Tag: Bangaluru

  • ಕಿಸ್ ಕೊಟ್ರೆ ಮಾತ್ರ ಬೈಕಿಂದ ಇಳಿಸ್ತೀನಿ- ಬೀದಿ ಕಾಮಣ್ಣನ ವಿರುದ್ಧ ಕೇಸ್

    ಕಿಸ್ ಕೊಟ್ರೆ ಮಾತ್ರ ಬೈಕಿಂದ ಇಳಿಸ್ತೀನಿ- ಬೀದಿ ಕಾಮಣ್ಣನ ವಿರುದ್ಧ ಕೇಸ್

    ಬೆಂಗಳೂರು: ಡ್ರಾಪ್ ಕೊಡುವುದಾಗಿ ಬೈಕಿನಲ್ಲಿ ಕರೆದುಕೊಂಡು ಹೋಗಿ ದಾರಿ ಮಧ್ಯದಲ್ಲಿ ಬೈಕ್ ನಿಲ್ಲಿಸಿ, ನನಗೆ ಕಿಸ್ ಕೊಟ್ಟರೆ ಮಾತ್ರ ಬೈಕ್‍ನಿಂದ ಇಳಿಸುವುದಾಗಿ ಕಾಮುಕನೊಬ್ಬ ದುಂಬಾಲು ಬಿದ್ದಿದ್ದ ಘಟನೆ ವಿಜ್ಞಾನ ನಗರದಲ್ಲಿ ನಡೆದಿದೆ.

    ಕಳೆದ ಮೂರು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಯುವತಿ ಹೆಚ್‍ಎಎಲ್ ಬಸ್ ನಿಲ್ದಾಣದಿಂದ ನಡೆದುಕೊಂಡು ಹೋಗುತ್ತಿದ್ದಳು. ಆಗ ಅಪರಿಚಿತ ಯುವಕನೊಬ್ಬ ಬಂದು, ನಾನು ಅದೇ ರೂಟ್‍ನಲ್ಲಿ ಹೋಗುತ್ತಿದ್ದೇನೆ. ಹೀಗಾಗಿ ವಿಜ್ಞಾನನಗರ ಬಿಡುವುದಾಗಿ ಒತ್ತಾಯ ಪೂರ್ವಕವಾಗಿ ಬೈಕ್ ಹತ್ತಿಸಿಕೊಂಡಿದ್ದಾನೆ.

    ಎರಡು ಮೂರು ಕಿಲೋಮೀಟರ್ ತನಕ ಕರೆದುಕೊಂಡು ಹೋಗಿ ದಾರಿ ಮಧ್ಯದಲ್ಲಿ ಬೈಕ್ ನಿಲ್ಲಿಸಿದ್ದಾನೆ. ಯುವತಿ ಏಕಾಏಕಿ ದಾರಿ ಮಧ್ಯ ಬೈಕ್ ನಿಲ್ಲಿಸಿದ್ದನ್ನ ಕಂಡು ಯುವಕನಿಗೆ ಪ್ರಶ್ನಿಸಿದ್ದಾಳೆ. ಆಗ ಯುವಕ ನಾನು ಮದ್ಯಪಾನ ಮಾಡಿದ್ದೀನಿ, ನನಗೆ ನೀನು ಕಿಸ್ ಕೊಡಲೇಬೇಕೆಂದು ದುಂಬಾಲು ಬಿದ್ದಿದ್ದಾನೆ. ಕಾಮುಕ ಯುವಕನ ವರ್ತನೆಯಿಂದ ಭಯಬೀತಗೊಂಡ ಯುವತಿ ರಸ್ತೆ ಮಧ್ಯದಲ್ಲೇ ಚಿರಾಡಲು ಶುರು ಮಾಡಿದ್ದಾಳೆ. ಯುವತಿ ಕಿರುಚಾಡಲು ಆರಂಭಿಸುತ್ತಿದ್ದಂತೆ ಯುವತಿಯನ್ನ ಬಿಟ್ಟು ಅಲ್ಲಿಂದ ಯುವಕ ಎಸ್ಕೇಪ್ ಆಗಿದ್ದಾನೆ.

    ಕಾಮುಕನ ವರ್ತನೆಯಿಂದ ಆತಂಕಗೊಂಡಿದ್ದ ಯುವತಿ ಸ್ನೇಹಿತೆಯ ಸಹಾಯದಿಂದ ಹೆಚ್‍ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ದೂರಿನಲ್ಲಿ ಯುವತಿ ಟಿವಿಎಸ್  ಕಂಪನಿಯ ಐಡಿ ಕಾರ್ಡ್ ಧರಿಸಿಕೊಂಡಿದ್ದ ಎಂಬ ಮಾಹಿತಿ ನೀಡಿದ್ದಾಳೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ರೋಡ್ ರೋಮಿಯೋಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

  • ನಂಗೆ ವಯಸ್ಸು 30, ಇಬ್ಬರು ಮಕ್ಕಳಿದ್ದಾರೆ ಎಂದ ಪ್ರಿಯಾಂಕಾ

    ನಂಗೆ ವಯಸ್ಸು 30, ಇಬ್ಬರು ಮಕ್ಕಳಿದ್ದಾರೆ ಎಂದ ಪ್ರಿಯಾಂಕಾ

    ಬೆಂಗಳೂರು: ‘ಬಿಗ್‍ಬಾಸ್ ಸೀಸನ್ 7’ ರ ಸ್ಪರ್ಧಿ ಪ್ರಿಯಾಂಕಾ ನನಗೆ ವಯಸ್ಸು 30 ಆಗಿದೆ. ಜೊತೆಗೆ ನನಗೆ ಇಬ್ಬರು ಮಕ್ಕಳಿದ್ದಾರೆ ಎಂಬ ಅಚ್ಚರಿ ಹೇಳಿಕೆಯನ್ನು ಕೊಟ್ಟಿದ್ದಾರೆ.

    ಹೌದು..ಬಿಗ್‍ಬಾಸ್ ನೀಡಿದ್ದ ಒಂದು ವಿಶೇಷ ಚಟುವಟಿಕೆಗಾಗಿ ಪ್ರಿಯಾಂಕಾ ಈ ರೀತಿ ಸುಳ್ಳು ಹೇಳಿದ್ದಾರೆ. ಗುರುವಾರ ಪ್ರಸಾರವಾದ ಸಂಚಿಕೆಯಲ್ಲಿ ಬಿಗ್‍ಬಾಸ್ ಮನೆಯ ಸದಸ್ಯರಿಗೆ ಒಂದು ವಿಶೇಷ ಚಟುವಟಿಕೆಯನ್ನು ನೀಡಿತ್ತು. ಅದೇನೆಂದರೆ ಮನೆಯ ಕ್ಯಾಪ್ಟನ್ ಹರೀಶ್ ರಾಜ್ ಒಂದು ಚಾಟ್ ಶೋ ನಡೆಸಿಕೊಡಬೇಕಿತ್ತು. ಅದರಲ್ಲಿ ಹರೀಶ್ ರಾಜ್ ನಿರೂಪಕರಾಗಿದ್ದು, ಮನೆಯ ಇತರೆ ಸದಸ್ಯರಿಗೆ ಪ್ರಶ್ನೆ ಕೇಳಬೇಕಿತ್ತು. ಆ ಪ್ರಶ್ನೆಗಳಿಗೆ ಮನೆಯ ಸದಸ್ಯರು ಸುಳ್ಳು ಉತ್ತರವನ್ನೇ ನೀಡಬೇಕಿತ್ತು.

    ಆಗ ಪ್ರಿಯಾಂಕಾಗೆ, ನೀವು ತುಂಬಾ ಒಳ್ಳೆಯ ನಟಿ ಎಂದು ಹರೀಶ್ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಪ್ರಿಯಾಂಕಾ, ಅಯ್ಯೋ ನಾನು ಇಲ್ಲಿಯವರೆಗೂ ಏನೂ ಮಾಡೇ ಇಲ್ಲ ಎಂದಿದ್ದಾರೆ. ಇನ್ನೂ ನಿಮಗೆ ಮದುವೆನೇ ಆಗಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕಾ, ನನ್ನ ವಯಸ್ಸು 30, ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ ಎಂದು ಸುಳ್ಳು ಹೇಳಿದ್ದಾರೆ.

    ಇದೇ ವೇಳೆ ನಿಮಗೆ ಹುಬ್ಬು ಏರಿಸುವುದು ತುಂಬಾನೇ ಇಷ್ಟ ಎಂಬ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಪ್ರಿಯಾಂಕಾ, ನನಗೆ ಹುಬ್ಬು ಏರಿಸಲು ಸ್ವಲ್ಪನೂ ಇಷ್ಟವಿಲ್ಲ. ನನಗೆ ನಟನೆ ಮಾಡಲು ಬರಲ್ಲ. ಆದರೆ ವಿಲನ್ ಪಾತ್ರ ಮಾಡಬೇಕಿತ್ತು. ಹೀಗಾಗಿ ಹುಬ್ಬು ಏರಿಸುತ್ತೀನಿ ಎಂದು ಸುಳ್ಳಿನ ಕಥೆಯನ್ನೇ ಹೇಳಿದ್ದಾರೆ.

  • ಹಿರಿಯ ಸಾಹಿತಿ, ಚಿಂತಕ ಪ್ರೊ. ಎಲ್.ಎಸ್ ಶೇಷಗಿರಿರಾವ್ ಇನ್ನಿಲ್ಲ

    ಹಿರಿಯ ಸಾಹಿತಿ, ಚಿಂತಕ ಪ್ರೊ. ಎಲ್.ಎಸ್ ಶೇಷಗಿರಿರಾವ್ ಇನ್ನಿಲ್ಲ

    ಬೆಂಗಳೂರು: ಹಿರಿಯ ಸಾಹಿತಿ ಹಾಗೂ ಚಿಂತಕ ಪ್ರೊ. ಎಲ್.ಎಸ್ ಶೇಷಗಿರಿ ರಾವ್(95) ಇಂದು ಕೊನೆಯುಸಿರೆಳೆದಿದ್ದಾರೆ. ಶೇಷಗಿರಿರಾವ್ ಅವರು ಕಳೆದ ಒಂದು ತಿಂಗಳಿನಿಂದ ಅನಾರೋಗ್ಯ ಪೀಡಿತರಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು, ಇಂದು ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ.

    1925 ಫೆಬ್ರವರಿ 16ರಂದು ಧಾರವಾಡ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಜನಿಸಿದ್ದ ಇವರು ಕನ್ನಡ ಕ್ಷೇತ್ರದಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದರು. ಪುಸ್ತಕ ಪ್ರಾಧಿಕಾರದ ಪ್ರಥಮಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 2007ರಲ್ಲಿ ಉಡುಪಿಯಲ್ಲಿ ನಡೆದ 74ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಯಶಸ್ವಿಯಾದ ಕಾರ್ಯಕ್ರಮ ನಡೆಸಿದ್ದ ಹೆಮ್ಮೆ ಇವರದ್ದಾಗಿದೆ.

    ಶೇಷಗಿರಿರಾವ್ ಅವರ ಪ್ರಮುಖ ಕೃತಿಗಳೆಂದರೆ ಆಲಿವರ್ ಗೋಲ್ಡ್ ಸ್ಮಿತ್, ಪಾಶ್ಚಾತ್ಯ ಸಾಹಿತ್ಯ, ಇಂಗ್ಲಿಷ್ ಸಾಹಿತ್ಯ ಚರಿತ್ರೆ ಇತ್ಯಾದಿ. ಇವರಿಗೆ ವರ್ಧಮಾನ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ.

    ಇವರ ಪಾರ್ಥಿವ ಶರೀರವನ್ನು ಜೆಪಿ ನಗರದ ನಿವಾಸದಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ಇಡಲಾಗಿದ್ದು, ಹಿರಿಯ ಸಾಹಿತಿಯ ಅಗಲಿಕೆಗೆ ಸಿಎಂ ಯಡಿಯೂರಪ್ಪ, ಎಸ್.ಎಂ ಕೃಷ್ಣ ಸೇರಿದಂತೆ ಹಲವು ರಾಜಕೀಯ ಗಣ್ಯರು ಹಾಗೂ ಸಾಹಿತಿಗಳು ಸಂತಾಪ ಸೂಚಿಸಿದ್ದಾರೆ.

    ಸಣ್ಣ ಕಥೆಯೊಂದಿಗೆ ಸಾಹಿತ್ಯ ಕೃಷಿ ಆರಂಭಿಸಿದ ಎಲ್‍ಎಸ್‍ಎಸ್ ಅವರು ಮಕ್ಕಳ ಸಾಹಿತ್ಯ, ವಿಮರ್ಶೆ ಹಾಗೂ ಎಲ್ಲಕ್ಕೂ ಮಿಗಿಲಾಗಿ ನಿಘಂಟು ಕರ್ತೃವಾಗಿ ಕನ್ನಡ ಭಾಷೆ, ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಅನನ್ಯವಾದುದು. ಸರಳತೆ, ಸಜ್ಜನಿಕೆಯೇ ಮೂರ್ತಿಯಂತಿದ್ದ ಶೇಷಗಿರಿರಾಯರ ನಿಧನದಿಂದ ಕನ್ನಡ ಸಾರಸ್ವತ ಲೋಕದ ನಕ್ಷತ್ರವೊಂದು ಮರೆಯಾಯಿತು ಎಂದು ಮುಖ್ಯಮಂತ್ರಿಗಳು ವಿಷಾದ ವ್ಯಕ್ತಪಡಿಸಿದ್ದಾರೆ.

    ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ, ಅವರ ಕುಟುಂಬದವರು, ಅಭಿಮಾನಿಗಳಿಗೆ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

  • ಗಾಂಜಾಗೆ 50 ರೂ. ನೀಡದ್ದಕ್ಕೆ 16ರ ಬಾಲಕ ಬರ್ಬರ ಕೊಲೆ

    ಗಾಂಜಾಗೆ 50 ರೂ. ನೀಡದ್ದಕ್ಕೆ 16ರ ಬಾಲಕ ಬರ್ಬರ ಕೊಲೆ

    ಬೆಂಗಳೂರು: ಗಾಂಜಾಗೆ 50 ರೂ. ಕೊಟ್ಟಿಲ್ಲ ಎಂದು ಚಾಕುವಿನಿಂದ ಇರಿದು ಬಾಲಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದ ಡಿಜೆ ಹಳ್ಳಿಯಲ್ಲಿ ನಡೆದಿದೆ.

    ಡಿಜೆ ಹಳ್ಳಿಯ ಮೋದಿ ರಸ್ತೆ ಬಳಿ ಘಟನೆ ನಡೆದಿದ್ದು, ಮಹಮ್ಮದ್ ವಾಸಿಂ (16)ಕೊಲೆಯಾದ ಬಾಲಕ. ಮೂವರು ದುಷ್ಕರ್ಮಿಗಳು ಮಹಮ್ಮದ್ ವಾಸಿಂ ಎದೆಗೆ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

    ಬಾಲಕ ಬೇಕರಿಯಲ್ಲಿ ಕೆಲಸ ಮುಗಿಸಿ ಮರಳುತ್ತಿದ್ದ. ವೇಳೆ ಮೂವರು ದುಷ್ಕರ್ಮಿಗಳು ಗಾಡಿಯಲ್ಲಿ ಬಂದಿದ್ದಾರೆ. ವಾಸಿಂನನ್ನು ರಸ್ತೆಯಲ್ಲೇ ಅಡ್ಡಗಟ್ಟಿ ಗಾಂಜಾಗೆ ಹಣ ಕೇಳಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಹಾಗೂ ವಾಸಿಂ ನಡುವೆ ಮಾತಿನ ಚಕಮಕಿ ನಡೆದಿದ್ದು, ಬಾಲಕ ಹಣ ಇಲ್ಲ ಎಂದು ಪಕ್ಕಕ್ಕೆ ಹೋಗಿದ್ದಾನೆ. ಆಗ ಬೈಕಿನಿಂದ ಇಳಿದು ಚಾಕು ಚಾಕುವಿನಿಂದ ಇರಿದು ಕೊಲೆಗೈದಿದ್ದಾರೆ.

    ಬಾಲಕ ಮಹಮ್ಮದ್ ವಾಸಿಂ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ. ಬೇಕರಿಯಿಂದ ಮನೆಗೆ ಹೋಗಬೇಕಾದಾಗ ರಸ್ತೆಯಲ್ಲಿ ಅಡ್ಡ ನಿಲ್ಲಿಸಿ ಹಣ ಕೇಳಿ ಕೊಲೆ ಮಾಡಿದ್ದಾರೆ. ಕೊಲೆ ಮಾಡಿ ಮೂವರು ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಪೂರ್ವ ವಿಭಾಗ ಡಿಸಿಪಿ ಡಾ.ಶರಣಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ದೀಪಾವಳಿ ಅಂದಾಕ್ಷಣ ನೆನಪಾಗುವ ಹೊಸೂರಿನ ಪಟಾಕಿ ಸಂತೆ

    ದೀಪಾವಳಿ ಅಂದಾಕ್ಷಣ ನೆನಪಾಗುವ ಹೊಸೂರಿನ ಪಟಾಕಿ ಸಂತೆ

    ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ ಅಂದಾಕ್ಷಣ ಸಿಲಿಕಾನ್ ಸಿಟಿ ಮಂದಿಗೆ ನೆನಪಾಗೋದು ಹೊಸೂರು. ಯಾಕೆಂದರೆ ಇಲ್ಲಿ ಸಿಗುವ ವಿಧವಿಧವಾದ ಪಟಾಕಿ ಬೆಂಗಳೂರು ಮಂದಿಗೆ ಅಚ್ಚುಮೆಚ್ಚು. ಹಬ್ಬದ ಸಮಯದಲ್ಲಂತೂ ಇಲ್ಲಿ ಒಂದು ರೀತಿ ಪಟಾಕಿ ಜಾತ್ರೆಯೇ ನಡೆಯುತ್ತದೆ ಎನ್ನಬಹುದು.

    ಹೌದು. ಬೆಂಗಳೂರಿನ ಗಡಿ ಭಾಗದಲ್ಲಿರೋ ಹೊಸೂರಿನಲ್ಲಿ ದೀಪಾವಳಿ ಹಿನ್ನೆಲೆ ಪಟಾಕಿಗಳ ವ್ಯಾಪಾರ ಜೋರಾಗಿಯೇ ನಡೆಯುತ್ತೆ. ದೀಪಾವಳಿಗೆ ಹೊಸ ಬಟ್ಟೆ ಹಾಕಿಕೊಂಡು, ದೇವರ ಪೂಜೆ ಮಾಡಿ, ಸಿಹಿ ಸಿಹಿತಿಂಡಿ ತಿಂದು ಸಂಜೆ ಮೇಲೆ ಪಟಾಕಿ ಸಿಡಿಸುತ್ತಾರೆ. ಪಟಾಕಿ ಸಿಡಿಸಿದರೇನೆ ದೀಪಾವಳಿ ಹಬ್ಬಕ್ಕೆ ಒಂದು ಕಳೆ ಎಂದು ಸಾಕಷ್ಟು ಮಂದಿ ಸಾಮಾನ್ಯವಾಗಿ ಹೇಳುತ್ತಾರೆ. ಹೀಗಾಗಿ ಹಬ್ಬಕ್ಕೆ ಪಟಾಕಿ ಖರೀದಿಸುವ ಸಿಲಿಕಾನ್ ಸಿಟಿ ಮಂದಿ ಹೆಚ್ಚಾಗಿ ಹೊಸೂರಿಗೆ ಹೋಗುತ್ತಾರೆ. ಯಾಕಂದರೆ ಹೊಸೂರಿನಲ್ಲಿ ವಿವಿಧ ಪಟಾಕಿಗಳ ಮಳಿಗೆಗಳು ಸಂತೆಯೆಂತೆ ಇರುತ್ತೆ. ಇದನ್ನೂ ಓದಿ:ಅಯೋಧ್ಯೆಯಲ್ಲಿ 5.51 ಲಕ್ಷ ದೀಪ ಬೆಳಗಿಸಿ ಗಿನ್ನಿಸ್ ರೆಕಾರ್ಡ್

    ದೀಪಾವಳಿ ಪ್ರಯಕ್ತ ಹೊಸೂರಿನಲ್ಲಿ ಪಟಾಕಿ ಸಂತೆಯೇ ನಡೆಯುತ್ತೆ. ಆದರೆ ಈ ಬಾರಿ ಹಬ್ಬ ತಿಂಗಳ ಕೊನೆಯಲ್ಲಿ ಬಂದಿರುವುದರಿಂದ ಸದ್ಯಕ್ಕೆ ವ್ಯಾಪಾರ ಸ್ವಲ್ಪ ಕಡಿಮೆಯೇ ಇದೆ. ಆದರೂ ಪರವಾಗಿಲ್ಲ ಬೆಂಗಳೂರಿನ ಮಂದಿ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪಟಾಕಿ ಖರೀದಿಸುವ ನಿರೀಕ್ಷೆಯಿದೆ ಎಂದು ಪಟಾಕಿ ವ್ಯಾಪಾರಿಗಳು ಹೇಳಿದ್ದಾರೆ.

    ಬೆಂಗಳೂರಿನಿಂದ ಹೊಸೂರು ಕೇವಲ 60 ಕಿ.ಮೀ ದೂರದಲ್ಲಿದೆ. ಇಲ್ಲಿ ಕಡಿಮೆ ಬೆಲೆಗೆ ಉತ್ತಮ ಕಂಪನಿಯ ಪಟಾಕಿಗಳು ಲಭ್ಯವಿರುತ್ತೆ. ಜೊತೆಗೆ ಎಲ್ಲಾ ರೀತಿಯ ಪಟಾಕಿಗಳು ಸಿಗುತ್ತೆ. ಅದಕ್ಕಾಗಿಯೇ ಅಲ್ಲಿಗೆ ಜನ ನಾ ಮುಂದು ತಾ ಮುಂದು ಎಂದು ಹೋಗಿ ಪಟಾಕಿ ಖರೀದಿ ಮಾಡುತ್ತಾರೆ. ಆದರೆ ಪಟಾಕಿ ತಗೋಳೋ ಮುಂಚೆ ಸರಿಯಾದ ಬೆಲೆ ಕೇಳಿ, ಬಿಲ್ ಮಾಡುವಾಗ ಮುಂದೆ ನಿಂತು ಬಿಲ್ ಮಾಡಿಸಿ. ಯಾಕಂದರೆ ಪಟಾಕಿಗಳು ಒಂದೊಂದು ಮಳಿಗೆಯಲ್ಲಿ ಒಂದೊಂದು ಬೆಲೆಗೆ ಮಾರಾಟವಾಗುತ್ತೆ. ಹೀಗಾಗಿ ಎಚ್ಚರಿಕೆಯಿಂದ ಖರೀದಿ ಮಾಡಿದರೆ ಒಳಿತು ಎಂದು ಗ್ರಾಹಕರು ತಿಳಿಸಿದ್ದಾರೆ.

    ದೀಪಾವಳಿಗೆ ಪಟಾಕಿ ಖರೀದಿಸಲು ಹೊಸೂರು ಉತ್ತಮ ಸ್ಥಳವಾಗಿದ್ದು, ಇಲ್ಲಿ ಬಗೆಬಗೆಯ ಪಟಾಕಿ ಖರೀದಿಸಿ ಹಬ್ಬವನ್ನು ಸಂಭ್ರಮಿಸಬಹುದಾಗಿದೆ. ಆದರೆ ಪಟಾಕಿ ಹೊಡೆಯುವಾಗ ಎಚ್ಚರಿಕೆಯಿಂದ ಇರಿ ಅನ್ನೋದು ಎಲ್ಲರ ಕಳಕಳಿಯ ಮಾತಾಗಿದೆ.

  • ಸಿಲಿಕಾನ್ ಸಿಟಿಯಲ್ಲಿ ವೃದ್ಧ ದಂಪತಿಯ ಬರ್ಬರ ಕೊಲೆ

    ಸಿಲಿಕಾನ್ ಸಿಟಿಯಲ್ಲಿ ವೃದ್ಧ ದಂಪತಿಯ ಬರ್ಬರ ಕೊಲೆ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವೃದ್ಧ ದಂಪತಿಯ ಬರ್ಬರ ಹತ್ಯೆ ನಡೆದಿದ್ದು, ಮಹದೇವಪುರದ ಜನರನ್ನು ಬೆಚ್ಚಿ ಬೀಳಿಸಿದೆ.

    ಮಹದೇವಪುರದ ಉಡುಪಿ ಗಾರ್ಡನ್ ಹಿಂಭಾಗ ಈ ಜೋಡಿ ಕೊಲೆ ನಡೆದಿದ್ದು, ಮನೆಯಲ್ಲಿದ್ದ ಚಂದ್ರೇಗೌಡ, ಲಕ್ಷ್ಮಮ್ಮ ದಂಪತಿಗೆ ಚಾಕು ಇರಿದು ಬರ್ಬರವಾಗಿ ಕೊಲೆ ಮಾಡಲಾಗಿದೆ. ಚಿನ್ನಾಭರಣಕ್ಕಾಗಿ ದರೋಡೆಕೋರರು ವೃದ್ಧ ದಂಪತಿಯನ್ನು ಹತ್ಯೆ ಮಾಡಿದ್ದಾರಾ ಎಂಬ ಅನುಮಾನ ವ್ಯಕ್ತವಾಗಿದ್ದು, ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    ಕೊಲೆ ನಡೆದ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೊಟ್ಟೆ ಮತ್ತು ತಲೆ ಭಾಗಕ್ಕೆ ಹೊಡೆದು ಕೊಲೆ ಮಾಡಲಾಗಿದೆ. ಬಿರುವಿನಲ್ಲಿದ್ದ ಬಟ್ಟೆಗಳನ್ನು ತೆಗೆದು ಮೃತರ ದೇಹದ ಮೇಲೆ ಹಾಕಿ ಹೋಗಿದ್ದಾರೆ ಎಂದು ವಿವರಿಸಿದರು.

    ಮೇಲ್ನೋಟಕ್ಕೆ ಚಿನ್ನಾಭರಣ ಕಳುವಾಗಿರುವ ಬಗ್ಗೆ ಕಂಡು ಬರುತ್ತಿಲ್ಲ. ಪೋಲಿಸರು ಎಲ್ಲ ಆಯಾಮದಲ್ಲೂ ತನಿಖೆ ನಡೆಸುತ್ತಿದ್ದಾರೆ. ಆಸ್ತಿ ವಿಚಾರ ಇಲ್ಲವೇ ದ್ವೇಷದಿಂದ ಕೊಲೆ ನಡೆದಿದೆಯೋ ಅಥವಾ ಭೂ ಮಾಫಿಯಾದವರ ಕೈವಾಡವಿದೆಯೇ ಎಂಬುದರ ಕುರಿತು ತನಿಖೆ ನಡೆಯುತ್ತಿದೆ. ಅಲ್ಲದೆ ಪರಿಚಯಸ್ಥರು ಯಾರಾದರೂ ಬಂದು ಕೊಲೆ ಮಾಡಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

    ಮೃತ ದಂಪತಿಗೆ ಒಬ್ಬ ಮಗಳಿದ್ದು, ಚಾಮರಾಜನಗರದಿಂದ ಬರುತ್ತಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ ಎಂದು ಭಾಸ್ಕರ್ ರಾವ್ ತಿಳಿಸಿದರು.

