Tag: Bangaluru

  • ಪ್ರಥಮ ಪಿಯುಸಿ ಪೂರಕ ಪರೀಕ್ಷೆಗೆ ದಿನಾಂಕ ನಿಗದಿ – ಜು.16 ರಿಂದ 27ರೊಳಗೆ ಎಕ್ಸಾಂ

    ಪ್ರಥಮ ಪಿಯುಸಿ ಪೂರಕ ಪರೀಕ್ಷೆಗೆ ದಿನಾಂಕ ನಿಗದಿ – ಜು.16 ರಿಂದ 27ರೊಳಗೆ ಎಕ್ಸಾಂ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ಪಿಯುಸಿ ಪೂರಕ ಪರೀಕ್ಷಾ ದಿನಾಂಕವನ್ನು ಪ್ರಕಟ ಮಾಡಿ ಪಿಯುಸಿ ಬೋರ್ಡ್ ಆದೇಶ ಹೊರಡಿಸಿದೆ.

    ಜುಲೈ 16 ರಿಂದ 27ರ ಒಳಗೆ ಪರೀಕ್ಷೆ ಮುಗಿಸಲು ಪಿಯುಸಿ ಬೋರ್ಡ್ ಸೂಚನೆ ನೀಡಿದೆ. ಜಿಲ್ಲಾ ಮಟ್ಟ ಮತ್ತು ತಾಲೂಕು ಮಟ್ಟದಲ್ಲಿ ಆಯಾ ಕಾಲೇಜುಗಳಲ್ಲಿ ಪರೀಕ್ಷೆ ನಡೆಸಲು ಅನುಮತಿ ನೀಡಲಾಗಿದೆ. ಜೊತೆಗೆ ಕಾಲೇಜುಗಳು ಅಗತ್ಯ ವೇಳಾಪಟ್ಟಿ ರಚನೆ ಮಾಡಿಕೊಂಡು ಪೂರಕ ಪರೀಕ್ಷೆ ನಡೆಸಬೇಕಾಗಿದೆ. ಹೀಗಾಗಿ ಪಿಯುಸಿ ಬೋರ್ಡ್ ಘೋಷಣೆ ಮಾಡಿದ ದಿನಾಂಕದ ಒಳಗೆ ಪರೀಕ್ಷೆ ಮುಗಿಸಬೇಕು.

    ಕೊರೊನಾ ಹಿನ್ನೆಲೆಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮವಹಿಸಿ ಪರೀಕ್ಷೆ ನಡೆಸಲು ಪಿಯುಸಿ ಬೋರ್ಡ್ ಸೂಚನೆ ನೀಡಿದೆ.
    * ಪರೀಕ್ಷಾ ಕೇಂದ್ರದಲ್ಲಿ ಅಗತ್ಯ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು
    * ಕಡ್ಡಾಯವಾಗಿ ಪರೀಕ್ಷೆ ಮುಗಿದ ನಂತರ ಕೇಂದ್ರದ ಕೊಠಡಿಗೆ ಸ್ಯಾನಿಟೈಸ್ ಮಾಡಿಸಬೇಕು
    * ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ಯಾನಿಂಗ್ ಕಡ್ಡಾಯವಾಗಿ ಮಾಡಬೇಕು
    * ವಿದ್ಯಾರ್ಥಿಗಳು ಕೂಡ ಮಾಸ್ಕ್ ಧರಿಸಿ ಪರೀಕ್ಷೆಗೆ ಹಾಜರಾಗಬೇಕು
    * ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಸ್ಯಾನಿಟೈಸ್ ಬಳಸಬೇಕು
    * ಪರೀಕ್ಷಾ ಕೇಂದ್ರದಲ್ಲಿ ಗುಂಪು ಸೇರದಂತೆ ಅಗತ್ಯ ಕ್ರಮವಹಿಸಬೇಕು
    * ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬಾಕ್ಸ್ ಗಳ ವ್ಯವಸ್ಥೆ ಮಾಡಬೇಕು
    * ಪೋಷಕರು ಪರೀಕ್ಷಾ ಕೇಂದ್ರದ ಬಳಿ ಸೇರದಂತೆ ಮುಂಜಾಗ್ರತಾ ಕ್ರಮವಹಿಸಬೇಕು

    ಹೀಗೆ ಅನೇಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡ ಜುಲೈ 27ರ ಒಳಗೆ ಪ್ರಥಮ ಪಿಯುಸಿ ಪೂರಕ ಪರೀಕ್ಷೆ ಮುಗಿಸಿರಬೇಕು ಎಂದು ಪಿಯುಸಿ ಬೋರ್ಡ್ ಘೋಷಣೆ ತಿಳಿಸಿದೆ. ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ ಪರೀಕ್ಷಾ ಸಿಬ್ಬಂದಿ ಕೂಡ ಅಗತ್ಯ ಮುಂಜಾಗ್ರತಾ ಕ್ರಮವಹಿಸಬೇಕಾಗಿದೆ.

    ಇನ್ನೂ ಕಂಟೈನ್ಮೆಂಟ್ ಝೋನ್‍ನಿಂದ ಬರುವವರಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಕೊಡಬೇಕು. ಬೇರೆ ಕಾಯಿಲೆ ಇರುವವರಿಗೂ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಸಬೇಕು. ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಪರೀಕ್ಷೆ ನಡೆಸಬೇಕು ಎಂದು ಪಿಯುಸಿ ಬೋರ್ಡ್ ಆದೇಶ ಹೊರಡಿಸಿದೆ.

  • ಕುಟುಂಬದವರ ಜೊತೆ ದಿಗಂತ್-ಐಂದ್ರಿತಾ ಜಾಲಿ ಟ್ರಿಪ್

    ಕುಟುಂಬದವರ ಜೊತೆ ದಿಗಂತ್-ಐಂದ್ರಿತಾ ಜಾಲಿ ಟ್ರಿಪ್

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಕ್ಯೂಟ್ ಕಪಲ್ ದೂದ್‍ಪೇಡ ದಿಗಂತ್ ಮತ್ತು ನಟಿ ಐಂದ್ರಿತಾ ರೇ ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಸುಮಾರು ಮೂರು ತಿಂಗಳಿನಿಂದ ತಮ್ಮ ಕುಟುಂಬದವರ ಜೊತೆ ಮನೆಯಲ್ಲಿಯೇ ಕಾಲಕಳೆದಿದ್ದರು. ಇದೀಗ ಲಾಕ್‍ಡೌನ್ ಸಡಿಲಿಕೆಯ ನಂತರ ಕುಟುಂಬದವರ ಜೊತೆ ಔಟಿಂಗ್ ಹೋಗಿದ್ದಾರೆ.

    ದಿಗಂತ್ ಮತ್ತು ನಟಿ ಐಂದ್ರಿತಾ ರೇ ಕರ್ನಾಟಕದ ಸುಂದರ ತಾಣಗಳಲ್ಲಿ ಒಂದಾಗಿರುವ ಕೂರ್ಗ್ ಗೆ ಕುಟುಂಬದವರ ಜೊತೆ ಪ್ರವಾಸಕ್ಕೆ ಹೋಗಿದ್ದಾರೆ. ತಾವು ಪ್ರವಾಸಕ್ಕೆ ಹೋಗಿರುವ ಫೋಟೋಗಳನ್ನು ನಟಿ ಐಂದ್ರಿತಾ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    ಕೊರೊನಾ ಆತಂಕದ ನಡುವೆಯೂ ಹೊರಬಂದು ಪ್ರಕೃತಿ ಸೌಂದರ್ಯವನ್ನು ದಿಗಂತ್ ಮತ್ತು ಐಂದ್ರಿತಾ ರೇ ಎಂಜಾಯ್ ಮಾಡುತ್ತಿದ್ದಾರೆ. ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಶೂಟಿಂಗ್ ಕ್ಯಾನ್ಸಲ್ ಆಗಿತ್ತು. ಹೀಗಾಗಿ ಇಷ್ಟು ದಿನಗಳನ್ನು ಮನೆಯಲ್ಲಿಯೇ ಇದ್ದರು. ಈಗ ಮನೆಯಿಂದ ಹೊರ ಬಂದು ಕುಟುಂಬ ಮತ್ತು ಪ್ರಕೃತಿಯ ಸೌಂದರ್ಯದ ಮಧ್ಯೆ ರಿಲ್ಯಾಕ್ಸ್ ಮಾಡುತ್ತಿದ್ದಾರೆ.

    https://www.instagram.com/p/CBxbnALFpv4/?igshid=ybw4dnn7bw2b

    ಪೋಷಕರು ಕೂಡ ಈ ಟ್ರಿಪ್‍ನಲ್ಲಿ ಭಾಗಿಯಾಗಿದ್ದಾರೆ. ವಿಶೇಷ ಎಂದರೆ ಈ ಜೋಡಿ ತಮ್ಮ ಟ್ರಿಪ್‍ಗೆ ಎರಡು ನಾಯಿಗಳನ್ನು ಕೂಡ ಕರೆದುಕೊಂಡು ಹೋಗಿದ್ದಾರೆ. ಐಂದ್ರಿತಾ ಮತ್ತು ದಿಗಂತ್‍ಗೆ ಟ್ರಿಪ್, ಟ್ರಕ್ಕಿಂಗ್ ಎಂದರೆ ತುಂಬಾ ಇಷ್ಟ. ಆದ್ದರಿಂದ ಈ ದಂಪತಿ ಆಗಾಗ ಜಾಲಿ ಟ್ರಿಪ್ ಹೋಗುತ್ತಿದ್ದರು. ಸದ್ಯಕ್ಕೆ ಲಾಕ್‍ಡೌನ್ ಸಡಿಲಿಕೆ ಆಗುತ್ತಿದ್ದಂತೆ ಪ್ರಕೃತಿ ಸೌಂದರ್ಯ ನೋಡಲು ಹೋಗಿದ್ದಾರೆ.

    ದಿಗಂತ್ ಹಾಗೂ ಐಂದ್ರಿತಾ ಪರಸ್ಪರ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಚಿಕ್ಕಬಳ್ಳಾಪುರದ ನಂದಿಬೆಟ್ಟದ ಸಮೀಪವಿರುವ ಡಿಸ್ಕವರಿ ವಿಲೇಜ್ ರೆಸಾರ್ಟ್ ನಲ್ಲಿ 2018 ಡಿಸೆಂಬರಿನಲ್ಲಿ ಈ ಜೋಡಿ ವಿವಾಹವಾಗಿದ್ದಾರೆ.

    https://www.instagram.com/p/CB3T6AEFkEz/?igshid=paozvkq63lrx

  • ಬೆಂಗಳೂರಲ್ಲಿ ಮತ್ತೆ ಒಂದು ತಿಂಗಳು ರಾತ್ರಿ ನಿಷೇಧಾಜ್ಞೆ ಮುಂದುವರಿಕೆ

    ಬೆಂಗಳೂರಲ್ಲಿ ಮತ್ತೆ ಒಂದು ತಿಂಗಳು ರಾತ್ರಿ ನಿಷೇಧಾಜ್ಞೆ ಮುಂದುವರಿಕೆ

    – ರಾತ್ರಿ 9ರಿಂದ ಬೆಳಗಿನಜಾವ 5ರ ವರೆಗೆ ಓಡಾಡುವಂತಿಲ್ಲ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ರಾತ್ರಿ ನಿಷೇಧಾಜ್ಞೆ ಜಾರಿಯಾಗಲಿದ್ದು, ಈ ಕುರಿತು ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆದೇಶ ಹೊರಡಿಸಿದ್ದಾರೆ.

    ಜೂನ್ 1ರ ಮಧ್ಯರಾತ್ರಿಯಿಂದ ಜೂನ್ 30ರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ ಮುಂದುವರಿಯಲಿದೆ. ರಾತ್ರಿ 9 ಗಂಟೆಯಿಂದ ಬೆಳಗಿನಜಾವ 5 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಈ ಸಂದರ್ಭದಲ್ಲಿ ಅಗತ್ಯ ಸೇವೆಗಳ ವಾಹನ ಸಂಚಾರ ಹೊರತುಪಡಿಸಿ ಉಳಿದ ವಾಹನಗಳ ಸಂಚಾರಕ್ಕೆ ನಿಷೇಧವಿದೆ. ಅಲ್ಲದೆ ಸಾರ್ವಜನಿಕರು ಸಹ ರಾತ್ರಿ 9 ಗಂಟೆ ಬಳಿಕ ಮನೆಯಿಂದ ಹೊರ ಬರುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

    ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಾರ್ಗಸೂಚಿ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಮಕ್ಕಳು ಹಾಗೂ 60 ವರ್ಷ ಮೇಲ್ಪಟ್ಟ ವೃದ್ಧರು, ಗರ್ಭಿಣಿಯರು ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ. ಅಗತ್ಯ ಸಂದರ್ಭ ಹೊರತುಪಡಿಸಿ ಊಳಿದ ವೇಳೆ ಹೊರಗಡೆ ಓಡಾಡುವಂತಿಲ್ಲ. ನಿಯಮಗಳನ್ನು ಪಾಲಿಸದಿದ್ದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಲಾಗಿದೆ.

