೇವಣಿಗೆ ಭದ್ರತೆ ಒದಗಿಸಿರುತ್ತವೆ. ಒಂದು ವೇಳೆ ಬ್ಯಾಂಕ್‌ಗಳು ದಿವಾಳಿಯಾದರೆ, ಸಂಕಷ್ಟಕ್ಕೆ ಸಿಲುಕಿದರೆ ಅಥವಾ ಠೇವಣಿದಾರರ ಹಣ ಮರಳಿಸಲು ವಿಫಲವಾದರೆ ಗ್ರಾಹಕರಿಗೆ ನಿರ್ದಿಷ್ಟಪಡಿಸಿದ ಠೇವಣಿ ಹಣವನ್ನು ಡಿಐಸಿಜಿಸಿ ಪಾವತಿಸುತ್ತದೆ.

    ಏನಿದು ಡಿಐಸಿಜಿಸಿ?
    ಡಿಐಸಿಜಿಸಿ ಆರ್‌ಬಿಐನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿದೆ. ಇದು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ಸ್ಥಳೀಯ ಪ್ರದೇಶದ ಬ್ಯಾಂಕ್‌ಗಳು, ಸಹಕಾರಿ ಬ್ಯಾಂಕ್‌ಗಳು ಸೇರಿದಂತೆ ವಾಣಿಜ್ಯ ಬ್ಯಾಂಕ್‌ಗಳನ್ನು ಒಳಗೊಂಡಿರುವ ಠೇವಣಿ ವಿಮೆಯನ್ನು ನಿರ್ವಹಿಸುತ್ತದೆ. 2023-24ರಲ್ಲಿ ಡಿಐಸಿಜಿಸಿ 1,432 ಕೋಟಿ ಕ್ಲೇಮ್‌ಗಳನ್ನು ಇತ್ಯರ್ಥಪಡಿಸಿದೆ. ಕಳೆದ ವರ್ಷದ ಅಂತ್ಯಕ್ಕೆ 1,997 ವಿಮೆ ಮಾಡಲಾದ ಬ್ಯಾಂಕ್‌ಗಳು ಡಿಐಸಿಜಿಸಿಯಲ್ಲಿ ನೋಂದಣಿಯಾಗಿವೆ. ಅವುಗಳನ್ನು 140 ವಾಣಿಜ್ಯ ಬ್ಯಾಂಕ್‌ಗಳು ಮತ್ತು 1,875 ಸಹಕಾರಿ ಬ್ಯಾಂಕ್‌ಗಳಾಗಿವೆ.

    ಭಾರತದಲ್ಲಿ ಪ್ರಾರಂಭವಾಗಿದ್ದು ಯಾವಾಗ?
    ರೇವಣಿ ವಿಮೆ ಭಾರತದಲ್ಲಿ 1996ರ ಜ.1 ರಂದು ಪ್ರಾರಂಭವಾಯಿತು. ಆಗ ಠೇವಣಿ ವಿಮಾ ನಿಗಮ (ಡಿಐಸಿ) ಕಾರ್ಯನಿರ್ವಹಿಸಲು ಪ್ರಾರಂಭಿಸಿತು. ಅದನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅಡಿಯಲ್ಲಿ ಸ್ಥಾಪಿಸಲಾಯಿತು.

    ಠೇವಣಿ ವಿಮಾ ಮಿತಿ ಹಿಂದೆ ಎಷ್ಟಿತ್ತು?
    1962, ಜನವರಿ 1: 1,500
    1968, ಜನವರಿ 1: 5,000
    1970, ಏಪ್ರಿಲ್ 1: 10,000
    1976, ಜನವರಿ 1: 20,000
    1980, ಜುಲೈ 1: 30,000
    1993, ಮೇ 1 1,00,000

    ಈಗ ಎಷ್ಟಿದೆ?
    2020ರ ಫೆಬ್ರವರಿ 4 ರಂದು ಠೇವಣಿ ವಿಮಾ ಮಿತಿಯ ಮೊತ್ತವನ್ನು ಸರ್ಕಾರ 5 ಲಕ್ಷ ರೂ. ವರೆಗೆ ಹೆಚ್ಚಿಸಿತ್ತು. ಈ ಮಿತಿಯನ್ನು ಮತ್ತಷ್ಟು ಹೆಚ್ಚಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ವಿಮೆಯನ್ನು ಹೆಚ್ಚಿಸುವ ಪ್ರಸ್ತಾವವನ್ನು ಸರ್ಕಾರ ಪರಿಗಣಿಸುತ್ತಿದೆ. ಸರ್ಕಾರ ಅನುಮೋದನೆ ನೀಡಿದ ಬಳಿಕ ಅಧಿಸೂಚನೆ ಹೊರಡಿಸಲಾಗುವುದು ಎನ್ನಲಾಗಿದೆ. ನ್ಯೂ ಇಂಡಿಯಾ ಕೋ-ಆಪರೇಟಿವ್ ಬ್ಯಾಂಕ್ ಹಗರಣ ಬೆಳಕಿಗೆ ಬಂದ ಕೆಲವೇ ದಿನಗಳಲ್ಲಿ ಈ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಬಂದಿದೆ.

    ಏನಿದು ಬ್ಯಾಂಕ್ ಹಗರಣ?
    ನ್ಯೂ ಇಂಡಿಯಾ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ 122 ಕೋಟಿ ರೂ. ಹಗರಣ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್‌ನ ಜನರಲ್ ಮ್ಯಾನೇಜರ್ ಮತ್ತು ಮುಖ್ಯ ಅಕೌಂಟೆಂಟ್, ಆತನ ಸಹಚರನ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈಗಾಗಲೇ ಬ್ಯಾಂಕ್‌ನ ಮಾಜಿ ಸಿಇಒ ಬಂಧನ ಕೂಡ ಆಗಿದೆ. ಬ್ಯಾಂಕಿನ ಜನರಲ್ ಮ್ಯಾನೇಜರ್ ಮತ್ತು ಮುಖ್ಯ ಅಕೌಂಟೆಂಟ್ ಹಿತೇಶ್ ಮೆಹ್ತಾ ಅವರು ತನ್ನ ಸಹಚರರೊಂದಿಗೆ ಸೇರಿ ಸಂಚು ರೂಪಿಸಿ ಪ್ರಭಾದೇವಿ ಮತ್ತು ಗೊರೆಗಾಂವ್ ಬ್ಯಾಂಕಿನ ಕಚೇರಿಗಳ ತಿಜೋರಿಯಲ್ಲಿದ್ದ ಹಣದಿಂದ 122 ಕೋಟಿ ರೂ. ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

    ಆರ್‌ಬಿಐ ಕೈಗೊಂಡ ಕ್ರಮಗಳೇನು?
    ಮೇಲ್ವಿಚಾರಣಾ ವೈಫಲ್ಯ, ಕಳಪೆ ಆಡಳಿತ ಮಾನದಂಡಗಳನ್ನು ಉಲ್ಲೇಖಿಸಿ ಬ್ಯಾಂಕ್‌ನ ನಿರ್ದೇಶಕರ ಮಂಡಳಿಯನ್ನು 12 ತಿಂಗಳ ಕಾಲ ಆರ್‌ಬಿಐ ರದ್ದುಗೊಳಿಸಿದೆ. ಜೊತೆಗೆ ಬ್ಯಾಂಕ್‌ಗೆ ಹಲವಾರು ನಿರ್ಬಂಧಗಳನ್ನು ವಿಧಿಸಿದೆ. ಬ್ಯಾಂಕ್ ಹೊಸ ವ್ಯವಹಾರ ನಡೆಸುವುದು, ಹಣ ಹಿಂಡೆಯುವಕ್ಕೂ ಬ್ರೇಕ್ ಹಾಕಿದೆ. ಯಾವುದೇ ಸಾಲ ಮತ್ತು ಮುಂಗಡಗಳನ್ನು ಮಂಜೂರು ಮಾಡದಂತೆ ನಿರ್ದೇಶನ ನೀಡಿದೆ. ಫೆಬ್ರವರಿ 13ರಂದು ಬ್ಯಾಂಕ್ ವ್ಯವಹಾರ ಮುಗಿದ ನಂತರ ಈ ನಿರ್ಬಂಧಗಳು ಜಾರಿಗೆ ಬಂದಿವೆ.

    ನ್ಯೂ ಇಂಡಿಯಾ ಕೋ-ಆಪರೇಟಿವ್ ಬ್ಯಾಂಕ್ ಮುಂಬೈ, ಥಾಣೆ, ನವಿ ಮುಂಬೈ ಮತ್ತು ಪುಣೆ ಹಾಗೂ ಗುಜರಾತ್‌ನ ಸೂರತ್‌ನಲ್ಲಿ 30 ಶಾಖೆಗಳನ್ನು ಹೊಂದಿದೆ. 2024ರ ಮಾರ್ಚ್ ಅಂತ್ಯದ ವೇಳೆಗೆ ಬ್ಯಾಂಕ್ 2,436 ಕೋಟಿ ರೂ. ಠೇವಣಿ ಮೂಲವನ್ನು ಹೊಂದಿತ್ತು. 2023-24ರಲ್ಲಿ 22.78 ಕೋಟಿ ರೂ. ಮತ್ತು 2022-34ರಲ್ಲಿ 30.74 ಕೋಟಿ ರೂ. ನಷ್ಟವನ್ನು ಬ್ಯಾಂಗಳು ದಾಖಲಿಸಿವೆ.

    ಠೇವಣಿ ವಿಮಾ ಮಿತಿ ಹೆಚ್ಚಳಕ್ಕೆ ಕಾರಣವೇನು?
    ಆರ್‌ಬಿಐ ಡೆಪ್ಯುಟಿ ಗವರ್ನರ್ ಎಂ.ರಾಜೇಶ್ವರ್ ರಾವ್ ಅವರು, ಕಳೆದ ವರ್ಷದ ಮಾ.31ರ ಅಂಕಿಅಂಶದಂತೆ ಸಂಪೂರ್ಣ ಸಂರಕ್ಷಿತ ಖಾತೆಗಳು 97.8% ರಷ್ಟಿವೆ. ಇದು ಅಂತಾರಾಷ್ಟ್ರೀಯ ಮಾನದಂಡದ 80% ಗಿಂತ ಹೆಚ್ಚಿದೆ. ಬ್ಯಾಂಕ್ ಠೇವಣಿಗಳ ಮೌಲ್ಯದಲ್ಲಿನ ಬೆಳವಣಿಗೆ, ಆರ್ಥಿಕ ಬೆಳವಣಿಗೆ ದರ, ಹಣದುಬ್ಬರ, ಆದಾಯ ಮಟ್ಟಗಳಲ್ಲಿನ ಹೆಚ್ಚಳ ಮೊದಲಾದ ಅಂಶಗಳನ್ನು ಪರಿಗಣಿಸಿ ಈ ಮಿತಿಯನ್ನು ನಿಯತಕಾಲಿಕವಾಗಿ ಹೆಚ್ಚಿಸಲು ಸರ್ಕಾರ ಮುಂದಾಗಿದೆ ಎಂದು ತಿಳಿಸಿದ್ದಾರೆ.

    ನ್ಯೂ ಇಂಡಿಯಾ ಕೋ-ಆಪರೇಟಿವ್ ಬ್ಯಾಂಕ್‌ನಂತಹ ವೈಫಲ್ಯಗಳು ಠೇವಣಿದಾರರ ಹಿತಾಸಕ್ತಿಗೆ ಮಾರಕವಾಗಿವೆ. ಇದರಿಂದ ಗ್ರಾಹಕರಲ್ಲಿ ವಿಶ್ವಾಸ ಕುಂದಬಹುದು. ಹೆಚ್ಚಿನ ಠೇವಣಿ ಮೊತ್ತ ಇಡಲು ಹಿಂಜರಿಯಬಹುದು. ಠೇವಣಿ ವಿಮಾ ಮಿತಿ ಹೆಚ್ಚಿಸುವುದರಿಂದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಗ್ರಾಹಕರ ನಂಬಿಕೆ ಮತ್ತು ವಿಶ್ವಾಸವನ್ನು ಹೆಚ್ಚಿಸಬಹುದು. ಆ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

  • ಸ್ವಿಸ್ ಬ್ಯಾಂಕ್‍ನಲ್ಲಿ ಭಾರತೀಯರ ಸಂಪತ್ತು 30,500 ಕೋಟಿ ರೂ. – ಒಂದೇ ವರ್ಷದಲ್ಲಿ ಶೇ. 50ರಷ್ಟು ಏರಿಕೆ

    ಸ್ವಿಸ್ ಬ್ಯಾಂಕ್‍ನಲ್ಲಿ ಭಾರತೀಯರ ಸಂಪತ್ತು 30,500 ಕೋಟಿ ರೂ. – ಒಂದೇ ವರ್ಷದಲ್ಲಿ ಶೇ. 50ರಷ್ಟು ಏರಿಕೆ

    ನವದೆಹಲಿ: ಸ್ವಿಸ್ ಬ್ಯಾಂಕ್‍ನಲ್ಲಿ ಭಾರತೀಯರ ಹೂಡಿಕೆ, ಡಿಪಾಸಿಟ್ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ. 2021ರಲ್ಲಿ ಸ್ವಿಸ್ ಬ್ಯಾಂಕ್‍ನಲ್ಲಿ ಭಾರತೀಯರ ಸಂಪತ್ತು 30,500 ಕೋಟಿ ರೂ.ಗೆ ಏರಿಕೆ ಕಂಡಿದೆ.

    ಸ್ವಿಸ್ ಬ್ಯಾಂಕ್‍ನಲ್ಲಿ ಭಾರತೀಯರ ಹೂಡಿಕೆ 14 ವರ್ಷಗಳ ಗರಿಷ್ಠ ಮೊತ್ತವಾಗಿದೆ. 2020ರಲ್ಲಿ ಸ್ವಿಸ್‍ಬ್ಯಾಂಕ್‍ನಲ್ಲಿ ಭಾರತೀಯರ ಸಂಪತ್ತು 20,700 ಕೋಟಿ ರೂಪಾಯಿಗಳಷ್ಟಿತ್ತು. ಒಂದು ವರ್ಷದ ಅವಧಿಯಲ್ಲಿ ಅದು ಶೇಕಡಾ 50ರಷ್ಟು ಹೆಚ್ಚಿದೆ. ಸತತ ಎರಡನೇ ವರ್ಷ ಸ್ವಿಸ್ ಬ್ಯಾಂಕ್‍ನಲ್ಲಿ ಭಾರತೀಯರ ಸಂಪತ್ತು ಹೆಚ್ಚಾಗಿದೆ. ಇದೇ ವೇಳೆ, ಸತತ ಎರಡು ವರ್ಷಗಳ ಕಾಲ ಕುಸಿತ ಕಂಡಿದ್ದ ಭಾರತೀಯ ಗ್ರಾಹಕರ ಉಳಿತಾಯ ಅಥವಾ ಠೇವಣಿ ಖಾತೆಗಳಲ್ಲಿನ ಮೊತ್ತ 2021ರಲ್ಲಿ ಏಳು ವರ್ಷದ ಗರಿಷ್ಠಕ್ಕೆ ಮೊತ್ತ ದಾಖಲಾಗಿದೆ. ಇದನ್ನೂ ಓದಿ: ‘ಅಗ್ನಿಪಥ್’ ದೇಶ ಸೇವೆ ಮಾಡಲು ಯುವಕರಿಗೆ ಸುವರ್ಣ ಅವಕಾಶ: ರಾಜನಾಥ್ ಸಿಂಗ್

    ಗ್ರಾಹಕರ ಉಳಿತಾ ಅಥವಾ ಠೇವಣಿ ಖಾತೆಗಳಲ್ಲಿನ ಮೊತ್ತ 4,800 ಕೋಟಿ ರೂಪಾಯಿಯಷ್ಟಾಗಿದೆ. ಈ ಮಾಹಿತಿಯನ್ನು ಸ್ವಿಜರ್ಲ್ಯಾಂಡ್ ಸೆಂಟ್ರಲ್ ಬ್ಯಾಂಕ್ ಪ್ರಕಟಿಸಿದೆ. ಸ್ವಿಸ್ ಬ್ಯಾಂಕ್‍ನಲ್ಲಿರುವ ಹಣವನ್ನು ಕಪ್ಪುಹಣ ಎಂದು ಹೇಳಲಾಗುತ್ತದೆ. ಆದ್ರೆ, ಈ ದುಡ್ಡು ಕಪ್ಪು ಹಣವೇ ಎಂಬುದಕ್ಕೆ ಯಾವುದೇ ಆಧಾರಗಳು ಲಭಿಸಿಲ್ಲ. ಇದನ್ನೂ ಓದಿ: ಇಸ್ರೇಲ್ ಮಾದರಿಯ ʼಅಗ್ನಿಪಥ್ʼ- ಏನಿದು ಯೋಜನೆ, ಯಾಕಿಷ್ಟು ವಿರೋಧ?

    ಅಘೋಷಿತ ವಿದೇಶಿ ಆಸ್ತಿಗಳನ್ನು ಘೋಷಿಸಲು 2015ರಲ್ಲಿ ಅಮ್ನೆಸ್ಟಿ ಯೋಜನೆ ಸೇರಿದಂತೆ ಕಪ್ಪುಹಣ ವಿರೋಧಿ ಕ್ರಮಗಳ ನಂತರ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ವಿದೇಶದಲ್ಲಿ ಇಟ್ಟಿರುವ ಕಪ್ಪುಹಣದ ವಿರುದ್ಧ ಸಮರ ಸಾರಿತ್ತು. ಸ್ವಿಸ್ ಬ್ಯಾಂಕ್‍ಗಳಲ್ಲಿ ಇಟ್ಟಿರುವ ಕಪ್ಪು ಹಣದ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಮೋದಿ ಸರ್ಕಾರ ಘೋಷಿಸಿತ್ತು. ಅದರೂ ಕೂಡ ಕಪ್ಪು ಹಣದ ವ್ಯವಹಾರ ಇಂದಿಗೂ ನಿಂತಿಲ್ಲ. ಕಪ್ಪು ಹಣವನ್ನು ಬಹಿರಂಗಪಡಿಸುವುದಾಗಿ ಕೇಂದ್ರ ಸರ್ಕಾರ ನೀಡಿದ್ದ ಭರವಸೆ ಹಾಗೆ ಉಳಿದುಕೊಂಡಿದೆ.

    Live Tv

  • ತೆರಿಗೆದಾರರ ಹಣವನ್ನು ಖಾಸಗಿಯವರ ಮಡಿಲಿಗೆ ಕೊಡುತ್ತಿರುವುದು ಕೇಂದ್ರ ಸರ್ಕಾರ ದೇಶದ ಜನರಿಗೆ ಮಾಡುವ ವಂಚನೆ: ಸಿದ್ದರಾಮಯ್ಯ

    ತೆರಿಗೆದಾರರ ಹಣವನ್ನು ಖಾಸಗಿಯವರ ಮಡಿಲಿಗೆ ಕೊಡುತ್ತಿರುವುದು ಕೇಂದ್ರ ಸರ್ಕಾರ ದೇಶದ ಜನರಿಗೆ ಮಾಡುವ ವಂಚನೆ: ಸಿದ್ದರಾಮಯ್ಯ

    ಬೆಂಗಳೂರು: ಕೆಂದ್ರ ಸರ್ಕಾರ ವೈಫಲ್ಯವನ್ನು ಮುಚ್ಚಿಕೊಳ್ಳಲು ದೇಶದ ತೆರಿಗೆದಾರರ ಹಣ ಮತ್ತು ಸಂಪತ್ತನ್ನು ಮುಲಾಜಿಲ್ಲದೆ ಖಾಸಗಿಯವರ ಮಡಿಲಿಗೆ ಅರ್ಪಿಸಲು ಹೋಗುತ್ತಿರುವುದು ದೇಶದ ಜನರಿಗೆ ಮಾಡುವ ವಂಚನೆ ಆಗುತ್ತದೆ ಎಂದು ಕೇಂದ್ರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

    ಸಾರ್ವಜನಿಕ ವಲಯದ ಬ್ಯಾಂಕ್‍ಗಳಿಂದ ಬಂಡವಾಳ ಹಿಂತೆಗೆತ ಮತ್ತು ಖಾಸಗೀಕರಣದಿಂದ ಆಗುವ ಅನಾಹುತಗಳನ್ನು ವಿವರಿಸಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ಕಳೆದ ಎಂಟು ವರ್ಷಗಳಲ್ಲಿ ದೇಶದ ಆರ್ಥಿಕತೆಯನ್ನು ಹಾಳುಗೆಡವಿದ್ದು ಮತ್ತು ಆದಾಯ ಹೆಚ್ಚಿಸುವಲ್ಲಿ ವಿಫಲವಾಗಿದ್ದರ ಪರಿಣಾಮವಾಗಿ ಜಾರಿಗೆ ತರುತ್ತಿರುವ ಬಂಡವಾಳ ಹಿಂತೆಗೆತದ ಯೋಜನೆಗೆ ಬ್ಯಾಂಕಿಂಗ್ ವಲಯವನ್ನು ಗುರಿ ಮಾಡಲಾಗಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಏರ್ ಇಂಡಿಯಾ ಸಾಲವನ್ನು ತೀರಿಸಿ ಟಾಟಾಗೆ ಮಾರಿದ್ದು ಆತ್ಮನಿರ್ಭರ ಭಾರತ ಹೇಗಾಗುತ್ತದೆ: ಸಿದ್ದರಾಮಯ್ಯ ಕಿಡಿ