  • ಸಿಲಿಕಾನ್ ಸಿಟಿ ಜನತೆಗೆ ನಾಳೆ ತಟ್ಟಲಿದೆ ಟ್ರಾಫಿಕ್ ಬಿಸಿ

    ಸಿಲಿಕಾನ್ ಸಿಟಿ ಜನತೆಗೆ ನಾಳೆ ತಟ್ಟಲಿದೆ ಟ್ರಾಫಿಕ್ ಬಿಸಿ

    ಬೆಂಗಳೂರು: ನಾಳೆ ರೈತರು ಪ್ರತಿಭಟನೆ ಹಮ್ಮಿಕೊಂಡಿರುವುದರಿಂದ ಸಿಲಿಕಾನ್ ಸಿಟಿ ಜನತೆಗೆ ಟ್ರಾಫಿಕ್ ಬಿಸಿ ತಟ್ಟುವ ಸಾಧ್ಯತೆಯಿದೆ.

    ಉತ್ತರ ಕರ್ನಾಟಕ ಭಾಗ ಸೇರಿದಂತೆ ಅನೇಕ ಭಾಗದ ರೈತರು ನಾಳೆ ಬೀದಿಗಿಳಿದು ಹೋರಾಟ ನಡೆಸಲಿದ್ದಾರೆ. ಇಷ್ಟು ದಿನವಾದರೂ ಪ್ರವಾಹಪರಿಹಾರವನ್ನು ಸಮರ್ಪಕವಾಗಿ ವಿತರಿಸಿಲ್ಲ. ಕೂಡಲೇ ಪರಿಹಾರ ಹಣವನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ವಿಧಾನಸೌಧ ಮುತ್ತಿಗೆ ಹಾಕಲು ರೈತರು ನಿರ್ಧರಿಸಿದ್ದಾರೆ.

    ನಾಳಿನ ಪ್ರತಿಭಟನೆಗೆ ಐದು ಸಾವಿರಕ್ಕೂ ಹೆಚ್ಚು ರೈತರು ಸೇರುವ ನಿರೀಕ್ಷೆಯಿದ್ದು, ಇನ್ನೊಂದಡೆ ಜೆಡಿಎಸ್ ಪ್ರತಿಭಟನೆಯೂ ನಡೆಯಲಿದೆ.

    ಅಧಿವೇಶನದ ಬೆನ್ನಲ್ಲೆ ನಾಳೆ ಪ್ರತಿಭಟನೆಯ ಕಾವು ಜೋರಾಗಿದ್ದು, ಪ್ರವಾಹ ಪರಿಹಾರಕ್ಕೆ ಆಗ್ರಹಿಸಿ ಕೋಡಿಹಳ್ಳಿ ಚಂದ್ರಶೇಖರ್ ನಾಳೆ ವಿಧಾನಸೌಧ ಮುತ್ತಿಗೆಗೆ ಕರೆಕೊಟ್ಟಿದ್ದಾರೆ. ರೈತರು ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಿಂದ ರ‍್ಯಾಲಿ ಮೂಲಕ ತೆರಳಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ. ಬೃಹತ್ ಮೆರವಣಿಗೆ ನಡೆಯುವುದರಿಂದ ಕಾರ್ಪೋರೇಷನ್, ಮೆಜೆಸ್ಟಿಕ್, ವಿಧಾನಸೌಧ ಸುತ್ತಮುತ್ತ ಹಾಗೂ ಶೇಷಾದ್ರಿಪುರಂ ಬಳಿ ಹೆಚ್ಚು ಟ್ರಾಫಿಕ್ ಜಾಮ್ ಆಗುವ ಸಾಧ್ಯತೆಯಿದೆ.

    ರೈತರ ಬೇಡಿಕೆಗಳೇನು?
    ಉತ್ತರ ಕರ್ನಾಟಕದ ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಹತ್ತು ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಬೇಕು. ಪ್ರತಿ ಎಕರೆಗೆ 25 ಸಾವಿರದಂತೆ ಬೆಳೆ ಹಾನಿ ಪರಿಹಾರ ಕೊಡಬೇಕು. ಪ್ರವಾಹದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕು. ನಷ್ಟವಾದ ಕೃಷಿ ಭೂಮಿಗೆ ಪರಿಹಾರ ನೀಡಬೇಕು ಹಾಗೂ ಪರ್ಯಾಯ ಭೂಮಿ ಕೊಡಬೇಕು. ಅಲ್ಲದೆ ಪದೇ ಪದೆ ಪ್ರವಾಹಕ್ಕೆ ತುತ್ತಾಗುವ ಗ್ರಾಮಗಳನ್ನು ಸಂಪೂರ್ಣವಾಗಿ ಸ್ಥಳಾಂತರಿಸಬೇಕು. ಪ್ರವಾಹದಿಂದ ತೊಂದರೆಗೆ ಒಳಗಾದ ರೈತರಿಗೆ ಬ್ಯಾಂಕುಗಳು ಸಾಲದ ನೋಟಿಸ್ ನೀಡುವುದನ್ನು ನಿಲ್ಲಿಸಬೇಕು ಎಂಬ ಬೇಡಿಕೆಗಳನ್ನು ಈಡೇರಿಸುವಂತೆ ಹೋರಾಟ ನಡೆಸುತ್ತಿದ್ದಾರೆ.

    ಜೆಡಿಎಸ್ ರ‍್ಯಾಲಿ
    ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ನಾಳೆ ಜೆಡಿಎಸ್ ಸಹ ಬೃಹತ್ ಪ್ರತಿಭಟನಾ ರ‍್ಯಾಲಿ ಹಮ್ಮಿಕೊಂಡಿದೆ. ಉತ್ತರ ಕರ್ನಾಟಕ ನೆರೆಗೆ ಕೇಂದ್ರ ಸರ್ಕಾರ ಸೂಕ್ತ ಪರಿಹಾರ ಕೊಟ್ಟಿಲ್ಲ, ನೆರೆ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲ ಮತ್ತು ವಿಪಕ್ಷ ಶಾಸಕರ ಕ್ಷೇತ್ರಗಳಿಗೆ ಅನುದಾನ ಕಡಿತ ಮಾಡಿ ತಾರತಮ್ಯ ಮಾಡಿದೆ ಎಂದು ಖಂಡಿಸಿ ಜೆಡಿಎಸ್ ಪ್ರತಿಭಟನೆ ನಡೆಸುತ್ತಿದೆ.

    ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ಪಕ್ಷದ ಕಚೇರಿ ಜೆಪಿ ಭವನದಿಂದ ರ‍್ಯಾಲಿ ಆರಂಭವಾಗಲಿದ್ದು, ಫ್ರೀಡಂ ಪಾರ್ಕ್‍ವರೆಗೂ ಪಾದಯಾತ್ರೆ ನಡೆಯಲಿದೆ. ನಾಳೆ ಅಧಿವೇಶನ ಇರುವುದರಿಂದ ಅಧಿವೇಶನದ ಒಳಗೆ ಪಕ್ಷದ ಶಾಸಕರು ಹೋರಾಟ ನಡೆಸಲಿದ್ದಾರೆ. ಅಧಿವೇಶನ ಹೊರಗೆ ಪಕ್ಷದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪಕ್ಷದ ಮುಖಂಡರು, ಮಾಜಿ ಶಾಸಕರು, ಕಾರ್ಯಕರ್ತರು ನಾಳಿನ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ.

  • ಪ್ರೀತಿ ಒಪ್ಪಿಕೊಂಡ ಗೊಂಬೆಗೆ ಥ್ಯಾಂಕ್ಸ್ ಹೇಳಿದ ಚಂದನ್ ಶೆಟ್ಟಿ

    ಪ್ರೀತಿ ಒಪ್ಪಿಕೊಂಡ ಗೊಂಬೆಗೆ ಥ್ಯಾಂಕ್ಸ್ ಹೇಳಿದ ಚಂದನ್ ಶೆಟ್ಟಿ

    ಬೆಂಗಳೂರು: ಯುವ ದಸರಾ ವೇದಿಕೆ ಮೇಲೆ ನಿವೇದಿತಾ ಗೌಡ ತಮ್ಮ ಪ್ರೀತಿಯನ್ನು ಒಪ್ಪಿಕೊಂಡಿದ್ದಕ್ಕೆ ಕನ್ನಡ ರ‍್ಯಾಪರ್ ಚಂದನ್ ಶೆಟ್ಟಿ ಫುಲ್ ಖುಷಿಯಲ್ಲಿದ್ದು, ನನ್ನ ಪ್ರೀತಿಯನ್ನು ಒಪ್ಪಿಕೊಂಡಿದ್ದಕ್ಕೆ ಧನ್ಯವಾದ ಎಂದು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

    ನಾನು ಎಂದೆಂದಿಗೂ ನಿನ್ನನ್ನು ಪ್ರೀತಿಸುತ್ತೇನೆ, ನನ್ನ ಪ್ರೀತಿಯನ್ನು ಒಪ್ಪಿಕೊಂಡಿದ್ದಕ್ಕೆ ಧನ್ಯವಾದ. ಜೊತೆಗೆ ನಮ್ಮ ಪ್ರೀತಿಗೆ ಬೆಂಬಲಿಸಿ, ಆಶೀರ್ವದಿಸಿದ ಎಲ್ಲರಿಗೂ ಧನ್ಯವಾದ ತಿಳಿಸುತ್ತಿದ್ದೇನೆ ಎಂದು ಬರೆದು ತಾವು ಯುವ ದಸರಾ ವೇದಿಕೆ ಮೇಲೆ ನಿವೇದಿತಾಗೆ ಪ್ರಪ್ರೋಸ್ ಮಾಡುತ್ತಿರುವ ಫೋಟೋ ಹಾಕಿ ಇನ್‍ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದನ್ನೂ ಓದಿ: ಯುವದಸರಾ ವೇದಿಕೆಯಲ್ಲಿ ಒಂದಾದ ಬಿಗ್‍ಬಾಸ್ ಜೋಡಿ – ನಿವೇದಿತ ಗೌಡಗೆ ಉಂಗುರ ತೊಡಿಸಿದ ಚಂದನ್ ಶೆಟ್ಟಿ

    https://www.instagram.com/p/B3RqeK7FNMR/

    ಈ ಪೋಸ್ಟ್ ಗೆ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಅಭಿಮಾನಿಗಳು ಕಮೆಂಟ್ ಮಾಡಿ ಕ್ಯೂಟ್ ಜೋಡಿಗೆ ಶುಭಕೋರಿದ್ದಾರೆ. ಕೆಲವರು ಯಾರು ಏನೇ ಹೇಳಿದರು ತಲೆಕೆಡಿಸಿಕೊಳ್ಳಬೇಡಿ, ನಿಮ್ಮ ಜೋಡಿ ಸೂಪರ್ ಎಂದು ಕಮೆಂಟ್ ಮಾಡಿ ಸಪೋರ್ಟ್ ಮಾಡಿದ್ದಾರೆ. ಇದನ್ನೂ ಓದಿ: ವೇದಿಕೆ ಮೇಲೆ ಮದುವೆ ಆಗಿದ್ರೆ ತಪ್ಪು ಅಂತ ಒಪ್ಪಿಕೊಳ್ಳುತ್ತಿದ್ದೆ: ನಿವೇದಿತಾ ಗೌಡ

    ಯುವ ದಸರಾ ವೇದಿಕೆಯಲ್ಲೇ ಗಾಯಕ ಚಂದನ್ ಶೆಟ್ಟಿ-ನಿವೇದಿತಾಗೌಡ ಎಂಗೇಜ್ ಆಗಿದ್ದು, ಝಗಮಗಿಸುವ ವೇದಿಕೆಯಲ್ಲಿ ನಿವೇದಿತಾಗೆ ಪ್ರಪೋಸ್ ಮಾಡಿದ ಚಂದನ್ ಶೆಟ್ಟಿ ಬೆರಳಿಗೆ ಉಂಗುರ ತೊಡಿಸಿ ನಿನ್ನನ್ನೇ ಮದುವೆಯಾಗುತ್ತೇನೆಂದು ಘೋಷಿಸಿಕೊಂಡಿದ್ದರು. ಸಾವಿರಾರು ಪ್ರೇಕ್ಷಕರ ಸಮ್ಮುಖದಲ್ಲಿ ಪ್ರೇಮ ನಿವೇದನೆ ಮಾಡಿದ್ದು ಯುವಜನತೆ ಬಿಗ್‍ಬಾಸ್ ಜೋಡಿಗೆ ಜೈಕಾರ ಹಾಕಿದ್ದರು.