  • ಮಕ್ಕಳಿಬ್ಬರನ್ನು ನೋಡಿಕೊಳ್ತಿರೋ ಸೀಕ್ರೆಟ್ ರಿವೀಲ್ ಮಾಡಿದ ರಾಧಿಕಾ

    ಮಕ್ಕಳಿಬ್ಬರನ್ನು ನೋಡಿಕೊಳ್ತಿರೋ ಸೀಕ್ರೆಟ್ ರಿವೀಲ್ ಮಾಡಿದ ರಾಧಿಕಾ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಾಧಿಕಾ ಪಂಡಿತ್ ಸದಾ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುತ್ತಾರೆ. ಒಂದಿಲ್ಲೊಂದು ಫೋಟೋ, ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇದೀಗ ತಾವು ಇಬ್ಬರು ಮಕ್ಕಳನ್ನು ನೋಡಿಕೊಳ್ಳುವ ಬಗ್ಗೆ ಹೇಳಿಕೊಂಡಿದ್ದಾರೆ.

    ರಾಧಿಕಾ ಪಂಡಿತ್ ಅವರಿಗೆ ಇಬ್ಬರು ಮಕ್ಕಳು. ಹೀಗಾಗಿ ತಮ್ಮ ಮಕ್ಕಳ ಜೊತೆ ಮನೆಯಲ್ಲಿ ಖುಷಿಯಿಂದ ಕಾಲಕಳೆಯುತ್ತಿದ್ದಾರೆ. ಕೆಲವರಿಗೆ ಒಂದು ಮಗು ನೋಡಿಕೊಳ್ಳುವುದೇ ಕಷ್ಟ ಎನ್ನಿಸುತ್ತದೆ. ಆದರೆ ರಾಧಿಕಾ ಅವರು ಇಬ್ಬರು ಪುಟ್ಟ ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಬಗ್ಗೆ ಸ್ವತಃ ರಾಧಿಕಾ ಅವರೇ ತಮ್ಮ ಮಕ್ಕಳನ್ನು ಹೇಗೆ ನೋಡಿಕೊಳ್ಳುತ್ತಿದ್ದೇನೆ ಎಂಬುದನ್ನು ಸೋಶಿಯಲ್ ಮಿಡಿಯಾದಲ್ಲಿ ತಿಳಿಸಿದ್ದಾರೆ.

    ರಾಧಿಕಾ ತಮ್ಮ ಅಪ್ಪ-ಅಪ್ಪ ಐರಾಳನ್ನು ಎತ್ತಿಕೊಂಡಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಅದಕ್ಕೆ “ನಾನು ಇಬ್ಬರು ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹೇಗೆ ನಿರ್ವಹಿಸುತ್ತಿದ್ದೇನೆ ಎಂಬ ಬಗ್ಗೆ ಹಲವರು ಕುತೂಹಲ ಹೊಂದಿದ್ದಾರೆ ಎಂಬುದು ನನಗೆ ತಿಳಿದಿದೆ. ಈ ಫೋಟೋದಲ್ಲಿರುವ ಇಬ್ಬರನ್ನು ನೋಡಿ. ಇವರೇ ನನ್ನ ಸೀಕ್ರೆಟ್. ಇವರಿಂದ ನಾನು ವಿಶ್ರಾಂತಿ ಪಡೆಯುತ್ತೇನೆ” ಎಂದು ತಿಳಿಸಿದ್ದಾರೆ.

    https://www.facebook.com/RadhikaPandit/photos/a.914160455267178/3419731818043350/?type=3&theater

    ಅಲ್ಲದೇ “ಐರಾ ಮತ್ತು ಜೂನಿಯರ್ ಯಶ್ ಇವರಿಲ್ಲದೇ ಇರಲು ಸಾಧ್ಯವಿಲ್ಲ. ಅವರು ನನಗೆ ಮಮ್ಮಿ, ಅಪ್ಪಾ, ಆದರೆ ಐರಾ ಮತ್ತು ಜೂನಿಯರ್ ಯಶ್‍ಗೆ ಮಿಮಿ ಮತ್ತು ಅಜ್ಜು ಆಗಿದ್ದಾರೆ. ಐರಾ ತಮ್ಮ ಅಮ್ಮಮ್ಮಾನನ್ನು ಮಿಮಿ ಎಂದು ಕರೆಯುತ್ತಾಳೆ. ಯಾಕೆಂದರೆ ನಾನು ನನ್ನ ಅಮ್ಮನನ್ನು ಮಮ್ಮಿ ಎಂದು ಕರೆಯುತ್ತೇನೆ. ಅದನ್ನು ಕೇಳಿಸಿಕೊಂಡು ಐರಾ ಮಿಮಿ ಎಂದು ಕರೆಯುತ್ತಾಳೆ” ಎಂದು ಬರೆದುಕೊಂಡಿದ್ದಾರೆ.

    ಇತ್ತೀಚೆಗೆ ರಾಧಿಕಾ ತಮ್ಮ ಮಗಳು ಐಸ್ ಕ್ರೀಮ್ ತಿನ್ನುತ್ತಿರುವ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದರು.

