Tag: bank strike

  • ಗ್ರಾಹಕರೇ ಗಮನಿಸಿ – ಮಾರ್ಚ್‍ನಲ್ಲಿ 6 ದಿನ ತೆರೆಯಲ್ಲ ಬ್ಯಾಂಕ್ ಬಾಗಿಲು

    ಗ್ರಾಹಕರೇ ಗಮನಿಸಿ – ಮಾರ್ಚ್‍ನಲ್ಲಿ 6 ದಿನ ತೆರೆಯಲ್ಲ ಬ್ಯಾಂಕ್ ಬಾಗಿಲು

    ಬೆಂಗಳೂರು: ಮಾರ್ಚ್ ತಿಂಗಳಲ್ಲಿ 6 ದಿನಗಳ ಕಾಲ ಬಾಂಕ್‍ಗಳ ಬಾಗಿಲು ಮುಚ್ಚಲಿದೆ. ಹೊಸ ಪಿಂಚಣಿ ಯೋಜನೆ ರದ್ಧತಿ, ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್‍ಗಳ ನೌಕರರ ಸಂಘಟನೆಗಳು ಮುಷ್ಕರಕ್ಕೆ ಕರೆಕೊಟ್ಟಿದ್ದು, ಇದರ ಪರಿಣಾಮವನ್ನು ಗ್ರಾಹಕರು ಎದುರಿಸಬೇಕಾಗಿದೆ.

    ಹೌದು. ಮಾರ್ಚ್ 11ರಿಂದ 13ರವರೆಗೆ ಮೂರು ದಿನಗಳ ಕಾಲ ಮುಷ್ಕರ ನಡೆಸಲು ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್‍ಗಳ ನೌಕರರ ಸಂಘಟನೆಗಳು ನಿರ್ಧರಿಸಿವೆ. ಅಂದರೆ ಮಾರ್ಚ್ ತಿಂಗಳ ಎರಡನೇ ವಾರದ ಬುಧವಾರ, ಗುರುವಾರ ಹಾಗೂ ಶುಕ್ರವಾರ ಮುಷ್ಕರ ನಡೆಯಲಿದೆ. ಇದರಿಂದ ಈ ದಿನಗಳಲ್ಲಿ ಯಾವುದೇ ಬ್ಯಾಂಕ್ ವ್ಯವಹಾರಗಳು ನಡೆಯಲ್ಲ.

    ಅಲ್ಲದೇ ಮಾರ್ಚ್ ಎರಡನೇ ವಾರ ಹೋಳಿ ಹಬ್ಬವಿದ್ದು, ಈ ಮುಷ್ಕರ ನಡೆಯುವುದರಿಂದ ನಗದು ಮೂಲಕ ವ್ಯವಹರಿಸುವ ಸಾರ್ವಜನಿಕರು ಸಮಸ್ಯೆ ಎದುರಿಸುವ ಸಾಧ್ಯತೆ ಇದೆ. ಮಾರ್ಚ್ 8 ಭಾನುವಾರ, ಮಾರ್ಚ್ 10 ಹೋಳಿ ಹುಣ್ಣಿಮೆ ಹಬ್ಬ ಅಂತ ಸರ್ಕಾರಿ ರಜೆಯಿರುತ್ತದೆ. ಇನ್ನು ಮಾರ್ಚ್ 11ರಿಂದ 13ರವರೆಗೂ ಬ್ಯಾಂಕ್ ನೌಕರರು ಮುಷ್ಕರ ನಡೆಯಲಿದೆ. ಆ ಬಳಿಕ ಮಾ. 14ರಂದು ಎರಡನೇ ಶನಿವಾರ, ಮಾ. 15 ಭಾನುವಾರ ಅಂತ ರಜೆ ಇರುತ್ತೆ. ಹೀಗಾಗಿ ಮಾರ್ಚ್ ಎರಡನೇ ವಾರ ಸರಣಿಯಾಗಿ 6 ದಿನಗಳ ಕಾಲ ಬ್ಯಾಂಕ್‍ಗಳ ಬಾಗಿಲು ಮುಚ್ಚಲಿದ್ದು, ಯಾವುದೇ ಬ್ಯಾಂಕ್ ವ್ಯವಹಾರಗಳು ನಡೆಯುವುದು ಕಷ್ಟ ಎನ್ನಲಾಗುತ್ತಿದೆ.

    ಇದರಿಂದ ದಿನನಿತ್ಯದ ವ್ಯವಹಾರಗಳಿಗೆ ಬ್ಯಾಂಕ್‍ಗಳನ್ನು ಅವಲಂಬಿಸಿರುವವರು ಪರಾದಾಡುವ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದ್ದು, ಬ್ಯಾಂಕ್‍ಗಳ ಮೂಲಕ ವಿವಿಧ ಶುಲ್ಕ ಪಾವತಿ, ಡಿಡಿ ಮೂಲಕ ಹಣ ವರ್ಗಾವಣೆ ಹೀಗೆ ಇತರೆ ಬ್ಯಾಂಕ್ ಕೆಲಸಗಳನ್ನು ಗ್ರಾಹಕರು ಮಾ. 7ರ ಅಂತ್ಯದ ವೇಳೆ ಪೂರ್ಣಗೊಳಿಸಿಕೊಳ್ಳುವುದು ಉತ್ತಮ. ಇಲ್ಲದಿದ್ದಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ.

  • ಕೇಂದ್ರದ ನೀತಿ ಖಂಡಿಸಿ ಇಂದು ಬ್ಯಾಂಕ್ ನೌಕರರ ಮುಷ್ಕರ

    ಕೇಂದ್ರದ ನೀತಿ ಖಂಡಿಸಿ ಇಂದು ಬ್ಯಾಂಕ್ ನೌಕರರ ಮುಷ್ಕರ

    ನವದೆಹಲಿ: 10 ರಾಷ್ಟ್ರೀಕೃತ ಬ್ಯಾಂಕ್‍ಗಳನ್ನು 4 ಬ್ಯಾಂಕುಗಳನ್ನಾಗಿ ವಿಲೀನಗೊಳಿಸುತ್ತಿರುವ ಕೇಂದ್ರ ಸರ್ಕಾರ ನಿರ್ಧಾರವನ್ನು ಖಂಡಿಸಿ ಅಖಿಲ ಭಾರತ ಬ್ಯಾಂಕ್ ಸಿಬ್ಬಂದಿ ಒಕ್ಕೂಟ (ಎಐಬಿಇಎ) ಮತ್ತು ಬ್ಯಾಂಕ್ ಉದ್ಯೋಗಿಗಳ ಫೆಡರೇಷನ್ ಆಫ್ ಇಂಡಿಯಾ (ಬಿಇಎಫ್‍ಐ) ಮಂಗಳವಾರ ಮುಷ್ಕರಕ್ಕೆ ಕರೆ ನೀಡಿವೆ.

    ಮುಷ್ಕರದಿಂದ ಮಂಗಳವಾರ ಸರ್ಕಾರಿ ಸ್ವಾಮ್ಯದ ಬ್ಯಾಂಕ್‍ಗಳ ಸೇವೆಯಲ್ಲಿ ಸಮಸ್ಯೆಯಾಗುವ ಸಾಧ್ಯತೆಯಿದ್ದು, ಖಾಸಗಿ ವಲಯದ ಬ್ಯಾಂಕ್‍ಗಳು ಈ ಮುಷ್ಕರದಲ್ಲಿ ಭಾಗವಹಿಸುತ್ತಿಲ್ಲ. ಮುಷ್ಕರ ನಡೆಯುವ ಪ್ರದೇಶದಲ್ಲಿ ಎಟಿಎಂಗಳನ್ನೂ ಮುಚ್ಚುವುದಾಗಿ ಸಂಘಟನೆಗಳು ತಿಳಿಸಿವೆ.

    ಬ್ಯಾಂಕ್ ಮುಷ್ಕರವನ್ನು ಹಿಂದಕ್ಕೆ ಪಡೆಯುವಂತೆ ಸರ್ಕಾರ ಮುಖ್ಯ ಕಾರ್ಮಿಕ ಆಯುಕ್ತ, ಕಾರ್ಮಿಕ ಸಚಿವಾಲಯದ ಜೊತೆಗಿನ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ನಿಗದಿಯಂತೆ ಮುಷ್ಕರ ನಡೆಯಲಿದೆ.

    ಬ್ಯಾಂಕ್ ನೌಕರರ ಸಂಘದ ಒಟ್ಟು 3.50 ಲಕ್ಷ ಸಿಬ್ಬಂದಿ ಈ ಮುಷ್ಕರದಲ್ಲಿ ಭಾಗಿಯಾಗಲಿರುವ ಕಾರಣ ಬ್ಯಾಂಕುಗಳ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ.

    ಒಕ್ಕೂಟದಲ್ಲಿ ಸದಸ್ಯತ್ವ ಪಡೆದಿರುವ ಸಿಬ್ಬಂದಿ ಸಂಖ್ಯೆ ಕಡಿಮೆ ಇರುವ ಪರಿಣಾಮ ವಹಿವಾಟಿನ ಮೇಲೆ ಹೆಚ್ಚಿನ ಪರಿಣಾಮವೇನೂ ಆಗುವುದಿಲ್ಲ ಎಂದು ಎಸ್‍ಬಿಐ ಷೇರುಪೇಟೆಗೆ ಮಾಹಿತಿ ನೀಡಿದೆ. ಠೇವಣಿ ಇಡುವುದು, ನಗದು ಹಿಂದಕ್ಕೆ ಪಡೆಯುವುದು, ಚೆಕ್ ಕ್ಲಿಯರೆನ್ಸ್ ಸೇರಿದಂತೆ ಇನ್ನಿತರ ವಹಿವಾಟುಗಳಿಗೆ ಮುಷ್ಕರದಿಂದ ಸಮಸ್ಯೆಯಾಗುವ  ಸಾಧ್ಯತೆಯಿದೆ.

  • ಸೆ.26, 27 ಎರಡು ದಿನ ಬ್ಯಾಂಕ್ ಮುಷ್ಕರ

    ಸೆ.26, 27 ಎರಡು ದಿನ ಬ್ಯಾಂಕ್ ಮುಷ್ಕರ

    ಬೆಂಗಳೂರು: 10 ರಾಷ್ಟ್ರೀಕೃತ ಬ್ಯಾಂಕ್‍ಗಳ ಮಹಾ ವಿಲೀನವನ್ನು ಖಂಡಿಸಿ ನಾಲ್ಕು ಬ್ಯಾಂಕ್ ನೌಕರರ ಸಂಘಗಳು ಸೆಪ್ಟೆಂಬರ್ 25ರ ಮಧ್ಯರಾತ್ರಿಯಿಂದ ಎರಡು ದಿನಗಳ ಕಾಲ ಮುಷ್ಕರ ಹಮ್ಮಿಕೊಂಡಿವೆ.

    ಈ ಕುರಿತು ಗುರುವಾರ ಸಂಘಟನೆಯ ಮುಖ್ಯಸ್ಥರು ಸ್ಪಷ್ಟಪಡಿಸಿದ್ದು, ಸೆಪ್ಟೆಂಬರ್ 25ರ ಮಧ್ಯರಾತ್ರಿಯಿಂದ ಎರಡು ದಿನಗಳ ಕಾಲ ಮುಷ್ಕರ ನಡೆಸಲಾಗುವುದು. ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯದಿದ್ದಲ್ಲಿ. ನವೆಂಬರ್ ಎರಡನೇ ವಾರದಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗುವುದು ಎಂದು ಎಚ್ಚರಿಸಿದ್ದಾರೆ.

    10 ರಾಷ್ಟ್ರೀಕೃತ ಬ್ಯಾಂಕ್‍ಗಳ ವಿಲೀನ ತಡೆಯುವುದು ಹಾಗೂ ಸಿಬ್ಬಂದಿಯ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬ್ಯಾಂಕ್ ನೌಕರರ ಒಕ್ಕೂಟಗಳು ಮುಷ್ಕರಕ್ಕೆ ಕರೆ ನೀಡಿವೆ ಎಂದು ಅಖಿಲ ಭಾರತೀಯ ಬ್ಯಾಂಕ್ ಅಧಿಕಾರಿಗಳ ಕಾನ್ಫೆಡರೇಶನ್(ಎಐಬಿಓಸಿ)ನ ಪ್ರಧಾನ ಕಾರ್ಯದರ್ಶಿ ದೀಪಲ್ ಕುಮಾರ್ ಶರ್ಮಾ ತಿಳಿಸಿದ್ದಾರೆ.

    ಕಾಲ ಕಾಲಕ್ಕೆ ವೇತನ ಪರಿಷ್ಕರಣೆ, ವಾರದಲ್ಲಿ 5 ದಿನ ಮಾತ್ರ ಕೆಲಸದ ವ್ಯವಸ್ಥೆ ಸೇರಿದಂತೆ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಮುಷ್ಕರ ನಡೆಸಲಾಗುತ್ತಿದೆ. ಮುಷ್ಕರಕ್ಕೆ ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘ (ಎಐಬಿಓಎ), ಭಾರತೀಯ ರಾಷ್ಟ್ರೀಯ ಬ್ಯಾಂಕ್ ಅಧಿಕಾರಿಗಳ ಕಾಂಗ್ರೆಸ್ (ಐಎನ್‍ಬಿಓಸಿ) ಮತ್ತು ಬ್ಯಾಂಕ್ ಅಧಿಕಾರಿಗಳ ರಾಷ್ಟ್ರೀಯ ಸಂಸ್ಥೆ (ಎನ್‍ಓಬಿಓ) ಬೆಂಬಲ ಸೂಚಿಸಿವೆ.

    ದೇಶಾದ್ಯಂತ ಎಲ್ಲ ರಾಷ್ಟ್ರೀಕೃತ ಬ್ಯಾಂಕ್‍ಗಳು ಸೆಪ್ಟೆಂಬರ್ 25ರ ಮಧ್ಯರಾತ್ರಿಯಿಂದ 27ರ ವರೆಗೆ ಪ್ರತಿಭಟನೆ ನಡೆಸಲಿವೆ. ಸರ್ಕಾರ ಈ ಕುರಿತು ಎಚ್ಚರಿಕೆ ವಹಿಸದಿದ್ದಲ್ಲಿ ನವೆಂಬರ್ ಎರಡನೇ ವಾರದಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗುವುದು ಎಂದು ಶರ್ಮಾ ತಿಳಿಸಿದ್ದಾರೆ.

    ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆಗಸ್ಟ್ 30ರಂದು 10 ಸಾರ್ವಜನಿಕ ವಲಯದ ಬ್ಯಾಂಕ್‍ಗಳನ್ನು ನಾಲ್ಕು ಬ್ಯಾಂಕ್‍ಗಳಿಗೆ ವಿಲೀನಗೊಳಿಸಿರುವ ಕುರಿತು ಘೋಷಣೆ ಮಾಡಿದ್ದರು. ಐದು ವರ್ಷಗಳ ಆರ್ಥಿಕತೆಯ ಕುಂಠಿತವನ್ನು ಸರಿ ದಾರಿಗೆ ತಂದು, ಬೆಳೆವಣಿಗೆಯತ್ತ ಕೊಂಡೊಯ್ಯಬೇಕು. ಹೀಗಾಗಿ ಸಣ್ಣ ಬ್ಯಾಂಕ್‍ಗಳನ್ನು ವಿಲೀನಗೊಳಿಸಿ ಬೃಹತ್ ಬ್ಯಾಂಕ್‍ಗಳನ್ನಾಗಿ ಮಾಡಿ, ವಿಶ್ವ ದರ್ಜೆಗೆ ಕೊಂಡೊಯ್ಯಬೇಕು ಎನ್ನುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದರು.

     

    ಇದರ ಭಾಗವಾಗಿ ರಾಜ್ಯದ ಕೆನರಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್‍ಗಳನ್ನು ಸಹ ವಿಲೀನ ಮಾಡಲಾಗುತ್ತಿದೆ. ಈ ಕುರಿತು ಆಗಸ್ಟ್ 30ರಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದ ನಿರ್ಮಲಾ ಸೀತಾರಾಮನ್ ಅವರು, 2017ರಲ್ಲಿ 17 ಸಾರ್ವಜನಿಕ ವಲಯದ ಬ್ಯಾಂಕ್‍ಗಳಿದ್ದವು. ಇದನ್ನು 13ಕ್ಕೆ ಇಳಿಸುವ ನಿಟ್ಟಿನಲ್ಲಿ ಈ ವಿಲೀನ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದ್ದರು. ಪಂಜಾಬ್ ನ್ಯಾಷನಲ್ ಬ್ಯಾಂಕ್, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಹಾಗೂ ಯುನೈಟೆಡ್ ಬ್ಯಾಂಕ್ ವಿಲೀನವಾದರೆ ಇಂಡಿಯನ್ ಬ್ಯಾಂಕ್ ಜೊತೆ ಅಲಹಾಬಾದ್ ಬ್ಯಾಂಕ್ ವಿಲೀನವಾಗಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಆಂಧ್ರ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್ ವಿಲೀನವಾಗಿವೆ.

  • ನಾಳೆ ದೇಶವ್ಯಾಪಿ ಬ್ಯಾಂಕ್ ಮುಷ್ಕರ- ಯಾವ ಬ್ಯಾಂಕ್ ಇರುತ್ತೆ, ಯಾವುದು ಇರಲ್ಲ?

    ನಾಳೆ ದೇಶವ್ಯಾಪಿ ಬ್ಯಾಂಕ್ ಮುಷ್ಕರ- ಯಾವ ಬ್ಯಾಂಕ್ ಇರುತ್ತೆ, ಯಾವುದು ಇರಲ್ಲ?

    ನವದೆಹಲಿ: ಮಂಗಳವಾರದಂದು ದೇಶದಾದ್ಯಂತ ರಾಷ್ಟ್ರೀಕೃತ ಬ್ಯಾಂಕ್‍ಗಳು ಬಂದ್‍ಗೆ ಕರೆ ನೀಡಿವೆ.

    ಎಸ್‍ಬಿಐ ಜೊತೆ ಸಹವರ್ತಿ ಬ್ಯಾಂಕ್‍ಗಳ ವಿಲೀನಕ್ಕೆ ವಿರೋಧಿಸಿ, ನೋಟು ನಿಷೇಧದಿಂದ ಬ್ಯಾಂಕ್‍ಗಳಿಗೆ ನಷ್ಟವಾದ ವೆಚ್ಚ ಭರಿಸುವಂತೆ ಹಾಗೂ ಸೇವಾಭದ್ರತೆ ಸೇರಿದಂತೆ ಸುಮಾರು 30 ಬೇಡಿಕೆಗಳನ್ನು ಮುಂದಿಟ್ಟು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ ಮಂಗಳವಾರಂದು ಬಂದ್‍ಗೆ ಕರೆ ನೀಡಿದೆ. ದೇಶದಾದ್ಯಂತ ಸುಮಾರು 10 ಲಕ್ಷಕ್ಕೂ ಹೆಚ್ಚಿನ ಬ್ಯಾಂಕ್ ಸಿಬ್ಬಂದಿ ಮುಷ್ಕರದಲ್ಲಿ ಭಾಗಿಯಾಗಲಿದ್ದಾರೆ.

    ದೇಶದ್ಯಾಂತ ಬ್ಯಾಂಕ್‍ಗಳು ಮುಷ್ಕರ ನಡೆಸಲು ನಿರ್ಧರಿಸಿರುವುದರಿಂದ, ಬ್ಯಾಂಕಿಂಗ್ ಸೇವೆ ಬಹುತೇಕ ಸ್ತಬ್ಧವಾಗಲಿದ್ದು, ಎಟಿಎಂನಲ್ಲಿ ಸೇವೆಯಲ್ಲೂ ವ್ಯತ್ಯಯ ಉಂಟಾಗಲಿದೆ.

    ಯಾವ ಬ್ಯಾಂಕ್‍ಗಳು ಇರಲ್ಲ?: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಐಡಿಬಿಐ ಬ್ಯಾಂಕ್, ಎಸ್‍ಬಿಐ, ಎಸ್‍ಬಿಎಂ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಕರ್ನಾಟಕ ಬ್ಯಾಂಕ್ ಸೇರಿದಂತೆ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್‍ಗಳು ಮುಷ್ಕರದಲ್ಲಿ ಪಾಲ್ಗೊಳ್ಳುವುದರಿಂದ ಈ ಬ್ಯಾಂಕ್‍ಗಳ ಸೇವೆ ನಾಳೆ ಇರುವುದಿಲ್ಲ.

    ಯಾವ ಬ್ಯಾಂಕ್‍ಗಳು ಇರುತ್ತೆ?: ಐಸಿಐಸಿಐ, ಹೆಚ್‍ಡಿಎಫ್‍ಸಿ, ಆಕ್ಸಿಸ್ ಬ್ಯಾಂಕ್, ಕೋಟಕ್ ಮಹಿಂದ್ರ ಸೇರಿದಂತೆ ಖಾಸಗಿ ಬ್ಯಾಂಕ್‍ಗಳು ನಾಳೆ ಎಂದಿನಂತೆ ಕಾರ್ಯ ನಿರ್ವಹಿಸಲಿವೆ.