Tag: bank

  • ರಾಯಚೂರು ರೈತನ ಸಾಲ 5 ಲಕ್ಷ: ಬ್ಯಾಂಕ್ ಕೇಳುತ್ತಿದೆ 24 ಲಕ್ಷ!

    ರಾಯಚೂರು ರೈತನ ಸಾಲ 5 ಲಕ್ಷ: ಬ್ಯಾಂಕ್ ಕೇಳುತ್ತಿದೆ 24 ಲಕ್ಷ!

    -ಬ್ಯಾಂಕ್‍ನಿಂದ ರೈತನಿಗೆ ಸ್ಥಿರಾಸ್ಥಿ ಜಪ್ತಿ ವಾರೆಂಟ್

    -ಸಿಎಂ ಆದೇಶ ಮೀರಿ ಬಲವಂತದ ವಸೂಲಿಗೆ ಮುಂದಾಗಿರುವ ಬ್ಯಾಂಕ್

    ರಾಯಚೂರು: ರಾಜ್ಯದಲ್ಲಿ ಭೀಕರ ಬರಗಾಲ ತಾಂಡವವಾಡುತ್ತಿದ್ದು ರೈತರು ಸಾಲದ ಸುಳಿಯಲ್ಲಿ ನಲುಗಿ ಹೋಗಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರಿಗೆ ನೋಟಿಸ್ ನೀಡಬಾರದು ಎಂದು ಬ್ಯಾಂಕ್‍ಗಳಿಗೆ ನಿರ್ದೇಶನ ನೀಡಿದ್ದೇನೆ ಎಂದು ಹೇಳಿದ್ದಾರೆ. ಆದರೆ ಜಿಲ್ಲೆಯಲ್ಲಿ ಮಾತ್ರ ಬಡ್ಡಿಗೆ ಬಡ್ಡಿ ಹಾಕಿ ರೈತನ ಮನೆ, ಜಮೀನಿನ ಹರಾಜಿಗೆ ಬ್ಯಾಂಕ್ ಮುಂದಾಗಿದೆ.

    ದೇವದುರ್ಗದ ಗೂಗಲ್ ಗ್ರಾಮದ ರೈತ ದೊಡ್ಡವಿರುಪಾಕ್ಷಪ್ಪ ಬ್ಯಾಂಕ್ ನೋಟಿಸ್‍ಗಳನ್ನ ಹಿಡಿದು ಸಹಾಯಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದಾರೆ.

    ಐದು ಎಕರೆ 12 ಗುಂಟೆ ಜಮೀನು ಹೊಂದಿರುವ ದೊಡ್ಡವಿರುಪಾಕ್ಷಪ್ಪ ಕೃಷಿ ಚಟುವಟಿಕೆಗಳಿಗಾಗಿ ಇಲ್ಲಿನ ಕೊಪ್ಪರ ಶಾಖೆಯ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‍ನಲ್ಲಿ 5 ಲಕ್ಷ ಸಾಲ ಪಡೆದಿದ್ದರು. ಆದ್ರೆ ಸಾಲದ ಮೊತ್ತವನ್ನ 10 ಲಕ್ಷ 81 ಸಾವಿರ ಅಂತ ಹೇಳುತ್ತಿರುವ ಬ್ಯಾಂಕ್ ಈಗ ಬಡ್ಡಿಗೆ ಬಡ್ಡಿ ಸೇರಿಸಿ 24 ಲಕ್ಷ 42 ಸಾವಿರ ಕಟ್ಟುವಂತೆ ನೋಟೀಸ್ ನೀಡಿದೆ. ಸಾಲ ಪಾವತಿಸದಿದ್ದರೆ ಚಿರಾಸ್ಥಿಗಳಾದ ಮನೆ, ಜಮೀನನ್ನ ಹರಾಜು ಹಾಕುವುದಾಗಿ ವಾರೆಂಟ್ ನೀಡಿದೆ. ಇದರಿಂದ ದಿಗಿಲುಗೊಂಡಿರುವ ರೈತ ಬ್ಯಾಂಕ್ ಸಿಬ್ಬಂದಿ ಕಿರುಕುಳಕ್ಕೆ ಬೇಸತ್ತಿದ್ದಾರೆ.

    2006 ರಿಂದ 9 ಕಂತುಗಳಲ್ಲಿ ಐದು ಲಕ್ಷ ರೂಪಾಯಿ ಸಾಲ ಪಡೆದ ರೈತ ಈಗಲೂ ಸಾಲ ತೀರಿಸಲು ಸಿದ್ಧರಿದ್ದಾರೆ. ಆದ್ರೆ ನ್ಯಾಯಯುತವಾದ ಮೊತ್ತವನ್ನ ನಿಗದಿ ಪಡಿಸಿ ಕಂತುಗಳಲ್ಲಿ ಕಟ್ಟಲು ಅವಕಾಶ ಕೊಡಿ ಅಂತ ಕೇಳುತ್ತಿದ್ದಾರೆ. ಇನ್ನೂ ರೈತನ ಬೆಂಬಲಕ್ಕೆ ನಿಂತಿರುವ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬ್ಯಾಂಕ್‍ನ ನಡೆಯನ್ನ ಖಂಡಿಸಿದೆ. ರೈತನ ಸ್ಥಿರಾಸ್ಥಿ ಜಪ್ತಿಗೆ ಮುಂದಾದ್ರೆ ಪರಸ್ಥಿತಿ ವಿಕೋಪಕ್ಕೆ ಹೋಗುತ್ತದೆ ಅಂತ ರೈತ ಮುಖಂಡ ಚಾಮರಸ ಮಾಲೀಪಾಟೀಲ್ ಎಚ್ಚರಿಸಿದ್ದಾರೆ.

    ಒಟ್ಟಿನಲ್ಲಿ, ಸತತ ಮೂರು ವರ್ಷಗಳ ಬರಗಾಲ, ಕೃಷಿ ಉತ್ಪನ್ನಗಳ ಬೆಲೆ ಕುಸಿತದಿಂದ ಸಂಕಷ್ಟದಲ್ಲಿರುವ ರೈತ ವಿರುಪಾಕ್ಷಪ್ಪನಿಗೆ ಬ್ಯಾಂಕ್‍ನ ಸ್ಥಿರಾಸ್ಥಿ ಜಪ್ತಿ ವಾರೆಂಟ್ ದಿಕ್ಕುಕಾಣದಂತೆ ಮಾಡಿದೆ. ಕನಿಷ್ಠ ಈಗಲಾದ್ರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರೈತರ ಕಷ್ಟಕ್ಕೆ ಸ್ಪಂದಿಸಬೇಕಿದೆ. ಸಾಲ ತೀರಿಸಲು ಬ್ಯಾಂಕ್ ಅನುವುಮಾಡಿಕೊಡಬೇಕಿದೆ.

  • ರೈತರ ಬಗ್ಗೆ ಇದ್ದಕ್ಕಿದ್ದಂತೆ ಫುಲ್ ಕಾಳಜಿ: ಸಾಲ ವಸೂಲಿಗೆ ಸಿಎಂ ಬ್ರೇಕ್

    ರೈತರ ಬಗ್ಗೆ ಇದ್ದಕ್ಕಿದ್ದಂತೆ ಫುಲ್ ಕಾಳಜಿ: ಸಾಲ ವಸೂಲಿಗೆ ಸಿಎಂ ಬ್ರೇಕ್

    ಮಂಡ್ಯ: ರಣಭಯಂಕರ ಬರಗಾಲ ಇದ್ದರೂ ಬಜೆಟ್‍ನಲ್ಲಿ ರೈತರ ಸಾಲ ಮನ್ನಾ ಮಾಡದ ಸಿಎಂ ಸಿದ್ದರಾಮಯ್ಯನವರಿಗೆ ಈಗ ಅನ್ನದಾತರ ಮೇಲೆ ಪ್ರೀತಿ ಉಕ್ಕಿದಂತಿದೆ. ಮಳವಳ್ಳಿಯಲ್ಲಿ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ವೇಳೆ ಮಾತನಾಡಿ, ಮಳೆ-ಬೆಳೆ ಆಗುವವರೆಗೂ ರೈತರ ಸಾಲ ವಸೂಲಿ ಮಾಡಬೇಡಿ, ನೋಟಿಸ್  ನೀಡಬೇಡಿ ಅಂತ ಬ್ಯಾಂಕ್‍ಗಳಿಗೆ ಸೂಚಿಸಿದ್ದಾರೆ.

    ಬಲವಂತವಾಗಿ ಸಾಲ ವಸೂಲಿ ಮಾಡಿದ್ರೆ ಗಂಭೀರ ಕ್ರಮ ಕೈಗೊಳ್ಳಬೇಕಾಗುತ್ತೆ ಅಂತ ಎಚ್ಚರಿಸಿದ್ದಾರೆ. ಇದೇ ವೇಳೆ ಸಾಲಮನ್ನಾ ಬಗ್ಗೆ ರೈತರು ಪ್ರಶ್ನಿಸಿದ್ದಕ್ಕೆ, ಸಾಲಮನ್ನಾ ಮಾಡಲು ನಾನು ಸಿದ್ಧ. ಆದ್ರೆ, ಕೇಂದ್ರ ಸರ್ಕಾರ ಮುಂದೆ ಬರುತ್ತಿಲ್ಲ. ಪ್ರಧಾನಿ ಮೋದಿ ಅವರಿಗೂ ಮನವಿ ಮಾಡಿದ್ದೇನೆ. ಸರ್ವಪಕ್ಷ ಸಭೆಯಲ್ಲಿ ಬಿಜೆಪಿಯವರು ತುಟಿನೇ ಬಿಚ್ಚಲಿಲ್ಲ ಅಂತ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.

    2018ರಲ್ಲಿ ಬಿಜೆಪಿಯವರು ಅವರಪ್ಪನಾಣೆ ಗೆಲ್ಲಲ್ಲ ಅಂದ್ರು. ಇನ್ನು, ವೇದಿಕೆಯಲ್ಲಿ ನಿದ್ದೆಗೆ ಜಾರಿದ್ದಾಗ ಕನ್ನಡಕ ಜಾರಿಬಿತ್ತು. ಅಲ್ಲದೆ, ಕಾಫಿಯನ್ನೂ ಮೇಲೆ ಚೆಲ್ಲಿಕೊಂಡ್ರು.

    ಇದಕ್ಕೂ ಮುನ್ನ, ಸಿದ್ದರಾಮಯ್ಯ ಕಾರಿಗೆ ಬಿಜೆಪಿ ಕಾರ್ಯಕರ್ತರು ಕಪ್ಪುಬಾವುಟ ತೋರಿಸಿ, ಮುತ್ತಿಗೆ ಹಾಕಿದ್ರು. ಪ್ರತಿಭಟನೆ ಹತ್ತಿಕ್ಕಲು ವಿಫಲರಾದ ಮಂಡ್ಯ ಎಸ್‍ಪಿ ಸುಧೀರ್‍ಕುಮಾರ್ ರೆಡ್ಡಿಗೆ ಸಿಎಂ ಅಲ್ಲೇ ಕ್ಲಾಸ್ ತಗೊಂಡ್ರು.