  • ಪ್ರೇಕ್ಷಣೀಯ ತಾಣವಾಗಿ ಬಾಣಂದೂರಿನ ಮರುವಿನ್ಯಾಸಕ್ಕೆ ಡಾ.ಅಶ್ವತ್ಥನಾರಾಯಣ ಸೂಚನೆ

    ಪ್ರೇಕ್ಷಣೀಯ ತಾಣವಾಗಿ ಬಾಣಂದೂರಿನ ಮರುವಿನ್ಯಾಸಕ್ಕೆ ಡಾ.ಅಶ್ವತ್ಥನಾರಾಯಣ ಸೂಚನೆ

    ಬೆಂಗಳೂರು: ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾಗಿದ್ದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಹುಟ್ಟೂರು, ಬಿಡದಿ ಹೋಬಳಿಯ ಬಾಣಂದೂರನ್ನು ಪ್ರೇಕ್ಷಣೀಯ ತಾಣವಾಗಿ ಅಭಿವೃದ್ಧಿಪಡಿಸಲು ಸರ್ಕಾರ ಮುಂದಾಗಿದ್ದು. ಈ ಹಿನ್ನೆಲೆಯಲ್ಲಿ ಯೋಜನೆಯನ್ನು ಮರುವಿನ್ಯಾಸಗೊಳಿಸುವಂತೆ ಗುತ್ತಿಗೆ ಪಡೆದಿರುವ ಖಾಸಗಿ ಸಂಸ್ಥೆಗೆ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಸೂಚಿಸಿದ್ದಾರೆ.

    ಬಾಣಂದೂರನ್ನು ಸಾಂಸ್ಕೃತಿಕ ಹಾಗೂ ಪಾರಂಪರಿಕ ತಾಣವಾಗಿ ಅಭಿವೃದ್ಧಿಪಡಿಸುವ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆ ಸಂಸ್ಥೆ ಮುಖ್ಯಸ್ಥರ ಜತೆ ಸೋಮವಾರ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಸುದೀರ್ಘ ಚರ್ಚೆ ನಡೆಸಿದರು. ಸಭೆಯಲ್ಲಿ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಪಾಲ್ಗೊಂಡಿದ್ದರು.

    ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಹುಟ್ಟೂರಿನಲ್ಲಿ ಸಾಂಸ್ಕೃತಿಕ ಹಾಗೂ ಪಾರಂಪರಿಕ ಕೇಂದ್ರ ಅಭಿವೃದ್ಧಿಪಡಿಸುವ ಕುರಿತು ಮತ್ತು ವೀರಾಪುರದಲ್ಲಿ ನಿರ್ಮಾಣಗೊಳ್ಳಲಿರುವ ಶ್ರೀ ಶಿವಕುಮಾರ ಸ್ವಾಮೀಜಿಯವರ ಪ್ರತಿಮೆ, ಮ್ಯೂಸಿಯಂ ನಿರ್ಮಾಣ ಹಾಗೂ ಸಂಬಂಧ ಸಭೆಯಲ್ಲಿ ಚರ್ಚಿಸಲಾಯಿತು. ಬಾಣಂದೂರಿನ ಪಾರಂಪರಿಕ ಕೇಂದ್ರದ ಪರಿಕಲ್ಪನೆ, ವಿನ್ಯಾಸ ಮಾಡುತ್ತಿರುವ ಆರ್.ಆರ್ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆಯ ವರದಿ ಪರಿಶೀಲಿಸಿದ ಡಾ. ಅಶ್ವತ್ಥನಾರಾಯಣ, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಸ್ವಾಮೀಜಿ ಹಾಗೂ ಸಾರ್ವಜನಿಕರ ಜತೆ ಈ ಸಂಬಂಧ ಸಮಾಲೋಚನೆ ನಡೆಸಿ ಸೂಕ್ತ ಬದಲಾವಣೆ ಮಾಡಿಕೊಳ್ಳಲು ಸೂಚಿಸಿದರು.

    ರಾಜ್ಯದ ಎಲ್ಲ ಭಾಗಗಳ ಜನರು ಭೇಟಿ ನೀಡುವ ತಾಣವಾಗಿ ಬಾಣಂದೂರು ಅಭಿವೃದ್ಧಿ ಆಗಬೇಕು. ಗ್ರಂಥಾಲಯ, ಸಭಾಂಗಣ, ಮ್ಯೂಸಿಯಂ ಸೇರಿದಂತೆ ಹಲವು ಆಕರ್ಷಣೆಗಳು ಅಲ್ಲಿರಬೇಕು. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಪೂರ್ವಜರ ಮನೆಯ ಮೂಲ ಸ್ವರೂಪ ಮರುಸೃಷ್ಟಿ ಮುಂತಾದ ಯೋಜನೆಗಳ ಮೂಲಕ ಬಾಣಂದೂರನ್ನು ಪ್ರೇಕ್ಷಣೀಯ ಸ್ಥಳವನ್ನಾಗಿ ಅಭಿವೃದ್ಧಿಪಡಿಸಲು ಆರ್.ಆರ್ ಇನ್ಫ್ರಾಸ್ಟ್ರಕ್ಚರ್‍ನ ಮುಖ್ಯಸ್ಥರಿಗೆ ಸಚಿವರು ಸಲಹೆ ನೀಡಿದರು.

    ಮಠದ ಜಾಗದಲ್ಲಿ ನಿರ್ಮಾಣವಾಗಲಿರುವ ಸಾಂಸ್ಕೃತಿಕ ಹಾಗೂ ಪಾರಂಪರಿಕ ಕೇಂದ್ರಕ್ಕೆ ನಿಗದಿಪಡಿಸಿರುವ 25 ಕೋಟಿ ರೂಪಾಯಿಯನ್ನು ನಿಗದಿತ ಉದ್ದೇಶಕ್ಕೆ ಮಾತ್ರ ಬಳಸಿಕೊಳ್ಳಬೇಕು. ಊರಿನಲ್ಲಿ ಇತರ ಮೂಲಸೌಕರ್ಯ ಕಲ್ಪಿಸುವ ಕಾರ್ಯಕ್ರಮಗಳಿಗೆ ಇಲಾಖೆಗಳ ಹಣ ಬಳಸಿಕೊಳ್ಳಬಹುದು ಎಂದು ಡಾ. ಅಶ್ವತ್ಥನಾರಾಯಣ ಸಭೆಯಲ್ಲಿ ತಿಳಿಸಿದರು.

    ಸಭೆಯಲ್ಲಿ ಆದಿಚುಂಚನಗಿರಿಯ ಶಾಖಾ ಮಠದ ಅನ್ನದಾನೇಶ್ವರ ಸ್ವಾಮೀಜಿ, ರಾಮನಗರ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಮಾಗಡಿ ಶಾಸಕ ಎ.ಮಂಜುನಾಥ್, ವಿಧಾನಪರಿಷತ್ ಸದಸ್ಯ ಅ.ದೇವೇಗೌಡ ಉಪಸ್ಥಿತರಿದ್ದರು.