    ವೇದಿಕೆಯಲ್ಲಿ ಚಂದನ್ ಅವರು ನಿವೇದಿತಾಗೆ ಪ್ರಪೋಸ್ ಮಾಡಿದ ಬಳಿಕ ಈ ವಿಚಾರ ಭಾರೀ ವಿವಾದಕ್ಕಿಡಾಗಿತ್ತು. ದಸರಾ ಕಾರ್ಯಕ್ರಮದ ವೇದಿಕೆಯಲ್ಲೇ ಇದು ಬೇಡವಾಗಿತ್ತು ಎಂದು ಅನೇಕರು ಖಂಡಿಸಿದ್ದರು. ಇನ್ನೂ ಕೆಲವರು ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದರು. ಈ ಸಂಬಂಧ ಪ್ರತಿಕ್ರಿಯಿಸಿದ ಚಂದನ್, ನಾನು ಮಾಡಿರುವುದು ತಪ್ಪಾಗಿದ್ದರೆ ಕ್ಷಮಿಸಿ ಬಿಡಿ ಅಂದಿದ್ದರು. ಇತ್ತ ನಾವು ವೇದಿಕೆಯಲ್ಲಿ ಮದುವೆಯಾಗಿಲ್ಲ. ಒಂದು ವೇಳೆ ನಾವು ಅಲ್ಲಿ ಮದುವೆಯಾಗುತ್ತಿದ್ದರೆ ಅದನ್ನು ನಾನು ತಪ್ಪು ಅಂತ ಒಪ್ಪಿಕೊಳ್ಳುತ್ತಿದ್ದೆ ಎಂದು ನಿವೇದಿತಾ ಸಮರ್ಥಿಸಿಕೊಂಡಿದ್ದರು. ಇದನ್ನೂ ಓದಿ: ದಸರಾ ವೇದಿಕೆಯಲ್ಲಿ ಪ್ರಪೋಸ್ ಮಾಡಬಾರದೆಂಬ ರೂಲ್ಸ್ ಇದ್ಯಾ? ಪ್ರಮೋದ್ ಮುತಾಲಿಕ್

    ಇನ್ನೊಂದೆಡೆ ಇದು ನಮಗೆ ಸರ್ಪ್ರೈಸ್ ತಂದಿದೆ. ನಾವು ಕಾರ್ಯಕ್ರಮ ನೋಡಲೆಂದು ಹೋಗಿದ್ದೇವು ಅಷ್ಟೇ. ಅಲ್ಲಿ ಈ ರೀತಿ ಆಗಿರೋದು ಆಶ್ಚರ್ಯದ ಜೊತೆಗೆ ಖುಷಿಯನ್ನು ಕೂಡ ತಂದಿದೆ ಎಂದು ನಿವೇದಿತಾ ಪೋಷಕರು ಹೇಳಿದ್ದರು.

  • ಹಿಮಾಲ್ ಅಡ್ವೈಸರಿ ಕಂಪನಿ ದೋಖಾ- ಅಧಿಕ ಬಡ್ಡಿ ಆಸೆ ತೋರಿಸಿ ಚಿಪ್ಪು ಕೊಟ್ಳು ವಂಚಕಿ

    ಹಿಮಾಲ್ ಅಡ್ವೈಸರಿ ಕಂಪನಿ ದೋಖಾ- ಅಧಿಕ ಬಡ್ಡಿ ಆಸೆ ತೋರಿಸಿ ಚಿಪ್ಪು ಕೊಟ್ಳು ವಂಚಕಿ

    ಬೆಂಗಳೂರು: ಹಿಮಾಲ್ ಅಡ್ವೈಸರಿ ಕಂಪನಿ ಹೆಸರಿನಲ್ಲಿ ಸಾರ್ವಜನಿಕರಿಗೆ ಅಧಿಕ ಬಡ್ಡಿ ಆಸೆ ತೋರಿಸಿ ಅವರಿಂದ ಕೋಟ್ಯಂತರ ರೂ. ಹಣ ದೋಚಿಕೊಂಡು ಮಹಿಳೆಯೊಬ್ಬಳು ಪರಾರಿಯಾಗಿರುವ ಘಟನೆ ಸಿಲಿಕಾನ್ ಸಿಟಿಯ ಆರ್.ಟಿ ನಗರದಲ್ಲಿ ನಡೆದಿದೆ.

    ಹಿಮಾಲ್ ಅಡ್ವೈಸರಿ ಕಂಪನಿ ನಡೆಸುತ್ತಿದ್ದ ನಾಝಿಯಾ ಜನರ ಹಣಕ್ಕೆ ಮೋಸ ಮಾಡಿದ ಖತರ್ನಾಕ್ ಮಹಿಳೆ. ಜನರಿಗೆ ಅಧಿಕ ಬಡ್ಡಿ ನೀಡುವ ಆಸೆ ತೋರಿಸಿ ಕೋಟಿಗಟ್ಟಲೇ ಹೂಡಿಕೆ ಮಾಡಿಸಿಕೊಂಡ ನಾಝಿಯಾ ಈಗ ಎಸ್ಕೇಪ್ ಆಗಿದ್ದಾಳೆ. ಅಧಿಕ ಬಡ್ಡಿ ಆಸೆಯ ಕನಸು ಕಂಡು ಕೂತಿದ್ದ ಜನರಿಗೆ ಪಂಗನಾಮ ಹಾಕಿದ್ದಾಳೆ.

    ಆರ್ ಟಿ ನಗರದಲ್ಲಿ ಹಿಮಾಲ್ ಅಡ್ವೈಸರಿ ಕಂಪನಿ ಎಂಬ ಹೆಸರಿನ ಕಚೇರಿಯಲ್ಲಿ ನಾಝಿಯಾ ತನ್ನ ವ್ಯವಹಾರ ನಡೆಸುತ್ತಿದ್ದಳು. 15 ರಿಂದ 20% ಬಡ್ಡಿ ಕೊಡುತ್ತೇನೆ ಹೂಡಿಕೆ ಮಾಡಿ ಎಂದು ಜನರನ್ನು ನಂಬಿಸುತ್ತಿದ್ದಳು. ಬ್ಯುಸಿನೆಸ್‍ನಲ್ಲಿ ನಿಮ್ಮ ಹಣ ತೊಡಗಿಸ್ತೀನಿ, ಟ್ರೇಡ್ ಮಾರ್ಕೆಟ್‍ನಲ್ಲೂ ನಿಮ್ಮ ಹಣ ಹೂಡಿ ಲಾಭ ಕೊಡುತ್ತೇವೆ ಎಂದಿದ್ದಳು. ಈಕೆ ಮಾತಿಗೆ ಮರುಳಾದ ಜನರು ಆಕೆಯನ್ನು ನಂಬಿ ಹಿಮಾಲ್ ಅಡ್ವೈಸರಿ ಕಂಪನಿಯಲ್ಲಿ ಹಣ ಹೂಡುತ್ತಿದ್ದರು. ಬಡ್ಡಿ ಆಸೆಗೆ ನಾ ಮುಂದು ತಾ ಮುಂದು ಎಂದು ಜನರು ಹೂಡಿಕೆ ಮಾಡಿದರು. ಮೊದಲ ಒಂದೆರಡು ತಿಂಗಳು ನಾಝಿಯಾ ಹೂಡಿಕೆದಾರರಿಗೆ ಹಣವನ್ನು ನೀಡಿದ್ದಾಳೆ. ಹೀಗೆ ವಿಶ್ವಾಸ ಗಿಟ್ಟಿಸಿಕೊಂಡು ಅವರ ಸ್ನೇಹಿತರಿಗೂ ಕಂಪನಿಯಲ್ಲಿ ಹೂಡಿಕೆ ಮಾಡಲು ಹೇಳಿ ಎಂದು ಬಲೆ ಬೀಸುತ್ತಿದ್ದಳು.

    5 ಲಕ್ಷ ಹೂಡಿದರೆ 5 ತಿಂಗಳಿಗೆ ಬಡ್ಡಿ ಜೊತೆ ಆಲ್ಟೋ ಕಾರನ್ನೂ ಕೊಡೋದಾಗಿ, 50 ಲಕ್ಷ ಹೂಡಿಕೆ ಮಾಡಿದರೆ ಬೆಂಗಳೂರಲ್ಲಿ ಒಂದು ಫ್ಲಾಟ್ ಆಫರ್ ನೀಡ್ತೀನಿ ಹೂಡಿಕೆದಾರರಿಗೆ ನಾಝಿಯಾ ನಂಬಿಸಿದ್ದಳು. ಕೆಲ ದಿನ ಸರಿಯಾಗಿ ವ್ಯವಹಾರ ಮಾಡಿ, ಬಳಿಕ ವಂಚಕಿ ತನ್ನ ಅಸಲಿ ಮುಖವನ್ನ ಜನರಿಗೆ ತೋರಿಸಿದ್ದಾಳೆ. ತಮ್ಮ ಹಣ ಕೇಳೋಕೆ ಹೋದವರ ಮೇಲೆ ರೌಡಿಗಳನ್ನ ಬಿಟ್ಟು ಬೆದರಿಕೆ ಹಾಕಿಸಿದ್ದಾಳೆ.

    ಅಷ್ಟೇ ಅಲ್ಲದೆ ಹೂಡಿಕೆದಾರರು ಕೊಟ್ಟಿರುವ ಹಣ ಕೇಳಿದರೆ ಟಾರ್ಚರ್ ಕೊಡ್ತಿದ್ದಾರೆ ಎಂದು ವಂಚಕಿ ಪೊಲೀಸರಿಗೆ ಕಂಪ್ಲೆಂಟ್ ಕೂಡ ಕೊಟ್ಟಿದ್ದಾಳೆ. ಅದೆಷ್ಟೋ ಅಮಾಯಕರು ನಾಝಿಯಾಳ ಮಾತಿಗೆ ಮರುಳಾಗಿ ಹಣ ಹೂಡಿ ಬೀದಿಗೆ ಬಂದಿದ್ದಾರೆ. ಸದ್ಯ ಆರ್.ಟಿ ನಗರ ಕಚೇರಿಗೆ ಬೀಗ ಹಾಕಿ ಎಸ್ಕೇಪ್ ಆಗಿರುವ ನಾಝಿಯಾ ವಿರುದ್ಧ ಆರ್.ಟಿ ನಗರ ಪೊಲೀಸ್ ಠಾಣೆಯಲ್ಲಿ ನೊಂದವರು ದೂರು ನೀಡಿದ್ದು, ವಂಚಕಿಯನ್ನು ಪತ್ತೆಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ.

  • ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

    ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

    ಬೆಂಗಳೂರು: ಪ್ರಸಕ್ತ ವರ್ಷದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಕರ್ನಾಟಕ ಪಿಯುಸಿ ಬೋರ್ಡ್‌ನಿಂದ ಅಧಿಕೃತವಾಗಿ ಪ್ರಕಟವಾಗಿದೆ.

    ಆಕ್ಷೇಪಣೆ ಸಲ್ಲಿಸಲು ಪಿಯುಸಿ ಬೋರ್ಡ್ ಸೂಚನೆ ನೀಡಿದ್ದು, ಅಕ್ಟೋಬರ್ 31ರ ಒಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. 2020ರ ಮಾರ್ಚ್ 4ರಿಂದ ಮಾರ್ಚ್ 19ವರೆಗೆ ಪಿಯುಸಿ ಪರೀಕ್ಷೆ ನಡೆಯಲಿದೆ ಎಂದು ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಲಾಗಿದೆ.

    ಪಿಯುಸಿ ತಾತ್ಕಾಲಿಕಾ ವೇಳಾಪಟ್ಟಿ:
    ಮಾರ್ಚ್ 4 – ಇತಿಹಾಸ, ಭೌತಶಾಸ್ತ್ರ, ಬೇಸಿಕ್ ಗಣಿತ
    ಮಾರ್ಚ್ 5 – ತಮಿಳು, ತೆಲುಗು, ಮಲೆಯಾಳಂ, ಮರಾಠಿ, ಅರೇಬಿಕ್, ಫ್ರೆಂಚ್
    ಮಾರ್ಚ್ 6 – ಉರ್ದು, ಸಂಸ್ಕೃತ
    ಮಾರ್ಚ್ 7 – ತರ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಶಿಕ್ಷಣ, ಗೃಹ ವಿಜ್ಞಾನ

    ಮಾರ್ಚ್ 9 – ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಗಣಿತ
    ಮಾರ್ಚ್ 10 – ಎನ್.ಎಸ್.ಕ್ಯೂ.ಎಫ್(NSQF)
    ಮಾರ್ಚ್ 11 – ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ

    ಮಾರ್ಚ್ 12 – ವ್ಯವಹಾರ ಅಧ್ಯಯನ, ಸಮಾಜಶಾಸ್ತ್ರ, ರಸಾಯನಶಾಸ್ತ್ರ
    ಮಾರ್ಚ್ 13 – ಭೂಗೋಳಶಾಸ್ತ್ರ, ಕರ್ನಾಟಿಕ್ ಸಂಗೀತ, ಹಿಂದೂಸ್ಥಾನಿ ಸಂಗೀತ
    ಮಾರ್ಚ್ 14 – ಮನಃಶಾಸ್ತ್ರ, ಎಲೆಕ್ಟ್ರಾನಿಕ್ಸ್, ಗಣಕ ವಿಜ್ಞಾನ
    ಮಾರ್ಚ್ 16 – ಅರ್ಥಶಾಸ್ತ್ರ, ಜೀವಶಾಸ್ತ್ರ

    ಮಾರ್ಚ್ 17 – ಹಿಂದಿ
    ಮಾರ್ಚ್ 18 – ಕನ್ನಡ
    ಮಾರ್ಚ್ 19 – ಇಂಗ್ಲಿಷ್