    ಸಿಎಂ ಅವ್ರನ್ನ ಮೈಸೂರಿಗೆ ಬಿಟ್ಟು, ವಾಪಸ್ ಬೆಂಗಳೂರಿಗೆ ಬರುವಾಗ ಸಚಿವರಾದ ಶಿವಕುಮಾರ್, ಜಯಚಂದ್ರ ಮತ್ತು ಎಂಬಿ ಪಾಟೀಲ್ ಅವರಿದ್ದ  ಹೆಲಿಕಾಪ್ಟರ್‍ಗೆ ಗಾಳಿ-ಮಳೆ ಅಡ್ಡಿಯಾದ ಕಾರಣ ಮೈಸೂರಿಗೆ ಹಿಂತಿರುಗಿದ್ರು.

    ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ರೈತರ ಸಾಲ ಮನ್ನಾ ಆಗಿದೆ ನೀವ್ಯಾಕೆ ಮಾಡಲ್ಲ ಪ್ರಶ್ನೆಗೆ ಸಿಎಂ ಉತ್ತರ ಇದು

  • ರಾಜ್ಯದಲ್ಲೇ ಫಸ್ಟ್: ರಾಯಚೂರು ರೈಲ್ವೇ ನಿಲ್ದಾಣದಲ್ಲಿ ಶೇ.100 ಡಿಜಿಟಲ್ ವ್ಯವಹಾರ!

    ರಾಜ್ಯದಲ್ಲೇ ಫಸ್ಟ್: ರಾಯಚೂರು ರೈಲ್ವೇ ನಿಲ್ದಾಣದಲ್ಲಿ ಶೇ.100 ಡಿಜಿಟಲ್ ವ್ಯವಹಾರ!

    ರಾಯಚೂರು: ಇಡೀ ರಾಜ್ಯದಲ್ಲೇ ಶೇ.100 ರಷ್ಟು ಡಿಜಿಟಲ್ ವ್ಯವಹಾರ ನಡೆಸುತ್ತಿರುವ ರೈಲ್ವೇ ನಿಲ್ದಾಣ ಎನ್ನುವ ಹೆಗ್ಗಳಿಕೆ ಪಡೆಯಲು ರಾಯಚೂರು ಸಜ್ಜಾಗಿದೆ. ನಿಲ್ದಾಣದಲ್ಲಿ ಪ್ರತಿಯೊಂದು ವ್ಯವಹಾರವನ್ನೂ ನಗದು ರಹಿತ ಮಾಡಲು ಎಲ್ಲಾ ವ್ಯವಸ್ಥೆಗಳನ್ನ ಕಲ್ಪಿಸಲಾಗಿದೆ.

    ಪ್ರಧಾನಿ ನರೇಂದ್ರ ಮೋದಿಯವರ ಆಶಯದ ನಗದು ರಹಿತ ವ್ಯವಹಾರಕ್ಕೆ ರಾಯಚೂರು ರೈಲ್ವೇ ನಿಲ್ದಾಣ ಸಂಪೂರ್ಣ ಒಗ್ಗಿಕೊಳ್ಳುತ್ತಿದೆ. ಶೇ.100ರಷ್ಟು ಡಿಜಿಟಲ್ ವ್ಯವಹಾರ ನಡೆಸಲು ರೈಲ್ವೇ ಅಧಿಕಾರಿಗಳು ಎಲ್ಲಾ ಸಿದ್ಧತೆಗಳನ್ನು ಮಾಡಿದ್ದಾರೆ. ಟಿಕೆಟ್ ಬುಕ್ಕಿಂಗ್‍ನಿಂದ ಹಿಡಿದು ಶೌಚಾಲಯದ ಶುಲ್ಕವನ್ನೂ ಈಗ ಡಿಜಿಟಲ್ ಮೂಲಕ ಪಾವತಿಸಬಹುದು.

    ವಾಹನಗಳ ಪಾರ್ಕಿಂಗ್‍ನಲ್ಲಿ ಪೇಟಿಎಂ, ಫುಡ್ ಪ್ಲಾಜಾ, ಪುಸ್ತಕ ಮಳಿಗೆ, ಹಣ್ಣಿನ ಅಂಗಡಿಯಲ್ಲೂ ಡಿಜಿಟಲ್ ಪೇಮೆಂಟ್‍ಗೆ ಅವಕಾಶವಿದೆ. ಇದಕ್ಕೆ ಆಕ್ಸಿಸ್, ಐಡಿಬಿಐ, ಕೆನರಾ, ಎಸ್‍ಬಿಐ ಬ್ಯಾಂಕ್‍ಗಳು ಸಾಥ್ ನೀಡಿವೆ. ಹೀಗಾಗಿ ರಾಯಚೂರು ರೈಲು ನಿಲ್ದಾಣಕ್ಕೆ ಬರುವವರು ಹಣ ತರದಿದ್ರೂ ಡೆಬಿಟ್, ಕ್ರೆಡಿಟ್ ಕಾರ್ಡ್‍ಗಳಿಂದಲೇ ಎಲ್ಲಾ ವ್ಯವಹಾರಗಳನ್ನ ಮಾಡಬಹುದು. ಆದ್ರೆ ಡಿಜಿಟಲ್ ಪೇಮೆಂಟ್ ಕಡ್ಡಾಯವೇನಿಲ್ಲ ನಗದು ವ್ಯವಹಾರಕ್ಕೂ ಅವಕಾಶವಿದೆ.