  • ಟಿಕೆಟ್ ರಹಿತ ಪ್ರಯಾಣ – ಒಂದೇ ವಾರದಲ್ಲಿ 1 ಲಕ್ಷಕ್ಕೂ ಹೆಚ್ಚು ದಂಡ ವಸೂಲಿ

    ಟಿಕೆಟ್ ರಹಿತ ಪ್ರಯಾಣ – ಒಂದೇ ವಾರದಲ್ಲಿ 1 ಲಕ್ಷಕ್ಕೂ ಹೆಚ್ಚು ದಂಡ ವಸೂಲಿ

    ಬೆಂಗಳೂರು: ಟಿಕೆಟ್ ರಹಿತ ಪ್ರಯಾಣ ದಂಡಕ್ಕೆ ಆಹ್ವಾನ ಎಂದು ಸಾಮಾನ್ಯವಾಗಿ ಎಲ್ಲಾ ಕೆಎಸ್ಆರ್‌ಟಿಸಿ(ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ) ಬಸ್ಸುಗಳಲ್ಲಿ ಬರೆದಿರುತ್ತಾರೆ. ಆದರೂ ಕೆಲ ಪ್ರಯಾಣಿಕರು ಟಿಕೆಟ್ ರಹಿತ ಪ್ರಯಾಣ ಮಾಡಿ ಸಂಸ್ಥೆಗೆ ಮೋಸ ಮಾಡುತ್ತಾರೆ. ಹೀಗೆ ಟಿಕೆಟ್ ರಹಿತ ಪ್ರಯಾಣ ಮಾಡಿದವರಿಂದ ಕೆಎಸ್ಆರ್‌ಟಿಸಿ ಅಧಿಕಾರಿಗಳು ಕೇವಲ ಒಂದೇ ವಾರದಲ್ಲಿ ಬರೋಬ್ಬರಿ 1,14,408 ರೂ. ದಂಡ ವಸೂಲಿ ಮಾಡಿದೆ.

    ಜನವರಿ 20ರಿಂದ 27ರವರೆಗೆ ಕೆಎಸ್ಆರ್‌ಟಿಸಿ ತನಿಖಾ ಅಧಿಕಾರಿಗಳು ಚುರುಕಿನ ತನಿಖೆ ನಡೆಸಿದ್ದಾರೆ. ಈ ವೇಳೆ ಟಿಕೆಟ್ ರಹಿತ ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕರಿಂದ ಬರೋಬ್ಬರಿ 1,14,408 ರೂ. ದಂಡ ವಸೂಲಿ ಮಾಡಲಾಗಿದೆ. ಕೆಎಸ್ಆರ್‌ಟಿಸಿ ತನಿಖಾ ಅಧಿಕಾರಿಗಳು 5,242 ಬಸ್ಸುಗಳನ್ನ ತನಿಖೆ ನಡೆಸಿದ್ದಾರೆ. ಈ ವೇಳೆ ಟಿಕೆಟ್ ಇಲ್ಲದೆ ಪ್ರಯಾಣಿಸಿದ 691 ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ.

    ಜೊತೆಗೆ 846 ಪ್ರಯಾಣಿಕರಿಗೆ ದಂಡ ವಿಧಿಸಲಾಗಿದೆ. ಜೊತೆಗೆ ತಪ್ಪಿತಸ್ಥರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಾಗಿದ್ದು, ಬಸ್ಸಿನಲ್ಲಿ ಪ್ರಯಾಣಿಸುವಾಗ ಸರಿಯಾದ ಟಿಕೆಟ್ ಪಡೆದು ಪ್ರಯಾಣಿಸುವಂತೆ ಕೆಎಸ್ಆರ್‌ಟಿಸಿ ತಿಳಿಸಿದೆ.

  • ಬಂಕ್‍ನಲ್ಲಿ ಡೀಸೆಲ್ ಹಾಕಿಸುವಾಗ್ಲೇ ಹೊತ್ತಿ ಉರಿದ 34 ಪ್ರಯಾಣಿಕರಿದ್ದ ಬಸ್

    ಬಂಕ್‍ನಲ್ಲಿ ಡೀಸೆಲ್ ಹಾಕಿಸುವಾಗ್ಲೇ ಹೊತ್ತಿ ಉರಿದ 34 ಪ್ರಯಾಣಿಕರಿದ್ದ ಬಸ್

    ಬೆಂಗಳೂರು: ಪೆಟ್ರೋಲ್ ಬಂಕ್‍ನಲ್ಲಿ ಡಿಸೇಲ್ ಹಾಕಿಸುವಾಗಲೇ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡು, ಬಸ್ ಸುಟ್ಟು ಕರಕಲಾಗಿ ಘಟನೆ ಬೆಂಗಳೂರಿನ ಮಡಿವಾಳದಲ್ಲಿ ನಡೆದಿದೆ.

    ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮಡಿವಾಳ ಪೊಲೀಸ್ ಠಾಣೆಯ ಪಕ್ಕದಲ್ಲಿ ಇರುವ ಭಾರತ್ ಪೆಟ್ರೋಲ್ ಬಂಕ್‍ನಲ್ಲಿ ಈ ಘಟನೆ ನಡೆದಿದೆ. ರಾತ್ರಿ ಸುಮಾರು 10:30ಕ್ಕೆ ವೇಳೆಗೆ ಬೆಂಗಳೂರಿನಿಂದ ಕೊಯಮತ್ತೂರಿಗೆ ಸಂಚಾರ ಮಾಡ್ತಿದ್ದ ಎಂಎಸ್‍ಎಸ್ ಟ್ರಾವೆಲ್ಸ್ ಬಸ್ ಡೀಸೆಲ್ ಹಾಕಿಸುವುದಕ್ಕೆ ಪೆಟ್ರೋಲ್ ಬಂಕ್‍ಗೆ ಹೋಗಿದೆ. ಡಿಸೇಲ್ ಹಾಕಿಸಿದ ಬಳಿಕ ಬಸ್ ಚಲಾಯಿಸಲು ಚಾಲಕ ಮುಂದಾದಾಗ ಶಾರ್ಟ್ ಸರ್ಕ್ಯೂಟ್‍ನಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ.