    ಪತ್ರದಲ್ಲಿ ಏನಿದೆ?:
    ಆರ್ಥಿಕತೆ ಚೇತರಿಸಿಕೊಳ್ಳಲು ಬ್ಯಾಂಕ್‍ಗಳಿಂದ ಹೂಡಿಕೆ ಹಿಂತೆಗೆದುಕೊಳ್ಳಲು ಸರ್ಕಾರ ತರಾತುರಿ ಮಾಡುತ್ತಿರುವುದು ಆತಂಕಕಾರಿ ಮತ್ತು ಆಧಾರರಹಿತ ಆರ್ಥಿಕ ವಿಧಾನವಾಗಿದೆ ಎಂದಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಾರ್ವಜನಿಕ ವಲಯದ ಬ್ಯಾಂಕ್‍ಗಳಿಂದ ಬಂಡವಾಳ ಹಿಂತೆಗೆತವನ್ನು ಘೋಷಿಸಿದ್ದಾರೆ. ಇದರಿಂದ ದೇಶಾದ್ಯಂತ ಆತಂಕ ಸೃಷ್ಟಿಯಾಗಿದೆ. ಆರ್ಥಿಕ ತಜ್ಞರು, ರಾಜಕೀಯ ನಾಯಕರು ಮತ್ತು ಬ್ಯಾಂಕಿಂಗ್ ವಲಯದ ಹಿರಿಯರು ನಿರ್ಮಲಾ ಸೀತಾರಾಮನ್ ಅವರ ಅನಾಹುತಕಾರಿ ತೀರ್ಮಾನದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬ್ಯಾಂಕ್ ಉದ್ಯೋಗಿಗಳು ಹಾಗೂ ಠೇವಣಿದಾರರು ಮತ್ತು ಜನಸಾಮಾನ್ಯರೂ ಆತಂಕಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

    1969 ರಲ್ಲಿ ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಅವರು ಬ್ಯಾಂಕ್‍ಗಳ ರಾಷ್ಟ್ರೀಕರಣ ಮಾಡಿದ ಬಳಿಕ ಸಾರ್ವಜನಿಕ ವಲಯದ ಬ್ಯಾಂಕ್‍ಗಳು ದೇಶದಲ್ಲಿ ಪ್ರಗತಿಪರವಾದ, ಪ್ರೋತ್ಸಾಹದಾಯಕ ಪಾತ್ರ ನಿರ್ವಹಿಸಿವೆ. ಜನ ಸಾಮಾನ್ಯರ ಪ್ರಗತಿ ಮತ್ತು ದೇಶದ ಆರ್ಥಿಕ ಬೆಳವಣಿಗೆ ನಡುವೆ ಸಾರ್ವಜನಿಕ ವಲಯದ ಬ್ಯಾಂಕ್‍ಗಳು ಕೊಂಡಿಯಾಗಿ ಕೆಲಸ ಮಾಡಿವೆ. ಖಾಸಗಿ ಹಣಕಾಸು ಸಂಸ್ಥೆಗಳ ದುರಾಸೆ ಮತ್ತು ದೌರ್ಜನ್ಯದಿಂದ ಜನಸಾಮಾನ್ಯರನ್ನು ರಕ್ಷಿಸುವಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಪರಿಣಾಮಕಾರಿಯಾಗಿದೆ. ಸಣ್ಣ-ಮಧ್ಯಮ ಕೈಗಾರಿಕೆಗಳಿಗೆ, ಉದ್ಯಮಗಳಿಗೆ ಸಾಲ ಸೌಲಭ್ಯವನ್ನು ಒದಗಿಸುವುದು ಮತ್ತು ಕೃಷಿಕರ ಮನೆ ಬಾಗಿಲಿಗೂ ಸಾಲ ಸೌಲಭ್ಯಗಳನ್ನು ತಲುಪಿಸುವುದು ಬ್ಯಾಂಕ್‍ಗಳ ರಾಷ್ಟ್ರೀಕರಣದಿಂದ ಸಾಧ್ಯವಾಗಿತ್ತು. ದೇಶದ ಜನರಲ್ಲಿ ಉಳಿತಾಯದ ಮನೋಭಾವವನ್ನು ಹೆಚ್ಚಿಸಿ, ಉಳಿತಾಯದ ಹಣದ ಠೇವಣಿಗೆ ಬಡ್ಡಿ ಮತ್ತು ಭದ್ರತೆಯನ್ನು ಒದಗಿಸುವ ಜೊತೆಗೆ ಅಗತ್ಯ ಬಿದ್ದಾಗ ಸುಲಭವಾಗಿ ಸಾಲ ದೊರಕಿಸಿಕೊಳ್ಳುವ ಸುಭದ್ರವಾದ ನೂರಾರು ಮಾರ್ಗಗಳೂ ಬ್ಯಾಂಕ್‍ಗಳ ರಾಷ್ಟ್ರೀಕರಣದ ಮೂಲಕ ತೆರೆದುಕೊಂಡಿತ್ತು. ಈ ಎಲ್ಲದರ ಪರಿಣಾಮ 1992ರ ವೇಳೆಗೆ ಸಾರ್ವಜನಿಕ ವಲಯದ ಬ್ಯಾಂಕ್‍ಗಳು ದೇಶದ ಮೂಲೆ ಮೂಲೆಗೂ ವ್ಯಾಪಿಸಿ 65,000 ಶಾಖೆಗಳನ್ನು ತೆರೆಯಲು ಸಾಧ್ಯವಾಗಿದೆ ಎನ್ನುವುದನ್ನು ಹಣಕಾಸು ಸಚಿವರು ಅರ್ಥ ಮಾಡಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದನ್ನೂ ಓದಿ: ರಷ್ಯಾದ 6 ಮಿಲಿಟರಿ ವಿಮಾನ ಪತನ – 50 ಸೈನಿಕರನ್ನು ಹತ್ಯೆಗೈದ ಉಕ್ರೇನ್‌

    ರಾಷ್ಟ್ರೀಕೃತ ಬ್ಯಾಂಕ್‍ಗಳನ್ನು ಕಂಡರೆ ನಿಮಗೆ ಏಕೆ ಆಗುವುದಿಲ್ಲವೋ ಗೊತ್ತಿಲ್ಲ. ಕಳೆದ ವರ್ಷ 10 ರಾಷ್ಟ್ರೀಕೃತ ಬ್ಯಾಂಕ್‍ಗಳ ವಿಲೀನ ಘೋಷಿಸಿದಿರಿ. ಆ ಪ್ರಕಾರ ನಮ್ಮ ಕಾರ್ಪೋರೇಷನ್ ಬ್ಯಾಂಕನ್ನು ಯೂನಿಯನ್ ಬ್ಯಾಂಕ್‍ನೊಂದಿಗೆ, ಸಿಂಡಿಕೇಟ್ ಬ್ಯಾಂಕನ್ನು ಕೆನರಾ ಬ್ಯಾಂಕ್‍ನೊಂದಿಗೆ, ವಿಜಯ ಬ್ಯಾಂಕನ್ನು ಬ್ಯಾಂಕ್ ಆಫ್ ಬರೋಡದೊಂದಿಗೆ ವಿಲೀನಗೊಳಿಸಲಾಯಿತು. ಇದಕ್ಕೂ ಮೊದಲು ಸ್ಟೇಟ್ ಬ್ಯಾಂಕ್ ಆಫ್ ಮೈಸೂರನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ವಿಲೀನಗೊಳಿಸಿದಿರಿ. ಇದರಿಂದ ನಮ್ಮ ರಾಜ್ಯದ ನಾಲ್ಕು ಬ್ಯಾಂಕ್‍ಗಳು ತಮ್ಮ ಮೂಲ ಆಶಯ ಮತ್ತು ಅಸ್ತಿತ್ವವನ್ನು ಕಳೆದುಕೊಂಡು ರಾಷ್ಟ್ರೀಕೃತ ಬ್ಯಾಂಕ್‍ಗಳ ಸಂಖ್ಯೆ 27 ರಿಂದ 12ಕ್ಕೆ ಇಳಿದಿದೆ. ಇದರಿಂದ ಕನ್ನಡಿಗರ ಪಾಲಿನ ಸಾವಿರಾರು ಉದ್ಯೋಗಗಳು ನಷ್ಟವಾದವು. ಹೀಗೆ ನಮ್ಮ ರಾಷ್ಟ್ರೀಕೃತ ಬ್ಯಾಂಕ್‍ಗಳನ್ನು ವಿಲೀನ ಪ್ರಕ್ರಿಯೆ ಮೂಲಕ ಅರ್ಧ ಮುಗಿಸಿ, ಉಳಿದರ್ಧವನ್ನು ಖಾಸಗೀಕರಿಸಲು ಹೊರಟಿದ್ದೀರಿ. ಖಾಸಗಿ ಒಡೆತನದ ಬ್ಯಾಂಕ್‍ಗಳ ಕಾರ್ಯನಿರ್ವಹಣೆ ಶೈಲಿ ಮತ್ತು ಖಾಸಗಿ ಬ್ಯಾಂಕ್‍ಗಳ ಕಾರ್ಯನಿರ್ವಹಿಸದ ಸ್ವತ್ತುಗಳೇ ಆ ಬ್ಯಾಂಕ್‍ಗಳ ದಿವಾಳಿತನಕ್ಕೆ ಕಾರಣ ಆಗಿರುವ ಉದಾಹರಣೆಗಳು ಕಣ್ಣ ಮುಂದಿವೆ. ಲಕ್ಷಾಂತರ ಠೇವಣಿದಾರರರಿಂದ ಸಂಗ್ರಹಿಸಿದ ಸಾವಿರಾರು ಕೋಟಿ ಠೇವಣಿ ಹಣವನ್ನು ಕಾರ್ಪೋರೇಟ್ ವ್ಯಕ್ತಿ ಮತ್ತು ಸಂಸ್ಥೆಗಳಿಗೆ ಯಾವುದೇ ಭದ್ರತೆ ಇಲ್ಲದೆ ಸಾಲ ನೀಡುವ ಮೂಲಕ ಠೇವಣಿದಾರರ ಉಳಿತಾಯದ ಹಣವನ್ನು ಮುಳುಗಿಸಲಾಗುತ್ತಿದೆ.


    ಈ ಎಲ್ಲಾ ಕಾರಣಕ್ಕೆ ರಾಜ್ಯದ ಖಾಸಗಿ ಮತ್ತು ಸಹಕಾರಿ ಬ್ಯಾಂಕ್‍ಗಳಲ್ಲಿ ಠೇವಣಿ ಇಟ್ಟಿದ್ದ ಠೇವಣಿದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಕ್ಕೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರವೇ ಸಾಕ್ಷಿ. ದೇಶದ ಆರ್ಥಿಕತೆ ಜತೆ ಬೆಸೆದುಕೊಂಡಿರುವ ಖಾಸಗಿ ಬ್ಯಾಂಕ್‍ಗಳ ದಿವಾಳಿಕೋರತನದ ಕೆಟ್ಟ ಪರಿಣಾಮಗಳು ಸಮಾಜದ ಮೇಲೆ ಆಗುತ್ತಿವೆ. ನಮ್ಮ ಸಾರ್ವಜನಿಕ ವಲಯಗಳಲ್ಲಿ ಇದ್ದ ಸಾರ್ವಜನಿಕರ ಹಣ ಮತ್ತು ಠೇವಣಿಯಿಂದ ಸಂಕಷ್ಟಕ್ಕೆ ಸಿಲುಕಿದ ಖಾಸಗಿ ಬ್ಯಾಂಕ್‍ಗಳನ್ನು ಕಾಪಾಡಿ ಆರ್ಥಿಕತೆಗೆ ಆಗುತ್ತಿದ್ದ ನಷ್ಟವನ್ನು ತಪ್ಪಿಸಿದ ಉದಾಹರಣೆಯೂ ನಮ್ಮ ಕಣ್ಣ ಮುಂದಿದೆ. ಕಳೆದ ಎಂಟು ವರ್ಷಗಳಲ್ಲಿ ಕೇಂದ್ರ ಸರ್ಕಾರವೇ ಹಲವಾರು ಮಂದಿ ವಂಚಕರು ಸಾವಿರಾರು ಕೋಟಿ ರೂಪಾಯಿಗಳನ್ನು ಬ್ಯಾಂಕ್‍ಗಳಿಗೆ ವಂಚಿಸಿ ದೇಶ ತೊರೆದು ಪರಾರಿಯಾಗಿ ತಲೆಮರೆಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ದೇಶಕ್ಕೆ ವಂಚಿಸಿ ದೇಶ ತೊರೆದ ಒಬ್ಬೇ ಒಬ್ಬ ದೊಡ್ಡ ವಂಚಕನನ್ನೂ ಬಂಧಿಸಿ ವಾಪಾಸ್ ಕರೆತರಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗದಿರುವುದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: Russia-Ukraine crisis: ಪ್ರಧಾನಿ ಮೋದಿ ಮಧ್ಯಪ್ರವೇಶಕ್ಕೆ ಉಕ್ರೇನ್ ಮನವಿ

    ಸರ್ಕಾರ ಸಾರ್ವಜನಿಕ ವಲಯದ ಬ್ಯಾಂಕ್‍ಗಳಿಂದ ಬಂಡವಾಳ ಹಿಂತೆಗೆಯುವುದು ಮತ್ತು ಇವುಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವುದರಿಂದ ಆಗುವ ಅಡ್ಡ ಪರಿಣಾಮಗಳು ಗೊತ್ತಿದ್ದೂ ಆ ಬಗ್ಗೆ ಜಾಣ ಕುರುಡುತನ ತೋರಿಸುತ್ತಿದೆ. ಸಾವಿರಾರು ಕೋಟಿ ಸಾಲವನ್ನು ದೊಡ್ಡ ಉದ್ಯಮಿಗಳಿಗೆ ಕೊಟ್ಟು ಅವರು ದೇಶ ಬಿಟ್ಟು ಹೋಗುವವರೆಗೂ ಅವರಿಗೆ ಕೆಂಪು ಹಾಸು ಹಾಸುವ ಖಾಸಗಿ ಬ್ಯಾಂಕ್‍ಗಳು ಸಣ್ಣ ಪುಟ್ಟ ಸಾಲಗಾರರನ್ನು ಮಾತ್ರ ಆತ್ಮಹತ್ಯೆಗೆ ದೂಡುತ್ತಿರುವುದನ್ನು ನಾವು ನೋಡುತ್ತಲೇ ಇದ್ದೇವೆ. ಹಾಗೆಯೇ ಸಾರ್ವಜನಿಕ ವಲಯದ ಬ್ಯಾಂಕ್‍ಗಳನ್ನು ಖಾಸಗಿಯವರಿಗೆ ಒಪ್ಪಿಸುವ ಮೂಲಕ ಹಿಂದುಳಿದ ವರ್ಗಗಳು, ಪರಿಶಿಷ್ಠ ಜಾತಿ, ಪರಿಶಿಷ್ಠ ವರ್ಗಗಳ ಪಾಲಿನ ಉದ್ಯೋಗಾವಕಾಶಗಳನ್ನೂ ಕಿತ್ತುಕೊಳ್ಳಲಾಗುತ್ತಿದೆ. ಜತೆಗೆ ಹಿಂದುಳಿದ ಮತ್ತು ಬಡ ಹಗೂ ದಲಿತ ಸಮುದಾಯಗಳ ಆರ್ಥಿಕ ಚಲನೆಗೆ ಅಡ್ಡವಾಗಿ ದೊಡ್ಡ ಗೋಡೆ ಕಟ್ಟುತ್ತಿದ್ದೀರಿ. ಖಾಸಗಿ ಬ್ಯಾಂಕ್‍ಗಳು ಹೆಚ್ಚೆಚ್ಚು ಲಾಭ ಮಾಡಿಕೊಳ್ಳುವ ಸಲುವಾಗಿ ಡಿಜಟಲ್ ಬ್ಯಾಂಕಿಂಗ್‍ಗೆ ಜಾರುತ್ತಿವೆ. ಇದರಿಂದ ಗ್ರಾಮೀಣ ಭಾಗದ ಆರ್ಥಿಕತೆಗೆ ದೊಡ್ಡ ಪೆಟ್ಟುಕೊಟ್ಟಂತಾಗುತ್ತದೆ. ಸಾಲದ್ದಕ್ಕೆ ಗ್ರಾಮೀಣ ಜನ ಖಾಸಗಿ ಫೈನಾನ್ಸಿಯರ್‍ಗಳ ಹಿಡಿತಕ್ಕೆ ಸಿಕ್ಕಿ ನರಳುವಂತೆ ಮಾಡುತ್ತಿದ್ದೀರಿ. ಆದ್ದರಿಂದ ಸಾರ್ವಜನಿಕ ಬ್ಯಾಂಕ್‍ಗಳ ಖಾಸಗೀಕರಣದ ಹಿಂದೆ ಮೇಲ್ಜಾತಿಗಳ, ಉನ್ನತ ಶ್ರೀಮಂತ ವರ್ಗದ ಮತ್ತು ಕಾರ್ಪೋರೇಟ್ ಶ್ರೀಮಂತರ ಹಿತಾಸಕ್ತಿ ಕಾಯುವ, ಕಾರ್ಪೋರೇಟ್ ವಂಚಕರಿಗೆ ಅನುಕೂಲ ಮಾಡಿಕೊಡುವ ಹುನ್ನಾರ ಅಡಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಈ ಎಲ್ಲಾ ಕಾರಣಗಳಿಂದ ಈ ದೇಶದ ದುಡಿಯುವ ವರ್ಗಗಳ ಹಿತಾಸಕ್ತಿಯನ್ನು ಕಡೆಗಣಿಸಿರುವ, ಸಾಮಾಜಿಕ ನ್ಯಾಯ ತತ್ವಕ್ಕೆ ವಿರುದ್ಧವಾಗಿರುವ, ಬಡ ಮತ್ತು ಮಧ್ಯಮ ವರ್ಗದ ಜನ ಸಮಾನ್ಯರ ಬದುಕಿಗೆ ಮಾರಕ ಆಗಿರುವ, ದೇಶದ ಆರ್ಥಿಕತೆಯನ್ನು ನಾಶ ಮಾಡುವಂತಹ ಬ್ಯಾಂಕ್‍ಗಳ ಖಾಸಗೀಕರಣ ಮತ್ತು ಬಂಡವಾಳ ಹಿಂತೆಗೆತದ ಯೋಜನೆಯನ್ನು ಕೈ ಬಿಡುವಂತೆ ಒತ್ತಾಯಿಸಿದ್ದಾರೆ.

  • ಫೆಬ್ರವರಿಯಲ್ಲಿ 12 ದಿನ ಬ್ಯಾಂಕುಗಳಿಗೆ ರಜೆ

    ಫೆಬ್ರವರಿಯಲ್ಲಿ 12 ದಿನ ಬ್ಯಾಂಕುಗಳಿಗೆ ರಜೆ

    ನವದೆಹಲಿ: ದೇಶದ ಹಲವು ರಾಜ್ಯಗಳು ಮತ್ತು ಪ್ರದೇಶಗಳಲ್ಲಿ ಅನೇಕ ಹಬ್ಬದ ಸಂದರ್ಭಗಳು ಮತ್ತು ವಾರಾಂತ್ಯದ ರಜೆಗಳ ಕಾರಣ ಫೆಬ್ರವರಿ 2022 ರಲ್ಲಿ ಬ್ಯಾಂಕುಗಳು ಒಟ್ಟು 12 ದಿನಗಳವರೆಗೆ ಮುಚ್ಚಲ್ಪಡುತ್ತಿವೆ.

    (ಆರ್‌ಬಿಐ) ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಫೆಬ್ರವರಿಯ ರಜಾದಿನಗಳ ಪಟ್ಟಿಯು ದೇಶದ ವಿವಿಧ ರಾಜ್ಯಗಳಲ್ಲಿ ಆಯ್ದ ದಿನಗಳಂದು ಬ್ಯಾಂಕುಗಳು ಮುಚ್ಚಲ್ಪಡುತ್ತಿವೆ ಎಂದು ಸೂಚಿಸಿದೆ. ಇದನ್ನೂ ಓದಿ: ಇರಾಕ್ ಏರ್‌ಸ್ಟ್ರೈಕ್ ದಾಳಿ- 6 ಇಸ್ಲಾಮಿಕ್ ಸ್ಟೇಟ್ ಉಗ್ರರ ಹತ್ಯೆ

    ಯಥಾ ಪ್ರಕಾರ ದೇಶಾದ್ಯಂತ ಬ್ಯಾಂಕುಗಳು ಶನಿವಾರ ಮತ್ತು ಭಾನುವಾರದ ರಜಾದಿನಗಳಲ್ಲಿ ಮುಚ್ಚಲ್ಪಡುತ್ತವೆ. ಇದಲ್ಲದೆ, ಬಸಂತ್ ಪಂಚಮಿ ಮತ್ತು ಗುರು ರವಿದಾಸ್ ಜಯಂತಿಯಂತಹ ಸಂದರ್ಭಗಳಲ್ಲಿ, ದೇಶದ ಅನೇಕ ಭಾಗಗಳಲ್ಲಿ ಬ್ಯಾಂಕುಗಳನ್ನು ಮುಚ್ಚಲಾಗುತ್ತದೆ.