    ನರೇಂದ್ರ ಮೋದಿ ಸರ್ಕಾರ ಇಡೀ ದೇಶದಲ್ಲಿ ಒಟ್ಟು 10 ರೈಲ್ವೇ ನಿಲ್ದಾಣಗಳನ್ನ ಗುರುತಿಸಿದ್ದು ಶೇ.100 ರಷ್ಟು ನಗದು ರಹಿತ ವ್ಯವಹಾರ ನಡೆಸಲು ಮುಂದಾಗಿದೆ. ತಿರುಪತಿ, ಹೈದರಾಬಾದ್, ವಿಜಯವಾಡ, ರಾಯಚೂರು ಸೇರಿದಂತೆ ಎ ಕೆಟಗರಿಯಲ್ಲಿ 10 ನಿಲ್ದಾಣಗಳನ್ನು ಆಯ್ಕೆ ಮಾಡಲಾಗಿದೆ. ರಾಯಚೂರು ರೈಲ್ವೇ ನಿಲ್ದಾಣದಲ್ಲಿ ವಾರ್ಷಿಕ 28 ಕೋಟಿ ರೂಪಾಯಿ ವ್ಯವಹಾರ ನಡೆಯುತ್ತಿದ್ದು ಸಂಪೂರ್ಣ ಡಿಜಿಟಲಿಕರಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ ಅಂತ ಗುಂತಕಲ್ ವಿಭಾಗದ ಅಪರ ವಿಭಾಗೀಯ ಅಧಿಕಾರಿ ಸುಬ್ಬಾರಾಯುಡು ಹೇಳಿದ್ದಾರೆ.

    ಒಟ್ಟಿನಲ್ಲಿ ಅಸ್ವಚ್ಛತೆ ವಿಷಯದಲ್ಲಿ ಇಡೀ ದೇಶದಲ್ಲೇ ನಾಲ್ಕನೇಯ ಸ್ಥಾನ ಪಡೆದು ಕುಖ್ಯಾತಿ ಹೊಂದಿದ್ದ ರಾಯಚೂರು ರೈಲ್ವೇ ನಿಲ್ದಾಣ ಈಗ ಡಿಜಿಟಲ್ ವ್ಯವಹಾರದಲ್ಲಿ ರಾಜ್ಯದಲ್ಲೇ ನಂ.1 ಆಗಿದೆ. ನಿಲ್ದಾಣಕ್ಕೆ ಬರುವ ಪ್ರಯಾಣಿಕರು ಈ ಸೌಲಭ್ಯಗಳನ್ನು ಬಳಸಿಕೊಂಡಲ್ಲಿ ಅಧಿಕಾರಿಗಳ ಶ್ರಮಕ್ಕೆ ಬೆಲೆ ಸಿಕ್ಕಿದಂತಾಗುತ್ತದೆ.

  • ಕೊಪ್ಪಳದಲ್ಲಿ ಲೋನ್ ಮಾಫಿಯಾ; ರೈತರ ಹೆಸರಲ್ಲಿ ಹಣ ಗುಳಂ ಮಾಡುತ್ತಿರುವ ಏಜೆಂಟ್ ಗಳು!

    ಕೊಪ್ಪಳದಲ್ಲಿ ಲೋನ್ ಮಾಫಿಯಾ; ರೈತರ ಹೆಸರಲ್ಲಿ ಹಣ ಗುಳಂ ಮಾಡುತ್ತಿರುವ ಏಜೆಂಟ್ ಗಳು!

    ಕೊಪ್ಪಳ: ಭೀಕರ ಬರಕ್ಕೆ ತುತ್ತಾದ ರೈತರು ಮಾಡಿದ ಸಾಲ ಹೇಗೇ ತೀರಿಸೋದಪ್ಪ ಎಂದು ತಲೆ ಮೇಲೆ ಕೈ ಹೊತ್ತು ಕೂತಿದ್ರೆ, ಕೆಲ ಖದೀಮರು ರೈತರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ರಾಷ್ಟ್ರೀಕೃತ ಬ್ಯಾಂಕ್ ನಲ್ಲೇ ಲಕ್ಷಾಂತರ ರೂಪಾಯಿ ಸಾಲ ಪಡೆಯುತ್ತಿದ್ದಾರೆ. ಈ ಮೂಲಕ ರೈತರಿಗೆ ವಂಚಿಸಿದ್ದಲ್ಲದೇ ಸರ್ಕಾರಕ್ಕೂ ಮೋಸ ಮಾಡುವ ದಂಧೆ ಹಿಂದುಳಿದ ಜಿಲ್ಲೆ ಎಂದೇ ಹಣೇ ಪಟ್ಟಿ ಹೊತ್ತಿರುವ ಕೊಪ್ಪಳ ಜಿಲ್ಲೆಯಲ್ಲಿ ನಡೆಯುತ್ತಿದೆ.

    ಭತ್ತದ ಕಣಜ ಎಂಬ ಖ್ಯಾತಿಯ ಗಂಗಾವತಿ ತಾಲೂಕಿನಲ್ಲಿ ಲೋನ್ ಮಾಫಿಯಾ ಹೆಚ್ಚು ನಡೆಯುತ್ತಿದ್ದು, ಕೆಲ ಪ್ರಕರಣ ಬೆಳಕಿಗೆ ಬಂದಿವೆ. ಗಂಗಾವತಿ ತಾಲೂಕಿನ ಸಿದ್ದಾಪುರ ಗ್ರಾಮದ ನಿವಾಸಿ ಮಹಮ್ಮದ್ ಅಬ್ದುಲ್ ಮಾಜೀದ್ ಎಂಬಾತ ತನ್ನ ಹೆಸರಿನಲ್ಲಿ 1 ಗುಂಟೆ 20 ಎಕರೆ ಜಮೀನಿದ್ದು, ಅದನ್ನೆ 21 ಎಕರೆ 20 ಗುಂಟೆ ಎಂದು ನಕಲಿ ದಾಖಲೆ ಸೃಷ್ಟಿ ಮಾಡಿಕೊಂಡು ಒಂದೇ ತಿಂಗಳಲ್ಲಿ ಮೂರು ಬ್ಯಾಂಕ್ ಗಳಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದಾನೆ. ಗಂಗಾವತಿ ನಗರದ ಎಸ್‍ಬಿಎಚ್ ಬ್ಯಾಂಕ್ ನಲ್ಲಿ ಮೂರು ತಿಂಗಳಲ್ಲಿ ಮೂರು ಭಾರಿ ಸಾಲ ಮಾಡಿದ್ದು ಅದರ ಮೊತ್ತ 22 ಲಕ್ಷ ರೂ. ಇದೆ. ಅದರಂತೆ ಸಿದ್ದಾಪುರ ಶಾಖೆಯ ಕೃಷ್ಣಾ ಪ್ರಗತಿ ಗ್ರಾಮೀಣ ಬ್ಯಾಂಕ್ ನಲ್ಲಿ 15 ಲಕ್ಷ ರೂಪಾಯಿ ಸಾಲ ಮಾಡಿದ್ದಾನೆ. ಒಬ್ಬ ವ್ಯಕ್ತಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡು ಇಷ್ಟೊಂದು ಸಾಲ ಮಾಡಿದ್ದಾನೆಂದ್ರೆ ಇದಕ್ಕೆ ಬ್ಯಾಂಕಿನ ಸಿಬ್ಬಂದಿ ಸಾಥ್ ಕೊಟ್ಟಿರುವುದು ಕಾಣುತ್ತದೆ. ಈ ಬಗ್ಗೆ ಸ್ಥಳೀಯರಾದ ಮೆಹೆಬೂಬ್ ಸಾಬ್ ಎಂಬವರು ಬ್ಯಾಂಕ್ ಗಳಿಗೆ ದೂರು ನೀಡಿದ್ರು ಯಾವುದೇ ಪ್ರಯೋಜನವಾಗಿಲ್ಲ.

    ಗಂಗಾವತಿ ತಾಲೂಕಿನಾದ್ಯಾಂತ ಲೋನ್ ಮಾಫಿಯಾ ಜೋರಾಗಿದೆ. ಮಾಫಿಯಾದಲ್ಲಿ ಬ್ಯಾಂಕ್ ಅಧಿಕಾರಿಗಳು, ಮಧ್ಯವರ್ತಿಗಳು ಮತ್ತು ನಕಲಿ ದಾಖಲೆ ಸೃಷ್ಟಿ ಮಾಡುವವರು ಶಾಮೀಲಾಗಿದ್ದಾರೆ. ಎಂ.ಎ.ಮನನ್ ಎಂಬಾತ ನಕಲಿ ದಾಖಲೆ ಸೃಷ್ಟಿ ಮಾಡುತ್ತಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳ ಬಳಿ ಕೇಳೋಕೆ ಹೋದ್ರೆ ಕಕ್ಕಾಬಿಕ್ಕಿಯಾದ ಅಧಿಕಾರಿಗಳು ನಾವೇನು ಮಾಡಿಲ್ಲ ಎಂದು ಕೇಳಿದವರಿಗೇ ಜೋರು ಮಾಡಿ ಹೇಳಿಕೆ ನೀಡಲು ನಿರಾಕರಿಸುತ್ತಿದ್ದಾರೆ.

    ಬ್ಯಾಂಕ್ ಗಳು ಸಾಲ ಕೊಡುವ ಮುನ್ನ ಎಲ್ಲಾ ರೀತಿಯ ಪೂರ್ವಾ ಪರ ಯೋಚಿಸಿ ಸಾಲ ನೀಡಬೇಕು. ಜನ ಸಾಮಾನ್ಯರ ಪ್ರಕರಣದಲ್ಲಿ ಅಗತ್ಯಕ್ಕೂ ಹೆಚ್ಚು ದಾಖಲೆಗಳನ್ನು ಎಲ್ಲ ಮ್ಯಾನೇಜರ್ ಗಳೂ ಕೇಳುತ್ತಾರೆ. ಗಂಗಾವತಿಯಲ್ಲಿ ಇಷ್ಟೆಲ್ಲ ನಡೆಯುತ್ತಿದ್ದರೂ ಯಾರೊಬ್ಬರಿಗೂ ಮಾಹಿತಿಯೇ ಇಲ್ಲ ಎಂಬುವುದು ಸಾಕಷ್ಟು ಅನುಮಾನ ಹುಟ್ಟು ಹಾಕಿದೆ. ಬದಲಾಗಿ ಬ್ಯಾಂಕ್ ಅಧಿಕಾರಿಗಳು ಜೇಬು ತುಂಬಿಸುಕೊಳ್ಳುವ ತಂತ್ರ ರೂಪಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ಅಗತ್ಯವಿದೆ.

     

  • ಮಂಡ್ಯ ವಿದ್ಯಾರ್ಥಿನಿ ಪತ್ರಕ್ಕೆ ಸ್ಪಂದಿಸಿದ ಮೋದಿ

    ಮಂಡ್ಯ ವಿದ್ಯಾರ್ಥಿನಿ ಪತ್ರಕ್ಕೆ ಸ್ಪಂದಿಸಿದ ಮೋದಿ

    ಮಂಡ್ಯ: ಎಂಬಿಎ ಪದವಿಯಲ್ಲಿ ಕಾಲೇಜಿಗೆ ಅತೀ ಹೆಚ್ಚು ಅಂಕ ಪಡೆದು ಶುಲ್ಕ ಕಟ್ಟಲು ಸಂಕಟ ಪಡುತ್ತಿದ್ದ ಮುಸ್ಲಿಂ ಯುವತಿಯೊಬ್ಬರ ಪತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಸ್ಪಂದಿಸಿದ್ದು, ಇದೀಗ ವಿದ್ಯಾರ್ಥಿನಿ ಮೋದಿಯವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

    ಮಂಡ್ಯ ನಗರದ ನಿವಾಸಿಯಾದ ಅಬ್ದುಲ್ ಇಲಿಯಾಸ್ ಎಂಬುವರ ಮಗಳು ಸಾರಾ, ನಗರದ ಪಿಇಎಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂಬಿಎಗೆ ದಾಖಲಾತಿ ಪಡೆದಿದ್ದರು. ಆದ್ರೆ, ಕಾಲೇಜಿನ ಶುಲ್ಕ ಕಟ್ಟಲು ಹಣವಿಲ್ಲದ ಕಾರಣ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಿಂದ ಲೋನ್‍ಗೆ ಮನವಿ ಸಲ್ಲಿಸಿದ್ರು. ಬ್ಯಾಂಕ್ ನಿಯಮದ ಪ್ರಕಾರ ನಿಮಗೆ ಲೋನ್ ನೀಡಲು ಸಾಧ್ಯವಿಲ್ಲ ಎಂದು ಬ್ಯಾಂಕ್ ಮ್ಯಾನೇಜರ್ ತಿಳಿಸಿದ್ದರು.

    ಇದನ್ನೂ ಓದಿ: ಉತ್ತರಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ 11ರ ಪಾಕ್ ಬಾಲಕಿಯಿಂದ ಮೋದಿಗೆ ಶುಭಾಶಯ!

    ಇದರಿಂದ ಖಾಸಗಿ ಸಾಲ ಮಾಡಿ ಅರ್ಧದಷ್ಟು ಶುಲ್ಕ ಕಟ್ಟಿದ್ದ ವಿದ್ಯಾರ್ಥಿನಿ, ತಮಗೆ ಬ್ಯಾಂಕ್‍ನಿಂದ ಲೋನ್ ಪಡೆಯಲು ಸಹಾಯ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ರು. ವಿದ್ಯಾರ್ಥಿನಿ ಪತ್ರ ಬರೆದ ಕೇವಲ ಹತ್ತೇ ದಿನದಲ್ಲಿ ಪ್ರಧಾನಿ ಕಚೇರಿಯಿಂದ ಕರ್ನಾಟಕ ಚೀಫ್ ಸೆಕ್ರೆಟರಿ ಅವರಿಗೆ, ವಿದ್ಯಾರ್ಥಿನಿ ಸಾರಾ ಅವರಿಗೆ ಸಹಾಯ ಮಾಡುವಂತೆ ಪತ್ರ ಬಂದಿತ್ತು. ಆ ಪತ್ರವನ್ನು ತೆಗೆದುಕೊಂಡು ಮತ್ತೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾಗೆ ಸಾರಾ ಲೋನ್‍ಗೆ ಮನವಿ ಸಲ್ಲಿಸಿದ್ರು. ಆದರೂ ಬ್ಯಾಂಕ್ ಲೋನ್ ಕೊಡಲು ನಿರಾಕರಿಸಿದೆ. ಆದರೆ ಪ್ರಧಾನಿ ಪತ್ರವನ್ನ ಗಮನಿಸಿದ ವಿಜಯಾ ಬ್ಯಾಂಕ್ ಸಾರಾಗೆ ಲೋನ್ ನೀಡಿ ಸಹಾಯ ಮಾಡಿದೆ.

    ಇದೀಗ ಕಾಲೇಜಿನ ಸಂಪೂರ್ಣ ಶುಲ್ಕ ಪಾವತಿಸಿರುವ ವಿದ್ಯಾರ್ಥಿನಿ ಸಾರಾ ಮತ್ತು ಆಕೆಯ ತಂದೆ ಅಬ್ದುಲ್ ಇಲಿಯಾಜ್, ನಮ್ಮಂತ ಜನ ಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುವ ಪ್ರಧಾನಿ ಮೋದಿ ನಿಜವಾದ ಜನನಾಯಕ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.

    https://www.youtube.com/watch?v=98MEkBF6hmo

  • ನಿಮ್ಮ ಎಸ್‍ಬಿಐ ಖಾತೆಯಲ್ಲಿ ಇಷ್ಟು ಮಿನಿಮಮ್ ಬ್ಯಾಲೆನ್ಸ್ ಇಲ್ಲವಾದ್ರೆ ಏಪ್ರಿಲ್.1 ರಿಂದ ಬೀಳುತ್ತೆ ದಂಡ!

    ನಿಮ್ಮ ಎಸ್‍ಬಿಐ ಖಾತೆಯಲ್ಲಿ ಇಷ್ಟು ಮಿನಿಮಮ್ ಬ್ಯಾಲೆನ್ಸ್ ಇಲ್ಲವಾದ್ರೆ ಏಪ್ರಿಲ್.1 ರಿಂದ ಬೀಳುತ್ತೆ ದಂಡ!

    ನವದೆಹಲಿ: ಎಸ್‍ಬಿಐ ಖಾತೆದಾರರು ತಮ್ಮ ಅಕೌಂಟ್‍ಗಳಲ್ಲಿ ಕನಿಷ್ಠ ಬಾಕಿಯನ್ನು ಹೊಂದಿಲ್ಲವಾದ್ರೆ ಏಪ್ರಿಲ್ 1ರ ನಂತರ ದಂಡ ಕಟ್ಟಬೇಕಾಗುತ್ತದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ.

    ಏಪ್ರಿಲ್ 1ರಿಂದ ಮೆಟ್ರೊಪಾಲಿಟನ್ ಪ್ರದೇಶಗಳಲ್ಲಿನ ಎಸ್‍ಬಿಐ ಖಾತೆದಾರರು ತಮ್ಮ ಖಾತೆಯಲ್ಲಿ 5 ಸಾವಿರ ರೂ. ಕನಿಷ್ಠ ಬಾಕಿ ಹೊಂದಿರಬೇಕು. ಹಾಗೆ ನಗರ ಪ್ರದೇಶಗಳಲ್ಲಿ 3 ಸಾವಿರ ರೂ., ಅರೆ ನಗರ ಪ್ರದೇಶಗಳಲ್ಲಿ 2 ಸಾವಿರ ರೂ., ಗ್ರಾಮೀಣ ಪ್ರದೇಶಗಳಲ್ಲಿ 1 ಸಾವಿರ ರೂ. ಮಿನಿಮಮ್ ಬ್ಯಾಲೆನ್ಸ್ ಹೊಂದಿರುವುದು ಕಡ್ಡಾಯ ಎಂದು ಎಸ್‍ಬಿಐ ತಿಳಿಸಿದೆ.

    ಒಂದು ವೇಳೆ ನಿಗದಿಪಡಿಸಿದಂತೆ ಕನಿಷ್ಠ ಬಾಕಿ ಹಣ ಖಾತೆಗಳಲ್ಲಿ ಉಳಿಸಿಲ್ಲವಾದ್ರೆ ಕನಿಷ್ಠ ಬಾಕಿಗೆ ಕೊರತೆ ಇರುವ ಮೊತ್ತಕ್ಕೆ ಅನುಗುಣವಾಗಿ ದಂಡ ಕಟ್ಟಬೇಕಾಗುತ್ತದೆ. ಅಂದ್ರೆ ಒಂದು ವೇಳೆ ಮೆಟ್ರೊಪಾಲಿಟನ್ ಪ್ರದೇಶದಲ್ಲಿನ ಖಾತೆಯಲ್ಲಿ ಕನಿಷ್ಠ ಬಾಕಿಗಿಂತ ಶೇ.75 ರಷ್ಟು ಹಣ ಕೊರತೆ ಇದ್ದರೆ 100 ರೂ. ದಂಡದ ಜೊತೆಗೆ ಸೇವಾ ತೆರಿಗೆಯನ್ನು ತೆರಬೇಕಾಗುತ್ತದೆ. ಶೇ.50 ರಿಂದ 75ರಷ್ಟು ಕೊರತೆ ಇದ್ದರೆ ಸೇವಾ ತೆರಿಗೆ ಜೊತೆಗೆ 75 ರೂ. ಶುಲ್ಕ ಕಟ್ಟಬೇಕು. ಹಾಗೇ ಶೇ. 50 ರಷ್ಟು ಕೊರತೆಯಿದ್ದರೆ ಸೇವಾ ತೆರಿಗೆ ಜೊತೆಗೆ 50 ರೂ. ದಂಡ ಕಟ್ಟಬೇಕಾಗುತ್ತದೆ ಎಂದು ಎಸ್‍ಬಿಐನ ಹೊಸ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

    ಅದರಂತೆ ಗ್ರಾಮೀಣ ಪ್ರದೇಶಗಳಲ್ಲಿನ ಖಾತೆದಾರರು ಕನಿಷ್ಠ ಬಾಕಿ ಹೊಂದಿಲ್ಲವಾದ್ರೆ 20 ರೂ. ನಿಂದ 50 ರೂ. ಜೊತೆಗೆ ಸೇವಾ ತೆರಿಗೆ ಕಟ್ಟಬೇಕು ಎಂದು ಎಸ್‍ಬಿಐ ಹೇಳಿದೆ. ಈ ಹೊಸ ನಿಯಮ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ.

  • ನೋಟು ನಿಷೇಧವಾದ ಬಳಿಕ ಬ್ಯಾಂಕ್‍ಗಳಲ್ಲಿ ಒಟ್ಟು 7,147 ಲಕ್ಷ ರೂ. ಅಕ್ರಮ ವಹಿವಾಟು

    ನವದೆಹಲಿ: ನೋಟು ನಿಷೇಧವಾದ ಬಳಿಕ ಬ್ಯಾಂಕ್‍ಗಳ ಮೂಲಕ ಒಟ್ಟು 7,147 ಲಕ್ಷ ರೂ. ಹಣವನ್ನು ಅಕ್ರಮವಾಗಿ ವಿನಿಮಯ ಮಾಡಿ ವ್ಯವಹಾರ ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯ ರಾಜ್ಯ ಖಾತೆಯ ಸಚಿವ ಸಂತೋಷ್ ಕುಮಾರ್ ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ್ದಾರೆ.

    ಯಾವ ಬ್ಯಾಂಕಿನಿಂದ ಎಷ್ಟು ಅಕ್ರಮ?
    ಅಕ್ರಮ ಎಸಗಿದ್ದಕ್ಕಾಗಿ 5 ಬ್ಯಾಂಕ್‍ಗಳ 20 ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಆಕ್ಸಿಸ್ ಬ್ಯಾಂಕ್ 3 ಶಾಖೆಯಲ್ಲಿ 4,629 ಲಕ್ಷ ರೂ. ಅಕ್ರಮ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಮಂದಿಯನ್ನು ಅಮಾನತು ಮಾಡಲಾಗಿದೆ.

    ಧನಲಕ್ಷ್ಮಿ ಬ್ಯಾಂಕಿನ 6 ಶಾಖೆಗಳಲ್ಲಿ ನಲ್ಲಿ 2,267 ಲಕ್ಷ ರೂ. ಅಕ್ರಮ ನಡೆದಿದ್ದು 8 ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

    ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ 2 ಶಾಖೆಗಳಲ್ಲಿ 190 ಲಕ್ಷ ರೂ. ಅಕ್ರಮ ನಡೆದಿದ್ದು, 4 ಮಂದಿ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

    ಬ್ಯಾಂಕ್ ಅಫ್ ಮಹಾರಾಷ್ಟ್ರದ 2 ಶಾಖೆಯಲ್ಲಿ 6 ಮಂದಿ 54.90 ಲಕ್ಷ ರೂ. ಅಕ್ರಮ ಎಸಗಿದ್ದರೆ, ಸಿಂಡಿಕೇಟ್ ಬ್ಯಾಂಕಿನ 1 ಶಾಖೆಯಲ್ಲಿ 6 ಲಕ್ಷ ರೂ. ಅಕ್ರಮ ವಹಿವಾಟು ನಡೆದಿದೆ ಎಂದು ಹಣಕಾಸು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