    ಈ ಬಸ್ಸಿನಲ್ಲಿ 34 ಜನ ಪ್ರಯಾಣಿಕರಿದ್ದರು. ಬೆಂಕಿ ಕಾಣಿಸಿಕೊಂಡ ಹಿನ್ನೆಲೆ ಚಾಲಕ ಮತ್ತು ಕಂಡಕ್ಟರ್ ಸೇರಿ 34 ಜನ ಪ್ರಯಾಣಿಕರು ಚೆಲ್ಲಾಪಿಲ್ಲಿ ಆಗಿದ್ದಾರೆ. ಬಳಿಕ ಬೆಂಕಿ ಕಾಣಿಸಿಕೊಂಡ ನಂತರ ನಾಲ್ಕು ಅಗ್ನಿಶಾಮಕ ವಾಹನ ಸ್ಥಳಕ್ಕೆ ಆಗಮಿಸಿ, ಬೆಂಕಿ ನಂದಿಸಿ ಪೆಟ್ರೋಲ್ ಬಂಕ್‍ನಲ್ಲಿ ನಡೆಯಬೇಕಾಗಿದ್ದ ದೊಡ್ಡ ಅಗ್ನಿ ಅವಘಡವನ್ನ ತಡೆದಿದ್ದಾರೆ.

    ಸ್ಥಳದಲ್ಲೆ ಬಸ್ ಸುಟ್ಟು ಕರಕಲಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸದ್ಯ ಮಡಿವಾಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲು ಮಾಡಿಕೊಂಡು ತನಿಖೆಗೆ ಮುಂದಾಗಿದ್ದಾರೆ.

  • ಬಿಬಿಎಂಪಿ ಅಧಿಕಾರಿಗಳ ಎಡವಟ್ಟು – ಬಾಂಗ್ಲಾದೇಶಿಯರೆಂದು ಭಾರತೀಯರ ಶೆಡ್‌ಗಳು ತೆರವು

    ಬಿಬಿಎಂಪಿ ಅಧಿಕಾರಿಗಳ ಎಡವಟ್ಟು – ಬಾಂಗ್ಲಾದೇಶಿಯರೆಂದು ಭಾರತೀಯರ ಶೆಡ್‌ಗಳು ತೆರವು

    ಬೆಂಗಳೂರು: ಪೌರತ್ವ ಕಾಯ್ದೆ ಜಾರಿಗೆ ಬಂದ ಬೆನ್ನಲ್ಲೇ ಬೆಂಗಳೂರು ನಗರದಲ್ಲಿ ಅಕ್ರಮವಾಗಿ ವಾಸವಿದ್ದ ಬಾಂಗ್ಲಾದೇಶಿಯರನ್ನು ಹುಡುಕುವ ಕೆಲಸಕ್ಕೆ ಬಿಬಿಎಂಪಿ ಅಧಿಕಾರಿಗಳು ಹಾಗೂ ಪೊಲೀಸರು ಮುಂದಾಗಿದ್ದಾರೆ. ಬಾಂಗ್ಲಾದೇಶಿಯರು ನೆಲೆಸುರುವ ಗುಡಿಸಲುಗಳನ್ನು ಬಿಬಿಎಂಪಿ ತೆರವುಗೊಳಿಸುತ್ತಿದೆ. ಈ ತೆರವು ಕಾರ್ಯಾಚರಣೆಯ ಭರಾಟೆಯಲ್ಲಿ ದೇಶದ ನಾಗರಿಕರು ಹಾಗೂ ಉತ್ತರ ಕರ್ನಾಟಕದ ಜನರು ವಾಸವಿರುವ ಶೆಡ್‌ಗಳನ್ನು ಕೂಡ ತೆರವುಗೊಳಿಸಿ ಬಿಬಿಎಂಪಿ ಸಿಬ್ಬಂದಿ ಮಾಹಾ ಎಡವಟ್ಟು ಮಾಡಿದ್ದಾರೆ.

    ಬೆಂಗಳೂರಿನ ಮಹದೇವಪುರ ವ್ಯಾಪ್ತಿಯ ದೇವರಬೀಸನಹಳ್ಳಿ ಹಾಗೂ ಕರಿಯಮ್ಮನ ಅಗ್ರಹಾರದಲ್ಲಿನ ಮಂತ್ರಿ ಇಂಸ್ಟಂಟ್ ಅಪಾರ್ಟ್‌ಮೆಂಟ್‌ಗೆ ಹೊಂದಿಕೊಂಡಿರೋ ಕೃಷಿ ಜಮೀನಿನಲ್ಲಿ ಈ ಘಟನೆ ನಡೆದಿದೆ. ಹಲವಾರು ವರ್ಷಗಳಿಂದ ಇಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚು ಶೆಡ್‌ಗಳಲ್ಲಿ ಉತ್ತರ ಭಾರತೀಯರು ಹಾಗೂ ಉತ್ತರ ಕರ್ನಾಟಕದ ಜನ ಕೂಲಿ ಮಾಡಿಕೊಂಡು ವಾಸವಿದ್ದಾರೆ. ಆದರೆ ಭಾನುವಾರ ಏಕಾಏಕಿ ಸ್ಥಳಕ್ಕೆ ಆಗಮಿಸಿದ ಬಿಬಿಎಂಪಿ ಅಧಿಕಾರಿಗಳು ಹಾಗೂ ಪೊಲೀಸರು ನೀವೆಲ್ಲಾ ಬಾಂಗ್ಲಾದೇಶಿಯರೆಂದು ಆರೋಪಿಸಿ, ಸುಮಾರು 80ಕ್ಕೂ ಹೆಚ್ಚು ಶೆಡ್‌ಗಳನ್ನ ತೆರವು ಮಾಡಿದ್ದಾರೆ. ತೆರವಿನ ವೇಳೆ ನಿವಾಸಿಗಳು ತಾವು ಭಾರತೀಯರು ಎಂದು ದಾಖಲೆಗಳನ್ನು ತೋರಿಸಿದರೂ ಅದನ್ನು ಬಿಬಿಎಂಪಿ ಸಿಬ್ಬಂದಿ, ಅಧಿಕಾರಿಗಳು ಪರಿಶೀಲಿಸದೆ ಏಕಾಏಕಿ ಶೆಡ್‌ಗಳನ್ನು ಧ್ವಂಸಗೊಳಿಸಿದ್ದಾರೆ ಎಂದು ಇಲ್ಲಿನ ಜನರು ಆರೋಪಿಸಿದ್ದಾರೆ.