    ಸ್ಥಳೀಯ ಹಬ್ಬಗಳ ಸಂದರ್ಭಗಳಿಂದಾಗಿ ದೇಶದ ವಿವಿಧ ಭಾಗಗಳಲ್ಲಿ (ಆರ್‌ಬಿಐ) ಬ್ಯಾಂಕುಗಳು ಮಾತ್ರ ಮುಚ್ಚಲ್ಪಡುತ್ತವೆ. ಈ ಸಂದರ್ಭಗಳಲ್ಲಿ ದೇಶದ ಎಲ್ಲಾ ಬ್ಯಾಂಕುಗಳು ಮುಚ್ಚಲ್ಪಡುವುದಿಲ್ಲ. ಇದನ್ನೂ ಓದಿ: ಬಾಪು ಆದರ್ಶಗಳನ್ನು ಮತ್ತಷ್ಟು ಜನಪ್ರಿಯಗೊಳಿಸುತ್ತೇವೆ: ಮೋದಿ

    ಉದಾಹರಣೆಗೆ, ಫೆಬ್ರವರಿ 2 ರಂದು, ಸೋನಮ್ ಲೊಚ್ಚರ್ ಸಂದರ್ಭದ ಕಾರಣ ಗ್ಯಾಂಗ್‍ಟಾಕ್‍ನಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಅದೇ ರೀತಿ, ಆಯ್ದ ರಾಜ್ಯಗಳಲ್ಲಿನ ಬ್ಯಾಂಕ್‍ಗಳು 5 ದಿನಗಳವರೆಗೆ ಮಾತ್ರ ಮುಚ್ಚಲ್ಪಡುತ್ತವೆ. ಇತರ ರಾಜ್ಯಗಳಲ್ಲಿನ ಬ್ಯಾಂಕುಗಳು ಇತರ ದಿನಗಳಲ್ಲಿ ಮುಚ್ಚಲ್ಪಡುತ್ತವೆ.

    ಯಾವ ದಿನ ಏನು?
    ಫೆಬ್ರವರಿ 2 – ಸೋನಮ್ ಲೋಚಾರ್ (ಗ್ಯಾಂಗ್ಟಾಕ್)
    ಫೆಬ್ರವರಿ 5 – ಸರಸ್ವತಿ ಪೂಜೆ/ ಶ್ರೀ ಪಂಚಮಿ/ಶ್ರೀ ಪಂಚಮಿ ಬಸಂತ್ ಪಂಚಮಿ (ಅಗರ್ತಲಾ, ಭುವನೇಶ್ವರ್, ಕೋಲ್ಕತ್ತಾ)
    ಫೆಬ್ರವರಿ 6 – ಮೊದಲ ಭಾನುವಾರ
    ಫೆಬ್ರವರಿ 12 – ಎರಡನೇ ಶನಿವಾರ
    ಫೆಬ್ರವರಿ 13 – ಎರಡನೇ ಭಾನುವಾರ
    ಫೆಬ್ರವರಿ 15 – ಮೊಹಮ್ಮದ್ ಹಜರತ್ ಅಲಿ ಜನ್ಮದಿನ/ಲೂಯಿಸ್-ನಾಗೈ-ನಿ (ಇಂಫಾಲ್, ಕಾನ್ಪುರ್, ಲಕ್ನೋ)

    ಫೆಬ್ರವರಿ 16 – ಗುರು ರವಿದಾಸ್ ಜಯಂತಿ (ಚಂಡೀಗಢ)
    ಫೆಬ್ರವರಿ 18 – ಡೋಲ್ಜಾತ್ರಾ (ಕೋಲ್ಕತ್ತಾ)
    ಫೆಬ್ರವರಿ 19 – ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ (ಬೇಲಾಪುರ, ಮುಂಬೈ, ನಾಗ್ಪುರ)
    ಫೆಬ್ರವರಿ 20 – ಮೂರನೇ ಭಾನುವಾರ
    ಫೆಬ್ರವರಿ 26 – ತಿಂಗಳ ನಾಲ್ಕನೇ ಶನಿವಾರ
    ಫೆಬ್ರವರಿ 27 – ನಾಲ್ಕನೇ ಭಾನುವಾರ

  • ಕಡಿಮೆ ಬಡ್ಡಿ ದರದಲ್ಲಿ ಕಾರು ಲೋನ್ – ಯಾವ ಬ್ಯಾಂಕಿನಲ್ಲಿ ಎಷ್ಟು ಬಡ್ಡಿ?

    ಕಡಿಮೆ ಬಡ್ಡಿ ದರದಲ್ಲಿ ಕಾರು ಲೋನ್ – ಯಾವ ಬ್ಯಾಂಕಿನಲ್ಲಿ ಎಷ್ಟು ಬಡ್ಡಿ?

    ನವದೆಹಲಿ: ಕಾರಿನಲ್ಲಿ ಓಡಾಡುವುದು ಯಾರಿಗೆ ಇಷ್ಟವಿಲ್ಲ ಹೇಳಿ? ಸಾಲಕ್ಕಾದರೂ ಸರಿ ಸ್ವಂತಕ್ಕೆ ಕಾರು ಖರೀದಿಸಿ ಮನೆಯವರೊಟ್ಟಿಗೆ ಓಡಾಡುವ ಆಸೆಯನ್ನು ಎಷ್ಟೋ ಮಂದಿ ಹೊಂದಿರುತ್ತಾರೆ. ಅಂತಹವರಿಗೆ ಕೆಲವು ಸಾರ್ವಜನಿಕ ವಲಯದ ಬ್ಯಾಂಕುಗಳು ಕಡಿಮೆ ಬಡ್ಡಿ ದರದಲ್ಲಿ ಕಾರು ಸಾಲಗಳನ್ನು ನೀಡುತ್ತಿವೆ.

    ಕೋವಿಡ್ ಕಾರಣದಿಂದಾಗಿ ಕಳೆದೆರಡು ವರ್ಷಗಳಿಂದ ಕಾರು ಸಾಲಗಳು ಸೇರಿದಂತೆ ಚಿಲ್ಲರೆ ಸಾಲದ ಬಡ್ಡಿದರ ಕಡಿಮೆಯಾಗಿದೆ. ಇದನ್ನೂ ಓದಿ: ಆಪರೇಷನ್ ವೇಳೆ ಮಹಿಳೆಯ ಹೊಟ್ಟೆಯಲ್ಲೇ ಉಳೀತು ಹತ್ತಿ – ಶಸ್ತ್ರಚಿಕಿತ್ಸಕರ ಮೇಲೆ ಕೇಸ್

    ಪಂಜಾಬ್ ನ್ಯಾಷನಲ್ ಬ್ಯಾಂಕ್
    ಈ ಬ್ಯಾಂಕ್ ಏಳು ವರ್ಷಗಳ ಅವಧಿಗೆ 10 ಲಕ್ಷ ರೂ. ಕಾರು ಲೋನ್‌ಗೆ ಕಡಿಮೆ ಬಡ್ಡಿ ದರವನ್ನು ನೀಡುತ್ತದೆ. ಶೇ.6.65 ಬಡ್ಡಿ ದರದೊಂದಿಗೆ ಮಾಸಿಕ ಕಂತು (ಇಎಂಐ) 14,922 ರೂ. ಇರುತ್ತದೆ.

    ಮಹಾರಾಷ್ಟ್ರ, ಪಂಜಾಬ್, ಸಿಂಡ್ ಬ್ಯಾಂಕ್
    ರಾಜ್ಯಗಳ ಸ್ವಾಮ್ಯದ ಈ ಬ್ಯಾಂಕ್‌ಗಳು ಶೇ.6.8ರಷ್ಟು ಬಡ್ಡಿದರವನ್ನು ವಿಧಿಸುತ್ತಿವೆ. ಈ ದರದಲ್ಲಿ ಇಎಂಐ 14,995 ರೂ. ಕಟ್ಟಬೇಕಾಗುತ್ತದೆ. ಇದನ್ನೂ ಓದಿ: UP Election: ಚುಣಾವಣಾ ಪ್ರಚಾರಕ್ಕೆ ತೆರಳಿದ್ದ ಬಿಜೆಪಿ ಶಾಸಕನನ್ನು ಓಡಿಸಿದ ಗ್ರಾಮಸ್ಥರು

    ಇಂಡಿಯನ್ ಬ್ಯಾಂಕ್
    ಈ ಬ್ಯಾಂಕ್ ಶೇ.6.9ರಷ್ಟು ಬಡ್ಡಿ ದರವನ್ನು ವಿಧಿಸುತ್ತದೆ. ಈ ಬ್ಯಾಂಕ್‌ನಿಂದ ಏಳು ವರ್ಷಗಳ ಅವಧಿಗೆ 10 ಲಕ್ಷ ರೂ. ಕಾರು ಸಾಲವನ್ನು ತೆಗೆದುಕೊಂಡರೆ, 15,044 ರೂ. ಇಎಂಐ ಪಾವತಿಸಬೇಕಾಗುತ್ತದೆ.

    ಬ್ಯಾಂಕ್ ಆಫ್ ಬರೋಡ
    ಅಗ್ಗದ ಬಡ್ಡಿ ದರದಲ್ಲಿ ಕಾರು ಸಾಲ ನೀಡುವ ಬ್ಯಾಂಕ್‌ಗಳ ಪಟ್ಟಿಯಲ್ಲಿ ಬ್ಯಾಂಕ್ ಆಫ್ ಬರೋಡ ಕೂಡ ಒಂದು. ಈ ಬ್ಯಾಂಕ್ ಏಳು ವರ್ಷಗಳ ಅವಧಿಗೆ 10 ಲಕ್ಷ ರೂ. ಕಾರು ಲೋನ್‌ಗಳಿಗೆ ವಾರ್ಷಿಕ ಶೇ.7 ಬಡ್ಡಿ ದರವನ್ನು ವಿಧಿಸುತ್ತದೆ.

    ಜ.6 ರಂದು ಬ್ಯಾಂಕುಗಳು ನೀಡಿದ ಮಾಹಿತಿ ಆಧಾರದಲ್ಲಿ ಕಡಿಮೆ ಬಡ್ಡಿ ದರದಲ್ಲಿ ಕಾರು ಸಾಲ ನೀಡುವ ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕಗಳನ್ನು ಪಟ್ಟಿಯನ್ನು ನೀಡಲಾಗಿದೆ.