  • ನೋಟ್ ಬ್ಯಾನ್ ನಂತ್ರ ಎಷ್ಟು ಹಣ ಬಂತು? ಎಷ್ಟು ಅಘೋಷಿತ ಆಸ್ತಿ ಪತ್ತೆ ಆಯ್ತು? ಸರ್ಕಾರದ ಉತ್ತರ ಇಲ್ಲಿದೆ

    ನವದೆಹಲಿ: ನವೆಂಬರ್ 8ರಂದು 500, 1 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿದ ಬಳಿಕ ಈವರೆಗೆ ಎಷ್ಟು ಹಣ ಮರಳಿ ಬಂದಿದೆ? ಎಷ್ಟು ಅಘೋಷಿತ ಆಸ್ತಿ ಪತ್ತೆಯಾಗಿದೆ ಎಂದು ಜನ ಮತ್ತು ರಾಜಕೀಯ ಪಕ್ಷಗಳು ಸರ್ಕಾರವನ್ನು ಕೇಳಿತ್ತು.

    ಈ ಪ್ರಶ್ನೆಗಳಿಗೆ ಸರ್ಕಾರ ಬಜೆಟ್‍ನಲ್ಲಿ ಉತ್ತರ ನೀಡಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಈ ನಿರೀಕ್ಷೆ ಹುಸಿಯಾಗಿತ್ತು. ಈಗ ಲೋಕಸಭೆಯ ಬಜೆಟ್ ಅಧಿವೇಶನದಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಹಾಗೂ ಸಹಾಯಕ ಖಾತೆ ರಾಜ್ಯ ಸಚಿವ ಸಂತೋಷ್ ಗಂಗಾವರ್ ಲಿಖಿತ ಉತ್ತರವನ್ನು ನೀಡುವ ಮೂಲಕ ಜನರ ಕುತೂಹಲವನ್ನು ತಣಿಸುವ ಪ್ರಯತ್ನ ಮಾಡಿದ್ದಾರೆ.

    ಎಷ್ಟು ಹಣ ಬಂದಿದೆ?
    ನೋಟು ನಿಷೇಧವಾಗುವ ಮೊದಲು 17,165 ದಶಲಕ್ಷ 500 ರೂ. ಮುಖಬೆಲೆಯ ನೋಟು ಚಲಾವಣೆಯಲ್ಲಿದ್ದರೆ,  1 ಸಾವಿರ ಮುಖಬೆಲೆಯ 6,858 ದಶಲಕ್ಷ ನೋಟು ಚಲಾವಣೆಯಲ್ಲಿತ್ತು. ನೋಟ್ ಬ್ಯಾನ್ ಬಳಿಕ ಡಿಸೆಂಬರ್ 10ರವರೆಗೆ 12.44 ಲಕ್ಷ ಕೋಟಿ ಹಳೇನೋಟು ವಾಪಸ್ ಬಂದಿದೆ ಎಂದು ಸರ್ಕಾರ ಹೇಳಿದೆ.

    ಜನವರಿ 10ವರೆಗೆ ಎಷ್ಟು ಆಸ್ತಿ ಪತ್ತೆಯಾಗಿದೆ?
    1,100 ಕಡೆ ಆದಾಯ ತೆರಿಗೆ ಇಲಾಖೆ ಶೋಧ ನಡೆಸಿದ್ದು, 5,100 ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಿದೆ. 610 ಕೋಟಿ ರೂ. ಆಸ್ತಿ- ಪಾಸ್ತಿ ಜಪ್ತಿ ಮಾಡಲಾಗಿದ್ದು ಇದರಲ್ಲಿ 510 ಕೋಟಿ ರೂ. ನೋಟುಗಳನ್ನು ಜಪ್ತಿ ಮಾಡಲಾಗಿದೆ. ಪತ್ತೆಯಾದ ಹಣದಲ್ಲಿ 110 ಕೋಟಿ ರೂ. ಹೊಸನೋಟು ಸಿಕ್ಕಿದೆ. ಒಟ್ಟು 5,400 ಕೋಟಿ ಮೌಲ್ಯದ ಅಘೋಷಿತ ಆಸ್ತಿ ಪತ್ತೆಯಾಗಿದೆ.

    ವಿತ್‍ಡ್ರಾ ಮಿತಿ ಕೊನೆ:
    ನೋಟ್‍ಬ್ಯಾನ್ ಬಳಿಕ ಹಣದ ಮರುಪೂರೈಕೆ ಪ್ರಕ್ರಿಯೆ ಬಹುತೇಕ ಮುಕ್ತಾಯಗೊಂಡಿದ್ದು ಗ್ರಾಹಕರ ವಿತ್‍ಡ್ರಾ ಮಿತಿ ಕೊನೆಯಾಗಲಿದೆ ಅಂತ ಕೇಂದ್ರ ಹಣಕಾಸು ಇಲಾಖೆ ತಿಳಿಸಿದೆ. ಶೀಘ್ರದಲ್ಲೇ ಉಳಿತಾಯ ಖಾತೆಗಳ ಮೇಲಿರುವ ವಾರಕ್ಕೆ 24 ಸಾವಿರ ರೂಪಾಯಿ ವಿತ್‍ಡ್ರಾ ಮಿತಿ ಸೇರಿ ಎಲ್ಲಾ ನಿರ್ಬಂಧಗಳು ಅಂತ್ಯಗೊಳ್ಳಲಿದೆ ಅಂತ ಹಣಕಾಸು ಇಲಾಖೆಯ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.