    ಇಲ್ಲಿ ಮೊದಲು ಬಾಂಗ್ಲಾದೇಶಿಯರು ವಾಸಿಸುತ್ತಿದ್ದರು. ಆದರೆ ಹಲವು ದಿನಗಳ ಹಿಂದೆಯೇ ಅವರೆಲ್ಲಾ ಶೆಡ್‌ಗಳನ್ನು ಬಿಟ್ಟು ಹೊರಟು ಹೋಗಿದ್ದಾರೆ. ಇನ್ನು ಇಲ್ಲಿ ವಾಸಿಸುತ್ತಿರುವ ಬಹುತೇಕರು ಸ್ಥಳೀಯ ಅಪಾರ್ಟ್‌ಮೆಂಟ್‍ನಲ್ಲಿ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ದಿನಗೂಲಿಗಳಾಗಿ ಕೆಲಸ ಮಾಡುತ್ತಿದ್ದು, ಒಂದು ಶೆಡ್‌ಗಳಗೆ ಜಮೀನಿನ ಮಾಲೀಕನಿಗೆ 3 ಸಾವಿರ ರೂ. ಬಾಡಿಗೆ ಕೊಟ್ಟು ವಾಸಿಸುತ್ತಿದ್ದರು.

    ಇದೀಗ ಏಕಾಏಕಿ ಶೆಡ್‌ಗಳನ್ನು ತೆರವುಗೊಳಿಸಲಾಗಿದ್ದು, ಬರುವ ಸಂಬಳದಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಸಿಗುತ್ತಿದ್ದ ಕಾರಣ ಬಹುತೇಕ ಉತ್ತರ ಭಾರತೀಯರು ಹಾಗೂ ರಾಜ್ಯದ ಕೊಪ್ಪಳ, ಬಿಜಾಪುರ ಸೇರಿದಂತೆ ಅನೇಕ ಉತ್ತರ ಕರ್ನಾಟಕದ ಜನ ಇಲ್ಲಿ ವಾಸವಾಗಿದ್ದರು. ಆದರೆ ಬಿಬಿಎಂಪಿ ಎಡವಟ್ಟಿನಿಂದ ಸುರು ಕಳೆದುಕೊಂಡು ಮುಂದೇನು ಜನರು ಕಂಗಾಲಾಗಿದ್ದಾರೆ.

    ಬಾಂಗ್ಲಾದೇಶಿಯರ ಶೆಡ್‌ಗಳ ತೆರವಿಗೆ ಬಂದ ಬಿಬಿಎಂಪಿ ಅಧಿಕಾರಿಗಳು ಭಾರತೀಯರ ಶೆಡ್‌ಗಳನ್ನು ತೆರವು ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಶೆಡ್‌ಗಳ ಪಕ್ಕದಲ್ಲೇ ಇರುವ ಪ್ರತಿಷ್ಠಿತ ಅಪಾರ್ಟ್‌ಮೆಂಟ್‍ ಬಿಲ್ಡರ್ ಒತ್ತಡಕ್ಕೆ ಬಿಬಿಎಂಪಿ ಮಣಿದಿದ್ದಾರಾ ಎಂಬ ಪ್ರಶ್ನೆ ಸ್ಥಳೀಯರಲ್ಲಿ ಉದ್ಭವವಾಗಿದೆ.

  • KSRTC, BMTCಯ ನೂತನ ಬಸ್‍ಗಳಿಗೆ ಸಿಎಂ ಚಾಲನೆ

    KSRTC, BMTCಯ ನೂತನ ಬಸ್‍ಗಳಿಗೆ ಸಿಎಂ ಚಾಲನೆ

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ವಿಧಾನಸೌಧದ ಆವರಣದಲ್ಲಿ ಕೆಎಸ್ಆರ್‌ಟಿಸಿ ಹಾಗೂ ಬಿಎಂಟಿಸಿಯ ವಿವಿಧ ಮಾದರಿಯ ನೂತನ ಬಸ್ಸುಗಳಿಗೆ ಚಾಲನೆ ನೀಡಿದರು.

    ಸಿಎಂ ಬಿ.ಎಸ್.ಯಡಿಯೂರಪ್ಪ ಬಾವುಟ ತೋರಿಸುವುದರ ಮೂಲಕ ಹೊಸ ಬಸ್ಸುಗಳಿಗೆ ಹಸಿರು ನಿಶಾನೆ ತೋರಿಸಿದರು. ಕೆಎಸ್ಆರ್‌ಟಿಸಿಯ ವಿವಿಧ ಮಾದರಿಯ ಬಸ್‍ಗಳಾದ ಅಂಬಾರಿ ಡ್ರೀಮ್ ಕ್ಲಾಸ್- 5, ಐರಾವತ ಕ್ಲಾಸ್- 3, ಐರಾವತ- 4, ನಾನ್ ಎಸಿ ಸ್ಲೀಪರ್- 01, ರಾಜಹಂಸ- 2, ಕರ್ನಾಟಕ ಸಾರಿಗೆ – 5, ಸೇರಿದಂತೆ ಒಟ್ಟು 20 ಬಸ್‍ಗಳು ಇಂದು ಲೋಕಾರ್ಪಣೆಗೊಂಡವು.

    ಈ ವೇಳೆ ಬೆಂಗಳೂರು ಮತ್ತು ಶಿಕಾರಿಪುರ ಮಾರ್ಗದ ಹೊಸ ಬಸ್ಸಿನಲ್ಲಿ ಸಿಎಂ ಯಡಿಯೂರಪ್ಪ ಪ್ರಯಾಣಿಸಿದರು. ವಿಧಾನಸೌಧದ ಆವರಣದಿಂದ ಹೊಸ ಬಸ್‍ನಲ್ಲಿ ಕೂತು ಸ್ವಲ್ಪ ದೂರ ಪ್ರಯಾಣಿಸಿ ಸಿಎಂ ಸಂತಸಗೊಂಡರು. ಈ ಸಂದರ್ಭದಲ್ಲಿ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ಹಾಜರಿದ್ದರು.