  • ಸಾಲ ನೀಡದ್ದಕ್ಕೆ ಬ್ಯಾಂಕ್ ಮುಂದೆ ಕಸ ಸುರಿದ್ರು

    ಸಾಲ ನೀಡದ್ದಕ್ಕೆ ಬ್ಯಾಂಕ್ ಮುಂದೆ ಕಸ ಸುರಿದ್ರು

    ಹೈದರಾಬಾದ್: ಸಾಲದ ಅರ್ಜಿಗಳನ್ನು ನಿರಾಕರಿಸಿದ ಕಾರಣ ಬ್ಯಾಂಕ್ ಮುಂದೆ ಕಸದ ರಾಶಿಯನ್ನು ಸುರಿಯುವ ಮೂಲಕ ಪೌರ ಕಾರ್ಮಿಕ ಅರ್ಜಿದಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ವಯ್ಯೂರಿನ ಕೃಷ್ಣ ಜಿಲ್ಲೆಯಲ್ಲಿ ನಡೆದಿದೆ.

    ಹಲವಾರು ರಾಷ್ಟ್ರೀಕೃತ ಬ್ಯಾಂಕುಗಳು ಜಗನ್ನಣತೋಡು ಮತ್ತು ಚೆಯುಥಾ ಯೋಜನೆಗಳ ಅಡಿಯಲ್ಲಿ ಸಾಲ ನೀಡಲು ನಿರಾಕರಿಸಲಾಗಿತ್ತು. ಇದು ಅರ್ಜಿದಾರರನ್ನು ಕೆರಳಿಸುವಂತೆ ಮಾಡಿದೆ. ಹೀಗಾಗಿ ಕೋಪಗೊಂಡ ಜನರು ಗುರುವಾರ ವುಯೂರು ಪಟ್ಟಣದ ಮೂರು ಬ್ಯಾಂಕ್ ಶಾಖೆಗಳ ಮುಂದೆ ಕಸದ ರಾಶಿಯನ್ನು ಸುರಿದ್ದಾರೆ. ಮಾರನೇ ದಿನ ಕೆಲಸಕ್ಕೆಂದು ಬ್ಯಾಂಕ್‍ಗೆ ಬಂದ ಅಧಿಕಾರಿಗಳು ಕಸದ ರಾಶಿಯನ್ನು ಕಂಡು ಬೇಸರ ವ್ಯಕ್ತಪಡಿಸಿದ್ದಾರೆ.

    ಬಳಿಕ ಕೂಡಲೇ ತಮ್ಮ ಉನ್ನತ ಮೇಲಾಧಿಕಾರಿಗಳಿಗೆ ಮತ್ತು ಪುರಸಭೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ನಂತರ ಕಸದ ರಾಶಿಯನ್ನು ತೆಗೆದು ಬ್ಯಾಂಕ್ ಮುಂದೆ ಸ್ವಚ್ಛಗೊಳಿಸಲಾಗಿದ್ದು, ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಮುಖಂಡರು ನೈರ್ಮಲ್ಯದ ಕೃತ್ಯವನ್ನು ಖಂಡಿಸಿದ್ದಾರೆ.

    ಈ ಕುರಿತಂತೆ ಮಾತನಾಡಿದ ಕೃಷ್ಣ ಜಿಲ್ಲಾಧಿಕಾರಿ ಎ.ಎಂಡಿ ಇಮ್ತಿಯಾಜ್, ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಮೂಲಕ ಬಡವರಿಗೆ ಸಾಲ ಮಂಜೂರು ಮಾಡುವ ನಿಟ್ಟಿನಲ್ಲಿ ಸಾರ್ವಜನಿಕರು ಸರ್ಕಾರ ಮತ್ತು ಬ್ಯಾಂಕ್ ಸಿಬ್ಬಂದಿ ಜೊತೆ ಸಹಕರಿಸಬೇಕು. ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಕೆಲವು ಕಠಿಣ ಕ್ರಮ ಕೈಗೊಳ್ಳುವುದಾಗಿ ಬ್ಯಾಂಕುಗಳಿಗೆ ಭರವಸೆ ನೀಡಿದ್ದಾರೆ.

  • ಹೋಟೆಲ್, ಮಾಲ್, ಶಾಪ್ ಮಾಲೀಕರಿಗೆ ಭಾಸ್ಕರ್ ರಾವ್ ಖಡಕ್ ಎಚ್ಚರಿಕೆ

    ಹೋಟೆಲ್, ಮಾಲ್, ಶಾಪ್ ಮಾಲೀಕರಿಗೆ ಭಾಸ್ಕರ್ ರಾವ್ ಖಡಕ್ ಎಚ್ಚರಿಕೆ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಳೆದ ಕೆಲ ದಿನಗಳಿಂದ ಉಲ್ಬಣಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಹೋಟೆಲ್, ಮಾಲ್, ಶಾಪ್ ಮಾಲೀಕರಿಗೆ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

    ಟ್ವೀಟ್ ಮಾಡಿರುವ ಅವರು, ಅಂಗಡಿ, ಮಾಲ್, ಬ್ಯಾಂಕ್, ಹೋಟೆಲ್, ಕಚೇರಿ ಹಾಗೂ ಸಂಸ್ಥೆಗಳು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಈಗಾಗಲೇ ತಿಳಿಸಿದ್ದೇವೆ. ನೀವು ಮಾಸ್ಕ್ ಧರಿಸುವುದನ್ನು ಕಾರ್ಯಗತಗೊಳಿಸದಿದ್ದರೆ ಮತ್ತು ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳದಿದ್ದರೆ ಅಂತವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಇದು ಈಗಾಗಲೇ ಕಾರ್ಯಗತಕ್ಕೆ ಬಂದಿದ್ದು, ಸಾರ್ವಜನಿಕರ ಹಿತಾಸಕ್ತಿ ಕಾಪಾಡುತ್ತಿದೆ ಎಂದು ತಿಳಿಸಿದ್ದಾರೆ.

    ನಗರದ ಅಂಗಡಿ, ಮಾಲ್, ಬ್ಯಾಂಕ್, ಹೋಟಲ್ ಸೇರಿದಂತೆ ವಿವಿಧ ಕಡೆಯ ಸಿಬ್ಬಂದಿ ಹಾಗೂ ಗ್ರಾಹಕರು ಮಾಸ್ಕ್ ಧರಿಸುತ್ತಿಲ್ಲ. ಅಷ್ಟೇ ಅಲ್ಲದೆ ಗ್ರಾಹಕರಿಗೆ ಸ್ಯಾನಿಟೈಜರ್ ವ್ಯವಸ್ಥೆ ಕಲ್ಪಿಸಿಲ್ಲ. ಸಾಕಷ್ಟು ಕಡೆ ಅಂಗಡಿ ಮಾಲೀಕರು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಭಾಸ್ಕರ್ ರಾವ್ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.

    ಜೂನ್ ತಿಂಗಳ ಆರಂಭದಲ್ಲಿ ಬೆಂಗಳೂರಿನಲ್ಲಿ ಕೊರೊನಾ ಸ್ವಲ್ಪ ನಿಯಂತ್ರಣಕ್ಕೆ ಸಿಕ್ಕಿತ್ತು. ಆದರೆ ಕಳೆದ ಕೆಲ ದಿನಗಳಿಂದ ಸೋಂಕಿತರು ಹಾಗೂ ಮೃತರ ಸಂಖ್ಯೆ ಏರಿಕೆಯಾಗಿದೆ. ಹೀಗಾಗಿ ಜನರು ಆತಂಕಕ್ಕೆ ಒಳಗಾಗಿದ್ದಾರೆ.

  • ಉತ್ತರ ಕನ್ನಡದ ಬ್ಯಾಂಕ್‍ಗಳಲ್ಲಿ ಕೊಳೆಯುತ್ತಿವೆ ನಾಲ್ಕೂವರೆ ಕೋಟಿ ರೂ.ಗಳ ಹತ್ತು ರೂ. ನಾಣ್ಯ

    ಉತ್ತರ ಕನ್ನಡದ ಬ್ಯಾಂಕ್‍ಗಳಲ್ಲಿ ಕೊಳೆಯುತ್ತಿವೆ ನಾಲ್ಕೂವರೆ ಕೋಟಿ ರೂ.ಗಳ ಹತ್ತು ರೂ. ನಾಣ್ಯ

    ಕಾರವಾರ: ಹತ್ತು ರೂ. ನಾಣ್ಯದ ಕುರಿತ ಅಪ ಪ್ರಚಾರದಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಬ್ಯಾಂಕ್‍ಗಳಲ್ಲಿ ನಾಲ್ಕೂವರೆ ಕೋಟಿ ರೂ. ಮೊತ್ತದ ಹತ್ತು ರೂಪಾಯಿ ಮುಖಬೆಲೆಯ ನಾಣ್ಯಗಳು ಚಲಾವಣೆಯಾಗದೇ ಉಳಿದಿವೆ.

    ಹತ್ತು ರೂ. ನಾಣ್ಯವನ್ನು ಆರ್ ಬಿಐ ರದ್ದುಪಡಿಸಿದೆ ಎಂಬ ಸುಳ್ಳು ವದಂತಿಯಿಂದಾಗಿ ಗ್ರಾಹಕರು ಇವುಗಳನ್ನು ತೆಗೆದುಕೊಳ್ಳುತ್ತಿಲ್ಲ. ಈ ಸುಳ್ಳು ಸುದ್ದಿಯಿಂದಾಗಿ ಜಿಲ್ಲೆಯ ವಿವಿಧ ಬ್ಯಾಂಕ್ ಗಳಲ್ಲಿ ಕೂಡಲ್ಪಟ್ಟ 10 ರೂ. ನಾಣ್ಯ ಜಿಲ್ಲೆಯ ವಿವಿಧ ಕರೆನ್ಸಿ ಚೆಸ್ಟ್ ಗಳಲ್ಲಿ (ಹಣ ಪೂರೈಸುವ ಬ್ಯಾಂಕ್ ಗಳು)ನಾಲ್ಕೂವರೆ ಕೋಟಿ ರೂ. ಮೊತ್ತದ 10 ರೂ. ನಾಣ್ಯಗಳು ಸಂಗ್ರಹಗೊಂಡು ಕೊಳೆಯುತ್ತಿದೆ.

    ರಿಸವ್ ಬ್ಯಾಂಕ್ ಗೂ ಬೇಡವಾದ ಹತ್ತುರೂ ನಾಣ್ಯ!
    ಜಿಲ್ಲೆಯ ವಿವಿಧ ಬ್ಯಾಂಕ್‍ಗಳಲ್ಲಿ ಸಂಗ್ರಹವಾದ ನಾಲ್ಕೂವರೆ ಕೋಟಿ ರೂ. ಮೊತ್ತದ ಹಣವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಪಡೆಯಲು ಸಿದ್ಧವಿಲ್ಲ. ಇತ್ತ ಮಾರುಕಟ್ಟೆಗೆ ಬಿಡಲು ಜನರು ಈ ನಾಣ್ಯವನ್ನು ಸ್ವೀಕರಿಸುತ್ತಿಲ್ಲ. ಕಳೆದ ವರ್ಷ ನೋಟ್ ಬ್ಯಾನ್ ಸಂದರ್ಭದಲ್ಲಿ ಹತ್ತು ರೂ. ನಾಣ್ಯ ಸಹ ಬ್ಯಾನ್ ಆಗಿದೆ ಎಂಬ ಸುಳ್ಳು ವದಂತಿಯಿಂದಾಗಿ ಜಿಲ್ಲೆಯ ಗ್ರಾಹಕರು ಅನುಮಾನದಿಂದ ನೋಡುವಂತಾಗಿದೆ. ಸರ್ಕಾರ ನಾಣ್ಯವನ್ನು ರದ್ದುಪಡಿಸಿಲ್ಲ ಎಂದು ಅಧಿಕೃತ ಪ್ರಕಟಣೆ ನೀಡಿದರೂ, ಜನ ಮಾತ್ರ ನಂಬುತ್ತಿಲ್ಲ. ತಮ್ಮ ಬಳಿ ಇದ್ದ ನಾಣ್ಯವನ್ನು ಸಹ ಬ್ಯಾಂಕ್‍ಗೆ ಜಮಾವಣೆ ಮಾಡಿದ್ದಾರೆ.

    ಇದೆಲ್ಲದರ ಮಧ್ಯೆ ನಕಲಿ ನಾಣ್ಯಗಳು ಚಲಾವಣೆಯಾಗಿದೆ ಎಂಬ ಸುಳ್ಳು ಸುದ್ದಿ ಹರಿದಾಡಿ, ಹತ್ತು ರೂ. ನಾಣ್ಯ ಸಂಪೂರ್ಣವಾಗಿ ಅಘೋಷಿತ ರದ್ದಾಗಿದೆ. ಜಿಲ್ಲೆಯ ವಿವಿಧ ಕರೆನ್ಸಿ ಚೆಸ್ಟ್ ಗಳಲ್ಲಿ 4.5ಕೋಟಿ ರೂ. ಜಮಾವಣೆಯಾಗಿದೆ ಎನ್ನುತ್ತದೆ ಲೀಡ್ ಬ್ಯಾಂಕ್. ಆರ್ ಬಿಐ ಸಹ ಬ್ಯಾಂಕ್ ನಿಂದ ಈ ಕಾಯಿನ್‍ಗಳನ್ನು ತೆಗೆದಯಕೊಳ್ಳದೆ ಮರು ಚಲಾವಣೆ ಮಾಡಿ ಎಂದು ಹೇಳುತ್ತದೆ. ಆದರೆ ಗ್ರಾಹಕರು ಬ್ಯಾಂಕ್‍ನಿಂದ ಈ ನ್ಯಾಣ್ಯಗಳನ್ನು ಪಡೆಯುತ್ತಿಲ್ಲ. ಹೀಗಾಗಿ ಖಜಾನೆಯಲ್ಲಿಯೇ ಉಳಿಯುವಂತಾಗಿದೆ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪಿ.ಎಸ್.ಪಿಂಜಾರಾ ಬೇಸರ ವ್ಯಕ್ತಪಡಿಸಿದ್ದಾರೆ.

    10-20 ರೂ. ನೋಟಿಗೂ ಬಂತು ಬರ
    ಹತ್ತು ಮತ್ತು ಇಪ್ಪತ್ತು ರೂ. ನೋಟುಗಳಿಗೆ ಜಿಲ್ಲೆಯಲ್ಲಿ ಬೇಡಿಕೆ ಹೆಚ್ಚಿದೆ. ಹೋಟೆಲ್, ಅಂಗಡಿ ಮುಂಗಟ್ಟಿನಲ್ಲಿ ಗ್ರಾಹಕರಿಗೆ ಚಿಲ್ಲರೆ ನೀಡಲು ದೊಡ್ಡ ಕೊರತೆ ಎದುರಾಗಿದ್ದು, ವ್ಯಾಪಾರಸ್ಥರು ಪರದಾಡುವಂತಾಗಿದೆ.

    ಜಿಲ್ಲೆಯ ಬ್ಯಾಂಕ್‍ಗಳಿಗೂ ಈ ನೋಟುಗಳ ಸರಬರಾಜು ಇಳಿಮುಖವಾಗಿದ್ದು, ನಾಲ್ಕು ತಿಂಗಳಿಗೊಮ್ಮೆ ಆರ್ ಬಿಐನಿಂದ ಬ್ಯಾಂಕ್‍ಗಳಿಗೆ ಸರಬರಾಜು ಮಾಡಲಾಗುತ್ತಿದೆ. ಈ ವೇಳೆ ದೊಡ್ಡ ಮೊತ್ತದ ನೋಟುಗಳು ಅಧಿಕ ಸರಬರಾಜಾಗುತ್ತಿವೆ. ನಂತರ ಚಿಕ್ಕ ಮೊತ್ತದ ನೋಟುಗಳು ಸರಬರಾಜಾಗುತ್ತಿವೆ. ಕಳೆದ ದೀಪಾಳಿಯಲ್ಲಿ ಜಿಲ್ಲೆಗೆ 40 ಲಕ್ಷ ರೂ.ನಷ್ಟು ಮೊತ್ತದ ಸಣ್ಣ ಮುಖಬೆಲೆಯ ನೋಟುಗಳು ಪೂರೈಕೆಗೊಂಡಿದ್ದವು. ನಂತರ ಈ ನೋಟುಗಳ ಪೂರೈಕೆಯಾಗಿಲ್ಲ ಎಂಬುದು ಬ್ಯಾಂಕ್ ಮೂಲದ ಮಾಹಿತಿ.

  • ಬೆಳವಣಿಗೆ ಕುಂಠಿತವಾದರೂ, ಭಾರತದ ಹಣಕಾಸು ವ್ಯವಸ್ಥೆ ಸ್ಥಿರ – ಆರ್‌ಬಿಐ

    ಬೆಳವಣಿಗೆ ಕುಂಠಿತವಾದರೂ, ಭಾರತದ ಹಣಕಾಸು ವ್ಯವಸ್ಥೆ ಸ್ಥಿರ – ಆರ್‌ಬಿಐ

    ನವದೆಹಲಿ: ದೇಶದ ಆರ್ಥಿಕ ಬೆಳವಣಿಗೆ ಕುಂಠಿತವಾದರೂ ಭಾರತದ ಹಣಕಾಸು ವ್ಯವಸ್ಥೆ ಸ್ಥಿರವಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತಿಳಿಸಿದೆ.

    ಆರ್‌ಬಿಐ ಬಿಡುಗಡೆ ಮಾಡಿರುವ 20ನೇ ಹಣಕಾಸು ಸ್ಥಿರತೆ ವರದಿ(ಎಫ್‍ಎಸ್‍ಆರ್)ಯಲ್ಲಿ ಈ ಕುರಿತು ತಿಳಿಸಲಾಗಿದೆ. ದೇಶೀಯ ಬೆಳವಣಿಗೆ ಕುಂಠಿತಗೊಂಡರೂ ಭಾರತದ ಹಣಕಾಸು ವ್ಯವಸ್ಥೆ ಸ್ಥಿರವಾಗಿದೆ. ಅಲ್ಲದೆ ಸರ್ಕಾರ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಮರು ಬಂಡವಾಳಗೊಳಿಸಿದ ನಂತರ ಬ್ಯಾಂಕಿಂಗ್ ಕ್ಷೇತ್ರದ ಸ್ಥಿತಿಸ್ಥಾಪಕತ್ವ ಸುಧಾರಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

    ಹಣಕಾಸು ಸ್ಥಿರತೆ ಅಪಾಯದ ಕುರಿತು ಹಣಕಾಸು ಸ್ಥಿರತೆ ಮತ್ತು ಅಭಿವೃದ್ಧಿ ಮಂಡಳಿಯ(ಎಫ್‍ಎಸ್‍ಡಿಸಿ) ಉಪಸಮಿತಿ ಈ ಹಿಂದೆ ನೀಡಿರುವ ವರದಿ ಹಾಗೂ ಹಣಕಾಸು ವ್ಯವಸ್ಥೆಯ ಸ್ಥಿತಿ ಸ್ಥಾಪಕತ್ವವನ್ನು ಇದು ಪ್ರತಿಬಿಂಬಿಸಿದೆ. ಹಣಕಾಸು ಕ್ಷೇತ್ರದ ಅಭಿವೃದ್ಧಿ ಹಾಗೂ ನಿಯಂತ್ರಣಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಸಹ ವರದಿಯಲ್ಲಿ ಚರ್ಚಿಸಲಾಗಿದೆ.

    ಜಾಗತಿಕ, ದೇಶೀಯ ಆರ್ಥಿಕ ಅನಿಶ್ಚಿತತೆಗಳು ಮತ್ತು ಭೌಗೋಳಿಕ ರಾಜಕೀಯ ಬೆಳವಣಿಗೆಗಳಿಂದಾಗುವ ಅಪಾಯಗಳು ಮುಂದುವರಿಯುತ್ತವೆ ಎಂದು ವರದಿಯಲ್ಲಿ ಹೇಳಲಾಗಿದೆ. ಬ್ರೆಕ್ಸಿಟ್ ಒಪ್ಪಂದದ ವಿಳಂಬ, ವ್ಯಾಪಾರ ಸಮರ, ಆರ್ಥಿಕ ಹಿಂಜರಿತ, ತೈಲ ಮಾರುಕಟ್ಟೆಯ ಅಡೆ ತಡೆಗಳು ಹಾಗೂ ಭೌಗೋಳಿಕ ರಾಜಕೀಯ ಅಪಾಯಗಳಿಂದಾಗಿ ಜಾಗತಿಕ ಆರ್ಥಿಕತೆಯು ಹಲವು ಅನಿಶ್ಚಿತತೆಗಳನ್ನು ಎದುರಿಸಿದೆ. ಈ ಅನಿಶ್ಚಿತತೆಗಳು ಗ್ರಾಹಕರ ವಿಶ್ವಾಸ, ವ್ಯವಹಾರದ ಬಗೆಗಿನ ಒಲವು ಹಾಗೂ ಹೂಡಿಕೆಯನ್ನು ಕಡಿಮೆ ಮಾಡಿದೆ. ಈ ಕುರಿತು ಗಮನಹರಿಸದಿದ್ದಲ್ಲಿ ಜಾಗತಿಕ ಬೆಳವಣಿಗೆ ಮೇಲೆ ಸಣ್ಣ ಪ್ರಮಾಣದ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಕೇಂದ್ರ ಬ್ಯಾಂಕ್ ಎಚ್ಚರಿಸಿದೆ.

    ನಿರಂತರ ಜಾಗತಿಕ ಕುಸಿತದ ಸಂದರ್ಭದಲ್ಲಿ ಭಾರತದ ರಫ್ತು ತಲೆಕೆಳಗಾಗಬಹುದು ಎಂದು ಆರ್‍ಬಿಐ ಆತಂಕ ವ್ಯಕ್ತಪಡಿಸಿದೆ. ಚಾಲ್ತಿ ಖಾತೆ ಕೊರತೆ ನಿಯಂತ್ರಣದಲ್ಲಿರಲಿದೆ. ಆದರೆ ಬಳಕೆ ಹಾಗೂ ಹೂಡಿಕೆಗಳನ್ನು ಪುನರುಜ್ಜೀವನಗೊಳಿಸುವುದು ನಿರ್ಣಾಯಕ ಸವಾಲಾಗಿ ಉಳಿಯಲಿದೆ ಎಂದು ರಿಸರ್ವ್ ಬ್ಯಾಂಕ್ ತಿಳಿಸಿದೆ.

    ಬ್ಯಾಂಕಿಂಗ್ ಕ್ಷೇತ್ರದ ಆರ್ಥಿಕ ಸ್ಥಿತಿ ಕುರಿತು ವಿವರಿಸಿರುವ ಆರ್‌ಬಿಐ, ಸೆಪ್ಟೆಂಬರ್ ತಿಂಗಳಲ್ಲಿ ಖಾಸಗಿ ವಲಯದ ಬ್ಯಾಂಕುಗಳ ಬೆಳವಣಿಗೆ ಪ್ರಮಾಣ ಶೇ.16.5ಕ್ಕೆ ಹೋಲಿಸಿದರೆ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಸಾಲದ ಬೆಳವಣಿಗೆ ಶೇ.8.7ರಷ್ಟು ಕಡಿಮೆಯಾಗಿದೆ. ಸರ್ಕಾರ ಸಾರ್ವಜನಿಕ ಬ್ಯಾಂಕುಗಳನ್ನು ಮರು ಬಂಡವಾಳಕ್ಕೆ ಒಳಪಡಿಸಿದ ನಂತರ ಸರ್ಕಾರಿ ಸ್ವಾಮ್ಯದ ಬ್ಯಾಂಕಿನ ಬಂಡವಾಳ ಗಮನಾರ್ಹವಾಗಿ ಸುಧಾರಿಸಿದೆ. 2019ರ ಮಾರ್ಚ್ ಮತ್ತು ಸೆಪ್ಟೆಂಬರ್ ನಡುವೆ ಒಟ್ಟು ಅನುತ್ಪಾದಕ ಆಸ್ತಿ(ಎನ್‍ಪಿಎ) ಅನುಪಾತವು ಶೇ.9.3ಕ್ಕೆ ಬದಲಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.

  • ನಾನೂ ಪರೋಕ್ಷವಾಗಿ ಸಿದ್ಧಾರ್ಥ್ ಸಾಲಿಗೆ ಸೇರುತ್ತೇನೆ: ವಿಜಯ್ ಮಲ್ಯ

    ನಾನೂ ಪರೋಕ್ಷವಾಗಿ ಸಿದ್ಧಾರ್ಥ್ ಸಾಲಿಗೆ ಸೇರುತ್ತೇನೆ: ವಿಜಯ್ ಮಲ್ಯ

    – ಕಾಫಿ ಸಾಮ್ರಾಟ ನಾಪತ್ತೆಯಾಗಿದ್ದ ಕುರಿತು ಮಲ್ಯ ಟ್ವೀಟ್‍

    ನವದೆಹಲಿ: ನಾನೂ ಕೂಡ ಪರೋಕ್ಷವಾಗಿ ಸಿದ್ಧಾರ್ಥ್ ಅವರ ಸಾಲಿಗೆ ಸೇರುತ್ತೇನೆ. ನನ್ನ ಪರಿಸ್ಥಿತಿ ಕೂಡ ಅವರಂತೆ ಆಗಿದೆ ಎಂದು ಮದ್ಯದ ದೊರೆ ವಿಜಯ್ ಮಲ್ಯ ಟ್ವೀಟ್‍ನಲ್ಲಿ ಹೇಳಿಕೊಂಡಿದ್ದಾರೆ.

    ಭಾರತೀಯ ಬ್ಯಾಂಕ್‍ಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ಸದ್ಯ ಮಲ್ಯ ಇಂಗ್ಲೆಂಡಿನಲ್ಲಿದ್ದಾರೆ. ಆದರೆ ಕೆಫೆ ಕಾಫಿ ಡೇ ಸ್ಥಾಪಕ ವಿ.ಜಿ ಸಿದ್ಧಾರ್ಥ್ ಅವರ ನಾಪತ್ತೆ ಸುದ್ದಿ ತಿಳಿದ ಕೂಡಲೇ ಟ್ವೀಟ್ ಮಾಡಿದ ಮಲ್ಯ, ತನಿಖಾ ಸಂಸ್ಥೆ ಹಾಗೂ ಬ್ಯಾಂಕುಗಳನ್ನು ದೂರಿದ್ದಾರೆ. ನಾನು ಕೂಡ ಪರೋಕ್ಷವಾಗಿ ಸಿದ್ಧಾರ್ಥ್ ಅವರ ಸಾಲಿಗೆ ಸೇರುತ್ತೇನೆ. ನನ್ನ ಪರಿಸ್ಥಿತಿ ಕೂಡ ಅವರಂತೆ ಆಗಿದೆ. ತನಿಖಾ ಸಂಸ್ಥೆ ಮತ್ತು ಬ್ಯಾಂಕುಗಳು ಎಂಥವರನ್ನಾದರೂ ಹತಾಶೆಗೊಳಿಸುತ್ತದೆ ಎಂದು ತಿಳಿಸಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    ವಿ.ಜಿ. ಸಿದ್ಧಾರ್ಥ ಒಳ್ಳೆಯ ಮನುಷ್ಯ ಹಾಗೂ ಅದ್ಭುತ ಉದ್ಯಮಿಯಾಗಿದ್ದರು. ಅವರು ಬರೆದಿರುವ ಪತ್ರವನ್ನು ನೋಡಿ ನನಗೆ ಆಘಾತವಾಗಿದೆ. ಸರ್ಕಾರಿ ಏಜೆನ್ಸಿಗಳು ಮತ್ತು ಬ್ಯಾಂಕುಗಳು ಎಂಥವರನ್ನಾದರೂ ಹತಾಶೆಗೆ ದೂಡಬಹುದು. ಸಾಲವನ್ನು ಪೂರ್ಣ ಮರುಪಾವತಿ ಮಾಡುತ್ತೇನೆ ಎಂದರೂ ಅವರು ನನಗೆ ಏನು ಮಾಡುತ್ತಿದ್ದಾರೆಂದು ನೋಡಿ. ಇದೊಂದು ಕೆಟ್ಟ ವರ್ತನೆಯಾಗಿದೆ ಎಂದು ಬರೆದು ಸರ್ಕಾರದ ತನಿಖಾ ಸಂಸ್ಥೆ, ಬ್ಯಾಂಕ್‍ಗಳ ವಿರುದ್ಧ ವಿಜಯ್ ಮಲ್ಯ ಕಿಡಿಕಾರಿದ್ದಾರೆ.

    ಇನ್ನೊಂದು ಟ್ವೀಟ್‍ನಲ್ಲಿ, ಪಾಶ್ಚಿಮಾತ್ಯ ದೇಶಗಳಲ್ಲಿ ಸರ್ಕಾರ ಹಾಗೂ ಬ್ಯಾಂಕುಗಳು ಸಾಲವನ್ನು ಮರುಪಾವತಿಸಲು ಸಾಲಗಾರರಿಗೆ ಸಹಾಯ ಮಾಡುತ್ತವೆ. ನನ್ನ ವಿಷಯದಲ್ಲಿ ಅವರು ನನ್ನ ಸಾಲವನ್ನು ಮರುಪಾವತಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ತಡೆಯುತ್ತಿದ್ದಾರೆ ಮತ್ತು ನನ್ನ ಆಸ್ತಿಗಳಿಗಾಗಿ ಸ್ಪರ್ಧಿಸುತ್ತಿದ್ದಾರೆ. ಮೇಲ್ನೋಟಕ್ಕೆ ಕಾಣುವ ಪ್ರಕರಣ ಮೇಲ್ಮನವಿಗಾಗಿ ಕಾಯುತ್ತಿದೆ ಎಂದು ಬರೆದಿದ್ದಾರೆ.

    ಸೋಮವಾರ ನಾಪತ್ತೆಯಾಗಿದ್ದ ಸಿದ್ಧಾರ್ಥ್ ಅವರ ಮೃತದೇಹ ಇಂದು ಪತ್ತೆಯಾಗಿದೆ. ಸೋಮವಾರ ರಾತ್ರಿಯಿಂದ ಮಂಗಳವಾರ ತಡರಾತ್ರಿಯವರೆಗೆ ನೇತ್ರಾವತಿ ನದಿ ತಟದಲ್ಲಿ ಶೋಧ ಕಾರ್ಯ ನಡೆಸಲಾಗಿದ್ದು, ಆ ಬಳಿಕ ರಾತ್ರಿ ಸ್ಥಗಿತಗೊಳಿಸಲಾಗಿತ್ತು. ಇಂದು ಬೆಳಗ್ಗೆ ಮತ್ತೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಈ ಮಧ್ಯೆ ಹೊಯಿಗೆ ಬಜಾರ್ ಎಂಬ ಪ್ರದೇಶದ ನದಿಭಾಗದಲ್ಲಿ ಮೃತದೇಹ ಪತ್ತೆಯಾಗಿದೆ.

    ಸ್ಥಳೀಯ ಮೀನುಗಾರರು ಗಮನಿಸಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ 36 ಗಂಟೆಗಳ ನಿರಂತರ ಕಾರ್ಯಾಚರಣೆಯ ಬಳಿಕ ಇದೀಗ ಸಿದ್ಧಾರ್ಥ್ ಶವವಾಗಿ ಪತ್ತೆಯಾಗಿದ್ದಾರೆ. ಮಂಗಳಾದೇವಿ ದೇವಸ್ಥಾನದ ಹಿಂಭಾಗದಲ್ಲಿ ರಸ್ತೆಯಿದೆ. ಹೊಯಿಗೆ ಬಜಾರ್‍ನಲ್ಲಿ ನದಿ ಒಂದು ಕಡೆಯಿಂದ ಮಂಗಳೂರು ಬಂದರನ್ನು ತಲುಪುತ್ತದೆ. ಇನ್ನೊಂದು ಕಡೆಯಿಂದ ಸಮುದ್ರವನ್ನು ತಲುಪುತ್ತದೆ. ಈ ಪ್ರದೇಶದಲ್ಲಿ ಸಿದ್ಧಾರ್ಥ್ ಮೃತದೇಹ ಸಿಕ್ಕಿದೆ.

    https://www.youtube.com/watch?v=i3MTQLbm1KE