Tag: Bangla Immigrants

  • ಪೌರತ್ವ ತಿದ್ದುಪಡಿ ಕಾಯ್ದೆ | ರಾಜ್ಯದಲ್ಲಿದ್ದ ಐವರು ಬಾಂಗ್ಲಾ ನಿರಾಶ್ರಿತರಿಗೆ ಭಾರತೀಯ ಪೌರತ್ವ

    ಪೌರತ್ವ ತಿದ್ದುಪಡಿ ಕಾಯ್ದೆ | ರಾಜ್ಯದಲ್ಲಿದ್ದ ಐವರು ಬಾಂಗ್ಲಾ ನಿರಾಶ್ರಿತರಿಗೆ ಭಾರತೀಯ ಪೌರತ್ವ

    – 40 ವರ್ಷಗಳ ಹೋರಾಟಕ್ಕೆ ಸಿಕ್ಕ ಫಲ

    ರಾಯಚೂರು: ಪೌರತ್ವ ತಿದ್ದುಪಡಿ ಕಾಯ್ದೆ (CAA) ಅಡಿಯಲ್ಲಿ ರಾಜ್ಯದಲ್ಲಿ ವಾಸಿಸುತ್ತಿರುವ ಐವರು ಬಾಂಗ್ಲಾ ನಿರಾಶ್ರಿತರಿಗೆ ಭಾರತೀಯ ಪೌರತ್ವ (Indian Citizenship) ಸಿಕ್ಕಿದೆ.

    ರಾಯಚೂರು (Raichur) ಜಿಲ್ಲೆ ಸಿಂಧನೂರು ತಾಲೂಕಿನ ಆರ್.ಎಚ್‌ ಕ್ಯಾಂಪ್‌ಗಳಲ್ಲಿ ವಾಸವಿರುವ ಐವರಿಗೆ ಭಾರತೀಯ ಪೌರತ್ವ ಸಿಕ್ಕಿದೆ. ಆರ್.ಎಚ್‌ಕ್ಯಾಂಪ್‌ಗಳಲ್ಲಿರುವ ರಾಮಕೃಷ್ಣನ್‌ ಅಭಿಕರಿ, ಸುಕುಮಾರ ಮೊಂಡಲ್, ಬಿ. ಪ್ರದಾಸ ಗೋಲ್ದರ್, ಜಯಂತ ಮೊಂಡಲ್, ಅದ್ವಿತ ಕೇಂದ್ರ ಗೃಹ ಇಲಾಖೆಯಿಂದ ಪೌರತ್ವ ಪಡೆದ ಬಾಂಗ್ಲಾ ವಲಸಿಗರಾಗಿದ್ದಾರೆ. ಜನಗಣತಿ ಕಾರ್ಯಾಚರಣೆ ಹಾಗೂ ನಾಗರಿಕ ನೋಂದಣಿ ನಿರ್ದೇಶನಾಲಯದಿಂದ ಅಧಿಕೃತವಾಗಿ ಪೌರತ್ವ ಪತ್ರ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ – ಕೇಂದ್ರದಿಂದ ಅಧಿಸೂಚನೆ ಪ್ರಕಟ

    ಬಾಂಗ್ಲಾ ವಲಸಿಗರು ಇಲ್ಲಿ ಆಶ್ರಯ ಪಡೆದಿದ್ದೇಗೆ?
    1971ರ ಬಾಂಗ್ಲಾದೇಶ ವಿಮೋಚನಾ ವೇಳೆ ಬಾಂಗ್ಲಾ ಹಾಗೂ ಬರ್ಮಾ ವಲಸಿಗರಿಗೆ ಭಾರತದಲ್ಲಿ ಆಶ್ರಯ ನೀಡಲಾಗಿತ್ತು. ಈ ವೇಳೆ ಸಿಂಧನೂರು ತಾಲೂಕಿನಲ್ಲಿ ಸುಮಾರು 932 ಕುಟುಂಬಗಳಿಗೆ 5 ಸಾವಿರ ಎಕರೆ ಜಮೀನು ನೀಡಲಾಗಿತ್ತು. 1971ರ ಬಳಿಕ ಬಂದ ಕುಟುಂಬಗಳಿಗೆ ಪೌರತ್ವ ಹಾಗೂ ಯಾವುದೇ ಸೌಲಭ್ಯ ನೀಡಿರಲಿಲ್ಲ. ಪೌರತ್ವಕ್ಕಾಗಿ ನಿರಾಶ್ರಿತರು ಕಳೆದ 40 ವರ್ಷಗಳಿಂದ ಅರ್ಜಿ ಹಾಕುತ್ತಲೇ ಇದ್ದರು. ಅದರಂತೆ ಐವರಿಗೆ ಪೌರತ್ವ ಸಿಕ್ಕಿದೆ. ಪೌರತ್ವ ಕೋರಿ ಒಟ್ಟು 146 ಅರ್ಜಿಗಳು ಸಲ್ಲಿಕೆಯಾಗಿತ್ತು. ಈ ಪೈಕಿ ಆರ್.ಎಚ್ ಕ್ಯಾಂಪ್‌ನಲ್ಲಿ ವಾಸಿಸುತ್ತಿರುವ ಐವರಿಗೆ ಪೌರತ್ವ ದೊರೆತಿದೆ. ಇದನ್ನೂ ಓದಿ: Koppala | ತುಂಗಭದ್ರಾ ಜಲಾಶಯದ ಕ್ರಸ್ಟ್‌ ಗೇಟ್‌ನ ಚೈನ್ ಲಿಂಕ್ ಕಟ್ – ಜನರಲ್ಲಿ ಆತಂಕ!

    ಸಿಎಎಯಲ್ಲಿ ಏನಿದೆ?
    ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ಥಾನದಲ್ಲಿ ಕಿರುಕುಳಕ್ಕೆ ಒಳಗಾದ ಮುಸ್ಲಿಮೇತರರಿಗೆ ಭಾರತದ ಪೌರತ್ವ (Citizenship) ನೀಡಲಾಗುತ್ತದೆ. 2014ರ ಡಿಸೆಂಬರ್ 31ಕ್ಕೆ ಮೊದಲು ರಕ್ಷಣೆ ಬಯಸಿ ಭಾರತಕ್ಕೆ ಶರಣಾರ್ಥಿಗಳಾಗಿ ಬಂದಿರುವ ಹಿಂದೂಗಳು, ಕ್ರೈಸ್ತರು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳಿಗೆ ಮಾತ್ರ ಸಿಎಎ ಅನ್ವಯ ಪೌರತ್ವ ನೀಡಲಾಗುತ್ತದೆ. ಪೌರತ್ವ ನೋಂದಣಿ ಪ್ರಕ್ರಿಯೆ ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿಯೇ ಮುಗಿಯಲಿದ್ದು, ದೇಶದಲ್ಲಿರುವ ಮುಸ್ಲಿಮರಿಗೆ ಸಿಎಎಯಿಂದ ಯಾವುದೇ ತೊಂದರೆ ಆಗುವುದಿಲ್ಲ. ಇದನ್ನೂ ಓದಿ: TB ಡ್ಯಾಮ್‌ ಪರಿಶೀಲನೆಗೆ ಬೆಂಗಳೂರು, ಹೈದರಾಬಾದ್‌, ಚೆನ್ನೈನಿಂದ ತಜ್ಞರ ತಂಡ ಆಗಮನ: ತಂಗಡಗಿ 

  • ಪೌರತ್ವ ಪ್ರಮಾಣ ಪತ್ರ ಸಿಕ್ಕರೂ ಜಾತಿ ಪ್ರಮಾಣ ಪತ್ರ ಸಿಗುತ್ತಿಲ್ಲ: ಬಾಂಗ್ಲಾ ವಲಸಿಗರ ಪರದಾಟ

    ಪೌರತ್ವ ಪ್ರಮಾಣ ಪತ್ರ ಸಿಕ್ಕರೂ ಜಾತಿ ಪ್ರಮಾಣ ಪತ್ರ ಸಿಗುತ್ತಿಲ್ಲ: ಬಾಂಗ್ಲಾ ವಲಸಿಗರ ಪರದಾಟ

    ರಾಯಚೂರು: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾಗಿರುವುದರಿಂದ ಬಾಂಗ್ಲಾದೇಶದ ನಿರಾಶ್ರಿತರಿಗೆ ಇಂದಲ್ಲಾ ನಾಳೆ ದೇಶದ ಪೌರತ್ವ ಸಮಸ್ಯೆ ಬಗೆಹರಿಯಲಿದೆ. ಆದರೆ ರಾಯಚೂರು ಜಿಲ್ಲೆಯಲ್ಲಿ ಸುಮಾರು 50 ವರ್ಷದಿಂದ ವಾಸವಿರುವ ಬಾಂಗ್ಲಾ ವಲಸಿಗರಿಗೆ ಇದುವರೆಗೂ ಜಾತಿ ಪ್ರಮಾಣ ಪತ್ರವೇ ಸಿಕ್ಕಿಲ್ಲ. ಇನ್ನೊಂದೆಡೆ ಜಮೀನುಗಳ ನಕ್ಷೆ ಇಲ್ಲದೆ ಇಲ್ಲಿನ ಜನ ನಿರಂತರ ಹೋರಾಟ ನಡೆಸಿದ್ದಾರೆ.

    ಜಿಲ್ಲೆಯ ಸಿಂಧನೂರು ತಾಲೂಕಿನ ಐದು ನಿರಾಶ್ರಿತರ ಪುನರ್ವಸತಿ ಕ್ಯಾಂಪ್‍ಗಳ ನಿವಾಸಿಗಳು ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಿಂದ ತುಂಬಾನೇ ಖುಷಿಯಾಗಿದ್ದಾರೆ. ಇಲ್ಲಿನ ಐದು ಆರ್‌ಎಚ್ ಕ್ಯಾಂಪ್‍ಗಳಲ್ಲಿನ ಸುಮಾರು 7 ಸಾವಿರ ಜನ ಅಕ್ರಮ ವಲಸಿಗರು ಈಗ ಹೊಸದಾಗಿ ಪೌರತ್ವ ಪಡೆಯುತ್ತಿದ್ದಾರೆ. ಆದರೆ ಈ ಹಿಂದೆ ಪೌರತ್ವ ಪಡೆದು 1971ರಿಂದ ಇಲ್ಲೇ ವಾಸಿಸುತ್ತಿರುವ ಸುಮಾರು 25 ಸಾವಿರ ಜನರಿಗೆ ಇದುವರೆಗೂ ಜಾತಿ ಪ್ರಮಾಣ ಪತ್ರ ಸಿಕ್ಕಿಲ್ಲ.

    ಆದಾಯ ಮತ್ತು ಜಾತಿ ಪ್ರಮಾಣ ಪತ್ರದಲ್ಲಿ ಕೇವಲ ಆದಾಯ ತೋರಿಸಿ ಜಾರಿ ಜಾತಿ ಕಾಲಂ ಅನ್ನು ಖಾಲಿ ಬಿಡಲಾಗುತ್ತಿದೆ. ಜಾತಿ ಪ್ರಮಾಣ ಪತ್ರ ಇಲ್ಲದಿರುವುದಕ್ಕೆ ಸಾಕಷ್ಟು ಸೌಲಭ್ಯ, ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ವಿದ್ಯಾರ್ಥಿಗಳು, ರೈತರು ಜಾತಿ ಪ್ರಮಾಣ ಪತ್ರಕ್ಕಾಗಿ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಇಲ್ಲಿ ವಾಸವಿರುವ ಶೇಕಡಾ 60ರಿಂದ 70 ರಷ್ಟು ಜನ ನಮಶೂದ್ರ ಜನಾಂಗಕ್ಕೆ ಸೇರಿದವರಾಗಿದ್ದಾರೆ.

    ಓಡಿಸ್ಸಾ, ಮೇಘಾಲಯ, ಪಶ್ಚಿಮ ಬಂಗಾಳ ಸೇರಿ ಎಂಟು ರಾಜ್ಯಗಳಲ್ಲಿ ನಮಶೂದ್ರ ಜನಾಂಗಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಿದ್ದಾರೆ. ನಮಗೂ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡಬೇಕು ಅಂತ ಹೋರಾಟ ನಡೆಸಿದ್ದಾರೆ. ಇಲ್ಲಿ ವಾಸವಿರುವ ಸುಮಾರು 6 ಸಾವಿರ ಕ್ಷತ್ರಿಯಾ ಜನಾಂಗದವರಿದೆ ಮಾತ್ರ 2ಎ ಪ್ರಮಾಣ ಪತ್ರ ನೀಡಲಾಗಿದೆ.

    ಒಂದೆಡೆ ಜಾತಿ ಪ್ರಮಾಣ ಪತ್ರದ ಸಮಸ್ಯೆಯಾದರೆ, ಇನ್ನೊಂದೆಡೆ ಜಮೀನಿನ ಭಾಗದ ಸಮಸ್ಯೆ ಎದುರಿಸುತ್ತಿದ್ದಾರೆ. ಭಾರತ ಬಾಂಗ್ಲಾ ದೇಶ ವಿಭಜನೆ ಬಳಿಕ ಭಾರತಕ್ಕೆ ಬಂದ ವಲಸಿಗರಿಗೆ ಅಂದಿನ ಸರ್ಕಾರ ಭಾರತ ಪೌರತ್ವವನ್ನು ನೀಡಿ ಸಿಂಧನೂರು ತಾಲೂಕಿನಲ್ಲಿ ಸೌಲಭ್ಯಗಳನ್ನು ಒದಗಿಸಿತು. ತಲಾ 3 ಎಕರೆ ಜಮೀನು, ನಿವೇಶನ ಸಹ ನೀಡಿತ್ತು. ಆದರೆ ಜಮೀನಿನ ನಕ್ಷೆಯಿಲ್ಲದ್ದರಿಂದ ಹೊಲಗಳ ಪೋಡಿಯಾಗುತ್ತಿಲ್ಲ. ತಂದೆಯಿಂದ ಬಂದ ಜಮೀನನ್ನು ಮಕ್ಕಳು ಹಂಚಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಜಮೀನಿನ ಮೇಲೆ ಕೃಷಿ ಸಾಲ ಪಡೆಯಲು ಸಹ ಸಾಧ್ಯವಿಲ್ಲದ ಪರಸ್ಥಿತಿಯಿದೆ.

    ಪೌರತ್ವ ತಿದ್ದುಪಡಿ ಕಾಯಿದೆ ಜಾರಿಯಿಂದ ನಿರಾಶ್ರಿತ ಯೋಜನೆ ಬಳಿಕ ಬಂದ ಬಾಂಗ್ಲಾ ವಲಸಿಗರು ಪಾರಾಗಿದ್ದಾರೆ. ಆದರೆ ಈಗಾಗಲೇ ಪೌರತ್ವ ಪಡೆದು ವಾಸಿಸುತ್ತಿರುವ ವಲಸಿಗ ನಮಶೂದ್ರ ಜನಾಂಗದವರು ಜಾತಿ ಪ್ರಮಾಣ ಪತ್ರವಿಲ್ಲದೆ ಪರಿತಪಿಸುತ್ತಿದ್ದಾರೆ. ನಮಗೇ ಎಸ್‍ಸಿ ಪ್ರಮಾಣ ಪತ್ರ ನೀಡಿ ಅಂತ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಲೇ ಇದ್ದಾರೆ.