  • ವೃಷಭಾವತಿ ದಡದಲ್ಲಿ ಸುಡ್ತಿದ್ದಾರೆ ಕೆಮಿಕಲ್, ಪ್ಲಾಸ್ಟಿಕ್ – ದೂರು ಕೊಟ್ರು ಕ್ಯಾರೆ ಅನ್ನಲ್ಲ

    ವೃಷಭಾವತಿ ದಡದಲ್ಲಿ ಸುಡ್ತಿದ್ದಾರೆ ಕೆಮಿಕಲ್, ಪ್ಲಾಸ್ಟಿಕ್ – ದೂರು ಕೊಟ್ರು ಕ್ಯಾರೆ ಅನ್ನಲ್ಲ

    ಬೆಂಗಳೂರು: ಸಿಲಿಕಾನ್ ಸಿಟಿಯ ಕೊಳಚೆ ನೀರು ಸೇರಿ ವೃಷಭಾವತಿ ನದಿ ಈಗಾಗಲೇ ಕೊಳಚೆ ಗುಂಡಿ ರೀತಿ ಆಗಿ ಹೋಗಿದೆ. ಇನ್ನು ನದಿ ಜಾಗವನ್ನ ಸುತ್ತಲಿನ ಹಲವು ಕಾರ್ಖಾನೆಗಳು ಒತ್ತುವರಿ ಮಾಡಿಕೊಂಡಿದೆ ಎನ್ನುವ ಆರೋಪವೂ ಇದೆ. ಈ ಮಾಲಿನ್ಯ ಮಧ್ಯೆ ವೃಷಭಾವತಿ ನದಿ ದಡದಲ್ಲಿ ಪ್ಲಾಸ್ಟಿಕ್ ಸುಡುವ ಕೆಲಸ ಕೂಡ ಇತ್ತೀಚೆಗೆ ಹೆಚ್ಚಾಗಿದೆ.

    ಕತ್ತಲಾಗುತ್ತಲೇ ವೇಸ್ಟ್ ಪ್ಲಾಸ್ಟಿಕ್ ತಂದು ನದಿ ದಡದಲ್ಲಿ ಬೆಂಕಿ ಹಚ್ಚಿ ಸುಡಲಾಗುತ್ತಿದೆ. ಅದರಿಂದ ಬರುವ ವಿಷಪೂರಿತ ಹೊಗೆಯಿಂದ ವೃಷಭಾವತಿಯ ಅಸುಪಾಸಿನ ಅಪಾರ್ಟ್‌ಮೆಂಟ್‌ ನಿವಾಸಿಗಳು ಆರೋಗ್ಯ ಸಮಸ್ಯೆಯನ್ನ ಎದುರಿಸುತ್ತಿದ್ದಾರೆ. ತರೇಹವರಿ ಪ್ಲಾಸ್ಟಿಕ್ ಸುಡುವುದರ ಜೊತೆಗೆ ಬಾಯ್ಲರ್ ಗಳಿಂದ ಹೊರಬರುವ ಕೆಮಿಕಲ್ ಮಿಶ್ರಿತ ನೀರನ್ನ ಕೂಡ ವೃಷಭಾವತಿ ನದಿಗೆ ಬಿಡಲಾಗುತ್ತಿದೆ. ಈ ಕೆಮಿಕಲ್‍ಗಳು ನದಿ ನೀರು ಸೇರುತ್ತಿರುವುದರಿಂದ ಪ್ಲಾಸ್ಟಿಕ್, ಕೆಮಿಕಲ್ ಸೇರಿ ಹೊಗೆ ಹೆಚ್ಚಾಗುತ್ತಿದ್ದು, ನದಿ ಪಾತ್ರದ ಜನರಿಗೆ ಉಸಿರಾಡಲು ಕೂಡ ಕಷ್ಟವಾಗುತ್ತಿದೆ.

    ಗ್ರಾಮ ಪಂಚಾಯ್ತಿಯಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳೀಯರು ದೂರು ನೀಡಿ, ನಮಗೆ ಈ ಕೆಮಿಕಲ್ ಹೊಗೆಯಿಂದ ರಕ್ಷಣೆ ಕೊಡಿ ಎಂದು ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಒಂದೆಡೆ ಬೆಂಗಳೂರಿನ ಏಕ ಮಾತ್ರ ನದಿಯನ್ನ ಹಾಳು ಮಾಡಿ, ನದಿ ಜಾಗವನ್ನ ಕಬ್ಜ ಮಾಡಿಕೊಂಡು, ನದಿ ಹಾಗೂ ಅದರ ಸುತ್ತಲಿನ ಪರಿಸರವನ್ನ ಹಾಳು ಮಾಡುತ್ತಿದ್ದಾರೆ. ಇನ್ನೊಂದೆಡೆ ನದಿ ಆಸುಪಾಸಿನ ಜನರಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆ.

    ಅಷ್ಟೇ ಅಲ್ಲದೆ ಪರಿಸರಕ್ಕೆ ಮಾರಕವಾಗಿರುವ ಈ ಕೆಮಿಕಲ್ ಹಾಗೂ ಪ್ಲಾಸ್ಟಿಕ್ ಸುಡುವುದರ ಹೊಗೆಯಿಂದಾಗಿ ಸುತ್ತಲಿನ ಪ್ರಾಣಿ ಪಕ್ಷಿಗಳು ಪ್ರಾಣ ಕಳೆದುಕೊಳ್ಳುತ್ತಿವೆ. ಹೀಗಾಗಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ಜರುಗಿಸಿ, ಕೆಮಿಕಲ್, ಪ್ಲಾಸ್ಟಿಕ್ ಸುಡುವ ಕಿಡಿಗೇಡಿಗಳಿಗೆ ಶಿಕ್ಷೆ ನೀಡದೇ ಇದ್ದರೆ, ಈ ಮಾಲಿನ್ಯ ಪರಿಸರವನ್ನು ಅಪೋಷನೆ ತೆಗೆದುಕೊಳ್ಳೊಸಂತು ಸತ್ಯ. ಈಗಲಾದರೂ ಅಧಿಕಾರಿಗಳು ಇತ್ತ ಗಮನ ಕೊಟ್ಟು ವೃಷಭಾವತಿ ನದಿಯನ್ನು, ಅದರ ಜಲಚರಗಳನ್ನು ಹಾಗೂ ಸುತ್ತಮುತ್ತಲು ವಾಸಿಸುವ ಪ್ರಾಣಿ, ಪಕ್ಷಿ, ಜನರ ಜೀವವನ್ನು ರಕ್ಷಿಸಬೇಕಿದೆ.