Tag: Bank Notice

  • ಕೋವಿಡ್‍ನಿಂದ ಮೃತಪಟ್ಟವರ ಮನೆಗೆ ಬ್ಯಾಂಕ್ ನೋಟಿಸ್ ಕೊಟ್ಟರೆ ಕ್ರಮ ನಿಶ್ಚಿತ: ಎಸ್.ಟಿ. ಸೋಮಶೇಖರ್

    ಕೋವಿಡ್‍ನಿಂದ ಮೃತಪಟ್ಟವರ ಮನೆಗೆ ಬ್ಯಾಂಕ್ ನೋಟಿಸ್ ಕೊಟ್ಟರೆ ಕ್ರಮ ನಿಶ್ಚಿತ: ಎಸ್.ಟಿ. ಸೋಮಶೇಖರ್

    ಮೈಸೂರು: ಕೋವಿಡ್‍ನಿಂದ ಮೃತಪಟ್ಟವರ ಮನೆಗೆ ಬ್ಯಾಂಕ್ ನೋಟಿಸ್ ಕೊಟ್ಟರೆ ಕ್ರಮ ನಿಶ್ಚಿತ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.

    ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ಗಳಲ್ಲಿ ಸಾಲ ಪಡೆದವರು ಕೋವಿಡ್‍ನಿಂದ ಮೃತಪಟ್ಟಿದ್ದರೆ, ಅವರು ಪಡೆದಿದ್ದ ಎಲ್ಲಾ ಸಾಲವನ್ನ ಮನ್ನಾ ಮಾಡಲಾಗಿದೆ. ಇದನ್ನು ಮೀರಿ ಯಾವುದಾದರೂ ಬ್ಯಾಂಕ್, ಮೃತಪಟ್ಟವರ ಮನೆಗೆ ನೋಟಿಸ್ ಕೊಟ್ಟರೆ ಬ್ಯಾಂಕ್‍ನವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಫೋಟೋಶೂಟ್‌ಗಾಗಿ ಬಂದಿದ್ದ ಮಹಿಳೆ ಮೇಲೆ ಲಾಡ್ಜ್‌ನಲ್ಲಿ ಗ್ಯಾಂಗ್‌ರೇಪ್

    ದಾವಣಗೆರೆಯ ಒಂದು ಸಹಕಾರ ಬ್ಯಾಂಕ್ ನೋಟಿಸ್ ನೀಡಿದೆ ಎಂಬ ವಿಚಾರ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಆಗಿದೆ. ಆದರೆ ಬ್ಯಾಂಕ್‍ನವರು ನೋಟಿಸ್ ಕೊಟ್ಟಿಲ್ಲ ಎಂದಿದ್ದಾರೆ. ನಾನು ಬೆಂಗಳೂರಿಗೆ ಹೋಗಿ ಇಲಾಖಾ ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇನೆ. ಈ ವಿಚಾರದಲ್ಲಿ ತಪ್ಪಾಗಿದ್ದರೆ ಕ್ರಮ ನಿಶ್ಚಿತ ಎಂzದು ತಿಳಿಸಿದ್ದಾರೆ. ಇದನ್ನೂ ಓದಿ: ನಾನ್ ಬೆಡ್‍ಶೀಟ್, ತಲೆದಿಂಬು- ಬೆಡ್‍ರೂಮ್ ಫೋಟೋ ವೈರಲ್

  • ಒಂದೇ ಗ್ರಾಮದ 70ಕ್ಕೂ ಹೆಚ್ಚು ರೈತರಿಗೆ ಬ್ಯಾಂಕ್ ನೋಟಿಸ್

    ಒಂದೇ ಗ್ರಾಮದ 70ಕ್ಕೂ ಹೆಚ್ಚು ರೈತರಿಗೆ ಬ್ಯಾಂಕ್ ನೋಟಿಸ್

    ಬೀದರ್: ಜಿಲ್ಲೆಯ ಚೊಂಡಿ ಗ್ರಾಮದ 70ಕ್ಕೂ ಹೆಚ್ಚು ರೈತರಿಗೆ ಸಾಲ ಮರುಪಾವತಿ ಮಾಡುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೋಟಿಸ್ ನೀಡಿದೆ.

    ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಿಎಂ ಆಗಿದ್ದ ಎಚ್‌ಡಿ ಕುಮಾರಸ್ವಾಮಿ ರೈತರ ಬೆಳೆ ಸಾಲ ಮನ್ನಾ ಘೋಷಿಸಿದ್ದರು. ಇದರಿಂದ ಸಾಲಮನ್ನಾ ಯೋಜನೆಗೆ ಒಳಪಟ್ಟ ರೈತರು ನಮ್ಮ ಬೆಳೆಸಾಲ ಮನ್ನಾ ಆಗಿದೆ ಅಂತಾ ಖುಷಿಯಾಗಿದ್ದರು. ಇದೀಗ ಸಾಲಮನ್ನಾ ಆಗಿದ್ದ ರೈತರಿಗೆ ನೋಟಿಸ್ ನೀಡಲಾಗಿದೆ. ಬೀದರ್ ತಾಲೂಕಿನ ಚೊಂಡಿ ಗ್ರಾಮದ 70ಕ್ಕೂ ಹೆಚ್ಚು ರೈತರಿಗೆ ಸಾಲ ಮರುಪಾವತಿಸುವಂತೆ ಎಸ್‌ಬಿಐ ಬ್ಯಾಂಕ್ ನೋಟಿಸ್ ನೀಡಿದೆ. ಆಗ ಸಾಲಮನ್ನಾ ಆಗಿದೆ ಅಂತಾ ಪತ್ರ ನೀಡಿದ್ದ ಬ್ಯಾಂಕ್ ಈಗ ಪುನಃ ಸಾಲ ಮರುಪಾವತಿಸಿ ಎಂದಿರೋದ್ದಕ್ಕೆ ರೈತರು ಆತಂಕಕ್ಕೀಡಾಗಿದ್ದಾರೆ.

    ಸಾಲಮನ್ನಾ ಆಗದಿದ್ರೆ ನಮಗೆ ಆತ್ಮಹತ್ಯೆ ಮಾಡಿಕೊಳ್ಳೋದೇ ದಾರಿ ಅಂತಾ ರೈತರು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಚೊಂಡಿ ಗ್ರಾಮ ಅಲ್ಲದೇ ವಿಳಾಸ್‌ಪೂರ್, ಒನ್ನಿಕೇರಿ, ಕಪಲಾಪೂರ್, ಕೊಳ್ಳಾರ್ ಸೇರಿ ಬೀದರ್‌ನ ಹಲವು ಗ್ರಾಮಗಳ ರೈತರಿಗೆ ಬ್ಯಾಂಕ್ ನೋಟಿಸ್ ನೀಡಲಾಗಿದೆ.

    ಕೆಲ ದಿನಗಳ ಹಿಂದೆ ಸಾಲ ಮರುಪಾವತಿ ಮಾಡಲಾಗದೇ ಮಲ್ಲಪ್ಪ ಮಾರುತಿ, ರಾಚಪ್ಪ ಶಂಕರ್ ರಾವ್ ಪಾಟೀಲ್ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಕುಮಾರಸ್ವಾಮಿ ಘೋಷಿಸಿದ್ದ ಸಾಲಮನ್ನಾ ಯೋಜನೆಗೆ ಬಿಜೆಪಿ ಸರ್ಕಾರ ನೋಟಿಸ್ ನೀಡುವ ಮೂಲಕ ರಾಜಕೀಯ ದ್ವೇಷ ಮಾಡಲಾಗುತ್ತಿದೆ ಎಂದು ಅಖಿಲ ಭಾರತ ಕಿಸಾನ್‌ಸಭಾ ಸದಸ್ಯ ನಜೀರ್ ಅಹಮದ್ ಆರೋಪಿಸಿದ್ದಾರೆ.

  • ಮತ್ತೆ ಬ್ಯಾಂಕಿನಿಂದ ರೈತರಿಗೆ ನೋಟಿಸ್

    ಮತ್ತೆ ಬ್ಯಾಂಕಿನಿಂದ ರೈತರಿಗೆ ನೋಟಿಸ್

    ತುಮಕೂರು: ಕಳೆದ ಮೈತ್ರಿ ಸರ್ಕಾರ ರೈತರ ಸಾಲಮನ್ನಾ ಎಂದು ಘೋಷಿಸಿತ್ತು. ಆದರೆ ಆ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಬ್ಯಾಂಕ್ ಕಡೆಯಿಂದ ಸಾಲ ಮರುಪಾವತಿ ಮಾಡುವಂತೆ ರೈತರಿಗೆ ನೋಟಿಸ್ ಬರುತ್ತಿರುವುದು ಇನ್ನು ನಿಂತಿಲ್ಲ. ಸಾಲಮನ್ನಾ ಆಗಿ ಸಂಕಷ್ಟ ದೂರ ಆಯ್ತು ಎಂದುಕೊಂಡಿದ್ದ ರೈತರಿಗೆ ಬ್ಯಾಂಕ್ ನಿಂದ ಬರುತ್ತಿರುವ ನೋಟಿಸ್ ಮತ್ತೆ ನಿದ್ದೆ ಕೆಡಿಸಿದೆ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನಲ್ಲಿ ನೂರಾರು ರೈತರಿಗೆ ಸಾಲ ಮರುಪಾವತಿ ಮಾಡುವ ನೋಟಿಸ್ ಬಂದಿದೆ.

    ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಆಗಿದ್ದ ಎಚ್.ಡಿ ಕುಮಾರಸ್ವಾಮಿ ಜಾರಿಗೆ ತಂದಂತಹ ಸಾಲಮನ್ನಾ ಯೋಜನೆ ಕಣ್ಣೊರೆಸುವ ತಂತ್ರವಾಗಿ ಪರಿಣಮಿಸಿದೆ. ಆರಂಭದಲ್ಲಿ ಮೈತ್ರಿ ಸರ್ಕಾರ ಸಾಲಮನ್ನಾ ಎಂದು ಘೋಷಿಸಿತ್ತು. ಘೋಷಣೆ ಆದ ಒಂದು ವರ್ಷದ ಬಳಿಕ ನಾವು ನಿಮ್ಮ ಜೊತೆ ಇದ್ದೀವಿ. ಸಾಲಮನ್ನಾ ಮಾಡೇ ಮಾಡುತ್ತೇವೆ ಎಂದು ಸಾಂತ್ವನ ಪತ್ರ ಕಳುಹಿಸಿದ್ದರು. ಈ ನಡುವೆ ಮೈತ್ರಿ ಸರ್ಕಾರ ಉರುಳಿ ಹೋಯಿತು. ರೈತರ ಸಾಲಮನ್ನಾ ಮಾತ್ರ ಗಗನ ಕುಸುಮವಾಗಿದೆ.

    ಹಿಂದೆಲ್ಲ ನಿಮ್ಮ ಕಟ್ ಬಾಕಿ ಕಟ್ಟಿ ಎಂದು ನೋಟಿಸ್ ಕಳುಹಿಸುತ್ತಿದ್ದ ಎಸ್‍ಬಿಐ ಬ್ಯಾಂಕಿನವರು ಈಗ ಹೊಸ ವರಸೆ ಆರಂಭಿಸಿದ್ದಾರೆ. ಸಾಲಮನ್ನಾ ಯೋಜನೆಗೆ ಒಳಪಡುವ ಎಲ್ಲಾ ರೈತರಿಂದ ಸೂಕ್ತ ದಾಖಲೆ ಪಡೆದುಕೊಂಡ ಬ್ಯಾಂಕ್ ಮತ್ತೆ ಮತ್ತೆ ರೈತರಿಗೆ ನೋಟಿಸ್ ನೀಡುತ್ತಿದೆ. ಕಟ್ ಬದಲು ಒನ್ ಟೈಮ್ ಸೆಟಲ್ ಮೆಂಟ್‍ಗೆ ಬನ್ನಿ ಎಂದು ನೋಟಿಸ್ ಬಂದಿದೆ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ದೂಳನಹಳ್ಳಿ ಪಾಳ್ಯ, ಅಡಗೂರು ಸೇರಿದಂತೆ ಹಲವು ಗ್ರಾಮದ ನೂರಾರು ರೈತರಿಗೆ ನೋಟಿಸ್ ಬಂದಿದೆ.

    ಎರಡು ಲಕ್ಷದವರೆಗಿನ ಸಾಲಮನ್ನಾ ಮತ್ತು ನಿಯಮಿತವಾಗಿ ಕಂತು ಕಟ್ಟಿಕೊಂಡು ಬಂದವರಿಗೆ 25 ಸಾವಿರ ಇನ್ಸೆಂಟೀವ್ ಕೊಡುವುದಾಗಿ ಸರ್ಕಾರ ಘೋಷಿಸಿತ್ತು. ಆದರೆ ಅದು ಯಾವುದೂ ಈಗ ಕಾರ್ಯರೂಪಕ್ಕೆ ಬಂದಿಲ್ಲ. ಬದಲಾಗಿ ತಮ್ಮ ಸಾಲಮನ್ನಾ ಆಗುತ್ತದೆ ಎಂದು ನಿಶ್ಚಿಂತೆಯಿಂದ ಇದ್ದ ರೈತರಿಗೆ ಬ್ಯಾಂಕ್ ನಿಂದ ಬರುವ ನೋಟಿಸ್ ಮತ್ತಷ್ಟು ಆತಂಕ ಮನೆ ಮಾಡಿದೆ. ಸರ್ಕಾರ ಕನ್ನೋರೆಸುವ ತಂತ್ರ ಬಿಟ್ಟು ರೈತರ ಸಂಕಷ್ಟ ಪರಿಹರಿಸುವ ಕೆಲಸ ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಇನ್ನೂ ತಪ್ಪಿಲ್ಲ ರೈತರಿಗೆ ಬ್ಯಾಂಕ್ ನೋಟಿಸ್ ಕಾಟ- ಗಗನಕ್ಕೇರುತ್ತಲಿದೆ ಬಡ್ಡಿ

    ಇನ್ನೂ ತಪ್ಪಿಲ್ಲ ರೈತರಿಗೆ ಬ್ಯಾಂಕ್ ನೋಟಿಸ್ ಕಾಟ- ಗಗನಕ್ಕೇರುತ್ತಲಿದೆ ಬಡ್ಡಿ

    ಹುಬ್ಬಳ್ಳಿ: ಹಿಂದಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಘೋಷಿಸಿದ್ದ ರೈತರ ಸಾಲ ಮನ್ನಾ ಯೋಜನೆ ಹುಟ್ಟುಹಾಕಿರುವ ಗೊಂದಲ ಇನ್ನೂ ಬಗೆಹರಿದಿಲ್ಲ. ಬ್ಯಾಂಕ್‍ಗಳಿಂದ ರೈತರಿಗೆ ಇನ್ನೂ ನೋಟಿಸ್ ಬರುತ್ತಿದ್ದು, ಇದರಿಂದ ಹೊಸ ಸರ್ಕಾರ ಬಂದರೂ ಬ್ಯಾಂಕ್‍ಗಳಿಂದ ನೋಟಿಸ್ ನೀಡುವುದು ಮಾತ್ರ ನಿಂತಿಲ್ಲ ಎಂದು ರೈತರು ಆತಂಕಕ್ಕೊಳಗಾಗಿದ್ದಾರೆ.

    ಕಳೆದ ಮೂರ್ನಾಲ್ಕು ವರ್ಷದಿಂದ ಮಳೆ ಕೈ ಕೊಟ್ಟಿತ್ತು, ಈ ವರ್ಷ ಪ್ರವಾಹದಿಂದ ಅತೀವೃಷ್ಠಿ ಉಂಟಾಗಿದೆ. ಇಂತಹ ಸಂದರ್ಭದಲ್ಲೇ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸುತ್ತಮುತ್ತಲ ಗ್ರಾಮಗಳ ಹತ್ತಾರು ರೈತರಿಗೆ ಬ್ಯಾಂಕ್ ನೋಟಿಸ್ ಬರುತ್ತಿದ್ದು, ರೈತರು ಕಂಗಾಲಾಗಿದ್ದಾರೆ.

    ಸಾಲಮನ್ನಾ ಆಗುವ ಸಂತಸದಲ್ಲಿದ್ದ ರೈತರೀಗ ಬ್ಯಾಂಕ್ ನೋಟಿಸ್ ನೋಡಿ ಆತಂಕಗೊಂಡಿದ್ದು, ಒಂದು ಕಡೆ ಸಾಲ ಮನ್ನಾ ಆಗಿಲ್ಲ, ಇನ್ನೊಂದೆಡೆ ಬಡ್ಡಿ ದುಪ್ಪಟ್ಟಾಗಿದೆ. ರೈತರೆಲ್ಲ ಪ್ರತಿ ವರ್ಷ ತಾವು ಪಡೆದ ಬೆಳೆಸಾಲದ ಬಡ್ಡಿ ತುಂಬಿ ನವೀಕರಣ ಮಾಡಿಕೊಳ್ಳುತ್ತಿದ್ದರು. ಸರ್ಕಾರದ ಸಾಲಮನ್ನಾ ಘೋಷಣೆ ನಂಬಿ ಕಳೆದ ವರ್ಷದಿಂದ ಸಾಲ ನವೀಕರಣ ಮಾಡಿಕೊಂಡಿರಲಿಲ್ಲ. ಅಲ್ಲದೇ ನವೀಕರಣ ಮಾಡಲು ಬಡ್ಡಿಯನ್ನು ಸಹ ಬ್ಯಾಂಕ್ ಸಿಬ್ಬಂದಿ ತುಂಬಿಸಿಕೊಂಡಿರಲಿಲ್ಲ.

    ರೈತರು ಪಡೆದ ಸಾಲದಲ್ಲಿ ಕೇವಲ 25 ಸಾವಿರ ರೂ. ಮಾತ್ರ ಮನ್ನಾ ಆಗಿದ್ದು, ಉಳಿದ ಬೆಳೆ ಸಾಲಕ್ಕೆ ಬ್ಯಾಂಕ್‍ಗಳು ಶೇ.14ರಷ್ಟು ಬಡ್ಡಿ ವಿಧಿಸಿ ನೋಟಿಸ್ ನೀಡುತ್ತಿವೆ. ಯಾರು ಬೆಳೆ ಸಾಲ ನವೀಕರಣ ಮಾಡಿಕೊಳ್ಳುತ್ತಿದ್ದರೋ ಅಂಥವರಿಗೆ 25 ಸಾವಿರ ರು. ಮನ್ನಾ ಮಾಡಲಾಗಿದೆ. ಈ ಕುರಿತು ಬಹುತೇಕ ರೈತರಿಗೆ ಸರಿಯಾದ ಮಾಹಿತಿಯೇ ಇಲ್ಲ. ಜೊತೆಗೆ ಆ ರೀತಿಯ ನಿಯಮಾವಳಿ ಇದ್ದರೆ ಋಣಮುಕ್ತ ಪತ್ರ ಮನೆಗೆ ಕಳುಹಿಸಿ ಯಾಕೆ ಮೋಸ ಮಾಡಬೇಕಿತ್ತು ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಬಡ್ಡಿ ಶೇ.4 ರಿಂದ 14ಕ್ಕೆ ಏರಿಕೆ: ಪ್ರತಿ ವರ್ಷದಂತೆ ಬೆಳೆಸಾಲ ನವೀಕರಣ ಮಾಡಿಕೊಂಡಿದ್ದರೆ ರೈತರು ಶೇ.4ರ ಪ್ರಮಾಣದಲ್ಲಿ ಬಡ್ಡಿ ತುಂಬಬೇಕಾಗಿತ್ತು. ಇದೀಗ ಕಟ್ಟಬಾಕಿ ಇರುವ ಹಿನ್ನೆಲೆ ಶೇ.14 ರಷ್ಟು ಡ್ಡಿ ತುಂಬಬೇಕು. ಇದೀಗ ಕೇವಲ 25 ಸಾವಿರ ರೂ. ಮಾತ್ರ ಸಾಲಮನ್ನಾ ಮಾಡಿದ್ದಾರೆ. ಈ ಬಗ್ಗೆ ಬ್ಯಾಂಕ್‍ನಲ್ಲಿ ವಿಚಾರಿಸಿದರೆ ಸರ್ಕಾರವನ್ನೇ ಕೇಳಿ ಎನ್ನುತ್ತಾರೆ. 5 ಲಕ್ಷ ರೂ. ಸಾಲ ಪಡೆದಿದ್ದು ಅದೀಗ 6,08,642 ರೂ. ಆಗಿದೆ. 1.80 ಲಕ್ಷ ರೂ. ಬಡ್ಡಿ ರೂಪದಲ್ಲಿದ್ದು, ಸರ್ಕಾರ ಸಾಲ ಮನ್ನಾ ಮಾಡಿರುವುದು ಯಾರ ಲಾಭಕ್ಕೆ ಎಂದು ರೈತರು ಪ್ರಶ್ನಿಸಿದ್ದಾರೆ.

  • ಸಾಲ ಪಾವತಿಸದ ವಾಟಾಳ್ – ಮನೆಗೆ ಎಂಟ್ರಿಕೊಟ್ಟು ಶಾಕ್ ಕೊಟ್ಟ ಬ್ಯಾಂಕ್ ಸಿಬ್ಬಂದಿ!

    ಸಾಲ ಪಾವತಿಸದ ವಾಟಾಳ್ – ಮನೆಗೆ ಎಂಟ್ರಿಕೊಟ್ಟು ಶಾಕ್ ಕೊಟ್ಟ ಬ್ಯಾಂಕ್ ಸಿಬ್ಬಂದಿ!

    ಬೆಂಗಳೂರು: ಮಾತೆತ್ತಿದ್ರೆ ಬಂದ್ ಬಂದ್ ಎನ್ನುವ ವಾಟಾಳ್ ನಾಗರಾಜ್‍ಗೆ ಇಂದು ಬ್ಯಾಂಕ್‍ನವರು ದಿಢೀರ್ ಶಾಕ್ ಕೊಟ್ಟಿದ್ದಾರೆ. ಕತ್ತೆ ಕುರಿ ಎಮ್ಮೆ ಜೊತೆ ಬೀದಿಗೆ ಬಂದು ಪ್ರತಿಭಟನೆ ನಡೆಸುವ ವಾಟಾಳ್ ಮನೆ ಮುಂದೆ ಮಧ್ಯಾಹ್ನ ಬ್ಯಾಕ್‍ನವರು ಬಂದಿದ್ದರು.

    ವಾಟಾಳ್ ವಿಜಯ ಬ್ಯಾಂಕಿನಿಂದ ಗೃಹ ಸಾಲವನ್ನು ಪಡೆದಿದ್ದರು. ಗೃಹ ಸಾಲದ 17 ಲಕ್ಷ ರೂ. ಹಣವನ್ನು ವಾಟಾಳ್ ಪಾವತಿಸಬೇಕಿತ್ತು. 2017ಕ್ಕೆ ಜುಲೈ ತಿಂಗಳಿಗೆ ಸಾಲ ಪಾವತಿಸಬೇಕಿತ್ತು. ಈ ಸಾಲದ ಹಣವನ್ನು ಪಾವತಿಸದ ಹಿನ್ನೆಲೆಯಲ್ಲಿ ಬ್ಯಾಂಕ್ ನೋಟಿಸ್ ನೀಡಿತ್ತು.

    ಮೂರು ನೋಟಿಸ್ ಕಳುಹಿಸಿದರೂ ವಾಟಾಳ್ ನಾಗರಾಜ್ ಅವರು ಉತ್ತರ ನೀಡಿರಲಿಲ್ಲ. ನೋಟಿಸ್ ಗೆ ಕ್ಯಾರೇ ಅನ್ನದ ವಾಟಾಳ್ ಮನೆಗೆ ಇಂದು ವಿಜಯ ಬ್ಯಾಂಕ್ ಸಿಬ್ಬಂದಿ ಲಾಯರ್ ಜೊತೆ ಆಗಮಿಸಿದ್ದರು.

    ಬ್ಯಾಂಕ್‍ನವರು ಬಂದಿರುವ ಸುದ್ದಿ ಕೇಳುತ್ತಿದ್ದಂತೆ ವಾಟಾಳ್ ಮನೆಗೆ ಆಗಮಿಸಿದ್ದಾರೆ. ಬ್ಯಾಂಕ್‍ನವರನ್ನು ಹೆಂಗೋ ಮಾತಾನಾಡಿ ಸಾಗ ಹಾಕಿದ್ದಾರೆ. ವಾಟಾಳ್ ಮನವಿಯ ಹಿನ್ನೆಲೆಯಲ್ಲಿ ಬ್ಯಾಂಕ್ ಸಿಬ್ಬಂದಿ ಸ್ಥಳದಿಂದ ತೆರಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಾಲಮನ್ನಾ ಘೋಷಣೆ ನಂತರವೂ ರೈತರ ಜೀವ ಹಿಂಡುತ್ತಿವೆ ಬ್ಯಾಂಕ್ ನೋಟಿಸ್‍ಗಳು!

    ಸಾಲಮನ್ನಾ ಘೋಷಣೆ ನಂತರವೂ ರೈತರ ಜೀವ ಹಿಂಡುತ್ತಿವೆ ಬ್ಯಾಂಕ್ ನೋಟಿಸ್‍ಗಳು!

    ಗದಗ: ಮುಖ್ಯಮಂತ್ರಿ ಸಿಎಂ ಕುಮಾರಸ್ವಾಮಿ ರೈತರ ಸಾಲಮನ್ನಾ ಘೋಷಣೆಯ ನಂತರವು ಬ್ಯಾಂಕುಗಳ ಪದೇ ಪದೇ ಸಾಲ ಮರುಪಾವತಿಸುವ ಬಗ್ಗೆ ನೋಟಿಸ್‍ಗಳನ್ನು ನೀಡುತ್ತಿರುವುದರಿಂದ ರೈತರು ಕಂಗಲಾಗಿ ಹೋಗಿದ್ದಾರೆ.

    ಹೌದು, ಒಂದಡೆ ರೈತರ ಸಾಲಮನ್ನಾ ಎಂದು ಕುಮಾರಸ್ವಾಮಿ ಸರ್ಕಾರ ಬೀಗುತ್ತಿದ್ದರೆ, ಮತ್ತೊಂದಡೆ ಬ್ಯಾಂಕ್‍ನಿಂದ ರೈತರಿಗೆ ನೋಟಿಸ್ ಬರುವುದು ನಿಲ್ಲುತ್ತಿಲ್ಲ. ಹೀಗಾಗಿ ಸಿಎಂ ಅವರು ಸಾಲಮನ್ನಾ ಮಾಡಿರುವುದು ನಿಜವೇ ಎಂಬುದು ರೈತರ ಪ್ರಶ್ನೆಯಾಗಿದೆ.

    ನಗರದ ಪಂಜಾಬ್ ನ್ಯಾಷನಲ್ ಬ್ಯಾಂಕ್‍ನಿಂದ ಸಾಕಷ್ಟು ರೈತರಿಗೆ ನೋಟಿಸ್ ಪತ್ರ ಹೋಗುತ್ತಿವೆ. ಗದಗ ತಾಲೂಕಿನ ನಾರಾಯಣಪುರ ಗ್ರಾಮದ ನಾಗಪ್ಪ ಹಂಚಿನಾಳ ಎಂಬ ರೈತನಿಗೆ ಸಾಲ ಹಾಗೂ ಬಡ್ಡಿ ಮರುಪಾವತಿಸುವಂತೆ ಗದಗ ಪಂಜಾಬ್ ನ್ಯಾಷನಲ್ ಬ್ಯಾಂಕ್ ನೋಟಿಸ್ ಜಾರಿಮಾಡಿದೆ. ಈ ನೋಟಿಸ್ ತಲುಪಿದ 7 ದಿನಗಳಲ್ಲಿ ಸಾಲದ ಮೊತ್ತ ಹಾಗೂ ಬಡ್ಡಿ ಬ್ಯಾಂಕ್‍ಗೆ ಜಮಾ ಮಾಡಬೇಕು. ಸಮಯಕ್ಕನುಸಾರವಾಗಿ ಬಡ್ಡಿ ಪಾವತಿಸದಿದ್ದರೇ, ಎನ್‍ಪಿಎ ಮಾಡುವ ಮೂಲಕ ಭವಿಷ್ಯದಲ್ಲಿ ಯಾವುದೇ ಬ್ಯಾಂಕಿನೊಂದಿಗೆ ವ್ಯವಹರಿಸಲು ಅನಾನುಕೂಲದ ಬೆದರಿಕೆಯನ್ನು ಹಾಕಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ರೈತ ನಾಗಪ್ಪ 2013 ಆಗಸ್ಟ್ 2 ರಲ್ಲಿ 4 ಲಕ್ಷ ರೂಪಾಯಿ ಬೆಳೆಸಾಲವನ್ನು ಬ್ಯಾಂಕಿನಿಂದ ಪಡೆದಿದ್ದೆ. ಆದರೆ ಸತತ ಮೂರು-ನಾಲ್ಕು ವರ್ಷಗಳ ಬರಗಾಲ ಇದ್ದರಿಂದ ಸಾಲ ಹಾಗೂ ಬಡ್ಡಿ ಮರುಪಾವತಿಸಿರಲಿಲ್ಲ. ಸರ್ಕಾರ ಸಾಲಮನ್ನಾ ಜಾರಿ ಮಾಡಿ ತಿಂಗಳುಗಳಾದರೂ, ಬ್ಯಾಂಕಿನವರು ನೋಟಿಸ್ ನೀಡಿದ್ದಾರೆ. ಬರಗಾಲದ ವೇಳೆ ಸಾಲದ ಮೊತ್ತ ಹಾಗೂ ಬಡ್ಡಿಯನ್ನು ತುಂಬಲೇ ಬೇಕೆಂದರೆ ಸಾವೊಂದೆ ಇದಕ್ಕೆ ಪರಿಹಾರ ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv