Tag: bangkok

  • ಥೈಲ್ಯಾಂಡ್‍ನಲ್ಲಿ ಅಪಘಾತ – ಬೆಂಗ್ಳೂರಿನ ಟೆಕ್ಕಿ ಸಾವು

    ಥೈಲ್ಯಾಂಡ್‍ನಲ್ಲಿ ಅಪಘಾತ – ಬೆಂಗ್ಳೂರಿನ ಟೆಕ್ಕಿ ಸಾವು

    ಬ್ಯಾಂಕಾಕ್: ಥೈಲ್ಯಾಂಡ್‍ನಲ್ಲಿ ನಡೆದ ಅಪಘಾತವೊಂದರಲ್ಲಿ ಬೆಂಗಳೂರಿನ ಟೆಕ್ಕಿ ಮೃತಪಟ್ಟಿದ್ದು, ಆಕೆಯ ಮೃತದೇಹವನ್ನು ಭಾರತಕ್ಕೆ ತರಲು ಪೋಷಕರು ಪರದಾಡುತ್ತಿದ್ದಾರೆ.

    ಪ್ರಜ್ಞಾ ಮೃತಪಟ್ಟ ಯುವತಿ. ಮೂಲತಃ ಮಧ್ಯಪ್ರದೇಶದ ಛಾತ್ರಾಪುರದ ಪ್ರಜ್ಞಾ ಬೆಂಗಳೂರಿನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಥೈಲ್ಯಾಂಡ್‍ನಲ್ಲಿ ಆಯೋಜಿಸಲಾಗಿದ್ದ ಸೆಮಿನಾರ್ ನಲ್ಲಿ ಭಾಗವಹಿಸಲು ಆಕೆಯನ್ನು ಆಹ್ವಾನಿಸಲಾಗಿತ್ತು. ಹೀಗಾಗಿ ಪ್ರಜ್ಞಾ ಆಫೀಸ್‍ನಿಂದ ರಜೆ ಪಡೆದು ಅಕ್ಟೋಬರ್ 7ರಂದು ಥೈಲ್ಯಾಂಡ್‍ಗೆ ಹೋಗಿದ್ದಳು. ಆದರೆ ಅಕ್ಟೋಬರ್ 10ರಂದು ಸೆಮಿನರ್ ಶುರು ಆಗುವ ಮೊದಲೇ ಪ್ರಜ್ಞಾ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಳು.

    ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್‍ನಾಥ್ ಅವರು ಪ್ರಜ್ಞಾ ಸಾವಿಗೆ ಸಂತಾಪ ಸೂಚಿಸಿ, ಆಕೆಯ ಕುಟುಂಬಸ್ಥರಿಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಕಮಲ್‍ನಾಥ್ ಅವರು, ಪ್ರಜ್ಞಾ ಪಾಲಿವಾಲ್ ಅವರ ತರಬೇತಿಯ ಸಮಯದಲ್ಲಿ ಥೈಲ್ಯಾಂಡ್‍ನ ಪುಕೆಟ್‍ನಲ್ಲಿ ನಡೆದ ಅಪಘಾತದ ಸಾವಿನ ಸುದ್ದಿ ತಿಳಿದು ತುಂಬಾ ದುಃಖಕರವಾಗಿದೆ. ಕುಟುಂಬದ ಯಾವುದೇ ಸದಸ್ಯರ ಬಳಿ ಪಾಸ್‍ಪೋರ್ಟ್ ಇಲ್ಲ. ಆದ್ದರಿಂದ ಮೃತದೇಹವನ್ನು ತರುವಲ್ಲಿ ಸಮಸ್ಯೆ ಇದೆ ಎಂದು ಟ್ವೀಟ್ ಮಾಡಿದ್ದಾರೆ.

    ಮತ್ತೊಂದು ಟ್ವೀಟ್‍ನಲ್ಲಿ ಕಮಲ್‍ನಾಥ್, ಪ್ರಜ್ಞಾ ಕುಟುಂಬಸ್ಥರು ಆತಂಕಪಡುವ ಅವಶ್ಯಕತೆ ಇಲ್ಲ. ಸರ್ಕಾರ ನಿಮ್ಮ ಜೊತೆ ಇದೆ. ವಿದೇಶಾಂಗ ಸಚಿವರ ಜೊತೆ ಸರ್ಕಾರ ಮಾತನಾಡಿ ಮೃತದೇಹವನ್ನು ತರಲು ಪ್ರಯತ್ನಿಸುತ್ತೇವೆ. ಕುಟುಂಬದ ಸದಸ್ಯರು ಹೋಗಲು ಬಯಸಿದ್ದರೆ, ಅದಕ್ಕೂ ಸರ್ಕಾರ ಸಂಪೂರ್ಣ ವ್ಯವಸ್ಥೆ ಮಾಡಿಕೊಡುತ್ತೆ ಎಂದು ಟ್ವೀಟ್ ಮಾಡಿದ್ದಾರೆ. ಪ್ರಜ್ಞಾ ಮೃತಪಟ್ಟ ನಂತರ ಆಕೆಯ ಮೃತದೇಹವನ್ನು ತರುವಲ್ಲಿ ಕಂಪನಿಗೆ ಸಹಕರಿಸಲು ಸಾಧ್ಯವಾಗುತ್ತಿಲ್ಲ.

    ಈ ಬಗ್ಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಕೂಡ ಸಹಾಯ ಮಾಡುವುದಾಗಿ ಟ್ವೀಟ್ ಮಾಡಿದ್ದಾರೆ. “ಥೈಲ್ಯಾಂಡ್‍ನ ಭಾರತೀಯ ರಾಯಭಾರ ಕಚೇರಿ ಪ್ರಜ್ಞಾ ಸಂಬಂಧಿಕರೊಂದಿಗೆ ಸಂಪರ್ಕದಲ್ಲಿದೆ. ಅವರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಮಾಡಲು ಪ್ರಯತ್ನಿಸಲಾಗುತ್ತಿದೆ” ಎಂದು ಜೈಶಂಕರ್ ಟ್ವೀಟ್ ಮಾಡಿದ್ದಾರೆ.

  • ತೀರ್ಪು ಹೊರಡಿಸಿ ನ್ಯಾಯಾಲಯದಲ್ಲೇ ಗುಂಡಿಕ್ಕಿಕೊಂಡ ನ್ಯಾಯಾಧೀಶ

    ತೀರ್ಪು ಹೊರಡಿಸಿ ನ್ಯಾಯಾಲಯದಲ್ಲೇ ಗುಂಡಿಕ್ಕಿಕೊಂಡ ನ್ಯಾಯಾಧೀಶ

    ಬ್ಯಾಂಕಾಕ್: ಥಾಯ್ಲೆಂಡ್‍ನ ಕೋರ್ಟ್‍ವೊಂದರಲ್ಲಿ ಗುಂಪು ಘರ್ಷಣೆ ವೇಳೆಯ ಹತ್ಯೆ ಪ್ರಕರಣವೊಂದಕ್ಕೆ ಸಂಬಂಧಿಸಿದ ಮುಸ್ಲಿಂ ಸಮುದಾಯದ ಐವರು ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ಹೊರಡಿಸಿ, ಬಳಿಕ ನ್ಯಾಯಾಧೀಶರು ಸಾರ್ವಜನಿಕರಿಂದ ತುಂಬಿದ್ದ ನ್ಯಾಯಾಲಯದಲ್ಲೇ ಗುಂಡಿಕ್ಕಿಕೊಂಡಿದ್ದಾರೆ.

    ಥಾಯ್ಲೆಂಡ್‍ನ ಯಾಲಾ ಕೋರ್ಟಿನಲ್ಲಿ ಈ ಘಟನೆ ನಡೆದಿದೆ. ಅಲ್ಲಿನ ನ್ಯಾ. ಕಾನಾಕೋರ್ನ್ ಪಿಯಾಂಚಾನಾ ಅವರು ಮುಸ್ಲಿಂ ಸಮುದಾಯದ ಐವರು ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ಹೊರಡಿಸಿ, ಬಳಿಕ ಸಾರ್ವಜನಿಕರಿಂದ ತುಂಬಿದ್ದ ನ್ಯಾಯಾಲಯದಲ್ಲೇ ನಮ್ಮ ಮೇಲೆ ತಾವೇ ಗುಂಡು ಹಾರಿಸಿಕೊಂಡಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರಿಂದ ಅದೃಷ್ಟವಶಾತ್ ನ್ಯಾಯಾಧೀಶರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಕೋರ್ಟಿನ ವಕ್ತಾರ ಸುರಿಯನ್ ಹೊಂಗ್‍ವಿಲ್ಲೈ ಮಾಹಿತಿ ನೀಡಿದ್ದಾರೆ.

    ತಪ್ಪು ಮಾಡಿದರವರಿಗೆ ಶಿಕ್ಷಿಸಲು ನಮಗೆ ನಿಖರ ಹಾಗೂ ಸ್ಪಷ್ಟವಾದ ಸಾಕ್ಷ್ಯಗಳು ಬೇಕು. ಸರಿಯಾದ ಸಾಕ್ಷ್ಯಗಳು ಸಿಗದಿದ್ದರೆ ಆರೋಪಿಗಳಿಗೆ ಶಿಕ್ಷೆ ನೀಡಲು ಆಗುವುದಿಲ್ಲ. ಈ ಐವರು ಆರೋಪಿಗಳು ಅಪರಾಧ ಎಸಗಿಲ್ಲ ಎಂದು ನಾನು ಹೇಳುತ್ತಿಲ್ಲ. ಆದರೆ ಸಾಕ್ಷ್ಯಗಳ ಕೊರತೆಯಿಂದ ಅವರಿಗೆ ಶಿಕ್ಷೆ ನೀಡಲು ಆಗುತ್ತಿಲ್ಲ. ನ್ಯಾಯಾಂಗ ವ್ಯವಸ್ಥೆ ಮತ್ತಷ್ಟು ಹೆಚ್ಚು ಪಾರದರ್ಶಕ ಮತ್ತು ವಿಶ್ವಾಸಾರ್ಹ ಆಗಬೇಕು ಎಂದು ತೀರ್ಪು ಹೊರಡಿಸುವ ಮೊದಲು ನ್ಯಾ. ಕಾನಾಕೋರ್ನ್ ಅಭಿಪ್ರಾಯ ವ್ಯಕ್ತಪಡಿಸಿದ್ದರು.

    ಈ ಪ್ರಕರಣ ಸಂಬಂಧ ನ್ಯಾಯಾಲಯದಲ್ಲಿ ವಾದ ಪ್ರತಿವಾದಗಳು ನಡೆಯುವುದನ್ನೂ ಸೇರಿಸಿ ಎಲ್ಲಾ ಕಲಾಪ ದೃಶ್ಯವನ್ನು ಫೇಸ್‍ಬುಕ್‍ನಲ್ಲಿ ನೇರಪ್ರಸಾರ ಮಾಡಲಾಗುತ್ತಿತ್ತು. ಈ ಹೊಸ ಪ್ರಯತ್ನ ಎಲ್ಲರ ಗಮನ ಸೆಳೆದಿತ್ತು. ಗುಂಪು ಘರ್ಷಣೆ ವೇಳೆಯ ಹತ್ಯೆ ಪ್ರಕರಣ ಕುರಿತು ತೀರ್ಪಿನ ಹೊರಡಿಸಿದ ಬಳಿಕ ನ್ಯಾಯಾಧೀಶರು ಥಾಯ್ಲೆಂಡ್‍ನ ಮಾಜಿ ದೊರೆಯ ಫೋಟೋ ಮುಂದೆ ಪ್ರಮಾಣವನ್ನು ತಾವಾಗೇ ಬೋಧಿಸಿಕೊಂಡು, ಎಲ್ಲರ ಎದುರೇ ತಮ್ಮ ಬಳಿ ಇದ್ದ ಗನ್ ತೆಗೆದುಕೊಂಡು ಗುಂಡು ಹಾರಿಸಿಕೊಂಡಿದ್ದರು.

    ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದು, ನ್ಯಾಯಾಧೀಶರು ವೈಯಕ್ತಿಕ ಒತ್ತಡದಿಂದ ಈ ರೀತಿ ಗುಂಡು ಹಾರಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಇನ್ನೂ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಹೇಳಿದ್ದಾರೆ.

    ಕಳೆದ 15 ವರ್ಷಗಳಲ್ಲಿ ಮಲಯ್ ಸಮುದಾಯ ಮತ್ತು ಮುಸ್ಲಿಂ ಸಮುದಾಯದ ನಡುವಿನ ಘರ್ಷಣೆಗೆ ಥಾಯ್ಲೆಂಡ್‍ನಲ್ಲಿ 7 ಸಾವಿರಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಈ ಕೃತ್ಯದಿಂದ ಸಾವಿರಾರು ಶಂಕಿತರನ್ನು ಜೈಲಿಗೆ ಹಾಕಲಾಗಿದೆ, ಅಲ್ಲದೆ ಅನೇಕ ಪ್ರದೇಶದ ಮೇಲೆ ತುರ್ತು ಕಾನೂನುಗಳ ಅಡಿಯಲ್ಲಿ ನಿರ್ಬಂಧವನ್ನು ಹೇರಲಾಗಿದೆ.

  • ಕಾವೇರಿದ ವಿಧಾನಸಭಾ ಚುನಾವಣೆ: ರಾಹುಲ್ ಗಾಂಧಿ ವಿದೇಶ ಪ್ರವಾಸ

    ಕಾವೇರಿದ ವಿಧಾನಸಭಾ ಚುನಾವಣೆ: ರಾಹುಲ್ ಗಾಂಧಿ ವಿದೇಶ ಪ್ರವಾಸ

    ನವದೆಹಲಿ: ಹರ್ಯಾಣ ಹಾಗೂ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ರಂಗೇರುತ್ತಿದೆ. ಈ ಮಧ್ಯೆ ಕಾಂಗ್ರೆಸ್ ಮುಖಂಡ, ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಬ್ಯಾಂಕಾಕ್ ಪ್ರವಾಸ ಕೈಗೊಂಡು ಅಚ್ಚರಿಸಿ ಮೂಡಿಸಿದ್ದಾರೆ.

    ಕೇಂದ್ರ ಚುನಾವಣಾ ಆಯೋಗವು ಕೆಲ ದಿನಗಳ ಹಿಂದಷ್ಟೇ ಹರ್ಯಾಣ ಹಾಗೂ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಘೋಷಣೆ ಮಾಡಿದೆ. ಈಗಾಗಲೇ ಎಲ್ಲಾ ಪಕ್ಷಗಳು ಹಾಗೂ ಅಭ್ಯರ್ಥಿಗಳು ಚುನಾವಣೆ ಎದುರಿಸಲು ಭರ್ಜರಿ ಸಿದ್ಧತೆ ನಡೆದಿದ್ದಾರೆ. ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ರಾಹುಲ್ ಗಾಂಧಿ ಬ್ಯಾಂಕಾಕ್‍ಗೆ ತೆರಳಿದ್ದಾರೆ.

    ಹರ್ಯಾಣ ಕಾಂಗ್ರೆಸ್‍ನ ಮಾಜಿ ರಾಜ್ಯಾಧ್ಯಕ್ಷ ಅಶೋಕ್ ತನ್ವಾರ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ನಾನು ತೆಗೆದುಕೊಂಡ ನಿರ್ಧಾರ ಸರಿಯಾಗಿದೆ. ನನ್ನ ಹೋರಾಟ ವೈಯಕ್ತಿಕವಲ್ಲ, ಬಲದಲಿಗೆ ಈಗಿನ ಪಕ್ಷದ ವ್ಯವಸ್ಥೆ ವಿರುದ್ಧ ಎಂದು ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಬುಧವಾರ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ನಿವಾಸದ ಎದುರು ಪ್ರತಿಭಟನೆ ನಡೆಸಿದ್ದರು.

    ಇತ್ತ ಮಹಾರಾಷ್ಟ್ರ ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್ ಸಹ ಚುನಾವಣಾ ಪ್ರಚಾರದಿಂದ ದೂರ ಉಳಿಯುತ್ತೇನೆ ಎಂದು ಘೋಷಿಸಿದ್ದಾರೆ. ಎರಡೂ ರಾಜ್ಯಗಳಲ್ಲಿ ಅಲ್ಲಿನ ನಾಯಕರ ನಡುವೆ ಭಿನ್ನಮತ ಹೆಚ್ಚಾಗುತ್ತಿರುವಗಲೇ ರಾಹುಲ್ ಗಾಂಧಿ ವಿದೇಶಕ್ಕೆ ಹಾರಿದ್ದಾರೆ.

    ಎರಡೂ ರಾಜ್ಯಗಳಲ್ಲಿ ಅಕ್ಟೋಬರ್ 21ರಂದು ಮತದಾನ ನಡೆಯಲಿದೆ. ಚುನಾವಣಾ ಪ್ರಚಾರಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿರುವಾಗ ವಿದೇಶಕ್ಕೆ ಹೋಗಿದ್ದು ಎಷ್ಟು ಸರಿ? ಈ ರಾಜ್ಯಗಳ ಮುಖಂಡರ ನಡುವೆ ಭಿನ್ನಾಭಿಪ್ರಾಯಗಳು, ಅಸಮಾಧಾನಗಳನ್ನು ಬಗೆಹರಿಸದೇ ದೂರ ಉಳಿದಿದ್ದು ಯಾಕೆ ಎಂಬ ಪ್ರಶ್ನೆಗಳು ಪಕ್ಷದಲ್ಲಿ ಕೇಳಿ ಬರುತ್ತಿವೆ ಎನ್ನಲಾಗುತ್ತಿದೆ. ಆದರೆ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಪ್ರಶ್ನಿಸಲು ಸಾಧ್ಯವಾಗದೆ ಪಕ್ಷದ ಮುಖಂಡರು ಮೌನವಾಗಿ ಉಳಿದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

  • ಸ್ಪೆಷಲ್ ಟೇಸ್ಟ್​ಗಾಗಿ 45 ವರ್ಷದಿಂದ ಬೇಯುತ್ತಿರುವ ಸೂಪ್

    ಸ್ಪೆಷಲ್ ಟೇಸ್ಟ್​ಗಾಗಿ 45 ವರ್ಷದಿಂದ ಬೇಯುತ್ತಿರುವ ಸೂಪ್

    ಬ್ಯಾಂಕಾಕ್: ವರ್ಷಾನುಗಟ್ಟಲೆ ಮದ್ಯವನ್ನು ಸಂಗ್ರಹಿಸಿಟ್ಟರೆ ಅದರ ರುಚಿ ಚೆನ್ನಾಗಿರುತ್ತೆ ಎನ್ನುವ ಸಂಗತಿ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ. ಆದರೆ ಬ್ಯಾಂಕಾಕಿನ ವಟ್ಟಾನ ಪ್ರದೇಶದಲ್ಲಿರುವ ರೆಸ್ಟೋರೆಂಟ್‍ನಲ್ಲಿ ಸ್ಪೆಷಲ್ ಟೇಸ್ಟ್​ಗಾಗಿ 45 ವರ್ಷಗಳಿಂದ ಸೂಪನ್ನು ಬೇಯಿಸುತ್ತಲೇ ಇದ್ದಾರೆ.

    ಹೌದು. ಈ ವಿಷಯ ಕೇಳಿದರೆ ವಿಚಿತ್ರ ಅನಿಸಬಹುದು. ಆದರೂ ಕೂಡ ಈ ರೀತಿ ಸೂಪ್ ತಯಾರಾಗುತ್ತಿರುವುದು ಸತ್ಯ. ವಟ್ಟಾನದ ಪನೀಚ್ ರೆಸ್ಟೋರೆಂಟ್‍ನಲ್ಲಿ ಈ ರೀತಿ ವಿಶೇಷ ಸೂಪ್ ತಯಾರಿಸಲಾಗುತ್ತೆ. ವರ್ಷಾನುಗಟ್ಟೆಲೆಯಿಂದ ಸೂಪ್ ಬೇಯುತ್ತಿರುವ ಕಾರಣಕ್ಕೆ ಇದರ ರುಚಿ ಬೇರೆ ಸೂಪ್‍ಗಳಿಗಿಂತ ವಿಭಿನ್ನವಾಗಿದೆ. ಆದರಿಂದ ಪನೀಚ್ ರೆಸ್ಟೋರೆಂಟ್ ಸೂಪ್ ಸಖತ್ ಫೇಮಸ್ ಆಗಿದೆ.

    ಪ್ರತಿದಿನ ರೆಸ್ಟೋರೆಂಟ್‍ನಲ್ಲಿ ರಾತ್ರಿ ಉಳಿಯುವ ಸೂಪನ್ನು ಪುನಃ ಬೆಳಿಗ್ಗೆ ಮಾಂಸ ಹಾಗೂ ಇತರೆ ವಸ್ತುಗಳನ್ನು ಹಾಕಿ ಬೇಯಿಸುತ್ತಾರೆ. ಈ ರೀತಿ ಮಾಡುವುದರಿಂದ ಸೂಪಿಗೆ ಟೆಸ್ಟ್ ಬರುತ್ತದೆ ಎಂದು ರೆಸ್ಟೋರೆಂಟ್ ಸಿಬ್ಬಂದಿ ತಿಳಿಸಿದ್ದಾರೆ. ಅಲ್ಲದೆ ಈ ವಿಶಿಷ್ಟ ಸೂಪಿಗೆ ನಿವ್ವಾ ಟ್ಯೂನ್ ಎಂದು ಕರೆಯಲಾಗುತ್ತದೆ. ಈ ಸೂಪ್ ಅಲ್ಲಿನ ಜನಕ್ಕೆ ಹಾಗೂ ಪ್ರವಾಸಿಗರಿಗೆ ಅಚ್ಚುಮೆಚ್ಚಿನ ಸೂಪ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಈ ಸೂಪ್ ಸಿಕ್ಕಾಪಟ್ಟೆ ಫೇಮಸ್. ನಿವ್ವಾ ಟ್ಯೂನ್ ಸೂಪ್ ಸೇವಿಸಿದವರು ಇದರ ರುಚಿಗೆ ಫಿದಾ ಆಗಿಬಿಟ್ಟಿದ್ದಾರೆ.

    ಸಂಗ್ರಹಿಸಿಟ್ಟ ವೈನಿನ ರುಚಿ ಹೇಗೆ ವರ್ಷ ಕಳೆದಂತೆ ಹೆಚ್ಚಾಗುತ್ತದೊ, ಅದೇ ರೀತಿ ಈ ಸೂಪಿನ ರುಚಿ ಕೂಡ ಹೆಚ್ಚಾಗುತ್ತಿದೆ ಎಂದು ಜನರು ಬಾಯಿ ಚಪ್ಪರಿಸಿಕೊಂಡು ಸೂಪ್ ಸವಿದು ಆನಂದಿಸುತ್ತಾರೆ.

  • ಮಗು ಹೂತಿಟ್ಟ ಅಪ್ರಾಪ್ತ ತಾಯಿ – ಕಂದನನ್ನ ಕಾಪಾಡಿ ಹೀರೋ ಆಯ್ತು ಅಂಗವಿಕಲ ನಾಯಿ

    ಮಗು ಹೂತಿಟ್ಟ ಅಪ್ರಾಪ್ತ ತಾಯಿ – ಕಂದನನ್ನ ಕಾಪಾಡಿ ಹೀರೋ ಆಯ್ತು ಅಂಗವಿಕಲ ನಾಯಿ

    ಬ್ಯಾಂಕಾಕ್: ಅಂಗವಿಕಲ ನಾಯಿಯೊಂದು ಅಪ್ರಾಪ್ತ ತಾಯಿಯೊಬ್ಬಳು ಮಣ್ಣಿನಲ್ಲಿ ಹೂತಿಡಲಾಗಿದ್ದ ಜೀವಂತ ನವಜಾತ ಶಿಶುವಿನ ಪ್ರಾಣವನ್ನು ಕಾಪಾಡಿರುವ ಘಟನೆ ಥೈಲ್ಯಾಂಡ್‍ನ ನಾಖೋನ್ ರಾಟ್‍ಛಾಸಿಮಾ ಎಂಬ ಗ್ರಾಮದಲ್ಲಿ ನಡೆದಿದೆ.

    15 ವರ್ಷದ ಅಪ್ರಾಪ್ತೆ ತಾನು ಗರ್ಭಿಣಿಯಾಗಿರುವ ವಿಚಾರವನ್ನು ತನ್ನ ಪೋಷಕರಿಂದ ಮುಚ್ಚಿಡಲು ಈ ರೀತಿ ಮಾಡಿದ್ದು, ಮಗುವನ್ನು ನಾಖೋನ್ ರಾಟ್‍ಛಾಸಿಮಾ ಪ್ರದೇಶದ ತೋಟವೊಂದರಲ್ಲಿ ಹೂತಿಟ್ಟು ಹೋಗಿದ್ದಾಳೆ. ಆಗ ಪಿಂಗ್ ಪಾಂಗ್ ಹೆಸರಿನ ನಾಯಿಯೊಂದು ಮಗುವಿನ ವಾಸನೆ ಗ್ರಹಿಸಿ ತಕ್ಷಣ ಮಣ್ಣನ್ನು ಕೆರೆದು ತೆಗೆಯಲು ಆರಂಭಿಸಿದೆ.

    ಇತ್ತ ಪಿಂಗ್ ಪಾಂಗ್‍ನ ಮಾಲೀಕ ನಾಯಿ ಏಕೆ ರೀತಿ ಮಣ್ಣು ಅಗೆಯುತ್ತಿದೆ ಎಂದು ಹತ್ತಿರ ಹೋಗಿ ನೋಡಿದ್ದಾರೆ. ಆಗ ಮಗುವಿನ ಕಾಲು ಕಾಣಿಸಿಕೊಂಡಿದೆ. ತಕ್ಷಣ ಮಗುವನ್ನು ಹೊರ ತೆಗೆದಿದ್ದಾರೆ. ಬಳಿಕ ಗ್ರಾಮಸ್ಥರೆಲ್ಲ ಸೇರಿಕೊಂಡು ನವಜಾತ ಶಿಶುವನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಮಗುವಿನ ದೇಹವನ್ನು ಸ್ವಚ್ಛಮಾಡಿ ಪರೀಕ್ಷೆ ನಡೆಸಿ ಮಗು ಆರೋಗ್ಯವಾಗಿದೆ ಎಂದು ತಿಳಿಸಿದ್ದಾರೆ.

    ನಾಯಿಯ ಬಗ್ಗೆ ಮಾತನಾಡಿದ ಮಾಲೀಕ, ಕಾರು ಡಿಕ್ಕಿ ಹೊಡೆದ ಬಳಿಕ ಪಿಂಗ್ ಪಾಂಗ್ ಗೆ ಒಂದು ಕಾಲಿನ ಸ್ವಾಧೀನ ಕಳೆದುಕೊಂಡಿದೆ. ಅದು ಹುಟ್ಟಿದಾಗಿನಿಂದ ನಾನೇ ಸಾಕಿ ಬೆಳೆಸಿದ್ದೇನೆ. ನಾನು ಹಸುಗಳನ್ನು ಕರೆದುಕೊಂಡು ತೋಟಕ್ಕೆ ಹೋದಾಗ ನನಗೆ ಯಾವಾಗಲೂ ಸಹಾಯ ಮಾಡುತ್ತದೆ. ತುಂಬಾ ನಿಷ್ಠೆಯಿಂದ ಇರುತ್ತದೆ. ಹೀಗಾಗಿ ಇಡೀ ಗ್ರಾಮದವರು ನಾಯಿಯನ್ನು ಇಷ್ಟಪಡುತ್ತಾರೆ ಎಂದು ತಿಳಿಸಿದ್ದಾರೆ.

    ಈ ಬಗ್ಗೆ ಮಾಹಿತಿ ತಿಳಿದು ಪೊಲೀಸರು ತಾಯಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಿಚಾರಣೆ ವೇಳೆ ತಾಯಿ ತಾನೇ ಮಗುವನ್ನು ಹೂತಿಟ್ಟಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ತಾನೂ ಗರ್ಭಿಣಿಯಾಗಿರುವುದು ತಂದೆಗೆ ಗೊತ್ತಾದರೆ ಹೊಡೆಯುತ್ತಾರೆ ಎಂಬ ಭಯದಿಂದ ಈ ರೀತಿ ಮಾಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ.

    ಸದ್ಯಕ್ಕೆ ಅಪ್ರಾಪ್ತೆ ಪೋಷಕರ ಆರೈಕೆಯಲ್ಲಿದ್ದು, ಮಗುವನ್ನು ನೋಡಿಕೊಳ್ಳುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ಪನುವಾತ್ ಪುಟ್ಟಕಮ್ ತಿಳಿಸಿದ್ದಾರೆ. ಸಾಯುತ್ತಿದ್ದ ನವಜಾತ ಶಿಶುವನ್ನು ಕಾಪಾಡಿದ್ದರಿಂದ ಪಿಂಗ್ ಪಾಂಗ್ಗೆ ಈಗ ಹೀರೋ ಪಟ್ಟ ಸಿಕ್ಕಿದೆ.

  • ಅಂಗರಕ್ಷಕಿಯನ್ನ ಮದುವೆಯಾಗಿ ಮಹಾರಾಣಿಯನ್ನಾಗಿ ಮಾಡಿದ ರಾಜ!

    ಅಂಗರಕ್ಷಕಿಯನ್ನ ಮದುವೆಯಾಗಿ ಮಹಾರಾಣಿಯನ್ನಾಗಿ ಮಾಡಿದ ರಾಜ!

    ಬ್ಯಾಂಕಾಕ್: ಥೈಲ್ಯಾಂಡ್ ಮಹಾರಾಜ ವಜಿರಲೊಂಗ್ ಕಾರ್ನ್ ತಮ್ಮ ಅಂಗರಕ್ಷಕಿ ಯನ್ನೇ ಮದುವೆಯಾಗಿ ಅಚ್ಚರಿ ಮೂಡಿಸಿದ್ದಾರೆ.

    66 ವರ್ಷದ ವಜಿರಲೊಂಗ್ ಕಾರ್ನ್ 40 ವರ್ಷದ ಸುಥಿದಾ ತಿಜಯ್‍ರನ್ನು ಮದುವೆಯಾಗಿದ್ದಾರೆ. ಈ ಬಗ್ಗೆ ರಾಜಭವನ ಅಧಿಕೃತವಾಗಿ ಮಾಹಿತಿಯನ್ನು ನೀಡಿದೆ. ಅಲ್ಲದೇ ಮದುವೆ ಸಂಬಂಧದ ವಿಡಿಯೋವನ್ನು ಬಿಡುಗಡೆ ಮಾಡಿದೆ.

    ಥೈಲ್ಯಾಂಡ್ ರಾಜರಾಗಿ 70 ವರ್ಷ ಆಳ್ವಿಕೆ ನಡೆಸಿದ್ದ ವಜಿರಲೊಂಗ್ ಕಾರ್ನ್ ಅವರ ತಂದೆ 2016ರಲ್ಲಿ ಸಾವನ್ನಪ್ಪಿದ್ದರು. ಆ ಬಳಿಕ ಇವರನ್ನು ರಾಜರನ್ನಾಗಿ ಘೋಷಣೆ ಮಾಡಲಾಗಿತ್ತು. ಸದ್ಯ ಅಧಿಕೃತವಾಗಿ ವಜಿರಲೊಂಗ್ ಕಾರ್ನ್ ಅಧಿಕಾರ ವಹಿಸಿಕೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಮದುವೆಯಾಗಿದ್ದಾರೆ ಎನ್ನಲಾಗಿದೆ.

    ವಜಿರಲೊಂಗ್ ಕಾರ್ನ್ ಅವರಿಗೆ ಈಗಾಗಲೇ 3 ಮದುವೆಯಾಗಿದ್ದು, 7 ಜನ ಮಕ್ಕಳಿದ್ದಾರೆ. ಆದರೆ ಮೂವರು ಪತ್ನಿಯರಿಗೂ ವಜಿರಲೊಂಗ್ ಕಾರ್ನ್ ಅವರಿಗೆ ವಿಚ್ಛೇದನ ನೀಡಿದ್ದು, 4ನೇ ಪತ್ನಿಯಾಗಿ ಅಂಗರಕ್ಷಕಿಯನ್ನು ಮದುವೆಯಾಗಿದ್ದಾರೆ.

    2014 ರಲ್ಲಿ ಸುಥಿದಾ ಅವರು ರಾಜರ ಭದ್ರತಾ ಕಾರ್ಯಕ್ಕೆ ಅಧಿಕಾರಿಯಾಗಿ ಆಯ್ಕೆ ಆಗಿದ್ದರು. ಆ ಬಳಿಕ ಹಲವು ಭಾರೀ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರೂ ಈ ಬಗ್ಗೆ ಎಲ್ಲಿಯೂ ಮಾಹಿತಿ ಬಹಿರಂಗವಾಗಿರಲಿಲ್ಲ. ಉಳಿದಂತೆ ಶನಿವಾರ ಬ್ಯಾಂಕಾಕ್ ನಲ್ಲಿ ಬೌದ್ಧ, ಬ್ರಾಹ್ಮಣ ಸಂಪ್ರದಾಯದ ಅನ್ವಯ ವಜಿರಲೊಂಗ್ ಕಾರ್ನ್ ಕಿಂಗ್ ರಾಮಘಿ ಹೆಸರಿನಲ್ಲಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಬಳಿಕ ಅವರನ್ನು ರಾಜನಾಗಿ ಬೃಹತ್ ಮೆರವಣಿಗೆ ಮಾಡಲಾಗುತ್ತದೆ.

  • 6 ಜನ ಕುಟುಂಬಸ್ಥರನ್ನ ಗುಂಡಿಟ್ಟು ಕೊಂದು, ತಾನೂ ಆತ್ಮಹತ್ಯೆ ಮಾಡ್ಕೊಂಡ

    6 ಜನ ಕುಟುಂಬಸ್ಥರನ್ನ ಗುಂಡಿಟ್ಟು ಕೊಂದು, ತಾನೂ ಆತ್ಮಹತ್ಯೆ ಮಾಡ್ಕೊಂಡ

    ಬ್ಯಾಂಕಾಕ್: ಹೊಸ ವರ್ಷ ಸಂಭ್ರಮಾಚರಣೆಯಲ್ಲಿ ವ್ಯಕ್ತಿಯೋರ್ವ ಕುಡಿದ ನಶೆಯಲ್ಲಿ ತನ್ನ ಇಬ್ಬರು ಮಕ್ಕಳು ಸೇರಿ ಒಟ್ಟು 6 ಮಂದಿಗೆ ಗುಂಡಿಕ್ಕಿ ಕೊಂದು, ಕೊನೆಗೆ ತಾನು ಗುಂಡು ಹೊಡೆದುಕೊಂಡು ಮೃತಪಟ್ಟ ಅಮಾನವೀಯ ಘಟನೆ ಥೈಲ್ಯಾಂಡ್‍ನ ದಕ್ಷಿಣ ಪ್ರಾಂತ್ಯದ ಚುವ್ಫೋನ್‍ನಲ್ಲಿ ಮಂಗಳವಾರ ನಡೆದಿದೆ.

    ಸುಚೀಪ್ ಸಾನ್ರ್ಸುಂಗ್ ಎಂಬ ವ್ಯಕ್ತಿ ಕುಡಿದ ನಶೆಯಲ್ಲಿ ತನ್ನ ಕುಟುಂಬದವರನ್ನೇ ಗುಂಡಿಕ್ಕಿ ಕೊಂದಿದ್ದಾನೆ. ಹೊಸ ವರ್ಷದ ಸಂಭ್ರಮವನ್ನು ಆಚರಿಸಲು ಸುಚೀಪ್ ತನ್ನ ಮಕ್ಕಳು ಹಾಗೂ ಪತ್ನಿಯ ಜೊತೆಗೆ ಆಕೆಯ ತವರು ಮನೆಗೆ ತೆರಳಿದ್ದನು. ಈ ವೇಳೆ ಪತ್ನಿ ಮನೆಯವರು ತನ್ನನ್ನು ಸರಿಯಾಗಿ ಬರಮಾಡಿಕೊಳ್ಳಲಿಲ್ಲ ಎಂದು ಸುಚೀಪ್ ಕೋಪಗೊಂಡಿದ್ದನು. ಇದನ್ನೂ ಓದಿ: 15 ಸೆಕೆಂಡ್‍ನಲ್ಲಿ ಹೋಯ್ತು ಮೂವರ ಪ್ರಾಣ-ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    ಅದೇ ಕೋಪಕ್ಕೆ ಕಂಠ ಪೂರ್ತಿ ಕುಡಿದಿದ್ದ ಸುಚೀಪ್ ನಶೆಯಲ್ಲಿ ತನ್ನ 9 ವರ್ಷದ ಮಗ ಹಾಗೂ 6 ವರ್ಷದ ಮಗಳಿಗೆ ಗುಂಡಿಕ್ಕಿ ಕೊಂದಿದ್ದಾನೆ. ಆಗ ತಡೆಯಲು ಬಂದ ಪತ್ನಿಯ ಇಬ್ಬರು ಸಹೋದರರು ಹಾಗೂ ಇಬ್ಬರು ಮಹಿಳೆಯರಿಗೂ ಗುಂಡು ಹೊಡೆದು ಸಾಯಿಸಿದ್ದಾನೆ. ತದನಂತರ ತಾನು ಕೂಡ ಅದೇ ಗನ್‍ನಿಂದ ಗುಂಡು ಹಾರಿಸಿಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಮನೆಯಲ್ಲಿ ಪಾರ್ಟಿ ಮುಗಿಸಿದ ಬಳಿಕ ಈ ಘಟನೆ ಸಂಭವಿಸಿದ್ದು, ಸುಮಾರು 10 ನಿಮಿಷದಲ್ಲಿ ಸಂಭ್ರಮದಲ್ಲಿದ್ದ ಮನೆ ಸಾವಿನ ಮನೆ ಆಯಿತು.

    ಥೈಲ್ಯಾಂಡ್‍ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಗನ್ ಬಳಸುತ್ತಾರೆ. ಆದರಿಂದ ಈ ಭಾಗದಲ್ಲಿಯೇ ಗುಂಡು ಹೊಡೆದು ಮೃತಪಟ್ಟ ಪ್ರಕರಣಗಳು ಹೆಚ್ಚಾಗಿ ದಾಖಲಾಗೋದು. ಇಲ್ಲಿ ಸಣ್ಣ ಪುಟ್ಟ ವಿಷಯಕ್ಕೂ ಗನ್ ಎತ್ತುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 15 ಸೆಕೆಂಡ್‍ನಲ್ಲಿ ಹೋಯ್ತು ಮೂವರ ಪ್ರಾಣ-ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    15 ಸೆಕೆಂಡ್‍ನಲ್ಲಿ ಹೋಯ್ತು ಮೂವರ ಪ್ರಾಣ-ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    -ಪ್ರೇಯಸಿ, ಗಾರ್ಡ್‍ಗೆ ಗುಂಡು ಹೊಡೆದು ಕೊನೆಗೆ ತಾನು ಹೆಣವಾದ ಭಗ್ನ ಪ್ರೇಮಿ

    ಬ್ಯಾಂಕಾಕ್: ಕೇವಲ 15 ಸೆಕೆಂಡ್‍ನಲ್ಲಿ ಭಗ್ನ ಪ್ರೇಮಿಯೊಬ್ಬನ ಕೈಯಿಂದ ಮೂರು ಮಂದಿ ಹೆಣವಾದ ದಾರುಣ ಘಟನೆ ತೈಲ್ಯಾಂಡ್‍ನ ಲ್ಯಾಂಪಂಗ್ ಪ್ರಾಂತ್ಯದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

    ಮೃತಪಟ್ಟವರನ್ನು ಡಾಮ್ರೊಂಗ್ಚಾಯ್ ಮೊನೊಥಾಮ್(39), ಆತನ ಮಾಜಿ ಪ್ರೇಯಸಿ ಬೂನಿಪೋರ್ನ್ ಕಂತಲಾಹ್(21) ಹಾಗೂ ಸೆಕ್ಯುರಿಟಿ ಗಾರ್ಡ್ ಮೆರಪೊಂಗ್ ಮೋರ್ಪಾ(28) ಎಂದು ಗುರುತಿಸಲಾಗಿದೆ. ಡಾಮ್ರೊಂಗ್ಚಾಯ್ ಹಾಗೂ ಬೂನಿಪೋರ್ನ್ ಇಬ್ಬರು ಒಬ್ಬರನ್ನೊಬ್ಬರು ಪ್ರೀತಿಸುತಿದ್ದರು. ಆದರೆ ಕೆಲವು ದಿನಗಳ ಹಿಂದೆ ಅವರಿಬ್ಬರ ನಡುವೆ ಮನಸ್ತಾಪ ಉಂಟಾಗಿ ಇಬ್ಬರು ದೂರವಾಗಿದ್ದರು. ಇದರಿಂದ ಡಾಮ್ರೊಂಗ್ಚಾಯ್ ಮನನೊಂದಿದ್ದನು. ಆದ್ರೆ ಬೂನಿಪೋರ್ನ್ ಮಾತ್ರ ಎಲ್ಲವನ್ನು ಮರೆತು ಸ್ನೇಹಿತರೊಡನೆ ಪಾರ್ಟಿ ಮಾಡಿಕೊಂಡು ಚೆನ್ನಾಗಿದ್ದಳು.

    ತನ್ನ ಮಾಜಿ ಪ್ರೇಯಸಿ ತನ್ನನ್ನು ಕಡೆಗಣಿಸಿ ಸ್ನೇಹಿತರೊಂದಿಗೆ ಪಾರ್ಟಿ ಮಾಡಿಕೊಂಡು ಸುಖವಾಗಿದ್ದಾಳೆ ಎಂಬ ಕಾರಣಕ್ಕೆ ಡಾಮ್ರೊಂಗ್ಚಾಯ್ ಕೋಪಗೊಂಡಿದ್ದನು. ಅಲ್ಲದೆ ಮಂಗಳವಾರ ರಾತ್ರಿ ಬೂನಿಪೋರ್ನ್ ಸ್ನೇಹಿತರೊಡನೆ ಪಾರ್ಟಿಗೆಂದು ತೆರಳಿದ್ದ ವೇಳೆ ಏಕಾಏಕಿ ಆಕೆಯ ಮೇಲೆ ಡಾಮ್ರೊಂಗ್ಚಾಯ್ ಹಲ್ಲೆ ಮಾಡಿದ್ದಾನೆ. ಮೊದಲು ಆಕೆಯ ಸ್ನೇಹಿತರಿಗೆ ಗನ್ ತೋರಿಸಿ ಹೆದರಿಸಿ ಬೂನಿಪೋರ್ನ್‍ನನ್ನು ಎಳೆದುಕೊಂಡು ಹೋಗಿದ್ದಾನೆ. ಆ ನಂತರ ಕೆಲ ಕಾಲ ಅವರಿಬ್ಬರ ನಡುವೆ ವಾಗ್ವಾದ ನಡೆದಿದೆ.

    ಮೊದಲೇ ಕೋಪದಲ್ಲಿದ್ದ ಡಾಮ್ರೊಂಗ್ಚಾಯ್‍ಗೆ ಬೂನಿಪೋರ್ನ್ ತನ್ನ ಬಳಿ ವರ್ತಿಸಿದ್ದು ಇಷ್ಟವಾಗಲಿಲ್ಲ. ಆದರಿಂದ ಆಕೆಗೆ ಶೂಟ್ ಮಾಡಿ ಕೊಲೆ ಮಾಡಿದ್ದಾನೆ. ಬಳಿಕ ಆಕೆಯನ್ನು ರಕ್ಷಿಸಲು ಬಂದ ಸೆಕ್ಯುರಿಟಿ ಗಾರ್ಡ್‍ಗೆ ಕೂಡ ಗುಂಡು ಹೊಡೆದು ಕೊಂದಿದ್ದಾನೆ. ತದನಂತರ ತಾನು ಕೂಡ ಶೂಟ್ ಮಾಡಿಕೊಂಡು ಮೃತಪಟ್ಟಿದ್ದಾನೆ. ಹೀಗೆ ಕೇವಲ 15 ಸೆಕೆಂಡ್‍ಗಳಲ್ಲಿ ಮೂವರ ಪ್ರಾಣ ಹೋಗಿದೆ. ಡಾಮ್ರೊಂಗ್ಚಾಯ್ ಕೋಪಕ್ಕೆ ಅವನ ಜೊತೆಗೆ ಇಬ್ಬರು ಅನ್ಯಾಯವಾಗಿ ಜೀವ ಕಳೆದುಕೊಂಡಿದ್ದಾರೆ.

    https://www.youtube.com/watch?v=8cb-MF8G3eE

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮತ್ತೆ ಬಿಕಿನಿ ತೊಟ್ಟು ಕಿರಿಕ್ ಹುಡುಗಿಯಿಂದ ಹಾಟ್ ಸಂದೇಶ..!

    ಮತ್ತೆ ಬಿಕಿನಿ ತೊಟ್ಟು ಕಿರಿಕ್ ಹುಡುಗಿಯಿಂದ ಹಾಟ್ ಸಂದೇಶ..!

    ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಒಂದಿಲ್ಲೊಂದು ಫೋಟೋ, ವಿಡಿಯೋ ಹಾಕಿ ಕಿರಿಕ್ ಪಾರ್ಟಿ ಬೆಡಗಿ ಸಂಯುಕ್ತಾ ಹೆಗ್ಡೆ ಸದ್ದು ಮಾಡುತ್ತಲೇ ಇರುತ್ತಾರೆ. ಇತ್ತೀಚೆಗಷ್ಟೆ ಬ್ಯಾಂಕಾಕ್‍ನಲ್ಲಿ ಗೆಳೆಯನ ಜೊತೆಗೆ ಬಿಕಿನಿ ಡ್ರೆಸ್‍ನಲ್ಲಿ ಕಾಣಿಸಿಕೊಂಡಿದ್ದರು. ಈಗ ಮತ್ತೆ ಬಿಕಿನಿ ಫೋಟೋ ಹಾಕಿದ್ದು, ಖಡಕ್ ಸಂದೇಶ ರವಾನಿಸಿದ್ದಾರೆ.

    ನಟಿ ಸಂಯುಕ್ತಾ ಹೆಗ್ಡೆ ಕಳೆದ ಕೆಲವು ದಿನಗಳಿಂದ ಬ್ಯಾಂಕಾಕ್ ರಸ್ತೆ, ಬೀಚ್‍ನಲ್ಲಿ ನಿಂತು ಹಾಟ್ ಹಾಟ್ ಆಗಿ ಫೋಟೋಗೆ ಪೋಸ್ ಕೊಟ್ಟಿದ್ದು, ಅವುಗಳನ್ನು ಇನ್ ಸ್ಟಾಗ್ರಾಮ್‍ನಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. ಈಗ ಹೊಸದಾಗಿ ಬಿಕಿನಿಯಲ್ಲಿ ಸ್ವಿಮ್ಮಿಂಗ್ ಪೂಲ್ ನಲ್ಲಿ ನಿಂತಿರುವ ಫೋಟೋ ಹಾಗೂ ಮಲಗಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.

    https://www.instagram.com/p/BrUM-bNFNMY/

    ಸಂಯುಕ್ತಾ ಫೋಟೋ ಜೊತೆಗೆ, “ಜನರ ಅಭಿಪ್ರಾಯವನ್ನು ಬದಲಾಯಿಸಲು ಹೋಗಿ ನಿಮ್ಮ ಶಕ್ತಿಯನ್ನು ವ್ಯರ್ಥ ಮಾಡಬೇಡಿ. ನಿಮ್ಮ ಕೆಲಸವನ್ನು ನೀವು ಮಾಡಿ. ಅದನ್ನು ಬೇರೆಯವರು ಇಷ್ಟಪಡುತ್ತಾರೋ ಇಲ್ಲವಾ ಎನ್ನುವುದರ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ. ನಿಮಗಾಗಿ ನೀವು ಬದುಕಿ” ಎಂದು ಬರೆದುಕೊಂಡಿದ್ದಾರೆ. ಸಂಯುಕ್ತಾ ಹೆಗ್ಡೆ ತನ್ನ ಬಿಕಿನಿ ಫೋಟೋ ಪೋಸ್ಟ್ ಮಾಡುತ್ತಿದ್ದಂತೆಯೇ ಪರ ವಿರೊಧ ಕಮೆಂಟ್ ಗಳು ಬರುತ್ತಿವೆ.

    ಈ ಹಿಂದೆ ಇದು ಬ್ಯಾಂಕಾಕ್ ಪ್ರವಾಸದ ಮೊದಲನೇ ದಿನ. ಪ್ರವಾಸದಲ್ಲಿನ ಸಂತೋಷ (ಹ್ಯಾಪಿನೆಸ್ ಇನ್ ಟ್ರಾವೆಲಿಂಗ್) ಎಂದು ಬರೆದು ಬ್ಯಾಂಕಾಕ್ ಪ್ರವಾಸದ ಮೊದಲ ಫೋಟೋ ಹಂಚಿಕೊಂಡಿದ್ದರು. ಮಾರನೇ ದಿನ ಸಮುದ್ರದ ಉಪ್ಪು ನೀರಿನಿಂದಾಗಿ ಸೌಂದರ್ಯ ಹಾಳಾಗಿದ್ದಕ್ಕೆ `ಇಟ್ಸ್ ಎಫೆಕ್ಟ್ ಆಫ್ ಬೀಚ್’ ಅಂತಾ ಹೇಳಿಕೊಂಡಿದ್ದಾರೆ. ಇದರ ಜೊತೆಯಲ್ಲೇ ಯುವಕನೊಂದಿಗೆ ಬೋಟ್‍ನಲ್ಲಿ ಕುಳಿತಿರುವ ಫೋಟೋ ಕೂಡ್ ಅಪ್ಲೋಡ್ ಮಾಡಿದ್ದರು.

    https://www.instagram.com/p/BrXC1hqF3Iw/

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಆಫೀಸಿಗೆ ನುಗ್ಗಿದ 12 ಅಡಿ ಉದ್ದದ ಹೆಬ್ಬಾವು ಹಿಡಿಯಲು ಹರಸಾಹಸ- ವಿಡಿಯೋ ನೋಡಿ

    ಆಫೀಸಿಗೆ ನುಗ್ಗಿದ 12 ಅಡಿ ಉದ್ದದ ಹೆಬ್ಬಾವು ಹಿಡಿಯಲು ಹರಸಾಹಸ- ವಿಡಿಯೋ ನೋಡಿ

    ಬ್ಯಾಕಾಂಕ್: ಬೆಳಗ್ಗಿನ ಶಿಫ್ಟ್ ಗೆ ಕೆಲಸ ಮಾಡಲು ಫ್ಯಾಕ್ಟರಿಗೆ ಬಂದಿದ್ದ ಸಿಬ್ಬಂದಿ 12 ಅಡಿ ಉದ್ದದ ಹೆಬ್ಬಾವನ್ನು ನೋಡಿ ಬಿಚ್ಚಿಬಿದ್ದ ಘಟನೆ ಥೈಲ್ಯಾಂಡಿನಲ್ಲಿ ನಡೆದಿದೆ.

    ಥೈಲ್ಯಾಂಡ್‍ನ ಚೋಂಬುರಿಯಲ್ಲಿರುವ ಫ್ಯಾಕ್ಟರಿಯ ಕಾಪೌಂಡ್ ಮೇಲೆ ಕಳೆದ ಗುರುವಾರ ಹೆಬ್ಬಾವು ಮಲಗಿತ್ತು. ಬೆಳಗಿನ ಶಿಫ್ಟ್ ಗೆ ಆಗಮಿಸಿದ ಸಿಬ್ಬಂದಿ ಕಾಪೌಂಡ್ ಮೇಲೆ ಮಲಗಿರುವ ಹೆಬ್ಬಾವನ್ನು ನೋಡಿ ಗಾಬರಿಗೊಂಡಿದ್ದಾರೆ.

    ಹೆಬ್ಬಾವು 12 ಅಡಿ ಉದ್ದವಿದ್ದು, 30ರಿಂದ 40 ಕೆ.ಜಿ ತೂಕವಿತ್ತು. ಈ ಹಾವನ್ನು ನೋಡಿ ಅಲ್ಲಿನ ಸಿಬ್ಬಂದಿ ಏನೂ ಮಾಡಬೇಕು ಎಂದು ತಿಳಿಯದೇ ಹಾವು ಹಿಡಿಯುವವರನ್ನು ಕರೆಸಿದರು. ನಂತರ ಹಾವು ಹಿಡಿಯುವವರು ಆಗಮಿಸಿ ಹೆಬ್ಬಾವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

    ಹೆಬ್ಬಾವನ್ನು ಹಿಡಿಯಲು ಹರಸಾಹಸ ಪಡಲಾಗಿದ್ದು, ಯಾರಿಗೂ ಯಾವುದೇ ರೀತಿಯ ಅಪಾಯವಾಗಿಲ್ಲ ಎಂದು ವರದಿಯಾಗಿದೆ. ಹೆಬ್ಬಾವನ್ನು ಹಿಡಿಯುತ್ತಿರುವ ವಿಡಿಯೋವನ್ನು ಅಲ್ಲಿನ ಸಿಬ್ಬಂದಿ ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದು, ಈ ವಿಡಿಯೋ ಇದೀಗ ವೈರಲ್ ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv